ಮೂರು ಭುಸುಧಾರಣೆಗಳು ಜಾರಿಗೆ ಬಂದ ನಂತರವೂ ರಾಜ್ಯ ಕಟ್ಟಿಕೊಂಡಾಗ ಇದ್ದ ಭೂಮಿ ಸಂಬಂಧಗಳೂ ಮೂಲಭೂತವಾಗಿ ಬದಲಾಗಿಲ್ಲ. ಈ ವಿಫಲತೆಗೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಅವುಗಳನ್ನು ಒಂದೊಂದಾಗಿ ಪರಿಶೀಲಿಸೋಣ. ಒಂದೇ ಭಾಷೆ ಮಾತಾಡುವ ನಾವೆಲ್ಲ ಒಂದು ಕಡೆ ಸೇರಿದರೆ ನಮ್ಮೆಲ್ಲರ ಉದ್ದಾರ ಆಗುತ್ತದೆ ಎಂದು ಕನ್ನಡ ನಾಡನ್ನು ಕಟ್ಟಿಕೊಂಡೆವು. ಕನ್ನಡವನ್ನು ನಮ್ಮ ಆಡಳಿತ ಭಾಷ ಮಾಡಿಕೊಂಡವು. ಕನ್ನಡವನ್ನು ನಮ್ಮ ಶಿಕ್ಷಣದ ಭಾಷೆ ಮಾಡಿಕೊಂಡೆವು. ನಮ್ಮ ಕನ್ನಡನಾಡಿಗೊಂದು ಅನ್ವರ್ಥನಾಮ ಬೇಕೆಂದು ಕರ್ನಾಟಕವೆಂದು ಹೆಸರಿಟ್ಟುಕೊಂಡೆವು. ನಮ್ಮ ರಾಜ್ಯ ಎಲ್ಲಿಯವರೆಗೆ ಹಬ್ಬಿದೆ ಎಂದು ಗುರುತಿಸಲು ಗಡಿಗಳನ್ನು ಗುರುತಿಸಿಕೊಂಡೆವು. ನಮ್ಮ ಭಾಷೆಗೂ, ರಾಜ್ಯಕ್ಕೂ ದೊಡ್ಡ ಇತಿಹಾಸ ಬೇಕೆಂದು ಅದನ್ನೂ ಕಟ್ಟಿಕೊಂಡೆವು. ಇಷ್ಟೆಲ್ಲ ಮಾಡಿಕೊಂಡರೆ ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಯುತ್ತದೆ ಎಂದು ತಿಳಿದೆವು. ಆದರೆ ಆ ರೀತಿ ಆಗಲಿಲ್ಲ. ಭಾಷೆ, ಭಾಷೆಗೊಂದು ರಾಜ್ಯ ರಾಜ್ಯಕ್ಕೊಂದು ಹೆಸರು ಇತ್ಯಾದಿಗಳು ನಮ್ಮನೆಲ್ಲ ಒಂದು ಕಡೆ ಸೇರಿಸಲು ಸಫಲವಾದವು. ಒಂದು ಕಡೆ ಸೇರಿದ ನಾವೆಲ್ಲ ಒಟ್ಟಿಗಿರಲು, ಒಟ್ಟಾದ ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವ ಭಾವನೆ ಮೂಡಲು, ಮೂಡಿದ ಭಾವನೆ ಸತತ ಜೀವಂತ ಇರಲು ಇಷ್ಟು ಸಾಕಾಗುವುದಿಲ್ಲ ಎನ್ನುವ ಆಲೋಚನೆ ಬರಲೇ ಇಲ್ಲ. ಇವೆಲ್ಲ ಸಾಧ್ಯವಾಗಬೇಕಾದರೆ ಎಲ್ಲರಿಗೂ ಮೂರು ಹೊತ್ತಿನ ಊಟಕ್ಕೆ ತೊಂದರೆ ಯಾಗಬಾರದು, ಅವರವರ ತಲೆಮೇಲೆ ಅವರದ್ದೇ ಆದ ಸೂರೊಂದು ಬೇಕು ಮತ್ತು ಮುಂದೊಂದು ದಿನ ನಮಗೂ ಒಳ್ಳೆಯ ಕಾಲ ಬರಬಹುದೆನ್ನುವ ಕನಸು ಕಾಣುವ ವಾಸ್ತವಿಕ ಬದುಕು ಬೇಕು. ಇವೆಲ್ಲವು ಸಾಧ್ಯವಾಗಬೇಕಾದರೆ ದುಡಿದು ಗಳಿಸಬೇಕು. ಗಳಿಸಿದ್ದನ್ನು ಭವಿಷ್ಯದ ಬದುಕಿಗಾಗಿ ಜಿತ ಮಾಡಬೇಕು, ಜಿತ ಮಾಡಿದನ್ನು ಯುಕ್ತವಾಗಿ ಬಳಸಬೇಕು. ಈ ಎಲ್ಲವು ಸಾಧನೆಯಾಗಬೇಕಾದರೆ ಪ್ರತಿಯೊಬ್ಬರಿಗೂ ಕನಿಷ್ಠ ಭೂಮಿ ಬೇಕೆನ್ನುವ ಆಲೋಚನೆ ರಾಜ್ಯ ಕಟ್ಟಿಕೊಂಡ ಎರಡು ಮೂರು ದಶಕಗಳವರೆಗೂ ಬರಲೇ ಇಲ. ನಂತರ ಬಂತು. ಆವಾಗ ಕೂಡ ಆ ಆಲೋಚನೆ ತಳಸ್ತರದ ಜನರ ದುಸ್ತರವಾದ ಬದುಕು ನೋಡಿ ಕನ್ನಡದ ಹೃದಯ ಕರಗಿ ಬರಲಿಲ್ಲ. ಕೇಂದ್ರ ಸರಕಾರದ ಒತ್ತಡದಿಂದ ಬಂದಿದೆ. ಭಾಷೆಯ ನೆಲೆಯಲ್ಲಿ ರಾಜ್ಯ ಕಟ್ಟಿಕೊಳ್ಳುವಾಗ ಮತ್ತು ರಾಜ್ಯದ ವ್ಯಾಪ್ತಿಯೊಳಗೆ ಸೇರಬೇಕಾದ ಭೂಮಿಯನ್ನು ಗುರುತಿಸುವಾಗ ತೋರಿನ ಉತ್ಕಟತೆಯ ಒಂದಂಶವನ್ನು ರಾಜ್ಯದೊಳಗಿನ ಭೂಮಿಯನ್ನು ಗುರುತಿಸುವಾಗ ತೋರಿದ ಉತ್ಕಟತೆಯ ಒಂದಂಶವನ್ನು ರಾಜ್ಯದೊಳಗಿನ ಭೂಮಿಯನ್ನು ಭೂಮಿ ಇಲ್ಲದವರೊಂದಿಗೆ ಹಂಚಿಕೊಳ್ಳುವುದರಲ್ಲಿ ತೋರಿಸಲಿಲ್ಲ. ಹೊರಗಿನ ಒತ್ತಡದಿಂದ ಭೂಮಿ ಹಂಚುವುದು ಅನಿವಾರ್ಯವಾದ ಭೂಮಿ ಇದ್ದವರು ತಮ್ಮಬಳಿ ಇದ್ದ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಬಳಸಿ ಭೂರಹಿತರಿಗೆ ಭೂಮಿ ಹೋಗದಂತೆ ತಡೆದರು.

ದೊಡ್ಡ ಭೂಹಿಡುವಳಿದಾರರು ತಮ್ಮ ಹಿಡುವಳಿ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ಹಲವಾರು ತಂತ್ರಗಳನ್ನು ಬಳಸಿದ್ದರೆ. ಭೂದಾಖಲೆಗಳನ್ನು ತಿದ್ದುವುದು, ಬಲತ್ಕಾರವಾಗಿ ವಕ್ಕಲೆಬ್ಬಿಸುವುದು, ಮೌಖಿಕವಾಗಿ ಗೇಣಿಗೆ ನೀಡುವುದು, ಗೇಣಿದಾರರು ಗೇಣಿ ನೀಡಿರುವುದಕ್ಕೆ ದಾಖಲೆ ಕೊಡದಿರುವುದು, ತಪ್ಪು ಮಾಹಿತಿ ನೀಡುವುದು, ಅಧಿಕಾರಿಗಳಿಗೆ ಆಮೀಷ ಒಡ್ಡಿ ಕಾನೂನು ಜಾರಿಯಾಗದಂತೆ ನೋಡಿಕೊಳ್ಳುವುದು, ಸ್ಥಳೀಯ ಅಧಿಕಾರಿಗಳನ್ನು ಹೆದರಿಸಿಬೆದರಿಸಿ ತಮ್ಮ ಆಸಕ್ತಿಗನುಗುಣವಾಗಿ ನಡೆದುಕೊಳ್ಳುವಂತೆ ಮಾಡುವುದು, ಜಾತಿ / ಧರ್ಮ ಸಂಬಂಧವನ್ನು ಬಳಸಿ ತಮ್ಮ ಆಸಕ್ತಿಗೆ ವಿರುದ್ದವಾದ ಕ್ರಮ ಜರುಗಿಸಿದಂತೆ ಅಧಿಕಾರಶಾಹಿಯನ್ನು ತಡೆಯುವುದು ಇತ್ಯಾದಿ ಮಾರ್ಗಗಳ ಮೂಲಕ ದೊಡ್ಡಭೂಹಿಡುವಳಿದಾರರು ಭೂಸುಧಾರಣೆ ಕಾಯಿದೆಗಳು ಅವುಗಳ ಮೂಲ ಉದ್ದೇಶಕ್ಕನುಗುಣವಾಗಿ ಜಾರಿಗೆ ಬರದಂತೆ ನೋಡಿಕೊಂಡಿದ್ದಾರೆ ಎನ್ನುವ ವಾದ ಇದೆ.[1] ಈ ವಾದದಲ್ಲಿ ಸಾಕಷ್ಟು ಸತ್ಯಾಂಶವಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ದಾಖಲೆ ಮೂಲಕ ಗುತ್ತಿಗೆಗೆ ಭೂಮಿ ಕೊಡುವ ಪದ್ದತಿ ಇಲ್ಲ. ಮೌಖಿಕವಾಗಿ ಅಥವಾ ಬಾಯಿ ಮಾತಿನ ಮೂಲಕ ಗುತ್ತಿಗೆ ನೀಡುವ ಪದ್ದತಿ ಇದೆ. ಭೂಮಿ ಗುತ್ತಿಗೆ ಪಡೆಯುವಾಗಲೇ ದಾಖಲೆಗಳು ಇಲ್ಲದಿರುವಾಗ ಗೇಣಿ / ಗುತ್ತಿಗೆ ಪಡೆದಿರುವುದಕ್ಕೆ ಯಾವ ಭೂಮಾಲಿಕ ರಶೀದಿ ನೀಡುತ್ತಾನೆ. ಆದರೆ ಭೂಸುಧಾರಣ ಕಾನೂನುಗಳು ಯಾವುದೋ ಒಂದು ರೂಪದ ಸಾಕ್ಷಿ ಪುರಾವೆಗಳನ್ನು ಬಯಸುತ್ತದೆ. ಮತ್ತು ಬಹುತೇಕ ಸಂದರ್ಭಗಳಲ್ಲಿ ಬರಹರೂಪದ ದಾಖಲೆಗಳನ್ನು ಆಪೇಕ್ಷಿಸುತ್ತದೆ. ಇಂತಹ ಮೌಖಿಕ ಗೇಣಿಲೋಕದಲ್ಲಿ ವ್ಯವಹರಿಸುವ ಗೇಣಿದಾರ ಬರಹರೂಪದಲ್ಲಿ ದಾಖಲೆಗಳನ್ನು ಎಲ್ಲಿಂದ ತರುವುದು. ಗೇಣಿದಾರನಾಗಿರುವುದಕ್ಕೆ ಮತ್ತು ಕಾಲಕಾಲಕ್ಕೆ ಗೇಣಿ ಸಂದಾಯ ಮಾಡಿರುವುದಕ್ಕೆ ಸಾಕಷ್ಟು ದಾಖಲೆ ಇರುವ ಹಲವು ಕಡೆಗಳಲ್ಲಿ (ಕರಾವಳಿ ಕರ್ನಟಕ, ಮಲೆನಾಡು ಪ್ರದೇಶಗಳಲ್ಲಿ) ಗೇಣಿದಾರನ ಸ್ವಾಧೀನ ಭೂಮಿಯೇ ಇಲ್ಲವೆಂದು ಸಾಧಿಸಿದ ಹಲವಾರು ಉದಾಹರಣೆಗಳಿವೆ. ದಾಖಲೆಗಳು ಇದ್ದ ಕಡೆ ಗೇಣಿದಾರರ ಮತ್ತು ಭೂಮಾಲಿಕರ ನಡುವೆ ಭೂಮಿ ಪಡೆಯಲು ಸಾಕಷ್ಟು ಪೈಪೋಟಿ ನಡೆದಿದೆ. ಹಲವು ಕಡೆಗಳಲ್ಲಿ ವಕ್ಕಲೆಬ್ಬಿಸಲು ಭೂಮಾಲಿಕರು ಖಾಸಗಿ ಬಂಟರ ಸೇವೆ ಪಡೆದಿದ್ದಾರೆ.

ವಕ್ಕಲೆಬ್ಬಿಸುವ ಖಾಸಗಿ ಬಂಟರು ಹಲವು ಕಡೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.[2] ಗೇಣಿಗೆ ಬೇಸಾಯ ಮಾಡುತ್ತಿರುವ ಭೂಮಿಯನ್ನು ಬಿಟ್ಟು ಹೋಗಲು ಮೊದಲು ಗೇಣಿದಾರನನ್ನು ಮೌಖಿಕವಾಗಿ ಎಚ್ಚರಿಸಲಾಗುವುದು. ಮೌಖಿಕ ಎಚ್ಚರಿಕೆಗೆ ಬೆದರದಿದ್ದರೆ ಕೈಕಾಲು ಮುರಿದು ಪಾಠ ಕಲಿಸಲಾಗುವುದು. ಆವಾಗಲೂ ಜಾಗ ಖಾಲಿ ಮಾಡದಿದ್ದರೆ ಅಂತಿಮ ಆಪರೇಶನ್ ಮಾಡಲಾಗುವುದು. ರಾತ್ರೋರಾತ್ರಿ ಗೇಣಿದಾರನನ್ನು ಆತನ ಸಾಮಾನು ಸರಂಜಾಮುಗಳ ಜತೆಗೆ ಲಾರಿಯಲ್ಲಿ ತುಂಬಿ ದೂರದ ಊರಿಗೆ ಎತ್ತಂಗಡಿ ಮಾಡಲಾಗುವುದು. ರಾತ್ರಿ ಬೆಳಗಾಗುವುದರೊಳಗೆ ಗೇಣಿದಾರರು ವಾಸಿಸುತ್ತಿದ್ದ ಮನೆ ನೆಲಸಮಗೊಂಡು ಅಡಿಕೆ ತೋಟವಾಗುತ್ತದೆ, ತೆಂಗಿನ ತೋಟವಾಗುತ್ತದೆ ಅಥವಾ ಆಗತಾನೇ ನಾಟಿ ಮಾಡಿದ ಭತ್ತದ ಗದ್ದೆಯಾಗುತ್ತದೆ. ಗೇಣಿದಾರನ ಸ್ವಾಧೀನ ಆತನ ಮನೆ, ಕೃಷಿ ಮಾಡುತ್ತಿದ್ದ ಭೂಮಿಯೇ ಇಲ್ಲವೆಂದ ಮೇಲೆ ದಾಖಲೆಗಳನ್ನು ಕಟ್ಟಿಕೊಂಡು ಏನು ಮಾಡುವುದು. ದೊಡ್ಡ ಹಿಡುವಳಿದರರು ಗರಿಷ್ಠಮಿತಿಯ ಲೆಕ್ಕಚಾರದೊಳಗಿದ್ದುಕೊಂಡೇ ಎಲ್ಲಭೂಮಿಯನ್ನು ತಮ್ಮ ಸ್ವಾಧಿನದಲ್ಲೇ ಇರಿಸಿಕೊಳ್ಳಲು ಹಲವಾರು ತಂತ್ರಗಳನ್ನು ಹೊಡಿದ್ದಾರೆ. ಕುಟುಂಬದ ಎಲ್ಲ ಸದಸ್ಯರಲ್ಲಿ ಹೆಸರಲ್ಲಿ ಭೂಮಿಯನ್ನು ಪಾಲುಪಟ್ಟಿ ಮಾಡಿ ನೋಂದಾಯಿಸುವುದು ಒಂದು ಸಾಮಾನ್ಯ ಕ್ರಮ. ಭೂಮಿಯನ್ನು ತಮ್ಮ ಗೇಣಿದಾರರ ಹೆಸರಲ್ಲಿ ನೋಂದಾಯಿಸುವುದು ಮತ್ತೊಂದು ಕ್ರಮ. ನೋಂದಾಯಿತ ಭೂಮಿ ದಾಖಲೆ ಪ್ರಕಾರ ಗೇಣಿದಾರರ ಹೆಸರಲ್ಲಿರುತ್ತದೆ. ಆದರೆ ಎಲ್ಲ ಭೂದಾಖಲೆಗಳೂ ಮತ್ತು ಭೂಮಿ ಭೂಮಾಲಿಕರ ಸ್ವಾಧೀನ ಇರುತ್ತದೆ. ಗೇಣಿದಾರರು ಎಂದಿನಂತೆ ದುಡಿದು ತಮ್ಮ ಪಾಲಿಗೆ ಬಂದ ಉತ್ಪನ್ನದಲ್ಲಿ ತೃಪ್ತರಾಗಬೇಕು. ಕಾಲಕಾಲ್ಕಕೆ ಭೂದಾಖಲೆಗಳ ಪರಿಶೀಲನೆ ನಮ್ಮಲ್ಲಿ ನಡೆಯುವುದಿಲ್ಲ. ಭೂಮಾಲಿಕ ಸರಕಾರದ ಒಂದೊಂದು ಇಲಾಖೆಗೆ ಒಂದೊಂದು ದಾಖಲೆ ಒದಗಿಸುತ್ತಾನೆ.[3] ಬ್ಯಾಂಕ್ ಅಥವಾ ಸೊಸೈಟಿಯಿಂದ ಸಾಲ ಪಡೆಯಲು ಸ್ವಾಧೀನ ಇರುವ ಭೂಮಿಯ ಒಂದು ಲೆಕ್ಕಚಾರ. ಭೂ ಕಂದಾಯ ಕಟ್ಟುವಾಗ ಮತ್ತೊಂದು ಲೆಕ್ಕಚಾರ. ಲೇವಾದೇವಿ ವ್ಯವಹರಕ್ಕೆ ಮಗದೊಂದು ಲೆಕ್ಕಚಾರ. ಹೆಣ್ಣುಕೊಡುವಾಗ ಅಥವಾ ತರುವಾಗ ಸಂಪೂರ್ಣ ಬೇರೆ ಲೆಕ್ಕಚಾರ. ಹೀಗೆ ದಾಖಲೆಯನ್ನು ಬಳಸುವರ ಯೋಗ್ಯತೆಗೆ ಅನುಸಾರ ಭೂಹಿಡುವಳಿ ಸ್ಥಳೀಯ ಅಧಿಕಾರಿಗಳ ನೇರ ಅಥವಾ ಪರೋಕ್ಷ ಪಾಲುಗೊಳ್ಳುವಿಕೆಯಿಂದ ನಡೆಯುತ್ತಿರುತ್ತದೆ. ಭೂಸುಧಾರಣ ಕಾಯಿದೆಗಳ ವಿಫಲತೆಯನ್ನು ಸಂಪೂರ್ಣವಾಗಿ ಮೇಲಿನ ಕಾರಣಗಳು ವಿವರಿಸುವುದಿಲ್ಲ. ಒಂದು ವೇಳೆ ಮೇಲಿನ ಕಾರಣಗಳೇ ಎಲ್ಲವನ್ನು ನಿರ್ಧಾರಿಸುವುದೆಂದು ನಂಬಿದರೆ ನಮ್ಮಲ್ಲೊಂದು ಸರಕಾರ ಇದೆ ಎನ್ನುವುದನ್ನು ಮೊದಲಿಗೆ ಅಲ್ಲಗೆಳೆಯ ಬೇಕಾಗುತ್ತದೆ. ಎರಡನೇಯದಾಗಿ ಅದರಲ್ಲಿ ನ್ಯಾಯಾಂಗ, ಆಡಳಿತಾಂಗ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವ್ಯವಸ್ಥೆ ಇತ್ಯಾದಿಗಳೂ ಕಾರ್ಯನಿರ್ವಹಿಸುವುದನ್ನು ಅಲ್ಲಗಳೆಯಬೇಕಾಗುತ್ತದೆ. ಮೇಲೆ ವಿವರಿಸಿದ ಅಂಶಗಳು ರೋಗದ ಲಕ್ಷಣವನ್ನು ವಿವರಿಸುತ್ತವೆ ಹೊರತು ರೋಗದ ಕಾರಣಗಳನ್ನು ಅವು ಪತ್ತೆ ಹಚ್ಚುವುದಿಲ್ಲ. ಭೂಸುಧಾರಣ ಕಾಯಿದೆಗಳು ವಿಫಲವಾಗುತ್ತವೆ ಅಥವಾ ಅವುಗಳ ಮೂಲ ಉದ್ದೇಶಗಳಿಗನುಗುಣವಾಗಿ ಜಾರಿಗೆ ಬಾರದಿರಲು ಕಾರಣಗಳನ್ನು ಪ್ರಭುತ್ವ, ಅದರ ಸ್ವರೂಪ, ಅದು ಸಾಮಾಜದ ವಿವಿಧ ವರ್ಗಗಳ ಆಸಕ್ತಿಗಳನ್ನು ಪ್ರತಿನಿಧಿಕರಿಸುವ ಸಾಧ್ಯತೆ ಇತ್ಯಾದಿಗಳಲ್ಲಿ ಹುಡುಕಬೇಕಾಗಿದೆ. ಯಾಕೆಂದರೆ ಮೇಲಿನ ಎಲ್ಲ ಮಸೂದೆಗಳನ್ನು ಪ್ರಭೂತ್ವ (ಕೇಂದ್ರ ಮತ್ತು ರಾಜ್ಯ) ರೂಪಿಸಿ ಕಾರ್ಯರೂಪಕ್ಕೆ ತಂದಿದೆ. ಪ್ರಭುತ್ವ ಮತ್ತು ಸರಕಾರ ಎನ್ನುವ ಪದಗಳನ್ನು ಏಕ ಅರ್ಥದಲ್ಲಿ ಬಳಸುತ್ತಿದ್ದೇನೆ. ಪ್ರಭೂತ್ವ (ಸರಕಾರ)ವನ್ನು ಒಂದು ದೊಡ್ಡ ಸಾರ್ವಜನಿಕ ಸಂಸ್ಥೆಯ ರೂಪದಲ್ಲಿ ನೋಡಬಹುದು. ಎಲ್ಲ ಸಂಸ್ಥೆಗಳ ಮೂಲ ಲಕ್ಷಣ ಇಂತಿವೆ. ತನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲರು ನಿರ್ದಿಷ್ಟ ನೀತಿನಿಯಮಾನುಸಾರ ಕಾರ್ಯನಿರ್ವಹಿಸುವಂತ ಸಂಸ್ಥೆ ಸದಸ್ಯರ ಮೇಲೆ ಒತ್ತಡ ಹೇರುತ್ತದೆ.[4] ಅಂದ ಹಾಗೆ ಇದೊಂದು ಆಯ್ಕೆಯೇ ಇಲ್ಲದ ಸ್ಥಿತಿಯಲ್ಲ. ಆದರೆ ಇದೊಂದು ನಿರ್ಬಂಧಿತ ಆಯ್ಕೆಯ ಸ್ಥಿತಿ. ಸಂಸ್ಥೆ ರೂಪುಗೊಳ್ಳುವ ಮತ್ತು ಕಾರ್ಯನಿರ್ವಹಿಸುವುದರ ಬಗ್ಗೆ ಎರಡು ನಿಲುವುಗಳು ಚಾಲ್ತಿಯಲ್ಲಿವೆ. ಮೊದಲನೇ ನಿಲುವು ಸಂಸ್ಥೆಯನ್ನು ಸಮಾಜದ ಆರ್ಥಿಕ ಹಾಗೂ ರಾಜಕೀಯ, ಅದರಲ್ಲೂ ಬಲಾಢ್ಯರ, ಆಸಕ್ತಿಗಳನ್ನು ಪ್ರತಿನಿಧಿಕರಿಸುವ ರೂಪದಲ್ಲಿ ನೋಡುತ್ತದೆ.[5] ಸಮಾಜದ ಬಲಾಢ್ಯರ ಆಸಕ್ತಿಗಳನ್ನು ಸಂಸ್ಥೆ ಪ್ರತಿಬಿಂಬಿಸುತ್ತದೆ ಎನ್ನುವ ಚಿತ್ರಣ ಇದು. ಮತ್ತೊಂದು ದೃಷ್ಟಿಕೋನ ಸಂಸ್ಥೆಗೆ ಸ್ವತಂತ್ರ ಅಸ್ತಿತ್ವವನ್ನು ನೀಡುತ್ತದೆ. ಇದರನುಸಾರ ಸಮಾಜದ ಬಲಾಢ್ಯರು ಸಂಸ್ಥೆಗಳನ್ನು ರುಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ ನಿಜ. ಹಾಗೆಂದು ಒಮ್ಮೆ ರೂಪಿತವಾದ ಸಂಸ್ಥೆ ಎಲ್ಲ ಸಂದರ್ಭಗಳಲ್ಲೂ ಬಲಾಢ್ಯರ ಹಿತಾಸಕ್ತಿಗಳಿಗೆ ಪೂರಕವಾದ ಕೆಲಸಕಾರ್ಯಗಳನ್ನೇ ಮಾಡುತ್ತದೆ ಎನ್ನುವುದು ಸರಿಯಲ್ಲ. ಹಲವು ಬಾರಿ ಇದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದು ಮತ್ತು ಇಂತಹ ಕಾರ್ಯಗಳು ಬಲಾಢ್ಯರ ಹಿತಾಸಕ್ತಿಗಳಿಗೆ ವಿರುದ್ದವೂ ಇರಬಹುದು.[6] ಈ ಎರಡು ದೃಷ್ಟಿಕೋನದಿಂದ ರಾಜ್ಯ ಸರಕಾರ ಜಾರಿಗೆ ತಂದ ಭೂಸುಧಾರಣೆಗಳನ್ನು ನೋಡೋಣ.

ನಮ್ಮಲ್ಲಿ ವರ್ಗ ರಾಜಕೀಯ ಇಲ್ಲ. ಇಡೀ ಸಮಾಜ ಹಲವು ಜಾತಿಗಳಾಗಿ ಒಡೆದು ಹೋಗಿದೆ. ಉದ್ದಿಮೆಗಳ ಬಂಡವಾಳಿಗರು ಮತ್ತು ಕೃಷಿ ಬಂಡವಾಳಿಗರು ಒಂದಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಯಾವುದೋ ಒಂದು ವರ್ಗ ಪ್ರಭೂತ್ವವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಅಸಕ್ತಿಗನುಗುಣವಾಗಿ ನಡೆಸಲು ಸಾಧ್ಯವಿಲ್ಲ. ಅದುದರಿಂದ ನಮ್ಮಲ್ಲಿ ಪ್ರಭೂತ್ವ / ಸರಕಾರ ತಕ್ಕಮಟ್ಟಿನ ಸ್ವಾಯತ್ತತೆಯನ್ನು ಹೊಂದಿದೆ ಎನ್ನುವ ಪದ ಇದೆ. ಈ ಬಗೆಯ ಸ್ವಾಯತ್ತತೆಯನ್ನು ಕೆಲವರು ಕೇಂದ್ರ ಸರಕಾರಗಳಲ್ಲಿ ಮಾತ್ರ ನೋಡಿದರೆ ಮತ್ತೆ ಕೆಲವರು ರಾಜ್ಯ ಸರಕಾರಗಳಲ್ಲಿ ಮಾತ್ರ ಕಾಣುತ್ತಾರೆ. ಮತ್ತೆ ಕೆಲವರು ರಾಜ್ಯ ಸರಕಾರಗಳಿಗೆ ಒಂದು ಬಗೆಯ ನಿರ್ಬಂಧಿತ ಸ್ವಾಯತ್ತತೆ ಇದೆ ಯೆಂದು ವಾದಿಸುತ್ತಾರೆ.[7] ಸ್ವಾಯತ್ತತೆಯ ಕೊರತೆಯನ್ನು ಪ್ರತಿಪಾದಿಸುವವರು ನಮ್ಮಲ್ಲಿನ ರಾಜಕೀಯ ಪಕ್ಷಗಳು ಮತ್ತು ಅವುಗಳ ವಿವಿಧ ಜಾತಿಗಳ ಬಲಾಢ್ಯರ ಆಸಕ್ತಿಗಳನ್ನು ಪ್ರತಿನಿಧಿಸುವುದು, ದಿನೇ ದಿನೇ ಬಲಗೊಳ್ಳುತ್ತಿರುವ ಕೋಮುವಾದ, ದೊಡ್ಡ ಕೃಷಿಕರು ಮತ್ತು ಉದ್ದಿಮೆ ಬಂಡವಾಳಿಗಳು ತಮ್ಮ ತಮ್ಮ ಪಾಲಿಗಾಗಿ ಸರಕಾರದ ಮೇಲೆ ಒತ್ತಡ ಹೇರುವುದು ಇತ್ಯದಿಗಳೂ ಸ್ವಾಯತ್ತ ಸರಕಾರದ ಕಲ್ಪನೆಯನ್ನು ಪ್ರಶ್ನಿಸುತ್ತಿವೆ ಎನ್ನುತ್ತಾರೆ. ೧೯೭೨ರ ವರೆಗಿನ ಕರ್ನಾಟಕ ಸರಕಾರವನ್ನು ರಾಜ್ಯದ ಕೆಲವೊಂದು ಸಮುದಾಯಗಳ ಬಲಾಢ್ಯರ ಆಸಕ್ತಿಗಳನ್ನು ಪ್ರತಿನಿಧಿಸುವ ಸಂಸ್ಥೆಯ ರೂಪದಲ್ಲಿ ನೋಡಲಾಗಿದೆ. ತಿಮ್ಮಯ್ಯ ಮತ್ತು ಅಜೀಜ್ ಅವರು ಇನಾಂ ರದ್ದತಿ ಮಸೂದೆ ಮತ್ತು ೧೯೬೧ರ ಕಾಯಿದೆಗಳ ವಿಫಲತೆ ಮತ್ತು ೧೯೭೪ರ ಕಾಯಿದೆಯ ಸಫಲತೆಯನ್ನು ಬಲಾಢ್ಯ ಆಸಕ್ತಿಗಳನ್ನು ಪ್ರತಿನಿಧಿಸುವ ಪ್ರಭುತ್ವದ ದೃಷ್ಟಿಯಿಂದ ನೋಡಿದ್ದಾರೆ.[8] ೧೯೪೮ರಿಂದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಬಲಾಢ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ ಸದಸ್ಯರಾಗಿದ್ದರು. ಜತೆಗೆ ಅವರುಗಳಲ್ಲಿ ಹೆಚ್ಚಿನವರು ಕೃಷಿ ಹಿನ್ನೆಲೆಯಿಂದ ಬಂದವರು. ಇನಾಂ ರದ್ದತಿಯಿಂದ ಲಿಂಗಾಯತ ಹಾಗೂ ಒಕ್ಕಲಿಗ ಭೂಮಾಲಿಕರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಇತ್ತು. ಬಹುತೇಕ ಇನಾಂ ಭೂಮಿಗಳೂ ಬ್ರಾಹ್ಮಣರ ಸ್ವಾಧೀನ ಇದ್ದವು. ಅವರುಗಳೂ ರಾಜಕೀಯವಾಗಿ ಬಲಹೀನರಾಗಿದ್ದರು. ಆದರೆ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಶಾಹಿಯಲ್ಲಿದ್ದರು. ಆದುದರಿಂದ ಇನಾಂ ರದ್ದತಿ ಕಾಯಿದೆ ಅನುಷ್ಠಾನಕ್ಕೆ ಬರುವುದನ್ನು ಸುಮಾರು ಏಳೆಂಟು ವರ್ಷ ತಡೆದರು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

೧೯೬೧ರ ಭೂಸುಧಾರಣ ಕಾಯಿದೆ ರೂಪುಗೊಂಡು ಜಾರಿಗೆ ಬರಬೇಕಾದರೆ ಹೆಚ್ಚು ಕಡಿಮೆ ಏಳೆಂಟು ವರ್ಷ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಬಲಾಢ್ಯರು ವಿಧಾನಸಭಾ ಸದಸ್ಯರಾಗಿದ್ದರು. ದೊಡ್ಡ ಸಂಖ್ಯೆಯಲ್ಲಿದ್ದರು. ೧೯೫೨ರಲ್ಲಿ ಶೇ. ೬೧ರಷ್ಟು, ೧೯೬೨ರಲ್ಲಿ ಶೆ. ೬೧ರಷ್ಟು ಮತ್ತು ೧೯೭೨ರಲ್ಲಿ ಶೇ. ೬೩ ರಷ್ಟು ವಿಧಾನಸಭಾ ಸದಸ್ಯರು ಈ ಎರಡು ಸಮುದಾಯಗಳಿಂದ ಬಂದಿದ್ದಾರೆ. ೧೯೭೨ರ ವಿಧಾನಸಭಾ ಸದಸ್ಯರಲ್ಲಿ ಶೇ. ೫೬ರಷ್ಟು ಸದಸ್ಯರು ಕೃಷಿ ಹಿನ್ನೆಲೆಯಿಂದ ಬಂದವರು. ಹಾಗೆಂದು ಸಣ್ಣಪುಟ್ಟ ಕೃಷಿಕರಲ್ಲ; ದೊಡ್ಡ ಪ್ರಮಾಣದ ಕೃಷಿಕರೇ ಆಗಿದ್ದರು. ಭೂಮಾಲಿಕರು ಹೊಂದಬಹುದಾದ ಗರಿಷ್ಠಮಿತಿಯನ್ನು ತಮ್ಮ ಆಸಕ್ತಿಗೆ ಪೂರಕವಾಗಿ ತುಂಬಾ ಉದಾರವಾಗಿ ನಿಗದಿಪಡಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಗೇಣಿ ಪ್ರಮಾಣವನ್ನು ಕೆಲವೊಂದು ಪ್ರದೇಶಗಳಲ್ಲಿ ಹಿಂದೆ ಇದ್ದುದಕ್ಕಿಂತ ಸ್ವಲ್ಪ ಕಡಿಮೆ ಗೊಳಿಸಲು, ವಕ್ಕಲೆಬ್ಬಿಸುವುದರ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಲು ಈ ಸದಸ್ಯರು ಹೇಗೆ ಅವಕಾಶ ಮಾಡಿಕೊಟ್ಟರು ಎನ್ನುವ ಪ್ರಶ್ನೆ ಲೇಖಕರನ್ನು ಕಾಡುತ್ತದೆ.[9] ಹಲವು ಬ್ರಾಹ್ಮಣ ಭೂಮಾಲಿಕರು ತಮ್ಮ ಭೂಮಿಯನ್ನು ಗೇಣಿಗೆ ಕೊಟ್ಟು ಪೇಟೆ ಪಟ್ಟಣಗಳಲ್ಲಿ ಉದ್ಯೋಗದಲ್ಲಿರುತ್ತಿದ್ದರು. ಇಂತಹ ಗೈರು ಮಾಲಿಕರ ಭೂಮಿಯನ್ನು ಗೇಣಿಗೆ ಕೃಷಿ ಮಾಡುವವರಲ್ಲಿ ಲಿಂಗಯತರ ಮತ್ತು ಒಕ್ಕಲಿಗರ ಭೂಮಾಲಿಕರಿದ್ದರು. ಇವರುಗಳ ಆಸಕ್ತಿಗಳನ್ನು ರಕ್ಷಿಸುವುದು ತಮ್ಮ ಮತಕ್ಷೇತ್ರಗಳನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಅನಿವಾರ್ಯವಾಗಿತ್ತು ಎಂದು ಲೇಖಕರು ವಾದಿಸುತ್ತಾರೆ. ೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಬಲಾಢ್ಯ ಸಮುದಾಯಗಳಿಂದ ಸಣ್ಣ ಸಂಖ್ಯೆಯಲ್ಲಿರುವ ಮತ್ತು ದೊಡ್ಡ ಭೂಮಿ ಇಲ್ಲದ ಹಿಂದುಳಿದ ಸಮುದಾಯಗಳ ಕೈಗೆ ಹೋಯಿತು. ಈ ನಾಯಕತ್ವ ಹೆಚ್ಚು ಸಂಖ್ಯೆಯಲ್ಲಿ ಹಿಂದುಳಿದ ಜಾತಿಗಳೂ, ದಲಿತರು ಮತ್ತು ಬುಡಕಟ್ಟು ಹಿನ್ನೆಲೆಯಿಂದ ವಿಧಾನ ಸಭಾ ಸದಸ್ಯರುಗಳು ಆಯ್ಕೆ ಆಗುವಂತೆ ನೋಡಿಕೊಂಡಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯೋಜನಾ ಸಮಿತಿ ಬಿಗಿಯಾದ ಭೂಸುಧಾರಣ ಕಾನೂನು ತರುವ ಮತ್ತು ಕಾನೂನನ್ನು ಕಟ್ಟುನಿಟ್ಟಾಗಿ ಆಚರಣೆ ತರುವುದರ ಮೇಲೆ ಗಮನಹರಿಸಿದೆ. ಹೊಸ ನಾಯಕತ್ವ ೧೯೬೧ರ ಭೂಸುಧಾರಣ ಮಸೂದೆಯನ್ನು ತಿದ್ದುಪಡಿ ಮಾಡಲು ಕ್ರಮವಹಿಸಿತು ಮತ್ತು ಹೆಚ್ಚು ಬಿಗಿಯಾದ ಕಾಯಿದೆಯನ್ನು ೧೯೭೪ರಲ್ಲಿ ಜಾರಿಗೆ ತಂದಿದೆ ಎಂದು ಲೇಖಕರು ವಾದಿಸುತ್ತಾರೆ.[10]

ಜೇಮ್ಸ್ ಮೇನರ್ ಕೂಡ ಮೇಲಿನದೇ ಅರ್ಥ ಬರುವ ವಾದ ಮಂಡಿಸುತ್ತಾರೆ. ೧೯೭೨ವರೆಗೆ ರಾಜ್ಯದ ರಾಜಕೀಯ ಈ ಎರಡು ಭೂಮಾಲಿಕ (ಒಕ್ಕಲಿಗ ಮತ್ತು ಲಿಂಗಾಯತ) ಸಮುದಾಯಗಳ ಹಿಡಿತದಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಅವರು ಉಳಿದ ಸಮುದಾಯಗಳಿಂದ ಹೆಚ್ಚು ಸಂಘಟಿತರಾಗಿದ್ದರು ಮತ್ತು ಅವರಲ್ಲಿ ಹೆಚ್ಚು ಜನ ಆಧುನಿಕ ಶಿಕ್ಷಣ ಪಡೆದವರು ಇದ್ದರು. ಅವರಲ್ಲಿ ಸಂಖ್ಯಾಬಲ ಕೂಡ ಇತ್ತು ಇದರಿಂದಾಗಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಟೀಕೆಟನ್ನು ಈ ಸಮುದಾಯದವರಿಗೆ ನೀಡುತ್ತಿತ್ತು. ಆದುದರಿಂದ ರಾಜಕೀಯ ಪಕ್ಷ ಮತ್ತು ಬಲಾಢ್ಯ ಸಮುದಾಯಗಳ ನಡುವಿನ ಸಂಬಂಧ ೧೯೭೨ ರವರೆಗೆ ಸ್ಪಷ್ಟವಾಗಿತ್ತು.[11] ಆದರೆ ೧೯೭೨ರಲ್ಲಿ ದೇವರಾಜು ಅರಸು ಕಾಂಗ್ರೆಸ್ ಪಕ್ಷದ ನಾಯಕರಾಗುವುದರೊಂದಿಗೆ ರಾಜ್ಯ ರಾಜಕೀಯ ಬದಲಾಯಿತು. ರಾಜಕೀಯ ಪಕ್ಷ ಮತ್ತು ಬಲಾಢ್ಯ ಸಮುದಾಯಗಳ ನಡುವಿನ ಸಂಬಂಧ ಮಸುಕಾಗುತ್ತಾ ಬಂತು. ಯಾಕೆಂದರ ಅರಸು ಅವರು ತನ್ನ ಮುಖ್ಯ ಬೆಂಬಲಿಗರಾಗಿ ಹಿಂದುಳಿದ ವರ್ಗದ ಸಣ್ಣಪುಟ್ಟ ಜಾತಿಗಳೂ, ದಲಿತರು ಮತ್ತು ಬುಡಕಟ್ಟು ಜನರನ್ನು ಬೆಳೆಸಿದರು. ಇದು ೧೯೭೮ರ ಚುನಾವಣೆಯಲ್ಲಿ ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಜನತಾಪಕ್ಷ ಗೆದ್ದಿದೆ. ರಾಜ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಜನತಾಪಕ್ಷವನ್ನು ಬೆಂಬಲಿಸಿದ್ದಾರೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದಕ್ಕೆ ಕಾರಣ ರಾಜ್ಯದ ಹಿಂದುಳಿದ ಜಾತಿಗಳು ದಲಿತರು ಮತ್ತು ಬುಡಕಟ್ಟು ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದೆಂದು ಜೇಮ್ಸ್ ಮೇನರ್ ವಾದಿಸುತ್ತಾರೆ.[12] ರಾಜಕೀಯ ಪಕ್ಷ ಹಾಗೂ ವಿವಿಧ ಸಮುದಾಯಗಳ ನಡುವಿನ ಸಂಬಂಧ ಗುಂಡುರಾವ್ ಕಾಲದಲ್ಲಿ ಇನ್ನೂ ಮಸುಕಾಯಿತೆಂದು ಮೇನರ್ ವಾದಿಸುತ್ತಾರೆ. ಇದು ಯಾಕೆಂದರೆ ಒಂದು ಕಡೆಯಿಂದ ಅರಸು ಜತೆಗಿದ ಕಾಂಗ್ರಸ್ ಶಾಸಕರು ಗುಂಡೂರಾವ್ ಜತೆ ಸೇರಿದರೆ ಮತ್ತೊಂದು ಕಡೆಯಿಂದ ಕಾಂಗ್ರೆಸೇತರ ಪಕ್ಷಗಳಿಂದಲೂ ಶಾಸಕರು ಗುಂಡೂರಾವ್ ನೇತೃತ್ವದ ಪಕ್ಷ ಸೇರಿದ್ದಾರೆ. ಎರಡು ವಾಕ್ಯ ಕಚೇರಿ ನಿರ್ದೇಶನ ನೆಟ್ಟಗೆ ಬರೆಯಲು ಬಾರದ ಗುಂಡೂರಾವ್ ಹಲವಾರು ಖಾತೆಗಳನ್ನು ತಮ್ಮ ವಶ ಇಟ್ಟುಕೊಂಡಿದ್ದರು. ತಾನು ಹೈಕಮಾಂಡಿನಿಂದ ನೇಮಕಗೊಂಡ ಮುಖ್ಯ ಮಂತ್ರಿ. ಎಲ್ಲಿಯವರೆಗೆ ತನಗೆ ಹೈಕಮಂಡಿನ ರಕ್ಷಣ ಇರುತ್ತದೋ ಅಲ್ಲಿಯ ತನಕ ತಾನು ಮುಖ್ಯ ಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುವುದನ್ನು ಗುಂಡೂರಾವ್ ಬಲವಾಗಿ ಸಂಬಿದ್ದರು. ಆದುದರಿಂದ ಸ್ಥಳೀಯ ಸಮುದಾಯಗಳನ್ನು ಒಲೈಸಲು ಗುಂಡೂರಾವ್ ಹೋಗಲಿಲ್ಲ. ನೌಕರಶಾಹಿಗೆ ದೊಡ್ಡ ಮಟ್ಟಿನ ಸ್ವಾತಂತ್ರ್ಯ ಕೊಟ್ಟರು . ಬಲಗೊಂಡ ನೌಕರಶಾಹಿ ಗುಂಡೂರಾವ್ ಬಿಟ್ಟರೆ ಬೇರೆ ಶಾಸಕರು ಮತ್ತು ಮರಿಪುಡಾರಿಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಬಹುತೇಕ ಶಾಸಕರು ತಮ್ಮ ಕ್ಷೇತ್ರದ ಕೆಲಸಗಳನ್ನು ನೌಕರಶಾಹಿಯನ್ನು ಹೆದರಿಸಿ ಬೆದರಿಸಿ ಮಾಡಿಸುತ್ತಿದ್ದರು. ಇದರಿಂದಾಗಿ ಊರಿನ ಜನರಿಗೆ ಶಾಸಕರೆ ಸರಕಾರ. ಯಾವಾಗ ಈ ಸಂಬಂಧ ಮುರಿದುಬಿತ್ತೋ ಅವಾಗ ಸರಕಾರ ಮತ್ತು ಸಮುದಾಯಗಳ ನಡುವಿನ ಸಂಬಂಧ ಕೂಡ ಮಸುಕಾಯಿತೆಂದು ಮೇನರ್ ವಾದಿಸುತ್ತಾರೆ.[13] ಗುಂಡೂರಾವ್ ನಂತರ ಕರ್ನಾಟಕದಲ್ಲಿ ಬಲಾಢ್ಯ ಸಮುದಾಯದ ಸದಸ್ಯತ್ವ ರಾಜಕೀಯದ ದೃಷ್ಟಿಯಿಂದ ಒಂದು ಆಸ್ತಿಯೆಂದು ಪರಿಗಣಿತವಾಗುವ ಬದಲು ಹೊರೆಯೆಂದು ಪರಿಗಣಿತವಾಗಲು ಶುರುವಾಯಿತೆಂದು ಮೇನರ್ ವಾದಿಸುತ್ತಾರೆ. ಆದುದರಿಂದಲೇ ಜನತಾಪಕ್ಷದ ನಾಯಕತ್ವವನ್ನು ರಾಮಕೃಷ್ಣ ಹೆಗ್ಡೆ ಪಡೆಯಲು ಸಾಧ್ಯವಾಯಿತೆನ್ನುವುದು ಮೇನರ್ ವಾದ.

ಬಲಾಢ್ಯ ಸಮುದಾಯಗಳು ಮತ್ತು ಅವರಿಗೆ ಸರಕಾರದ ಮೇಲಿರುವ ಪ್ರಭಾವ ಕುರಿತಂತೆ ಮೇನರ್ ಮೇಲಿನ ವಿಚಾರಗಳಿಗೆ ಸೀಮಿತಗೊಳಿಸುವುದಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ಬಲಾಢ್ಯ ಸಮುದಾಯಗಳು ಹಿಂದಿನಂತೆ ರಾಜ್ಯ ರಾಜಕೀಯವನ್ನು ಹತೋಟಿಗೆ ತೆಗೆದುಕೊಳ್ಳುಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇಂತಹ ಸ್ಥಿತಿಗೆ ಮುಖ್ಯ ಕಾರಣ, ಮೇನರ್ ಪ್ರಕಾರ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಂದ ದೊಡ್ಡ ಸಂಖ್ಯೆಯ ಕೆ.ಎ.ಎಸ್. ಅಧಿಕಾರಿಗಳು ಇಲ್ಲದಿರುವುದು, ರಾಮಕೃಷ್ಣ ಹೆಗ್ಡೆಯ ಸರಕಾರ ಮಂತ್ರಿ ಸ್ಥಾನದ ಬದಲು ಹಲವಾರು ಬೋರ್ಡ್, ಸಮಿತಿಗಳಲ್ಲಿ ಸಣ್ಣಪುಟ್ಟ ಸ್ಥಾನಕೊಟ್ಟು ಸುಮ್ಮನಿರಿಸಿದ್ದು ಮತ್ತು ಜನತಾಪಕ್ಷದಲ್ಲಿ ಮೂರನೇ ಒಂದಕ್ಕಿಂತಲೂ ಕಡಮೆ ಸಂಖ್ಯೆ ಬಲಾಢ್ಯ ಸಮುದಾಯದ ಶಾಸಕರಿರುವುದು. ೧೯೭೨ರ ಹಿಂದಿನ ಸ್ಥಿತಗೆ ಬಲಾಢ್ಯ ಸಮುದಾಯಗಳೂ ಹೋಗಬೇಕಾದರೆ ಸರಕಾರಿ ನೌಕರರ ಆಯ್ಕೆಯ ನಿಯಮವನ್ನು ಸಂಪೂರ್ಣ ತಿದ್ದುಪಡಿ ಮಾಡಬೇಕು. ಇದನ್ನು ಹಿಂದುಳಿದ ವರ್ಗಕ್ಕೆ ಸೇರಿದವುರ ಖಂಡಿತವಾಗಿಯೂ ಪ್ರತಿಭಟಿಸುತ್ತಾರೆ. ಹಿಂದುಳಿದ ಜಾತಿಗಳ ಪ್ರತಿಭಟನೆಯನ್ನು ಎರಡೂ ಬಲಾಢ್ಯ ಸಮುದಾಯಗಳ ನಾಯಕರು ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಹಿಂದುಳಿದ ಜಾತಿಗಳ ಬೆಂಬಲವಿಲ್ಲದೆ ಅವರ್ಯಾರು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.[14] ಎಂ. ಎನ್. ಶ್ರೀನಿವಾಸ್ ಮತ್ತು ಪಾನಿನಿ ಇದೇ ಬಗೆಯ ವಾದವನ್ನು ಸ್ವಲ್ಪ ಬೇರೆ ರೂಪದಲ್ಲಿ ಮುಂದೂಡುತ್ತಾರೆ.[15] ಅವರ ಪ್ರಕರ ಕರ್ನಾಟಕ ಒಂದು ರಾಜ್ಯವಾಗಿ ತನ್ನದೇ ಛಾಪು ಮೂಡಿಸಿಲ್ಲ. ರಾಜ್ಯ ರಾಜಕೀಯ ಕೂಡ ರಾಷ್ಟ್ರೀಯ ರಾಜಕೀಯಕ್ಕಿಂತ ಪ್ರತ್ಯೇಕವಾಗಿ ತನ್ನದೇ ಪಕ್ಷ, ಸಿದ್ದಾಂತಗಳನ್ನು ಬೆಳೆಸಿಕೊಂಡಿಲ್ಲ. ರಾಜ್ಯ ರಾಜಕೀಯ ರಾಷ್ಟ್ರೀಯ ರಾಜಕೀಯದ ಒಂದು ಭಾಗವಾಗಿ ಕೆಲಸ ಮಾಡುತ್ತಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜಾತಿಗಳ ಬಲಾಬಲಗಳ ಮೇಲೆ ಚುನಾವಣ ಟಿಕೇಟು ನೀಡುತ್ತಿತ್ತು. ೧೯೭೨ರ ವರಗೆ ಕಾಂಗ್ರೆಸ್ ಪಕ್ಷ ಸ್ಥಳೀಯ ಬಲಾಢ್ಯ ಸಮುದಾಯಗಳಿಗೆ ಮಹತ್ವ ನೀಡಿದೆ. ಯಾವಾಗ ಸ್ಥಳೀಯ ಬಲಾಢ್ಯ ಸಮುದಾಯಗಳ ನಾಯಕರು ರಾಷ್ಟ್ರೀಯ ನಾಯಕರೊಂದಿಗೆ ಸ್ಪರ್ಧೆಗೆ ಇಳಿದರೋ ಅಂದಿನಿಂದ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಬಲಾಢ್ಯ ಸಮುದಾಯಗಳನ್ನು ಅಂಚಿಗೆ ತಳ್ಳಿ ಅಂಚಿನದಲ್ಲಿರುವ ಸಣ್ಣಪುಟ್ಟ ಸಮುದಾಯಗಳನ್ನು ರಾಜ್ಯ ರಾಜಕೀಯದ ಮುಂಚೂಣಿಗೆ ತಂದಿದೆ.[16]

ಇದಕ್ಕೆ ನಿಜಲಿಂಗಪ್ಪ ಮತ್ತು ದೇವರಾಜ ಅರಸು ಇವರು ಉತ್ತಮ ಉದಾಹರಣೆ ನಿಜಲಿಂಗಪ್ಪನವರು ಲಿಂಗಾಯತರ ಪ್ರಶ್ನಾತೀತ ನಾಯಕ. ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ನಂತರವೂ ತನ್ನದೇ ಸಮುದಾಯದ ಅಭ್ಯರ್ಥಿಯನ್ನು ಮುಖ್ಯ ಮಂತ್ರಿ ಮಾಡುವಷ್ಟು ರಾಜ್ಯ ರಾಜಕೀಯದಲ್ಲಿ ಅಧಿಕಾರ ಹೊಂದಿದ್ದರು. ೧೯೬೯ರಲ್ಲಿ ಇಂದಿರಾಗಾಂಧಿ ಮತ್ತು ನಿಜಲಿಂಗಪ್ಪನವರ ನಡುವೆ ಭಿನ್ನಾಭಿಪ್ರಾಯಗಳು ಬಂದವು. ನಿಜಲಿಂಗಪ್ಪನವರು ಇಂದಿರಾ ಕಾಂಗ್ರೆಸ್ ತೊರೆದು ಕಾಂಗ್ರೆಸ್ (ಓ) ಪಕ್ಷ ಸ್ಥಾಪಿಸಿದರು. ರಾಜ್ಯದ ಬಹುತೇಕ ಶಾಸಕರು ನಿಜಲಿಂಗಪ್ಪನವರ ಜತೆ ಉಳಿದರು. ಆದರೆ ದೇವರಾಜ ಅರಸ್ ಇಂದಿರಾ ಗಾಂಧಿ ಕಡೆ ಹೋದರು. ಇಂದಿರಾ ಗಾಂಧಿಗೂ ರಾಜ್ಯದ ಸಣ್ಣಪುಟ್ಟ ಸಮುದಾಯಗಳಿಂದ ಬಂದ ನಾಯಕರುಗಳು ಬೇಕಾಗಿದ್ದರು. ಯಾಕೆಂದರೆ ಸಣ್ಣಪುಟ್ಟ ಸಮುದಾಯಗಳಿಂದ ಬಂದ ನಾಯಕರುಗಳು ಇಂದಿರಾ ಗಾಂಧಿಯ ಅಧಿಪತ್ಯವನ್ನು ಪ್ರಶ್ನಿಸಲು ಸಾಧ್ಯವಿರಲಿಲ್ಲ ಈ ಬಗೆಯಲ್ಲಿ ಅಧಿಕಾರಕ್ಕೆ ಬಂದ ಅರಸು ಅವರು ತನ್ನ ಸ್ಥಾನವನ್ನು ಭದ್ರಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಜಾತಿಗಳೂ, ದಲಿತರು ಮತ್ತು ಬುಡಕಟ್ಟು ಅಭ್ಯರ್ಥಿಗಳಿಗೆ ಟಿಕೇಟು ನೀಡಿದರು. ಹಿಂದುಳಿದ ವರ್ಗಗಳ ಕಮಿಶನ್‌ಗೆ ಹಾವನೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಹಿಂದುಳಿದ ಜಾತಿ ಜನರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ತಂದರು. ೧೯೬೧ರ ಭೂಸುಧಾರಣ ಮಸೂದೆಗೆ ತಿದ್ದುಪಡಿ ತಂದು ೧೯೭೪ರ ಭೂಸುಧಾರಣ ಮಸೂದೆ ತಂದರು. ಈ ಮಸೂದೆಯ ಅನುಷ್ಠಾನದಿಂದ ಉಳುವವರು ಹೊಲದ ಒಡೆಯರಾದರು.೧೬

ಈ ಎಲ್ಲ ಪುರಾವೆಗಳು ಒಂದು ವಿಷಯದ ಕಡೆ ಬೊಟ್ಟು ಮಾಡುತ್ತವೆ. ಅದೇನೆಂದರೆ ೧೯೭೨ರವರೆಗೆ ನಮ್ಮ ರಾಜ್ಯ ಸರಕಾರ ಸಂಪೂರ್ಣವಾಗಿ ಸ್ಥಳೀಯ ಬಲಾಢ್ಯ ಸಮುದಾಯಗಳ ಹಿಡಿತದಲ್ಲಿತ್ತು. ಆವಾಗಿ ಜಾರಿಗೆ ಬಂದ ೧೯೬೧ರ ಭೂಸುಧಾರಣ ಕಾಯಿದೆ ಪರಿಣಾಮಕಾರಿಯಾಗಿರಲಿಲ್ಲ. ೧೯೭೨ರ ನಂತರ ಹಲವಾರು ಕಾರಣಗಳಿಂದಾಗಿ ಬಲಾಢ್ಯ ಸಮುದಾಯಗಳು ರಾಜ್ಯ ಸರಕಾರದ ಮೇಲೆ ತಮ್ಮ ಹಿಡತ ಕಳೆದುಕೊಂಡವು. ರಾಜ್ಯದ ರಾಜಕೀಯ ಅಧಿಕಾರ ಸಣ್ಣಪುಟ್ಟ ಹಿಂದುಳಿದ ಜಾತಿಗಳ ಹಿಡಿತಕ್ಕೆ ಹೋಯಿತು. ಆ ಸಂದರ್ಭದಲ್ಲಿ ೧೯೭೪ರ ಕಾಯಿದೆ ಜಾರಿಗೆ ಬಂದಿದೆ. ಅದುದರಿಂದ ೧೯೭೪ರ ಭೂಸುಧಾರಣ ಕಾಯಿದೆ ೧೯೬೧ರ ಕಾಯಿದೆಗೆ ಹೋಲಿಸಿದರೆ ಹೆಚ್ಚು ಬಿಗಿಯಾಗಿತ್ತು ಮತ್ತು ಪರಿಣಾಮಕಾರಿಯಾಗಿ ಜಾರಿಗೊಂಡಿದೆ. ಸರಕಾರ/ ಪ್ರಭುತ್ವ ತಕ್ಕಮಟ್ಟಿನ ಸ್ವಾಯತ್ತತೆಯನ್ನು ಪಡೆದ ಸಂದರ್ಭದಲ್ಲಿ ಮಾತ್ರ ಭೂಸುಧಾರಣೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಸರಕಾರ ಸ್ಥಳೀಯ ಬಲಾಢ್ಯರ ಹಿಡಿತದಲ್ಲಿರುವಾಗ ಭೂಸುಧಾರಣೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಎನ್ನುವ ತಾತ್ಪರ್ಯ ಇದೆ. ಅತುಲ್ ಕೋಹ್ಲಿ ಕೂಡ ಹೆಚ್ಚು ಕಡಿಮೆ ಇದೇ ಬಗೆಯ ವಾದವನ್ನು ಮುಂದಿಡುತ್ತಾರೆ.[17] ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಉತ್ತರಪ್ರದೇಶ ಈ ಊರು ರಾಜ್ಯಗಳ ಭೂಸುಧಾರಣೆಗಳನ್ನು ತುಲನಾತ್ಮಕ ಅಧ್ಯಯನ ಮಾಡಿ ಕೊಹ್ಲಿ ಭೂಸುಧಾರಣೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ ಸರಕಾರ(ರಿಜೀಮ್) ಈ ಕೆಳಗಿನ ಗುಣಗಳನ್ನು ಹೊಂದಿರಬೇಕೆಂದು ಅಭಿಪ್ರಾಯಪಡುತ್ತಾರೆ. ಉತ್ತಮ ನಾಯಕತ್ವ, ದೊಡ್ಡ ಭೂಹಿಡುವಳಿದಾರರನ್ನು ಅಧಿಕಾರದಿಂದ ದೂರ ಇಡುವುದು, ಉದ್ದಿಮೆದಾರರ ಬೆಳವಣಿಗೆಯನ್ನು ಪರಿಗಣಿಸುವುದು, ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ ಗುಣಗಳನ್ನು ಏಕಕಾಲದಲ್ಲಿ ಹೊಂದಿರುವ ಸಂಘಟನೆ ಇತ್ಯಾದಿ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಪಶ್ಚಿಮ ಬಂಗಾಳ ಈ ಎಲ್ಲ ಗುಣಗಳನ್ನು ಹೊಂದಿತ್ತು. ಆದುದರಿಂದ ಅಲ್ಲಿ ಭೂಸುಧಾರಣೆ ಹೆಚ್ಚು ಪರಿಣಾಮಕಾರಿಯಗಿ ನಡೆದಿದೆ. ಕರ್ನಾಟಕದಲ್ಲಿನ ಅರಸರ ಕಾಂಗ್ರೆಸ್ ಪಕ್ಷ ಕೆಲವು ಗುಣಗಳನ್ನು ಹೊಂದಿತ್ತು. ಆದರೆ ಅದು ಸಂಪೂರ್ಣವಾಗಿ ದೊಡ್ಡ ಹಿಡುವಳಿದಾರರ ಹಿಡಿತದಿಂದ ಹೊರಬಂದಿರಲಿಲ್ಲ. ಜತೆಗೆ ಅದರ ಪಕ್ಷ ಹಾಗೂ ಸಂಘಟನೆ ಮೇಲಿಂದ ಕೆಳಗೆ ಇಳಿಯುವ ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿತ್ತು. ಜನರ ಪಾತ್ರ ಮೇಲಿಂದ ಇಳಿದು ಬರುವ ಅಭಿವೃದ್ದಿ ಲಾಭಗಳನ್ನು ಪಡೆಯುವುದು ಮಾತ್ರ. ಜನರಿಗೆ ಒಂದು ಕ್ರಿಯಾಶೀಲ ಪಾತ್ರ ಇರಲಿಲ್ಲ. ಆದುದರಿಂದ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಭೂಸುಧಾರಣೆ ಪರಿಣಾಮಕಾರಿಯಾಗಿ ನಡೆದಿಲ್ಲ. ಆದರೆ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದ ಭೂಸುಧಾರಣೆ ಹೆಚ್ಚು ಪರಿಣಾಮಕಾರಿಯೆಂದು ಕೊಹ್ಲಿ ವಾದಿಸುತ್ತಾರೆ. ಯಾಕೆಂದರೆ ಉತ್ತರ ಪ್ರದೇಶದ ಸರಕಾರ ಮೇಲೆ ಗುರುತಿಸಿದ ಯಾವುದೇ ಗುಣಲಕ್ಷಣಗಳನ್ನು ಹೊಂದಿರಲಿಲ್ಲ

ಸರಕಾರ ತಕ್ಕಮಟ್ಟಿನ ಸ್ವಾಯತ್ತತೆಯನ್ನು ಪಡೆದಾಗ ಮಾತ್ರ ಅದು ಸಮಾಜದ ತಳಸ್ತರದ ಬಗ್ಗೆ ಕಾಳಜಿ ವಹಿಸಬಹುದೆನ್ನುವುದು ಮೇಲೆ ಚರ್ಚಿಸಿದ ವಾದಗಳ ತಾತ್ಪರ್ಯ. ಈ ತೀರ್ಮಾನ ಹಲವಾರು ಸಂದೇಹಗಳಿಗೆ ಎಡೆಮಾಡಿಕೊಡುತ್ತದೆ. ಒಂದು, ೧೯೬೧ರ ಕಾಯಿದೆಗೆ ಹೋಲಿಸದರೆ ೧೯೭೪ರ ಕಾಯಿದೆ ಹೆಚ್ಚು ಬಿಗಿಯಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎನ್ನುವ ನಿಲುವು. ಆದರೆ ೧೯೭೪ರ ಕಾಯಿದೆ ಕೂಡ ಹಲವಾರು ವಿಚಾರಗಳಲ್ಲಿ ಸೋತಿದೆ. ಈ ಸೋಲನ್ನು ಹೇಗೆ ವಿವರಸುವುದು? ಎರಡು, ೧೯೭೨ರ ವರೆಗೆ ಕಾಂಗ್ರೆಸ್ ಪಕ್ಷ ಬಲಾಢ್ಯರ ಹಿಡಿತದಲ್ಲಿತ್ತು. ಎಪ್ಪತ್ತರ ನಂತರ ನಿಧಾನವಾಗಿ ಪಕ್ಷದ ನಾಯಕತ್ವ ಹಿಂದುಳಿದ ವರ್ಗಗಳ ಹಿಡಿತಕ್ಕೆ ಹೋಯಿತು. ಆದುದರಿಂದ ೧೯೭೪ರ ಕಾಯಿದೆ ಹೆಚ್ಚು ಪರಿಣಾಮಕರಿಯಾಗಿ ಅನುಷ್ಠಾನಗೊಂಡಿದೆ ಎನ್ನುವ ವಾದ. ಈ ವಾದ ಸರಿ ಎಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಹೋಗುವ ಅಥವಾ ಆಗಾಗ ಬದಲಾಗುವ ನಾಯಕತ್ವವನ್ನು ಹೊರತುಪಡಿಸಿದ ಗುಣಲಕ್ಷಣಗಳಿಲ್ಲವೇ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಮೂರು. ದ೧೯೭೨ರ ವರೆಗೆ ಬಲಾಢ್ಯರ ಹಿಡಿತ ರಾಜ್ಯ ರಾಜಕೀಯದ ಮೇಲೆ ಇತ್ತು ನಂತರ ಅದು ಕಡಿಮೆ ಆಗಿದೆ ಎನ್ನುವ ಗ್ರಹಿಕೆ ಕೂಡ ಮೇಲಿನ ತೀರ್ಮಾನದ ಆಧಾರ ಸ್ತಂಭಗಳಲ್ಲಿ ಒಂದು. ೧೯೭೨ ನಂತರವೂ ರಾಜ್ಯದ ಬಲಾಢ್ಯ ಸಮುದಾಯಗಳು ರಾಜ್ಯ ರಾಜಕೀಯದ ಮೇಲೆ ನಿರ್ಣಾಯಕ ಪ್ರಭಾವ ಹೊಂದಿದ್ದಾರೆಂದು ತೋರಿಸುವ ಅಧ್ಯಯನಗಳಿವೆ. ಈ ಅಧ್ಯಯನಗಳ ತೀರ್ಮಾನ ಸರಿ ಎಂದಾದರೆ ಅರಸು ಸಂದರ್ಭದಲ್ಲಿ ನಡೆದ ಭೂಸುಧಾರಣೆಯನ್ನು ಬಲಾಢ್ಯರ ಗೈರು ಹಾಜರಿಯಲ್ಲಿ ನಡೆದ ಸಾಧನೆ ಎನ್ನುವುದ ಎಷ್ಟು ಸರಿ? ನಾಲ್ಕು, ರಾಜ್ಯ ರಾಜಕೀಯದ ಸ್ವಾಯತ್ತತೆಯ ಚರ್ಚೆಯಲ್ಲಿ ಎಷ್ಟೋ ಬಾರಿ ಸ್ಥಳೀಯ ಸಮುದಾಯಗಳ ಪ್ರಭಾವವೇ ಹೆಚ್ಚು ಜಾಗವನ್ನು ಆಕ್ರಮಿಸಿದೆ. ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪಕ್ಷಗಳು ರಾಜ್ಯ ಸರಕಾರ ಮತ್ತು ಪ್ರಾದೇಶಿಕ ಪಕ್ಷಗಳ ಮೇಲೆ ಹೇರುವ ನಿರ್ಬಂಧಗಳು ಸ್ವಾಯತ್ತತೆ ಚರ್ಚೆಯಲ್ಲಿ ವಿಶೇಷ ಪಾತ್ರ ವಹಿಸಿಲ್ಲ. ಎಷ್ಟೋ ಬಾರಿ ರಾಜ್ಯ ರಾಜಕೀಯ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪಕ್ಷಗಳು ಕೊಡಮಾಡುವ ಚೌಕಟ್ಟಿನೊಳಗೆ ತಮ್ಮ ಸ್ವಾಯತ್ತತೆಯನ್ನು ಪ್ರಕಟಪಡಿಸಲು ಒದ್ದಾಡಬೇಕಾಗುತ್ತದೆ. ಇಂತಹ ಪರಿಸರ ಕೂಡ ಭೂಸುಧಾರಣೆಯನ್ನು ಪ್ರಭಾವಿಸಿರಬಹುದಲ್ಲವೇ? ಐದು, ಹಲವು ಬಾರಿ ಸ್ಥಳೀಯ ರಾಜಕೀಯದ ವಿಫಲತೆಯನ್ನು ಬಲಾಢ್ಯ ಸಮುದಾಯಗಳ ಪ್ರಭಾವದ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದರೆ ಸ್ಥಳೀಯ ಸಫಲತೆಯನ್ನು (ಭೂಸುಧಾರಣೆಯನ್ನು ಸೇರಿಸಿಕೊಂಡು) ಶುದ್ಧ ರಾಜಕೀಯದ ದೃಷ್ಟಿಯಿಂದ ನೋಡಲಾಗಿದೆ. ಇದು ಎಷ್ಟು ಸರಿ? ರಾಜ್ಯ ರಾಜಕೀಯದಲ್ಲಿನ ಸಫಲತೆಯನ್ನು ಯಾಕೆ ಸ್ಥಳೀಯ ತಳಸ್ತರದ ಜನರ ಪ್ರಭಾವದಿಂದ ಆದುದೆಂದು ತಿಳಿಯಬಾರದು? ಇದನ್ನೇ ಇನ್ನೊಂದು ವಿಧದಲ್ಲಿ ಕೇಳೂವುದಾದರೆ ತಳಸ್ತರ ತನ್ನ ಆಸಕ್ತಿಗಳ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲವೇ? ಎಂದು ಕೇಳಬಹುದು. ಈ ಎಲ್ಲ ಪ್ರಶ್ನೆಗಳನ್ನು ಒಂದೊಂದಾಗಿ ಪರಿಶೀಲಿಸುವ.

[1] ಭೂಸುಧಾರಣೆ ವಿಮರ್ಶತ್ಮಾಕ ಲೇಖನಗಲ್ಲಿ ಈ ಕುರಿತ ಮಾಹಿತಿ ಲಭ್ಯ ಸಿ.ಬಿ. ದಾಮ್ಲೆ, ಇಂಪ್ಯಾಕ್ಟ್ ಆಫ್ ಟೆನೆನ್ಸಿ ಲೇಜಿಸ್ಲೇಷನ್ ಆಂಡ್ ಚೇಂಜಿಂಗ್ ಅಗ್ರೇರಿಯನ್ ರಿಲೇಶನ್ಸ್ – ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್, ಕರ್ನಾಟಕ, ಸೋಶಿಯಲ್ ಸೈಂಟಿಸ್ಟ್, ೧೭ (೧೧ / ೧೨), ನವೆಂಬರ್, ಡಿಸೆಂಬರ್, ೧೯೮೯, ಪು. ೮೩ – ೯೭, ಬಿ.ಬಿ. ಮೊಹಾತಮತಿ, ಲ್ಯಾಂಡ್ ಡಿಸ್ಟ್ರಿಬ್ಯುಶನ್ ಅಮಂಗ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಟ್ರೈಬ್ಸ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೬ (೪೦), ಆಕ್ಟೋಬರ್ ೨೦೦೧, ಪು. ೩೮೫೭ – ೬೮.

[2] ಎಸ್. ಎಕ್ಸ್. ಜೇಮ್ಸ್ ಮೆಲ್ಚೊಯರ್, ಇಂಪ್ಲಿಮೆಂಟೇಶನ್ ಆಫ್ ಲ್ಯಾಂಡ್ ರಿಫೋರ್ಮ್ಸ್ – ಪ್ರಾಬ್ಲೆಮ್ಸ್ ಆಂಡ್ ಪ್ರೊಸ್ಟೆಕ್ಟ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೧೪, ೧೮, ಮೇ ೧೯೭೯, ಪು. ೭೯೯ – ೮೦೧

[3] ಚಂದ್ರ ಪೂಜಾರಿ, ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವುಗಳು, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ೨೦೦೪

[4] ನಾರ್ಥ್ ಡಿ, ಇನ್‌ಸ್ಟಿಟ್ಯುಶನ್ಸ್, ಇನ್ಸ್ಟಿಟ್ಯುಶನಲ್ ಚೇಂಜ್ ಆಂಡ್ ಎಕಾನಮಿಕ್ ಪರ್ಫೋಮೆನ್ಸ್, ನ್ಯೂಯಾರ್ಕ್: ಕೇಂಬ್ರಿಡ್ಜ್ ಯುನಿರ್ವಸಿಟಿ ಪ್ರೆಸ್, ೧೯೯೦

[5] ಇವರನ್ನು ಹಳೇ ಇನ್‌ಸ್ಟಿಟ್ಯುಶನಲಿಸ್ಟ್ ಎಂದು ಕರೆಯುತ್ತಾರೆ. ಇವರ ಪ್ರಕಾರ ಸಂಸ್ಥೆ ಸಮಾಜದ ಎಲ್ಲ ಗುಣಲಕ್ಷಣಗಳನ್ನು ಪ್ರತಿನಿಧಿಕರಿಸುತ್ತದೆ. ವಿವರಗಳಿಗೆ ಅರ್ಥರ್ ಸ್ಟಿಂಕೊಂಬ್, ಆನ್ ದಿ ವರ್ಚ್ಯು ಆಫ ಓಲ್ಡ್ ಇನ್‌ಸ್ಟಿಟ್ಯುಶನಲಿಸಂ, ಆನ್ಯುಯಲ್ ರಿವ್ಯೂ ಆಪ್ ಸೋಶಿಯಲಾಜಿ, ೨೩, ೧೯೯೭, ಪು. ೧ – ೧೮ ಲೇಖನವನ್ನು ನೋಡಬಹುದು.

[6] ಇಂತಹ ವಾದ ಮಂಡಿಸುವವರನ್ನು ಹೊಸ ಇನ್ ಸ್ಟಿಟ್ಯುಶನಲಿಸ್ಟ್ ಎಂದು ಕರೆಯುತ್ತಾರೆ. ವಿವರಗಳಿಗೆ ಅನಿಲ್ ಹಿರಾ ಅಂಡ್ ರೋನ್ ಹಿರಾ, ದಿ ನ್ಯೂ ಇನ್‌‌ಸ್ಟಿಟ್ಯುಶನಲಿಸಂ – ಕಾಂಟ್ರಡಿಕ್ಟರಿ ನೋಶನ್ಸ್ ಆಫ್ ಚೇಂಜ್, ಅಮೇರಿಕನ್ ಜರ್ನಲ್ ಆಫ್ ಎಕಾನಮಿಕ್ಸ್ ಆಂಡ್ ಸೋಶಿಯಲಾಜಿ, ೫೯ (೨), ಏಪ್ರೀಲ್ ೨೦೦೦, ಪು. ೨೬೭ – ೮೨ ಲೇಖವನ್ನು ನೋಡಬಹುದು.

[7] ಲಾಯ್ಸ್ ರುಡಾಲ್ಟ್ ಆಂಡ್ ಸುಸಾನೆ ರುಡಾಲ್ಟ್, ಇವರು ಕೇಂದ್ರ ಸರಕಾರಕ್ಕೆ ಹಲವಾರು ಕಾರಣಗಳಿಂದ ತಕ್ಕಮಟ್ಟಿ ಸ್ವಾಯತ್ತೆ ಇದೆಯೆಂದು ವಾದಿಸುತ್ತಾರೆ. ವಿವರಗಳಿಗೆ ಇವರ ಪುಸ್ತಕ ಇನ್ ಪರ್ಶೂಟ್ ಆಫ್ ಅಕ್ಷ್ಮಿದಿ ಪೊಲಿಟಿಕಲ್ ಎಕಾನಮಿ ಆಫ್ ಇಂಡಿಯನ್ ಸ್ಟೇಟ್, ಚಿಕಾಗೋ: ಕೇಂಬ್ರಿಡ್ಜ್ ಯುನಿರ್ವಸಿಟಿ ಪ್ರೆಸ್, ೧೯೮೭ ನೋಡಬಹುದು. ಅತುಲ್ ಕೊಹ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಇದೆಯೆಂದು ವಾದಿಸುತ್ತಾರೆ. ವಿವರಗಳಿಗೆ, ದಿ ಸ್ಟೇಟ್ ಆಂಡ್ ಫಾವರ್ಟಿ ಇನ್ ಇಂಡಿಯಾದಿ ಪೊಲಿಟಿಕ್ಸ್ ಆಫ್ ರಿಫಾರ್ಮ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುವಿರ್ವಸಿಟಿ ಪ್ರೆಸ್, ೧೯೮೭ ಪುಸ್ತಕ ನೋಡಬಹುದು. ರೊನಾಲ್ಡ್ ಹೆರಿಂಗ್ ನಿರ್ಬಂಧಿತ ಸ್ವಾಯತ್ತತೆ ಬಗ್ಗೆ ಮಾತಾಡುತ್ತಾನೆ. ವಿವರಗಳಿಗೆ, ಲ್ಯಾಂಡ್ ಟು ಟಿಲ್ಲರ್ದಿ ಪೊಲಿಟಿಕಲ್ ಎಕಾನಮಿ ಆಫ್ ಅಗ್ರೇರಿಯನ್ ರಿಫಾರ್ಮ್ ಇನ್ ಸೌತ್ ಏಶಿಯಾ, ನ್ಯೂ ಹೆವನ್: ಯೇಲ್ ಯುನಿರ್ವಸಿಟಿ ಪ್ರೆಸ್, ೧೯೮೩ ಪುಸ್ತಕ ನೋಡಬಹುದು.

[8] ಜಿ.ತಿಮ್ಮಯ್ಯ ಮತ್ತು ಆಬ್ದುಲ್ ಅಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲ್ಯಾಂಡ್ ರಿಫಾರ್ಮ್ಸ್ ಇನ್ ಕರ್ನಾಟಕ, ಎ ಸೌತ್ ಇಂಡಿಯನ್ ಸ್ಟೇಟ್, ಏಶಿಯನ್ ಸರ್ವೇ, ೨೩ (೭), ಜುಲೈ ೧೯೮೩, ಪು. ೮೧೦ – ೨೯.

[9] ಜಿ.ತಮ್ಮಯ್ಯ ಮತ್ತು ಆಬ್ದುಲ್ ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲ್ಯಾಂಡ್ ರಿಫಾರ್ಮ್ಸ್, ಪು. ೮೧೦ – ೨೯.

[10] ಜಿ.ತಮ್ಮಯ್ಯ ಮತ್ತು ಆಬ್ದುಲ್ ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲ್ಯಾಂಡ್ ರಿಫಾರ್ಮ್ಸ್, ಪು. ೮೧೦ – ೨೯.

[11] ಜೇಮ್ಸ್ ಮೇನರ್, “ಪ್ರಗ್‌ಮೆಟಿಕ್ ಪ್ರೋಗ್ರೆಸಿವ್ ಇನ್ ರೀಜನಲ್ ಪೊಲಿಟಿಕ್ಸ್ – ದಿ ಕೇಸ್ ಆಫ್ ದೇವರಾಜ ಆರಸ್,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ. ೧೫ (೫, ೬, ೭), ಫೆಬ್ರವರಿ ೧೯೮೦, ಪು. ೨೦೧ -೨೧೩.

[12] ಜೇಮ್ಸ್ ಮ್ಯಾನರ್, “ಬ್ಲರಿಂಗ್ ದಿ ಲೈಲ್ನ್ ಬಿಟ್ವೀನ್ ಪಾರ್ಟೀಸ್ ಆಂಡ್ ಸೋಶಿಯಲ್ ಬೇಸಸ್ – ಗುಂಡೂರಾವ್ ಆಂಡ್ ಎಮರ್ಜನ್ಸ್ ಆಫ್ ಎ ಜನತಾ ಗವರ್ನ್‌ಮೆಂಟ್ ಇನ್ ಕರ್ನಾಟಕ,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೧೯, (೩೭), ಸೆಪ್ಟಂಬರ್ ೧೯೮೪, ಪು. ೧೬೨೩ – ೩೨.

[13] ಜೇಮ್ಸ್ ಮ್ಯಾನರ್, “ಬ್ಲರಿಂಗ್ ದಿ ಲೈನ್ಸ್ ಬಿಟ್ವೀನ್ ಪಾರ್ಟೀಸ್ ಆಂಡ್ ಸೋಶಿಯಲ್ ಬೇಸಸ್, ಪು. ೧೬೨೩ – ೩೨.

[14] ಎಂ. ಎನ್. ಶ್ರೀನಿವಾಸ್ ಮತ್ತು ಎಮ್. ಎನ್. ಪಾಣಿನಿ, ಪೊಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೧೯(೨), ಜನವರಿ ೧೯೮೪, ಪು. ೬೯ – ೭೫.

[15] ಎಂ. ಎನ್. ಶ್ರೀನಿವಾಸ್ ಮತ್ತು ಎಮ್. ಎನ್. ಪಾಣಿನಿ, ಪೊಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ, ಪು. ೬೯ – ೭೫.

[16] ಎಂ. ಎನ್. ಶ್ರೀನಿವಾಸ್ ಮತ್ತು ಎಮ್.ಎನ್. ಪಾನಿನಿ, ಪೊಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ, ಪು ೬೯ – ೭೫.

೧೬ ಎಂ. ಎನ್. ಶ್ರೀನಿವಾಸ್ ಮತ್ತು ಎಮ್.ಎನ್. ಪಾನಿನಿ, ಪೊಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ, ಪು ೬೯ – ೭೫.

[17] ಅತುಲ್ ಕೊಹ್ಲಿ, ದಿ ಸ್ಟೇಟ್ ಆಂಡ್ ಫಾವರ್ಟಿ ಇನ್ ಇಂಡಿಯಾದಿ ಪೊಲಿಟಿಕ್ಸ್ ಅಫ್ ರಿಫೋರ್ಮ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೮೭