ಭಾರತದ ಪ್ರಜಾಪ್ರಭುತ್ವ ಪ್ರಪಂಚದಲ್ಲೇ ವಿಸ್ತಾರವಾದುದು ಮಾತ್ರವಲ್ಲ ಅದೊಂದು ಹೆಚ್ಚು ಪ್ರತಿಧ್ವನಿಸುತ್ತಿರುವ ಪ್ರಜಾಪ್ರಭುತ್ವವಾಗಿದೆ. ಅದು ಜನಸಾಮಾನ್ಯರ ಅಧಿಕಾರ ಚಲಾವಣೆಯ ಪ್ರದರ್ಶನಕ್ಕೆ ಸ್ಥಳಾವಕಾಶ ಒದಗಿಸಿದೆ.

೨೦೦೪ರ ಸಂಸದೀಯ ಚುನಾವಣೆಯ ತೀರ್ಪು ಒಂದು ವರ್ಗದ ತಿರುವು ಆಗಿದೆ. ಎಲ್ಲರನ್ನು ಅಚ್ಚರಿಗೊಳಿಸುವಂತೆ ಕೊನೆಯವರೆಗೂ ಜನ ತಮ್ಮ ನಿರ್ಧಾರವನ್ನು ಗುಟ್ಟಾಗಿರಿಸಿದ್ದರು. ೧೯೯೦ರ ಜನಾಂದೋಲನಗಳ ಇರುವಿಕೆ ಅಥವಾ ಇವನ್ನು ಪ್ರತಿರೋಧಿಸಿದ ಎಲೀಟುಗಳು ತಹಬದಿಯ ಮುಂದುವರಿಕೆ ಕಾಣುತ್ತಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. ವಿ.ಪಿ. ಸಿಂಗ್ ಸರಕಾರದ ನಿರ್ಧಾರದಿಂದುಂಟಾದ ಜನಾಂದೋಲನ ಮತ್ತದಕ್ಕೆ ಪ್ರತಿಕ್ರಿಯೆಯೆಂಬಂತೆ ಅಡ್ವಾಣಿ ರಥಮಾತ್ರೆ ಮುಂತಾದ ಭಾರತದ ಪ್ರಜಾಪ್ರಭುತ್ವದ ವೈರುಧ್ಯಗಳ ಬಗೆಗೆ ಈ ಪುಸ್ತಕ ಅನಾವರಣಗೊಳಿಸುತ್ತದೆ. ಇದು ಅನಂತರದ ಭಾರತ ರಾಜಕಾರಣದ ವಿಶಿಷ್ಟತೆಯೆನಿಸಿದೆ.

ಪ್ರಜಾಪ್ರಭುತ್ವ ಇರುವವರೆಗೂ ಯಾವುದೇ ಜನಾಂದೋಲನ ಪರಿಪೂರ್ಣವಾಗಿ ನಡೆಯಲಾರದು. ಅದು ಮಾರ್ಗ ಬದಲಿಸಬಹುದು (ಬಿಜೆಪಿ ಹೀಗೆ ಮಾಡುವುದರಲ್ಲಿ ಯಶಸ್ವಿಯಾದಂತೆ), ಇಲ್ಲವೇ ಬದಿಗೆ ಸರಿಸಲ್ಪಡಬಹುದು. ಆದರೆ ಅದರ ಕಾವು ಹಾಗೆ ಮುಂದುವರಿಯುತ್ತಿದ್ದು ಒಂದು ಸೂಕ್ತ ಸಮಯದಲ್ಲದು ಎದ್ದು ನಿಲ್ಲಬಹುದು. ಉದಾಹರಣೆಗೆ ೨೦೦೪ರ ಚುನಾವಣೆಯಲ್ಲಿ ಬಿಜೆಪಿಯ ಸೋಲು ಭಾರತ ಪ್ರಜಾಸತ್ತೆಯ ಪ್ರತಿಧ್ವನಿಯ ಗುರುತು ಮಾತ್ರವಲ್ಲ ಅದೊಂದು ಪ್ರಮುಖ ವಿರೋದಾಭಾಸವನ್ನು ರಾಜಕೀಯದಿಂದ ತೊಲಗಿಸಿದೆ. ಈ ತೀರ್ಪು ೧೯೯೦ರಲ್ಲಿ ಇದ್ದಂತಹ ರೀತಿಯ ಸಾಮಾಜಿಕ ಶಕ್ತಿಗಳ ಮತ್ತು ರಾಜಕೀಯ ಅಧಿಕಾರದ ಮಧ್ಯದ ಸಂಬಂಧವನ್ನು ಹತ್ತಿರ ತರುತ್ತಿದೆ. ಭಾರತದ ರಾಜಕಾರಣದಲ್ಲಿ ಇದರಿಂದಾಗಿ ಹೆಚ್ಚಿದ ಸುಸಂಗತೆಯಿಂದ ನಮ್ಮ ವ್ಯವಸ್ಥೆಯ ಜಾತ್ಯತೀತ ಮತ್ತು ಬಹುತ್ವದ ತಳಹದಿಯನ್ನು ಗಟ್ಟಿಗೊಳಿಸುವಂತಹ ಪ್ರಜಾಸತ್ತೆಯ ಬಲಗಳಿಗೆ ಅವಕಾಶ ಒದಗಿಸುತ್ತದೆ. ೧೯೯೮ ಅಥವಾ ೧೯೯೯ಕ್ಕೆ ಹೋಲಿಸಿದಾಗ ನಗರ ಗ್ರಾಮೀಣ ಅನಕ್ಷರಸ್ಥ ಹಾಗೂ ಅವಕಾಶ ವಂಚಿತರು ವಿಭಿನ್ನವಾಗಿ ಮತ ಚಲಾಯಿಸಿರುತ್ತಾರೆ. ಹಿಂದಿನ ಸನ್ನಿವೇಶಗಳಲ್ಲಿ ಧರ್ಮ, ಜಾತಿ ಮತ್ತು ರಾಷ್ಟ್ರೀಯ ಹಿನ್ನೆಲೆಯಲ್ಲಿನ ಮನವಿಗಳು ಕೆಲಸ ಮಾಡಿವೆ. ಈಗ ಹಾಗಾಗದೆ ಹಿಂದಿನಿಂದಲೂ ಹೀನಾಯವಾಗಿ ಪರಿಗಣಿಸಲ್ಪಟ್ಟ ನಿರ್ಲಕ್ಷಿತ ಜನಗಳು ಒಂದು ವರ್ಗವಾಗಿ ಒಗ್ಗೂಡುತ್ತ ವಿವಿಧ ಭಾಗಗಳಲ್ಲಿ ಮತ ಚಲಾಯಿಸುತ್ತಾರೆ.

೧೯೯೦ರ ಸುಧಾರಣಾ ಪ್ರಕ್ರಿಯೆ ಒಂದು ತಳಮಟ್ಟದ ವರ್ಗದ ಒಗ್ಗೂಡುವಿಕೆಗೆ ಅನುವಾಗುತ್ತಿರುವುದನ್ನು ಹೆಚ್ಚಿನ ವೀಕ್ಷಕರು ಗಮನಿಸದಿರುವುದನ್ನು ಗುರುತಿಸುತ್ತದೆ. ಗುಜರಾತ್ ಮತ್ತು ಆಂಧ್ರದಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ೨೦೦೨ರ ನರೇಂದ್ರ ಮೋದಿಯ ಬಿಜೆಪಿಯ ಅಘಾತಕಾರಿ ಅದ್ಭುತ ವಿಜಯದ ಜೊತೆಗೆ ಅತ್ಯಂತ ಬೀಭತ್ಸ ಕಗ್ಗೊಲೆಯ ಮಧ್ಯೆ ಭಾರತದ ಗಣರಾಜ್ಯದ ಜನಪ್ರಿಯತೆಯ ಕುಸಿತವನ್ನು ನಾವು ಹೇಗೆ ಅರ್ಥೈಸಬಹುದು.

ಈ ರೀತಿ ದುಸ್ಥಿತಿಯ ವರ್ಗದೊಳಗೂ ಗಮನಾರ್ಹವಲ್ಲದ ಒಗ್ಗೂಡುವಿಕೆ ಯಾಕೆ ಉಂಟಾಗುತ್ತದೆ. ಇದು ಯಾಕೆ ಮುಖ್ಯವಾದುದೆಂದರೆ ಕೆಲವು ಟೀಕಾಕಾರರು ಪತ್ರಿಕೆಗಳಲ್ಲಿ ಅಭಿಪ್ರಾಯಿಸಿದಂತೆ ಮತದಾನವು ಜಾಗತೀಕರಣ ಮತ್ತು ರಾಚನಿಕ ಹೊಂದಾಣಿಕೆಯುಳ್ಳ ಸುಧಾರಣೆಗಳ ಕಡೆಯೂ ಅಲ್ಲ ಇಲ್ಲವೇ ಶ್ರೀಮಂತರ ವಿರುದ್ಧವೂ ಅಲ್ಲ ಎಂದಿದೆ. ಇದನ್ನು ಸಿ ಎಸ್ ಡಿ ಎಸ್ ನವರು ಹಿಂದೆ ಕೆಲವು ಎಂಪಿರಿಕಲ್ ಸಂಗತಿಗಳ ಹಿನ್ನೆಲೆಯಲ್ಲಿ ಆಧರಿಸಿದರೂ ರುಜುವಾತುಗೊಳಿಸಬೇಕಿದೆ. ರಾಜಕೀಯವಾಗಿ ಹೇಳುವುದಾದರೆ ಜನಗಳು ಸೈದ್ಧಾಂತಿಕಮ ಅಮೂರ್ತ ಸಂಗತಿಗಳ ಪರ ಇಲ್ಲವೇ ವಿರುದ್ಧವಾಗಿ ಮತ ಹಾಕಲಾರರು. ಹಾಗಾಗಿ ಈ ರೀತಿಯ ತೋರಿಕೆಯ (ಮತದಾನ ಆಯ್ಕೆ ನಿಲುವಿನ ಕುರಿತ) ತಿಳುವಳಿಕೆಯಿಂದ ಏನು ಪ್ರಯೋಜನವಾಗಲಾರದು. ತಮ್ಮ ಜೀವ ಮತ್ತು ಜೀವನಾಧಾರಕ್ಕೆ ಏನು ಬೇಕು ಎಂಬುದರ ಆಧಾರದಲ್ಲಿ ಜನ ನಿರ್ಧಾರಕ್ಕೆ ಬರುತ್ತಾರೆ. ವಿಸ್ತೃತ ಆರ್ಥಿಕ ಸೂಚಕಗಳು ಇಲ್ಲಿ ಉಪಯೋಗಕ್ಕೆ ಬಾರವು. ಉದಾಹರಣೆಗೆ ಬಿಜೆಪಿಯ ಭಾರತ ಪ್ರಕಾಶಿಸುತ್ತಿದೆ ಮತ್ತಿತರ ಘೋಷಣೆಗಳಿಂದ ಅದಕ್ಕೇನು ಹೆಚ್ಚಿನ ಲಾಭವಾಗಿಲ್ಲ. ಆರ್ಥಿಕ ವೃದ್ಧಿಯ ದರ, ವಿದೇಶಿ ವಿನಿಮಯ ಮುಂತಾದವು ಉದ್ಯೋಗಾವಕಾಶಗಳ ಹೆಚ್ಚಳ ಇಲ್ಲವೇ ಕುಸಿತವನ್ನು ತಿಳಿಸಲಾರವು ಅಥವಾ ಕೃಷಿಯಲ್ಲಿನ ಹೂಡಿಕೆ ಕುಸಿತದಿಂದಾಗಿ ರೈತಾಪಿಗಳಿಗೆ ಏನಾಗಿದೆಯೆಂದು ಹೇಳಲಾರವು. ಇವು ಕೂಲಿಯ ಕಡಿತ ಇಲ್ಲವೆ ಹೆಚ್ಚಳವನ್ನು ತಿಳಿಸಲಾರವು. ಇದರಿಂದಾಗಿ, ಕಾರ್ಮಿಕರು, ರೈತರು, ದಿನಗೂಲಿಗಳು, ನಿರುದ್ಯೋಗಿ ಮತ್ತು ಉದ್ಯೋಗ ವಂಚಿತರು, ಮಹಿಳೆಯರು ಮುಂತಾದವರೆಲ್ಲ ತಮ್ಮ ಸಮಸ್ಯೆಗಳ ಸುಳಿಯಲ್ಲಿ ಬೇರೆಯದನ್ನೇ ಯೋಚಿಸುತ್ತಾರೆ. ಅವರು ವಿಸ್ತೃತ ಸೂಚಕಗಳ ಸೂಕ್ಷ್ಮ ಸಂದರ್ಭಗಳತ್ತ ಕಣ್ಣುಹಾಯಿಸುತ್ತಾ ಅವರ ಅನುಭವವೇ ಇವೆರಡರ ಮಧ್ಯೆ ಹೊಂದಾಣಿಕೆಯಾಗದ ತಿಳುವಳಿಕೆಯನ್ನು ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಅವಕಾಶವಂಚಿತರಾದ ಸಂಕಷ್ಟದ ಜನಗಳು ತಮ್ಮ ದುಸ್ಥಿತಿಯತ್ತ ತಿರುಗಿಯೂ ನೋಡದ ಸೌಲಭ್ಯ ಹೊಂದಿದವರ ವಿರುದ್ಧ ಮತ ಹಾಕುವ ಅನಿರೀಕ್ಷಿತವಾದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಯಾರು ಪ್ರಜಾಪ್ರಭುತ್ವವನ್ನು ಬಯಸುತ್ತಾರೆ ಎಂಬುದಕ್ಕೆ ೨೦೦೪ರ ಸಂಸದೀಯ ಚುನಾವಣೆಯ ಫಲಿತಾಂಶ ಸ್ಪಷ್ಟವಾದ ಉತ್ತರ ನೀಡಿದೆ. ಬಹುಮತದ ಜನಗಳು ಮೌನವಾಗಿ ಖುಷಿಪಟ್ಟರೆ ಶ್ರೀಮಂತರು ಗಾಬರಿಯಾಗಿ ಬೆದರಿಸಿದರು. ತಮ್ಮ ಇಷ್ಟಬಂದಂತೆ ಮತ ಚಲಾಯಿಸಿದ ಜನರ ವಿರುದ್ಧ ಶೇಕಡಾ ೨ರಿಂದ ೩ರಷ್ಟಿದ್ಧ ಶ್ರೀಮಂತರು ಪ್ರತಿರೋಧಿಸುವುದೆಂದರೆ ಈ ವರ್ತನೆಯನ್ನು ಹೇಗೆ ಪರಿಗಣಿಸಬಹುದು. ಈ ಶ್ರೀಮಂತರಿಗೆ ಯಾವುದೇ ನೈತಿಕ ಹೊಣೆ ಅಥವಾ ಸಾಮಾಜಿಕ ತನಿಖೆಯೆಂಬುದಿಲ್ಲ. ಅವರ ಸ್ವಾರ್ಥಕ್ಕೆ ಈಗ ಬೆಲೆ ತೆತ್ತಿದ್ದಾರೆ.

ಭಾರತ ಎಷ್ಟು ಪ್ರಕಾಶಿಸಿದರೂ ನಿರ್ಲಕ್ಷಿತರು ಇಂಥ ಜಾಹೀರಾತಿನ ವಿರುದ್ಧವಾಗಿದ್ದು ಅವರ ಅಸಹನೆ ಮಿತಿಮೀರುತ್ತದೆ. ಈ ಜನಗಳಿಂದಾಗಿ ಅರ್ಥ ವ್ಯವಸ್ಥೆಯ ಕಾರ‍್ಯರೂಪಗೊಳ್ಳುವುದು ಮತ್ತು ಇದರಿಂದಾಗಿ ತಮಗೆ ಅನುಕೂಲವಾಗುವಂತಹ ಕ್ಷೇತ್ರದಲ್ಲಿ ಹೂಡಿಕೆ ಮಾಡಿರೆಂದು ಹೇಳುವ ಹಕ್ಕು ಇರುವುದೆಂದು ಭಾವಿಸುತ್ತಾರೆ, ಇದರಿಂದಾಗಿ ಸ್ವಲ್ಪ ಆಸ್ತಿ, ಸಾಲಕ್ಕಾಗಿ ಅವಕಾಶ, ಉದ್ಯೋಗ ರಕ್ಷಣೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಅವಕಾಶವಿರುವುದೆಂದು ತಿಳಿಯುತ್ತಾರೆ. ಹಾಗಾಗಿ ತಮ್ಮ ದೈನಂದಿನ ಅವಶ್ಯಕತೆಗಳ ಪೂರೈಕೆಗಾಗಿ ದಯಮಾಡಿ ಏನಾದರೂ ಮಾಡಿರೆಂದು ಅಂಗಲಾಚುತ್ತಾರೆ. ಇದು ಹಿಂದೆ ವಿವರಿಸಿದಂತೆ ಅವರ ಗುರುತಿಸುವಿಕೆಯ ಹಂಬಲ ಮತ್ತು ಸಮಾನರಾಗಿ ಪರಿಗಣಿಸುವರೆಂಬ ಬೇಡಿಕೆಗೆ ಒತ್ತು ನೀಡುವುದು. ಹಾಗಾಗಿ ಜನರು ತಮ್ಮ ಮತವನ್ನು ‘ಇತ್ಯಾತ್ಮಕ ಸ್ವಾತಂತ್ರ‍್ಯ’ಕ್ಕೆ ಬಳಸಿರುತ್ತಾರೆಂದು ಹೇಳಬಹುದು.

ಹೀಗೆ ಈ ಫಲಿತಾಂಶವು ರಾಜಕೀಯ ವ್ಯವಸ್ಥೆಯ ಪ್ರಜ್ಞೆಯಲ್ಲಿ ಒಂದು ವಿವರಿಸಿದ ಕಾರ್ಯಸೂಚಿಯನ್ನು ತಂದಿದೆ. ಗುರುತಿಸದ ವರ್ಗದ ಒಗ್ಗೂಡುವಿಕೆ ಮತ್ತದರ ಹಿಂಚಲನೆ ಸಂದರ್ಭದಲ್ಲಿ ಇದನ್ನು ನೆನಪಿಸುವುದು ಸೂಕ್ತ. ಎಡಪಕ್ಷ ಕೂಡ ವರ್ಗ ಚಾಲನೆಯೊಂದಿಗೆ ಧರ್ಮನಿರಪೇಕ್ಷತೆಗೆ ವ್ಯವಸ್ಥಿತವಾಗಿ ಆಂದೋಲನ ನಡೆಸಿಲ್ಲ. ಮತದಾದರು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಚಾಲನೆ ಒದಗಿಸಿದರು. ೧೯೭೭ರ ತುರ್ತು ಪರಿಸ್ಥಿತಿ ವಿರುದ್ಧ ಅಲೆಯ ನಂತರ ಜನಗಳು ತಮ್ಮ ಅನುಭವಗಳೊಂದಿಗೆ ಒಗ್ಗೂಡಲು ಕಲಿಯುತ್ತಿದ್ದಾರೆ.

ಈ ಹಂತದಲ್ಲಿ ಆಂಧ್ರಪ್ರದೇಶದ ಸಂಗತಿ ಮುಖ್ಯವಾಗುತ್ತದೆ. ಲಾಲೂ ಅಥವಾ ಮುಲಾಯಂನ ದುರಾಡಳಿತ ಜನರಿಗೆ ಹೊರೆಯೆನಿಸಿಲ್ಲ. ಆದರೆ ಚಂದ್ರಬಾಬುನಾಯ್ಡು ಎಂಬ ಮುಖ್ಯಕಾರ್ಯನಿರ್ವಾಹಕನ ದಕ್ಷ ಆಡಳಿತ ಮತ್ತು ಸುಧಾರಣೆಗಳು ತಿರಸ್ಕೃತಗೊಂಡವು. ಇಡೀ ರಾಜ್ಯ ಮಾತ್ರವಲ್ಲ ಹೈದ್ರಾಬಾದಲ್ಲೂ ಅವನು ಸೋಲು ಕಂಡನು. ಉದಾಹರಣೆಗೆ ೧೯೯೦ರ ಮೊದಲ ಭಾಗದಲ್ಲಿದ್ದ ಸೈಕಲ್ ರಿಕ್ಷಾಗಳು ಆಟೋರಿಕ್ಷಾಗಳಿಂದಾಗಿ ಇಲ್ಲವೇ ಕಟ್ಟಡ ನಿರ್ಮಾಣದ ಅವಕಾಶಗಳಿಂದಾಗಿ ಮರೆಯಾದವು. ಗುಡಿಸಲುಗಳು ಕನಿಷ್ಠ ಸೌಕರ್ಯಗಳುಳ್ಳ ಸಣ್ಣ ಕಾಂಕ್ರಿಟ್ ಮನೆಗಳಾದವು. ೧೯೯೦ರಲ್ಲಿ ನಾಯ್ಡು ಪ್ರೀತಿ ಪಾತ್ರರಾದ ಈ ಜನಗಳು ೨೦೦೪ರ ಸಂಸದೀಯ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ತಿರಸ್ಕರಿಸಿದರು. ೧೯೯೦ರ ನಂತರ ಜನಗಳ ಸ್ಥಿತಿಗತಿ ದುಸ್ತರಗೊಂಡವು ಈ ತರದ ಪರಿಸ್ಥಿತಿ ಮಧ್ಯೆ ಕೆಲವರು ಮಾತ್ರ ಮೇಲಕ್ಕೆದ್ದಾಗ ಚುನಾವಣಾ ಫಲಿತಾಂಶ ಏರುಪೇರಾಗುತ್ತದೆ. ಭಾರತ ಮಾತ್ರ ಇದಕ್ಕೆ ಹೊರತಲ್ಲ. ವೆನಿಜುಲಾ, ಬ್ರೆಝಿಲ್, ಇಂಡೋನೇಶ್ಯಾ ಮತ್ತಿತರ ಹಲವು ದೇಶಗಳ ಪರಿಸ್ಥಿತಿ ಕೂಡ ಇದೇನೇ, ನವ ಉದಾರವಾದಿ ವಿಶ್ವ ವ್ಯಾಪಾರ ಸಂಘಟನೆ ಪ್ರೇರಿತ ಜಾಗತೀಕರಣ ಕೆಲವೊಂದು ಸಣ್ಣ ಪುಟ್ಟ ಮಹತ್ವಾಕಾಂಕ್ಷೆ ಹೊರತುಪಡಿಸಿದರೆ ಜನಸಾಮಾನ್ಯರಿಗೆ ಅನಾಹುತವೇ, ವಸಾಹತುಶಾಹಿ ಆಳ್ವಿಕೆಯ ಕೊನೆ ಘಟ್ಟದಂತೆ ಇದು ಪರಿಣಮಿಸಿದೆ.

೨೦೦೪ ಚುನಾವಣಾ ತೀರ್ಪನ್ನು ಸಮಗ್ರವಾಗಿ ನೋಡಿದರೆ ಸ್ವಲ್ಪ ವಿಶೇಷವೆನಿಸುತ್ತದೆ. ಭಾವನಾತ್ಮಕ ವಿಷಯಗಳು ಬದಿಗೆ ಸರಿದಿವೆ. ಜನಸಾಮಾನ್ಯರ ದೈನಂದಿನ ಸಮಸ್ಯೆಗಳು ಎದ್ದು ಕಾಣುತ್ತಿವೆ. ವಿಭಿನ್ನ ಸನ್ನಿವೇಶದಲ್ಲಿ ಇವೆಲ್ಲ ನಮ್ಮ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಪ್ರಾದೇಶಿಕ ವೈರುಧ್ಯತೆಗಳ ಪ್ರತಿಫಲನ ಮತ್ತು ಅಭಿವ್ಯಕ್ತಿಯೆನಿಸಿದೆ. ಆದುದರಿಂದ ಮತದಾನವು ಬಹುಮುಖ್ಯವಾಗಿ ಬಹುತ್ವದ ಪರಂಪರೆಗಾಗಿ ಮತ್ತು ಭಾರತ ಸಮಾಜದ ಧರ್ಮನಿರಪೇಕ್ಷತೆಯ ಉಳಿವಿಗಾಗಿ, ತಲಾತಲಾಂತರದ ಬಹುರೂಪತೆ ಮತ್ತು ಜೀವನ ಅನುಭವದಿಂದ ಭಾರತದ ಜನರು ಧರ್ಮನಿರಪೇಕ್ಷತೆ ಏನನ್ನು ಅರ್ಥೈಸುತ್ತಿದೆ ಎಂಬುದರ ತಿಳುವಳಿಕೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ. ರಾಜಕಾರಣ ಮತ್ತು ಧರ್ಮವನ್ನು ಪ್ರತ್ಯೇಕಿಸುವುದೆಂದರೆ ತಾತ್ವಿಕಬದ್ಧತೆಯಿಂದ ರಾಜಕಾರಣವನ್ನು ಸ್ವಾಯತ್ತಗೊಳಿಸುವುದೆಂದಾಗಿದೆ. ಪ್ರಜಾಸತ್ತಾತ್ಮಕ ಸ್ಪರ್ಧೆಯ ಭಾರತದ ರಾಜಕಾರಣವು ಈ ರೀತಿಯ ಪ್ರತ್ಯೇಕತೆ ಏನನ್ನು ಅರ್ಥೈಸುತ್ತದೆ ಎನ್ನುವುದರ ಕುರಿತು ಕಾರ‍್ಯನಿರತವಾಗಿದೆ. ಚುನಾವಣಾ ಸಂದರ್ಭದಲ್ಲಿ ಮತೀಯ ವಿಷಮತೆ ಬದಲು ದೈನಂದಿನ ಜೀವನದತ್ತ ಒತ್ತು ಕೊಡುವುದೇ ಈ ಪ್ರಕ್ರಿಯೆಯ ಪ್ರಧಾನ ಉದಾಹರಣೆಯಾಗಿದೆ. ೨೦೦೪ರ ಚುನಾವಣೆ ಕೂಡ ಕೋಮುವಾದ ವಿರುದ್ಧ ಧರ್ಮನಿರಪೇಕ್ಷತೆಯ ಹೋರಾಟದ ಪ್ರಶ್ನೆಯಾಗಿದ್ದು ತೀರ್ಪು ಸ್ಪಷ್ಟವಾಗಿ ಧರ್ಮನಿರಪೇಕ್ಷತೆಯ ಪರವಾಗಿದೆ.