ಮುಸ್ಲಿಂ ಸಮುದಾಯವು ಪ್ರಜಾಪ್ರಭುತ್ವಕ್ಕೆ ತೋರಿಸುವ ಪ್ರತಿಕ್ರಿಯೆ ಬಹಳ ಆಶ್ಚರ್ಯಕರವೆನಿಸಿದೆ. ಪ್ರಜಾಸತ್ತೆಯ ಪ್ರತಿ ಆಯಾಮದಲ್ಲೂ ಮುಸ್ಲಿಮರ ಪ್ರತಿಕ್ರಿಯೆಯು ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ ಸಕಾರಾತ್ಮಕವಾಗಿ ಹೆಚ್ಚಿದೆಯೆಂಬುದನ್ನು ಗಮನಿಸಬಹುದು. ಮುಸ್ಲಿಮರ ಈ ನಂಬಿಕೆಯು ಅವರ ಸರಾಸರಿ ಮಟ್ಟದಲ್ಲಿನ ಏರಿಕೆಗೆ ಕಾರಣವಾಗುತ್ತಿದೆ. ಪ್ರಜಾಪ್ರಭುತ್ವದೆಡೆಗೆ ಸಮತೋಲನ ಭಾವದಿಂದಿರುವುರಿಂದ ಮುಸ್ಲಿಂ ಸಮುದಾಯವನ್ನು ಜೋಕರ್ ಗಳೆಂದು ಗುರುತಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಕೇವಲ ಅಂಕಿಅಂಶಗಳ ವಿಸ್ಮಯವೆಂದು ಸುಲಭವಾಗಿ ತಳ್ಳಿಹಾಕಲಾಗದು. ನಮ್ಮ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಬದ್ಧತೆ ಮತ್ತು ಮೌಲ್ಯಗಳ ಕೊರತೆಯಿಂದ ಮುಸ್ಲಿಮರನ್ನು ಪರಾಧೀನ ಜನಗಳೆಂದು ಭಾವಿಸಿಕೊಂಡಿರುವ ಬಹಳ ಮಂದಿಗೆ ಇದನ್ನು ವಿವರಿಸುವುದರತ್ತ ಒತ್ತು ನೀಡಬೇಕಿದೆ. ಮುಸ್ಲಿಂ ಸಮುದಾಯದೊಳಗಿನ ಆಂತರಿಕ ಬದಲಾವಣೆಗಳ ಗತಿಶೀಲತೆಯನ್ನು ನೋಡಿದಲ್ಲಿ ಈ ಸಂಗತಿಯ ವಿವರಣೆಗೆ ಒಂದು ತಿರುವು ದೊರೆಯಬಹುದು. ಭಾರತದ ರಾಜಕಾರಣದ ಈ ಸಂಗತಿಯನ್ನು ಪ್ರಸ್ತುತ ಅಧ್ಯಾಯದಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.

೧೯೮೯ ಮತ್ತು ೧೯೯೧ರ ಸಂಸತ್ ಚುನಾವಣೆಗಳ ಮಧ್ಯೆ ಭಾರತದ ರಾಜಕಾರಣದಲ್ಲಿ ಮುಸ್ಲಿಂ ತಿಳುವಳಿಕೆ ಚುನಾವಣೆಗಳ ಮಧ್ಯೆ ಭಾರತದ ರಾಜಕಾರಣದಲ್ಲಿ ಮುಸ್ಲಿಂ ತಿಳುವಳಿಕೆ ಮತ್ತು ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಬದಲಾವಣೆ ಜರುಗಿತು. ಇದೊಂದು ದೀರ್ಘಕಾಲದ ಆಶೋತ್ತರದ ಈಡೇರಿಕೆ ಅಥವಾ ಯಾವುದೇ ರಚನಾತ್ಮಕ ಬದಲಾವಣೆಯೇನಲ್ಲ. ಬಾಬರಿ ಮಸೀದಿಯನ್ನು ರಕ್ಷಿಸಲು ಪ್ರಧಾನಿ ಪಟ್ಟವನ್ನು ತೊರೆದ ವಿ.ಪಿ. ಸಿಂಗ್ ಅವರ ಅನುಕರಣೀಯ ಕ್ರಮವು ಮುಸ್ಲಿಮರಿಂದ ಪ್ರಶಂಸೆಗೊಳಗಾಯಿತೆಂಬುದೇ ಈ ಬದಲಾವಣೆಯ ಸಂಗತಿಯಾಗಿದೆ. ಹಠಾತ್ ನಡೆದ ಈ ಬದಲಾವಣೆಯು ನಾಟಕೀಯ ಪರಿಣಾಮವನ್ನು ಬೀರಿತು. ಸಮುದಾಯಗಳ ಮಧ್ಯದ ಚುನಾವಣಾ ರಾಜಕಾರಣದ ಆಟದಲ್ಲಿ ೧೯೭೭ರ ಜನತಾಪಕ್ಷ ಸೇರಿದಂತೆ ಪ್ರತಿಯೊಬ್ಬರೂ ಅಧಿಕಾರದ ಹವಣಿಕೆಗಾಗಿ ಮುಸ್ಲಿಮರನ್ನು ಕೇವಲ ಸಾಧನವನ್ನಾಗಿ ಬಳಸಿಕೊಂಡರು. ಅಧಿಕಾರ ರಾಜಕಾರಣದ ಈ ಆಟದಲ್ಲಿ ಮುಸ್ಲಿಮರ ಘನತೆ ಮತ್ತು ಗೌರವಕ್ಕೋಸ್ಕರ ವಿ.ಪಿ. ಸಿಂಗ್ ಒಬ್ಬರೇ ಅಧಿಕಾರವನ್ನು ತ್ಯಜಿಸಿದರು. ಮುಂಬರುವ ದಿನಗಳಿಗೆ ಈ ಬದಲಾವಣೆಯ ಸಿದ್ಧತೆಯಲ್ಲಿ ಹೆಚ್ಚು ನೆರವಾಗತಕ್ಕ ಅಂಶಗಳಿವೆ ಎಂಬ ವಾದವಿತ್ತಾದರೂ ಇದಕ್ಕೆ ಪೂರಕವೆನಿಸುವ ಆಧಾರಗಳಿಲ್ಲ. ಹಾಗಿದ್ದಲ್ಲಿ ವಿ.ಪಿ. ಸಿಂಗ್ ಅವರ ಈ ದಿಟ್ಟತನದ ಕ್ರಮವು ಇನ್ನಷ್ಟು ಬದಲಾವಣೆಗಳನ್ನು ಉಂಟುಮಾಡಬೇಕಿತ್ತು. ಹಾಗಾಗಿ ಇದು ಆತುರದ ಕ್ರಮವೆನಿಸದೆ.

ಇಂಥ ಅಭಿಮತದ ಮೌಲಿಕತೆ ಮಧ್ಯೆಯೂ ಈ ಘಟನೆ ಜನರ ಮನೋಧರ್ಮದಲ್ಲಿ ಬದಲಾವಣೆ ತಂದಿತು. ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದ ರಕ್ಷಣೆ (ಸುರಕ್ಷತೆ) ಪ್ರಶ್ನೆ ಬದಿಗೊತ್ತಲ್ಪಟ್ಟು ಗೌರವದ ಬಗೆಗಿನ ಕಾಳಜಿ ಸಾಪೇಕ್ಷವಾಗಿ ಮೇಲುಗೈ ಪಡೆಯುವಂತಾಯಿತು. ೧೯೮೯ ರಿಂದೀಚೆಗೆ ನಡೆದ ಗಲಭೆಯ ತೀವ್ರತೆಯು ವಿರುದ್ಧವಾದ ಪರಿಣಾಮವನ್ನೇ ಬೀರಿತು. ಒಂದೆಡೆ ತೀವ್ರವಾದ ಹಿಂದೂ ಬಲಪಂಥೀಯರಿಗೆ ಏಕಾಂಗಿಯಾಗಿ ಗುರಿಯಾಗುವಂತಹ ಬೇಸರದ ಭಾವನೆ ಉಂಟಾಯಿತು ಮತ್ತು ಯಾಕೆ ಕ್ರಿಶ್ಚಿಯನ್ನರು ಕೂಡ ದಾಳಿಗೆ ತುತ್ತಾಗುತ್ತಿದ್ದಾರೆ ಎಂಬುದು ವಿಸ್ಮಯವೆನಿಸಿದೆ. ಯಾಕೆಂದರೆ ಹಿಂದುಗಳ ಮಧ್ಯೆ ಅವರಿಗೆ ವಿರಸವೇರ್ಪಟ್ಟಿರಲಿಲ್ಲ. ಇನ್ನೊಂದೆಡೆ ಜೀವ ಮತ್ತು ಸ್ವತ್ತುಗಳ ಬಗ್ಗೆ ಭಯವಿದ್ದರೂ ಸಾರ್ವಜನಿಕ ಜೀವನದಲ್ಲಿ ಇದೊಂದೇ ನಿರ್ಧಾರಕ ಘಟನೆಯೆಂಬುದಾಗಿ ಮುಸ್ಲಿಮರು ಭಾವಿಸಿದ ಹಾಗೆ ಕಂಡುಬರುವುದಿಲ್ಲ. ಆದರೂ ಉಗ್ರ ಹಿಂದೂ ಬಲಪಂಥೀಯರಿಂದ ಮುಸ್ಲಿಮರು ಬಹಳ ಹಿಂದಿನಿದಲ್ಲೇ ವ್ಯವಸ್ಥಿತವಾಗಿ ಹಿಂಸೆಗೆ ಈಡಾಗುತ್ತಿದ್ದಾರೆಂಬುದನ್ನು ನೆನಪಿಡಬೇಕು. ಜೀವ ಮತ್ತು ಸ್ವತ್ತಿನ ರಕ್ಷಣೆ ಇದಕ್ಕಿಂತ ಹೆಚ್ಚಿನದೆಂದು ನಾನು ಹೇಳುತ್ತಿಲ್ಲ. ಅವು ಎಲ್ಲ ಮಾನವರಿಗೂ ಅವಶ್ಯವೇ. ೧೯೯೨-೯೩ರ ಬಾಬರಿ ಮಸೀದಿ ಧ್ವಂಸ ನಂತರದ ಮುಂಬೈ ಘಟನೆಯ ಬಗೆಗೆ ಯಾವನೇ ವ್ಯಕ್ತಿ ಕೂಡ ಆಘಾತಕ್ಕೊಳಗಾಗದಿರನು.

ಮುಸ್ಲಿಮರ ರಾಜಕೀಯ ಅಸ್ತಿತ್ವದ ಮನೋಭಾವದಲ್ಲಿನ ಬದಲಾವಣೆಯಿಂದ ವಿ.ಪಿ. ಸಿಂಗರ ರಾಜಕೀಯ ಕೊಡುಗೆಯನ್ನು ಪ್ರಶಂಸಿಸುವವರು ಇಲ್ಲವೇ ಬೇರೊಂದು ಪಕ್ಷಕ್ಕೆ ಚುನಾವಣೆಯಲ್ಲಿ ಅವರು ಸಾಮೂಹಿಕವಾಗಿ ಬೆಂಬಲ ನೀಡುವರು ಎಂದೆನ್ನಲಾಗದು. ಇತರ ಧಾರ್ಮಿಕ ಜನಸಮುದಾಯಗಳ್ನು ಮುಸ್ಲಿಮರು ಮುಸ್ಲಿಮರಂತೆ ಮತ ಚಲಾಯಿಸುವರು ಇಲ್ಲವೆ ಸಮುದಾಯಗಳನ್ನು ಪರಿಗಣಿಸದೆ ಜಾತ್ಯತೀತವಾಗಿ ಮತ ಹಾಕುವರು. ಮುಸ್ಲಿಮರಾಗಿ ಮತ ಚಲಾಯಿಸುವಾಗ ಸಂಕೀರ್ಣಮಯ ಹಸ್ತಕ್ಷೇಪದ ಸನ್ನಿವೇಶಗಳು ಅವರ ಆಯ್ಕೆಯನ್ನು ರೂಪಿಸುತ್ತವೆ. ಭಾರತದಲ್ಲಿ ಮುಸ್ಲಿಂ ಕೋಮುಪ್ರಜ್ಞೆಯ ಸ್ವರೂಪ ಏನೇ ಇರಲಿ ಆಂಧ್ರದ ತೆಲಂಗಾಣ ಭಾಗದ ಹೈದ್ರಾಬಾದ್, ಉತ್ತರ ಕೇರಳ ಮತ್ತು ತಮಿಳುನಾಡಿನ ಹಲವು ಭಾಗಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮಾತ್ರ ಕೋಮು ಸಂಘಟನೆಗಳು ಸಮುದಾಯದ ಪ್ರಮುಖ ಚುನಾವಣಾ ಮತ್ತು ರಾಜಕೀಯ ಧ್ವನಿಯಾಗಿ ಸ್ಥಾಪಿತವಾಗಿದೆ. ಇಂಥ ಪ್ರತಿ ಕೋಮು ಸಂಘಟನೆಗೆ ವಿಶಿಷ್ಟವಾದ ಇತಿಹಾಸ, ಸಂದರ್ಭ ಮತ್ತು ಅಭಿವೃದ್ಧಿಯ ಮಾದರಿಗಳಿವೆ. ಮುಸ್ಲಿಂ ಕೋಮುವಾದ ಎಂದು ಇವನ್ನು ಸಾಮಾನ್ಯೀಕರಿಸುವ ಮೊದಲು ಇಂತವುಗಳನ್ನು ವಿವರವಾದ ಅಧ್ಯಯನಕ್ಕೆ ಒಳಪಡಿಸಬೇಕಿದೆ. ಆದರೆ ಇವು ನಮ್ಮ ಅಧ್ಯಯನ ವ್ಯಾಪ್ತಿಗೆ ಒಳಪಡುವುದಿಲ್ಲವಾದರೂ ಚುನಾವಣಾಯಲ್ಲಿ ಮುಸ್ಲಿಮರ ಪ್ರಸ್ತುತತೆಯ ಸ್ವರೂಪ ಕುರಿತು ನೇರ ಬೆಳಕು ನೀಡುವ ಮಾದರಿಗಳತ್ತ ನೋಡೋಣ.

ಒಂದು ಕೋಮುವಾದವು ಇನ್ನೊಂದನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯವಾಗಿ ಹೇಳಿಕೆ ರೂಪದಲ್ಲಿ ನಿಜವೆನಿಸುತ್ತದೆ. ಆದರೆ ಭಾರತದ ಸಂಘಟಿತ ಮುಸ್ಲಿಂ ಕೋಮು ರಾಜಕಾರಣ ಸ್ಥಳಗಳಲ್ಲಿ ಯಾವುದೇ ಹಿಂದೂ ಕೋಮುರಾಜಕೀಯ ಪಕ್ಷವು ನಿರ್ಣಾಯಕವಾದ ರಾಜಕೀಯ ನೆಲೆಯನ್ನು ರೂಪಿಸಲು ಶಕ್ತವಾಗಿದೆಯೇ ಅನ್ನುವುದು ಭಾರತದಲ್ಲಿನ ಸಂಘಟಿತ ಕೋಮುವಾದ ರಾಜಕಾರಣದ ವಿಲಕ್ಷಣವೆನಿಸಿದೆ. ಅದೇ ರೀತಿ ಮಧ್ಯಪ್ರದೇಶ, ರಾಜಸ್ತಾನ್, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಹಿಂದೂ ಉಗ್ರ ರಾಜಕೀಯ ಪಕ್ಷವಾಗಿ ತನ್ನ ಹಿಂದೂ ಸಂಘಟಿತ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಹಾಗೆಯೇ ಈ ರಾಜ್ಯಗಳಲ್ಲೂ ಸಾಕಷ್ಟು ಮುಸ್ಲಿಂ ಜನಸಂಖ್ಯೆ ಇರುವಲ್ಲಿ ಕೂಡ ಯಾವುದೇ ಮುಸ್ಲಿಂ ಕೋಮು ಸಂಘಟನೆಯು ರಾಜಕೀಯ ಖಾತೆ ತೆರೆಯಲು ಶಕ್ತವಾಗಿಲ್ಲ.

ಹಾಗಾಗಿ ಒಂದು ಮಾದರಿ ಎಂಬಂತೆ ಮುಸ್ಲಿಂ ಮತ್ತು ಹಿಂದೂ ಕೋಮು ರಾಜಕೀಯ ಪ್ರಾದೇಶಿಕವಾಗಿ ಒಟ್ಟಿಗೆ ಅಸ್ತಿತ್ವ ಪಡೆಯುವುದಿಲ್ಲ. ಸಂಘಟಿತ ಮುಸ್ಲಿಂ ಕೋಮು ರಾಜಕಾರಣ ಇರುವ ಪ್ರದೇಶಗಳಲ್ಲಿ ಹಿಂದೂ ಕೋಮು ಸಂಘಟನೆಗಳು ರಾಜಕೀಯ ಪ್ರವೇಶವನ್ನು ಪಡೆಯುವ ಸಾಧ್ಯತೆಗಳಿವೆ. ಹೈದ್ರಾಬಾದ್ ಮತ್ತು ಉತ್ತರ ಕೇರಳದಲ್ಲಿ ಬಿಜೆಪಿ ಮತ್ತಿತರ ಮೈತ್ರಿ ಸಂಘಟನೆಗಳು ರಾಜಕೀಯ ಬಲವಾಗಿ ರೂಪು ಪಡೆಯಬಹುದು. ಆದರೆ ಇಡೀ ಉತ್ತರ ಭಾರತದಲ್ಲಿ ಎಲ್ಲಿ ಹಿಂದೂ ಕೋಮುವಾದ ಬಲವಾಗಿದೆಯೋ ತೆಲಂಗಾಣದ ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ಭಾಗಶಃ ತಮಿಳುನಾಡು ಹಾಗೂ ಕೇರಳದಲ್ಲಿರುವ ಮುಸ್ಲಿಂ ಲೀಗಿನ ರೀತಿಯಲ್ಲಿ ಮುಸ್ಲಿಮರನ್ನು ಪ್ರತಿನಿಧಿಸಲು ಯಾವುದೇ ಮುಸ್ಲಿಂ ಕೋಮು ಸಂಘಟನೆಗಳಿಗೆ ಸಾಧ್ಯವಾಗಿಲ್ಲ. ಇದು ಅಖಿಲ ಭಾರತದ ಮಟ್ಟದಲ್ಲಿ ಮುಸ್ಲಿಂ ಕೋಮುವಾದವನ್ನು ತಡೆಗಟ್ಟಲು ಸಹಾಯವಾಗುವುದಾದರೆ, ಪ್ರಾದೇಶಿಕವಾಗಿ ಮುಸ್ಲಿಂ ಕೋಮು ಸಂಘಟನೆಗಳು ಈಗಾಗಲೇ ಸ್ಥಾಪಿಸಲ್ಪಟ್ಟಿರುವ ಸ್ಥಳಗಳಲ್ಲಿ ಬಿಜೆಪಿ ಹೊಸದಾಗಿ ಪ್ರಾಬಲ್ಯ ಪಡೆಯುತ್ತಿದೆ. ಇದು ಮುಸ್ಲಿಮರು ತಮ್ಮ ಸ್ಥಾಪಿತವಾದ ಕೋಮು ಸಂಘಟನೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಅಪಾಯವಿದೆ.

ಕಾಂಗ್ರೆಸ್, ಜನತಾದಳ ಅಥವಾ ಇನ್ನಾವುದೇ ಬಲಪಂಥೀಯ ಪಕ್ಷಕ್ಕೆ ಮತ ಹಾಕಿದರೂ ಅದು ಅಗತ್ಯವಾಗಿ ಜಾತ್ಯಾತೀತ ಮತ ಎಂಬುದಾಗಿ ಸಾಮಾನ್ಯೀಕರಿಸುವುದರ ಬಗೆಗೂ ಅನುಮಾನಗಳಿವೆ. ಅಲ್ಪಕಾಲಿಕವಾಗಿ ಅದು ಜಾತ್ಯತೀತ ರಾಜಕಾರಣವೆಂದೆನಿಸಿದರೂ ಚುನಾವಣಾ ರಾಜಕಾರಣದಲ್ಲಿ ಇದು ಮುಸ್ಲಿಮರ ಆಯ್ಕೆ ಅಥವಾ ಪ್ರೇರಣೆಯೇನಲ್ಲ. ಒಂದು ಜಾತ್ಯತೀತ ಪಕ್ಷಕ್ಕೆ ಮತ ನೀಡುವುದು ಕೆಲವೊಮ್ಮೆ ಹೆಚ್ಚಾಗಿ ಸಮುದಾಯದಿಂದ ಸೂಚಿಸಲ್ಪಡುತ್ತದೆ. ಉದಾಹರಣೆಗೆ ಹೈದ್ರಾಬಾದ್ ನಲ್ಲಿ ಮಜ್ಲೀಸ್. ಇಂಥ ಮತದಾನ ಪ್ರವೃತ್ತಿಯು ಮುಸ್ಲಿಮರ ದೀರ್ಘಕಾಲಿಕ ಜಾತ್ಯತೀತ ನಿಲುವಿನ ಅಗತ್ಯದ ಸೂಚನೆಯೇನಲ್ಲ. ಇಂಥ ಮತದಾನ ಪ್ರೇರಣೆ ಮತ್ತು ಸೂಚನೆ ಸಂಕೀರ್ಣವಾಗಿದ್ದು ಇವುಗಳ ಫಲಿತಗಳಿಂದ ಜಾತ್ಯತೀತ ರಾಜಕೀಯ ಶಕ್ತಿ ಬಲಗೊಳ್ಳಬಹುದು. ಹಿಂದೂ ಉಗ್ರ ಕೋಮುವಾದವನ್ನು ಜಾತ್ಯತೀತ ರಾಜಕಾರಣವನ್ನು ಅಳವಡಿಸುವಲ್ಲಿ ಯಶಸ್ವಿಯಾದರೆ ಅದು ಮುಸ್ಲಿಮರಲ್ಲಿ ಜಾತ್ಯಾತೀತ ತಿರುವನ್ನು ಸ್ಥಿರಗೊಳಿಸಲು ದಾರಿ ಮಾಡಬಹುದು.

ಈ ಮಾದರಿಯನ್ನು ಪ್ರಸ್ತುತ ಭಾರತದ ಮತದಾನದ ಆಯ್ಕೆಯಲ್ಲಿನ ಏರುಪೇರುಗಳ ಸಂದರ್ಭದಲ್ಲಿ ನೋಡಬೇಕು. ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಕಾರ್ಯ ರೂಪದಲ್ಲಿರುವಂಥ ವಿಧೇಯತೆಯು ಭಾರತದಲ್ಲಿ ಆರಂಭದಿಂದಲೂ ಕ್ಷೀಣವಾಗಿದ್ದು ಇತ್ತೀಚೆಗಂತೂ ಇದು ಇನ್ನಷ್ಟು ಕ್ಷೀಣಿಸತೊಡಗಿದೆ. ಉದಾಹರಣೆಗೆ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ ಅವನತಿಯು ಬಿಹಾರದಲ್ಲಿ ಆರ್‌ಜೆಡಿಗೆ ದಾರಿ ಮಾಡಿದರೆ ಉತ್ತರ ಪ್ರದೇಶದಲ್ಲಿ ಅದು ಜನತಾದಳ, ಎಸ್‌ಪಿ ಮತ್ತು ಬಿಜೆಪಿಗೆ ದಾರಿ ಮಾಡಿತು.

ಹಿಂದೂ ಕೋಮುವಾದ ತಳವೂರಿರುವ ಪ್ರದೇಶಗಳಲ್ಲಿ ಮುಸ್ಲಿಂ ಕೋಮುವಾದ ರಾಜಕೀಯ ಪಕ್ಷದ ಬೆಳವಣಿಗೆಯ ಹಿನ್ನಡೆಯನ್ನು ಒಂದು ಸಾರ್ವತ್ರಿಕ ಮಾದರಿಗೆ ಸಮೀಕರಿಸುವ ಮೂಲಕ ನೋಡಬೇಕು. ದೇಶ ವಿಭಜನೆಯ ಆಘಾತದ ಪ್ರತಿಪಾದನೆ, ಮುಸ್ಲಿಂ ಲೀಗಿನ ಪ್ರತ್ಯೇಕತಾ ರಾಜಕಾರಣದ ಜೊತೆ ಉತ್ತರ ಭಾರತದ ಮುಸ್ಲಿಮರ ಅತಿಯಾದ ಗುರುತಿಸುವಿಕೆ ಮತ್ತು ಗಲಭೆಗಳ ಚರಿತ್ರೆ ಮತ್ತು ಸಾಮಾಜಿಕ ನೆಲೆಗಳನ್ನು ಪರಿಶೀಲಿಸಿದರೆ ಇವೆಲ್ಲಕ್ಕೂ ಬಿಡಿಸಿಕೊಳ್ಳಲಾಗದ ಕಾರಣಗಳಿವೆ. ವಿವಿಧ ಕೋಮುವಾದ ಸಂಘಟನೆಗಳ ಪ್ರಾದೇಶಿಕ ಹರವಿನಿಂದಾಗಿ ಸಮುದಾಯದ ಹಿನ್ನೆಲೆಯಲ್ಲಿ ಯಾರಿಗೆ ಮತ ಹಾಕಬೇಕೆನ್ನುವುದೇ ಒಂದು ಪ್ರಮುಖ ಅಂಶವಾಗಿದ್ದು ಮುಸ್ಲಿಮರ ಆಯ್ಕೆ ಕೂಡ ಇದನ್ನೇ ಅವಲಂಬಿಸಿರುವುದು ಒಂದು ವಿಚಿತ್ರ ಮಾದರಿಯೆನಿಸಿದೆ.

ಈ ಹಂತದಲ್ಲಿ ವಿ.ಪಿ. ಸಿಂಗ್ ತಮ್ಮ ದಿಟ್ಟ ನಿಲುವಿನ ಮೂಲಕ ತೆರೆಗೆ ಪ್ರವೇಶಿಸುತ್ತಾರೆ. ಇಲ್ಲಿ ಮುಸ್ಲಿಂ ಕೋಮುವಾದಕ್ಕೆ ಒಲವನ್ನು ತೋರಿಸುವ ದುರುದ್ದೇಶ ಇರಲಿಲ್ಲ. ಇದು ಉತ್ತಮ ಉದ್ದೇಶಗಳ ಮಧ್ಯೆಯೂ ಮುಸ್ಲಿಮರಿಗೆ ಕಾಂಗ್ರೆಸ್ ಮಾಡಿದ್ದಕ್ಕಿಂತಲೂ ಕಡಿಮೆ ಭದ್ರತೆಯನ್ನು ಒದಗಿಸಲು ಸಾಧ್ಯವಾಯಿತು. ಮುಸ್ಲಿಂ ಸಮುದಾಯವು ತನ್ನ ಘನತೆಯನ್ನು ಗೌರವಿಸುವಂತೆ ಅವರು ಸರಳವಾಗಿ ತಮ್ಮನ್ನು ಗುರುತಿಸಿಕೊಂಡರು. ಈ ದೇಶದವರೆಂದು, ತಾವು ಪರಾಧೀನರಲ್ಲ ಎಂಬುದಾಗಿ ಮುಸ್ಲಿಮರನ್ನು ಘನತೆಯಿಂದ ಎಚ್ಚೆತ್ತುಕೊಳ್ಳುವಂತೆ ಅವರು ಮಾಡಿದರು. ಮಂಡಲ್ ಆಯೋಗದ ಶಿಫಾರಸ್ಸಿನ ಅನುಷ್ಠಾನ ಮತ್ತು ಅಡ್ವಾಣಿಯ ರಥಯಾತ್ರೆಯಿಂದ ಸಂಭವಿಸಿದ ಕೋಮು ಗಲಭೆ ಮತ್ತು ರಕ್ತಪಾತ ಹಿನ್ನೆಲೆಯ ಜೊತೆ ಈ ಗುರುತಿಸುವಿಕೆ ಉಂಟಾಯಿತು. ಹೀಗೆ ಜಾತಿ ಮತ್ತು ಕೋಮುವಾದ ರಾಜಕಾರಣದ ಗುರುತಿಸುವಿಕೆ ಹಾಗೂ ಸುರಕ್ಷತೆಯೆಂಬ ಪ್ರಮುಖ ರಾಜಕೀಯ ನಿಲುವಿನ ಅತಿಯಾದ ಕಾಳಜಿಯು ಬದಿಗೊತ್ತಲ್ಪಟ್ಟು ಮುಸ್ಲಿಂ ಸಮುದಾಯದೊಳಗೆ ಸಮಾನತೆ ಮತ್ತು ಘನತೆಯೆಡೆಗಿನ ಪಲ್ಲಟ ಉಂಟಾಯಿತು.

ಹಿಂದಿನ ಅಧ್ಯಾಯಗಳಲ್ಲಿ ಹೇಗೆ ದೊಡ್ಡ ಜಾತಿಗಳು ಸಮುದಾಯಗಳಾಗಿ ಮಾರ್ಪಾಡಾಗುವುದು ಮತ್ತು ದಲಿತ, ಒಬಿಸಿಗಳು ಬೂರ್ಶ್ವಾ ಸಮಾನತೆ ಮತ್ತು ಗುರುತಿಗಾಗಿ ಹೋರಾಡುವುದನ್ನು ಪರೀಕ್ಷಿಸಿದೆವು. ಮುಸ್ಲಿಮರು ತಮ್ಮೊಳಗೆ ಈ ರಾಜಕಾರಣದಲ್ಲಿ ಅತಿಯಾದ ಸಂವೇದನೆಯೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತ ಈ ಸಮುದಾಯಗಳೊಳಗೆ ಒಂದು ಗುಪ್ತವಾದ ಒಪ್ಪಂದವೇರ್ಪಡಿಸಿಕೊಳ್ಳುತ್ತಾರೆ. ಒಬಿಸಿ ನಾಯಕರಾದ ಮುಲಾಯಂ ಮತ್ತು ಲಾಲೂರಿಂದ ಈ ಒಪ್ಪಂದ ಗಟ್ಟಿಯಾಗಿದೆ. ಸ್ವಾತಂತ್ರ‍್ಯದಿಂದೀಚೆಗೆ ಮುಸ್ಲಿಮರ ಸಂಕೀರ್ಣ ಸ್ಥಿತಿಯಿಂದ ರಾಜಕಾರಣದಲ್ಲಿ ಅವರು ಪರಿಣಾಮಕಾರಿಯಾಗಿರಲು ಇತರ ಹೊರಗಿನ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳಬೇಕಾದ ಅಗತ್ಯವಿತ್ತು. ಹೀಗಾಗಿ ಬಹಳ ವರ್ಷಗಳವರೆಗೆ ಕಾಂಗ್ರೆಸ್‌ನ ಜೊತೆಗಿದ್ದರು. ಇಲ್ಲೊಂದು ಅವಲಂಬನೆಯ ಅಂಶವನ್ನು ಕಾಣಬಹುದು. ಒಂದು ಸಮುದಾಯ ಕೇಂದ್ರಿತ ನಿರ್ಣಾಯಕವಾದ ವಿಭಿನ್ನತೆಯ ಮಹತ್ವವುಳ್ಳ ರಾಜಕಾರಣದೊಂದಿಗೆ ಸೇರುವುದನ್ನು ಮುಸ್ಲಿಮರು ಮುಂದುವರಿಸುತ್ತಾರೆ.

ತಮಗೆ ಹತ್ತಿರವೆನಿಸುವ ಸಮುದಾಯಗಳ ರಾಜಕಾರಣದ ಜೊತೆ ಮುಸ್ಲಿಮರೀಗ ಗುರುತಿಸಿಕೊಳ್ಳುತ್ತಾರೆ. ಇದು ಕಾಂಗ್ರೆಸ್ ರಾಜಕಾರಣಕ್ಕಿಂತ ವಿಭಿನ್ನವೆನಿಸಿದೆ. ಕಾಂಗ್ರೆಸ್ ರಾಜಕಾರಣವು ಈ ರೀತಿಯಿರದೆ ಮೇಲ್ಮಟ್ಟದ್ದಾಗಿತ್ತು. ಅವರೊಂದಿಗೆ ಇವರು ಮಾತನಾಡಲಾಗುತ್ತಿರಲಿಲ್ಲ. ಅದು ಎಲೀಟುಗಳಿಂದ ಕೂಡಿದ್ದು ಇವರನ್ನು ಕೆಳಗಿನವರಂತೆ ಕಾಣುತ್ತಿತ್ತು. ಒಬ್ಬ ರೈತ ಅಥವಾ ಕಸಬುದಾರ ಇಲ್ಲವೇ ಕೆಲಸಗಾರನಾಗಿ ಮುಸಲ್ಮಾನನು ಒಬ್ಬ ಶೂದ್ರ ಇಲ್ಲವೇ ದಲಿತನಿಗೆ ಸಮಾನವಾದ ಸಾಮಾಜಿಕ ಸ್ಥಾನವನ್ನು ಕಾಣುವಂತಾಗಿತ್ತು. ಈ ಜನಗಳೇ ಇವರ ಜೊತೆಗಿರುತ್ತ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಮೇಲಿನವರಿಂದ ತುಳಿತಕ್ಕೊಳಗಾಗಿದ್ದಾರೆ. ಯಾವಾಗ ಮುಸ್ಲಿಮರು ರಾಜಕೀಯವಾಗಿ ಸಂಘಟಿತ ಸಮುದಾಯಗಳ ಜೊತೆಗಿರುತ್ತಾರೋ ಕಾಂಗ್ರೆಸ್ ನಲ್ಲಿರುವಾಗಿನ ಅಲಂಬಿಗಳಾಗದೆ ತಮ್ಮನ್ನು ಸಮಾನವಾಗಿ ಪರಿಗಣಿಸಿಕೊಳ್ಳುತ್ತಾರೆ. ಬೂರ್ಶ್ವಾ ಸಮಾನತೆ, ಮಾನವ ಘನತೆ ಮತ್ತು ವ್ಯಕ್ತಿ ಗೌರವದಂಥ ಮಹತ್ವದ ಹೋರಾಟದ ಭಾಗವಾಗಿ ಮುಸ್ಲಿಮರಿದ್ದಾರೆ. ಪ್ರಜಾಸತ್ತಾತ್ಮಕ ಅಂದೋಲನವು ಅತ್ಯಂತ ಪ್ರಮುಖ ಜನಾದೇಶದ ಆಯ್ಕೆ ಎಂದೆನಿಸಿದರೂ ಸಮಸ್ತ ಮುಸ್ಲಿಂ ಸಮುದಾಯ ಇದೊಂದೇ ರಾಜಕೀಯ ಚಟುವಟಿಕೆಯ ಏಕಮಾತ್ರ ವಿಧಾನವೆಂದು ಸ್ವಿಕರಿಸಿಲ್ಲ. ಸಮುದಾಯದ ನಿರ್ದಿಷ್ಟ ವಿಭಾಗಗಳಲ್ಲಿ ವ್ಯತಿರಿಕ್ತವಾದ ಪ್ರವೃತ್ತಿಗಳು ರೂಪುಪಡೆಯುತ್ತಿದ್ದವು. ಉದಾಹರಣೆಗೆ ಮುಸ್ಲಿಂ ಸಮುದಾಯದ ಫ್ರಿಂಜ್ ನಿಂದಾಗಿ ಉಗ್ರಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ. ಹಿಂದೆ ಇದ್ದ ಕೋಮುವಾದಕ್ಕಿಂತ ಇದು ವಿಭಿನ್ನವಾಗಿದ್ದು ಇತ್ತೀಚಿನ ಪ್ರವೃತ್ತಿಯಾಗಿದೆ. ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಪರಿಸ್ಥಿತಿಗೆ ಪ್ರಕ್ರಿಯೆಯಾಗಿ ಈ ಪ್ರವೃತ್ತಿ ಮಹತ್ವದ್ದೆನಿಸಿದೆ ಎಂಬುದನ್ನು ಮನಗಾಣಬೇಕು.

ಏನೇ ಕಾರಣಗಳಿದ್ದರೂ ಬಹುಮತದ ಕೋಮುವಾದ ಮುಸ್ಲಿಮರನ್ನು ಪಾಕ್ ನ ಐ ಎಸ್ ಐ ಏಜೆಂಟರೆಂದು ಚಿತ್ರಿಸಲಿಕ್ಕೆ ಇದು ಸಾಧ್ಯವಾಗುತ್ತದೆ. ಸಶಕ್ತ  ಉಗ್ರಚಟುವಟಿಕೆ ನೆಪದಲ್ಲಿ ಬಂಧಿಸಲು ಮತ್ತು ಆ ಮೂಲಕ ಮುಸ್ಲಿಂ ಸಮುದಾಯದ ಜಾತ್ಯತೀತ ಮನೋಭಾವನೆಯನ್ನು ಕೆದಕಲು ಕಾರಣವಾಗುತ್ತದೆ. ಮುಸ್ಲಿಂ ಉಗ್ರವಾದದ ಸಂಖ್ಯೆ ತೀರಾ ಸಣ್ಣವಾದರೂ ಮುಸ್ಲಿಂ ಬಹು ಸಮಾಜದಲ್ಲಿ ಉಗ್ರವಾದಕ್ಕೆ ಬೆಂಬಲ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ಪರಿಗಣಿಸುವುದಿಲ್ಲ. ಹಿಂದುತ್ವದ ಕಣ್ಣಲ್ಲಿ ಮುಸ್ಲಿಂ ಉಗ್ರ ಕೋಮುವಾದಿಯಾಗಿ ಒಬ್ಬ ಜಿಹಾದಿಯಾಗಿ ಕಾಣುತ್ತಾನೆ. ಆ ಮೂಲಕ ಬಹು ಸಮುದಾಯದಲ್ಲಿ ಅಸ್ಥಿರತೆಯ ಭಾವನೆ ಹುಟ್ಟುಹಾಕಿ ಕೋಮುವಾದ ರಾಜಕಾರಣಕ್ಕೆ ಪ್ರಚೋದಿಸುತ್ತದೆ. ಇದಕ್ಕೆ ವಿರುದ್ಧವಾಗಿ ಹಿಂದುತ್ವ ರಾಜಕಾರಣಕ್ಕೆ ಸಣ್ಣ ಮುಸ್ಲಿಂ ಗುಂಪು ಬೆಂಬಲ ನೀಡುವ ಪ್ರಮುಖವಲ್ಲದ ಪ್ರವೃತ್ತಿ ಇದೆ. ಮುಸ್ಲಿಮರೊಳಗಿನ ಮಹತ್ವಾಕಾಂಕ್ಷಿ ಮತ್ತು ಮೇಲ್ಮುಖ ಚಲನೆಯ ಸಣ್ಣ ಗುಂಪು ಬಿಜೆಪಿ ಜೊತೆ ಸಖ್ಯ ಬಯಸುತ್ತಿದೆ. ಇವೆರಡು ಪ್ರವೃತ್ತಿಗಳು ಮುಸ್ಲಿಂ ಸಮುದಾಯದೊಳಗಿನ ಕರಿ ಛಾಯೆಯಾಗಿದೆ. ವಿ.ಪಿ. ಸಿಂಗ್ ಸರಕಾರ ಜಾರಿಗೊಳಿಸಿದ ಮಂಡಲ್ ವರದಿ ಅನುಷ್ಠಾನವು ಮುಸ್ಲಿಂ ಸಮುದಾಯದ ರಾಜಕೀಯ ತಿಳುವಳಿಕೆಯ ಪ್ರಮುಖ ಪಲ್ಲಟಕ್ಕೆ ಒಂದು ನಿರ್ಣಾಯಕ ತಿರುವು ಒದಗಿಸಿತ್ತು. ಇನ್ನಾವುದೇ ಸಮಾಜೋ ಆರ್ಥಿಕ ಘಟನೆಗಿಂತ ಮೇಲ್ಜಾತಿಗಳಿಂದ ದಬ್ಬಾಳಿಕೆ ಮತ್ತು ಹಣ ವಸೂಲಿ ಮಾಡುವಂಥ ಹತಾಶೆ ಪ್ರಯತ್ನಗಳಿಂದ ನಮ್ಮ ಸಮಾಜದಲ್ಲಿ ಅಧಿಕಾರ ಸಮತೋಲನದ ವಾಸ್ತವ ಮತ್ತು ಪ್ರಾಬಲ್ಯಕ್ಕೆ ಭಂಗ ತರಲು ಪ್ರಮುಖ ಕಾರಣೀಭೂತ ಅಂಶವಾಗಿದೆ. ಇದು ಗಂಗಾತಟ ವ್ಯಾಪ್ತಿಯಲ್ಲಿ ಅತಿ ಹೆಚ್ಚಿದ್ದರೆ, ದೇಶದ ಇತರೆ ಭಾಗದಲ್ಲಿ ಪರಿಣಾಮಕಾರಿ ಬದಲಾವಣೆಗೆ ದಾರಿಯಾಗುವತ್ತ ಪ್ರಚಲಿತದಲ್ಲಿತ್ತು. ಇದು ಬ್ರಾಹ್ಮಣರು ಮತ್ತು ಒಬಿಸಿ ಮಧ್ಯದ ಸಂಬಂಧಗಳ ಪ್ರಶ್ನೆಗಿಂತ ಹೆಚ್ಚಿನದನ್ನು ಒಳಗೊಂಡಿತ್ತು. ಮಾತ್ರವಲ್ಲ ಎಲೀಟು ಮತ್ತು ಸಾಮಾನ್ಯರ ಮಧ್ಯೆ ಒಂದು ತಡೆಯನ್ನು ನಿರ್ಮಿಸಿತು.

ಅಧಿಕಾರ ಸಮತೋಲನ ಮತ್ತು ಅಸ್ತಿತ್ವದಲ್ಲಿದ್ದ ಪ್ರಾಬಲ್ಯದ ಕುರಿತು ತೀರಾ ಹತ್ತಿರದಿಂದ ನೋಡೋಣ ಇನ್ನಾವುದೇ ತೃತೀಯ ಜಗತ್ತಿನ ರಾಷ್ಟ್ರಕ್ಕಿಂತಲೂ ಭಾರತದಲ್ಲಿ ಪೆಟಿ ಬೂರ್ಶ್ವಾ ಮತ್ತು ಜನಸಾಮಾನ್ಯರ ಮೇಲೆ ಬೂರ್ಶ್ವಾಗಳ ಪ್ರಭಾವ ಅತಿಯಾಗಿದೆ. ವಿಶೇಷವಾಗಿ ಪೆಟಿ ಬೂರ್ಶ್ವಾದ ಚಿಂತಕ ವರ್ಗವನ್ನೊಳಗೊಂಡ ಮಧ್ಯಮ ವರ್ಗಗಳು ಜನಸಾಮಾನ್ಯರಲ್ಲಿ ಬಲಯುತವಾಗಿ ನೆಲೆ ಕಂಡಿದ್ದವು. ಇವು ಕೇವಲ ಐಹಿಕ ಹಿತಾಸಕ್ತಿಯ ನೆಲೆಗಳಲ್ಲ. ಇವುಗಳ ಹಿತಾಸಕ್ತಿಗಳು ಬೂರ್ಶ್ವಾ ಜಗತ್ತಿನ ಆಶೋತ್ತರಗಳ ಭಾಗಗಳಂತೆಯೂ ಕಾಣಬಹುದು. ಬಹಳ ಮುಖ್ಯವಾಗಿ ಸಂಪ್ರದಾಯ ಮತ್ತು ಸಂಸ್ಕೃತಿಯ ನೆಲೆಗಟ್ಟಿದ್ದು ಜಗತ್ತು ರಾಜಕಾರಣದ ಸಾಮಾನ್ಯ ಸಂಕಥನದ ಅರಿವು ಹೊಂದಿತ್ತು.

ಕಾಂಗ್ರೆಸನ್ನು ಆಳುವ ವರ್ಗದ ಪ್ರಜಾಸತ್ತಾತ್ಮಕ ಆಳ್ವಿಕೆ ಪಕ್ಷವಾಗಿ ಅಂದರೆ ಜಮೀನ್ದಾರರು ಮತ್ತು ರೈತರಿಂದೊಡಗೂಡಿದ ಬೂರ್ಶ್ವಾ ಮೈತ್ರಿಯಿಂದಾಗಿ ಈ ವರ್ಗ ಆಳ್ವಿಕೆಯ ರಚನೆಯ ಬಲಗೊಂಡಿತೆಂಬುದನ್ನು ತಿಳಿಯುವಲ್ಲಿ ಈ ಕೊಂಡಿ ತುಸು ಮಹತ್ವದ್ದೆನಿಸಿದೆ. ಹೊಸದಾಗಿ ರೂಪು ಪಡೆಯುತ್ತಿರುವ ಗುಂಪುಗಳನ್ನು ಎಲೀಟುಗಳನ್ನಾಗಿಸುವ ಸಾಮರ್ಥ್ಯದೊಂದಿಗೆ ಅವುಗಳ ಹಂಬಲವನ್ನು ಜೊತೆಗೂಡಿಸುವ ಪ್ರಾಬಲ್ಯದ ವ್ಯವಸ್ಥೆಗೆ ಇದ ದಾರಿ ಮಾಡಿತು. ಪ್ರತಿಗಾಮಿಯಿಂದ ಪ್ರಗತಿಪರವೆಂಬ ತೀವ್ರವಾದ ವಿಚಾರಧಾರೆಯನ್ನು ಎತ್ತಿ ಹಿಡಿಯಲು ಮತ್ತು ಸಾರಲು ಯಾವುದೇ ತೊಡಕಿಲ್ಲದೆ ಸಹಾಯ ಮಾಡಿತು. ವಿವಿಧ ಪ್ರಕ್ರಿಯೆ ಮತ್ತು ವಿಚಾರ ಧಾರೆಯ ವಿಭಿನ್ನ ಹಂತಗಳಲ್ಲಿ ಈ ರೂಪುಗೊಳ್ಳುತ್ತಿರುವ  ಎಲೀಟುಗಳ ವಿಲೀನತೆ ನಡೆದು ಹೋಯಿತು.

ಮಂಡಲ ವರದಿಯ ಗೊಂದಲವು ನಳಿಕೆಯಂತೆ ಪರಿಣಮಿಸಿ ಅಧಿಕಾರ ಮತ್ತು ಪ್ರಾಬಲ್ಯದ ತಳಮಟ್ಟದ ಲೆಕ್ಕಚಾರಗಳನ್ನು ಏರುಪೇರುಗೊಳಿಸಿ ಜನರನ್ನು ನಿಧಾನವಾಗಿ ಚಿಂತೆಗೀಡುಮಾಡಿತು. ಹೆಚ್ಚಾಗಿ ಇಂಗ್ಲಿಷ್ ಶಿಕ್ಷಿತ ಮೇಲ್ಜಾತಿಗಳಿಂದ ರೂಪುಗೊಂಡ ಸವಲತ್ತುಗಳಿಗೆ ಹಂಬಲಿಸುವ ಗುಂಪುಗಳು ತಮ್ಮನ್ನು ರಕ್ಷಿಸುವ ಸುಲಭವಾಗಿ ಉಗ್ರರೂಪ ತಾಳಿದವು, ಸ್ಥಾಪಿತ ಎಲೀಟುಗಳು ಕಾಂಗ್ರೆಸ್ ನಿಂದ ದೂರವಾಗುವಂತಹ ಮತ್ತು ಬಿಜೆಪಿಯೊಡನೆ ಸಾಗುವಂತಹ ಬಹುಮಟ್ಟಿನ ತೀವ್ರತರ ಆಂದೋಲನ ನಡೆದು ಹಿಂದುತ್ವ ವಿಚಾರಧಾರೆಗೆ ಮುಕ್ತವಾದ ಬೆಂಬಲ ನೀಡಿತು. ಮೇಲ್ಜಾತಿಗಳಿಂದ ರೂಪುಗೊಂಡ ಸ್ಥಾಪಿತ ಮಧ್ಯಮವರ್ಗದ ಪ್ರಜ್ಞೆಯಲ್ಲಿ ಒಂದು ವಿಚಿತ್ರ ಬದಲಾವಣೆ ಘಟಿಸಿತು. ಮುಸ್ಲಿಮರು ರಕ್ಷಣೆಯಿಂದ ಘನತೆಯಂತಹ ರಾಜಕೀಯ ನಿಲುವಿಗೆ ಸಾಗುವ ವ್ಯಾಪಾಕ ಬದಲಾವಣೆಗೆ ಇದು ಪುಷ್ಟಿ ನೀಡಿತು.

ಉತ್ತರ ಭಾರತದಲ್ಲಿ  ಒಬಿಸಿ ರಾಜಕೀಯ ಗುಂಪುಗಳು ಬಿಜೆಪಿ ಜೊತೆ ಅವಿರೋಧವಾದ ಸಖ್ಯ ಬೆಳಸಿದುದರಿಂದ ಈ ಬದಲಾವಣೆ ಮತ್ತಷ್ಟು ಗಟ್ಟಿಯಾಯಿತು. ಇಂಥ ಸನ್ನಿವೇಶವು ಮುಸ್ಲಿಮರ ಪಲ್ಲಟವನ್ನು ವಿವರಿಸುತ್ತ ವಿ.ಪಿ. ಸಿಂಗರ ಬಲಿದಾನದ ಕ್ರಮವನ್ನು ಶ್ಲಾಘಿಸುತ್ತದೆ. ಆದ್ದರಿಂದ ಪತ್ರಕರ್ತರು ಮತ್ತು ಚುನಾವಣಾ ವರದಿಗಾರರ ಈ ಕುರಿತ ಒಮ್ಮತದ ಮುನ್ನೋಟದ ಮಧ್ಯೆಯೂ ಮುಸ್ಲಿಮರು ಕೇವಲ ತಂತ್ರಗಾರಿಕೆಯ ಮತದಾನ ಮಾಡುವುದಿಲ್ಲ. ಮಂಡಲ್ ಜಾರಿ ನಂತರದ ವರ್ಷಗಳಲ್ಲಿ ಸೋಲುಗೊತ್ತಿದ್ದೂ ಅವರು ಜನತಾದಳ ಅಥವಾ ಸಮಾಜವಾದಿ ರಾಷ್ಟ್ರೀಯ ಜನತಾದಳಕ್ಕೆ ಮತ ಹಾಕಿದರು. ಬಿಜೆಪಿ ವಿಜಯಿಯಾಯಿತು. ಕೋಪ ಮತ್ತು ಅಸಹಕಾರದ ಮನೋಭಾವನೆಯಲ್ಲೂ ನಿರೀಕ್ಷೆ ಮತ್ತು ವಿಶ್ವಾಸದೊಂದಿಗೆ ಮುಸ್ಲಿಂ ಸಮುದಾಯವು ಆಂತಕಗೊಳಗಾಗಲಿಲ್ಲ. ಸ್ಥಾಪಿತ ಮಧ್ಯಮವರ್ಗ ಮತ್ತು ಉನ್ನತ ಸ್ತರದಲ್ಲಿರುವ ಆಂಶಿಕ ಮುಸ್ಲಿಮರು ಮಾತ್ರ ಈ ಬದಲಾವಣೆಯಿಂದ ಭಾಗಶಃ ದೂರವಿದ್ದರು. ಮುಸ್ಲಿಮರ ರಾಜಕೀಯ ನಿಲುವಿನಲ್ಲಿ ಬದಲಾವಣೆ ಮತ್ತು ಸಾಮಾನ್ಯರು ಮತ್ತು ಎಲೀಟಿಗಳೆಂಬ ಮುಸ್ಲಿಂ ಸಮುದಾಯದೊಳಗಿನ ವಿಭಜನೆ ಕಾಂಗ್ರೆಸ್ ಗೆ ಸಮುದಾಯವನ್ನು ಒಂದು ಬಣವಾಗಿಸಿದುದು ಕೂಡ ಮುಸ್ಲಿಂ ಜಾತ್ಯತೀತ ರಾಜಕಾರಣಕ್ಕೆ ತುಸು ಕೊಡುಗೆ ನೀಡಿದೆ.

ಮೇಲಿನ ಹಸ್ತಕ್ಷೇಪ, ಸುಪ್ತಮನಸ್ಸಿನ ಸೂಕ್ಷ್ಮತೆ, ವ್ಯವಸ್ಥಿತ ಪ್ರಚೋದನೆ, ಭಯ ಮತ್ತು ಶಂಕೆ ಮುಂತಾದವು ಕೆಲಮೊಮ್ಮೆ ಸಮುದಾಯದ ಪ್ರಜ್ಞೆಯನ್ನು ಕೋಮುವಾದಕ್ಕೆ ಪರಿವರ್ತಿಸುತ್ತದೆ, ಮುಸ್ಲಿಂ ಸಮುದಾಯದೊಳಗಿನ ಎಲೀಟು ಮತ್ತು ಜನಸಾಮಾನ್ಯರ ಮಧ್ಯದ ಬಿರುಕು ಇವರನ್ನು ಮೇಲಿನ ಹಂತದಲ್ಲಿ ಪಕ್ಷಗಳು ಬ್ಲಾಕ್ ಗಳಾಗಿ ಉಪಯೋಗಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಿದೆ. ಉದಾಹರಣೆಗೆ ಮುಸ್ಲಿಮರು ಬಹಳ ಹಿಂದಿನಿಂದ ಕಾಂಗ್ರೆಸ್ ಜೊತೆಗಿದ್ದರು. ಮುಸ್ಲಿಂ ಪ್ರಾಬಲ್ಯವಿರುವ ಮತಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಟಿಕೇಟು ನೀಡಿದರೂ ಆ ಕ್ಷೇತ್ರದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಬಿಹಾರದಲ್ಲಿ ಆರ್ ಜೆ ಡಿ ಮುಸ್ಲಿಮೇತರ ಅಭ್ಯರ್ಥಿಗೆ ಎದುರಾಗಿ ಇವರು ಸುಲಭವಾಗಿ ಗೆಲ್ಲಲಾರರು. ಕುತೂಹಕಲರವೆಂದರೆ ಇಂಥ ವ್ಯಾಪಾರ ರಾಜಕೀಯ ಸಂಪರ್ಕವಿರುವ ಗಣ್ಯವ್ಯಕ್ತಿಗಳು ರಾಜ್ಯಪಾಲರಾಗುವ ಸಾಧ್ಯತೆಗಳಿದ್ದು ಮತ್ತು ರಾಜ್ಯದಲ್ಲಿ ಮುಸ್ಲಿಮರಲ್ಲಿ ಯಾರಿಗೆ ಸ್ಥಾನ ನೀಡಬೇಕು ಇಲ್ಲವೆ ಬೇಡವೆಂಬುದನ್ನು ನಿರ್ಧರಿಸುವರು. ಅಷ್ಟೇ ಸಮಾನ ಆಸಕ್ತಿಯ ವಿಷಯವೆಂದರೆ ಇಂಥ ಗಣ್ಯರನ್ನು ಮುನಿಸಿಪಲ್ ವಾರ್ಡಿನಿಂದ ಈಗ ಯಾರೂ ಆರಿಸಲಾರರು. ಜನಸಾಮಾನ್ಯರು ಮತ್ತು ಇಂಥವರ ಮಧ್ಯದ ಬಿರುಕು ಸಂಕೀರ್ಣವೆನಿಸಿದೆ. ಹಾಗಾಗಿ ಗುರುತಿನ ರಾಜಕಾರಣವು ಇಂಥ ಬಿರುಕುಗಳಿಂದ ಮುಂದುವರಿಯಲ್ಪಟ್ಟು ಹೆಚ್ಚುತ್ತಲಿರುವುದು. ಭಾರತೀಯ ಸಮಾಜದಲ್ಲಿ ಸಾಮಾನ್ಯ ಮುಸ್ಲಿಮರು ಹಿಂದಿಗಿಂತಲೂ ಹೆಚ್ಚಾಗಿ ಸಬಲೀಕರಣ ಪ್ರಕ್ರಿಯೆ ಮತ್ತು ವಿಸ್ತೃತ ಸಾಮಾಜಿಕ ಶಕ್ತಿಗಳ ಭಾಗವೂ ಆಗಿರುತ್ತಾರೆ.

ಇದು ಸಕಾರಾತ್ಮಕ ಬೆಳವಣಿಗೆಯೆಂದೆನಿಸಿದರೂ ದೇಶದಲ್ಲಿನ ಮುಸ್ಲಿಮರು ಅತಿಸೂಕ್ಷ್ಮವೆನಿಸಿದ ಕಾರ‍್ಯದಲ್ಲಿ ನಿರತರಾಗಿರುವ ಒಂದು ವ್ಯತ್ತಿರಿಕ್ತವಾದ ಟ್ರೆಂಡನ್ನು ಗಮನಿಸದಿದ್ದಲ್ಲಿ ಅವರ ಸಾಮರ್ಥ್ಯ ಅತಿಯಾಗಿ ಪರಿಭಾವಿಸುವ ಅಪಾಯವಿದೆ. ನನ್ನ ಪ್ರಕಾರ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ಭಾರತದಲ್ಲಿ ಮುಸ್ಲಿಂ ಸಮುದಾಯಗಳಲ್ಲಿನ ರಾಜಕೀಯ ಐಕ್ಯತೆ ಬಲಗೊಳ್ಳುತ್ತಿದೆ. ಆದರೆ ಮುಸ್ಲಿಂ ಎಲೀಟುಗಳು ನಿರ್ವಹಿಸುತ್ತಿರುವ ಆಯ್ಕೆಯ ಮುಂದಿನ ದಿನಗಳಿಗೆ ಒಳ್ಳೆಯದಲ್ಲ.

ಮುಸ್ಲಿಮರ ರಾಜಕೀಯ ಏಕತೆಗೆ ಒಂದು ಏಕರೂಪದ ಸೈದ್ಧಾಂತಿಕ ಸಂಕಥನದ ಅಗತ್ಯವಿದ್ದು ಅವರು ಭಾರತದ ಎಲ್ಲೇ ಇರಲಿ ಅದು ಸಮಾನವಾಗಿ ಪರಿಗಣಿಸಲ್ಪಡುವಂತ ಸಂಕಥನವಾಗಿರಬೇಕು. ಮೊದಲನೆಯದಾಗಿ ಈ ಸಂಕಥನಕ್ಕೆ ಪೂರಕವಾದುದೆಂದರೆ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಇದರಿಂದ ಈ ಸಮುದಾಯಕ್ಕಾಗುವ ಕಷ್ಟನಷ್ಟ (ಕ್ರಿಶ್ಚಿಯನ್ನರು ತಡವಾಗಿ ಈ ವ್ಯವಸ್ಥಿತ ಸಂಚಿಗೆ ಬಲಿಯಾಗುತ್ತಿದ್ದಾರೆ). ಎರಡನೆಯದಾಗಿ ಜೀವನದ ಎಲ್ಲ ರಂಗಗಳಲ್ಲೂ ತಮ್ಮನ್ನು ತಾರತಮ್ಯಕ್ಕೊಳಪಡಿಸಲಾಗುತ್ತಿದೆ ಎಂಬ ವ್ಯಾಪಕವಾದ ಅಭಿಪ್ರಾಯ. ಮೂರನೆಯದಾಗಿ ಭಾರತದಲ್ಲಿ ತಾವು ಬೇಡದವರು ಅಥವಾ ಹೊರಗಿನವರೆಂಬ ಭಾವನೆ ಬಲಗೊಳ್ಳುತ್ತಿದ್ದು ಇಂಥವಾದವನ್ನು ಹಿಂದೂ ಬಲಪಂಥೀಯವು ಬಲವಾಗಿ ಮುಂದೊಡ್ಡುತ್ತಿದೆ. ಒಂದು ನಿರ್ದಿಷ್ಟ ಜ್ಯಾತ್ಯತೀತ ಶಕ್ತಿಯ ಹೋರಾಟದೊಂದಿಗೆ ಗುರುತಿಸಿಕೊಳ್ಳುವುದು ಮತ್ತು ಈ ಹೊರಗಿನರೆಂಬ ಭಾವನೆ ಅಸಂಬದ್ಧವಾದುದು ಎಂಬುದನ್ನು ನಾವು ಸ್ಪಷ್ಟಪಡಿಸಬೇಕಿದೆ. ಎರಡು ವಿಭಿನ್ನ ರೀತಿಯ ರಾಜಕಾರಣವು ಮುಸ್ಲಿಂ ಸಂವೇದನೆಗೆ ವ್ಯತಿರಿಕ್ತವಾದ ನಿಲುವನ್ನು ಮೂಡಿಸುತ್ತದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ತಮ್ಮ ಗುರುತಿನ ವಿವಸ್ತ್ರತೆಯಿಂದ ಹೊರಬಂದು ಸಾಂಸ್ಕೃತಿಕ ರಾಷ್ಟ್ರೀಯತೆಯ ಸಂಕೇತಕ್ಕೆ ಬದ್ಧರಾಗದಿದ್ದಲ್ಲಿ ಭಾರತದಲ್ಲಿ ಅವರ ಉಪಸ್ಥಿತವೇ ಸಂಶಯಾಸ್ಪದವೆಂದು ಕಟ್ಟಾ ಹಿಂದೂ ಬಲಪಂಥೀಯ ರಾಜಕಾರಣವು ಸಂದೇಶ ರವಾನಿಸಿದೆ. ಸಾಮಾನ್ಯವಾಗಿ ಭಾರತದಾದ್ಯಂತ ಇರುವ ಮುಸ್ಲಿಮರ ಸಮಸ್ಯೆಗಳು ಅಥವಾ ಸಮಾಜೋ ರಾಜಕೀಯ ಪ್ರಶ್ನೆಗಳು ಇಲ್ಲವೆ ಕೇರಳ, ಆಂಧ್ರ, ಗುಜರಾತ್ ಅಥವಾ ಬಿಹಾರದ ಮುಸ್ಲಿಮರು ಎತ್ತುವ ಪ್ರಶ್ನೆಗಳೆಲ್ಲ ಒಂದೇ ಎನ್ನುವ ಹಾಗಿಲ್ಲ. ಕೋಮುದಳ್ಳುರಿಯ ಬೇಗೆ ಮತ್ತು ಕಟ್ಟಾ ಹಿಂದುತ್ವವು ಅವರನ್ನು ಪರಕೀಯರಂತೆ ನೋಡುವ ಸಂಚಿನ ಜೊತೆಗೆ ತಮ್ಮ ವಿವಿಧ ಬೇಡಿಕೆಗಳನ್ನು ಮುಸ್ಲಿಮರು ಪರಿಶೀಲಿಸುತ್ತಿರುವರು. ದಲಿತರಿಗೆ ಅಸ್ಪೃಶ್ಯತೆ ಭಯದಂತೆ, ಮುಸ್ಲಿಮರಿಗೆ ಕೋಮುದಳ್ಳುರಿಯ ಸಂಚಿನ ಭಯ, ಆದಿವಾಸಿಗಳಿಗೆ ಆರ್ಥಿಕ ದೃಡತೆಯ ಕೊರತೆ ಅಥವಾ ಮಹಿಳೆಯರಿಗೆ ಲಿಂಗ ತಾರತಮ್ಯದ ಭಯ. ಇಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಕೋಮುಗಲಭೆ ಮತ್ತು ಹತ್ಯೆ ತೀರಾ ಸಾದೃಶ ಘಟನೆಗಳಾಗಿದ್ದು ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಇವನ್ನು ಮಾತ್ರ ಅತಿ ಹೆಚ್ಚಾಗಿ ಬಿಂಬಿಸುತ್ತವೆ. ಇತ್ತೀಚಿನ ಗುಜರಾತ್ ರಾಜ್ಯಸರ್ಕಾರ ನಿರ್ದೇಶಿತ ಗಲಭೆ ಮತ್ತು ಹತ್ಯೆಗಳನ್ನು ವಿದ್ಯುನ್ಮಾನ ಮಾಧ್ಯಮಗಳು ನೇರವಾಗಿ ಜನರ ಮನೆಗಳಿಗೆ ತಲುಪಿಸಿದವು. ವಿಭಿನ್ನ ಸ್ಥಳಗಳಲ್ಲಿ ಘಟನೆಗಳು ಜರುಗುತ್ತಿದ್ದರೆ ಅದು ತಕ್ಷಣದಲ್ಲಿ ವ್ಯಾಪಕ ಮುಸ್ಲಿಂ ಪ್ರಜೆಯ ಭಾಗವಾಗಿರುತ್ತದೆ. ಮುಸ್ಲಿಂ ಹೆಸರು ಕೂಡ ಹೊಂದಿರುವುದು ಈ ಪ್ರಜ್ಷೆಯ ಭಾಗವಾಗಿ ಮಾರ್ಪಾಡಾಗುತ್ತಿತ್ತು. ನಿಮ್ಮ ಪ್ರದೇಶದಲ್ಲಿ ಗಲಭೆಗಳಿವೆಯೇ?, ಅಲ್ಲಿನ ಮುಸ್ಲಿಮರು ಸುರಕ್ಷಿತರೇ?, ಅವರು ಸ್ಥಿತಿವಂತರೇ?, ಅವರಿಗೆ ಕೆಲಸ ದೊರೆಯುತ್ತಿದೆಯೇ? ಮುಂತಾದ ಪ್ರಶ್ನೆಗಳನ್ನು ೧೯೮೦ರಿಂದ ಭಾರತದೆಲ್ಲೆಡೆ ಪ್ರಯಾಣಿಸುತ್ತಿರುವಾಗ ದೇಶದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುವ ಮುಸಲ್ಮಾನರು ಕೇಳುತ್ತಾರೆ.

ಒಂದು ಭಾರತೀಯ ಸಮುದಾಯದವರೆಂಬ ಭಾವನೆಯನ್ನು ಮುಸ್ಲಿಯರಲ್ಲಿ ಕಟ್ಟುವಂತಹ ಐಕ್ಯತೆಯ ಪ್ರಕ್ರಿಯೆ ಹಂತದಲ್ಲಿದ್ದು ಅಗತ್ಯವಾಗಿ ಈಗ ಆಗಬೇಕಿದೆ. ದೇಶದ ವಿಭಿನ್ನ ಭಾಗಗಳಲ್ಲಿ ಮುಸ್ಲಿಮರು ಕೇಳುವ ಪ್ರಶ್ನೆಗಳು ಮತ್ತು ಐಕ್ಯತಾ ಪ್ರಕ್ರಿಯೆ ಒಂದು ವಿಭಿನ್ನ ಸನ್ನಿವೇಶಕ್ಕೆ ಸೇರಿದ್ದು ೧೯೪೦ರ ನಂತರದ ಪರಿಸ್ಥಿತಿಗಿಂತ ಭಿನ್ನವಾದ ಹೊಸಬಗೆಯ ಒಂದು ರಾಜಕಾರಣವಾಗಿದೆ. ಹಾಗಾದಾಗ ಮುಸ್ಲಿಂ ಸಮಸ್ಯೆಯು ಒಂದು ಅಲ್ಪಸಂಖ್ಯಾತರ ಅಥವಾ ಅಲ್ಪಸಂಖ್ಯಾತರಿಗಾಗಿ ಎಂದು ನೋಡುವ ಬದಲು ಒಂದು ಸಾರ್ವಭೌಮ ಪ್ರಭುತ್ವವನ್ನು ರೂಪಿಸುವ ರಾಷ್ಟ್ರದ ಹಂಬಲವೆಂದು ನೋಡಬಹುದು. ಈ ಬದಲಾವಣೆಯ ಚರ್ಚೆಗೆ ಚಾರಿತ್ರಿಕ ಮಹತ್ವವಿದೆ. ಮುಸ್ಲಿಮರಲ್ಲಿ ಉಂಟಾಗುತ್ತಿರುವ ಬದಲಾವಣೆಯು ದೇಶದ ವಿವಿಧ ಭಾಗದಲ್ಲಿರುವ ಒಬಿಸಿ ಮತ್ತು ದಲಿತರ ಬದಲಾವಣಾ ಪ್ರಕ್ರಿಯೆ ನಡೆಯುತ್ತಲಿದ್ದು ಸಮಾನತೆ ಮತ್ತು ಹಕ್ಕುಗಳಿಗಾಗಿ ಹೋರಾಡುವರು ಪೂರ್ಣ ನಾಗರಿಕತೆಗೆ ಹೋರಾಡಬೇಕಿದೆ.

ಮುಸ್ಲಿಮರ ರಾಜಕೀಯ ಪ್ರತಿಪಾದನೆಯ ಸಂಘಟನಾತ್ಮಕ ಏಕತೆಯ ಕೊರತೆಯಿಂದಾಗಿ ಅದೃಷ್ಟವಶಾತ್ ಕೋಮುಸಂಘಟನೆಯ ಒಂದು ಐಕ್ಯರೂಪದ ರಾಜಕೀಯ ಗುರುತನ್ನು ನಿರೂಪಿಸಲು ತಡೆಯೊಡ್ಡಿದೆ. ಹಿಂದುತ್ವದಲ್ಲಿ ಹಿಂದೂ ಕೋಮುವಾದ ಇರುವ ಹಾಗೆ ಮುಸ್ಲಿಂ ಕೋಮುವಾದದ ರಾಜಕಾರಣಕ್ಕೆ ಐಕ್ಯರೂಪದ ವಿಚಾರ ಪ್ರಣಾಳಿಕೆ ಇಲ್ಲ. ಈ ಅದೃಷ್ಟದ ಸನ್ನಿವೇಶವು ಸದ್ಯ ಗೋಚರವಾಗದಿದ್ದರೂ ತೀವ್ರತರದ ಬದಲಾವಣೆ ಮತ್ತು ವಿಮೋಚನೆಯ ರಾಜಕಾರಣದ ಸಾಧ್ಯತೆಗೆ ದಾರಿ ಮಾಡುತ್ತದೆ. ಮುಸ್ಲಿಮರ ರಾಜಕೀಯ ಐಕ್ಯತೆಯ ಕೆಲವು ವೈರುಧ್ಯಗಳು ಮುಸ್ಲಿಂ ರಾಜಕಾರಣದ ಕಣ್ಣು ತೆರೆಸುವಂಥ ಸಂಗತಿಗಳನ್ನು ಮುಂದಿಡುತ್ತದೆ. ಮೊದಲೇ ತಿಳಿಸಿದಂತೆ ಈ ಪ್ರಕ್ರಿಯೆಯ ಒಳಗಿನ ವೈರುಧ್ಯವು ಬೆಳೆಯುತ್ತಿರುವ ಸಮುದಾಯ ಭಾವನೆ ಮತ್ತು ಸಂಘಟನೆ ಅಥವಾ ಐಕ್ಯತೆಯ ವಿಚರ ಪ್ರಣಾಳಿಕೆಯ ಕೊರತೆ ಮಧ್ಯೆ ಇದೆ. ಮುಸ್ಲಿಂ ಕೋಮುವಾದ ಪ್ರಜ್ಞೆ ಹಿಂದುತ್ವದ ಹಾಗಿಲ್ಲ. ಯಾರು ಹಿಂದುತ್ವಕ್ಕೆ ವಾಲುವರೋ ಕೆಲವನ್ನು ಹೊರತುಪಡಿಸಿ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕುವರು ಮತ್ತು ಹಿಂದೂ ಗುರುತಿನ ಮಾದರಿ ಸಂಕೇತಗಳೊಂದಿಗೆ ರಾಜಕೀಯವಾಗಿ ಗುರುತಿಸಿಕೊಳ್ಳುತ್ತ ವಿಶಿಷ್ಟವಾದ ದುರಭಿಮಾನದ ರಾಷ್ಟ್ರೀಯತೆಯನ್ನು ಪ್ರದರ್ಶಿಸುವರು. ರಾಜಕೀಯವಾಗಲಿ ಅಥವಾ ಚುನಾವಣೆಯಲ್ಲಾಗಲಿ ಮುಸ್ಲಿಂ ಕೋಮುಪ್ರಜ್ಞೆಗೆ ಯಾವುದೇ ಒಂದು ಚುಂಬಕವಿಲ್ಲ. ಒಂದೆಡೆ ಹೆಚ್ಚಿನ ಮುಸ್ಲಿಮರು ವಿ.ಪಿ. ಸಿಂಗರ ಕ್ರಮವನ್ನು ಶ್ಲಾಘನೀಯ ಮತ್ತದರ ರಾಜಕಾರಣವನ್ನು ಉಪಯುಕ್ತವೆಂದರೂ ಮುಸ್ಲಿಂ ಮತಗಳು ಈಗಲೂ ವಿಭಿನ್ನವಾಗಿ ಚಲಾಯಿಸಲ್ಪಡುತ್ತದೆ. ಎಲ್ಲಿ ಬಲವಾದ ಮುಸ್ಲಿಂ ಕೋಮು ಪಕ್ಷಗಳು ಇರುತ್ತವೆಯೋ ಅಲ್ಲಿ ಮುಸ್ಲಿಮರು ಧರ್ಮದ ಗುರುತಿನ ಕೋಮು ಪಕ್ಷಗಳನ್ನೇ ಬೆಂಬಲಿಸುತ್ತಾರೆ. ಜನತಾದಳ ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಉದಾಹರಣೆಗೆ ಬಿಹಾದರ‍್ಲಲಿ ಆರ್ ಜೆ ಡಿಗೆ ಬೆಂಬಲ ನೀಡುವರು. ಇಲ್ಲವಾದಲ್ಲಿ ಮುಸ್ಲಿಂ ಮತಗಳು ದಿಕ್ಕು ಪಾಲಾಗಿ ಚದುರುತ್ತವೆ. ಆದರೂ ಪ್ಯಾಕ್ ನಲ್ಲಿನ ಜೋಕರ್ ತರ ಕಾಣುತ್ತಾರೆ. ಯಾಕೆಂದರೆ ರಾಜಕೀಯವಾಗಿ ಪ್ರಜಾಸತ್ತೆಯೆಡೆಗೆ ಪ್ರಬಲವಾಗಿ ಒಗ್ಗೂಡುತ್ತಾರೆ. ಆದರೆ ಮತದಾರರಾಗಿ ಭಿನ್ನರಾಗುತ್ತಾರೆ. ಇನ್ನೊಂದು ಪ್ರಮುಖ ಅಂಶವೆಂದರೆ ಯಾವೊಂದು ಮುಸ್ಲಿಂ ಕೋಮುಸಂಘಟನೆಯು ವಿ.ಪಿ. ಸಿಂಗ್ ಮತ್ತವರ ಕೊಡುಗೆಗೆ ವಿರೋಧ ವ್ಯಕ್ತಪಡಿಸದು ಮತ್ತು ಅಂಥ ಪಕ್ಷಗಳು ತಮ್ಮನ್ನು ವಿಮರ್ಶಾತ್ಮಕವಾಗಿ ನೋಡಲಾರವು. ಎಡಪಕ್ಷಗಳು ಬೇಕಾದರೆ ಟೀಕಾಕಾರರಾಗಬಹುದು. ಎಲ್ಲಿ ಎಡಪಂಥ ಪ್ರಬಲವಾಗಿರುವುದೋ ಅಲ್ಲಿ ಮುಸ್ಲಿಂ ಸಂಘಟನೆಗಳು ಅದಕ್ಕೆ ವಿರೋಧ ವ್ಯಕ್ತಪಡಿಸಲಾರವು. ಆದರೂ ಕೇರಳದ ಮುಸ್ಲಿಂ ಲೀಗ್ ಈ ಸಾಮಾನ್ಯ ಮಾದರಿಗೆ ಅಪವಾದವಾಗಿದೆ. ಆದರೆ ಮುಸ್ಲಿಂ ಲೀಗಿನ ಈ ಅಪವಾದ ತೆರೆದಿಡತಕ್ಕ ಸಂಗತಿಯಾಗಿದೆ. ಭಾರತದಲ್ಲಿ ಇಂದು ಅಪವಾದಗಳು ಭಿನ್ನವಾದರೂ ಸಾಕಷ್ಟಿವೆ. ಎಲ್ಲ ಸಣ್ಣಪುಟ್ಟ ಸಂಗತಿಗಳು ಸೇರಿದರೆ ಅಪವಾದಗಳು ಪ್ರಚಲಿತದಲ್ಲಿನ ಪ್ರಬಲ ಟ್ರೆಂಡ್ ಗಳೆದುರು ಒಂದು ಮಾದರಿಯಲ್ಲದ ತಿರುವಿನ ಮಹತ್ವ ಪಡೆಯುತ್ತದೆ. ಹಾಗಾಗಿ ಭಾರತದ ರಾಜಕಾರಣದಲ್ಲಿ ಮುಸ್ಲಿಂ ಉಪಸ್ಥಿತಿಯನ್ನು ಅಭ್ಯಸಿಸುವಾಗ ಅತೀ ಸಾಮಾನ್ಯೀಕರಣ ಸಂಗತಿಗಳ ಬಳಕೆಯನ್ನು ತಪ್ಪಿಸುವುದು ಅವಶ್ಯಕವಾಗಿದೆ. ದುರದೃಷ್ಟಕರವೆಂದರೆ ಇಂಥ ಹೇಳಿಕೆಗಳು ಅವರನ್ನು ಕುಬ್ಜರನ್ನಾಗಿಸುತ್ತವೆ.

ಒಂದೆಡೆ ಸಬಲೀಕರಣ, ಮಾನವ ಘನತೆ ಮತ್ತು ವಿಮೋಚನೆ ಮುಂತಾದುವುಗಳ ಬಗೆಗೆ ಅತಿಯಾದ ಕಾಳಜಿ ರೂಪುಗೊಳ್ಳುತ್ತಿದ್ದರೆ ಇನ್ನೊಂದೆಡೆ ಆಳುವ ವರ್ಗ ದೇಶವನ್ನು ಅಂತಾರಾಷ್ಟ್ರೀಯ ಹಣಕಾಸು ಹೂಡಿಕೆಗೆ ಅಡಿಯಾಳನ್ನಾಗಿಸುತ್ತದೆ. ಇದು ಜನಸಾಮಾನ್ಯರ ದೈನಂದಿನ ಬದುಕಿನತ್ತ ಮಾರಕ ಪರಿಣಾಮ ಬೀರುತ್ತಿದೆ. ಈ ಪ್ರಕ್ರಿಯೆಯಲ್ಲಿ ಮುಸ್ಲಿಮರನ್ನು ರಾಜಕೀಯ ಆಯ್ಕೆಗೆ ಅಣಿಗೊಳಿಸುವುದಿದ್ದರೆ ಅದು ಅತಿಯಾದ ಮುಕ್ತ ಪ್ರಜಾಸತ್ತೆ ಮತ್ತು ಜಾತ್ಯತೀತ ನಿಲುವಿನ ಪಲ್ಲಟದೆಡೆಗೆ ತೆರೆದಿಡುವ ಸಂಭವವಾಗಬೇಕು. ಪ್ರಬಲ ಹಾಗೂ ಸೌಲಭ್ಯವರ್ಗ ತನ್ನ ಪ್ರಾಬಲ್ಯ ನಿರಂತರತೆಗೆ ಇತರ ಸಮುದಾಯಗಳ ಜ್ಞಾನ ಮತ್ತು ಸತ್ಯ ಕುರಿತಂತೆ ಮಾರುಕಟ್ಟೆ ತೆರನಾದ ಒಳಹುಗಳನ್ನು ಮುಂದಿಡುತ್ತ ಪ್ರಾಬಲ್ಯವನ್ನು ಕಾಯ್ದುಕೊಳ್ಳುತ್ತಿವೆ. ಹೀಗೆ ಎರಡೂ ಕಡೆಗಳಿಂದಲೂ ಹಿಂದುತ್ವ ಮತ್ತು ಜಾಗತೀಕರಣದ ವಿರುದ್ಧ ಸೆಟೆದು ನಿಂತಲ್ಲಿ ಆರೋಗ್ಯಕರ ರಾಜಕಾರಣಕ್ಕೆ ಭದ್ರ ಬುನಾದಿ ಬೀಡಬಹುದು.