ಸುರಥಮೆಂಬುದು ನಾಡಲ್ಲಿ ವಳಭೆಯೆಂಬುದು ಪೊೞಲದನಾಳ್ವೊಂ ವಪ್ರಪಾಳನೆಂಬೊನರಸನ ರಾಜ್ಯಂಬರೆಗಮರ್ಧಕಪ್ಪಡದ ತೀರ್ಥಂ ನೆಗೞ್ದತ್ತು ಮತ್ತೆ ವಪ್ರಪಾಳನೆಂಬರಸಂ ಮಿಥ್ಯಾದೃಷ್ಟಿಯಾತನ ಮಹಾದೇವಿ ವಿಶ್ವಾಮುನಿ ಯೆಂಬೊಳರ್ಧ ಕಪ್ಪಡದ ತೀರ್ಥದ ತಪಸ್ವಿಯರ ಶ್ರಾವಕಿಯಾಗಿ ಇಂತು ಕಾಲಂ ಸಲೆ ಮತ್ತೊಂದು ದಿವಸಂ ನಡುಪಗಲರಸನುಂ ಮಹಾದೇವಿಯುಮಿಂತೀರ್ವ್ವರುಂ ಪ್ರಾಸಾದದ ಮೇಗಿರ್ದ್ದು ಗವಾಕ್ಷ ಜಾಳಾಂತರಂಗಳಿಂದಂ ದಿಸಾವಳೋಕನಂ ಗೆಯ್ಯುತ್ತಿರ್ಪ್ಪನ್ನೆಗಮರ್ಧ ಕಪ್ಪಡದ ಸಂಘಂ ಭೈಕ್ಷಕಾರಣಮಾಗಿಯರಮನೆಯಂ ಪುಗುವುದನರಸಂ ಕಂಡರಸಿಯನಿಂತೆಂದನ್‌ ಎಲೆ ಮಹಾದೇವಿ ಈ ನಿನ್ನರ್ಧಕಪ್ಪಡದ ಯತಿಯರ ಧರ್ಮಮೊಳ್ಳಿತ್ತಲ್ತಿವರುಟ್ಟರುಮಲ್ಲರ್‌ ವತ್ತಲೆಗರುಮಲ್ಲರೆಂದು ನುಡಿದು ಮತ್ತೊಂದು ದಿವಸಂ ಅರ್ಧ ಕಪ್ಪಡದ ಸಂಘಮನರಸಂ ಬೞಿಯಟ್ಟಿಬರಿಸಿ ಇಂತೆಂದಂ ನೀಮರ್ಧಕಪ್ಪಡಮಂ ಬಿಸುಟ್ಟು ನಿರ್ಗ್ರಂಥಮಪ್ಪ ರಿಷಿರೂಪಂ ಕೈಕೊಂಡು ಬೞಿಕ್ಕೆ ತಪಂಗೆಯ್ಯಿಮೆಂದೊಡೆ ಅವರೊಲ್ಲದಿರ್ದ್ದೊಡರಸಂ ಮತ್ತಮಿಂತೆಂದಂ ನಿರ್ಗ್ರಂಥ ರೂಪಮಂ ಕೈಕೊಳ್ಳಲ್ಲೊರಪ್ಪೊಡೆ ಅರ್ಧಕಪ್ಪಡಮಂ ಬಿಸುಟ್ಟು ಬೞಿಕ್ಕೆ ಸಯ್ತುಟ್ಟು ಕೊಂಡಿರಿಮೆಂದೊಡಂತೆ ಗೆಯ್ಯೆಮೆಂದಾ ದಿವಸಂ ತಗುಳ್ದು ಬಡಗ ನಾಡವರು ವಪ್ರಪಾಳರಸನ ರಾಜ್ಯದೊಳರ್ಧ ಕಪ್ಪಡಮಂ ಬಿಸುಟ್ಟು ಕಚ್ಚೆಗಟ್ಟದೆ ಸಯ್ತುಡುವರುಂ ಕುಱಿವಡವಂ ಪೊದೆವರುಮಾದೊಡಲ್ಲಿಂದಿತ್ತ ಕಂಬಳಿತೀರ್ಥ ಮೆಂದಾದುದು ಅವರ್‌ ಶ್ವೇತಪಟರೆಂಬೊರಾದರ್‌ ದಕ್ಷಿಣ ಪಥದೊಳ್‌ ಸಾಮಳಿಪುತ್ರನೆಂಬರಸನಪ್ಪವರೆಯೆ ಸಂತತಿಯ ಶ್ವೇತಭಿಕ್ಷು ಜಾಪುಲಿ ಸಂಘಕ್ಕೆ ಮೊದಲಿಗನಾದಂ [ಭ್ರಾಜಿಷ್ಣು : ಸು.ಕ್ರಿ.. ೮೦೦ : ಆರಾಧನಾ ಕರ್ಣಾಟ ಟೀಕಾ (ವಡ್ಡಾರಾಧನೆ) : (ಸಂ) ಹಂಪ. ನಾಗರಾಜಯ್ಯ : ೧೯೯೩ : ೮೧]

ಇದು ಜೈನ ಮುನಿ ಪರಂಪರೆಯಲ್ಲಿ ಕವಲುಗಳೊಡೆದು ಮೂಡಿದ ಕಥಾನಕದ ಒಂದು ಮಾದರಿ. ಕನ್ನಡ, ಪ್ರಾಕೃತ, ಸಂಸ್ಕೃತ ಭಾಷೆಗಳ ಕೃತಿಗಳಲ್ಲಿಯೂ ಇದರ ಸಂವಾದಿ ನಿರೂಪಣೆಯಿದೆ. ಉತ್ತರ ಭಾರತದಲ್ಲಿ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ತಲೆದೋರಿದ ದೊಡ್ಡ ಬರಗಾಲದ ಬವಣೆಗೆ ತುತ್ತಾದ ಮುನಿ ಸಂಘದಲ್ಲಿ ಕೆಲವು ಅನಿವಾರ್ಯ ಮಾರ್ಪಾಡುಗಳು ಉಂಟಾದುವು. ಅವುಗಳಲ್ಲಿ ಬತ್ತಲೆ ಸವಣರು ಮರ್ಮಾಂಗವನ್ನು ಮರೆಮಾಡುವಂತೆ ಅರೆಬಟ್ಟೆಯನ್ನು ಹಾಕಿಕೊಳ್ಳಬೇಕಾಗಿ ಬಂದ ಪ್ರಸಂಗವೂ ಒಂದು. ಇದು ತಾತ್ಕಾಲಿಕ ವ್ಯವಸ್ಥೆಯಾಗಿ ಒಡಂಬಡಿಕೆ ಏರ್ಪಟ್ಟರೂ ಮುಂದೆ ಭೀಕರ ಕ್ಷಾಮ ನಿವಾರಣೆಯಾದ ಮೇಲೂ ಕೆಲವರು ವಸ್ತ್ರವನ್ನು ಪೂರ್ತಿಯಾಗಿ ತೊರೆಯಲು ಒಪ್ಪಲಿಲ್ಲ. ಅಂದಿನಿಂದ ಅರ್ಧಕಪ್ಪಡ ತೀರ್ಥವೊಂದು ಏರ್ಪಟ್ಟಿತು.

. ಈ ವಿವರಣೆ ಕಟ್ಟು ಕಥೆ ಎಂದೆನಿಸುವುದಿಲ್ಲ. ನಿಸರ್ಗದ ವಿಕೋಪಕ್ಕೆ ಗುರಿಯಾದ ಮಾನವ ಸಮಾಜ ಪಡೆದುಕೊಳ್ಳುವ ಮಾರ್ಪಾಟುಗಳು ಚರಿತ್ರೆಯುದ್ದಕ್ಕೂ ಕಂಡುಬಂದಿವೆ.

. ಈ ಸಂಕಥನದ ಎರಡನೆಯ ಘಟ್ಟದಲಿ, ರಾಜಸತ್ತೆಯ ಕಾರಣದಿಂದ ಸಂಭವಿಸಿದ ಮುನಿಸಂಘದ ಉಡುಗೆಯ ಬದಲಾವಣೆ ನಿರೂಪಿತವಾಗಿದೆ. ಮನುಷ್ಯನ ಜೀವನ ಶೈಲಿಯನ್ನು, ನೈಸರ್ಗಿಕ ಕಾರಣಗಳಂತೆಯೇ ರಾಜಕೀಯ ಕಾರಣಗಳೂ ಮಾರ್ಪಡಿಸುವುದನ್ನು ಚರಿತ್ರೆಯ ಪಾಠಗಳು ತಿಳಿಸಿವೆ. ಅದರಂತೆ, ವಪ್ರಪಾಳ ರಾಜನ ಸೂಚನೆಯನ್ನು ಮುನಿಸಂಘ ಮಾನ್ಯಮಾಡಿದ್ದು ಆತಿಶಯವೇನಲ್ಲ.

. ಭದ್ರಬಾಹುಭಟಾರರ ಕಥೆಯಲ್ಲಿ ಹೇಳಿರುವಂತೆ, ನಿರ್ಗ್ರಂಥ ಶ್ರಮಣ ಸಂಘದಲ್ಲಿ, ಬರಗಾಲದಿಂದಾಗಿ ಮೇಲುದವನ್ನು ಹಾಕುವುದು ಅಥವಾ ತೊರೆಯುವುದು ಒಂದು ಮುಖ್ಯ ಪ್ರಶ್ನೆಯಾಯಿತು. ಆಚಾರ್ಯರ ಆದೇಶವನ್ನೂ ಉಲ್ಲಂಘಿಸಿ ಕೆಲವರು ಅರ್ಧಕಪ್ಪಡ ವ್ಯವಸ್ಥೆಯನ್ನು ಮುಂದುವರಿಸಿದರು. ಈ ವ್ಯವಸ್ಥೆಯು ಬಡಗ ನಾಡಲ್ಲಿ ಮೊದಲು ರೂಢಿಗೆ ಬಂದಿತು, ಅನಂತರ ದಕ್ಷಿಣಾಪಥಕ್ಕೂ ಹರಡಿತೆಂದು ಇದೇ ಕಥೆಯಲ್ಲಿ ಸೂಚಿತವಾಗಿದೆ.

ದಿಗಂಬರ – ಶ್ವೇತಾಂಬರ ಪಂಥ ಪ್ರಬೇದದ ಉಗಮ ವಿಕಾಸದ ಕಾಲಮಾನ ಕುರಿತು ವಿಸ್ತಾರವಾದ ವಾದವಿವಾದ ನಡೆದಿದೆ; ಆ ಚರ್ಚೆ ಇಲ್ಲಿಗೆ ಅಷ್ಟು ಪ್ರಸ್ತುತವೇನಲ್ಲ. ಇವರೆಡು ಧ್ರುವಗಳನ್ನು ಕೂಡಿಸುವಂತಿರುವ, ಸುವರ್ಣ ಮಾಧ್ಯಮವಾಗಿರುವ. ಯಾಪನೀಯ ಸಂಘದ ಮೂಲ ಚೂಲಗಳನ್ನು ಕುರಿತ ವಾಗ್ವಾದವನ್ನು ಸಮೀಕ್ಷಿಸಿ ವಿವೇಚಿಸುವುದು ಈ ಪುಸ್ತಿಕೆಯ ಪ್ರಧಾನ ಆಶಯ. ಅನುಷಂಗಿಕವಾಗಿ ಕರ್ನಾಟಕ ಆಚೆಗಿನ ಮಾಹಿತಿಯನ್ನು ಪ್ರಸ್ಥಾಪಿಸಿದ್ದರೂ ಅದು ಗೌಣ ನೆಲೆಯಲ್ಲಿ ಸಾಗುತ್ತದೆ. ಕನ್ನಡ ನಾಡಿನ ಚೌಕಟ್ಟಿನೊಳಗೆ ಸಿಗುವ ಶಾಸನಗಳು ಒದಗಿಸಿಕೊಡುವ ಮಾಹಿತಿಗೇ ಇಲ್ಲಿ ಒತ್ತುಕೊಟ್ಟಿದೆ. ಜತೆಗೆ ಕನ್ನಡ ಸಾಹಿತ್ಯ ಕೃತಿಗಳು ಪೂರೈಸುವ ಪೂರಕ ಸಾಮಗ್ರಿಗೂ ಗಮನ ಕೊಡಲಾಗಿದೆ. ಮುಖ್ಯವಾಗಿ ಆಯ್ದು – ಆರನೆಯ ಶತಮಾನದ ಸಂಸ್ಕೃತದಲ್ಲಿರುವ ಶಾಸನಗಳಿಂದ ಹಿಡಿದು, ೧೩ – ೧೪ ನೆಯ ಶತಮಾನದ ಕನ್ನಡ ಶಾಸನಗಳವರೆಗೆ ಈ ಅಡಕವಾದ ಸಂಕ್ಷಿಪ್ತ ಅಧ್ಯಯನದ ವ್ಯಾಪ್ತಿಯಿದೆ. ಇದುವರೆಗೆ ಕನ್ನಡದಲ್ಲಿ ಒಮ್ಮೆ ಕೂಡ ಎಲ್ಲಿಯೂ ಉಲ್ಲೇಖವಾಗಿರದ, ಪ್ರಸ್ತಾಪಿತವಾಗಿರದ ಹೊಸ ವಿಚಾರಗಳು ಸಾಕಷ್ಟು ಇಲ್ಲಿ ಮೊದಲ ಬಾರಿಗೆ ಬಂದಿವೆ ಎಂಬುದನ್ನು ವಿಶೇಷವಾಗಿ ಗಮನಿಸಬಹುದು.

ಕನ್ನಡ ವಡ್ಡಾರಾಧನೆಯನ್ನು ಬಿಟ್ಟರೆ, ಅರ್ಧಪಾಲಕ – ಯಾಪನ ಶಬ್ದಗಳಿಗೆ ಸಂಸ್ಕೃತದಲ್ಲಿ ಸಿಗುವ ಪ್ರಯೋಗವೆಂದರೆ ಹರಿಷೇಣನ (ಕ್ರಿ. ಶ. ೯೩೧) ಬೃಹತ್ – ಕಥಾ – ಕೋಶದಲ್ಲಿರುವ ಭದ್ರಬಾಹು ಕಥಾನಕದ್ದು. ಹರಿಷೇಣನು ‘ಯಾಪನ ಸಂಘ’ ಮೈತಳೆದ ಕಥೆಯನ್ನು ವಿಸ್ತಾರವಾಗಿ ಹೇಳಿದ್ದಾನೆ (ಕಥೆಯ ಸಂಖ್ಯೆ. ೧೩೧) . ಎಡಗೈಯಲ್ಲಿ ಅರ್ಧಪಾಲಕವನ್ನೂ ಬಲಗೈಯಲ್ಲಿ ಭಿಕ್ಷಾಪಾತ್ರೆಯನ್ನೂ ಹಿಡಿದು ನಿರ್ಗ್ರಂಥ ಮುನಿಗಳು ಸಂಚರಿಸುವುದನ್ನು ಹರಿಷೇಣನು ವರ್ಣಿಸುವ ರೀತಿಗೆ ಸಂವಾದಿಯಾಗಿಯೇ ಕನ್ನಡ ಭ್ರಾಜಿಷ್ಣುವಿನ ಹಾಗೂ ಪ್ರಾಕೃತ ಶ್ರೀಚಂದ್ರನ ನಿರೂಪಣೆಯಿದೆ. ರಾಮಚಂದ್ರ ಮುಮುಕ್ಷುವು ಶ್ವೇತಕಂಬಲವನ್ನು ಹೆಗಲ ಮೇಲಿಂದ ಕೆಳಕ್ಕೆ, ಗುಪ್ತಾಂಗವು ಮುಚ್ಚಿಕೊಳ್ಳುವಂತೆ ಇಳಿಯ ಬಿಡುವುದನ್ನು ಹೇಳಿದ್ದಾನೆ. ವಡ್ಡಾರಾಧನೆಯಲ್ಲಿ ‘ಅರ್ಧಕಪ್ಪಡ’ ಎಂದಿರುವುದು, ಹರಿಷೇಣನು ಬಳಸುವ ‘ಅರ್ಧಪಾಲಕ’ ಎಂಬ ಶಬ್ಧಕ್ಕೆ ಸಂವಾದಿಯಾಗಿದೆ. ದಿಗಂಬರ ಮುನಿಯಾದ ಶ್ರೀಚಂದ್ರನೂ ತನ್ನ ಕಹಕೋಸು (ಕಥಾಕೋಶ ) ಗ್ರಂಥದಲ್ಲಿ (ಕ್ರಿ. ಶ. ೧೦೬೬) ‘ಅದ್ಧಫಾಲಿಯ’ ವೆಂದು ಕರೆದಿದ್ದಾನೆ.

ರಾಮಚಂದ್ರ ಮುಮುಕ್ಷುವು (ಸು. ೧೦ – ೧೨ ಶ.) ಪುಣ್ಯಾಸ್ರವ ಕಥಾ ಕೋಶದಲ್ಲಿ ‘ಅರ್ಧಕರ್ಪಟ’ ವೆಂದು ಪ್ರಯೋಗಿಸಿರುವುದನ್ನು ನೋಡಬೇಕು. ಏಕೆಂದರೆ, ಸಂಸ್ಕೃತದ ಈ ಕೃತಿಯಲ್ಲಿ, ಸಂಸ್ಕೃತದಲ್ಲಿ ರೂಢಿಯ ಶಬ್ಧರೂಪವಾದ ‘ಅರ್ಧಪಾಲಕ’ – ಎಂಬುದನ್ನು ಹೇಳದೆ ‘ಅರ್ಧಕರ್ಪಟ’ ವೆಂದು ಹೇಳಿರುವುದಕ್ಕೆ ಕಾರಣವೆಂದರೆ ಕನ್ನಡ ವಡ್ಡರಾಧನೆಯ ಪ್ರಭಾವ ರಾಮಚಂದ್ರಮುಮುಕ್ಷುವು ತಾನು ಕನ್ನಡದ ಭ್ರಾಜಿಷ್ಣು ವಿರಚಿತ ‘ಆರಾಧನಾ ಕರ್ಣಾಟ ಟೀಕಾ’ ದಿಂದ ಶ್ರೇಣಿಕ ಮೊದಲಾದ ಕಥಾಭಾಗವನ್ನು ಎತ್ತಿಕೊಂಡು ಅನುವಾದಿಸಿರುವುದಾಗಿ ಹೇಳಿದ್ದಾನೆ. ಭದ್ರಬಾಹುಭಟಾರರ ಕಥೆಗೂ ಪ್ರೇರಣೆ ಕನ್ನಡದ್ದೆಂದು ಇದರಿಂದ ಸಾಬೀತಾಗುತ್ತದೆ.

ದಿಗಂಬರ ಲೇಖಕನಾದ ರತ್ನನಂದಿಯು ‘ಅರ್ಧಪಾಲಕ’ ವನ್ನು ಶ್ಚೇತಾಂಬರ ಪಂಥದೊಂದಿಗೆ ತಗುಳಿಚಿದ್ದಾನೆ; ಅರ್ಧಪಾಲಕರು ಸ್ತ್ರೀಮುಕ್ತಿ ಮತ್ತು ಕೇವಲ ಭುಕ್ತಿ ಸಿದ್ಧಾಂತವನ್ನು ಮಾನ್ಯ ಮಾಡುತ್ತಾರೆ – ಎಂದು ಆಕ್ಷೇಪಿಸಿದ್ದಾನೆ. ಅರ್ಧಪಾಲಕ ದೀರ್ಘ ಪರಂಪರೆಯ ಸಾತತ್ಯವನ್ನು ಐತಿಹಾಸಿಕವಾಗಿ ಗುರುತಿಸಲಾಗಿದೆ. ಮಥುರಾದಲ್ಲಿ ಕುಷಾಣರ ಕಾಲದ ಜಿನಬಿಂಬಗಳು ಸಿಕ್ಕಿವೆ. ಈ ಜಿನಮೂರ್ತಿಗಳ ಕೆಳಗೆ ಸಿಂಹಪೀಠದಲ್ಲಿ ಚಿತ್ರಿತವಾಗಿರುವ ಅರ್ಧಪಾಲಕ ಮುನಿಗಳ ಶಿಲ್ಪಗಳು ನೋಡತಕ್ಕವಾಗಿವೆ. ಇವು ಉತ್ತರ ಭಾರತದಲ್ಲಿ ಸಂಭವಿಸಿದ ಹನ್ನೆರಡು ವರ್ಷಗಳ ಬರಗಾಲದಲ್ಲಿ ಜೈನ ಮುನಿಗಳ ಆಚಾರ ಪದ್ಧತಿಯಲ್ಲಿ ಉಂಟಾದ ಉಲ್ಲಟಪಲ್ಲಟವನ್ನು ತೋರಿಸುತ್ತವೆ ಎನ್ನಲಾಗಿದೆ. ಇದರಲ್ಲಿ ಸವಣರು, ಬೆತ್ತಲೆಯನ್ನು ಮರೆಮಾಡುವಂತೆ, ಒಂದು ತುಂಡು ಬೆಟ್ಟೆಯನ್ನು ಎಡಗೈಯಲ್ಲೂ ರಜೋಹರಣ ಪಿಂಛವನ್ನು ಬಲಗೈಯಲ್ಲೂ ಹಿಡಿದಿರುವುದು ಕಾಣುತ್ತದೆ. ಈ ಶಿಲ್ಪಗಳಲ್ಲಿರುವ ಜಿನ ಮುನಿಗಳು ಅತ್ತ ದಿಗಂಬರರೂ ಅಲ್ಲ. ಇತ್ತ ಶ್ವೇತಾಂಬರರೂ ಅಲ್ಲ. ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುದೆ ಕೇವಲ ಕೈಯಲ್ಲಿ ಹಿಡಿದಿರುವುದರಿಂದ ಶ್ವೇತಾಂಬರ ಅಲ್ಲ. ಸುಮಾರು ೨೬ಕ್ಕೂ ಮೀರಿ ಇಂತಹ ಮೂರ್ತಿಗಳು ಮಥುರಾದಲ್ಲಿ ದೊರೆತಿವೆ.

ದಿಗಂಬರ – ಶ್ವೇತಾಂಬರ ಗ್ರಂಥಗಳಲ್ಲಿ ಕುಷಾಣರ ಕಾಲಕ್ಕೆ ಸೆರಿದ ಮತ್ತು ಮಥುರೆಯ ‘ಕಂಕಾಲಿ ಟಿಲಾ’ ದಲ್ಲಿ ದೊರೆತ ಈ ಮೂರ್ತಿ ಶಿಲ್ಪಗಳ ಪ್ರಸ್ತಾಪ ಬಂದಿಲ್ಲ. (ಷಾ, ಯು. ಪಿ ೧೯೭೧: ೬೧). ಈ ಚಿತ್ರಗಳಲ್ಲಿ ಇರುವವರು ಅರ್ಧಫಾಲಕರೆಂದೂ ಪ್ರಾಯಃ ಇವರು ಯಾಪನೀಯಾ ಮುನಿಗಳೆಂದೂ ಸೂಚನೆಯಿದೆ (ಷಾ, ಯು. ಪಿ ೧೯೮೭: ೨೮. ಅ. ಟಿ. ೪೫; ಜೋಶಿ, ಎನ್. ಪಿ.: ೧೯೮೯ : ೩೩೨ – ೬೨). ಇದರಿಂದ ತಿಳಿದುಬರುವಂತೆ ಅರ್ಧಪಾಲಕರು ಕ್ರಿ. ಪೂ. ದಲ್ಲಿಯೇ ಮಥುರಾದಲ್ಲಿ ಇದ್ದರು. ಆ. ನೇ. ಉಪಾಧ್ಯೇಯವರಿಗೆ ಈ ಮಥುರಾದ ಶಿಲ್ಪ ಚಿತ್ರಗಳ ಅರಿವು ಇರಲಿಲ್ಲವಾಗಿ ಅವರ ಬರೆಹದಲ್ಲಿ ಎಲ್ಲಿಯೂ ಇದರ ಪ್ರಸ್ತಾಪ ಬಂದಿಲ್ಲ. ಅರ್ಧಪಾಲಕರು ಜೈನರ ಒಂದು ಪಂಥವೆಂದು ಮಾನಿಯಾರ್‌ ವಿಲಿಯಮ್ಸ್‌ ನಿಘಂಟಿನಲ್ಲಿ ಅರ್ಥ ಹೇಳಿದೆ. ಹರ್ಮನ್‌ ಯಾಕೋಬಿಯವರು – “ಅರ್ಧಪಾಲಕ ಎಂಬ ಹೆಸರು ಕ್ಲಿಷ್ಟವಾಗಿದೆ. ನಿಘಂಟುಗಳಲ್ಲಿ ‘ಪಾಲಕ’ ಶಬ್ಧವು ಇಲ್ಲಿಗೆ ಅನ್ವಯಿಕವಾಗುವ ಅರ್ಥದಲ್ಲಿ ಬಂದಿಲ್ಲ. ಚಿಂದಿಯಾಗಿರುವುದು ಅಥವಾ ಹರಿದು ಸೀಳಿರುವುದು ಎಂಬರ್ಥದಲ್ಲಿ ಫಾಲಕ ಶಬ್ಧವು ಪ್ರಯೋಗವಾಗಿರಬಹುದು. ವಾಸ್ತವವಾಗಿ ನೋಡಿದರೆ ಪ್ರಾಕೃತ ಭಾಷೆಯ ‘ಫಾಲ’ದಿಂದ ಬಂದ ‘ಫಾಲಯ’ ಎಂಬ ಶಬ್ಧವೇ ಸಂಸ್ಕೃತಕ್ಕೆ ಹೋಗಿ ‘ಫಾಲಕ’ ಎಂಬ ಅಪರೂಪ ಏರ್ಪಟ್ಟಿದೆ” – ಎಂದು ಅಭಿಪ್ರಾಯ ಪಟ್ಟಿದ್ದಾರೆ (ಉದ್ಧೃತಃ ಜೈನಿ, ಪದ್ಮನಾಭ ಎಸ್. : ೧೯೯೫ : ೪೭೯, ಅ. ಟಿ. ೨).

ಕುಷಾಣರ ಕಾಲಕ್ಕೆ (ಕ್ರಿ. ಶ. ೨ನೆಯ ಶ.) ಸೇರಿದ ಮಥುರಾಶಿಲ್ಪದಲ್ಲಿ ಚಿತ್ರಿತವಾಗಿರುವ ಅರ್ಧಫಾಲಕ ಋಷಿಗಳು ನಾಗ್ನ್ಯರು, ಪಾಣಿತಲಭೋಜನರು. ಅದರಿಂದ ದಿಗಂಬರ ನಿರ್ಗ್ರಂಥರು. ಭಿಕ್ಷಾಪಾತ್ರೆಯಲ್ಲಿ ಆಹಾರ ಸಂಚಯಿಸುವವರಲ್ಲ. ಅರ್ಧಪಾಲಕತ್ವವು ದುರ್ಭಿಕ್ಷಕಾಲದಲ್ಲಿ ಅನಿವಾರ್ಯವಾಗಿ ಕಲ್ಪಿತವಾದ ಅಪವಾದ ವೇಶ. ವಡ್ಡಾರಾಧನೆಯಲ್ಲಿ ಬರುವ ಭದ್ರಬಾಹುಕಥಾನಕವು ಕೊಡುವ ವರ್ಣನೆ ಮತ್ತು ವಿವವರಣೆಯು ಕುಷಾಣಕಾಲದ ಮಥುರಾ ಶಿಲ್ಪದಲ್ಲಿರುವ ಅರ್ಧಪಾಲಕ ಮುನಿಗಳಿಗೆ ತಾರ್ಕಣೆಯಾಗುತ್ತದೆ. ಮಥುರಾ ಶಿಲ್ಪಗಳ ಈ ಅರ್ಧಪಾಲಕ ಜೈನಮುನಿಗಳು ಯಾಪನೀಯರೆಂದು ತಿಳಿಯಲು ಸಾಧ್ಯವಿರುವುದರಿಂದ ಕ್ರಿ. ಶ. ಒಂದನೆಯ – ಎರಡನೆಯ ಶತಮಾನದ ವೇಳೆಗೆ ಉತ್ತರದಲ್ಲಿ ಯಾಪನೀಯರು ಇದ್ದರೆಂದು ನಂಬಿಕೆಯಾಗುತ್ತದೆ. ಗುಜರಾತಿನ ಲಾಟ ವಿಷಯದಲ್ಲಿ ಕಂಬಲತೀರ್ಥವು ರೂಢಿಗೆ ಬಂದಿತೆಂದೂ ದಕ್ಷಿಣಾಪಥದಲ್ಲಿ ರಾಜ ಸಾವಲಿಪುತ್ತನು ಶ್ವೇತ – ಭಿಕ್ಷು – ಜಾಪುಲಿ ಸಂಘದ ನಾಯಕನಾದನೆಂದೂ ಶ್ವೇತಪಟದಿಂದ ಜಾಪುಲಿ (ಯಾಪನ) ಸಂಘವು ಹುಟ್ಟಿತೆಂದೂ ವಡ್ಡಾರಾಧನೆಯಲ್ಲಿ ಹೇಳಿರುವ ವಿವರಣೆಗೆ ಸಂವಾದಿಯಾದ ವರ್ಣನೆ ದಿಗಂಬರ ಗ್ರಂಥಗಳಲ್ಲಿದೆಯೇ ಹೊರತು ಶ್ವೇತಾಂಬರ ಗ್ರಂಥಗಳಲ್ಲಿಲ್ಲ. ಅದರಿಂದ ಯಾಕೋಬಿಯವರು – ‘ಅರ್ಧಪಾಲಕ ಸಂಪ್ರದಾಯದ ಹುಟ್ಟಿನ ಬಗ್ಗೆ ದಿಗಂಬರ ಸಂಪ್ರದಾಯ ಹೇಳುವುದನ್ನು ಎಚ್ಚರಿಕೆಯಿಂದ ಕಾಣಬೇಕು’ – ಎಂದಿದ್ದಾರೆ.

ಯಾಪನೀಯ ಯಾಪನ, ಅರ್ಧಪಾಲಕ, ಗೋಪ್ಯ – ಎಂಬ ಹೆಸರುಗಳು ಒಂದು ಸಮಾನ ಮೂಲದ ಸಂಪ್ರದಾಯವನ್ನು ಸೂಚಿಸುತ್ತವೆ. ಭ್ರಾಜಿಷ್ಣುವಿನ ವಡ್ಡಾರಾಧನೆ ಮತ್ತು ಹರಿಷೇಣನ ಬೃಹತ್ಕಥಾಕೋಶದ ಪ್ರಕಾರ, ಎಡಗೈಯಲ್ಲಿ ಅರ್ಧಕಪ್ಪಡವನ್ನೂ ಬಲಗೈಯಲ್ಲಿ ಭಿಕ್ಷಾಪಾತ್ರೆಯನ್ನೂ ಹಿಡಿದು ಚರಿಗೆಗೆ ಬರುವ ಸವಣರ ಪದ್ಧತಿಯಲ್ಲಿ ಮಾರ್ಪಾಡು ತಲೆದೋರಿತು. ಎಡಗೈಯಲ್ಲಿ ಅರ್ಧಕಪ್ಪಡ – ಭಿಕ್ಷಾಪಾತ್ರೆಯನ್ನೂ ಬಲಗೈಯಲ್ಲೊಂದು ದಂಡವನ್ನು (ನಾಯಿಗಳನ್ನು ಓಡಿಸಲು) ಹಿಡಿದ ಮುನಿಗಳ ವರ್ಣನೆಯೂ ಸಿಗುತ್ತದೆ. ಕ್ಷಾಮಕಾಲ ಮುಗಿದು ಸುಭಿಕ್ಷಕಾಲ ಬಂದಿತು. ಮುನಿ ಸಮುದಾಯವು ಸಂಘದ ಆಚಾರ್ಯರ ಬಳಿ ಕಲೆತರು. ಅರ್ಧಪಾಲಕ (ಅರ್ಧಕಪ್ಪಡ) ವನ್ನು ತೊರೆದು ನಿರ್ಗ್ರಂಥತ್ವಕ್ಕೆ ಮರಳಲು ಕೆಲವರು ಒಪ್ಪಿದರು, ಕೆಲವರು ಒಪ್ಪಲಿಲ್ಲ. ಅದರಿಂದಾಗಿ ಜೈನ ಮುನಿ ಸಂಘದಲ್ಲಿ ಜಿನಕಲ್ಪ (ದಿಗಂಬರ) ಮತ್ತು ಸ್ಥವಿರಕಲ್ಪ (ಅರ್ಧಫಾಲಕ) ಏರ್ಪಟ್ಟುವು. ಜಿನಕಲ್ಪವೆಂದರೆ ಅಚೇಲಕವೆಂದೂ ಸ್ಥವಿರಕಲ್ಪವೆಂದರೆ ಸಚೇಲಕವೆಂದೂ ಅಷ್ಟೇ ಅರ್ಥವಲ್ಲ. ಶ್ವೇತಾಂಬರದಲ್ಲೂ ಜಿನಕಲ್ಪದಲ್ಲೂ ಸಚೇಲಕ ಅಚೇಲಕ ಸಾಧ್ಯ. ಋಷಭ ಜಿನರು ಮತ್ತು ಮಹಾವೀರ ಜಿನರು ಅಚೇಲಕರಾದರೆ, ಉಳಿದ ೨೨ ಜಿನರು ಸಚೇಲಕರೆಂಬ ಸೂಚನೆಯಿದೆ.

ಅರ್ಧಪಾಲಕ, ಚೇಲಖಣ್ಡ, ಅರ್ಧಕರ್ಪಟ, ಚೇಲಕ, ಫಾಲಕ, ಶಾಟಕ, ಪಟ, ಚಾದರ, ಸಾದರ, ತಟ್ಟೀ, ಕರ್ಪಟ, ಏಕಸಾಟಕ, ಪಿಲೋತಕ ಖಣ್ಡ – ಎಂಬೆಲ್ಲ ಶಬ್ಧಗಳೂ ಸಂವಾದಿ ಶಬ್ಧಗಳು. ಯಾಪನ, ಯಾಪನೀಯ, ಜಾಪುಲಿ, ಆಪುಲಿ, ಜಾವಳಿಗೆ, ಗೋಪ್ಯ, ಅರ್ಧಕಪ್ಪಡ, ಅರ್ಧಪಾಲಕ – ಎಂಬ ಹೆಸರುಗಳು ಯಾಪನೀಯರಿಗೆ ಅನ್ವಯವಾಗುವ ಪರ್ಯಾಯ ಶಬ್ಧಗಳು. ಪ್ರಾಕೃತದ ಮಹಾಕವಿಯಾದ ಪುಷ್ಪದಂತನು (ಕ್ರಿ. ಶ. ೯೬೫) ತಿಸಟ್ಟಿ ಮಹಾಪುರಿಸ – ಗುಣಾಲಂಕಾರು (ತ್ರಿಷಷ್ಟಿ – ಮಹಾಪುರುಷ – ಗುಣಾಲಂಕಾರ:) – ಎಂಬ ಮಹಾ ಪುರಾಣ ಕಾವ್ಯದಲಿ ಆಪುಲಿ ಸಂಘವನ್ನು ಹೆಸರಿಸಿದ್ದಾನೆ. ಕ್ರಿ. ಶ. ಎಂಟನೆಯ ಶತಮಾನದ ಆರಂಭದಲ್ಲಿ ಆಗಿಹೋದ ಇನ್ನೊಬ್ಬ ಪಾಕೃತ ಮಹಾಕವಿ ಸ್ವಯಂಭುದೇವನು ಆಪುಲೀ ಸಂಘಕ್ಕೆ ಸೇರಿದವನೆಂದು ಪುಷ್ಪದಂತನು ತಿಳಿಸಿದ್ದಾನೆ.

ಬರಗಾಲ ಮುಗಿದು, ವಲಭೀನಗರದಲ್ಲಿ ಮುನಿಗಳು ಸೇರಿದ ಮೇಲೆ, ಮುಂದುವರಿದ ಕಥಾನಕವನ್ನು ರಾಮಚಂದ್ರ ಮುಮುಕ್ಷುವು ಪುಣ್ಯಾಸ್ರವ ಕಥಾ ಕೋಶದಲ್ಲೂ (೧೦ – ೧೧) ರತ್ನನಂದಿಯು (ಸು. ೧೬ಶ.) ಭದ್ರಬಾಹುಚರಿತದಲ್ಲೂ (೪, ೧೩೩ – ೫೧) ನಿರೂಪಿಸಿದ್ದಾರೆ. ಇವನ್ನು ವಡ್ಡಾರಾಧನೆ ಮತ್ತು ಬೃಹತ್‌ ಕಥಾಕೋಶದೊಂದಿಗೆ ಹೋಲಿಸಿದರೆ ವ್ಯತ್ಯಾಸಗಳು ಕಡಿಮೆ:

ವಲಭಿಯನ್ನು ತಲಪಿದ ಅರ್ಧಫಾಲಕರು (ಯಾಪನೀಯರು) ಕಂಬಲ – ದಂಡಗಳೊಂದಿಗೆ ಬಿಳಿಯಬಟ್ಟೆ ತೊಟ್ಟರು. ವಲಭಿಯ ರಾಜಕುಮಾರಿ ಈ ಮುನಿಗಳ ಶಿಷ್ಯೆ. ಆಕೆ ಮದುವೆಯಾದ ಮೇಲೆ ಕರಹಾಟದ (ಈಗಿನ ಪುಣೆಯ ತೆಂಕಣದತ್ತ ಇರುವ ಕರ್ಹಾಡ್‌) ಗಂಡನ ಮನೆ ಸೇರಿದಳು. ತನ್ನ ಗುರುಗಳಾದ ಶ್ವೇತಪಟರನ್ನು ಕರಹಾಡಿಗೂ ಬರುವಂತೆ ಕೋರಿದಳು . ಮುನಿಗಳೂ ಬಂದರು. ಆದರೆ, ಆಕೆಯ ಗಂಡ ದಿಗಂಬರ ಸಂಪ್ರದಾಯದವನು. ಆತ ಈ ಶ್ವೇತಪಟರನ್ನು ಸ್ವಾಗತಿಸಲಿಲ್ಲ. ಅದರಿಂದ ರಾಣಿಯು ಶ್ವೇತಪಟರನ್ನು ದಿಗಂಬರ ಸಂಪ್ರದಾಯವನ್ನು ಪಾಲಿಸುವಂತೆ ಪ್ರಾರ್ಥಿಸಿದಳು. ಅವರು ಒಪ್ಪಿದರು. ಈ ಪರಿವರ್ತಿತ ಮುನಿಗಳು ಹೊರಗೆ ದಿಗಂಬರರಾದರೂ ಒಳಗೆ ಕೇವಲಭುಕ್ತಿ ಸ್ತ್ರೀ ಮೋಕ್ಷ – ಇತ್ಯಾದಿಯಾದ ಯಾಪನೀಯ ಸಿದ್ಧಾಂತಗಳನ್ನು ಮನ್ನಿಸುತ್ತಾರೆ (ನಾಥೂರಾಮ್ ಪ್ರೇಮಿ : ೧೯೫೬:೫೬ ಅ. ಟಿ. ೧). ಈ ಕಥೆಯಲ್ಲಿ ಯಾಪನೀಯರು ಅಂತ್ಯದಲ್ಲಿ ದಿಗಂಬರ ಪರಂಪರೆಯೊಳಗೆ ಕೂಡಿದವರೆಂಬ ಧ್ವನಿಯಿದೆ. ತಮಿಳು ಕೃತಿಯಾದ ‘ಪಂಚಮಾರ್ಗೋತ್ಪತ್ತಿ’ ಯಲ್ಲಿ ಐದು ಜೈನ ಶಾಖೆಗಳ ಉತ್ಪತ್ತಿಯನ್ನು ಕುರಿತು ಹೇಳುವಾಗ ಶ್ವೇತಾಂಬರದಿಂದ ನಿರ್ಗ್ರಂಥ ‘ಯವನೀಯಮ್‌’ (ಯಾಪನೀಯ) ಗುಂಪು ಹುಟ್ಟಿತೆಂದಿದೆ. ಡಾ. ಹೊಯೆರ್ನೆಲ್‌ ಅವರು ಸಂಪಾದಿಸಿದ ಪಟ್ಟಾವಲಿಯಲ್ಲೂ ‘ಯಾಪುಲೀಯ’ ಎಂದಿದೆ.

ಲಾಟ, ವಲಭಿ, ಸುರಥ (ಗುಜರಾತು) ಕಡೆಯವರನ್ನು, ಅರ್ಧಫಾಲಕರೆಂದು ಹೇಳಿದರೂ ಯಾಪನ ಸಂಘದವರೆಂದು ಕರೆದಿಲ್ಲ. ತೆಂಕಣದತ್ತ ವಲಸೆ ಬಂದವರಿಗಷ್ಟೇ ಯಾಪನ – ಯಾಪನೀಯ ಸಂಘ ಎಂದಿದೆ. ಕರ್ನಾಟಕದಲ್ಲಿ ಸುಮಾರು ಒಂದು ಸಾವಿರ ವರ್ಷದವರೆಗೆ ಅರ್ಧಫಾಲಕ ಶಾಖೆಯ ಯಾಪನೀಯ ಸಂಘವು ಸಾಕಷ್ಟು ಪ್ರಬಲವಾಗಿ, ವರ್ಧಿಷ್ಣುವಾಗಿ, ಬಾಳಿ, ಬೆಳಗಿತು. ವಿಚಾರಧಾರೆಯಲ್ಲಿ ಕೆಲವಂಶ ವ್ಯತ್ಯಾಸವಿದ್ದರೂ ಆಚಾರದಲ್ಲಿ ದಿಗಂಬರಕ್ಕೆ ಹತ್ತಿರವಾಗಿತ್ತೆಂಬುದು ಗಮನಾರ್ಹ. ಕ್ರಮೇಣ ಯಾಪನೀಯವು ದಿಗಂಬರ ಸಂಪ್ರದಾಯದಲ್ಲಿ ವಿಲೀನವಾಯಿತು. ಸುಮಾರು ಕ್ರಿ. ಶ. ಹದಿನಾಲ್ಕನೆಯ ಶತಮಾನದವರೆಗೂ ಯಾಪನೀಯ ಪಳೆಯುಳಿಕೆಯ ಗಣಗಚ್ಛಾದಿಗಳ ಹೆಸರುಗಳು ಕಾಣಿಸಿದರೂ ವಾಸ್ತವವಾಗಿ ಹತ್ತನೆಯ ಶತಮಾನದ ವೇಳೆಗೆ ಯಾಪನೀಯ ಹಳ್ಳವು ದಿಗಂಬರ ಮುಖ್ಯವಾಹಿನಿಯಾದ ಮೂಲ ಸಂಘದ ತೊರೆಯಲ್ಲಿ ಸೇರಿಹೋಯಿತು. ಕರ್ನಾಟಕದಲ್ಲಿ ಯಾಪನೀಯ ಸಂಘದ ಪ್ರಾಮುಖ್ಯ ಪ್ರಚುರತೆಯನ್ನು ಶಾಸನಗಳು ಸಾದರಪಡಿಸುತ್ತವೆಯಲ್ಲದೆ ಯಾಪನೀಯ ಎಂಬ ಶಬ್ಧದ ಹಲವು ತದ್ಭವ ರೂಪಗಳು ಚಲಾವಣೆಗೊಂಡಿರುವುದನ್ನೂ ಸ್ಥಾಪಿಸುತ್ತವೆ. ಯಾಪನೀಯ ಸಂಘದ ಇತಿಹಾಸ ಸ್ವರೂಪದ ಹಾಸು ಕರ್ನಾಟಕದ ಶಾಸನಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಕನ್ನಡ, ಪ್ರಾಕೃತ, ಸಂಸ್ಕೃತ ಭಾಷಾ ಸಾಹಿತ್ಯ ಕೃತಿಗಳಲ್ಲಿ ಎಲ್ಲಿಯೂ ಸಿಗದ, ಚಾರಿತ್ರಿಕ ಮಹತ್ವದ ಸಾಮಗ್ರಿ ಕರ್ನಾಟಕದ ಶಾಸನಗಳಲ್ಲಿ ದಾಖಲಾಗಿದೆ.

ಪ್ರಾಚೀನ ಜೈನ ಆಗಮ ಸಾಹಿತ್ಯದಲ್ಲಿ ಅರ್ಧಫಾಲಕ – ಅರ್ಧಕಪ್ಪಡ ಕುರಿತ ಪ್ರಸ್ತಾಪಗಳಿಲ್ಲ. ಕೊಂಡಕುಂದ ಆಚಾರ್ಯರ (ಕ್ರಿ. ಶ. ೧ – ೩ ನೆಯ ಶ.) ‘ಪ್ರವಚನ ಸಾರ’ ಇದರ ಸೂಚನೆಯಿದೆ. ಮುನಿಯಾದವನು ಬಾಹ್ಯ ಉಪಾಧಿಗಳ ಮೋಹದಿಂದ ಮುಕ್ತನಾಗಿರಬೇಕೆಂದು ಕೊಂಡಕುಂದರು ಹೇಳಿದ್ದಾರೆ (ಪ್ರವಚನಸಾರ ೩ – ೨೧). ಈ ಹೇಳಿಕೆಗೆ ಅಮೃತ ಚಂದ್ರನ (೧೦ನೆಯ ಶ.) ತತ್ವದೀಪಿಕಾ ವ್ಯಾಖ್ಯಾನದಲ್ಲಿ ಹೆಚ್ಚಿನ ವಿವರಣೆಯಿಲ್ಲವಾದರೂ ಜಯಸೇನನ (೧೨ನೆಯ ಶ.) ತಾತ್ಪರ್ಯವೃತ್ತಿ ವ್ಯಾಖ್ಯಾನದಲ್ಲಿ ಗಮನಾರ್ಹ ವಿವರಣೆಯಿದೆ : ಆಗಮಗಳು ಮುನಿಗೆ ಚೇಲಖಣ್ಡ (‘ತುಣ್ಡುಬಟ್ಟೆ’), ಭಿಕ್ಷಾಪಾತ್ರೆ, ಮತ್ತು ‘ಇತರ ಅಂತಹ ವಸ್ತು’ವನ್ನು ಉಪಯೋಗಿಸಬಹುದೆಂದು ಕೊಂಡಕುಂದರ ಮೂರು ಹೆಚ್ಚಿನ ಗಾಥಾಗಳಲ್ಲಿದೆ; ‘ಇತರ ಅಂತಹ ವಸ್ತು’ಗಳೆಂದರೆ ಕಂಬಲ, ಮಲಗಲು ಮೆತ್ತಗಿರುವ ಚಾಪೆ ಇತ್ಯಾದಿ. ಜಯಸೇನನ ಈ ವ್ಯಾಖ್ಯಾನವು ಪರಿಭಾವನ ಯೋಗ್ಯವಾಗಿರುವಂತೆಯೇ ಪರಿಶೀಲನಾರ್ಹವೂ ಆಗಿದೆ (ಉಪಾಧ್ಯೆ, ಎ. ಎನ್‌. : ೧೯೯೪ : ೧೧೧.೩, ೪, ೫ – ಅಧಿಕ ಗಾಥಾಗಳು).

ಈ ವಿಚಾರವನ್ನು ಪರಿಶೋಧಿಸಿ, ಡಾ. ಪದ್ಮನಾಭ ಎಸ್‌. ಜೈನಿಯವರು ತಳೆದ ನಿಲವು ಹೀಗಿದೆ : “ಈ ಪದ್ಯಗಳು ಒಂದು ವೇಳೆ ಪ್ರಾಚೀನ ಪಾಠಕ್ಕೆ ಸೇರಿದ್ದಾಗಿದ್ದರೆ ‘ಕುಂದಕುಂದರಿಗೆ ಚೇಲಖಣ್ಢ ಸಹಿತರಾದ ಜೈನ ಮುನಿಸಂಘದ ಅರಿವು ಇದ್ದಿತು’ ಎಂದು ವಾದಿಸಬಹುದು. ಚೇಲಖಣ್ಢಮುನಿಗಳ ಚಹರೆ ಖಚಿತವಾಗಿರದಿದ್ದರೂ ಅವರು ಮಥುರಾ ಶಿಲ್ಪಗಳಲ್ಲಿ ತೋರಿಸಲಾಗಿರುವ ಮುನಿಗಳನ್ನು ಹೋಲುತ್ತಿದ್ದಿರಬೆಕು” (ಪದ್ಮನಾಭ ಎಸ್‌. ಜೈನಿ : ೧೯೯೫ : ೪೮೮ ಆ. ಟಿ. ೩೧). ಜೈನ ಮುನಿಗಳಲ್ಲಿ ಕ್ಷುಲ್ಲಕ, ಐಲಕ, ನಿರ್ಗ್ರಂಥ ಎಂಬ ಮೂರು ಶ್ರೇಣಿಗಳಿವೆ. ಉದ್ದಿಷ್ಟ ವಿರತ ಪ್ರತಿಮೆಯಲ್ಲಿ, ತ್ಯಾಗಿಯಾದ ಐಲಕನು ಕೌಪೀನ (ಲಂಗೋಟಿ) ಒಂದನ್ನು ಧರಿಸಿ, ಪಿಂಛ ಮತ್ತು ಕಮಂಡಲವನ್ನು ಹಿಡಿಯುತ್ತಾನೆ ಕೊಂಡಕುಂದರ ಪ್ರವಚನಸಾರ ಕೃತಿಯಲ್ಲಿ ಹೇಳಿರುವ ಹೇಳಿರುವ ಚೇಲಖಣ್ಡ (ತುಂಡು ಬಟ್ಟೆ) ಈ ಕೌಪೀನ ಆಗಿರಲೂಬಹುದು.

ಶ್ವೇತಾಂಬರ ಆಚಾರ್ಯನಾದ ಹರಿಭದ್ರಸೂರಿಯು (ಕ್ರಿ. ಶ. ಎಂಟನೆಯ ಶ.) ಕಟಿಪಟ್ಟಿಯಾದ ಕೌಪೀನವನ್ನು (ಲಂಗೋಟಿ) ಕುರಿತು ಹೇಳಿರುವ ಗಾಥಾ ಹೀಗಿದೆ :

ಕಿವೋ ನ ಕುಣಇ ಲೋಯಂ ಲಜ್ಜಇ ಪಡಿಮಾಇ ಜಲ್ಲಮುವಣೇಈ
ಸೋವಾಹಣೋಯ ಹಿಂಡಇ ಬಂಧ ಇ ಕಟಿಪಟ್ಟಯಮಕಜ್ಜೇ ||
(ಹರಿಭದ್ರಸೂರಿ : ಸಂಬೋಧ ಪ್ರಕರಣ : ಗಾಥಾ ಸಂಖ್ಯೆ – ೩೪)

ಕಾರಣ ಇಲ್ಲದೆಯೂ ಕಟಪಟ್ಟಿಯನ್ನು ಉಪಯೋಗಿಸುವರು, ಇದು ಅವರ ಮನಸ್ಸಿನ ಸಡಿಲತೆಯನ್ನು ತೋರಿಸುತ್ತದೆ. ಹರಿಭದ್ರನು ಹೀಗೆ ಹೇಳಿರುವುದರಿಂದ ನಾಗ್ನ್ಯದೊಂದಿಗೆ ಸಕಾರಣ ಕಟಿಪಟ್ಟಿಧಾರಣವನ್ನು ಪುರಸ್ಕರಿಸಲಾಗಿದೆ.