ಮಹಾವೀರರ ಜೀವಿತ ಕಾಲದಲ್ಲಿಯೇ ಮಹಾವೀರರ ಅಳಿಯ ಜಮಾಲಿಯು ‘ಬಹುರತ’ ಎಂಬ ಪಂಥವನ್ನು ಪ್ರತಿಪಾದಿಸಿದನು. ತಿಷ್ಯಗುಪ್ತ ಎಂಬಾತನು ‘ಜೀವಪ್ರದೇಶ’ ಎಂಬ ಸಿದ್ಧಾಂತವನ್ನು ಮುಂದಿಟ್ಟನು. ಕ್ರಿ. ಪೂ. ಮೂರನೆಯ ಶತಮಾನದಲ್ಲಿ ಆರ್ಯಾಷಢನು ಭಿನ್ನ ಆಚಾರವನ್ನೊಳಗೊಂಡ ಶಾಖೆಯನ್ನು ತೆರೆದನು. ಇವು ಯಾವುವೂ ಪ್ರಬಲವಾಗಿ ಬೆಳೆಯಲಿಲ್ಲ (ವಿಶೇಷಾವಶ್ಯಕ ಭಾಷ್ಯ, ರಿಷಬ್‌ ದೇವ್‌ ಕೇಶರಿಮಲ್‌, ತತ್ಲಮ್‌, ೧೯೩೬, ಗಾಥಾಗಳು ೨೩೦೪ ರಿಂದ ೨೫೪೮, ಕೋಟ್ಯಾಚಾರ್ಯ ವಿರಚಿತ ವೃತ್ತಿಯೂ ಇದೆ.)

ಶ್ವೇತಾಂಬರ ಆಚಾರ್ಯರು ಬಿಳಿ ಅರಿವೆ ತೊಡುವರು (ಸಚೇಲಕರು). ಅವರ ಹತ್ತಿರ ನಿತ್ಯೋಪಯೋಗಿಯಾದ ೧೪ ಉಪಕರಣ ಇರುತ್ತದೆ : ಪಾತ್ರ, ಪಾತ್ರಬಂಧ, ಪಾತ್ರಸ್ಥಾಪನಾ, ಪಾತ್ರ ಪ್ರಮಾರ್ಜನಿಕಾ, ಪಟಲ, ರಜಸ್ತಾನಾ, ಗುಚ್ಛಕ, ಎರಡು ಚಾದರ, ಕಂಬಲ, ರಜೋಹರಣ, ಮುಖಪಟ್ಟ, ಮಾತ್ರಕ, ಚೋಲಪಟ್ಟಕ, ಜಿನಮೂರ್ತಿಗಳನ್ನು ವಸ್ತ್ರಾಭರಣಗಳಿಂದ ಸಿಂಗರಿಸುವರು. ಶ್ವೇತಾಂಬರ ಸಿದ್ಧಾಂತದಲ್ಲಿ ಮಾನ್ಯಮಾಡಿರುವ ಅಂಶಗಳು :

೦೧. ಕೇವಲಿಗಳ ಕವಲಾಹಾರ
೦೨. ಕೇವಲಿಗಳ ನೀಹಾರ
೦೩. ಸ್ತ್ರೀ ಮುಕ್ತಿ,
೦೪. ಶೂದ್ರಮುಕ್ತಿ
೦೫. ವಸ್ತ್ರ ಸಹಿತ ಮುಕ್ತಿ
೦೬. ಗೃಹಸ್ಥಾವಸ್ಥೆಯಲ್ಲಿ ಮುಕ್ತಿ
೦೭. ಅಲಂಕಾರ, ಕಟಿವಸ್ತ್ರ, ಇರುವ ಪ್ರತಿಮೆಗಳ ಪೂಜನ
೦೮. ಮುನಿಗಳಿಗೆ ೧೪ ಉಪಕರಣಗಳು ಇರುವುದು
೦೯. ತೀರ್ಥಂಕರ ಮಲ್ಲಿನಾಥರು ಸ್ತ್ರೀಯಾಗಿರುವುದು
೧೦. ಆಗಮನಗಳ ಹನ್ನೊಂದು ಅಂಗಗಳು ಉಪಲಬ್ಧವಾಗಿವೆಯೆಂಬ ಮಾನ್ಯತೆ
೧೧. ಭರತ ಚಕ್ರಿಗೆ ಮನೆಯಲ್ಲಿಯೇ ಕೇವಲಜ್ಞಾನ ಪ್ರಾಪ್ತಿ
೧೨. ಶೂದ್ರರ ಮನೆಗಳಲ್ಲಿಯೇ ಮುನಿಗಳು ಆಹಾರ ಸ್ವೀಕರಿಸುವುದು
೧೩. ಮಹಾವೀರನಿದ್ದ ತಾಯಿಯ ಗರ್ಭಹರಣ
೧೪. ಮಹಾವೀರನ ಮದುವೆ, ಮಗಳು ಹುಟ್ಟಿದ್ದು
೧೫. ಮಹಾವೀರನಿಗೆ ತೇಜೋಲೇಶ್ಯದಿಂದ ಉಪಸರ್ಗ
೧೬. ಮಹಾವೀರನ ಹೆಗಲ ಮೇಲೆ ದೇವದೂಷ್ಯ ಅರಿವೆ ಇರುವುದು
೧೭. ಆದಿಜಿನನ ತಾಯಿ ಮರುದೇವಿಯು ಅನೆಯ ಮೇಲೆ ಕುಳಿತು ಮುಕ್ತಿಹೊಂದಿದ್ದು
೧೮. ಸಾಧುಗಳು ಅನೇಕ ಮನೆಗಳಲ್ಲಿ ಭಿಕ್ಷೆಯನ್ನು ಪಡೆಯುವುದು; ಮದಕರಿ ವೃತ್ತಿ.

ದಿಗಂಬರರು (ಅಚೇಲಕರು) ಪೂರ್ತಿಯಾಗಿ ನಗ್ನರು, ನಿರ್ಗ್ರಂಥರು (ನಿಗ್ಗಂಠ). ಅವರ ಬಳಿ ಪಿಂಛಿ ಮತ್ತು ಕಮಂಡಲ ಮಾತ್ರ ಇರುತದೆ. ದಿಗಂಬರ ಆಮ್ನಾಯದಲ್ಲಿ

೦೧. ಕೇವಲಿಗಳು ಆಹಾರ ಪಡೆಯುವುದಿಲ್ಲ
೦೨. ಸ್ತ್ರೀ ಮುಕ್ತಿಯು ಸ್ತ್ರೀ ಪರ್ಯಾಯದಲ್ಲಿ ಸಾಧ್ಯವಿಲ್ಲ
೦೩. ವಸ್ತ್ರ ಸಹಿತ ಮುಕ್ತಿಯನ್ನು ಒಪ್ಪುವುದಿಲ್ಲ
೦೪. ಗೃಹಸ್ಥಾವಸ್ಥೆಯಲ್ಲಿ ಮುಕ್ತಿ ಕಠಿಣ
೦೫. ನಗ್ನ ಜಿನಪ್ರತಿಮೆಗಳನ್ನು ಪೂಜಿಸುವರು
೦೬. ಮಲ್ಲಿನಾಥ ತೀರ್ಥಂಕರರು ಸ್ತ್ರೀಯಾಗಿರುವುದನ್ನು ಅಂಗೀಕರಿಸುವುದಿಲ್ಲ.
೦೭. ಆಗಮಗಳ ಕೆಲವು ಭಾಗಗಳು ಅನುಪಲಬ್ಧವೆಂದು ಹೇಳುವರು.
೦೮. ಮಹಾವೀರರಿಗೆ ಮದುವೆ ಅಥವಾ ಮಕ್ಕಳಿದ್ದರೆಂಬುದನ್ನು ಮಾನ್ಯಮಾಡುವುದಿಲ್ಲ.
೦೯. ಆದಿಜಿನರ ತಾಯಿ ಮರುದೇವಿಯು ಸ್ತ್ರೀ ಪರ್ಯಾಯದಲ್ಲಿ ಮುಕ್ತಿಗೆ ಸಂದರೆಂದು ಒಪ್ಪುವುದಿಲ್ಲ.
೧೦. ಅನೇಕ ಮನೆಗಳಲ್ಲಿ ಭಿಕ್ಷೆಪಡೆಯುವ ಪದ್ಧತಿಯಿಲ್ಲ.
೧೧. ಒಂದು ಮನೆಯಲ್ಲಿ, ಒಂದು ಸಲ ಮಾತ್ರ, ನಿಂತುಕೊಂಡು ಅಂಗೈಯಲ್ಲಿ ಆಹಾರ ಸ್ವೀಕರಿಸುವರು.

ಯಾಪನೀಯ ಸಂಘದ ತಾತ್ವಿಕ ನಿಲವನ್ನು ಅನ್ಯತ್ರ ಸಂಸ್ಕೃತೋಕ್ತಿಗಳಿಂದ ಪ್ರತಿಪಾದಿಸಿದ್ದಾಗಿದೆ, ಶ್ರುತಸಾಗರನ ಷಟ್‌ಪ್ರಾಬೃತ ಸಂಗ್ರಹದ ಸಾಲುಗಳನ್ನು ಉದಾಹರಿಸಿದೆ. ಅದರಿಂದ ಇಲ್ಲಿ ಹರಿಭದ್ರಸೂರಿಯು (ಕ್ರಿ. ಶ. ೮ನೆಯ ಶ. ದ ಆದಿಭಾಗ) ಪ್ರಾಕೃತ್ಯದಲ್ಲಿ ದಾಖಲಿಸಿರುವ ಯಾಪನೀಯ ತಂತ್ರವನ್ನು ಯಥಾವತ್ತಾಗಿ ಉದ್ಧರಿಸುತ್ತೇನೆ:

ಸ್ತ್ರೀ ಗ್ರಹಣಂ ಅಪಿ ತದ್ಭವ ಸಂಸಾರಕ್ಷಯೋ ಭವತಿ ಇತಿ
ಜ್ಞಾಪನಾರ್ಥಂ ವಚಃ, ಯಥೋಕ್ತಂ ಯಾಪನೀಯ ತಂತ್ರೇಃ ಣೋ ಖಲು ಇತ್ಥೀ
ಅಜೀವೋ, ಣ ಯಾವಿ ಅಭವ್ವಾ, ಣ ಯಾವಿ ದಂಸಣ ವಿರೋಹಿಣೀ,
ಣೋ ಅಮಾಣುಸಾ, ಣೋ ಅಣಾರಿ ಉಪ್ಪತ್ತೀ, ಣೋ ಅಸಂಖೇಜ್ಜಾಉಯ
ಣೋ ಐಕೂರಮೈ, ಣೋಣ ಉವಸಂತಮೋಹ, ಣೋಣ ಸುದ್ಧಾಚಾರಾ,
ಣೋ ಅಸುದ್ಧಬೊಂದೀ, ಣೋ ವವಸಾಯವಜ್ಜಿಯಾ, ಣೋ ಅಪುವ್ವಕರಣ
ವಿರೋಹಿಣೀ, ಣೋಣವ ಗುಣಠಾಣರಾಯಿಯಾ, ಣೋ ಅಜೋಗಲದ್ಧೀಏ,
ಣೋ ಅಕಲ್ಲಾಣ ಭಾಯಣಂತಿ, ಕಹಂಣ ಉತ್ತಮ ಧಮ್ಮಸಾಹಿಗತ್ತಿ ||

ಯಾಪನೀಯ ಪಂಥದ ಉಗಮ, ವಿಕಾಸ, ವಿಲೀನಗಳ ಚರ್ಚೆಯಲ್ಲಿ ಸೈದ್ಧಾಂತಿಕ ಜಿಜ್ಞಾಸೆಯೂ ಅಳವಟ್ಟಿದೆ. ಯಾಪನೀಯಕ್ಕೆ ಎರಡು ತುದಿಗಳು, ಶ್ವೇತಾಂಬರ ಒಂದು ತುದಿ, ದಿಗಂಬರ ಇನ್ನೊಂದು ಕೊನೆ. ಇವೆರಡರ ನಡುವೆ ನಿಂತ ಮಧ್ಯಮಾರ್ಗ ಯಾಪನೀಯ. ಬೌದ್ಧರ ಮದ್ಯಮ ಮಾರ್ಗ, ಬಹುಶಃ ಯಾಪನೀಯಕ್ಕೆ ಪ್ರೇರಣೆಯಲ್ಲದಿದ್ದರೂ ಇಲ್ಲಿ ನೆನಪಿಗೆ ಬರುತ್ತದೆ. ಯಾಪನೀಯದ ಮೂಲ ಚೂಲದ ವಾಗ್ವಾದದಲ್ಲಿ ತಾತ್ವಿಕವಾದ ನಾಲ್ಕು ಸಂಗತಿಗಳು ಬಹುವಾಗಿ, ಒಮ್ಮೊಮ್ಮೆ ಬಿರುಸಾಗಿ ಪ್ರಸ್ತಾಪಗೊಂಡಿವೆ :

೧. ಸ್ತ್ರೀ ಮುಕ್ತಿ, ೨. ನಗ್ನತ್ವ, ೩. ಕೇವಲಿ ಭುಕ್ತಿ, ೪. ಮೋಕ್ಷಪ್ರಾಪ್ತಿ.

ಇವು ನಾಲ್ಕೂ ಸಮಸ್ಯೆಗಳಲ್ಲವಾದರೂ, ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿವೆ. ನಗ್ನತ್ವದ ಪ್ರಶ್ನೆ ಪಾರ್ಶ್ವನಾಥ ತೀರ್ಥಂಕರರ ಕಾಲಕ್ಕಿಂತ ಅನಂತರದ ಹಂತದಲ್ಲಿ ಹುಟ್ಟಿದ್ದು. ದಿಗಂಬರ ಸಂಪ್ರದಾಯವನ್ನು ಆರಂಭಿಸಿದ. ಆದ್ಯರು ಆಜೀವಕರೆಂಬ ಅಭಿಪ್ರಾಯಕೂಡ ಉಂಟು. ಪ್ರಾಚೀನ ಆಜೀವಕರು ಭಿಕ್ಷಾಪಾತ್ರೆಯನ್ನು ಉಪಯೋಗಿಸುತ್ತಿರಲಿಲ್ಲ ಮತ್ತು ದಿಗಂಬರರಾಗಿ ಇರುತ್ತಿದ್ದರು. ಅದರಿಂದ ನಗ್ನಮುನಿ ಸಂಪ್ರದಾಯವನ್ನು ಆಜೀವಕರೇ ರೂಢಿಗೆ ತಂದರೆನ್ನಲಾಗಿದೆ. ಆಜೀವಕನಾದ ಮಕ್ಖಲಿ (ಮಕ್ಕಡಿ, ಮಸಯರಿ, ಮಂಕಲಿ, ಮಖ್ಖಲಿ) ಗೋಸಾಲನ (ಗೋಸಲ) ಪ್ರಭಾವದಿಂದ ಮಹಾವೀರನೂ ದಿಗಂಬರತ್ವವನ್ನು ಬೋಧಿಸಿದನೆಂಬ ಹೇಳಿಕೆಯೂ ಇದೆ.

[Hoernle, A.F. Rudalph, Ajivaka, Encyclopaedia of Religion and Ethics, ed. James Hastings (೧೯೧೭ – ೫೫), Vol. 1, pp. ೨೫೯ : ೬೫; Deo, S. B.: ೧೯೫೬ : ೭೫; Jaini P. S,: ೧೯೯೭ – ೧೯೨೫; Basham A. L,: ೧೯೫೧ : ೨೭೭; Jinamanjari, Vol., ೧೨ – ೧ ಏಪ್ರಿಲ್‌, ೧೯೯೬, ೧೫ – ೧೬, ೧೯].

ಆಜೀವ ನಾಯಕ ಮಕ್ಖಲಿ ಗೋಸಾಲನು ಮಹಾವೀರರನ್ನು ಕಂಡಿದ್ದು ಆದಮೇಲೆ ಮಹಾವೀರನು ದಿಗಂಬರತ್ವಕ್ಕೆ ಪರಿವರ್ತಿತನಾದನೆಂಬ ಆಬಿಪ್ರಾಯದ ನಿರಾಕರಣೆ ಕುರಿತು ಪ್ರಸ್ತಾಪಿಸಿದ್ದಾಗಿದೆ. ಮಹಾವೀರನ ಸಮಕಾಲೀನ ಶ್ರಮಣ ಪಂಥಗಳಲ್ಲಿ ಅಜೀವಕರು ಗಿಗಂಬರರಿಗಿಂತ ಬೇರೆಯಾದವರು. ಮಹಾವೀರನನ್ನು ಕಂಡಾಗ ಗೃಹಸ್ಥ ಮಕ್ಖಲಿ ಗೋಸಾಲನು ತನ್ನ ಬಟ್ಟೆಗಳನ್ನು ಕಳಚಿ ಬಿಸುಟು, ನಗ್ನನಾಗಿ ನಿಂತು, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಬೇಡಿದನ್ನು. ಅಲ್ಲದೆ, ಆಜೀವಕರು ಕ್ರಿ. ಶ. ದ ವೇಳೆಗೆ ದಿಗಂಬರ ಮತದಲ್ಲಿ ವಿಲೀನ ಆದರು. ಆಜೀವಕ ಮತ್ತು ದಿಗಂಬರ ಜೈನರ ಮಿಲನವು ಮತಾಂತರವೂ ಹೌದು (ಬಷಮ್‌, ಎ. ಎಲ್‌.: ೧೯೫೧ : ೨೭೭).

ಜೈನ ಧರ್ಮದ ಸಮಕಾಲೀನ ಹಾಗೂ ಸಮಾನ ಪರಿಸರದ ಇನೊಂದು ಧರ್ಮ ಬೌದ್ಧಧರ್ಮ. ಜೈನರ ಮೂಲಾಗಮನಗಳು ಪ್ರಾಕೃತದಲ್ಲಿವೆ, ಬೌದ್ಧರ ಮೂಲ ಧರ್ಮಗ್ರಂಥಗಳು ಪಾಳಿಯಲ್ಲಿವೆ. ಜೈನ ಹಾಗೂ ಬೌದ್ಧ ಸೈದ್ಧಾಂತಿಕ ಧಾರ್ಮಿಕ ಪ್ರಕ್ರಿಯೆಗಳಲ್ಲೂ ಸಾಹಿತ್ಯ ಕೃತಿಗಳಲ್ಲೂ ವೈದೃಶ್ಯಗಳಿರುವಂತೆ ಅನೇಕ ಸಾದೃಶ್ಯಗಳಿವೆ. ಪ್ರಸ್ತುತ ಕಿರುಹೊತ್ತಿಗೆಯ ಕೇಂದ್ರಜಿಜ್ಞಾಸೆಯ ವಿಷಯವಾದ ಯಾಪನೀಯ ಕುರಿತ ಸಂವಾದಕ್ಕೆ ಬೌದ್ಧರ ಪಾಲಿ ಭಾಷೆಯ ಗ್ರಂಥಗಳಲ್ಲಿರುವ ಕೆಲವು ಸೂಚನೆಗಳು ಜೀವ ತುಂಬಬಲ್ಲುವು. ಥೇರವಾದ ಶಾಖೆಯ ಬೌದ್ಧರ ಪಾಲಿಗ್ರಂಥಗಳಲ್ಲಿ ‘ನಿಗಂಠ’ (ನಿರ್ಗ್ರಂಥ) ರನ್ನು ಕುರಿತ ಉಲ್ಲೇಖಗಳಿವೆ. ಥೇರವಾದ ಬೌದ್ಧ ಗ್ರಂಥವಾದ ‘ಸಂಯುತ್ತ ನಿಕಾಯ’ ದಲ್ಲಿ ಸಾವಸ್ಥೀ (ಶ್ರಾವಸ್ತಿ) ಯಲ್ಲಿದ್ದ ಜಟಿಲ, ನಿಗಂಠ, ಆಚೇಲಕ, ಪರಿಬ್ಬಾಜಕ ಮತ್ತು ಏಕಸಾಟಕ – ಎಂಬ ಆಯ್ದು ಬಗೆಯ ಸನ್ಯಾಸಿಗಳನ್ನು ಹೆಸರಿಸಿದೆ ಮತ್ತು ಕೋಸಲದ ರಾಜನಾದ ಪಸೇನದಿಯು (ಪ್ರಸೇನಜಿತ್‌) ಅವರನ್ನು ಕಂಡನೆಂದೂ ಹೇಳಿದೆ. ಈ ಮುನಿಗಳೆಲ್ಲ ಉದ್ದ ಕೂದಲಿನವರೆಂದೂ ಉದ್ದ ಉಗುರು ಇದ್ದವರೆಂದೂ ವರ್ಣಿತರಾಗಿದ್ದಾರೆ. ಅಚೇಲಕ (ಅವಸ್ತ್ರಕ) ರಾದ ಈ ಅಯ್ವರಲ್ಲಿ ಜಟಿಲ ಮತ್ತು ಪರಿವ್ರಾಜಕರು ಬ್ರಾಹ್ಮಣ ಸನ್ಯಾಸಿಗಳು . ಅಚೇಲಕ ಅವಸ್ತ್ರಕರೆಂದರೆ ದಿಗಂಬರರು; ಇವರು ಅಜೀವಕರೆನಿಸಿದ ಒಂದು ಮುನಿತಂಡದವರು.

. ಐತಕೇಶಕಂಬಲ (ಪಾಲಿಭಾಷಾರೂಪ : ಅಜಿತೋ ಕೇಸ ಕಂಬಲೀ, ಅಜಿತಕಶ ಕಂಬಲ ಎಂಬ ಇನ್ನೆರಡು ನಾಮ ರೂಪಗಳಿವೆ : ಕಶ = ಮಾನವ ಕೂದಲಿನ ಕಂಬಲಧಾರಿ)
. ಕಕುಧ ಕಾತ್ಯಾಯನ (ಪಾಲಿ, ಪಕುಧೋ ಕಚ್ಚಾಯನ, ಪ್ರಕುಧ ಕಾತ್ಯಾಯನ)
. ನಿರ್ಗ್ರಂಥ ಜ್ಞಾತಿಪುತ್ರ (ಪಾಲಿ : ನಿಗಣ್ಠೋ ನಾತಪುತ್ತೋ)
. ಪೂರ್ನಾ ಕಾಶ್ಯಪ (ಪಾಲಿ. ಪೂರಣೋಕಸ್ಸಪೋ, ಮಹಾಕಾಶ್ಯಪ)
. ಮಸ್ಕರಿನ್‌ ಗೋಸಾಲಿ ಪುತ್ರ (ಪಾಲಿ. ಮಕ್ಖಲಿ ಗೋಸಾಲೋ)
. ಸಂಜಯಿನ್‌ ವೈರಟ್ಟಿ ಪುತ್ರ (ಪಾಲಿ. ಸಞಯೋ ಬೇಲಟ್ಠಿಪುತ್ತೋ)

ಅಜಂತದ ಹದಿನೇಳನೆಯ ಗುಹೆಯಲ್ಲಿರುವ ಒಂದು ಚಿತ್ರವು ಪ್ರಸ್ತುತ ಚರ್ಚೆಗೆ ಮಹತ್ವದ ಆಕರವಾಗಿದೆ. ಆ ಚಿತ್ರವು ಭಗವಾನ್‌ ಬುದ್ಧದೇವನು ಶ್ರಾವಸ್ತಿಯಲ್ಲಿ ಮಾಡಲಾದ ಮಹಾಪ್ರಾತಿಹಾರ್ಯ (ಮಹಾಪವಾಡ)ದ ವರ್ಣನೆಯಾಗಿದೆ. ಅದರಲ್ಲಿ ವೇದಬಾಹ್ಯ ಮತಬೋಧಕರಾದ ಈ ಅರೂಜನ ತಿತ್ಥಯರರನ್ನು (ಪ್ರಾಕ್ರುತ, ತಿತ್ಥಯರ, ಪಾಲಿ. ತೀರ್ಥ್ಯ, ಸಂಸ್ಕೃತ, ತೀರ್ಥಂಕರ) ತೋರಿಸಲಾಗಿದೆ. ಆಜೀವಕರೂ ನಿರ್ಗ್ರಂಥರೂ ಭಿನ್ನರೆಂದು ಹೇಳಿರುವಂತೆ ಅಭಿನ್ನರೆಂದೂ ಪಾಲಿ ಗ್ರಂಥಗಳಲ್ಲಿ ಹೇಳಿದೆ :ನಿರ್ಗ್ರಂಥಸ್ಯ ಪಾದ್ಯೋರ್ನಿಪತಿತಾ …. ಪುಣ್ದ್ರ ವಧನೇ ಸರ್ವೇ ಆಜೀವಕಾಃ ಪ್ರಘಾತಯಿತವ್ಯಾಃ (ದಿವ್ಯಾವದಾನ, ಪು. ೪೨೭,೨ – ೭). ಅವದಾನ ಶತಕ (ಪು. ೨೩೧), ದಿವ್ಯಾವದಾನ (ಪು.೧೪೩), ದೀರ್ಗನಿಕಾಯ (೧, ೪೮ – ೪೯ : ೨, ಪು. ೧೫೦ – ೧೫೧), ಮಜ್ಝಿಮನಿಕಾಯ (೧., ಪು. ೧೯೮; ಅದೇ, ೨. ಪು.. ೨), ಮಹಾವಸ್ತು (೧, ಪು. ೨೫೩ : ಅದೇ, ೩. ಪು. ೩೮೩), ಸಂಯುಕ್ತ ನಿಕಾಯ (೧. ಪು. ೬೮; ಅದೇ, ೪. ಪು. ೩೯೮) – ಮೊದಲಾದೆಡೆಗಳಲ್ಲಿ ಬರುವ ಮಾತುಗಳನ್ನು ನೋಡಿದರೆ ಇದರತ್ತ ಬೆಳಕು ಬೀಳುತ್ತದೆ.

ಆಜೀವಕರಲ್ಲೂ ನಗ್ನರೂ ಅರೆನಗ್ನರೂ ಏಕಸಾಟಕರೂ ಇದ್ದರು. ಪೂರ್ಣಕಾಶ್ಯಪನನ್ನು ಎಡಗೈಯಲ್ಲಿ ಹಿಡಿದಿರುವ ಏಕದಣ್ಡಿಯಾಗಿಯೂ ವಸ್ತ್ರಸಹಿತವಾಗಿಯೂ ಒಂದು ಗಂಧರ ಕಲೆಯ ಚಿತ್ರದಲ್ಲಿ ತೋರಿಸಿದೆ. (Dieter Schlingloff, Jainas and other Heretics in Buddhist Art, ‘Jainism and Prakrit in Ancient and Medieval’, ed. Bhattacharayya, N. N., New Delhi : ೧೯೯೪ : ೭೧ – ೮೨). ಅಜೀವಕರು ನಗ್ನರೂ ಏಕದಣ್ಡಿಗಳೂ (ವೇತ್ತ, ಲಟ್ಟಿ ) ಏಕಸಾಟಕರೂ ಆಗಿದ್ದರು. ಒಬ್ಬ ತ್ರಿದಣ್ಡಿ (ತೇದಣ್ಡಿಕ) ಪರಿವ್ರಾಜಕನ ಗಂಧರ ಕಲೆಯ ಪ್ರಾಚೀನ ಚಿತ್ರ ದೊರೆತಿದೆ; ಪ್ರಾಯಃ ಆತ ಆಜೀವಕನಲ್ಲ. ನಿಗ್ಗಣ್ಠ (ನಿರ್ಗ್ರಂಥ) ರೂ ಸಹ ನಗ್ರರೂ ಪುರಿಮಭಾಗ ಪತಿಚ್ಛನ್ನರೂ ಆಗಿದ್ದಾರೆ. ನಗ್ಗಾ… ಆಜೀವಕಾ (ಸುತ್ತವಿಭಂಗ, ೪, ೨,೩, ೨, ಪು. ೨೧೨), ನಿಗಣ್ಠಾ ಏಕಸಾಟಕಾ (ಅಂಗುತ್ತರ ನಿಕಾಯ, ೩.ಪು.೩೮೩, ೨೮) ಎಂಬಂಥ ಉಲ್ಲೇಖನಗಳು ಸಿಗುತ್ತವೆ. ಬುದ್ಧಘೋಷನು (ಕ್ರಿ. ಶ. ಐದನೆಯ ಶ.) ಮನೋರಥ ಪೂರ್ಣೀಯಲ್ಲಿ (೩, ಪು. ೩೯೪. ೨ – ೩) ‘ಏಕೇನ್‌ ಏವ ಪಿಲೋತಿಕ ಖಂಣ್ಡೇನ ಪುರತೋ ಪಟಿಚ್ಛಾದನಕಾ’ – ಎಂಬುದಾಗಿ ಏಕಸಾಕಟಕ ಶಬ್ಧಕ್ಕೆ ವಿವರಣೆ ಕೊಟ್ಟಿದ್ದಾನೆ.

ಇದುವರೆಗಿನ ನಿರೂಪಣೆಯಿಂದ ತಿಳಿದು ಬರುವುದಿಷ್ಟು : ಅರ್ಧಪಾಲಕ, ಅರ್ಧಕರ್ಪಟಕ, ಅರ್ಧಪಟ, ಏಕಸಾಟಕ, ಚೇಲಖಣ್ಡ, ಚೇಲಕ, ಫಾಲಕ, ಪಿಲೋತಕ ಖಣ್ಡ, ಶಾಟಕ, ಚಾದರ ಸಾದರ, ತಟ್ಟೀ – ಎಂಬೆಲ್ಲ ಶಬ್ಧ ರೂಪಗಳು ನಿರ್ದೇಶಿಸುವುದು ಒಂದೇ ಅರ್ಥವಿರುವ, ಒಂದೇ ಬಗೆಯ ಮುನಿ ಸಂಪ್ರದಾಯವನ್ನು. ಈ ಸವಣ ಸಂಪ್ರದಾಯವು ಅಚೇಲಕ (ದಿಗಂಬರ) ಮತ್ತು ಸಚೇಲಕ (ಶ್ವೇತಾಂಬರ) ಸಂಪ್ರದಾಯಗಳ ನಡುವಣ ಮಾರ್ಗವಾಗಿತ್ತು. ಅರ್ಧಪಾಲಕ ಪದ್ಧತಿಯ ಇನ್ನೊಂದು ಹೆಸರು ಅರ್ಧ ಚೇಲಕ ಎಂಬುದು :

ಅಚೇಲಕ
(ದಿಗಂಬರ) ನಿಗಂಠ,
ನಿರ್ಗಂಥ ನಾಗ್ನ್ಯ
–> ಅರ್ಧಚೇಲಕ
(ಅರ್ಧಫಾಲಕ)
–> ಸಚೇಲಕ
(ಶ್ವೇತಾಂಬರ)
ಅಚೇಲಕ <– ಅರ್ಧಚೇಲಕ <– ಸಚೇಲಕ

ಬರಗಾಲದಲ್ಲಿ, ಆಹಾರ ಸಂಗ್ರಹಣೆಗೆ (ಚರಿಗೆ) ಹೋಗಿ ಬರುವ ಸಮಯದಲ್ಲಿ ಮಾತ್ರ ಅನಿವಾರ್ಯವಾಗಿ ಬಳಸುತ್ತಿದ್ದ ‘ಅಪವಾದ ವೇಶ’ ವು ಮುಂದೆ ಒಂದು ಗುಂಪಿನ ಮುನಿ ಸಂಪ್ರದಾಯವಾಯಿತು. ಈ ಅರ್ಧಚೇಲಕರು ಬಳಸುತ್ತಿದ್ದ ‘ಅರ್ಧ’ ಬಟ್ಟೆಯನ್ನು (ಚೇಲಕ) ಬಿಟ್ಟರೆ ಅಚೇಲಕರಾಗುತ್ತಿದ್ದರು, ತೊಟ್ಟರೆ ಸಚೇಲಕರಾಗುತ್ತಿದ್ದರು. ಅದರಿಂದ ಇವರ ನಡುವೆ ನಿಂತ ಸವಣರೆನಿಸಿದರು. ಇವರೇ ಮುಂದೆ ಯಾಪನೀಯರೆನಿಸಿದರು. ದಿಗಂಬರರು ಇವರನ್ನು ‘ಶ್ವೇತಾಂಬರರಿಗೆ ಹತ್ತಿರ’ ವೆಂದೆಣಿಸಿದರು., ಶ್ವೇತಾಂಬರರು ಇವರನ್ನು ‘ದಿಗಂಬರರಿಗೆ ಸಮೀಪ’ ವೆಂದು ಭಾವಿಸಿದರು. ವಾಸ್ತವವಾಗಿ ಅರ್ಧಚೇಲಕರು ಅರ್ಥಾತ್‌ ಯಾಪನೀಯರು ಇವೆರಡೂ ಆಗಿದ್ದರು. ಮತ್ತು ಇವೆರಡೂ ಆಗಿರಲಿಲ್ಲ ಎಂಬುದೇ ಅದರ ವೈಶಿಷ್ಟ್ಯ.

ಮೊದಲಿನಿಂದಲೂ ದಿಗಂಬರ ಸವಣರು ನಿರ್ಗಂಥರು (ನಾಗ್ನ್ಯರು), ಅಚೇಲಕರು, ಬಟ್ಟೆಯಿಲ್ಲದವರು. ಶ್ವೇತಾಂಬರ ಮುನಿಗಳು ಸಗ್ರಂಥರು, ಶ್ವೇತಪಟರು, ಬಿಳಿಯ ಬಟ್ಟತೊಟ್ಟವರು, ಒಂದು ತುಂಡು – ಒಂದು ಮುಂಡು ಎಂದು ಎರಡು ವಸ್ತ್ರಗಳನ್ನು ಹೊಂದಿರುವರು. ಇವೆರಡು ಜೈನ ಮುನಿ ಸಂಪ್ರದಾಯಗಳ ನಡುವೆ ನಿಲ್ಲುವವರು ಯಾಪನೀಯರು ಅರ್ಧಪಾಲಕರು. ಇದರ ಸಾರಾಂಶವಿಷ್ಟು : ಹೊರನೋಟಕ್ಕೆ ಮುನಿಗಳು ಕಾಣುವ ರೀತಿಯಲ್ಲಿ ಈ ಸಂಘ – ಸಂಪ್ರದಾಯ ಭೇದವು ವಸ್ತ್ರಧಾರಣೆಯ ಸ್ವರೂಪವನ್ನು, ಅಂದರೆ ಚೇಲಕತ್ವವನ್ನು ಅವಲಂಬಿಸಿದೆ. ಅಚೇಲಕರು ವಸ್ತ್ರರಹಿತ ದಿಗಂಬರ ಮುನಿಗಳು, ಸಚೇಲಕ‍ರು ಅರ್ಥಾತ್‌ ಒಂದು ಪಾಲಕ ವಸ್ತ್ರ ಸಹಿತರಾದ ಶ್ವೇತಾಂಬರರು, ಅರ್ಧ ಚೇಲಕರು ಅರ್ಥಾತ್‌ ಅರ್ಧಪಾಲಕ ವಸ್ತ್ರ, ಸಹಿತರಾದ ಯಾಪನೀಯರು – ಎಂಬಂತೆ ಮೂರು ಮುನಿಸಂಘಗಳು ವಿಂಗಡಣೆಯಾಗಿವೆ. ‘ಭದ್ರಬಾಹುಚರಿತ್ರ’ ದಲ್ಲಿ ರತ್ನನಂದಿ ಆಚಾರ್ಯನು ಅರ್ಧಸ್ಫಾಲಕ ಸಂಪ್ರದಾಯವನ್ನೂ ಅದರ ಬಹುಜನ ಮನ್ನಣೆಯನ್ನೂ ಅಸಹನೆಯಿಂದ ಹೆಸರಿಸಿದ್ದಾನೆ :

ಅತೋರ್ದ್ಧಸ್ಫಾಲಕಂ ಲೋಕೇ ವ್ಯಾನಸೇ ಮತಮದ್ಭುತಮ್
ಕಲಿಕಾಲ ಬಲಂ ಪ್ರಾಪ್ಯ ಸಲಿಲೇ ತೈಲ ಬಿಂದುವತ್  || (೩೦೪)

ಅಂದರೆ, ನೀರಿನಲ್ಲಿ ಬಿದ್ದ ಎಣ್ಣೆಯ ಹನಿಯ ಹಾಗೆ, ಈ ಕಲಿಕಾಲದ ಬಲದಿಂದ ಅರ್ಧಸ್ಫಾಲಕ ಮತವು ಲೋಕದಲ್ಲಿ ಹರಡಿಕೊಳ್ಳುವುದು – ಎಂಬ ಈ ಹೇಳಿಕೆಯು ಯಾಪನೀಯವು ಎಷ್ಟು ಜನಪ್ರಿಯವಾಗಿ ಹಬ್ಬಿತ್ತು ಎಂಬುದನ್ನು ಸಾಬೀತು ಪಡಿಸುವ ಆಧಾರವಾಗಿದೆ. ರತ್ನನಂದಿಯು ಮುಂದುವರಿದು, ೧೨ ವರ್ಷದ ಬರಗಾಲದ ಕಡೆಯಲ್ಲಿ ಅರ್ಧಸ್ಫಾಲಕ ಮತವು ಹುಟ್ಟಿತೆಂದೂ ವಿಕ್ರಮ ರಾಜನು ಸತ್ತು ೧೩೬ ವರ್ಷಗಳಾದ ಮೇಲೆ ವಲಭೀಪುರದಲ್ಲಿ ಬಿಳಿಯ ಬಟ್ಟೆತೊಟ್ಟ ಮುನಿಗಳಿಂದ ಶ್ವೇತಾಂಬರ ಮತವು ಚಾಲನೆಪಡೆಯಿತೆಂದೂ ಹೇಳಿದ್ದಾನೆ. ಶ್ವೇತಾಂಬರ ನಿರೂಪಣೆಯ ಪ್ರಕಾರವೂ ಆರನೆಯ ಸ್ಥವಿರ ಭದ್ರಬಾಹು ಆಚಾರ್ಯನ ಕಾಲಕ್ಕೆ, ಅಂದರೆ ಕ್ರಿ. ಶ. ೮೦ರಲ್ಲಿ ಅರ್ಧಸ್ಫಾಲಕ (ತುಂಡು ಅರಿವೆ) ಮತ್ತು ದಿಗಂಬರ ಸಂಪ್ರದಾಯಗಳು ಪ್ರಾರಂಭವಾದವು.

ಯಾಪನರು, ಒಂದು ಫಾಲಕನನ್ನು ತೊಡುವ ಸಚೇಲ ಶ್ವೇತಾಂಬರರಿಗಿಂತ ಕಡಿಮೆಯಾಗಿ, ಅರ್ಧಫಾಲಕವನ್ನು ಮಾತ್ರ ತೊಡುತ್ತಿದ್ದರಿಂದ ದಿಗಂಬರತ್ವಕ್ಕೆ ಹತ್ತಿರದವರೆನಿಸಿದರು. ಬಟ್ಟೆಯನ್ನೇ ತೊಡದ ಅಚೇಲಕ ದಿಗಂಬರರಿಗಿಂತ, ಸ್ವಲ್ಪವೇ ಆದರೂ ಅರ್ಧಫಾಲಕವನ್ನು ತೊಟ್ಟಕಾರಣ ಈ ಯಾಪನರು ಶ್ವೇತಾಂಬತ್ವಕ್ಕೆ ಸಮೀಪದವರೆನಿಸಿದರು. ಯಾಪನೀಯ ಮುನಿಗಳು ಅರ್ಧಕಪ್ಪಡವನ್ನು ತೊಡುವುದಲ್ಲದೆ ಗಡ್ಡಮೀಸೆಗಳನ್ನೂ ಬಿಡುತ್ತಿದ್ದರು. ‘ಜಾತರೂಪಧರ ವಿಖ್ಯಾತಂ’ ಎಂದೂ ಯಾಪನೀಯ ಯತಿಯನ್ನು ಹೇಳಿದೆ. ಅವರು ನಗ್ನರೂ ಇದ್ದರು. ಆಹಾರವನ್ನು, ದಿಗಂಬರ ಸನ್ಯಾಸಿಗಳಂತೆ, ನಿಂತುಕೊಂಡು ಅಂಗೈಯಲ್ಲಿ ಪಡೆಯುತ್ತಿದ್ದರು. ಅಂದರೆ, ಯಾಪನೀಯರು ಸಹ ಪಾಣಿತಲ ಭೋಜನರಾಗಿದ್ದರು. ಯಾಪನೀಯರು ಮಾನ್ಯಮಾಡಿ ಪ್ರತಿಪಾದಿಸಿದ ಸಿದ್ಧಾಂತವು ಶ್ವೇತಾಂಬರ ಸಿದ್ಧಾಂತಕ್ಕೆ ಹತ್ತಿರವಾಗಿತ್ತು. ಶ್ವೇತಾಂಬರ ಪಂಥದ ಹರಿಭದ್ರನು (ಕ್ರಿ. ಶ. ೭೦೦ – ೭೦), ಚೈತ್ಯವಂದನ ಸೂತ್ರಕ್ಕೆ ಬರೆದ ವ್ಯಾಖ್ಯಾನ ಗ್ರಂಥವಾದ ‘ಲಲಿತ ವಿಸ್ತರಾ’ ಯಾಪನೀಯ ತಂತ್ರವೆಂಬ ಕೃತಿಯಿಂದ ‘ಯಥೋಕ್ಷಂ ಯಾಪನೀಯ ತಂತ್ರೇ’ ಎಂದು ಪ್ರಾರಂಭಿಸಿ, ಒಂದು ದೀರ್ಘ ಉದ್ಧೃತಿಯನ್ನು ಕೊಟ್ಟಿದ್ದಾನೆ.

ಯಾಪನಿಯ – ಯಾಪನೀಯ ಎಂಬ ಶಬ್ಧ, ಬನವಾಸಿ ಕದಂಬರ ರಾಜನಾದ ಮೃಗೇಶವರ್ಮನ ಕ್ರಿ. ಶ. ಐಯ್ದನೆಯ ಶತಮಾನದ ಶಾಸನದಲ್ಲಿದೆ. ಕ್ರಿ. ಶ. ೫ – ೬ ನೆಯ ಶತಮಾನಕ್ಕೆ ಸೇರಿದ ಗಂಗರ ಶಾಸನದಲ್ಲಿ ‘ಯವನಿಕ’ ಎಂಬ ಶಬ್ಧರೂಪವನ್ನು ಬಳಸಲಾಗಿದೆ.

ಯಾಪನೀಯವನ್ನು ನಿರ್ದೇಶಿಸಿರುವ ಹತ್ತಾರು ನಾಮರೂಪಗಳು, ಜ್ಞಾತಿರೂಪಗಳು ಸಿಗುತ್ತವೆ : ಯಾಪನೀಯ, ಜಾಪನೀಯ, ಯಾಪುಲೀಯ, ಅಪುಲೀಯ, ಜಾವುಲಿಯ, ಜಾವಿಲಿಯ, ಆಪನೀಯ, ಜಾಮಳಿಗೆಯ, ಜಾವಳಿಯ, ಯಾಪನೀ, ಯವನಕ, ಜಾಪುಲಿ, ಭ್ರಾಜಿಷ್ಣು ವಿರಚಿತ ವಡ್ಡಾರಾಧನೆಯಲ್ಲಿ (ಸು. ಕ್ರಿ. ಶ. ೮೦೦) ಜಾಪುಲಿ ಸಂಘದ ಉಲ್ಲೇಖವಿದೆ. ದೇವಸೇನ ಸೂರಿಯು ಜಾವಣಿಯ ಸಂಘವನ್ನು ಹೆಸರಿಸಿದ್ದಾನೆ. (ದರ್ಶನಸಾರ, ಗಾಥಾ, ೩೯). ಪ್ರಾಕೃತ ಭಾಷೆಯ ಜವಣಿಜ್ಜೇ ಎಂಬ ಶಬ್ಧರೂಪವನ್ನು ‘ಯಾಪನೀಯ’ ಎಂಬುದಾಗಿ ಸಂಸ್ಕೃತಕ್ಕೆ ಪರಿವರ್ತಿಸಲಾಗಿದೆ – ಎಂದು ಆ. ನೇ. ಉಪಾಧ್ಯೆ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಸ್ಕೃತ ರೂಪ ಸಾಧುವಲ್ಲ. ಏಕೆಂದರೆ, ಪ್ರಾಕೃತ ‘ನಾಯಧಮ್ಮಕಹಾಓ’ (ಜ್ಞಾತೃಧರ್ಮಕಥಾ)ದಲ್ಲಿ ‘ಇಂದ್ರಿಯ ಜವಣಿಜ್ಜೇ (ಇಂದ್ರಿಯಗಳನ್ನು ನಿಗ್ರಹಿಸಿದವರು) ಎಂದಿದೆ; ಇದನ್ನು ಸಂಸ್ಕೃತಕ್ಕೆ ಪರಿವರ್ತಿಸಿದಾಗ ‘ಇಂದ್ರಿಯ ಯಾಮನೀಯ’ ಎಂದಾಗುತ್ತದೆ.

ಯಾಪನೀಯಕ್ಕೆ ಸಂಬಂಧಿಸಿದ ಕಾವ್ಯ ಹಾಗೂ ಶಾಸನ ಪ್ರಯೋಗಗಳನ್ನು ಗಮನಿಸಿದ ಉಪಾಧ್ಯೆಯವರು, ಸಹಜವಾಗಿಯೇ ಯಾಪನೀಯ ಶಬ್ಧದ ನಿಷ್ಪತ್ತಿಗಾಗಿ ಮೂಲವನ್ನು ಪ್ರಾಕೃತ ಭಾಷಾರೂಪಗಳಲ್ಲಿ ಅರಸಿದರು. ಪ್ರಾಕೃತ ಮುಖಿಯಾಗಿ ಹೊರಟು ಅವರು ಹೊಲಬು ತಪ್ಪಿದರು. ಒಂದು ಕಡೆ ನಿಲ್ಲದೆ ಸಂಚರಿಸುವವರು ಎಂಬರ್ಥದಲ್ಲಿ ‘ಯಾ’ ಎಂಬ ಧಾತುಗೆ ಪ್ರೇರಣಾರ್ಥಕ ಪ್ರತ್ಯಯ ಸೇರಿ ಯಾಪನೀಯ ಶಬ್ಧವಾಗಿದೆ – ಎಂಬುದು ತೆಲಾಂಗ್‌ ಅವರ ಅಭಿಪ್ರಾಯ. ಆದರೆ ಈ ವಿವರಣೆಯನ್ನು ಯಾಪನೀಯ ಯತಿಗಳಿಗೆ ಮಾತ್ರವಲ್ಲದೆ ಎಲ್ಲ ಜೈನಮುನಿಗಳಿಗೂ ಒಟ್ಟಾರೆಯಾಗಿ ಹೇಳಬಹುದು.

ಡಾ. ಪದ್ಮನಾಭ ಎಸ್‌. ಜೈನಿಯವರು ಪಾಲಿ ಭಾಷೆಯ ಮೂಲಕ ನಿಷ್ಪತ್ತಿ ನೀಡಿದ್ದಾರೆ. ಪಾಲಿ ಭಾಷೆಯಲ್ಲಿಯೂ ‘ಯಾಪನೀಯ’ ಎಂಬ ಶಬ್ಧವಿದೆ. ‘ಯಾ + ಆಪೇ’ ಎಂದು ಅದರ ವ್ಯುತ್ಪತ್ತಿಯನ್ನು ಹೇಳಿದೆ. ಯಾಪನೀಯ ಎಂದರೆ, ಪಾಲಿ ಭಾಷೆಯ ಪ್ರಕಾರ, ‘ಬಾಳಲು ಎಷ್ಟು ಬೇಕೊ ಅಷ್ಟು’ ಮತ್ತು ‘ಅಗತ್ಯಕ್ಕೆ ತಕ್ಕಷ್ಟು’ ಎಂದರ್ಥ. ಈ ಅರ್ಥದಲ್ಲಿ ಬೌದ್ಧ ಭಿಕ್ಷುಗಳ ಆಹಾರ, ವಸತಿ, ಆಶ್ರಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಉಪಯೋಗಿಸುವ ಶಬ್ಧ ಯಾಪನೀಯ. ಹರಿಷೇಣನ ‘ಬೃಹತ್‌ – ಕಥಾಕೋಶ’ ದ ಭದ್ರಬಾಹು ಕಥಾನಕ ಹಾಗೂ ಭ್ರಾಜಿಷ್ಣುವಿನ ಕನ್ನಡ ವಡ್ಡಾರಾಧನೆಯ ಭದ್ರಬಾಹು ಭಟಾರರ ಕಥೆಯಲ್ಲಿ ಬರುವ ಜೈನ ಮುನಿಗಳನ್ನು ಯಾಪನ (ಯಾಪನೀಯ) ರೆಂದು ಇದೇ ಅರ್ಥದಲ್ಲಿ ಹೇಳಲಾಗಿದೆ. ಹೇಗೆಂದರೆ, ದೀರ್ಘಕಾಲಿಕ ದುರ್ಭಿಕ್ಷದಿಂದಾಗಿ ಜೈನ ಮುನಿಗಳಿಗೆ ‘ತಮ್ಮ ಸನ್ಯಾಸಿ ಜೀವನವನ್ನು ಸಾಗಿಸುವುದಕ್ಕೆ ಎಷ್ಟು ಬೇಕೋ ಅಷ್ಟುಮಾತ್ರ ಆಹಾರವನ್ನು ಪಡೆಯುವುದು’ ಅನಿವಾರ್ಯವಾಗಿತ್ತು. ಅದರಂತೆ ಬಟ್ಟೆಯ ವಿಚಾರದಲ್ಲೂ, ‘ಯತಿಜೀವನವನ್ನು ನಡೆಸಲು ಸಾಕಾಗುವಷ್ಟು ಮಾತ್ರ ವಸ್ತ್ರ ಬಳಸುವುದು’ ಅಗತ್ಯವೆನಿಸಿತ್ತು. ಕ್ಷಾಮದ ಅವಧಿಯು ಮುಗಿದ ಮೇಲೂ ಯಾರು ಈ ಅರ್ಧಕಪ್ಪಡ ಪದ್ಧತಿಯನ್ನು ಬಿಟ್ಟುಕೊಡದೆ ಮುಂದುವರಿಸಿದರೊ ಅವರೇ ಯಾಪನೀಯರು.

ಅದರಿಂದ ಯಾಪನೀಯ ಸಂಘದ ಉಗಮಕ್ಕೆ, ದ್ವಾದಶ ವರ್ಷಗಳ ದೀರ್ಘಕಾಲಿಕ ಕ್ಷಾಮದ ಅವಧಿಯಲ್ಲಿ ಅನಿವಾರ್ಯವಾಗಿ ಕಲ್ಪಿತವಾದ ಅರ್ಧಫಾಲಕ ಪದ್ಧತಿಯೊಂದು ಕಾರಣವೆಂದು ಹೇಳಿರುವುದು ಆಲೋಚನೀಯ ವಿವರಣೆಯಾಗಿದೆ. ಅದರಂತೆ, ಶಬ್ಧದ ನಿಷ್ಪತ್ತಿಯಲ್ಲಿ ಪಾಲಿಮೂಲದ ಶಬ್ಧಾರ್ಥ ವಿವರಣೆಯೂ ಪರಿಭಾವನ ಯೋಗ್ಯವಾಗಿದೆ. ವಿನಯ ಪಿಟಕದಲ್ಲಿ (೧, ೫೯) ಯಾಪನೀಯಂ ಭಗವಾ – ಎಂಬ ಮಾತಿದೆ. ಇದಕ್ಕೆ ಸಂವಾದಿಯಾಗಿ ಪ್ರಾಕೃತ ಉತ್ತರಜ್ಝಯಣಾಯಿಂ (೮, ೧೨; ೩೫, ೧೭) ಮತ್ತು ದಸವೇಯಾಲಿಯ ಸುತ್ತಂ (೯, ೩) ಮುಂತಾದ ಆಗಮಗ್ರಂಥಗಳಲ್ಲಿ ಜವಣ, ಜಾವಣ ಎಂಬ ಶಬ್ಧಗಳಿವೆ. ಅದುದರಿಂದ ಯಾಪನ, ಯಾಪನೀಯ ಎಂಬ ರೂಪಗಳು ಅಸಾಧುವಲ್ಲ, ಮತ್ತು ಇದು ಯಾಮನೀಯ ಎಂಬ ರೂಪಧಾರಣೆ ಮಾಡಬೇಕಾಗಿಲ್ಲ. ಕನ್ನಡ ಭಾಷೆಯಲ್ಲಿ ಪಾಲಿ, ಪ್ರಾಕೃತ, ಸಂಸ್ಕೃತ ರೂಪಗಳನ್ನು ಉಪಯೋಗಿಸಲಾಗಿದೆ.

ಶಿವಕೋಟಿ, ಶಿವಾರ್ಯ, ಶಿವಭೂತಿ, ಭದ್ರಬಾಹು, ಸಮಂತಭದ್ರ, ಉಮಾಸ್ವಾತಿ, ಕುಂದಕುಂದ ಇವರ ಭಿನ್ನತೆ, ಅಭಿನ್ನತೆ ಕುರಿತು ವಿಭಿನ್ನವಾದ ಪ್ರತಿಪಾದನೆ ಇವೆ. ಅವುಗಳಲ್ಲಿ ಎರಡು ಹೀಗಿವೆ :

. ಆರಾಧಾನಾ ಗ್ರಂಥದ ಶಿವಾರ್ಯರು (ಸು. ಕ್ರಿ. ಶ. ಎರಡನೆಯ ಶ.) ವಸ್ತ್ರ ಧರಿಸುವುದನ್ನು ಹೆಂಗಸರಿಗೇ ಅಲ್ಲದೆ ವಿಶೇಷ ಸಂದರ್ಭಗಳಲ್ಲಿ (ಗಂಡಸು) ಮುನಿಗಳಿಗೂ ಹೇಳಿದ್ದಾನೆಂಬುದು ಕುಂದಕುಂದಾಚಾರ್ಯರಿಗೆ ಅಸಂಗತವಾಗಿ ಕಂಡಿತು. ಅದರಿಂದ ಕುಂದಕುಂದರು ಎಲ್ಲ ಮುನಿಗಳಿಗೂ ನಿಗ್ರಂಥತ್ವವು ಕಡ್ಡಾಯವೆಂದರು. ಮಹಿಳೆಯರಿಗೆ ಇದು ಅಸಾಧ್ಯಾವಾದುದರಿಂದ ಆ ಭವದಲ್ಲಿ ಹೆಂಗಸರು ಮುಕ್ತಿಗೆ ಆರ್ಹರಾಗರೆಂದಿದ್ದಾರೆ. ತಮ್ಮ ಗುರುವಾದ ಸಮಂತ ಭದ್ರಾಚಾರ್ಯರ ಆಪ್ತಮೀಮಾಂಸೆಯ ಬೋಧನೆಯನ್ನು ವಿಸ್ತರಿಸಿ ನಿರೂಪಿಸಿದರು. ಆಪ್ತರು ಅರ್ಥಾತ್‌ ನಿಜವಾದ ಸನ್ಯಾಸಿಯು ದೋಷ ಮತ್ತು ಆವರಣದೂರನು. ವಿವೇಕಿಯಾದ ಯತಿಯು ಸುಖ – ದುಃಖ ಭಾವದಿಂದ ಮುಕ್ತನಾಗಿರಬೇಕು. ಯಾವ ಸವಣನಿಗೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗುವುದಿಲ್ಲವೊ ಅಂತಹವನು ಸಂಘವನ್ನು ಬಿಟ್ಟುಹೋಗಬೇಕೆಂದು ಅಪ್ಪಣೆಮಾಡಿದನು ಮತ್ತು ನಿಯಮಬಾಹಿರವಾದ ಕೃತಿಗಳನ್ನು ತಿರಸ್ಕರಿಸಬೇಕೆಂದನು. ಸಂಘದಲ್ಲಿ ಗುಸುಗುಸು ಆಯಿತು. ಅಪಸ್ವರ ಕೇಳಿಸಿತು. ಶಿವಕೋಟಿ ಮುನಿಯು ಕೊಟ್ಟಿದ್ದ ರಿಯಾಯಿತಿಯನ್ನು ಇಷ್ಟಪಟ್ಟು ಮೆಚ್ಚಿದ್ದವರು ಈ ಹೊಸ ಕಟ್ಟಪ್ಪಣೆಯಿಂದ ಅಸಂತುಷ್ಟರಾದರು.

ಇಂತಹ ಅತೃಪ್ತರ ಗುಂಪಿಗೆ ಉಮಾಸ್ವಾತಿ(ಮಿ) ಯು ಮುಂದಾಳು. ಅವರು ‘ತತ್ವಾರ್ಥ ಸೂತ್ರ’ ಗ್ರಂಥವನ್ನು ಬರೆದರು. ಕೇವಲಿಗೂ ಹಸಿವು, ನೀರಡಿಕೆ ಇದೆಯೆಂದರು. ಆದರೆ ಉಮಾಸ್ವಾತಿಯು ಸಹ ಸ್ತ್ರೀ ವಸ್ತ್ರಧಾರಣೆ ವಿಚಾರದಲಿ ಮೌನವಹಿಸಿದರು ಮತ್ತು ಮಧ್ಯಮ ಮಾರ್ಗವನ್ನು ಮಂಡಿಸಿದರು. ಇದು ಕುಂದಕುಂದಾಚಾರ್ಯರಿಗೆ ಒಪ್ಪಿಗೆ ಆಗಲಿಲ್ಲ. ಉಮಾಸ್ವಾತಿ ಸಂಪ್ರದಾಯದ ಗುಂಪನ್ನು ಹೊರಗಿಟ್ಟರು, ಅದೇ ಯಾಪನೀಯ ಸಂಘ. ಉಮಾಸ್ವಾತಿಯು ಕುಸುಮಪುರ (ಪಾಟಲೀಪುತ್ರ)ಕ್ಕೆ ಹೋದರು, ‘ತತ್ವಾರ್ಥಾಧಿಗಮ ಭಾಷ್ಯ’ ವನ್ನು ಬರೆದರು. ಇತ್ತ ಕುಂದಕುಂದರು ತಮ್ಮ ಮೊದಲಿನ ಪದ್ಮನಂದಿ ಎಂಬ ಹೆಸರನ್ನು ಬದಲಾಯಿಸಿಕೊಂಡರು. ಆಗಮಗಳ ವಾಚನವನ್ನು ತಪ್ಪಿಸಿದರು. ಆಗಮಗಳು ನಷ್ಟವಾಗಿವೆಯೆಂದು ಪ್ರತಿಪಾದಿಸಿದರು. ಆಗಮಗಳ ಪುನರುಜ್ಜೀವನವೆಂದು ಪಾಹುಡಗಳನ್ನು ರಚಿಸಿದರು. ತಮ್ಮ ಸಂಘವೇ ಮೂಲಸಂಘವೆಂದು ಸಾರಿದರು.

ಮೇಲ್ಕಂಡ ಪ್ರತಿಪಾದನೆಯಲ್ಲಿ ಸಂದೇಹಗಳಿವೆ, ಸಮಸ್ಯೆಗಳಿವೆ. ಶಾಸನಗಳು ದಾಖಲಿಸಿರುವ ಪ್ರಕಾರ ಕೊಂಡಕುಂದಾಚಾರ್ಯರ ಹೆಸರು ಮೊದಲು ಬರುತ್ತದೆ. ಮತ್ತು ಸಮಂತಭದ್ರರ ಹೆಸರು ತರುವಾಯ ಇದೆ. ಈ ಸಮಸ್ಯೆಗೆ ಪರಿಹಾರವಾಗಿ, ಸಮಂತಭದ್ರರೆಂಬ ಹೆಸರಿನವರು ಬೇರೆ ಕೆಲವರಿದ್ದಾರೆಂದು ಹೇಳಲಾಗಿದೆ; ಆಪ್ತ ಮೀಮಾಂಸಾದ ಕರ್ತೃ ಸಮಂತಭದ್ರರು ಪ್ರಾಚೀನರೆಂದೂ ರತ್ನಕರಂಡಕದ ಸಮಂತಭದ್ರರು ಅರ್ವಾಚೀನರೆಂದು ಸೂಚಿಸಿದ್ದಾರೆ.

. ಹಾಗೆಯೇ, ಆರಾಧನಾ ಗ್ರಂಥ ಕರ್ತೃವಾದ ಶಿವಾರ್ಯರು ಪ್ರಾಚೀನರೆಂದೂ ರತ್ನಮಾಲಾ ಕೃತಿಯ ಶಿವಕೋಟಿಯು ಆನಂತರದವರೆಂದೂ ತಿಳಿಸಿದ್ದಾರೆ. ಮೂಲ ಭಾಷ್ಯದಲ್ಲಿ ಸ್ಪಷ್ಟವಾಗಿ ಹೇಳಿರುವ ಪ್ರಕಾರ ಶಿವಭೂತಿಯು ‘ಬೋಡಿಕ’ (ಬೋಡಿಅ) ಎಂಬ ಹೊಸ ಸಂಘವನ್ನು ಸ್ಥಾಪಿಸಿದ ರೂವಾರಿ. ‘ಕಲ್ಪಸೂತ್ರ ಸ್ಥವಿರಾವಲೀ’ ಕರ್ತೃವಾದ ಆರ್ಯಾ ಶಿವಭೂತಿಯೂ ಆರಾಧನಾದ ಕರ್ತೃ ಶಿವಾರ್ಯನೂ ಅಭಿನ್ನರಾಗಿದ್ದು ಕ್ರಿ. ಶ. ೧ – ೨ನೆಯ ಶತಮಾನಕ್ಕೆ ಸೇರಿದವರು. . ಆಪ್ತಮೀಮಾಂಸೆಯ ಸಮಂತಭದ್ರನೂ . ದಶನಿರ್ಯಕ್ತಿಗಳ ಕರ್ತೃ ಭದ್ರಬಾಹುವೂ, .ಬನವಾಸಿಗಚ್ಛ, ಚಂದ್ರಕುಲದ ಪ್ರಮುಖನೂ .ದ್ವಾದಶ ವರ್ಷ ಕ್ಷಾಮವನ್ನು ಅರುಹಿ, ಉತ್ತರದಿಂದ ಮಾಲವಸಿಂಧ – ಠಕ್ಕ (ಪಂಜಾಬು) ದಾಟಿ ಕಾಂಚೀಪುರ (ಕೌಂಚಪುರ) ಮತ್ತು ಕರಹಾಟಕಕ್ಕೆ (ರಹಾಡ್‌ – ಕರಾಡ್‌) ಬಂದವನೂ – ಇವೆಲ್ಲವೂ ಆದವನು ಶಿವಾರ್ಯನ ಶಿಷ್ಯನಾದ ಒಬ್ಬ ಭದ್ರ (ಬಾಹು). ಶಿವಭೂತಿಯ ಶಿಷ್ಯರು ಭದ್ರನೆಂದು ಸ್ಥಾವಿರಾವಲೀ ಹೇಳಿಕೆ. ಭದ್ರ ಅಥವಾ ಶ್ರೀಭದ್ರನು ಸಾಮಾನ್ಯವಾಗಿ ಭದ್ರಬಾಹು ಎಂಬ ಹೆಸರಿಂದ ಕರೆಯಲ್ಪಡುವುದು ಶ್ರವಣಬೆಳಗೊಳದ ಶಾಸನಗಳಿಂದ ತಿಳಿದುಬರುತ್ತದೆ. ಹನ್ನೆರಡು ವರ್ಷದ ಪಸ (ಬರಗಾಲ) ದ ಭವಿಷ್ಯ ಹೇಳಿದ್ದೂ ಉಜ್ಜಯಿನಿಯಿಂದ ತೆಂಕಣಕ್ಕೆ ಬಂದದ್ದೂ ಈ ಭದ್ರಬಾಹುವೇ. ಇವರಿಗೆ ಸ್ವಾಮಿ ಎಂಬ ಪ್ರಶಸ್ತಿಯುಂಟು, ಸಮಂತಭದ್ರರಿಗೂ ಇದೆ. ಭದ್ರಬಾಹುಸ್ವಾಮಿಯೂ – ಸಮಂತಭದ್ರಸ್ವಾಮಿಯೂ ಸಮಾನರು ಅಭಿನ್ನರು. ಇವರೇ ಎರಡನೆಯ ಭದ್ರಬಾಹು. ಆಚಾರ್ಯ ಕುಂದಕುಂದರು ಬೋಧಪಾಹುಡದಲ್ಲಿ ಹೇಳಿರುವಂತೆ ಅವರು ಈ ಭದ್ರಬಾಹುವಿನ ನೇರ ಶಿಷ್ಯರು. ಶಿವಾರ್ಯ ಅಥವಾ ಶಿವಭೂತಿ ಮುನಿಯ ಇನ್ನೊಬ್ಬ ಶಿಷ್ಯ ಘೋಷನಂದಿ ಮತ್ತು ಅವರ ಶಿಷ್ಯರೇ ಉಮಾಸ್ವಾತಿ. ಶ್ವೇತಾಂಬರ ಪಟ್ಟಾವಲಿಗಳ ಪ್ರಕಾರ ಸಮಂತಭದ್ರನು ಚಂದ್ರಕುಲದ ಆಚಾರ್ಯ ಹಾಗೂ ಬನವಾಸೀಗಚ್ಛದ ಸಂಸ್ಥಾಪಕ. ಭಕ್ತಮರ ಸ್ತೋತ್ರದ ಮಾನತುಂಗ ಆಚಾರ್ಯರೂ ‘ಕರಕಂಡಚರಿಉ’ ಎಂಬ ಅಪಭ್ರಂಶ ಪ್ರಾಕೃತ ಕಾವ್ಯದ ಕನಕಾಮರಮುನಿಯೂ ಇಬ್ಬರೂ ಚಂದ್ರಕುಲ ಗೋತ್ರಕ್ಕೆ ಸೇರಿದವರು. ಆವಶ್ಯಕ ಸೂರ್ಣಿಗೆ ಮಲಯಗಿರಿ ಮುನಿಯು ಬರೆದಿರುವ ವೃತ್ತಿಯಲ್ಲಿ ಹೇಳಿರುವ ೧೩ ವರ್ಷಗಳ ಕ್ಷಾಮವೂ ಭದ್ರ ಬಾಹುಮುನಿಯು ಮುನ್ನೋಟದಿಂದ ನುಡಿದ ಬರಗಾಲವು ಒಂದೇ ಕ್ಷಾಮದ ಪ್ರಸ್ತಾಪವಾಗಿದೆ.

ಮೇಲೆ, ೧ ಮತ್ತು ೨ ರಲ್ಲಿ ಬಂದಿರುವ ನಿರೂಪಣೆ ಚರ್ಚಾತೀತವೆಂದು ತಿಳಿಯಬಾರದು; ಈ ಬಗ್ಗೆ ಬಹಳ ಭಿನ್ನಾಭಿಪ್ರಾಯಗಳಿವೆ.

  (ಪರ್ಯೂಷಣ ಕಲ್ಪದ ಸ್ಥವಿರಾವಲಿ)  
ಅರ್ಯ ವಜ್ರ
ಆರ್ಯ ರಥ
ಅರ್ಯಪುಷ್ಯಗಿರಿ
ಆರ್ಯ ಫಲ್ಗುಮಿತ್ರ
ಆರ್ಯ ಧನಗಿರಿ
ಆರ್ಯ ಶಿವಭೂತಿ   ಆರ್ಯ ಕೃಷ್ಣ (ಅಜ್ಜ ಕಣ್ಹ ಅಥವಾ (ಕಣ್ಹ ಸಮಣ)
ಆರ್ಯ ಬದ್ರ
ಆರ್ಯ ಶಂಡಿಲಲ (ಸ್ಕಂದಿಲ) ಸು. ಕ್ರಿ. ಶ. ೩೬೨

ಇದರಿಂದ ತಿಳಿದು ಬರುವ ಹಾಗೆ, ಆರ್ಯ ಶಿವಭೂತಿಯು ಕ್ರಿ. ಶ. ಮೂರನೆಯ ಶತಮಾನದಲ್ಲಿ ಇದ್ದವನು.

ಆದರೆ, ಮೇಲೆ ಹೆಸರಿಸಿರುವ ‘ಬೋಡಿಕ’ ಎಂಬ ಗಣಭೇದವನ್ನು ವಿಶೇಷವಾಗಿ ಪರಿಗಣಿಸಬೇಕಾಗಿದೆ. ಶಿವಕೋಟಿ ಅಥವಾ ಶಿವಭೂತಿಯು (ಕ್ರಿ. ಶ. ೬ ಶ. ದ ನಡುಗಾಲ ಉತ್ತರ ಭಾರತದ ನಿರ್ಗ್ರಂಥ ಪಂಥದಲ್ಲಿ ಬೇರೊಂದು ಶಾಖೆ ಸ್ಥಾಪಿಸಲು ಕಾರಣನಾದನು. ಇದೇ ‘ಬೋಡಿಕ’ ಎಂಬ ಸಂಘ ಕ್ರಿ. ಶ. ಆರನೆಯ ಶತಮಾನದ ಶ್ವೇತಾಂಬರ ಲೇಖಕರು ‘ಬೋಡಿಕ’ ಎಂಬ ಹೆಸರಿನಿಂದ ಕರೆದಿರುವ ಈ ಜೈನ ಮುನಿಗಳನ್ನು ವೈದಿಕ ಲೇಖಕರು ‘ಕ್ಷಪಣಕ’ ಎಂಬ ಹೆಸರಿನಿಂದ ನಮೂದಿಸಿರುತ್ತಾರೆ. (ಕ್ಷಪಣಕೋ ಜೈನಾಕೃತಿಃ). ಮಹಾಭಾರತದಲ್ಲಿ – ‘ನಗ್ನ ಕ್ಷಪಣಕಮಾಗಚ್ಛಂತಮ್‌’ (ನಗ್ನ ಕ್ಷಪಣಕರು ಬರುತ್ತಿರುವುದನ್ನು ನೋಡಿದ) ಎಂದು ಹೇಳಿದೆ (ಆದಿಪರ್ವ, ೩, ೨೬). ಭ್ರಾಜಿಷ್ಣು ವಿರಚಿತ ಆರಾಧಾನಾ ಕರ್ಣಾಟ ಟೀಕಾದಲ್ಲಿ (ವಡ್ಡಾರಾಧನೆ) ‘ಮಗಳೆ, ಉೞೆ ದ ಬ್ರತಂಗಳೆಲ್ಲಮಂ ಪೋಗಿಯಾ ಕ್ಷಪಣಕಂಗೊಪ್ಪಿಸುವೆಂ’ ಎಂಬೊಂದು ಪ್ರಯೋಗವಿದೆ [ವಡ್ಡಾರಾಧನೆ, (ಸಂ.) ಹಂಪನಾ : ೧೯೯೩]. ಭೀಮಕವಿಯ (೧೩೬೯) ಬಸವಪುರಾಣದಲ್ಲಿ (೫೨ – ೭)’ ನೀ ಕ್ಷಪಣಕರ ಕೈಯಿಂದ ಮರುಳುಗೊಂಡೆಯೊ’ ಎಂದಿದೆ. ಹರಿಹರದೇವ ಕವಿಯ (೧೨೦೦) ವಾಗೀಶ್ವರ ರಗಳೆಯಲ್ಲಿ (೨೬೩ – ೨) ಕ್ಷಪಣಕತ್ವಂ ಪಿಂಗಿ ಸದ್ಭಕ್ತನಾಗಿರುವಂತೆ – ಎಂಬ ಮಾತಿದೆ. ‘ಕ್ಷಪಣ’ ಎಂದರೆ ಉಪವಾಸದಿಂದ ದೇಹವನ್ನು ಕುಗ್ಗಿಸುವುದು ಎಂದರ್ಥ.

ಸಾದು ನಿರ್ಗ್ರಂಥರಾ ನಗ್ನಾಟರು ಜೈನರು ದಿಗಂಬರರ್
ಜೀವಕರ್ಮಲಧರರ್ತಾನಜೀವರ್ಕ್ಷಪಣರೆನೆ ಗುರುಗಳಕ್ಕು ||(೬೬)

ಎಂಬುದು ಮಂಗರಾಜ ನಿಘಂಟು ಕೊಡುವ ವಿವರಣೆ. ಅಷ್ಟೀಕೃತ ಶಬ್ಢಕೋಶದಲ್ಲಿ ಹೇಳಿರುವ ಸ್ವಾರಸ್ಯವಾದ ಪ್ರಶ್ನೆ – ನಗ್ನರೂ ಕ್ಷಪಣಕರೂ ಇರುವ ದೇಶದಲ್ಲಿ ಆಗಸನು ಏನುಮಾಡುತ್ತಾನೆ ! (ನಗ್ನೇ ಕ್ಷಪಣಕೇ ದೇಶೇ ರಜಕಃ ಕಿಂ ಕರಿಷ್ಯತಿ?). ಇಮ್ಮಡಿ ಅಮ್ಮರಾಜನ (ಕ್ರಿ. ಶ. ೯೪೫ – ೭೫) ಮಸುಲಿ ಪಟ್ಣಂ ಶಾಸನದಲ್ಲಿ, ಚಂದ್ರಸೇನ ಮುನಿಯ ಶಿಷ್ಯನಾದ ಜಯಸೇನ (ನಾಥಸೇನ) ಮುನಿಯನ್ನು ಶ್ರಾವಕರೂ ಕ್ಷಪಣಕರೂ ಕ್ಷುಲ್ಲಕರೂ ಅಜ್ಜಿಕಾಗಳೂ (ಆರ್ಯಿಕಾ = ಕಂತಿ) ಗೌರವಿಸಿದರೆಂದು ಹೇಳಿದೆ (Jawaharlal, G. : Jainism in Andhra : ೧೯೯೪). ಈ ಎಲ್ಲ ಹಾಗೂ ಇನ್ನಿತರ ಪ್ರಯೋಗಗಳು ಕ್ಷಪಣಕರು ದಿಗಂಬರರಿಗಿಂತ ಬೇರೆಯವರು ಎಂದು ಸುಟ್ಟಿತೋರಿಸುತ್ತವೆ. ವಾಸ್ತವವಾಗಿ ಈ ಪ್ರಾಚೀನ ಬೋಟಿಕ ಅಥವಾ ಕ್ಷಪಣಕ ಪಂಥದಿಂದ ಮೂಡಿ ಬಂದದ್ದು ಯಾಪನೀಯ ಸಂಘ.

ಅರ್ಧಫಾಲಕ (ಅರ್ಧಚೇಲಕ) ಸಂಪ್ರದಾಯದ ಮುನಿಸಂಘವು ಉತ್ತರದ ಕಡೆಯಿಂದ ಕರ್ನಾಟಕಕ್ಕೆ ಆಗಮಿಸಿತು ಮತ್ತು ಇಲ್ಲಿ ‘ಯಾಪನೀಯ’ ಎಂಬ ಹೊಸ ಹೆಸರನ್ನು ಪಡೆಯಿತು. ಇದು ಕರ್ನಾಟಕಕ್ಕೆ ಕ್ರಿ. ಶ. ಎರಡನೆಯ ಶತಮಾನದ ಮಧ್ಯಭಾಗದಲ್ಲಿ ಇಲ್ಲಿಗೆ ಪ್ರವೇಶಿಸಿತೆಂದು ದಾಖಲೆಗಳು ತಿಳಿಸಿವೆ. ದೇವಸೇನ ಸೂರಿಯು (ಕ್ರಿ.ಶ. ೯೩೪)ತನ್ನ ‘ದರ್ಶನಸಾರ’ ಎಂಬ ಪ್ರಾಕೃತ ಕೃತಿಯಲ್ಲಿ ಯಾಪನೀಯ ಸಂಘದ ಆವಿಷ್ಕಾರ ತೇದಿಯನ್ನು ನಮೂದಿಸಿದ್ದಾನೆ :

ಕಲ್ಲಾಣೇ ವರಣಯರೇ ದುಣ್ಣಿಸವಿ ಪಂಚ ಉತ್ತರೇ ಜಾದೇ
ಜಾವಣಿಯ ಸಂಘ ಭಾವೋ ಸಿರಿಕಲಸಾದೋ ಹುಸೇವಡದೋ ||(೨೯)

ವಿಕ್ರಮ ಸಂವತ್ಸರ ೨೦೫ರಲ್ಲಿ, ಅಂದರೆ ಕ್ರಿ. ಶ. ೧೪೮ರಲ್ಲಿ, ಶ್ರೀಕಲಶ ಎಂಬ ಶ್ವೇತಾಂಬರ ಸಾದುವು ‘ಜಾವಣಿಯಸಂಘ’ ವನ್ನು ಸ್ಥಾಪನೆ ಮಾಡಿದನು. ವಡ್ಡಾರಾಧನೆ ಗ್ರಂಥದಲ್ಲೂ ಜಾಪುಲಿಸಂಘವನ್ನು ಇದೇ ಹಿನ್ನೆಲೆಗೆ ಹೊಂದಿಸಿ ಹೇಳಲಾಗಿದೆ.

ಯಾಪನೀಯ ಸಂಘವು ಒಂದು ರೀತಿಯಿಂದ ಕರ್ನಾಟಕದ ಸಂದರ್ಭದಲ್ಲಿ ಹುಟ್ಟಿದ ಇಲ್ಲಿಯ ಪರಿಸರದ ಕೂಸು. ವಲಭೀ, ಲಾಟ (ಗುಜರಾತು), ಮಥುರಾ ಮುಂತಾದಕಡೆಗಳಿಂದ ಕರ್ನಾಟಕಕ್ಕೆ ಅದು ಅವತರಿಸಿತೆಂಬ ವಿವವರಣೆಯೊಂದಿಗೆ, ಯಾಪನೀಯವು ಕರ್ನಾಟಕದಲ್ಲೇ ಮೂಡಿ ಮರೆಯಾಯಿತೆಂಬ ನೆಲೆಯಲ್ಲಿ ಅದನ್ನು ಅರ್ಥೈಸುವುದೂ ಅವಲೋಕಿಸುವುದೂ ಸಮಂಜಸ. ಯಾಪನೀಯ ಎಂಬ ಶಬ್ಧದ ನಿಷ್ಪತ್ತಿಯನ್ನು ಬದಿಗಿಟ್ಟು, ಯಾಪನೀಯ ಸಂಘದ ಆವಿಷ್ಕಾರ, ಕಾರ್ಯಚಟುವಟಿಕೆ – ಇವನ್ನು ನೋಡಬೇಕು. ಭೌಗೋಳಿಕವಾಗಿ ಯಾಪನೀಯವು ದಕ್ಷಿಣ ಭಾರತಕ್ಕೆ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಸೀಮಿತವಾಗಿತ್ತು. ಕರ್ನಾಟಕದ ‘ಜೈನ ಜಗತ್ಸರ್ವಂ ಯಾಪನೀಯಮಯಂ’ ಎಂದು ಹೇಳಬಹುದು. ಅದರಲ್ಲಿ ಉತ್ಪ್ರೇಕ್ಷೆಗಿಂತ ವಾಸ್ತವಾಂಶವೇ ಹೆಚ್ಚಿದೆ. ಕನ್ನಡ ಕಾವ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದ ಶಾಸನಗಳಲ್ಲಿ ಯಾಪನೀಯ ಸಂಘ, ಅದರ ಗಣ, ಗಚ್ಛ, ಅನ್ವಯಗಳನ್ನು ಕುರಿತ ಮಾಹಿತಿ ಸಿಗುತ್ತದೆ.