ಹೇಳಿದ್ದೆ ತಿರುಗಿ ಹೇಳುವುದು, ಬರೆದದ್ದನ್ನೆ ಮತ್ತೆ ಬರೆಯುವುದ – ಇದು ಸ್ವಭಾವಕ್ಕೆ ಒಗ್ಗದು. ತೊಂಬತ್ತು ಹಳತು ಇದ್ದರೂ ಹತ್ತಾದರೂ ಇರಬೇಕು ಹೊಸದು. ಇದುವರೆಗೆ ನಾಲ್ಕು ದಶಕಗಳಿಂದ ಲೇಖನಗಳನ್ನು ಬರೆದದ್ದು, ತೀರ್ಮಾನಗಳನ್ನು ಬೆಸೆದು ಹೊತ್ತಗೆಗಳನ್ನು ರಚಿಸಿದ್ದು ಹೀಗೆ, ಹೊಸ ವಿಚಾರಗಳ ಮೊನಚನ್ನು ಮಸೆದು. ಹತ್ತಾರು ವರ್ಷಗಳಿಂದ ಯಾಪನೀಯ ಪಂಥದ ಹಲವು ಮಗ್ಗಲುಗಳನ್ನು ಕುರಿತು ಆಲೋಚಿಸುತ್ತ ಬಂದೆ. ಈ ಬಗ್ಗೆ ನಡೆದ ನನ್ನ ಚಿಂತನೆಗಳ ಒಂದು ಟಿಸಲು ‘ಕಾಣೂರ್ಗಣ’ ಲೇಖನ [ಹರಿತಿಸಿರಿ, (ಸಂ) ಲಕ್ಷ್ಮಣ ತೆಲಗಾವಿ : ೧೯೮೭], ಇನ್ನೊಂದು ಎಸಳು, ‘ಜೈನ ಪ್ರತಿ ಸಂಸ್ಕೃತಿಯ ನಿರ್ಮಾಣ ಅಸ್ಪೃಶ್ಯತೆ’ (ಸಾಧನೆ, ಸಂಪುಟ ೨೩ – ಸಂಚಿಕೆ ೧, ೨) ಎಂಬ ಸಂಪ್ರಬಂಧ, ಮತ್ತೊಂದು ಕವಲು, ಶಾಸನಗಳಲ್ಲಿ ಯಾಪನೀಯ ಗಣ – ಗಚ್ಛಗಳು (ಚಂದ್ರಕೊಡೆ : ೧೯೯೭), ಮೈಳಾಪತೀರ್ಥ – ಮಗದೊಂದು ರೆಂಬೆ; ಕಸಲಗೆರೆ ಶಾಸನ – ಯಾಪನೀಯ ದಾಖಲೆ, ದಡಗ – ಯಾಪನೀಯ ಕೇಂದ್ರ, ಸುಳಗೋಡು ಸೋಮವಾರ – ಯಾಪನೀಯ ಕೇಂದ್ರ – ಎಂಬಿತ್ಯಾದಿ ಲೇಖನಗಳು ‘ಚಂದ್ರಕೊಡೆ’ ಪುಸ್ತಕದಲ್ಲಿ ಸೇರ್ಪಡೆ ಆಗಿವೆ.

ಹೀಗೆ, ಹಿಂದಿನ ನನ್ನ ಹಲವು ಪ್ರಯತ್ನಗಳು ಪ್ರಾಕೃತ, ಪಾಲಿ, ಸಂಸ್ಕೃತ ಭಾಷೆಗಳ ನಿಕ್ಷಿಪ್ತದಲ್ಲಿ ಹುದುಗಿರುವ ಅನ್ಯಾನ್ಯ ಮೂಲ ಆಕರಗಳನ್ನು ತನ್ನ ಕಕ್ಷೆಗೆ ಅಳವಡಿಸಿಕೊಂಡು, ಮುಪ್ಪುರಿಯಾಗಿ ಹುರಿಗೊಂಡು, ಶಾಸನಗಳ ಆಕರಗಳು ಹರಳುಗೊಂಡು, ಪೂರಕ ಅನ್ಯಾನ್ಯ ಅಧ್ಯಯನ ಸಾಮಗ್ರಿ ಸೇರಿಕೊಂಡು ಪ್ರಸ್ತುತ ‘ಯಾಪನೀಯರು’ ಪುಸ್ತಕ ಸಿದ್ಧವಾಗಿದೆ. ಇದು ಮುಂದುವರಿಯಬೇಕಾದ ವ್ಯಾಪಕ ಅಧ್ಯಯನಕ್ಕೆ ನೀಡಿರುವ ತಳವೃತ್ತಿ. ಕೇವಲ ಮೂರು ವಾರಗಳ ‘ವಾರಂಟ್‌’ ಕೊಟ್ಟು, ವಿಷಯ ಸೂಚಿಸಿ, ಒತ್ತಾಸೆಯ ಮಮತೆಯಿಂದ ಇದನ್ನು ಆತುರಾತುರದಲ್ಲಿ ಬರೆಯಿಸಿದವರು ಸನ್ಮಿತ್ರರಾದ, ಕನ್ನಡ ಕುಲಪತಿ ಡಾ. ಎಂ. ಎಂ. ಕಲಬುರ್ಗಿಯವರು. ಇಂಥ ವಿಷಯಗಳು ಅಂಗೈ ನೆಲ್ಲಿಕಾಯಿ ಆಗಿರುವ ಶ್ರೇಷ್ಠ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ ಇವರ ಸಾರ್ದ್ರ ಸ್ನೇಹವನ್ನು ಮರೆಯಲಾರೆ. ಇಷ್ಟು ಸಾದು ಎಂದು ಅವರು ಇನ್ನೂ ಗುರುತರವಾದ ಹೊಣೆಯನ್ನು ಹೊರಿಸಿದ್ದಾರೆ. ಆ ಹೊರೆಯನ್ನು ಹೆಗಲಿಂದ ಕಾರ್ಯಕ್ಷೇತ್ರಕ್ಕೆ ಇಳಿಸಿ ಹಗುರಾಗುವ ಮತ್ತು ಋಣ ತೀರಿಸುವ ಅಕ್ಷರಕಾಯಕದಲ್ಲಿ ನಿರತನಾಗಿದ್ದೇನೆ. ಹೀಗೆ ನನ್ನನ್ನು ದುಡಿಯಲು ಹಚ್ಚಿದ ವಿದ್ವಾನ್‌ ಮಿತ್ರವರೇಣ್ಯರಾದ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ನಾನು ಯಾವತ್ತೂ ಋಣಿ.

ಹಂಪ ನಾಗರಾಜಯ್ಯ
೧೦.೯.೯೯