ಭೂಮಿ ಪ್ರಶ್ನೆ ಕಳೆದ ಶತಮಾನದ ಒಂದು ಸಮಸ್ಯೆಯೆಂದು ಪರಿಗಣಿಸಲ್ಪಟ್ಟಿದೆ. ಆವಾಗ ಅದರ ಪರಿಹಾರಕ್ಕೆ ಸಾಕಷ್ಟು ಪ್ರಯತ್ನಿಸಲಾಗಿದೆ. ಕರ್ನಾಟಕದಲ್ಲಂತೂ ೧೯೭೪ರ ಕಾಯಿದೆ ಅನುಷ್ಠಾನಗೊಂಡ ನಂತರ ಭೂಮಿ ಸಮಸ್ಯೆ ಸಂಪೂರ್ಣ ಪರಿಹಾರಗೊಂಡಿದೆ ಎನ್ನುವ ವಾತಾವರಣ ಇದೆ. ಇಂದು ಭೂಮಿ ಪ್ರಶ್ನೆ ಚರ್ಚೆಯಲ್ಲಿದ್ದರೆ ಅದು ಯಾವ ರಾಜಕಾರಣಿ ಎಷ್ಟು ಭೂಮಿ ಲಪಟಾಯಿಸಿದ, ಯಾವ ಉದ್ದಿಮೆಗೆ ಎಷ್ಟು ಭೂಮಿ ಕೊಡಲಾಗಿದೆ. ವಿಶೇಷ ಆರ್ಥಿಕ ವಲಯಗಳಿಗೆ ಎಲ್ಲಿ ಭೂಮಿ ಕೊಡಲಾಗಿದೆ ಇತ್ಯಾದಿಗಳು ಚರ್ಚೆಯಲ್ಲಿವೆ. ಭೂಮಿ ಕಳೆದುಕೊಂಡವರು ಸಣ್ಣಪುಟ್ಟ ಸಂಘಟನೆಗಳನ್ನು ಕಟ್ಟಿಕೊಂಡು ಈ ಎಲ್ಲವುಗಳನ್ನು ವಿರೋಧಿಸುವುದು ಕೂಡ ಚರ್ಚೆಯಲ್ಲಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಇನ್ನೊಂದು ಭೂಸುಧಾರಣೆ ಅನಿವಾರ್ಯ ಎನ್ನುವ ಚರ್ಚೆ ಎಲ್ಲೂ ನಡೆಯುತ್ತಿಲ್ಲ. ಈ ಪುಸ್ತಕದ ನಾಲ್ಕು ಅಧ್ಯಾಯಗಳಲ್ಲಿ ಯಾಕೆ ಇನ್ನೊಂದು ಭೂಸುಧಾರಣೆ ಅನಿವಾರ್ಯ ಎನ್ನುವುದನ್ನು ವಾದಿಸಿದ್ದೇನೆ. ಭೂಸುಧಾರಣೆ ಚರ್ಚೆ ಈಗ ಅಪ್ರಸ್ತುತವಾಗಲು ಬಲವಾದ ಕಾರಣ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೂಸುಧಾರಣೆ ಪರಿಣಾಮಕಾರಿಯಾಗಿ ನಡೆದಿದೆ ಎನ್ನುವ ನಂಬಿಕೆ. ಸಾಕಷ್ಟು ಮಂದಿ ಗೇಣಿದಾರರು ಭೂಮಿ ಪಡೆದಿದ್ದಾರೆ, ಹೆಚ್ಚುವರಿ ಭೂಮಿ ವಿತರಣೆಯಾಗಿದೆ. ಭೂರಹಿತರಿಗೆ ಭೂಮಿ ದೊರಕಿದೆ ಇತ್ಯಾದಿ ಉದ್ದೇಶಗಳು ಈಡೇರಿವೆ ಎನ್ನುವ ನಂಬಿಕೆ ಇದೆ. ಈ ಎಲ್ಲ ಸಂಗತಿಗಳು ಸರಿಯಲ್ಲ ಎಂದು ಪುಸ್ತಕ ವಾದಿಸಿದೆ. ೧೯೭೪ರ ಕಾಯಿದೆ ಕ್ರಾಂತಿ ಮಾಡಿಲ್ಲ ಏಕೀಕರಣದ ಸಂದರ್ಭದಲ್ಲಿದ್ದ ಭೂಸಂಬಂಧಗಳು ಇಂದು ಕೂಡ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮುಂದುವರಿಯುತ್ತಿದೆ ಎಂದು ಹಿಂದಿನ ಅಧ್ಯಾಯದಲ್ಲಿ ಅಂಕಿಅಂಶ ಸಮೇತ ವಾದಿಸಿದ್ದೇನೆ. ಆದುದರಿಂದ ಮತ್ತೊಂದು ಭೂಸುಧಾರಣೆ ಅನಿವಾರ್ಯ ಎನ್ನುವುದು ಈ ಪುಸ್ತಕದ ವಾದ.

ಇಂದು ಕೂಡ ಶೇ. ೩೩ರಷ್ಟು ಕುಟುಂಬಗಳಿಗೆ ಭೂಮಿಯೇ ಇಲ್ಲ. ಇವರಲ್ಲಿ ಭೂಮಿಯ ಅವಶ್ಯಕತೆ ಇಲ್ಲದವರು ಅಥವಾ ಕೃಷಿಯೇತರ ಮೂಲಗಳಿಂದ ಆದಾಯಪಡಿಯುವವರು ಸೇರಿದ್ದಾರೆ. ಆದುದರಿಂದ ಇದನ್ನು ದೊಡ್ಡ ಸಂಖ್ಯೆಯೆಂದು ಪರಿಗಣಿಸುವ ಅಗತ್ಯವಿಲ್ಲ ಎಂದು ವಾದಿಸಬಹುದು. ಇದು ಸರಿ. ಆದರೆ ಸರಕಾರಿ ಲೆಕ್ಕಚಾರ ಪ್ರಕಾರ ಶೇ. ೪೮ರಷ್ಟು ಸಣ್ಣ ರೈತರೆಂದು ವರ್ಗೀಕರಿಸಿದವರಲ್ಲಿ ಭೂರಹಿತರ ಹಲವಾರು ಗುಣಗಳಿವೆ. ಒಂದು, ಈ ಸಣ್ಣ ರೈತರ ಸ್ವಾಧೀನ ನೀರಾವರಿ ಪ್ರದೇಶದಲ್ಲಿ ಒಂದು ಎಕರೆಗಿಂತ ಕಡಿಮೆ ಭೂಮಿ ಇದೆ. ಅರೆ ನೀರಾವರಿ ಪ್ರದೇಶಗಳಲ್ಲಿ ಒಂದರಿಂದ ಒಂದುಕಾಲು ಎಕರೆಯಷ್ಟು ಭೂಮಿ ಇದೆ. ಒಣಭೂಪ್ರದೇಶಗಳಲ್ಲಿ ಒಂದೂವರೆ ಎಕರೆ ಭೂಮಿ ಇದೆ. ಎರಡು, ತಮ್ಮ ಸ್ವಾಧೀನ ಇರುವ ಸಣ್ಣ ಹಿಡುವಳಿಯಿಂದ ಈ ಹೊತ್ತಿಗೆ ರಾಜ್ಯದಲ್ಲಿ ಲಭ್ಯವಿರುವ ಮೂಲ ಸೌಕಾರ್ಯಗಳನ್ನು ಬಳಸಿಕೊಂಡು ಇವರು ತಮ್ಮ ಮೂರು ಹೊತ್ತಿನ ಊಟ ಗಳಿಸಲು ಸಾಧ್ಯವಿಲ್ಲ. ಮೂರು, ಆದುದರಿಂದ ಇವರು ಕೂಡ ಭೂರಹಿತರಂತೆ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮತ್ತೊಬ್ಬರಲ್ಲಿ ಕೂಲಿ ಮಾಡುವುದು ಅನಿವಾರ್ಯ. ನಾಲ್ಕು, ಗ್ರಾಮೀಣ ಪ್ರದೇಶದ ಮೂಲಸೌಕಾರ್ಯಗಳ ಕೊರತೆಯಿಂದ ಕೃಷಿ ಉತ್ಪನ್ನ ತುಂಬಾ ಕಡಮೆಯಾಗಿದೆ. ಈಗಲೂ ಕೆಲವೇ ಕೆಲವು ಕುಟುಂಬಗಳ (ಶೇ.೨೫) ಸ್ವಾಧೀನದಲ್ಲಿ ರಾಜ್ಯದ ಶೇ. ೬೩ರಷ್ಟು ಭೂಮಿ ಶೇಖರಣೆಯಾಗಿದೆ. ಇದರಿಂದಾಗಿ ಅಲ್ಪಪ್ರಮಾಣದ ಭೂಮಿಯಲ್ಲಿ (ಶೇ.೧೩ರಷ್ಟು ಭೂಮಿಯಲ್ಲಿ) ದೊಡ್ಡ ಸಂಖ್ಯೆಯ ಕೃಷಿಕರು (ಶೇ. ೪೮ ಕುಟುಂಬಗಳು) ತೊಡಗಿಸಿಕೊಂಡಿವೆ. ಇದು ಲೆಕ್ಕಕಿಂತ ಹೆಚ್ಚು ಮಂದಿ ಸಣ್ಣ ಸಣ್ಣ ತುಂಡು ಭೂಮಿಗಳಲ್ಲಿ ತೊಡಗಿಸಿಕೊಂಡ ಚಿತ್ರಣವನ್ನು ಕೊಡುತ್ತಿದೆ. ಹಿಡುವಳೀ ಗಾತ್ರದ ಜತೆಗೆ ಮುಲಸೌಕಾರ್ಯ ಹಾಗೂ ಕೃಷಿಯೇತರ ಚಟುವಟಿಕೆಗಳ ಕೊರತೆಗಳು ಅತೀ ಸಣ್ಣ ರೈತರ ಸಮಸ್ಯೆಯನ್ನು ಬಿಗಾಡಯಿಸಿವೆ. ಈ ಕಾರಣಗಳಿಂದಾಗಿ ಇವರು ಮೂರು ಹೊತ್ತಿನ ಊಟಕ್ಕಾಗಿ ವಲಸೆ ಹೋಗುವುದು ಅನಿವಾರ್ಯವಾಗಿದೆ. ಈ ಎಲ್ಲ ಗುಣಲಕ್ಷಣಗಳ ಹಿನ್ನೆಲೆಯಲ್ಲಿ ಇವರನ್ನೂ ಭೂರಹಿತರೊಂದಿಗೆ ಸೇರಿಸಿದರೆ ಕರ್ನಾಟಕದಲ್ಲಿ ಭೂರಹಿತರ ಸಂಖ್ಯೆ ಶೇ. ೮೧ ಆಗುತ್ತದೆ. ಶೇ. ೩೩ ಭೂರಹಿತ ಕುಟುಂಬಗಳಲ್ಲಿ ಶೇ. ೧೩ರಷ್ಟ ಕೃಷಿಯೇತರ ಮೂಲಗಳಿಂದ ತಮ್ಮ ಆದಾಯವನ್ನು ಪಡೆಯುತ್ತಾರೆಂದು ಊಹಿಸಿದರೂ ಕರ್ನಾಟಕದ ಭೂರಹಿತರ ಸಂಖ್ಯೆ ಶೇ. ೬೮ ಆಗುತ್ತದೆ.

ಪೇಟೆ ಪಟ್ಟಣಗಳನ್ನು ಬೆಳೆಸುವ ಹಳಸಲು ಅಭಿವೃದ್ಧಿ ಮಾದರಿಗಳಿಂದ ಈ ಪ್ರಮಾಣದ ಭೂರಹಿತರ ಸಮಸ್ಯೆ ಪರಿಹಾರವಾಗುವುದಿಲ್ಲ. ಸರಕಾರಿ ಅಂಕಿಅಂಶಗಳನ್ನು ಮುಖಬೆಲೆಯಲ್ಲಿ ತೆಗೆದುಕೊಂಡರೂ ಆರು ದಶಕಗಳಲ್ಲಿ ಬೆಳೆಸಿದ ಪೇಟೆಪಟ್ಟಣಗಳು ಶೇ. ೩೬ರಷ್ಟು ಜನರಿಗೆ ಬದುಕು ಕೊಡತ್ತಿದೆ. ಈ ಅಂಕಿಅಂಶಗಳನ್ನು ಸ್ವಲ್ಪಕೆದಕಿದರೂ ಬೇರೆಯದೇ ಚಿತ್ರಣ ದೊರೆಯುತ್ತದೆ. ಪೇಟೆ ಪಟ್ಟಣಗಳೆಂದು ವರ್ಗೀಕರಿಸುವ ಶೇ. ೩೬ರಲ್ಲಿ ತಾಲ್ಲೂಕು ಕೇಂದ್ರಗಳು ಮತ್ತು ಪಟ್ಟಣ ಪಂಚಾಯಿತಿಗಳು ಸೇರಿವೆ. ಇವುಗಳನ್ನು ಕೃಷಿಯಿಂದ ಭಿನ್ನ ಬದುಕು ಕೊಡುವ ತಾಣಗಳೆಂದು ಬಗೆದರೆ ಅದಕ್ಕಿಂತ ದೊಡ್ಡ ಮೂರ್ಖತನ ಯಾವುದೂ ಇಲ್ಲ. ಯಾಕೆಂದರೆ ಇವುಗಳಲ್ಲಿ ದೊಡ್ಡ ಮಟ್ಟದ ಯಾವುದೇ ಕೈಗಾರಿಕೆ ಅಥವಾ ಸೇವಾ ವಲಯಗಳ ಉದ್ದಿಮೆಗಳಿಲ್ಲ. ಇಲ್ಲಿ ಇರುವುದು ಸಣ್ಣ ಪುಟ್ಟ ಕಟ್ಟೋಣ ಕೆಲಸಗಳು, ಗ್ಯಾರೇಜ್ ಕೆಲಸಗಳು, ಟೆಲೆಫೋನ್ ಭೂತ್ ಕಾಯುವ ಕೆಲಸ, ರಿಕ್ಷಾ ಅಥವಾ ಬಾಡಿಗೆ ವಾಹನಗಳ ಚಾಲಕ ಅಥವಾ ಕ್ಲೀನರ್, ಕಂಡಕ್ಟರ್ ಕೆಲಸಗಳು, ಹೊಟೇಲು ಅಂಗಡಿಗಳಲ್ಲಿ ಸಹಾಯಕರ ಕೆಲಸ ಇತ್ಯಾದಿಗಳು ಮಾತ್ರ. ಈ ಎಲ್ಲ ಕೆಲಸಗಳಲ್ಲೂ ತಿಂಗಳಲ್ಲಿ ಒಂದರಿಂದ ಎರಡು ಸಾವಿರ ಆದಾಯ ಬಂದರೆ ಪುಣ್ಯ ಆದುದರಿಂದ ಶೇ. ೧೬ಕ್ಕಿಂತಲೂ ಹೆಚ್ಚಿನ ಮಂದಿ ಇಂತಹ ಸಣ್ಣಪುಟ್ಟ ಪೇಟೆಗಳ ಕೆಲಸದಲ್ಲಿ ಇರುವವರನ್ನು ಸೇರಿಸಿದರೆ ಇಂದು ಕೂಡ ಕರ್ನಾಟಕದ ಶೇ. ೮೦ ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆಂದು ವಾದಿಸಬಹುದು.

ಇನ್ನೂ ಶೇ. ೨೦ರಷ್ಟಿರುವ ದೊಡ್ಡ ಪೇಟೆ ಪಟ್ಟಣಗಳ ಕೈಗಾರಿಕೆ ಮತ್ತು ಸೇವಾ ವಲಯಗಳು ಸೃಷ್ಟಿಸುವ ಉದ್ಯೋಗಗಳ ಗುಣಮಟ್ಟನ್ನು ಹೇಳುವುದೇ ಬೇಡ. ಇಲ್ಲಿನ ಶೇ. ೯೦ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳೂ ಅಸಂಘಟಿತ ವಲಯಕ್ಕೆ ಸೇರಿದವರು. ಅಂದರೆ ಸರಕಾರಿ ನಿಯಮನುಸಾರ ಕೊಡಬೇಕಾಗಿರುವ ಕೂಲಿ, ಕೆಲಸದ ಅವಧಿ, ರಜೆ ಇತ್ಯಾದಿಗಳು ಇಲ್ಲದವರು. ಮಾಲಿಕನಿಗೆ ಕುಶಿ ಬಂದಾಗ ಕೆಲಸ ಕೊಟ್ಟು ಬೇಡ ಎಂದಾಗ ಮನೆಗೆ ಕಳುಹಿಸುವ ಕೆಲಸ ಇದು. ಇನ್ನು ಶಿಕ್ಷಣ, ಆರೋಗ್ಯ ವಸತಿ, ಸಾರಿಗೆ ಇತ್ಯಾದಿ ಸವಲತ್ತುಗಳನ್ನು ಈ ಶೇ. ೯೦ರಷ್ಟು ಉದ್ಯೋಗಿಗಳು ಕನಸಲ್ಲೂ ಊಹಿಸಲು ಸಾಧ್ಯವಿಲ್ಲ. ಕೊಳೆಗೇರಿಯಲ್ಲಿ ವಸತಿ. ಆರೋಗ್ಯ ಕೆಟ್ಟರೆ ಕುಟುಂಬದವರು ನೋಡಿಕೊಳ್ಳ ಬೇಕು. ಸಂಸಾರ ಜತೆಗಿದ್ದರೆ ಕೊಳೆಗೇರಿ ಪಕ್ಕದಲ್ಲಿರುವ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ. ಇವೆಲ್ಲವೂ ವಾಸ್ತವ. ಆದರೆ ಇವುಗಳು ಬಹುತೇಕರ ಪ್ರಜ್ಞೆಯ ಬಾಗವಾಗಿಲ್ಲ. ನಮ್ಮಲ್ಲಿ ಪೇಟೆ ಪಟ್ಟಣಗಳೆಂದರೆ ಹಳ್ಳಿಯ ದುರ್ಭರ ಬದುಕಿನಿಂದ ಮುಕ್ತಿ ಎನ್ನುವ ಚಿತ್ರಣ ಇದೆ. ಸಾವಿರಾರು ರೂಪಾಯಿಗಳನ್ನು ಗಳಿಸಲು ಸಾಧ್ಯವಿರುವ ತಾಣ. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಉತ್ತಮ ಸಾರಿಗೆ, ಸಂಪರ್ಕ ಇತ್ಯಾದಿಗಳೆಲ್ಲ ಇರುವ ತಾಣ. ಹೀಗೆ ಪೇಟೆ ಪಟ್ಟಣಗಳೆಂದರೆ ಏನೇನೂ ಉತ್ತಮಗಳಿವೆಯೋ ಅವೆಲ್ಲವೂ ದೊರಕುವ ಜಾಗವೆಂದು ಪ್ರತೀತಿ ಇದೆ. ಖಂಡಿತವಾಗಿಯೂ ಎಲ್ಲವೂ ಉತ್ತಮ ಗುಣಮಟ್ಟದಲ್ಲಿ ಮತ್ತು ಬೇಕಾದಷ್ಟು ಪ್ರಮಾಣದಲ್ಲಿ ಪೇಟೆ ಪಟ್ಟಣಗಳಲ್ಲಿ ದೊರೆಯುತ್ತದೆ. ಆದರೆ ನಮ್ಮ ಮುಂದಿರುವ ಪ್ರಶ್ನೆ ಇವೆಲ್ಲವು ಯಾರಿಗೆ? ಮತ್ತು ಎಷ್ಟು ಜನರಿಗೆ? ದೊರೆಯುತ್ತದೆ ಎನ್ನುವುದು. ಕೇವಲ ಬೆರಳಣಿಕೆಯಷ್ಟು ಮಂದಿಗೆ ಮೇಲೆ ಹೇಳಿದ ಉತ್ತಮಗಳು ದೊರೆಯುತ್ತವೆ. ಇನ್ನುಳಿದ ಕೆಲವು ಮಂದಿಗೆ ಕಡಿಮೆ ಉತ್ತಮ ಸವಲತ್ತುಗಳು ದೊರೆಯುತ್ತವೆ. ಆದರೆ ಬಹುತೇಕರಿಗೆ ಪೇಟೆ ಪಟ್ಟಣಗಳಲ್ಲೂ ತುಂಬಾ ದುರ್ಬಲವಾದ ಬದುಕು ಕಾದಿದೆ.

ಖಂಡಿತವಾಗಿಯೂ ಪೇಟೆ ಪಟ್ಟಣಗಳಲ್ಲಿ ಹಳ್ಳಿಗಿಂತ ಹೆಚ್ಚಿನ ಉದ್ಯೋಗದ ಅವಕಾಶಗಳಿವೆ. ಹಳ್ಳಿಯಿಂದ ಹೆಚ್ಚಿನ ಕೂಲಿ ದೊರೆಯುತ್ತದೆ. ಆದರೆ ಈ ಎರಡು ಸವಲತ್ತಿಗೋಸ್ಕರ ಮನುಷ್ಯ ಪಡಬಾರದ ಪಾಡನ್ನು ಪೇಟೆ ಪಟ್ಟಣಗಳಲ್ಲಿ ಪಡಬೇಕು. ಕೊಳೆಗೇರಿಯ ಜೀವನವನ್ನು ಊಹಿಸಿಕೊಂಡರೆ ನಮ್ಮ ಸಂಸ್ಕೃತಿಯ ಬಗೆಗೇ ವಾಖರಿಕೆ ಬರುತ್ತದೆ. ಕೆಟ್ಟ ವಾಸನೆ ಬರುವ ಚರಂಡಿ ನೀರು ಪಕ್ಕದಲ್ಲೇ ಹರಿಯುತ್ತಿರುತ್ತದೆ. ಕೆಲವು ಕಡೆ ಚರಂಡಿ ನೀರು ಹರಿಯಲು ನಿರ್ಧಿಷ್ಟ ಜಾಗ ಇಲ್ಲ. ಎಲ್ಲ ಕಡೆ ಹರಿಯುತ್ತದೆ. ಚರಂಡಿ ನೀರಿನ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಅದರ ಮೇಲೊಂದು ಗೋಣಿ ತಾಟಿನ ಚಪ್ಪರ ಹಾಸಿದರೆ ಅದೊಂದು ಮನೆಯಾಗುತ್ತದೆ. ಕುಡಿಯುವ ನೀರು ಮತ್ತು ಹೊಲಸು ನೀರು ಎಲ್ಲಿ ಬೇರೆ ಬೇರೆಯಾಗುತದೆ ಮತ್ತು ಎಲ್ಲಿ ಒಂದಾಗುತ್ತದೆ ಎನ್ನುವುದು ಕಷ್ಟ. ಬೆಳಿಗ್ಗೆ ಎದ್ದು ಚೆಂಬು ಹಿಡಿದುಕೊಂಡು ರೈಲ್ವೆ ಹಳ್ಳಿ ಪಕ್ಕ ಕಾಯಬೇಕು. ಜೋಪಡಿಯಲ್ಲಿದ್ದ ತಂಗಳನ್ನ ತಿಂದು ಅಥವಾ ರಸ್ತೆಯ ಬದಿಯ ಬಂಡಿ ಹೊಟೇಲಲ್ಲಿ ತಿಂಡಿ ಶಾಸ್ತ್ರ ಮುಗಿಸಿ ಮೂರು ಕಾಸಿನ ಸಂಬಳದ ಕೆಲಸಕ್ಕೆ ದೌಡಾಯಿಸಬೇಕು. ಸರಕಾರಿ ನಿಯಮಾನುಸಾರ ದಿನಕ್ಕೆ ಎಂಟು ಗಂಟೆ ಕೆಲಸ. ಅದರೆ ಇವರು ದುಡಿಯುವಲ್ಲಿ ಕೆಲಸದ ಅವಧಿ ಎಂಟೇ ಗಂಟೆ ಆಗಿರುತ್ತದೆನ್ನುವ ಗ್ಯಾರಂಟಿ ಇಲ್ಲ. ಅದು ಹತ್ತು ಆಗಬಹುದು ಅಥವಾ ಹನ್ನೆರಡು ಕೂಡ ಆಗಬಹುದು. ಕೆಲಸಗಾರ ಮತ್ತು ಮಾಲಿಕನ ಶಕ್ತಿಯನುಸಾರ ಈ ಎಲ್ಲವು ತೀರ್ಮಾನ ಆಗುತ್ತದೆ. ಎಲ್ಲಿಂದಲೋ ವಲಸೆ ಬಂದು ನಾಲ್ಕು ಕಾಸು ದುಡಿದರೆ ಮಾತ್ರ ಒಪ್ಪೋತ್ತಿನ ಊಟ ಸಾಧ್ಯ ಎನ್ನುವ ಕೆಲಸಗಾರನಿಗೆ ಏನು ಶಕ್ತಿ ಇರಬಹುದು. ಶಕ್ತಿಯಲ್ಲ ಮಾಲಿಕನಲ್ಲೇ ಕೇಂದ್ರೀಕೃತವಾಗಿದೆ. ಆದುದರಿಂದ ಅವನು ನಿರ್ಧರಿಸಿದ ಸಂಬಳ, ಅವನು ನಿರ್ಧರಿಸಿದ ಕೆಲಸದ ಅವಧಿ ಇತ್ಯಾದಿಗಳನ್ನು ಉಸಿರೆತ್ತದೆ ಕೆಲಸಗಾರ ಸ್ವೀಕರಿಸಬೇಕು. ಒಂದು ವೇಳೆ ಸಂಬಳ, ಕೆಲಸದ ಅವಧಿ ಇತ್ಯಾದಿಗಳ ಬಗ್ಗೆ ಕೆಲಸಗಾರನಿಗೆ ಅಸಮಾಧಾನವಾದರೆ ಕೆಲಸ ಬಿಟ್ಟು ಹೋಗಬಹುದು. ಮಾಲಿಕನಿಗೆ ಇದರಿಂದ ಸಮಸ್ಯೆಯಿಲ್ಲ. ಯಾಕೆಂದರೆ ಹಳ್ಳಿಯಲ್ಲಿ ಕೆಲಸವಿಲ್ಲವೆಂದು ಸಾಲುಗಟ್ಟಿ ಜನ ಪೇಟೆ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಹೆಚ್ಚುವರಿ ಕೆಲಸಗಾರರ ದೊಡ್ಡ ಸೇನೇಯೇ ಮಾಲಿಕನ ಬಾಗಿಲಲ್ಲಿ ಆತ ಕೊಡುವ ಕನಿಷ್ಠ ಸಂಬಳಕ್ಕೆ ದುಡಿಯಲು ಸಾಲುಗಟ್ಟಿ ನಿಂತಿರುತ್ತದೆ.

ಕನಿಷ್ಠ ಕೂಲಿಗೆ ದುಡಿಯುವ ಕೆಲಸಗಾರರಿಗೆ ಇಂತಹ ದುರ್ಭಲ ಬದುಕಿನಿಂದ ಮೋಕ್ಷ ಇದೆ. ಇವರೆಲ್ಲ ಸಂಘಟಿತರಾಗಿ ತಮ್ಮ ಹಕ್ಕಿನ ಬಗ್ಗೆ ಹೋರಾಟ ಮಾಡಿದರೆ ನಿಯಮಾನುಸಾರ ಕೂಲಿ, ಕೆಲಸದ ಅವಧಿ ಮತ್ತು ಇತರ ಸವಲತ್ತುಗಳನ್ನು ಪಡೆಯಬಹುದು. ಆದರೆ ಸಮಸ್ಯೆ ಇರುವುದೇ ಇಲ್ಲಿ. ಸಂಘಟಿತರಾಗಬೇಕಾದರೆ ದುಡಿಯುವ ಈ ಜನರಲ್ಲಿ ನಾವೆಲ್ಲ ಒಂದೇ ಎನ್ನುವ ಭಾವನೆ ರೂಢಿಯಾಗಬೇಕು. ಇವರೆಲ್ಲ ಅಕಸ್ಮಿಕವಾಗಿ ಯಾವುದೋ ಜಾತಿ, ಧರ್ಮ, ಊರು, ಭಾಷೆಗಳ ಹಿನ್ನೆಲೆಯಲ್ಲಿ ಹುಟ್ಟಿದ್ದಾರೆ. ಈ ಗುರುತುಗಳನ್ನೇ ಬಂಡವಾಳ ಮಾಡಿಕೊಂಡು ಬದುಕುವ ಹಲವಾರು ಶಕ್ತಿಗಳಿವೆ. ದಿನ ಬೆಳಗಾದರೆ ಇಂತಹ ಗುರುತಗಳನ್ನು ಜೀವಂತ ಇರಿಸುವುದೇ ಇಂತಹ ಶಕ್ತಿಗಳ ಕಾಯಕ. ಕೆಲಸ, ಜೋಪಡಿ, ಸಂಬಳ, ಕೆಲಸದ ಅವಧಿ ಇತ್ಯಾದಿಗಳೆಲ್ಲ ಈ ಗುರುತುಗಳ ಹಿನ್ನೆಲೆಯಲ್ಲಿ ನಿರ್ಧಾರವಾಗುವಂತೆ ಈ ಶಕ್ತಿಗಳು ನೋಡಿಕೊಳ್ಳುತ್ತವೆ. ಇವೇ ಶಕ್ತಿಗಳು ಮುಖ್ಯವಾಹಿನಿಯ ರಾಜಕೀಯದ ಒಳಪ್ರವಾಹನೂ ಹೌದು. ಕೆಲವು ಪಕ್ಷಗಳು ಕದ್ದುಮುಚ್ಚಿ ಈ ಗುರುತುಗಳ ಲಾಭ ಪಡೆಯಲು ಒಳಪ್ರವಾಹನೂ ಹೌದು. ಕೆಲವು ಪಕ್ಷಗಳು ನೇರವಾಗಿ ಮಾಡುತ್ತಿವೆ. ಕೆಲವು ಪಕ್ಷಗಳಂತೂ ಈ ಗುರುತುಗಳನ್ನು ಜೀವಂತ ಇರಿಸಲು ಶತಾಯಗತಾಯ ಪ್ರಯತ್ನಿಸುತ್ತಿವೆ. ಈ ಎಲ್ಲ ಗುರುತುಗಳು (ಜಾತಿ, ಧರ್ಮ, ಭಾಷೆ, ಪ್ರದೇಶ ಇತ್ಯಾದಿ) ದುಡಿಯುವ ಮತ್ತು ದುಡಿಸುವ, ಭೂಮಾಲಿಕ ಮತ್ತು ಭೂರಹಿತ, ದುಡ್ಡಿಲ್ಲದಿರುವ ಮತ್ತು ದುಡ್ಡಿರುವ, ಉತ್ಪಾದನ ಪರಿಕರಗಳು ಇಲ್ಲದಿರುವ ಮತ್ತು ಉತ್ಪಾದನ ಪರಿಕರಗಳು ಇರುವ ಅಂತರಗಳನ್ನು ಮರೆಮಾಚುತ್ತಿವೆ. ಒಂದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಜನ ಒಂದು ನಿರ್ದಿಷ್ಟ ರಾಜಕೀಯ ತೀರ್ಮಾನಕ್ಕೆ ಬರುವುದು ಇದೇ ಕಾರಣಕ್ಕಾಗಿ. ಇಂತಹ ರಾಜಕೀಯ ತೀರ್ಮಾನಗಳು ಈ ಜನರನ್ನು ಸತತ ಬಿಕ್ಷುಕರನ್ನಾಗಿಸುತ್ತಿವೆ. ಅಕ್ಕಿ, ಕುಡಿಯುವ ನೀರು, ಶೌಚಾಲಯ ವಸತಿ ಇತ್ಯಾದಿಗಳು ಇಂತಹ ರಾಜಕೀಯ ಶಕ್ತಿಗಳು ಮುಂದೂಡುವ ದೊಡ್ಡ ಅಭಿವೃದ್ಧಿ ಸಾಧನೆಗಳು. ಜನರು ತಮ್ಮ ಹೊಲದಲ್ಲಿ ದುಡಿದು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ಮಾಡುವುದು ಇಂತಹ ರಾಜಕಾರಣದ ಉದ್ದೇಶಗಳಲ್ಲ. ಜನರನ್ನು ತಮ್ಮ ಅವಶ್ಯಕತೆಗಳಿಗಾಗಿ ಸತತ ಅಂಗಲಾಚುವ ಸ್ಥಿತಿಯಲ್ಲಿಡುವುದು ಮತ್ತು ಅವುಗಳನ್ನು ತೃಪ್ತಿಪಡಿಸುವುದೇ ಇಂದಿನ ರಾಜಕಾರಣದ ದೊಡ್ಡ ಜವಾಬ್ದಾರಿ ಎನ್ನುವಂತಾಗಿದೆ. ಬಹುತೇಕ ಜನರಿಗೆ ಉತ್ಪಾದನ ಪರಿಕರಗಳ ಮೇಲೆ ಕನಿಷ್ಠ ಹತೋಟಿಗೆ ಅವಕಾಶ ನೀಡುವುದು ಇಂತಹ ರಾಜಕೀಯ ಶಕ್ತಿಗಳೂ ಪ್ರತಿಪಾದಿಸುವ ಆಭಿವೃದ್ಧಿಯ ಮುಖ್ಯ ಉದ್ದೇಶವಲ್ಲ.

ಈ ಎಲ್ಲದರ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ಅಭಿವೃದ್ಧಿ ರಾಜಕಾರಣವನ್ನು ಸಂಪೂರ್ಣವಾಗಿ ಬೇರೆ ದೃಷ್ಟಿಯಿಂದ ನೋಡಬೇಕಾಗಿದೆ. ಪೇಟೆ ಪಟ್ಟಣಗಳು ನಮ್ಮ ಭೂರಹಿತರ ಸಮಸ್ಯೆಗೆ ಪರಿಹಾರವಾಗಲಿಕ್ಕಿಲ್ಲ ಎನ್ನುವುದು ಮೇಲಿನ ವಿವರಗಳಿಂದ ಸ್ಪಷ್ಟವಾಗಬಹುದು. ಬಹುತೇಕ ಗ್ರಾಮೀಣ ಜನ ವಲಸೆ ಹೋಗುತ್ತಿರುವುದು ಮೂರು ಹೊತ್ತಿನ ಊಟಕ್ಕಾಗಿ. ಅವರಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆ ಅವರ ಊರಲ್ಲೇ ಆದರೆ ಅವರು ವಲಸೆ ಹೋಗುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಕನಿಷ್ಠ ಐದು ಎಕರೆಯಷ್ಟು ಭೂಮಿ ಬೇಕು. ಭೂಮಿ ಇಲ್ಲದವರು ಭೂಮಿ ಪಡೆಯಬೇಕಾದರೆ ಶೇ. ೨೫ರಷ್ಟು ಕುಟುಂಬಗಳಲ್ಲಿ ಶೇಖರಣೆಯಾದ ಶೇ. ೬೩ರಷ್ಟು ಕೃಷಿ ಭೂಮಿ ಮರು ವಿತರಣೆಯಾಗಬೇಕು. ಅಂದರೆ ಮಧ್ಯಮ ಮತ್ತು ದೊಡ್ಡ ಕೃಷಿಕರಲ್ಲಿ ಶೇಖರಣೆಯಾಗಿರುವ ಭೂಮಿಯ ಮರುಹಂಚಿಕೆ ನಡೆಯಬೇಕಾಗಿದೆ. ಈ ಭೂಮಾಲಿಕರು ತಮ್ಮ ಭೂಮಿಯ ಆದಾಯವನ್ನು ಬಳಸಿಕೊಂಡು ಪೇಟೆ ಪಟ್ಟಣಗಳಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಡಾಕ್ಟರ್ ಎಂಜಿನಿಯರ್ ಓದಿಸಿದ್ದಾರೆ. ಇಂದು ಭೂಮಿಯ ಆದಾಯ ಇಲ್ಲದೆಯೂ ಇವರು ಬದುಕಬಹುದು. ಆದರೆ ಭೂಮಿ ಇಲ್ಲದಿದ್ದರೆ ಉಸಿರಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿರುವ ಸಾಕಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇವರಿಗೆ ಕನಿಷ್ಠ ಐದು ಎಕರೆಯಷ್ಟು ಭೂಮಿ ನೀಡಿದರೆ ಎಲ್ಲರಿಗೂ ನೆಮ್ಮದಿಯ ಜೀವನ ಸಾಧ್ಯ ಇಂತಹ ಆಲೋಚನೆಗಳಿಗೆ ದೊಡ್ಡ ತಡೆ ಇಂದು ಚಾಲ್ತಿಯಲ್ಲಿರುವ ಅಭಿವೃದ್ಧಿ ಚಿಂತನೆಗಳು. ಕೆಲವೇ ಜನರ ಸ್ವಾಧೀನದಲ್ಲಿ ಇಲ್ಲ ಉತ್ಪಾದನ ಪರಿಕರಗಳಿರುವುದು ಬಹುತೇಕರ ಉದ್ದಾರದ ದೃಷ್ಟಿಯಿಂದ ಅಗತ್ಯ ಎನ್ನುವ ನಂಬಿಕೆ ಇವತ್ತಿನ ಅಭಿವೃದ್ದಿ ಚಿತನೆಯ ಅಡಿಪಾಯವಾಗಿದೆ. ಇಂತಹ ಅಭಿವೃದ್ಧಿ ಪರಿಕಲ್ಪನೆ ಇನ್ನೊಂದು ಭೂಸುಧಾರಣೆಯನ್ನು ಅಲ್ಲಗೆಳೆಯುವ ಬಹುದೊಡ್ಡ ಅಂಶ.

ಸಣ್ಣ ಸಣ್ಣ ತುಂಡು ಭೂಮಿಗಳ ಬದಲು ಎಕರೆಗಟ್ಟಲೆ ಭೂಮಿ ಹೊಂದುವುದು ಇಂದಿನ ಅಭಿವೃದ್ಧಿಗೆ ಅನಿವಾರ್ಯ ಎಂದು ಚಾಲ್ತಿಯಲ್ಲಿರುವ ಮಾರುಕಟ್ಟೆ ಪ್ರೇರಿತ ಅಭಿವೃದ್ಧಿ ಮಾದರಿ ಹೇಳುತ್ತಿದೆ. ರೈತರು ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರುವುದು ಅಥವಾ ರೈತರ ಉತ್ಪಾದಕತೆ ಕಡಿಮೆಯಾಗಿರುವುದು ಹಿಡುವಳಿ ಗಾತ್ರ ಸಣ್ಣಗಿರುವುದರಿಂದಲ್ಲ. ಉತ್ಪಾದಕತೆ ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಪೂರಕವಾಗುವ ಹಲವಾರು ಸವಲತ್ತುಗಳ ಕೊರತೆಯಿಂದ ರೈತರಿಗೆ ಉತ್ಪಾದಕತೆ ಹೆಚ್ಚಿಸಲಾಗುತ್ತಿಲ್ಲ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ವ್ಯವಹರಿಸುವಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಈ ಕೆಳಗಿನ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು, ಬೇಡಿಕೆ ಮತ್ತು ಪೂರೈಕೆ ನಡುವೆ ಹೊಂದಾಣಿಕೆ ಇಲ್ಲದಿರುವುದು. ಎರಡು, ಐದು ದಶಕಗಳ ಅಭಿವೃದ್ಧಿ ಪ್ರಕ್ರಿಯೆ ಸೃಷ್ಟಿಸಿದ ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಏರುಪೇರುಗಳು. ಹೆಚ್ಚು ಕಡಿಮೆ ಒಂದೇ ಪ್ರದೇಶಕ್ಕೆ ಸೇರಿದ ರೈತರು ಒಂದೇ ಬೆಳೆಯನ್ನು ಬೆಳೆಯಲು ಮಾಡಬೇಕಾದ ವೆಚ್ಚ ಅಭಿವೃದ್ಧಿ ನೀತಿಯಿಂದಾಗಿ ಅಜಗಜಾಂತರವಿದೆ. ಒಂದು ಪ್ರದೇಶದ ಜನರು ಪ್ರತಿ ಎಕರೆ ಭೂಮಿಗೆ ನೀರುಣಿಸಲು ವರ್ಷಕ್ಕೆ ಐನೂರರಿಂದ ಆರುನೂರ ರೂಗಳನ್ನು ತೆತ್ತರೆ ಸಾಕು. ಕೆಲವೇ ಕಿ.ಮೀ. ದೂರದಲ್ಲಿರುವ ಮತ್ತೊಬ್ಬ ರೈತ ತನ್ನ ಒಂದು ಎಕರೆ ಭೂಮಿಗೆ ನೀರುಣಿಸಲು ವರ್ಷಕ್ಕೆ ಐನೂರರಿಂದ ಆರುನೂರು ರೂಗಳನ್ನು ತೆತ್ತರೆ ಸಾಕು. ಕೆಲವೇ ಕಿ.ಮೀ. ದೂರದಲ್ಲಿರುವ ಮತ್ತೊಬ್ಬ ರೈತ ತನ್ನ ಒಂದು ಎಕರೆ ಭೂಮಿಗೆ ನೀರುಣಿಸಲು ಕನಿಷ್ಠ ಎರಡರಿಂದ ಮೂರು ಸಾವಿರ ರೂಪಾಯಿಗಳನ್ನು ವಿನಿಯೋಗಿಸ ಬೇಕಾಗಿದೆ.

ಅಷ್ಟು ಮಾತ್ರವಲ್ಲ ಒಬ್ಬ ರೈತನಿಗೆ ತನ್ನ ಮನೆ ಬಾಗಿಲಲ್ಲಿ ಮಾರುಕಟ್ಟೆ ಇದ್ದರೆ ಮತ್ತೊಬ್ಬ ರೈತ ತನ್ನ ಉತ್ಪನ್ನಗಳನ್ನು ಮಾರಲು ನೂರಾರು ಕಿ.ಮೀ. ಒಡಾಡಬೇಕು. ಮೂರು, ಹಣಕಾಸಿನ ಸಮಸ್ಯೆ ಐದು ದಶಕಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಗ್ರಾಮೀಣಾಭಿವೃದ್ಧಿ ಒಂದು ಅವಿಭಾಜ್ಯ ಅಂಗವಾಗಿ ಪ್ರಚಾರ ಪಡೆದಿತ್ತು. ಆದರೆ ಅದರ ಉದ್ದೇಶ ಗ್ರಾಮ ವಾಸಿಗಳು ಚಾರಿತ್ರಿಕವಾಗಿ ರೂಢಿಸಿಕೊಂಡು ಬಂದ ಬದುಕನ್ನು ಸಶಕ್ತೀಕರಣಗೊಳಿಸುವುದಿಲ್ಲ. ಅವುಗಳನ್ನು ನಿರ್ವಸನಗೊಳಿಸಿ ಅದರ ಜಾಗದಲ್ಲಿ ಆಧುನಿಕ ಬದುಕನ್ನು ಸ್ಥಾಪಿಸುವುದು. ಆದುದರಿಂದ ಏನೆಲ್ಲಾ ನಾಶ ಆಗಬೇಕು ಅವಕ್ಕೆ ಬೆಂಬಲ ಇಲ್ಲ ಅವುಗಳಲ್ಲಿ ಗ್ರಾಮೀಣ ಜನರ ಸಾಂಪ್ರದಾಯಿಕ ಕಸುಬುಗಳು, ಕೃಷಿ ಉದ್ಯೋಗಗಳು, ನೀರಾವರಿ ನಿರ್ವಹಣೆಗಳು, ಅರಣ್ಯ ರಕ್ಷಣೆಗಳು ಇತ್ಯಾದಿಗಳು ಸೇರಿವೆ. ಅದುದರಿಂದ ಒಂದು ಕಡೆಯಲ್ಲಿ ಸಾಲಗಾರರನ್ನು ಬ್ಯಾಂಕ್‌ನವರು ಹುಡುಕುತ್ತಾ ಹೋದರೆ ಸಾಲ ಕೊಡುವ ಬ್ಯಾಂಕ್‌ನ್ನು ಹುಡುಕುತ್ತಾ ರೈತರು ಹೋಗಬೇಕಾಗಿದೆ. ನಾಲ್ಕು, ರೈತರ ಭಾವನೆಯಲ್ಲಿ ಭಾಗಿಯಾಗಬೇಕಾದ ಆಡಳಿತ ಯಂತ್ರ – ಕಾಳಜಿಯಿಲ್ಲದೆ, ಜವಾಬ್ದಾರಿ ಇಲ್ಲದೆ ವರ್ತಿಸುವುದರಿಂದ ರೈತರ ಕಷ್ಟ ಕಾಲದಲ್ಲಿ ಸಿಗಬೇಕಾದ ನೆರವು ಸಿಗದಿರುವುದು. ಮೇಲೆ ಸೂಚಿಸಿದ ಸಮಸ್ಯೆಗಳನ್ನು ಎಲ್ಲ ರೈತರನ್ನು ಒಂದೇ ಪ್ರಮಾಣದಲ್ಲಿ ಕಾಡುತ್ತಿವೆ ಎನ್ನಲಾಗುವುದಿಲ್ಲ. ಕೆಲವೊಂದು ರೈತರು (ದೊಡ್ಡ ಮತ್ತು ಮಧ್ಯಮ ಗಾತ್ರದ ರೈತರು) ಇವುಗಳಿಂದ ಮುಕ್ತರಾಗಿರಬಹುದು ಮತ್ತು ಕೆಲವರು ಈ ಎಲ್ಲವುಗಳಿಂದ ತುಂಬಾ ದೂರ ಇರಬಹುದು. ಅಂದರೆ ಮಾರುಕಟ್ಟೆಯಲ್ಲಿ ವ್ಯವಹರಿಸುವ ಗೋಜಿಗೆ ಹೋಗದೆ ತಮ್ಮ ಮೂರು ಹೊತ್ತಿನ ಊಟ ಕೃಷಿಯಿಂದ ಬಂದರೆ ಸಾಕೆನ್ನುವವರು ಎರಡನೇ ಸಾಲಿನಲ್ಲಿ ಬರುತ್ತಾರೆ. ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಣ್ಣ ಮತ್ತು ಅತಿ ಸಣ್ಣ ರೈತರು ಮೇಲಿನ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸುತ್ತಿದ್ದಾರೆ.

ರಾಜ್ಯದ ಒಂದು ಮೂಲೆಯಲ್ಲಿ ಟೋಮೆಟೊ, ಈರುಳ್ಳಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಲೆ ಸಿಗಲಿಲ್ಲ ಎಂದು ರೈತರು ಬೀದಿಯಲ್ಲಿ ಬಿಸಾಕಿ ಪ್ರತಿಭಟಿಸುವ ಸಂದರ್ಭದಲ್ಲಿ ಮತ್ತೊಂದು ಮೂಲೆಯಲ್ಲಿ ಅದೇ ತರಕಾರಿಗಳು ಕೆಜಿಗೆ ಏಳೆಂಟು ರೂಪಾಯಿಗಳಿಗೆ ಕಡಮೆ ಇಲ್ಲದಂತೆ ಮಾರಟವಾಗುತ್ತವೆ. ಹಲವಾರು ರೂಪಾಯಿ ವಿನಿಯೋಜಿಸಿ ಬೆಳೆದ ತರಕಾರಿಯನ್ನು ಅಥವಾ ಇನ್ಯಾವುದೋ ಬೆಳೆಯನ್ನು ರೂಪಾಯಿಗೋ ಅಥವಾ ಐವತ್ತು ಪೈಸೆಗೂ ಕೇಳಿದರೆ ಯಾರು ತಾನೇ ಇದಕ್ಕಿಂತ ಭಿನ್ನವಾಗಿ ವರ್ತಿಸಬಹುದು? ಖಂಡಿತವಾಗಿಯೂ ಹತಾಶೆಯಿಂದ ಎಲ್ಲರು ಇದೇ ರೀತಿ ವರ್ತಿಸಬಹುದು. ಆದರೆ ಈ ಕ್ರಮದಿಂದ ಸಮಸ್ಯೆ ಪರಿಹಾರವಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ. ನಾವೆಲ್ಲ ನಮಗೆ ಇಷ್ಟ ಇದ್ದೋ ಇಲ್ಲದೆಯೋ ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಾಗಿದೆ. ಇದರಲ್ಲಿ (ಮಾರುಕಟ್ಟೆಯಲ್ಲಿ ವ್ಯವಹರಿಸುವ ವಿಚಾರದಲ್ಲಿ) ನಮಗೆ ಆಯ್ಕೆ ಇಲ್ಲ ಎನ್ನುವ ಸ್ಥಿತಿಯನ್ನು ಅಧಿಕಾರ ರೂಢರು ಜನಸಾಮಾನ್ಯರ ಮೇಲೆ ಹೇರಿದ್ದಾರೆ. ಹಾಗಿರುವಾಗ ಈ ಮಾರುಕಟ್ಟೆ ಬಗ್ಗೆ ಕನಿಷ್ಠ ತಿಳಿವಳಿಕೆ ತುಂಬಾ ಅಗತ್ಯ ನಮಗೆಲ್ಲ ತಿಳಿದ ಹಾಗೆ ಒಂದು ವಸ್ತುವಿನ ಬೆಲೆ ತೀರ್ಮಾನದಲ್ಲಿ ಆ ವಸ್ತು ಅಥವಾ ಸರಕಿನ ಬೇಡಿಕೆ ಮತ್ತು ಪೂರೈಕೆಯ ಪಾತ್ರ ಇದೆ. ಅಂದರೆ ಬೇಡಿಕೆಗಿಂತ ಪೂರೈಕೆ ಹೆಚ್ಚಾದರೆ ವಸ್ತುವಿನ ಅಥವಾ ಸರಕಿನ ಅಥವಾ ತರಕಾರಿಯ ಬೆಲೆ ಕಡಿಮೆ ಆಗುತ್ತದೆ. ಪೂರೈಕೆ ಬೇಡಿಕೆಗಿಂತ ಕಡಿಮೆ ಇದ್ದಾಗ ವಸ್ತುವಿನ ಬೆಲೆ ಹೆಚ್ಚಾಗುತ್ತದೆ. ಅಂದರೆ ಉತ್ಪಾದಕರಿಗೆ ಅವರು ಬಯಸಿದ ಬೆಲೆ ಸಿಗಬೇಕಾದರೆ ಈ ಎರಡರಲ್ಲಿ – ಬೇಡಿಕೆ ಅಥವಾ ಪೂರೈಕೆ – ಯಾವುದಾದರೂ ಒಂದರ ಮೇಲೆ ನಿಯಂತ್ರಣ ಅಗತ್ಯ ಬೇಡಿಕೆ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟದ ಕೆಲಸ. ಯಾಕೆಂದರೆ ಕೋಟಿಗಟ್ಟಲೆ ವ್ಯಕ್ತಿಗಳ ಅಥವಾ ಕುಟುಂಬಗಳ ಬೇಕು ಬೇಡಗಳ (ಆಪೇಕ್ಷಗಳ) ಮಾಹಿತಿ ಬೇಕಾಗುತ್ತದೆ. ಅಷ್ಟು ಮಾತ್ರವಲ್ಲ ಅವರ (ಗ್ರಾಹಕರ) ಬೇಕು ಬೇಡಗಳನ್ನು ನಮ್ಮ ಉತ್ಪನ್ನಗಳತ್ತ ಸೆಳೆಯುವ (ಜಾಹಿರಾತು ಅಥವಾ ಇತರ ಮಾಧ್ಯಮಗಳ ಮೂಲಕ) ಪ್ರಯತ್ನ ಮಾಡಬೇಕಾಗುತ್ತದೆ. ಇದರಿಂದಲೂ ಮುಂದೆ ಹೋಗಿ ಗ್ರಾಹಕರ ಆಪೇಕ್ಷಗಳನ್ನು ಪರಿವರ್ತಿಸುವ (ನಮ್ಮ ಉತ್ಪನ್ನಗಳ ಕಡೆಗೆ) ಪ್ರಯತ್ನವನ್ನು ಮಾಡಬಹುದು. ಆದರೆ ಇವೆಲ್ಲ ಕೋಟಿಗಟ್ಟಲೆ ವಿನಿಯೋಜನೆಯನ್ನು ಬಯಸುವ ಕೆಲಸಗಳು. ಮೂರು ಹೊತ್ತಿನ ಊಟಕ್ಕೆ ಪರದಾಡುವ ರೈತರು ಈ ಪರಿಯ ಸಾಹಸ ಮಾಡುವುದು ಕಷ್ಟ ಹಾಗೆಂದು ಅವರು ನಿರಾಶರಾಗುವ ಅಗತ್ಯವಿಲ್ಲ. ಬೇಡಿಕೆ ಮೇಲೆ ಹಿಡಿತ ಸಾಧಿಸಲು ಆಗಿದಿದ್ದರೆ ಏನಾಯಿತಂತೆ ಪೂರೈಕೆ ಮೇಲೆ ಹಿಡಿತ ಸಾಧಿಸಬಹುದು. ಅವುಗಳಲ್ಲಿ ಇಂದು ಚಾಲ್ತಿಯಲ್ಲಿರುವ ಎರಡು ವಿಧಾನಗಳು ಇಂತಿವೆ. ಒಂದು, ಸರಕಾರ ನಿಗದಿಗೊಳಿಸಿದ ಬೆಲೆಗೆ (ಇದನ್ನು ಬೆಂಬಲ ಬೆಲೆ ಎನ್ನುತ್ತಾರೆ ಮತ್ತು ಇದು ಬೇಡಿಕೆ ಪೂರೈಕೆ ಅಥವಾ ಮಾರುಕಟ್ಟೆಯಿಂದ ನಿರ್ಧಾರಿತವಾದ ಬೆಲೆಯಲ್ಲ) ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸುವುದು. ಹಲವಾರು ಉತ್ಪಾದಕರು ಇದನ್ನು ಮಾಡಿ ತೋರಿಸಿದ್ದಾರೆ. ಉದಾಹರಣೆಗೆ ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರು, ರಾಜ್ಯದ ಹಾಲು ಉತ್ಪಾದಕರ ಸಂಘ, ಕಾಫಿ ಬೆಳೆಗಾರರು ಮುಂತಾದವರು.

ಪೂರೈಕೆ ಮೇಲೆ ಹಿಡಿತ ಬೇಕಾದರೆ ನಮ್ಮಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಬೇಕು. ಇಂದು ರೈತರಿಗೆ ಬಿಡಿ, ಸರಕಾರಕ್ಕೆ ಅಥವಾ ಕೃಷಿ ಇಲಾಖೆಗೆ ರಾಜ್ಯದಲ್ಲಿ ಬೆಳೆಯುವ ವಿವಿಧ ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ಇದೆ ಎನ್ನಲು ಸಾಧ್ಯವಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ವಿವಿಧ ಬೆಳೆಗಳನ್ನು ಬೆಳೆಯುವ ಪ್ರದೇಶಗಳನ್ನು ನಿರ್ಧರಿಸುವ ವಿಧಾನ. ಬೆಳೆಗಳನ್ನು ಬೆಳೆಯುವ ವಿಸ್ತೀರ್ಣವನ್ನು ನಿರ್ಧರಿಸಲು ಅಧಿಕಾರಿಗಳು ಬೆಳೆಗಳ ಸಮೀಕ್ಷೆ ಮತ್ತು ರೈತರ ಪಹಣಿಯನ್ನು ಆಧಾರವಾಗಿಟ್ಟು ಕೊಳ್ಳಬೇಕು. ಆದರೆ ಬಹುತೇಕ ಸಂದರ್ಭದಲ್ಲಿ ಹೊಲಗದ್ದೆಗಳಲ್ಲಿ ಸುತ್ತಾಡಿ ರೈತರು ಏನು ಬೆಳೆದಿದ್ದಾರೆನ್ನುವುದನ್ನು ತಿಳಿದುಕೊಳ್ಳುವ ಕಷ್ಟದ ಕೆಲಸಕ್ಕೆ ಅಧಿಕಾರಿಗಳು ಇಳಿಯುವುದಿಲ್ಲ. ತಳಹಂತದಲ್ಲಿ ದುಡಿಯುವ ಗುಮಾಸ್ತನೋ ಅಥವಾ ಗ್ರಾಮಸೇವಕನೋ ಕಳುಹಿಸಿದ ಅಂಕಿಅಂಶಗಳನ್ನು ಅಧಾರವಾಗಿಟ್ಟುಕೊಂಡೋ ಅಥವಾ ಯಾವುದೋ ಸಂದರ್ಭದಲ್ಲಿ ಪಹಣಿಯಲ್ಲಿ ರೈತನೊಬ್ಬ ನೀಡಿದ ಬೆಳೆಗಳ ವಿವರಗಳನ್ನು ಆಧಾರವಾಗಿಟ್ಟು ಕೊಂಡು ಲೆಕ್ಕಚಾರ ನಡೆಯುತ್ತದೆ. ಇದು ಸರಿಯಾದ ಕ್ರಮವಲ್ಲ. ಯಾಕೆಂದರೆ ರೈತ ತಾನು ಪಹಣಿಯಲ್ಲಿ ನೀಡಿದ ಬೆಳೆಯನ್ನು ಸತತವಾಗಿ ಬೆಳೆಯದಿರಬಹುದು ಅಥವಾ ಬೆಳೆಯುವ ಪ್ರಮಾಣ ಹೆಚ್ಚು ಕಮ್ಮಿ ಮಾಡಿರಬಹುದು. ಕೋಟಿಗಟ್ಟಲೆ ಲೆಕ್ಕದಲ್ಲಿ ಸಾರ್ವಜನಿಕ ಸಂಪನ್ಮೂಲ ವೇಸ್ಟ್ ಆದಾಗ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ರೈತನೊಬ್ಬ ತನ್ನ ಬೆಳೆ ಬೆಳೆಯುವ ಪ್ರದೇಶದಲ್ಲಿ ಮಾಡಿಕೊಳ್ಳುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಲೆಕ್ಕ ಇಟ್ಟುಕೊಳ್ಳುತ್ತಾರೆಯೇ? ಹೀಗೆ ನಮ್ಮಲ್ಲಿಂದು ನಿರ್ದಿಷ್ಟ ಬೆಳೆಯನ್ನು ಬೆಳೆಯುವ ವಿಸ್ತೀರ್ಣ, ಪ್ರಮಾಣ ಇತ್ಯಾದಿಗಳ ಬಗ್ಗೆಯ ಖಚಿತ ಲೆಕ್ಕಚಾರ ಮಾಡುವ ಮನುಷ್ಯರು ಸಣ್ಣ ಮನಸ್ಸಿನವರು; ಉದಾರಿಗಳಲ್ಲ ಒಳ್ಳೆಯವರೆನ್ನಿಸಿಕೊಳ್ಳಬೇಕಾದರೆ ಉದಾರಿಗಳಾಗಬೇಕು ಅಥವಾ ಲೆಕ್ಕಚಾರ ಮಾಡ ಬಾರದು ಎನ್ನುವ ಒಂದು ಸಾಮಾನ್ಯ ತಿಳುವಳಿಕೆ ಇದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆ ಕೂಡ ಯಶಸ್ಸನ್ನು ಕಂಡ ಕೆಲವು ರೈತರಿದ್ದಾರೆ. ಅಂತವರನ್ನು ಕಂಡು ಮಾತಾಡಿಸಿದರೆ ತಿಳಿಯುತ್ತದೆ ಅವರು ತಮ್ಮ ಕೃಷಿ ಬಗ್ಗೆ ಏನೆಲ್ಲ ಲೆಕ್ಕಚಾರಗಳನ್ನು ತಿಳಿದಿದ್ಧಾರೆ ಎಂದು ನೀರು, ಬೀಜ, ಬಿತ್ತನೆ, ಗೊಬ್ಬರ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸರಿಯಾದ ಲೆಕ್ಕಚಾರ ಇಟ್ಟಿರುವ ಕೃಷಿಕರು ಮಾತ್ರ ಹಿಂದೆ ಮತ್ತು ಇಂದು ಉತ್ತಮ ಕೃಷಿಕರೆನಿಸಿಕೊಂಡಿರುವುದು. ಆದರೆ ಇದು ಒಬ್ಬ ಕೃಷಿಕನ ಲೆಕ್ಕಚಾರದ ಸಮಸ್ಯೆಯಲ್ಲ. ಇಡೀ ರಾಜ್ಯದೊಳಗಿನ ವಿವಿಧ ಬೆಳೆಗಳ ಲೆಕ್ಕಚಾರದ ಸಮಸ್ಯೆ ಇದು. ಈ ಲೆಕ್ಕಚಾರ ಸರಿ ಆಗುವ ತನಕ ಬೇಡಿಕೆ ಮತ್ತು ಪೂರೈಕೆ ನಡುವೆ ಹೊಂದಾಣಿಕೆ ಸಾಧ್ಯವಾಗುವುದಿಲ್ಲ. ಈ ಎರಡರ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಒಂದು ಕಡೆ ಕೃಷಿಕರ ಉತ್ಪನ್ನಗಳಿಗೆ ಬೆಲೆಯಿಲ್ಲವೆಂದು ಬೀದಿಗೆ ಬಿಸಾಕುವ ಸಂದರ್ಭದಲ್ಲೆ ಮತ್ತೊಂದು ಕಡೆ ವ್ಯಾಪಾರಿಗಳು ಅದೇ ಉತ್ಪನ್ನವನ್ನು ಹೆಚ್ಚಿನ ಬೆಲೆಗೆ ಮಾರಿ ಸಾಕಷ್ಟು ಲಾಭ ಗಳಿಸುತ್ತಿರುತ್ತಾರೆ.

ಇಡೀ ದೆಶದಲ್ಲೇ ಅತೀ ಹೆಚ್ಚು ಒಣ ಭೂ ಪ್ರದೇಶ ಇರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ನಮ್ಮಲ್ಲೂ ಸಾಕಷ್ಟು ಪ್ರದೇಶ ಸಣ್ಣ ಮತ್ತು ಬೃಹತ್ ನೀರಾವರಿ ವ್ಯವಸ್ಥೆಯನ್ನು ಹೊಂದಿವೆ. ನೀರಾವರಿ ಹೊಂದಿರುವ ಪ್ರದೇಶದ ರೈತರು ಮತ್ತು ಒಣ ಭೂಪ್ರದೇಶದ ರೈತರು ಒಂದು ಬೆಳೆಯನ್ನು ಬೆಳೆಯಲು ವಿನಿಯೋಜಿಸಬೇಕಾದ ಬಂಡವಾಳದಲ್ಲಿ ಸಾಕಷ್ಟು ಅಂತರವಿದೆ. ರೈತನೊಬ್ಬ ಒಂದು ಎಕರೆಗೆ ವರ್ಷ ಪೂರ್ತಿ ನೀರು ಪಡೆಯಲು ನೀರಾವರಿ ಇಲಾಖೆಗೆ ಸಂದಾಯ ಮಾಡುವುದು ಕೇವಲ ಐನೂರರಿಂದ ಆರುನೂರು ರೂಗಳು. ಇದನ್ನೇ ನೀರಾವರಿ ವ್ಯವಸ್ಥೆ ಇಲ್ಲದ ಮತ್ತೊಂದು ಕೃಷಿಕನ ವೆಚ್ಚದೊಂದಿಗೆ ಸಮೀಕರಿಸುವ. ಆತ ಭಾವಿ ಆಥವಾ ಬೋರ್‌ವೆಲ್ ತೋಡಿಸಬೇಕು. ಅದರ ವೆಚ್ಚ ಕನಿಷ್ಠ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿಗಳು. ಪಂಪ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಇತ್ಯಾದಿಗಳು ಸೇರಿ ಪುನಃ ಒಂದು ಇಪ್ಪತ್ತು ಸಾವಿರ. ಅರ್ಜಿ ಹಾಕಿ ಹಲವಾರು ತಿಂಗಳು ಕಳೆದ ನಂತರವೇ ಕನೆಕ್ಷನ್. ಅತೀ ಜರೂರು ಆಗಬೇಕಾದರೆ ಒಂದೋ ರೈತನಿಗೆ ತುಂಬಾ ಪ್ರಭಾವ ಬಳಸುವ ಸಾಧ್ಯತೆ ಇರಬೇಕು ಅಥವಾ ಅಧಿಕಾರಿಗಳು ಕೇಳಿದಷ್ಟು ದುಡ್ಡು ಕೊಡುವ ಶಕ್ತಿ ಬೇಕು. ಈ ಎರಡೂ ಇಲ್ಲದ ರೈತ ವಿದ್ಯುತ್ ಇಲಾಖೆ ಕರೆಂಟ್ ಕನೆಕ್ಷನ್ ಕೊಡುವ ತನಕ ಕಾಯಬೇಕು. ಈ ರೀತಿ ನೀರಾವರಿ ಮಾಡಿಸಿಕೊಂಡ ರೈತನ ಒಂದು ಎಕರೆ ಕೃಷಿಗೆ ಕನಿಷ್ಠ ಎರಡರಿಂದ ಮುರು ಸಾವಿರ ರೂಪಾಯಿ ನೀರಾರಿ ವೆಚ್ಚ ಭರಿಸಬೇಕಾಗುತ್ತದೆ. ಈಗ ಈ ಇಬ್ಬರು ರೈತರು ಯಾವುದೋ ಒಂದು ಬೆಳೆ ಬೆಳೆಯುತ್ತಾರೆ ಮತ್ತು ಅದನ್ನು ಮಾರಲು ಒಂದೇ ಮಾರುಕಟ್ಟೆಗೆ ಬರುತ್ತಾರೆ ಎಂದು ಊಹಿಸುವ ಯಾರ ಬೆಲೆ ಕಡಿಮೆ ಇರುತ್ತದೆ? ಖಂಡಿತವಾಗಿಯೂ ಅಣೆಕಟ್ಟಿನ ನೀರಾವರಿ ವ್ಯವಸ್ಥೆ ಇರುವ ರೈತ ಕಡಿಮೆ ಬೆಲೆಗೆ ಮಾರಬಹುದು. ಆತನ ಬೆಲೆ ಮಾರುಕಟ್ಟೆ ಬೆಲೆಯಾಗುತ್ತದೆ. ಅಂದರೆ ವೆಚ್ಚ ಜಾಸ್ತಿ ಆದ ಕಾರಣ ಸ್ವಂತ ನೀರಾವರಿ ಮಾಡಿಕೊಂಡ ರೈತ ನಷ್ಟಕ್ಕೆ ಅಥವಾ ಕಡಿಮೆ ಲಾಭಕ್ಕೆ ಮಾರಲೇ ಬೇಕು. ಈ ಸ್ಥಿತಿ ನಿರ್ಮಾಣವಾದುದು ಜಾಗತೀಕರಣದಿಂದ ಅಲ್ಲ; ನಮ್ಮ ಅಭಿವೃದ್ಧಿ ನೀತಿಯಿಂದ. ಇಂದು ಎಲ್ಲವು ಮಾರುಕಟ್ಟೆ ನಿರ್ಧಾರಿತ. ಕೃಷಿಗೆ ಬೇಕಾದ ಗೊಬ್ಬರ, ಬೀಜ, ಮದ್ದು, ಇತ್ಯಾದಿಗಳು ದೂರದ ಪೇಟೆಯಿಂದ ಬರಬೇಕು. ಅದೇ ರೀತಿ ಆತ ಬೆಳದ ಬೆಳೆಗೆ ಸರಿಯಾದ ಬೆಲೆ ಸಿಗಬೇಕಾದರೆ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಬೇಕು. ಇದಕ್ಕೆ ರೈತನಿಗೆ ಕೆಲವೊಂದು ಕನಿಷ್ಠ ಸೌಲಭ್ಯಗಳ ಆಗತ್ಯವಿದೆ. ಅದರಲ್ಲಿ ಮುಖ್ಯವಾಗಿ ಬೇಕಾಗಿರುವುದು ರಸ್ತೆ, ವಿದ್ಯುತ್, ಸಂಪರ್ಕ ಮತ್ತು ಮಾಹಿತಿ. ನಮ್ಮ ರಾಜ್ಯದ ಶೇಕಡಾ ನಲ್ವತ್ತು ಹಳ್ಳಿಗಳಿಗೆ ಇಂದು ಕೂಡ ಸರ್ವ ಋತು ರಸ್ತೆ ಇಲ್ಲ. ಅದೇ ರೀತಿ ಶೇಕಡಾ ೪೫ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇಲ. ವಿದ್ಯುತ್ ಸಂಪರ್ಕ ಇದ್ದ ಕಡೆ ಅದನ್ನು ಕೃಷಿಕರು ಪಡೆಯಲು ಪಡಬೇಕಾದ ಪಾಡು ಅನುಭವಿಸಿಯೇ ಅರ್ಥವಾಗಬೇಕು.

ವಿದ್ಯುತ್ ಸಂಪರ್ಕ ಕುರಿತು ಮೇಲೆ ವಿವರಿಸಿದ ಸಮಸ್ಯೆ ಒಂದು ವಿಶ್ವವ್ಯಾಪಿ ಸಮಸ್ಯೆಯಲ್ಲವೆಂದು ಪರಿಗಣಿಸಬಹುದು. ಅದೊಂದು ಕೆಟ್ಟ ಉದಾಹರಣೆಯೆಂದು ತಳ್ಳಿ ಹಾಕಬಹುದು. ಆದರೆ ಗ್ರಾಮೀಣ ಪ್ರದೇಶಕ್ಕೆ ನೀಡುವ ವಿದ್ಯುತ್ ಪೂರೈಕೆಯಲ್ಲಿನ ತಾರತಮ್ಮವನ್ನು ಯಾರಾದರೂ ತಳ್ಳಿಹಾಕಲು ಸಾಧ್ಯವೇ? ನಮ್ಮ ರಾಜ್ಯದಲ್ಲಂತೂ ರೈತರ ಗೋಳನ್ನು ಬಂಡವಾಳವಾಗಿಟ್ಟುಕೊಂಡು ಅಧಿಕಾರಕ್ಕೆ ಬರುವ ಎಲ್ಲ ಪಕ್ಷಗಳು ರೈತರಿಗೆ ದಿನದ ೨೪ ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡುತ್ತವೆ. ಕೆಲವೇ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯ ಸ್ಥಿತಿ. ಈ ಕನಿಷ್ಠ ಪ್ರಮಾಣದ ವಿದ್ಯುತ್ತನ್ನು ಕೊಡುವ ಅವಧಿ ಬಗ್ಗೆ ನಿರ್ದಿಷ್ಟತೆ ಇಲ್ಲ ಬೇರೆ ಎಲ್ಲೂ ವಿದ್ಯುತ್ ಬಳಕೆ ಇಲ್ಲದ ಸಂದರ್ಭದಲ್ಲಿ ರೈತ ಪಂಪ್ ಸ್ವಿಚ್ ಹಾಕಬೇಕು. ಹೀಗೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ವ್ಯವಹರಿಸಲು ಅಗತ್ಯವಿರುವ ಹಲವಾರು ಪೂರಕ ಸಂಗತಿಗಳೂ ಸಮರ್ಪಕವಾಗಿ ಬೆಳೆಯುವ ಮುನ್ನವೇ ನಮ್ಮಲ್ಲಿ ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಾದ ಅನಿವಾರ್ಯತೆ ಬಂದಿದೆ. ಬೇಡಿಕೆ ಇಲ್ಲದ ಸಂದರ್ಭದಲ್ಲಿ ಬೆಳೆದ ಉತ್ಪನ್ನಗಳನ್ನು ಕಾದಿರಿಸಿ ಬೇಡಿಕೆ ಅಥವಾ ಉತ್ತಮ ಬೆಲೆ ಇರುವ ಸಂದರ್ಭದಲ್ಲಿ ಮಾರುವುದು ಮಾರುಕಟ್ಟೆ ಧರ್ಮ. ಆದರೆ ಬಹುಬೇಗ ಕೊಳೆತು ಹೋಗುವ ತರಕಾರಿ ಇತರ ದವಸ ಧಾನ್ಯಗಳನ್ನು ಶೇಖರಿಸಿಡಲು ಕೋಲ್ಡ್ ಸ್ಟೋರೆಜ್‌ಗಳನ್ನು ನಾವು ಪೇಟೆ ಪಟ್ಟಣಗಳಲ್ಲಿ ಮಾತ್ರ ಕಾಣಲು ಸಾಧ್ಯ ಅಂದರೆ ರೈತರೆಲ್ಲ ಪೇಟೆ ಪಟ್ಟಣ ಸುತ್ತ ತಮ್ಮ ಕೃಷಿ ಮಾಡಬೇಕು ಅಥವಾ ತಾವು ಬೆಳೆದುದನ್ನು ಪೇಟೆ ಪಟ್ಟಣಗಳಿಗೆ ಕಾಯ್ದಿರಿಸಲು ಸಾಗಿಸಬೇಕು. ಈ ಸಮಸ್ಯೆಯನ್ನು ಸರಕಾರ ಕೂಡ ಮನಗಂಡಿದೆ. ಮತ್ತು ಹಲವಾರು ವರ್ಷಗಳಿಂದ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಒಂದಾದರೂ ಕೋಲ್ಡ್ ಸ್ಟೋರೆಜ್ ಸ್ಥಾಪಿಸಬೇಕೆಂಬ ಮಾತುಕತೆ ನಡೆಯುತ್ತಿದೆ. ಅದರೆ ಅವೆಲ್ಲ ಚರ್ಚೆಯ ರೂಪದಲ್ಲೇ ಇವೆ. ಕಾರ್ಯ ರೂಪಕ್ಕೆ ಇನ್ನೂ ಬಂದಿಲ್ಲ.

ಭಾರತದಲ್ಲಿ ಇಂದು ಶೇಕಡಾ ಅರುವತ್ತರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ಧಾರೆ. ಕರ್ನಾಟಕದ ಕೆಲವು (ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ) ಶೇಕಡಾ ತೊಂಬತ್ತರಷ್ಟು ಜನರಿಗೆ ಕೃಷಿಯೇ ಮುಖ್ಯ ಉದ್ಯೋಗ. ಆದರೆ ನಮ್ಮ ಅಭಿವೃದ್ಧಿ ನೀತಿ ಗ್ರಾಮೀಣಾಭಿವೃದ್ಧಿಯನ್ನು ನೋಡುವ ದೃಷ್ಟಿ ಕೋನ ಮಾತ್ರ ಸೀಮಿತ ಬದುಕನ್ನು ಹಳ್ಳಿ ಜನರಿಗೆ ಕೊಡುವಂತಿದೆ. ಇಂದಲ್ಲ ನಾಳೆ ಎಲ್ಲ ಹಳ್ಳಿಗಳೂ ಪಟ್ಟಣಗಳಾಗಿ ಪರಿವರ್ತಿತವಾಗಲಿವೆ. ಅವುಗಳು ಪಟ್ಟಣಗಳಾಗಿ ಪರಿವರ್ತಿತಗೊಳ್ಳುವವರೆಗೆ ಹಳ್ಳಿ ಜನರು ಉಸಿರಾಡುವಂತೆ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ಗ್ರಾಮೀಣಾಭಿವೃದ್ಧಿಯಾಗಿದೆ. ಗ್ರಾಮಗಳು ತಮ್ಮ ಶಕ್ತಿಯನುಸಾರ ಬೆಳೆದು ತಮ್ಮ ಬದುಕನ್ನು ಕಂಡುಕೊಳ್ಳುವ ರೀತಿಯಲ್ಲಿ ಅಧಿಕಾರರೂಢರು ಅಭಿವೃದ್ಧಿಯನ್ನು ಪರಿಭಾವಿಸಿಕೊಂಡಿಲ್ಲ ಅಭಿವೃದ್ಧಿ ನೀತಿಯಲ್ಲಿರುವ ಪಟ್ಟಣ ಪರವಾದ ಧೋರಣೆಯನ್ನು ಹಲವಾರು ವಿಚಾರಗಳಿಂದ ಕಂಡುಕೊಳ್ಳಬಹುದು. ಅವುಗಳಲ್ಲಿ ಬಹುಮುಖ್ಯ ವಿಚಾರ ಸರಕಾರದ ಹಣಕಾಸು ನೀತಿ. ಸತತವಾಗಿ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡುತ್ತಲೇ ಬಂದಿದ್ದರೂ ಗ್ರಾಮೀಣಾಭಿವೃದ್ಧಿಗೆ ವಿನಿಯೋಜನೆಯಾಗುವ ಮೊತ್ತ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಬಂದಿದೆ. ರೈತರಿಗೆ ದೊರೆಯುವ ಸಾಲದ ವ್ಯವಸ್ಥೆಯಂತು ತುಂಬಾ ತಾರತಮ್ಯದಿಂದ ಕೂಡಿದೆ. ಉದಾರೀಕರಣ ನೀತಿ ಜಾರಿಗೆ ಬಂದ ನಂತರ ಬ್ಯಾಂಕ್‌ಗಳು ತಮ್ಮ ಸಾಲ ನೀತಿಯನ್ನು ಬದಲಾಯಿಸಿಕೊಂಡಿವೆ. ಅವುಗಳು ಕೂಡ ಮಾರುಕಟ್ಟೆಯಲ್ಲಿ ವ್ಯವಹರಿಸಿ ಲಾಭಗಳಿಸುವುದು ಅನಿವಾರ್ಯವಾಗಿದೆ. ಲಾಭಗಳಿಸಬೇಕಾದ ಅನಿವಾರ್ಯತೆಯಿಂದಾಗಿ ಹಿಂದಿನ ಆದ್ಯತಾ ಸಾಲ ನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಬ್ಯಾಂಕ್‌ಗಳು ಇಂದು ಯಾರಿಂದ ಸುಲಭವಾಗಿ ಮತ್ತು ಖಂಡಿತವಾಗಿ ಸಾಲ ಹಿಂದಕ್ಕೆ ಬರಬಹುದೋ ಅಂತವರಿಗೆ ಮಾತ್ರ ಸಾಲ ಕೊಡುವ ನೀತಿಯನ್ನು ಅನುಸರಿಸುತ್ತಿವೆ. ತಿಂಗಳೂ ತಿಂಗಳು ಸಂಬಳ ಬರುವ ನೌಕರರಿಗೆ ಮನೆ ಮತ್ತು ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಸಾಲ ನೀಡುವುದು, ಕೈಗಾರಿಕಾ ವಲಯದಲ್ಲಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಮತ್ತು ಕೃಷಿಕರಲ್ಲಿ ಮಧ್ಯಮ ಮತ್ತು ದೊಡ್ಡ ಕೃಷಿಕರಿಗೆ ಸಾಲ ನೀಡುವುದು ಬ್ಯಾಂಕ್‌ಗಳಿಗೆ ಹೆಚ್ಚು ಲಾಭದಾಯಕ. ಅದು ಬಿಟ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೆಲವು ಸಾವಿರ ಸಾಲಕೊಟ್ಟು ಅದರ ಲೆಕ್ಕಚಾರ ಇಡುವುದು ಅಥವಾ ಕಲೆಕ್ಷನ್‌ಗಾಗಿ ಒದ್ಧಾಡುವುದನ್ನು ಬ್ಯಾಂಕ್‌ಗಳು ಇಷ್ಟ ಪಡುವುದಿಲ್ಲ.

ಮಾರುಕಟ್ಟೆ ಮತ್ತು ಎಲ್ಲವು ಮಾರುಕಟ್ಟೆ ನಿರ್ಧಾರಿತ ಎನ್ನುವ ಈ ಕಾಲದಲ್ಲಿ ಶೇಕಡಾ ಐವತ್ತಕ್ಕಿಂತಲೂ ಹೆಚ್ಚಿನ ರೈತರು ಬ್ಯಾಂಕ್ ಅಥವಾ ಸೊಸೈಟಿಯಿಂದ ಹೊರತು ಪಡಿಸಿದ ಮೂಲಗಳಿಂದ ತಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಜತೆಗೆ ಸಣ್ಣ ಪುಟ್ಟ ರೈತರು ಬೆಳದುದನ್ನು ಮಾರಿ ತಮ್ಮ ಆಹಾರ, ಮದ್ದು, ಬಟ್ಟೆ, ಇತ್ಯಾದಿಗಳನ್ನು ಖರೀದಿಸಲೇ ಬೇಕು. ಸಣ್ಣ ರೈತನಿಗೆ ಉತ್ತಮ ಬೆಲೆಗಿಂತ ಸಮಯಕ್ಕೆ ಸರಿಯಾಗಿ ಸಿಗುವ ಕಡಿಮೆ ಬೆಲೆ ಕೂಡ ವರದಾನವಾಗುತ್ತದೆ. ಆದುದರಿಂದ ಆ ಮಾರುಕಟ್ಟೆಗಳಲ್ಲಿ ಅಂಗಡಿ ಹಾಕಿ ಕುಳಿತಿರುವ ದಲ್ಲಾಳಿಗಳು ಆತನ ಬಹು ದೊಡ್ಡ ಮಾರುಕಟ್ಟೆ. ಆ ದಲ್ಲಾಳಿಯಿಂದ ಬೀಜ ಬಿತ್ತುವಲ್ಲಿಂದ ಸಾಲ ವ್ಯವಹಾರ ಶುರುವಾಗುತ್ತದೆ. ಭಿತ್ತನೆಗೆ, ಔಷದಿ ಸಿಂಪಡಿಸಲು, ಗೊಬ್ಬರಕ್ಕೆ ಹೀಗೆ ಎಲ್ಲದಕ್ಕೂ ಸಾಲ. ಸಾಲ ತೀರಿಸುವುದು ಕೂಡ ಸುಲಭದ ಕೆಲಸ. ಫಸಲನ್ನು ದಲ್ಲಾಳಿಯ ಗೋದಾಮುಗೆ ಹಾಕಿದರೆ ಆಯಿತು. ಸಾಲ ಚುಕ್ತಗೊಂಡು ಸ್ವಲ್ಪ ಬಾಕಿ ಉಳಿದ ಹಣ ರೈತನ ಜೇಬು ಸೇರುತ್ತದೆ. ಇಂತಹ ಮಾರುಕಟ್ಟೆ ಇರುವಲ್ಲಿ ಎಲ್ಲವೂ ಮಾರುಕಟ್ಟೆ ವ್ಯವಹಾರ ಪ್ರಕಾರ ನಡೆಯಬೇಕೆಂದು ವಾದಿಸುವುದು ಸರಿಯೇ? ಈ ಎಲ್ಲ ಅಂಶಗಳು ಒಂದೇ ರಾಜ್ಯದ ವಿವಿಧ ಪ್ರದೇಶದಲ್ಲಿನ ರೈತರ ಸ್ಪರ್ಧಾಶಕ್ತಿಯನ್ನು ಬಗೆ ಬಗೆಯಾಗಿ ಕಾಡುತ್ತವೆ. ಮಾರುಕಟ್ಟೆ ಹತ್ತಿರ ಇರುವ, ಕಡಿಮೆ ಬಡ್ಡಿಗೆ ಸಾಲ ಸಿಗುವ, ಕೋಲ್ಡ್ ಸ್ಟೋರೆಜ್ ವ್ಯವಸ್ಥೆ ಇರುವ, ಸುಲಭದಲ್ಲಿ ಮತ್ತು ಸತತ ವಿದ್ಯುತ್ ಸಂಪರ್ಕ ಹೊಂದಿರುವ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುವ ಒಬ್ಬ ರೈತನ ಸ್ಪರ್ಧಾಶಕ್ತಿ ಮೇಲಿನ ಸವಲತ್ತುಗಳು ಇಲ್ಲದೆ ರೈತನ ಸ್ಪರ್ಧಾಶಕ್ತಿಗಿಂತ ಉತ್ತಮವಾಗಿರುತ್ತದೆ. ಮೇಲಿನ ಸವಲತ್ತುಗಳು ಇಲ್ಲದ ರೈತನಿಗೆ ಮೊದಲ ಪ್ರತಿಸ್ಪರ್ಧಿ ಜಾಗತೀಕರಣ ಅಥವಾ ಹೊರಗಿನ ರೈತನಲ್ಲ. ಮೇಲಿನ ಸವಲತ್ತನ್ನು ಹೊಂದಿರುವ ತನ್ನ ಹಳ್ಳಿಯ ಅಥವಾ ತಾಲ್ಲೂಕಿನ ಅಥವಾ ಜಿಲ್ಲೆಯ ಅಥವಾ ರಾಜ್ಯದ ಮತ್ತೊಬ್ಬ ರೈತನೇ ಸವಲತ್ತುಗಳಿಲ್ಲದ ರೈತನ ಬಹುದೊಡ್ಡ ಸ್ಪರ್ಧಿ ಆಗುತ್ತಾನೆ.

ಕಳೆದ ಶತಮಾನದ ಎಪ್ಪತ್ತು ಎಂಬತ್ತರ ದಶಕದಲ್ಲಿ ಭೂಸುಧಾರಣೆ ಎಲ್ಲರ ಗಮನ ಸೆಳೆದ ಸಮಸ್ಯೆ ಹಲವು ಭೂಸುಧಾರಣೆ ಮಸೂದೆಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ೧೯೬೧ರ ಭೂಸುಧಾರಣೆ ಮಸೂದೆ ಏನೇನೂ ಸಾಧನೆ ಮಾಡಲಿಲ್ಲ. ಆದರೆ ೧೯೭೪ರ ಭೂಸುಧಾರಣ ಮಸೂದೆ ಸಾಕಷ್ಟು ಸಾಧಿಸಿದೆ ಎನ್ನುವ ಚಿತ್ರಣ ಇದೆ. ಈ ಚಿತ್ರಣ ಎಷ್ಟು ಸೀಮಿತ ಮತ್ತು ಏಕೀಕರಣದ ಸಂದರ್ಭದ ಭೂಸಂಬಂಧಗಳು ವಿಶೇಷ ಬದಲಾಗಿಲ್ಲ ಎನ್ನುವುದನ್ನು ಹಿಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಆದಾಗ್ಯೂ ಭೂಸುಧಾರಣೆ ಮುಗಿದು ಹೋದ ಕತೆ. ಈಗ ಆ ಕುರಿತು ಆಲೋಚಿಸುವುದು ಅಥವಾ ಚರ್ಚಿಸುವುದು ಅನಗತ್ಯ ಎನ್ನುವ ವಾತಾವರಣ ಇದೆ. ಇದು ಸರಿಯಲ್ಲ ಇಂದು ಕೂಡ ಕುಟುಂಬವೊಂದರ ಬದುಕನ್ನು ಸಕರಾತ್ಮಕವಾಗಿ ಪರಿವರ್ತಿಸುವ ಸಾಧನವೊಂದಿದ್ದರೆ ಅದು ಭೂಮಿ ಮಾತ್ರ ಎನ್ನವುದನ್ನು ಈ ಪುಸ್ತಕದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ಇಂದು ಎಲ್ಲ ಕ್ಷೇತ್ರಗಳಲ್ಲಿ (ರಾಜಕೀಯ, ಆರ್ಥಿಕ ಇತ್ಯಾದಿ) ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಹಿಂದೆ ಭೂಮಿಯ ಪಾತ್ರ ಇದೆ. ರಾಜ್ಯದ ನಾಲ್ಕನೇ ಒಂದರಷ್ಟು ಕುಟುಂಬಗಳ ಸ್ವಾಧೀನ ರಾಜ್ಯದ ಕೃಷಿ ಭೂಮಿಯ ಮೂರನೇ ಎರಡರಷ್ಟು ಭೂಮಿ ಇರುವುದು ಮತ್ತು ರಾಜ್ಯದ ಕೃಷಿ ಭೂಮಿಯ ಮೂರನೇ ಎರಡರಷ್ಟು ಭೂಮಿ ಇರುವುದು ಮತ್ತು ರಾಜ್ಯದ ಅರ್ಧದಷ್ಟು ಕುಟುಂಬಗಳ ಸ್ವಾಧೀನ ಹತ್ತನೇ ಒಂದರಷ್ಟು ಭೂಮಿ ಇರುವುದು ನಮ್ಮ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. ಬಡತನ, ವಲಸೆ, ನಿರುದ್ಯೋಗ, ಕೊಳೆಗೇರಿ ಇತ್ಯಾದಿಗಳು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಮೂರು ಹೊತ್ತಿನ ಊಟವನ್ನು ಗಳಿಸುವಷ್ಟು ಭೂಮಿ ಇಲ್ಲದಿರುವುದರ ಫಲ. ಈ ಎಲ್ಲ ಸಮಸ್ಯೆಗಳಿಗೆ ದೂರಗಾಮಿ ಪರಿಹಾರ ಬೆಕಾದರೆ ಮತ್ತೊಂದು ಭೂಸುಧಾರಣೆ ಅನಿವಾರ್ಯ. ಹಿಡುವಳಿಯ ಗಾತ್ರದ ಅಥವಾ ಉತ್ಪಾದಕತೆಯ ನೆಪ ಒಡ್ಡಿ ಮತ್ತೊಂದು ಭೂಸುಧಾರಣೆಯನ್ನು ನಿರಾಕರಿಸುವುದರಲ್ಲಿ ಅರ್ಥವಿಲ್ಲ. ಹಿಡುವಳಿಯ ಗಾತ್ರ ಮತ್ತು ಉತ್ಪಾದಕತೆ ಅಥವಾ ಮಾರಕಟ್ಟೆಯಲ್ಲಿ ವ್ಯವಹರಿಸುವ ಸಾಧ್ಯತೆಗಳ ನಡುವೆ ಏನೇನೂ ಸಂಬಂಧವಿಲ್ಲ. ಇಂದು ಸಣ್ಣ ಹಿಡುವಳಿದಾರರ ಉತ್ಪಾದಕತೆ ಕಡಿಮೆಯಾಗಿದ್ದರೆ ಅಥವಾ ಮಾರುಕಟ್ಟೆಯಲ್ಲಿ ವ್ಯವಹರಿಸಲು ಅವರಿಗೆ ಸಮಸ್ಯೆಯಾಗಿದ್ದರೆ ಅದು ಹಿಡುವಳಿಯ ಗಾತ್ರದ ಕಾರಣಕ್ಕಾಗಿ ಅಲ್ಲ; ಮೂಲಸೌಕರ್ಯಗಳ ಕೊರತೆಯಿಂದ. ಮೂಲಸೌಕರ್ಯಗಳನ್ನು ಕನಿಷ್ಠ ಪ್ರಮಾಣದಲ್ಲಿ ಸರಕಾರ ಪೂರೈಕೆ ಮಾಡಿದರೆ ರೈತರು ತಮ್ಮ ಸ್ವಾಧೀನ ಇರುವ ಅಲ್ಪಸ್ವಲ್ಪ. ಹಿಡುವಳಿಯಲ್ಲಿ ತಮ್ಮ ಜೀವನಾಂಶಕ್ಕೆ ಬೇಕಾಗುವಷ್ಟು ಬೆಳೆಯ ಬಲ್ಲರು ಮತ್ತು ಮಾರುಕಟ್ಟೆಯಲ್ಲಿ ವ್ಯವಹರಿಸಬಲ್ಲರು.