೧೯೬೧ರ ಭೂಸುಧಾರಣ ಕಾಯಿದೆಗೆ ಹೋಲಿಸಿದರೆ ೧೯೭೪ರ ಕಾಯಿದೆ ಖಂಡಿತವಾಗಿಯೂ ಸಾಧನೆ ಮಾಡಿದೆ. ಗೇಣಿಪದ್ದತಿ ರದ್ದು ಮಾಡಿದ್ದು. ದಿನ ಬೆಳಗಾದಾಗ ಉಳುವವ ಹೊಲದ ಒಡೆಯನಾದದ್ದು, ಭೂಮಿಯ ಗರಿಷ್ಠಮಿತಿಯನ್ನು ಕಡೆಮೆ ಮಾಡಿರುವುದು ಇತ್ಯಾದಿಗಳೆಲ್ಲಾ ಸಾಧನೆಗಳೇ. ೧೯೭೪ರ ಭೂಸುಧಾರಣೆ ಆಧುನಿಕ ಕರ್ನಾಟಕದ ಚರಿತ್ರೆಯಲ್ಲಿ ದೊಡ್ಡ ಜಾಗವನ್ನು ಆಕ್ರಮಿಸಿದೆ. ಆದರೆ ೧೯೭೪ರ ಕಾಯಿದೆಯ ಸಾಧನೆ ಪಡೆದ ಪ್ರಚಾರವನ್ನು ಆದರ ವಿಫಲತೆ ಪಡೆಯಲಿಲ್ಲ. ೧೯೭೪ರ ಕಾಯಿದೆ ಅದು ನಿಜವಾಗಿಯೂ ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ ಎನ್ನುವ ಪ್ರಚಾರ ಪಡೆದಿದೆ. ಹಿಂದಿನ ಅಧ್ಯಾಯದಲ್ಲಿ ಕಾಯಿದೆಯ ಯಶಸ್ಸನ್ನು ಮಾಪನ ಮಾಡುವಾಗ ಅನುಸರಿಸಿದ ಹಲವಾರು ದೋಷಗಳ ಬಗ್ಗೆ ಚರ್ಚಿಸಲಾಗಿದೆ. ನಾಡಕರ್ಣಿಯವರ ಪ್ರಕಾರ ಹಲವಾರು ಪ್ರದೇಶಗಳಲ್ಲಿ ೧೯೭೪ರ ಕಾಯಿದೆಯ ನಿಜವಾದ ಲಾಭ ಪಡೆದಿರುವುದು ಮೂರು ಹೊತ್ತಿನ ಊಟಕ್ಕೆ ಪರದಾಡುವ ಸಣ್ಣ ರೈತರಲ್ಲ. ಅದರ ಬದಲು ಈಗಾಗಲೇ ಹಲವಾರು ಎಕರೆ ಭೂಮಿ ಹೊಂದಿರುವ ಮಧ್ಯಮ ಮತ್ತು ದೊಡ್ಡ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಯನ್ನು ಗುತ್ತಿಗೆಗೆ ಕೃಷಿ ಮಾಡುತ್ತಿದ್ದರು. ಇಂತವರು ಕೂಡ ೧೯೭೪ರ ಕಾಯಿದೆಯಡಿ ಡಿಕ್ಲರೇಶನ್ ಸಲ್ಲಿಸಿ ಬಡರೈತರ ಭೂಮಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.[1] ಹೆಚ್ಚು ಕಡಿಮೆ ಇದೇ ಅಭಿಪ್ರಾಯವನ್ನು ನರೇಂದ್ರ ಪಾಣಿಯವರು ವ್ಯಕ್ತ ಪಡಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ರೈತರಿಗೆ ೧೯೭೪ರ ಕಾಯಿದೆಯಿಂದ ಅನುಕೂಲವಾಗಿದ್ದು ಬಿಟ್ಟರೆ ರಾಜ್ಯದ ಉಳಿದ ಭಾಗಗಳಲ್ಲಿ ಗೇಣಿದಾರರಿಗೆ ಇದರಿಂದ ಏನೇನೂ ಲಾಭವಾಗಿಲ್ಲ. ಲಲಿತ ನಟರಾಜ್ ಮತ್ತು ವಿ.ಕೆ. ನಟರಾಜ್ ಕೂಡ ಅರಸು ಅವರ ಭೂಸುಧಾರಣೆಯಿಂದ ಏನೇನೂ ಲಾಭವಾಗಿಲ್ಲ ಎಂದು ಇವರು ಹೇಳುತ್ತಾರೆ.[2] ಚಂದ್ರಶೇಖರ್ ದಾಮ್ಲೆಯವರ ಪ್ರಕಾರ ಗೇಣಿದಾರರ ಲೆಕ್ಕಚಾರವನ್ನು ೧೯೭೧ರ ಎಗ್ರಿಕಲ್ಚರಲ್ ಸೆನ್ಸಸ್ ಪ್ರಕಾರ ಮಾಡಿರುವುದರಿಂದ ೧೯೭೪ರ ಕಾಯಿದೆ ಅನುಷ್ಠಾನ ತುಂಬಾ ಯಶಸ್ಸು ಆದಂತೆ ಕಾಣುತ್ತದೆ. ೧೯೭೧ರ ಅಗ್ರಿಕಲ್ಚರಲ್ ಸೆನ್ಸಸ್ ಹೊತ್ತಿಗೆ ೧೯೬೧ರ ಭೂಸುಧಾರಣ ಕಾಯಿದೆಯ ಅನುಷ್ಠಾನದಿಂದ ದೊಡ್ಡ ಸಂಖ್ಯೆಯ ಗೇಣಿದಾರರು ಭೂಮಿ ಕಳೆದುಕೊಂಡಿದ್ದಾರೆ. ೧೯೭೪ರ ಕಾಯಿದೆ ಅನುಷ್ಠಾನಗೊಳ್ಳುವ ವೇಳೆ ೧೯೫೭ರ ಹೊತ್ತಿಗೆ ಇದ್ದ ಶೇ. ೭೦ಕ್ಕಿಂತಲೂ ಹೆಚ್ಚಿನ ಗೇಣಿದಾರರು ಭೂಮಿ ಕಳೆದುಕೊಂಡು ಡಿಕ್ಲರೇಶನ್ ಸಲ್ಲಿಸುವ ಸ್ಥಿತಿಯಲ್ಲಿ ಇರಲಿಲ್ಲ.[3] ಈ ಹಿಂದೆ ಗೇಣಿದಾರರಾಗಿದ್ದು ಭೂಮಿ ಕಳೆದು ಕೊಂಡವರನ್ನು ಕಲ್ಪಿತ ಗೇಣಿದಾರರೆಂದು (ಡೀಮ್ಡ್ ಟಿನೆನ್ಸ್) ಪರಿಗಣಸಿ ೧೯೭೪ರ ಕಾಯಿದೆಯಡಿ ಡಿಕ್ಲರೇಶನ್ ಸಲ್ಲಿಸಲು ಅವಕಾಶ ನೀಡಿರುವುದರಿಂದ ೧೯೫೭ರಲ್ಲಿದ್ದ ಗೇಣಿದಾರರ ಶೇ. ೪೫ರಷ್ಟು ರೈತರು ಡಿಕ್ಲರೇಶನ್ ಸಲ್ಲಿಸಲು ಸಾಧ್ಯವಾಯಿತು. ಘೋಷಿತ ಹೆಚ್ಚುವರಿ ಭೂಮಿ, ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಭೂಮಿ ಮತ್ತು ವಿತರಣೆಯಾದ ಹೆಚ್ಚುವರಿ ಭೂಮಿಗೆ ಸಂಬಂಧಿಸಿದಂತೆ ಕರ್ನಾಟಕ ಸಾಧನೆ ಏನೇನೂ ಸಾಲದು. ನೆರೆಯ ಆಂಧ್ರ ಪ್ರದೇಶದಲ್ಲಿ ೮೦೦೨೮೦ ಎಕರೆ ಹೆಚ್ಚುವರಿ ಭೂಮಿ ಘೋಷಿತವಾಗಿದೆ ಇದರಲ್ಲಿ ಶೇ. ೭೯ರಷ್ಟು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಸ್ವಾಧೀನಪಡಿಸಿಕೊಂಡದರಲ್ಲಿ ಶೇ. ೭೧ ರಷ್ಟನ್ನು ವಿತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ೭,೨೯,೬೪೪ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಘೋಷಿತ ಹೆಚುವರಿ ಭೂಮಿಯಲ್ಲಿ ಸೇ. ೯೦ರಷ್ಟನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದರಲ್ಲಿ ಶೇ. ೭೬ರಷ್ಟು ಭೂಮಿಯನ್ನು ವಿತರಿಸಲಾಗಿದೆ. ನೆರೆಯ ರಾಜ್ಯಗಳ ಸಾಧನೆಗೆ ಹೋಲಿಸಿದರೆ ನಮ್ಮ ಸಾಧನೆ ಏನೇನೂ ಇಲ್ಲ. ೨,೮೦,೭೭೯ ಎಕರೆ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಅದರಲ್ಲಿ ಶೇ. ೫೯ರಷ್ಟನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿ ಕೊಂಡದ್ದರಲ್ಲಿ ಶೇ. ೪೨ ರಷ್ಟು ಭೂಮಿಯನ್ನು ಮಾತ್ರ ವಿತರಿಸಲಾಗಿದೆ (ಕೋಷ್ಟಕ -೮). ಹೀಗೆ ೧೯೭೪ರ ಕಾಯಿದೆಯ ಅನುಷ್ಠಾನದ ನ್ಯೂನತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗಬಹುದು.

೧೯೭೨ರ ನಂತರ ಕಾಂಗ್ರೆಸ್ ಪಕ್ಷದ ನಾಯಕತ್ವ ಬಲಾಢ್ಯ ಸಮುದಾಯಗಳ ಹಿಡಿತದಿಂದ ಹೊರಬಂದು ೧೯೭೪ರ ಕಾಯಿದೆ ಅನುಷ್ಠಾನಕ್ಕೆ ಬರುವ ವೇಳೆಗೆ ಪಕ್ಷದ ನಾಯಕತ್ವ ಹಿಂದುಳಿದ ವರ್ಗಗಳ ಹಿಡಿತದಲ್ಲಿತ್ತು. ಅದುದರಿಂದ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎನ್ನುವ ವಾದವನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ನಾಯಕರನ್ನು ಹೊರತುಪಡಿಸಿದ ಒಂದು ಅಸ್ತಿತ್ವವನ್ನೇ ನಿರಾಕರಿಸಿದಂತಾಗುತ್ತದೆ. ಈ ಚಿತ್ರಣ ಕಾಂಗ್ರೆಸ್ ಪಕ್ಷದ ಬಹುಪ್ರಚಾರಿತ ಚಿತ್ರಣಕ್ಕೆ ವಿರುದ್ದವಾಗಿದೆ. ಆರಂಭದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಆಧುನಿಕ ಶಿಕ್ಷಣ ಪಡೆದವರ ಜತೆಜತೆಗೆ ಭೂಮಾಲಿಕರು ಕೂಡ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಂದೂ ಕಾರ್ಮಿಕರ ಪಕ್ಷ ಅಥವಾ ಮೂರು ಹೊತ್ತಿನ ಊಟಕ್ಕೆ ಪರದಾಡುವವರ ಪಕ್ಷ ಎನ್ನುವ ಖ್ಯಾತಿ ಇರಲಿಲ್ಲ ಕಾಂಗ್ರೆಸ್ ಪಕ್ಷದ ಹಲವು ಉದ್ದೇಶಗಳಲ್ಲಿ ಬಡತನ ನಿವಾರಣೆ ಒಂದು ಉದ್ದೇಶ ಅಷ್ಟೇ. ಆದುದರಿಂದ ಪಕ್ಷದ ನಾಯಕತ್ವ ಬದಲಾದ ಕೂಡಲೇ ಇಡೀ ಪಾರ್ಟಿ ಮತ್ತು ಅದರ ಕಾರ್ಯಕರ್ತರು (ತಂಬಾ ಮಂದಿ ಭೂಮಾಲ್ಲಿಕರು ಇದ್ದಾರೆ) ತಮ್ಮ ಆಸಕ್ತಿಗಳಿಗೆ ವಿರುದ್ಧವಾಗಿ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆಂದು ನಂಬುವುದು ಕಷ್ಟ. ಆಮಲ್ ರೇ ದೇವರಾಜ್ ಅರಸರ ಕಾಂಗ್ರೆಸ್ ಪಕ್ಷ ಮತ್ತು ಅದು ಭೂ ಸುಧಾರಣೆಯಿಂದ ತಂದಿದೆ ಎನ್ನುವ ಬದಲಾವಣೆ ಬಗ್ಗೆ ಈ ಕೆಳಗಿನಂತೆ ಟೀಕೆ ಮಾಡುತ್ತಾರೆ. “ಅವರು (ಅರಸ್) ನಾಯಕತ್ವ ವಹಿಸಿರುವ ಪಕ್ಷ ಕ್ರಾಂತಿಕಾರಕ ಸಾಮಾಜಿಕವಾಗಿರಲಿಲ್ಲ. ಒಂದು ಕಡೆಯಿಂದ ತಾತ್ವಕವಾಗಿ ಬದ್ದತೆಯುಳ್ಳ ಮತ್ತು ತರಬೇತಿ ಹೊಂದಿದ ಪಕ್ಷ ಕಾರ್ಯಕರ್ತರ ಕೊರತೆ ಇತ್ತು. ಮತ್ತೊಂದೆಡೆ ಪ್ರಗತಿ ಪರ ಚಿಂತನೆಗಳು ಪಾಲಿಸಿಗಳ ಚೌಕಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಕಾಲಕಳೆದಂತೆ ಸ್ಥಳೀಯ ಬಲಾಢ್ಯರ ಮೇಲೆ ಅರಸು ಆವಲಂಬನೆ ಹೆಚ್ಚಾಯಿತು. ಭೂಸುಧಾರಣೆ ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳು ಸಣ್ಣಮಟ್ಟಿನ ಜಾಗೃತಿಯನ್ನು ಹಿಂದುಳಿದ ಜಾತಿ ಜನರಲ್ಲಿ ಮೂಡಿಸುವಲ್ಲಿ ಯಶಸ್ಸಾಗಿದೆ. ಆದರೆ ಈ ಜಾಗೃತಿ ವಿಸೃತಗೊಂಡ ಒಂದು ರಾಜಕೀಯ ಚಳವಳಿಯಾಗಿ ಬೆಳೆಯಲಿಲ್ಲ. ಇಂತಹ ಕಾರ್ಯಕ್ರಮಗಳಿಂದ ಹಿಂದುಳಿದ ಜಾತಿಗಳಲ್ಲೂ. ಸಣ್ಣ ಪ್ರಮಾಣದ ನಾಯಕರುಗಳು ಸೃಷ್ಟಿಯಾದರು. ಅವರುಗಳು ಲಿಬರಲ್ ರಾಜಕೀಯ ಪರಿಸರದಲ್ಲಿ ಅಧಿಕಾರ ಪಡೆಯಲು ಮತ್ತು ಪಡೆದ ಅಧಿಕಾರವನ್ನು ಒಂದು ಸೀಮಿತ ವಲಯದಲ್ಲಿ ಬಳಸಲು ತಮ್ಮ ಶ್ರಮವನ್ನು ವ್ಯಯಮಾಡುವಂತಾಯಿತು. ತಳಸ್ತರದ ಅಧಿಕಾರ ಸಂಬಂಧಗಳನ್ನು ಮೂಲಭೂತವಾಗಿ ಪರಿವರ್ತಿಸುವ ರಾಜಕೀಯವನ್ನು ಈ ನಾಯಕರುಗಳಿಗೆ ಕಟ್ಟಲಾಗಲಿಲ್ಲ. ಇದರಿಂದಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರು ತಳಸ್ತರದಲ್ಲಿ ಹಿಂದಿನಂತೆ ಮೂರು ಹೊತ್ತಿನ ಊಟಕ್ಕೆ ಪರದಾಡುವುದು ತಪ್ಪಲಿಲ್ಲ.’[4] ಇದೇ ಸಂದರ್ಭದಲ್ಲಿ ಈ ಸೋಲುಗಳಿಗೆ ದೇವರಾಜ ಅರಸರನ್ನು ದೊಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಡುತ್ತಾರೆ. ಅರಸರು ರಾಷ್ಟ್ರೀಯ ಪಕ್ಷವೊಂದರ ಪ್ರಾದೇಶಿಕ ನಾಯಕರಾಗಿದ್ದು ಸತತ ಕೇಂದ್ರೀಯ ನಾಯಕರ ನಿಗಾದ ಅಡಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಇಂದಿರಾ ಗಾಂಧಿಯಂತೂ ಯಾವುದೇ ಪ್ರಾದೇಶಿಕ ನಾಯಕ ದೊಡ್ಡ ಮಟ್ಟದಲ್ಲಿ ಬೆಳೆಯುವುದನ್ನು ಸಹಿಸುತ್ತಿರಲಿಲ್ಲ. ಅರಸು ಅವರು ಕೂಡ ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ದೊರ ಸರಿಯಬೇಕಾಯಿತು.[5]

ಈ ಎಲ್ಲ ಕಾರಣಗಳಿಂದ ಅರಸು ಅವರ ಭೂಸುಧಾರಣೆಗೆ ಭೂಮಿ ಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸುವ ಉದ್ದೇಶ ಇರಲಿಲ್ಲ. ತಾನು ಗೇಣಿದಾರನೆಂದು ಪುರಾವೆ ಸಮೇತ ಸಾಧಿಸುವ ಜವಾಬ್ದಾರಿ ಬಡ ಗೇಣಿದಾರನ ಮೇಲಿತ್ತು. ಗ್ರಾಮವೊಂದರ ಅಧಿಕಾರ ಸಂಬಂಧಗಳಲ್ಲಿ ಅತ್ಯಂತ ತಳಸ್ತರದಲ್ಲಿರುವವನಿಗೆ ತಾನು ಗೇಣಿದಾರನೆಂದು ಸಾಬೀತು ಪಡಿಸುವುದು ಎಷ್ಟು ಕಷ್ಟದ ಕೆಲಸವೆನ್ನುವುದು ಅನುಭವಿಸಿಯೇ ಅರ್ಥಮಾಡಿಕೊಳ್ಳಬೇಕು. ಭೂಸುಧಾರಣೆಯನ್ನು ತ್ವರಿತಗೊಳಿಸಲು ಮತ್ತು ಕೋರ್ಟ್‌ಕಛೇರಿಗಳ ಮಧ್ಯಪ್ರವೇಶವನ್ನು ಮೊಟಕುಗೊಳಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ಲ್ಯಾಂಡ್ ಟ್ರಿಬ್ಯೂನಲ್‌ಗಳನ್ನು ರಚಿಸಲಾಗಿತ್ತು. ಇಂತಹ ಲ್ಯಾಂಡ್ ಟ್ರಿಬ್ಯೂನಲ್‌ಗಳಲ್ಲಿ ಸ್ಥಳೀಯ ಶಾಸಕರು ಕೂಡ ಸದಸ್ಯರು. ಇವರೊಂದಿಗೆ ಹಿಂದುಳಿದ ವರ್ಗ ಮತ್ತು ದಲಿತ ಬುಡಕಟ್ಟು ಜನರು ಕೂಡ ಸದಸ್ಯರಾಗಿದ್ದರು. ಹೀಗಿದ್ದರೂ ಈ ಸಮಿತಿಯಲ್ಲಿರುವ ಎಲ್ಲ ಸದಸ್ಯರಿಗೆ ಹೋಲಿಸಿದರೆ ಸ್ಥಳೀಯ ಶಾಸಕರು ಹೆಚ್ಚು ಪ್ರಭಾವಸಾಲಿ. ಇವರು ಭೂಮಾಲಿಕ ವರ್ಗದಿಂದಲೇ ಬಂದಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಾಲ್ಲೂಕು ಮಟ್ಟದ ಸಾಮಾನ್ಯ ಆಡಳಿತ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಸ್ಥಳೀಯ ಶಾಸಕರ ಮಾತನ್ನು ಮೀರಿ ನಡೆಯುವುದು ಸಾಧ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಟ್ರಿಬ್ಯೂನಲ್ ತೀರ್ಮಾನಗಳನ್ನು ಶಾಸಕರು ಪ್ರಭಾವಿಸಿದಷ್ಟು ಉಳಿದ ಸದಸ್ಯರು ಪ್ರಭಾವಿಸಲು ಸಾಧ್ಯವಿಲ್ಲ.[6] ಆದುದರಿಂದ ಹಲವಾರು ಟ್ರಿಬ್ಯೂನಲ್ ನಿರ್ಧಾರಗಳು ಭೂಮಾಲಿಕರ ಪರ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಈ ಸಾಧ್ಯತೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಹೆಚ್ಚು ಇತ್ತು. ಯಾಕೆಂದರೆ ಭೂಸುಧಾರಣೆ ಜಾರಿಗೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರ ಮೂಲಕ ಭೂಸುಧಾರಣೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿಲ್ಲ. ರೈತರನ್ನು ಸಂಘಟಿಸಲಿಲ್ಲ ಎಲ್ಲೆಲ್ಲಿ ರೈತರು ಅವರಷ್ಟಕ್ಕೆ ಸಂಘಟಿತರಾಗಿದ್ದರೋ ಅಲ್ಲಿ ಭೂಮಾಲಿಕರು ಟ್ರಿಬ್ಯೂನಲ್ ನಿರ್ಧಾರಗಳನ್ನು ತಮ್ಮ ಪರ ಮಾಡುವುದರ ವಿರುದ್ದ ಪ್ರತಿಭಟನೆಗಳು ನಡೆದಿವೆ. ಆದರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ರೈತ ಸಂಘಟನೆಗಳೇ ಇರಲಿಲ್ಲ. ಅದುದರಿಂದ ಟ್ರಿಬ್ಯೂನಲ್ ಕೊಡುವ ನಿರ್ಧಾರಗಳನ್ನು ಉಸಿರೆತ್ತದೆ ಸ್ವೀಕರಿಸುವುದು ಬಿಟ್ಟರೆ ರೈತರಿಗೆ ಬೇರೆ ದಾರಿಯೇ ಇರಲಿಲ್ಲ.

ರಾಜ್ಯ ರಾಜಕೀಯಕ್ಕೆ ಸ್ವಾಯತ್ತತೆಯನ್ನು ಒದಗಿಸಿದ್ದು ಮತ್ತು ಅಂತಹ ಸ್ವಾಯತ್ತ ರಾಜಕೀಯ ಪರಿಣಾಮಕಾರಿ ಭೂಸುಧಾರಣೆ ತರಲು ಸಾಧ್ಯವಾಯಿತು ಎನ್ನುವ ವಾದ ನಿಂತಿರುವುದು ಎಪ್ಪತ್ತರ ತನಕ ಬಲಾಢ್ಯ ಸಮುದಾಯಗಳ ಪ್ರಭಾವ ರಾಜ್ಯ ರಾಜಕೀಯದಲ್ಲಿ ಇತ್ತು ನಂತರ ಅದು ಕಡಿಮೆಯಾಗಿದೆ ಎನ್ನುವ ವಾದದ ಮೇಲೆ. ಜೇಮ್ಸ್ ಮೇನರ್ ಪ್ರಕಾರ ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಗಳು ಬಂದಿರುವುದು ರಾಜಕೀಯದಿಂದ ಮಾತ್ರ. ಅ ಬದಲಾವಣೆಗಳು ಸ್ಥಳೀಯ ಸಮೊಜೋ ಆರ್ಥಿಕ ಆಸಕ್ತಿಗಳನ್ನು ವಿಶೇಷವಾಗಿ ಪ್ರತಿ ನಿಧಿಸುವುದಿಲ್ಲ ಎಂದು ವಾದಿಸುತ್ತಾರೆ ಇಂದಿರಾ ಗಾಂಧಿ ಹೈಕಮಾಂಡ್ ಆಗಿದ್ದ ಸಂದರ್ಭದಲ್ಲಿ ದೇವರಾಜ್ ಅರಸ್ ಅವರನ್ನು ಸ್ಥಳೀಯ ಬಲಿಷ್ಠ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಪಕ್ಷದ ನಾಯಕರನ್ನು ನೇಮಕ ಮಾಡಲಾಗಿದೆ. ಅರಸರನ್ನು ಬದಿಗೆ ಸರಿಸಲು ಗುಂಡೂರಾವ್ ಅವರನ್ನು ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ವಿರೇಂದ್ರ ಪಾಟೀಲ್‌ರನ್ನು ಬದಲಾಯಿಸಿ ಬಂಗಾರಪ್ಪ ನವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅದರೆ ಈ ವಾದವನ್ನು ಕಂಟೆಸ್ಟ್ ಮಾಡುವವರು ರಾಜ್ಯ ರಾಜಕೀಯದಲ್ಲಿ ಎಪ್ಪತ್ತರ ನಂತರವೂ ಬಲಾಢ್ಯ ಸಮುದಾಯಗಳು ಪ್ರಮುಖ ಭೂಮಿಗೆ ನಿಭಾಯಿಸಿವೆ ಎಂದು ವಾದಿಸುತ್ತಾರೆ. ಬಲಾಢ್ಯ ಸಮುದಾಯಗಳು ಸ್ಥಳೀಯ ಮಾತ್ರವಲ್ಲ ರಾಷ್ಟ್ರೀಯ ರಾಜಕೀಯವನ್ನು ಕೂಡ ಪ್ರಭಾವಿಸುತ್ತವೆಯೆಂದು ಹೇರಾಲ್ಡ್ ವಾದಿಸುತ್ತಾರೆ.[7] ಆರವತ್ತರ ದಶಕದಲ್ಲಿ ಉತ್ತರ ಪ್ರದೇಶದಲ್ಲಿ ಹಿಂದುಳಿದ ಜಾತಿಗಳನ್ನು ಚರಣ್ ಸಿಂಗ್ ಸಂಘಟಿಸಿರುವುದು, ಎಂಬತ್ತರ ದಶಕದಲ್ಲಿ ಇದಕ್ಕೆ ಪ್ರತಿಯಾಗಿ ಬಿಜ್‌ಎಪಿ ಮೇಲ್ ಜಾತಿಗಳನ್ನು ಸಂಘಟಿಸುವುದು, ತೊಂಬತ್ತರ ದಶಕದಲ್ಲಿ ದಲಿತರು ಕಾನ್‌ಶಿರಾಮ್‌ನೇತೃತ್ವದಲ್ಲಿ ಸಂಘಟಿತರಾದುದು ಇತ್ಯದಿ ಉದಾಹರಣೆಗಳನ್ನು ಹೆರಾಲ್ಡ್ ನೀಡುತ್ತಾರೆ. ಬಲಿಷ್ಠ ಸಮುದಾಯಗಳು ಮತ್ತು ಇತ್ತೀಚಿನ ದಿನಗಳಲ್ಲಿ ಸಂಘಟಿತರಾಗಿ ಹಿಂದುಳಿದ ಜಾತಿಗಳು ರಾಜ್ಯ ರಾಜಕೀಯವನ್ನು ತಮ್ಮದೇ ರೀತಿಯಲ್ಲಿ ಪ್ರಭಾವಿಸುತ್ತಿವೆ. ಕರ್ನಾಟಕದಲ್ಲಂತೂ ೧೯೯೪ರ ಚುನಾವಣೆಯ್ಲಲೂ ೬೪ (ಶೇ.೨೯ರಷ್ಟು) ಲಿಂಗಾಯತ ಮತ್ತು ೫೪ ಒಕ್ಕಲಿಗ (ಶೇ. ೨೪) ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಆರಿಸಿ ಬಂದಿದ್ದಾರೆ.[8]

ಇದಕ್ಕೆ ಬಹುಮುಖ್ಯ ಕಾರಣ ಹಲವಾರು ಮತಕ್ಷೇತ್ರಗಳಲ್ಲಿ ಲಿಂಗಾಯತರ ಮತ್ತು ಒಕ್ಕಲಿಗರ ಸಂಖ್ಯೆ ಅಭ್ಯರ್ಥಿಗಳ ಭವಿಷ್ಯ ತೀರ್ಮಾನಿಸುವುದರಲ್ಲಿ ನಿರ್ಣಾಯಕವಾಗಿದೆ. ಕರ್ನಾಟಕದ ಉತ್ತರ ಮೈದಾನ ಪ್ರದೇಶದ ಈ ಕೆಳಗಿನ ಮತಕ್ಷೇತ್ರಗಳಲ್ಲಿ ಲಿಂಗಾಯತರು ಯಾವುದೇ ಪಕ್ಷದ ಅಭ್ಯರ್ಥಿಯ ಸೋಲುಗೆಲುವನ್ನು ತೀರ್ಮಾನಿಸುವಷ್ಟು ಜನಸಂಖ್ಯೆ ಹೊಂದಿದ್ದಾರೆ. ಬೀದರ್, ಗುಲ್ಬರ್ಗ, ಬೆಳಗಾಂ, ಚಿಕ್ಕೋಡಿ, ಬಾಗಲಕೋಟೆ ಮತ್ತು ಬಿಜಾಪುರ ಕ್ಷೇತ್ರಗಳಲ್ಲಿ ಲಿಂಗಯತರ ಬೆಂಬಲ ನಿರ್ಣಾಯಕ. ಈ ಏಳು ಮತಕ್ಷೇತ್ರಗಳಲ್ಲಿ ಲಿಂಗಾಯತರು ಶೇ. ೨೦ರಿಂದ ಶೇ. ೨೮ರಷ್ಟಿದ್ದಾರೆ (ಕೋಷ್ಟಕ – ೧೮). ದಕ್ಷಿಣದಲ್ಲಿ ಕೋಲಾರ, ಕನಕಪುರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮಂಡ್ಯ ಚಾಮರಾಜನಗರ ಮತ್ತು ಮೈಸೂರು ಕ್ಷೇತ್ರಗಳಲ್ಲಿ ಒಕ್ಕಲಿಗರು ಅಭ್ಯರ್ಥಿಗಳ ಭವಿಷ್ಯ ತೀರ್ಮಾನ ಮಾಡುವಷ್ಟು ಸಂಖ್ಯೆಯನ್ನು ಹೊಂದಿದ್ದಾರೆ ಕೊಪ್ಪಳ, ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಕ್ಷೇತ್ರಗಳಲ್ಲಿ ಲಿಂಗಯತರು ನಿರ್ಣಾಯಕವಾದರೆ ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಒಕ್ಕಲಿಗರು ನಿರ್ಣಾಯಕರಾಗಿದ್ದರೆ (ಕೊಷ್ಟಕ – ೧೮). ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿಯ ಜನಸಂಖ್ಯೆ ಜೊತೆಗೆ ಅಭ್ಯರ್ಥಿಯ ಆರ್ಥಿಕ ಸ್ಥಿತಿಗತಿ ಕೂಡ ಚುನವಣೆ ಗೆಲ್ಲುವುದರಲ್ಲಿ ಮುಖ್ಯ ಈ ಎಲ್ಲ ಅಂಶಗಳನ್ನು ಪರಿಗಣಿಸುವಾಗ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಉಳಿದ ಸಮುದಾಯಗಳ ಅಭ್ಯರ್ಥಿಗಳಿಂದ ಮುಂದಿದ್ದಾರೆ. ಎಲ್ಲ ಪಕ್ಷಗಳಿಂದಲೂ ಈ ಎರಡು ಸಮುದಾಯಗಳಿಂದ ಹೆಚ್ಚು ಅಭ್ಯರ್ಥಿಗಳೂ ಕಣಕ್ಕಿಳಿಯುತ್ತಾರೆ. ಆದುದರಿಂದ ೧೯೭೨ರ ನಂತರ ಬಲಾಢ್ಯ ಸಮುದಾಯಗಳು ರಾಜ್ಯ ರಾಜಕೀಯದ ಹಿಡಿತ ಕಳೆದುಕೊಂಡರು ಸರಕಾರಕ್ಕೆ ಒಂದು ಸಣ್ಣಮಟ್ಟಿನ ಸ್ವಾಯತ್ತತೆ ಬಂತು. ಈ ಸ್ವಾಯತ್ತತೆಯನ್ನು ಬಳಸಿಕೊಂಡು ೧೯೭೪ರ ಭೂಸುಧಾರಣೆ ಮಸೂದೆ ಜಾರಿಗೊಂಡಿದೆ. ಆದುದರಿಂದ ಅದು ೧೯೬೧ರ ಕಾಯಿದೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ಬಂತು ಎನ್ನುವ ವಾದ ಸರಿಯಲ್ಲ. ಯಾಕೆಂದರೆ ೧೯೭೨ರ ನಂತರವೂ ಬಲಾಢ್ಯ ಸಮುದಾಯಗಳಿಂದ ಉಳಿದ ಸಮುದಾಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭಾ ಸದಸ್ಯರು ಆರಿಸಿ ಬರುತ್ತಿದ್ದರು.

ಈ ಹಿನ್ನೆಲೆಯಲ್ಲಿ ೧೯೭೪ರ ಕಾಯಿದೆಯ ಯಶಸ್ಸನ್ನು ವಿವರಿಸಲು ಬೇರೆ ಕಾರಣಗಳನ್ನು ಹುಡುಕಬೇಕೆನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾಕೆಂದರೆ ಕಾರಣಗಳನ್ನು ಹುಡುಕುವ ಪ್ರಮೇಯ ಬರುವುದೇ ೧೯೭೪ರ ಕಾಯಿದೆ ಯಶಸ್ಸುಗೊಂಡಿದೆ ಎನ್ನುವ ವಾದವನ್ನು ಒಪ್ಪಿದರೆ. ೧೯೭೪ರ ಭೂಸುಧಾರಣ ಕಾಯಿದೆ ಕೂಡ ಯಶಸ್ಸುಗೊಂಡಿಲ್ಲ ಎಂದು ವಾದಿಸುವುದೇ ಈ ಪುಸ್ತಕದ ಉದ್ದೇಶ. ಗೇಣಿದಾರರು ಭೂಮಿ ಪಡೆಯುವ ವಿಚಾರದಲ್ಲಿ ಘೋಷಿತ ಹೆಚ್ಚುವರಿ ಭೂಮಿ ಪ್ರಮಾಣದಲ್ಲಿ ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಭೂಮಿ, ವಿತರಿಸಿದ ಹೆಚ್ಚುವರಿ ಭೂಮಿ ಈ ಎಲ್ಲ ವಿಚಾರಗಳಲ್ಲೂ ೧೯೭೪ರ ಕಾಯಿದೆ ವಿಶೇಷ ಸಾಧನೆ ಮಾಡಿಲ್ಲ. ಇನ್ನೂ ಭೂರಹಿತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಭೂಮಿ ಒದಗಿಸುವಲ್ಲಿ ೧೯೭೪ರ ಕಾಯಿದೆಯ ಸಾಧನೆ ಏನೇನೂ ಸಾಲದು. ಅದುದರಿಂದ ಬೇರೆ ಕಾರಣಗಳನ್ನು ಹುಡುಕುವ ಪ್ರಶ್ನನೇ ಉದ್ಭವಾಗುವುದಿಲ್ಲ. ೧೯೬೧ರ ಕಾಯಿದೆಗಿಂತ ೧೯೭೪ರ ಕಾಯಿದೆ ಹೆಚ್ಚು ಬಿಗಿಯಾಗಿತ್ತು ಮತ್ತು ಹೆಚ್ಚು ಪರಿಣಾಮಕಾರಿಯಾಗಿತ್ತು ಎನ್ನುವ ಅಂಶವನ್ನೂ ಅಲ್ಲಗಳೆಯಬಹುದೇ? ಖಂಡಿತ ಅಲ್ಲಗೆಳೆಯಲು ಸಾಧ್ಯವಿಲ್ಲ. ೧೯೬೧ರ ಕಾಯಿದೆಗೆ ಹೋಲಿಸಿದರೆ ೧೯೭೪ರ ಕಾಯಿದೆ ಮತ್ತು ಅನುಷ್ಠಾನ ಎರಡು ಕೂಡ ಉತ್ತಮವಾಗಿತ್ತು. ಹಾಗೆ ನೋಡಿದರೆ ೧೯೭೪ರ ಕಾಯಿದೆಗೆ ಯಶಸ್ಸಿನ ಪಟ್ಟ ದೊರಕಿದ್ದೇ ೧೯೬೧ರ ಕಾಯಿದೆಯಿಂದ. ಅದು ಹೇಗೆಂದರೆ ೧೯೭೪ರ ಕಾಯಿದೆ ಮತ್ತು ಅನುಷ್ಠಾನ ಉತ್ತಮವಾಗಿ ಕಾಣಲು ಬಲುಮುಖ್ಯ ಕಾರಣ ೧೯೬೧ರ ಕಾಯಿದೆ ಬಲುಕೆಟ್ಟ ಕಾಯಿದೆಯಾಗಿತ್ತು. ಅದರ ಅನುಷ್ಠಾನವಂತೂ ಇನ್ನೂ ಕೆಟ್ಟದಾಗಿತ್ತು. ಅದನ್ನೊಂದು ಭೂಸುಧಾರಣ ಕಾಯಿದೆಯೆಂದು ಕರೆಯಲು ಸಾಧ್ಯವೇ ಇಲ್ಲ. ಕನಿಷ್ಠ ಅದನ್ನೊಂದು ಗೇಣಿಸುಧಾರಣ ಕಾಯಿದೆ ಎನ್ನಬಹುದೇ? ಎಂದು ಕೇಳಿದರೆ ಅದೂ ಕಷ್ಟನೇ. ಯಾಕೆಂದರೆ ಗೇಣಿ ಸುಧಾರಣ ಕಾಯಿದೆ ಗುತ್ತಿಗೆಯ ಪ್ರಮಾಣ ಮತ್ತು ಅವಧಿ ನಿಗದಿಗೊಳಿಸಿ ಗುತ್ತಿಗೆಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿ ಕೊಳ್ಳದಂತೆ ಕ್ರಮವಹಿಸಿ ಗುತ್ತಿಗೆದಾರರ ಸ್ಥಿತಿ ಸುಭದ್ರಗೊಳಿಸಬೇಕು. ಆದರೆ ೧೯೬೧ರ ಕಾಯಿದೆಯ ದೊಡ್ಡ ಸಾಧನೆಯೆಂದರೆ ಅದು ಅನುಷ್ಠಾನಕ್ಕೆ ಬಂದ ನಂತರ ಗೇಣಿದಾರರ ಸಂಖ್ಯೆ ಏರಲಿಲ್ಲ; ಕೃಷಿ ಕಾರ್ಮಿಕರ ಸಂಖ್ಯೆ ಏರಿದೆ. ಅಂದರೆ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳಲು ಭೂಮಾಲಿಕರನ್ನು ಎಚ್ಚರಿಸಿದ ಕಾಯಿದೆ ಅದು.

ರಾಜ್ಯ ರಾಜಕೀಯದ ಸ್ವಾಯತ್ತತೆಯ ಚರ್ಚೆಯಲ್ಲಿ ಎಷ್ಟೋ ಬಾರಿ ಸ್ಥಳೀಯ ಸಮುದಾಯಗಳ ಪ್ರಭಾವವೇ ಹೆಚ್ಚು ಜಾಗವನ್ನು ಆಕ್ರಮಿಸಿದೆ. ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪಕ್ಷಗಳೂ ರಾಜ್ಯ ಸರಕಾರ ಮತ್ತು ಪ್ರಾದೇಶಿಕ ಪಕ್ಷಗಳ ಮೇಲೆ ಹೇರುವ ನಿರ್ಬಂಧಗಳೂ ಸ್ವಾಯತ್ತತೆ ಚರ್ಚೆಯಲ್ಲಿ ವಿಶೇಷ ಪಾತ್ರ ವಹಿಸಿಲ್ಲ. ಎಷ್ಟೋ ಬಾರಿ ರಾಜ್ಯ ರಾಜಕೀಯ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪಕ್ಷಗಳು ಕೂಡ ಮಾಡುವ ಚೌಕಟ್ಟಿನೊಳಗೆ ತಮ್ಮ ಸಾಯತ್ತತೆಯನ್ನು ಪ್ರಕಟಪಡಿಸಲು ಒದ್ದಾಡಬೇಕಾಗುತ್ತದೆ. ಕರ್ನಾಟಕದಲ್ಲಂತೂ ಸ್ವತಂತ್ರ ನಂತರ ಹಲವು ದಶಕಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಹಾಗೆ ಆಡಳಿತ ನಡೆಸುವಾಗ ಅದರ ನಾಯಕತ್ವವನ್ನು ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಹಾಗೆಂದು ರಾಷ್ಟ್ರೀಯ ನಾಯಕರು ಕುಶಿ ಬಂದಂತೆ ನಿರ್ಧರಿಸುತ್ತಾರೆನ್ನಲು ಸಾಧ್ಯವಿಲ್ಲ. ಅವರು ಕೂಡ ತಮ್ಮ ಪಕ್ಷವನ್ನು ಅಧಿಕಾರದಲ್ಲಿ ಮುಂದವರಿಸಿ ಕೊಂಡು ಹೋಗುವವರನ್ನೇ ಹುಡುಕುತ್ತಾರೆ. ಹಿಂದೆ ಮತ್ತು ಇಂದು ಕೂಡ ಜಾತಿ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಾಯಕರನ್ನು ಆಯ್ಕೆ ಮಾಡುವಾಗ ಹೆಚ್ಚು ಜನ ಸಂಖ್ಯೆ ಜನರಿರುವ ಜಾತಿಗಳಿಗೆ ಹಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಪಕ್ಷವೊಂದರ ನಾಯಕತ್ವ ಸಿಗಲು ಜನಸಂಖ್ಯೆ ಮಾತ್ರ ಪರಿಗಣಿತವಾಗುವುದಾದರೆ ದಲಿತರು ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ನಾಯಕತ್ವ ವಹಿಸಬೇಕಿತ್ತು. ಆದರೆ ದಲಿತರು ಮುಖ್ಯವಾಹಿನಿ ಪಕ್ಷಗಳಲ್ಲಿ ಲೆಕ್ಕಕುಂಟು ಆಟಕ್ಕಿಲ್ಲ ಎನ್ನುವ ಹಾಗೆ ಇದ್ದಾರೆ. ದಲಿತರಲ್ಲೂ ಎಡ ಬಲ ಮಾದಿಗ ಹೊಲೆಯ ಇತ್ಯಾದಿ ಪ್ರತ್ಯೇಕ ಪಂಗಡಗಳಿವೆ ಆದುದರಿಂದ ಅವರು ಒಂದು ಜಾತಿ ಎನ್ನುವ ರೀತಿಯಲ್ಲಿ ಇಲ್ಲ ಆದುದರಿಂದ ಅವರಿಗೆ ಪಕ್ಷಗಳು ನಾಯಕತ್ವ ನೀಡಲಿಲ್ಲ ಎಂದು ತಿಳಿಯಬಹುದೇ? ಇದು ಸರಿಯಲ್ಲ. ಯಾಕೆಂದರೆ ಲಿಂಗಾಯತರಲ್ಲಿ ಮತ್ತು ಒಕ್ಕಲಿಗರಲ್ಲಿ ಸಾಕಷ್ಟು ಉಪ – ಜಾತಿಗಳಿವೆ. ಅಷ್ಟು ಮಾತ್ರವಲ್ಲ ಲಿಂಗಾಯತರ ಉಪಜಾತಿಗಳೂ ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆದುದರಿಂದ ಒಂದು ಜಾತಿಯ ಜನಸಂಖ್ಯೆಯೇ ಮುಖ್ಯವಾಗುವುದಿಲ್ಲ. ಜನಸಂಖ್ಯೆ ಜತೆ ಆರ್ಥಿಕ ಸ್ಥಿತಿಗತಿ ಕೂಡ ಅಷ್ಟೇ ಮುಖ್ಯ ಪ್ರಾದೇಶಿಕ ನಾಯಕತ್ವವನ್ನು ಆಯ್ಕೆ ಮಾಡುವಾಗ ಇದು ಸಾಮನ್ಯವಾಗಿ ರಾಷ್ಟ್ರೀಯ ಪಕ್ಷವೊಂದು ಅನುಸರಿಸಿಕೊಂಡು ಬರುವ ಕ್ರಮ. ಈ ಸಾಮಾನ್ಯ ಕ್ರಮಕ್ಕೆ ಅಪವಾದಗಳಿವೆ. ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ನಾಯಕರುಗಳಿಗೆ ಪ್ರತಿಸ್ಪರ್ಧಿಗಳಾದಾಗ ಅಥವಾ ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದಾಗ ನಾಯಕತ್ವ ಬದಲಾಗುತ್ತದೆ. ಆದುದರಿಂದ ನಾಯಕತ್ವ ಬದಲಾವಣೆಗಳೂ ರಾಜ್ಯ ರಾಜಕೀಯದ ಸವಯತತ್ತೆಯ ದೃಷ್ಟಿಯಿಂದ ದೊಡ್ಡ ಸಂಗತಿಯಾಗುವುದಿಲ್ಲ.

ಪ್ರತ್ಯೇಕ ತತ್ತ್ವ ಮತ್ತು ಸಿದ್ದಾಂತಗಳಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲು ಇಚ್ಚಿಸುವ ರಾಜ್ಯ ನಾಯಕರುಗಳಿಗೆ ರಾಷ್ಟ್ರೀಯ ಪಕ್ಷವೊಂದರ ತತ್ತ್ವ ಸಿದ್ದಾಂತಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ವಿಧಾನಗಳು ದೊಡ್ಡ ಅಡೆತಡೆಗಳಾಗಬಹುದು. ಬಹುತೇಕ ಪಕ್ಷಗಳು ಲಿಬರಲ್ ಪ್ರಜಾಪ್ರಭುತ್ವ ಧೋರಣೆಯಡಿಯಲ್ಲಿ ಕೆಲಸ ಮಾಡುವ ಪಕ್ಷಗಳು. ಅವುಗಳಲ್ಲಿ ಅತಿಯಾದ ಎಡಪಂಥೀಯ ಚಿಂತನೆಗಳನ್ನು ಜೀರ್ಣಿಸಿಕೊಂಡ ಸದಸ್ಯರಿದ್ದಂತೆ ಅತಿಯಾದ ಬಲಪಂಥೀಯ ಧೋರಣೆಗಳನ್ನು ಅನುಸರಿಸುವ ಸದಸ್ಯರು ಇರುತ್ತಾರೆ. ರಾಷ್ಟ್ರೀಯ ನಾಯಕತ್ವದ ಒಲವು ಪ್ರಾದೇಶಿಕ ನಾಯಕತ್ವವನ್ನು ಪ್ರಭಾವಿಸುತ್ತದೆ. ದೇವರಾಜ ಆರಸು ಅವರೀಗೂ ಇದೇ ಅನುಭವ ಆಗಿರಬಹುದು. ರಾಜ್ಯ ನಾಯಕತ್ವ ಕ್ರಾಂತಿಕಾರಕ ಬದಲಾವಣೆಗಳನ್ನು ಬಯಸಿದರೂ ಪಕ್ಷ ಹಾಗೂ ರಾಷ್ಟ್ರೀಯ ನಾಯಕತ್ವ ಇದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಈ ಸಮಸ್ಯೆ ಒಂದೇ ಪಕ್ಷ ರಾಜ್ಯ ಮತ್ತು ಕೇಂದ್ರಗಳಲ್ಲಿ ಕೆಲಸ ಮಾಡುವಾಗ ಇರುವ ಸಮಸ್ಯೆ ರಾಜ್ಯ ಮತ್ತು ಕೇಂದ್ರದಲ್ಲಿ ಭಿನ್ನ ಪಕ್ಷಗಳು ಕಾರ್ಯನಿರ್ವಹಿಸುವಾಗಿ ಬೇರೆಯದೇ ಸಮಸ್ಯೆ ಉದ್ಭವವಾಗುತ್ತದೆ. ಕೇರಾಳ ಮತ್ತು ಪಶ್ಚಿಮ ಬಂಗಾಳದ ಎಡಪಂಥೀಯ ಸರಕಾರಗಳು ಭೂಸುಧಾರಣೆ ತರಲು ಹೊರಟಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಕಾಯಿದೆ ರೂಪಿಸಿ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಪಡೆಯುವವರೆಗೂ ಕೇಂದ್ರ ಸರಕಾರ ತನ್ನ ಧೋರಣೆಗಳನ್ನು ತೂರಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಇದು ಪ್ರತ್ಯೇಕ ಪಕ್ಷಗಳ ಕೆಲಸ ಕಾರ್ಯಗಳನ್ನೂ ಪ್ರಭಾವಿಸುತ್ತದೆ.

ಹಲವು ಬಾರಿ ಸ್ಥಳೀಯ ರಾಜಕೀಯದ ವಿಫಲತೆಯನ್ನು ಬಲಾಢ್ಯ ಸಮುದಾಯಗಳ ಪ್ರಭಾವದ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದರೆ ಸ್ಥಳೀಯ ಸಫಲತೆಯನ್ನು (ಭೂ ಸುಧಾರಣೆಯನ್ನು ಸೇರಿಸಿಕೊಂಡು) ಶುದ್ಧ ರಾಜಕೀಯದ ದೃಷ್ಟಿಯಿಂದ ನೋಡಲಾಗಿದೆ ಇದು ಎಷ್ಟು ಸರಿ? ರಾಜ್ಯ ರಾಜಕೀಯದಲ್ಲಿನ ಸಫಲತೆಯನ್ನು ಯಾಕೆ ಸ್ಥಳೀಯ ತಳಸ್ತರದ ಜನರ ಪ್ರಭಾವದಿಂದ ಅದುದೆಂದು ತಿಳಿಯಬಾರದು? ಭೂಸುಧಾರಣೆಗೆ ಸೀಮಿತಗೊಂಡು ಈ ಪ್ರಶ್ನೆಗಳನ್ನು ಚರ್ಚಿಸುವುದಾದರೆ ಗೇಣಿದಾರರು ತಕ್ಕಮಟ್ಟಿಗೆ ಸಂಘಟಿತರಾಗಿದ್ದ ಪ್ರದೇಶಗಳಲ್ಲಿ ಮಾತ್ರ ಭೂಸುಧಾರಣೆ ಕಾಯಿದೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭೂಸುಧಾರಣೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ರಾಜ್ಯ ಕೇರಳದ ಎಡಪಂಥೀಯ ಚಳವಳಿಯ ಪ್ರಭಾವ ಇದ್ದರೆ, ಉತ್ತರ ಕನ್ನಡದಲ್ಲಿ ದಿನಕರ ದೇಸಾಯಿಯವುರ ಹುಟ್ಟು ಹಾಕಿದ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಪ್ರಭಾವ ಇತ್ತು. ಶಿವಮೊಗ್ಗಕ್ಕೆ ಕಾಗೋಡು ಚಳವಳಿಯ ಇತಿಹಾಸವಿದೆ. ದಿನಕರ ದೇಸಾಯಿಯವರ ನೇತೃತ್ವದಲ್ಲಿ ೧೯೪೦ರಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತ ಚಳವಳಿಗಳು ಆರಂಭವಾಗಿದ್ದವು. ಆಂಕೋಲ ತಾಲ್ಲೂಕು ರೈತ ಸಂಘ ೧೯೪೦ರಲ್ಲಿ ಹುಟ್ಟಿಕೊಂಡಿದೆ. ಗೇಣೀ ಪ್ರಮಾಣವನ್ನು ಕಡಿತಗೊಳಿಸುವುದು, ಬಾಂಬೆ ಅಗ್ರಿಕಲ್ಚರಲ್ ಡೆಟ್ ರಿಲೀಫ್ ಆಕ್ಟ್, ೧೯೩೯ನ್ನು ಜಾರಿಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರೈತ ಸಂಘ ಚಳವಳಿ ನಡೆಸಿದೆ. ಎಡಪಂಥೀಯ ತತ್ತ್ವಸಿದ್ದಾಂತಗಳ ಬುನಾದಿಯಲ್ಲಿ ಕೆನರಾ ಡಿಸ್ಟ್ರಿಕ್ಟ್ ಕಿಸಾನ್ ಸಂಘ ೧೯೪೫ರಲ್ಲಿ ಕಾರವಾರದಲ್ಲಿ ಆರಂಭವಾಯಿತು. ಗೇಣಿದಾರರ ಸಮಸ್ಯೆ ಪರಿಹಾರಕ್ಕೆ ಈ ಸಂಘಟನೆಯೂ ಹೋರಾಟ ನಡೆಸಿದೆ. ಎರಡೂ ಸಂಘಟನೆಗಳು ಸ್ಥಳೀಯ ಕಾಂಗ್ರೆಸ್ ಶಾಸಕರು ಗೇಣಿದಾರರ ಸಮಸ್ಯೆಯನ್ನು ಅಸೆಂಬ್ಲಿಯಲ್ಲಿ ಚರ್ಚಿಸುವಂತೆ ಒತ್ತಡ ಹೇರುತ್ತಿದ್ದವು. ಬಾಂಬೆ ಟೆನೆನ್ಸಿ ಆಂಡ್ ಅಗ್ರಿಕಲ್ಚರಲ್ ಲ್ಯಾಂಡ್ ಆಕ್ಟಲ್ಲಿ ಬಾಂಬೆ ಕರ್ನಾಟಕದ ಪ್ರದೇಶದ ರೈತರು ನೀಡಬೇಕಾದ ಗುತ್ತಿಗೆ ಆರನೇ ಒಂದಕ್ಕೆ ಇಳಿಸಿರುವುದರಲ್ಲಿ ಉತ್ತರ ಕನ್ನಡದ ರೈತ ಚಳವಳಿಗಳ ಪಾತ್ರ ಇದೆ. ಬಾಂಬೆ ಆಕ್ಟಲ್ಲಿ ಸ್ವಂತ ಕೃಷಿಯ ಕಾರಣ ನೀಡಿ ಗೇಣಿಗೆ ನೀಡಿದ ಭೂಮಿಯನ್ನು ಮಾಲಿಕರು ಪುನರ್ ಸ್ವಾಧೀನಪಡಿಸಿಕೊಳ್ಳಲು ಅವಕಾಶವಿತ್ತು.[9] ಈ ಅಪಾಯವನ್ನು ಮನಗಂಡು ರೈತ ಸಂಘಟನೆಗಳು ವಕ್ಕಲೆಬ್ಬಿಸುವ ಭೂಮಾಲಿಕರ ಭೂಮಿಯನ್ನು ರೈತರು ಗೇಣಿಗೆ ಉಳುಮೆ ಮಾಡಬಾರದು, ಕೃಷಿ ಕಾರ್ಮಿಕರು ಅಂತಹ ಭೂಮಾಲಿಕರ ಹೊಲಕ್ಕೆ ದುಡಿಯಲು ಹೋಗಬಾರದೆಂದು ಕರೆ ನೀಡಿದರು. ರೈತ ಸಂಘದ ಕರೆಯನ್ನು ರೈತರು ಮತ್ತು ಕೃಷಿ ಕಾರ್ಮಿಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಗೇಣಿ ನೀಡಿದ ಭೂಮಿಯನ್ನು ಹಿಂದಕ್ಕೆ ಪಡೆಯುವುದು ಕಡಿಮೆಯಾಯಿತು. ಆಂಕೋಲಾ ಕಾರಾವಾರಗಳಲ್ಲಿ ಹುಟ್ಟಿದ ರೈತ ಚಳವಳಿ ನಿಧಾನವಾಗಿ ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸಲು ಆರಂಭವಾಯಿತು. ೧೯೪೮ರ ವೇಳೆಗೆ ಸಿದ್ದಾಪುರದ ರೈತರು ತಮ್ಮ ಭೂಮಾಲಿಕರ ವಿರುದ್ದ ಸಂಘಟಿತರಾದರು. ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ರೈತ ಸಂಘಟನೆಗಳಿಗೆ ಹೆದರಿ ಭೂಮಾಲಿಕರು ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡುತ್ತಿರಲಿಲ್ಲ. ಇದರಿಂದ ಕಂಗೆಟ್ಟ ಭೂಮಾಲಿಕರು ರೈತ ಸಂಘಟನೆಗಳ ಶಕ್ತಿಯ ವಿರುದ್ಧ ಹೋರಾಡಲು ಸಿದ್ದಾಪುರ ತಾಲ್ಲೂಕು ಭೂಮಾಲಿಕರ ಸಂಘವನ್ನು ೧೯೪೮ರಲ್ಲಿ ಆರಂಭಿಸಿದರು.

ಏಕೀಕೃತ ಕರ್ನಾಟಕ ಜಾರಿಗೆ ತಂದ ೧೯೬೧ರ ಭೂಸುಧಾರಣ ಮಸೂದೆ ಉತ್ತರ ಕನ್ನಡ ಜಿಲ್ಲೆಯ ರೈತರ ದೃಷ್ಟಿಯಿಂದ ವಸಾಹತು ಕಾಲದ ಮಸೂದೆಗಳಿಗಿಂತ ಭಿನ್ನವಾಗಲಿಲ್ಲ. ಅದರಲ್ಲೂ ಹೊಸ ಕಾಯಿದೆ ನಿಗದಿಗೊಳಿಸಿದ ಉತ್ಪನ್ನದ ನಾಲ್ಕನೇ ಒಂದಂಶ ಗೇಣಿ ಉತ್ತರ ಕನ್ನಡ ಜಿಲ್ಲೆಯ ರೈತರನ್ನು ರೊಚ್ಚಿಗೆಬ್ಬಿಸಿತು. ಯಾಕೆಂದರೆ ಹಿಂದಿನ ಅವರ ಗೇಣೀಗೆ ಹೋಲಿಸಿದರೆ ಹೊಸ ಕಾಯಿದೆ ಶೇ. ೯ರಷ್ಟು ಹೆಚ್ಚಿನ ಗುತ್ತಿಗೆ ನಿಗಧಿಗೊಳಿಸಿದೆ. ಹೊಸ ಕಾಯಿದೆಯಿಂದ ಕಳೆಗುಂದಿದ್ದ ರೈತ ಸಂಘಟನೆಗಳು ಪುನರ್‌ಜೀವ ಪಡೆದವು. ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಡಿಯಲ್ಲಿ (ಪಿ.ಎಸ್.ಪಿ) ರೈತ ಸಂಘಟನೆಗಳು ಒಂದಾದವು. ೧೯೬೭ರ ಚುನಾವಣೆಯಲ್ಲಿ ಪಿ.ಎಸ್.ಪಿ ಕಾಂಗ್ರೆಸ್ ವಿರುದ್ದ ಚುನಾವಣೆಗೆ ಸ್ಪರ್ಧಿಸಿತು. ಭೂಮಾಲಿಕರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ೧೯೬೧ರ ಕಾಯಿದೆನ್ನು ಕಾಂಗ್ರೆಸ್ ಪಕ್ಷ ತಂದಿದೆ. ಈ ಕಾಯಿದೆಯಿಂದ ಗೇಣಿದಾರರಿಗೆ ಏನೇನು ಲಾಭವಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಜತೆ ಹೋದರೆ ಗೇಣಿದಾರರ ಆಸಕ್ತಿಗಳು ರಕ್ಷಣೆಯಾಗುವುದಿಲ್ಲ. ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬೇಕಾದರೆ ಗೇಣಿದಾರರು ಪಿ.ಎಸ್.ಪಿಗೆ ಮತ ನೀಡಬೇಕೆಂದು ಪ್ರಚಾರ ಮಾಡಿದರು.[10] ಆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಮೂರು ಮಂದಿ ಪಿ.ಎಸ್.ಪಿ. ಯಿಂದ ವಿಧಾನಸಭೆಗೆ ಆಯ್ಕೆಯಾದರು. ದಿನಕರ ದೇಸಾಯಿಯವರು ರೈತರ ಬೆಂಬಲದಿಂದ ಲೋಕಸಭೇಗೆ ಪ್ರವೇಶ ಪಡೆದರು. ೧೯೬೧ರ ಕಾಯಿದೆ ನಿಗದಿಪಡಿಸಿದ ಗುತ್ತಿಗೆಯನ್ನು ಅಲಕ್ಷಿಸಿ ಗೇಣಿದಾರರು ಪ್ರತಿ ಎಕರೆ ಭೂಮಿಗೆ ರೂ. ೨೦ ಗುತ್ತಿಗೆ ನೀಡಿದರೆ ಸಾಕೆಂದು ೧೯೬೭ರಲ್ಲಿ ಪಿ.ಎಸ್.ಪಿ. ಕರೆ ನೀಡಿತ್ತು. ಗುತ್ತಿಗೆಯನ್ನು ಹಿಂದಿನ ಆರನೇ ಒಂದಂಶಕ್ಕೆ ಇಳಿಸದಿದ್ದರೆ ಗುತ್ತಿಗೆಯೇ ಕೊಡದಿರುವ ಚಳವಳಿಯನ್ನು ಉತ್ತರ ಕನ್ನಡದಲ್ಲಿ ಆರಂಭಿಸಲಾಗುವುದೆಂದು ವಿಧಾನಸಭೆಯಲ್ಲಿ ಪಿ.ಎಸ್.ಪಿ. ಸದಸ್ಯರು ಎಚ್ಚರಿಸಿದರು. ಆದರೆ ಪಿ.ಎಸ್.ಪಿ ಸೂಚಿಸಿದಂತೆ ೧೯೬೧ರ ಕಾಯಿದೆ ತಿದ್ದುಪಡಿಯಾಗಿ ಗುತ್ತಿಗೆ ಕಡಿಮೆಯಾಗಲಿಲ್ಲ ಹಾಗೆಂದು ನೋ ರೆಂಟ್ ಚಳವಳಿ ಕೂಡ ನಡೆಯಲಿಲ್ಲ.[11] ಹೀಗೆ ಕಾಲಕ್ರಮೇಣ ರೈತ ಚಳವಳಿ ಮತ್ತು ಅದರಿಂದ ಬೆಂಬಲ ಪಡೆದ ಪಕ್ಷ ಎರಡೂ ಕಾವು ಕಳೆದುಕೊಂಡವು. ಆದಾಗ್ಯೂ ಈ ಚಳವಳಿಗಳೂ ರೈತರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ. ೧೯೭೪ರ ಕಾಯಿದೆ ಹೆಚ್ಚು ಪರಿಣಾಮಕಾರಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದರೆ ಅದರಲ್ಲಿ ರೈತ ಚಳವಳಿಯ ಪಾತ್ರವನು ಅಲ್ಲಗೆಳೆಯಲು ಸಾಧ್ಯವಿಲ್ಲ.

ಗೇಣಿ ಮಾಪನ ಮಾಡುವ ಆಳತೆಗೆ ಸಂಬಂಧಿಸಿದಂತೆ ಕಾಗೋಡಿನ ರೈತರು ಮತ್ತು ಭೂಮಾಲಿಕರ ಮಧ್ಯ ತಕರಾರು ಎದ್ದಿದೆ. ಸಾಮಾನ್ಯವಾಗಿ ಮಾಪನ ಮಾಡುವ ಪಾತ್ರ ಕೊಳಗದಲ್ಲಿ ಮೂರು ಸೇರು ತುಂಬುತ್ತದೆ. ಆದರೆ ಭೂಮಾಲಿಕರು ತಮ್ಮದೇ ಕೊಳಗ ಸಿದ್ದಪಡಿಸಿಕೊಳ್ಳುತ್ತಾರೆ. ಆ ಕೋಳಗದಲ್ಲಿ ಮೂರುವರೆಯಿಂದ ನಾಲ್ಕು ಸೇರು ಕೂಡ ತುಂಬುತ್ತೆ. ಗೇಣಿ ಮಾಪನ ಮಾಡುವ ಪಾತ್ರದ ಗಾತ್ರವನ್ನು ಹಿಗ್ಗಿಸಿ ಕೊಂಡು ಭೂಮಾಲಿಕರು ಲೆಕ್ಕಕ್ಕಿಂತ ಹೆಚ್ಚಿನ ಗೇಣಿಯನ್ನು ವಸೂಲಿ ಮಾಡುತ್ತಿದ್ದರು. ಈ ಕ್ರಮವನ್ನು ಕಾಗೋಡಿನ ರೈತರು ವಿರೋಧಿಸಿದರು.[12] ಭೂಮಾಲಿಕರಿಂದ ನಡೆಯುತ್ತಿದ್ದ ಶೋಷಣೆನ್ನು ಪ್ರತಿಭಟಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ೧೯೪೮ರಲ್ಲಿ ಸಾಗರ ತಾಲ್ಲೂಕು ರೈತ ಸಂಘ ಆರಂಭವಾಯಿತು. ಗೇಣಿದಾರರ ಹಿತರಕ್ಷಣೆ ಕಾನೂನನ್ನು ಜಾರಿಗೆ ತರಬೇಕು, ಸರಕಾರ ಟೆನೆನ್ಸಿ ಬೆಲ್ ಜಾರಿಗೆ ತರುವವರೆಗೆ ಪರಸ್ಪರ ಒಪ್ಪಿ ಇಲ್ಲದೆ ಗೇಣಿದಾರರಿಂದ ರೈತರಿಗಾದ ನಷ್ಟವನ್ನು ಸರಿಪಡಿಸಬೇಕು, ತೆಗೆದುಕೊಂಡ ಗೇಣಿಗೆ ಮಾಲಿಕರು ರಶೀದಿ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂಡಿಟ್ಟುಕೊಂಡು ರೈತ ಸಂಘ ಚಳವಳಿ ಆರಂಭಿಸಿತು. ರೈತರ ಚಳವಳಿಯನ್ನು ಹತ್ತಿಕ್ಕಲು ಭೂಮಾಲಿಕರು ಪ್ರಯತ್ನಿಸಿದರು. ರೈತ ಸಂಘದ ಚಳವಳಿಗಳಲ್ಲಿ ಭಾಗವಹಿಸುವ ರೈತರನ್ನು ಹೆದರಿಸಿ ಬೆದರಿಸಿ ದೂರ ಇಡಲು ಪ್ರಯತ್ನಿಸಿದರು. ರೈತರನ್ನು ಗೇಣಿಗೆ ನೀಡಿದ ಭೂಮಿಗೆ ಪ್ರವೇಶಿಸದಂತೆ ತಡೆದರು. ಭೂಮಾಲಿಕರು ಈ ದಬ್ಬಾಳಿಕೆಗೆ ಮಣಿಯದೆ ರೈತರು ಪ್ರತಿದಿನ ನೇಗಿಲು ನೋಗಗಳೊಂದಿಗೆ ತಮ್ಮ ಹೊಲಗಳಿಗೆ ಪ್ರವೇಶಿಸುತ್ತಿದ್ದರು. ಪ್ರತಿಭಟಿಸುವ ರೈತರನ್ನು ನೇಗಿಲು ನೊಗ ಸಮೇತ ಬಂಧಿಸುತ್ತಿದ್ದರು. ಮುಖ್ಯ ರೈತ ನಾಯಕರ ಬಂಧನವಾಗುವುದರೊಂಧಿಗೆ ಚಳವಳಿ ತಣ್ಣಗಾಗುವ ಲಕ್ಷಣಗಳು ಕಂಡುಬಂದವು. ಆ ಸಂದರ್ಭದಲ್ಲಿ ರಾಜ್ಯ ಸೋಷಿಯಲಿಸ್ಟ್ ಪಕ್ಷ ಚಳವಳಿಯ ಸೂತ್ರ ಹಿಡಿಯಿತು. ಗೋಪಾಲಗೌಡರ ಪ್ರವೇಶದಿಂದ ರೈತ ಚಳವಳಿ ಸಮಾಜವಾದಿ ಚಳವಳಿಯಾಗಿ ಮಾರ್ಪಟ್ಟಿತು. ರೈತ ಅಂದೋಲನ ಬಲಗೊಂಡಿತು. ಗೇಣಿ ಅಳತೆಯ ತಕರಾರಿನ ಹೋರಾಟ ಉಳುವವನೇ ಹೊದ ಒಡೆಯನಾಗಬೇಕೆನ್ನುವ ಮಟ್ಟಿಗೆ ಬೆಳೆಯಿತು. ೧೯೫೧ರಲ್ಲಿ ರಾಮಾಮನೋಹರ ಲೋಹಿಯಾ ಬಂಧಿತ ರೈತರನ್ನು ಜೈಲಿನಲ್ಲಿ ಭೇಟಿಯಾಗಿ ಧೈರ್ಯ ತುಂಬಿದರು. ಸಾಗರದ ಗಾಂಧಿ ಮೈದಾನದಲ್ಲಿ ಸೇರಿದ ರೈತ ಸಮೂಹವನ್ನುದೇಶಿಸಿ ಭಾಷಣ ಮಾಡಿದರು. ಸರಕಾರ ಮತ್ತು ಜಮಿನ್ದಾರರ ನಿಲುವನ್ನು ಲೋಹಿಯಾ ಖಂಡಿಸಿದರು. ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕಾಗೋಡಿಗೆ ಹೋಗಿ ಸಹಸ್ರಾರು ರೈತರೊಂದಿಗೆ ಸರಕಾರದ ತಡೆಯನ್ನು ಮುರಿದು ಕೃಷಿ ಭೂಮಿಯಲ್ಲಿ ಪ್ರವೇಶ ಮಾಡಿದರು.[13] ಸಾಗರ ರೈತರ ಹೋರಾಟ ಸುತ್ತಮುತ್ತಲಿನ ಪ್ರದೇಶಗಳ ರೈತರಲ್ಲೂ ಸಂಚಲನ ಮೂಡಿಸಿತು. ಸೊರಬ ತಾಲ್ಲೂಕಿನ ರೈತರು ಸಾಗರಕ್ಕೆ ಬಂದು ಕಾಗೋಡು ಚಳವಳಿಗೆ ಬೆಂಬಲ ನೀಡಿದರು. ಈ ಎಲ್ಲ ಚಳವಳಿಗಳೂ ಶಿವಮೊಗ್ಗ ಜಿಲ್ಲೆಯ ರೈತ ಸಮುದಾಯವನ್ನು ತಮ್ಮದೇ ರೂಪದಲ್ಲಿ ಪ್ರಭಾವಿಸಿವೆ.

ಹೆಚ್ಚುವರಿ ಭೂಮಿ ಘೋಷಿತವಾಗಿರುವುದು ಮತ್ತು ಸ್ವಾಧೀನ ಪಡಿಸಿಕೊಂಡಿರುವುದು ಮತ್ತು ವಿತರಿಸಿದ್ದು ಕಡಿಮೆ ಇರಬಹುದು. ಆದರೆ ವಿತರಿಸಿದಲ್ಲಿ ಹೆಚ್ಚಿನ ಪಾಲು ದಲಿತರು ಪಡೆದಿದ್ದಾರೆ. ಇದು ದಲಿತ ಚಳವಳಿಯಿಂದ ಸಾಧ್ಯವಾಯಿತು. ಜಾತಿ ಪದ್ದತಿಯನ್ನು ವಿರೋಧಿಸುವ ಹಲವಾರು ಚಳವಳಿಗಳೂ ಕರ್ನಾಟಕದಲ್ಲಿ ನಡೆದಿವೆ. ಅವುಗಳಲ್ಲಿ ಮೈಸೂರು ಪ್ರಾಂತದಲ್ಲಿ ನಡೆದ ಬ್ರಾಹ್ಮಣೇತರ ಚಳವಳಿ ಮತ್ತು ಕರಾವಳಿ ಕರ್ನಾಟಕದ ನಾರಾಯಣ ಗುರುಸ್ವಾಮಿ ಚಳವಳಿಗಳು ಪ್ರಮುಖ. ಆದರೆ ಈ ಎರಡೂ ಚಳವಳಿಗಳಿಂದಲೂ ಕರ್ನಾಟಕದ ದಲಿತರಿಗೆ ವಿಶೇಷ ಉಪಯೋಗವಾಗಲಿಲ್ಲ. ನೆರೆಯ ತಮಿಳುನಾಡಿನ ಆತ್ಮ ಸಮ್ಮನ ಚಳವಳಿ ಪ್ರಭಾವ ಕರ್ನಾಟಕದ ಮೇಲೂ ಇದೆ. ದಕ್ಷಿಣ ಕರ್ನಾಟಕದಲ್ಲಿ ಆರಂಭವಾದ ಬ್ರಾಹ್ಮಣೇತರ ಚಳವಳಿ ಪೆರಿಯಾರ್ ಚಳವಳಿಯಿಂದ ಪ್ರಭಾವಿತವಾಗಿದೆ. ಆದರೆ ಪೆರಿಯಾರ್ ಚಳವಳಿಯಿಂದ ಪ್ರಭಾವಿತವಾದ ಚಳವಳಿ ಕರ್ನಾಟಕದಲ್ಲಿ ಕೇವಲ ಸರಕಾರಿ ಹುದ್ದೆಗಳನ್ನು ಹೊಂದುವುದಕ್ಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೀಟುಗಳ ಕಾದಿರಿಸುವಿಕೆಗೆ ಸೀಮಿತಗೊಂಡಿತ್ತು. ಎಲ್ಲೂ ಕೂಡ ಬ್ರಾಹ್ಮಣ ಮೌಲ್ಯಗಳನ್ನು ಪ್ರಶ್ನಿಸುವ ಕೆಲಸಕ್ಕೆ ಕರ್ನಾಟಕದ ಬ್ರಾಹ್ಮಣೇತರ ಚಳವಳಿ ಕೈಹಾಕಲಿಲ್ಲ. ಹಾಗೆ ನೋಡಿದರೆ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಹಿಂದುಳಿದ ಜಾತಿಗಳೂ ಗ್ರಾಮೀಣ ಮಟ್ಟದಲ್ಲಿ ಜಾತಿಪದ್ಧತಿಯ ಏಣಿಶ್ರೇಣಿಯನ್ನು ಕಾಪಾಡುವುದಕ್ಕೆ ಬೇಕಾಗಿರುವ ಬಲವನ್ನು ನೀಡಿ ಜಾತಿ ಪದ್ದತಿಯನ್ನು ಪೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬ್ರಾಹ್ಮಣ ವಿರೋಧಿ ಚಳವಳಿಗಳು ದಲಿತರಿಗೆ ವಿಶೇಷ ಉಪಯೋಗಕ್ಕೆ ಬರಲಿಲ್ಲ. ನಾರಾಯಣ ಗುರುಗಳು ಕೂಡ ಪೆರಿಯಾರ್ ಕ್ರಮದಲ್ಲೇ ದಲಿತರನ್ನು ಸೇರಿಸಿಕೊಂಡು ಜಾತಿ ಪದ್ದತಿ ದೋಷಗಳನ್ನು ತಿದ್ದಲು ಹೋರಟವರು. ಆದರೆ ಕರಾವಳಿ ಕರ್ನಾಟಕದಲ್ಲಿ ಅದು ಕೇವಲ ಒಂದು ಜಾತಿಯ (ಬಿಲ್ಲವರ) ಅಸಮಾನತೆಯನ್ನು ಹೋಗಲಾಡಿಸಲು ಸೀಮಿತವಾಯಿತು.

ಈ ಎಲ್ಲ ಕಾರಣಗಳಿಂದ ಕರ್ನಾಟಕದ ದಲಿತರು ತಮ್ಮ ವಿಮೋಚನೆಗೆ ತಮ್ಮದೇ ಚಳವಳಿ ಆರಂಭಿಸಬೇಕಾಯಿತು. ೧೯೬೮ರಿಂದಲೇ ಕರ್ನಾಟಕದಲ್ಲಿ ದಲಿತ ಚಳವಳಿಗಳು ವ್ಯವಸ್ಥಿತವಾಗಿ ಆರಂಭವಾಗಿದೆ. ಶ್ಯಾಮ್ ಸುಂದರ್ ಅವರ ಬೀಮ ಸೇನೆ ದಲಿತರಿಗೆ ಪ್ರತ್ಯೇಕ ಭೂಮಿ ಕೊಡುವುದು ಮಾತ್ರವಲ್ಲ ಪ್ರತ್ಯೇಕ ದಲಿತಸ್ತಾನ್ ರಚಿಸಬೇಕೆನ್ನುವ ಅಭಿಪ್ರಾಯ ಹೊಂದಿದ್ದರು.[14] ಬಸವಲಿಂಗಪ್ಪನವರು ದಲಿತರನ್ನು ಸಂಘಟಿಸಿದರು. ದೇವರಾಜ್ ಅರಸರ ಮಂತ್ರಿ ಮಂಡಲದ ಪ್ರಭಾವಿ ಮಂತ್ರಿಯಾಗಿ ಕೆಲಸ ಮಾಡಿದ್ದರು. ೧೯೭೪ರ ಕಾಯಿದೆಯಲ್ಲಿ ಭೂರಹಿತ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿಶೇಷ ಕ್ಲಾಸ್‌ಗಳನ್ನು ಸೇರಿಸುವಲ್ಲಿ ಬಸವಲಿಂಗಪ್ಪನವರ ಪಾತ್ರವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ದಲಿತ ಸಂಘರ್ಷ ಸಮಿತಿ ಆರಂಭವಾಗುವುದರೊಂದಿಗೆ ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ಚಳವಳಿಗಳು ಗ್ರಾಮೀಣ ಪ್ರದೇಶಗಳಿಗೂ ಹಬ್ಬಿತು. ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸುವುದರೊಂದಿಗೆ ದಲಿತ ಸಂಘರ್ಷ ಸಮಿತಿ ದಲಿತರ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದೆ. ಈ ಚಳವಳಿಗಳಿಗೂ ಭೂಸುಧಾರಣೆಯಲ್ಲಿ ದಲಿತರಿಗಾದ ಅಲ್ಪಸ್ವಲ್ಪ ಲಾಭಗಳ ನಡುವೆ ಸಂಬಂಧ ಕಲ್ಪಿಸಲಾಗುವುದಿಲ್ಲ. ಆದರೆ ಈ ಚಳವಳಿಗಳು ದಲಿತರಲ್ಲಿ ಸ್ವಾಭಿಮಾನವನ್ನು ಮೂಡಿಸಿ ತಮ್ಮ ಮಾನ ಸನ್ಮಾನಗಳ ಬಗ್ಗೆ ಆಲೋಚಿಸುವಂತೆ ಮಾಡಿವೆ. ಅಷ್ಟುಮಾತ್ರವಲ್ಲ ಹೋರಾಟ ಮಾಡದೇ ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವ ಮೂಲಭೂತ ಪಾಠವನ್ನು ಕೂಡ ಈ ಚಳವಳಿಗಳೂ ತಕ್ಕಮಟ್ಟಿಗೆ ಮಾಡಿವೆ. ಇವೆಲ್ಲ ಸಂಗತಿಗಳೂ ಭೂಸುಧಾರಣ ಕಾಯಿದೆಯ ಅನುಷ್ಠಾನವ್ನು ಸ್ವಲ್ಪಮಟ್ಟಿಗೆ ಪ್ರಭಾವಿಸಿರಬಹುದು. ಹೆಚ್ಚುವರಿ ಭೂಮಿ ವಿತರಣೆಯಲ್ಲಿ ದಲಿತರಿಗೆ ಸಲ್ಲಬೇಕಾದ ಪಾಲು ಪಡೆಯುವಲ್ಲಿ ಈ ಸಂಘಟನೆಗಳು ತಮ್ಮ ಪಾತ್ರ ನಿರ್ವಹಿಸಿವೆ. ಭೂಮಿ ಮತ್ತು ರಾಜಕೀಯ ಜತೆಜತೆಗೆ ಹೋಗಿದೆ. ಭೂಮಾಲಿಕರು ಆರಂಭದಿಂದಲೇ ಕರ್ನಾಟಕದ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಆದುದರಿಂದ ತಮ್ಮ ಆಸಕ್ತಿಗಳಿಗನುಗುಣವಾದ ಭೂಪಾಲಿಸಿಗಳನ್ನು ಜಾರಿಗೆ ತಂದರು. ಭೂಸುಧಾರಣೆಯಿಂದ ದೊಡ್ಡ ಭೂಮಾಲಿಕರು ಸ್ವಲ್ಪ ಭೂಮಿ ಕಳೆದುಕೊಂಡರು. ಆದರೆ ಅದು ರಾಜಕೀಯದಲ್ಲಿ ಸಕ್ರಿಯವಾಗಿದ್ದ ಮಧ್ಯಮ ಮತ್ತು ಅರೆ ಮಧ್ಯಮ ಭೂಮಾಲಿಕರಲ್ಲಿ ಸಂಗ್ರಹವಾಯಿತು. ಗೇಣಿದಾರರು ಸಣ್ಣ ಅತೀ ಅಣ್ಣ ರೈತರಾಗಿ ತೃಪ್ತಿ ಹೊಂದಬೇಕಾಯಿತು. ಅತೀ ಸಣ್ಣ ರೈತರು ಮತ್ತು ಭೂರಹಿತರ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಇಬ್ಬರೂ ತಮ್ಮ ಮೂರು ಹೊತ್ತಿನ ಊಟಕ್ಕಾಗಿ ಮತ್ತೊಬ್ಬರಲ್ಲಿ ಕೂಲಿ ಮಾಡುವುದು ಅನಿವಾರ್ಯ. ಇವರ ಈ ಅತಂತ್ರ ಸ್ಥಿತಿ ಬಲಾಢ್ಯರ ದುಡ್ಡು ಹಾಕಿ ದುಡ್ಡು ತೆಗೆಯುವ ರಾಜಕೀಯಕ್ಕೆ ಹೇಳಿಮಾಡಿಸಿದಂತಿದೆ. ಕಡಿಮೆ ಬೆಲೆಗೆ ಅಕ್ಕಿ, ಕುಡಿಯುವ ನೀರು. ವಸತಿ. ಶೌಚಾಲಯ ಇತ್ಯಾದಿಗಳ ಭರವಸೆ ಇವರ ಓಟನ್ನು ಪಡೆಯಲು ಸಾಕಾದವು. ತಕ್ಷಣಗಳ ಬೇಕುಬೇಡಗಳನ್ನು ಪೂರೈಸುವುದೇ ದೊಡ್ಡ ಅಭಿವೃದ್ಧಿಯೆಂದು ಬಲಾಢ್ಯರು ಇವರನ್ನು ನಂಬಿಸಿದ್ದಾರೆ. ಸತತ ಕೊರತೆಯ ಸ್ಥಿತಿ ಇವರನ್ನು ನಿಷ್ಕ್ರೀಯ ರಾಜಕೀಯದತ್ತ ದೊಡುತ್ತಿದೆ. ಇಂತಹ ಸ್ಥಿತಿ ಬದಲಾಗಬೇಕಾದರೆ ಮತ್ತೊಂದು ಭೂಸುಧಾರಣೆ ಅನಿವಾರ್ಯ.

[1] ಎಮ್. ವಿ. ನಾಡಕರ್ಣಿ, “ ಟಿನೆನ್ಸ್ ಪ್ರೊರ್ಮ್ ದಿ ಡೊಮಿನೆಂಟ್ ಕ್ಲಾಸ್ – ಎ ಡೆವಲಪಿಂಗ್ ಕಾಂಟ್ರಡಿಕ್ಷನ್ ಇನ್ ಲ್ಯಾಂಡ್ ರಿಫಾರ್ಮ್ಸ್,’ ಎಕಾನಮಿಕ್ ಆಂಡ್ ಪೊಲಟಿಕಲ್ ವೀಕ್ಲಿ, ೧೧, (೫೨), ಡಿಸೆಂಬರ್ ೧೯೭೬, ಪು. ೧೩೭ – ೧೪೬

[2] ಲ್ಲಿತ ನಟರಾಜ್ ಮತ್ತು ವಿ.ಕೆ. ನಟರಾಜ್, ಲಿಮಿಟ್ಸ್ ಆಫ್ ಪೋಪ್ಯುಲಿಸಂ – ದೇವರಾಜ್ ಆರಸ್ ಆಂಡ್ ಕರ್ನಾಟಕ ಪೊಲಿಟಿಕ್ಸ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೧೭(೩೭), ಸೆಪ್ಟಂಬರ್ ೧೯೮೨, ಪು. ೧೫೦೩ – ೦೬

[3] ಚಂದ್ರ ಶೇಖರ್ ದಾಮ್ಲೆ, “ಲ್ಯಾಂಡ್ ರಿಫಾರ್ಮ್ಸ್ ಲೆಜೆಶ್ಲೇಷನ್ ಇನ್ ಕರ್ನಾಟಕ – ಮಿಥ್ ಆಫ್ ಸಕ್ಸಸ್,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗೋಸ್ಟ್ ೧೯೮೯, ಪು. ೧೮೯೬ – ೧೯೦೬

[4] ಅಮಲ್ ರೇ ಮತ್ತು ಜಯಲಕ್ಷ್ಮಿ ಕುಮ್ಟಾಲ, ಜಿಲ್ಲಾ ಪರಿಷದ್ ಪ್ರೆಸಿಡೆಂಟ್ಸ್ ಇನ್ ಕರ್ನಾಟಕ ದಿಯಕ್ ಸೋಶಿಯಲ್ ಬ್ಯಾಗ್ರೌಂಡ್ ಆಂಡ್ ಇಂಪ್ಲಿಕೇಶನ್ ಫಾರ್ ಡೆವಲಪ್‌ಮೆಂಟ್, ಎಕನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೨(೪೨/೪೨), ಆಕ್ಟೋಬರ್ ೧೯೮೭, ಪು. ೧೮೨೫ – ೩೦

[5] ಆಮಲ್ ರೇ ಮತ್ತು ಜಯಲಕ್ಷ್ಮಿ ಕುಮ್ಟಾಲ, ಜಿಲ್ಲಾ ಪರಿಷದ್ ಪ್ರೆಸಿಡೆಂಟ್ಸ್ ಇನ್ ಕರ್ನಾಟಕ, ಪು. ೧೮೨೫ – ೩೦

[6] ಆಮಲ್ ರೇ ಮತ್ತು ಜಯಲಕ್ಷ್ಮಿ ಕುಮ್ಟಾಲ, ಜಿಲ್ಲಾ ಪರಿಷದ್ ಪ್ರೆಸಿಡೆಂಟ್ಸ್ ಇನ್ ಕರ್ನಾಟಕ, ಪು. ೧೮೨೫ – ೩೦ ಮತ್ತು ಎಸ್.ಎಕ್ಸ್. ಜೇಮ್ಸ್ ಮೆಲ್ಚೊಯರ್, ಇಂಪ್ಲಿಮೆಂಟೇಶನ್ ಆಫ್ ಲ್ಯಾಂಡ್ ರಿಫಾರ್ಮ್ಸ್, ಪು. ೭೯೯ – ೮೦೧

[7] ಹರಾಲ್ಡ್ ಗೊಡ್, ಜನರಲ್ ಎಲೆಕ್ಷನ್ಸ್ ೧೯೯೬ – ಕರ್ನಾಟಕ: ಡಿಕ್ಲೈನ್ ಆಂಡ್ ಫಾಲ್ ಆಫ್ ಕಾಂಗ್ರೆಸ್ ಮೆಶಿನ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೨ (೩೭), ಸೆಪ್ಟಂಬರ್ ೧೯೯೭, ಪು.೨೩೩೫ – ೪೯

[8] ಹೆರಾಲ್ಡ್ ಗೊಡ್, ಜನರಲ್ ಇಲೆಕ್ಷನ್ಸ್, ೧೯೯೬, ಪು. ೨೩೩೫ – ೪೯

[9] ಜಿ.ವಿ.ಜೋಷಿ, “ಇಂಪ್ಲಿಮೆಂಟೇಶನ್ ಆಫ್ ಟೆನೆನ್ಸಿ ರಿಫಾರ್ಮ್ಸ್ – ದಿ ಕೇಸ್ ಆಫ್ ಉತ್ತರ ಕನ್ನಡ ಡಿಸ್ಟ್ರಿಕ್ಟ್,’ ಆಬ್ದುಲ ಆಜೀಜ್ ಮತ್ತು ಸುಧೀರ್ ಕೃಷ್ಣ (ಸಂ), ಲ್ಯಾಂಡ್ ರಿಫಾರ್ಮ್ಸ್ ಇನ್ ಇಂಡಿಯಾ ವಾಲ್ಯೂಮ್ ಕರ್ನಾಟಕಪ್ರೊಮಿಸಸ್ ಕ್ಯಾಪ್ಟ್ ಆಂಡ್ ಮಿಸ್ಡ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಸನ್ಸ್, ೧೯೮೪, ಪು. ೧೩೫ – ೧೬೦

[10] ಜಿ.ವಿ.ಜೋಷಿ, “ಇಂಪ್ಲಿಮೆಂಟೇಶನ್ ಆಫ್ ಟೆನೆನ್ಸಿ ರಿಫಾರ್ಮ್ಸ್, ಪು. ೧೩೫ – ೧೬೦

[11] ಜಿ.ವಿ.ಜೋಷಿ, “ಇಂಪ್ಲಿಮೆಂಟೇಶನ್ ಆಫ್ ಟೆನೆನ್ಸಿ ರಿಫಾರ್ಮ್ಸ್, ಪು. ೧೩೫ – ೧೬೦

[12] ಹೆಚ್‌. ಗಣಪತಿಯಪ್ಪ, ‘ಕಾಗೋಡು ಸತ್ಯಾಗ್ರಹದ ಹುಟ್ಟು ಮತ್ತು ಬೆಳವಣಿಗೆ,’ ಕಾಗೋಡು ಚಳವಳಿ – ಸುವರ್ಣ ಸಂಪುಟ, ಸಾಗರ: ಮಲೆನಾಡು ಜಾನಪದ ಲೋಕ, ೨೦೦೨, ಪು. ೨೩ – ೨೯

[13] ಹೆಚ್‌. ಗಣಪತಿಯಪ್ಪ ‘ಕಾಗೋಡು ಸತ್ಯಾಗ್ರಹ, ಪು. ೨೩ – ೨೯

[14] ಮನೋಹರ್ ಯಾದವ್, “ಕೇರಿಯರ್ ಆಫ್ ದಲಿತ್ ಮೂವ್‌ಮೆಟ್ಸ್ ಇನ್ ಕರ್ನಾಟಕ” ಜರ್ನಲ್ ಆಫ್ ಸೋಶಿಯಲ್ ಆಂಡ್ ಎಕಾನಮಿಕ್ ಡೆವಲಪ್ಮೆಂಟ್, ೧ (೧), ೧೯೯೭, ಪು. ೧೦೭ – ೨೭