ಕರ್ನಾಟಕದಲ್ಲಿ ಬಂದು ಹೋದ ಮೂರು ಭೂಸುಧಾರಣ ಮಸೂದೆಗಳನ್ನು ಹಿಂದಿನ ಅಧ್ಯಾಯನದಲ್ಲಿ ಪರಿಚಯಿಸಿದ್ದೇನೆ. ಈ ಮಸೂದೆಗಳು ಮಾಡಿದ (ಅಥವಾ ಮಾಡದಿರುವ) ಸುಧಾರಣೆಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ. ಮೂರು ಬಗೆಯ ಸುಧಾರಣೆಗಳನ್ನು ಮಾಡುವ ಉದ್ದೇಶದಿಂದ ಭೂಸುಧಾರಣ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಒಂದು, ಗೇಣಿ ಸುಧಾರಣೆ (ಟೆನೆನ್ಸಿ ರಿಫೋರ್ಮ್), ಎರಡು, ಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠಮಿತಿಯನ್ನು ನಿಗಧಿಪಡಿಸುವುದು (ಫಿಕ್ಸಿಂಗ್ ಲ್ಯಾಂಡ್ ಸೀಲಿಂಗ್), ಮೂರು, ಉಳುವವರೇ ಹೊಲದೊಡೆಯರೆಂದು ಘೋಷಿಸುವುದು (ಲ್ಯಾಂಡ್ ರಿಫೋರ್ಮ್) ಮತ್ತು ನಾಲ್ಕು ಭೂರಹಿತರಿಗೆ ಹೆಚ್ಚುವರಿ ಭೂಮಿಯನ್ನು ಹಂಚುವುದು. ಗೇಣಿ ಸುಧಾರಣೆಯಲ್ಲಿ (ಟೆನೆನ್ಸಿ ರಿಫಾರ್ಮ್) ಗೇಣಿದಾರರು ಮತ್ತು ಭೂಮಾಲಿಕರ ನಡುವಿನ ಸಂಬಂಧದಲ್ಲಿ ವಿಶೇಷ ಬದಲಾವಣೆ ಇರುವುದಿಲ್ಲ. ಅವರುಗಳು ಹಿಂದಿನಂತೆ ಗೇಣಿದಾರರು ಮತ್ತು ಭೂಮಾಲಿಕರಾಗಿ ಮುಂದುವರಿಯುತ್ತಾರೆ. ಗೇಣಿದಾರರು ಕೊಡಬೇಕಾಗಿರುವ ಗೇಣಿಯ ಮೊತ್ತ, ಗುತ್ತಿಗೆಯ ಅವಧಿ, ಗುತ್ತಿಗೆಯ ಅವಧಿ ಮುಕ್ತಾಯಗೊಂಡ ನಂತರ ಭೂಮಿಯನ್ನು ಪುನರ್‌ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇತ್ಯಾದಿಗಳು ಗೇಣಿ ಸುಧಾರಣೆಯ ಮುಖ್ಯ ವಸ್ತುಗಳು. ಈ ಎಲ್ಲದರಲ್ಲೂ ಗುಣಾತ್ಮಕ ಬದಲಾವಣೆಯಾದರೆ ಗೇಣಿ ಸುಧಾರಣೆಯಾಗಿದೆ ಎನ್ನಬಹುದು. ಅಂದರೆ ಗೇಣಿದಾರರು ಕೊಡಬೇಕಾಗಿರುವ ಗೇಣಿ ಮೊತ್ತ ಕಡಿಮೆಯಾದೆರೆ, ಗುತ್ತಿಗೆಯ ಅವಧಿಯಲ್ಲಿ ತಾತ್ಕಾಲಿಕತೆ ಹೋಗಿ ಶಾಶ್ವತತೆ ಬಂದರೆ ಮತ್ತು ಗೇಣಿಗೆ ನೀಡಿದ ಭೂಮಿಯನ್ನು ಮಾಲಿಕರು ಪುನರ್ ಪಡೆಯುವ ಸಾಧ್ಯತೆಗಳು ಕಡಿಮೆಯಾದರೆ ಗೇಣ ‘ಸುಧಾರಣೆ ಗುಣಾತ್ಮಕವಾಗಿ ನಡೆದಿದೆ ಎನ್ನಬಹುದು. ಭೂಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠ ಮಿತಿಯನ್ನು ನಿಗಧಿಪಡಿಸುವುದು. ಭೂಮಿಯ ‍ಪೂರೈಕೆ ಜನಸಂಖ್ಯೆಗಳನ್ನು ಗುಣವಾಗಿ ಹೆಚ್ಚುಕಡಿಮೆ ಯಾಗುವುದಿಲ್ಲ. ಇರುವ ಭೂಮಿಯು ಕೆಲವರ ಸ್ವಾಧೀನದಲ್ಲೇ ಇದ್ದರೆ ಸಮಾಜದ ಬಹುತೇಕರು ಬಹುಮುಖ್ಯ ಉತ್ಪಾದನೆ ಪರಿಕರದಿಂದ ವಂಚಿತರಾಗುತ್ತಾರೆ. ಇಂತಹ ಕ್ರೋಢೀಕರಣದ ತಪ್ಪಿಸಿ ಸಮಾಜ ಬಹುತೇಕರಿಗೆ ಉತ್ಪಾದನ ಪರಿಕರದಲ್ಲಿ ಪಾಲನ್ನು ನೀಡುವ ಉದ್ದೇಶದಿಂದ ಕುಟುಂಬವೊಂದು ಹೊಂದಬಹುದಾದ ಭೂಮಿಯ ಗರಿಷ್ಠಮಿತಿಯನ್ನು ನಿಗಧಿಗೊಳಿಸಲಾಗುವುದು.

ಕುಟುಂಬವೊಂದು ಹೊಂದಬಹುದಾದ ಭೂಮಿಯ ಗರಿಷ್ಠಮಿತಿ ಕಡಿಮೆಯಾದಷ್ಟು ಸಮಾಜದ ಬಹುತೇಕರು ಇರುವ ಭೂಮಿಯಲ್ಲಿ ಪಾಲು ಪಡೆಯಲು ಸಾಧ್ಯ ಭೂಮಿಯ ಗರಿಷ್ಠಮಿತಿಯ ಮಾನದಂಡವನ್ನು ಅನ್ವಯಿಸಿ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಬಹುದು. ಈ ರೀತಿ ಸ್ವಾಧೀನಪಡೆದುಕೊಂಡ ಹೆಚ್ಚುವರಿ ಭೂಮಿಯನ್ನು ಸರಕಾರ ತನ್ನ ಆದ್ಯತೆಗಳಿಗನುಗುಣವಾಗಿ ವಿಲೇವಾರಿ ಮಾಡಬಹುದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮತ್ತು ಕೃಷಿ ಉತ್ಪನ್ನವನ್ನು ಹೆಚ್ಚಿಸುವ ದೃಷ್ಟಿಯಿಂದ ಹೆಚ್ಚುವರಿ ಭೂಮಿಯ ಬಹುತೇಕ ಭಾಗವನ್ನು ಭೂರಹಿತರಿಗೆ ಹಂಚುವುದು ವಾಡಿಕೆ. ಕೊನೆಯದಾಗಿ ಭೂಸುಧಾರಣೆ ಅಂದರೆ ಉಳುವವರೇ ಹೊಲದೊಡೆಯರೆಂದು ಘೋಷಿಸುವುದು. ಇಲ್ಲಿ ಗೇಣಿ ಪದ್ದತಿಯನ್ನು ಸಂಪೂರ್ಣ ತೊಡೆದು ಹಾಕಲಾಗುವುದು. ಈಗಾಗಲೇ ಗೇಣಿಗೆ ಕೃಷಿ ಮಾಡುತ್ತಿರುವವರು ಈ ಕಾಯಿದೆ ಚಾಲ್ತಿಗೆ ಬಂದ ದಿನಾಂಕದಿಂದ ತಾವು ಕೃಷಿ ಮಾಡುವ ಭೂಮಿಗೆ ಮಾಲಿಕರಾಗುತ್ತಾರೆ. ಭೂಮಾಲಿಕರು ಗೇಣಿಗೆ ನೀಡಿದ ಭೂಮಿಯನ್ನು ಸಂಪೂರ್ಣ ಅಥವಾ ಭಾಗಶಃ ಕಳೆದುಕೊಳ್ಳುತ್ತಾರೆ. ಮೇಲಿನ ಭೂಸುಧಾರಣೆಗಳನ್ನು ಪ್ರತ್ಯೇಕ ಕಾನೂನುಗಳ ಮೂಲಕ ಮಾಡಬೇಕೆಂದಿಲ್ಲ. ಮೇಲಿನ ಎಲ್ಲಾ ಗುಣಲಕ್ಷಣಗಳನ್ನು ಪ್ರತ್ಯೇಕ ಕಾನೂನುಗಳ ಮೂಲಕ ಮಾಡಬೇಕೆಂದಿಲ್ಲ. ಮೇಲಿನ ಎಲ್ಲಾ ಗುಣಲಕ್ಷಣಗಳನ್ನು ಒಂದೇ ಕಾನೂನು ಹೊಂದಿರಬಹುದು. ಒಂದೇ ಕಾನೂನು ಅಥವಾ ಪ್ರತ್ಯೇಕ ಕಾನೂನುಗಳ ಮೂಲಕ ಭೂಸುಧಾರಣೆ ಪರಿಣಾಮಕಾರಿಯಾಗಿ ನಡೆದರೆ ಈ ಕೆಳಗಿನ ಪರಿವರ್ತನೆಗಳನ್ನು ಗುರುತಿಸಬಹುದೆಂದು ಗ್ರಹಿಸಲಾಗಿದೆ. ಒಂದು, ಕೃಷಿಕರ ಸಂಖ್ಯೆ ಹೆಚ್ಚಾಗಬಹುದು, ಎರಡು, ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಬಹುದು, ಮೂರು, ದೊಡ್ಡ ಭೂಮಾಲಿಕರ ಸಂಖ್ಯೆ ಕಡಿಮೆಯಾಗಬಹುದು, ನಾಲ್ಕು, ಭೂರಹಿತರ ಸಂಖ್ಯೆ ಕಡಿಮೆಯಾಗಬಹುದು ಮತ್ತು ಐದು, ಭೂಮಿಯ ಹಿಡುವಳಿಯಲ್ಲಿನ ಏರುಪೇರು ಕಡಿಮೆಯಾಗಬಹುದು. ಮೇಲಿನ ನೇರ ಪರಿಣಾಮಗಳ ಜತೆಗೆ ಈ ಕೆಳಗಿನ ಪರೋಕ್ಷ ಪರಿಣಾಮಗಳನ್ನೂ ಕೂಡ ಗುರುತಿಸಬಹುದು. ಒಂದು, ಕೃಷಿ ಉತ್ಪನ್ನ ಹೆಚ್ಚಾಗಬಹುದು, ಎರಡು, ಕೃಷಿ ಕೂಲಿ ಏರಬಹುದು ಮತ್ತು ಮೂರು, ಪೇಟೆ ಮತ್ತು ಪಟ್ಟಣಗಳ ನಡುವಿನ ಅಭಿವೃದ್ಧಿ ಅಂತರ ಕಡಿಮೆಯಾಗಬಹುದು. ಅಧ್ಯಾಯದ ಮೊದಲ ಭಾಗದಲ್ಲಿ ಕರ್ನಾಟಕದ ಭೂಸುಧಾರಣೆ ಮಸೂದೆಗಳ ಪರಿಣಾಮವನ್ನು ಈ ಮೇಲಿನ ನಾಲ್ಕು ಮಾನದಂಡಗಳ ಮೂಲಕ ಮಾಪನ ಮಾಡಲಾಗುವುದು. ಎರಡನೇ ಭಾಗದಲ್ಲಿ ಭೂಸುಧಾರಣೆಗಳಿಂದ ಲಾಭ ಪಡೆದವರು ಮತ್ತು ಪಡೆಯದವರನ್ನು ಸ್ಥೂಲವಾಗಿ ಗುರುತಿಸಲಾಗುವುದು.

ಇನಾಂ ರದ್ಧತಿ ಕಾಯಿದೆ

ಇನಾಂ ರದ್ದತಿ ಮಸೂದೆಗಳೂ ೧೯೫೪ ಮತ್ತು ೧೯೫೫ರಲ್ಲಿ ಜಾರಿಗೆ ಬಂದವು. ಈ ಕಾಯಿದೆಗಳಿಗೆ ಕಾಲಕಾಲಕ್ಕೆ ಹಲವಾರು ತಿದ್ದುಪಡಿಗಳು ನಡೆದವು. ಈ ಕಾಯಿದೆಯಡಿ ೧೯೮೬ರವರೆಗೆ ಹನ್ನೊಂದು ಲಕ್ಷದ ಇಪ್ಪತ್ತಾರು ಸಾವಿರದ ಐನೂರು ಐವತ್ತು (೧೧,೨೬,೫೫೦) ಎಕರೆ ಭೂಮಿಗೆ ಸಂಬಂಧಪಟ್ಟ ಒಟ್ಟು ಒಂದು ಲಕ್ಷದ ತೊಂಬತ್ತನಾಲ್ಕು ಸಾವಿರದ ನೂರ ಇಪ್ಪತ್ತೊಂಬತ್ತು (೧,೯೪,೧೨೯) ಅರ್ಜಿಗಳು ಸ್ವೀಕೃತವಾದವು. ಇವುಗಳಲ್ಲಿ ೮,೮೮,೭೫೨ ಎಕರೆ ಭೂಮಿಗೆ ಸಂಬಂಧಪಟ್ಟ ೧,೫೦,೬೫೩ ಅರ್ಜಿಗಳು ಇತ್ಯರ್ಥಗೊಂಡವು (ಕೋಪ್ಟಕ – ೧). ಇತ್ಯರ್ಥಗೊಂಡವುಗಳಲ್ಲಿ ೫,೩೫,೪೩೨ ಎಕರೆ ಭೂಮಿಗಳಿಗೆ ಸಂಬಂಧಿಸಿದ ೧,೦೦,೧೧೩ ಕೇಸುಗಳು ಅರ್ಜಿದಾರರ ಪರವಾಗಿ ತೀರ್ಮಾನಗೊಂಡವು.[1] ಅಂದರೆ ಇನಾಂ ರದ್ದಾಗಿ ಭೂಮಿ ಸರಕಾರದ ಮಾಲಿಕತ್ವಕ್ಕೆ ಹೋಗಿದೆ. ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಶಾಶ್ವತ ಅಥವಾ ಅರೆ ಶಾಶ್ವತ ಗೇಣಿದಾರರು ಭೂಕಂದಾಯದ ಇಪ್ಪತ್ತು ಪಟ್ಟಿನಷ್ಟು ಪ್ರೀಮಿಯಮ್‌ನ್ನು (ಒಂದೇ ಕಂತಿನಲ್ಲಿ ಅಥವಾ ಹತ್ತು ಕಂತಿನಲ್ಲಿ) ಸರಕಾರಕ್ಕೆ ಸಂದಾಯ ಮಾಡಬೇಕು. ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಶಾಶ್ವತ ಅಥವಾ ಆರೆ ಶಾಶ್ವತ ಗೇಣಿದಾರರು (ಅರ್ಜಿದಾರರು) ಇನಾಂ ರದ್ದಾದ ದಿನದಿಂದ ಈ ಭೂಮಿಯ ಹಕ್ಕುದಾರಾಗಿದ್ದಾರೆ. ದೇವಸ್ಥಾನ ಅಥವಾ ಇತರ ಪೂಜಾಸ್ಥಳಗಳಿಗೆ ನೀಡಿದ ಇನಾಂ ಭೂಮಿಯನ್ನು ದೇವಸ್ಥಾನ ಅಥವಾ ಇತರ ಪೂಜಾಸ್ಥಳದ ಕೆಲಸಗಾರರು (ಆರ್ಚಕ, ಮೌಲಿ, ಪೂಜಾರಿ ಮುಂತಾದವರು) ಕೃಷಿ ಮಾಡಿ ತಮ್ಮ ಕೆಲಸಕ್ಕೆ ಸಂಬಂಧಿಸಿದ ಸಂಬಳವನ್ನು ಪಡೆಯುತ್ತಿದ್ದರೆ ಅವರುಗಳು ಕೂಡ ಗೇಣಿದಾರರಂತೆ ಇನಾಂ ಭೂಮಿಯನ್ನು ಪಡೆದಿದ್ದಾರೆ. ಇನಾಂ ಇತ್ಯರ್ಥಕ್ಕಾಗಿ ಸಲ್ಲಿಸಿದ ೫೦,೫೪೦ ಅರ್ಜಿಗಳು (೩,೪೬,೩೨೦ ಎಕರೆ ಭೂಮಿಗೆ ಸಂಬಂಧಿಸಿದ) ತಿರಸ್ಕೃತವಾಗಿವೆ. ಸುಮಾರು ೨,೪೪,೦೨೮ ಎಕರೆ ಇನಾಂ ಭೂಮಿಗೆ ಸಂಬಂಧಿಸಿದ ೩೪,೪೭೬ ಅರ್ಜಿಗಳು ೧೯೮೬ರ ವೇಳೆಗೆ ಇತ್ಯರ್ಥಗೊಂಡಿಲ್ಲ.[2] ಮೇಲಿನ ಅಂಕಿ ಅಂಶಗಳ ಪ್ರಕಾರ ಇನಾಂ ಭೂಮಿಗಳ ಇತ್ಯರ್ಥಕ್ಕಾಗಿ ಸ್ವೀಕೃತ ಅರ್ಜಿಗಳಲ್ಲಿ ಶೇಕಡಾ ೪೭.೫೨ರಷ್ಟು ಭೂಮಿ ಗೇಣಿದಾರರ ಪರ ಆಗಿದೆ. ತಿಸ್ಕೃತಗೊಂಡ, ಇತ್ಯರ್ಥಗೊಳ್ಳದ ಅರ್ಜಿಗಳನ್ನೆಲ್ಲ ಸೇರಿಸಿದರೆ ಶೇ ೫೨.೪೮ರಷ್ಟು ಇನಾಂ ಭೂಮಿಯನ್ನು ಪಡೆದವರು ಯಾರು ಎನ್ನುವುದುರ ಬಗ್ಗೆ ಖಚಿತ ಮಾಹಿತಿಗಳಿಲ್ಲ. ಇನಾಂ ಭೂಮಿ ರದ್ದತಿ ಪ್ರಕ್ರಿಯೆಯನ್ನು ಸಮಾಜದ ವಿವಿಧ ಗುಂಪುಗಳು ನೋಡಿದ ದೃಷಿಯನ್ನು ಗಮನದಲ್ಲಿಟ್ಟುಕೊಂಡು ಇನಾಂ ಭೂಮಿಯನ್ನು ಪಡೆದವರ ಸಾಮಾಜಿಕ ಹಿನ್ನೆಲೆ ಬಗ್ಗೆ ಕೆಲವೊಂದು ತಾತ್ಕಾಲಿಕ ತೀರ್ಮಾನಕ್ಕೆ ಬರಬಹುದು. ಇನಾಂ ಭೂಮಿ ಪದ್ದತಿ ಪ್ರಕ್ರಿಯೆ ೧೯೪೮ರಲ್ಲಿ ಆರಂಭವಾದರೂ ಕಾಯಿದೆ ಜಾರಿಗೆ ಬಂದಿರುವುದು ೧೯೫೫ರಲ್ಲಿ, ಕಾಯಿದೆ ರೂಪಗೊಂಡು ಅನುಷ್ಠಾನಗೊಳ್ಳಲು ಸುಮಾರು ಏಳು ವರ್ಷಗಳ ಕಾಲ ತೆಗೆದುಕೊಂಡಿದೆ. ವಲೇರಿಯನ್ ರಾಡ್ರಿಗಸ್ ಪ್ರಕಾರ ೧೯೫೫ರ ಕಾಯಿದೆ ಜಾರಿಗೆ ಬಂದ ನಂತರವೂ ಹಲವೂ ಬಗೆಯ ಇನಾಂಗಳು ರದ್ದಾಗಲಿಲ್ಲ. ಇದಕ್ಕಾಗಿ ಕರ್ನಾಟಕದ ಕೆಲವು ಇನಾಂ ರದ್ದತಿ ಕಾಯಿದೆ – ೧೯೭೭ನ್ನು ಜಾರಿಗೆ ತರಲಾಯಿತು. ಈ ಕಾಯಿದೆ ಎಲ್ಲಾ ಇನಾಂ ವಿವಾದಗಳನ್ನು ಮಧ್ಯಸ್ಥಿಕೆಗಾಗಿ ಲೇಂಡ್ ಟ್ರಿಬ್ಯೂನಲ್‌ಗೆ ವರ್ಗಾಯಿಸಿತು. ರಾಡ್ರಿಗಸ್ ಪ್ರಕಾರ ಇನಾಂ ರದ್ದತಿಯ ಅಪೂರ್ಣ ಕಾರ್ಯವು ಗೇಣಿಸುಧಾರಣೆಯ ಹಾಗೆ ಇನ್ನೂ ಸಾರ್ವಜನಿಕ ಚರ್ಚೆಯ ವಸ್ತುವಾಗದೇ ಇರುವುದು ಕರ್ನಾಟಕದ ಕೃಷಿ ಸುಧಾರಣೆಗಳ ಮೇಲೆ ಮಾಡಿದ ಟಿಪ್ಪಣಿಯಂತಿದೆ.[3]

ತಿಮ್ಮಯ್ಯ ಮತ್ತು ಆಜೀಜ್‌ರವರ ಪ್ರಕಾರ ಇನಂ ಭೂಮಿಯ ಹೆಚ್ಚಿನ ಫಲಾನುಭವಿಗಳು ಬ್ರಾಹ್ಮಣರು. ಅವರಲ್ಲಿ ಬಹುತೇಕರು ಓದುಬರಹಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಪೇಟೆ ಪಟ್ಟಣಗಳಲ್ಲಿ ನೆಲೆ ನಿಂತಿದ್ದರು. ಸುಮಾರು ಎಂಬತ್ತರ ದಶಕದವರೆಗೂ ಬಹುತೇಕ ಸರಕಾರಿ ಹುದ್ದೆಗಳಲ್ಲಿ ಬ್ರಾಹ್ಮಣರಿದ್ದರು. ತಮ್ಮ ಇನಾಂ ಭೂಮಿಯನ್ನು ಗೇಣಿದಾರರ ಮೂಲಕ ಕೃಷಿ ಮಾಡಿಸುತ್ತಿದ್ದರು. ಇನಾಂ ರದ್ದತಿ ಅವರ ಆದಾಯದ ಒಂದು ಮೂಲಕ್ಕೆ ದೊಡ್ಡ ಕೊಡಲಿಯೇಟು ನೀಡುವ ಸಾಧ್ಯತೆ ಇತ್ತು. ಈ ಎಲ್ಲಾ ಕಾರಣಗಳಿಂದ ಅವರುಗಳೂ ಇನಾಂ ರದ್ದತಿಯನ್ನು ವಿರೋಧಿಸುತ್ತಿದ್ದರು. ಇನಾಂ ಭೂಮಿ ರದ್ದತಿ ಕಾಯಿದೆ ಆಗದಂತೆ ತಡೆದರು.[4] ಕಾಯಿದೆ ಆದ ನಂತರ ಅದು ಸರಿಯಾಗಿ ಅನುಷ್ಠಾನಗೊಳ್ಳದಂತೆ ನೋಡಿಕೊಂಡರು ಎನ್ನುವ ವಾದ ಇದೆ. ಎದೇ ಬೆಳವಣಿಗೆಯನ್ನು ಮತ್ತೊಂದು ಪಕ್ಷದ ದೃಷ್ಟಿಯಿಂದ ನೋಡಿದರೆ ಸಮಸ್ಯೆಯ ಇನ್ನೊಂದು ಮಗ್ಗುಲು ಪರಿಚಯವಾಗುತ್ತದೆ. ಇನಾಂ ಭೂಮಿ ರದ್ದತಿಯನ್ನು ಕರ್ನಾಟಕದ ಕೆಲವೊಂದು ಸಮುದಾಯಗಳ ಬಲಾಢ್ಯರು (ಲಿಂಗಾಯತರು ಮತ್ತು ಒಕ್ಕಲಿಗರ ಬಲಾಢ್ಯರು) ವಿರೋಧಿಸಿಲ್ಲ. ವಿರೋಧಿಸಿಲ್ಲ ಎನ್ನವುದಕ್ಕಿಂತ ಹೆಚ್ಚು ಸ್ವತಂತ್ರ ನಂತರ ತಕ್ಷಣ ಕೈಗೆತ್ತಿಗೊಂಡ ಪರಿವರ್ತನಾ ಕಾರ್ಯಗಳಲ್ಲಿ ಇನಾಂ ಭೂಮಿ ರದ್ದತಿ ಕೂಡ ಸೇರಿದೆ. ಜಮೀನುದಾರರು, ಜಾಗೀರುದಾರರು, ಜೋಡಿದಾರರು, ಇನಾಂದಾರರು ಇತ್ಯಾದಿ ಮಧ್ಯವರ್ತಿಗಳನ್ನು ರದ್ದುಗೊಳಿಸುವುದು ರಾಷ್ಟ್ರೀಯ ಭೂಸುಧಾರಣ ನೀತಿ ಕೂಡ ಆಗಿತ್ತು. ಆದುದರಿಂದ ಇನಾಂ ರದ್ದತಿ ಆದ್ಯತೆ ಮೇಲೆ ಮೊದಲು ಬಂದಿದೆ ಎನ್ನಬಹುದು. ಗೇಣಿ ಸುಧಾರಣೆ, ಗೇಣಿ ಭದ್ರತೆ, ಉಳುವವರನ್ನೇ ಹೊಲದೊಡೆಯರನ್ನಾಗಿಸುವುದು ಇತ್ಯಾದಿಗಳು ಕೂಡ ರಾಷ್ಟ್ರೀಯ ನೀತಿಯ ಆದ್ಯತೆಗಳೇ ಆಗಿದ್ದವು. ಆದರೆ ಅವುಗಳು ತಕ್ಷಣ ಜಾರಿಗೆ ಬರಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಗೇಣಿದಾರರಲ್ಲಿ ಬಹುತೇಕರು ಬಲಾಢ್ಯ ಸಮುದಾಯದವರೇ ಇದ್ದಿರಬಹುದೆಂದು ಊಹಿಸಬಹುದು. ಇವರುಗಳ ಜತೆಗೆ ಪೂಜಾಸ್ಥಳಗಳ ಇನಾಂ ಭೂಮಿಯನ್ನು ಪೂಜಾಸ್ಥಳದ ಕೆಲಸಗಳಿಗೆ ಸಂಬಳದ ರೂಪದಲ್ಲಿ ಕೃಷಿ ಮಾಡುತ್ತಿದ್ದವರು ಕೂಡ ಪಡೆದಿದ್ದಾರೆ. ಇನಾಂ ಭೂಮಿಯ ರದ್ದತಿಯಿಂದ ಹೆಚ್ಚಿನ ಲಾಭ ಪಡೆದವರಲ್ಲಿ ದಲಿತರು, ಬುಡಕಟ್ಟು ಜನರು ಮತ್ತು ಹಿಂದುಳಿದ ಜಾತಿ ಜನರು ಇರುವ ಸಾಧ್ಯತೆಗಳು ಕಡಿಮೆ.

೧೯೬೧ರ ಕಾಯಿದೆ

ಯಾವುದೇ ಭೂಸುಧಾರಣ ಮಸೂದೆಯ ಪರಿಣಾಮವನ್ನು ಗೇಣಿ (ಗುತ್ತಿಗೆ) ಪ್ರಮಾಣ ನಿಗಧಿಗೊಳಿಸುವುದು, ಗೇಣಿ ಭದ್ರತೆಗಾಗಿ ವಹಿಸಿದ ಕ್ರಮ, ಗೇಣಿದಾರರು ಭೂಮಿಯನ್ನು ಹೊಂದುವ ಸಾಧ್ಯತೆ, ಹೆಚ್ಚುವರಿ ಭೂಮಿಯ ತೀರ್ಮಾನ, ಹೆಚ್ಚುವರಿ ಭೂಮಿ ವಿಲೇವಾರಿ ಇತ್ಯಾದಿ ಮಾನದಂಡಗಳಿಂದ ಮಾಪನ ಮಾಡಬಹುದು. ಇದೇ ಮಾನದಂಡಗಳನ್ನು ಬಳಸಿ ೧೯೬೧ರ ಭೂಸುಧಾರಣ ಕಾಯಿದೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಬಹುದು. ಮೊದಲಿಗೆ ೧೯೬೧ರ ಮಸೂದೆ ಗೇಣಿದಾರರು ನೀಡಬೇಕಾಗಿರುವ ಗುತ್ತಿಗೆಯನ್ನು ಹೇಗೆ ಪ್ರಭಾವಿಸಿದೆ ಎಂದು ನೋಡುವ. ೧೯೬೧ರ ಕಾಯಿದೆ ಜಾರಿಗೆ ಬರುವ ಮುನ್ನ ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸು ಕರ್ನಾಟಕ, ಕೊಡಗು ಮತ್ತು ಮೈಸೂರು ರಾಜ್ಯದ ಜಿಲ್ಲೆಗಳಲ್ಲಿ ಪ್ರತ್ಯೇಕ ಭೂಮಸೂದೆಗಳಿದ್ದವು. ಈ ಮಸೂದೆಗಳು ನಿಗಧಿಪಡಿಸಿದ ಗುತ್ತಿಗೆಯನ್ನು ೧೯೬೧ರ ಕಾಯಿದೆ ನಿಗಧಿಪಡಿಸಿದ ಮಸೂದೆಯೊಂದಿಗೆ ಹೋಲಿಸಿ ನೋಡಿದರೆ ಹೊಸ ಕಾಯಿದೆಯಿಂದ ಗೇಣಿದಾರರಿಗೆ ಲಾಭ ಆಗಿದೆಯೇ? ಅಥವಾ ನಷ್ಟ ಆಗಿದೆಯೇ? ಎನ್ನುವುದುರ ಸ್ಪಷ್ಟ ಚಿತ್ರಣ ಸಿಗುತ್ತದೆ. ದಿ ಬಾಂಬೆ ಟಿನೆನ್ಸಿ ಆಂಡ್ ಎಗ್ರಿಕಲ್ಚರಲ್ ಲ್ಯಾಂಡ್ಸ್ ಆಕ್ಟ್, ೧೯೪೮ ಆರಂಭದಲ್ಲಿ ಒಣಭೂಪ್ರದೇಶದಲ್ಲಿ ಫಸಲಿನ ಮೂರನೆ ಒಂದರಷ್ಟು ಮತ್ತು ನೀರಾವರಿ ಪ್ರದೇಶದಲ್ಲಿ ನಾಲ್ಕನೇ ಒಂದರಷ್ಟನ್ನು ಗುತ್ತಿಗೆಯೆಂದು ನಿಗಧಿಗೊಳಿಸಿತ್ತು.[5] ಕಾಲಕಾಲಕ್ಕೆ ಗುತ್ತಿಗೆಯನ್ನು ಬದಲಾಯಿಸುವ ಅಧಿಕಾರವನ್ನು ಕಾಯಿದೆ ಸರಕಾರಕ್ಕೆ ನೀಡಿತ್ತು. ೧೯೫೨ರಲ್ಲಿ ಬಾಂಬೆ ಸರಕಾರ ಒಂದು ಸುತ್ತೊಲೆ ಹೊರಡಿಸಿ ಗೇಣಿದಾರರು ನೀಡಬೇಕಾದ ಗುತ್ತಿಗೆಯನ್ನು ಆರನೇ ಒಂದರಷ್ಟಕ್ಕೆ ನಿಗಧಿಗೊಳಿಸಿದೆ. ಹೊಸ ಗುತ್ತಿಗೆ ನಿಗಧಿಗೊಳಿಸುವಾಗ ಒಣ ಮತ್ತು ನೀರಾವರಿ ಪ್ರದೇಶ ಎನ್ನುವ ವ್ಯತ್ಯಾಸವನ್ನು ಸರಕಾರ ಮಾಡಿಲ್ಲ. ಬಾಂಬೆ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ – ಧಾರವಾಡ, ಬೆಳಗಾಂ, ಬಿಜಾಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇಣಿದಾರರು ಬೆಳೆದ ಉತ್ಪನ್ನದ ಆರನೇ ಒಂದರಷ್ಟನ್ನು ಗುತ್ತಿಗೆ ನೀಡುವ ಕ್ರಮ ಜಾರಿಗೆ ಬಂತು.[6] ೧೯೫೫ರಲ್ಲಿ ಬಾಂಬೆ ಟೆನೆನ್ಸಿ ಆಂಡ್ ಅಗ್ರಿಕಲ್ಚರಲ್ ಲ್ಯಾಂಡ್ಸ್ ಆಕ್ಟ್‌ಗೆ ತಿದ್ದುಪಡಿ ಮಾಡುವಾಗ ಮೇಲಿನ ಗುತ್ತಿಗೆ ಕಾಯಿದೆ ರೂಪಪಡೆಯಿತು. ಅಲ್ಪಪ್ರಮಾಣದ ಗುತ್ತಿಗೆ ನಿಗಧಿ ಗೊಳಿಸುವುದರ ಜತೆಗೆ ಬಾಂಬೆ ಟೆನೆನ್ಸಿ ಆಕ್ಟ್ ಒಂದನೇ ಏಪ್ರೀಲ್ ೧೯೫೭ರಿಂದ ಟಿಲ್ಲರ್ಸ್‌ಡೇ ಆಚರಣೆಗೆ ತಂದಿದೆ. ಇದರನ್ವಯ ಶಾಶ್ವತ ಮತ್ತು ಅರೆ ಶಾಶ್ವತ ಗೇಣಿದಾರರು ಮೇಲಿನ ದಿನಾಂಕದಿಂದ ತಾವು ಗೇಣಿಗೆ ಕೃಷಿ ಮಾಡುತ್ತಿದ್ದ ಭೂಮಿಯ ಖರೀದಿದಾರರಾಗುತ್ತಾರೆ. ಭೂಕಂದಾಯದ ೨೦ ರಿಂದ ೨೦೦ ಪಟ್ಟನ್ನು ಭೂಮಿಯ ಬೆಲೆಯೆಂದು ನಿಗಧಿಗೊಳಿಸಲಾಗಿತ್ತು.[7]

ರಾಯಚೂರು, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳು ಹೈದರಾಬಾದ್ ಕರ್ನಾಟಕ ಪ್ರದೇಶವಾಗಿತ್ತು. ಈ ಪ್ರದೇಶಗಳಲ್ಲಿ ದಿ ಹೈದರಾಬಾದ್ ಟಿನೆನ್ಸಿ ಆಂಡ್ ಎಗ್ರಿಕಲ್ಚರಲ್ ಲೇಂಡ್ಸ್ ಆಕ್ಟ್, ೧೯೫೦ ಅನ್ವಯವಾಗುತ್ತಿತ್ತು. ೧೯೫೪ರಲ್ಲಿ ಈ ಕಾಯಿದೆಗೆ ತಿದ್ದುಪಡಿಯಾಗಿದೆ. ತಿದ್ದುಪಡಿಯಾದ ಕಾಯಿದೆಯನ್ವಯ ಹೈದರಾಬಾದ್ ಕರ್ನಾಟಕ ಪ್ರದೇಶದ ಗೇಣಿದಾರರು ತಾವು ಬೆಳೆದು ಬೆಳೆಯ ನಾಲ್ಕನೆ ಒಂದಂಶವನ್ನು ನೀರಾವರಿ ಪ್ರದೇಶದಲ್ಲಿ ಮತ್ತು ಐದನೇ ಒಂದಂಶವನ್ನು ಒಣಭೂಪ್ರದೇಶದಲ್ಲಿ ಗುತ್ತಿಗೆ ನೀಡಬೇಕಿತ್ತು.[8] ದಿ ಮೈಸೂರು ಟಿನೆನ್ಸಿ ಆಕ್ಟ್‌, ೧೯೫೨ ಮೈದಾನ ಪ್ರದೇಶದ ಗೇಣಿದಾರರಿಗೆ ಬೆಳೆಯ ಮೂರನೇ ಒಂದಂಶವನ್ನು ಮತ್ತು ಮಲೆನಾಡು ಪ್ರದೇಶದ ರೈತರಿಗೆ ಬೆಳೆಯ ನಾಲ್ಕನೇ ಒಂದಂಶವನ್ನು ಗುತ್ತಿಗೆಯೆಂದು ನಿಗಧಿ ಪಡಿಸಿದೆ. ಮೈಸೂರು ಟಿನೆನ್ಸಿ ಆಕ್ಟ್ ೧೯೫೨ ಶಾಶ್ವತ ಮತ್ತು ಅರೆ ಶಾಶ್ವತ ಗೇಣಿದಾರರಿಗೆ ತಮ್ಮ ಕೃಷಿ ಮಾಡುತ್ತಿದ್ದ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.[9] ಕೊಡಗು ಪ್ರದೇಶದಲ್ಲಿ ಟೆನೆನ್ಸಿ ಕಾಯಿದೆ ಇರಲಲ್ಲ. ೧೯೫೭ರಲ್ಲಿ ಕೂರ್ಗ್ ಟಿನೆನ್ಸಿ ಆರ್ಡಿನೆನ್ಸ್ ಜಾರಿಗೆ ಬಂತು. ಬೆಳೆಯ ಮೂರನೇ ಒಂದಂಶವನ್ನು ಗುತ್ತಿಗೆಯೆಂದು ಈ ಅರ್ಡಿನೆನ್ಸ್ ನಿಗಧಿಗೊಳಿಸದೆ. ದಿ ಮೆಡ್ರಾಸ್ ಕಲ್ಟಿವೇಟಿಂಗ್ ಟೆನೆನ್ಸ್ (ಪೇಮೆಂಟ್ ಆಫ್ ಫೇರ್ ರೆಂಟ್) ಆಕ್ಟ್ ೧೯೫೬, ಗೇಣಿದಾರರು ಕೊಡಬೇಕಾಗಿರುವ ಗುತ್ತಿಗೆಯನ್ನು ಈ ಕೆಳಗಿನಂತೆ ನಿಗಧಿಗೊಳಿಸಿದೆ. ನೀರಾವರಿ ಪ್ರದೇಶ ಗೇಣಿದಾರರು ಬೆಳೆದು ಶೇ. ೪೦ರಷ್ಟುನ್ನು, ಅರೆ ನೀರಾವರಿ ಪ್ರದೇಶದಲ್ಲಿ ಬೆಳೆಯ ಶೇ. ೩೫ರಷ್ಟನ್ನು ಮತ್ತು ಇತರ ಪ್ರದೇಶದಲ್ಲಿ ಬೆಳೆಯ ಶೇ. ೩೩೧/೩ರಷ್ಟುನ್ನು ಗುತ್ತಿಗೆಯೆಂದು ನಿಗಧಿಗೊಳಿಸಿದೆ.[10] ಏಕೀಕೃತ ಕರ್ನಾಟಕ ತಂದ ಭೂಸುಧಾರಣ ಕಾಯಿದೆ ೧೯೬೧ ಎರಡು ವಿಧದ ಗುತ್ತಿಗೆಯನ್ನು ನಿಗಧಿಗೊಳಿಸಿದೆ. ನಿರಾವರಿ ಪ್ರದೇಶದಲ್ಲಿ ಉತ್ಪನ್ನದ ನಾಲ್ಕನೇ ಒಂದಂಶ (೨೫%) ಮತ್ತು ಒಣ ಭೂಪ್ರದೇಶದಲ್ಲಿ ಬೆಳೆಯ ಐದನೇ ಒಂದಂಶವನ್ನು (೨೦%) ಗುತ್ತಿಗೆಯೆಂದು ೧೯೬೧ರ ಕಾಯಿದೆ ನಿಗಧಿ ಪಡಿಸಿದೆ.

ಬಾಂಬೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳ ಹಿಂದಿನ ಗುತ್ತಿಗೆಗಳಿಗೆ ಹೋಲಿಸಿದರೆ ೧೯೬೧ರ ಕಾಯಿದೆ ನಿಗಧಿಗೊಳಿಸದ ಗುತ್ತಿಗೆ ಕಡಿಮೆ ಇದೆ. ಆದರೆ ಬಾಂಬೆ ಕರ್ನಾಟಕದ (ಧಾರವಾಡ, ಬಿಜಪುರ, ಬೆಳಗಾಂ ಮತ್ತು ಉತ್ತರ ಕನ್ನಡ ಜಿಲ್ಲೆಗಳ) ಗೇಣಿದಾರರು ತಾವು ಬೆಳೆದ ಬೆಳೆಯ ಆರನೇ ಒಂದಂಶವನ್ನು (೧೬.೬೬%)ಗುತ್ತಿಗೆಯಾಗಿ ನೀಡುತ್ತಿದ್ದರು. ಜತೆಗೆ ಬಾಂಬೆ ಕಾಯಿದೆಯಲ್ಲಿ ನೀರಾವರಿ ಮತ್ತು ಒಣ ಭೂಪ್ರದೇಶ ಎನ್ನುವ ವ್ಯತ್ಯಾಸವಿರಲಿಲ್ಲ. ೧೯೬೧ರ ಕಾಯಿದೆ ನೀರಾವರಿ ಮತ್ತು ಒಣಭೂಪ್ರದೇಶ ಎನ್ನುವ ವ್ಯತ್ಯಾಸ ಮಾಡಿದೆ. ಇದರಿಂದಾಗಿ ಹಿಂದೆ ಬಾಂಬೆ ಕರ್ನಾಟಕದ ನೀರಾವರಿ ಪ್ರದೇಶದಲ್ಲಿದ್ದ ಗೇಣಿದಾರರು ಶೇ. ೯ರಷ್ಟು ಹೆಚ್ಚುವರಿ ಗುತ್ತಿಗೆ ಕೊಡಬೇಕಾಯಿತು. ಬಾಂಬೆ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಿಗೆ ಮಾತ್ರ ಹೊಸ ಕಾಯಿದೆಯಿಂದ ತೊಂದರೆಯಾದುದಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶದ ಗೇಣಿದಾರರು ಕೂಡ ಹೊಸ ಗುತ್ತಿಗೆಯಿಂದ ಏನೇನೂ ಪ್ರಯೋಜನ ಪಡೆಯಲಿಲ್ಲ. ಯಾಕೆಂದರೆ ಹೈದರಬಾದ್ ಟೆನೆನ್ಸಿ ಆಕ್ಟ್‌ನಲ್ಲಿ ಅವರು ಇದೇ ಪ್ರಮಾಣದ (ನೀರಾವರಿ ಪ್ರದೇಶದಲ್ಲಿ ಶೇ. ೨೫ ಮತ್ತು ಒಣ ಪ್ರದೇಶದಲ್ಲಿ ಶೇ. ೨೦) ಗುತ್ತಿಗೆ ನೀಡುತ್ತಿದ್ದರು. ಮೈಸೂರು, ಕೊಡಗು ಮತ್ತು ಮದ್ರಾಸು ಪ್ರದೇಶದ ಗೇಣಿಕಾರರು ಮಾತ್ರ ಹೊಸ ಗುತ್ತಿಗೆಯಿಂದ ಲಾಭ ಪಡೆದಿದ್ದಾರೆ. ಗೇಣಿದಾರರ ಆಸಕ್ತಿಯನ್ನು ರಕ್ಷಿಸುವ ನೈಜ ಕಾಳಜಿ ಸರಕಾರಕ್ಕೆ ಇರುತ್ತಿದ್ದರೆ ಅದು ಬಾಂಬೆ ಕರ್ನಾಟಕ ಪ್ರದೇಶದಲ್ಲಿದ್ದ (ಬೆಳೆಯ ಆರನೇ ಒಂದಂಶ) ಗುತ್ತಿಗೆಯನ್ನು ಅಥವಾ ಅದಕ್ಕಿಂತಲೂ ಕಡಿಮೆ ಗುತ್ತಿಗೆಯನ್ನು ಹೊಸ ಕಾಯಿದೆಯಲ್ಲಿ ಗುತ್ತಿಗೆಯೆಂದು ನಿಗಧಿಗೊಳಿಸಬೇಕಿತ್ತು. ಹಿಂದೆ ಇದ್ದ ಗುತ್ತಿಗೆಯಿಂದ ಶೇ. ೯ರಷ್ಟು ಹೆಚ್ಚು ಗುತ್ತಿಗೆಯನ್ನು ೧೯೬೧ರ ಭೂಸುಧಾರಣ ಮಸೂದೆ ನಿಗಧಿಗೊಳಿಸಿದೆ. ಆ ಮೂಲಕ ಅಂದಿನ ಸರಕಾರ ಯಾರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸುಧಾರಣೆ ಮಾಡಲು ಹೊರಟಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೆಚ್ಚಿನ ಗುತ್ತಿಗೆ ನಿಗಧಿಗೊಳಿಸಿರುವುದು ಖಂಡಿತವಾಗಿಯೂ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಗೇಣಿದಾರರ ಪರ ಇರಲು ಸಾಧ್ಯವಿಲ್ಲ.

ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳಿದ್ದವು. ಕೆಲವು ಪ್ರದೇಶಗಳಲ್ಲಿ ಪುನರ್ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಅವಕಶವೇ ಇರಲಿಲ್ಲ. ಇನ್ನು ಕೆಲವು ಪ್ರದೇಶಗಳಲಲ್ಲಿ ನಿರ್ದಿಷ್ಟ ಉದ್ದೇಶಗಳಿಗೆ ಮತ್ತು ಕಾನೂನು ನಿಗಧಿಗೊಳಿಸಿದ ಪ್ರಮಾಣದಲ್ಲಿ ಮಾತ್ರ ಪುನರ್ ಸ್ವಾಧೀನ ಪಡಿಸಿಕೊಳಬಹುದಿತ್ತು. ಮತ್ತೆ ಕೆಲವು ರಾಜ್ಯಗಳಲ್ಲಿ ಗೇಣಿ ಭೂಮಿಯನ್ನು ಪುನರ್‌ಸ್ವಾಧೀನ ಪಡಿಸಿಕೊಳ್ಳಲು ವಿಶೇಷ ನಿರ್ಬಂಧಗಳಿರಲಿಲ್ಲ. ಹೆಚ್ಚು ಕಡಮೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಇಂತವುದೇ ಸ್ಥಿತಿ ಇತ್ತು. ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಶಾಶ್ವತ, ಅರೆ ಶಾಶ್ವತ ಮತ್ತು ತಾತ್ಕಾಲಿಕ ಗೇಣಿದಾರರಿದ್ದರು. ತಾತ್ಕಾಲಿಕ ಗೇಣಿದಾರರನ್ನು ಸುಲಭದಲ್ಲಿ ವಕ್ಕಲೆಬ್ಬಿಸುವ ಸಾಧ್ಯತೆ ಎಲ್ಲಾ ಕಡೆ ಇತ್ತು ಆದರೆ ಶಾಶ್ವತ ಮತ್ತು ಅರೆ ಶಾಶ್ವತ ಗೇಣಿದಾರರನ್ನು ವಕ್ಕಲೆಬ್ಬಿಸುವುದು ಸರಳವಾಗಿರಲಿಲ್ಲ. ಕೊಡಗು ಮತ್ತು ಮದರಾಸು ಪ್ರದೇಶಗಳಲ್ಲಿ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವ ಸಾಧ್ಯತೆಗಳಿರಲಿಲ್ಲ. ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸ್ವಂತ ಕೃಷಿಗೆ ಅಥವಾ ಕೃಷಿಯೇತರ ಬಳಕೆಗಾಗಿ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವ ಅವಕಾಶ ಇತ್ತು. ಬಾಂಬೆ ಕರ್ನಾಟಕದಲ್ಲಿ ೫೦ ಎಕರೆಗಳಿಗಿಂತ ಹೆಚ್ಚು ಸ್ವಂತ ಬೇಸಾಯ ಭೂಮಿ ಹೊಂದಿರುವ ಮೂಲಕ ಸ್ವಂತ ಬೇಸಾಯಕ್ಕಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ೫೦ ಎಕರೆಗಳಿಗೀಂತ ಕಡಿಮೆ ಭೂಮಿ ಹೊಂದಿರುವ ಮಾಲಿಕ ಸ್ವಂತ ಬೇಸಾಯಕ್ಕೆ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧಿನಪಡಿಸಿಕೊಳ್ಳುವುದಾದರೆ ಅವರಲ್ಲಿ ಈಗಾಗಲೇ ಇರುವ ಭೂಮಿ ಮತ್ತು ಸ್ವಾಧೀನ ಪಡಿಸಿಕೊಂಡ ಭೂಮಿ ಸೇರಿ ೫೦ ಎಕರೆ ಆಗುವಷ್ಟು ಸ್ವಾಧೀನಪಡಿಸಿಕೊಳ್ಳಬಹುದು. ಜಮೀನುದಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದು ವರ್ಷದೊಳಗೆ ಸ್ವಂತ ಬೇಸಾಯ ಮಾಡದಿದ್ದರೆ ಭೂಮಿಯನ್ನು ಪುನಃ ಗೇಣಿದಾರರಿಗೆ ಕೊಡಬೇಕಾಗಿತ್ತು.[11] ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ ಗೇಣಿದಾರರಿಗೆ ಪರಿಹಾರ ನೀಡಬೇಕಿತ್ತು. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕುಟುಂಬ ಹಿಡುವಳಿಯ ಮೂರು ಪಟ್ಟಿನಷ್ಟು ಭೂಮಿಯನ್ನು ಮಾಲಿಕರು ಪುನರ್ ಸ್ವಾಧೀನ ಪಡಿಸಿಕೊಳ್ಳಬಹುದಿತ್ತು. ಈ ರೀತಿಯಲ್ಲಿ ಪುನರ್ ಸ್ವಾಧೀನಪಡಿಸಿಕೊಳ್ಳುವಾಗ ಗೇಣಿದಾರ ತನ್ನ ಸ್ವಾಧೀನ ಇದ್ದ ಎಲ್ಲಾ ಭೂಮಿ ಕಳೆದುಕೊಂಡು ಕೃಷಿ ಕೂಲಿಯಾಗಬಾರದು. ಅಂದರೆ ಗೇಣಿದಾರ ಬೇಸಾಯ ಮುಂದು ವರಿಸಿಕೊಂಡು ಹೋಗುವಷ್ಟು ಭೂಮಿಯನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ಪುನರ್ ಸ್ವಾಧೀನ ಪಡಿಸಿಕೊಳ್ಳ ಬಹುದಿತ್ತು.

ಕರ್ನಾಟಕದ ೧೯೬೧ರ ಭೂಸುಧಾರಣ ಕಾಯಿದೆ ಗೇಣಿಗೆ ನೀಡಿದೆ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶ ನೀಡಿದೆ. ಈ ಕೆಳಗಿನ ಸಂದರ್ಭಗಳಲ್ಲಿ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವ ಅವಕಾಶವನ್ನು ಕಾಯಿದೆ ನೀಡಿದೆ. ೧. ಭೂಮಾಲಿಕರು ಸ್ವಂತ ಬೇಸಾಯ ಮಾಡಲು ಇಚ್ಚಿಸದ ಸಂದರ್ಭದಲ್ಲಿ. ೨. ಗೇಣಿದಾರರು ಗೇಣಿ (ಗುತ್ತಿಗೆ) ಕೊಡಲು ವಿಫಲರಾದಾಗ ಅಥವಾ ಅನಧಿಕೃವಾಗಿ ಒಳಗುತ್ತಿಗೆ ನೀಡಿದಾಗ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಬೇಸಾಯ ಮಾಡದಿದ್ದಾಗ ಮತ್ತು ೩. ಕೃಷಿಯೇತರ ಉದ್ದೇಶಗಳಿಗೆ ಭೂಮಿ ಅವಶ್ಯವಾದಾಗ. ಮೇಲಿನ ಸಂದರ್ಭಗಳಲ್ಲಿ ಈ ಕೆಳಗಿನ ಶರತ್ತುಗಳಿಗೊಳಪಟ್ಟು ಪುನರ್ ಸ್ವಾಧೀನಪಡಿಸಿಕೊಳ್ಳಬಹುದು. ೧. ಗೇಣಿಗೆ ನೀಡಿದ್ದ ಅರ್ಧ ಭಾಗವನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳಬಹುದು. ೨. ಗೇಣಿಗೆ ನೀಡಿರುವುದನ್ನು ಪುನರ್ ಸ್ವಾಧೀನ ಮಾಡುವುದರಿಂದ ಗೇಣಿದಾರ ಭೂರಹಿತನಾಗಬಾರದು. ಅವನ ವಶ ಆಧಾರಭೂತ ಹಿಡುವಳಿಯಷ್ಟನ್ನು ಬಿಟ್ಟು ಉಳಿದುದನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳಬಹುದು. ಇವೆಲ್ಲ ಕಾಯಿದೆಯಲ್ಲಿರುವ ನಿಯಮಗಳು. ಕಾಯಿದೆಯಲ್ಲಿರುವ ಎಲ್ಲಾವೂ ಯಥಾರೂಪದಲ್ಲಿ ಕಾರ್ಯರೂಪಕ್ಕೆ ಬರುವುದಾರೆ ಸಮಸ್ಯೆಯೇ ಇಲ್ಲ. ಕಾಯಿದೆ ಹೇಳೂವುದಕ್ಕೂ ವಾಸ್ತವದಲ್ಲಿ ಜರಗುವುದಕ್ಕೂ ತುಂಬಾ ವ್ಯತ್ಯಾಸವಿರುವುದರಿಂದಲೇ ಸಮಸ್ಯೆ ಹುಟ್ಟಿ ಕೊಳ್ಳುವುದು. ಕಾಯಿದೆ ಯಥಾರೂಪದಲ್ಲಿ ಅನುಷ್ಠಾನಗೊಳ್ಳುತ್ತಿದ್ದರೆ ೧೯೬೧ ಮತ್ತು ೧೯೭೧ರ ನಡುವೆ ಗೇಣಿದಾರರ ಸಂಖ್ಯೆ ಏರಬೇಕಿತ್ತು ಅಥವಾ ಕನಿಷ್ಠ ೧೯೬೧ರಲ್ಲಿ ಇದ್ದಷ್ಟೇ ಇರಬೇಕಿತ್ತು. ಇನ್ನೂ ಧಾರಾಳವಾಗಿ ಆಲೊಚಿಸುವುದಾದರೆ ಮಸೂದೆ ನಿಜವಾದ ಅರ್ಥದಲ್ಲಿ ದುಡಿಯುವ ವರ್ಗಕ್ಕೆ ಅನುಕೂಲ ಮಾಡಿಕೊಡುವ ಕ್ರಮದಲ್ಲಿ ಅನುಷ್ಠಾನ ಗೊಳ್ಳುತ್ತಿದ್ದರೆ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆ ಆಗಿ ಕೃಷಿಕರ / ಗೇಣಿದಾರರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ ಆ ರೀತಿ ಆಗಲಿಲ್ಲ. ಈ ಎರಡೂ ಬೆಳವಣಿಗೆಗಳಿಗೆ ಸಂಪೂರ್ಣ ವಿರೋಧ ಬೆಳವಣಿಗೆಗಳನ್ನು ಗುರುತಿಸಬಹುದು.

೧೯೬೧ರ ಭೂಸುಧಾರಣ ಮಸೂದೆ ೧೯೬೫ರಲ್ಲಿ ಜಾರಿಗೆ ಬಂದಿದೆ. ೧೯೬೧ರ ಸೆನ್ಸಸ್ ಪ್ರಕಾರ ರಾಜ್ಯದಲ್ಲಿ ೧೮, ೧೩, ೧೫೪ ಗೇಣಿದಾರರಿದ್ದರು. ಕರಾವಳೀ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗೇಣಿದಾರರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೪,೯೦,೫೭೧ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ೧,೮೧,೨೩೯ ಗೇಣಿದಾರು ಇದ್ದರು (ಕೋಷ್ಟಕ-೨). ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಶಿವಮೊಗ್ಗದಲ್ಲಿ ೧,೧೧,೭೮೦ ಗೇಣಿದಾರರು ಇದ್ದರೆ ಉಳಿದ ಜಿಲ್ಲೆಗಳಲ್ಲಿ ಇಪ್ಪತರಿಂದ ಮುವತೈದು ಸಾವಿರ ಗೇಣಿದಾರರು ಇದ್ದರು (ಕೋಷ್ಟಕ – ೨). ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳಗಾಂ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕಿಂತ ಮೇಲೆ ಇದ್ದರೆ ಇನ್ನುಳಿದ ಜಿಲ್ಲೆಗಳಲ್ಲಿ ಮೂವತ್ತರಿಂದ ಎಂಬತ್ತು ಸಾವಿರದಷ್ಟು ಗೇಣಿದಾರರು ಇದ್ದರು. ದಕ್ಷಿಣ ಕರ್ನಾಟಕದ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಆರುವತ್ತರಿಂದ ಎಪ್ಪತೈದು ಸಾವಿರದಷ್ಟು ಗೇಣಿದಾರರಿದ್ದರೆ ಉಳಿದ ಜಿಲ್ಲೆಗಳಲ್ಲಿ ಐವತ್ತು ಸಾವಿರದೊಳಗೆ ಇದ್ದರು. ೧೯೬೧ರ ಗೇಣಿದಾರರ ಸಂಖ್ಯೆಗೆ ಹೋಲಿಸಿದರೆ ೧೯೭೧ರ ಸೆನ್ಸಸ್ ಪ್ರಕಾರ ಗೇಣಿದಾರರ ಸಂಖ್ಯೆ ಗಣನೀಯ ಕುಸಿತ ಕಂಡಿದೆ. ಅತೀ ಹೆಚ್ಚಿನ ಕುಸಿತವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು. ಶೇಕಡವಾರು ಲೆಕ್ಕಚಾರ ನೋಡುವಾಗ ಎಲ್ಲಾ ಜಿಲ್ಲೆಗಳ್ಲಲೂ ಎಪ್ಪತ್ತು ಎಂಬತ್ತು ತೊಂಬತ್ತರ ರೇಂಜಲ್ಲಿ ಕುಸಿತ ಕಂಡಿದೆ. ಆದರೆ ಅವುಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ೧೯೬೧ರಲ್ಲಿ ಕಡಿಮೆ ಸಂಖ್ಯೆಯಲ್ಲಿ ಗೇಣಿದಾರರಿದ್ದರು. ಅಂತಹ ಕಡಿಮೆ ಸಂಖ್ಯೆಯಿಂದ ಸ್ವಲ್ಪ ಕಡಿತಗೊಂಡರೂ ಅದು ಶೇಕಡವಾರು ಲೆಕ್ಕಚಾರದಲ್ಲಿ ದೊಡ್ಡ ಕುಸಿತದಂತೆ ಕಾಣುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕ್ರಮವಾಗಿ ೧೯೭೧ರಲ್ಲಿ ೭೦,೫೯೧ ಮತ್ತು ೭೨,೪೫೬ ಗೇಣಿದಾರರಿದ್ದರು. ಇದೆ ರೀತಿಯ ಕುಸಿತವನ್ನು ಶಿವಮೊಗ್ಗ, ಬೆಳಗಾಂ, ಬಿಜಾಪುರ, ಧಾರವಾಡ ಜಿಲ್ಲೆಗಳ್ಲಲೂ ಕಾಣಬಹುದು. ೧೯೬೧ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ೧,೧೧,೭೮೦ ಗೇಣಿದಾರರ ಸಂಖ್ಯೆ ೧೯೭೧ರಲ್ಲಿ ೩೧,೬೮೮ಕ್ಕೆ ಇಳಿದಿದೆ. ಬಿಜಾಪುರದಲ್ಲಿ ೧೯೬೧ರಲ್ಲಿ ಬೆಳಾಗಂನಲ್ಲಿ ೨,೨೭,೮೪೫ ಇದ್ದ ಗೇಣಿದಾರರ ಸಂಖ್ಯೆ ೧೯೭೧ರಲ್ಲಿ ೪೭,೫೧೧ಕ್ಕೆ ಇಳಿದಿದೆ. ೧೯೬೧ರಲ್ಲಿ ಬೆಂಗಳೂರು ಮತ್ತು ಮೈಸೂರಿಲ್ಲಿ ಕ್ರಮಾವಾಗಿ ೬೯,೩೦೨ ಮತ್ತು ೭೫,೬೪೬ ಗೇಣಿದಾರರಿದ್ದರು. ೧೯೭೧ರಲ್ಲಿ ಈ ಸಂಖ್ಯೆ ಕ್ರಮವಾಗಿ ೧೨,೧೮೪ ಮತ್ತು ೯,೭೨೦ಕ್ಕೆ ಇಳಿದಿದೆ. ಇಡೀ ರಾಜ್ಯದಲ್ಲಿ ೧೯೬೧ರಲ್ಲಿದ್ದ ೧೮,೧೩,೧೫೪ ಗೇಣಿದಾರರ ಸಂಖ್ಯೆ ೧೯೭೧ರ ವೇಳೆಗೆ ೩,೯೭,೪೦೨ಕ್ಕೆ ಇಳಿದಿದೆ (ಕೋಷ್ಟಕ – ೨).

೧೯೬೧ ಮತ್ತು ೧೯೭೧ರ ನಡುವೆ ಗೇಣಿದಾರರ ಸಂಖ್ಯೆ ಕಡಿಮೆಯಾಗಿರುವುದನ್ನು ಮತ್ತೊಂದು ವಿಧದಿಂದಲೂ ಅರ್ಥಮಾಡಿಕೊಳ್ಳಬಹುದು. ೧೯೬೧ರ ಸೆನ್ಸಸ್ ಪ್ರಕಾರ ಕರ್ನಾಟಕದಲ್ಲಿ ಒಟ್ಟು ೫೮,೦೬,೬೬೪ ಕೃಷಿಕರಿದ್ದರು. ೧೯೬೧ರ ಕಾಯಿದೆ ಗೇಣಿ ಭದ್ರತೆ ಒದಗಿಸುತ್ತಿದ್ದರೆ ೧೯೬೧ರ ವೇಳೆಗೆ ಕೃಷಿಕರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ ಆರೀತಿ ಆಗಲಿಲ್ಲ. ಆ ರೀತಿ ಆಗುವದಕ್ಕಿಂತ ಕೃಷಿಕರ ಸಂಖ್ಯೆ ೧೯೭೧ರಲ್ಲಿ ೪೦,೭೨,೮೨೯ಕ್ಕೆ ಇಳಿದಿದೆ (ಕೋಷ್ಟಕ – ೩). ಹೆಚ್ಚು ಕಡಿಮೆ ಶೇ. ೩೦ರಷ್ಟು ಕೃಷಿಕರು ಕಡಿಮೆ ಆಗಿದ್ದಾರೆ. ಈ ರೀತಿ ಭೂಮಿ ಕಳೆದುಕೊಂಡ ಕೃಷಿಕರು ಏನಾದರು ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಎಪ್ಪತರ ದಶದಲ್ಲಿ ಕರ್ನಾಟಕದ ಬಹುತೇಕ ಭಾಗದಲ್ಲಿ ಕೃಷಿಯೇ ಜನರಿಗೆ ಮುಖ್ಯ ಕಸುಬು. ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆ ಅಲ್ಪಸ್ವಲ್ಪ ಕೃಷಿಯೇತರ ಉದ್ಯೋಗಗಳಿದ್ದವು. ಆದರೆ ಅವು ಕಾಯಿದೆಯ ಅನುಷ್ಠಾನದಿಂದ ಭೂಮಿ ಕಳೆದುಕೊಂಡ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಗೇಣಿದಾರಿಕೆ ಕಳೆದುಕೊಂಡ ಜನರು ಒಂದೋ ಕೃಷಿ ಕಾರ್ಮಿಕರಾಗಬೇಕು ಅಥವಾ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಅಥವಾ ದೂರದ ಊರಿಗೆ ವಲಸೆ ಹೋಗಬೇಕು. ಈ ಎಲ್ಲಾವು ನಡೆದಿದೆ. ೧೯೬೧ರಲ್ಲಿ ರಾಜ್ಯದಲ್ಲಿ ಒಟ್ಟು ೧೭,೬೧,೧೧೦ ಕೃಷಿ ಕಾರ್ಮಿಕರಿದ್ದು. ೧೯೭೧ರಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ೨೭,೧೭,೫೩೭ಕ್ಕೆ ಏರಿದೆ. ಹೆಚ್ಚು ಕಡಿಮೆ ಕೃಷಿ ಕಾರ್ಮಿಕರ ಸಂಖ್ಯೆ ಶೇ. ೫೫ರ ಏರಿಕೆಯನ್ನು ಕಂಡಿದೆ (ಕೋಷ್ಟಕ – ೩). ಗೇಣಿದಾರರ ಸಂಖ್ಯೆ ಶೇ. ೩೦ರ ಕುಸಿತವನ್ನು ಕಾಣುವಾಗ ಕೃಷಿಕಾರ್ಮಿಕರ ಸಂಖ್ಯೆ ಶೇ. ೫೫ರ ಏರಿಕೆ ತೋರಿಸುವುದು ಭೂಮಿ ಕಳೆದುಕೊಂಡ ಬಹುತೇಕ ಗೇಣಿದಾರರು ಕೃಷಿ ಕಾರ್ಮಿಕಾರಾಗಿ ಪರಿವರ್ತಿತಗೊಂಡಿದ್ದಾರೆ ಎನ್ನುವ ವಾದವನ್ನು ಗಟ್ಟಿಗೊಳಿಸುತ್ತದೆ. ಈ ತೀರ್ಮಾನವನ್ನು ಜನಸಂಖ್ಯೆಯಲ್ಲಿನ ಏರಿಕೆಯನ್ನು ತೋರಿಸಿ ಪ್ರಶ್ನಿಸಬಹುದು. ಜನಸಂಖ್ಯೆಯಲ್ಲಿನ ಹೆಚ್ಚಳದಿಂದ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರಬಹುದೆಂದು ಮೇಲಿನ ತೀರ್ಮಾನವನ್ನು ಅಲ್ಲಗೆಳೆಯಬಹುದು. ಖಂಡಿತವಾಗಿಯೂ ಜನಸಂಧ್ಯೆ ಹೆಚ್ಚಳ ಕೃಷಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಹಾಗೆಂದು ೧೯೬೧ ಮತ್ತು ೧೯೭೧ರ ನಡುವೆ ಹುಟ್ಟಿದ ಎಲ್ಲಾರೂ ಕೃಷಿ ಕಾರ್ಮಿಕರೇ ಆಗಿರಲು ಸಾಧ್ಯವೇ? ತಾತ್ಕಾಲಿಕವಾಗಿ ಈ ವಾದವನ್ನು ಒಪ್ಪಿದರೂ ಅಂಕಿಅಂಶಗಳು ಈ ವಾದದೊಂದಿಗೆ ಹೋಗುವುದಿಲ್ಲ. ೧೯೬೧ ಮತ್ತು ೧೯೭೧ರ ನಡುವೆ ಶೇ. ೨೪ರಷ್ಟು ಜನಸಂಖ್ಯೆ ಹೆಚ್ಚಳ ಕಂಡಿದೆ. ಆದರೆ ಕೃಷಿ ಕಾರ್ಮಿಕರ ಸಂಖ್ಯೆ ಶೇ. ೫೫ರಷ್ಟು ಏರಿದೆ (ಕೋಷ್ಟಕ – ೩).

೧೯೬೧ರ ಕಾಯಿದೆಯಿಂದ ದೊಡ್ಡ ಸಂಖ್ಯೆಯಲ್ಲಿ ಗೇಣಿದಾರರು ಭೂಮಿ ಕಳೆದು ಕೊಂಡಿರುವುದು ೧೯೭೯ರವರೆಗೆ ಡಿಕ್ಲರೇಶನ್ ಸಲ್ಲಿಸಿದ ಗೇಣಿದಾರರ ಸಂಖ್ಯೆಯಿಂದಲೂ ದೃಢಪಡುತ್ತದೆ. ೧೯೭೧ರ ಭೂಸುಧಾರಣ ಕಾಯಿದೆಯಲ್ಲಿ ಹಿಂದೆ ಗೇಣಿದಾರರಾಗಿದ್ದು ೧೯೭೪ರ ಕಾಯಿದೆ ಬರುವ ಸಂದರ್ಭದಲ್ಲಿ ಗೇಣಿದಾರರಾಗಿಲ್ಲದವರನ್ನು ಕಲ್ಪಿತ ಗೇಣಿದಾರರೆಂದು (ಡೀಮ್ಡ್ ಟಿನೆನ್ಸ್) ಪರಿಗಣಿಸಲಾಗಿದೆ. ಇಂತಹ ಕಲ್ಪಿತ ಗೇಣಿದಾರರಿಗೆ ೧೯೭೪ ಕಾಯಿದೆಯಡಿ ಡಿಕ್ಲರೇಶನ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಶೇ.೨೦ಕ್ಕಿಂತಲೂ ಹೆಚ್ಚಿನ ಕಲ್ಪಿತ ಗೇಣಿದಾರರು ಡಿಕ್ಲರೇಶನ್ ಹಾಕಿದ್ದಾರೆ. ಇವರೆಲ್ಲರೂ ೧೯೬೧ರ ಕಾಯಿದೆಯ ಅನುಷ್ಠಾನದಿಂದ ಭೂಮಿ ಕಳೆಕೊಂಡವರಲ್ಲದಿರಬಹುದು. ಆದರೆ ಇವರಲ್ಲಿ ಬಹುತೇಕರು ಹಿಂದೆ ಗೇಣಿದಾರರಾಗಿರಲೇ ಬೇಕು. ಯಾಕೆಂದರೆ ಗೇಣಿದಾರರೆಂದು ಸಾಧಿಸಲು ಏನಾದರೂ ಪುರಾವೆ ಇಲ್ಲದಿದ್ದರೆ ಅವರು ಡಿಕ್ಲರೇಶನ್ ಸಲ್ಲಿಸಿದರೂ ಉಪಯೋಗವಾಗುತ್ತಿರಲಿಲ್ಲ. ಆದುದರಿಂದ ೧೯೬೧ರ ಭೂಸುಧಾರಣ ಮಸೂದೆ ವಾಸ್ತವದಲ್ಲಿ ಗೇಣಿದಾರರನ್ನು ಸುಧಾರಣೆ ಮಾಡಿಲ್ಲ. ಗೇಣಿದಾರರ ಸ್ವಾಧೀನ ಇದ್ದ ಭೂಮಿಯನ್ನು ಹಲವು ಕಾರಣಗಳನ್ನು ನೀಡಿ ಸ್ವಾಧೀನಪಡಿಸಿಕೊಳ್ಳಲು ಭೂಮಾಲಿಕರಿಗೆ ಕಾಯಿದೆ ಸಾಕಷ್ಟು ಅವಕಾಶ ನೀಡಿರುವುದು ಮೇಲಿನ ಅಂಕಿ ಅಂಶಗಳಿಂದ ದೃಢವಾಗುತ್ತದೆ. ಸರಕಾರಕ್ಕೆ ಗೇಣಿದಾರರ ಸ್ಥಿತಿಯನ್ನು ಬಲಗೊಳಿಸುವ ಕಾಳಜಿ ಇರುತ್ತಿದ್ದರೆ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳು ಅವಕಾಶವೇ ಕೊಡಬಾರದಿತ್ತು. ಏಕೀಕರಣ ಪೂರ್ವ ಕರ್ನಾಟಕದ ಹಲವು ಭಾಗಗಳಲ್ಲಿ (ಕೊಡಗು, ಮದ್ರಾಸ್ ಕರ್ನಾಟಕಗಳಲ್ಲಿ) ಪುನರ್ ಸ್ವಾಧೀನವನ್ನು ತಡೆಗಟ್ಟುವ ಭೂಮಸೂದೆಳಿದ್ದವು. ಅವುಗಳಿಂದ ಪಾಠ ಕಲಿತು ೧೯೬೧ರ ಕಾಯಿದೆಯಲ್ಲಿ ಪುನರ್ ಸ್ವಾಧೀನ ಪಡಿಸುವುದನ್ನು ಸಂಪೂರ್ಣ ನಿರ್ಬಂಧಿಸಬೇಕತ್ತು. ಆ ರೀತಿ ಮಾಡುವ ಬದಲು ಅಂದಿನ ಸರಕಾರಕ್ಕೆ ಭೂಮಾಲಿಕರ ಆಸಕ್ತಿಗಳೂ ಮುಖ್ಯವಾಯಿತು. ಅವುಗಳನ್ನು ರಕ್ಷಿಸುವ ಉದ್ದೇಶದಿಂದ ಪುನರ್ ಸ್ವಾಧೀನ ಪಟಡಿಸಿಕೊಳ್ಳಲು ದೊಡ್ಡ ಪ್ರಮಾಣದ ಅವಕಾಶ ನೀಡಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಗೇಣಿಗೆ ದುಡಿಯುತ್ತಿದ್ದ ರೈತರು ತಮ್ಮ ಭೂಮಿ ಕಳೆದುಕೊಳ್ಳ ಬೇಕಾಯಿತು. ಕೃಷಿಯೇತರ ಉದ್ಯೋಗ ಅವಕಾಶಗಳು ತುಂಬಾ ಸೀಮಿತವಾಗಿದ್ದವು. ಇದರಿಂದ ಭೂಮಿ ಕಳೆದು ಕೊಂಡ ಗೇಣಿದಾರರು ದೊಡ್ಡ ಸಂಖ್ಯೆಯಲ್ಲಿ ಕೃಷಿ ಕಾರ್ಮಿಕರಾಗಿ ಪರಿವರ್ತಿತರಾದರು. ಈ ಪರಿವರ್ತನೆಗಳನ್ನು ಭೂಸುಧಾರಣೆ ಎನ್ನಬೇಕೇ?

ಭೂಸುಧಾರಣೆಯ ಮತ್ತೊಂದು ಉದ್ದೇಶ ಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠ ಮಿತಿಯನ್ನು ನಿಗಧಿಪಡಿಸುವುದು. ೧೯೬೧ರ ಕಾಯಿದೆ ಈ ಕೆಳಗಿನಂತೆ ಗರಿಷ್ಠಮಿತಿಯನ್ನು ನಿಗದಿಗೊಳಿಸಿದೆ. ಐದು ಜನರಿರುವ ಒಂದು ಕುಟುಂಬ ಗರಿಷ್ಠ ೨೭ ಸ್ಟ್ಯಾಂಡರ್ಡ್ ಎಕರೆ ಭೂಮಿಯನ್ನು ಹೊಂದಿರಬಹುದು. ಒಂದು ಎಕರೆ ನೀರಾವರಿ ಭೂಮಿಯನ್ನು ಒಂದು ಸ್ಟ್ಯಾಂಡರ್ಡ್ ಎಕರೆ ಎಂದು ಗುರುತಿಸಲಾಗಿದೆ. ನೀರಾವರಿ ಇಲ್ಲದ (೨೫ ಇಂಚಿಗಿಂತ ಕಡಿಮೆ ಮಳೆಯಾಗುವ) ಪ್ರದೇಶದ ಎಂಟು ಎಕರೆ ಭೂಮಿಯು ಒಂದು ಸ್ಟ್ಯಾಂಡರ್ಡ್ ಎಕರೆ ಭೂಮಿಗೆ ಸಮ. ಅಂದರೆ ಒಣ ಭೂಪ್ರದೇಶದಲ್ಲಿ ಪ್ರತಿ ಐದು ಜನರಿರುವ ಒಂದು ಕುಟುಂಬವು ಗರಿಷ್ಠ ೨೧೬ ಎಕರೆ ಭೂಮಿಯನ್ನು ಹೊಂದಬಹುದು. ಕುಟುಂಬದ ಸದಸ್ಯರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದ ಸಂದರ್ಭದಲ್ಲಿ ಪ್ರತಿ ಸದಸ್ಯರಿಗೂ ನಿರ್ದಿಷ್ಟ ಪ್ರಮಾಣದ ಹೆಚ್ಚುವರಿ ಭೂಮಿ ಹೊಂದುವ ಅವಕಾಶ ನೀಡಲಾಯಿತು. ಈ ರೀತಿಯ ಹೆಚ್ಚಳವು ಹತ್ತು ಸದಸ್ಯರಿರುವ ಒಂದು ಕುಟುಂಬಕ್ಕೆ ಗರಿಷ್ಠ ೫೪ ಎಕರೆ ನೀರಾವರಿ ಭೂಮಿಯನ್ನು (ಒಣಭೂಮಿಯಾದರೆ ಗರಿಷ್ಠ ೪೩೨ ಎಕರೆ) ಹೊಂದುವ ಅವಕಾಶವನ್ನು ನೀಡಿದೆ. ಪ್ಲಾಂಟೇಶನ್‌ಗಳಿಗೆ, ಶೈಕ್ಷಣಿಕ, ದತ್ತಿ ಮತ್ತು ಮತಧರ್ಮೀಯ ಸಂಸ್ಥೆಗಳು, ಸಹಕರಿ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳು ಮುಂತಾದವುಗಳಿಗೆ ಮೇಲಿನ ಗರಿಷ್ಠಮಿತಿಯಿಂದ ವಿನಾಯಿತಿ ನಿಡಲಾಗಿದೆ. ಗುತ್ತಿಗೆ ನಿಗಧಿಪಡಿಸುವಾಗ ಮತ್ತು ಗೇಣಿಯ ಭದ್ರತೆ ಕಡಿಮೆ ಮಾಡುವಾಗ ಸಾಕಷ್ಟು ನಿಷ್ಠುರತೆ ತೋರಿದ ಸರಕಾರ ಭೂಮಿಯ ಗರಿಷ್ಠಮಿತಿ ನಿಗಧಿ ಪಡಿಸುವಾಗ ಇಷ್ಟೊಂದು ಔದಾರ್ಯ ತೋರಿಸುವುದು ಸಹಜವೇ ಸರಿ. ಗರಿಷ್ಠಮಿತಿ ತೀರ್ಮಾನದ ಮತ್ತೊಂದು ಉದ್ದೇಶ ಈ ಮಿತಿಯ ಮಾನದಂಡ ಬಳಸಿ ಹೆಚ್ಚುವರಿ ಭೂಮಿಯನ್ನು ಗುರುತಿಸಬೇಕು ಇಂತಹ ಹೆಚ್ಚುವರಿ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿಕೊಂಡು ಭೂರಹಿತರಿಗೆ ಹಂಚುವುದು ಈ ಪ್ರಕ್ರಿಯೆಯ ಅಂತಿಮ ಗುರಿ. ಈ ಬಗೆಯ ಗರಿಷ್ಠಮಿತಿ ಎಷ್ಟು ಹೆಚ್ಚುವರಿ ಭೂಮಿಯನ್ನು ಗುರುತಿಸಲು ಅವಕಾಶ ಮಾಡಿಕೊಟ್ಟಿರಬಹುದು? ಹೆಚ್ಚುವರಿ ಭೂಮಿಯೇ ಇಲ್ಲವಾದರೆ ಅದನ್ನು ಸ್ವಾಧೀನ ಪಡಿಸುವ ಮತ್ತು ಭೂರಹಿತರಿಗೆ ಹಂಚುವ ಸಂಗತಿಯೇ ಇಲ್ಲ. ಹೆಚ್ಚುವರಿ ಭೂಮಿಯನ್ನು ಹಂಚುವುದು ಬಿಡಿ ಗೇಣಿದಾರರ ಭೂಮಿಯನ್ನೇ ಕಿತ್ತುಕೊಳ್ಳಲಾಗಿದೆಯೆಂದು ಮೇಲಿನ ಅಂಕಿಅಂಶಗಳು ಸಾರಿ ಹೇಳುತ್ತವೆ.

ಕರ್ನಾಟಕ ಮತ್ತು ಇತರ ರಾಜ್ಯ ಸರಕಾರಗಳು ಗರಿಷ್ಠಮಿತಿಯನ್ನು ನಿರ್ಧರಿಸುವಾಗ ಅನುಸರಿಸಿದ ಬೇಕಾಬಿಟ್ಟಿ ಕ್ರಮ ಕೇಂದ್ರ ಸರಕಾರದ ಗಮನಕ್ಕೆ ಬಂದಿವೆ. ಗರಿಷ್ಠಮಿತಿಯನ್ನು ನಿಗಧಿಗೊಳಿಸುವುದನ್ನು ರಾಜ್ಯಗಳಿಗೆ ಬಿಟ್ಟರೆ ಅವುಗಳೂ ಕುಶಿಬಂದಂತೆ ನಿಗಧಿಗೊಳಿಸುತ್ತವೆ ಎಂದು ೧೯೭೧ರಲ್ಲಿ ಕೇಂದ್ರ ಸರಕಾರ ಒಂದು ಗೈಡ್‌ಲೈನ್ಸ್‌ನ್ನು ರೂಪಿಸಿದೆ. ಅ ಮಾರ್ಗದರ್ಶಿ ಅನುಸಾರ ನೀರಾವರಿಯಿದ್ದು ಎರಡು ಬೆಳೆ ತೆಗೆಯವ ಪ್ರದೇಶದಲ್ಲಿ ಗರಿಷ್ಠಮಿತಿ ೪ – ೦೫ -೭.೨೮ ಹೆಕ್ಟೇರುಗಳು. ನೀರಾವರಿ ಇದ್ದು ಒಂದು ಬೆಳೆ ತೆಗೆಯುವ ಪ್ರದೇಶದಲ್ಲಿ ಭೂಮಿಯ ಗರಿಷ್ಠಮಿತಿ ೧೦.೦೩ ಹೆಕ್ಟೇರುಗಳು. ಒಣಭೂಮಿಪ್ರದೇಶದಲ್ಲಿ ೨೧.೮೫ ಹೆಕ್ಟೇರುಗಳು ಗರಿಷ್ಠಮಿತಿ.[12] ಕೆಂದ್ರ ಸರಕಾರದ ಗೈಡ್‌ಲೈನ್ಸ್ ಒಂದು ಸ್ಥೂಲ ಪರಿದಿಯನ್ನು ಸೂಚಿಸುತ್ತದೆ. ಅದು ಸೂಚಿಸಿರುವುದಕ್ಕಿಂತ ಕಡಿಮೆ ಗರಿಷ್ಠಮಿತಿಯನ್ನು ನಿಗಧಿಗೊಳಿಸಬಾರದೆಂದಿಲ್ಲ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು. ಒರಿಸ್ಸಾ ಮುಂತಾದ ರಾಜ್ಯಗಳು ಕೇಂದ್ರ ನಿಗಧಿಪಡಿಸಿದ ಮಿತಿಗಿಂತಲೂ ತುಂಬಾ ಕಡಿಮೆ ಗರಿಷ್ಠಮಿತಿಗಳನ್ನು ನಿಗಧಿಗೊಳಿಸಿವೆ.[13] ೧೯೬೧ರ ಭೂಸುಧಾರಣ ಮಸೂದೆಯನ್ನು ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಕೇಂದ್ರ ಸರಕಾರ ನಿಗಧಿಪಡಿಸಿದ ಗರಿಷ್ಠಮಿತಿಯನ್ನು ಕರ್ನಾಟಕ ಪರಿಗಣಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ೧೯೬೧ ರ ಭೂಮಸೂದೆಯನ್ನು ಭೂಸುಧಾರಣ ಮಸೂದೆ ಎನ್ನುವುದು ತಪ್ಪಾಗುತ್ತದೆ. ಆ ಕಾಯಿದೆಗೆ ಭೂಸುಧಾರಣೆ ಮಾಡುವ ಯಾವುದೇ ಲಕ್ಷಣಗಳಿರಲಿಲ್ಲ. ಹೆಚ್ಚೆಂದರೆ ಆ ಕಾಯಿದೆಯನ್ನು ಗುತ್ತಿಗೆ ಸುಧಾರಣ ಮಸೂದೆ ಎನ್ನಬಹುದು. ಅದು ಕೂಡ ಭೂಮಾಲಿಕರ ಅಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಡೆದಿದೆ. ಏಕೀಕೃತ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದ್ದ ಟೆನೆನ್ಸಿ ಮತ್ತು ಅಗ್ರಿಕಲ್ಚರಲ್ ಲ್ಯಾಂಡ್‌ಆಕ್ಟ್‌ಗಳನ್ನು ಬದಿಗೆ ಸರಿಸಿ ಇಡಿ ರಾಜ್ಯದ ಎಲ್ಲಾ ಕೃಷಿ ಭೂಸಂಬಂಧಗಳನ್ನು ಒಂದು ಕಾಯಿದೆಯಡಿಗೆ ತಂದಿರುವುದು ಆ ಕಾಯಿದೆಯ ಇನ್ನೊಂದು ದೊಡ್ಡ ಸಾಧನೆ. ಎಲ್ಲಾರಿಗು ಅನ್ವಯವಾಗುವ ಕಾಯಿದೆಯನ್ನು ತರುವಾಗ ಬೇರೆ ಬೇರೆ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದ್ದ ಕಾನೂನುಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಆ ರೀತಿ ಹಿಂದಿನ ಕಾಯಿದೆಗಳನ್ನು ಪರಿಗಣಿಸುವಾಗ ಗೇಣಿದಾರರಿಗೆ ಅನುಕೂಲವಾಗುವ ಅಂಶಗಳನ್ನು ಇಟ್ಟುಕೊಂಡು ೧೯೬೧ರ ಕಾಯಿದೆಯನ್ನು ರೂಪಿಸಲಾಗಿದೆ. ಈ ಕಾಯಿದೆಯ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶ ದಿಂದ ಅದಕ್ಕೆ ತಿದ್ದುಪಡಿ ತರಲಾಯಿತು. ತಿದ್ದುಪಡಿ ಮಾಡುವಾಗ ಗರಿಷ್ಠಭೂಮಿತಿ ಕುರಿತ ಕೇಂದ್ರ ಸರಕಾರದ ಮಾರ್ಗ ಸೂಚಿಗಳನ್ನು ಪರಿಗಣಿಸಲಾಗಿದೆ. ಜನತೆಗೆ ಭೂಮಿಯ ಪುನರ್ ಸ್ವಾಧೀನ, ಗೇಣಿ ನಿಯಂತ್ರಣ ಇತ್ಯಾದಿ ಅಂಶಗಳನ್ನು ಒಳಗೊಂಡ ಸಮಗ್ರವಾದ ತಿದ್ದುಪಡಿ ಮಸೂದೆಯನ್ನು ರೂಪಿಸಲಾಯಿತು. ಈ ಮಸೂದೆ ೧೯೭೪ರಲ್ಲಿ ರಾಷ್ಟ್ರಪತಿಯವರ ಅಂಕಿತಪಡೆದು ಹೊಸ ಶಾಸನವಾಯಿತು.

[1] ವೆಲೇರಿಯನ್ ರಾಡ್ರಿಗಸ್. ಭೂಸುಧಾರಣ ಕಾಯಿದೆಯ ರಾಜಕಾರಣ, ಕನ್ನಡ ವಿಶ್ವವಿದ್ಯಾಲಯದ ವಿರ್ಶವಕೋಶ – ೪, ಚರಿತ್ರೆ, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಲಯ, ೨೦೦೧, ಪು. ೮೬೩ – ೭೪. ಲೇಖಕರು ಈ ಅಂಕಿಅಂಶಗಳನ್ನು ಕರ್ನಾಟಕ ಸರಕಾರದ ಕಂದಾಯ ಇಲಾಖೆಯಿಂದ ಪಡೆದಿದ್ದಾರೆ.

[2] ವೆಲೇರಿಯನ್ ರಾಡ್ರಿಗಸ್, ಭೂಸುಧಾರಣ ಕಾಯಿದೆಯ ರಾಜಕಾರಣ, ಪು. ೮೬೩ – ೭೪.

[3] ವೆಲೇರಿಯನ್ ರಾಡ್ರಿಗಸ್. ಭೂಸುಧಾರಣ ಕಾಯಿದೆಯ ರಾಜಕಾರಣ, ಪು. ೮೬೩ – ೭೪.

[4] ಜಿ.ತಮ್ಮಯ್ಯ ಮತ್ತು ಆಬ್ದುಲ್ ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲ್ಯಂಡ್ ರೀಫೋರ್ಮ್ಸ್ ಇನ್ ಕರ್ನಾಟಕ, ಎ ಸೌತ್ ಇಂಡಿಯನ್ ಸ್ಟೇಟ್, ಏಶಿಯನ್ ಸರ್ವೇ, ೨೩(೭), ಜುಲೈ ೧೯೭೩, ಪು. ೮೧೦ – ೨೯

[5] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ ಅಗ್ರಿಕಲ್ಚರಲ್ ಲ್ಯಾಂಡ್ ಲಾಸ್ ಕಮಿಟಿ, ಬೆಂಗಳೂರು, ೧೯೫೭

[6] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[7] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[8] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[9] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[10] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[11] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[12] ಬಿ.ಬಿ. ಮೊಹಾಂತಿ, ಲೇಂಡ್ ಡಿಸ್ಟ್ರಿಬ್ಯುಶನ್ ಎಮಂಗ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಟ್ರೈಬ್ಸ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ೩೬(೪೦), ಆಕ್ಟೋಬರ್ ೨೦೦೧, ಉ. ೩೮೫೭ – ೬೮. ಲೇಖಕರು ಈ ಅಂಕಿಅಂಶಗಳನ್ನು ಭಾರತ ಸರಕಾರ, ಆಗ್ರಿಕಲ್ಚರಲ್ ಸ್ಟೆಟಿಸ್ಟಿಕ್ಸ್ ಎಟ್ ಎ ಗ್ಲೇನ್ಸ್, ನ್ಯೂಡೆಲ್ಲಿ, ೧೯೯೩, ಇದರಿಂದ ಪಡೆದಿದ್ದಾರೆ.

[13] ಬಿಬಿ. ಮೊಹಾಮತಿ, ಲೇಂಡ್ ಡಿಸ್ಟ್ರಿಬ್ಯುಶನ್ ಎಮಂಗ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಟ್ರೈಬ್ಸ್, ಪು. ೩೮೫೭ – ೬೮.