ಕರ್ನಾಟಕದಲ್ಲಿ ಜಾರಿಗೆ ಬಂದ ಮೂರು ಭೂಸುಧಾರಣ ಮಸೂದೆಗಳ ಪರಿಣಾಮಗಳನ್ನು ಹಿಂದಿನ ಅಧ್ಯಯದಲ್ಲಿ ವಿಶ್ಲೇಷಿಸಿದ್ದೇನೆ. ಈ ಎಲ್ಲ ಭೂಸುಧಾರಣ ಮಸೂದೆಗಳ ಮೂಲ ಉದ್ದೇಶ ಉಳುವವರನ್ನು ಹೊಲದ ಒಡೆಯರನ್ನಾಗಿ ಮಾಡುವುದು, ಭೂಮಾಲಿಕರಲ್ಲಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು, ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚುವುದು ಇತ್ಯಾದಿಗಳು. ಈ ಉದ್ದೇಶಗಳು ಸಂಪೂರ್ಣವಾಗಿ ಈಡೇರಿದ್ದರೆ ಕರ್ನಾಟಕದ ಭೂಸಂಬಂಧಗಳು ಬದಲಾಗಬೇಕು. ಅಂದರೆ ಏಕೀಕರಣ ಸಂದರ್ಭದಲ್ಲಿ ಭೂಮಾಲಿಕರಾಗಿದ್ದು ಹೆಚ್ಚುವರಿ ಭೂಮಿ ಹೊಂದಿದ್ದವರು ಹೆಚ್ಚುವರಿ ಭೂಮಿ ಕಳೆದುಕೊಳ್ಳಬೇಕು, ಗೇಣಿದಾರರಾಗಿದ್ದ ಬಹುತೇಕರು ತಾವು ಉಳುವ ಹೊಲದ ಒಡೆಯರಾಗಬೇಕು ಮತ್ತು ಭೂರಹಿತ ಕೃಷಿ ಕಾರ್ಮಿಕರು ಭೂಮಿ ಹೊಂದಬೇಕು. ಈ ಬದಲಾವಣೆಗಳು ಆಗಿವಿಯೇ ಎಂದು ತಿಳಿಯಬೇಕಾದರೆ ಏಕೀಕರಣ ಸಂದರ್ಭದಲ್ಲಿ ಯಾರು ಭೂಮಾಲಿಕರಾಗಿದ್ದರು, ಯಾರು ಗೇಣಿದಾರರಾಗಿದ್ದರು ಮತ್ತು ಯಾರು ಕೃಷಿ ಕಾರ್ಮಿಕರಾಗಿದ್ದರು ಎನ್ನುವುದು ಸ್ಪಷ್ಟವಾಗಬೇಕು. ಈ ಮಸೂದೆಗಳು ಅವುಗಳ ಮೂಲ ಉದ್ದೇಶಕ್ಕನುಗುಣವಾಗಿ ಜಾರಿಗೆ ಬಂದರೆ ಏಕೀಕರಣ ಸಂದರ್ಭದಲ್ಲಿ ಭೂಮಾಲಿಕರಿದ್ದವರು ಮತ್ತು ಅವರು ಹೊಂದಿರುವ ಭೂಮಿಯ ಪ್ರಮಾಣ ಬದಲಾಗಬೇಕು. ಅದೇ ರೀತಿಯಲ್ಲಿ ಏಕೀಕರಣ ಸಂದರ್ಭದಲ್ಲಿ ಗೇಣಿದಾರರಾಗಿದ್ದವರು ಮತ್ತು ಭೂರಹಿತ ಕೃಷಿ ಕಾರ್ಮಿಕರಾಗಿದ್ದವರು ಸ್ವಂತ ಭೂಮಿ ಹೊಂದಬೇಕು. ಈ ಎಲ್ಲ ಬದಲಾವಣೆಗಳು ಅಗಿವೆಯೇ ಎನ್ನುವುದನ್ನು ಅಧ್ಯಾಯದ ಈ ಭಾಗದಲ್ಲಿ ಪರಿಶೀಲಿಸಲಾಗಿದೆ.

ಲಿಂಗಾಯತರು ಮತ್ತು ಒಕ್ಕಲಿಗರನ್ನು ಕರ್ನಾಟಕದ ಪ್ರಮುಖ ಭೂಮಾಲಿಕ ಸಮುದಾಯಗಳೆಂದು ಗುರುತಿಸಲಾಗುತ್ತಿದೆ. ಏಕೀಕರಣ ಸಂದರ್ಭದಿಂದಲೂ ಈ ಎರಡು ಸಮುದಾಯಗಳಿಗೆ ಸೇರಿದ ಬಲಾಢ್ಯರು ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದರು ಎಂದು ವಾದಿಸಲಾಗುತ್ತಿದೆ. ಭೂ ಸಂಬಂಧದ ಮತ್ತೊಂದು ತುದಿಯಲ್ಲಿ ದಲಿತರು ಮತ್ತು ಬುಡಕಟ್ಟು ಜನರನ್ನು ಗುರುತಿಸಲಗುತ್ತಿದೆ. ಇವರುಗಳಲ್ಲಿ ಬಹುತೇಕರು ಭೂರಹಿತ ಕೃಷಿ ಕಾರ್ಮಿಕರು. ಈ ಎರಡು ತುದಿಗಳ ನಡುವೆ ಬಹುತೇಕ ಹಿಂದುಳಿದ ಜಾತಿಗಳು ಕುರುಬರು, ಈಡಿಗರು, ಗಾಣಿಗರು, ಉಪ್ಪಾರರು, ಕಮ್ಮರರು, ಕುಂಬಾರರು, ಮುಸ್ಲಿಮರು ಮುಂತಾದವರು ಬರುತ್ತಾರೆ. ಇವರುಗಳಲ್ಲಿ ಬಹುತೇಕರು ಗೇಣಿದಾರರು. ಜಾತಿಗಳೂ ಮತ್ತು ಅವುಗಳ ನಡುವಿನ ಈ ಬಗೆಯ ಭೂಮಿ ಸಂಬಂಧಗಳನ್ನು ಕೇವಲ ವಾದ ಪ್ರತಿ ಪಾದನೆಯ ಪೂರ್ವ ತೀರ್ಮಾನದ (ಊಹೆಯ) ರೂಪದಲ್ಲಿ ಮಾತ್ರ ನೋಡಬಹುದು ಹೊರತು ಅಂತಿಮ ತೀರ್ಮಾನದ ರೂಪದಲ್ಲಿ ನೊಡಲು ಸಾಧ್ಯವಿಲ್ಲ. ಅಂದರೆ ಜಾತಿಗಳು ಮತ್ತು ಅವುಗಳ ನಡುವಿನ ಭೂಮಿ ಸಂಬಂಧಗಳನ್ನು ಈ ಬಗೆಯಲ್ಲಿ ಅಚ್ಚುಕಟ್ಟಾಗಿ ವಿಂಗಡಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚು ಸ್ಪಷ್ಟಪಡಿಸುವುದಾದರೆ ಎಲ್ಲ ಲಿಂಗಾಯತರು ಮತ್ತು ಒಕ್ಕಲಿಗರು ಭೂಮಾಲಿಕರು, ಅದೇ ರೀತಿಯಲ್ಲಿ ಎಲ್ಲ ದಲಿತರು ಮತ್ತು ಬುಡಕಟ್ಟು ಜನರು ಕೃಷಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿ ಜನರು ಗೇಣಿದಾರರು ಎನ್ನು ಪರಿಫುರ್ಣ ವಿಂಗಡನೆ ಸಾಧ್ಯವಿಲ್ಲ. ಲಿಂಗಾಯತರು ಮತ್ತು ಒಕ್ಕಲಿಗರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತರು ಗೇಣಿದಾರರು ಮತ್ತು ಕೃಷಿ ಕಾರ್ಮಿಕರಿರಬಹುದು. ಅದೇ ರೀತಿಯಲ್ಲಿ ಹಿಂದುಳಿದ ಜಾತಿಗಳಲ್ಲೂ ಕೆಲವು ಭೂಮಾಲಿಕರಿರಬಹುದು. ಜಾತಿ ಮತ್ತು ಭೂಸಂಬಂಧದ ಬಗ್ಗೆ ನೀಡಟಾಗಿ ಗೆರೆ ಎಳೆದು ಇದು ಭೂಮಾಲಿಕ ಜಾತಿ ಇದು ಭೂರಹಿತ ಜಾತಿ ಎಂದು ವರ್ಗೀಕರಿಸುವುದು ಸರಿಯಾದ ವಿಧಾನವಲ್ಲ. ಆದರೆ ಭೂರಹಿತರಲ್ಲಿ ಬಹುತೇಕರು ಯಾರಿದ್ದಾರೆ. ಮತ್ತು ಭೂಮಾಲಿಕರಲ್ಲಿ ಬಹುತೇಕರು. ಯಾರಿದ್ದಾರೆಂದು ಗುರುತಿಸುವುದು ಕಷ್ಟವಾಗಲಿಕ್ಕಿಲ್ಲ ಎನ್ನುವ ಗ್ರಹಿತದೊಂದಿಗೆ ವಿಶ್ಲೇಷಣೆ ನಡೆಸಲಾಗುವುದು.

ಏಕೀಕರಣಪೂರ್ವ ಭೂಸಂಬಂಧಗಳು

ಜಾತಿಗಳು ಮತ್ತು ಅವುಗಳ ನಡುವಿನ ಭೂಮಿ ಸಂಬಂಧಗಳ ಮೇಲಿನ ಪೂರ್ವ ತೀರ್ಮಾನವನ್ನು ಪರೀಕ್ಷಿಸಲು ಈ ಕೆಳಗಿನ ಪುರಾವೆಗಳನ್ನು ಬಳಸಲಾಗಿದೆ. ಏಕೀಕರಣ ಸಂದರ್ಭದಲ್ಲಿದ ಜಾತಿ ಮತ್ತು ಭೂಮಿ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಎಡು ಬಗೆಯ ದಾಖಲೆಗಳನ್ನು ಬಳಸಲಿದೆ. ಒಂದು, ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸಾಮಾಜಶಾಸ್ತ್ರಜ್ಞರುಗಳು ನಡೆಸಿದ ಗ್ರಾಮ ಅಧ್ಯಯನಗಳು. ಎರಡು, ಸೆನ್ಸಸ್ ಆಫ್ ಇಂಡಿಯಾದವರು ೧೯೬೧ನೇ ಸೆನ್ಸಸ್‌ಸಂದರ್ಭದಲ್ಲಿ ಕರ್ನಾಟಕದ ಹಲವಾರು ಕಡೆ ಗ್ರಾಮ ಅಧ್ಯಯನಗಳನ್ನು ಮಾಡಿದ್ದಾರೆ. ಅಂತಹ ಗ್ರಾಮ ಅಧ್ಯಯನಗಳನ್ನು ವಿವಿಧ ಜಾತಿಗಳು ಮತ್ತು ಅವುಗಳ ಹೊಂದಿರುವ ಭೂಮಿ ಪ್ರಮಾಣವನ್ನು ದಾಖಲಿಸಲಿದೆ. ಎಂ.ಎನ್. ಶ್ರೀನಿವಾಸ್ ಅವರು ಮೈಸೂರಿನ ರಂಪು ಹಳ್ಳಿಯಲ್ಲಿ ಐವತ್ತರ ದಶಕದಲ್ಲಿ ಕ್ಷೇತ್ರ ಕಾರ್ಯ ಮಾಡಿದ್ದಾರೆ. ಆ ಹಳ್ಳಿಯ ಕಥನ ದಿ ರಿಮೆಂಬರ್ಡ್ ವಿಲೇಜ್ ಎನ್ನುವ ಪುಸ್ತಕ ರೂಪದಿ ಪ್ರಕಟವಾಗಿದೆ.[1] ಎಂ ಎನ್ ಶ್ರೀನಿವಾಸ್ ಪ್ರಕಾರ ಹಳ್ಳಿಯಲ್ಲಿ ಒಕ್ಕಲಿಗರು ಕುಟುಂಬಗಳು ಹೆಚ್ಚಿನ ಸಂಖ್ಯಯಲ್ಲಿದ್ದವು. ಅಷ್ಟುಮಾತ್ರವಲ್ಲ ಹಳ್ಳಿಯ ಅರ್ಥಕ್ಕಿಂತಲೂ ಹೆಚ್ಚಿನ ಭೂಮಿ ಒಕ್ಕಲಿಗ ಭೂಮಾಲಿಕರ ವಶದಲ್ಲದ್ದವು. ಊರಿನ ಪಟೇಲರು ಒಕ್ಕಲಿಗರು ಮತ್ತು ಅವರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಇತ್ತು. ದಲಿತರು ಮುಖ್ಯ ಕೃಷಿ ಕಾರ್ಮಿಕರು ಮತ್ತು ಭೂರಹಿತರು. ಕುರುಬರು. ಉಪ್ಪಾರರು, ಗಾಣಿಗರು ಮುಂತಾದ ಹಿಂದುಳಿದ ಜಾತಿಗಳಿದ್ದವು. ಅವರಲ್ಲೂ ಅಲ್ಪಸ್ವಲ್ಪ ಭೂಮಿ ಇತ್ತು. ಜೇಮ್ಸ್ ಮೇನರ್, ಪೊಲಿಟಿಕಲ್ ಚೇಂಜ್ ಇನ್ ಎನ್ ಇಂಡಿಯನ್ ಸ್ಟೇಟ್ – ಮೈಸೂರು ೧೯೧೭ – ೧೯೫೫, ಪುಸ್ತಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಅತೀ ದೊಡ್ಡ ಜಮೀನುದಾರರಲ್ಲದಿದ್ದರೂ ತಮ್ಮ ಹಳ್ಳಿಯ ಇತರ ಸಮುದಾಯಗಳಿಗಂತ ಹೆಚ್ಚಿನ ಭೂಮಿ ಹೊಂದಿದ್ದರು ಇಂದು ಅಭಿಪ್ರಾಯ ಪಡುತ್ತಾರೆ.[2]

ಸ್ಕಾರ್‌ಲೆಟ್ ಎಪ್‌ಸ್ಟೀನ್ ಎನ್ನುವವರ ನೀರಾವರಿ ಮತ್ತು ಅಭಿವೃದ್ಧಿ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ೧೯೫೫ರಲ್ಲಿ ಮಂಡ್ಯದ ಎರಡು ಹಳ್ಳಿಗಳನ್ನು (ದಲೇನ ಮತ್ತು ವಂಗೇಲ) ಅಧ್ಯಯನ ಮಾಡಿದ್ದಾರೆ. ಆ ಎರಡೂ ಹಳ್ಳಿಗಳಲ್ಲೂ ಒಕ್ಕಲಿಗರು ಪ್ರಮುಖ ಭೂಮಾಲಿಕರು. ದಲಿತರು ಭೂರಹಿತ ಕೃಷಿ ಕಾರ್ಮಿಕರು.[3] ಎಂ ಎನ್ ಶ್ರೀನಿವಾಸ್ ಅಧ್ಯಯನ ಮಾಡಿದ ಹಳ್ಳಿಯಲ್ಲಿ ಮತ್ತು ಎಪ್‌ಸ್ಟೀನ್ ಅಧ್ಯಯನ ಮಾಡಿದ ಹಳ್ಳಿಗಳಲ್ಲಿ ಒಕ್ಕಲಿಗರೊಳಗೆ ಬೇರೆ ಬೇರೆ ಉಪಜಾತಿಗೆ ಸೇರಿದವರಿದ್ದರು. ಒಕ್ಕಲಿಗರೊಳಗಿನ ಉಪಜಾತಿಗಳ ನಡುವೆ ಊರಿನ ರಾಜಕೀಯ ಅಧಿಕಾರಕಾಗಿ ಪೈಪೋಟಿ ನಡೆಯುತ್ತಿತ್ತು. ಗ್ರಾಮದ ಸಂಪ್ರದಾಯ ಪ್ರಕಾರ ನಡೆದುಕೊಳ್ಳುವವರು ಮತ್ತು ಆಧುನಿಕರಣಕ್ಕೆ ಒಳಗಾದವರ ನಡುವೆ ಕೂಡ ತಿಕ್ಕಾಟ ನಡೆಯುತ್ತಿತ್ತು. ಆದರೆ ಈ ಎಲ್ಲವೂ ಭೂಮಿ ಹೊಂದಿರುವ ಬಲಾಢ್ಯರು ಮತ್ತು ಅವರ ಪಂಗಡಗಳಿಗೆ ಸೇರಿದವರ ವ್ಯಾಪ್ತಿಯಲ್ಲಿ ನಡೆಯುವ ತಿಕ್ಕಾಟಗಳು. ಸಣ್ಣಪುಟ್ಟ ಭೂಮಿ ಹೊಂದಿರುವ ಒಕಲಿಗರು, ಹಿಂದುಳಿದ ಜಾತಿಗಳು ಅಥವಾ ಭೂಮಿಯೇ ಇಲ್ಲದ ದಲಿತರು ಇವಕ್ಕೆಲ್ಲ ಮೂಕ ಪ್ರೇಕ್ಷಕರು ಮಾತ್ರ. ಭೂಮಿಗಾಗಿ ಅಥವಾ ಹೆಚ್ಚಿನ ಕೂಲಿಗಾಗಿ ದಲಿತರು ಮಾಡುವ ಸಣ್ಣಪುಟ್ಟ ಪ್ರತಿಭಟನೆಗಳನ್ನು ಕೂಡ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿತ್ತು. ಆರ್ಥಿಕ ರಾಜಕೀಯ ಹೋರಾಟಗಳು ನೆಲೆಕಾಣದ ಸಂದರ್ಭದಲ್ಲಿ ದಲಿತರು ತಮ್ಮ ಸಾಂಪ್ರದಾಯ ಕಸುಬಗಳನ್ನು ಮಾಡಲು ನಿರಾಕರಿಸುವ ಮೂಲಕ ಪ್ರತಿಭಟಿಸುತ್ತಿದ್ದರು. ಕೃಷಿಯನ್ನು ಹೊರತು ಪಡಿಸಿದ ಇತರ ಉದ್ಯೋಗದ ಅವಕಾಶವೇ ಇಲ್ಲದ ಸಂದರ್ಭದಲ್ಲಿ ದಲಿತರ ಯಾವುದೇ ಹೋರಾಟಗಳು ಫಲಕೊಡುತ್ತಿರಲಿ. ಕಾರಂತರ ಚೋಮನ ದುಡಿ ಕಂಬರಿಯಲ್ಲಿ ಐವತ್ತರ ದಶಕದ ದಕ್ಷಿಣ ಕನ್ನಡ ಜಿಲ್ಲೆಯ ಭೂಮಾಲಿಕ ಹಾಗೂ ಭೂರಹಿತ ಜಾತಿಗಳ ಬಗ್ಗೆ ಪರೋಕ್ಷ ಮಾಹಿತಿ ಇದೆ. ಭೂಮಾಲಿಕ ಬಂಟರ (ಕರಾವಳಿ ಕರ್ನಾಟಕದ ಒಕ್ಕಲಿಗರು) ಮನೆಯಲ್ಲಿ ಚೋಮ ಭೂರಹಿತ ಕೃಷಿ ಕಾರ್ಮಿ. ಆತನಿಗೆ ತಾನು ಕೃಷಿಕನಾಗಬೇಕೆಂಬ ಕನಸು. ತನ್ನ ಬಯಕೆಯನ್ನು ಯಜಮಾನನಲ್ಲಿ ತೋಡಿಕೊಳ್ಳುತ್ತಾನೆ. ಮನೆಯ ಯಜಮಾನನಿಗೆ ಚೋಮ ಕೇಳುವ ಅತ್ಯಲ್ಪ ಭೂಮಿ ಕೊಡುವುದಕ್ಕೆ ಆಕ್ಷೇಪವಿಲ್ಲ. ಚೋನಿಗೆ ಭೂಮಿ ಕೊಡುವುದರ ಮೂಲಕ ದಲಿತ ಭೂಮಿ ಹೊಂದಿ ಕೃಷಿ ಮಾಡಬಾರದೆನ್ನುವ ಲೋಕ ರೂಢಿಯನ್ನು ಮುರಿದ ಶಾಪ ಎಲ್ಲಿ ಮಗನಿಗೆ ತಟ್ಟುತ್ತದೋ ಎನ್ನುವ ಭಯ ಭೂಮಾಲಿಕನ ತಾಯಿಗೆ. ಕಡೆಗೂ ಚೋಮನಿಗೆ ಭೂಮಿ ದೊರೆಯುವುದಿಲ್ಲ.[4]

ಎಪ್ಪತ್ತರ ದಶಕದ ಮೊದಲ ವರ್ಷದಲ್ಲಿ ಗುರುಮೂರ್ತಿಯವರು ದಾವಣಗೆರೆ ತಾಲ್ಲೂಕಿನ ಕಲ್ಲಾಪುರ ಗ್ರಾಮವನ್ನು ಅಧ್ಯಯನ ಮಾಡಿದ್ದಾರೆ.[5] ದಾವಣಗೆರೆ ಅಂದು ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕಾಗಿತ್ತು. ದಾವಣಗೆರೆ ತಾಲ್ಲೂಕು ಕೇಂದ್ರದಿಂದ ಹದಿನೈದು ಕಿ.ಮೀ ದೂರದಲ್ಲಿ ಕಲ್ಲಾಪುರ ಗ್ರಾಮ ಇದೆ. ಗ್ರಾಮದಲ್ಲಿ ಇದ್ದ ಒಟ್ಟು ಕೃಷಿ ಭೂಮಿ ೩,೨೧೩ ಎಕರೆ. ಗ್ರಾಮದಲ್ಲಿ ಒಟ್ಟು ೨೯೮ ಕುಟುಂಬಗಳಿದ್ದವು. ಅವುಗಳಲ್ಲಿ ೧೩೫ ಕುಟುಂಬಗಳು(ಶೇ. ೫೫) ಲಿಂಗಾಯತ ಕುಟುಂಬಗಳು. ಲಿಂಗಾಯತ ಭೂಮಾಲಿಕರ ಸ್ವಾಧೀನದಲ್ಲಿ ಗ್ರಾಮದ ಶೇ. ೮೭.೬೫ (೨೮೧೬ ಎಕರೆಗಳು) ಎಕರೆ ಭೂಮಿ ಇತ್ತು. ದಲಿತರ ೩೭ ಕುಟುಂಬಗಳು ಮತ್ತು ಬುಡಕಟ್ಟುಗಳು ೩೩ ಕುಟುಂಬಗಳಿದ್ದವು. ದಲಿತರ ಮತ್ತು ಬುಡಕಟ್ಟುಗಳ ಒಟ್ಟು ಕುಟುಂಬಗಳು ಗ್ರಾಮದ ಶೇ. ೨೫ ಇದ್ದು ಅವರ ಸ್ವಾಧೀನದಲ್ಲಿ ಕೇವಲ ೨೧೧ (ಶೇ.೭) ಎಕರೆ ಭೂಮಿ ಇತ್ತು.[6] ಕೆ. ಈಶ್ವರನ್ ಅವರು ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನ ಶಿವಪುರ ಎನ್ನುವ ಹಳ್ಳಿಯನ್ನು ಅರವತ್ತರ ದಶಕದ ಆರಂಭದಲ್ಲಿ ಅಧ್ಯಯನ ಮಾಡಿದ್ದಾರೆ.[7] ತಾಲ್ಲೂಕು ಕೇಂದ್ರದಿಂದ ಐದಾರು ಕಿ.ಮೀ. ಅಂತರದಲ್ಲಿ ಹಳ್ಳಿ ಇತ್ತು. ಹಳ್ಳಿಯಲ್ಲಿ ಒಟ್ಟು ೬೩೧ ಕುಟುಂಬಗಳು ಮತ್ತು ೧೩ ಜಾತಿ ಜನರಿದ್ದರು. ಹಳ್ಳಿಯಲ್ಲಿ ಒಟ್ಟು ೫೬೨೧ ಎಕರೆ ಭೂಮಿ ಇತ್ತು. ಈ ಭೂಮಿಯಲ್ಲಿ ಶೇ. ೬೦ಕ್ಕಿಂತಲೂ ಹೆಚ್ಚಿನ ಭೂಮಿ ಲಿಂಗಾಯಿತ ಭೂಮಿಕರ ಸ್ವಾಧೀನ ಇತ್ತು.ಶೇ. ೯ ಭೂಮಾಲಿಕರಲ್ಲಿ ೧೫ ಎಕರೆಗಳಿಗಿಂತ ಹೆಚ್ಚು ಭೂಮಿ ಇತ್ತು ಹನ್ನೊಂದು ಕುಟುಂಬಗಳು ೪೦ ಎಕರೆಗಳಿಗಿಂತಲೂ ಹೆಚ್ಚಿನ ಭೂಮಿ ಹೊಂದಿದ್ದರು. ಎಲ್ಲ ಹಳ್ಳಿಗಳಂತೆ ಈ ಹಳ್ಳಿಯಲ್ಲಿ ಬಹುತೇಕ ದಲಿತರು ಭೂರಹಿತರು.[8] ಪಾರ್ವತಮ್ಮನವರು ೧೯೬೦ರಲ್ಲಿ ಬಳ್ಳಾರಿ ಸಮೀಪದ ಹಳ್ಳಿಯನ್ನು ಅಧ್ಯಯನ ಮಾಡಿದ್ದಾರೆ. ಲಿಂಗಾಯತರು ಹಳ್ಳಿಯ ಬಹುಸಂಖ್ಯಾತರು ಮತ್ತು ಭೂಮಾಲಿಕರು. ಆದರೆ ಹಳ್ಳಿಯಲ್ಲಿನ ಮುಖ್ಯ ಶಿವಾಲಯದ ಉಸ್ತುವಾರಿ ಕ್ಷತ್ರಿಯರ ಕೈಯಲ್ಲಿತ್ತು. ದೇವಾಲಯಕ್ಕೆ ಸೇರಿದ ಭೂಮಿಯ ಬಹುಪಾಲು ಅದರ ಉಸ್ತುವರಿ ನೋಡುವವರ ಸ್ವಾಧೀನ ಇತ್ತು. ದೇವಾಲಯದ ಭೂಮಿಯಲ್ಲಿ ಲಿಂಗಾಯತ ಭೂಮಾಲಿಕರು ಕೂಡ ಉಸ್ತುವಾರಿ ನೋಡುವವರಷ್ಟೇ ಪಾಲು ಹೊಂದಿದ್ದರು. ಹಳ್ಳಿಯಲ್ಲಿನ ಉಳಿದ ಸಮುದಾಯಗಳು ಕನಿಷ್ಠ ಪ್ರಮಾಣದ ಭೂಮಿ ಹೊಂದಿದ್ದವು.[9]

೧೯೬೧ರ ಸನ್ಸಸ್ ಸಂದರ್ಭದಲ್ಲಿ ನಡೆಸಿದ ನಾಲ್ಕು ಗ್ರಾಮ ಅಧ್ಯಯನಗಳಲ್ಲಿ ಕಂಡುಕೊಂಡ ಭೂಹಿಡುವಳಿ ಮತ್ತು ಜಾತಿ ಸಂಬಂಧವನ್ನು ನೋಡುವ. ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳ ಮಲ್ಲಿಗೆ ಹಳ್ಳಿಯಲ್ಲಿ ಒಟ್ಟು ೨೧೯ ಕುಟುಂಬಗಳಿದ್ದವು ಮತ್ತು ೭೩೨ ಎಕರೆ ಭೂಮಿ ಇತ್ತು. ಹಳ್ಳಿಯ ಒಟ್ಟು ಭೂಮಿಯಲ್ಲಿ ೫೬೨ ಎಕರೆ (ಶೇ.೭೭ರಷ್ಟು) ಭೂಮಿಯನ್ನು ಒಕ್ಕಲಿಗರು, ಕುರುಬರು ಮತ್ತು ತೆಲುಗು ಬಣಜಿಗರು ಹೊಂದಿದ್ದರು. ಒಕ್ಕಲಿಗರು, ೩೪ ಭೂಮಾಲಿಕ ಕುಟುಂಬಗಳು ೨೧೧ ಎಕರೆ ಕುರುಬರ ೩೧ ಭೂಮಾಲಿಕ ಕುಟುಂಬಗಳು ೧೭೩ ಎಕರೆ ಮತ್ತು ಬಣಜಿಗರ ೩೧ ಭೂಮಾಲಿಕ ಕುಟುಂಬ ೧೭೭ ಎಕರೆ ಭೂಮಿ ಹೊಂದಿದ್ದವು. ಉಳಿದ ಸಮುದಾಯಗಳು ಬ್ರಾಹ್ಮಣ, ಲಿಂಗಾಯತ, ಅಕ್ಕಸಾಲಿ ಉಪ್ಪಾರೆ ಒಂದೆರಡು ಎಕರೆಯಿಂದ ನಲ್ವತ್ತು ಎಕರೆಯಷ್ಟು ಭೂಮಿ ಹೊಂದಿದ್ದವು. ದಲಿತರ ಆದಿ ದ್ರಾವಿಡ ಪಂಗಡ ಏನೇನೂ ಭೂಮಿ ಹೊಂದಿರಲಿಲ್ಲ. ಆದರೆ ೨೬ ಆದಿ ಕರ್ನಾಟಕ ಕುಟುಂಬಗಳಲ್ಲಿ ೧೦ ಕುಟುಂಬಗಳು ೩೬ ಎಕರೆ ಭೂಮಿ ಹೊಂದಿದ್ದರೆ ೧೬ ಕುಟುಂಬಗಳಲ್ಲಿ ಭೂಮಿ ಇರಲಿಲ್ಲ. ಬೇಡರ ೨೬ ಕುಟುಂಬಗಳಲ್ಲಿ ೧೪ ಕುಟುಂಬಗಳಲ್ಲಿ ೪೪ ಎಕರೆ ಭೂಮಿ ಇತ್ತು.[10] ೧೯೬೧ರ ಸೆನ್ಸಸ್ ಪ್ರಕಾರ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲ್ಲೂಕಿನ ನಂದಿಗುಡಿ ತಾಲ್ಲೂಕಿನಲ್ಲಿ ಒಟ್ಟು ೬೬ ಕುಟುಂಬಗಳಿದ್ದವು ಮತ್ತು ೫೧೧ ಎಕರೆ ಭೂಮಿ ಇತ್ತು. ಲಿಂಗಾಯಿತರು, ವಿಶ್ವಕಕರ್ಮ, ನಾಯಕ ಮತ್ತು ಅರೆ ಎನ್ನುವ ಒಟ್ಟು ನಾಲ್ಕು ಜಾತಿಗಳಿದ್ದವು. ಲಿಂಗಾಯತರ ಒಟ್ಟು ಕುಟುಂಬಗಳು ೫೭. ಅದರಲ್ಲಿ ೪೯ ಭೂಮಾಲಿಕರ ಕುಟುಂಬಗಳಲ್ಲಿ ೪೬೫ ಎಕರೆ ಭೂಮಿ ಇದ್ದರೆ ಉಳಿದ ೮ ಕುಟುಂಬಗಳಿಗೆ ಭೂಮಿ ಇರಲಿಲ್ಲ. ವಿಶ್ವಕರ್ಮರ ೪ ಕುಟುಂಬಗಳಲ್ಲಿ ಮೂರು ಕುಟುಂಬಗಳು ೨೦ ಎಕರೆ ಭೂಮಿ ಹೊಂದಿದ್ದವು. ನಾಯಕರ ಮೂರು ಕುಟುಂಬಗಳಲ್ಲಿ ಎರಡು ಕುಟುಂಬಗಳ ಸ್ವಾಧೀನದಲ್ಲಿ ೨೭ ಎಕರೆ ಭೂಮಿ ಇತ್ತು.[11]

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಳದಿ ಹಳ್ಳಿಯಲ್ಲಿ ವಿವಿಧ ಜಾತಿ ಜನರು ಹೊಂದಿದ್ದ ಭೂಮಿ ಇಂತಿದೆ. ಹಳ್ಳಿಯಲ್ಲಿ ಒಟ್ಟು ೩೪೭ ಕುಟುಂಬಗಳಿದ್ದವು. ಮತ್ತು ೫೦೦ ಎಕರೆ ಭೂಮಿ ಇತ್ತು. ಹಳ್ಳಿಯಲ್ಲಿ ಬ್ರಾಹ್ಮಣರ ಒಟ್ಟು ೩೪೭ ಕುಟುಂಬಗಳಿದ್ದವು ಮತ್ತು ೫೦೦ ಎಕರೆ ಭೂಮಿ ಇತ್ತು. ಹಳ್ಳಿಯಲ್ಲಿ ಬ್ರಾಹ್ಮಣರ ಒಟ್ಟು ೩೪೭ ಕುಟುಂಬಗಳಿದ್ದವು ಮತ್ತು ೫೦೦ ಎರೆ ಭೂಮಿ ಇತ್ತು. ಹಳ್ಳಿಯಲ್ಲಿ ಬ್ರಾಹ್ಮಣರ ಒಟ್ಟು ೫೫ ಕುಟುಂಬಗಳಿದ್ದವು. ಹಳ್ಳಿಯ ಒಟ್ಟು ಭೂಮಿಯ ಶೇ. ೭೬ರಷ್ಟು (೩೮೦ಎಕರೆ) ಭೂಮಿಯನ್ನು ಬ್ರಾಹ್ಮಣರ ೪೮ ಭೂಮಾಲಿಕ ಕುಟುಂಬಗಳು ಹೊಂದಿದ್ದವು. ದೀವಾನರ ೯೩ ಕುಟುಂಬಗಳಲ್ಲಿ ೭೮ ಕುಟುಂಬಗಳಿಗೆ ಭೂಮಿ ಇರಲಿಲ್ಲ. ಉಳಿದ ೧೫ ಕುಟುಂಬಗಳ ಸ್ವಾಧೀನದಲ್ಲಿ ೭೮ ಕುಟುಂಬಗಳಿಗೆ ಭೂಮಿ ಇರಲಿಲ್ಲ. ಉಳಿದ ೧೫ ಕುಟುಂಬಗಳ ಸ್ವಾಧೀನದಲ್ಲಿ ೭೦ ಎಕರೆ ಭೂಮಿ ಇತ್ತು ಒಕ್ಕಲಿಗ ೧೩ ಕುಟುಂಬಗಳ ಪೈ ೭ ಕುಟುಂಬಗಳ ಸ್ವಾಧೀನ ಭೂಮಿ ಇರಲಿ. ಉಳಿದ ೬ ಕುಟುಂಬಗಳ ಸ್ವಾಧೀನ ೩೫ ಎಕರೆ ಭೂಮಿ ಇತ್ತು ದಲಿತರ ೭೮ ಕುಟುಂಬಗಳ ಪೈಕಿ ಕೇವಲ ಒಂದು ಕುಟುಂಬದ ಸ್ವಾಧೀನದಲ್ಲಿ ಕೇವಲ ೨ ಎಕರೆ ಭೂಮಿ ಇತ್ತು ಸುಮಾರು ೮೫ ಕುಟುಂಬಗಳಿಗೆ ಏನೇನೂಭೂಮಿ ಇರಲಿಲ್ಲ.[12] ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕಮಲ್‌ನಗರ ಹಳ್ಳಿಯಲ್ಲಿ ಒಟ್ಟು ೬೧೮ ಕುಟುಂಬಗಳಿದ್ದವು ಮತ್ತು ೫೫೧೫ ಎಕರೆ ಭೂಮಿ ಇತ್ತು. ಹಳ್ಳಿಯಲ್ಲಿದ್ದ ಒಟ್ಟು ೬೧೮ ಕುಟುಂಬಗಳ ಪೈಕಿ ಸರಿ ಅರ್ಧಕ್ಕಿಂತ ಹೆಚ್ಚಿನ (೩೫೨) ಕುಟುಂಬಳಿಗೆ ಭೂಮಿ ಇರಲಿಲ್ಲ ಹಳ್ಳಿಯ ಮುಖ್ಯ ಭೂಮಾಲಿಕರು ಲಿಂಗಾಯತರು. ಲಿಂಗಾಯತರ ಒಟ್ಟು ೨೦೮ ಕುಟುಂಬಗಳಿದ್ದು ಅವುಗಳಲ್ಲಿ ೬೯ ಕುಟುಂಬಗಳಿಗೆ ಭೂಮಿ ಇರಲಿಲ್ಲ. ಉಳಿದ ೧೩೯ ಕುಟುಂಬಗಳ ಸ್ವಾಧೀನದಲ್ಲಿ ೨೮೯೯ ಎಕರೆ ಅಥವಾ ಹಳ್ಳಿಯ ಶೇ. ೫೩ರಷ್ಟು ಭೂಮಿ ಇತ್ತು. ಮರಾಠರು ಲಿಂಗಾಯತರ ನಂತರ ಹೆಚ್ಚು ಭೂಮಿ ಹೊಂದಿದ್ದ ಸಮುದಾಯ. ಮರಾಠರ ಒಟ್ಟು ೭೨ ಕುಟುಂಬಗಳ ಪೈಕಿ ೫೨ ಕುಟುಂಬಗಳ ಸ್ವಾಧೀನ ೧೨೦೫ ಎಕರೆ (ಶೇ. ೨೨) ಭೂಮಿ ಇತ್ತು. ಮುಸ್ಲಿಮರು ಹೆಚ್ಚು ಭೂಮಿ ಹೊಂದಿರುವ ಮತ್ತೊಂದು ಸಮುದಾಯ. ಇವರುಗಳ ೧೦೬ ಕಟುಂಬಗಳ ಪೈಕಿ ೨೦ ಕುಟುಂಬಗಳ ಸ್ವಾಧೀನ ೫೬೪ ಎಕರೆ (ಶೇ.೧೦) ಭೂಮಿ ಇತ್ತು. ಮಾಂಗ್, ಮಹರ್, ಮದಿಗ ಮತ್ತು ದಕ್ಕಲರು ಎನ್ನುವ ನಾಲ್ಕು ದಲಿತ ಸಮುದಾಯಗಳ ಒಟ್ಟು ೮೯ಕುಟುಂಬಳಿದ್ದವು. ಅವರಲ್ಲಿ ೬೦ ಕುಟುಂಬಗಳ ಪೈಕಿ ಏನೇನೂ ಭೂಮಿ ಇರಲಿಲ್ಲ. ಮಹರ್ ಪಂಗಡದ ೧೯ ಕುಟುಂಬಗಳ ಸ್ವಾಧೀನ ೧೫೮ ಎಕರೆ ಮತ್ತು ಮಾಂಗ್ ಸಮುದಾಯದ ಒಂದು ಕುಟುಂಬದ ಸ್ವಾಧೀನ ೨ ಎಕರೆ ಭೂಮಿ ಇತ್ತು. ಕುರುಬರು, ಉಪ್ಪಾರ, ಲೋಹರ್, ಆಗಸ, ವಿಶ್ವಕರ್ಮ ಮುಂತಾದ ಸಮುದಾಯಗಳ ಎಲ್ಲ ಕುಟುಂಬಗಳು ಒಟ್ಟು ಸೇರಿ ನೂರು ಎಕರೆಯಷ್ಟು ಭೂಮಿ ಹೊಂದಿರಲಿಲ್ಲ.[13]

ರಾಜ್ಯದ ವಿವಿಧ ಕಡೆ ಐವತ್ತು, ಆರವತ್ತರ ದಶಕದಲ್ಲಿ ನಡೆದ ಅಧ್ಯಯನಗಳು ಮತ್ತು ೧೯೬೧ರ ಸೆನ್ಸಸ್ ಸಂದರ್ಭದಲ್ಲಿ ನಡೆಸಿದ ಗ್ರಾಮ ಅಧ್ಯಯನಗಳು ಏಕೀಕರಣ ಸಂದರ್ಭದ ಭೂಮಾಲಿಕ ವರ್ಗವನ್ನು ಗುರುತಿಸಲು ಸಹಕಾರಿಯಾಗಿವೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಕೆಲವು ಬಾಗದಲ್ಲಿ ಒಕ್ಕಲಿಗ ಭೂಮಾಲಿಕರು, ಕರ್ನಾಟಕದ ಕೆಲವು ಕಡೆ ಬ್ರಾಹ್ಮಣ ಭೂಮಾಲಿಕರು ಇತರ ಸಮುದಾಯಗಳಿಗಿಂತ ಹೆಚ್ಚು ಭೂಮಿ ಹೊಂದಿದ್ದರು. ಹಾಗೆಂದು ಈ ಸಮುದಾಯದ ಎಲ್ಲರು ದೊಡ್ಡ ಪ್ರಮಾಣದ ಭೂಮಿ ಹೊಂದಿದ್ದಾರೆ ಎನ್ನಲಾಗುವುದಿಲ್ಲ. ಇವರುಗಳಲ್ಲಿ ಸಣ್ಣ ಪ್ರಮಾಣದ ಭೂಮಿ ಹೊಂದಿರುವ ಮತ್ತು ಭೂರಹಿತ ಕುಟುಂಬಗಳಿವೆ. ಕುರುಬ, ಉಪ್ಪಾರ, ಈಡಿಗ, ಕಮ್ಮಾರ, ಮರಾಠ, ಮುಸ್ಲಿಮ್, ಕ್ರಿಶ್ಚಿಯನ್ ಮುಂತಾದ ಸಮುದಾಯಗಳು ಕೂಡ ಭೂಮಿ ಹೊಂದಿದ್ದವು. ಆದರೆ ಈ ಸಮುದಾಯಳಿಗೆ ಸೇರಿದ ಕುಟುಂಬಗಳು ಮೇಲೆ ಗುರುತಿಸಿದ ಸಮುದಾಯಗಳ ಭೂಮಲಿಕರು ಹೊಂದಿದಷ್ಟು ದೊಡ್ಡ ಸಂಖ್ಯೆಯಲ್ಲಿ ಮತ್ತು ಪ್ರಮಾಣದಲ್ಲಿ ಭೂಮಿ ಹೊಂದಿರಲಿಲ್ಲ. ದಲಿತ ಮತ್ತು ಬುಡಕಟ್ಟು ಕುಟುಂಬಗಳು ಅತ್ಯಲ್ಪ ಸಂಖ್ಯೆಯಲ್ಲಿ ಮತ್ತು ಪ್ರಮಾಣದಲ್ಲಿ ಭೂಮಿ ಹೊಂದಿದ್ದವು. ಇಂತಹ ಭೂಸಂಬಂಧ ಹೊಂದಿದ ಪರಿಸರದಲ್ಲಿ ೧೯೬೧ ಮತ್ತು ೧೯೭೪ರ ಭೂಸುಧಾರಣೆ ಮಸೂದೆಗಳು ಜಾರಿಗೆ ಬಂದಿವೆ.

ಸುಧಾರಣೆ ನಂತರದ ಭೂಸಂಬಂಧಗಳು

ಭೂಸುಧಾರಣೆ ತಂದ ಭೂಸಂಬಂಧಗಳಲ್ಲಿನ ಬದಲಾವಣೆಯನ್ನು ಸಮಗ್ರವಾಗಿ ನೋಡುವ ಮೊದಲು ಕೆಲವೊಂದು ಸಣ್ಣಪುಟ್ಟ. ಅಧ್ಯಯನಗಳು ಕಂಡು ಕೊಂಡ ಭೂಸಂಬಂಧಗಳನ್ನು ಪರಿಶೀಲಿಸೋಣ. ರಾಘವೇಂದ್ರರಾವ್ ಅವರು ತುಮಕೂರ ಜಿಲ್ಲೆಯ ಪಾವಗಡ ತಾಲ್ಲೂಕಿನ ಭೂಸಂಬಂಧಗಳನ್ನು ೧೯೭೭ರಲ್ಲಿ ಅಧ್ಯಯನ ಮಾಡಿದ್ದಾರೆ.[14] ತಾಲ್ಲೂಕಿನ ಒಟ್ಟು ಕುಟುಂಬಗಳಲ್ಲಿ ಶೇ. ೨೪.೧೩ರಷ್ಟು ಒಕ್ಕಲಿಗ ಕುಟುಂಬಗಳಿದ್ದವು. ಒಕ್ಕಲಿಗರು ಶೇ. ೮೮ರಷ್ಟು ಕುಟುಂಬಗಳಲ್ಲಿ ಭೂಮಿ ಇತ್ತು. ಭೂಮಿ ಹೊಂದಿದ ಒಕ್ಕಲಿಗರಲ್ಲಿ ಶೇ. ೨೬ರಷ್ಟು ಸಣ್ಣ ಮತ್ತು ಅತೀ ಸಣ್ಣ (೫ ಎಕರೆಗಿಂತಹ ಕಡಿಮೆ ಭೂಮಿ) ಕೃಷಿಕರಾಗಿದ್ದರೆ ಶೇ, ೩೨ರಷ್ಟು ಅರೆ ಮಧ್ಯಮ (೫-೧೦ ಎಕರೆ), ಶೇ. ೨೯ರಷ್ಟು ಮಧ್ಯಮ (೧೦-೨೫ ಎಕರೆ) ಮತ್ತು ಶೇ. ೧೩ರಷ್ಟು ದೊಡ್ಡ (೨೫ ಎಕರಗಿಂತ ಹೆಚ್ಚು ಭೂಮಿ) ಕೃಷಿಕರಾಗಿದ್ದರು. ತಾಲ್ಲೂಕಿನ ಶೇ. ೪೬.೭೧ರಷ್ಟು ಭೂಮಿ ಒಕ್ಕಲಿಗ ಭೂಮಾಲಿಕರ ಸ್ವಾಧೀನದಲ್ಲಿತ್ತು. ಹೆಚ್ಚು ಭೂಮಿ ಹೊಂದಿರುವ ದೃಷ್ಟಿಯಿಂದ ಒಕ್ಕಲಿಗ ಭೂಮಾಲಿಕರ ನಂತರ ಬರುವ ಜಾತಿಗಳೆಂದರೆ ಕುರುಬರು ಮತ್ತು ಗೊಲ್ಲರು. ಈ ಎರಡು ಜಾತಿಗಳೂ ಶೇ. ೧೭.೩೫ರಷ್ಟಿವೆ. ಇವರಲ್ಲಿ ಶೇ. ೭೬ ರಷ್ಟು ಕುಟುಂಬಗಳು ಭೂಮಿ ಹೊಂದಿವೆ. ತಾಲ್ಲೂಕಿನ ಶೇ. ೧೭.೧೩ ರಷ್ಟು ಭೂಮಿ ಇವರ ಸ್ವಾಧೀನ ಇತ್ತು. ಆದರೆ ಇವರಲ್ಲಿ ಬಹುತೇಕರು (ಶೇ.೪೪) ಸಣ್ಣ ಮತ್ತು ಅತೀ ಸಣ್ಣ ಕೃಷಿಕರು. ಉಳಿದವರಲ್ಲಿ ಶೇ. ೨೬ರಷ್ಟು ಕುಟುಂಬಗಳು ಅರೆ ಮಧ್ಯಮ, ಶೇ. ೨೪ರಷ್ಟು ಮಧ್ಯಮ ಮತ್ತು ಶೇ. ೫ರಷ್ಟು ಕುಟುಂಬಗಳು ದೊಡ್ಡ ಕೃಷಿಕರಾಗಿದ್ದಾರೆ. ದಲಿತರು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡ ಸಮುದಾಯ. ತಾಲ್ಲೂಕಿನಲ್ಲಿ ದಲಿತರ ಶೇ. ೨೬.೬೮ರಷ್ಟು ಕುಟುಂಬಗಳಿವೆ. ಆದರೆ ಇವರ ಸ್ವಾಧೀನ ಇರುವ ಭೂಮಿಗೂ (ಶೇ ೮.೪೧) ಇವರ ಜನಸಂಖ್ಯೆ ಗೂ ಸಂಬಂಧವಿಲ್ಲ. ಇವರಲ್ಲಿ ಬಹುತೇಕರು (ಶೇ. ೪೭) ಭೂರಹಿತರು. ಭೂಮಿ ಇರುವವರಲ್ಲಿ ಕೂಡ ಶೇ. ೭೬ರಷ್ಟು ಕುಟುಂಬಗಳು ಸಣ್ಣ ಮತ್ತು ಅತೀ ಸಣ್ಣ ರೈತರು. ದೊಡ್ಡ (೨೫ ಎಕರೆಗಿಂತ ಹೆಚ್ಚು ಭೂಮಿ ಇರುವ) ಕೃಷಿಕರು ಒಂದೂ ಇಲ್ಲ. ತಾಲ್ಲೂಕಿನಲ್ಲಿ ಲಿಂಗಾಯತರ ಕುಟುಂಬಗಳು ಕಡಿಮೆ ಇವೆ (ಶೇ. ೧.೯೩). ಲಿಂಗಾಯತರ ಶೇ.೬೫ರಷ್ಟು ಕುಟುಂಬಗಳಲ್ಲಿ ಭೂಮಿ ಇದೆ. ಇವರಲ್ಲಿ ಸಣ್ಣ ರೈತರು ಕಡಿಮೆ ಇದ್ದು (ಶೆ.೨೪) ಮಧ್ಯಮ (ಶೇ.೪೩) ಮತ್ತು ದೊಡ್ಡ (ಶೇ. ೧೪) ಕೃಷಿಕರು ಹೆಚ್ಚು ಇದ್ದಾರೆ. ಬ್ರಾಹ್ಮಣರು ಕೂಡ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣರ ಶೇ. ೫೮ ಕುಟುಂಬಗಳು ಭೂಮಿ ಹೊಂದಿವೆ. ಇವರಲ್ಲೂ ಮಧ್ಯಮ (ಶೇ.೪೧) ಮತ್ತು ದೊಡ್ಡ (ಶೇ.೨೩) ಕೃಷಿಕರು ಹೆಚ್ಚಿದ್ದಾರೆ.[15]

ಈ ಪುಸ್ತಕದ ಲೇಖಕರು (ಚಂದ್ರ ಪೂಜಾರಿ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿಯ ಅಧ್ಯಯನವನ್ನು ೧೯೯೯ರಲ್ಲಿ ಮಾಡಿದ್ದಾರೆ.[16] ಅದೊಂದು ದೊಡ್ಡ ಹಳ್ಳಿ ಹಳ್ಳಿಯಲ್ಲಿ ಒಟ್ಟು ೭೮೧ ಕುಟುಂಬಗಳಿದ್ದವು. ಅವುಗಳಲ್ಲಿ ಲಿಂಗಾಯತರು (೧೧೫ ಕುಟುಂಬಗಳು), ನಾಯಕರು (೧೪೮ ಕುಟುಂಬಗಳು), ದಲಿತರು (೧೨೬ ಕುಟುಂಬಗಳು), ವಡ್ಡರು (೯೨ ಕುಟುಂಬಗಳು) ಮತ್ತು ಕುರುಬರು (೬೬ ಕುಟುಂಬಗಳು) ದೊಡ್ಡ ಸಂಖ್ಯೆಯಲ್ಲಿದ್ದರು. ಲಿಂಗಾಯತರ ೬೫ ಕುಟುಂಬಗಳು ಪಟ್ಟಾ ಭೂಮಿ ಹೊಂದಿದ್ದವು. ಊರಿನ ಇತರ ಸಮುದಾಯಗಳಿಗೆ ಹೋಲಿಸಿದರೆ ಲಿಂಗಯತರು ದೊಡ್ಡ ಭೂಮಾಲಿಕರು. ಲಿಂಗಾಯತರ ಹನ್ನೆರಡು ಕುಟುಂಬಗಳು ಹತ್ತು ಎಕರೆಗಿಂತ ಹೆಚ್ಚು ಭೂಮಿ ಹೊಂದಿದ್ದರೆ ಹದಿನೇಳು ಕುಟುಂಬಗಳು ಆರರಿಂದ ಹತ್ತು ಎಕರೆಯಷ್ಟು ಭೂಮಿ ಹೊಂದಿದ್ದವು. ಹತ್ತು ಎಕರೆಗಿಂತ ಹೆಚ್ಚು ಪಟ್ಟಾ ಭೂಮಿ ಹೊಂದಿದ ಇತರ ಸಮುದಾಯಗಳು ಅತ್ಯಲ್ಪ. ವಡ್ಡರ ಒಂದು, ದಲಿತರ ಒಂದು, ನಾಯಕರ ಎರಡು, ಕುರುಬರ ಮೂರು ಮತ್ತು ಮುಸ್ಲಿಮರ ಎರಡು ಕುಟುಂಬಗಳು ಹತ್ತು ಎಕರೆಗಿಂತ ಹೆಚ್ಚು ಭೂಮಿ ಹೊಂದಿದ್ದುವ. ದಲಿತರ ಶೇ. ೨೫ ಕುಟುಂಬಗಳು ಪಟ್ಟಾ ಭೂಮಿ ಹೊಂದಿವೆ. ಇವರಲ್ಲಿ ಶೇ.೮೧ರಷ್ಟು ಸಣ್ಣ ಮತ್ತು ಅತೀ ಸಣ್ಣ ಕೃಷಿಕರು. ನಾಯಕರ ಶೇ.೨೮ ಕುಟುಂಬಗಳು ಪಟ್ಟಾ ಭೂಮಿ ಹೊಂದಿವೆ. ಇವರಲ್ಲೂ ಶೇ. ೮೦ರಷ್ಟು ಕುಟುಂಬಗಳು ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿವೆ. ಈ ಊರಿನ ವಿಶೇಷವೆಂದರೆ ಪಟ್ಟಾ ಭೂಮಿ ಹೊಂದಿರುವ ಎಲ್ಲ ಸಮುದಾಯಗಳೂ ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರ. ಅವುಗಳಲ್ಲಿ ಕೆಲವು ಸಕ್ರಮವಾಗಿವೆ. ದಲಿತರ ೬೧, ನಾಯಕರ, ೨೭, ಲಿಂಗಾಯತರ ೨೭, ವಡ್ಡರ ೧೯ ಕುಟುಂಬಗಳು ಮತ್ತು ಕುರುಬರ ೧೫ ಕುಟುಂಬಗಳು ಒತ್ತುವರಿ ಭೂಮಿ ಹೊಂದಿವೆ.[17]

ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಆದಿಹಳ್ಳಿಯಲ್ಲಿ ೧೯೯೫ – ೨೦೦೦ರ ಸಂದರ್ಭದಲ್ಲಿನ ಭೂಸಂಬಂಧ ಇಂತಿದೆ. ಒಟ್ಟು ೧೨೦ ಕುಟುಂಬಗಳಿವೆ. ಅವುಗಳಲ್ಲಿ ಲಿಂಗಾಯತರ ೪೨, ಕುರುಬರ, ೪೫, ಬೋವಿ ೧೪, ದಲಿತರ ೧೪ ಮತ್ತು ಇತರ ೭ ಕುಟುಂಬಗಳಿವೆ. ಹಳ್ಳಿಯಲ್ಲಿ ಒಟ್ಟು ೪೫೭ ಎಕರೆ ಕೃಷಿ ಭೂಮಿ ಇದೆ. ಹಳ್ಳಿಯ ಒಟ್ಟು ಭೂಮಿಯ ಶೇ. ೫೨ಷ್ಟು ಲಿಂಗಾಯತ ಭೂಮಾಲಿಕರ ಸ್ವಾಧೀನ ಇದೆ. ಲಿಂಗಾಯತರ ಆರು ಕುಟುಂಬಗಳ ಸ್ವಾಧೀನದಲ್ಲಿ ೪೪ ಎಕರೆ, ಐದು ಕುಟುಂಬಗಳ ವಶದಲ್ಲಿ ೬೫ ಎಕರೆ ಮತ್ತು ೨ ಕುಟುಂಬಗಳ ವಶದಲ್ಲಿ ೫೦ ಎಕರೆ ಭೂಮಿ ಇದೆ. ಉಳಿದವರು (೨೭ ಕುಟುಂಬಗಳು) ಸಣ್ಣ ಮತ್ತು ಅತೀ ಸಣ್ಣ ಕೃಷಿಕರು. ಹಳ್ಳಿಯ ಶೇ. ೩೨ರಷ್ಟು ಭೂಮಿ ಕುರುಬ ಭೂಮಾಲಿಕರ ಸ್ವಾಧೀನ ಇದೆ. ಕುರುಬರ ಮೂರು ಕುಟುಂಬಗಳು ಅರೆ ಮಧ್ಯಮ (೫-೧೦ ಎಕರೆ) ಭೂಮಿ ಹೊಂದಿದರೆ ಒಂದು ಕುಟುಂಬ ಮಾತ್ರ ದೊಡ್ಡ (೧೮ ಎಕರೆ) ಹಿಡುವಳಿ ಹೊಂದಿದೆ. ಕುರುಬರ ಉಳಿದ ಕುಟುಂಬಗಳು (೩೬) ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಭೂಮಿ ಹೊಂದಿವೆ. ದಲಿತರ ೧೪ ಕುಟುಂಬಗಳ ಪೈಕಿ ಮೂರು ಕುಟುಂಬಗಳು ಭೂರಹಿತರು. ಉಳಿದ ದಲಿತರಲ್ಲಿ ೬ ಕುಟುಂಬಗಳು ೧೦ ಎಕರೆ, ೪ ಕುಟುಂಬಗಳು ೧೩ ಎಕರೆ ಮತ್ತು ಒಂದು ಕುಟುಂಬ ೧೪ ಎಕರೆ ಭೂಮಿ ಹೊಂದಿವೆ.[18] ೧೯೭೪ರ ಭೂಸುಧಾರಣೆಯ ನಂತರವೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶೇ. ೬೫ರಷ್ಟು ಭೂಮಿ ಲಿಂಗಾಯತ, ಬ್ರಾಹ್ಮಣ ಮತ್ತು ವೈಶ್ಯ ಸಮುದಾಯಗಳ ಭೂಮಾಲಿಕರ ಸ್ವಾಧೀನ ಇದೆ. ಕುರುಬ, ನಾಯಕ, ಉಪ್ಪಾರ ಮುಂತಾದವರ ಸ್ವಾಧೀನದಲ್ಲಿ ಶೇ. ೨೬ರಷ್ಟು ಭೂಮಿ ಇದೆ. ದೊಡ್ಡ ಸಂಖ್ಯೆಯಲ್ಲಿರುವ ದಲಿತರ ಸ್ವಾಧೀನ ಶೇ.೪ರಷ್ಟು ಭೂಮಿ ಇದೆ.[19] ೧೯೭೪ ಭೂಸುಧಾರಣೆ ಮಸೂದೆ ಗುತ್ತಿಗೆ ಪದ್ದತಿಯನ್ನು ಸಂಪೂರ್ಣ ನಿಷೇಧಿಸಿದೆ. ಆದರೆ ಹೈದರಾಬಾದ್ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಇವತ್ತಿಗೂ ಗುತ್ತಿಗೆ ಪದ್ದತಿ ಚಾಲ್ತಿಯಲ್ಲಿದೆ. ಎಲ್ಲ ಗುತ್ತಿಗೆಗಳು ಬಾಯಿಮಾತಿನ ಗುತ್ತಿಗೆಗಳು. ಆದುದರಿಂದ ಗುತ್ತಿಗೆ ನೀಡಿರುವುದನ್ನು ಕಾನೂನು ಪ್ರಕಾರ ಸಾಬೀತುಪಡಿಸಲು ಸಾಧ್ಯವಿಲ್ಲ. ಗುತ್ತಿಗೆ ಪಡೆಯುವವರು ನಿರ್ದಿಷ್ಟ ಮೊತ್ತವನ್ನು (ಬಡ್ಡಿರಹಿತ) ಮುಂಗಡವಾಗಿ ಭೂಮಾಲಿಕರಿಗೆ ನೀಡಬೇಕು. ಗುತ್ತಿಗೆ ಕೊನೆಗೊಂಡ ನಂತರ ಆಮುಂಗಡ ಮೊತ್ತವನ್ನು ಹಿಂತಿರುಗಿಸಲಾಗುವುದು.[20] ಈ ಅಧ್ಯಯನಗಳ ಪ್ರಕರ ಏಕೀಕರಣಪೂರ್ವ ಭೂಮಿ ಸಂಬಂಧಗಳು ಭೂಸುಧಾರಣೆಯ ನಂತರವವೂ ವಿಶೇಷ ಬದಲಾವಣೆಯಾಗಿಲ್ಲ. ಅಧ್ಯಯನ ಮಾಡಿದ ಎಲ್ಲ ಹಳ್ಳಿಗಳ್ಲಲೂ ಲಿಂಗಾಯತರ ಮತ್ತು ಒಕ್ಕಲಿಗರ ಭೂಮಾಲಿಕರು ಇತರಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಹೊಂದಿದ್ದಾರೆ.

ರಾಜ್ಯದಲ್ಲಾದ ಭೂಸಂಬಂಧಗಳ ಬದಲಾವಣೆಯನ್ನು ಒಟ್ಟಾರೆಯಾಗಿ ನೋಡಿದರೆ ಈ ಕೆಳಗಿನ ಚಿತ್ರಣ ದೊರೆಯುತ್ತದೆ. ೧೯೬೧ರ ಭೂಸುಧಾರಣೆ ಕಾಯಿದೆ ಗೇಣಿದಾರರಿಗೆ ಭೂಮಿ ಕೊಡಿಸುವ ಬದಲು ಅವರನ್ನು ವಕ್ಕಲೆಬ್ಬಿಸಲು ಹೆಚ್ಚು ಉಪಯೋಗವಾಗಿದೆ ಎನ್ನುವುದನ್ನು ಅಂಕಿಅಂಶಗಳು ಸಾಬೀತು ಪಡಿಸುತ್ತಿವೆ. ೧೯೬೧ರ ಕಾಯಿದೆಯಲ್ಲಿನ ಭೂಮಿಯ ಗರಿಷ್ಠಮಿತಿಯನ್ನು ಅನುಷ್ಠಾನಗೊಳಿಸಿ ಹೆಚ್ಚುವರಿ ಭೂಮಿಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡ ದಾಖಲೆಗಳಿಲ್ಲ. ಹೆಚ್ಚುವರಿ ಭೂಮಿಯೇ ಇಲ್ಲವಾದರೆ ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಮತ್ತು ವಿತರಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ೧೯೬೧ರ ಕಾಯಿದೆಯಲ್ಲಿನ ಹಲವಾರು ನ್ಯೂನತೆಗಳನ್ನು ತಿದ್ದುಪಡಿಕೊಂಡು ೧೯೭೪ರ ಕಾಯಿದೆ ಬಂದಿದೆ. ಜತೆಗೆ ೧೯೭೪ರ ಕಾಯಿದೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂದು ತೋರಿಸುವ ದಾಖಲೆಗಳಿವೆ. ೧೯೭೪ರ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದ ದಾಖಲೆಗಳನ್ನು ಹಿಂದಿನ ಪುಟಗಳಲ್ಲಿ ವಿಮರ್ಶಿಸಲಾಗಿದೆ. ಮೇಲ್ನೋಟಕ್ಕೆ ಸಾಧನೆ ಎಂದು ಕಾಣುವ ಹಲವಾರು ಸಂಗತಿಗಳು ಕರ್ನಾಟಕದ ಭೂಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿರುವುದು ಕಂಡು ಬರುತ್ತದೆ. ಗೇಣಿಪದ್ದತಿಯ ರದ್ಧತಿ ಕ್ರಾಂತಿಕಾರಿ ಕ್ರಮವೇ ಸರಿ. ರಾತ್ರಿ ಕಳೆದು ಬೆಳಕು ಹರಿಯುವಾಗ ಗೇಣಿದಾರ ಹೋಗಿ ಹೊಲದ ಒಡೆಯನಾಗುವುದು ದೊಡ್ಡ ಪರಿವರ್ತನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಏಕೀಕರಣ ಸಂದರ್ಭದಲ್ಲಿದ್ದ ಶೇ. ೫೫ರಷ್ಟು ಗೇಣಿ ದಾರರು ೧೯೭೪ ಕಾಯಿದೆ ಅನುಷ್ಠಾನಕ್ಕೆ ಬರು ಸಂದರ್ಭದಲ್ಲಿ ಗೇಣಿದಾರರಾಗಿ ಉಳಿದಿರಲಿಲ್ಲ. ಕಾಯಿದೆ ಅನುಷ್ಠಾನಕ್ಕೆ ಬರುವ ಮುನ್ನವೇ ಅವರನ್ನು ವಕ್ಕಲೆಬ್ಬಸಲಾಗಿತ್ತು.

ಏಕೀಕರಣ ಸಂದರ್ಭದಲ್ಲಿ ಭೂರಹಿತರು (ದಲಿತರು, ಬುಡಕಟ್ಟು ಜನರು ಮತ್ತು ಇತರ ಭೂರಹಿತರು) ಪಡೆದ ಭೂಮಿ ವಿವರಗಳು ವಿತರಣೆಯಾದ ಹೆಚ್ಚುವರಿ ಭೂಮಿಗೆ ಸಂಬಂಧಿಸಿದ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಎಷ್ಟು ಅಲ್ಪಪ್ರಮಾಣದ ಹೆಚ್ಚುವರಿ ಭೂಮಿ ಘೋಷಿತವಾಗಿದೆ, ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ವಿತರಣೆಯಾಗಿದೆ ಎನ್ನುವುದನ್ನು ಅಂಕಿಅಂಶಗಳೇ ಸಾರಿ ಸಾರಿ ಹೇಳುತ್ತವೆ. ಅಲ್ಪ ಪ್ರಮಾಣದ ಭೂಮಿ ಹೆಚ್ಚುವರಿಯೆಂದು ಘೋಷಿತವಾಗಿದೆ, ಘೋಷಿತವಾದುದರಲ್ಲಿ ಬಹುಭಾಗವನ್ನು ಸರಕಾರ ಸ್ವಾಧೀನಪಡಿಸಿಕೊಂಡಿಲ್ಲ ಮತ್ತು ಸ್ವಾಧೀನಪಡಿಸಿಕೊಂಡದ್ದನ್ನು ಕೂಡ ಭೂರಹಿತರಿಗೆ ಸಂಪೂರ್ಣವಾಗಿ ವಿತರಿಸಲಿಲ್ಲ. ೧೯೭೪ರ ಕಾಯಿದೆಯ ಅನುಷ್ಠಾನದಿಂದಲೂ ಏಕೀಕರಣ ಸಂದರ್ಭದ ಭೂಸಂಬಂಧಗಳೂ ಮೂಲಭೂತವಾಗಿ ಬದಲಾಗಿಲ್ಲ ಎನ್ನುವುದನ್ನು ಈ ಎಲ್ಲ ಅಂಕಿಅಂಶಗಳು ಸ್ಪಷ್ಟ ಪಡಿಸುತ್ತವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ಕೆಳಗಿನ ತೀರ್ಮಾನಕ್ಕೆ ಬರಬಹುದು. ಒಂದು, ಏಕೀಕರಣ ಸಂದರ್ಭದ ಭೂಮಾಲಿಕರು (ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಸೇರಿದರು) ಇಂದು ಕೂಡ ಇತರ ಸಮುದಾಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮಾಣದಲ್ಲಿ ಭೂಮಿ ಹೊಂದಿರಬಹುದು. ಎರಡು, ೧೯೭೪ರ ಕಾಯಿದೆ ಅನುಷ್ಠಾನದಿಂದ ಕುರುಬ, ಉಪ್ಪರ, ಈಡಿಗ, ಕಮ್ಮಾರ, ಮರಾಠ, ಮುಸ್ಲಿಮ್, ಕ್ರಿಶ್ಚಿಯನ್ ಮುಂತಾದ ಸಮುದಾಯಗಳ ಕುಟುಂಬಗಳು ಸಣ್ಣ ಪ್ರಮಾಣದ ಭೂಮಿ ಹೊಂದಿರಬಹುದು. ಮೂರು, ದಲಿತ ಮತ್ತು ಬುಡಕಟ್ಟು ಸಮುದಾಯಗಳ ಭೂಹಿಡುವಳಿಯಲ್ಲಿ ೧೯೭೪ರ ಕಾಯಿದೆಯ ಅನುಷ್ಠಾನದ ನಂತರವು ದೊಡ್ಡಮಟ್ಟಿನ ಬದಲಾವಣೆ ಇಲ್ಲದಿರಬಹುದು. ಈ ತೀರ್ಮಾನಗಳನ್ನು ಭೂಹಿಡುವಳಿ ಮೇಲಿನ ಇತ್ತೀಚಿನ ದಾಖಲೆಗಳು ಸಮರ್ಥಿಸುತ್ತಿವೆಯೇ ಎಂದು ನೋಡಬೇಕಾಗಿದೆ.

೧೯೭೦ – ೭೧ರರಲ್ಲಿ ಕರ್ನಾಟಕದಲ್ಲಿ ೫ ಎಕರೆಗಳಿಂದ (೨ ಹೆಕ್ಟೇರು) ಕಡಿಮೆ ಭೂಮಿ ಇದ್ದವರು ಶೇ. ೫೪ ಹಿಡುವಳಿದಾರರಿದ್ದರು. ಇದೇ ಅವಧಿಯಲ್ಲಿ ೨೫ ಎಕರೆಗಿಂತ (೧೦ ಹೆಕ್ಟೇರುಗಳಿಂದ) ಹೆಚ್ಚು ಭೂಮಿ ಹೊಂದಿದ ೬.೨ ಹಿಡುವಳಿದಾರರಿದ್ದರು. ೧೯೭೪ರ ಕಾಯಿದೆಯ ಅನುಷ್ಠಾನ ೨೯೮೦ ವೇಳೆಗೆ ಪರಿಣಾಮ ಬೀರಲು ಆರಂಭಿಸಿದೆ ಎಂದು ಊಹಿಸುವ (ಕೋಷ್ಟಕ -೯). ಬಹುತೇಕ ಗೇಣಿದಾರರು ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಹಿಡುವಳಿದಾರರು. ಆದುದರಿಂದ ೧೯೮೦ – ೮೧ರಲ್ಲಿ ೫ ಎಕರೆಗಿಂತ ಕಡಿಮೆ ಭೂಮಿ ಹೊಂದಿದವರ ಸಂಖ್ಯೆ ಹೆಚ್ಚಾಗಬೇಕು ಮತ್ತು ದೊಡ್ಡ ಭೂಹಿಡುವಳಿದಾರರ ಸಂಖ್ಯೆ ಕಡಿಮೆ ಆಗಬೇಕು. ಆದರೆ ೧೯೮೦ – ೮೧ರ ಅಂಕಿಅಂಶಗಳೂ ಈ ಊಹೆಯನ್ನು ಸಮರ್ಥಿಸುತ್ತಿಲ್ಲ. ೧೯೮೦ – ೮೧ರಲ್ಲಿ ೫ ಎಕರೆಗಿಂತ ಕಡಿಮೆ ಭೂಮಿ ಇದ್ದ ಹಿಡುವಳಿದಾರರು ಶೇ. ೫೯ ರಷ್ಟು ಮತ್ತು ೨೫ ಎಕರೆಗಿಂತ ಹೆಚ್ಚು ಭೂಮಿ ಹೊಂದಿದ ಹಿಡುವಳಿದಾರರು ಶೇ. ೪.೩ ಆಗಿದ್ದಾರೆ (ಕೋಷ್ಟಕ – ೯). ಅಂದರೆ ಸಣ್ಣ ಪ್ರಮಾಣದ ಹಿಡುವಳೀದಾರರ ಸಂಖ್ಯೆ ಕೇವಲ ಶೇ. ೫ ಏರಿಕೆ ಕಂಡರೆ ದೊಡ್ಡ ಹಿಡುವಳಿದಾರರ ಇಳಿಕೆ ಕೇವಲ ಶೇ. ೨ರಷ್ಟಾಗಿದೆ. ೧೯೭೪ರ ಕಾಯಿದೆಯ ಅನುಷ್ಠಾನದ ದೊಡ್ಡ ಪ್ರಮಾಣದ ಪರಿಣಾಮ ೧೯೮೦ – ೮೧ರಲ್ಲಿ ಗೋಚರವಾಗುವುದಿಲ್ಲ.

೨೦೦೫ – ೦೬ರ ಕರ್ನಾಟಕದ ಅಗ್ರಿಕಲ್ಚರಲ್ ಸೆನ್ಸಸ್ ಭೂಹಿಡುವಳಿಯ ಹೆಚ್ಚು ನಿಖರವಾದ ಮಾಹಿತಿಯನ್ನು ನೀಡುತ್ತದೆ. ಈ ಸೆನ್ಸಸ್ ಪ್ರಕಾರ ೨೦೦೫ – ೦೬ರ ವೇಳೆಗೆ ೫ ಅದೇ ರೀತಿ ೨೫ ಎಕರೆಗಿಂತ ಹೆಚ್ಚು ಭೂಮಿ ಇರುವ ಹಿಡುವಳಿದಾರರ ಸಂಖ್ಯೆ ಶೇ. ೦೧ಕ್ಕೆ ಇಳಿದಿದೆ. ಸಂಖ್ಯೆಯ ದೃಷ್ಟಿಯಿಂದ ಇದು ದೊಡ್ಡ ಪರಿವರ್ತನೆಯೇ ಸರಿ. ಸುಮಾರು ನಾಲ್ಕು ದಶಕಗಳಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಶೇ. ೨೧ರ (೧೯೭೦ – ೭೧ರಲ್ಲಿ ಸೇ. ೫೪ ಇತ್ತು ೨೦೦೫ – ೦೬ ರಲ್ಲಿ ಶೇ. ೭೫ ಇದೆ) ಬೆಳವಣಿಗೆ ಕಂಡಿದೆ ಮತ್ತು ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸಂಖ್ಯೆ ಶೇ.೫ರ ಇಳಿಕೆ ಕಂಡಿದೆ (೧೯೭೦ – ೭೧ರಲ್ಲಿ ಶೇ.೬ ಇತ್ತು ೨೦೦೫ – ೦೬ರಲ್ಲಿ ಶೇ. ೦೧ ಇದೆ.)[21] ಸಣ್ಣ ಹಿಡುವಳಿದಾರರ ಸಂಖ್ಯೆಯಲ್ಲಿ ದೊಡ್ಡ ಏರಿಕೆ ಇದೆ. ಆದರೆ ಈ ಸಣ್ಣ ಹಿಡುವಳಿದಾರರು ಹೊಂದಿರುವ ಭೂಮಿಯ ಪ್ರಮಾಣದಲ್ಲಿ ಇದೇ ಏರಿಕೆ ಇದೆಯೇ ೧೯೭೦ – ೭೧ರಲ್ಲಿ ಸೇ. ೫೪ರಷ್ಟಿದ್ದ ಸಣ್ಣ ಹಿಡುವಳಿದಾರರ ಸ್ವಾಧೀನ ಶೇ. ೧೬ ರಷ್ಟು ಭೂಮಿ ಇತ್ತು. ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸ್ವಾಧೀನ ಶೇ.೩೧ರಷ್ಟು ಭೂಮಿ ಇತ್ತು. ೨೦೦೫ – ೦೬ರವೇಳೆಗೆ ಶೇ.೭೫ರಷ್ಟು ಸಣ್ಣ ಹಿಡುವಳಿದಾರರ ಸ್ವಾಧೀನ ಶೇ.೩೬ ಭೂಮಿ ಇದೆ. ಹೆಚ್ಚು ಕಡಿಮೆ ಶೇ. ೨೦ರಷ್ಟು ಭೂಮಿ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿದಾರರ ಸ್ವಾಧೀನ ಶೇ. ೯ ಭೂಮಿ ಇದೆ. ಅಂದರೆ ದೊಡ್ಡ ಹಿಡುವಳಿದಾರರು ೧೯೭೦ – ೨೦೦೫ರ ನಡುವೆ ಶೇ. ೨೨ರಷ್ಟು ಭೂಮಿ ಕಳೆದುಕೊಂಡಿದ್ದಾರೆ.[22] ಈ ಅಂಕಿಅಂಶಗಳನ್ನು ಮತ್ತೊಂದು ವಿಧದಲ್ಲಿ ಕೂಡ ನೋಡಬಹುದು. ಶೇ. ೭೬ರಷ್ಟಿರುವ ಸಣ್ಣ (ಶೇ.೭೫) ಮತ್ತು ದೊಡ್ಡ (ಶೇ.೧) ಹಿಡುವಳಿದಾರರಲ್ಲಿ ಶೇ. ೪೫ ಭೂಮಿ ಇದೆ. ಅಂದರೆ ಶೇ.೨೪ ರಷ್ಟಿರುವ ಮಧ್ಯಮ ಮತ್ತು ಅರೆ ಮಧ್ಯಮ ಹಿಡವಳಿದಾರರಲ್ಲಿ ಶೇ. ೫೫ ರಷ್ಟು ಭೂಮಿ ಇದೆಯೆಂದಾಯಿತು. ಕರ್ನಾಟಕದ ಭೂಸುಧಾರಣೆಯಿಂದ ದೊಡ್ಡ ಹಿಡುವಳಿದಾರರು ಭೂಮಿ ಕಳೆದುಕೊಂಡಿದ್ದಾರೆ. ಆದರೆ ಅವರು ಕಳೆದುಕೊಂಡ ಭೂಮಿ ಭೂರಹಿತರಿಗೆ ಅಥವಾ ಸಣ್ಣ ಹಿಡುವಳಿದಾರರಿಗೆ ವರ್ಗಾವಣೆ ಆಗಿಲ್ಲ.

ಭೂರಹಿತರಿಗೆ ಅಥವಾ ಸಣ್ಣ ಹಿಡುವಳಿದಾರರಿಗೆ ವರ್ಗವಣೆಯಾಗುವ ಬದಲು ಅದು ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದಾರರಿಗೆ ವರ್ಗಾವಣೆ ಆಗಿದೆ. ಈ ಅಂಶ ಶೇ. ೧ರಷ್ಟಿರುವ ದೊಡ್ಡ ಹಿಡುವಳಿದಾರರನ್ನು ಶೇ. ೨೪ರಷ್ಟಿರುವ ಮಧ್ಯಮ ಹಿಡುವಳೀದಾರರೊಂದಿಗೆ ಸೇರಿಸಿ ನೋಡಿದರೆ ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ಇಂದು ಕೂಡ ಶೇ.೨೫ರಷ್ಟು (ಶೇ.೨೪ ಮಧ್ಯಮ ಮತ್ತು ಶೇ.೧ ದೊಡ್ಡ) ಹಿಡುವಳೀದಾರರಲ್ಲಿ ಶೇ.೬೪ರಷ್ಟು ಭೂಮಿ ಇದೆ. ಸಣ್ಣ ಹಿಡುವಳಿದಾರರಲ್ಲಿ ಅತೀ ಸಣ್ಣ ಹಿಡುವಳೀದಾರರು ಕೂಡ ಸೇರಿದ್ದಾರೆ. ಸೆನ್ಸಸ್ ಲೆಕ್ಕಚಾರ ಪ್ರಕಾರ ೦ – ೨.೫ ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು ಅತೀ ಸಣ್ಣ ಹಿಡುವಳಿದಾರರು. ಅಂದರೆ ಕೆಲವು ಅಡಿ ಭೂಮಿ ಇದ್ದವರು ಮತ್ತು ಎರಡೂವರೆ ಎಕರೆ ಭೂಮಿ ಇದ್ದವರು ಅತೀ ಸಣ್ಣ ಹಿಡುವಳಿದಾರರಾಗುತ್ತಾರೆ. ನೀರಾವರಿ ಇರುವ ಕಡೆ ಒಂದು ಅಥವಾ ಎರಡು ಎಕರೆ ಭೂಮಿ ಸಣ್ಣ ಕುಟುಂಬದ ಮೂರು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಬಹುದು. ಆದರೆ ನೀರಾವರಿ ಇಲ್ಲದ ಪ್ರದೇಶದಲ್ಲಿ ಇಷ್ಟೊಂದು ಸಣ್ಣ ಪ್ರಮಾಣದ ಭೂಮಿ ಹಿಡುವಳಿದಾರರಿಗೆ ಏನೇನೂ ಉಪಯೋಗಕ್ಕೆ ಬರುವುದಿಲ್ಲ. ಮೇಲಿನ ಅಂಕಿಅಂಶಗಳು ಭೂಸುಧಾರಣೆಯ ನಂತರವೂ ಮುಂದವರಿಯುತ್ತಿರುವ ಭೂರಹಿತರ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಮುಂದಿನ ಭಾಗದಲ್ಲಿ ಅತೀ ಸಣ್ಣ ರೈತರು ಮತ್ತು ಭೂರಹಿತರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ.

ಕರ್ನಾಟಕದಲ್ಲಿರುವ ‌ಒಟ್ಟು ಕೃಷಿಕರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು (ಶೇ.೪೮) ಮಂದಿ ಅತೀ ಸಣ್ಣ ರೈತರು. ಅಂದರೆ ಸರಕಾರಿ ಲೆಕ್ಕಚಾರ ಪ್ರಕಾರ ೨.೫ ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು. ಮಳೆಬೆಳೆ ಚೆನ್ನಾಗಿ ಆಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತೀ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ. ೭೦ಕ್ಕಿಂತಲೂ ಹೆಚ್ಚಿದ್ದರೆ ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ. ೬೭ ಮತ್ತು ಶೇ. ೫೬ರಷ್ಟಿದ್ದಾರೆ (ಕೋಪ್ಟಕ – ೧೬). ಒಣಭೂಪ್ರದೇಶ ಹೆಚ್ಚಿರುವ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅತೀ ಸಣ್ಣ ರೈತರು ಕಡಮೆ ಇದ್ದಾರೆ. ದಕ್ಷಿಣ ಕರ್ನಾಟಕದ ಅರೆ ನೀರಾವರಿ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಶೇ. ೬೦ರ ರೇಂಜಲ್ಲಿ ಅತೀ ಸಣ್ಣ ರೈತರಿದ್ದಾರೆ. ಮಂಡ್ಯದಲ್ಲಿ ಮಾತ್ರ ಶೇ. ೮೧ ರಷ್ಟು ಅತೀ ಸಣ್ಣ ರೈತರಿದ್ದಾರೆ (ಕೋಷ್ಟಕ – ೧೬). ಇವರ ಸಂಖ್ಯೆ ಜತಗೆ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಇವರು ಹೊಂದಿರುವ ಭೂಮಿಯ ಪ್ರಮಾಣ. ನೀರಾವರಿ ಪ್ರದೇಶದಲ್ಲಿ ಒಂದು ಎಕರೆಯಷ್ಟು ಭೂಮಿಯನ್ನು ಅತೀ ಸಣ್ಣ ರೈತರು ಹೊಂದಿಲ್ಲ ಒಣ ಭೂಪ್ರದೇಶದಲ್ಲಿ ಒಂದೂವರೆ ಎಕರೆಯಷ್ಟು ಭೂಮಿ ಹೊಂದಿದ್ದಾರೆ. ಅರೆ ನೀರಾವರಿ ಪ್ರದೇಶಗಳಲ್ಲಿ ಒಂದು ಮತ್ತು ಒಂದೂವರೆ ಎಕರೆ ನಡುವೆ ಭೂಮಿ ಹೊಂದಿದ್ದಾರೆ. ಇಷ್ಟೊಂದು ಕಡಿಮೆ ಪ್ರಮಾಣದ ಭೂಮಿ ಮೇಲೆ ಯವ ಕೃಷಿ ಮಾಡಬಹುದು. ಇವರನ್ನು ಹೊಲಗದ್ದೆ ಹೊಂದಿದವರೆಂದು ವರ್ಗೀಕರಿಸುವ ಬದಲು ಮನೆ ಮತ್ತು ಮನೆ ಸುತ್ತ ಮುತ್ತ ಸಣ್ಣ ಭೂಮಿ ಇರುವವರೆಂದು ವರ್ಗೀಕರಿಸುವುದು ಹೆಚ್ಚು ಸೂಕ್ತ ಇಂತಹ ಸಣ್ಣ ಪ್ರಮಾಣದ ಭೂಮಿಯಲ್ಲಿ ತರಕಾರಿ, ಸಣ್ಣಪುಟ್ಟ ತೋಟಗಾರಿಕೆ ಬೆಳೆ ಇತ್ಯಾದಿ ಬೆಳೆಗಳನ್ನು ಮಾತ್ರ ಬೆಳೆಯಬಹುದು. ಈ ರೈತರು ತಮ್ಮ ಮೂರು ಹೊತ್ತಿನ ಊಟಕ್ಕೆ ಭೂರಹಿತರಂತೆ ಹತ್ತಿರದ ಪೇಟೆ ಪಟ್ಟಣಗಳಿಗೆ ಅಥವಾ ಊರಲ್ಲೇ ಇರುವ ದೊಡ್ಡ ಕೃಷಿಕರ ಹೊಲಕ್ಕೆ ಕೂಲಿಗೆ ಹೋಗುವುದು ಅನಿವಾರ್ಯ. ಅದುದರಿಂದ ಇವರನ್ನು ಭೂಮಿ ಹೊಂದಿದವರೆಂದು ವರ್ಗೀಕರಿಸದೇ ಭೂರಹಿತರೊಂದಿಗೆ ಹೋಲಿಸಿ ನೋಡುವುದು ಹೆಚ್ಚು ಸೂಕ್ತ ಇವರನ್ನು ಹೊರತುಪಡಿಸಿ ಇಡೀ ರಾಜ್ಯದಲ್ಲಿ ಏನೇನೂ ಭೂಮಿ ಇಲ್ಲದವರು ಶೇ. ೩೩ರಷ್ಟಿದ್ದಾರೆ. ಭೂರಹಿತರ ಪ್ರಮಾಣ ಕೂಡ ನೀರಾವರಿ ಮತ್ತು ಒಣ ಭೂಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಇದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ದ.ಕ., ಉ.ಕ., ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಶೇ. ೩೫ರಿಂದ ಶೇ. ೪೫ಷ್ಟು ಭೂರಹಿತ ಕುಟುಂಬಗಳಿವೆ. ಉತ್ತರ ಕರ್ನಾಟಕದಲ್ಲಿ ಧಾರವಾಡ ಹೆಚ್ಚು ಅಭಿವೃದ್ಧಿ ಹೊಂದಿದ ಜಿಲ್ಲೆ. ಅಲ್ಲಿ ಹೆಚ್ಚು ಭೂರಹಿತರಿದ್ದಾರೆ (೫೭%). ಉಳಿದ ಜಿಲ್ಲೆಗಳಲ್ಲಿ ಶೇ. ೧೦ರಿಂದ ಶೇ. ೩೦ರ ರೇಂಜಲ್ಲಿ ಭೂರಹಿತ ಕುಟುಂಬಗಳಿವೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚಿನ ಭೂರಹಿತರು ಬೆಂಗಳೂರು ಜಿಲ್ಲೆಯಲ್ಲಿದ್ದಾರೆ. ದಕ್ಷಿಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಶೇ. ೧೦ರಿಂದ ಶೇ. ೩೦ರ ರೇಂಜಲ್ಲಿ ಭೂರಹಿತರಿದ್ದಾರೆ. ಭೂರಹಿತರೊಂದಿಗೆ ಒಣ ಭೂಪ್ರದೇಶದಲ್ಲಿ ಒಂದು ಎಕರೆಗಿಂತಲೂ ಕಡಿಮೆ ಭೂಮಿ ಇರುವವರನ್ನು ಒಟ್ಟು ಸೇರಿಸಿದರೆ ಕರ್ನಾಟಕದ ಶೇ. ೫೦ಕ್ಕಿಂತಲೂ ಹೆಚ್ಚು ಕುಟುಂಬಗಳು ಭೂರಹಿತರ ಗುಂಪಿನಲ್ಲಿ ಬರುತ್ತವೆ (ಕೋಷ್ಟಕ – ೧೬).

೧೯೭೪ರ ಕಾಯಿದೆ ಭೂರಹಿತರ ಆಸಕ್ತಿ ರಕ್ಷಿಸಲು ವಿಶೇಷ ಪ್ರಯತ್ನ ಮಾಡಿದೆ, ವಿತರಣೆಯಾದ ಹೆಚ್ಚುವರಿ ಭೂಮಿಯಲ್ಲಿ ದಲಿತ ಬುಡಕಟ್ಟು ಜನರಿಗೆ ಶೇ. ೬೦ರಷ್ಟು ಹೋಗಿದೆ,೧೯೮೦ರ ನಂತರವೂ ದಲಿತರಿಗೆ ಸಾಕಷ್ಟು ಭೂಮಿ ಹಂಚಲಾಗಿದೆ ಇತ್ಯಾದಿ ವಾದಗಳು ಚಾಲ್ತಿಯಲ್ಲಿವೆ. ಈ ವಾದಗಳು ಹೇಳುವುದು ಸರಿ ಎಂದಾದರೆ ದಲಿತರು ಮತ್ತು ಬುಡಕಟ್ಟು ಜನರು ಹೆಚ್ಚು ಸಂಖ್ಯೆಯಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ಭೂಮಿ ಹೊಂದಿರಬೇಕು. ಆದರೆ ವಾಸ್ತವ ಆ ರೀತಿ ಇಲ್ಲ. ಭೂರಹಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಮತ್ತು ಬುಡಕಟ್ಟು ಜನರಿದ್ದಾರೆ. ಒಂದು ಅಧ್ಯಯನ ಪ್ರಕಾರ ಇಡೀ ರಾಜ್ಯದ ಶೇ. ೬೦ರಷ್ಟು ದಲಿತರು ಭೂರಹಿತರು.[23] ಅಂದರೆ ಶೇ. ೪೦ರಷ್ಟು ದಲಿತರು ಮಾತ್ರ ಅಲ್ಪಸ್ವಲ್ಪ ಭೂಮಿ ಹೊಂದಿದ್ದಾರೆ. ದಲಿತರಿಗೆ ಹೋಲಿಸಿದರೆ ಬುಡಕಟ್ಟು ಜನರ ಸ್ವಲ್ಪ ಹೆಚ್ಚು ಕುಟುಂಬಗಳಿಗೆ ಭೂಮಿ ಇದೆ. ಬುಡಕಟ್ಟು ಜನರ ಶೇ. ೪೯ರಷ್ಟು ಕುಟುಂಬಗಳಿಗೆ ಭೂಮಿ ಇದ್ದರೆ ಶೇ. ೫೧ ಕಟುಂಬಗಳಿಗೆ ಭೂಮಿ ಇಲ್ಲ (ಕೋಷ್ಟಕ – ೧೪) ಭೂಮಿ ಹೊಂದಿದ ದಲಿತರಲ್ಲೂ ಎರಡೂವರೆ ಎಕರೆಗಳಿಗಿಂತ ಕಡಿಮೆ ಭೂಮಿ ಹೊಂದಿರುವ ದಲಿತರ ಸಂಖ್ಯೆಯೇ ಹೆಚ್ಚು. ಮಧ್ಯಮ ಮತ್ತು ಅರೆ ಮಧ್ಯಮ ಭೂಹಿಡುವಳಿ ಹೊಂದಿದವರು ಶೇ. ೩ರಷ್ಟಿದ್ದಾರೆ. ಶೇಕಡಾ ಒಂದಕ್ಕಿಂತಲೂ ಕಡಮೆ ಸಂಖ್ಯೆಯ ದಲಿತರು ದೊಡ್ಡ ಪ್ರಮಾಣದ ಭೂಮಿ ಹೊಂದಿದವರ ಸಾಲಿನಲ್ಲಿ ಬರುತ್ತಾರೆ (ಕೋಷ್ಟಕ – ೧೨). ಬುಡಕಟ್ಟು ಜನರಲ್ಲಿ ಕೂಡ ಶೇ. ೬ರಷ್ಟು ಕುಟುಂಬಗಳು ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು. ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದಾರರು ಶೇ. ೩ರಷ್ಟಿದ್ದರೆ ಶೇ. ೧ರಷ್ಟು ದೊಡ್ಡ ಹಿಡುವಳಿದಾರರಿದ್ದಾರೆ. ಮತ್ತೊಂದು ಅಧ್ಯಯನ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ. ೧೩ರಷ್ಟು ದಲಿತರು ನೀರಾವರಿ ಭೂಮಿ ಹೊಂದಿದ್ದಾರೆ ಮತ್ತು ಶೇ.೪೪ರಷ್ಟು ದಲಿತರು ಒಣಭೂಮಿ ಹೊಂದಿದ್ದಾರೆ. ಅಂದರೆ ಶೇ. ೮೭ರಷ್ಟು ದಲಿತರು ನೀರಾವರಿ ಭೂಮಿ ಹೊಂದಿಲ್ಲ ಮತ್ತು ಶೇ. ೫೬ರಷ್ಟು ದಲಿತರು ಒಣಭೂಮಿಯನ್ನೂ ಹೊಂದಿಲ್ಲ. ರಾಜ್ಯದ ಅಭಿವೃದ್ಧಿ ಹೊಂದಿದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ದಲಿತರ ಸ್ವಾಧೀನ ಇರುವ ಭೂಮಿ ಪ್ರಮಾಣ ವಿಶೇಷ ಬದಲಾಗುವುದಿಲ್ಲ. ಅಭಿವೃಧ್ಧಿ ಹೊಂದಿ ಪ್ರದೇಶದ ಶೇ. ೯೦ರಷ್ಟು ದಲಿತರು ನೀರಾವರಿ ಭೂಮಿ ಹೊಂದಿಲ್ಲ. ಹಿಂದುಳಿದ ಪ್ರದೇಶದ ಶೇ. ೮೦ರಷ್ಟು ದಲಿತರು ನೀರಾವರಿ ಭೂಮಿ ಹೊಂದಿಲ್ಲ. ನೀರಾವರಿ ಪ್ರದೇಶದ ಅತ್ಯಲ್ಪ ಭೂಮಿ ಹೊಂದಿದ ದಲಿತರಲ್ಲಿ ಬಹುತೇಕರು (ಶೇ. ೧೦ರಷ್ಟು) ಸಣ್ಣ ಮತ್ತು ಅತೀ ಸಣ್ಣ ರೈತರು. ಅತೀ ಕಡಿಮೆ ಸಂಖ್ಯೆಯ ದಲಿತರು (ಶೇ. ೧೦ರಷ್ಟು ಮತ್ತು ಶೇ. ೦.೧೮ರಷ್ಟು ದಲಿತರು) ಮಧ್ಯಮ ಮತ್ತು ದೊಡ್ಡ ಗಾತ್ರದ ನೀರಾವರಿ ಭೂಮಿ ಹೊಂದಿದ್ದಾರೆ.[24]

ನೀರಾವರಿ ಭೂಮಿ ಹೊಂದಿದ ದಲಿತರಿಗೆ ಹೋಲಿಸಿದರೆ ಹೆಚ್ಚು ಸಂಖ್ಯೆಯ ದಲಿತರು ಒಣ ಭೂಮಿ ಹೊಂದಿದ್ದಾರೆ. ದಲಿತರ ಶೇ. ೪೧ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಒಣ ಭೂಮಿ ಹೊಂದಿದ್ದರೆ. ದಲಿತರ ಶೇ. ೩ ಮತ್ತು ಶೇ. ೯.೪೫ರಷ್ಟು ಮಂದಿ ಮಧ್ಯ ಮತ್ತು ದೊಡ್ಡ ಪ್ರಮಾಣದ ಒಣಭೂಮಿ ಹೊಂದಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇ. ೨೫ರಷ್ಟಿರುವ ದಲಿತರು ಮತ್ತು ಬುಡಕಟ್ಟು ಜನರು ರಾಜ್ಯದ ಒಟ್ಟು ಕೃಷಿ ಭೂಮಿಯ ಶೇ. ೧೦ರಷ್ಟನ್ನು ಕೂಡ ಹೊಂದಿಲ್ಲ . ಹಲವಾರು ಕಾರಣಗಳಿಗಾಗಿ ದಲಿತರು ಮತ್ತು ಬುಡಕಟ್ಟು ಜನರು ಭೂಹಿಡುವಳಿ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಒಂದು, ರಾಜ್ಯದ ಶೇ. ೩೬ರಷ್ಟು ಜನರು ಪೇಟೆಪಟ್ಟಣಗಳಲ್ಲಿ ವಾಸ ಮಾಡಿದರ ದಲಿತರ ಶೇ. ೨೫ ಮತ್ತು ಬುಡಕಟ್ಟು ಜನರ ಶೇ.೧೫ ಜನ ಮಾತ್ರ ಪೇಟೆ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಇಂದು ಕೂಡ ಇವರ ಬದುಕಿನ ಮುಖ್ಯ ಆಧಾರ ಸ್ತಂಭ ಭೂಮಿ. ಎರಡು, ಮೂರು ಭೂಸುಧಾರಣ ಮಸೂದೆಗಳು ಜಾರಿಗೊಂಡ ನಂತರವೂ ಇವರ ಜನಸಂಖ್ಯೆಗೆ ಹೋಲಿಸಿದರೆ ಇವರು ಹೊಂದಿರುವ ಭೂಹಿಡುವಳಿ ಏನೇನೂ ಸುಧಾರಣೆ ಕಂಡಿಲ್ಲ. ಇಂದು ಕೂಡ ಅರ್ಧಕರ್ಧ ದಲಿತರು ಮತ್ತು ಬುಡಕಟ್ಟು ಜನರು ಭೂರಹಿತರು. ಮೂರು, ಇವರುಗಳು ಹೊಂದಿರುವ ಅಲ್ಪಸ್ವಲ್ಪ ಭೂಮಿಯ ಬಹುಪಾಲು ಒಣ ಭೂಮಿ ಮತ್ತು ಕೃಷಿಯೋಗ್ಯವಾಗಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಈಗಾಲೇ ಆಗಿರುವ ಭೂಸುಧಾಣೆಯನ್ನು ಮರುವಿಮರ್ಶೆ ಮಾಡುವ ಮತ್ತು ಅರ್ಧಕ್ಕೆ ನಿಂತಿರುವ ಭೂಸುಧಾರಣೆ ಪ್ರಕ್ರಿಯೆಯನ್ನು ಪುನಃ ಆರಂಭಿಸುವ ಅನಿವಾರ್ಯತೆ ಇದೆ.

ಏಕೀಕರಣ ಪೂರ್ವ ಭೂ ಸಂಬಂಧಗಳನ್ನು ಪರಿವರ್ತಿಸುವ ಉದ್ದೇಶದಿಂದ ಹಲವಾರು ಭೂಸುಧಾರಣೆ ಮಸೂದೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಯಿತು. ಇನಾಂ ರದ್ದತಿ ಮಸೂದೆ ಅರ್ಧದಷ್ಟು ಇನಾಂ ಭೂಮಿಯನ್ನು ರದ್ದುಗೊಳಿಸಲು ವಿಫಲವಾಯಿತು. ಇನಾಂ ರದ್ದತಿಯಿಂದ ಯಾರಿಗೆ ಲಾಭವಾಗಿದೆಯೆಂದು ನಿಖರಾಗಿ ಹೇಳುವುದು ಕಷ್ಟ. ಆದಾಗ್ಯೂ ಇನಾಂ ರದ್ದತಿ ಮಸೂದೆಯ ಅನುಷ್ಠಾನಕ್ಕೆ ಬಲಾಢ್ಯ ಸಮುದಾಯಗಳು ತೋರಿದ ಆದ್ಯತೆಯನ್ನು ಗಮನಿಸಿದರೆ ಈ ಸಮುದಾಯಗಳ ಭೂಮಾಲಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇನಾಂ ಭೂಮಿಯನ್ನು ಗೇಣಿಗೆ ಕೃಷಿ ಮಾಡುತ್ತಿದ್ದರು ಎನ್ನುವ ತೀರ್ಮಾನಕ್ಕೆ ಬರಬಹುದು. ೧೯೬೧ರ ಕಾಯಿದೆಯಂತೂ ಗೇಣಿದಾರರ ಸ್ಥಿತಿಯನ್ನು ಭದ್ರಗೊಳಿಸುವ ಬದಲು ಅಭದ್ರಗೊಳಿಸಿದೆ. ಲಕ್ಷಾಂತರ ಗೇಣಿದಾರರು ಭೂಮಿ ಕಳಕೊಂಡ ಕೃಷಿ ಕಾರ್ಮಿಕರಾಗಬೇಕಾಯಿತು. ೧೯೭೪ರ ಕಾಯಿದೆಯಲ್ಲಿ ಸ್ವಲ್ಪಮಟ್ಟಿಗೆ ಗೇಣಿದಾರರಿಗೆ ಅನುಕೂಲವಾಗಿದೆ. ಅದರೂ ಈ ಕಾಯಿದೆ ಗಿಟ್ಟಿಸಿದ ಪ್ರಚಾರಕ್ಕೆ ಹೋಲಿಸಿದರೆ ಇದರ ಯಶಸ್ಸು ದೊಡ್ಡ ಮಟ್ಟಿನದಲ್ಲ. ಈ ಎಲ್ಲ ಕಾರಣಗಳಿಂದ ಏಕೀಕರಣಪೂರ್ವ ಭೂಮಿ ಸಂಬಂಧಗಳು ಮೂಲಭೂತವಾಗಿ ಪರಿವರ್ತನೆಗೊಳ್ಳಲೇ ಇಲ್ಲ. ಬ್ರಾಹ್ಮಣರ, ಲಿಂಗಾಯತರ ಮತ್ತು ಒಕ್ಕಲಿಗರ ಭೂಮಾಲಿಕರು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಆಯಾಯ ಪ್ರದೇಶದ ಇತರ ಸಮುದಾಯಗಳ ಭುಮಾಲಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಹೊಂದಿದ್ದರು. ಭೂಸುಧಾರಣೆ ನಂತರ ದೊಡ್ಡ ಹಿಡುವಳಿದಾರರು ಭೂಮಿ ಕಳೆದುಕೊಂಡರು. ಆದರೆ ಅವರುಗಳು ಕಳೆದುಕೊಂಡ ಭೂಮಿ ಭೂರಹಿತರಿಗೆ ಹಂಚಿಕೆಯಾಗಲಿಲ್ಲ. ಇಂತಹ ಭೂಮಿ ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದಾರರಲ್ಲಿ ಸಂಗ್ರಹವಾಯಿತು. ಅರೆ ಮಧ್ಯಮ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರಲ್ಲಿ ಇಂದಿಗೂ ಲಿಂಗಾಯತರು ಮತ್ತು ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಭೂರಹಿತರಲ್ಲಿ ಇಂದು ಕೂಡ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುಳಿದ ಜಾತಿಗಳು ಭೂಸುಧಾರಣೆಯಿಂದ ಅಲ್ಪಸ್ವಲ್ಪ ಭೂಮಿ ಪಡೆದಿದ್ದಾರೆ. ಈ ಬಗೆಯ ಭೂಸಂಬಂಧಗಳು ಕೃಷಿ ಉತ್ಪಾದಕತೆಯನ್ನು ಮತ್ತು ಕೃಷಿಯಲ್ಲಿ ತೊಡಗಿಸಿ ಕೊಂಡವರ ಜೀವನಮಟ್ಟವನ್ನು ಪ್ರಭಾವಿಸಬಹುದು.

[1] ಎಮ್.ಎನ್. ಶ್ರೀನಿವಾಸ್, ದಿ ರಿಮೆಂಬರ್ಡ್ ವಿಲೇಜ್, ಡಲ್ಲಿ: ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೮

[2] ಜೇಮ್ಸ್ ಮೇನರ್, ಪೋಲಿಟಿಕಲ್ ಚೇಂಜ್ ಇನ್ ಎನ್ ಇಂಡಿಯನ್ ಸ್ಟೇಟ್ – ಮೈಸೂರು ೧೯೧೭ – ೧೯೫೫, ನ್ಯೂಡೆಲ್ಲಿ: ಮನೋಹರ್ ಬುಕ್ ಸರ್ವಿಸ್, ೧೯೭೭

[3] ಟಿ. ಸ್ಕಾರ್‌ಲೇಟ್ ಎಪ್‌ಸ್ಟೀನ್, ಎ.ಪಿ.ಸೂರ್ಯನಾರಾಯಣ ಮತ್ತು ಟಿ. ತಮ್ಮೆಗೌಡ, ವಿಲೇಜ್ ವಾಯಿಸ್ಸಸ್ಫೊರ್ಟಿ ಇಯರ್ಸ್ ಆಫ್ ರೂರಲ್ ಟ್ರಾನ್ಸ್ಪಾರ್ಮೇಶನ್ ಇನ್ ಸೌತ್ ಇಂಡಿಯಾ, ನ್ಯೂಡೆಲ್ಲಿ; ಸೇಜ್ ಪಬ್ಲಿಕೇಶನ್ಸ್, ೧೯೯೭

[4] ಶಿವರಾಮ ಕಾರಂತ, ಚೋಮನ ದುಡಿ, ಪುತ್ತೂರು: ಹರ್ಷ ಪ್ರಕಟಣಾಲಯ, ೧೯೭೧

[5] ಕೆ.ಜಿ. ಗುರುಮೂರ್ತಿ, ಕಲ್ಲಾಪುರ – ಎ ಸೌತ್ ಇಂಡಿಯನ್ ವಿಲೇಜ್, ಧಾರವಾಡ: ಕರ್ನಾಟಕ ಯುನಿವರ್ಸಿಟಿ, ೧೯೭೬

[6] ಕೆ.ಜೆ. ಗುರುಮೂರ್ತಿ, ಕಲ್ಲಾಪುರ, ಪು. ೭೯ -೮೧

[7] ಕೆ. ಈಶ್ವರನ್, ಶಿವಪುರ – ಎ ಸೌತ್ ಇಂಡಿಯನ್ ವಿಲೇಜ್, ಲಂಡನ್: ರೌಟ್ಲೇಡ್ಜ್ ಆಂಡ್ ಕೆಗನ್ ಪೌಲ್, ೧೯೬೮, ಕೆ. ಈಶ್ವರನ್, ಟ್ರೆಡಿಶನ್ ಆಂಡ್ ಎಕಾನಮಿ ಇನ್ ವಿಲೇಜ್ ಇಂಡಿಯಾ, ಬಾಂಬೆ: ಎಲೈಡ್ ಪಬ್ಲಿಷರ್ಸ್, ೧೯೬೬

[8] ಕೆ. ಈಶ್ವರನ್, ಶಿವಪುರ – ಎ ಸೌತ್ ಇಂಡಿಯನ್ ವಿಲೇಜ್, ಪು. ೩-೫

[9] ಸಿ. ಪಾರ್ವತಮ್ಮ ಪೊಲಿಟಿಕ್ಸ್ ಆಂಡ್ ರಿಲಿಜೀಯನ್ ಸ್ಟಡಿ ಆಫ್ ಹಿಸ್ಟೋರಿಕಲ್ ಇಂಟರಿಯಕ್ಷನ್ ಬಿಟ್ವೀನ್ ಸೋಸಿಯೋ ಪೊಲಿಟಿಕಲ್ ರಿಲೇಶನ್ಶಿಪ್ ಇನ್ ಮೈಸೂರು ವಿಲೇಜ್, ನ್ಯೂಡೆಲ್ಲಿ: ಸ್ಟರ್ಲಿಂಗ್ ಪಬ್ಲಿಷರ್ಸ, ೧೯೭೧

[10] ಭಾರತ ಸರಕಾರ, ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು, ಪಾರ್ಟ್‌೬, ವಿಲೇಜ್ ಸರ್ವೇ ಮೊನೋಗ್ರಾಪ್ಸ್, ನಂ.೮ ಅರಳಮಲ್ಲಿಗೆ ವಿಲೇಜ್, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಡಿಸ್ಟ್ರಿಕ್ಟ್, ಡೆಲ್ಲಿ, ೧೯೬೭

[11] ಭಾರತ ಸರಕಾರ, ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು, ಪಾರ್ಟ್ ೬, ವಿಲೇಜ್ ಸರ್ವೇ ಮೊನೋಗ್ರಾಪ್ಸ್, ನಂ.೫, ನಂದಿಗುಡಿ ವಿಲೇಜ್, ಹರಿಹರ ತಾಲ್ಲೂಕು, ಚಿತ್ರದುರ್ಗ ಡಿಸ್ಟ್ರಿಕ್ಟ್, ೧೯೬೫

[12] ಭಾರತ ಸರಕಾರ, ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು, ಪಾರ್ಟ್ ೬, ವಿಲೇಜ್ ಸರ್ವೇ ಮೊನೋಗ್ರಾಪ್ಸ್, ನಂ.೯, ಕೆಳದಿ ವಿಲೇಜ್, ಸಾಗರ ತಾಲ್ಲೂಕು, ಶಿವಮೊಗ್ಗ ಡಿಸ್ಟ್ರಿಕ್ಟ್, ಡೆಲ್ಲಿ, ೧೯೬೬

[13] ಭಾರತ ಸರಕಾರ, ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು, ಪಾರ್ಟ್೬, ವಿಲೇಜ್ ಸರ್ವೇ ಮೊನೋಗ್ರಾಪ್ಸ್, ಕಮಲ್‌ನಗರ್, ಔರಾದ್ ತಾಲ್ಲೂಕು, ಬೀದರ್ ಡಿಸ್ಟ್ರಿಕ್ಟ್, ಡೆಲ್ಲಿ, ೧೯೬೬

[14] ಡಿ.ವಿ. ರಾಘವೇಂದ್ರ ರಾವ್, ಡೈಮೆನ್ಸ್ ಆಫ್ ಬೇಕ್ವರ್ಡ್ನೆಸ್ ಸ್ಟಡಿ ಎಟ್ ತಾಲ್ಲೂಕ್, ವಿಲೇಜ್ ಆಂಡ್ ಹೌಸ್ಹೋಲ್ಡ್ ಲೆವಲ್ಸ್ ಇನ್ ಕರ್ನಾಟಕ, ನ್ಯೂಡೆಲ್ಲಿ: ಕನ್‌ಸಪ್ಟ್ ಪಬ್ಲಿಷಿಂಗ್ ಕಂಪೆನಿ, ೧೯೮೧

[15] ಡಿ.ವಿ. ರಾಘವೇಂದ್ರ ರಾವ್, ಡೈಮೆನ್ಸ್ ಆಫ್ ಬೇಕ್ವರ್ಡ್ನೆಸ್, ಪು. ೮೯ – ೯೧

[16] ಎಂ.ಚಂದ್ರ ಪೂಜರಿ, ದೇಶಿತೆಯ ನೆರಳಲ್ಲಿ ವಿಕೇಂದ್ರೀಕರಣ, ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ೨೦೦೧

[17] ಎಂ.ಚಂದ್ರ ಪೂಜಾರಿ, ದೇಶಿತೆಯ ನೆರಳಲ್ಲಿ ವಿಕೇಂದ್ರೀಕರಣ, ಪು.೨೮೦

[18] ಎಮ್ ಎಸ್ ಶಶಿಕುಮಾರ್, ದಿ ರೋಲ್ ಆಫ್ ಸೋಶಿಯಲಾಜಿಕಲ್ ಫೇಕ್ಟರ್ಸ್ ಇನ್ ಎಗ್ರಿಕಲ್ಚರಲ್ ಎಂಟ್ರಪ್ರನರ್ ಶಿಪ್ ಇನ್ ಕರ್ನಾಟಕ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸದ ಅಪ್ರಕಟಿತ ಸಂಶೋಧನ ಪ್ರಬಂಧ, ೨೦೦೦

[19] ಉಪಾ ಶರ್ಮ, ಡಿಸ್‌ಪೊಶಿಸನ್ ಆಫ್ ಎಗ್ರಿಕಲ್ಚರಲ್ ಸರ್ಪ್ಲಸ್ – ಎ ಸ್ಟಡಿ ಆಫ್ ಹೈದರಾಬಾದ್ ಕರ್ನಾಟಕ ರೀಜನ್ ಇನ್ ಕರ್ನಾಟಕ ಸ್ಟೇಟ್, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಸಂಶೋಧನ ಪ್ರಬಂಧ, ೧೯೯೮

[20] ಉಷಾ ಶರ್ಮ, ಡಿಸ್‌ಪೊಶಿಸನ್ ಆಫ್ ಎಗ್ರಿಕಲ್ಚರಲ್ ಸರ್ಪ್ಲಸ್, ಪು.೯೬

[21] ಕರ್ನಾಟಕ ಸರಕಾರ, ಎಗ್ರಿಕಲ್ಚರಲ್ ಸೆನ್ಸಸ್ – ೨೦೦೫ – ೦೬, ಬೆಂಗಳೂರು: ಕೃಷಿ ಇಲಾಖೆ, ೨೦೦೬

[22] ಕರ್ನಾಟಕ ಸರಕಾರ, ಎಗ್ರಿಕಲ್ಚರಲ್ ಸೆನ್ಸಸ್ – ೨೦೦೫ – ೦೬, ಬೆಂಗಳೂರು: ಕೃಷಿ ಇಲಾಖೆ, ೨೦೦೬

[23] ಮನೋಹರ್ ಯಾದವ್, ಸೋಶಿಯೋ ಎಕಾನಮಿಕ್ ಸರ್ವೇ ಆಫ್ ಶೇಡ್ಯಲ್ಡ್ ಕಾಸ್ಟ್ಸ್ ಆಂಡ್ ಶೆಡ್ಯುಲ್ಡ್ ಟ್ರೃಬ್ಸ್ ಇನ್ ಕರ್ನಾಟಕ ಕ್ರಿಟಿಕಲ್ ಎನಾಲಿಸಿಸ್, ಬೆಂಗಳೂರು: ಇನ್‌ಸ್ಟಿಟ್ಯುಟ್ ಫಾರ್ ಸೋಶಿಯಲ್ ಆಂಡ್ ಎಕಾನಮಿಕ್ ಚೇಂಜ್, ೨೦೦೩

[24] ವೆಲೇರಿಯನ್ ರಾಡ್ರಿಗಸ್ ಮತ್ತು ಇತರರು, ದಲಿತ್ ಡೆವಲಪ್‌ಮೆಂಟ್ ಇಂಡೆಕ್ಸ್ ಯೋಜನೆಯ ಅಪ್ರಕಟಿತ ವರದಿ, ೨೦೦೯