ಉತ್ತರ ಕಾಲೀನ ಚಾಳುಕ್ಯರ ನೆಲೆವೀಡಾದ ಕಲ್ಯಾಣದಲ್ಲಿ ಕ್ರಿ. ಶ. ಎರಡನೆಯ ಶತಮಾನದಲ್ಲಿ ಯಾಪನೀಯ ಸಂಘದ ಜಿನಾಲಯ ಇದ್ದುದನ್ನು ದೇಚಸೇನನು ತನ್ನ ಪ್ರಾಕೃತ ಗ್ರಂಥವಾದ ದರ್ಶನ ಸಾರದಲ್ಲಿ ನಮೂದಿಸಿದ್ದಾನೆ. ಚಾಳುಕ್ಯರ ರಾಜಧಾನಿ ಆಗುವುದಕ್ಕೂ ಎಂಟುನೂರು ವರ್ಷ ಮೊದಲೇ ಕಲ್ಯಾಣನಗರ ಜೈನರ, ಯಾಪನೀಯರ ಕೇಂದ್ರವಾಗಿತ್ತು. ಚಾಳುಕ್ಯ ಚಕ್ರವರ್ತಿ ಆಹವಮಲ್ಲ ತ್ರೈಲೋಕ್ಯಮಲ್ಲ, ಸೋಮೇಶ್ವರದೇವನು (೧೦೪೨ – ೬೮) ಯಾಪನೀಯ ಸಂಘದ ವವಿಯೂರು ಭೀಮಚೆಂದ್ರ ಭಟ್ಟಾರಕರ ಶಿಷ್ಯನಾದ ಮೌನಿಚಂದ್ರ ಸಿದ್ಧಾಂತ ದೇವನ ಕಾಲನ್ನು ತೊಳೆದು, ನದುಕುಲಿಗೆಯ ವಸತಿ (ಬಸತಿ) ಯ ಸಂರಕ್ಷಣೆಗೆಂದು ನಗದು ಪಣ, ದೇವಭೋಗ, ಪೊನ್ನ ಗದ್ಯಾಣ ಮೊದಲಾದುವನ್ನು ಕ್ರಿ. ಶ. ೧೦೬೮ರಲ್ಲಿ ದಾನವಿತ್ತುದನ್ನು ರಾಮಚಂದ್ರಪುರ ಶಾಸನ ದಾಖಲಿಸಿದೆ [ಆಂಧ್ರ : ಮೇಡಕ್‌ ಜಿ, ನರಸಾಪುರ ತಾ.] ಗೋದಾವರೀ – ಕೃಷ್ಣ ನದಿಗಳ ನಡುವಣ ಬೆ(ವೆ)ಂಗಿನಾಡಿನ ‘ಸಿಂಗ ವಿಕ್ರಮಪುರ’ ನೆಲೆವೀಡಿನಲ್ಲಿ ಮಹಾರಾಜನು ಉಪ್ಪಯಣ ಮಾಡಿದ್ದಾಗ ಈ ದಾನಕೊಟ್ಟನು [ಜಿನಮಂಜರಿ, ಸಂಪುಟ ೧೨, ಸಂಚಿಕೆ ೨, ಆಕ್ಭೋಬ‌ರ್‌ ೧೯೯೫, ಪು.೬೩ – ೭೪].

ಯಾಪನೀಯರ ಭದ್ರಕೋಟೆಗಳಲ್ಲಿ ಸೌದತ್ತಿ ಗುಡ್ಡ ಗಣ್ಯ ಸ್ಥಾನಗಳಿಸಿತ್ತು. ಅದು ಲಾಗಾಯ್ತಿನಿಂದ ಸವಣರಿಗೆ ದತ್ತಿಯಾಗಿ ಬಂದ ಭೂಮಿ. ರಟ್ಟರ ಪಟ್ಟಜಿನಾಲಯ ಇದ್ದದ್ದೂ ಅಲ್ಲೆ. ಕುಹೂಂಡಿ – ಮೂರುಸಾವಿರ ಮಂಡಲವೆಲ್ಲ ಯಾಪನೀಯರ ಪ್ರಭಾವ ವಲಯವಾಗಿತ್ತು. ೨೨ನೆಯ ತೀರ್ಥಂಕರ ನೇಮಿನಾಥರ ಜಿನಶಾಸನ ದೇವಿಯಾದ ಕೂಷ್ಮಾಂಡಿಯೆಂಬ ಸಂಸ್ಕೃತ ರೂಪವು ಕುಹೂಂಡಿ ಎಂಬ ದೇಶ್ಯ ರೂಪಕ್ಕೆ ದಾರಿ ತೆರೆಯಿತು. ಕುಹೂಂಡಿ, ಕೂಂಡಿ – ೩೦೦ ಪ್ರದೇಶವು ರಟ್ಟರ ಆಳಿಕೆಯಲ್ಲಿ ವಿಷಯವೆನಿಸಿ ಹೆಸರು ಪಡೆಯಿತು.

ಗೋಕಾಖ ಶಾಸನೋಕ್ತನಾದ ರಾಷ್ಟ್ರಕೂಟರ ಜೆಜ್ಜಮಹಾರಾಜನ ಹೆಜ್ಜೆ ಹುರುತುಗಳು ಹೆಚ್ಚು ತಿಳಿದು ಬಂದಿಲ್ಲ. ಆದೇ ಶಾಸನದಲ್ಲಿ ಮಹಾವೀರ ಜಿನರ ಪರಂಪರೆಯ ಆಗುಪ್ತಾಯಿಕ ರಾಜರ ೮೪೫ನೆಯ ವರ್ಷದ ಪ್ರಸ್ತಾಪ ವಿಶಿಷ್ಟವಾದುದು. ಆಗುಪ್ತಾಯಿಕ ರಾಜಮನೆತನದ ಮಾಹಿತಿಯೂ ಮತ್ತೆ ಬೇರೆ ಕಡೆ ಕಾಣುವುದಿಲ್ಲ. ಗೋಕಾಕ ಶಾಸನದಲ್ಲಿ ಹೇಳಿರುವ ಆರ್ಯನಂದಿ ಮುನಿಗೆ ಕಷ್ಮಾಂಡಿ ವಿಷಯಕ್ಕೆ ಸೇರಿದ ಜಳಾರ ಎಂಬ ಊರನ್ನು ದತ್ತಿ ಬಿಡಲಾಗಿದೆ. ಕಷ್ಮಾಂಡಿ ಎಂಬುದು ಕೂಷ್ಮಾಂಡಿಯ ರೂಪ ತಪ್ಪಾಗಿ ಪ್ರಾಯೋಗವಾಗಿರುವಂತಹುದು. ಕೂಷ್ಮಾಂಡಿ – ಕಷ್ಮಾಂಡಿ ವಿಷಯವೇ ಕುಹೂಂಡಿ ಕುಹುಂಡಿ – ಕೂಂಡಿ ವಿಷಯವೆಂದು ಎಂ. ಬಿ. ನೇಗಿನಹಾಳ ಸಮಂಜಸವಾಗಿ ಗುರುತಿಸಿದ್ದಾರೆ [ಇತಿಹಾಸದರ್ಶನ – ೧೧, ೧೯೯೬, ಪು.೨೪೯].

ಈ ಹಿನ್ನೆಲೆಯಲ್ಲಿ, ಸೌದತ್ತಿಯ ಗುಡ್ಡದ ಮೇಲಿರುವ ಜೈನರ ಗುಡಿಯಲ್ಲಿ ಈಗ ಪೂಜೆಗೊಳ್ಳುತ್ತಿರುವ ಎಲ್ಲಮ್ಮನ ಮೂಲ ಮೂರ್ತಿ ಯಾವುದೆಂಬುದರ ಮರುಪರಿಶೀಲನೆ ಆಗಬೇಕು. ಏಕೆಂದರೆ, ನಾನೂ ಸೇರಿದಂತೆ, ವಿದ್ವಾಂಸರು ಪಾರ್ಶ್ವನಾಥಜಿನರ ಶಾಸನ ದೇವಿಯಾದ ಪದ್ಮಾವತಿದೇವಿ ಯಕ್ಷಿಯೇ ಎಲ್ಲಮ್ಮ ದೇವತೆಯಾಗಿರುವುದು ಎಂದು ಹೇಳುತ್ತ ಬಂದಿದ್ದೇವೆ. ಆದರೆ ಕುಹೂಂಡಿ ವಿಷಯವು ಕೂಷ್ಮಾಂಡಿನೀದೇವಿಯ ಹೆಸರಿನಿಂದ ರೂಪಿತವಾದದ್ದು. ಅದರಿಂದ ರಟ್ಟರ ಪಟ್ಟಜಿನಾಲಯವಾಗಿದ್ದ ಸೌದತ್ತಿ ಗುಡಿಯಲ್ಲಿ ಮೂಲಮೂರ್ತಿಯು ಕೂಷ್ಮಾಂಡಿನೀದೇವಿಯದೇ ಆಗಿರುವುದು ಸಂಭಾವ್ಯ. ಪದ್ಮಾವತಿದೇವಿ ಯಷ್ಟೇ ಹೆಚ್ಚು ಜನಪ್ರಿಯತೆಯಿಂದ ಪ್ರಸಿದ್ಧಿ ಪಡೆದಿರುವ ಅಂಬಿಕಾಯಕ್ಷಿಯ ಇನ್ನೊಂದು ಹೆಸರು ಕೂಷ್ಮಾಂಡಿನೀದೇವಿ. ಆಕೆ ಸಂತಾನ ದೇವತೆ, ಅಭೀಷ್ಟರ ವರಪ್ರದಾಯಿನಿ. ಶ್ರವಣಬೆಳಗೊಳದ ಸ್ಥಳದೇವತೆ, ಚಾವುಂಡರಾಯನ ಮನೆದೇವತೆ.

ಅಲ್ಲದೇ ಯಾಪನೀಯ ಮಂತ್ರ – ತಂತ್ರ – ಯಂತ್ರಗಳನ್ನು ಜಾರಿಗೆ ತಂದವರು. ಭೂತಪ್ರೇತ ಪಿಶಾಚಗಳನ್ನು ಓಡಿಸುವವರೆಂದು ಪ್ರಸಿದ್ಧಿಪಡೆದವರು. ಸೌದತ್ತಿ ಎಲ್ಲಮ್ಮನ ಭಕ್ತರೂ, ಚಂದ್ರಗುತ್ತಿ ಗುಡಿಯ ಭಕ್ತರೂ ಬೆತ್ತಲೆಸೇವೆ ಮೂಲಕ ಆ ದೈವಕ್ಕೆ ನಡೆದುಕೊಳ್ಳುವುದರ ಹಿಂದೆ, ದಿಗಂಬರ ಜೈನರಿಗೆ ಸೇರಿದ ಗುಡಿಗೆ ನಡೆದುಕೊಳ್ಳುತ್ತಿರುವ ನಂಬಿಕೆ ಕೆಲಸ ಮಾಡಿದೆಯಲ್ಲದೆ, ಯಾಪನೀಯ ಅಲ್ಲಿ ನಡಸುತ್ತಿದ್ದ ತಾಂತ್ರಿಕಾರಾಧಾನೆಯ ಪಳೆಯುಳಿಕೆಯೂ ಆಗಿದೆ ಎಂಬುದನ್ನು ಪರಿಭಾವಿಸಬೇಕು. ಜತೆಗೆ ‘ಮಿಶ್ರುತ ಯಾಪನೀಯ ಸಂಘದೊಳೆಸೆವ ಱಟ್ಟ ಕುಲೋದ್ಭವ ಭೂಭುಜರ್‌’ ಎಂಬ ಶಾಸನ ಪ್ರಯೋಗವನ್ನೂ ಗಮನಿಸಬೇಕು.

ಇದೇ ಬಗೆಯಲ್ಲಿ, ಯಾಪನೀಯಾ ನಂತರ ಕಾಲಘಟ್ಟದಲ್ಲಿ ಸಂಭವಿಸಿದ ಸಾಮಾಜಿಕ ಪಲ್ಲಟವೊಂದನ್ನು ಇಲ್ಲಿ ಉಲೇಖಿಸಬೇಕು. ಹನ್ನೆರಡನೆಯ ಶತಮಾನದ ವೇಳೆಗೆ ಜೈನ ಶಾಖೆಯಿಂದ ಬೇರೆಯಾದ ಸಾದಕುಲದ ಪ್ರಸ್ತಾಪ ಕೆಲವು ಶಾಸನಗಳಲ್ಲೂ ಬಂದಿದೆ. [ಸೌಇಇ. ೧೮.೧೮೦.೧೧೬೮; ಅದೇ, ೨೯೩.೧೧೬೨; ಅದೇ, ೧೪೯,. ೧೧೪೪ ಇತ್ಯಾದಿ.] ಚಂದ್ರಸಾಗರ ವರ್ಣಿಯು (೧೭೬೦ – ೧೮೩೫) ಸಾದರು ಜೈನ ಮಥದಿಂದ ಬಂದವರೆಂದು ತಿಳಿಸಿದ್ದಾನೆ. ಕರ್ನಾಟಕದಲ್ಲಿ ಇಂದಿಗೂ ಸಾದರು ಮತದವರು ಸಹಸ್ರಾರು ಸಂಖ್ಯೆಯಲ್ಲಿ ಇದ್ದಾರೆ; ಇವರಲ್ಲಿ ಜೈನ, ವೀರಶೈವ ಸಂಪ್ರದಾಯ ಪಾಲಿಸುವವರೂ, ಎರಡೂ ಅಲ್ಲದೆ ಸ್ವತಂತ್ರವಿಧಾನವನ್ನು ಅನುಸರಿಸುವರೂ ಇದ್ದಾರೆ. ವಾಸ್ತವವಾಗಿ ಈ ಸಾದರು ಯಾಪನೀಯ ಸಂಪ್ರದಾಯದ ಶ್ರಾವಕ ಶಿಷ್ಯ ಪರಂಪರೆಯವರು. ಯಾಪನೀಯವು, ಅದರ ಗಣಗಚ್ಛಗಳ ಹೆಸರುಗಳು ೧೩ – ೧೪ನೆಯ ಶತಮಾನದವರೆಗೂ ಪ್ರಯೋಗವಾಗುತ್ತಿದ್ದರೂ ಕ್ರಿ. ಶ. ೯ – ೧೦ನೆಯ ಶತಮಾನದವೇಳೆಗೆ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡು, ಜೈನ ಮುಖ್ಯವಾಹಿನಿಯಾದ ದಿಗಂಬರ ಮೂಲ ಸಂಘದಲ್ಲಿ ಕರಗಿಹೋಗಿತ್ತು. ೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಜೈನ ಸಮಾಜದ ಬಹುದೊಡ್ಡ ಗುಂಪು ಬಣಜಿಗ ವೀರಶೈವರಾಗಿ ಮತಾಂತರಗೊಂಡರು ಅವರು ಕೂಡ ಯಾಪನೀಯ ಪರಂಪರೆಗೆ ಸೇರಿದವರು. ಹಾಗೆಯೇ ಸಾದರೂ ವ್ವೈಶ್ಯರೂ ಬೇರೆಯಾದರು. ಈ ಅಂಶವನ್ನು ‘ಸಾದರು’ ಶಬ್ಧದ ನಿಷ್ಪತ್ತಿಯು ಪುಷ್ಟೀಕರಿಸುತ್ತದೆ.

ಈ ಗ್ರಂಥದ ಆರಂಭದಲ್ಲಿ ‘ಅರ್ಧಫಾಲಕ’ ಶಬ್ಧ ಮತ್ತು ಸಂಪ್ರದಾಯ ಕುರಿತು ಚರ್ಚಿಸಿದ್ದಾಗಿದೆ. (ಅರ್ಧ) ‘ಫಾಲಕ’ ಎಂಬುದರ ಪರ್ಯಾಯವಾದ ಇತರ ಶಬ್ಧ ರೂಪಗಳು ಹೀಗಿವೆ : ಚೇಲಖಣ್ಡ, (ಅರ್ಧ) ಕಪ್ಪಡ, ಚೇಲಕ ಫಾಲಕ, ಶಾಟಕ, ಚಾದರ, ಸಾದರ, ‘ಸಾದರ’ ಎಂಬುದು ವಸ್ತ್ರ, ಬಟ್ಟೆ ಎಂದು ಅರ್ಥವಿರುವ ಶಬ್ಧವಾಗಿದ್ದು ಅದು, ಆಹಾರ (ಭಿಕ್ಷೆಯಚರಿಗೆ) ಸಂಗ್ರಹಕ್ಕಾಗಿ ಹೊರಟಾಗ ಯಾಪನೀಯರು ಮೇಲುದವಾಗಿ ಬಳಸುತ್ತಿದ್ದ ತುಂಡು ಬಟ್ಟೆಯನ್ನು ಸೂಚಿಸುತ್ತಿತ್ತು. ಸಾದರ ಸಂಪ್ರದಾಯದ ಮುನಿಗಳ ಶಿಷ್ಯರು ಸಾದರು ಎಂದು ರೂಢಿಗೆ ಬಂದಿದೆ. ಸಾದರು ಯಾಪನೀಯ ಶ್ರಾವಕರು.

ಫಾಲಕ, ಕಪ್ಪಡ, ಚಾದರ, ಸಾದರ ಶಬ್ದಗಳಿಗೆ ಸಂವಾದಿಯಾದ ‘ತಟ್ಟು’ ಎಂಬ ಇನ್ನೊಂದು ಶಬ್ದವು ಈ ಯಾಪನೀಯರನ್ನು ನಿರ್ದೇಶಿಸಲು ಬಳಕೆಯಾಗುತ್ತಿತ್ತು. ತಟ್ಟು, ತಟ್ಟೀ ಎಂಬುದನ್ನು ಜೈನ ಮುನಿಗಳ ಸಂಬಂಧದಲ್ಲಿ ಪ್ರಯೋಗಿಸಿದೆ:

೦೧. ತಟ್ಟು ಕುಂಚ ಕಮಂಡಲುಗಳೆಂಬ… ಬೌದ್ಧಕಾರಿಗಳು ಕೇಳಿರೆ (ಮನುಮುನಿಗುಮ್ಮಟದೇವಗಳ ವಚನ : ಕ್ರಿ.ಶ. ೧೧೬೦).

೦೨. ಜಡೆಯೆಂಬುದು ಗೊರವಂಗೆ ತಟ್ಟೆಂಬುದು ಸವಣಂಗೆ : ಜನ್ನ (೧೨೩೦), ಅನಂತನಾಥ ಪುರಾಣಂ, ೨ – ೨೮ ವ.

೦೩.ಋಷಿಯರ್ಗೆ ತಟ್ಟು ಕುಂಚ ಪುಸ್ತಕಂಗಳುಮಂ ಅಜ್ಜಿಯರ್ಗ್ಗೆ ವಸ್ತಂಗಳುಮಂ ಕುಡುವುದು; ನಾಗರಾಜ (೧೩೩೦), ಪುಣ್ಯಾಸ್ರವ ಚಂಪು, ೧ – ೧೦೬ ವ.

೦೪.ತಟ್ಟುಗಳ ಹಗರಣಿಗರೊ ಎನಲು ಮಲಧಾರಿಗಳು ಗಜಬಜಿಸಿ ನೆರೆವುತ್ತ; ಭೀಮಕವಿ (೧೩೬೯), ೫೧ – ೫೩.

೦೫.ತಱಟುದಲೆಗಳ ತಟ್ಟಿರೋ…. ತಟ್ಟುಗಳ ಹಗರಣಿಗರೊ; ಹರಿಹರ (ಸು. ೧೨೦೦).

ಕೇಶೀರಾಜನು (ಸು. ೧೨೩೫) ತನ್ನ ಶಬ್ದಮಣಿದರ್ಪಣದಲ್ಲಿ, ಧಾತು ಪ್ರಕರಣದಲ್ಲಿ – ‘ತಟ್ಟು ಕ್ಷಪಣಕಾಚ್ಛಾದನೇಚ’ (ಜೈನ ಸಂನ್ಯಾಸಿಯ ಹೊದಿಕೆ) ಎಂದು ವಿವರಿಸಿದ್ದಾನೆ. ಚತುರಾಸ್ಯ ಬೊಮ್ಮರಸನ (೧೪೫೦) ಚತುರಾಸ್ಯ ನಿಘಂಟಿನಲ್ಲಿ ತಟ್ಟು ಎಂಬುದು ‘ಸವರಣರುಳ್ಳುಡೆ’ ಎಂದಿದ್ದಾನೆ (೧,೬೪). ಕನ್ನಡ ಗೋಣಿತಟ್ಟು, ತಟ್ಟೀ, ತಡಿಕೆ ( – ಚಾಪೆ) ಎಂಬ ಮಾತುಗಳು ಈ ತಟ್ಟು ಶಬ್ದ ಮೂಲಕ್ಕೆ ಸೇರಿರಬಹುದು. ತಟ್ಟೀ, ಸಾದರ – ಇವು ಜೈನ ಯಾಪನೀಯ ಸನ್ಯಾಸಿಗಳ ಹೊದಿಕೆಗೆ ಇದ್ದ ಹೆಸರುಗಳು. ಕೇಶೀರಾಜ ಕೊಟ್ಟಿರುವ ಸ್ಪಷ್ಟವಾದ ವಿವರಣೆ ಖಚಿತವಾದ ಆಧಾರ. ಕ್ಷಪಣಿಕ, ಬೋಟಿಕ, – ಎಂಬ ಎರಡು ಶಬ್ದಗಳು ಯಾಪನೀಯ ಗುರುಗಳಿಗೆ ಸಂಬಂಧಿಸಿದ್ದೆಂಬದನ್ನು ಈಗಾಗಲೇ ಹಿಂದೆ ಚರ್ಚಿಸಿದ್ದಾಗಿದೆ. ಚಾಪೆ, ಸಾಪೆ ಎಂಬ ಶಬ್ದಕ್ಕೂ ಯಾಪೆ – ಯಾಪನೀಯ – ಯಾಪಕ ಎಂಬುದಕ್ಕೂ ಸಂಬಂಧವನ್ನು ಕಲ್ಪಿಸಬಹುದೆ ಎಂಬುದೂ ಚಿಂತನೀಯವಾಗಿದೆ. ಏಕೆಂದರೆ ಪಾಲಿಭಾಷೆಯ ಮೂಲದ ಯಾಪನೀಯ ಶಬ್ದವು ‘ಯಾ+ಆಪೇ’ ಎಂಬುದರಿಂದ ರೂಪಗೊಂಡಿದ್ದು, ‘ಒಬ್ಬನ ಮೈಗೆ ಎಷ್ಟೋ ಅಷ್ಟು ಮಾತ್ರ’ ಎಂಬ ಮೂಲಾರ್ಥ ಹೊಂದಿದೆ. ಇದರ ಸಂಭಾವ್ಯತೆ ಕುರಿತು ತಜ್ಞರು ಪರಿಶೀಲಿಸಬಹುದು.

ಯಾಪನೀಯ ಸಂಘದಲ್ಲಿ ಪ್ರಭಾವಶಾಲಿಗಳಾದ ಕಂತಿಯೂ ಇದ್ದರು. ಜೈನ ಪುರುಷ ಸನ್ಯಾಸಿಗಳನ್ನು ಶ್ರಮ(ವ)ಣ, ಸಮ(ವ)ಣ, ಜಿನಮುನಿ, ನಮೋಸ್ತು, ರಿಷಿ, ಯತಿ, ಕ್ಷಪಣಕ, ನಿಗ್ರಂಥ – ಎಂಬಿತ್ಯಾದಿ ಶಬ್ದಗಳಿಂದ ಸೂಚಿಸಲಾಗುವುದು. ಗೊರವ ಎಂಬ ಶಬ್ದವನ್ನೂ ಬಳಸುವುದುಂಟು. ವರ್ಣಿ, ಕ್ಷುಲ್ಲಕ, ಐಲಕ, ನಿರ್ಗ್ರಂಥ – ಇವು ಅವರ ಸಾಧನೆಯ ಹಂತಗಳಿಗೆ ಅನ್ವಯಿಸುವ ಪಾರಿಭಾಷಿಕ ಶಬ್ದಗಳು. ಆಚಾರ್ಯ, ಭಟ್ಟಾರಕ, ಸಿದ್ಧಾಂತಿ, ಪಂಡಿತ, – ಎಂಬಿತ್ಯಾದಿ ಶಬ್ದಗಳು ಅವರವರ ಸ್ಥಾನ, ವಿದ್ವತ್ತು ಅವಲಂಬಿಸಿರುತ್ತವೆ.

ಜೈನ ಸನ್ಯಾಸಿಯರಿಗೆ ಅಜ್ಜಿ, ಅಬ್ಬೆ, ಕಂತಿ, ಅಜ್ಜಿಕೆ, ಶಿಷ್ಯೆ, ಶಿಷನ್ತಿ, ಶಿಷ್ಯಂತಿ, ಸಿಸಿತಿ, ಗೋರವಿ, ಗಂತಿ – ಎಂಬಿತ್ಯಾದಿ ಶಬ್ದಗಳನ್ನು ಶಾಸನಗಳಲ್ಲಿ ಬಳಸಲಾಗಿದೆ. ಅಬ್ಬೆ, ಕಂತಿ ಎಂದು ಸಮಾನಾರ್ಥವಾದ ಎರಡು ಶಬ್ದಗಳನ್ನು ಒಟ್ಟಿಗೆ ಸೇರಿಸಿ ಬಳಸಿರುವುದೂ ಉಂಟು. ಶಿಷ್ಯೆ, ಶಿಷನ್ತಿ, ಶಿಷ್ಯಂತಿ, ಸಿಷಿತಿ, ಸಿಶ್ಯಂತಿ, ಸಿಸಿತಿ – ಎಂಬಿಷ್ಟೂ ರೂಪ ಪ್ರಭೇದಗಳು ಶಿಷ್ಯಂತಿ ಎಂಬ ಮೂಲಕ್ಕೆ ಸೇರಿವೆ. ಶಿಷ್ಯೆಯಾಗಿರುವ ಸ್ತ್ರೀ ಎಂಬುದು ಮೂಲಾರ್ಥ. ಕಂತಿ ಎಂಬುದು ಕನ್ಯಾಸ್ತ್ರೀ ಎಂಬ ಮೂಲಕ್ಕೆ ಸೇರಿದ ಶಬ್ದ. ಅಜ್ಜಿ ಎಂಬುದು ಆರ್ಯಿಕಾ ಶಬ್ದದಿಂದ ಬಂದ ತದ್ಭವ ರೂಪ. ಯಾಪನೀಯ ಕಂತಿಯರು, ಅವ್ವೆಯರು ಶಾಸನೋಕ್ತರಾಗಿದ್ದಾರೆ. ಅಂತಹವರಲ್ಲಿ ಚಂದ್ರಮತಿ ಅವ್ವೆ ಪ್ರಮುಖರು. ಅವರ ವಿದ್ವತ್ತನ್ನೂ ಉನ್ನತ ವ್ಯಕ್ತಿತ್ವವನ್ನೂ ಕನ್ನಡ ಶಾಸನದಲ್ಲಿ ಅದ್ಭುತವಾಗಿ ಕಂಡರಿಸಲಾಗಿದೆ:

ಸರಸತಿ ಕುಂಚಮಂ ಧರಿಯಿಸಿರ್ದ್ದಳೊ ಶಾನ್ತರಸಂ ತಪಸ್ವಿನೀ
ಚರಿತಮನಾನ್ತದೊ ಸಕಳ ಭವ್ಯಜನಂಗಳ ಪುಣ್ಯವೃದ್ಧಿ ಪೆ
ಣ್ಪರಿಜಿನೊಳಾರ್ಯ್ಯಿಕಾಕೃತಿಯನಾನ್ತುದೊ ಪೇಳಿಮಿದೆಂದೊಱಲ್ದು ಬಿ
ತ್ತರಿಪುದು ಧಾತ್ರಿ ಚಂದ್ರಮತಿಯವ್ವೆಗದಂ ವಸಧಾ…. ||
[ಸೌಇಇ. ೧೮. ಸಂಖ್ಯೆ. ೧೫೧. ಕ್ರಿ.ಶ. ೧೧೪೮. ನೀರಲ್ಗಿ(ಹಾವೇರಿ ಜಿ)]

ಇದು ಚಂಪಕಮಾಲಾ ವೃತ್ತ ಪದ್ಯ. ಚಂದ್ರಮತಿ ಅವ್ವೆಯು ಕೈಯಲ್ಲಿ ಕುಂಚವನ್ನು, ಅಂದರೆ ನವಿಲುಗರಿಯ ಪಿಂಚವನ್ನು ಹಿಡಿದಿದ್ದರು. ಅವರ ಪಾಂಡಿತ್ಯ ಅಗಾಧವಾದುದು, ವಾಗ್ದೇವಿಯೇ ವೀಣೆಯ ಬದಲು ಕುಂಚವನ್ನು ಹಿಡಿದು ಚಂದ್ರಮತಿ ಅವ್ವೆಯಾಗಿ ಕಾಣಿಸಿದ್ದಳು. ಅವರು ಪ್ರಶಾಂತತೆಯಿಂದ ಶಾಂತಿರಸವೇ ಮೈದೋರಿದ ಹಾಗಿದ್ದರು. ಜೈನ ಗೃಹಸ್ಥ ಸಮುದಾಯ ಗಳಿಸಿದ ಪುಣ್ಯಾರ್ಜನೆಯು ಹೆಚ್ಚಾಗಿ ಒಂದು ಹೆಣ್ಣಿನ ರೂಪದಲ್ಲಿ, ಜೈನ ಸನ್ಯಾಸಿಯ ಆಕೃತಿಯಲ್ಲಿ ಮೈತಾಳಿದ ಹಾಗೆ ಚಂದ್ರಮತಿ ಅವ್ವೆಯಿದ್ದರು – ಎಂಬ ಈ ವರ್ಣನೆಯಿಂದ ತಿಳಿದು ಬರುವ ಪ್ರಕಾರ ಪುರುಷ ಸನ್ಯಾಸಿಗಳ ಹಾಗೆ ಸ್ತ್ರೀ ಸನ್ಯಾಸಿನಿಯರೂ ಕುಂಚ – ಪಿಂಛ ಹಿಡಿಯುತ್ತಿದ್ದರು.

ಸೂರಸ್ತಗಣದ ಕಲ್ನೆಲೆಯ ರಾಮಚಂದ್ರದೇವರ ಶಿಷ್ಯಿನ್ತಿಯರಪ್ಪ ಅರಸವ್ವೆಗನ್ತಿಯರೂ ಅವರ ಶಿಷ್ಯನ್ತಿಯರ್‌ ಮಾಕವ್ವೆಗನ್ತಿಯರ್‌ ಕುರಿತೂ ಶಾಸನದಲ್ಲಿ ಮಾಹಿತಿಯಿದೆ [ಎಕ. ೮(೪) ಅಗೊ. ೧೩೬. ಕ್ರಿ.ಶ. ೧೦೯೫. ಸುಳಗೋಡು ಸೋಮವಾರ (ಹಾಸನ ಜಿಲ್ಲೆ). ಪು. ೧೮೯]. ಇನ್ನೊಬ್ಬ ಯಾಪನೀಯ ಅಜ್ಜಿಯರಾದ ಜಾಕಿಯಬ್ಬೆಗನ್ತಿಯರು ತಮ್ಮ ಗುರುಗಳಾದ ಸೂರಸ್ತಗಣದ ಮಾಘನಂದಿ ಭಟ್ಟಾರಕ ನಿಸಿಧಿಗೆಯನ್ನು ನಿಲ್ಲಿಸಿ ಗುರು ಭಕ್ತಿಯನ್ನು ಮೆರೆದ ಸಂಗತಿಯಿದೆ [ಎಅರ್‌ಎಸ್‌ಐಇ. ೧೯೨೬ – ೨೭. ಅನುಬಂಧ. ಈ – ೧೫. ಕ್ರಿ.ಶ. ೧೦೬೮.; ಇಆ. ೨೧. ಪು. ೭೩]. ರಾತ್ರಿಮತಿಕಂತಿಯು ಪುನ್ನಾಗ ವೃಕ್ಷ ಮೂಲಗಣ ಮೂಲ ಸಂಘಕ್ಕೆ ಸೇರಿದವರು. ಬಲ್ಲಾಳದೇವ ಹಾಗೂ ಶಿಲಾಹಾರ ವಂಶದ ಗಂಡರಾದಿತ್ಯನ ಕಾಲದಲ್ಲಿ ಇದ್ದವರು. ರಾತ್ರಿಮತಿಗಂತಿಯವರು ಶಿಷ್ಯ ಶ್ರಾವಕನಾದ ಬಮ್ಮಗೌಡನು ಹೊನ್ನೂರ ಬಸದಿಗೆ ದಾನ ಕೊಟ್ಟಿದ್ದನು [ಇಆ. ೧೨. ಪು. ೧೦೨. ೧೧೦೮. ಹೊನ್ನೂರು].

ಯಾಪನೀಯ ಸಂಘದ ಕಂತಿಯರಿಗೆ ಶಿಷ್ಯ ಸಮುದಾಯ ಇದ್ದುದಕ್ಕೆ ಇನ್ನು ಕೆಲವು ಶಾಸನಾಧಾರಗಳು ಸಿಗುತ್ತವೆ, ನವಿಲೂರು ಬಳಿಯ ಮೈಳಾಪ ಅನ್ವಯ ಕಾರೆಯಗಣದ ಗುಡ್ಡರಾದ ಕೇಮಣ ರೇಚಣರು ಬಸದಿಯ ಆಚಾರ್ಯರಾದ ಬಾಹುಬಲಿದೇವರ ಶಿಷ್ಯತಿ ರಾಜಮತಿ ಕನ್ತಿಯರ ಕಾಲನ್ನು ತೊಳೆದು ಆ ಚಂದ್ರಾರ್ಕ್ಕ ತಾರಂಬರಂ ಧಾರಾಪೂರ್ವ್ವಕಮಾಗೆ ದತ್ತಿ ಬಿಟ್ಟರೆಂದು ತಿಳಿದು ಬರುತ್ತದೆ [ಧಾರವಾಡ ತಾಲ್ಲೂಕು ಶಾಸನ ಸಂಖ್ಯೆ, ೪೫. ೧೨ನೆಯ ಶ, ನುಗ್ಗಿಕೇರಿ]. ಕಾಣೂರುಗಣದ ಆಳುಪದೇವಿಯು ಇರುಂಗೋಳ ರಾಜನ ಹೆಂಡತಿ. ಈಕೆ ಕೊತ್ತಸಿವಾರಂ ಬಸದಿಯ ಶಿಥಿಲವಾಗಿರುವುದನ್ನು ಕಂಡು ಅದನ್ನು ಜೀರ್ಣೋಧ್ದಾರ ಮಾಡಿಸಿದಳು [ಎ. ಆರ್‌. ಎಸ್‌. ಐ. ಇ. ೧೯೭೧. ಸಿ – ೨೦. ಕೊತ್ತಸಿವಾರಂ (ಆಂಧ್ರ)].

ಕೊಂಗಾಳ್ವ ರಾಜರು ಯಾಪನೀಯ ಗುರುಪರಂಪರೆಯ ಶಿಷ್ಯರು. ಒಱೆಯೂರು ಪುರಾಧೀಶ ಕೊಂಗಾಳ್ವಭೂಪರಾಜೇಂದ್ರ ಪೃಧ್ವೀಕೊಂಗಾಳ್ವನು ಕ್ರಿ. ಶ. ೧೦೭೯ – ೮೦ರಲ್ಲಿ ತನ್ನ ರಾಜ ಗುರುಗಳಾದ ಪ್ರಭಾಚಂದ್ರ ಸಿದ್ಧಾಂತದೇವ (ಗಂಡ ವಿಮುಕ್ತ ಸಿದ್ಧಾಂತದೇವ) ನಿಗೆ ‘ಅದಟರಾದಿತ್ಯ ಚೈತ್ಯಾಲಯ’ ಎಂಬ ಬಸದಿಯನ್ನು ಮಾಡಿಸಿ ಭೂಮಿದಾನವಿತ್ತನು [ಎಕ.೮. ೯ ಪ೦ ಅಗೂ. ೧೩೩. ಪು. ೧೮೬ – ೮೭.]. ಸುಳಗೋಡು ಸೋಮವಾರ ಎಂಬ ಊರು ಯಾಪನೀಯ ಸಂಘದ ಕಾಣೂರು – ಸೂರಸ್ತಗಣದ ತಗರಿಲಗಚ್ಛದ ದೊಡ್ಡಕೇಂದ್ರ.

ಇದುವರೆಗಿನ ವಿವರಗಳಿಂದ ತಿಳಿದು ಬರುವಂತೆ ಯಾಪನೀಯ ಸಂಘವು ಕರ್ನಾಟಕ ಮತ್ತು ಆಂಧ್ರದಲ್ಲಿ ಅತ್ಯಂತ ಪ್ರಬಲವೂ ಪ್ರಭಾವಶಾಲಿಯೂ ಆಗಿತ್ತು. ಈ ಹಿಂದೆ ಪ್ರಸ್ತಾಪಿಸಿದ ಸವಣದತ್ತ (ಸೌದತ್ತಿ) ಗುಡ್ಡದ ಮೇಲಿರುವ ಎಲ್ಲಮ್ಮ ಗುಡಿಯ ದ್ವಾರದ ಲಲಾಟ ಜಿನಬಿಂಬದ ಹತ್ತಿರ ಹಾಗೂ ಪಕ್ಕದ ಗೋಡೆಯ ಕೆಳಗಡೆ ಇತ್ತೀಚಿಗೆ ದೊರೆತ ಶಾಸನಗಳ ಒಕ್ಕಣೆಯನ್ನು ಈಗಿಲ್ಲಿ ಪ್ರಸ್ತಾಪಿಸಬಹುದು. ‘ಯಾಪನೀಯ ಸಂಘ ಕಂಡೂರು ಗಣ’ ಎಂದೂ ‘ಶ್ರೀ ಸಕಳ ಚಂದ್ರ ಸಿದ್ಧಾಂತ ದೇವರ್ರಿಂ ಱಟ್ಟಜಿನಾಲಯಂ ಜೀರ್ಣ್ನೋದ್ಧಾರಮಾಯ್ತು’ – ಎಂದು ಎರಡು ಶಾಸನಗಳು ಲಭ್ಯವಾಗಿವೆ. ಇವು ರಟ್ಟರಾಜಮನೆತನದ ದಾಖಲೆಯ ಜತೆಗೆ ಯಾಪನೀಯ ವಿಜಯ ವೈಜಯಂತಿ ಪಂಕ್ತಿಗಳೂ ಆಗಿವೆ.

ಹಿಂದಿನ ಪುಟಗಳಲ್ಲಿ ಯಾಪನೀಯ ಬಸದಿಗಳನ್ನು ಕುರಿತು ಪ್ರಾಸಂಗಿಕವಾಗಿ ಹೇಳಿದ್ದಾಗಿದೆ. ಕರ್ನಾಟಕದ ವಾಸ್ತು ಮತ್ತು ಶಿಲ್ಪ ಕಲೆಯ ಮುನ್ನಡೆಗೆ ಯಾಪನೀಯರ ಕೊಡುಗೆ ದೊಡ್ಡದು. ಕರ್ನಾಟಕದಲ್ಲಿ ಸಾವಿರಾರು ಬಸದಿಗಳು ಯಾಪನೀಯರ ಕೃಪೆ, ಪ್ರೇರಣೆ, ಪ್ರೋತ್ಸಾಹದಿಂದ ನಿರ್ಮಾಣವಾದುವು. ಜಿನ ಬಿಂಬಗಳು, ಶಾಸನದೇವರುಗಳಾದ ಯಕ್ಷಯಕ್ಷಿಯರು ಸಹಸ್ರ ಸಂಖ್ಯೆಯಲ್ಲಿ ಸೃಷ್ಟಿಯಾದದ್ದು ಅವರ ಅನುಗ್ರಹ. ಕರ್ನಾಟಕದ ಸಂದರ್ಭದಲ್ಲಿ ಯಕ್ಷೀ ಆರಾಧನೆಯ ಉದ್ಭಾಟಕರು ಯಾಪನೀಯರೇ. ಶಾಸನಗಳಲ್ಲಿ ನಮೂದಾಗಿರುವುದನ್ನು ಬಿಡಿಸಿ ನೋಡಿದರು ಕೂಡ ಯಾಪನೀಯರ ಮೇಲಾಳಿಕೆಯಲ್ಲಿ ಕಟ್ಟಾಲಾದ ನೂರಾರು ಬಸದಿಗಳೊಡೆಯರು ಯಾಪನೀಯ ಗುರುಶಿಷ್ಯ ಪರಂಪರೆಗೆ ಸೇರಿದ್ದರು. ಅವರ ಮುಂದಾಳುತನದಲ್ಲಿ ಆ ಬಸದಿಗಳು, ರಾಜರಾಣಿ ಪ್ರಧಾನಿ ಸಚಿವಮಂಡಲ ದಂಡನಾಯಕರಾದಿಯಾಗಿ ಸಮಕಾಲೀನ ಪ್ರತಿಷ್ಠಿತರಿಂದ ದಾನದತ್ತಿಗಳನ್ನು ಹೊಂದಿ ಜೀವಕಳೆಯಿಂದ ವಿರಾಜ್ಜಮಾನವಾಗಿದ್ದುವು. ಯಾಪನೀಯ ಒಡೆತನದಲ್ಲಿ ಜೀವತಳೆದ ಅಂತಹ ಹಲವಾರು ಅರ್ಹದಾಯತನಗಳನ್ನು ಈಗಾಗಲೇ ಅಲಲ್ಲಿ ಹೆಸರಿಸಲಾಗಿದೆ. ಅದರಿಂದ ದಿಕ್ಸೂಚಿ ರೂಪದಲ್ಲಿ ಕೇವಲ ಕೆಲವನ್ನು ಇಲ್ಲಿ ಅಕಾರದಿ ಕ್ರಮದಲ್ಲಿ ಉಲ್ಲೇಖಿಸಿದೆ;

ಅಕ್ಕಬಸದಿ; ಎಪಿಜಿಎಎಸ್‌, ಸಂಪುಟ – ೩. ನಲ್ಗೊಂಡ – ೪೩, ಶಾಸನ ಸಂಖ್ಯೆ – ೪೫, ಕ್ರಿ. ಶ. ೧೧೨೫

ಎಕ್ಕ ಸಂಬುಗೆ (ಎಕ್ಸಂಬಿ – ಯಕ್ಸಂಬಾ) ಬಸದಿ – ಬೆಳಗಾವಿ ಜಿಲ್ಲೆ

ಎಱೆಗಜಿನಾಲಯ : ಎಕ – ೮ (ಹ. ಆ. ) ಸೊರಬ – ೧೪೦. ಕ್ರಿ. ಶ. ೧೧೯೮, ಪು. ೫೯ – ೬೦

ಕಂಡೂರುಗಣದ ಬಸದಿ

ಕಂದಗಲ್‌ ಜಿನಾಲಯ : ಸೌಇಇ. ೧೫. ಸಂಖ್ಯೆ. ೧೬೪. ಕ್ರಿ. ಶ. ೧೨೨೦

ಕಾಣೂರ್ಗಣ ಬಸದಿ

ಕಸಲಗೆಱೆ ಬಸದಿ : ಎಕ. ೭ (ಪ) ನಾಮಂ. ೬೯. ಕ್ರಿ. ಶ. ೧೧೪೨

ಕುಸುಮಜಿನಾಲಯ ; ಎಆರ್‌ಸ್‌ ಐ. ಇ. ೧೯೩೮ – ೩೯. ಸಂಖ್ಯೆ. ಇ – ೯೮. ೧೨ ಶ. ಪು. ೨೧೯

ಕುಪ್ಪಟೂರು ಚೈತ್ಯಾಲಯ: ಎಕ. ೮. (ಹ. ಆ.) ಸೊರಬ .೨೬೨, ೧೦೭೪ – ೭೫

ಕೊತ್ತಸಿವರದ ಬಸದಿ: ಎಆರ್‌ ಎಸ್ಐ ಇ ೧೯೭೧, ಸಂಖ್ಯೆ. ಸಿ – ೨೧, ಕ್ರಿ. ಶ. ೧೨೪೦

ಚೆನ್ನಪಾರ್ಶ್ವಜಿನಗೃಹ : ಗಂಗಾಪುರಂ, ಕೊಲನುಪಾಕ್‌, ಗೋವಿಂದಪುರಂ ಜೋಗವಟ್ಟಿಗೆ ನಗರ ಜಿನಾಲಯ

ತೆಂಗಳಿ ಬಸದಿ (ಗುಲ್ಬರ್ಗ ಜಿಲ್ಲೆ); ಇದು ಪಾಂಡುರಂಗ ದೇವಾಲಯವಾಗಿದೆ.

ದೇವಲಾಪುರದ ಬಸದಿ

ನಖರ ಜಿನಾಲಯ

ನದಿಕುಲಿಗೆಯ ಬಸದಿ

ಪುಲ್ಲಿಯೂರು ಆರ್ಹದೇವಾಯತನ : ಎಂ. ಎ. ಆರ್‌ ೧೯೩೮, ಪು. ೮೦ – ೯೦; ಕ್ರಿ. ಶ. ೫ – ೬ಶ

ಬಲತ್ಕಾರಗಣ ಶಾಂತಿನಾಥ ಬಸದಿ

ಬಸ್ತಿಪುರದ ಬಸದಿ : ಎಕ. ೭ (ಪ) ಶ್ರೀ ಪ. ಸಂಖ್ಯೆ. ೭೪. ಕ್ರಿ. ಶ. ೧೩೮೩

ಬ್ರಹ್ಮಜಿನಾಲಯಗಳು: ಲಕ್ಕುಂಡಿ, ಕುಪ್ಪಟೂರು, ಸೇಡಂ, ಬೆಳವತ್ತಿ, ಬಾಡ್ಲಿ, ಬಾಗಳಿ, ಅಮರಾಪುರ, ನಿಡುಗಲ್ಲು

ಬುದ್ಧಸೇನ ಜಿನಾಲಯ : ಎಆ. ಸಂಪುಟ – ೬. ಕ್ರಿ. ಶ. ೧೦೩೪, ಸೈದಾಪುರ.

ಮೃಗೇಶವರ್ಮ ಜಿನಾಲಯ

ಮಾಯಿದೇವ ಜಿನಾಲಯ

ಮಾಸಿಂಗ ಸೆಟ್ಟಿಯ ಬಸದಿ : ರಾಯಬಾಗ (ಬೆಳಗಾವಿ ಜಿ)

ರಟ್ಟ ಮಾರ್ತಂಡ ಜಿನಾಲಯ; ಐ. ಎ. ಪಿ., ಕರೀಂನಗರ ಶಾಸನ ಸಂಖ್ಯೆ – ೧೭.,

ಕೊರಟ್ಲ (ಆಂಧ್ರ ; ಕರೀಂನಗರ ಜಿ, ಮೆಟ್ಲಪಲಿ ತಾ. ) ಕ್ರಿ. ಶ. ೧೦೬೦

ಸಿರಿಯಾದೇವಿ ಬಸದಿ : ಎಆರ್‌ ಎಸ್ಐ ಇ ೧೯೪೦ – ೪೪, ಸಂಖ್ಯೆ ೬೩ ರಿಂದ ೬೫, ೧೨ನೆಯ ಶತಮಾನ, ಮನೋಳಿ (ಬೆಳಗಾವಿ ಜಿ.) ಪು. ೨೪೫.

ಮೇಲ್ಕಂಡ ಒಂದು ಸಂಕ್ಷಿಪ್ತ ಪಟ್ಟಿಯು ಸಾಬೀತು ಪಡಿಸುವಂತೆ, ಕರ್ನಾಟಕದ ಉದ್ದಗಲಗಳಲ್ಲೂ, ನೆರೆಹೊರೆಯ ಪ್ರಾಂತ್ಯಗಳಲ್ಲೂ ಯಾಪನೀಯ ಸಂಘದ ವತಿಯಿಂದ ನಿರ್ಮಿತವಾದ ಗುಡಿಗಳಿದ್ದವು. ಅವುಗಳಲ್ಲಿ ಅನೇಕವು ನಾಮಾವಶೇಶಷವಾಗಿವೆ. ಕೆಲವು ಇಂದಿಗೂ ಉಳಿದು ಬಂದಿದೆ. ಇಂದು ಪೂಜೆಗೊಳ್ಳುತ್ತಿರುವ ಜಿನಬಿಂಬಗಳಲ್ಲಿ, ಬಸದಿಗಳಲ್ಲಿ ಯಾಪನೀಯರು ಮಾಡಿಸಿದ್ದೂ ಸೇರಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ಕರ್ನಾಟಕದ ಒಟ್ಟು ವಾಸ್ತು ಶಿಲ್ಪಕ್ಕೂ, ಮೂರ್ತಿ ಶಿಲ್ಪಕ್ಕೂ ಯಾಪನೀಯರ ಕಾಣಿಕೆ ಗಟ್ಟಿಯಾದುದು. ರಾಜಕೀಯ ಪ್ರಭಾವ ಇದ್ದುದ್ದರಿಂದ ಜೈನ ಮಠ – ಕೇಂದ್ರಗಳು ಉಜ್ಜಲ ಪರಂಪರೆಯಿಂದ ಪ್ರಕಾಶಿಸುವಂತೆ ಮಾಡುವುದರಲ್ಲಿ ಯಾಪನೀಯರ ಪಾತ್ರ ಗಣನಿಯವಾದುದು. ಅಲ್ಲದೆ ಯಾಪನೀಯ ಗುರುಪರಂಪರೆಯಲ್ಲಿ ಸಂಸ್ಕೃತ, ಪ್ರಾಕೃತ, ಕನ್ನಡ ಭಾಷೆಗಳ ಪಾಂಡಿತ್ಯಗಳಿಸಿದ ಜ್ಞಾನ ನಿಧಿಗಳಿದ್ದರು. ಅವರ ತಪಸ್ಸಿನ ಘನ ವ್ಯಕ್ತಿತ್ವ ಜನ್ಯ ಪ್ರಭಾವ ಅರಮನೆಗಳೇ ಅಲ್ಲದೆ ಶ್ರೀ ಸಾಮಾನ್ಯರ ಮೇಲೂ ಇತ್ತು. ಅದರಿಂದಾಗಿ ಯಾಪನೀಯ ಸಂಘ ಇಡೀ ಕರ್ನಾಟಕವನ್ನು, ಸ್ವಲ್ಪಮಟ್ಟಿಗೆ ಕರ್ನಾಟಕದ ಅಂಚಿನಲ್ಲಿರುವ ಇಂದಿನ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಗಡಿರೇಖೆಯನ್ನು ಗಾಡವಾದ ಧಾರ್ಮಿಕ ಪ್ರಭಾವಕ್ಕೆ ಒಳಗು ಮಾಡಿತು. ಯಂತ್ರತಂತ್ರ ಮಂತ್ರಗಳನ್ನೂ ಯಾಪನೀಯರು ಬಳಸಲು ಹಿಂಜರಿಯಲಿಲ್ಲ. ರೋಗರುಜಿನಗಳಿಗೆ, ಭೂತ ಪಿಶಾಚಪ್ರೇತಗಳು ಕಾಡುತ್ತಿವೆಯೆಂದು ಭ್ರಾಂತರಾದವರಿಗೆ ಮಾನಸಿಕ ನೆಮ್ಮದಿಗಾಗಿ ಪೂಜಾದಿಗಳನ್ನು ಯಾಪನೀಯರು ಕೈಗೊಂಡರು, ಯಕ್ಷಾರಾಧನೆಯನ್ನು ವ್ಯಾಪಕವಾಗಿ ಬೆಳೆಸಿದರು. ಜನತೆಯ ಆಶೆ ಆಶೋತ್ತರಗಳಿಗೆ ಓಗೊಟ್ಟರು.

ಜಿನಾಲಯಗಳ ನಿರ್ಮಾಣ, ಮತ್ತು – ಕಲೆ ಪ್ರೋತ್ಸಾಹ ಅಲ್ಲದೆ ಸಾಹಿತ್ಯ ನಿರ್ಮಿತಿಗೂ ಯಾಪನೀಯರ ಕೊಡುಗೆ ಇದೆ. ಆರಾಧನೆ, ಮೂಲಾರಾಧನೆ, ಭಗವತೀ ಆರಾಧನೆ, ಬೃಹದಾರಾಧನೆ ಎಂಬ ಹೆಸರುಗಳಿಂದ ಪ್ರಸಿದ್ಧವಾದ ಪ್ರಾಕೃತ ಗ್ರಂಥವನ್ನು ಸಂಕಲಿಸಿದ ಆಚಾರ್ಯ ಶಿವಕೋಟಿಯೂ; ಜೈನರ ಗಾಯತ್ರಿ, ಬೈಬಲ್‌, ಖುರಾನ್‌ ಎಂದು ಹೆಸರುಗಳಿಸಿರುವ ತತ್ವಾರ್ಥಸೂತ್ರ ಗ್ರಂಥಕರ್ತರಾದ ಉಮಾಸ್ವಾತಿ (ಮಿ) ಯೂ; ವರಾಂಗ ಚರಿತೆಯ ಆಚಾರ್ಯ ಜಟಸಿಂಹನಂದಿಯೂ; ಪ್ರಾಕೃತ ರಾಮಾಯಣ ಮಹಾಕಾವ್ಯವಾದ ಪಊಮ ಚರಿಯ ಕಾವ್ಯದ ವಿಮಲ ಸೂರಿಯೂ; ಕನ್ನಡದ ಮೊಟ್ಟಮೊದಲನೆಯ ಗದ್ಯ ಗ್ರಂಥವಾದ ಆರಾಧನಾ ಕರ್ನಾಟಕಟೀಕಾದ (ವಡ್ಡಾರಾಧನೆ) ಭ್ರಾಜಿಷ್ಣುವೂ; ಶಿವಕೋಟಿಯ ಪ್ರಾಕೃತ ಆರಾಧನಾ ಗ್ರಂಥಕೆ ಸಂಸ್ಕೃತದಲ್ಲಿ ವಿಜಯೋದಯಾ ಟೀಕಾವನು ಬರೆದಿರುವ ಅಪರಾಜಿತಸೂರಿಯೂ; ಶಾಕಟಾಯನ ವ್ಯಾಕರಣ ಮತ್ತು ಅಮೋಘವೃತ್ತಿಯನ್ನು ನೃಪತುಂಗನ ಆಸ್ಥಾನ ಕವಿಯಾಗಿ ರಚಿಸಿರುವ ಶಾಕಟಾಯನ (ಪಾಲ್ಯಕೀರ್ತಿ) ವೈಯಾಕರಣಿಯೂ; ಪ್ರಾಕೃತದಲ್ಲಿ ಸಂಸ್ಕೃತದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ನ್ಯಾಯಾವತಾರ ಮೊದಲಾದ ಕೃತಿರಚಿಸಿದ ಸಿದ್ಧಸೇನ ದಿವಾಕರನೂ; ಪಉಮಚರಿಉ, ರಿಟ್ಟಣೇಮಿ ಚರಿಉ ಕಾವ್ಯಗಳನ್ನು ಪ್ರಾಕೃತದಲ್ಲಿ ರಚಿಸಿರುವ ಮಹಾಕವಿ ಸ್ವಯಂಭುದೇವನೂ ಯಾಪನೀಯ ಸಂಘ ಪರಂಪರೆಯ ಮಹಾನ್‌ ಲೇಖಕರು. [ನಾಥೂರಾಮ್‌ ಪ್ರೇಮಿ : ೧೯೫೬ : ೬೮ – ೬೯].

ಕನ್ನಡದಲ್ಲಿ ಅನುಪಲಬ್ಧ ಕೃತಿಗಳೂ, ಲೇಖಕರೂ ಕೆಲವು ಮಟ್ಟಿಗೆ ಯಾಪನೀಯ ಪರಂಪರೆಗೆ ಸೇರಿರಬೇಕು. ಉಪಲಬ್ಧ ಸಾಹಿತ್ಯದ ದೃಷ್ಟಿಯಿಂದ ಭ್ರಾಜಿಷ್ಣುವು ಈ ಪಂಥದ ಮೊದಲ ಬೀಡು. ಕಾಲಾನುಕ್ರಮಣಿಕೆಯಲ್ಲಿ ಎರಡನೆಯ ಕವಿ ಪೊನ್ನನೇ ಆಗಿದ್ದಾನೆ. ಕಾಣೂರುಗಣದ ಮುನಿಪರಂಪರೆಯ ಕೆಲವು ಬೆಳಕಿನ ಕುಡಿಗಳನ್ನು ಹೆಸರಿಸಿದ್ದಾನೆ. ಕುರುಳ್ಗಳ ಸವಣನೆಂದು ತನ್ನನ್ನು ಬಣ್ಣಿಸಿಕೊಂಡಿರುವುದು ಕೂಡ ಪೂರಕ ಹೇಳಿಕೆ. ಯಾಪನೀಯ ಗುರುಗಳು ಗಡ್ಡಮೀಸೆ ಕೂದಲುಗಳನ್ನು ಬಿಡುತ್ತಿದ್ದರು. ಪೊನ್ನ ಸವಣನಾದರೂ ಕುರುಳನ್ನು ಬಿಡುವುದು ಸಾಧ್ಯವಾದದ್ದು ಕಾಣೂರುಗಣದ ಗುರುವಾಗಿದ್ದುದರಿಂದ. ಕನ್ನಡ ಸಾಹಿತ್ಯದ ಒಬ್ಬ ಅದ್ವಿತೀಯ ಕವಿಯೆನಿಸಿರುವ ಬ್ರಹ್ಮಶಿವನು ಯಾಪನೀಯ ಲೇಖಕರ ಶಿರೋಮಣಿ; ಸಮಯ ಪರೀಕ್ಷೆ ಎಂಬ ಹೆಸರಿನ ಆತನ ಕಾವ್ಯ ಯಾಪನೀಯ ಸಿದ್ಧಾಂತದ ಸಾರಸರ್ವಸ್ವ.

ಪೊನ್ನನ ತರುವಾಯ ಬಂದ ರನ್ನನ್ನ ವಿಚಾರದಲ್ಲಿ ಪ್ರತ್ಯೇಕವಾಗಿಯೇ ಪುರಸ್ಕರಿಸಿ ಹೆಸರಿಸಬೇಕು. ಯಾಪನೀಯರು ಸ್ತ್ರೀಪರ, ಜನಪರ ನಿಲುಮೆ, ಒಲವು, ಪ್ರವೃತ್ತಿಗಳಿಂದ ಪ್ರವರ್ಧಮಾನಕ್ಕೆ ಬಂದವರು. ಅವರ ಜನಪರ ನಿಲುವನ್ನು ಕಾವ್ಯವಾಗಿ ಬರೆದವನು ಬ್ರಹ್ಮಶಿವ; ಅವರ ಸ್ತ್ರೀಪರ ಕಾಳಜಿಗಳನ್ನು ಕಾವ್ಯವಾಗಿಸಿ ಬೆರದವನು ರನ್ನ. ತನಗೆ ಕವಿಚಕ್ರವರ್ತಿ ಪ್ರಶಸ್ತಿ ನೀಡಿದ ಚಕ್ರವರ್ತಿಗಳು ಇನ್ನೂ ಜೀವಿಸಿರುವ ಕಾಲದಲ್ಲಿಯೇ ದಾನಚಿಂತಾಮಣಿಯು ಅವರೆಲ್ಲರಿಗೂ ಮೀರಿ ನಿಂತ ಹೈಮಾಚಲೋನ್ನತಳೆಂದು ನೂರಾರು ಪದ್ಯಗಳಲ್ಲಿ ಅತ್ತಿಮಬ್ಬೆಯ ಪುತ್ಥಳಿಯನ್ನು ನಿಲ್ಲಿಸುವುದಕ್ಕೆ ಸಾಧ್ಯವಾದದ್ದು ಈ ಯಪನೀಯ ಪರಂಪರೆಯ ಪ್ರಭಾವ. ಪೊನ್ನ ರನ್ನರು ಯಾಪನೀಯಕ್ಕೆ ಸ್ಪಂದಿಸಿದರೂ ಅವರು ದಿಗಂಬರತ್ವದಲ್ಲಿ ಕಾಲೂರಿ ನಿಂತಿದ್ದರು. ಅತ್ತಿಮಬ್ಬೆಯ ತವರೂರು, ಗಂಡನೂರು ಎರಡೂಕಡೆ ಯಾಪನೀಯ ಪ್ರಭಾವವಿತ್ತು.

ಪೊನ್ನ ರನ್ನ ಬ್ರಹ್ಮ ಶಿವ ಮೊದಲಾದ ಕವಿಗಳೂ ಅತ್ತಿಮಬ್ಬೆಯಂಥ ಮಂದನೋನ್ನತರೂ ಧರ್ಮ ಪ್ರಭವನೆ ಮಾಡುತ್ತ ಮುಂದಾಳುಗಳಾಗಿದ್ದುದರಿಂದ ಅವರ ಮೇಲಾಳಿಕೆಯಲ್ಲಿ ಯಾಪನೀಯ ಮತ್ತು ದಿಗಂಬರ ಪಂಥ ಸಂಘ ಸಮುದಾಯದಲ್ಲಿ ಸುಮಧುರ ಸಂಬಂಧ ಸ್ಥಾಪಿತವಾಗಿರಬಹುದು. ಬನವಾಸಿ ಕದಂಬರ ರಾಜ್ಯದಲ್ಲಿ, ನೆಲೆವೀಡು ಹಲಸಿಯ ಪರಿಸರದಲ್ಲಿ ಬನವಾಸಿ ಕದಂಬ ರಾಜ್ಯದಲ್ಲಿ, ನೆಲೆವೀಡು ಹಲಸಿಯ ಪರಿಸರದಲ್ಲಿ ಯಾಪನೀಯರೂ ದಿಗಂಬರರೂ ಶ್ವೇತಾಂಬರರೂ ಅನ್ಯೋನ್ಯವಾಗಿ ಒಟ್ಟೊಟ್ಟಿಗೆ ಇದ್ದರು. ಈ ಪುದುವಾಳಿಕೆಯ ನಚ್ಚು ಆಗಾಘ ಬಿರುಕು ಬಿಡುತ್ತಿದ್ದಿರಲೂ ಬಹುದು. ಆರಸೀಕೆರಯ ಯಾಪನೀಯರ ಶಾಸನದಲ್ಲಿ ‘ಯಾಪನೀಯ’ ಎಂಬ ಶಬ್ಧವನ್ನು ಎರಡು ಮೂರು ಕಡೆ ಉದ್ದೇಶಪೂರ್ವಕವಾಗಿಯೇ ಅಳಿಸುವ ಪ್ರಯತ್ನವಾಗಿರುವುದು. ಚರಿತ್ರೆಯ ವಿಸ್ಮಯ. ಕಾಳಾಮುಖ ಶೈವರ ಮತ್ತು ಯಾಪನೀಯರ ಅನ್ಯೋನ್ಯತೆಯ ಕುರುಹಾಗಿ ಎಕ್ಕೋಟಿ ಜಿನಾಲಯ ಪರಿಕಲ್ಪನೆಯೊಂದು ಪ್ರಾರಂಭವಾಯಿತು. [ಎಆರ್ ಎಸ್ಐ ಇ ೧೯೬೫ – ೬೬, ಸಂಖ್ಯೆ. ೪೦೪, ಕ್ರಿ. ಶ. ೧೧೦೪ ಕಲಘಟಗಿ, ಪು. ೮೧].

ಕರ್ನಾಟಕದ ಅರಿವಿನ ಕಣಜಕ್ಕೆ ಯಾಪನೀಯರ ದತ್ತಾಂಶ ಮಹತ್ವದ್ದಾಗಿದೆ. ಅವರು ವಿಚಾರವಾದಿಗಳು, ಉದಾರವಾದಿಗಳು, ಮಾನವೀಯ ಸ್ಪಂದನವಿದ್ದ ಸಮನ್ವಯವಾದಿಗಳು ಕರ್ನಾಟಕದ, ಅಷ್ಟೇಕೆ ದಕ್ಷಿಣ ಭಾರತದ ಚರಿತ್ರೆಯಲ್ಲಿ ಜೈನಧರ್ಮದ ಪ್ರಭವನೆ ಮತ್ತು ಪುನರುಜ್ಜಿವನದ ಉತ್ಥಾನಕ್ಕೆ, ಉಜ್ಜಲವಾದ ಸ್ಥಾನಮಾನ ನಿರ್ದೇಶನಕ್ಕೆ ಯಾಪನೀಯರ ಪರಿಶ್ರಮ ಗಣನೀಯವಾಗಿ ಕಾಣುತ್ತದೆ, ಜೈನಧರ್ಮ, ಸಾಹುತ್ಯ, ಕಲೆ, ಸಮಾಜ, ಸಂಸ್ಕೃತಿಯ ಅಧ್ಯಯನದಿಂದ ಯಾಪನೀಯರ ಕೊಡುಗೆ ಮತ್ತು ವಹಿಸಿದ ಪಾತ್ರವನ್ನು ಹೊರತುಪಡಿಸಿದರೆ ಉಳಿಯುವುದು ಬರುಡಾಗಬಹುದು. ಕನ್ನಡ ಸಾಹಿತ್ಯದಿಂದ ಜೈನ ಸಾಹಿತ್ಯವನ್ನು ಹೊರಗಿಟ್ಟು ನೋಡಿದಾಗ ಹೇಗೆ ಮಹತ್ವದ ಭಾಗವನ್ನು ಸುಲಿದಿಟ್ಟ ಅನುಭವ ಆಗುತ್ತದೆಯೊ ಹಾಗೆ, ಕರ್ನಾಟಕದ ಜೈನ ಪರಂಪರೆಯ ಚರಿತ್ರೆಯಿಂದ ಯಾಪನೀಯರ ಭಾಗವನ್ನು ಪ್ರತ್ಯೇಕಿಸಿದಗಲೂ ಕೊರತೆಯ ಅನುಭವ ಆಗುತ್ತದೆ. ಈ ವಿವರಣೆಯ ಯಾಪನೀಯರ ಪ್ರಾಮುಖ್ಯವನ್ನು ಅಸ್ಖಲಿತವಾಗಿ ಸ್ಥಾಪಿಸುತ್ತದೆ. ಜೈನ ಮುನಿಗಳು, ಕವಿಗಳು, ಕಾವ್ಯಗಳು, ಬಸದಿಗಳು – ಎಲ್ಲೆಲ್ಲೂ ಯಾಪನೀಯರದೇ ಮೇಲುಗೈ. ಕ್ರಿ. ಶ. ಅಯ್ದರಿಂದ ಹನ್ನರಡನೆಯ ಶತಮಾನದ ತನಕ ಅವರದೇ ಪಾಠ ಪ್ರವರಗಳು ಮಿನುಗುತ್ತವೆ. ಎಷ್ಟು ವಿಪುಲವಾದ ಮತ್ತು ವ್ಯವಸ್ಥಿತವಾದ ಲಿಖಿತ ದಾಖಲೆಗಳು ಯಾಪನೀಯರನ್ನು ಕುರಿತು ಉಪಲಬ್ಧ ಇದೆಯೆಂದರೆ ‘ಯಾಪನೀಯರು ಮತ್ತು ಕರ್ನಾಟಕ’ ಎಂಬ ವಿಷಯವಾಗಿ ಮಹಾಪ್ರಂಬಧವನ್ನು ಸಿದ್ಧಪಡಿಸಬಹುದು.

ಕರ್ನಾಟಕದ ಧಾರ್ಮಿಕ ಪರಂಪರೆ ಯಾಪನೀಯ ಸಂಘವನ್ನು ತನ್ನ ಒಡಲಾಳಕ್ಕೆ ಹಾಕಿಕೊಂಡ ಬಗೆಯನ್ನು ಅರಿಯಬೇಕಾದರೆ ಶಾಸನಗಳನ್ನು ಬಗೆದು ನೋಡಬೇಕು. ಯಾಪನೀಯವು ಯಾವ ಜೀವದ್ರವ್ಯವನ್ನು ಎರೆಯಿತು, ಯಾವ ಜೀವದನಿಯನ್ನು ನೀಡಿತು ಎಂಬುದು ಇದರಿಂದ ಬಯಲಾಗುತ್ತದೆ. ಯಾಪನೀಯ ವಿಚಾರಧಾರೆಯ ಮೊನಚಿಗೆ ಅದರ ಸಮಾವೇಶಕ ಚೈತನ್ಯವೇ ಕಾರಣಾವೆಂಬುದು ಸಾಬೀತಾಗುತ್ತದೆ. ಯಾಪನೀಯದ ಒಂದು ಸೇಂದ್ರಿಯ ಸ್ವರೂಪವನ್ನು ಪುನಾರಚಿಸಲು, ಕರ್ನಾಟಕದ ಒಳಗೂ ಹೊರಗೂ ಸಿಗುವ ಪೂರಕ ಸಾಮಗ್ರಿಯನ್ನು ಸಂಚಯಿಸಿಕೊಂಡು, ಬಿಡಿಬಿಡಿ ಎಳೆಗಳನ್ನು ಕೂಡಿಸಿಕೊಂಡು, ಒಂದು ಪೂರ್ಣನೋಟವನ್ನು ಮೂಡಿಸುವ ಪ್ರಯತ್ನವನ್ನು ಇಲ್ಲಿ ಮಾಡಿದೆ.