ಸಚೇಲಕ – ಅಚೇಲಕ ಪ್ರಶ್ನೆಯು ಮಾಹಾವೀರರ ಸಂಘದಲ್ಲಿತ್ತು. ಮೌರ್ಯರ ಆಳಿಕೆಯಲ್ಲಿ ಸಂಭವಿಸಿದ ಘೋರ ಕ್ಷಾಮದ ದವಡೆಯಲ್ಲಿ ಸಿಕ್ಕಿ ನಲುಗಿದ ಸಂಘದ ಕಠಿಣ ನಿಯಮದಲ್ಲಿ ಅನಿವರ್ಯವಾಗಿ ಹುಟ್ಟಿದ ಒಂದು ಪದ್ಧತಿ ಅರ್ಧಕಪ್ಪಡ (ಅರ್ಧಫಾಲಕ – ಅರ್ಧಚೇಲಕ ) ಸಂಪ್ರದಾಯವಾಗಿ ರೂಡಿಯಲ್ಲಿ ನಿಂತಿತು. ಇದು ಶ್ರಾವಕರಿಗೂ ಶ್ರಮಣರಿಗೂ ಒಂದು ತಾತ್ಕಾಲಿಕ ಒಡಂಬಡಿಕೆಯಾಗಿ ಕಲ್ಪಿತವಾದದ್ದು. ‘ಅಲ್ಪಚೇಲಕ’ ಪರಂಪರೆಯು ಕರ್ನಾಟಕ ಸಂದರ್ಭದಲ್ಲಿ ‘ಯಾಪನೀಯ’ ಎಂಬ ಹೊಸ ಹೆಸರಿನಿಂದ ಒಂದು ಸಾವಿರ ವರ್ಷಕಾಲ ಉಜ್ಜಲವಾಗಿ ಬೆಳಗಿತು. ಒಂದು ಐತಿಹಾಸಿಕ ಅಗತ್ಯವಾಗಿ ಹುಟ್ಟಿಕೊಂಡು, ಸಮನ್ಯ್ವಯ ಕೊಂಡಿಯಾಗಿ ಬೆಳೆದ ಯಾಪನೀಯ ಸಂಘ ತನ್ನ ಪ್ರಣಾಳಿಕೆಯಲ್ಲಿ ಜನಪರ ಕಾಳಜಿಗಳಿಗೆ ಸ್ಪಂದಿಸುವ ಜನಮುಖಿ ಮನೋಧರ್ಮಕ್ಕೆ ಬದ್ಧವಾಗಿತ್ತು.

ಯಾಪನೀಯ ಸಂಘ ಹುಟ್ಟು, ಬೆಳವಣಿಗೆ, ಹರಹು ಕುರಿತು ಬಿಡಿಸಿ ನೋಡಿದರೆ, ಅದರ ಒಡಲೊಳಗೆ ಸಮಾಜೊ – ಧಾರ್ಮಿಕ – ಐತಿಹಾಸಿಕ ಕಾಳುಗಳು ಕುಳಿತಿರುವುದು ಕಾಣುತ್ತವೆ. ಕರ್ನಾಟಕದ ಸಂದರ್ಭದಲ್ಲಿ ಇದು ಒಂದು ಚಾರಿತ್ರಿಕ ಆಗತ್ಯವನ್ನು ಪೂರೈಸುವ ಸಲುವಾಗಿ ಕಣ್ಣುಬಿಟ್ಟಿತೆಂದು ಮೇಲೆ ಹೇಳಿದ ಹೇಳಿಕೆಯನ್ನು ವ್ಯಾಖ್ಯಾನಿಸಬೇಕಾಗುತ್ತದೆ. ವೈದಿಕ – ಅವೈದಿಕಗಳ ಮುಖಾಮುಖಿಯ ತಾತ್ವಿಕ ಸಂಘರ್ಷದ ನೆಲೆಯಲ್ಲಿ ಜೈನತ್ವವು ಹೇಗೆ ತನ್ನ ಸೈದ್ಧಾಂತಿಕ ಚೌಕಟ್ಟಿನೊಳಗೆ ಎಲ್ಲರಿಗೂ, ಮುಖ್ಯವಾಗಿ ಶೂದ್ರಾದಿ ಅಸ್ಪೃಶ್ಯರೆನಿಸಿಕೊಂಡವರಿಗೂ ಮ್ಯಾನತೆಯನ್ನು ಕೊಟ್ಟಿದೆ ಎಂಬುದನ್ನು ಕಡ್ಡಿಮುರಿದು ಇನ್ನೊಮ್ಮೆ ಹೇಳಬೇಕಾದ ಜರೂರನ್ನು ಜೈನಧರ್ಮ ಮನಗಂಡಿತು. ಹೆಂಗಸರೂ ಅನ್ಯಧರ್ಮಗಳವರೂ (ಪರಶಾಸನಗಳವರು) ಹೆಚ್ಚಿನ ಸಂಖ್ಯೆಯಲ್ಲಿ ಜೈನ ಮತಕ್ಕೆ ಹರಿದು ಬಂದರು. ಜೈನರಾದವರೆಲ್ಲ ದಿಗಂಬರರೇ ಆಗಿರಬೇಕೆ, ಅಜೈನ ಪಂಥಗಳಿಂದ ಬಂದವರಿಗೆ ಮೋಕ್ಷವಿದೆಯೆ, ಹೆಂಗಸಿಗೆ ಅದೇ ಭವದಲ್ಲಿ ಮೋಕ್ಷವಿದೆಯೆ, ಎಂಬಂಥ ಸಾಮಾನ್ಯ, ಆದರೆ ಮಹತ್ವದ, ಸಂಶಯಗಳು ಜನಸಾಮ್ಯರನ್ನು ಕಾಡುತ್ತಿದ್ದುವು.

ಹೀಗೆ ಸಮುದಾಯವನ್ನು ಅನುಮಾನಗಳು ಪೀಡಿಸಲು ತೊಡಗಿದ್ದಾಗ, ಹೊಸದಾಗಿ ಒಳಗೆ ಬರುತ್ತಿದ್ದವರನ್ನು ಶಾಶ್ತ್ರ ಸಮ್ಮತವಾದ ರೀತಿಯಲ್ಲಿ ಸಮಾಧಾನ ಪಡಿಸುವಂಥ ಧಾರ್ಮಿಕ ನಿರೂಪಣೆಯೊಂದು ಆಚಾರ್ಯರ ಬಾಯಿಂದ ವಿಧ್ಯುಕ್ತವಾಗಿ ಹೊರಬೀಳುವುದು ಅನಿವಾರ್ಯವಾಗಿತ್ತು. ಶ್ವೇತಾಂಬರ ಮತ್ತು ಅದರ ಉಪಾಶಾಖೆಗಳು ಉತ್ತರ ಭಾರತದಲ್ಲಿ ಈ ಕೆಲಸಮಾಡಿದ್ದುವು. ದಿಗಂಬರ ಪಂಥ ದಕ್ಷಿಣದಲ್ಲಿ ಈ ಕೆಲಸವನ್ನು ತುರ್ತಾಗಿ ಮಾಡಬೇಕಿತ್ತು. ಇದನ್ನು ಅರಿತು ಯಾಪನೀಯ ಸಂಘ ದಿಗಂಬರ ಸಂಘದ ಹೊಟ್ಟೆಯೊಳಗೆ ಹುಟ್ಟಿಬಂದು ಅಂದಿನ ಜನಮನದ ಕನಸನ್ನು ನನಸಾಗಿಸಿತು. ಯಾಪನೀಯ ಪಂಥ ಜೈನಧರ್ಮದಲ್ಲಿ ಸುಧಾರಣೆಗಾಗಿ ಬಂದ ಸಂಘ.

ಕರ್ನಾಟಕ ಭೌಗೋಳಿಕ ಸೀಮೆಯಲ್ಲಿ, ಜೈನ ಸಮಾಜದೊಳಗೆ ಸಮಾವೇಶಗೊಂಡ ಕೆಳವರ್ಗದವರೆನಿಸಿಕೊಂಡು ನರಳುತ್ತಿದ್ದ ಜಾತಿ ವರ್ಗಗಳಿಂದ ಮಾತಾಂತರಗೊಂಡು ಬಂದು ಸೇರಿದವರಿಗೂ ಸಾಂತ್ವನಗೊಳಿಸಿದ ಪಂಥಯಾಪನೀಯ. ಈ ಯಾಪನೀಯದ ತಳಪಾಯ ಮುಕ್ಕಾಲು ಮಣೆ, ಮೂರು ಮುಖ್ಯ ಮಂತ್ರ – ಸೂತ್ರಗಳೇ ಈ ಮಣೆಯ ಕಾಲುಗಳು :

. ಜೈನೇತರ ಪಥಪಂಥಗಳನ್ನು ಅನುಸರಿಸಿದವರಿಗೂ ಮೋಕ್ಷವಿದೆ; ಪರಶಾಸನೇ ಮೋಕ್ಷಃ
. ಬಟ್ಟೆತೊಟ್ಟಿರುವ ಸಂಸಾರಿಗಳಿಗೂ ಮೋಕ್ಷವಿದೆ; ಸಗ್ರಂಥನಾಂ ಮೋಕ್ಷಃ
ಹೆಂಗಸರಿಗೂ ಈ ಜನ್ಮದಲ್ಲೇ ಮೋಕ್ಷ ಸಾಧ್ಯವಿದೆ; ಸ್ತ್ರೀಣಾಂ ತದ್ಭವೇ ಮೋಕ್ಷಃ

ತಾನು ಪ್ರತಿಪಾದಿಸಿದ ತತ್ವಗಳಿಗೆ ಅನುಗುಣವಾಗಿ ಯಾಪನೀಯ ಸಂಘವು ಜನಮಾನಸಕ್ಕೆ ಯಕ್ಷಯಕ್ಷಿಯರನ್ನು ಸೃಷ್ಟಿಸಿಕೊಟ್ಟಿತು. ಈ ಯಕ್ಷಲೋಕವನ್ನು ಜಿನ ಚೈತ್ಯಾಲಯಗಳಲ್ಲಿ ಗಣ್ಯಸ್ಥಾನಕೊಟ್ಟು ಬೆಳಗಿಸಲೂ ಸಾಮಾಜಿಕ ಕಾರಣಗಳಿದ್ದುವು. ಜೈನ ಮತದೊಳಗೆ ಅವತಾರಗಳೂ ಇಲ್ಲ. ದೇವರುಗಳೂ ಇಲ್ಲ. ಅನುಗ್ರಹವೂ ಇಲ್ಲ. ಶಾಪದ ಭಯ ಭೀತಿಯೂ ಇಲ್ಲ. ಜಿನ ಬಿಂಬಗಳು ಮುನುಷ್ಯರ ಹಾಗೇ ಎರಡು ಕೈ ಕಾಲುಗಳಿಂದ ಸರಳವಾಗಿವೆ. ಆಭರಣವಿಲ್ಲ. ಅಲಂಕಾರವಿಲ್ಲ. ಕಿರೀಟವಿಲ್ಲ. ಆಯುಧಗಳಿಲ್ಲ. ಬೆತ್ತಲೆ ದೇವರು. ತಾನೇ ದಿಗಂಬರ, ಈತ ಇನ್ನು ನಮಗೇನು ಕೊಡಬಲ್ಲ. ನಮ್ಮ ಗತಿ ಏನು. ಜಿನರಿಗೆ ಪಕ್ಕದಲ್ಲಿ ಹೆಂಡತಿಯೂ ಇಲ್ಲ. ಸ್ತ್ರೀ ಶಕ್ತಿ ದೇವಿಯೂ ಇಲ್ಲಿ ಇಲ್ಲ. ಇಂಥ ಪ್ರಶ್ನೆಗಳು ಹೊಸ ಆಗಂತುಕರಲ್ಲಿ ಹುಟ್ಟಿದ್ದುವು. ಜೈನತ್ವಕ್ಕೆ ಹೊಸದಾಗಿ ಮತಾಂತರವಾದವರು ಹಿಂದುಗಳು. ಇಲ್ಲಿಗೆ ವಲಸೆ ಬರುವ ಮೊದಲು ಅವರು ಅಲ್ಲಿ ಶಿವಪೂಜಕರು ಇಲ್ಲವೆ ವಿಷ್ಣು ಉಪಾಸಕರು. ಶಿವನಿಗೆ ಪಾರ್ವತಿದೇವಿ ಇದ್ದಳು. ವಿಷ್ಣುಗೆ ಲಕ್ಷ್ಮಿದೇವಿ ಇದ್ದಳು. ಗಂಗೆ ಗೌರಿ ಅಂಬಿಕಾ ಚಾಮುಂಡಾ ಮಹಿಶಾಸುರ ಮರ್ದಿನಿ ಎಂಬಿತ್ಯಾದಿ ದೇವತೆಗಳು ಕಾಪಾಡುವವರಾಗಿ ಶೋಭಿಸಿದ್ದರು. ಅದರಿಂದ ಆಗಂತುಕರಲ್ಲಿ ಗೊಂದಲಗಳು ಉದ್ಭವಿಸಿದ್ದುವು. ಅವರ ಆತಂಕಗಳನ್ನು ದೂರ ಮಾಡುವಂಥ ಬದಲಿ ವ್ಯವಸ್ಥೆಯೊಂದು, ಮರು ಹೊಂದಾಣಿಕೆಯೊಂದು ಜರೂರು ಬೇಕಾಯಿತು.

ತೀರ್ಥಂಕರರು ಎಲ್ಲವನ್ನು ತೊರೆದವರು ನಿಜ. ಜಿನರು ವರ ಯಾ ಶಾಪ ಅಥವಾ ಏನನ್ನೂ ಕೊಡದ ತಾಟಸ್ಥ್ಯ ಭಾವದವರು ಎಂಬುದೂ ದಿಟ. ಆದರೆ ಅವರದು ಆಸಾಮನ್ಯ ಮಹಿಮೆ. ಜಿನರ ಶಕ್ತಿ ಎಷ್ಟೆಂದರೆ ಅವರ ಭಕ್ತ ಸೇವಕರಾದ ಯಕ್ಷಿ ಯಕ್ಷಿಯರೇ ನಿಮ್ಮ ಕನಸುಗಳನ್ನು ನನಸಾಗಿಸಬಲ್ಲರು. ಲೌಕಿಕದ ಸುಖಪರಂಪರೆಗಳ ಪೂರೈಕೆ ಇವರೇ ಸಾಕು. ಇವರಲ್ಲಿ ೨೪ ಜನ ದೇವರೂ (ಯಕ್ಷರೂ) ೨೪ ಜನ ದೇವಿಯರೂ (ಯಕ್ಷಿಯರೂ) ಇದ್ದಾರೆ. ಇವರೇ ಜಿನಶಾಸನ ದೇವ ದೇವಿಯರು. ಇವರಲ್ಲದೆ ವಿದ್ಯಾದೇವಿಯರೂ ಕ್ಷೇತ್ರಪಾಲರೂ ಇದ್ದಾರೆ. ವರ ಕರುಣಿಸಲು, ಸಂಪತ್ತನ್ನು ಅನುಗ್ರಹಿಸಲು ನಿಮಗೆ ಬೇರೆ ಇನ್ನೇನು ಬೇಕು – ಇದು ಯಾಪನೀಯರ ಸಮನ್ವಯ ಸೂತ್ರ, ಜನಪರ ಧೋರಣೆ. ಯಾಪನೀಯರಿಗೂ ಮೊದಲೇ ಇದ್ದ ತೆಳ್ಳನೆಯ ಎಳೆಗಳನ್ನು ಇವರು ಮಜಬೂತಾಗಿ ಹುರಿಗೊಳಿಸಿ, ಜಿನಮತವನ್ನು ಜನಮತವಾಗಿಸಲು, ಜನಪ್ರಿಯತೆಗಾಗಿ ಜಗ್ಗಿದರು. ಅತ್ತ ದಿಗಂಬರರಿಂದ ಸ್ಪಲ್ಪ, ಇತ್ತ ಶ್ವೇತಾಂಬರರಿಂದ ತುಸು ಸೂತ್ರಗಳನ್ನು ಸ್ವೀಕರಿಸಿ ಒಂದು ಮಧ್ಯ ಮಾರ್ಗವನ್ನು, ಜನಪಥವನ್ನು ತೆರೆದರು. ಜನಮನದ ಬೇಡಿಕೆಗಳು ಬಲವಾದಾಗ ಧರ್ಮವೂ ಬಾಗಬೇಕಾಗುತ್ತದೆಂಬುದನ್ನು ಅರಿತ ಮುನ್ನೋಟದ ಮತಾಚಾರ್ಯರು ಹಿಡಿದ ಸಮನ್ವಯ ಸೂತ್ರದ ಮಶಾಲು ಯಾಪನೀಯ ಸಂಘ. ಯಕ್ಷಪರಿಕಲ್ಪನೆ, ಶಿಲ್ಪವಿನ್ಯಾಸ, ಮೂರ್ತಿ ರಚನೆ, ಪ್ರತಿಷ್ಠಾಪನೆ, ಪೂಜಾವಿಧಾನ – ಇವಿಷ್ಟೂ ಯಾಪನೀಯ ಯತಿಗಣದ ಕೊಡುಗೆ. ಗೃಹಸ್ಥ – ಶ್ರಾವಕ ವೃಂದಕ್ಕೆ ಯಕ್ಷಲೋಕವನ್ನು ಕಲ್ಪಿಸಿಕೊಟ್ಟವರು ಯಾಪನೀಯರು. ಕನ್ನಡ ಸಾಹಿತ್ಯ ಜಗತ್ತಿಗೆ ಯಕ್ಷಯಕ್ಷಿಯರನ್ನು ಇಳಿಸಿ ಕೊಟ್ಟವರು ಯಾಪನೀಯರು.

ಈ ಹೊಸ ಅಲೆಯ ಪ್ರಭಾವದಿಂದ ಅಂತ್ಯಜರು, ಚಂಡಾಲರು, ಮಾದಿಗರು, ಹೊಲೆಯರು ಜೈನ ಮತ ಸೇರಿದವರು. ಒಕ್ಕಲಿಗರು, ಶೂದ್ರರು, ಎಲ್ಲ ವರ್ಗದ ಹೆಂಗಸರು ಮಾತಾಂತರಗೊಂಡು ಜೈನ ಧರ್ಮದ ಕೊಡೆಯ ಕೆಳಗೆ ಸೇರಿದರು. ಬ್ರಹ್ಮಶಿವಕವಿ ತನ್ನ ಸಮಯ ಪರೀಕ್ಷೆಯಲ್ಲಿ ಈ ಪರಿವರ್ತನೆ ಕಾಲದ ಸಂವೇದನೆಗಳ ಸೂಕ್ಷ್ಮಗಳನ್ನೂ ಸಂಕೀರ್ಣತೆಯನ್ನೂ ಅದ್ಭುತವಾಗಿ ಹಿಡಿದಿಟ್ಟು, ಕನ್ನಡ ಕಾವ್ಯಪರಂಪರೆಯಲ್ಲಿ ಒಂದು ಅಪೂರ್ವ ಕಾವ್ಯ ರಚಿಸಿದ್ದಾರೆ. ಕವಿ ಎಂಬ ಹೆಸರಿಗೆ ಪಾತ್ರನಾಗಿದ್ದಾನೆ. ಯಾಪನೀಯ ಮನೋಧರ್ಮವನ್ನು ಹೇಳುವ ನೂರಾರು ಪದ್ಯಗಳು ಬ್ರಹ್ಮಶಿವನ ಸಮಯಪರೀಕ್ಷೆಯಲ್ಲಿವೆ; ಮಾದರಿಗಾಗಿ ಹತ್ತು ಪದ್ಯಗಳನ್ನು ಮಾತ್ರ ಉದಾಹರಿಸಲಾಗುವುದು;

ತಪಮಂ ಕೈಕೊಳಲೊಡನೆಂ
ತುಪಾರ್ವರುಂ ಭೂಪವೈಶ್ಯ ಶೂದ್ರರುಮೆಲ್ಲಂ
ತಪಸ್ವಿಗಳಪವೊಲಾರ್ಹತ
ರೆ ಪಾರ್ವರೆನೆ ಸಂದರಾವ ಜಾತಿಯೊಳೊಗೆದುಂ || (೩೩)

ಪೊಲೆಯಂ ಶ್ರಾವಕನಾದೊಡೆ
ಪಲರೊಳವಂ ಮಾನ್ಯನಪ್ಪನೆಂದಡೆ ಮತ್ತಿಂ
ಕುಲಜಂ ಗಡ ಜೈನಂ ಗಡ
ಬೆಲೆಯುಂಟೆ ಪೊಂಗೆ ಕಂಪು ದೊರೆಕೊಂಡ ರೆಱಂ || (೪೧)

ಒಕ್ಕಲಿಗನಕ್ಕೆ ಪಂಚಮ
ನಕೆಮ ಸುದ್ರಷ್ಟಿಯಾಗೆ ಕಾಲಂ ಕರ್ಚ್ಚ
ಲ್ತಕ್ಕುದು ಜೈನಂಗೇಕೆನೆ
ಚಿಕ್ಕಯ್ಯಂ ಶೂದ್ರನೆಂದು ಕರ್ಚ್ಚರೆ ಕುಲಜರ್ || (೧೪೧)

ಒಕ್ಕಲಿಗಂ ಋಷಿಯಾದೊಡೆ
ಚಿಕ್ಕಯ್ಯ ಕಾಲನೆಂತು ಕರ್ಚುವರದಱೆಂ
ಒಕ್ಕಲಿಗಂ ಬ್ರತಿಯಾದಂ
ದಕ್ಕುಂ ಕರ್ಚಲ್ಕೆ ಮದಮನುಗಳಿಗೆ ಕುಲ್ಲಜ್ಞಂ || (೧೪೨)

ಕುಲಹೀನಂ ತೊನ್ನಂ ಕಿಸು
ಕುಳಿಗಂ ಪರದೇಶಿ ವಿತ್ತಹೀನಂ ಕುತ್ತಂ
ಗುಳಿಯಕ್ಕೆ ಜೈನನೆನೆ ಜಿನ
ನಿಳಯಕ್ಕೊಯ್ದೋವಿ ಲೇಸು ಮಾಳ್ಪನೆ ಜೈನಂ || (೩೧)

ಕುಲಹೀನಂಗೊಂದಂದಂ
ಕುಲಜಂಗೊಂದಂದಮಕ್ಕುಮಾಚಾರಮದೆಂ
ದೊಲವರಮಂ ಪೇಳ್ವುದು ನಿ
ರ್ಮಲಧರ್ಮಮದಲ್ಲ ಠಕ್ಕಮತಮೆಂಗಱೆವಂ || (೧೫)

ಪೊಲೆಯಂ ಪಡೆದ ಸವರ್ಣಂ
ಕಲುಂಬುಗೊಂಡಿರ್ದು ತಾಂಬ್ರಮಕ್ಕುಮೆ ಧರ್ಮಂ
ಕುಲಜಂಗಮಕುಲಜಂಗಂ
ಸಲವೇಳ್ಪುದು ಕುಲಮದೇವುದಱೆತಮೆ ಮುಖ್ಯಂ || (೧೫೧೦)

ಕ್ಷತ್ರಿಯನಾದಿಯಾಗಿ ಕಡೆಯೊಳ್ಪೊಲೆಯಂಬರವೆಲ್ಲ ಜಾತಿಗಂ
ಧಾತ್ರಿಯೊಳೆಲ್ಲಿ ನೋಡುವಡಮೇತೆಱದಿಂ ಕಱೆಯಿಲ್ಲ ಶುದ್ಧಚಾ
ರಿತ್ರಮದೊಂದೆ ಮಾರ್ಗಮದಱೆಂ ಜಿನಧರ್ಮಮೆ ಧರ್ಮಮೈಹಿಕಾ
ಮುತ್ರಿಕಸೌಖ್ಯಹೇತು ಭುವನತ್ರಯ ಸಾರಮದೆಂತುಮೆಲಿಯುಂ || (೧೫೧೧)

ಹಿಮಕರನ ಹಿಮಾಂಶುಗಳು
ತ್ತಮ ಜಾತಿಗಮಂತ್ಯಜಾತಿಗಂ ತಣ್ಬಿಂದಂ
ಸಮನನಪ್ಪ ತೆಱದಿನಱನುಂ
ಸಮನಾಗಲೆವೇಳ್ಯುಮಾವ ಜಾತಿಗಮೆಂತುಂ || (೧೫೧೨)

ಪಾಲುತ್ತಮಂಗಮಾ ಚಾಂ
ಡಾಲಂಗಂ ಸೀಯನಪ್ಪ ತೆಱನಿಂದಱನುಂ
ಮೇಲಪ್ಪ ಜಾತಿಗಂ ಚಾಂ
ಡಾಲಂಗಮದೊಂದೆಯಂದಮಾಗಲೆ ವೇಳ್ಕುಂ ||(೧೫೧೩)

ಬ್ರಹ್ಮಶಿವಕವಿಯ ಪ್ರಕಾರ ಜೈನತ್ವದಲ್ಲಿ ಮೇಲರಿಮೆ ಕೀಳರಿಮೆಗಳನ್ನು ಕಿತ್ತೊಗೆಯುಂಥ ನೆಲೆಯ ಗುಣಾತ್ಮಕ ಸ್ವೀಕರಣವಿದೆ. ಬ್ರತಮುಂ ಶುಚಿತ್ವಮುಂ ಸುಚರಿತಮುಂ ಪೊಲೆಯಂಗೆ ಸಲ್ಕುಂ ಎಂದೂ ಚರಿತ್ರಹೀನ ರಾಜನ ಸುತನಪ್ಪುದಕಿಂತ ವ್ರತನಿರತ ಪೊಲೆಯನ ಸುತನಪ್ಪುದು ಪುಣ್ಯವೆಂದೂ ಬ್ರಹ್ಮಶಿವ ನೇರ ನುಡಿಗಳಲ್ಲಿ ಸಾರಿದ್ದಾನೆ, ಜಾತಿಯಿಂದ ಬಹಿಷ್ಕೃತರೆನಿಸಿದವರನ್ನು, ಅಸ್ಪೃಶ್ಯರನ್ನು, ಶೂದ್ರರನ್ನು ತನ್ನ ಸಮಾಜದವರೆಂದು ಹೇಳಿಕೊಳ್ಳಲು ಮುಜುಗರ ಪಡಲಿಲ್ಲ, ಬದಲಿಗೆ ಹೆಮ್ಮೆ ಪಟ್ಟಿದ್ದಾನೆ. ಇಂದಿನ ಯುಗ ಮಾನದ ಚಿಂತನೆಗಳಿಗೆ ತಾಳೆಯಾಗುವ ಬ್ರಹ್ಮಶಿವಕವಿಯ ವೈಚಾರಿಕ ಪ್ರಖರತೆ, ವೈಜ್ಞಾನಿಕ ಖಚಿತತೆ ಅವನ ಪದ್ಯಗಳಲ್ಲಿ ಹರಳುಗೊಂಡಿವೆ. ಎಂಟನೂರು ವರ್ಷಗಳ ಹಿಂದೆ ಧಾರ್ಮಿಕ ವಲಯದ ನಟ್ಟನಡುವೆ ನಿಂತು ಮುಕ್ತ ಸಂವಾದಕ್ಕಿಳಿದ ಬ್ರಹ್ಮಶಿವ ಕವಿ ಅಧುನಿಕ ಸಂವೇದನೆಗಳಿಗೆ ಮಿಡಿಯುತ್ತಾನೆ, ಪ್ರಸ್ತುತನಾಗುತ್ತಾನೆ.

ಬ್ರಹ್ಮಶಿವಕವಿಯ ಕಾವ್ಯ ಯಾಪನೀಯದ ವ್ಯಾಖ್ಯಾನ ಗ್ರಂಥ. ಆತ ಯಾಪನೀಯದ ವಕ್ತಾರನಾಗಿ ಆ ಪಂಥದ ಕಡೆಯ ಕಾಲದ ಘಟ್ಟದಲ್ಲಿ ನಿಂತು ಕೃತಿ ರಚನೆ ಮಾಡಿದವನು. ಪರಶಾಸನೇ ಮೋಕ್ಷಃ ಎಂಬುದರ ಸಮರ್ಥನೆ ಕುರಿತೇ ಸಮಯ ಪರೀಕ್ಷೆಯನ್ನು ರಚಿಸಿದ್ದಾನೆ. ಸಮಾಜದ ಕೆಳವರ್ಗದ ನಾಲಗೆಯಾಗಿ ಹುಟ್ಟಿದ ಕಾವ್ಯ ಸಮಯ ಪರೀಕ್ಷೆ. ಪಂಥ ಯಾಪನೀಯ. ಬ್ರಹ್ಮಶಿವಕವಿ, ಹಿಂಡನಗಲಿದ ಒಂಟಿ ಸಲಗನಂತೆ, ಕನ್ನಡ ಕವಿಕಾವ್ಯ ಪರಂಪರೆಯಲ್ಲಿ ಮಿಂಚುವುದಕ್ಕೆ ಹಿನ್ನೆಲೆಯಾಗಿರುವ ಈ ಚಾರಿತ್ರಿಕ ಕಾರಣಗಳನ್ನು ಅರಿಯಬೇಕಾಗುತ್ತದೆ.

ಇಂದ್ರನಂದಿ ಆಚಾರ್ಯ (ಕ್ರಿ. ಶ. ೯೩೦), ಶ್ರುತ ಸಾಗರ (ಕ್ರಿ. ಶ. ೧೬) ಮೊದಲಾದ ತೀರ ನಿಷ್ಠಾವಂತರಾದ ಒಬ್ಬಿಬ್ಬರು ಆಚಾರ್ಯರು ಯಾಪನೀಯ ಸಂಘವನ್ನು ಜೈನಾಭಾಸ ಎಂದು ಕರೆದಿರುವುದು ನಿಜ; ಶ್ರುತಸಾಗರನಂತೂ ಅಸಹಿಷ್ಣುತೆಯಿಂದ ಮಾತನಾಡಿರುವುದೂ ದಿಟ. ಆದರೆ ಹಾಗೆಂದು ಯಾಪನೀಯ ಸಂಘವನ್ನು ಇಡೀ ಶ್ವೇತಾಂಬರ – ದಿಗಂಬರ ಸಂಘಗಗಳವರು ದೂಷಿಸಿದರೆಂದು ಸಾರಾಸಗಟು ತೀರ್ಮಾನಿಸಬಾರದು ಯಾಪನೀಯರು ಒಂದು ಬೇರೆ ಸಂಘದವರು ಎಂಬ ಭೇದವಿತ್ತೇ ಹೊರತು ಅಮಾನ್ಯತೆ, ಉಪೇಕ್ಷೆ, ದ್ವೇಷ ತೀವ್ರತರವಾಗಿ ಇರಲಿಲ್ಲ. ಯಾಪನೀಯವು ದೂಷ್ಯವೆನಿಸಿರಲಿಲ್ಲ. ದಿಗಂಬರೂ ತಮಗೆ ಹತ್ತಿರವೆಂದು ತಿಳಿದಿದ್ದರು, ಶ್ವೇತಾಂಬರರೂ ಯಾಪನೀಯವು ಸಮೀಪ ಶಾಖೆಯೆಂದು ಭಾವಿಸಿದ್ದರು. ಇಂದ್ರನಂದಿಯು ನೀತಿ ಸಾರದಲ್ಲಿ ಕೊಟ್ಟ ‘ಗೋಪುಚ್ಛಿಕಾ, ಶ್ವೇತಾಂಬರ, ದ್ರಾವಿಡ, ಯಾಪನೀಯ, ನಿಃಪಿಂಚಕ’ ಎಂಬ ಐದು ಶಾಖೆಗಳ ಪಟ್ಟಿಯನ್ನು ಇಡೀ ಚತುಸ್ಸಂಘ ಕಡೆಗಣಿಸಲಿಲ್ಲ. ಅಂಥದೊಂದು ಗುಮಾನೀಯ ಹೇಳಿಕೆ ಹಾಗೂ ಭಾವನೆಯು ಜೈನ ಸಮಾಜದಲ್ಲಿ ಪ್ರಚಲಿತವಾಗಿತ್ತು – ಎಂದಷ್ಟೇ ಇಂದನಂದಿ ಆಚಾರ್ಯನ ಹೇಳಿಯ ಸಾರಾಂಶ. ಉಳಿದಂತೆ ಆ ಎಲ್ಲ ಬೇರೆ ಬೇರೆ ಸಂಘ ಸಮುದಾಯದ ವಿಚಾರದಲ್ಲಿ ಮಹಾನ್ ಆಚಾರ್ಯರು ಉದಾರವಾಗಿಯೇ ಕಂಡಿದ್ದಾರೆ. ಪರಸ್ಪರ ಪಂಥಚಾರಗಳನ್ನು ಮನ್ನಿಸಿದ್ದಾರೆ, ಗೌರವಿಸಿದ್ದಾರೆ.

ಯಾಪನೀಯ ಸಿದ್ಧಾಂತ ಪರಂಪರೆಯ ಪ್ರತಿಧ್ವನಿ ಸಂಸ್ಕೃತ, ಪ್ರಾಕೃತ, ಕನ್ನಡ ಸಾಹಿತ್ಯದಲ್ಲಿಯೂ ಅನುರಣಿತವಾಗಿದೆ. ಶಿವಕೋಟಿ (ಶಿವಾರ್ಯ: ಕ್ರಿ. ಶ. ೧ – ೨ನೆಯ ಶ,), ಆಚಾರ್ಯ ಉಮಾಸ್ವಾಮಿ (ಕ್ರಿ. ಶ. ೩೫೦ – ೭೫), ನಾಗಕುಲವಿಮಲ ಸೂರಿ (ಕಿ. ಶ. ೪೭೩), ಸಿದ್ಧಸೇನ ದಿವಾಕರ (ಕ್ರಿ. ಶ. ೪೦೦ – ೪೪೪), ಜಟಾಸಿಂಹನಂದಿ (ಕ್ರಿ. ಶ. ಏಳನೆಯ ಶ.), ಅಪಭ್ರಂಶಕವಿ ಸ್ವಯಂಭು (ಕ್ರಿ. ಶ. ಏಳನೆಯ ಶ.), ಪ್ರಸಿದ್ಧ ವೈಯಾಕರಣಿ ಶಾಕಟಾಯನ (ಪಾಲ್ಯಕೀರ್ತಿ, ಕ್ರಿ. ಶ. ೮೪೦), ಅಪರಾಜಿತಸೂರಿ (ಸು ೯ – ೧೦ ಶ.), ಭ್ರಾಜಿಷ್ಣು (ಸು. ಕ್ರಿ. ಶ. ೮೦೦) – ಮೊದಲಾದ ಪ್ರಮುಖ ಲೇಖಕರು ಯಾಪನೀಯ ಸಂಘ ಸಿದ್ಧಾಂತಕ್ಕೆ ಸ್ಪಂದಿಸಿದರು. ಕ್ರಮವಾಗಿ ಇವರ ಕೃತಿಗಳಾದ ಆರಾಧನಾ (ಮೂಲಾರಾಧಾನಾ, ಬೃಹದಾರಾಧನಾ, ಭಗವತೀ ಆರಾಧನಾ), ತತ್ವಾರ್ಥ ಸೂತ್ರ, ಪವುಮಚರಿಯ (ಪದ್ಮಚರಿತ), ನ್ಯಾಯಾವತಾರ, ವರಾಂಗ ಚರಿತ, ರಿಟ್ಟಣೇಮಿಚರಿಉ (ಹರಿವಂಶ), ಶಾಕಟಾಯನ ವ್ಯಾಕರಣ, ವಿಮಲೋದಯ ಟೀಕಾ, ಆರಾಧನಾ ಕರ್ನಾಟಕಾ ಟೀಕಾ) (ವಡ್ಡಾರಾಧನೆ ) – ಇವುಗಳೆಲ್ಲಲ್ಲ ಯಾಪನೀಯ ತತ್ವಗಳು ಹೊಳಲು ಗೊಡುತ್ತವೆ.

ಯಾಪನೀಯ ಆಚಾರ್ಯ ಪರಂಪರೆಯ ದೀರ್ಗತೆ, ಸಾತತ್ಯ, ಉನ್ನತಿಕೆ ಮತ್ತು ಪಂಡಿತಿಕೆ ಅಸಾಧಾರಣವಾದುದು ಎಂಬ ಅಂಶವನ್ನು ಹೇಳಿದ್ದಾಗಿದೆ. ಶ್ರೀ ಶ್ರುತಕೇವಲಿದೇಶೀಯಾಚಾರ್ಯಸ್ಯ ಶಾಕಟಾಯನಸ್ಯ ಕೃತೌ ಶಬ್ದಾನು ಶಾಸನೇ – ಎಂಬುದಾಗಿ ಶಾಕಟಾಯನನು ತನ್ನ ವ್ಯಾಕರಣ ರಚನೆಯಲ್ಲಿ ತಿಳಿಸಿದ್ದಾನೆ. ಈ ಅಂಶವನ್ನು ಪ್ರಸ್ತಾಪಿಸಿ ವಿದ್ವಾಂಸರು, ಇದು ಯಾಪನೀಯ ಆಚಾರ್ಯರು ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದ ರೀತಿ ಇರಬೇಕೆಂದು ಸೂಚಿಸಿದ್ದಾರೆ. ಏಕೆಂದರೆ ತತ್ವಾರ್ಥ ಸೂತ್ರ, ಕರ್ತಾರರಾದ ಉಮಾಸ್ವಾತಿ ಮುನೀಶ್ವರರು ಸಹ ‘ಶ್ರುತಕೇವಲಿ ದೇಶೀಯಂ ವನ್ದೇಹಂ ಗುಣಮಂದಿರಮ್‌’ ಎಂದು ಹೇಳಿಕೊಂಡಿದ್ದಾರೆ; ಹರಿಭದ್ರಸೂರಿಯ ಸಿದ್ಧಸೇನ ದಿವಾಕರನನ್ನು ಶ್ರುತಕೇವಲಿಯೆಂದು ಕರೆದಿರುವುದನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಯಾಪನೀಯರು ದಿಗಂಬರ ಅವಿಭಾಜ್ಯ ಅಂಗವಾಗಲು ಅಪೇಕ್ಷಿಸಿದರು. ಅವರ ಶಾಸನಗಳೂ ಸಹ ದಿಗಂಬರ ಜೈನ ಅಮ್ನಾಯದ ಶಾಸನಗಳಲ್ಲಿ ಇರುವ ಜಿನಸ್ತುತಿ ಶ್ಲೋಕದಿಂದಲೇ ಪ್ರಾರಂಭವಾಗುವುದನ್ನು ವಿಶೇಷವಾಗಿ ಗಮನಿಸಬೇಕು:

ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಛನಂ
ಜೀಯತ್ತ್ರೈಳೋಕ್ಯನಾಥಸ್ಯಶಾಸನಂ ಜಿನ ಶಾಸನಂ||
(
ಜಿನಸಮಯ) ಸಮುದ್ರಾಧಿಪ ವರ್ದ್ಧನಮಾನ ಜಿನಶಾಸನ
ಸಮ್ಪದ್ರುಚಿರ ಯಾಪನೀಯ ಸುರದ್ರುಮ (ವಲ್ಲೀ) ಕುಮುದಿಗಣ ||
ಭದ್ರಮ್ಭೂಯಾಜ್ಜಿನ ಶಾಸನಂ||

(ಸೌಇಇ. ೧೧ – ೧, ೭೮.೧೦೪೫. ಮುಗದ; ಅದೇ, ೧೭೭. ೧೧೨೫; ಅದೇ, ಸಂಖ್ಯೆ ೬೫. ೧೦೨೯, ಹೊಸೂರು, ಪು. ೫೫. ಇತ್ಯಾದಿ). ಯಾಪನೀಯ ಸಂಘದ ಮುಹಿಮೆಗೆ ಮೀಸಲಾದ ಶಾಸನವಾದರೂ ದಿಗಂಬರ ಪಂಥದ ಮಹಾನ್ ಆಚಾರ್ಯರಾದ ಅಕಳಂಕಾಚಾರ್ಯರ ‘ಪ್ರಮಾಣ ಸಂಗ್ರಹ’ದ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭವಾಗಿದೆ. ಯಾಪನೀಯ ಸಂಘವೂ ಉಳಿದೆಲ್ಲ ದಿಗಂಬರ ಸಂಘದ ಗಣಗಚ್ಛಗಳ ಹಾಗೆಯೇ ಕೊಂಡಕುಂದಾನ್ವಯಕ್ಕೂ ಮೂಲಸಂಘಕ್ಕೂ ದೇಸಿಗಣಕ್ಕೂ ತಳಕು ಹಾಕಿಕೊಂಡೇ ಬೆಳೆದ ಬಂದಿದೆ.

ಯಾಪನೀಯ ಸಂಘದ ಆಚಾರ್ಯರಲ್ಲಿ ಚಕ್ರವರ್ತಿ ಪೂಜಿತರೂ ನಾನಾ ನೃಪನರೇಂದ್ರಾರ್ಚಿತರೂ ಇದ್ದರು. ಅದಕ್ಕೆ ರಾಜಾಶ್ರಯ, ರಾಜಕೀಯ ಕುಮ್ಮಕ್ಕು ಯಥೇಚ್ಛವಾಗಿತ್ತು. ಚೈನ ಅಜೈನ ಸಮಾಜದ ಬೆಂಬಲವೂ ಮನ್ನಣೆಯೂ ಅಧಿಕಾಧಿಕ ಪ್ರಮಾಣದಲ್ಲಿ ಸಿಕ್ಕಿತು. ಕಣ್ಣು ಕೋರೈಸುವಂಥ ಅದರ ವೈಭವ ಕೆಲವರಲ್ಲಿ ಅಸಹನೆಗೆ ಕಾರಣವಾಯಿತು. ಯಾಪನೀಯ ಜೈನಾಚಾರ್ಯರ ಚರಣಗಳನ್ನು ಮುಟ್ಟಿ ರಾಜರು ನತಮಸ್ತಕರಾಗಿ ಪೊಡೆಮಡುತ್ತಿದ್ದುದು ಶಾಸನೋಕ್ತವಾಗಿದೆ. ಯಾಪನೀಯ ಸಂಘದ ಜಯಕೀರ್ತಿದೇವ ಯತಿಯ ಮುಖ್ಯ ಶಿಷ್ಯನಾದ ನಾಗಚಂದ್ರನು ಸಿದ್ಧಾಂತ ಶಬ್ದಾಗಮ ತತ್ವವೇದಿಯಾಗಿದ್ದನು. ಈತನು ರಾಜೇಂದ್ರ ಚೂಡಾಮಣಿ ಚುಂಬಿತ ಅಂಘ್ರಿಯಾಗಿದ್ದನು (ಬಿ.ಕೆ. ೧೯೨೬ – ೨೭ ಸಂಖ್ಯೆ. ೧೧೦ ಕ್ರಿ.ಶ. ೧೦೨೮ – ೨೯ ಹೊಸೂರು).

ಹಿಂದಿನ ಪುಟಗಳಲ್ಲಿ ತಿಳಿಸಿರುವಂತೆ, ಕದಂಬರ ಗಂಗರ ಬಾದಾಮಿ ಚಾಳುಕ್ಯರ ರಾಷ್ಟ್ರಕೂಟರ ಕಾಲದಿಂದ ಕಲ್ಯಾಣ ಚಾಳುಕ್ಯರ ಕಾಲದವರೆಗಿನ ಸಹಸ್ರಮಾನವು ಯಪನೀಯರ ಸುವರ್ಣಯುಗ. ಆ ಹೊಂಗಾಲವು ತನ್ನ ಏಳಿಗೆಯ ತುತ್ತ ತುದಿಯನ್ನು ಮುಟ್ಟಿದ್ದು ಕಲ್ಯಾಣಚಾಳುಕ್ಯರ ಆಡಳಿತದಲ್ಲಿ.

ಕರ್ನಾಟಕ ಮತ್ತು ಯಾಪನೀಯ ಜೋಡಿಯಾಗಿ ಕೂಡಿಕೊಂಡಿವೆ. ಈ ಬೆಸುಗೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಯಾಪನೀಯ ಸಂಘದ ಹರಹು, ಆಕಾರ, ಒಳಪಂಗಡಗಳು, ಗಣಗಚ್ಛಗಳು, ಗುರುಶಿಷ್ಯರು, ಶಾಸನ ಮತ್ತು ಸಾಹಿತ್ಯ ಉಲ್ಲೇಖಗಳು – ಇವನ್ನು ಕುರಿತು ಅಲ್ಪ ಸ್ವಲ್ಪ ಅಧ್ಯಯನ ನಡೆದಿದೆ. ಅಂತರಾಷ್ಟ್ರೀಯ ಖ್ಯಾತಿವೆತ್ತ ಸೂರಿಶ್ರೇಷ್ಠ ಆದಿನಾಥ ನೇಮೀನಾಥ ಉಪಾಧ್ಯೆ, ಪಂಡಿತ ನಾಥೂರಾಮ ಪ್ರೇಮಿ ಮೊದಲಾದ ಕೆಲವು ಬಲ್ಲಿದರು ಈ ಪಂಥದ ಮೂಲ ಚೂಲಗಳ ಚರಿತ್ರೆ, ಪ್ರಭಾವವನ್ನು ಪ್ರಸ್ತಾಪಿಸಿದ್ದಾರೆ, ಇಷ್ಟಾಗಿಯೂ ಯಾಪನೀಯದ ಸಮಗ್ರ ಇತಿಹಾಸ ಇನ್ನೂ ಬೆಳಕಿಗೆ ಬರಬೇಕಾದ್ದಿದೆ. ಯಾಕೆಂದರೆ ಯಾಪನೀಯ ಸಂಘದ ಬಗೆಗೆ ತಪ್ಪು ತಿಳಿವಳಿಕೆಯೂ ಚಲಾವಣೆಯಲ್ಲಿದೆ. ಅದಕ್ಕೆ ಅನಗತ್ಯವಾಗಿ ಅಂಟಿದ ಅಪಪ್ರಥೆಯನ್ನು ಅಳಿಸಿ, ಸರಿಯಾದ ಸ್ಪಷ್ಟ ಚಿತ್ರವನ್ನು ಅರಿತುಕೊಳ್ಳುವ ಅಗತ್ಯವಿದೆ.

ಯಾಪನೀಯರ ಧವಳ ಚಿತ್ರಕ್ಕೆ ಮಸಿ ಬಳಿಯಿಲ್ಲಿಲ್ಲವಾದರೂ ಕಪ್ಪು ಚುಕ್ಕೆಯನ್ನು ಮೊದಲು ಇಟ್ಟವನು ಇಂದ್ರನಂದಿ ಆಚಾರ್ಯ (ಕ್ರಿ.ಶ. ೯೩೦). ಆತ ಆಯ್ದ ಜೈನ ಪಂಥಗಳನ್ನು ಜೈನಾಭಾಸವೆಂದು ಅಭಿಪ್ರಾಯ ವ್ಯಕ್ತಪಡಿಸಲು ಕಾರಣಗಲ್ಲಿದ್ದುವು. ಮುಖ್ಯವಾಗಿ ಜಾತಿ ಉಪಜಾತಿ ಕೆಳಜಾತಿ ಗಂಡು ಹೆಣ್ಣು ಎಂಬಿತ್ಯಾದಿ ತಾರತಮ್ಯ ಇರದ ನೆಲೆಯಲ್ಲಿ ಕ್ರಿಯಾಶೀಲವಾಗಿ ಜನಾನುರಾಗ ಗಳಿಸಿದ್ದ ಒಂದು ಪಂಥವನ್ನು ಕುರಿತು ಸಮಕಾಲೀನವಾದ ಮತ್ತೊಂದು ಪಂಥ ಕೀಟಲೆಯ ಮಾತು ಹೇಳುವುದು ಅನಿರೀಕ್ಷಿತವೇನಲ್ಲ. ಆದರೆ ಈ ಹೇಳಿಕೆಯನ್ನು ಅನಗತ್ಯವಾಗಿ ಲಂಬಿಸಿ ಅಪಾರ್ಥಗಳ ಅಪಾಯಕ್ಕೆ ತಳ್ಳಬೇಕಾದ ಪ್ರಮೇಯವಿಲ್ಲ.

ಯಾಪನೀಯ ಸಂಘವು ಜೈನಧರ್ಮದ ಎಲ್ಲ ಪಂಗಡಗಳಿಂದಲೂ ಮಾನ್ಯವಾಗಿತ್ತು. ಸೌಹಾರ್ದವೂ ಇತ್ತು. ಕರ್ನಾಟಕದಲ್ಲಿ ಕ್ರಿ.ಶ. ಎರಡರಿಂದ ಹನ್ನೆರಡನೆಯ ಶತಮಾನದ ಎಂಟನೆಯ ದಶಕದವರೆಗೆ ಪ್ರಬಲವಾಗಿದ್ದ ಯಾಪನೀಯ ಸಂಘವನ್ನು ರಾಜರೂ ಪ್ರಜೆಗಳೂ ಪುರಸ್ಕರಿಸಿ ಪೋಷಿಸಿದರು. ಅದರ ಉದಾರನೀತಿಯು ಒಟ್ಟು ಜೀವಪರವಾಗಿ ಮಿಡಿದ ಶಿಷ್ಟ ಸಂಪ್ರದಾಯ. ಸಾಂಪ್ರದಾಯಿಕ ಸದ್ಭಾವದ ಜೀವಧ್ವನಿಯಾಗಿ, ಸಮಾಜ ಮುಖಿಯಾಗಿ ಹೊರಳುತ್ತ, ಧರ್ಮ ಸಾಮರಸ್ಯದ ಸುವರ್ಣ ಮಾಧ್ಯಮವಾಗಿ ಯಾಪನೀಯ ಮಾಡಿದ ಸಾಧನೆ, ಪಡದೆ ಸಿದ್ಧಿ ಶ್ಲಾಘನೀಯವಾಗಿದೆ. ಈ ಪಂಥ ಉತ್ತರದತ್ತ ದಾಂಗುಡಿಯಿಟ್ಟು ಹಬ್ಬದೆ ಹೋದದ್ದು ಸೋಜಿಗವೇನಲ್ಲ. ಅಲ್ಲಿ ಇದರ ಅವಶ್ಯಕತೆ ಇರಲಿಲ್ಲ. ಉತ್ತರದಲ್ಲಿ ಶ್ವೇತಾಂಬರ ಪಂಥ ಈ ಬಗೆಯ ಚಟುವಟಿಕೆ ನಡೆಸಿತ್ತು. ಅದರಿಂದ ಯಾಪನೀಯ ದಕ್ಷಿಣದಲ್ಲಿ ಹುಟ್ಟಿ, ಬೆಳೆದು, ಕಡೆಗೆ ಇಲ್ಲಿಯೇ ಕೊನೆಯುಸಿರೆಳೆಯಿತು.

ಹೀಗಾಗಿ, ಯಾಪನೀಯವು ಕನ್ನಡ ನಾಡಿನ ಧಾರ್ಮಿಕ ಕೊಡುಗೆ. ಕನ್ನಡ ನಾಡಿನ ಉದ್ದಗಲಗಳಲ್ಲಿ ಯಾಪನೀಯ ಹೆಜ್ಜೆ ಗುರುತುಗಳು ದಟ್ಟವಾಗಿವೆ. ಕರ್ನಾಟಕ ಆದಿಕಾಲದಿಂದಲೂ ದಿಗಂಬರ ಪಂಥದ ಆಡುಂಬೊಲ. ದಿಗಂಬರ ಪಂಥದ ವಿಜೃಂಭಣೆಯಲ್ಲಿ ಮೊದಲು ಕರಗಿ ಕಣ್ಮರೆಯಾದದ್ದು ಶ್ವೇತಾಂಬರ ಶಾಖೆ. ಅನಂತರ ದಿಗಂಬರಾಧಿಕ್ಯದಲ್ಲಿ ವಿರಸಕ್ಕಿಳಿಯದೆ ಸ್ವಾಂತಸ್ಸುಖಾಯಕ್ಕಾಗಿ ವಿಲೀನವಾದದ್ದು ಯಾಪನೀಯ. ಸುಮಾರು ಒಂದು ಸಾವಿರ ವರ್ಷಗಳವರೆಗೆ ಬೀಳೇಳುಗಳನ್ನು ತಾಳಿಕೊಂಡು ಬಂದಿದ್ದ ಯಾಪನೀಯ ಸಂಘ ಕಡೆಗೆ ದಿಗಂಬರ ಮುಖ್ಯವಾಹಿನಿಯಲ್ಲಿ ಕೂಡಲಸಂಗಮಗೊಂಡಿತು. ಈ ಐಕ್ಯ ಗಾನವು ಚರಿತ್ರೆಯ ಅನಿವಾರ್ಯತೆ, ಹೇಗೆ ತನ್ನವರು ಪರರು ಎನ್ನದೆ ಎಲ್ಲವನ್ನೂ ನುಂಗಿ ನೊಣೆಯುತ್ತ ಜೀರ್ಣಿಸಿಕೊಂಡು ಗುಟುರು ಹಾಕುತ್ತದೆಂಬುದಕ್ಕೆ ಸಂಕೇತ.

ಹರ್ಮನ್‌ ಹಾಕೋಬಿ, ಬೂಮ್‌ ಪೀಲ್ಡ್‌, ಜಿಮ್ಮರ್‌, ಷುಬ್ರಿಂಗ್‌ ಮೊದಲಾದ ಪಶ್ಚಿಮದ ಜೈನ ಶಾಸ್ತ್ರಕಾರರು ವಿಶೇಷವಾಗಿ ಶ್ವೇತಾಂಬರ ಸೂತ್ರ ಗ್ರಂಥಗಳನ್ನು ಅವಲಂಬಿಸಿ ಗ್ರಂಥರಚಿಸಿದ್ದಾರೆ. ಅದರಿಂದ ಯಾಪನೀಯ ಮತ್ತು ದಿಗಂಬರ ಚಿಂತನೆಗಳ ಪರಿಚಯ ತೆಳ್ಳಗಾಗಿದೆ. ಆದರೂ ಶ್ವೇತಾಂಬರ ಪರಂಪರೆಯನ್ನೂ ಯಾಪನೀಯ ಗರ್ಭಿಕರಿಸಿತ್ತೆಂಬ ಕಾರಣಕ್ಕಾಗಿ ಪಾಶ್ಚಿಮಾತ್ಯರ ಉಲ್ಲೇಖಗಳನ್ನು ಅವಶ್ಯ ಗಮನಿಸಬೇಕು. ವಾಸ್ತವವಾಗಿ ಈ ಶ್ವೇತಾಂಬರ – ದಿಗಂಬರ ಎಂಬ ಎರಡೂ ಶಾಖೆಗಳ ಚಿಂತನಧಾರೆಯ ಸಮ್ಯಕ್‌ ಜ್ಞಾನವಿದ್ದರೇನೆ ಈ ಶ್ರವಣ ಸಂಸ್ಕೃತಿಯ ಸರಿಯಾದ ಅರಿವು ಸಾದ್ಯವಾಗುವುದು. ಈ ಶ್ವೇತಾಂಬರ – ದಿಗಂಬರ ಪಂಥಗಳ ಸೈದ್ಧಾಂತಿಕತೆಯಲ್ಲಿ ಒಂದು ಸಮನ್ವಯವನ್ನು ಸಾಧಿಸುವ ಪ್ರಾಂಜಲವಾದ ಪ್ರಯತ್ನವನ್ನು ಮಾಡಿದ ಏಕಮೇವಾದ್ವಿತೀಯವಾದ ಪಂಥವೆಂದರೆ ಅದು ಯಾಪನೀಯವೆ. ಇಂಥ ತಾತ್ವಿಕ ಹೊಂದಾಣಿಕೆಯನ್ನು ಮಾಡುವ ಮಹತ್ವದ ಹಾಗೂ ಮುಂಗಾಣ್ಕೆಯ ಅರ್ಥಪೂರ್ಣವಾದ ಪ್ರಯತ್ನಕ್ಕೆ ಮತ್ತೆ ಯಾವ ಆಚಾರ್ಯರು ತೊಡಗಲಿಲ್ಲ.

ಯಾಪನೀಯರು ಶ್ವೇತಾಂಬರ ಆಗಮನಗಳನ್ನು ಒಪ್ಪಿದರು. ಶ್ವೇತಾಂಬರ ಪಂಥವಷ್ಟೇ ಅಂಗೀಕರಿಸಿರುವ ಸಂಗತಿಯಾದ ಸ್ತ್ರೀ ಮುಕ್ತಿ ಕೇವಲಿ ಭುಕ್ತಿಯನ್ನು ಯಾಪನೀಯರು ಅನುಮೋದಿಸಿದರೆಂದು ವಿವರಿಸಿದ್ದಾಗಿದೆ (ಶಾಕಟಾಯನಃ ಸ್ತ್ರೀ ನಿರ್ವಾಣ – ಕೇವಲಿ ಭುಕ್ತಿ ಪ್ರಕರಣೇ). ಯಾಪನೀಯರು ಸೈದ್ಧಾಂತಿಕ ಪ್ರಣಾಲಿಯಲ್ಲಿ ಶ್ವೇತಾಂಬರ ಪರವಾಗಿ ಆರಂಭಗೊಂಡರೂ ಅಂತಿಮವಾಗಿ ದಿಗಂಬರರಲ್ಲಿ ಸೇರಿಹೊದರೆಂಬುದು ಸ್ವಾರಸ್ಯವಾಗಿದೆ. ಇದು ಅವರಿಗೆ ಅನಿವಾರ್ಯವಾಗಿತ್ತೆಂದು ಹೇಳಿದ್ದಾಗಿದೆ. ಯಾಪನೀಯರ ಸುತ್ತಮುತ್ತ ಇದ್ದವರು ದಿಗಂಬರರು ಮಾತ್ರ. ಒಂದು ವೇಳೆ ಯಾಪನೀಯರು ಉತ್ತರ ಭಾರತದಲ್ಲಿ, ಶ್ವೇತಾಂಬರ ಪರಿಸರದಲ್ಲಿ ಇರಬೇಕಾದ ಸಂದರ್ಭ ಒದಗಿಬಂದಿದ್ದರೆ ಆಗ ಯಾಪನೀಯರು ಶ್ವೇತಾಂಬರ ಸಂಘದಲ್ಲಿ ವಿಲೀನವಾಗುತ್ತಿದ್ದರು. ಒಂದು ಸಾರ್ವತ್ರಿಕ ಸ್ವರೂಪದ ವಿಶ್ವಧರ್ಮವಾಗಿ ವಿಕಸನಗೊಳ್ಳುವತ್ತ ಮುಂದೆಸಾಗಿದ್ದ ಯಾಪನೀಯರ ಪ್ರಶಂಸನೀಯ ಪ್ರಯತ್ನ ಅವರೊಂದಿಗೇ ನಿರ್ಗಮಿಸಿತು.