ಜೈನ ಧರ್ಮದ ಸಾಕಲ್ಯ ಸ್ವರೂಪದ ಪರಿಚಯಕ್ಕೆ ಶ್ವೇತಾಂಬರ, ದಿಗಂಬರ ಎಂಬ ಎರಡೂ ಪಂಥಗಳ ಗ್ರಂಥ ಮಾಹಿತಿಯನ್ನು ತುಲನಾತ್ಮಕವಾಗಿ ಅಭ್ಯಸಿಸಿಯೇ ತೀರ್ಮಾನಗಳಿಗೆ ತಲಪಬೇಕು. ಮಾಗಧ ಧರ್ಮಗಳು ವೇದಪೂರ್ವದ ಕಾಲಕ್ಕೆ ಸೇರಿವೆ. ಅವು ಅರ್ಯರು ಭಾರತಕ್ಕೆ ಬರುವುದಕ್ಕೂ ಹಿಂದಿನಿಂದ ಇರುವಂತಹವು. ಮಾಗಧದ ಭಾಷೆಯಾದ ಮಾಗಧಿಯಲ್ಲಿ, ಪಾಲಿ ಮತ್ತು ಅರ್ಧಮಾಗಧಿಯಲ್ಲಿ ಬೋಧಗೊಂಡ ಧರ್ಮಗಳು ಮಾಗಧದ ಧರ್ಮಗಳು ೨೫೦೦ ವರ್ಷಗಳಿಗೂ ಪ್ರಾಚೀನವಾದ ಜೈನಾಗಮಗಳ ಅಂಗವಾದ ೧೪ ಪೂರ್ವಗಳಲ್ಲಿ ಜೈನ ಜ್ಯೋತಿಷ್ಯಶಾಸ್ತ್ರ (ಹೋರಾಶಾಸ್ತ್ರ). ಖಗೋಳ ಶಾಸ್ತ್ರ, ಅನುಭಾವಶಾಸ್ತ್ರ, ಮಂತ್ರವಿದ್ಯೆ ಸಂಬಂಧವಾದ ದೀರ್ಘ ವಿವರಣೆಗಳಿವೆ. ಮಾಗಧಿ, ಸೌರಸೇನಿ, ಅಪಭ್ರಂಶ, ಮಹಾರಾಷ್ಟ್ರೀ ಮತ್ತಿತರ ಪ್ರಾಕೃತ ಭಾಷೆಗಳಂತೆಯೇ ಅವುಗಳ ಸಮಕಾಲೀನ ಪಾಲಿ ಭಾಷೆಯ ಬೌದ್ಧ ಗ್ರಂಥಗಳಲ್ಲಿ ಸಿಗುವ ಸದೃಶ, ಸಮಾನಾಂತರ ಮಾಹಿತಿಗಳನ್ನು ನೋಡಬೇಕು. ಈ ಮಾತು ಯಾಪನೀಯವನ್ನು ಕುರಿತ ಅಧ್ಯಯನಕ್ಕೂ ಅನ್ವಯಿಸುತ್ತದೆ. ಏಕಸಾಟಕ ಎಂದರೆ ಒಂದು ಬಟ್ಟೆಯವನು ಎಂದರ್ಥ. ಈ ಏಕಸಾಟಕರು ಯಾರೆಂಬುದು ಅಸ್ಪಷ್ಟವಾಗಿದೆ. ನಿಗಂಠರೆಂದರೆ ನಿರ್ಗ್ರಂಥರು ಅರ್ಥಾತ್‌ ಮಹಾವೀರನ ಹಿಂಬಾಲಕರು. ‘ನಿಗಂಠನಾತ ಪುತ್ರ’ ನೆಂದರೆ ಮಹಾವೀರ (ನಿರ್ಗ್ರಂಥ ಜ್ಞಾತೃಪುತ್ರ).

ಬುದ್ಧಘೋಷ ಕವಿ ವಿರಚಿತವೆನ್ನಲಾದ (ಕ್ರಿ. ಶ. ೫ ನೆಯ ಶ.) ಧಮ್ಮಪದ ಅಟ್ಠಕಥಾದಲ್ಲಿ ಬರುವ ಒಂದು ಪ್ರಸ್ತಾಪ ಹೀಗಿದೆ : ನಿಗಂಠ ಮುನಿಗಳು ನಗ್ರರಾದರೂ ಅಚೇಲಕರಲ್ಲವೆಂದು ಶ್ರೀಲಂಕಾದ ಥೇರವಾದ ಬೌದ್ಧರು ತಿಳಿದಿದ್ದರು. (ಧಮ್ಮಪದ, ನಿಗಂಠ ನಂವತ್ತು, ೨೨, ೮). ಅಚೇಲಕರಿಗಿಂತ ನಿಗಂಠರು ಮೇಲಿನವರು. ಅಚೇಲಕರು ಪೂರ್ಣ ನಗ್ನರು ‘ನಿಗಂಠರೂ ದಿಗಂಬರರಾದರೂ ಕನಿಷ್ಠ ಮೈಯ ಮುಂಭಾಗದಲ್ಲಿ ಒಂದು ಪಟಲವಾದರೂ (ಬಟ್ಟೆ) ಇದೆ’ ಎಂದು ಒಬ್ಬ ಭಿಕ್ಷು ಹೇಳಿದ್ದಕ್ಕೆ ಇನ್ನೊಬ್ಬ ಭಿಕ್ಷುವು, ‘ಆ ಪಟಲವು (ಬಟ್ಟೆ) ದೇಹಕ್ಕಾಗಿ ಅಲ್ಲ. ಕೂಳಿಗೂ ಕೊಳೆಗೂ ಜೀವವಿರುವುದರಿಂದ ಅವು ಭಿಕ್ಷಾಹಾರದಲ್ಲಿ ಬೀಳದಿರಲೆಂದು ಈ ಮೇಲುದವಿದೆ’ ಎಂದು ಉತ್ತರಿಸಿದನು.

‘ಪಾಲಿಗ್ರಂಥದ ಈ ಉದ್ಧೃತಿಗೆ ಪ್ರಸ್ತುತ ಚರ್ಚೆಯಲ್ಲಿ ಮಹತ್ವವಿದೆ. ನಿಗಂಠರ ದಿಗಂಬರತ್ವವನ್ನು ಅನುಮೊದಿಸಿದೆಯಲ್ಲದೆ, ಅವರು ಮೇಲುದವನ್ನು ಮುಮ್ಮೈ ಮೇಲೆ ಹಾಕಿಕೊಂಡಿರುವುದರಿಂದ, ಪೂರ್ಣ ದಿಗಂಬರರಿಂದ ಅವರನ್ನು ಪ್ರತ್ಯೇಕಿಸಿದೆ. ಈ ಮೇಲುದವು ನಗ್ನತೆಯನ್ನು ಮರೆಮಾಡುವ ಸಾಧನವಾಗಿರದೆ ಆಹಾರವನ್ನು ಜೀವಕಣದಿಂದ ಕಾಪಿಡುವುದಕ್ಕಾಗಿದೆಯೆಂಬ ವಿವರಣೆ ವಿಶ್ವಸನೀಯ ಅಲ್ಲದಿರಬಹುದು. ಆದರೆ ಪಾಲಿ ಟೀಕಾಕಾರನಿಗೆ ಜೈನ ಸಿದ್ಧಾಂತದಲ್ಲಿರುವ ಏಕೇಂದ್ರಿಯ ಜೀವದ ಪ್ರಸ್ತಾಪ ಹಾಗೂ ಮುನಿಗಳಾದವರು ಗೃಹಸ್ಥರಿಗಿಂತ ಏಕೇಂದ್ರಿಯ ಜೀವ ಸಂರಕ್ಷಣೆಗೆ ಹೆಚ್ಚು ನಿಗಾವಹಿಸುತ್ತಿದ್ದರೆಂಬ ಸಂಗತಿ ತಿಳಿದಿತ್ತು’ (ಪದ್ಮನಾಭ ಜೈನಿ : ೧೯೯೫: ೪೮೯).

ಪಾಲಿ ಗ್ರಂಥವಾದ ಧಮ್ಮಪದ ಅಟ್ಠಕಥಾದಲ್ಲಿ ಹೇಳಿರುವ ‘ಪುರಿಮಪಸ್ಸಂತಿ ಪಟಿಚ್ಛಾದೇಂತಿ’ ಎಂಬ ಮಾತಿನಲ್ಲಿರುವ ಪಟಲವು (ಪಟಿ) ದೇಹ ಅಥವಾ ಸೊಂಟಕ್ಕೆ ಸುತ್ತಿದ್ದಲ್ಲ. ಅದು ಕೈಯಲ್ಲಿ ಹಿಡಿದಿರುವುದು, ಆಹಾರ ಪಾತ್ರೆಯನ್ನು ಮುಚ್ಚುವಷ್ಟು ಇದ್ದ ಬಟ್ಟೆ. ಇನ್ನೊಬ್ಬ ಲೇಖಕನಾದ ಧಮ್ಮಪಾಲನು (ಕ್ರಿ. ಶ. ಆರನೆಯ ಶ.) ‘ಉದಾನ ಅಟ್ಠಕಥಾ’ ದಲ್ಲಿ ಶ್ವೇತಪಟ ನಿಗಂಠರನ್ನೂ (ಸೇತಪಟ – ನಿಗಂಠ – ರೂಪಧಾರಿನೋ) ಮತ್ತು ಏಕಸಾಟಕ ನಿಗಂಠರನ್ನೂ ಹೆಸರಿಸಿದ್ದಾನೆ :

ಏಕಸಾಟಕಾತಿಏಕಸಾಟಕ ನಿಗಂಠಾ ವಿಯ ಏಕಂ ಪಿಲೋತಿಕ
ಖಣ್ಡಂ ಹತ್ಥೇ ಬಂಧಿತ್ವಾ ಏಕೇನ ಅಂತೇನಹಿ ಸರೀರಸ್ಸ
ಪುರಿಮಭಾಗಂ ಪಟಿಚ್ಛಾದೇತ್ವಾ ವಿಚರಣಕಾ ||
(ಉದಾನಟ್ಠಕಥಾ : ಪರಮತ್ಢದೀಪನೀ, ೩೩೦ – ೩೧)

ಉದಾನ ಅಟ್ಠಕಥಾದಲ್ಲಿ ಹೇಳಿರುವ ಏಕಸಾಟಕ (ಪಿಲೋತಕ ಖಣ್ಡ) ಮುನಿಗಳಿಗೂ ಮಥುರಾಶಿಲ್ಪದ ಅರ್ಧಫಾಲಕ ಮುನಿಗಳಿಗೂ ತುಂಬ ಸಾಮ್ಯವಿದೆ. ಇಬ್ಬರೂ ನಾಗ್ನ್ಯರು, ತಮ್ಮ ಬೆತ್ತಲೆಯನ್ನು ಮರೆಮಾಡುವಂತೆ ಇಬ್ಬರೂ ಒಂದು ತುಂಡು ಬಟ್ಟೆಯನ್ನು ಮೇಲುದವೆಂಬಂತೆ ಮುಂದೆ ಹಿಡಿದಿದ್ದಾರೆ. ಇದು ಹರಿಷೇಣನ ಬೃಹತ್ಕಥಾದ ಮತ್ತು ಭ್ರಾಜಿಷ್ಣುವಿನ ಆರಾಧಾನಾ ಕರ್ಣಾಟ ಟೀಕಾದ (ವಡ್ಡರಾಧನೆ) ವರ್ಣನೆಗೆ ತಾರ್ಕಣೆ ಆಗುತ್ತದೆ. ಇಲ್ಲಿಗೆ ಪ್ರಸ್ತುತವಾದ ಒಂದು ವರ್ಣನೆ ಆಚಾರಾಂಗ ಸೂತ್ರದಲ್ಲಿದೆ : ಮಹಾವೀರನು ಮನೆತೊರೆದು ಪರಿವ್ರಾಜಕನಾಗಿ (ಪವ್ವ ಇಏ) ಹೊರಟಿದ್ದು ಒಂದೇ ಬಟ್ಟೆಯಲ್ಲಿ (ವಟ್ಠಗಂ). ಈ ಬಟ್ಟೆಯನ್ನು ಹದಿಮೂರು ತಿಂಗಳು ತೊಟ್ಟಿದ್ದನು. ಆಮೇಲೆ ಬಟ್ಟೆಯನ್ನು (ಚಾಈ) ಬಿಟ್ಟು ಅವಸ್ತಕ (ಅಚೇಲಗೇ) ಹಾಗೂ ಅನಿಕೇತನ (ಅಣಗಾರೇ) ಆದನು. ಈ ಒಂದೇ ಬಟ್ಟೆಯನ್ನು ಕಲ್ಪಸೂತ್ರದಲ್ಲಿ ದೇವದೂಷ್ಯವೆಂದಿದೆ.

ಮಾಹಾವೀರನು ಆಹಾರವನ್ನು ಆಂಗೈತಳದಲ್ಲಿ ಪಡೆಯುತ್ತಿದ್ದಾನೆಂದು ಕಲ್ಪಸೂತ್ರದಲ್ಲಿಯೂ ಹೇಳಿದೆ. ಮಾಹಾವೀರನೂ ಪೂರ್ತಿಯಾಗಿ ನಗ್ನ ಆಗುವ ಪೂರ್ವದಲ್ಲಿ, ಸಂಸಾರವನ್ನು ತೊರೆದು ಪರಿವ್ರಾಜಕನಾಗಿದ್ದಾಗ ಹೊಂದಿದ್ದ ದೇವದೂಷ್ಯ ವಸ್ತವು ಈ ಅರ್ಧಫಾಲಕ ಮುನಿ ಸಂಪ್ರದಾಯಕ್ಕೂ ಮಥುರಾದ ಶಿಲ್ಪ ಚಿತ್ರಕ್ಕೂ ಕೀಲಿಕ್ಕೆ ಎಂಬ ಅಭಿಪ್ರಾಯವಿದೆ. ಮಹಾವೀರನು ದೇವದೂಷ್ಯ ವಸ್ತ್ರವನ್ನು ತ್ಯಾಗ ಮಾಡಿದ ಸಂಧರ್ಭವೂ ಹೊಂದಾಣಿಕೆ ತೋರುತ್ತದೆ, ಇದನ್ನು ಅಮುಖ್ಯವೆಂದು ತಳ್ಳಿಹಾಕಲಾಗದು. ಅದರಿಂದ, ಇದಕ್ಕೆ ತಕ್ಕ ಪ್ರಾಮುಖ್ಯ ಕೊಡಬೇಕಾಗುತ್ತದೆ ಎಂದು ಎ. ಎಂ. ಘಾಟಗೆ ಸೂಚಿಸಿದ್ದಾರೆ. ಆದರೆ ಈ ಅಭಿಪ್ರಾಯವನ್ನು ಪದ್ಮನಾಭ ಜೈನಿಯವರು ನಿರಾಕರಿಸಿದ್ದಾರೆ (ಜೈನಿ, ಪಿ. ಎಸ್‌. : ೧೯೭೯ : ೧೯ – ೨೦).

ಹೇಮಚಂದ್ರಾಚಾರ್ಯರು ದೇವದೂಷ್ಯವನ್ನು ‘ಕೋಮಲಂ ಧವಳಂ ಸೂಕ್ಷಂ ಸ್ಯೂತಂ ಚಂದ್ರ ಕರೈರಿವ | ದೇವ ದೂಷ್ಯಂ ದೇವರಾಜಃ ಸ್ಕಂಧದೇಶೇನ್ಯಧಾದ್ವಿಬೋಃ’ ಎಂದು ವರ್ಣಿಸಿದ್ದಾರೆ (ಹೇಮಚಂದ್ರಾಚಾರ್ಯಃ ತ್ರಿಷಷ್ಟಿ ಶಲಾಕಾಪುರುಷ ಚರಿತ್ರ, ಭಾಗ – ೧, ೩ – ೬೪).

ನಿರ್ಗಂಥರಾಗುವ ಮೊದಲು, ಒಂದೇ ಬಟ್ಟೆಯನ್ನು ಮೇಲುದವಾಗಿಸಿ, ಅಂಗೈಯಲ್ಲಿ ಊಟ ಮಾಡುತ್ತಿದ್ದ ಜೀವನ ವಿಧಾನವನ್ನು ಅಳವಡಿಕೊಂಡ ಪಂಥವೇ ಯಾಪನೀಯ ಎಂಬುದಾಗಿ ತಿಳಿಯಬಹುದಾಗಿದೆ.

ಯಾಪನೀಯ ಸಂಘವು ತುಂಬ ಹಳೆಯ ಸಂಪ್ರದಾಯ. ಜೈನ ಸಂಘ, ಶಾಖೆಗಳಲ್ಲಿ ಶ್ವೇತಾಂಬರ – ದಿಗಂಬರ ಎಂಬ ಪ್ರಬೇದದಷ್ಟೇ ಪ್ರಾಚೀನವಾದುದು ಯಾಪನೀಯ. ಮೂಲ ಶಾಖೆಯಿಂದ ಪ್ರಾಯಃ ಮೊಟ್ಟಮೊದಲು ಕಲಲೊಡೆದು ಬೇರೆಯಾಗಿ ಬೆಳೆದದ್ದು ಯಾಪನೀಯವೇ ಇರಬಹುದು. ಶ್ವೇತಾಂಬರ ಆಚಾರ್ಯ ಹರಿಭದ್ರಸೂರಿಯ ಷಡ್‌ದರ್ಶನ ಸಮುಚ್ಚಯದ ವ್ಯಾಖ್ಯಾನಕಾರನಾದ ಗುಣರತ್ನನು (೧೫ನೆಯ. ಶ.) ತನ್ನ ಷಡ್‌ – ದರ್ಶನ – ಸಮುಚ್ಚಯ ವೃತ್ತಿಯಲ್ಲಿ (ತರ್ಕರಹಸ್ಯ ದೀಪಿಕಾ) ಯಾಪನಸಂಘವನ್ನು ದಿಗಂಬರ ಶಾಖೆಯೆಂದೂ ಯಾಪನೀಯರಿಗೆ ಗೋಪ್ಯರೆಂಬ ಹೆಸರುಂಟೆಂದೂ ತಿಳಿಸಿದ್ದಾನೆ. ಗೋಪ್ಯರೆಂಬ ಹೆಸರು ಬರಲು ಕಾರಣಕೂಡ ಮರ್ಮಾಂಗವನ್ನು ಮರೆಮಾಡುವವರು ಎಂಬುದಿರಬೇಕು.

ದಿಗಂಬರಾಃ ಪುನರ್ನಾಗ್ನ್ಯಲಿಂಗಾಃ ಪಾಣಿಪಾತ್ರಾಶ್ಚ ತೇ
ಚತುರ್ಧಾ ಕಾಷ್ಠಾಸಂಘ ಮೂಲಸಂಘ ಮಾಥುರಸಂಘ
ಗೋಪ್ಯ ಸಂಘ ಭೇದಾತ್‌ ….ಗೋಪ್ಯಾಸ್ತುಸ್ತ್ರೀಣಾಂ ಮುಕ್ತಿಂ
ಕೇವಲಿನಾಂ ಭುಕ್ತಿಂ ಚ ಮನ್ಯನ್ತೇ. ಗೋಪ್ಯಾ ಯಾಪನೀಯಾ
ಇತ್ಯುಚ್ಯನ್ತೇ ||(ತರ್ಕರಹಸ್ಯ ದೀಪಿಕಾ – ವೃತ್ತಿ : ೧೬೦ – ೬೧)

ಶ್ರುತಸಾಗರನು (೧೬ನೆಯ ಶ.) ದಿಗಂಬರ ಅನ್ವಯದ ಭಟ್ಟಾರಕ ಮತ್ತು ಲೇಖಕ. ಈತ ಯಾಪನೀಯ ಮುನಿಗಳನ್ನು ಖಂಡಿಸಿದ್ದಾನೆ. ಯಾಪನೀಯರು ಶ್ವೇತಾಂಬರ – ದಿಗಂಬರ ಎರಡೂ ಸಂಪ್ರದಾಯಗಳನ್ನು ಮನ್ನಿಸಿಸುತ್ತಾರೆ. ಬೃಹತ್‌ – ಕಲ್ಪ – ಭಾಷ್ಯವನ್ನು (ಶ್ವೇತಾಂಬರ ಗ್ರಂಥ) ಓದುತ್ತಾರೆ. ಸ್ತ್ರೀಯರು ಅದೇ ಭವದಲ್ಲಿ ಮೋಕ್ಷ ಹೊಂದುವರೆಂದು ನಂಬುತ್ತಾರೆ, ಕೇವಲಿ ಜಿನರಿಗೆ ತುತ್ತು ಆಹಾರ ಉಂಟು ಎನ್ನುತ್ತಾರೆ. ಅದರಿಂದ ಯಾಪನೀಯರು ಮಿಶ್ರತಳಿಯೇ ಸರಿ (ವೇಸರಾ ಇವ), ಮತ್ತು ಅವರು ಪುಸಿಜೈನರು (ಜೈನಾಭಾಸ) – ಎಂಬುದು ದಿಗಂಬರ ಭಟ್ಟಾರಕ ಶ್ರುತ ಸಾಗರನ ಟೀಕೆ : ದ್ರಾವಿಡಾ: ಸಾವದ್ಯಂ ಪ್ರಾಸುಕಮ್‌ ಚ ನ ಮನ್ಯಂತೇ

ಉದ್ಭೋಜನಂ ನಿರಾಕುರ್ಮನ್ತಿ |
ಯಾಪನೀಯಾಸ್ತು ವೇಸರಾ ಇವೋಭ್ಯಾಂ ಮನ್ಯನ್ತೇ
ರತ್ನತ್ರಯಂ ಪೂಜಯನ್ತಿ ಕಲ್ಪಂಚ ವಾಚಯನ್ತಿ
ಸ್ತ್ರೀಣಾಂ ತದ್ಭವೇ ಮೋಕ್ಷಂ ಕೇವಲಿ ಜಿನಾನಾಂ
ಕವಲಾಹಾರಂ ಪ್ರಶಾಸನೇ ಸಗ್ರಂಥಾನಾಂ ಮೋಕ್ಷಂ ಚ ಕಥಯಂತಿ ||
(ಷಟ್‌ ಪ್ರಾಭ್ಯತಾದಿ ಸಂಗ್ರಹ, ಪು, ೭೯)

ಶ್ರುತಸಾಗರನ ಕೃತಿಯಾದ ‘ಷಟ್‌ – ಪ್ರಾಭೃತಾದಿ – ಸಂಗ್ರಹಃ’ ಎಂಬುದು ಕುಂದಕುಂದ ಆಚಾರ್ಯರ ದರ್ಶನಪಾಹುಡ (ಪ್ರಾಭೃತ) ದ ಮೇಲಿನ ವ್ಯಾಖ್ಯಾನ ಗ್ರಂಥ. ಇದರಲ್ಲಿ ಶ್ರುತಸಾಗರನು ಅಯ್ದು ಜೈನಭಾಸಗಳನ್ನು ಹೆಸರಿಸಿದ್ದಾನೆ.

ಕಿಂ ತಜ್ದೈನಾಭಾಸಮ್ಉಕ್ತಂ ಚ
ಗೋಪುಚ್ಛಿಕಾಃ ಶ್ವೇತವಾಸಃ ದ್ರಾವಿಡೋ ಯಾಪನೀಯಕಃ
ನಿಃಷ್ಪಿಚ್ಛಶ್ಚೇತಿ ಪಂಚೈತೇ ಜೈನಾಭಾಸಃ ಪ್ರಕೀರ್ತಿತಾಃ ||

ಶ್ರುತಸಾಗರನು ‘ಉಕ್ತಂ ಚ’ ಎಂದು ಹೇಳಿ ಪೂರ್ವ ಸೂರಿಗಳಿಂದ ಶ್ಲೋಕವನ್ನು ಉದಾಹರಿಸಿದ್ದಾನೆ. ವಾಸ್ತವಾಗಿ ಜೈನಭಾಸಗಳನ್ನು ಮೊದಲಬಾರಿಗೆ ಹೆಸರಿದವನು ಆಚಾರ್ಯ ಇಂದ್ರನಂದಿ. ರಾಷ್ಟ್ರ ಕೂಟರ ಕಾಲದ ಶ್ರೇಷ್ಠ ಲೇಖಕರಲ್ಲಿ ಒಬ್ಬನಾದ ಪೊನ್ನನ ಗುರುವಾದ ಇಂದ್ರನಂದಿಯು ತನ್ನ ನೀತಿಸಾರದಲ್ಲಿ ಉಲ್ಲೇಖಿಸಿರುವ ಶ್ಲೋಕ ಹೀಗಿದೆ :

ಗೋಪುಚ್ಛಕಃ ಶ್ವೇತವಾಸಾ ದ್ರಾವಿಡೋ ಯಾಪನೀಯಕಃ
ನಿಃಷ್ಪಿಚ್ಛಶ್ಚೇತಿ ಪಂಚೈತೇ ಜೈನಾಭಾಸಃ ಪ್ರಕೀರ್ತಿತಾಃ || (೧೦)

ಜೈನಾಭಾಸವೆನಿಸಿದವರು ಐವರು :

. ಗೋಪುಚ್ಛಕರು :ಹಸುವಿನ ಬಾಲದ ಕೂದಲಿಂದ ಮಾಡಿದ ಚೌರಿ (ಪುಚ್ಛವನ್ನು) ಹಿಡಿದವರು. ನವಿಲುಗರಿಯ ಪಿಂಛ ಹಿಡಿದವರು ಮಯೂರ ಪಿಂಛರು, ಆಕಳ ಬಾಲದ ಕೂದಲಿನ ಪಿಂಛರು ಗೋಪುಚ್ಛಕರು ಅಥವಾ ಕಾಷ್ಠಾಸಂಘದ ಮುನಿಗಳು. ಕೂರ್ಚಕವೆಂದರೆ ಪಿಂಛ (ಕುಂಚ, ಗೊಂಡೆಯ). ‘ಕೂರ್ಚಕಂ ಹಸುರೋಮಂ’ ಎಂದು ನಾಗವರ್ಮನು ವಸ್ತು ಕೋಶದಲ್ಲಿ ಹೇಳಿದ್ದಾನೆ. (೭೧ – ೨೨). ಕ್ರಿ. ಶ. ೬೯೬ ರಲ್ಲಿ ನಂದಿತಟವೆಂಬ ಗ್ರಾಮದಲ್ಲಿ ಕುಮಾರಸೇನ ಮುನಿಯಿಂದ ಈ ಸಂಘ ಪ್ರಾರಂಭವಾಯಿತು.

. ಶ್ವೇತವಾಸ : ಇವರು ಶ್ವೇತಾಂಬರರು. ಇವರು ಮಯೂರ ಪಿಂಛವನ್ನಾಗಲಿ, ಗೃಧ್ರ ಪಿಂಛವನ್ನಾಗಲಿ, ಗೋಪುಚ್ಛವನ್ನಾಗಲಿ ಹಿಡಿಯುತ್ತಿರಲಿಲ್ಲ. ಅದರ ಬದಲು ಉಣ್ಣೆನೂಲಿನ ಕುಚ್ಚು ಇರುವ ಸಣ್ಣ ಕೋಲನ್ನು ಹಿಡಿಯುತ್ತಿದ್ದರು. ಕ್ರಿ. ಶ. ೬೮ರಲ್ಲಿ ಈ ಪಂಥ ಪ್ರಾರಂಭವಾಯಿತು.

. ದ್ರಾವಿಡ : ಕ್ರಿ.ಶ. ೪೬೯ರಲ್ಲಿ ದಕ್ಷಿಣ ಮಧುರೆಯಲ್ಲಿ ಪೂಜ್ಯಪಾದನ ಶಿಷ್ಯನಾದ ವಜ್ರನಂದಿ ಆಚಾರ್ಯನು ದ್ರಾವಿಡ ಸಂಘವನ್ನು ಸ್ಥಾಪಿಸಿದನು. ಕಾಳು ಬೀಜಗಳಲ್ಲಿ ಜೀವವು ಇರುವುದಿಲ್ಲ. ನೀರಿನಲ್ಲಿ ಪ್ರಾಶುಕ ಅಪ್ರಾಶುಕವೆಂಬ ಭೇದವಿಲ್ಲ. ಎಂಬುದು ಇವರ ಪ್ರತಿಪಾದನೆ. ಅದರಿಂದ ತಣ್ಣೀರು ಸ್ನಾನವನ್ನಾಗಲಿ. ವಸತಿಗಳಲ್ಲಿ ಇರುವುದಾಗಲಿ, ವ್ಯಾಪಾರ ಮಾಡುವುದಾಗಲಿ, ಮುನಿಗಳಿಗೆ ಕೂಡ ನಿಷೇಧವಲ್ಲ ಮತ್ತು ಈ ಕ್ರಿಯೆಗಳಿಂದ ಆಚರಿಸುವವರಿಗೆ ಯಾವ ಪಾಪವೂ ಉಂಟಾಗುವುದಿಲ್ಲ – ಎಂಬುದು ದ್ರಾವಿಡ ಸಂಘದ ಸಿದ್ಧಾಂತ.

. ಯಾಪನೀಯಾ : ಕ್ರಿ.ಶ. ೧೫೯ರಲ್ಲಿ, ಕಲ್ಯಾಣ ಪಟ್ಟಣದಲ್ಲಿ, ಶ್ವೇತಾಂಬರ ಯತಿಯಾದ ಶ್ರೀಕಲಶನಿಂದ ಈ ಸಂಘವು ಉಧ್ಘಾಟಿತವಾಯಿತೆಂದು ದೇವಸೇನ ಸೂರಿಯು (ಕ್ರಿ.ಶ. ೯೩೪) ‘ದರ್ಶನ ಸಾರ’ ಗ್ರಂಥದಲ್ಲಿ ಹೇಳಿದ್ದಾನೆ.

. ನಿಃಪಿಚ್ಛಕ : ಕ್ರಿ.ಶ. ೮೯೬ರಲ್ಲಿ ರಾಮಸೇನಮುನಿಯು ಮಾಥುರ ಸಂಘವನ್ನು ಪ್ರಾರಂಭಿಸಿದನು. ಈ ಸಂಘದ ಸನ್ಯಾಸಿಗಳು ಪಿಂಛವನ್ನು ಹಿಡಿಯುತ್ತಿರಲಿಲ್ಲ. ಅದರಿಂದ ಇವರಿಗೆ ನಿಃಪಿಚ್ಛಕರು, ಪಿಂಛವಿಲ್ಲದವರು ಎಂಬ ಹೆಸರಾಯಿತು.

ಪ್ರಾಕೃತ ‘ದರ್ಶನ ಸಾರ’ ಗ್ರಂಥದ ಗಾಥಾಗಳಲ್ಲಿಯೂ ಈ ವಿಚಾರ ಕುರಿತ ಪ್ರಸ್ತಾಪ ಬಂದಿದೆ. ಮೇಲೆ ಹೇಳಿದ ಶಾಖೆಗಳೆಲ್ಲ ಒಂದೇ ಮೂಲದಿಂದ ಬೆಳೆದುಬಂದ ಗಣಭೇಧಗಳು. ಇವುಗಳಲ್ಲಿ ಕೆಲವು ವಿಚಾರಗಳ ಹೊರತು ವಿಶೇಷ ಸಿದ್ಧಾಂತ ಭೇದ ಕಂಡುಬರುವುದಿಲ್ಲ. ಹತ್ತನೆಯ ಶತಮಾನದ ಆದಿಯಲ್ಲಿದ್ದ ಇಂದ್ರನಂದಿಯ ಅಭಿಪ್ರಾಯದಲ್ಲಿ ಯಾಪನೀಯ ಶಾಖೆಯನ್ನು ಕುರಿತು ಗೌಣನೆಲೆಗೆ ಸರಿಸಿ ಮಾತನಾಡುವ ಧೋರಣೆಯಿರುವುದು ದಿಟ. ಆದರೆ ಅದೇ ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಇನ್ನೊಬ್ಬ ಶ್ರೇಷ್ಠ ಲೇಖಕ ಸೋಮದೇವಸೂರಿ ವಿರಚಿತ ‘ಯಶಸ್ತಿಲಕ ಚಂಪು’ ಕಾವ್ಯದಲ್ಲಿ, ಕೆಲವು ಮತ ಸಂಪ್ರದಾಯಗಳನ್ನು ಟೀಕೆ ಮಾಡಲಾಗಿದ್ದರೂ ಯಾಪನೀಯ ಪಂಥವನ್ನು ಖಂಡಿಸಿಲ್ಲ.

ಮತ ಪಂಥಗಳನ್ನು ವಿಡಂಬಿಸಿ ಲೇವಡಿ ಮಾಡುವುದರಲ್ಲಿ ನಿಸ್ಸೀಮನಾದ ಕನ್ನಡದ ಬ್ರಹ್ಮ ಶಿವಕವಿ (ಕ್ರಿ. ಶ. ೧೧೭೫) ಯಾಪನೀಯ ಸಂಪ್ರದಾಯವನ್ನು ಟೀಕಿಸಿಲ್ಲ. ಅಷ್ಟೇ ಅಲ್ಲ, ಆತ ಯಾಪನೀಯ ಸಂಘದ ಸಿದ್ಧಾಂತಕ್ಕೆ ಮನ್ನಣೆ ಕೊಟ್ಟಿದ್ದಾನೆ. (ಹಂಪನಾ : ಚಂದ್ರಕೊಡೆ : ೧೯೯೭ :೪೦೭ ರಿಂದ ೪೧೧ ). ಮುಖ್ಯವಾಗಿ ಹತ್ತನೆಯ ಶತಮಾನದ ವೇಳೆಗಾಗಲೇನೆ ಯಾಪನೀಯ ಸಂಘ – ಸಂಪ್ರದಾಯ ಕುರಿತು ಅತೃತ್ತಿ ಹೆಪ್ಪು ಕಟ್ಟಿತ್ತು ಎಂದು ಇದರಿಂದ ಪ್ರತೀತವಾಗುತ್ತದೆ. ಪ್ರಾಯಃ ಆ ಹಂತದಲ್ಲಿ, ಮೂಲ ವಾಹಿನಿಯಿಂದ ದೂರಸರಿದಿದ್ದ ಪಂಥಬೇದಗಳನ್ನು ಮತ್ತೆ ಮುಖ್ಯ ಸ್ರೋತಕ್ಕೆ ಕೂಡಿಸುವ, ತಿದ್ದುವ ಕೆಲಸವೂ ನಡೆದಂತೆ ಕಾಣುತ್ತದೆ. ಸಂಶಯ, ಮಿಥ್ಯಾತ್ವ – ಇವನ್ನು ನಿರೂಪಣೆ ಮಾಡುತ್ತಾ ಉದಾಹರಣೆಗಳೊಡನೆ ಶ್ವೇತಾಂಬರ ಮತದ ನಿರಸನಗೊಳಿಸಿದ ದೇವಸೇನನು (ಕ್ರಿ. ಶ. ೯೩೩), ತನ್ನ ಕೃತಿ ಬಾವಸಂಗ್ರಹದಲ್ಲಿ ಶ್ವೇತಾಂಬರ ಸಂಪ್ರದಾಯ ಸ್ತ್ರೀ ಮುಕ್ತಿ, ಕೇವಲಿ ಕವಲಾಹಾರ, ಸಾಧುಗಳು ವಸ್ತ್ರ ಮತ್ತು ಪಾತ್ರೆ ಇಡುವುದು – ಎಂಬೀ ಮೂರು ಸಂಗತಿಗಳನ್ನು ವಿವೇಚಿಸಿದ್ದಾನೆ. ಶ್ವೇತಾಂಬರರರು ತಮ್ಮ ಸಾಧುಗಳನ್ನು ಸ್ಥವಿರಕಲ್ಪೀ ಎಂದು ಕರೆಯುತ್ತಾರೆ. ಆದರೆ ದೇವಸೇನನು ‘ಅವರು ಸ್ಥವಿರರಲ್ಲ, ಗೃಹಸ್ಥ ಕಲ್ಪಿಗಳು’ ಎನ್ನುತ್ತಾನೆ :

ದುದ್ಧರ ತವಸ್ಸ ಭಗ್ಗಾ ಪರಿಸಹ ವಿಸಏಹಿಂ ಪೀಡಿಯಾ ಜೇಯ
ಜೋ ಗಿಹಕಪ್ಪೋ ಲೋಏ ಸ ಥವಿರಕಪ್ಪೋ ಕಓ ತೇಹಿಂ ||
(ಭಾವಸಂಗ್ರಹ, ಗಾಥಾ೧೩೩)

(= ಪರೀಷಹ ಪೀಡಿತರು, ದುರ್ಧರ ತಪಭೀತರು, ಗೃಹಸ್ಥಕಲ್ಪವನ್ನು ಸ್ಥವಿರಕಲ್ಪವನ್ನಾಗಿಸಿದ್ದಾರೆ.) ೧೩೭ನೆಯ ಗಾಥೆಯಲ್ಲೂ ಶ್ವೇತಾಂಬರ ಮತದ ಉತ್ಪತ್ತಿ ಕಥೆಯನ್ನು ಕೊಟ್ಟಿದೆ. ಅದರ ಪ್ರಕಾರ ಸೌರಾಷ್ಟ್ರ ದೇಶದ ವಲಭೀನಗರದಲ್ಲಿ ವಿ. ಸಂ. ೧೩೬ ರಲ್ಲಿ ಶ್ವೇತಾಂಬರ ಸಂಘದ ಉತ್ಪತ್ತಿಯಾಗಿದೆ. ದೇವಸೇನನ ಇನ್ನೊಂದು ಕೃತಿಯಾದ ‘ದರ್ಶನ ಸಾರ’ ದಲ್ಲೂ ಇದೇ ಅಭಿಪ್ರಾಯವಿದೆ.

ನಾಹಂ ಭಿಕ್ಖವೆ ಸಂಘಾಟಿಕಸ್ಯ ಸಂಘಾಟಿಧಾರಣಮತ್ತೇ ನ ಸಾಮಙ ವದಾಮಿ
ಅಚೇಲಕಸ್ಸ ಅಚೇಲಕ ಮತ್ತೇನ ರಜೋಜಲ್ಲಿಕಸ್ಯ ರಜೋಜಲ್ಲಿಕ ಮತ್ತೇನ
ಜಟಿಲಕಸ್ಯ ಜಟಾಧಾರಣ ಮತ್ತೇ ನ ಸಾಮಙ ವದಾಮಿ ||
(ಮಜ್ಝಿಮ ನಿಕಾಯ, ೪೦ )

(= ಭಿಕ್ಷುಕರೇ, ಬೌದ್ಧ ಬಿಕ್ಷುಕನು ಧರಿಸಿರುವ ವಸ್ತ್ರವನ್ನು ಧಾರಣಮಾಡುವುದರಿಂದ ಮಾತ್ರ ಅವರನ್ನು ನಾನು ಶ್ರಮಣರೆಂದು ಸಂಬೋಧಿಸಲಾರೆ. ಅಚೇಲಕರನ್ನು ಅಚೇಲಕತ್ವದಿಂದ, ರಜೋ ಜಲ್ಲಿಕರನ್ನು ರಜೋ ಜಲ್ಲಿಕತ್ವದಿಂದ, ಜಟಾಧಾರಿಗಳನ್ನು ಜಟಾಧಾರಣ ಮಾತ್ರದಿಂದ ಶ್ರಮಣರೆಂದು ಹೇಳಲಾಗದು). ಶ್ವೇತಾಂಬರ ಜೈನಾಗಮ ಪರಂಪರೆಯಲ್ಲಿಯೂ ಏಳು ಅಸಂಪ್ರದಾಯದ ಪಂಥಗಳನ್ನು ಹೆಸರಿಸಲಾಗಿದೆ. ಜಿನಭದ್ರಗಣಿ ಕ್ಷಮಾಶ್ರಮಣನು (ಕ್ರಿ. ಶ. ೫೮೫) ವಿಶೇಷಾವಶ್ಯಕ ಭಾಷ್ಯದಲ್ಲಿ ಏಳು ನಿಹ್ನವ (ಪಾಷಂಡಿ) ಪಂಥಗಳನ್ನು ಹೇಳಿದ್ದಾನೆ; ಜತೆಗೆ ಎಂಟನೆಯದಾಗಿ ಶಿವಭೂತಿಯನ್ನು ಹೆಸರಿಸಿ ‘ಶಿವಭೂತಿಯದು ಬೋಡಿಕದೃಷ್ಟಿ’ ಎಂದಿದ್ದಾನೆ ಅರ್ಧಮಾಗದಿಯಲ್ಲಿ ಬೋಡಿಗ – ಬೋಡಿಅ, ಜೈನ ಮಹಾರಾಷ್ಟ್ರೀಯಲ್ಲಿ ಬೋಡಿಯ – ಬೋಡಿಯಾಣ, ಸಂಸ್ಕೃತದಲ್ಲಿ ಬೋಡಿಕ – ಎಂಬ ಶಬ್ಧ ರೂಪಗಳಿವೆ. ಇದು ಯಾಪನೀಯಕ್ಕೆ ಹತ್ತಿರವಾದ ಸಂಘ. ಇದು ಕ್ರಿ. ಶ. ೧೩೨ರಲ್ಲಿ ಸ್ಥಾಪಿತವಾಯಿತೆನ್ನಲಾಗಿದೆ. ಕನ್ನಡದ ಬೋಡು, ಬೋಳು ಎಂಬುದು ಪ್ರಾಕೃತದಲ್ಲಿ ಬೋಡಿಅ, ಬೋಡಿಕ ಎಂದಾಗಿದೆ.