ಕೆಲವು ವರ್ಷಗಳ ಹಿಂದೆ ದೇಶದ ಪ್ರಸಿದ್ಧ ರಾಜ್ಯಶಾಸ್ತ್ರರಲ್ಲೊಬ್ಬರಾದ ಡಾ. ಜಾವಿದ್ ಆಲಂ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ತಮ್ಮ ವಿದ್ವತ್ ಪೂರ್ಣವಾದ ಉಪನ್ಯಾಸಗಳಿಂದ ಇಲ್ಲಿನ ವಿದ್ವತ್ ವಲಯದಲ್ಲಿ ಸಂಚಲನ ಮೂಡಿಸಿದ್ದರು, ಮೂಲತಃ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿರುವ ನಾನು ಅವರ ಉಪನ್ಯಾಸ ಮತ್ತು ಬರವಣಿಗೆಗಳಿಂದ ಬಹಳಷ್ಟು ಪ್ರಭಾವಿತನಾದೆ. ಇದೇ ಹೊತ್ತಿಗೆ ಅವರ ‘ಇಂಡಿಯಾ ಲಿವಿಂಗ್ ವಿಥ್ ಮಾಡರ್ನಿಟಿ’ ಮತ್ತು ‘ಹೂ ವಾಂಟ್ಸ್ ಡೆಮಾಕ್ರಸಿ?’ ಎಂಬ ಕೃತಿಗಳು ರಾಜಶಾಸ್ತ್ರ ಮತ್ತು ದೇಶದ ರಾಜಕೀಯ ಚಿಂತನಾ ವಲಯದಲ್ಲಿ ಸಾಕಷ್ಟು ಸಂವಾದಕ್ಕೆ ಅವಕಾಶ ಕಲ್ಪಿಸಿತು. ಅದರಲ್ಲೂ ‘ಹೂ ವಾಂಟ್ಸ್‌ ಡೆಮಾಕ್ರಸಿ’ ಕೃತಿಯಲ್ಲಿ ಜಾವಿದ್ ಅವರು ತಿಳಿಸುವಂತೆ ಭಾರತದಲ್ಲಿ ಪ್ರಜಾಪ್ರಭುತ್ವ ಎಲೀಟುಗಳ ಬದಲು ಆಳಿಸಿಕೊಳ್ಳುವವರಿಂದ ಮುಂದುವರಿಯುತ್ತದೆ ಮತ್ತು ಪ್ರಜಾಪ್ರಭುತ್ವವು ಜನಸಾಮಾನ್ಯರ ಘನತೆ, ಹಕ್ಕೊತ್ತಾಯಗಳಿಗೆ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಇದೊಂದು ಸ್ವೀಕಾರಾರ್ಹ ಮಾದರಿಯೆನಿಸಿದೆ ಎಂಬ ಮಾತು ಭಾರತದಲ್ಲಿ ಪ್ರಜಾಪ್ರಭುತ್ವ ಎಷ್ಟರಮಟ್ಟಿಗೆ ರೂಢಿಗತಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆಸಕ್ತಿಯಿಂದ ಈ ಕೃತಿಯನ್ನು ಅನುವಾದಕ್ಕೆತ್ತಿಕೊಂಡು ಮುಂದುವರಿದಾಗ ಪುಸ್ತಕದೊಳಗಿನ ವಿಶ್ಲೇಷಣೆ ಈ ವಾದಗಳಿಗೆ ಇನ್ನಷ್ಟು ಪುಷ್ಟಿ ನೀಡಿದವು. ವಿಭಾಗದ ಹಿರಿಯರಾದ ಪ್ರೊ. ಟಿ.ಆರ್. ಚಂದ್ರಶೇಖರ ಅವರು ನನಗೆ ಧೈರ್ಯ ತುಂಬಿದರು. ಜೊತೆಗೆ ವಿಭಾಗದ ಸಹೋದ್ಯೋಗಿ ಮಿತ್ರರಾದ ಪ್ರೊ. ಎಂ. ಚಂದ್ರ ಪೂಜಾರಿ, ಡಾ. ಸಿದ್ಧಗಂಗಮ್ಮ, ಡಾ. ಎಚ್.ಡಿ. ಪ್ರಶಾಂತ್ ಮತ್ತು ಮುಖ್ಯಸ್ಥರಾದ ಶ್ರೀ ಜನಾರ್ಧನ ಇವರು ಎಲ್ಲ ರೀತಿಯಲ್ಲೂ ನೆರವು ಒದಗಿಸಿದರು.

ಈ ಕೃತಿಯನ್ನು ಪ್ರಸಾರಾಂಗದ ವತಿಯಿಂದ ಪ್ರಕಟಿಸಲು ಅನುಮತಿ ನೀಡಿರುವ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಮಾನ್ಯ ಕುಲಸಚಿವರು ಹಾಗೂ ಪ್ರಸಾರಂಗದ ನಿರ್ದೇಶಕರು ಆಗಿರುವ ಡಾ. ಮಂಜುನಾಥ ಬೇವಿನಕಟ್ಟಿಯವರು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಕೃತಿಯ ಅನುವಾದದಿಂದ ತೊಡಗಿ ಪುಸ್ತಕ ರೂಪ ಪಡೆಯುವಲ್ಲಿ ಬಹಳಷ್ಟು ಮಂದಿ ನೆರವು ನೀಡಿದ್ದಾರೆ. ಇವರನ್ನು ನೆನೆಯದಿದ್ದರೆ ನನ್ನ ಶ್ರಮ ಸಾರ್ಥಕವಾಗದು. ಕರಡು ಪ್ರತಿ ಪರಿಶೀಲಿಸಲು ಸಲಹೆಗಳನ್ನಿತ್ತ ಪ್ರಸಾರಾಂಗದ ಮಿತ್ರರಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಎಚ್.ಬಿ. ರವೀಂದ್ರ, ಡಾ. ಎಸ್. ಮೋಹನ್ ಹಾಗೂ ಶ್ರೀ ಕೆ.ಎಲ್. ರಾಜಶೇಖರ್ ಅವರಿಗೂ ವಂದನೆಗಳು ಸಲ್ಲುತ್ತವೆ. ದೂರಶಿಕ್ಷಣ ಕೇಂದ್ರದಲ್ಲಿ ಸಂಯೋಜಕರಾಗಿರುವ ಡಾ. ವಿ.ಸಿ. ಮಾರುತಿ, ಸಹೋದ್ಯೋಗಿ ಮಿತ್ರ ಶ್ರೀ ರಮೇಶ ನಾಯಕ ಮತ್ತು ಶ್ರೀ ಕಿರಣ್ ಎಂ., ಶ್ರೀ ಶಿವಕುಮಾರ, ಶ್ರೀ ಹನುಮಂತ ಮಗಡರ್, ಶ್ರೀ ನಾಗರಾಜ ಬಡಿಗೇರ, ಶ್ರೀ ಎಂ.ಎಂ. ಶಿವಪ್ರಕಾಶ್ ಮತ್ತು ಶ್ರೀ ಕರೀಂಸಾಬ್ ಇವರಿಗೆ ಮತ್ತು ಪುಸ್ತಕಕ್ಕೆ ಮುಖಪುಟ ಮಾಡಿದ ಶ್ರೀ ಕೆ.ಕೆ. ಮಕಾಳಿ ಹಾಗೂ ಪುಟವಿನ್ಯಾಸ ಮಾಡಿದ ಶ್ರೀ ಜೆ. ಬಸವರಾಜ ಅವರಿಗೆ ವಂದನೆಗಳು.

ಡಾ. ಎ. ಶ್ರೀಧರ