ಇಂದಿನ ಬೆಳಗಾವಿ ನಗರದ ಹಳೆಯ ಹೆಸರು ವೇಣುಗ್ರಾಮ – ವೇಳುಗ್ರಾಮ. ಈ ಜಿಲ್ಲೆಯ ಸೌದತ್ತಿಗೆ ೧೯ನೆಯ ಶತಮಾನದವರೆಗೆ ಪರಸಗಡ ತಾಲ್ಲೂಕು ಎಂದು ಕರೆದಿದೆ. ಬೆಳಗಾವಿ ಮತ್ತು ಸುದತ್ತಿಯ ಸುತ್ತಣ ಪ್ರದೇಶವನ್ನು ಹಿಂದೆ ಹೆಸರಾಂತ ರಟ್ಟಕುಲಪ್ರಧಾನರು ಆಳಿದರು. ಸುಮಾರು ೩೫೦ ವರ್ಷಗಳವರೆಗೆ ಈ ರಟ್ಟರ ಆಳ್ವಿಕೆ ನಡೆಯಿತು. ಅವರ ಕಾಲದ ಸಂಸ್ಕೃತ ಮತ್ತು ಕನ್ನಡ ಶಾಸನಗಳನ್ನು ಜೆ. ಎಫ್. ಫ್ಲೀಟರು ಹೊರತಂದಿದ್ದಾರೆ. (೧೮೭೪).

ಸೌದತ್ತಿ, ಸೌಂದತ್ತಿ, ಸವದತ್ತಿ, ಸಾವನ್ದತ್ತಿ, ಸುಗಂಧವವರ್ತಿ – ಎಂಬ ಏಕಮೂಲ ನಿಷ್ಪನ್ನ ಶಬ್ಧರೂಪಗಳ ನಿಷ್ಪತ್ತಿ ಮತ್ತು ವಿಕಾಸ ಕುರಿತ ಚರ್ಚೆ ತೃಪ್ತಿಕರವಾಗಿ ನಡೆದಿಲ್ಲ. ಈಗ ಜನರೂಡಿಯಲ್ಲಿ ವಾಡಿಕೆಯಾಗಿರುವಂತೆ, ಸಂಸ್ಕೃತದ ಸುಗಂಧವರ್ತಿ ಎಂಬುದರಿಂದ ಬಂದ ತದ್ಭವರೂಪಗಳು ಇವಲ್ಲ. ವಾಸ್ತವವು ಇದರ ತದ್ವಿರುದ್ಧವಾಗಿ ನಡೆದಿರುವ ಭಾಷಿಕ ಪ್ರಕ್ರಿಯೆಯಾಗಿದೆ. ಸವದತ್ತಿ ಎಂಬುದನ್ನು ಸಂಸ್ಕೃತಗೊಳಿಸಿದ ರೂಪವೆ ಸುಗಂಧವರ್ತಿ. ಇವೆಲ್ಲದಕ್ಕೂ ಮೂಲವಾಗಿರುವುದು ‘ಸವಣದತ್ತಿ’ ಎಂಬುದು. ಜೈನ ಮುನಿಗಳಾದ ಶ್ರಮಣರಿಗೆ ದತ್ತಿಯಾಗಿ ಕೊಟ್ಟ ಹೊಲ, ನೆಲ, ದೇಗುಲ, ಇದ್ದ ಪ್ರದೇಶವೇ ಸವಣದತ್ತಿ. ಸಂಸ್ಕೃತದ ‘ಶ್ರಮಣ’ ಎಂಬ ಶಬ್ಧರೂಪವು ಪ್ರಾಕೃತದಲ್ಲಿ ‘ಸಮಣ, ಸವಣ’ ಎಂದಾಗುತ್ತದೆ. ಶ್ರಮಣ, ಸಮಣ, ಸವಣ ಎಂದರೆ ‘ಜೈನ ಸನ್ಯಾಸಿ’ ಎಂದರ್ಥ. ಶ್ರಮಣ – ಶ್ರವಣ ಎಂಬ ಸಂಸ್ಕೃತ ಯುಗ್ಮರೂಪಗಳಿಗೆ ಸಂವಾದಿಯಾಗಿ ಪ್ರಾಕೃತದಲ್ಲಿ ಸಮಣ – ಸವಣ ಎಂಬ ಸಮಾನರೂಪಗಳಿವೆ. ಕನ್ನಡದಲ್ಲಿಯೂ ಈ ಪ್ರಾಕೃತ ರೂಪಗಳು ೧೨೦೦ ವರ್ಷಗಳಿಂದ ಬಳಕೆಯಲ್ಲಿವೆ.

ಈಗಿನ ಸೌದತ್ತಿಯ ಎಲ್ಲಮ್ಮನ ಗುಡಿ ಇರುವ ಪ್ರದೇಶವನ್ನು ಆಳಿದವರು ರಟ್ಟರು. ಅವರು ಅಪ್ಪಟ ಜೈನರು. ಎಲ್ಲಮ್ಮನ ಗುಡಿಯು ರಟ್ಟರ ಪಟ್ಟಜಿನಾಲಯ ಆಗಿತ್ತು. ಎಂಬುದು ಈಗ ಸ್ಥಾಪಿತವಾಗಿರುವ ಸತ್ಯ. ರಟ್ಟರ ಕಾಲದಲ್ಲಿ ಈ ಭಾಗವೆಲ್ಲವೂ ಜೈನರ ನೆಲೆವೀಡಾಗಿತ್ತು. ಜೈನ ಮುನಿ ಸಂಘಗಳೂ ಅನ್ವಯಗಳೂ ಗಣಗಳೂ ಗಚ್ಛಗಳೂ ಇಲ್ಲಿ ಜೀವಂತವಾಗಿದ್ದವು. ಅವುಗಳಲ್ಲಿ ಚಂದ್ರಕಾವಾಟ ಎಂಬ ಅನ್ವಯವು ಪ್ರಬಲವಾಗಿದ್ದಿತ್ತು. ಚಂದ್ರಪ್ರಭತೀರ್ಥಂಕರರ ಬಸದಿಯು ಪ್ರಮುಖವಾಗಿದ್ದುದರಿಂದ ಚಂದ್ರಕಾವಾಟ ಎಂಬ ಹೆಸರೂ ಮುನಿಸಂಘವೂ ರೂಪಿತವಾಯಿತೆನ್ನಲಾಗಿದೆ; ಚಂದ್ರಕಾವಾಟ ಎಂಬ ಸ್ಥಳವಾಚಿ ಮೂಲದಿಂದ ಬಂದ ಆಭಿಧಾನನೆಂಬ ಅಭಿಪ್ರಾಯವೂ ಇದೆ.

ಚಂದ್ರಕಾವಾಟ ಅನ್ವಯದಲ್ಲಿಯೇ ಕಾರೇಯಗಣವೂ ಸೇನಾನ್ವಯವೂ ತಿಂತ್ರಿಣೀ ಗಚ್ಛವೂ ಸೇರಿವೆ. ಸೌದತ್ತಿ – ೧೨ ಎಂಬ ಪುಟ್ಟ ಆಡಳಿತ ಘಟಕಕ್ಕೆ ಸೇರಿದ ಮುಳುಗುಂದ ಎಂಬ ಹೆಸರಿನ ಹಳೆಯ ಬಸದಿಗೆ, ರಟ್ಟರ ರಾಜನಾದ ಕನ್ನಭೂಬುಜನು ತನ್ನ ಕ್ಷೇತ್ರದಿಂದ ಎರಡು ಹುಣಸೆಯ ಮರಗಳ ನಡುವಣದ ಆರು ನಿವರ್ತನ ಭೂಮಿಯನ್ನು ದಾನವಾಗಿ ಇತ್ತನೆಂದು ಕ್ರಿ. ಶ. ೮೭೫ ರ ಶಾಸನದಲ್ಲಿ ಉತ್ಕೀರ್ಣವಾಗಿದೆ : ತಿಂತ್ರಿಣೀ ವೃಕ್ಷಯೋರ್ದ್ವಯೋರ್‌ ಮಧ್ಯೇ ಯಾಸ್ಥಿತಾ ಭೂಮಿರ್ದ್ದತ್ತಾ ಶ್ರೀ ಕನ್ನ ಭೂಭುಜಾ(ಫ್ಲೀಟ್‌ : ೧೮೭೪ : ೧೯೪). ತಿಂತ್ರಿಣೀ ವೃಕ್ಷ ಎಂದರೆ ಹುಣಸೆಯ ಮರ. ತಿಂತ್ರಿಣೀ ವೃಕ್ಷದ ಸಂಬಂಧದಿಂದಾಗಿ ತಿಂತ್ರಿಣಿಗಚ್ಛವೆಂದು ಹೆಸರಾಯಿತು.

ಮೈಳಾಪತೀರ್ಥವು ಮೊದಲಿನಿಂದಲೂ ಮುಳುಗುಂದದ ಸಂಬಂಧವನ್ನು ಹೊಂದಿತ್ತು. ಮೈಳಾಪತೀರ್ಥವು ಮಳಹಾರೀ ಎಂಬ ನದಿಯ ಸೀಮಾ ಪ್ರದೇಶದಲ್ಲಿ ಇದ್ದ ಪ್ರಭಾವಶಾಲಿ ಜೈನಯಾತ್ರಾಸ್ಥಳ (ಫ್ಲೀಟ್‌ : ೧೮೭೪ : ೧೯೮). ಮೈಳಾಪ ತೀರ್ಥವು ಯಾಪನೀಯ ಸಂಘದ ಮುಖ್ಯ ಭಾಗವಾಗಿತ್ತು. ಇದಕ್ಕೆ ಸೇರಿದ ಸವಣರೂ ಶಿಷ್ಯರೂ ೯ – ೧೦ ನೆಯ ಶತಮಾನಗಳಿಂದ ಕಂಡುಬರುತ್ತಾರೆ. ಮೈಳಾಪತೀರ್ಥದ ಪರಂಪರೆಗೆ ಸೇರಿದ ಜಿನಮಂದಿರಗಳ ಸವಣರಿಗೆ ರಾಷ್ಟ್ರಕೂಟ ರಾಜರಿಂದ ದಾನದತ್ತಿಯಾಗಿ ಕೊಡಲ್ಪಟ್ಟ ಸ್ಥಳವೇ ಸವಣದತ್ತಿ. ಮೈಳಾಪತೀರ್ಥ ಸವಣರಿಗೆ ರಟ್ಟರಾಜರು ದತ್ತಿಕೊಟ್ಟ ಕಾರಣ ‘ಸವಣದತ್ತಿ’ ಎಂಬ ಹೆಸರು ಚಾಲ್ತಿ ಪಡೆಯಿತು. ಒಂದು ಶಾಸನದಲ್ಲಿ ಈ ಅಂಶಕ್ಕೆ ಒದೆಗಲ್ಲಾಗಿ ನಿಲ್ಲುವ ಮಾತುಗಳಿವೆ : ಸವಂದತ್ತಿಯ ಸವಣಬೊಲದ ….(ಕ. ಇ. ಸಂಪುಟ ಸಂಖ್ಯೆ ೬. ಶಾಸನ ಸಂಖ್ಯೆ. ೭೩. ಕ್ರಿ. ಶ. ೧೩೨೮). ಸವಣದತ್ತಿ ಎಂಬ ಶಬ್ಧರೂಪ ಕ್ರಮೇಣ ಜನರ ಉಚ್ಚಾರಣೆಗೆ ಅನುಕೂಲವಾಗುವಂತೆ ಹೊರಳುತ ಸವಣದತ್ತಿ – ಸವಂದತ್ತಿ – ಸೌಂದತ್ತಿ – ಸವದತ್ತಿ – ಸೌದತ್ತಿ ಎಂಬ ಸ್ವನ ವ್ಯತ್ಯಾಸಗಳನ್ನು ಪಡೆದಿದೆ.

ಶಾಸನಗಳಲ್ಲಿ ನಮೂದಾಗಿರುವ ಪ್ರಕಾರ ಮುಳ್ಗುಂದದ ‘ವರವೈಶ್ಯಜಾತಿ ಜಾತಃ ಶ್ರೇಷ್ಠಿಭಿಃ’ (ಫ್ಲೀಟ್‌ : ೧೮೭೪ :೧೯೦ – ೯೧), ಅಂದರೆ ವೈಶ್ಯಕುಲದವರು (ಬಯಿಸಕುಲ) ಮೈಳಾಪತೀರ್ಥಕ್ಕ ದಾನದತ್ತಿಗಳನ್ನಿತ್ತು ಭಕ್ತರಾಗಿದ್ದರು. ಸೌದತ್ತಿಯ ರಟ್ಟರೆನಿಸಿದ ರಾಜಮನೆತನದ ಆರಂಭದ ದೊರೆಗಳಾದ ಮೆರಡ, ಪೃಥ್ವೀರಾಮ, ಪಿಟ್ಟುಗ, ಕನ್ನರ – ಎಂಬೀ ಅದ್ಯರು ಸಹ, ಸವಣದತ್ತಿಯದ ಮೈಳಾಪತೀರ್ಥದ ಆಡಳಿತವನ್ನು ನೋಡಿಕೊಳ್ಳುತ್ತ ಅದರ ನಿರ್ವಹಣೆಯ ಭಾಗವಾಗಿದ್ದರು. ಪೃಥ್ವೀರಾಮನು ಮೈಳಾಪತೀರ್ಥದ ಗುರುಕುಲದಲ್ಲಿ ಛಾತ್ರ(ಚಟ್ಟ=ಶಿಷ್ಯ) ನಾಗಿದ್ದು ಅಲ್ಲಿ ಕಲಿಯುತ್ತಿದ್ದನೆಂದು ಶಾಸನದಲ್ಲಿ ಸ್ಪಷ್ಟವಾಗಿ ಹೇಳಿದೆ.

ಸೌದತ್ತಿಯಲ್ಲಿ ಈಗಲೂ ಇರುವ ಎಲ್ಲಮ್ಮನ ಇಡೀ ಗುಡ್ಡವೇ ಮೈಳಾಪತೀರ್ಥವಾಗಿದ್ದದು. ಎಲ್ಲಮ್ಮನ ದೇವಾಲಯವು ರಟ್ಟರಾಜರಿಗೆ ಪಟ್ಟ ಜಿನಾಲಯವಾಗಿದ್ದುದನ್ನು ಪ್ರಸ್ತಾಪಿಸಿದ್ದಾಗಿದೆ. ಸವಣದತ್ತಿ – ಸೌದತ್ತಿಯು ಕುಹುಂಡಿ (ಕುಂಡಿ – ಕೋಡಿ) – ಮುನ್ನೂರಕ್ಕೆ ರಾಜಧಾನಿಗಿತ್ತು. ಈ ನೆಲೆವೀಡು ಹನ್ನೆರಡನೆಯ ಶತಮಾನದಲ್ಲಿ ಸೌದತ್ತಿಯಿಂದ ವೇಣುಗ್ರಾಮ (ಬೆಳಗಾವಿ) ಎಪ್ಪತ್ತಕ್ಕೆ ವರ್ಗವಾಯಿತು. ಹೀಗೆ ಸ್ಥಳಾಂತರಿಸಲಾದ ವೇಣುಗ್ರಾಮ – ೭೦ಕ್ಕೆ ರಾಜಧಾನಿಯಾಗಿದ್ದುದನ್ನು ರಟ್ಟರಾಜ್ಯವನ್ನೂ ೧೩ನೆಯ ಶತಮಾನದಲ್ಲಿ ಪರಾಜಯಗೊಳಿಸಿ, ಸಚಿವ ಬೀಚಣನು ತನ್ನ ಯಾದವ (ಸೇವಣ) ನೃಪತಿಯಾದ ಕನ್ನರದೇವನಿಗೆ ಒಪ್ಪಿಸಿದನು.

ಸೌದತ್ತಿ ಮತ್ತು ಮುಳ್ಗುಂದ – ಇವು ಧವಳ ವಿಷಯದಲ್ಲಿ ಇದ್ದುವೆಂದು ಶಾಸನೋಕ್ತವಾಗಿದೆ (ಫ್ಲೀಟ್‌ : ೧೯೦). ಧವಳ ವಿಷಯವೆಂದರೆ, ಶತಮಾನಗಳಲ್ಲಿ ನೂರಾರು ಬಾರಿ ಬರುವ ಬೆಳ್ವೊಲ – ೩೦೦ ರ ಪ್ರದೇಶ. ಈ ಧವಳ ವಿಷಯದಲ್ಲಿ ವರ ವೈಶ್ಯಜಾತಿಯಲ್ಲಿ ಹುಟ್ಟಿದ ಚಂದ್ರಾರ್ಯನ ಮಗನಾದ ಚೀಕಾರ್ಯನು ಮುಳ್ಗುಂದದಲ್ಲಿ ಉನ್ನತ ಜಿನಾಲಯವನ್ನ ಕ್ರಿ. ಶ. ೮೫೦ರಲ್ಲಿ ಕಟ್ಟಿಸಿದನು. ಚೀಕಾರ್ಯನ ಮಗಂದಿರು ನಾಗಾರ್ಯ ಮತ್ತು ಅರಸಾರ್ಯ, ಚಿಕ್ಕಮಗನಾದ ಅರಸಾರ್ಯನು ಜೈನ ನಯಶಾಸ್ತ್ರದಲ್ಲಿಯೂ ಆಗಮಶಾಸ್ತ್ರದಲ್ಲೂ ಕುಶಲನಾಗಿದ್ದು ಸಮ್ಯಕ್ತ್ವ ಚಿತ್ತನಾಗಿದ್ದನೆಂದು ಕ್ರಿ. ಶ. ೯೦೨ರ ಶಾಸನ ಹೇಳುತ್ತದೆ (ಫ್ಲೀಟ್‌ : ೧೯೧).

ಅರಸಾರ್ಯನ ತಂದೆಯಿಂದ ನಿರ್ಮಿಸಲಾದ ಜಿನಾಲಯವು ಬೆಳ್ವೊಲದ ಮುಳ್ಗುಂದದಲ್ಲಿದೆ. ಅದು ಚಂದ್ರಿಕಾವಾಟದ ಸೇನಾನ್ವಯಕ್ಕೆ ಸೇರಿತ್ತು. ಚಂದ್ರ ಫಭುಜಿನರ ದೇವಾಲಯ ಮೂಲದ ಪರಂಪರಗೆ ಸೇರಿದ ಮುನಿಗಳು ಚಂದ್ರಿಕಾವಾಟ ಅನ್ಯಯದವರೆಂದು ತಿಳಿಸಿದೆ. ಸೌದತ್ತಿಯ ಶಾಸನದ ಆರಂಭದಲ್ಲಿಯೂ ಚಂದ್ರಪ್ರಭ ತೀರ್ಥಂಕರ ಸ್ತುತಿಯಿದೆ : ಚಂದ್ರಪ್ರಭ ಆಖ್ಯಾಯ ಜೈನ ಶಾಸನ ವೃದ್ಧಯೇ (ಫ್ಲೀಟ್‌ : ೧೯೦). ಚಂದ್ರಪ್ರಭಾ ಎಂಬುದಕ್ಕೆ ಸಂಬಂಧಿಸಿದ್ದು ಚಂದ್ರಿಕಾ, ಚಂದ್ರಪ್ರಭ ತೀರ್ಥಂಕರರ ಜಿನಾಲಯ ಇರುವಸ್ಥಳ ಚಂದ್ರಿಕಾವಾಟ. ಚಂದ್ರಪ್ರಭಜಿನರ ಶಾಸನವನ್ನು ಬೆಳಸಿ ಹಬ್ಬಿಸುವುದರಲ್ಲಿ ತೊಡಗಿದವರು ಚಂದ್ರಿಕಾವಾಟ ಅನ್ವಯದ ಮುನಿಗಳು. ಆದ್ದರಿಂದ, ಇದರ ಪೂರ್ವಾಪುರ ಅಂತರಬಾಹ್ಯ ಪ್ರಮಾಣಾಧಾರಗಳು ಬೊಟ್ಟುಮಾಡಿ ತೋರಿಸುವಂತೆ, ಈ ಚಂದ್ರಿಕಾವಾಟ ಅನ್ವಯದ ಜೈನಯತಿ ಸಮುದಾಯಕ್ಕೆ ಉಗಮ ಸ್ಥಳ ಮುಳ್ಗುಂದದ ಚಂದ್ರಪ್ರಭ ಜಿನಾಲಯ. ಇದು ಒಂಭತ್ತನೆಯ ಶತಮಾನದ ನಡುಗಾಲದಲ್ಲಿ ಹುಟ್ಟಿತು. ಅಲ್ಲಿಂದ ಮುಂದೆ ಈ ಪರಂಪರೆಗೆ ಸೇರಿದ ಭಟ್ಟಾರಕರ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.

ಮೈಳಾಪತೀರ್ಥ ಕ್ಷೇತ್ರವು ಮುಳ್ಗುಂದ, ಸವದತ್ತಿ, ವೇಣುಗ್ರಾಮ (ಬೆಳಗಾವಿ), ಐಹೊಳೆ, ಪಟ್ಟದ ಕಲ್ಲು, ಬಾದಮಿ, ಸೊ(ಸ)ರಟೂರು ಬಂಕಾಪುರ – ಮೊದಲಾದ ಜೈನಕೇಂದ್ರ ಸ್ಥಳಗಳಿಗೆಲ್ಲ ಪ್ರಧಾನ ಉಪಾಸನೆಯ ಸ್ಥಳವಾಗಿತ್ತು. ಅದರ ಮೂಲಸೆಲೆ ಎಲ್ಲಿತ್ತೆಂಬುದನ್ನು ಶಾಸನದಲ್ಲಿ ಬರುವ ‘ಮಳಹಾರೀ ನದೀ ಸೀಮಾ’ ಎಂಬ ಮಾತು ತಿಳಿಸಿದೆ. ಮೈಳಾಪ ತೀರ್ಥವು ಮಳಹಾರೀ (ಮಲಪ್ರಭಾ) ತೊರೆಯ ದಂಡೆಯ ಮೇಲಿದ್ದ ಒಂದು ಊರು, ಬಸದಿ. ಮೈಳಾಪತೀರ್ಥದ ಕಾರೇಯ ಗಣದಲ್ಲಿ ಆಗಿ ಹೋದ ಜಿನಮುನಿಗಳಲ್ಲಿ ಮೊದಲಿನವರು ಮುಳ್ಳ ಭಟ್ಟಾರಕರು (ಕ್ರಿ. ಶ. ೮೦೦). ಅವರ ಶಿಷ್ಯರು ಗುಣ ಕೀರ್ತಿ ಮುನೀಶ್ವರ (ಕ್ರಿ. ಶ. ೮೩೫). ಇವರ ಶಿಷ್ಯರು ಇಂದ್ರಕೀರ್ತಿಸ್ವಾಮಿ (ಕ್ರಿ. ಶ. ೮೭೦). ಸವದತ್ತಿಯ ಮೂಲ ಪುರುಷನಾದ ಮೇರಡನ ಹಿರಿಯ ಮಗನಾದ ಪೃಥ್ವೀರಾಮನು ಇಂದ್ರಕೀರ್ತಿ ಸ್ವಾಮಿಯ ಶಿಷ್ಯನೂ ರಾಷ್ಟ್ರಕೂಟ ಇಮ್ಮುಡಿ ಕೃಷ್ಣರಾಜನ ಮಹಾಸಾಮಂತನೂ ಆಗಿದ್ದನು. (ಫ್ಲೀಟ್‌ : ೧೯೫).

ಕ್ರಿ. ಶ. ೮೭೦ರ ಆಜೂಬಾಜಿನಲ್ಲಿ ಪೃಥ್ವೀರಾಮನಿಂದ ಮೈಳಾಪ ತೀರ್ಥಕ್ಕೆ ಸೇರಿದ ಒಂದು ಜಿನಗೃಹವು ಕಟ್ಟಲ್ಪಟ್ಟಿತ್ತು ಈ ಜಿನಭವನಕ್ಕೆ ರಾಜನು ಆರು ನಿವರ್ತನ ಭೂಮಿಯನ್ನು ದಾನ ಮಾಡಿದನು. ಆದಾದ ನೂರು ವರ್ಷಗಳ ತರುವಾಯ ಮುಂದೆ ಇದೇ ಬಸದಿಗೆ ಮಹಾಮಂಡಲೇಶ್ವರ ಇಮ್ಮುಡಿ ಕಾರ್ತವೀರ್ಯ (ಕತ್ತಭೂಪ)ನೂ ಆತನ ಹಿರಿಯ ಹೆಂಡತಿಯಾದ ಭಾಗಲಾಂಬಿಕೆ (ಭಾಗಲಾದೇವಿ)ಯೂ ಮತ್ತೆ ೧೮ ನಿವರ್ತನ ಭೂಮಿಯನ್ನು ತೆರಿಗೆ ಇರದ ದಾನವಾಗಿ ಕೊಟ್ಟರು.

ಮೈಳಾಪ ತೀರ್ಥಕ್ಕೂ ಮೈಲಾರ (ಖಂಡೋಬಾ) ದೇವರಿಗೂ ನಾಮ ಸಾದೃಶ್ಯದ ಹೊರತು ಬೇರೆಯಾವ ಸಂಬಂಧವೂ ಇಲ್ಲ. ಯಾಪನೀಯ ಸಂಘದಲ್ಲಿ ಅಂತರ್ಗತವಾಗಿದ್ದ ಮೈಳಾಪ ತೀರ್ಥ ಅನ್ವಯವು ಜನಪ್ರಿಯವಾಗಿತ್ತು. ಇದಕ್ಕೆ ನಡೆದುಕೊಳ್ಳುತ್ತಿದ್ದ ಶ್ರಾವಕಿಯರಿಗೆ ಮೈಳಲಾದೇವಿ ಎಂದು ಹೆಸರಿಡುತ್ತಿದ್ದರು. ಸೌದತ್ತಿಯ ರಟ್ಟರ ಮತ್ತು ಚಾಳುಕ್ಯ ರಾಜವಂಶದ ರಾಣಿಯರಿಗೂ, ರಾಜಕುಮಾರಿಯರಿಗೂ ಮೈಳಲಾದೇವಿಯೆಂಬ ಹೆಸರು ಕಂಡುಬರುತ್ತದೆ. ಅವರೆಲ್ಲ ಮೈಳಾಪ ತೀರ್ಥದ ಅನುಗ್ರಹಪಾತ್ರರು. ಮೈಳಾಪ ತೀರ್ಥಮ್ನಾಯವೂ ಮೈಳಾಪಾನ್ವಯೂ ಒಂದೇ ಆರ್ಥದ ಭಿನ್ನರೂಪಗಳು. ಮೈಳಾಪ ತೀರ್ಥವು ಯಾಪನೀಯ ಸಂಘದ ಜೀವಧ್ವನಿಯಾಗಿ, ಮೂರು ನಾಲ್ಕು ಶತಮಾನದವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿತ್ತು. ರಟ್ಟವಂಶದ ರಾಜರಾಣಿಯರು ಈ ಮೈಳಾಪ ತೀರ್ಥ ಪರಂಪರೆಯ ದೈವಕ್ಕೆ, ಗುರುಗಳಿಗೆ ನಿಷ್ಠೆಯಿಂದ ನಡೆಕೊಂಡರು.