ಗದಗ ಜಿಲ್ಲೆ ಮತ್ತು ತಾಲೂಕಿಗೆ ಸೇರಿದ ಹೊಸೂರು ಗ್ರಾಮವು ಯಾಪನೀಯ ಸಂಘದ ಮುಖ್ಯ ಕೇಂದ್ರಗಳಲ್ಲೊಂದಾಗಿತ್ತು. ಇಲ್ಲಿ ಯಾಪನೀಯರ ಒಂದು ಮಠ ಕೂಡ ಇದ್ದಿತು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಎಲೆಯ ಪೊಸವೂರು (ಹೊಸೂರು) ಪ್ರಸಿದ್ಧಿ ಪಡೆಯಿತು. ಶ್ರೇಷ್ಠ ಆಚಾರ್ಯ ತ್ರೈವಿದ್ಯ ದೇವರ ಶಿಷ್ಯ ಪರಂಪರೆಯಲ್ಲಿ ಬಂದ ಜಯಕೀರ್ತಿ ದೇವ ಮುನಿಯು ಜೈನಾಗಮ ಸಾಗರವಾಗಿದ್ದರು. ಅವರ ಶಿಷ್ಯ ನಾಗಚಂದ್ರ ಮುನಿಯು ಜೈನ ಸಿದ್ಧಾಂತ ಪಾರಗರೂ ರಾಜ ಶ್ರೇಷ್ಠರಿಂದ ಪೂಜಿತರೂ ಆಗಿದ್ದರು. ಅವರ ಶ್ರಾವಕ ಶಿಷ್ಯನಾದ ಆಯ್ಚರಸನು ಈ ಪೊಸವೂರ ಗಾವುಂಡನಾಗಿದ್ದನು. ಚಾಳುಕ್ಯ ಚಕ್ರವರ್ತಿ ಜಗದೇಕಮಲ್ಲ ಜಯಸಿಂಹನು (ಕ್ರಿ. ಶ. ೧೦೫೪ – ೪೨) ಆಳುತ್ತಿರುವಾಗ ದಂಡನಾಯಕನಾದ ಕೇಸವರಸನ ಮಗ ವಾವಣರಸನು ಎರಡರುನೂರು ಪ್ರಾಂತ್ಯಕ್ಕೆ (ಪುಲಿಗೆರೆ ೩೦೦ ಮತ್ತು ಬೆಳ್ಪೊಲ – ೩೦೦) ಮುಖ್ಯಸ್ಥನಾಗಿದ್ದನು.

‘ಮುಳುಗುಂದ – ಹನ್ನೆರಡು’ ಎಂಬ ಆಡಳಿತ ಘಟ್ಟಕಕ್ಕೆ ಸೇರಿದ ಪೊಸವೂರನ್ನು ವಾವಣರಸನ ಮಡದಿ ರೇವಕಬ್ಬರಸಿಯು ಆಳುತ್ತಿದ್ದಳು. ಆ ಅವಧಿಯಲ್ಲಿ ಮೋರಕಮ್ನಾಯ ತಿಳಕನಾದ ಪೊಸವೂರ ಆಯ್ಚಗಾವುಂಡನು ತನ್ನ ಮಡದಿ ಕಂಚಿಕಬ್ಬೆ ನೆನಪಿಗಾಗಿ ಪರೋಕ್ಷ ವಿನಯದಿಂದ ಒಂದು ಬಸದಿಯನ್ನು ಮಾಡಿಸಿದನು. ಆ ಬಸದಿಯನ್ನು ನಾಗಚಂದ್ರ ಸಿದ್ಧಾಂತಿ ಯತಿಗಳಿಗೆ ಕಾಲತೊಳೆದು ಒಪ್ಪಿಸಿದನು. ಬಸದಿಯ ಪೂಜಾದಿಗಳಿಗೆ ಅಡಕೆ ತೋಟ. ೨೪ ಮತ್ತರು ಹೊಲ ಬಿಟ್ಟುಕೊಟ್ಟನು. ಆಯ್ಚಗಾವುಂಡ – ಕಂಚಿಕಬ್ಬೆಯರ ಹಿರಿಯ ಮಗನಾದ ಎಱಗನ ಮಗ ಪೊಲೆಗನು ಕ್ರಿ. ಶ. ೧೦೨೮ – ೨೯ರಲ್ಲಿ ಬೇರೆ ದಾನಗಳನ್ನು ಕೊಡಲಾದ ಸಮಯದಲ್ಲಿ ಈ ಶಾಸನವನ್ನು ಬರೆಸಿದನು (ಸೌಇಇ. ಸಂಪುಟ – ೧೧ – ೧. ಸಂಖ್ಯೆ. ೬೫. ಕ್ರಿ. ಶ. ೧೦೨೮ – ೨೯. ಹೊಸೂರು. ಪು. ೫೫ – ೫೭).

ತನ್ನ ಅಜ್ಜ (ತಾತ) ಆಯ್ಚಗಾವುಂಡ ಕಟ್ಟಿಸಿದ ಬಸದಿಗೆ ಮೊಮ್ಮಗನಾದ ಪೊಲೆಗನು ಹಾಕಿಸಿದ ಶಿಲಾಶಾಸನವನ್ನು ಹಾಲಿ ಹೊಸೂರು ಗ್ರಾಮದ ಊರೊಳಗೆ ಇರುವ ಶಿವಾಲಯದ ಮಂಟಪದ ಮಾಳಿಗೆಯ ಒಳಮೈಗೆ ಸೇರಿಸಲಾಗಿದೆ. ಅದರಿಂದ ಈ ಶಿವಾಲಯವು ಪರಿವರ್ತಿತ ಪ್ರಾಚೀನ ಜಿನಾಲಯವಾಗಿರಬಹುದು. ಹೊಸೂರು ಗ್ರಾಮ ಜಿನಗೃಹ, ವಿಷ್ಣು ಗೇಹ, ಶಿವಾಲಯಗಳಿಂದ ಬೆಳಗಿದ ಊರು ಹೌದು. ಆಯ್ಚಗಾವುಂಡನು ಮಾಡಿಸಿದ ಬಸದಿಯು ಯಾವುದು ಎಂಬುದನ್ನು ಸರಿಯಾಗಿ ಗುರುತಿಸಬೇಕು. ಆತನ ಮೊಮ್ಮಗ ಪೊಲೆಗನು ಬರೆಸಿ ಹಾಕಿಸಿದ ಶಿಲಾಶಾಸನ ಇರುವ ಕಲ್ಲು ಚಪ್ಪಡಿಯನ್ನು ಈಗ ಒಳಮಾಳಿಗೆಗೆ ಬಳಸಿರುವ ಊರೊಳಗಿನ ಶಿವಾಲಯವೂ ಅಥವಾ ಊರಿನ ಹೊರಗಡೆ ಇರುವ ಪರಿರ್ವತಿತ ಶಿವಾಲಯವೊ ಎಂಬ ಸಂದೇಹ ಬರುವುದು. ಸಹಜ ಊರೊಳಗೆ ಹಾಗೂ ಇರುವ ಶಿವಾಲಯವನ್ನು ಪರಿವರ್ತಿತ ಬಸದಿಯೆಂದು ಹೇಳುವುದಕ್ಕೆ ಜಿನ ಶಾಸನದ ಕಲ್ಲು ಚಪ್ಪಡಿಯನ್ನು ಮೇಲ್ಛಾವಣಿಗೆ ಉಪಯೋಗಿಸುವುದನ್ನು ಬಿಟ್ಟು ಬೇರೆ ಆಧಾರಗಳೂ ಉಂಟೊ ಎಂಬುದನ್ನು ನೋಡಬೇಕಾಗುತ್ತದೆ.

ಊರಿನ ಹೊರಗಡೆ ಕಲ್ಲುಬಾವಿಯ ಪಕ್ಕದಲ್ಲಿ ಒಂದು ಪ್ರಾಚೀನ ದೇವಾಲಯವಿದೆ. ಅದನ್ನು ಈಗ ಶಿವಾಲಯವಾಗಿಸಿದ್ದರೂ ಅದು ಮೂಲತಃ ಜೈನ ಬಸದಿಯೆಂದು ಖಚಿತವಾಗಿ ತಿಳಿಯುತ್ತದೆ. ಜಿನಾಲಯವೆಂದು ಸುಲಭವಾಗಿ ಗುರುತಿಸಲು ವಾಸ್ತು ಮತ್ತು ಶಿಲ್ಪಗಳ ಪೂರಕ ಆಧಾರಗಳಿವೆ. ಹೊಸೂರು ಗ್ರಾಮದ ಹೊರವಲಯದಲ್ಲಿ, ಹಾದಿಯ ಬದಿಯಲ್ಲಿ ಇರುವ ಈ ಪ್ರಾಚೀನ ಬಸದಿಯು ಗರ್ಭಗೃಹ, ನವರಂಗ (ಸಭಾಮಂಟಪ) ಮತ್ತು ಮುಖಮಂಟಪಗಳಿಂದ ಕೂಡಿದೆ. ಗರ್ಭ ಗೃಹದಲ್ಲಿ ಈಗ ಜಿನ ಬಿಂಬದ ಬದಲು ಶಿವಲಿಂಗವಿದೆ. ಜಿನ ಬಿಂಬಕ್ಕಾಗಿ ಮಾಡಿ ಪ್ರತಿಷ್ಠಾಪಿಸಿದ್ಧ ಮೂಲ ಸಿಂಹ ಪೀಠವನ್ನು ಬದಲಾಯಿಸಿಲ್ಲ, ಅದು ಹಾಗೆ ಉಳಿದಿದೆ. ಗರ್ಭ ಗೃಹದಿಂದ ತೆಗೆದ ಜಿನಬಿಂಬವನ್ನು ಮುಖಮಂಟಪದಲ್ಲಿ ತಂದಿರಿಸಿದೆ. ಪದ್ಮಾಸನದಲ್ಲಿ ಜಿನರ ಈ ವಿಗ್ರಹದ ಬಲಭಾಗವು ಮುಕ್ಕಾಗಿದೆ. ಎಣ್ಣೆಯನ್ನು ಸುರಿದಿರುವುದರಿಂದ ಜಿನ ಬಿಂಬದ ಮುಖಲಕ್ಷಣವು ಮಸುಕಾಗಿದೆ. ಮುಖಮಂಟಪದ ಕಂಬಗಳಿಗೆ ಡಾಳಾಗಿ ಬಳಿದಿರುವ ಬಣ್ಣ ಇತ್ತೀಚಿನ ಕಾಲದ್ದಾದರೂ ಕಂಬಗಳು ಪ್ರಾಚೀನವಾಗಿವೆ.

ಈ ಪ್ರಾಚೀನ ಬಸದಿಯ ಬಲಗಡೆಗೆ ಬಸದಿಯ ಎರಡರಷ್ಟು ದೊಡ್ಡದಾದ ಹಳೆಯ ಕಟ್ಟಡವಿದೆ. ಅದರ ವಾಸ್ತು ವಿನ್ಯಾಸವೂ ಸುಂದರವಾಗಿದೆ. ಮುಂಭಾಗದ ಭಿತ್ತಿಗೆ ಎರಡೂ ಕಡೆ ಜಾಲಂದರಗಳಿವೆ. ಒಳಗಡೆ ವಿಶಾಲವಾದ ನಡುಮನೆಯಿದೆ. ದೇವಾಲಯಕ್ಕಿರುವ ಗರ್ಭ ಗೃಹವಿದೆ. ಗರ್ಭ ಗೃಹದಲ್ಲಿ ಪೂಜಾ ವಿಗ್ರಹವಿಲ್ಲ. ಮೂಲ ಸಿಂಹ ಪೀಠವಿದೆ. ಈ ಪ್ರಾಚೀನ ಸಿಂಹ ಪೀಠದಲ್ಲಿ ಚಕ್ರವಾಕ ಪಕ್ಷಿಯ ಹಾಗೆ ಕಾಣುವ ಲಾಂಛನವಿದೆ. ಅದು ಕುಕ್ಕುಟ ಸರ್ಪದ ಲಾಂಛನವಾಗಿರಲೂ ಬಹುದು. ಒಂದು ವೇಳೆ ಚಕ್ರವಾಕ ಪಕ್ಷಿಯ ಲಾಂಛನವಾಗಿದ್ದಲ್ಲಿ ಅಲ್ಲಿಯ ಮೂಲ ನಾಯಕ ಮಲ್ಲಿನಾಥ ತೀರ್ಥಂಕರರೆಂದು ತಿಳಿಯಬಹುದು. ಹಾಗಲ್ಲದೆ ಅದು ಕುಕ್ಕುಟ ಸರ್ಪದ ಲಾಂಛನವಾಗಿದ್ದಲ್ಲಿ ಪದ್ಮವಾತೀ ದೆವಿಯ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿತ್ತೆಂದು ತಿಳಿಯಬಹುದು.

ಮುಖ್ಯವಾದ ಮತ್ತು ಅತಿ ಮಹತ್ವದ ಮಾತೆಂದರೆ ಈ ವಿಶಾಲವಾದ ಕಟ್ಟಡವು ಯಾಪನೀಯ ಮುನಿಗಳ ಮಠವಾಗಿತ್ತು ಎಂಬುದು. ಈ ಮಠದೊಳಗೂ ಒಂದು ಜಿನಾಲಯವಿತ್ತು; ಹೊರಗಡೆಯ ಬಸದಿ ಎಲ್ಲ ಜನರಿಗಾಗಿ ಇತ್ತು. ಯಾಪನೀಯ ಸಂಘಕ್ಕೆ ಸೇರಿದ ಹಲವಾರು ಬಸದಿಗಳೂ ಮಠಗಳೂ ಕರ್ನಾಟಕದಲ್ಲಿ ಇದ್ದುವು. ಅವುಗಳಲ್ಲಿ ಕೆಲವು ಬಸದಿಗಳು ಸಾಧಾರಣ ಸ್ಥಿತಿಯಲ್ಲಿ ಉಳಿದುಕೊಂಡಿವೆ. ಆದರೆ ಈಗಲೂ ಉಳಿದು ಬಂದಿರುವ ಏಕೈಕ ಯಾಪನೀಯ ಮಠವೆಂದರೆ ಹೊಸೂರಿನದು ಎಂಬುದು ಮಹತ್ವದ್ದಾಗಿದೆ.

ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ನಾನು ತೆಗೆದಿದ್ದ ಕೆಲವು ಭಾವಚಿತ್ರಗಳನ್ನು ಇಲ್ಲಿ ಉಪಯೋಗಿಸಿದ್ದೇನೆ. ಅವುಗಳ ವಿವರ ಹೀಗಿದೆ.

೦೧. ಗದಗ ಜಿಲ್ಲೆಗೆ ಸೆರಿದ ಗ್ರಾಮ ಹೊಸೂರು. ಗದಗ ಮುಳುಗುಂದ ರಸ್ತೆಯಲ್ಲಿ ಎಡಗದೆ ಕಣಿವಿ ಊರಿಗೆ ಹತ್ತಿರ ಇರುವ ಗ್ರಾಮವಿದು. ಇಲ್ಲಿರುವ ಪ್ರಾಚೀನ ಯಾಪನೀಯ ಜಿನಮಂದಿರ ಮತ್ತು ಕಂಬಗಳು. ಈ ಶ್ರೀಕಾರ ಕಂಬಗಳ ಪೀಠ, ಪಿಂಡಿ ಶಲಾಕ, ಕುಂಬ, ಪಟ್ಟಿಕೆ, ಬೋದಿಗೆ ಎಂಬ ವಿವರಗಳೆಲ್ಲ ನಿಚ್ಚಳವಾಗಿ ಕಾಣುತ್ತವೆ.

೦೨. ಬಸದಿಯ ಮುಖ ಮಂಟಪದ ಒಂದು ಪಾರ್ಶ್ವ ನೋಟ (ಎಡಗಡೆ ಮುಖ ಮಂಟಪದ ಕಂಬಗಳು ಚಿತ್ರ ಖಂಡ ಕಂಬಗಳು. ಚತುಷ್ಕೋನ ಪಿಂಡಿ, ೧೬ ಮುಖ, ೮ಮುಖ, ಚಚ್ಚೌಕ, ಕುಂಬ, ಕಂಠ, ಬೋದಿಗೆ – ಇವು ಕಂಡುಬರುತ್ತವೆ.

೦೩. ಮುಖ ಮಂಟಪದ (ಕೈಸಾಲೆ) ಇನ್ನೊಂದು ನೋಟ (ಬಲಗಡೆ)

೦೪. ಶ್ರೀಕಾರ ಕಂಬದ ಸಮೀಪ ನೋಟ.

೦೫. ಗರ್ಭ ಗೃಹದ ದ್ವಾರ ಶಾಖೆಗಳು – ಪಂಚಶಾಖೆಗಳಿವೆ. ಗರ್ಭ ಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದೆ.

೦೬. ಗರ್ಭ ಗೃಹದ ಬಾಗಿಲ್ವಾಡದ ಎಡತುದಿಯಲ್ಲಿ ಗೋಡೆಗೆ ಒರಗಿಸಿರುವ ಮುಕ್ಕಾಗಿರುವ ಜೈನ ಮೂರ್ತಿ

೦೭. ಬಸದಿಯ ಮೂಲನಾಯಕ ಜಿನ ಬಿಂಬದವು ಎಡಭಾಗ ಭಗ್ನವಾಗಿದೆ. ಭಿನ್ನವಾಗಿರುವ ಈ ಬಿಂಬವನ್ನು ಬಲಗಡೆ ಗೋಡೆಯ ಹತ್ತಿರ ಇಟ್ಟಿದ್ದಾರೆ.

೦೮. ಗರ್ಭ ಗೃಹದ ಈಗಿರುವ ವಿಮಾನ.

೦೯. ಬಸದಿಯ ಬಲಗಡೆ ಪಕ್ಕಕ್ಕೆ ಇರುವ ಯಾಪನೀಯರ ಮಠದ ಪ್ರವೆಶ ದ್ವಾರ.

೧೦. ಪ್ರವೇಶ ದ್ವಾರದ ಎಡಗಡೆಯ ಜಾಲಂಧರ.

೧೧. ಮಠದ ಒಳಭಾಗ

೧೨. ಮಠದ ಒಳಗಡೆ ಗುಡಿಯ ಗರ್ಭಗೃಹದಲ್ಲಿ ಮೂಲದೇವರನ್ನು ಇರಿಸಿದ್ದ ಸಿಂಹ ಪೀಠ ಮತ್ತು ಲಾಂಛನ. ಲಾಂಛನವು ಚಕ್ರವಾಕ ಪಕ್ಷಿಯದೊ/ಕುಕ್ಕುಟ ಸರ್ಪದ್ದೊ ಸ್ಪಷ್ಟವಾಗುತ್ತಿಲ್ಲ. ಜಿನ ಮೂರ್ತಿಯನ್ನು ಬದಲಾಯಿಸಿ ಇರಿಸಿರುವ ಈಶ್ವರ ಲಿಂಗವು ಕಾಣುತ್ತದೆ.

೧೩. ಬಸದಿಯ ಹೊರಗಡೆ ಇರುವ ನಿಸಿದಿ ಕಲ್ಲು. ಪರ್ಯಂಕ ಆಸನದಲ್ಲಿ ಸಿಂಹ ಪೀಠದ ಮೇಲೆ ಕುಳಿತಿರುವ ತೀರ್ಥಂಕರರ ತಲೆಯ ಮೇಲುಗಡೆ ಮುಕ್ಕೊಡೆಯಿದೆ.

೧೪.ಬಸದಿಯ ಎದುರು ಹೊರಗಡೆ, ಬಾವಿಕಟ್ಟೆಯ ಹತ್ತಿರ, ಇರಿಸಿರುವ ಸುಂದರ ಗಜಲಕ್ಷ್ಮಿಯ ಶಿಲ್ಪ.

೧೫.ಹೊಸೂರು ಊರೊಳಗೆ ಇರುವ ಶಿವಾಲಯದ ಬಾಗಿಲ್ವಾಡದ ಲಲಾಟ, ಒಳಮಾಳಿಗೆಯ ಸುಂದರ ಕೆತ್ತನೆ.

೧೬.ಸುಂದರ ಶ್ರೀಕಾರ ಕಂಬಗಳ ಕೆತ್ತನೆ.

೧೭. ಶಿವಾಲಯದಲ್ಲಿ ಒಳ ಮಾಳಿಗೆಗೆ ಸೇರಿಸಿರುವ ಪ್ರಸಿದ್ಧ ಯಾಪನೀಯ ಜೈನ ಶಾಸನದ ಕಲ್ಲಿನ ಚಪ್ಪಡಿ.

೧೮.ಕ್ರಿ.ಶ. ಎರಡನೆಯ ಶತಮಾನದ, ಮಥುರಾದ ಜಿನರ ವಿಗ್ರಹದ ಪೀಠದಲ್ಲಿರುವ, ಜೈನ ಯತಿಗಳ ಶಿಲ್ಪ (ಲಕ್ನೋ ಮ್ಯೂಸಿಯಂ, ಸಂಖ್ಯೆ. ಜೆ. ೧೦).

೧೯.ಕಂಕಾಲಿ ಟೀಲಾದಲ್ಲಿ (ಮಥುರಾ) ದೊರೆತಿರುವ, ಕ್ರಿಸ್ತಪೂರ್ವ ಒಂದನೆಯ ಶತಮಾನದ ಜೈನ ಮುನಿಯನ್ನೂ ಕಿನ್ನರನನ್ನೂ ತೋರಿಸುವ ಅಪೂರ್ವ ಉಬ್ಬು ಶಿಲ್ಪ. ಜೈನ ಮುನಿಯು ನಗ್ನನಾಗಿದ್ದು ಎಡಗೈಮೇಲೆ ಅರ್ಥ ಕಪ್ಪಡ ಇರುವುದು ಗಮನಾರ್ಹ (ಲಕ್ನೋ ಮ್ಯೂಸಿಯಂ ಸಂಖ್ಯೆ. ಜೆ. ೧೦೫)

೨೦.ಶಯನ ಬುದ್ಧನ ತಲೆಯ ಹತ್ತಿರ ನಗ್ನ ಅಜೀವಕ ಮುನಿಯು ತನ್ನ ಎಡಗೈಯಲ್ಲಿ ಮಡಚಿದ ತುಂಡು ಅರಿವೆಯನ್ನು ಹಿಡಿದು ನಿಂತಿದ್ದಾನೆ.

೨೧.ಬುದ್ಧ ಆಖ್ಯಾಯಿಕೆಯಲ್ಲಿ ಅಜೀವಕರು ಇರುವ ಚಿತ್ರ ಮಾಲೆಯಿಂದ:

ಚಿತ್ರ ೧.ಬುದ್ದ ಮತ್ತು ಅಜೀವಕ ಉಪಗ (ಅಜಂತ ಗುಹೆ ಸಂಖ್ಯೆ. ೧೫)

ಚಿತ್ರ ೨.ಬುದ್ದ ಮತ್ತು ಅಜೀವಕ ಉಪಗ (ಕಿಜಿಲ್‌, ಗುಹೆ, ಸಂಖ್ಯೆ. ೧೧೦)

ಚಿತ್ರ ೩.ಮಹಾಕಾಶ್ಯಪ, ಅಜೀವಕ, ಸುಭದ್ರ (ಗಂಧರ ಕಲೆ, ಫ್ರೀರ್‌ ಕಲಾಮಾಲೆ ಸಂಖ್ಯೆ ೪೯, ೯೬)

೨೧.ಬುದ್ದನ ಮಹಾಪ್ರಾತಿಹಾರ್ಯದಲ್ಲಿ ಬರುವ ಅನ್ಯತೀರ್ಥಿಕರು :

ಚಿತ್ರ ೪.ಪಾಂಚಿಕ ಮತ್ತು ಪೂರಣ ಕಾಶ್ಯಪ (ಲಾಹೋರು ಮ್ಯೂಸಿಯಂ ಸಂಗ್ರಹದಿಂದ)

ಚಿತ್ರ ೫.ಪೂರಣ ಕಾಶ್ಯಪನು ಬುದ್ಧನ ಸಮೀಪದಲ್ಲಿ (ಸಾರನಾಥದಿಂದ)

ಚಿತ್ರ ೬.ಪಿಂಛ ಹಿಡಿದ ನಿಗ್ರಂಥ, ಮಸ್ಕರಿಗೋಸಾಲೀಪುತ್ತ, ಕಕುಧ ಕಾತ್ಯಾಯನ, ಪೂರಣ, ಕಾಶ್ಯಪ, ಸಂಜಯ ವೈರಟ್ಟಿಪುತ್ರ ಮತ್ತು ಅಜಿತ ಕೇಸಕಂಬಲಿ – ಈ ಆರೂಜನ ತಿತ್ಥಯರರೂ, ಇತರರೂ ಇರುವ ಅತ್ಯಪೂರ್ವ ಚಿತ್ರ (ಅಜಂತ, ಗುಹೆ ಸಂಖ್ಯೆ. ೧೭)

[ಸಂಖ್ಯೆ ೨೧ ಮತ್ತು ೨೨ರಲ್ಲಿ ನಮೂದಿಸಿರುವ ಒಟ್ಟು ಆರು ಚಿತ್ರಗಳನ್ನು Jainism and Parkrit in Ancient and Medieval India, (ed) Bhattacharyya, N.N. (Delhi, 1994) ಪುಸ್ತಕದಿಂದ (ಪುಟ. ೭೫ – ೭೬) ಆರಿಸಲಾಗಿದೆ]

 

ಚಿತ್ರಗಳು

01_260_YS-KUH

02_260_YS-KUH

03_260_YS-KUH

04_260_YS-KUH

05_260_YS-KUH

06_260_YS-KUH

07_260_YS-KUH

08_260_YS-KUH

09_260_YS-KUH

10_260_YS-KUH

11_260_YS-KUH

12_260_YS-KUH

13_260_YS-KUH

14_260_YS-KUH

15_260_YS-KUH

16_260_YS-KUH

17_260_YS-KUH

18_260_YS-KUH

19_260_YS-KUH

20_260_YS-KUH

21_260_YS-KUH

22_260_YS-KUH