ಕುಂದಕುಂದ ಆಚಾರ್ಯರ ತರುವಾಯ ಬಂದ ಆರ್ಹದ್ವಲಿ ಆಚಾರ್ಯರು ನಾಲ್ಕು ಪ್ರಮುಖ ಸಂಘಗಳನ್ನು ಮಾಡಿದರು : ನಂದಿ ಸಂಘ, ದೇವ ಸಂಘ, ಸೇನ ಸಂಘ ಮತ್ತು ಸಿಂಹ ಸಂಘ. ಇವೆಲ್ಲವೂ ಮೂಲ ಸಂಘದ ಕವಲುಗಳು. ಆರಂಭದಲ್ಲಿ ಟಿಸಿಲೊಡೆದು ಬೆಳೆದ ಈ ನಾಲ್ಕು ಕೊಂಬೆಗಳಲ್ಲದೆ ಇನ್ನಿತರ ಸಂಘ, ಬಳಿ, ಗಚ್ಛಗಳೂ ರೆಂಬೆಗಾಗಿ ಕಾಣಿಸಿಕೊಂಡವು. ಅವುಗಳಲ್ಲಿ ಪ್ರಬಲತರವಾಗಿ, ತೋರವಾಗಿ ಬೆಳೆದು ಬಂದದ್ದು ಯಾಪನೀಯ ಸಂಘ. ಇದು ಎಷ್ಟರಮಟ್ಟಿಗೆ ಹಬ್ಬಿತೆಂದರೆ, ಒಂದು ಹಂತದಲ್ಲಿ ಯಾಪನೀಯ ಸಂಘವೇ ಒಂದು ಮೂಲ ಸಂಘವೆಂದು ಪರಿಗಣಿತವಾಗಿ, ಅದರೊಳಗೆ ಕೂಡ ಬೇರೆ ಗಣಗಳೂ ಗಚ್ಛಗಳೂ ಉಂಟಾದುವು.

ಜೈನ ಧರ್ಮದಲ್ಲಿ ಸಂಘ (ಮೂಲ ಸಂಘ, ದ್ರಾವಿಡ ಸಂಘ, ನಂದಿ ಸಂಘ, ಯಾಪನೀಯ ಸಂಘ), ಗಣ(ದೇಶಿಕ ಗಣ, ಸೇನಗಣ, ಕಾಣೂರು ಗಣ), ಗಚ್ಛ (ಪುಸ್ತಕ ಗಚ್ಛ, ಮೇಷ ಪಾಷಾಣಗಚ್ಛ, ಸ್ವರ್ಣ ಪಾಷಾಣಗಚ್ಛ,), ಅನ್ವಯ (ಕುಂದ ಕುಂದಾನ್ವಯ, ಮೈಳಾಪಾನ್ವಯ, ಚಂದ್ರಿಕಾವಾಟ ಅನ್ವಯ), ಬಳಿ (ಇಂಗಳೇಶ್ವರ ಬಳಿ, ಪನಸೋಗೆ ಬಳಿ), ಗಣ (ಕಂಡೂರು ಗಣ, ಕಾರೇಯ ಗಣ) ಗಚ್ಛ (ಪೊಗರಿಗಚ್ಛ) – ಮೊದಲಾದ ಪಾರಿಭಾಷಿಕ ಶಬ್ಧಗಳಿಗೆ ಸೂತ್ರಪ್ರಾಯವಾದ ವಿವವರಣೆಗಳುಂಟು. ಮೂವರು ಮುನಿಗಳ ಗುಂಪಿಗೆ ಗಣವೆಂದೂ ಏಳುಜನ ಮುನಿಗಳ ಸಂಚಾರಿ ತಂಡಕ್ಕೆ ಗಚ್ಛವೆಂದೂ ಮುನಿಸಮುದಾಯದ ಒಕ್ಕೂಟಕ್ಕೆ ಸಂಘವೆಂದೂ ಹೇಳಿದೆ.

ಗಚ್ಛವು ಮುನಿಯೊಬ್ಬನ ಮೇಲಾಳಿಕೆಯಲ್ಲಿ ಪರ್ಯಟನ ಕೈಗೊಳ್ಳುತ್ತಿದ್ದ ಮುನಿಗಳ ಸಮೂಹವಾಗಿತ್ತು (ಉದ್ಯೋತನ ಸೂರಿ; ಕ್ರಿ. ಶ. ೭೭೯ : ಕುವಲಯಮಾಲಾ). ಹೀಗಾಗಿ ಗಣ – ಗಚ್ಛಗಳಿಗೆ ಕೊಟ್ಟಿರುವ ವಿವರಣೆಯು ಒಂದು ಸ್ಥೂಲ ವ್ಯಾಖ್ಯಾನವೇ ಹೊರತು ಸಾರ್ವತ್ರಿಕವಲ್ಲ. ಗಣ – ಗಚ್ಛ ಎಂಬ ಮಾತುಗಳನ್ನು ಸಮಾನಾರ್ಥಕವಾಗಿಯೂ ಗ್ರಹಿಸಿರುವುದುಂಟು. ಪ್ರಾಕೃತ ಮೂಲಾಚಾರಕ್ಕೆ ವಸುನಂದಿಯು ಸಂಸ್ಕೃತದಲ್ಲಿ ಬರೆದಿರುವ ಟೀಕಾದಲ್ಲಿ ಈ ವಿವವರಣೆಗಳಿವೆ. ಗಣಭೇದವೆಂಬ ಗ್ರಂಥದ ಕನ್ನಡ ಹಸ್ತಪ್ರತಿಯಲ್ಲಿ ನಾಲ್ಕು ಗಣಗಳನ್ನು ಹೆಸರಿಸಿ ಆ ಗಣಗಳು ಯಾವ ಸಂಘಕ್ಕೆ ಸೇರಿವೆಯೆಂಬುದನ್ನು ನಮೂದಿಸಿದೆ : ಸೇನ ಗಣವು ಮೂಲ ಸಂಘಕ್ಕೂ, ಬಲವತ್ಕಾರ ಗಣವು ನಂದಿ ಸಂಘಕ್ಕೂ, ದೇಶೀಗಣವೂ ಸಿಂಹಸಂಘಕ್ಕೂ, ಕಾಲೋಗ್ರಗಣವೂ ಯಾಪನೀಯ ಸಂಘಕ್ಕೂ ಸೇರಿದ ಗಣಗಳೆನ್ನಲಾಗಿದೆ. ಕಾಲೋಗ್ರ ಗಣವೆಂಬುದು ‘ಕಾಣೂರು, ಕಂಡೂರು, ಕ್ರಾಣೂರು’ ಎಂಬುದರ ಸಂಸ್ಕೃತ ಶಿಷ್ಟರೂಪ. ಯಾಪನೀಯ ಸಂಘದ ಸವಣರ, ಕಂತಿಯರ ಹೆಸರುಗಳಂತೆ ಈ ಗಣಗಚ್ಛ ಅನ್ವಯಗಳ ಹೆಸರುಗಳು ಸಹ ಶ್ವೇತಾಂಬರಕ್ಕಿಂತ ದಿಗಂಬರಕ್ಕೇ ಹೊಂದಿಕೆಯಾಗಿವೆಯಲ್ಲದೆ ಸಮಾನವಾಗಿಯೂ ಇವೆ; ವಾಸ್ತವವಾಗಿ ಅವು ದಿಗಂಬರ ಮೂಲದವರೇ ಆಗಿವೆ.

ಚಾಳುಕ್ಯರ ಕಾಲದ ವೇಳೆಗಾಗಲೇನ ಯಾಪನೀಯ ಸಂಘದೊಳಗೆ ಗಣ – ಗಚ್ಛ ವಿಭಜನೆ ಪ್ರಾರಂಭವಾಗಿತ್ತು. ಆದರೆ ಚಾಳುಕ್ಯರ ಆಳ್ವಿಕೆಯಲ್ಲಿ ಯಾಪನೀಯ ಸಂಘ ಸುವರ್ಣಯುಗದ ವ್ಯಾಪ್ತಿ ವೈಭವಗಳನ್ನು ಪಡೆಯಿತೆಂಬ ಪ್ರೋ. ಕಮಲಾಹಂಪನಾ ಅವರ ಹೇಳಿಕೆಯನ್ನು ಅಂದಿನ ಕಾಲದ ಶಾಸನಗಳು ಪುಷ್ಟೀಕರಿಸುತ್ತವೆ. ಯಾಪನೀಯ ಸಂಘದ ಅಧ್ಯಯನ ಹಾಸು ದೊಡ್ದದು, ಅದು ಒಂದು ಪಿಎಚ್. ಡಿ ಮಹಾಪ್ರಬಂಧದ ವಸ್ತು. ಅದರ ಕಕ್ಷೆಗೆ ಒಳಪಡುವ ಪೂರಕ ಸಾಮಗ್ರಿಯಾಗಿ ಯಾಪನೀಯ ಅಂತರ್ಗತ ಗಣ – ಗಚ್ಛಗಳನ್ನು ಶಾಸನಗಳಿಂದಲೂ ಗುರುತಿಸಬಹುದು. [Kamala Hampana : Attimabbe and Chalukyas :1995].

ಚಾಳುಕ್ಯರ ಕಾಲದ ಶಾಸನಗಳಲ್ಲಿ ಯಾಪನೀಯ ಸಂಘಕ್ಕೆ ಸೇರಿದ ನಾನಾ ಗಣ, ಗಚ್ಛ, ಅನ್ವಯ, ಆಮ್ನಾಯ ವಂಶಗಳನ್ನು ಕುರಿತು ವಿಪುಲವಾದ ಮಾಹಿತಿ ಉಪಲಬ್ದವಿದೆಯೆಂದು ಹೇಳುವಾಗಲೂ ಇದರಲ್ಲಿ ಮರೆಯದೆ ನೆನಪಿಡಬೇಕಾದದ್ದೆಂದರೆ ಸೂರಸ್ತಗಣದ ಪ್ರಸ್ತಾಪ ಹೆಚ್ಚಿನ ಪ್ರಮಾಣದಲ್ಲಿ ಇದೆಯೆಂಬುದು. ಸೂರಸ್ತ (ಸ್ಥ) ಗಣವೂ ಕಾಣೂರುಗಣವೂ ಒಂದೇ ಪರಂಪರೆಯ ಕವಲುಗಳು; ಅಂದರೆ ಸಮಾನ ಮೂಲದವು, ಯಾಪನೀಯ ಹೃದಯದ ಚೀಲಗಳು. ಸೂರಸ್ತಗಣಕ್ಕೂ ಸೂರತ್‌ ನಗರಕ್ಕೂ ಯಾವ ಸಂಬಂಧವೂ ಇಲ್ಲ. ಈ ಗಣದ ಆಚಾರ್ಯ ಪರಂಪರೆಯ ಏಳು – ಎಂಟನೆಯ ಶತಮಾನದ ವೇಳೆಗೆ ಪ್ರಸಿದ್ಧಿ ಪಡೆದಿತ್ತು. ಪೂರ್ವ ಚಾಲುಕ್ಯರ ವಿಷ್ಣುವರ್ಧನನು (ಕ್ರಿ. ಶ. ೬೨೪ – ೪೨) ಕಟ್ಟಿಸಿದ ವಿಜಯವಾಡದ (ಬೆಜವಾಡ) ‘ನಡುಂಬು ವಸದಿ’ ಗೆ ಮುಸುನಿಕೊಂಡ ಗ್ರಾಮವನ್ನು ಪುನರ್‌ದತ್ತಿಯಾಗಿ ನೀಡಿದವನು ಮುಮ್ಮಡಿ ವಿಷ್ಣುವರ್ಧನ (ಕ್ರಿ. ಶ. ೭೧೮ – ೫೨). ಈ ಮುಸನಿಕೊಂಡ ಶಾಸನದಲ್ಲಿ ಸೂರಸ್ತಗಣ ಕಾಣೂರುಗಣದ ಜೈನಾಚಾರ್ಯ ಗುರು – ಶಿಷ್ಯ ಪರಂಪರೆಯ ನಿರೂಪಣೆಯಿದೆ [ಎ. ಆರ್. ಐ. ಎಸ್. ೧೯೧೬ – ೧೭ ಸಿ. ಪಿ. ನಂ. ೯]. ಸೂರಸ್ತಗಣದ ಮಾಘನಂದಿ ಋಷಿಗೆ ನಿಷಿದಿಕಲ್ಲನ್ನು ಸಿಂದಿಗೆಯ ಜಾಕಿಯಬ್ಬೆಯು ನಿಲ್ಲಿಸಿದಳು. [ಸೌಇಇ. ೨೦. ೨೮೬. ೧೦೬೮. ಚಾಂದಕವಟೆ – (ಬಿಜಾಪುರಜಿ/ಸಿಂದಗಿ ತಾ].

ಇದು ಧರ್ಮಾಮೃತಸಿನ್ಧು ಸುಶ್ರುತ ಲತಾಸನ್ದೋಹಕನ್ದಂ ದಯಾ
ನದಿಗುತ್ಪತ್ತಿಯ ಬೆಟ್ಟು ತತ್ತ್ವದ ತವರ್ಸ್ಸಂಸಾರ ವಾರಾಸಿಗಿ
ಕ್ಕಿದ ಭೈತ್ರಂ ತೊಡವಾರ್ಹತಕ್ಕೆನೆ ಜನಂ ಭೂಬಾಗದೊಳ್ಪೆಂಪುವೆ
ತ್ತುದು ಸೂರಸ್ಥಗಣಂ ಪ್ರಸಿದ್ಧಮದರೊಳ್ಶ್ರೀಚಿತ್ರಕೂಟಾನ್ವಯಂ ||
[
ಸೌ ಇಇ. ೧೧. ೧೧೧. ೧೦೭೧. ಸೊರಟೂರು (ಗದಗ ಜಿ/)ಪು. ೧೦೯]

ಚಾಳುಕ್ಯರ ಆಳ್ವಿಕೆಯ ಅವಧಿಯಲ್ಲಿ, ಕ್ರಿ. ಶ. ೯೭೩ – ೭೪ ರಿಂದ ೧೧೮೪ರವರೆಗಿನ ಇನ್ನೂರು ವರ್ಷಗಳಲ್ಲಿ, ಅತ್ಯಂತ ಪ್ರಬಲ ಜೈನ ಸಂಘವಾಗಿದ್ದುದು ಯಾಪನೀಯ. ಇದರೊಳಗೆ ಸೆರಿದ ಗಣಗಳ ಹೆಸರುಗಳು ಶಾಸನಗಳಲ್ಲಿ ಸಿಗುತ್ತವೆ. ಅವನ್ನು ಆಕಾರಾದಿ ಅನುಕ್ರಮಣಿಕೆಗೆ ಅಳವಡಿಸಿ ಸಿಂಹಾವಲೋಕನ ಕ್ರಮದಿಂದ ಕೆಳಗೆ ಹೆಸರಿಸಿದೆ:

. ಕಂಡೂರುಗಣ : ಸೌಇಇ. ಸಂಪುಟ ೨೦ . ಶಾಸನ ಸಂಖ್ಯೆ. ೧೮. ಕ್ರಿ. ಶ. ೯೮೦. ಸೌದತ್ತಿ (ಬೆಳಗಾವಿ ಜಿಲ್ಲೆ )ಪು. ೧೫ – ೧೭.
ಅದೇ, ಸಂಪುಟ, ೧೫, ಸಂಖ್ಯೆ, ೫೩೯. ೧೧ನೆಯ ಶತಮಾನ. ಹುಲ್ಲೂರ (ಬಿಜಾಪುರ ಜಿಲ್ಲೆ, ಮುದ್ದೇಬಿಹಾಳ ತಾ).
ಜೆಬಿಬಿಅರ್ ಎಸ್‌, ಸಂಪುಟ. ೧೦ (೧೮೭೪), ಸಂಖ್ಯೆ. ೪. ಕ್ರಿ. ಶ. ೧೦೬೯ – ೭೦.

. ಕಾಣೂರು ಗಣ : ಐ. ಡಬ್ಯ್ಲು. ಜಿ: ಸಂಖ್ಯೆ. ೧೫೦, ೧೦ನೆಯ ಶ., ಪು. ೪೬೮ – ೭೦

. ಕಾಣೂರ್ಗಣ : ಎ. ಕ. ೮ (ಹಳೇ ಆವೃತ್ತಿ) ಸೊರಬ. ೨೬೨. ೧೦೭೭, ಕುಪ್ಪಟೂರು (ಶಿವಮೊಗ್ಗ ಜಿಲ್ಲೆ, ಸೊರಬ ತಾ).
ಸೌ. ಇ. ಇ. ಸಂಪುಟ ೧೫. ಸಂಖ್ಯೆ ೫೬೮. ೧೨ ಶ. ಕಲ್ಕೇರಿ
ಎ. ಕ. ೮ (ಪ) ಅರಕಲಗೂಡು, ೧೩೩ (೫ ಅಗೊ ೯೯) ೧೦೭೯ – ೮೦, ಸುಳಗೋಡು ಸೋಮವಾರ ಪು. ೧೮೬ – ೮೭.
ಎ. ಆರ್. ಎಸ್‌.ಐ. ಇ. ೧೯೧೭, ಸಿ – ೨೦. ಕೊತ್ತಸಿವಾರಂ (ಆಂಧ್ರ).
ಅದೇ, ಸಿ – ೨೧.
ಕುಂದಕುಂದಾನ್ವಯ ಮೂಲಸಂಘ ಕಾಣೂರ್ಗಣದ ಪುಷ್ಪದಂತ ಮಲಧಾರಿದೇವ – ಎಂಬ ಉಲ್ಲೇಖವು ಒಂದು ಸಂಸ್ಕೃತ ಶಾಸನದಲ್ಲಿದೆ (ಐಎಪಿ. ವಾರಂಗಲ್‌ ೩೩. ಮತ್ತೆವಾಡ : ಆಂಧ್ರ, ವಾರಂಗಲ್‌ ಜಿ/ತಾ.) ಆದ್ದರಿಂದ, ಕಾಣೂರ್ಗಣವು ದಿಗಂಬರ ಮೂಲ ಸಂಘದಲ್ಲೂ ಇತ್ತೆಂದು ತಿಳಿಯಬೇಕಾಗುತ್ತದೆ.
ಎ. ಆರ್. ಎಸ್‌. ಐ. ಈ. ೧೯೨೭ – ೨೮, ಅನುಬಂಧ, ಇ – ೫೧, ೧೨ ನೆಯ ಶ.
ಅದೇ, ೧೯೪೩ – ೪೫, ಅನುಬಂಧ, ಎಫ್ – ೧, ೧೧೨೩.
ಎ.ಕ. ೭ – ೧ (೧೯೦೨) ಶಿವಮೊಗ್ಗ ೪. ಕ್ರಿ. ಶ. ೧೧೨೧ – ೨೨.ಕೊಲ್ಲೂರು ಗುಡ್ಡ, ಪು ೧೦ – ೧೫.

. ಕ್ರಾಣೂರುಗಣ : ಎ. ಕ. ೭ – ೧ (೧೯೦೨) ಶಿವಮೊಗ್ಗ. ೧೦. ಕ್ರಿ. ಶ. ೧೦೭೯. ತಟ್ಟೆಕೆರೆ, ಪು ೨೧. ಸಾಲು : ೫೩.

. ಕ್ರೋಣೂರ್ಗಣ : ಸೌ. ಇ. ಇ. ಸಂಪುಟ. ೯. ಸಂಖ್ಯೆ, ೨೨೧. ಕ್ರಿ. ಶ. ೧೧೨೫. ತೊಗರಕುಂಟ (ಆಂಧ್ರ: ಅನಂತಪುರ ಜಿ., ಧರ್ಮಾವರಂ ತಾ.)
ಕಂಡೂರುಗಣ, ಕಾಣೂರುಗಣ, ಕಾಶ್ಣೂರ್ಗಣ, ಕ್ರೂಣೂರ್ಗಣ, ಕ್ರಾಣೂರು ಗಣ, ಕ್ರೋಣೂರ್ಗಣ – ಇವೆಲ್ಲವೂ ಒಂದೇ ಮೂಲದಿಂದ ಬಂದ ರೂಪಗಳು. ಇವು ಸ್ಥಳನಾಮ ಮೂಲದ ಹೆಸರುಗಳು. ಕನ್ನಡ ಸಾಹಿತ್ಯದಲ್ಲಿ ಕಾನೂರು ಗಣವನ್ನೂ ಈ ಗಣದ ಅಚಾರ್ಯರನ್ನೂ ಹೆಸರಿಸಿರುವ ಮೊಟ್ಟಮೊದಲನೆಯ ಕವಿಯೆಂದರೆ ಪೊನ್ನ [ಶಾಂತಿಪುರಾಣಂ, (ಸಂ) ಹಂಪ, ನಾಗರಾಜಯ್ಯ : ೧೯೮೨ : ೧೭]. ಅರ್ಹಣಂದಿ, ಅರ್ಹದ್ಬಲಿ, ಚಂದಿನಂದಿ, ಜಿನಚಂದ್ರ, ದಾಮನಂದಿ, ವೀರನಂದಿ – ಎಂಬ ಮುನಿಗಳ ಪಟ್ಟಿಯನ್ನು ಪೊನ್ನಕವಿ ಕೊಟ್ಟಿದ್ದಾನೆ:

ಕಾನೂರ್ಗಣ ಮುನಿಪತಿ ವಿ
ದ್ಯಾನಿಧಿ ಗುಣನಿಧಿ ದಯ್ಯೆಕನಿಧಿ ಶುದ್ಧಯಶ
ಶ್ರೀನಿಧಿ ತಪೋಂಬುನಿಧಿ ಭುವ
ನಾನತಪದ ಕನಕಕಮಳನಮಳಿನ ಚರಿತಂ || (೧೭)

ಎಂಬ ಪದ್ಯದಿಂದ ತಿಳಿದು ಬರುವ ಪ್ರಕಾರ, ಈ ಮುನಿಗಳು ವಿದ್ಯೆಗೂ ಗುಣಗಳಿಗೂ ದಯೆಗೂ ನಿರ್ಮಲ ಕೀರ್ತಿಗೂ ತಪಸ್ಸಿಗೂ ಜನಮನ್ನಣೆಗೂ ಪಾತ್ರರಾಗಿದ್ದರು. ಕವಿ ಪೊನ್ನನೂ ಇದೇ ಕಾನೂರುಗಣಕ್ಕೆ ಸೇರಿದ ಕುರುಳುಗಳ ಸವಣನೆಂದು ಶಾಸನಾಧಾರದಿಂದ ತಿಳಿದು ಬರುತ್ತದೆ. ಬೇಲೂರು ತಾಲೂಕು ಹಳೆಯ ಬೀಡಿನ ಒಂದು ಶಾಸನದಲ್ಲಿ ಪೊನ್ನಕವಿಯ ಹೆಸರನ್ನು ‘ಪುಂನಮಯ್ಯ’ ಎಂದು ಹೇಳಿ, ಈ ಪುನಂಮಯ್ಯನ ಗುರು ಇಂದ್ರನಂದಿ ಆಚಾರ್ಯರೆಂದೂ ಅವರು ಕ್ರಾಣೂರ್ಗಣಕ್ಕೆ ಸೇರಿದವರೆಂದೂ ಹೇಳಿದೆ [. . () . ಬೇ. ೩೮೩. ಕ್ರಿ. . ೧೯೬೩ ಮತ್ತು ೧೨೬೬]. ಇಂದ್ರನಂದಿ ಆಚಾರ್ಯರು (ಕ್ರಿ. ಶ. ೯೩೦) ಜ್ವಾಲಾಮಾಲಿನೀಕಲ್ಪ, ಶ್ರುತಾವತಾರ ಇತ್ಯಾದಿ ಗ್ರಂಥಗಳನ್ನು ರಾಷ್ಟ್ರಕೂಟರ ಆಶ್ರಯದಲ್ಲಿ ರಚಿಸಿದವರು. ಪೊನ್ನನು ತನ್ನ ಗುರುಗಳಾದ ಈ ಇಂದ್ರಿನಂದಿ ಯತಿಯನ್ನು ಶಾಂತಿಪುರಾಣದ ಕಡೆಯ ಆಶ್ವಾಸದಲ್ಲಿ ನೆನೆದಿದ್ದಾನೆ (೧೨ – ೮೦), ಜನ್ನನೂ ಅನಂತನಾಥ ಪುರಾಣದಲ್ಲಿ (೧ – ೧೭) ಹೆಸರಿಸಿದ್ದಾನೆ.

ಪೊನ್ನನ ತರುವಾಯ ಅವನ ಕವಿಶಿಷ್ಯನಾದ ರನ್ನನು ಅಜಿತಪುರಾಣದಲ್ಲಿ

ಶ್ರೀನೇಮಿಚಂದ್ರ ಮುನಿಗಳ್
ಕಾನೂರ್ಗಣ ತಿಲಕರವರ ಶಿಷ್ಯರ್ಸದ್ವಿ
ದ್ಯಾನಿಳಯನಯ್ಯಣಯ್ಯಂ
ತಾನೋದಿಸೆ ಕುಶಲನಾದನಣ್ಣಿಗ ದೇವಂ || (೧೨೨೧)

ಎಂಬುದಾಗಿ ಸ್ತುತಿಸಿದ್ದಾನೆ, ಅತ್ತಿಮಬ್ಬೆಯೂ ಆಕೆಯ ಮಗನಾದ ಆಣ್ಣಿಗ ದೇವನೂ ಗುರುಶಿಷ್ಯ ಪರಂಪರೆಗೆ ನಡೆದುಕೊಳ್ಳುತ್ತಿದ್ದ ಸಂಗತಿಯನ್ನು ದಾಖಲಿಸಿದ್ದಾನೆ. ಇಲ್ಲಿಂದ ಮುಂದೆ ಕರ್ನಾಪಾರ್ಯ ಕವಿ ನೇಮಿನಾಥ ಪುರಾಣದಲ್ಲಿ ಯೂ (೧ – ೧೮) ಮಹಾಬಲ ಕವಿ ತನ್ನ ನೇಮಿನಾಥ ಪುರಾಣದಲ್ಲಿ ಯೂ (೧ – ೧೯ ನ, ೨೦) ಕಮಲಭವಕವಿಯು ಶಾಂತೀಶ್ವರ ಪುರಾಣದಲ್ಲಿಯೂ (೧ – ೪೨) ಜನ್ನನು ಅನಂತನಾಥಪುರಾಣದಲ್ಲಿಯೂ ಕಾಣೂರುಗಣದ ಗುರುಗಳನ್ನು ಹೆಸರಿಸಿ ತಲೆ ಬಾಗಿದ್ದಾರೆ. ಜನ್ನನ ಎರಡು ಪದ್ಯಗಳು ಗಮನಿಕೆಗೆ ಅರ್ಹವಾದುವು : ಅನಂತನಾಥಪುರಾಣದಿಂದ –

ವಂದ್ಯರ್ಜಟಾಸಿಂಹಣಂದ್ಯಾಚಾರ್ಯ್ಯಾದ್ರೀಂದ್ರ
ನಂದ್ಯಾಚಾರ್ಯಾದಿ ಮುನಿಪರಾ ಕಾಣೂರ್ಗ
ಣಂದ್ಯರ್ಪೃಥ್ವಿಯೊಳಗೆಲ್ಲಂ || (೧೭)

ಶ್ರೀಮತ್ಕಾನೂರ್ಗಣ ಚಿಂ
ತಾಮಣಿಗಳ್ರಾಮಚಂದ್ರದೇವ ಮುನಿಂದ್ರ
ರ್ತಾಮೆಗಡ ಗುರುಹಳೆನಿಪ ಮ
ಹಾಮಹಿಮೆಗೆ ಜನ್ನನಂತು ನೋಂತವನಾವಂ || (೨೫)

ಇದೇ ರೀತಿಯಾಗಿ ಅಗ್ಗಳ (ಚಂದ್ರಪ್ರಭ ಪುರಾಣ), ಒಂದನೆಯ ಮಂಗರಾಜ (ಖಗೇಂದ್ರ ಮಣಿದರ್ಪಣ), ಶಿಶುಮಾಯಣ (ಅಂಜನಾ ಚರಿತೆ), ಬ್ರಹ್ಮಕವಿ (ವಜ್ರಕುಮಾರ ಚರಿತೆ), ಕೋಟೀಶ್ವರ (ಜೀವಂಧರ ಷಟ್ಟದಿ), ದೊಡ್ಡಯ್ಯ ಕವಿ (ಚಂದ್ರಪ್ರಭಚರಿತೆ), ಚದುರ ಚಂದ್ರಮ (ಕಾರ್ಕಳ ಗೊಮ್ಮಟೇಶ್ವರ ಚರಿತೆ ), ಇಮ್ಮಡಿ ಗುಣವರ್ಮ (ಪುಷ್ಪದಂತ ಚರಿತೆ) – ಮೊದಲಾದ ಕವಿಗಳು ಕಾಣೂರುಗಣದ ಆಚಾರ್ಯರಿಗೆ ಕೈ ಮುಗಿದಿದ್ದಾರೆ. ಇವೆಲ್ಲದರ ಸವಿವರ ಚರ್ಚೆ ಮತ್ತು ಆಯಾಪದ್ಯಗಳ ವಿಶ್ಲೇಷಣೆ ಈ ಪುಟ್ಟ ಪುಸ್ತಕದ ಅಳತೆಗೆ ಎಟುಕುವುದಿಲ್ಲ.

ಗಂಗರಾಜ್ಯ ಸ್ಥಾಪನೆಗೆ ಕಾರಣರಾದ ಸಿಂಹಣಂದಿ ಆಚಾರ್ಯರು ಕಾಣೂರು ಗಣದ ಉತ್ತುಂಗ ಶೃಂಗ [. . ( . ) ಶಿವಮೊಗ್ಗ . . ೧೧೨೧೨೨; ಅದೇಶಿ. ೫೭.; ಅದೇ, ಶಿಕಾರಿಪುರ, ೨೨೧. ೧೦೭೪; . . ( . ) ನಗರ ೩೫. ೧೦೭೭. ಇತ್ಯಾದಿ]. ರಟ್ಟರಾಜ್ಯ ವಿಸ್ತಾರಕನಾದ ಮುನಿಚಂದ್ರನೂ ಇದೇ ಗಣದ ಪ್ರತಿಭೆ (ಜೆ. ಬಿ. ಬಿ. ಆರ್‌ .. ಎಸ್‌. ಸಂಪುಟ೧೦ ಸಂಖ್ಯೆ ೮ ಕ್ರಿ. . ೧೨೨೯ ೩೦ ಸೌದತ್ತಿ ಪು. ೨೬೦). ಶಾಸನಗಳಲ್ಲಿ ಇನ್ನೂ ಹತ್ತಾರು ಇಂತಹ ಉಲ್ಲೇಖಗಳಿವೆ. ಈ ಗಣವು ಯಾಪನೀಯದ ಹಾಗೆಯೇ ದಿಗಂಬರ ಮೂಲ ಸಂಘಕ್ಕೂ ಸಹ ಸೇರಿತ್ತು. ಕನ್ನಡ ಕಾವ್ಯ ಮತ್ತು ಶಾಸನ ಕವಿಗಳಿಗೆ ಅಪಾರ ಗೌರವ. ಪೊನ್ನನಿಂದ ಪ್ರಾರಂಭವಾದ ಕಾಣೂರುಗಣದ ಗುರುವೃಂದಕ್ಕೆ ತೋರುವ ಮರ್ಯಾದೆಯ ಮಾದರಿಯ ಸು. ೩೫೦ ವರ್ಷ ಅಕುಂಟಿತವಾಗಿ ಮುಂದುವರಿದಿದೆ. ಈ ಗಣದ ಆಚಾರ್ಯವಳಿಯನ್ನು ಕಾಪಾಡಿದವರು ಕನ್ನಡ ಕವಿಗಳು ಮತ್ತು ಶಾಸನಕಾರರು.

. ಕಾರೇಯಗಣ : ಸೌ. ಇ. ಸಂಪುಟ, ೧೫. ಸಂಖ್ಯೆ, ೩೫೦. ಕಾಲ ಕ್ರಿ. ಶ. ೧೦೫೯ ಎಂ. ಇ. ಸಂಪುಟ ೧೮. ೩೧೧. ೧೧ನೆಯ ಶತಮಾನ
ಕ. ಇ. ಸಂಪುಟ ೬. ೬೮. ೧೨೦ ೩ ಮನಗುಂಡಿ /ಮಣಿಗುಂದಗೆ (ಧಾಜಿ/ತಾ)
ಕ. ಇ. ೧. ೩೨. ೧೨೧೯.
ಧಾ. ತಾ ಶಾಸನಗಳು. ಸಂಖ್ಯೆ. ೪೨. ೧೨. ನರೇಂದ್ರ, ಪು. ೭೮ – ೭೯ ; ಎಆರ್‌ ಎಸ್‌ ಐ ಇ ೧೯೫೧ – ೫೨, ಸಂಖ್ಯೆ ೩೩. ಪು.. ೧೨ ಬೈಲಹೊಂಗಲ; ಧಾ. ತಾ ಶಾಸನಗಳು ಸಂಖ್ಯೆ. ೧೪. ೧೨ನೇ ಶತಮಾನ. ನುಗ್ಗಿಕೇರಿ (ಧಾಜಿ) ಪು. ೮೩
ಐ. ಎ. ೧೮. ಪು. ೩೦೯, ೧೧ನೆಯ ಶ. ಕಲಭಾವಿ
ಕಾರೇಯಗಣ ಎಂಬ ಹೆಸರು ವೃಕ್ಷ ಮೂಲ ನಿಷ್ಟನ್ನವಾದುದು. ಕಾರೆ ಎಂಬುದು ಒಂದು ಬಗೆಯ ಹಣ್ಣು ಬಿಡುವ ಮುಳ್ಳುಗಿಡ, ಬೋರೆಯ ಹಣ್ಣಿನ ಗಿಡ. ಇದು ಅಚ್ಚಗನ್ನಡ ಶಬ್ಧ. ತಮಿಳಿನಲ್ಲಿ ಕಾರೈ, ಮಲೆಯಾಳದಲ್ಲಿ ಕಾರ, ತುಳುವಿನಲ್ಲಿ ಕಾರೆ, ಕೊಡಗು ಭಾಷೆಯಲ್ಲಿ ಕಾರೆ ಮರ – ಎಂಬ ಜ್ಞಾತಿ ರೂಪಗಳು ಚಾಲ್ತಿಯಲಿವೆ. ಕಾರೆಗಿಡಗಳಿದ್ದ ಪ್ರದೇಶದಲ್ಲಿ ಜೈನ ಮಠಮಂದಿರಗಳಿದ್ದ ಗಣವೇ ಕಾರೆಯ ಗಣ. ಕಾರೆಯ ಗಿಡದ ಮುಳ್ಳನ್ನು ಕಾರೆಮುಳ್ಳು ಎಂದು ಕರೆಯುವರು. ಈ ಗಣಕ್ಕೆ ಸೇರಿದ ಒಬ್ಬ ಪ್ರಾಚೀನ ಜೈನ ಗುರುವಿನ ಹೆಸರು ಮುಳ್ಳಭಟ್ಟಾರಕರು. ಮುಳ್ಳಿನ ಗಿಡಗಳು ಇದ್ದ ಮಠಕ್ಕೆ, ಬಸದಿಗೆ ಸಂಬಂಧಿಸಿದ ಗುರುಗಳು ಮುಳ್ಳಭಟ್ಟಾರಕರು. ಈ ವಿಚಾರವನ್ನು ಮೈಳಾಪತೀರ್ಥದಲ್ಲಿ ವಿವರಿಸಿದೆ. ಕರೆಯ ಗಣವು ಯಾಪನೀಯರ ಮೈಳಾಪತೀರ್ಥಕ್ಕೆ ಸೇರಿದ ಮುಖ್ಯ ಗಣವಾಗಿತ್ತು. ಗುಣಕೀರ್ತಿ, ಜಿನ ಚಂದ್ರ, ದೇವಕೀರ್ತಿ, ನಾಗಚಂದ್ರ, ಶುಭಕೀರ್ತಿ, ರಾಮಚಂದ್ರ ಬ್ರತಿ ಪತಿ, ಬಾಹುಬಲಿಮುನಿವರರು ಕಾರೇಯಗಣ ತಿಲಕರಾಗಿದ್ದರು. ಕೇಮಣ, ರೇಚಣರು ಚಂದ್ರನಾಥ ಬಸದಿಯನ್ನು ಕಟ್ಟಿಸಿದ್ದರು.

. ಕುಮುದಿಗಣ : ಸೌಇಇ. ೧೧ – ೧.೭. ಕ್ರಿ. ಶ. ೧೦೪೫. ಮುಗದ (ಧಾಜಿ)
ಅದೇ, ಸಂಪುಟ ೧೫. ೬೧೦. ೧೨೯೦. ಗರಗ (ಧಾಜಿ)
ಅದೇ, ಸಂಖ್ಯೆ. ೬೧೮. ಪು. ೪೦೧.

. ಕೋಟಿ ಮಡುವಗಣ : ಎ. ಇ. ಸಂಪುಟ. ೯. ಸಂಖ್ಯೆ ೬. ಕ್ರಿ.ಶ. ೯೪೫ ಪು. ೪೭; ಎಸ್‌ .ಶೆಟ್ಟರ ಅರಸೀಕೆರೆಯಲ್ಲಿ ದೊರೆತ ಜೈನಧರ್ಮದ ಯಾಪನೀಯ ಸಂಘದ ಶಿಲಾಶಾಸನಗಳು (ಜರ್ನಲ್ಆಫ್ದಿ ಕರ್ನಾಟಕ್ಮೂನಿವರ್ಸಿಟಿ, ಹ್ಯುಮಾನಿಟೀಸ್‌, ಸಂಪುಟ ೧೦, ೧೯೬೬, ಪು. ೧೫೯೭೧)ಎಂಬ ಲೇಖನದಲ್ಲಿ ಮಡುವಗಣ ವಿಚಾರ ಬಂದಿದೆ. ಮಡುವಗಣ ಮತ್ತು ಕೋಟಿ ಮಡುವಗಣ ಎಂಬುವು ಅಭಿನ್ನ. ಮಡುವಗಣದ ಧರ್ಮಸಾಗರ ಸಿದ್ಧಾಂತ ಮುನಿಯ ವಿವರವೂ ಲಭ್ಯವಿದೆ [. . ಸಂಪುಟ, ಸೈದಾಪುರಶಾಸನ, ಕ್ರಿ. , ೧೦೩೪]

೧೦. ಪರಲೂರ ಗಣ : ಇ. ಆ. ೧೧. ೬೯. ಕ್ರಿ. ಶ. ೫೬೭. ಪು. ೬೮ – ೭೧
ಕ. ಇ. ಸಂಪುಟ ೧. ಪು. ೪ – ೫.
ಸೌ. ಇ. ಇ. ೨೦. ೯. ಸು. ೮ ಶ. ಆಡೂರ (ಧಾಜಿ/ಹಾನಗಲ್‌ ತಾ) ಪು. ೧೦. ಸಾಲು : ೨೦ (ಪಾಂಡಿಯೂರು – ಪಾಡಿಮೂರು – ಪಾಡಿಯೂರು – ಹಾಡೂರು – ಆಡೂರು).

ಹೂಲಿಯ ತಾಮ್ರಪಟ (ಕ್ರಿ. ಶ. ೫೭೭ – ೬೦೮) [ಬೆಳಗಾವಿ ಜಿ/ ಸೌದತ್ತಿ ತಾ.] ಅತ್ಯಂತ ಪ್ರಾಚೀನವಾದ ಗಣಗಳಲ್ಲಿ ಪರಲೂರ ಗಣವೂ ಒಂದು. ಆರನೆಯ ಶತಮಾನದ ವೇಳೆಗೆ ಇದು ಗಣ್ಯವಾಗಿತ್ತು. ಪರಲೂರಗಣ ಪ್ರಭಾಚಂದ್ರನ ಶಿಷ್ಯನಾದ ಶ್ರೀಪಾಲನು ಪರಲೂರ ಚೇದಿಯಕ್ಕೆ ಇಮ್ಮುಡಿ ಕೀರ್ತಿವರ್ಮ ಚಕ್ರವರ್ತಿಯ (ಕ್ರಿ. ಶ. ೭೪೪ – ೬೦) ಕಾಲದಲ್ಲಿ ದತ್ತಿ ಕೊಟ್ಟನು.

೧೧. ಬಲತ್ಕಾರಗಣ / ಬಳತ್ಕಾರಗಣ / ಬಲವತ್ಕಾರಗಣ / ಬಳಹಾಱಗಣ : ನಂದಿ ಸಂಘಾ (ನಂದಿಗಣ) ಕ್ಕೆ ಸೇರಿದ ಬಲವತ್ಕಾರಗಣದ ಬೇರೆ ಬೇರೆ ಶಬ್ಧರೂಪಗಳು ಶಾಸನಗಳಲ್ಲಿ ಬಳಕೆಯಾಗಿವೆಯಾದರೂ ಅವೆಲ್ಲವೂ ಒಂದೇ ಬುಡಕ್ಕೆ ಸೇರಿದ್ದೆಂದು ತಿಳಿದು ಬರುತ್ತದೆ.

ಬಲ (ಳ) ತ್ಕಾರಗಣ : ಸೌಇಇ. ೨೦. ೪೭. ೧೦೭೪ ಲಕ್ಷ್ಮೇಶ್ವರ. ಪು. ೫೪ – ೫೫.
ಎ. ಇ. ೧೫. ೨೩. ೧೦೭೧ – ೭೨ ಗಾವರಿವಾಡ
ಕ. ಇ. ೫. ೩೩. ೧೧೭೬. ಗೋಲಿಹಳ್ಳಿ (ಬೆಳಗಾವಿ ಜಿ, ಖಾನಾಪುರ ತಾ), ಪು. ೧೩೫ – ೪೦.
ಕ. ಇ. ಸಂಪುಟ. ೩. ಸಂಖ್ಯೆ. ೨. ಕ್ರಿ.ಶ. ೧೫೪೨
ಇ. ಆ. ಸಂಪುಟ. ೪. ೧೮೦. ೧೦೪೮. ಸಾಲು: ೧೩
ಎ. ಕ. ೭ – ೧ (ಹ. ಆ.) ಶಿಕಾರಿಪುರ. ೧೨೦. ೧೦೪೮. ಪು. ೨೨೫

ಬಳಗಾಱಗಣದ ಮೇಘನನ್ದಿ ಭಟ್ಟಾರಕರ ಶಿಷ್ಯ ಕೇಶವನನ್ದಿಯು ಅಷ್ಟೋಪವಾಸಿ ಭಳಾರರ ಬಸದಿಗೆ ದಾನ ಕೊಟ್ಟ ವಿಷಯವಿದೆ. ರನ್ನಕವಿಯು ಬಳಗಾಱ ಕುಲಕ್ಕೆ ಸೇರಿದವನೆಂಬುದು ಈ ಬಳಗಾಱ ಗಣದ ಹಿನ್ನೆಲೆಯಲ್ಲಿ ಚಿಂತನೀಯವಾಗಿದೆ. ಏಕೆಂದರೆ ಇದು, ಬಳೆಗಳನ್ನು ಮಾರುವವರ ಕುಲ ಎಂಬರ್ಥದ ‘ಬಳಗಾಱಕುಲ’ ಶಬ್ಧವಾಗಿರದೆ ಜೈನ ಮುನಿಗಳ ಬಳಾತ್ಕಾರಗಣಕ್ಕೆ ಸೇರಿದ್ದಿರಬೇಕೆಂಬ ಸೂಚನೆಯೂ ಇದೆ.

ಮಡುವಗಣ : ನೋಡಿ, ಕೋಟಿಮಡುವಗಣ

೧೨. ವಂದಿಯೂರ್ಗಣ : ಕಜಿಶಾ (೧೯೫೬), ತೇಂಗಳಿಸಾಸನ, ಪು, ೧೭೩ ೧೨ನೆಯ ಶತಮಾನ (ಗುಲ್ಬರ್ಗ ಜಿ, ಚಿತ್ತಾಪುರ ತಾ).

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿರುವ ಧರ್ಮಪುರಿಯ ಶಾಸನದ ಒಕ್ಕಣೆ ಹೀಗಿದೆ : ನಾನಾ ತೆರಿಗೆಗಳಿಂದ ಬರುವ ಆದಾಯವನ್ನ ದೇವರ ಪೂಜೆಗೂ ಯತಿಗಳ ಆಹಾರಕ್ಕೂ ವಿನಿಯೋಗಿಸುವುದು. ಇದನ್ನು ಪೊಟ್ಟಲಕೆರೆಯ ಪಂಚಪಟ್ಟಣದ ಕಂಚುಗಾರರೂ ತೆಲುಂಗ ನಗರರೂ (ವರ್ತಕರು) ಬಿಟ್ಟುಕೊಟ್ಟರು. ಈ ದಾನ ದತ್ತಿಯನ್ನು ಯಾಪನೀಯ ಸಂಘದ ವಂದಿಯೂರುಗಣದ ಬಸದಿಯೊಡೆಯರಾದ ಮಹಾವೀರ ಪಂಡಿತರಿಗೆ ಒಪ್ಪಿಸಲಾಯಿತು (ಎ. ಆರ್‌.ಎಸ್‌. ಐ. ಇ. ೧೯೬೧ – ೬೨, ಬಿ – ೪೬೦ – ೬೧)

೧೩. ವವಿಯೂರುಗಣ : ಕ್ರಿ. ಶ. ೧೦೬೪ ರಶಾಸನ, ರಾಮಚಂದ್ರಪುರ (ಆಂಧ್ರ : ಮೇಡಕ್‌ ಜಿ. ನರಸಾಪುರ ತಾ.). ಜಿನಮಜರಿ, ಆಕ್ಟೋಬರ ೧೯೯೫ರ ಸಂಚಿಕೆ.

೧೪. ವಳಗಾಱಗಣ : ಎ. ಇ. ಸಂಪುಟ ೧೫. ಸಂಖ್ಯೆ ೨೩. ೧೦೭೧ – ೭೨
ಇದುಕೂಡ ಬಳಗಾಱಗಣದ ಇನ್ನೊಂದು ರೂಪ. ಇಲ್ಲಿ ವಕಾರ – ಬಕಾರಗಳ ಸ್ವನಪರಿವರ್ತನೆ ನಡೆದಿದೆ.

೧೫. ಸೂರಸ್ಥ (ಸ್ತ) ಗಣ : ಭೂಭಾಗದೊಳ್‌ ಪೆಂಪುವೆತ್ತುದು ಸೂರಸ್ತಗಣಂ, ಪ್ರಸಿದ್ಧಂ ಅದಱೊಳ್‌ ಚಿತ್ರಕೂಟಾನ್ವಯಂ (ಸೌಇಇ. ೧೧ – ೧. ಸಂಖ್ಯೆ ೧ ಕ್ರಿ. ಶ. ೧೦೭೧, ಸೊರಟೂರು) ಎಂಬಂತಹ ಹೇಳಿಕೆಗಳು ಈ ಗಣದ ಹಿರಿಮೆಗೆ ಕನ್ನಡಿ ಹಿಡಿಯುತ್ತವೆ. ಮತ್ತೇಭ ವಿಕ್ರೀಡಿತ ವೃತ್ತ ಪದ್ಯವೊಂದರಲ್ಲಿ ಈ ಗಣದ ಲಸತ್‌ ಕೀರ್ತಿ ಪತಾಕೆಯನ್ನು ಹಾರಿಸಲಾಗಿದೆ :

ಶ್ರೀ ಸೂರಸ್ಥಗಣಾಂಬರದ್ಯುಮಣಿ ದುರ್ಮ್ಮಾರ್ಗಾದ್ರಿ ವಜ್ರಾಯುಧಂ
ಶ್ರೀ ಸೂರಸ್ಥಣಾಂಬುರಾಸಿ ವಿಳಸತ್ತಾರೇಶನತ್ಯೂರ್ಜ್ಜಿತಂ
ಶ್ರೀ ಸೂರಸ್ಥಗಣೇ ಸುಚಾರು ಮುಕುರಂ ಶ್ರೀಚನ್ದನನ್ದಿ ಬತ್ತಿ
ಶ್ರೀ ಸೂರಸ್ಥ ಗಣಾಂಬುಕಾರ್ಕ್ಕನೆಸೆದಂ ಸತ್ಕೀರ್ತಿಶೌಚಾಸ್ಪದಂ||
[ಎ.ಕ.೮(ಪ) . ಹಾಸನ. ೧೬೫. ೧೨ ಶ. ಶಾಂತಿಗ್ರಾಮ. ಪು. ೩೯೯. ಸಾಲು: ೫ – ೬]

ಐಡಬ್ಲ್ಯೂಜಿ, ಸಂಖ್ಯೆ. ೪೪೭, ೮ – ೯ ಶ.ಪು. ೫೧೩
ಕೊಪ್ಪಳ. ೭೧. ಸು. ೯೬೫; ಕೊಪ್ಪಳ ಶಾಸನಗಳು, (ಸಂ) ಹಂಪ. ನಾಗರಾಜಯ್ಯ, ೧೯೯೮, ಪು. ೧೬೫
(ಸೌಇಇ. ೧೧ – ೧. ೧೧೧.೧೦೭೧. ಸೊರಟೂರು. ಪು. ೧೦೮ – ೧೦(ಗದಗಜಿ).
ಅದೇ, ಸಂಖ್ಯೆ. ೫೨. ಕ್ರಿ. ಶ. ೧೦೦೭. ಲಕ್ಕುಂಡಿ
ಅದೇ, ೧೧೨, ೧೦೭೪. ಹುನಗುಂದ (ಬಿಜಾಪುರ ಜಿ) ಪು. ೧೧೧ – ೧೧೨
ಅದೇ, ಸಂಪುಟ ೨೦, ೫೨, ೧೦೭೭ – ೭೮ ಲಕ್ಷ್ಮೇಶ್ವರ, ಪು. ೬೪ – ೬೫
ಅದೇ, ೨೬೮, ೧೦೬೮, ಚಾಂದಕವಟೆ (ಬಿಜಾಪುರ ಜಿ, ಸಿಂದಗಿ ತಾ.) ಪು. ೩೨೫
ಅದೇ, ೨೨೪, ೧೨೯೫, ಲಕ್ಷ್ಮೇಶ್ವರ, ಪು. ೨೭೨ – ೭೩
ಸೌಇಇ, ಸಂಪುಟ. ೧೮. ೧೮೦, ೧೧೬೮, ನದಿಹರಳಹಳ್ಳಿ, ಪು. ೨೭೬ – ೪೯
ಅದೇ, ೩೭೫, ೧೩ ಶ. ಮಾಕನೂರ (ಹಾವೇರಿ ಜಿ, ರಾಣಿಬೆನ್ನೂರ ತಾ) ಪು. ೪೫೭
ತಂಬೂರ ಶಾಸನಗಳು, ಹುರುವ, ಆರ್‌. ಎನ್‌., ‘ಸಾಧನೆ – ೩ – ೩, ೧೯೭೪, ಪು. ೯೦ – ೧೦೫
ಎ. ಕ. ೭(ಪ) ನಾಮಂ – ೧೬೯. ಕ್ರಿ. ಶ. ೧೧೮ – ೧೯, ಕಂಬದಹಳ್ಳಿ (ಮಂಡ್ಯ ಜಿ)
ಎ. ಕ. ೬ (ಹ. ಆ.) ಮೂಡಗೆರೆ. ೯. ೧೦೫೪. ಅಂಗಡಿ. ಪು. ೨೪೧ – ೪೨

ಸೂರಸ್ತ(ಸ್ಥ) ಗಣವೂ ಕಾಣೂರುಗಣವೂ ಒಂದೇ ಪರಂಪರೆಯ ರೆಂಬೆಗಳು. ಇವೆರಡೂ ಸಹ ಯಾಪನೀಯ ಸಂಘದ ಪ್ರಬಲವೂ ಪ್ರಸಾರಾಧಿಕ್ಯವುಳ್ಳುದೂ ಆದ ಗಣಗಳು. ಸೂರಸ್ತ (ಸ್ಥ) ಗಣಕ್ಕೂ ಸೂರತ್‌ ನಗರಕ್ಕೂ ಸಂಬಂಧವಿಲ್ಲ. ಇದು ಕರ್ನಾಟಕದ್ದು ಮಾತ್ರ. ಸೂರಸ್ತಗಣಕ್ಕೆ ಸೇರಿದ ಆಚಾರ್ಯರರ ಪರಂಪರೆಯು ಏಳು ಎಂಟನೆಯ ಶತಮಾನದ ವೇಳೆಗೆ ಪ್ರಸಿದ್ಧಿ ಪಡೆದಿತ್ತು. ಪೂರ್ವಚಾಳುಕ್ಯರ ವಿಷ್ಣುವರ್ಧನನು (ಕ್ರಿ. ಶ. ೬೨೪ – ೪೨) ಕಟ್ಟಿಸಿದ ವಿಜಯವಾಡದ (ಬೆಜವಾಡ) ನಡುಂಬು ವಸದಿಗೆ ಮುಸುನಿಕೊಂಡ ಗ್ರಾಮವನ್ನು ಪುನರ್‌ ದತ್ತಿಯಾಗಿ ನೀಡಿದವನು ಮುಮ್ಮಡಿ ವಿಷ್ಣುವರ್ಧನ ರಾಜ (ಕ್ರಿ. ಶ. ೭೧೮ – ೫೨). ಈ ಮುಸುನಿಕೊಂಡ ಶಾಸನದಲ್ಲಿ ಸೂರಸ್ತಗಣದ ಜೈನಾಚಾರ್ಯರ ಗುರುಶಿಷ್ಯರ ಪರಂಪರೆಯ ನಿರೂಪಣೆಯಿದೆ (ಎಆರ್‌ಐಎಸ್‌ ಇ ೧೯೧೬ – ೧೭.ಸಿ. ಪಿ. ಸಂಖ್ಯೆ – ೧). ಸೂರಸ್ತಗಣದ ಮಾಘನಂದಿ ರಿಷಿಗೆ ನಿಷಿಧಿ ಕಲ್ಲನ್ನು ಸಿಂದಗಿಯ ಜಾಕಿಯಬ್ಬೆಯು ನಿಲ್ಲಿಸಿದಳು. (ಸೌಇಇ. ೨೦. ೨೮೬. ೧೦೬೮ ಮತ್ತು ಎಆರ್‌ ಎಸ್‌ ಐಇ ೧೯೩೬ – ೩೭. ಅನುಬಂಧ – ಇ. ಸಂಖ್ಯೆ. ೧೫) ಕೊಪ್ಪಳ ಶಾಸನ ಸಂಖ್ಯೆ ೭೧ರಲ್ಲೂ (ಕ್ರಿ. ಶ. ೯೬೫) ಹೇರೂರ ನಿಷಧಿ ಶಾಸನದಲ್ಲೂ (ಕ್ರಿ, ಶ. ೧೨೪೫) ನಂದಿಭಾಟ್ಟಾರಕ ಮೊದಲಾದ ಸೂರಸ್ತಗಣದ ಗುರುಗಳ ಹೆಸರುಗಳಿವೆ.

೧೬. ಪುನ್ನಾಗವೃಕ್ಷ ಮೂಲಗಣ :

ಕೆ. ಇ. ಸಂಪುಟ ೫. ಸಂಖ್ಯೆ. ೨೫, ಕ್ರಿ. ಶ. ೧೧೩೯, ಕೊಲ್ಹಾಪುರ ಹೂವಿನ ಬಾಗೆ ಆಗ್ರಹಾರದಲ್ಲಿದ್ದ ಮಾರಸಿಂಗ ಸೆಟ್ಟಿಯ ಬಸದಿಗೆ ಮೂವತ್ತು ಮತ್ತರು ಭೂಮಿ, ಒಂದು ತೋಟವನ್ನು ದಂಡನಾಯಕ ಸಾಸಿಮರಸನು, ಯಾಪನೀಯ ಸಂಘ ಪುಂನಾಗ ವೃಕ್ಷ ಮೂಲಗಣದ ಆಚಾರ್ಯರಾದ ಕುಮಾರಕೀರ್ತಿ ಪಂಡಿತದೇವನ ಕಾಲನ್ನು ತೊಳೆದು ಕೊಟ್ಟನು.

* ಧಾರವಾಡ ತಾ. ಶಾಸನ ಸಂಖ್ಯೆ ೭೩, ೧೩ನೆಯ ಶತಮಾನ, ಹೆಬ್ಬಳ್ಳಿ, ಪು. ೧೬೨
* ಎ. ಕ. ೧೨ (ಹಆ.) ಗುಬ್ಬಿ ೬೧. ಕ್ರಿ. ಶ. ೮೧೨
* ಜರ್ನಲ್‌ ಆಫ್‌ ಬಾಂಬೆ ಹಿಸ್ಟಾರಿಕಲ್‌ ಸೊಸೈಟಿ, ೨, ಪು. ೧೯೨ – ೨೦೦
* ಸುಇಇ. ೧೧ – ೧. ೬೫. ೧೦೨೮ – ೨೯, ಹೊಸೂರು (ಗದಗ ಜಿ)
* ಎ. ಇ. ೧೮. ಮತ್ತು ಜೈಸೌಇ, ಪು. ೧೭೪, ಕ್ರಿ.ಶ., ೧೦೪೪ ಮತ್ತು ೧೧೪೫, ಹೂಲಿ
* ಇ. ಆ. ಸಂಪುಟ. ೧೨. ಪು. ೧೦೨. ಕ್ರಿ. ಶ. ೧೧೦೮ ಹೊನ್ನೂರು
* ಎಂ. ಎ. ಆರ್‌ ೧೯೧೬. ಪು. ೪೮ – ೫೦. ಕ್ರಿ. ಶ. ೧೧೦೦. ಹೂಲಿ (ಬೆಳಗಾವಿ ಜಿ. ಸೌದತ್ತಿ ತಾ)
* ಜೆ. ಕೆ. ಯು, ಸಂಪುಟ – ೧೦. ೧೯೬೬. ಪು. ೧೫೯ – ೬೫, ಕ್ರಿ. ಶ. ೧೧೫೦. ಅರಸೀಕೆರೆ
* ಜಿನವಿಜಯ, ಬೆಳಗಾವಿ, ಜುಲೈ ೧೯೩೧ ರ ಸಂಚಿಕೆ. ಕಾಗವಾಡ, ೧೩೯೪ ರ ನಿಸಿದಿ ಶಾಸನ
* ಸೌಇಇ, ಸಂಪುಟ. ೫. ಸಂಖ್ಯೆ ೮೪೯. ಕ್ರಿ. ಶ. ೧೦೪೪ ಹೂಲಿ
* ಅದೇ, ಸಂಪುಟ. ೨೦. ಸಂಖ್ಯೆ. ೩೨೫. ೧೨ನೇ ಶತಮಾನ. ಶಿರೂರ

ಮೊದಲಾದ ಶಾಸನಗಳಲ್ಲಿ ಸಿಗುವ ಸಾಮಗ್ರಿಯನ್ನು ಹೆಕ್ಕಿಕೊಂಡು ಈ ಸಂವಾದವನ್ನು ಬೆಳೆಸಬಹುದು. ಅನೇಕ ಆಚಾರ್ಯರ ಮತ್ತು ಬಸದಿಗಳ ಮಾಹಿತಿಗಳೂ ಸಿಗುತ್ತವೆ. ಆಸಕ್ತರು ಅಧ್ಯಯನವನ್ನು ಮುಂದುವರಿಸಲು ಸಹಾಯವಾಗಲೆಂದು ಆಕರಗಳ ದಿಕ್ಸೂಚಿ ಕೊಟ್ಟಿದ್ದೇನೆ.

೧೭. ಯಾಪನೀಯ ಸಂಘದಲ್ಲಿ ಚಿತ್ರಕೂಟಾನ್ವಯ (ಸೌಇಇ, ೧೧ – ೧. ೧೧೧. ಕ್ರಿ. ಶ. ೧೦೭೧ ಸೊರಟೂರು; ಅದೇ, ಸಂಖ್ಯೆ ೧೧೩. ೧೦೭೪. ಹುನಗುಂದ), ಚಂದ್ರಿಕಾವಾಟಾನ್ವಯ (ಚಾವುಂಡರಾಯ ಪುರಾಣಂ: ಕ್ರಿ.ಶ. ೯೭೮, (ಸಂ) ಕಮಲಾ ಹಂಪನಾ; ಎ.ಇ. ಸಂಪುಟ. ೧೬. ಸಂಖ್ಯೆ ೯. ಕ್ರಿ.ಶ. ೧೦೫೩. ಮುಳ್ಗುಂದ (ಗದಗ ಜಿ); ಸೌಇಇ. ಸಂಪುಟ ೧೮. ಸಂಖ್ಯೆ. ೭೧. ಕ್ರಿ. ಶ. ೧೦೬೬. ಮೋಟೆ ಬೆನ್ನೂರ; ಎಇಯ ೧೩. ೧೯೩.೯೦೨ – ೦೩. ಮುಳ್ಗುಂದ. ಇತ್ಯಾದಿ) ಎಂಬ ಅನ್ವಯಗಳೂ ದಾಖಲಾಗಿದೆ.

ಯಾಪನೀಯ ಸಂಘದಲ್ಲಿ ಕೆಲವು ಗಚ್ಛಗಳೂ ಇದ್ದುವೆಂದು ಶಾಸನಗಳ ಆಧಾರದಿಂದ ತಿಳಿದು ಬರುತ್ತದೆ.

೧೮. ಕೌಱೂರು ಗಚ್ಛ : ‘ಯಾಪನೀಯ ಸಂಘದಲ್ಲಿ ಅಂತರ್ಗತವಾದ ಕೌಱೂರು ಗಚ್ಛವೂ ಸಹ ತುಂಬ ಪ್ರಸಿದ್ಧಿಯನ್ನೂ ಮನ್ನಣೆಯನ್ನೂ ಗಳಿಸಿತ್ತೆಂದು ಶಾಸನಗಳು ಉಲ್ಲೇಖಿಸಿವೆ. ಬಾದಾಮಿ ಚಾಳುಕ್ಯರ ವೆಂಗಿಶಾಖೆಯ (ಕುಬ್ಜ) ವಿಷ್ಣುವರ್ಧನನ ಪಟ್ಟಮಹಿಷಿ ಅಯ್ಯಣ ಮಹಾದೇವಿಯು ವಿಜಯವಾಡದಲ್ಲಿದ್ದ (ಬಿಡವಡ; ಸಂಸ್ಕೃತ. ವಿಜಯವಾಟಿಕಾ) ಬಸದಿ ‘ನಡುಂಬಿ ವಸತಿ’ ಎಂಬ ಜಿನಾಲಯಕ್ಕೆ, ತೋಕನಾಟವಾಡ ವಿಷಯಾಂತರ್ಗತವಾದ ಮುನಿಸಿಕೊಂಡ ಗ್ರಾಮವನ್ನು, ಅಲ್ಲಿಯ ಆಚಾರ್ಯರಾದ ಕೌಱೂರುಗಣದ ಕಾಲಿಭದ್ರಾಚಾರ್ಯರಿಗೆ ದಾನವಿತ್ತಳೆಂದು ಎಂಟನೆಯ ಶತಮಾನದ ಶಾಸನದಲ್ಲಿದೆ (ಎ.ಆರ್. ಎಸ್‌. ಐ. ಇ. ೧೯೧೬ – ೧೭. ಎ – ೯. ಕ್ರಿಶ. ೭೬೨. ಮದರಾಸು ಮ್ಯೂಸಿಯಮ್ಮಿನಲ್ಲಿರುವ ಸಂಸ್ಕೃತ ಶಾಸನ). ಕಲ್ಲಕೆಳಗುನಾಡು – ೫೦೦ಕ್ಕೆ ನೆಲೆವೀಡು ಉಜ್ಜಿವೊಳಲು (ಆಂಧ್ರದ ಮೆಹಬೂಬ್‌ ನಗರಜಿಲ್ಲೆ – ತಾಲ್ಲೂಕಿಗೆ ಸೇರಿದೆ ಉಜ್ಜಲಿ) ಕೋಟೆಯೊಳಗೆ ಚೆನ್ನಪಾರ್ಶ್ವಜಿನರ ಬದ್ದಿಜಿನಾಲಯಕ್ಕೆ ಕೌರೂರು ಗಚ್ಛದ ಇಂದ್ರಸೇನ ಪಂಡಿತರು ಆಚಾರ್ಯರಾಗಿದ್ದರು [ಎಪಿಜಿಎಎಸ್‌. ಸಂಪುಟ – ೩, ಮೆಹಬೂಬ್‌ನಗರ, ೬೧, ಶಾಸನ ಸಂಖ್ಯೆ. ೩೬. ಕ್ರಿ.ಶ. ೧೧೮೬; ಅದೇ, ಸಂಖ್ಯೆ. ೩೫]. ಕೌಱೂರುಗಣ ಗಚ್ಛಗಳಿಗೆ ಉಗಮ ಕೇಂದ್ರವಾದ ಮೂಲಸ್ಥಳವೂ ಒಂದೇ ಆಗಿದೆ. ಲಕ್ಕುಂಡಿಗೆ ತುಸುದೂರದಲ್ಲಿ ಇಂದಿಗೂ ಕೌಲೂರು ಎಂಬ ಹಳ್ಳಿಯಿದೆ. ಶಾಸನೋಕ್ತ ಕೌಱೂರೇ ಕೌಲೂರು. ಈ ಗ್ರಾಮದಿಂದ ಪ್ರಾರಂಭವಾದ ಗಣ – ಗಚ್ಛವೇ ಕೌಱೂರು ಗಣ – ಕೌಱೂರುಗಚ್ಛ (ಹಂಪ. ನಾಗರಾಜಯ್ಯ : ಕವಿವರ ಕಾಮಧೇನು : ೧೯೯೬:೪೯).

ತೆಂಕಣ ಅಯ್ಯಾವೊಳೆ (ಸಂಸ್ಕೃತ. ಅರ್ಯಪೊಳಲ್‌) ಪಟ್ಟಣವೆಂದು ಕೌಱೂರು ಪ್ರಖ್ಯಾತವಾಗಿತ್ತು. ಇದು ಅತ್ತಿಮಬ್ಬೆಯ ಮಗ ಅಣ್ನಿಗದೇವನು ಸಾಮಂತನಾಗಿ ಆಳಿದ ಮಾಸವಾಡಿ (ಮಾಸಿಯವಾಡಿ) – ೧೪೦ ಎಂಬ ಕಂಪಣದೊಳಗೆ ಸೇರಿದ ಊರಾಗಿತ್ತು. ಇದು ಬನ್ನಿಕೊಪ್ಪ ರೈಲ್ವೇಸ್ಟೇಷನ್ನಿಗೆ ೧೫ ಕಿ. ಮಿ. ದೂರದಲ್ಲಿದೆ. ಕೌಱೂರು ಎಂಬುದನ್ನು ಸಂಸ್ಕೃತಕ್ಕೆ ಪರಿವರ್ತಿಸಿ ‘ ಕೌರವಪುರ’ ಎಂದು ಒಂದು ಶಾಸನ ಹೆಸರಿಸಿದೆ (ಜೈಸೌಇ: ಶಾಸನ ಸಂಖ್ಯೆ. ೨೨. ಕ್ರಿ. ಶ. ೧೧೭೭. ಪು. ೨೩). ಕೌರೂರುಗಚ್ಛವು ಸೂರಸ್ತಗಣಕ್ಕೆ ಸೇರಿತ್ತು. ದಾನಚಿಂತಾಮಣಿ ಅತ್ತಿಮಬ್ಬೆಯೂ ಆಕೆಯ ಮಗ ಪಡೆವಳ ಆಣ್ನಿಗದೇವನೂ ಈ ಕೌರೂರ ಗುರುಪರಂಪರೆಯ ಅರ್ಹನಂದಿ ಆಚಾರ್ಯರ ಶಿಷ್ಯರಾಗಿದ್ದರು.

೧೯. ಚಿತ್ರಕೂಟಗಚ್ಛ : ನೋಡಿ, ಚಿತ್ರಕೂಟಾನ್ವಯ ಕುರಿತ ಪ್ರಸ್ತಾಪ
ಸೌಇಇ. ೧೮. ಸಂಖ್ಯೆ. ೧೫೧. ಕ್ರಿ.ಶ. ೧೧೪೮. ನೀರಲ್ಲಿ (ಹಾವೇರಿ ಜಿ)
ಅದೇ, ಸಂಖ್ಯೆ. ೭೧. ಕ್ರಿ. ಶ. ೧೦೬೬
ಅದೇ, ೧೧ – ೧. ಸಂಖ್ಯೆ. ೧೧೩. ಕ್ರಿ. ಶ. ೧೦೭೪

೨೦. ತಗರಿಗಲ್ಗಚ್ಛ : ಎ. ಕ. ೮(ಪ). ಆಗೂ. ೧೩೩. ಕ್ರಿ. ಶ. ೧೦೭೯ – ೮೦. ಪು. ೧೮೭

೨೧. ತಿಂತ್ರಿಣಿಗಚ್ಛ : ಎಕ. ೯(ಪ) ಬೇ. ೩೮೩. ಸು. ೧೨೫೦. ಹಳೇಬೀಡು
ಎ. ಕ. ೮(ಹ. ಅ.) ಸಾಗರ. ೧೫೯. ಕ್ರಿ. ಶ. ೧೧೫೯. ಹೆರಕೆರೆ. ಪು ೩೩೧ – ೩೩
ಸೌಇಇ. ಸಂಪುಟ. ೧೫. ಸಂಖ್ಯೆ ೫೬೮. ಕ್ರಿ. ಶ. ೧೨ ಶ. ಕಲಕೇರಿ
ಎ. ಕ. ೮(ಹ. ಅ.) ಸೊರಬ ೨೬೨.ಕ್ರಿ. ಶ. ೧೦೭೭. ಕುಪ್ಪಟೂರು
ಐ. ಎ. ಪಿ. ಕರೀಂನಗರ. ೧೭. ಸು. ೧೦೫೦. ಕೊರಟ್ಲ. ಪು. ೪೪ – ೪೭
ಎ. ಕ. ೭. (ಪ) ನಾಮಂ. ೬೮. ದಡಗ. ಪು. ೫೧ – ೫೨
ಎಆರ್‌ಎಸ್‌ಐ ಇ. ೧೯೪೬ – ೪೭, ಬಿ – ೧೫೪
ಎಕ. ೮(ಹ. ಅ.) ಸೊರಬ. ೧೪೦. ಕ್ರಿ. ಶ. ೧೧೯೮
ಅದೇ, ಸೊರಬ. ೨೩೩.ಕ್ರಿ. ಶ. ೧೧೩೮.ವುದ್ರಿ (ಉದ್ಧರೆ)

ತಿಂತ್ರಿಣಿಕಗಚ್ಛ ಎಂಬ ನಾಮರೂಪ ಪ್ರಭೇದವೂ ಉಂಟು. ಪದ್ಮನಂದಿ ಸಿದ್ಧಾಂತದೇವ ಚಕ್ರವರ್ತಿ ಎಂಬ ಅಚಾರ್ಯರು ಈ ಗಚ್ಛದಲ್ಲಿ ದೊಡ್ಡ ಹೆಸರುಗಳಿಸಿದ್ದರು. ಈ ಗಚ್ಛವು ಕ್ರಾನೂರ್ಗಣದಲ್ಲಿ ಸೇರಿತ್ತೆಂದು ಹೇಳಿರುವ ಹಾಗೆಯೇ ಮೂಲಸಂಘ ಕುಂದಕುಂದ ಅನ್ವಯಕ್ಕೂ ಅಳವಟ್ಟಿತ್ತೆಂದು ಶಾಸನ ನಮೂದಿಸಿದೆ.

೨೨. ಮೇಷ ಪಾಷಾಣಗಚ್ಛ : ಈ ಗಚ್ಛದ ಗುರುಗಳ, ಬಸದಿಗಳ ಉಲ್ಲೇಖನಗಳು ಕರ್ನಾಟಕಾಂಧ್ರಗಳಲ್ಲಿ ಸಿಕ್ಕಿವೆ: ಎಪಿಜಿಎಸ್‌. ಸಂಪುಟ – ೩. ಪು. ೧೭. ಕ್ರಿ. ಶ. ೧೧೨೫. ಗಂಗಾಪುರಂ
ಅದೇ, ನಲ್ಗೊಂಡ – ೪೩, ಶಾಸನ ಸಂಖ್ಯೆ ೪೫. ಕ್ರಿ. ಶ. ೧೧೨೫. ಕೊಲನುಪಾಕ್‌ ಪು. ೫೩
ಐಎಪಿ, ವಾರಂಗಲ್‌. ೩೫. ೧೧೨೨.ಪು.೬೭
ಎ. ಕ. ೮(ಹ. ಆ.) ಶಿವಮೊಗ್ಗ ೧೦.ಕ್ರಿ. ಶ. ೧೦೭೯ ತಟ್ಟೇಕೆರೆ
ಅದೇ, ಶಿವಮೊಗ್ಗ ೫೭. ಕ್ರಿ. ಶ. ೧೧೧೭. ನಿದಿಗೆ
ಎ. ಕ. ೭ (ಹ. ಆ.) ಹೊನ್ನಾಳಿ. ೫.೧೧೬೦. ದಿಡಗೂರು

ಕಾಣೂರ್ಗಣ ಮೇಷ ಪಾಷಾಣ ಗಚ್ಛದ ಆಚಾರ್ಯ ಬಾಲಚಂದ್ರದೇವನ ಶಿಷ್ಯರಾದ ಹೆಗಡೆ ಜಕ್ಕಯ್ಯ ಮತ್ತು ಜಕ್ಕವ್ವೆ ಇವರು ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಸುಪಾರ್ಶ್ವನಾಥ ತೀರ್ಥಂಕರರ ಬಸದಿಯನ್ನು ಕ್ರಿ. ಶ. ೧೧೬೦ ರಲ್ಲಿ ಮಾಡಿಸಿದರು. ಈ ಬಸಿದಿಯು ಇಂದಿಗೂ ಉಳಿದು ಬಂದಿದ್ದು ವೀರಭದ್ರದೇವರ ಗುಡಿಯಾಗಿ ಮತಾಂತರಗೊಂಡಿದೆ (ನಾಗರಾಜಯ್ಯ, ಹಂಪ: ದಿ ಲೇಟರ್‌ ಗಂಗಾಸ್‌ – ಮಂಡಲಿ ಥೌಸೆಂಡ್‌ :೧೯೯೯).

೨೩. ಸ್ವರ್ಣಪಾಷಾಣಗಚ್ಛ : ಸೌಇಇ. ೧೫. ಸಂಖ್ಯೆ. ೫೫೨. ಸು. ೧೨ ಶತಮಾನ, ತಡಕೋಡ (ಧಾರವಾಡ ಜಿ., ತಾ. ) ಪು. ೨೭೨.

ಹೀಗೆ ಎಂಟನೆಯ ಶತಮಾನದಿಂದ ತೊಡಗಿ ಹದಿನಾಲ್ಕನೆಯ ಶತಮಾನದವರೆಗೆ ಹಲವಾರು ಗಣ, ಗಚ್ಛ, ಅನ್ವಯಗಳ ಹೆಸರುಗಳು ಕರ್ನಾಟಕ, ಅಂಧ್ರ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ದೊರೆತ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಕರ್ನಾಟಕದಲ್ಲಿ ಈ ಉಲ್ಲೇಖಗಳು ಸಮೃದ್ಧವಾಗಿಯೂ ಅಂಧ್ರದಲ್ಲಿ ತಕ್ಕ ಮಟ್ಟಿಗೂ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕ್ವಚಿತ್ತಾಗಿಯೂ ಕಂಡು ಬರುತ್ತವೆ. ಕರ್ನಾಟಕದ ಹೊರಗಡೆಯ ಮೂರು ನೆರೆಹೊರೆಯ ಪ್ರಾಂತ್ಯಗಳ ಶಾಸನ ಪ್ರಯೋಗಗಳ ಒಂದು ವಿಹಂಗಮ ನೋಟವನ್ನು ಮುಂದೆ ಕಾಣಬಹುದು. ಅತ್ಯಂತ ಪ್ರಾಚೀನವೂ ಪ್ರಬಲವೂ ಪ್ರಮುಖವೂ ಆದ ಜೈನ ಕೇಂದ್ರ ಶ್ರವಣಬೆಳಗೊಳಗದ ಒಂದು ಶಾಸನದಲ್ಲೂ ಯಾಪನೀಯ ಗಣಗಚ್ಛಗಳ ಉಲ್ಲೇಖ ಬಂದಿಲ್ಲವೆಂಬುದು ಗಮನಾರ್ಹ.

ಆಂಧ್ರ

ಪೂರ್ವ (ವೆಂಗಿ) ಚಾಳುಕ್ಯ ಮನೆತನದ ಎರಡನೆಯ ಅಮ್ಮರಾಜನು (ಕ್ರಿ. ಶ. ೯೪೫ – ೭೫) ಕಮ್ಮನಾಡಿನ ಮಲಯಪೂಂಡಿ ಎಂಬ ಹಳ್ಳಿಯನ್ನು ‘ಕಟಕಾಭರಣ’ ವೆಂಬ ಬಸದಿಗೆ ದಾನವಾಗಿ ಬಿಟ್ಟುಕೊಟ್ಟನು. ಈ ಜಿನಾಲಯವು ಶ್ರೀಮಂದಿರ ದೇವ ಎಂಬ ಆಚಾರ್ಯರ ಮೇಲಾಳಿಕೆಯಲ್ಲಿತ್ತು. ಜಿಣನಂದಿ ಯತಿಯ ಶಿಷ್ಯನಾದ ದಿವಾಕರ ಮುನಿಯು ಈ ಶ್ರೀಮಂದಿರದೇವನ ಗುರು. ಈ ಋಷಿಮುನಿಗಳು ಯಾಪನೀಯ ಸಂಘ, ಕೋಟಿ ಮಡುವಗಣ ಮತು ಪುಣ್ಯಾರುಹ ನಂದಿಗಚ್ಛಕ್ಕೆ ಸೇರಿದವರಾಗಿದ್ದರು. ಬೇರೆ ಶಾಸನಗಳಲ್ಲಿ ಪುನ್ನಗವೃಕ್ಷ ಗಣವೆಂದು ಹೆಸರಿಸುವುದನ್ನು ಇಲ್ಲಿ ‘ಪುಣ್ಯಾರುಹ’ ಎಂದು ಹೇಳಿದೆ. ವೆಂಗಿ (ಪೂರ್ವ) ಚಾಳುಕ್ಯರ ಇಮ್ಮುಡಿ ಅಮ್ಮ ರಾಜನ ಸೇನಾಧಿಪತಿಯ ಹೆಸರು ಕಟಕರಾಜ ದುರ್ಗ ರಾಜ. ಈತ ಮಾಡಿಸಿದ ಬಸದಿಯಾದ್ದರಿಂದ ಕಟಕಾಭರಣ ಜಿನಾಲಯಎಂದು ಹೆಸರಾಯಿತು. ಈ ಬಸದಿಯನ್ನು ನೆಲ್ಲೂರು ಜಿಲ್ಲೆಯ ಧರ್ಮಪುರಿಗೆ (ಈಗಿನ ಧರ್ಮವರಮು) ತೆಂಕಣದತ್ತ ಕಟ್ಟಿಸಲಾಗಿತ್ತು. (ಎಇ. ಸಂಪುಟ : ೯. ಸಂಖ್ಯೆ ೬. ಪು. ೪೭ ರಿಂದ ೫೬; ಅದೇ, ಸಂಖ್ಯೆ. ೯ ಪು. ೬೨ – ೮೩). ಹಿಂದೆ ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕದ ಭಾಗವಾಗಿದ್ದ ರಾಯದುರ್ಗದ ನಿಸಿದಿ ಶಾಸನವೊಂದರಲ್ಲಿ ಆಪನೀಯ ಸಂಘದ ಬಾದಯ್ಯ ಮತ್ತು ತಮ್ಮಣ್ಣ ಎಂಬ ಎರಡು ಹೆಸರುಗಳಿವೆ (ಎಅರ್‌ಎಸ್‌ಐಇ. ೧೯೧೯. ಸಂಖ್ಯೆ ೧೦೯. ಪು. ೧೨).

ಯಾಪನೀಯ ಸಂಘದಲ್ಲಿಯೇ ಅತ್ಯಂತ ಪ್ರಾಚೀನವಾದ ಒಂದು ಗಣ ಗಚ್ಛವೆಂದರೆ ಕೌಱೂರು ಗಚ್ಛವೆಂದು ಸೂಚಿಸಿದ್ದಾಗಿದೆ. ಈ ಕೌರೂರು ಗಚ್ಛದ ತೌರೂರು ಲಕ್ಕುಂಡಿ ಬಳಿಯ ಊರು. ಆದರೆ ಇದರ ಪರಂಪರೆಯನ್ನು ಆಂಧ್ರದ ತುತ್ತತುದಿಯವರೆಗೆ ಮುನ್ನಡಸಿ ಮುಟ್ಟಿಸಿದವರು ಕಾಲಿಭದ್ರಾ ಆಚಾರ್ಯರು. ಬಾದಾಮಿ ಚಾಳುಕ್ಯರ ಕುಬ್ಜವಿಷ್ಣುವರ್ಧನನ ಪಟ್ಟದರಾಣಿ ಅಯ್ಯಣ ಮಹಾದೇವಿಯು ಬಿಡವಡದಲ್ಲಿ, ಅಂದರೆ ಈಗಿನ ವಿಜಯವಾಡ ಮಹಾನಗರದಲ್ಲಿ ಇದ್ದ ಏಳನೆಯ ಶತಮಾನದ ಪ್ರಾಚೀನ ಜಿನಾಲಯವಾದ ‘ನಡುಂಬಿವಸತಿ’ಗೆ ಮುಸುನಿಕೊಂಡ ಗ್ರಾಮವನ್ನು ದತ್ತಿಯಿತ್ತಳು. ಈ ದತ್ತಿಯನ್ನು ಪಡೆದವರು ನಡುಂಬಿ ಬಸದಿಯ ಒಡೆಯರಾದ ಕೌಱೂರುಗಣದ ಕಾಲಿಭದ್ರಚಾರ್ಯರು (ಎಆರ್‌ಎಸ್‌ಐಇ ೧೯೧೬ – ೧೭.ಎ – ೯. ಕ್ರಿ. ಶ. ೭೬೨.; ನಾಗರಾಜಯ್ಯ, ಹಂಪ ; ಚಂದ್ರಕೊಡೆ; ೧೯೯೭ : ೨೩೭). ಆಂಧ್ರದ ಮೆಹಬೂಬ್‌ನಗರ ಜಿಲ್ಲೆ ಮತ್ತು ತಾಲೂಕಿಗೆ ಸೇರಿದ ಗಂಗಾಪುರಂ ಶಾಸನದಲ್ಲಿ ಮೇಷ ಪಾಷಾಣ ಗಚ್ಛವನ್ನು ಹೆಸರಿಸಿದೆ. (ಎ. ಆ. ಸಂಪುಟ ೪. ಸಂಖ್ಯೆ. ೭. ೧೨ನೆಯ ಶ.)

ವಿಜಯಾದಿತ್ಯ ಅಮ್ಮರಾಜ – (೯೪೫ – ೭೫) ಜೈನಧರ್ಮಕ್ಕೆ ಇನ್ನಷ್ಟು ಆಸರೆ ನೀಡಿದನು. ‘ಜಿನಧರ್ಮ್ಮ ಜಲ ವಿವರ್ದ್ಧನ ಶಸಿರುಚಿರ | ಸಮಾನ ಕೀರ್ತ್ತಿ ಲಾಭ ವಿಲೋಲ ದಾನದಯಾ ಶೀಲಯು ತಾ | ಚಾರು ಶ್ರೀ ಶ್ರಾವಕೀ ಬುಧ ಶ್ರುತ ನಿರತಾ | ಸಕಲ ಚಂದ್ರ ಸಿದ್ಧಾಂತ’ ರ ಶಿಷ್ಯ ಅಯ್ಯಪೋಟಿ ಮಹಾಮುನಿ. ಇವರ ಶಿಷ್ಯರು ಅರ್ಹನಂದಿ ಮುನಿ. ಅರ್ಹನಂದಿ ಆಚಾರ್ಯರ ಉಪಾಸಕಿ ಶಿಷ್ಯೆಯಾದ ಪಟ್ಟ ವರ್ಧಿಕ ವಂಶದ (ಪಟ್ಟವರ್ಧಿಕಾನ್ವಯ ತಿಲಕಾ) ಪ್ರಮುಖಳಾದ ಚಾಮೆಕಾಂಬಾ ಕೋರಿಕೆಯ ಮೇರೆಗೆ ಅಮ್ಮ ರಾಜನು ಕಲುಚುಂಬಱ್ಱು ಎಂಬ ಹಳ್ಳಿಯನ್ನು ದಾನವಾಗಿತ್ತನು. ಈ ದಾನವನ್ನು ಪಡೆದವರು ವಲಹಾರಿಗಣ ಆಡ್ಡಕಲಿಗಚ್ಛದ ಅರ್ಹನಂದಿ ಆಚಾರ್ಯರು. ಈ ದತ್ತಿಯು ಸರ್ವಲೋಕಾಶ್ರಯಜಿನಭವನದ ಅನ್ನದಾನ ಶಾಲೆಯ (ಛತ್ರ) ಜೀರ್ಣೋದ್ಧಾರಕ್ಕೆಂದು ನೀಡಿದ್ದು. ಅತ್ತಿಲಿ ಪಟ್ಟಣವು ಗೋದಾವರೀ ಜಿಲ್ಲೆಯ ತಣಕು ತಾಲ್ಲೂಕಿನಲ್ಲಿದೆ. ಕಲುಚುಂಬಱ್ಱು ಎಂಬುದಕ್ಕೆ ಪೆದ್ದ (‘ಹಿರಿಯ’) ಕಲುಚುವುಬಱ್ಱು ಮತ್ತು ಕುನ್ಸಮುರ್ರೂ – ಎಂಬೆರಡು ಬೇರೆ ಹೆಸರುಗಳೂ ಇವೆ (ಫ್ಲೀಟ್‌. ಜೆ. ಎಫ್.: ಕಲುಚುಂಬರು ಗ್ರಾಂಟ್‌ ಆಫ್‌ ವಿಜಯಾದಿತ್ಯ ಅಮ್ಮ – ೨, ಎ. ಇ. ಸಂಪುಟ . ಸಂಖ್ಯೆ ೨೫. ಪು. ೧೭೭ – ೯೨). ಜೈನ ಸಿದ್ಧಾಂತ ವಿಶಾರದರಾದ ಜಯಸೇನ ಮುನಿ ಮುಡಿಪಿದಾಗ ಶ್ರಾವಕರು, ಕ್ಷಪಣಕರು, ಕ್ಷುಲ್ಲಕರು, ಅಜ್ಜಿಯರು ಗೌರವ ತೋರಿದರು. ತ್ರಿಣಯನಕುಲ ಸಂಜಾತರಾದ ಮೇಲಪರಾಜ – ಮೇಂಡಾಂಬಾ ದಂಪತಿಗಳ ಮಕ್ಕಳಾದ ರಾಜಭೀಮ ಮತ್ತು ಇಮ್ಮುಡಿ ನರವಾಹನರು ಕೃಷ್ಣನದೀ ತೀರದ (ಬೆಜವಾಡ) ವಿಜಯವಾಟಿಕಾದಲ್ಲಿ ಎರಡು ಜಿನಾಲಯಗಳನ್ನು ಮಾಡಿಸಿದರು. ಇಮ್ಮಡಿ ಅಮ್ಮರಾಜನು ಈ ಬಸದಿಗಳಿಗೆ ವೆಲನಾಂಡು (ಗುಂಟೂರು ಜಿಲ್ಲೆಯ ರೇಪಲ್ಲಿ – ತೆನಾಲಿ ತಾಲೂಕುಗಳ ಪ್ರದೇಶ) ವಿಷಯಾಂತರರ್ಗವಾದ ಪೆದ್ದ – ಗಾೞೆದಿಪಱ್ಱು (ಪೆದ್ದ – ಗಾದೆಲವಱ್ಱು) ಎಂಬ ಊರನ್ನು ದೇವಭೋಗವಾಗಿತ್ತನು [ಮಸುಲಿಪಟಮ್‌ ಪ್ಲೇಟ್ಸ್‌ ಆಫ್‌ ಅಮ್ಮರಾಜ – ೨; ಎ. ಇ., ಸಂಪುಟ – ೨೪, ಸಂಖ್ಯೆ. ೩೮. ಪು. ೨೬೮ – ೮೨].

ಕಲ್ಯಾಣ ಚಾಳುಕ್ಯರ ಭುವನೈಕ ಮಲ್ಲನ ಪ್ರಧಾನಿ ಆಡಪದ ಅಗ್ಗಳಯ್ಯನು ಕ್ರಿ. ಶ. ೧೦೭೩ – ೭೪ ರಲ್ಲಿ ಮುಚ್ಚನಾಡ ಪಾಡಿಯಲ್ಲಿ. ಬುದ್ಧಸೇನ ಜಿನಾಲಯವನ್ನೂ ಇಕ್ಕು ರೀತಿಯಲ್ಲಿ (ಇಕ್ಕುರ್ತಿ) ವೈದ್ಯರತ್ನಾಕರ ಜಿನಾಲಯವನ್ನೂ ಕಟ್ಟಿಸಿದನು. ಅಗ್ಗಳಯ್ಯನು ನರವೈದ್ಯ ಹಾಗೂ ಗಾವುಂಡನಾಗಿದ್ದನೆಂದು ಶಿರೂರು ಶಾಸನ ತಿಳಿಸಿದೆ (ಆಂಧ್ರ : ಮೇಡಕ್‌ ಜಿಲ್ಲೆ. ನಾರಾಯಣಖೇಡ ತಾ). ಈ ಎಅರಡು ಬಸದಿಗಳನ್ನು ಮಾಡಿಸಿದ್ದಲ್ಲದೆ ಜುವ್ವಿಪಾಕವಾಡಿಯಲ್ಲಿದ್ದ ಜಕ್ಕಬ್ಬೆ ಬಸದಿ ಮತ್ತು ರೇಕಬ್ಬೆಯ ಬಸದಿಗಳಿಗೆ ದಾನಗಳನ್ನಿತ್ತನು. ಆಯುರ್ವೇದ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ನಿಪುಣನಾಗಿದ್ದ ಪ್ರಧಾನಿ ಅಡಪದ ಅಗ್ಗಳಯ್ಯನಿಗೆ, ಚಾಳುಕ್ಯ ಸಾಮ್ರಾಟ ಜಯಸಿಂಹದೇವನು ತನ್ನ ಪೊಟ್ಟಲಕೆರೆ ನೆಲೆವೀಡಿನಿಂದ, ಮಹಾಸಾಮಂತ ಪ್ರತಿಪತ್ತಿಯನ್ನು ಕ್ರಿ. ಶ. ೧೦೩೪ರಲ್ಲಿ ನೀಡಿ ಮನ್ನಣೆ ತೋರಿದ್ದನು. ಅಗ್ಗಳಯ್ಯನು ಯಾಪನೀಯ ಸಂಘದ ಮಡುವ ಗಣದ ಧರ್ಮಸಾಗರ ಸಿದ್ಧಾಂತ ಮುನಿಯ ಶಿಷ್ಯನಾಗಿದ್ದನು [ಎ. ಆ, ಸಂಪುಟ – ೬, ಕ್ರಿ. ಶ. ೧೦೩೪]; ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಭೊಂಗಿರ ತಾಲೂಕಿನ ಸೈದಾಪುರ ಶಾಸನದಲ್ಲಿ ಮಾಹಿತಿಯಿದೆ. ಯಾಪನೀಯ ಸಂಘ ವವಿಯೂರು ಗಣದ ಭೀಮಚಂದ್ರ ಭಾಟ್ಟಾರಕರ ಶಿಷ್ಯಮೌನಿಚಂದ ಸಿದ್ಧಾಂತದೇವನ ‘ಕಾಲಂ ಕರ್ಚಿ’, ಚಾಳುಕ್ಯರ ತ್ರೈಲೋಕ್ಯಮಲ್ಲ ದೇವನು ಕ್ರಿ. ಶ. ೧೦೬೪ರಲ್ಲಿ ಸರ್ವನಮಸ್ಯವಾಗಿ ದೇವಭೋಗ ಮತ್ತು ಪೊನ್ನ ಗದ್ಯಾಣವನ್ನು ನದಿಕುಲಿಗೆಯ ಬಸದಿಗೆ ದಾನವಿತ್ತನು. ತ್ರೈಲೋಕ್ಯಮಲ್ಲ ಆಹವಮಲ್ಲ ಒಂದನೆಯ ಸೋಮೇಶ್ವರದೇವನು (ಕ್ರಿ. ಶ. ೧೦೪೨ – ೬೮) ಬೆಂಗಿ ನಾಡಿನ ಸಿಂಗ – ವಿಕ್ರಮದಲ್ಲಿ ಬಿಡಾರ ಹೂಡಿದ್ದನೆಂಬುದನ್ನು ವಿಶೇಷವಾಗಿ ಗಮನಿಸಬೇಕು. ತ್ರೈಲೋಕ್ಯಮಲ್ಲ ದೇವನ ಮಕ್ಕಳಾದ ಸಿಂಗ (ಜಯಸಿಂಗದೇವ) ಮತ್ತು ವಿಕ್ರಮಾದಿತ್ಯ – vi, ಇವರಿಬ್ಬರ ಹೆಸರಿನ ಊರು ‘ಸಿಂಗವಿಕ್ರಮ’ ಗ್ರಾಮವನ್ನು ರಾಮಚಂದ್ರಪುರದ ಶಾಸನ ಹೆಸರಿಸಿದೆ. [ಆಂಧ್ರ : ಮೇಡಕ್‌ ಜಿ. ನರಸಾಪು ತಾ.]

ತಮಿಳುನಾಡು

ಕ್ರಿ. ಶ. ಒಂಬತ್ತನೆಯ ಶತಮಾನದ ತಮಿಳುನಾಡಿನ ಶಾಸನವೊಂದರಲ್ಲಿ ಯಾಪನೀಯ ಸಂಘದ ಪ್ರಸ್ತಾಪ ಸಿಗುತ್ತದೆ. ಕೀರಪಾಕ್ಕಮ್‌ (ಚೆಂಗಲ್‌ಪಟ್ಟು ಜಿ. ತಾ. ) ಶಾಸನದಲ್ಲಿ ‘ದೇಶವಲ್ಲಭ’ ಎಂಬ ಜಿನಾಲಯವನ್ನು ಹೆಸರಿಸಿದೆ. ಈ ಬಸಿದಿಯನ್ನು ಕುೞೆಮಿನಗಣ (ಕುಮುದಿಗಣ) ಕ್ಕೆ ಸೇರಿದ ಮಹಾವೀರ ಆಚಾರ್ಯನ ಶಿಷ್ಯನಾದ ಅಮಲಮುದಲ ಗುರುವು ಕಟ್ಟಿಸಿದನೆಂದು ಈ ಶಾಸನದಲ್ಲಿ ಹೇಳಿದೆಯಲ್ಲದೆ ಬಸದಿಗೆ ಮತ್ತು ಅಲ್ಲಿನ ರಿಷಿ ಮುನಿಗಳ ಆಹಾರದಾನಕ್ಕೆ ಬಿಟ್ಟುಕೊಟ್ಟ ದತ್ತಿಯನ್ನು ತಿಳಿಸಿದೆ. (ಎಆರ್‌ಎಸ್‌ಐಇ ೧೯೩೪ – ೩೫, ಸಂಖ್ಯೆ. ೨೨. ಪು. ೧೦; ಜೈನಿಸಮ್‌ ಇನ್‌ ತಮಿಳುನಾಡು, ಎ ಏಕಾಂಬರನಾತನ್‌ ಮತ್ತು ಸಿ. ಕೆ. ಶಿವಪ್ರಕಾಶಮ್‌, ಮದರಾಸು: ೧೯೮೭, ಪು.೩೦)

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿಯೂ, ತಮಿಳು ನಾಡಿನಂತೆಯೇ, ಯಾಪನೀಯ ಸಂಬಂಧದ ಶಾಸನಗಳು ಅಪರೂಪ. ಬೀಡ್‌ ಜಿಲ್ಲೆಗೆ ಸೇರಿದ ಧರ್ಮಪುರಿ ಎಂಬ ಊರಿನ ಶಾಸನವನ್ನು ನೋಡಬಹುದು. ಅಲ್ಲಿ ಯಾಪನೀಯ ಸಂಘದ ವಾಡಿಯೂರ/ನಂದಿಯೂರು ಗಣಕ್ಕೆ ಸೇರಿದ ಜಿನಾಲಯವಿತ್ತು. ಈ ಚೈತ್ಯಾಲಯದ ಆಚಾರ್ಯರು ಮಹಾವೀರ ಪಂಡಿತರು. ಧರ್ಮಪುರಿಯ ನಾನಾ ತೆರಿಗೆಗಳಿಂದ ಬರುವ ಆದಾಯವನ್ನು ಈ ಜಿನ ಬಸದಿಯಲ್ಲಿ ದೇವರಪೂಜೆಗೂ, ಜಿನ ಮುನಿಗಳ ಆಹಾರದಾನಕ್ಕೂ ಬಳಸುವ ಸಲುವಾಗಿ ದಾನಕೊಡಲಾಯಿತು. ಈ ಸುಂಕ ರಹಿತ ಆದಾಯವನ್ನು ಕೊಡಮಾಡಿದವರು ಆಂಧ್ರ ಪ್ರದೇಶದ ಪೊಟ್ಟಲಕೆರೆಯ (ಪಟಂಚೆರು) ಪಂಚಪಟ್ಟಣದ ಕುಂಚಗಾರರೂ ತೆಲುಂಗ ನಗರರೂ (ನಖರ=ವಣಿಜರು) ಸೇರಿ (ಎಆರ್‌ಎಸ್‌ಐಇ ೧೯೬೧ – ೬೨, ನಂ. ಬಿ. ೪೬೦ – ೬೧).