ಪೀಠಿಕೆ:

ಭಾರತ ಇತಿಹಾಸವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದಾಗ, ನಮ್ಮ ರಾಷ್ಟ್ರದ ದೀರ್ಘವಾದ ಸಂಸ್ಕೃತಿ ಹಾಗೂ ಸಮೃದ್ಧವಾದ ಪರಂಪರೆಯನ್ನು ಕಾಣುತ್ತೇವೆ. ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನ ಇತಿಹಾಸವು ರಾಜಕೀಯ ಮತ್ತು ಚಾರಿತ್ರಿಕವಾದ ಅಂಶಗಳಿಂದ ಕೂಡಿದ್ದಾಗಿದೆ.

ಈ ನಿಟ್ಟಿನಲ್ಲಿ ಯಾದಗಿರಿ ಜಿಲ್ಲೆಯ ಪರಿಸರವನ್ನು ನಾವು ಗಮನಿಸಿದಾಗ ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿರುವುದನ್ನು ಗಮನಿಸಬಹುದಾಗಿದೆ. ಭೌಗೋಳಿಕವಾಗಿ ಭೀಮಾ ನದಿಯ ದಡಕ್ಕೆ ಇರುವ ಈ ಪರಿಸರವು ಸಾಲು ಬೆಟ್ಟಗಳು ಮತ್ತು ಸಸ್ಯ ಸಂಪತ್ತು ಹಾಗೂ ಖನಿಜ ಸಂಪತ್ತನ್ನು ಹೊಂದಿದೆ. ಯಾದಗಿರಿ ಜಿಲ್ಲೆಯ ವ್ಯಾಪ್ತಿ ಐದು ಸಾವಿರದ ಎರಡು ನೂರ ಮೂವತ್ತಾನಾಲ್ಕು (೫೩೨೪) ಚದರ ಕಿ.ಮೀ.ಗಳಿದ್ದು, ಐದು ಲಕ್ಷ ಹದಿನಾರು ಸಾವಿರದ ಎಂಭತ್ತೆಂಟು (೫,೧೬,೦೮೮) ಹೆಕ್ಟೇರಗಳಷ್ಟು ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರು‌ತ್ತದೆ.

ಯಾದಗಿರಿ ಜಿಲ್ಲೆಯ ಪರಿಸರದಲ್ಲಿ ಪ್ರಾಚೀನ ಶಿಲಾಯುಗ, ಸಂಸ್ಕೃತಿಯ, ಆದಿಶಿಲಾಯುಗ ಸಂಸ್ಕೃತಿಯ ನೆಲೆಗಳು, ಯಡ್ಡಳ್ಳಿ ಮತ್ತು ಯಾದಗಿರಿ ಪಟ್ಟಣದಲ್ಲಿ ಪ್ರಮುಖ ನೆಲೆಗಳಾಗಿದ್ದುವು. ನಂತರ ಮಧ್ಯ ಹಳೆಯ ಶಿಲಾಯುಗದ ಸಂಸ್ಕೃತಿ ಕೊಲ್ಲೂರು ಎಂಬ ಗ್ರಾಮ ಕೂಡಾ ಪ್ರಮುಖ ನೆಲೆಯಾಗಿತ್ತು ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಯ ಪ್ರಮುಖ ನೆಲೆಗಳಾದ ಕೊಂಡಾಪುರ, ಗುರುಮಿಠಕಲ್ ಮತ್ತು ರಾಚನಳ್ಳಿ ಹಾಗೂ ಸಂಗವಾರ ಎಂಬ ಗ್ರಾಮಗಳಲ್ಲಿ ನೆಲೆಯಾಗಿತ್ತು. ವಿವಿಧ ಘಟ್ಟಗಳಲ್ಲಿ ಪ್ರಾಚೀನ ಶಿಲಾಯುಗದ ಸಂಸ್ಕೃತಿಯ ನೆಲೆಗಳು ಈ ಪರಿಸರದಲ್ಲಿ ಕಾಣುತ್ತೇವೆ.

ಚಾರಿತ್ರಿಕ ಮತ್ತು ಐತಿಹಾಸಿಕವಾಗಿ ಯಾದಗಿರಿ ಜಿಲ್ಲೆಯ ಪರಿಸರವನ್ನು ಗಮನಿಸಿದಾಗ ಪ್ರಾಚೀನ ಮನೆತನಗಳಾದ ಮೌರ್ಯರು ಮತ್ತು ಶಾತವಾಹನರು ಹಾಗೂ ಬಾದಾಮಿ ಚಾಲುಕ್ಯರು ಪರೋಕ್ಷವಾಗಿ ಆಡಳಿತವನ್ನು ಮಾಡಿದರು. ನಂತರದಲ್ಲಿ ಯಾದಗಿರಿಯು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತು. ಈ ಮನೆತನದ ಶ್ರೇಷ್ಠ ಅರಸನಾದ ಅಮೋಘವರ್ಷ ನೃಪತುಂಗನ ಅವಧಿಯ (ಕ್ರಿ.ಶ. ೮೧೪ ರಿಂದ ೮೮೦) ಆಳ್ವಿಕೆಯಲ್ಲಿ ಈ ಪರಿಸರವು ಗುರುಕುಲ್ ಶಿಕ್ಷಣದ ಕೇಂದ್ರವಾಗಿದ್ದು ಪ್ರಮುಖ ಪಟ್ಟಣವಾಗಿತ್ತು.  ಅನೇಕ ‌ಜೈನ ತೀರ್ಥಂಕರ ಉಬ್ಬು ಮೂರ್ತಿ ಶಿಲ್ಪಗಳನ್ನು ಕೆತ್ತಲಾಗಿರುವದರ ಕುರುಹುಗಳು ಎಂದಿಗೂ ಕಾಣಬಹುದು. ಮುಂದೆ ಭಾರತವನ್ನಾಡಳಿತ ಮಾಡಿದ ಮೊಗಲ್ ಸಾಮ್ರಾಟ ಔರಂಗಜೇಬನು ಈ ಭಾಗವನ್ನು ವಶಪಡಿಸಿಕೊಂಡನು. ಔರಂಗಜೇಬನ ಮರಣದ ನಂತರ ಈ ಭಾಗದಲ್ಲಿ ಆತನ ಉತ್ತರಾಧಿಕಾರಿಯಾದ ಅಸಫ್ ಜಹಾನನು ಹೈದ್ರಾಬಾದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕ್ರಿ.ಶ.೧೭೨೪ ರಲ್ಲಿ ಯಾದಗಿರಿಯನ್ನು ವಶಪಡಿಸಿಕೊಂಡನು.  ಹೀಗೆ ನಿಜಾಮ ಸಂಸ್ಥಾನವು ಕ್ರಿ.ಶ. ೧೭೨೪ ರಿಂದ ೧೯೪೮ರ ವರೆಗೆ ಈ ಪ್ರದೇಶದ ಆಳ್ವಿಕೆ ನೆಡೆಸಿತು.

ಕ್ರಿ.ಶ.೧೯೪೭ ರಲ್ಲಿ ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ ಬಂದ ನಂತರವೂ ಈ ಭಾಗವು ನಿಜಾಮನ ಆಳ್ವಿಕೆಗೊಳಪಟ್ಟಿತ್ತು. ಕೊನೆಗೆ ಭಾರತದ ಅಂದಿನ ಗೃಹಮಂತ್ರಿಗಳಾದ ಸರ್ದಾರ ವಲ್ಲಭಾಯಿ ಪಟೇಲ ಅವರ ಪೊಲೀಸ್ ಕಾರ್ಯಾಚರಣೆಯಿಂದ ಕ್ರಿ.ಶ. ೧೯೪೮ ಸೆಪ್ಟೆಂಬರ ೧೮ ರಂದು ನಿಜಾಮನ ಆಳ್ವಿಕೆಗೆ ಒಳಪಟ್ಟಿರುವ ಭಾಗವನ್ನು ಭಾರತದಲ್ಲಿ ವಿಲೀನ ಮಾಡಿದರು.

ಹೀಗೆ ದೀರ್ಘಕಾಲದ ರಾಜಕೀಯ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯುಳ್ಳ ಯಾದಗಿರಿ ಜಿಲ್ಲೆಯು ರಾಜ್ಯದ ೩೦ನೇ ಜಿಲ್ಲೆಯಾಗಿ ದಿನಾಂಕ ೩೦-೧೨-೨೦೦೯ ರಿಂದ ಅಸ್ತಿತ್ವದಲ್ಲಿ ಬಂದಿದೆ.