ದಮನಿತ ಗುಂಪುಗಳ ಪ್ರಜಾಸತ್ತಾತ್ಮಕ ಹೋರಾಟವು ರಾಜಕೀಯ ಪಕ್ಷಗಳಿಗೆ ನೇರ ಸುಯೋಗದ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನ ಇಳಿಕೆ ಒಂದರ್ಥದಲ್ಲಿ ನಾಟಕೀಯವಾದುದು ಮತ್ತದು ಪುನರಾವರ್ತನೆಯಾಗದು. ಒಬಿಸಿ, ದಲಿತ ಮುಂತಾದ ದಮನಿತ ವರ್ಗಗಳ ಮೈತ್ರಿಯನ್ನು ಪ್ರತಿನಿಧಿಸುವ ಉತ್ತರ ಭಾರತದಲ್ಲಿನ ಪ್ರಾದೇಶಿಕ ಪಕ್ಷಗಳಾದ ಎಸ್ ಪಿ, ಆರ್ ಜೆ ಡಿ ಮತ್ತು ಬಿ ಎಸ್ ಪಿ ಹಾಗೂ ಡಿ ಎಂ ಕೆ, ತೆಲುಗುದೇಶಂ ಮತ್ತು ಅಕಾಳಿದಳ ಸಮಾಜದ ವಿಭಿನ್ನ ವರ್ಗಗಳ ಬೆಂಬಲದೊಂದಿಗೆ ಮುಂಚೂಣಿಗೆ ಬರುವ ಪ್ರಾದೇಶಿಕ ಪಕ್ಷಗಳು ಮತ್ತು ಮೂರನೆಯದಾಗಿ ಬಿಜೆಪಿಯ ಪ್ರಖರವಾದ ಬೆಳವಣಿಗೆ ಮತ್ತದರ ಸಂಬಂಧಿತ ಹಿಂದೂ ರೂಪದ ಸಂಘಟನೆಗಳು ಇವೆಲ್ಲಾ ಕಾಂಗ್ರೆಸ್ ಅವನತಿಗೆ ಕಾರಣ ಮತ್ತು ಸಾಕ್ಷಿಯಾಯಿತು. ಬಿಜೆಪಿಯ ಸ್ವಂತ ಬಲದಿಂದ ಅಧಿಕಾರ ನಡೆಸುವಷ್ಟರ ಮಟ್ಟಿಗೆ ಬೆಳೆಯದಿದ್ದರೂ ಅವಕಾಶವಾದಿಗಳನ್ನು ತನ್ನತ್ತ ಸೆಳೆಯುವ ಹೊಂದಾಣಿಕೆ ಹಾಗೂ ಕಾಂಗ್ರೆಸ್ ವಿರುದ್ಧದ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸುತ್ತ ಬಂದಿರುತ್ತದೆ. ಆಳುವ ವರ್ಗ, ಮೇಲ್ವರ್ಗ ಮತ್ತು ಮೇಲ್ಜಾತಿಗಳು ಹಾಗೂ ಇಂಗ್ಲಿಷ್ ಬಲ್ಲ ಎಲೀಟು ಇವೆಲ್ಲ ೧೯೯೦ರ ಸುಮಾರಿಗೆ ಒಟ್ಟು ಸೇರಿ ಒಂದು ಗುಂಪನ್ನು ರೂಪಿಸುತ್ತದೆ. ಜಾತಿಗಳೊಳಗಿನ ಬದಲಾಗುತ್ತಿರುವ ಸಮತೋಲನ ಲೆಕ್ಕಾಚಾರಗಳು ಅಥವಾ ಅವುಗಳೊಳಗಿನ ಎಲೀಟು ಮುಂತಾದವನ್ನು ಅವಲೋಕಿಸಿದಲ್ಲಿ ಈ ಗುಂಪಿನ ಹಿನ್ನೆಲೆಗೆ ಸಂಬಂಧಿಸಿದ ಅಗತ್ಯ ಮಾಹಿತಿ ದೊರೆಯುವುದು. ಸಾಮಾಜಿಕ ಸಮತೋಲನ ದಲ್ಲುಂಟಾಗಿರುವ ಅಗಾಧವಾದ ಅಡೆತಡೆಗಳು ಆಧುನಿಕ ರಾಜಕಾರಣ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ. ಮಂಡಲ್ ವರದಿ ಅನುಷ್ಠಾನದ ಪ್ರಕಟಣೆ ಮತ್ತು ಇದರ ವಿರುದ್ಧದ ಮೇಲ್ಜಾತಿಗರ ದುರಾಭಿಮಾನದ ಪ್ರತಿಕ್ರಿಯೆ ಮುಂತಾದವು ಈ ಅಡೆತಡೆಯ ಪ್ರಮುಖ ತಳಮಟ್ಟದ ಘಟನೆಗಳಾಗಿವೆ. ಸಾಮಾಜಿಕ ಸಮತೋಲನದ ಈ ಅಡೆತಡೆಗಳು ಮೇಲ್ಜಾತಿ, ಒಬಿಸಿ ಮತ್ತು ದಲಿತರ ಮಧ್ಯದ ಸಂಬಂಧಗಳೊಳಗೆ ಕೇವಲ ಬದಲಾವಣೆಗಳನ್ನು ಸೂಚಿಸುವುದಿಲ್ಲ. ಅಧಿಕಾರದ ಸಮೀಕರಣ ಮತ್ತು ಪ್ರಾಬಲ್ಯತೆಯು ಜನರನ್ನು ಅನುಗುಣವಾಗಿಸಿದರೂ ಇಂಡೋ-ಪ್ರದೇಶಗಳಲ್ಲಿ ತೀವ್ರವಾದ ಉತ್ಕ್ರಾಂತಿಗೆ ಒಳಗಾಯಿತು ಎಂಬುದನ್ನು ಗಮನಸಬೇಕಿದೆ. ಹಾಗೆ ದೇಶದ ಬೇರೆಡೆಯಲ್ಲೂ ವಿಭಿನ್ನ ಕ್ರಮಾಂಕದಲ್ಲಿ ಇಂತವೆ ಘಟನೆಗಳು ಹಿಂದೆ ಜರುಗಿತ್ತು. ಮೇಲೆ ವಿವರಿಸುವ ಮಾತುಗಳನ್ನು ಹೇಳುವುದಾದರೆ ಇಂತಹ ಗೊಂದಲಗಳಿಂದಾಗಿ ಎಲೀಟು ಅಥವಾ ಸ್ಥಾಪಿತ ಮಧ್ಯಮ ವರ್ಗಗಳ ಸಾಮಾಜಿಕ ಪ್ರಜ್ಞೆಯಲ್ಲಿ ಒಂದು ನಿರ್ದಿಷ್ಟ ಬಗೆಯ ವಿಘಟನೆ ಉಂಟಾಯಿತು.

ಭಾರತವನ್ನೊಳಗೊಂಡಂತೆ ಹೆಚ್ಚಿನೆಡೆ ಎಲೀಟು ಉನ್ನತ ಕ್ರಮಾಂಕದ ಪ್ರತಿಷ್ಠೆಯನ್ನು ಅನುಭವಿಸಿತ್ತು. ಇತರ ದೇಶಗಳಲ್ಲಿ ನಡೆದಂತೆ ವಸಾಹತುಶಾಹಿಯ ವಿರುದ್ಧದ ಚಳವಳಿಯಲ್ಲಿ ರಾಮ್ ಮೋಹನ್ ರಾಯ್ ರಿಂದ ಜವಾಹರ್ ಲಾಲ್ ನೆಹರೂ ಅವರ ವರೆಗೂ ಸ್ವಯಂಪ್ರೇರಿತರಾಗಿ ಮೆಚ್ಚುಗೆಯಿಂದ ಜನ ಎಲೀಟುಗಳಿಗೆ ಮನ್ನಣೆ ಒದಗಿಸಿದರು. ಸಾಮರ್ಥ್ಯ ಮತ್ತು ಪ್ರತಿಭೆಯನ್ನಾಧರಿಸಿದ ಅವರ ಪ್ರತಿಷ್ಠೆಯ ಗುಣಗಳು ಸಾಮಾಜಿಕವಾಗಿ ಪ್ರಯೋಜನಕಾರಿಯೆಂದು ಜನಪ್ರಿಯವಾಗಿ ಗುರುತಿಸಲ್ಪಟ್ಟಿತ್ತು. ಇವು ರಾಜಕೀಯ ಶೋಧ, ರಾಷ್ಟ್ರೀಯ ವಿಷಯಗಳ ಹುಡುಕಾಟ ಮತ್ತು ಸಾಮಾಜಿಕ ಅಗತ್ಯದ ನೆಲೆಯನ್ನು ಅವಲಂಬಿಸಿತ್ತು. ಹಾಗಾಗಿ ಪರಸ್ಪರ ಆಸಕ್ತಿ ಮತ್ತು ಹುರಿದುಂಬಿಸುವಿಕೆಯಿಂದ ಗಳಿಸಲ್ಪಟ್ಟ ಪ್ರತಿಷ್ಠೆ ಎಲ್ಲ ಸಾಮಾಜಿಕ ಸ್ತರದಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿತು. ಕೆಲವೊಮ್ಮೆ ಪ್ರಮುಖವಾಗಿ ಬುರ್ಶ್ವಾವೆಂದೆನಿಸಿದರೂ ಜನರ ಸಾಮಾಜಿಕ ಪ್ರಜ್ಞೆ ಮತ್ತು ಸಮಾಜಕ್ಕೆ ಒಂದು ಪುರೋಗಾಮಿ ಪರಿವರ್ತನೆಯ ವಿಷಯ ಸೂಚಿಗೆ ಆಧಾರವೆನಿಸುವ ಸಹಮತದ ಬದಲಾವಣೆಯ ಒಂದು ದೃಷ್ಟಿಕೋನವನ್ನು ಎಲೀಟು ಪ್ರತಿಪಾದಿಸಿತು. ಸ್ವಾತಂತ್ರ‍್ಯ ನಂತರದಲ್ಲಿ ಕೆಲ ದಶಕಗಳ ಸಮಾಜೋ ಆರ್ಥಿಕ ಬದಲಾವಣೆಗಳ ಅನುಭವದೊಂದಿಗೆ ಸಹಮತವು ನಿಧಾನವಾಗಿ ಮತ್ತು ಅಸದೃಶ್ಯವಾಗಿ ಮರೆಯಾಗತೊಡಗಿತು. ಜನಸಾಮಾನ್ಯರಲ್ಲಿ ವಿಶ್ವಾಸದ ಸೂಕ್ಷ್ಮತೆ ಸಡಿಲಗೊಳ್ಳಲು ಪ್ರಾರಂಭವಾಗಿ ಎಲೀಟು ಮತ್ತು ಜನರಲ್ಲೂ ಸಾದೃಶ್ಯವಾದ ಕಂದರ ಕಂಡುಬರತೊಡಗಿತು.

ಭಾರತವು ಒಂದು ವಿಫಲ ದೇಶವಾಗಿ ಗ್ರಹಿಸಲು ಪ್ರಾರಂಭಗೊಂಡು ಅನುಕಂಪದ ಉಪಸ್ಥಿತಿ ಮರೆಯಾಗಿ ನಿರಾಸೆ ಎದ್ದುಕಾಣಿಸತೊಡಗಿತು. ೧೯೬೦ರ ಉತ್ತರಾರ್ಧ ಭಾಗ ಮತ್ತು ೭೦ರಲ್ಲಿನ ಜನಾಭಿಪ್ರಾಯದ ಬದಲಾವಣೆ ಸ್ವರೂಪದ ಹಿನ್ನೆಲೆಯಲ್ಲಿ ಈ ವಿಶ್ವಾಸ ಕೊರತೆಯನ್ನು ಗಮನಿಸಬಹುದು. ಆದರೂ ೧೯೮೦ರ ಕೊನೆಗೆ ಈ ಬಿರುಕು ಸಂಪೂರ್ಣಗೊಂಡು ರಾಜಕೀಯ ಸಂಘರ್ಷಕ್ಕೆ ಮೂಲ ಕಾರಣವಾಯಿತು. ಇದು ಇಂದಿನ ಸಂಘರ್ಷದಂತಲ್ಲ. ಅಧಿಕಾರದ ಚಲಾವಣೆ ಮತ್ತು ಅಭಿವೃದ್ಧಿಯ ತಂತ್ರಗಳ ಬಗೆಗೆ ಹಿಂದೆ ಎಲೀಟುಗಳೊಳಗೆ ಸಂಘರ್ಷಗಳು ನಡೆದು ಪ್ರಾತಿನಿಧ್ಯ ಮಾದರಿ ಇಲ್ಲವೇ ಅಭಿವೃದ್ಧಿ ಪಥದ ಬಗೆಗೆ ಇವು ಆಸಕ್ತಿಯನ್ನು ಹೊಂದಿಲ್ಲ. ಸಮಕಾಲೀನ ಸಂಘರ್ಷದಲ್ಲಿ ದಮನಿತರೊಳಗೆ ಒಟ್ಟು ಗದ್ದಲವೇರ‍್ಪಡುವಂತೆ ಎಲೀಟು ವ್ಯೂಹ ನಡೆಸುತ್ತಿದೆ. ಸ್ವಾತಂತ್ರ‍್ಯ ಸಂದರ್ಭದ ಮೊದಲ ದಶಕದಲ್ಲಿದ್ದಂಥ ಸಹಮತದ ಮಾದರಿ ಮುರಿದುಬಿದ್ದಿದೆ.

ಮಂಡಲ್ ವರದಿ ಶಿಫಾರಸ್ಸಿನ ವಿರುದ್ಧದ ಚಳವಳಿ ಮತ್ತದರ ಅನುಷ್ಠಾನ ತಡೆಯಲು ನಡೆದ ದೊಂಬಿಯಿಂದಾಗಿ ಜನಸಾಮಾನ್ಯರು ಎಲೀಟುಗಳೆಡೆಗೆ ಇದ್ದಂತಹ ಆಂಶಿಕ ಮೆಚ್ಚಿಗೆಯನ್ನು ಕೈಬಿಟ್ಟರು. ಎಲೀಟುಗಳು ತಮ್ಮನ್ನು ಪ್ರತಿನಿಧಿಸುವರು ಎಂಬುದನ್ನು ಒಪ್ಪಲು ಜನ ನಿರಾಕರಿಸಿದರು. ರೂಪುಗೊಳ್ಳುತ್ತಿರುವ ಮಧ್ಯಮವರ್ಗ ತನ್ನನ್ನು ಪ್ರತಿನಿಧಿಸಲು ಮತ್ತು ಸಬಲೀಕರಣಗಳು ಕೆಲವೊಮ್ಮೆ ಪ್ರತಿಭೆಯ ಆಯುಧದಿಂದ ಜನಸಾಮಾನ್ಯರೊಡನೆ ತಿರುಗಿ ಹೋರಾಟಕ್ಕಿಳಿಯುವಂತಾಯಿತು. ಅವರು ಅಂದುಕೊಂಡಂತೆ ತಮಗಾಗಿ ಹೋರಾಟದ ಬದಲು ಸಾಮಾಜಿಕ ವ್ಯವಸ್ಥೆಯ ಮೌಲ್ಯಗಳ ಸಂರಕ್ಷಣೆಗೆ, ರಾಜಕೀಯ ಸಭ್ಯತೆ ಮತ್ತು ಸ್ಥಿರತೆಗೆ ಅವರು ಹೋರಾಡುತ್ತಿದ್ದರು.

ಎರಡು ರೀತಿಯ ಬೇರ್ಪಡುವಿಕೆ ಉಂಟಾಯಿತು. ಸಾಮಾಜಿಕ ಅಗತ್ಯ ಮತ್ತು ಕನಿಷ್ಠವಾಗಿ ಒಪ್ಪತಕ್ಕ ಸಾಮಾನ್ಯ ಹಿತಾಸಕ್ತಿಯಿಂದ ಬೇರ್ಪಟ್ಟು ಪ್ರತಿಭೆ ಒಬ್ಬನ ಸಾಮರ್ಥ್ಯಕ್ಕೆ ಅಂಗೀಕಾರ ನೀಡುವ ಸ್ವಯಂ ಗುಣಲಕ್ಷಣವಾಯಿತು. ಪ್ರತಿಭೆ ಪರಸ್ಪರ ನಿರೀಕ್ಷೆಗಳ ಸಾಮಾಜಿಕ ವಿನಿಮಯದ ಆಧಾರದಲ್ಲಿರುವಂತಾಯಿತು. ಆದರೆ ಪ್ರತಿಭೆಯ ವ್ಯಾಖ್ಯೆಯನ್ನು ಕಸಿಯಲಾಯಿತು. ಬೂರ್ಶ್ವಾದೊಳಗೂ ಸಾಮಾಜಿಕ ಕಳಕಳಿಯ ಕೆಲ ಕರಾರಿನಿಂದ ಪ್ರತಿಭೆ ಪ್ರತ್ಯೇಕಿಸಲ್ಪಟ್ಟಾಗ, ಜನಾಭಿಪ್ರಾಯಕ್ಕೆ ವಿರುದ್ಧವಾದರೂ ಪ್ರತಿಭೆ ಒಬ್ಬನ ಅಂತಸ್ತು ಮತ್ತು ಸಮಾಜದಲ್ಲಿನ ಸ್ಥಾನಮಾನವನ್ನು ನಿರೂಪಿಸುವಂತಾಯಿತು. ೧೯೮೦ರ ಕೊನೆ ಭಾಗದಿಂದ ಭಾರತದಲ್ಲಿ ಈ ಸ್ಥಿತಿ ಮುಂದುವರಿಯುತ್ತಿದೆ. ಸ್ಥಾಪಿತ ಮಧ್ಯಮವರ್ಗ, ಎಲೀಟುಗಳು ಈಗ ಸೌಲಭ್ಯ ಹೊಂದಿದವರಾಗಿದ್ದು ಒಂದು ಸ್ವಯಂ ಆಳ್ವಿಕೆಯಂತಾಗಿದ್ದಾರೆ. ಮಂಡಲದಿಂದುಂಟಾದ ಕಂದರವು ಜಾಗತೀಕರಣದಿಂದ ಮತ್ತಷ್ಟು ತೀವ್ರಗೊಂಡಿತು. ಆಡಳಿತಶಾಹಿ, ಕಾರ್ಪೋರೇಟ್ ಮತ್ತು ಮಾಧ್ಯಮ ಮುಂತಾದವುಗಳ ಮೂಲಕ ಈ ಸೌಲಭ್ಯವಂತರು ಕಾರ್ಯವೆಸಗುತ್ತಿರುವರು. ಮತ್ತು ಈ ಹಂತದಲ್ಲಿ ಎಲೀಟುಗಳು ಬಹಳ ಸುರಕ್ಷಿತವಾಗಿ ನೆಲೆಕಂಡು ಇನ್ನಿತರ ಸಮಾಜದಲ್ಲಿ ಅವರು ಇದ್ದಾರೆಯೇ ಎನ್ನುವಷ್ಟರ ಮಟ್ಟಿಗೆ ಸುರಕ್ಷಿತವಾಗಿದ್ದರು.

ಮಂಡಲ್ ವರದಿಯ ಆಂಶಿಕ ಅನುಷ್ಠಾನದಿಂದ ಎಲೀಟು ವಿವಿಧ ಪಕ್ಷಗಳಿಂದ ಹೊರಬಂದು ಬಿಜೆಪಿಯೆಡೆಗೆ ವಾಲಿತು. ಈ ರೀತಿ ಅಂದುಕೊಳ್ಳುವುದು ಅಂತಿಮವೇನಲ್ಲ. ಅದು ತನ್ನನ್ನು ರಕ್ಷಿಸಿಕೊಳ್ಳಲು ಭ್ರಮಿನಿರಸನದಿಂದ ತಕ್ಷಣದಲ್ಲಿ ರಾಜಿಗಿಳಿಯಿತು. ಬಿಜೆಪಿಯ ಸಾಮಾಜಿಕ ಸ್ವರೂಪವು ಅದರ ವರ್ಗಸ್ವರೂಪಕ್ಕಿಂತ ಭಿನ್ನವಾದುದದರಿಂದ ಬಹಳಷ್ಟು ಬದಲಾವಣೆ ನಡೆದಿದೆ. ವ್ಯಾಪಾರಿ ಮರೆಯಲ್ಲಿನ ಸಣ್ಣ ಬೂರ್ಶ್ವಾಗಳಿಂದ ಅದು ಪ್ರಬಲವರ್ಗದವರ ಪ್ರಾತಿನಿಧಿಕ ಪಕ್ಷವಾಗಿ ಆಳುವ ವರ್ಗವನ್ನು ಆವರಿಸಿಕೊಂಡಿದೆ.

ಬಲಪಂಥೀಯ ಹಿಂದು ರಾಷ್ಟ್ರೀಯತೆ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ರಚನೆಯ ಆಳುವ ವರ್ಗ ಮತ್ತು ರಾಜಕೀಯ ಅಧಿಕಾರದ ಸಾಮಾಜಿಕ ನೆಲೆಗಳೊಳಗೆ ಹೊಸ ಒಪ್ಪಂದದ ಸಾಕಾರಕ್ಕೆ ಅನುವು ಮಾಡಿರುವುದು ಒಂದು ಲಕ್ಷಣವಾಗಿದೆ. ಇವೆರಡೂ ಒಂದೇ ತೆರನಾಗಿಲ್ಲ. ಇದನ್ನು ಚುನಾವಣೆ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ಅಧಿಕಾರದ ಮೂಲಗಳನ್ನು ಉತ್ಪಾದನಾ ಶಕ್ತಿಗಳ ನೆಲೆಯಲ್ಲಿ ಆಳುವ ವರ್ಗದ ಅಧಿಕಾರದ ಮೂಲ ನೆಲೆ(ಉತ್ಪಾದನಾ ಸಂಬಂಧ)ಗಳ ಹಿನ್ನೆಲೆಯಲ್ಲಿ ಪರಿಗಣಿಸಬಹುದು. ಆಳುವ ವರ್ಗದ ಬೂರ್ಶ್ವಾಹಿತಾಸಕ್ತಿಗಳು ಸಮಾಜದಲ್ಲಿನ ಬೂರ್ಶ್ವಾಹಿತಾಸಕ್ತಿಗಳಾಗಿ ೯೦ರ ನಂತರ ಒಂದು ಏಕತೆಯನ್ನು ತರುವಂತಹ ರಾಜಕೀಯ ಶಕ್ತಿಯಾಗಿ ಮಾರ್ಪಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ದೇಶದ ರಾಜಕೀಯ ಪ್ರಕ್ರಿಯೆ ಮೇಲೆ ಛಾಪ ಬೀರಬಲ್ಲುದು.

ಬಂಡವಾಳದ ಹರಿವಿನಿಂದಾಗಿ ಬೂರ್ಶ್ವಾ ಆಶೋತ್ತರವು ವ್ಯಾಪಾಕಗೊಳ್ಳುತ್ತ ನಗರ ಮತ್ತು ಗ್ರಾಮೀಣ ಮೇಲ್ವರ್ಗವನ್ನು ಆವರಿಸುತ್ತಿದೆ. ಇದರಲ್ಲಿ ವೃತ್ತಿಪರರು, ಉದ್ಯೋಗಿಗಳು ಮತ್ತಿತರ ಗುಂಪುಗಳನ್ನು ಕಾಣಬಹುದು. ಮಧ್ಯಮವರ್ಗ ಮತ್ತು ಬೂರ್ಶ್ವಾದ ತೋರಿಕೆ ಮತ್ತು ಸಾಮಾಜಿಕ ಒಲವುಗಳಲ್ಲಿ ಒಂದು ರೀತಿಯ ಹತ್ತಿರದ ಸಂಬಂಧವನ್ನು ಭಾರತೀಯ ಸಾಮಾಜಿಕ ರಚನೆಯನ್ನು ಪ್ರಮುಖವಾಗಿ ಕಾಣಬಹುದು. ಇದರಲ್ಲಿ ವಿಮರ್ಶಾತ್ಮಕ ಬುದ್ಧಿಜೀವಿಗಳನ್ನು ಹೊರತುಪಡಿಸಬಹುದು. ಈ ಬಂಧುತ್ವ ಮೊದಲಿನಿಂದಲೇ ಚಾಲ್ತಿಯಲ್ಲಿದೆ ಮತ್ತು ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿಯೇ ಇದು ಸ್ಪಷ್ಟವಾಗಿತ್ತು ಮತ್ತು ಸ್ವಾತಂತ್ರ‍್ಯನಂತರ ದಿನಗಳಲ್ಲಿ ನಮ್ಮ ಪ್ರಜಾಪ್ರಭುತ್ವಕ್ಕೆ ಹಾಸು ಹೊದಿಕೆಯಾಯಿತು.

ಒಂದು ಸ್ಥಿರವಾದ ಆಳುವ ವರ್ಗದ ಪ್ರತ್ಯೇಕ ಅಸ್ತಿತ್ವದಲ್ಲಿ ಐಹಿಕ ಹಿತಾಸಕ್ತಿ ಅಥವಾ ಒಬ್ಬನ ಅಂತಸ್ತಿನ ವರ್ಗದ ಇರುವಿಕೆಯ ಸ್ಥಾನಮಾನದ ಜೊತೆಗೆ ಆಕಾಂಕ್ಷೆ ಕೂಡ ಮಹತ್ವದ್ದು. ಯಾಕೆಂದರೆ ಆಕಾಂಕ್ಷೆಯು ಆಳುವ ವರ್ಗದ ಲೋಕದೃಷ್ಟಿಯ ವಿಲೀನಕ್ಕೆ ಸಹಕಾರಿಯಾದುದು. ಈ ಅಂತರ್ಗತವಾಗುವಿಕೆ ವ್ಯಾಪಕವಾಗಿರುವುವಾದರೂ ಇದು ಬೂರ್ಶ್ವಾದ ಯಜಮಾನಿಕೆಯ ಅಸ್ತಿತ್ವಕ್ಕೆ ಮೂರು ಕಾರಣಗಳಿಂದಾಗಿ ಯಶಸ್ವಿಯಾಗಿಲ್ಲ. ೧. ಇಲ್ಲಿನ ಬಂಡವಾಳ ಶಾಹಿಗಳ ಸ್ವರೂಪ ಮತ್ತು ಆರ್ಥಿಕತೆಯ ಹಿಂಬೀಳಿಕೆಯಿಂದ ಈ ಅಂತರ್ಗತದ ವ್ಯಾಪಕತೆ ಹೆಚ್ಚಿಲ್ಲ. ೨. ಆಧುನಿಕ ಪೂರ್ವದ ರೀತಿಯ ವಿಚಾರಧಾರೆಯ ವ್ಯಾಪಕ ಉಳಿಕೆಯು ಸಮಾಜದ ಹೆಚ್ಚಿನ ಜನವರ್ಗವು ಮೇಲೆ ಪ್ರಬಲ ಪರಿಣಾಮ ಬೀರಿರುವುದು. ಯಾಕೆಂದರೆ ಭೂಮಾಲೀಕತ್ವವು ಈಗಲೂ ವ್ಯಾಪಕವಾಗಿದ್ದು, ಇದರ ಪ್ರಣಾಳಿಕೆಯ ಮುಂದುವರಿಕೆಗೆ ಬೇಕಾದ ಐಹಿಕ ಸುಸ್ಥಿತಿಯನ್ನು ವ್ಯಾಪಾರಿ ಬಂಡವಾಳವು ಒಗದಿಸುವುದು. ೩. ಒಬಿಸಿ ಮತ್ತು ದಲಿತರಂಥ ನಿಮ್ನ ವರ್ಗಗಳಿಂದ ಹೊಸ ಮಧ್ಯಮವರ್ಗಗಳು ರೂಪುಗೊಳ್ಳುತ್ತಿರುವುದು ಮತ್ತು ಈಗಾಗಲೇ ಸ್ಥಾಪಿತವಾಗಿರುವ ಮಧ್ಯಮವರ್ಗದ ಹಿತಾಸಕ್ತಿಗೆ ವಿರುದ್ಧವಾದ ಮೀಸಲಾತಿ ಮನೋಭಾವವನ್ನು ಇದು ಹೊಂದಿರುವುದು. ಹಾಗಾಗಿ ಮಂಡಲ್ ಜಾರಿ ನಂತರ ಇವೆರಡರ ಮಧ್ಯದ ಸಂಘರ್ಷ ನಿರಂತರ ಇರುವಂತಾಗಿದೆ. ಈ ರೀತಿಯ ಆಕಾಂಕ್ಷೆಯ ಅಂತರ್ಗತದ ಪ್ರಕ್ರಿಯೆಯ ಇಲ್ಲಿನ ಮಧ್ಯಮವರ್ಗದ ವಿಶಿಷ್ಟಯೆನಿಸಿದೆ. ಜಾಗತೀಕರಣದ ಹೊಸ ಉದಾರವಾದಿ ವಿಧಾನದಿಂದ ಇದು ಇನ್ನಷ್ಟು ವ್ಯಕ್ತಗೊಳ್ಳುತ್ತಲಿದೆ. ಮಂಡಲ್ ನಂತರದಲ್ಲಿ ಈ ಜನವರ್ಗಗಳು ಇತ್ತೀಚೆಗೆ ಹೆಚ್ಚಾಗಿ ಬಿಜೆಪಿಯೆಡೆಗೆ ಸೇರಿಕೊಂಡಿರುತ್ತಾರೆ.

ಬಿಜೆಪಿಯ ಪೂರ್ವಾಶ್ರಮವೆನಿಸಿದ ಜನಸಂಘವು ಯಾವತ್ತೂ ಮೇಲ್ಜಾತಿಗಳ ಪಕ್ಷವಾಗಿದ್ದುದು ಎಲ್ಲರಿಗೂ ತಿಳಿದ ವಿಷಯವೇ. ಮತ್ತದರ ಬೆಂಬಲದ ನೆಲೆ ಹೆಚ್ಚಾಗಿ ಬ್ರಾಹ್ಮಣವರ್ಗದಿಂದ ಕೂಡಿತ್ತು. ಬನಿಯ ಸಮುದಾಯದಿಂದಲೂ ಅದಕ್ಕೆ ವ್ಯಾಪಕ ಬೆಂಬಲವಿದ್ದು ವ್ಯಾಪಾರಿಗಳ ಪಕ್ಷವೆನ್ನುವಷ್ಟರ ಮಟ್ಟಿಗೆ ಪ್ರಚಲಿತವಾಗಿತ್ತು. ಬಂಡವಾಳ ಪೂರ್ವದ ಸ್ವಭಾವ ಮತ್ತು ಮಟ್ಟವನ್ನು ಹೋಲುವ ಒಂದು ಬಂಡವಾಳ ಹಿತಾಸಕ್ತಿಯು ಅದರ ಸಂಘಟನಾ ಸಾಮರ್ಥ್ಯದ ಆಧಾರವಾಗಿತ್ತು. ಕಡಿಮೆ ಶಿಕ್ಷಿತ ಮತ್ತು ನಗರ ಪ್ರದೇಶಗಳಲ್ಲಿನ ಸಣ್ಣ ಆದಾಯ ಗುಂಪುಗಳಂತಹ ಹಿಂದುಳಿದ ಸಣ್ಣ ಬೂರ್ಶ್ವಾಗಳು ಹೆಚ್ಚಾಗಿ ಇದರ ಬೆಂಬಲಿಗರಾಗಿದ್ದರು. ೧೯೭೭ರಲ್ಲಿ ತುರ್ತು ಪರಿಸ್ಥಿತಿ ನಂತರ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರೂಪುಗೊಂಡ ಬಳಿಕ ಈ ಸಂರಚನೆಯಲ್ಲಿ ಬದಲಾವಣೆ ಉಂಟಾಯಿತು. ಪ್ರಜಾಪ್ರಭುತ್ವದ ಉಳಿವಿನ ಹೋರಾಟಕ್ಕೆ ವ್ಯಾಪಕವಾದ ವೇದಿಕೆಯಂತೆ ಕಾರ್ಯವೆಸಗಿದುದರಿಂದ ಸಮಾಜದ ವಿಭಿನ್ನ ವರ್ಗಗಳಿಂದ ಜನಸಂಘವು ಅತಿಯಾದ ಗೌರವಕ್ಕೆ ಪಾತ್ರವಾಯಿತು. ಆದರೆ ನಂತರದಲ್ಲಿ ಮಂಡಲ ವಿರೋಧಿ ಚಳವಳಿಯ ಸಂದರ್ಭದಲ್ಲಿನ ನಾಟಕೀಯ ಬದಲಾವಣೆಯು ರಾಮಮಂದಿರದಂತಹ ತೀವ್ರವಾದ ಆಂದೋಲನಕ್ಕೆ ದಾರಿ ಮಾಡಿತು.

ಬಿಜಿಪಿಯು ಹೆಚ್ಚಾಗಿ ಬ್ರಾಹ್ಮಣ ಬೆಂಬಲಿತ ಪಕ್ಷವಾಗಿ ಮಂಡಲ ವಿರೋಧಿ ಚಳವಳಿಗೆ ಮೊದಲು ಹೆಚ್ಚು ವ್ಯಾಪಕವಾಗಿದ್ದರೂ, ಅದು ಎಲ್ಲ ಜಾತಿಗಳಲ್ಲೂ ತನ್ನ ಬೆಂಬಲವನ್ನು ವಿಸ್ತರಿಸಿತು. ಈ ಹೆಚ್ಚಳವು ಈ ಜಾತಿಗಳೊಳಗಿನ ವಿವಿಧ ಸ್ತರಗಳಲ್ಲಿನ ಆದಾಯ ಮಟ್ಟಕ್ಕೆ ಸಂಬಂಧಿಸಿದೆ. ಇದನ್ನು ೧೯೯೬ರ ಸಂಸದೀಯ ಚುನಾವಣೆಗಳ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಗಮನಿಸಬಹುದು. ೧೯೯೮ ಮತ್ತು ೧೯೯೯ರ ಚುನಾವಣೆಗಳೆರಡರಲ್ಲೂ ಕೆಲವೊಂದು ಭಿನ್ನತೆಗಳಿದ್ದರೂ ಹೆಚ್ಚಿನ ಬದಲಾವಣೆಯ ಚಿತ್ರಣವುಂಟಾಗಿಲ್ಲ. ೧೯೯೬ರಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತು. ಶಿವಸೇನೆ ಬಿಟ್ಟರೆ ಅದಕ್ಕೆ ಯಾವುದೇ ಮೈತ್ರಿಯಿರಲಿಲ್ಲ. ೧೯೯೮ ಮತ್ತು ೧೯೯೯ರ ಎರಡೂ ಚುನಾವಣೆಗಳಲ್ಲೂ ಬಿಜೆಪಿ ಬಹಳಷ್ಟು ಸಂಖ್ಯೆಯ ಮೈತ್ರಿಗಳ ಜೊತೆಗೂಡಿ ಸ್ಪರ್ಧಿಸಿತು. ಮತ್ತವು ೧೩ರಿಂದ ೨೪ರಷ್ಟಿತ್ತು. ಹಾಗೂ ಹೆಚ್ಚಾಗಿ ಅವೆಲ್ಲ ಹಿಂದಿನ ಜಾತ್ಯತೀತ ರಂಗದವು. ಇದರಲ್ಲಿ ಬಿಜೆಪಿಯ ಗಳಿಕೆ ಬೇರೆ ಪಕ್ಷಗಳ ಗಳಿಕೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯ. ಹತ್ತಿರದ ಬೆಂಬಲಿತ ಗುಂಪುಗಳ ವಿಭಿನ್ನ ರಾಜಕೀಯ ಪ್ರಭಾವಕ್ಕೆ ಸಂಬಂಧಿಸಿದಂತೆ ಮತದಾರರ ಒಲವುಗಳನ್ನು ಸೂಕ್ಷ್ಮವಾಗಿ ನೋಡಲು ಇದು ಸಕಾಲಿಕವಲ್ಲ.

ಹೀಗಾಗಿ ಇತರ ಯಾವುದೇ ಅಂಶಗಳಿಂದ ಅಬಾಧಿತವಾಗದೆ ಬಿಜೆಪಿ ಹೇಗೆ ಪ್ರವರ್ಧಮಾನವಾಯಿತೆಂಬುದನ್ನು ೧೯೯೬ರ ಚುನಾವಣಾ ಫಲಿತಾಂಶದಿಂದ ನೋಡಬಹುದು. ಇದನ್ನು ದಲಿತರಿಂದ ಮೊದಲಾಗಿ ಪರಿಶೀಲಿಸೋಣ. ದಲಿತರು ಬಹಳಷ್ಟು ತುಳಿತಕ್ಕೊಳಗಾದವರು ಮತ್ತು ಅವರಲ್ಲಿ ಬಿಜೆಪಿಗೆ ಬೆಂಬಲ ಕಡಿಮೆಯಿರುವುದು, ಅದರಲ್ಲೂ ಬಡ ದಲಿತರಲ್ಲಿ ಕೇವಲ ಶೇಕಡ ೧೦.೦೭ರಷ್ಟು ಮಂದಿ ಬಿಜೆಪಿಗೆ ಮತವಿತ್ತರು. ಆದರೆ ಅವರ ಮತದ ಪಾಲು ಶೇಕಡ ೧೯ರಷ್ಟು ಏರಿಕೆಯಾಯಿತು. ಅದೇ ಅವರ ಮಧ್ಯಮ ಹಂತದ ಗುಂಪಿನ ಪಾಲು ಶೇಕಡ ೨೫.೩ರಷ್ಟಾದರೆ ಅಂತಿಮವಾಗಿ ಶ್ರೀಮಂತ ದಲಿತರ ಸಣ್ಣ ಗುಂಪಿನ ಪಾಲು ಶೇಕಡ ೪೦.೮ಕ್ಕೆ ಏರಿಕೆಯಾಯಿತು. ಈ ಶ್ರೀಮಂತರೆಂದರೆ ಉದ್ಯೋಗಿಗಳೆಂದು ತಿಳಿಯಬಹುದು. ಯಾಕೆಂದರೆ ಇವರಲ್ಲಿ ಬೂರ್ಶ್ವಾಗಳು ಇಲ್ಲವೇ ಗ್ರಾಮೀಣ ಭಾಗದಲ್ಲಿರುವ ಶ್ರೀಮಂತರು ಇರುವುದು ವಿರಳ.

ಆದಿವಾಸಿಗಳ ವಿಚಾರಕ್ಕೆ ಬಂದರೆ ಅತೀ ಬಡವರು ಶೇಕಡ ೧೯, ಬಡವರು ಶೇಕಡ ೨೫.೨ರಷ್ಟು ಮತ್ತು ಶೇಕಡ ೨೪.೭ರಷ್ಟು ಮಧ್ಯಮ ಹಂತದ ಗುಂಪು ಬಿಜೆಪಿಗೆ ಮತ ಹಾಕಿದೆ. ಹಾಗೆಯೇ ಇವರಲ್ಲಿ ಸಣ್ಣ ಶ್ರಿಮಂತ ಗುಂಪುಗಳ ಪಾಲು ಶೇಕಡ ೪೩.೫ಕ್ಕೆ ಏರಿದೆ. ಆದಾಯಮಟ್ಟ ಕೇವಲ ಸಾಮಾಜಿಕ ಇರುವಿಕೆಯ ಸೂಚಿ ಮಾತ್ರವಲ್ಲ ಅದು ಉತ್ತೇಜಿಸುವ ಆಕಾಂಕ್ಷೆಯ ವಿಧವನ್ನು ತೋರಿಸುತ್ತದೆ. ಇದು ಏನನ್ನು ತೋರಿಸುತ್ತದೆಯೆಂದರೆ ಸಮಾಜದಲ್ಲಿ ತುಳಿತಕ್ಕೊಳಗಾದ ನಿಮ್ನ ವರ್ಗಗಳಲ್ಲೂ ಸಾಪೇಕ್ಷವಾಗಿ ಅನುಕೂಲಸ್ಥರು ರಾಜಕೀಯ ಇಚ್ಛೆಯ ನಿರ್ಧಾರಕರಾಗುತ್ತಾರೆ.

ಇತರ ಜಾತಿ ಗುಂಪುಗಳತ್ತ ಹಾಯಿಸಿದರೂ ಇದೇ ಮಾದರಿಯನ್ನು ಕಾಣಬಹುದು ಮತ್ತು ಇದು ಬಹಳ ನಿಖರವಾಗಿದೆ. ಒಬಿಸಿಗಳಲ್ಲಿ ಶೇಕಡ ೨೩.೭ರಷ್ಟು ಅತಿಬಡವರು, ಶೇಕಡ, ೨೬.೫ರಷ್ಟು ಬಡವರು ಬಿಜೆಪಿಗೆ ಮತ ಹಾಕಿದ್ದಾರೆ. ಶೇಕಡ ೩೦.೬ರಷ್ಟು ಮಧ್ಯಮ ಹಂತದವರು ಮತ್ತು ಶೇಕಡ ೩೪.೯ರಷ್ಟು ಶ್ರೀಮಂತರು ಮತ ಹಾಕುವ ಮೂಲಕ ಇದು ಇನ್ನಷ್ಟು ಏರುತ್ತಲಿದೆ. ಮೇಲ್ಜಾತಿಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಿ ವ್ಯಕ್ತವಾಗುತ್ತಲಿದೆ. ಕೇವಲ ಶೇಕಡ, ೨೯.೨ರಷ್ಟು ಅತೀ ಬಡವರು ಇಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಬಿಜೆಪಿಗೆ ಹೆಚ್ಚಾಗಿ ಮೇಲ್ಜಾತಿಗಳ ಪಕ್ಷವಾದರೂ ಜಾತಿ ಕೆಲವು ಸಂದರ್ಭಗಳಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ನಿರ್ಧಾರಕವೆಂಬಂತೆ ಕಂಡು ಬರುವುದಿಲ್ಲ. ಮೇಲ್ಜಾತಿಗರಲ್ಲಿ ಶೇಕಡ ೪೫.೦೦ರಷ್ಟು ಬಡವರು, ಶೇಕಡ ೪೯.೦೦ರಷ್ಟು ಮಧ್ಯಮ ಹಂತದವರು ಮತ್ತು ಶೇಕಡ ೫೭.೦೨ರಷ್ಟು ಶ್ರೀಮಂತರು ಬಿಜೆಪಿಗೆ ಮತ ಹಾಕಿರುವುದು ಸ್ಪಷ್ಟವೆನಿಸುತ್ತದೆ.

ಇದು ಅಖಿಲ ಭಾರತ ಮಟ್ಟದ ಒಟ್ಟು ಚಿತ್ರಣವಾದರೆ ರಾಜ್ಯಗಳತ್ತ ದೃಷ್ಟಿ ಹಾಯಿಸಿದಾಗ ಬಹಳಷ್ಟು ಭಿನ್ನತೆ ಕಂಡುಬರುತ್ತದೆ. ಬಿಜೆಪಿಯು ಸಾಂಪ್ರದಾಯಿಕವಾಗಿ ಯಾವ ಪ್ರದೇಶದಲ್ಲಿ ಹೆಚ್ಚು ಬಲಯುತವಾಗಿತ್ತೋ ಮತ್ತು ಮಂಡಲ್ ವಿರೋಧಿ ಚಳವಳಿಯ ಪರಿಣಾಮ ಎಲ್ಲಿ ಹೆಚ್ಚು ಪ್ರಖರತೆ ಪಡೆದಿತ್ತೋ ಅಲ್ಲಿ ಮೇಲ್ಜಾತಿಗರ ಮತದಾನದ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಸ್ಥಾಪಿತ ಮಧ್ಯಮ ವರ್ಗದ ಸೌಲಭ್ಯಗಳ ಸಂರಕ್ಷಣೆಗೆ ತೀಕ್ಷ್ಣವಾದ ಹೋರಾಟ ನಡೆದಿದೆ. ಹಾಗೆಯೇ ಬಿಜೆಪಿಗೆ ಮತ ಹಾಕಿರುವ ವಿಭಿನ್ನ ಜಾತಿಗಳ ಶಿಕ್ಷಣದ ಮಟ್ಟವನ್ನು ಹೋಲಿಸಿದಾಗ ಅದು ನಮ್ಮ ಸಮಾಜದ ಶಿಕ್ಷಣ ಮಟ್ಟಕ್ಕೆ ಸಮಂಜಸವಾಗಿದೆ. ಅಂದರೆ ಅದು ಜನರ ಜೀವನ ಮಟ್ಟವನ್ನು ಅವಲಂಬಿಸಿದೆ.

ಸಮುದಾಯದ ಮತದಾನವು ಜನರ ಜೀವನಮಟ್ಟವನ್ನು ಅವಲಂಭಿಸಿರುವ ಮಾದರಿಗೆ ವಿಭಿನ್ನವಾಗಿ ಮುಸ್ಲಿಮರು ಕಂಡುಬರುತ್ತಾರೆ. ಬಿಜೆಪಿಗೆ ಅವರ ಮತದಾನವು ಏಕರೂಪಿಯಾಗಿ ಕಡಿಮೆಯಿದೆ ಮತ್ತು ಈ ಭಿನ್ನತೆ ಕೂಡ ಮಹತ್ವದಲ್ಲ. ಶೇಕಡ ೨ರಷ್ಟು ಅತಿ ಬಡವರು. ಶೇಕಡ ೨.೯ರಷ್ಟು ಬಡವರು ಮತ್ತು ಶೇಕಡ ೩.೮ರಷ್ಟು ಮಧ್ಯಮ ಹಂತ ಮತ್ತು ಶೇಕಡ ೨.೧ರಷ್ಟು ಶ್ರೀಮಂತರು ಬಿಜೆಪಿಗೆ ಮತ ಹಾಕಿದ್ದಾರೆ. ಬಿಜೆಪಿಯ ಮುಸ್ಲಿಂ ವಿರುದ್ಧದ ರಾಷ್ಟ್ರೀಯ ಮನೋಭಾವ ಸ್ಪಷ್ಟವಾಗಿದೆ ಮತ್ತು ಯಾರಿಗಾದರೂ ತಿಳಿಯುವಂತದ್ದೆ.

೧೯೯೦ರಿಂದ ಬಿಜೆಪಿ ಗಣನೀಯವಾಗಿ ಬೆಳವಣಿಗೆ ಕಂಡಿದೆ. ಅದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿ ಸಮುದಾಯಗಳೊಂದಿಗೆ ಬೆಳೆದಿದೆ. ಸಮುದಾಯವಾರು ಅಂಕಿಅಂಶಗಳು ಎಲ್ಲಿ ಮತ್ತು ಹೇಗೆ ಬಿಜೆಪಿ ವೃದ್ಧಿಯಾಯಿತೆನ್ನುವುದು ದೃಢಪಡಿಸಬೇಕು. ಬಿಜೆಪಿ ಇವು ಕೇವಲ ಮೇಲ್ಜಾತಿಗೆ ಸೀಮಿತಗೊಂಡಿಲ್ಲವೆನ್ನುವುದನ್ನು ಇದು ತೋರಿಸುತ್ತದೆ. ದಮನಿತ ಜಾತಿಗಳಲ್ಲಿ ಸಾಪೇಕ್ಷವಾಗಿ ಅನುಕೂಲಸ್ಥರು ಕೂಡ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ವರ್ಗಗಳು ತುಲನಾತ್ಮಕವಾಗಿ ಸದಾ ಚಾಲನೆಯಲ್ಲಿದ್ದು ಯಶಸ್ಸು ಮತ್ತು ಸೌಲಭ್ಯವಾಗಿ ಹಂಬಲಿಸುತ್ತಿರುತ್ತದೆ. ಇವು ಇಂಗ್ಲಿಷ್ ಪ್ರಣೀತ ಎಲೀಟ್ ಗಳಂತೆ ತಮ್ಮನ್ನು ಸಿದ್ಧಗೊಳಿಸುತ್ತದೆ. ಬಿಜೆಪಿಯಲ್ಲಿ ತಮ್ಮ ಅಂತಸ್ತು ಉತ್ತಮಗೊಳ್ಳುವುದು ಮತ್ತು ತಮ್ಮ ಹಿತಾಸಕ್ತಿಗಳು ಸುರಕ್ಷಿತವಾಗಿರುವುದು ಎಂದು ತಿಳಿದಿರುತ್ತಾರೆ. ಈ ಜನಗಳ ವ್ಯಕ್ತಿಗತ ತೃಪ್ತಿಪಡಿಸುವಿಕೆಗೆ ಈ ಆಶಾಭಾವನೆ ಕಾರ್ಯಸಾಧುವಾಗಬಲ್ಲುದೆ ಎನ್ನುವುದು ಕಷ್ಟ. ಆದರೆ ಪ್ರಸ್ತುತ ಕ್ಷಣದಲ್ಲಿ ಬೂರ್ಶ್ವಾಪ್ರೇರಿತ ಆಳುವ ವರ್ಗದ ಹಿತಾಸಕ್ತಿಯನ್ನು ಪ್ರತಿನಿಧಿಸುವ ಒಂದು ವಿಭಾಗ ಪಕ್ಷದಲ್ಲಿ ಅಸ್ತಿತ್ವಗೊಂಡಿದೆ ಮತ್ತು ಇದು ಪ್ರಥಮ ಬಾರಿಗೆ ರೂಪುಗೊಂಡಿದೆ.

ಕಾಂಗ್ರೆಸ್ ಹಿಂದಿನಿಂದಲೂ ಆಳುವ ವರ್ಗದ ಪ್ರತೀಕವೆನಿಸಿದ್ದು ಹೆಚ್ಚಾಗಿ ದಲಿತರು, ಬಡವರು, ನಿಮ್ನ ವರ್ಗದವರು ಮತ್ತು ಶ್ರೀಮಂತರು ಮುಂತಾದ ವಿಭಿನ್ನ ಸಾಮಾಜಿಕ ಸಂರಚನೆಯ ಪ್ರಾತಿನಿಧ್ಯ ಹೊಂದಿತ್ತು. ಆದರೆ ಈಗ ಅದು ಹೆಚ್ಚಾಗಿ ಸೌಲಭ್ಯವಂಚಿತರ ಪಕ್ಷವಾಗಿ ಸೌಲಭ್ಯವಂತರು ಬಿಜೆಪಿ ಕಡೆಗೆ ಸಾಗುತ್ತಿದ್ದಾರೆ. ಮೇಲ್ಜಾತಿಗರು ಬಿಜೆಪಿ ಬೆಂಬಲಿಸಿದರೂ ಅವರಲ್ಲಿನ ಅತಿಬಡವರು ಬಿಜೆಪಿಗಿಂತಲೂ (ಶೇಕಡ ೨೯.೨ರಷ್ಟು), ಕಾಂಗ್ರೆಸ್ಸಿಗೆ (ಶೇಕಡ ೩೪.೫ರಷ್ಟು) ಹೆಚ್ಚು ಮತ ಹಾಕುತ್ತಾರೆ. ಈ ಮಾದರಿ ಯಾವುದೇ ಜಾತಿ ಸಮುದಾಯವನ್ನು ಪರಿಗಣಿಸಿದರೂ ಕಂಡುಬರುತ್ತದೆ.

ಮೇಲ್ಜಾತಿಗಳ ಶ್ರೀಮಂತರು ಕಾಂಗ್ರೆಸ್ ಗೆ ಮತ ಹಾಕುವುದು ತೀರಾ ಕಡಿಮೆಯಾಗಿದ್ದು ಶೇಕಡ ೨೬.೩ ಆದರೆ ಅದೇ ಬಿಜೆಪಿಗೆ ಶೇಕಡ  ೫೭.೨ರಷ್ಟಿದೆ. ಆಶ್ಚರ್ಯವೆಂದರೆ ದಲಿತರಲ್ಲಿನ ಶ್ರೀಮಂತರು ಕಾಂಗ್ರಸ್ ಗೆ ಹಾಕುವ ಮತ ಶೇಕಡ ೨೬.೫ರಷ್ಟಾದರೆ, ಬಿಜೆಪಿಗೆ ಶೇಕಡ ೪೦.೮ ಆಗಿರುತ್ತದೆ. ಅತಿಬಡವರು ಕಾಂಗ್ರೆಸ್ ಗೆ ಮತ ಹಾಕುವ ಪ್ರಮಾಣ ಕಾಲಾಂತರದಲ್ಲಿ ಹೆಚ್ಚಾಗಿದೆ. ಅದು ೧೯೯೬ರಲ್ಲಿ ಶೇಕಡ ೩೦.೧ ಇದ್ದದ್ದು ೧೯೯೯ಕ್ಕೆ ಶೇಕಡ ೩೬.೪ಕ್ಕೆ ಏರಿದೆ. ಈ ಅತಿಬಡವರ ಮತದಾನದ ಟ್ರೆಂಡನ್ನು ಅನಕ್ಷರಸ್ಥರ ಮತದಾನದೊಂದಿಗೆ ನಿಖರತೆಗಾಗಿ ತೂಗಿ ನೋಡೋಣ. ಅನಕ್ಷರಸ್ಥರು ೧೯೯೬ರಲ್ಲಿ ಶೇಕಡ ೨೯.೧ರಷ್ಟು ಕಾಂಗ್ರೆಸ್ ಗೆ ಮತ ನೀಡಿದರೆ ೧೯೯೯ಕ್ಕೆ ಅದು ಶೇಕಡ ೩೬.೬ಕ್ಕೆ ಏರಿದೆ. ಕಾಂಗ್ರೆಸ್ಸಿನ ಈ ಇಳಿಮುಖವನ್ನು ಸಂಪೂರ್ಣವಾಗಿ ಬಿಜೆಪಿಗೆ ಶ್ರೀಮಂತರ ಓಟಿನ ಹಿನ್ನೆಲೆಯಲ್ಲಿ ಎಂದು ವಿವರಿಸಲಾಗದು. ಅದು ಗಂಗಾ ತಟದ ಮುಸ್ಲಿಂ ಮತ್ತು ದಲಿತರ ಎಲ್ಲಾ ಗುಂಪುಗಳಲ್ಲೂ ಹೀನಾಯವಾಗಿ ಸೋಲು ಕಂಡಿತು. ಈ ಅವನತಿಗೆ ಬೇರೆ ಕಾರಣಗಳಿವೆ. ಆದರೂ ಕಾಂಗ್ರೆಸ್ ಆಳುವ ವರ್ಗಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವಾಗಲೂ ಒಂದು ವಿಭಾಗ ರಚಿಸರಲಿಲ್ಲವೆಂಬುದು ಬಹಳ ಸ್ಪಷ್ಟ. ಅದರ ಸಾಮಾಜಿಕ ನೆಲೆ ಮತ್ತದರೊಳಗಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಒಂದು ಪ್ರಬಲ ಮತ್ತು ಪರಿಣಾಮಕಾರಿಯಾದ ವರ್ಚಸ್ಸಿನ ನಾಯಕತ್ವದಿಂದಾಗಿ ಕಾಂಗ್ರೆಸ್ ನ ರಾಜಕೀಯ ಪುನಶ್ಚೇತನವು ಪರಿಣಾಮಕಾರಿಯಾಗದೆಂಬುದು ಕೂಡ ಸ್ಪಷ್ಟ. ಈ ಸಾಮಾಜಿಕ ಸಂರಚನೆಯ ವಿಸ್ತಾರತೆಗೆ ನೇರವಾಗಿ ಸ್ಪಂದಿಸಬಲ್ಲ ಒಂದು ವಿಭಿನ್ನ ನೀತಿ ಧೋರಣೆಯ ಪ್ಯಾಕೇಜ್ ಅಗತ್ಯವಿದೆ ಮತ್ತು ಅದು ಸ್ಪಷ್ಟವಾಗಿ, ಪ್ರಬಲವಾಗಿ ಜಾತ್ಯಾತೀತ ನಿಲುವನ್ನು ಪ್ರತಿಪಾದಿಸುವ ಮೂಲಕ ಅಲ್ಪಸಂಖ್ಯಾತರನ್ನು ಮರಳಿ ತರಬೇಕಿದೆ. ಒಂದು ನವಉದಾರವಾದಿ ಜಾಗತೀಕರಣದ ಪ್ಯಾಕೇಜ್ ಮಾತ್ರ ಕಾಂಗ್ರೆಸ್ಸಿನೊಂದಿಗೆ ನಂಬಿಕೆಯಿಟ್ಟಿರುವ ಅತಿಬಡವರನ್ನು ಪರಾಧೀನ ಅಥವಾ ವಿಚಲಿತಗೊಳಿಸಬಲ್ಲುದು.

ಆದರೆ ಬಿಜೆಪಿ ಸಂದರ್ಭದಲ್ಲಿ ಈ ರೀತಿಯ ಅಥವಾ ಇದಕ್ಕಿಂತ ಕಠಿಣವಾದ ಜನತಾವಿರೋಧಿ ಜಾಗತೀರಣದ ಪ್ಯಾಕೇಜು ಅದರ ಸಾಮಾಜಿಕ ಸಂರಚನೆಯನ್ನು ಸದ್ಯದ ಸ್ಥಿತಿಯಲ್ಲಿ ನಿಶ್ಚಿತವಾಗಿಯೂ ಅಲುಗಾಡಿಸದು. ಬಿಜೆಪಿಯ ಸಾಮಾಜಿಕ ಸಂರಚನೆ ತಪ್ಪಾಗಿಯಾದರೂ ಜಾಗತೀಕರಣವನ್ನು ಅವಶ್ಯವೆಂದು ಮತ್ತದರ ನೇರ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನೋಡುತ್ತದೆ. ಬಿಜೆಪಿ ಬೆಂಬಲಿತ ಮೈತ್ರಿಕೂಟದ ಆಳ್ವಿಕೆಯು ಒಂದು ವಿಶಿಷ್ಟವಾದ ಆಳುವ ವರ್ಗದ ವಿಭಾಗವಾಗಿದ್ದು ಇದು ಬೂರ್ಶ್ವಾ ನಾಯಕತ್ವ ಮತ್ತು ವಿಭಿನ್ನ ಸ್ತರಗಳ ಬೂರ್ಶ್ವಾ ಆಕಾಂಕ್ಷೆಯ ಏಕೀಕೃತವಾದ ಆಳುವ  ವರ್ಗದ ಹಿತಾಸಕ್ತಿಯಾಗಿದೆ. ಈ ಬೆಳವಣಿಗೆಯ ಪರಿಣಾಮಗಳು ಗುರುತರವಾಗಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ನ ವರ್ಗ ಸ್ವರೂಪವು ಪ್ರಮುಖವಾಗಿ ವಿಭಿನ್ನವಲ್ಲವಾದರೂ ಇವೆರಡು ಸರಕಾರದ ವರ್ಗ ಪರಿಣಾಮಕತೆ ವ್ಯಾಪಕವಾಗಿ ಕುಂಠಿತವಾಗುತ್ತಿದೆ. ಪಕ್ಷಾಧಾರಿತ ಹಿನ್ನೆಲೆಯ ಸಂಸದೀಯ ಆಡಳಿತದಲ್ಲಿ ಬೆಂಬಲದ ಸಾಮಾಜಿಕ ನೆಲೆಗಳು ಹೇಗೆ ರಚಿಸಲ್ಪಡುತ್ತವೆ ಎಂಬುದು ಮುಖ್ಯ. ಒಂದು ಸರಕಾರ ಹೊಂದಿರುವ ಸಾಮಾಜಿಕ ಬೆಂಬಲದ ಹಿನ್ನೆಲೆಯಲ್ಲಿ ಅದರ ರಾಜಕೀಯ ಪ್ರತಿಕ್ರಿಯೆ ಅಥವಾ ಜವಾಬ್ದಾರಿಯು ಆಂಶಿಕವಾಗಿ ನಿಯಂತ್ರಿಸಲ್ಪಡುತ್ತದೆ. ಈ ಬೆಂಬಲದ ಹಿಂತೆಗೆಯುವ ಬೆದರಿಕೆಯ ಹಿನ್ನೆಲೆಯಲ್ಲಿ ಪರಿಹಾರ ಮತ್ತು ಹಕ್ಕೊತ್ತಾಯ ಇತ್ಯಾದಿ ಜನಸತ್ತಾತ್ಮಕ ಆಂದೋಲನಗಳ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಬೆಂಬಲ ಕಳೆದುಕೊಳ್ಳುವ ಭಯದಿಂದ ಸರಕಾರಗಳು ಜನರ ಬೇಡಿಕೆಗಳಿಗೆ ಆಂಶಿಕವಾದ ಮನ್ನಣೆ ಒದಗಿಸುತ್ತದೆ. ಆದರೆ ಬಿಜೆಪಿ ಸಂದರ್ಭದಲ್ಲಿ ಮೊದಲಿಗೆ ಪ್ರಜಾಸತ್ತಾತ್ಮಕವಾಗಿ ಸಾಮಾನ್ಯರನ್ನೊಳಗೊಂಡ ಸಮಾಜ ಅಥವಾ ಭಾಗದ ಬೆಂಬಲವಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಗೆ ತುಲನೆ ಮಾಡಿದಲ್ಲಿ ಅದು ಪ್ರಜಾಸತ್ತಾತ್ಮಕ ಬೇಡಿಕೆಗಳಿಂದ ಹೆಚ್ಚು ಬಾಧಿತವಾಗುವುದಿಲ್ಲ ಎಂದು ಹೇಳುವುದು ಸರಿಯೆನಿಸುತ್ತದೆ. ಅಂದರೆ ಪ್ರಜಾಸತ್ತಾತ್ಮಕ ಆಂದೋಲನಗಳಿಗೆ ಇವುಗಳ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದನ್ನು ದಾಖಲಿಸಬಹುದು.

ಎರಡು ಪಕ್ಷಗಳು ಒಂದೇ ತೆರವಾದ ವರ್ಗಸ್ವರೂಪವನ್ನು ಹೊಂದಿದ್ದರೂ ರೈತರ ಅಥವಾ ಕಾರ್ಮಿಕ ವರ್ಗದ ಹಿತಾಸಕ್ತಿಗಳಿಗೆ ಈ ಸರಕಾರಗಳು ಯಾವುದೇ ಭಿನ್ನತೆಯನ್ನು ತೋರಿಲ್ಲ ಎಂಬ ನಿಲುವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಭಾರತದ ನಿಧಾನಗತಿಯ ಮತ್ತು ಬೆಳವಣಿಗೆಯ ಜನಾಂದೋಲಗಳ ಸಂದರ್ಭದಲ್ಲಿ, ಪ್ರಜಾಸತ್ತಾತ್ಮಕ ಬೇಡಿಕೆಗಳಿಗೆ ಹಿನ್ನೆಡೆಯಾಗಿದೆ ಎಂಬುದನ್ನು ತೋರಿಸಲ್ಪಟ್ಟಾಗ ಬಿಜೆಪಿಯು ಪ್ರತಿರೋಧವನ್ನು ಬಿಂಬಿಸುವಂತೆ ಕಂಡುಬರುತ್ತದೆ. ಬಿಜೆಪಿ ಆಳ್ವಿಕೆಯ ಈ ಪ್ರತಿಗಾಮಿ ಸಂಭವನೀಯ ಸಾಮರ್ಥ್ಯವು ಸಂಸತ್ತಿನ ಪ್ರಚಲಿತದಲ್ಲಿನ ವರ್ಗ ಪ್ರಾಮುಖ್ಯತೆಯನ್ನು ಕೂಡ ವಿವರಸಬೇಕಿದೆ.

ಸ್ವಾತಂತ್ರ‍್ಯ ಚಳವಳಿ ಸಂದರ್ಭದಲ್ಲಿ ರೂಪುಗೊಂಡು ಸಂವಿಧಾನದಿಂದ ಗಟ್ಟಿಕೊಂಡ ಸಹಮತವನ್ನು ಬಿಜೆಪಿ ಸರಕಾರ ವ್ಯವಸ್ಥಿತವಾಗಿ ಬುಡಮೇಲುಗೊಳಿಸುವ ಮೂಲಕ ಅಪಾಯಕ್ಕೀಡು ಮಾಡಿದೆ. ಸಂವಿಧಾನದ ಆಶಯವು ರಾಜ್ಯ ನಿರ್ದೇಶಕ ತತ್ವದಲ್ಲಿ ಅಳವಡಿಸಿರುವಂತೆ ಜನಪ್ರತಿನಿಧಿಗಳು ರಾಜಕೀಯ ನಾಯಕತ್ವದ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ದುಸ್ಥಿತಿಯನ್ನು ಹೋಗಲಾಡಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಬೇಕಾದ ಕಾರ್ಯತಂತ್ರವನ್ನು ರೂಪಿಸಬೇಕು. ಜನರನ್ನು ಸಬಲೀಕರಿಸುವ ಮೂಲಕ ಅವರ ಸ್ವಯಂ ವಿಮೋಚನೆಯತ ಸಹಕಾರ ನೀಡಬೇಕು. ಎಲೀಟು ಮತ್ತು ಜನಸಾಮಾನ್ಯರ ಮಧ್ಯದ ಅಂತರ ಮತ್ತು ಬಿಕ್ಕಟ್ಟಿನಿಂದ ಈ ಎಲ್ಲ ಅಂಶಗಳು ಬದಿಗೊತ್ತಲ್ಪಟ್ಟು ಇವು ಅನಪೇಕ್ಷಿತ ಆದರ್ಶಗಳ ರಾಶಿ ಎಂಬಂತಾಗಿದೆ. ಈಗ ಹಿಂದುತ್ವ ರಾಜಕಾರಣ ಪ್ರತಿಪಾದಿಸುವಂತೆ ದಮನಿತರ ಮಧ್ಯೆ ಬಿಕ್ಕಟ್ಟನ್ನು ತರಿಸಿ ಎಲೀಟು ಪ್ರತಿರೋಧಕ್ಕೆ ಆಸ್ಪದ ನೀಡಿದೆ. ಸೌಲಭ್ಯವಂತರಿಗಾಗಿ ಬಿಜೆಪಿಯು ಈ ಯತ್ನದಲ್ಲಿ ಆಂಶಿಕ ಯಶಸ್ಸು ಕಂಡಿದೆ.

ಒಂದೆಡೆ ಬಿಜೆಪಿ ಪಕ್ಷದ ರಾಜಕೀಯ ಸ್ವರೂಪದಿಂದ ಈ ಕಾರ್ಯ ಸಾಧುಗೊಳ್ಳುತ್ತಿದೆ. ಇನ್ನೊಂದೆಡೆ ಆಳುವ ವರ್ಗದ ಹತ್ತಿರವಿರುವ ಗುಂಪು ಸೌಲಭ್ಯಗಳ ಮುಂದುವರಿಕೆಗಾಗಿ ಅಧಿಕಾರಿ ವರ್ಗದ ಕಾರ್ಯವಿಧಾನದ ಮೇಲೆ ಪ್ರಭಾವ ಬೀರುತ್ತದೆ. ಮೊದಲಿಗೆ ಬಿಜೆಪಿಯ ರಾಜಕೀಯ ಸ್ವರೂಪದತ್ತ ಅವಲೋಕಿಸಬಹುದು. ಬಿಜೆಪಿ ತನ್ನದು ಒಂದು ಕೇಡರ್ ಬೇಸ್ಡ್ ಪಕ್ಷ ಎನ್ನುತ್ತದೆ. ಇದರ ವಿವರಣೆ ಅಗತ್ಯ. ಬಿಜೆಪಿ ಯಾವ ರೀತಿ ಕೇಡರ್ ಬೇಸ್ಡ್ ಪಕ್ಷ. ಈ ಕೇಡರ್ ಹೇಗೆ ಅಸ್ತಿತ್ವ ಪಡೆಯುತ್ತದೆ ಯಾವ ರೀತಿಯ ಸ್ಥಾನಮಾನವನ್ನು ಪಕ್ಷದ ಸಂಘಟನೆಯಲ್ಲಿ ಕೇಡರ್ ಪಡೆಯುತ್ತದೆ. ಈ ಪ್ರಶ್ನೆಗಳ ಉತ್ತರದಿಂದ ಬಿಜೆಪಿಯ ದ್ವಂದ್ವ ನಿಲುವು ಅಥವಾ ಬಣ್ಣ ಬಯಲಾಗುತ್ತದೆ. ಒಂದೆಡೆ ಅದು ಸಂಘ ಪರಿವಾರದ ಭಾಗವಾದರೆ ಮತ್ತೊಂದೆಡೆ ಆರ್ ಎಸ್ ಎಸ್ ನಿಂದ ಅದು ಸ್ವತಂತ್ರ ಎಂದು ಹೇಳುತ್ತಿದೆ. ಇವನ್ನು ಸರಿಯಾಗಿ ಪರೀಕ್ಷಿಸಿದಲ್ಲಿ ಬಿಜೆಪಿಯ ಸಂಘಟನೆ ಸ್ಪಷ್ಟಪಡಿಸುವಂತೆ ಬಿಜೆಪಿ ಒಂದು ಅಸಾಧಾರಣ ರೀತಿಯ ಕೇಡರ್ ಆಧಾರಿತ ಪಕ್ಷ. ಕಮ್ಯೂನಿಸ್ಟ್ ಪಕ್ಷಗಳು ಕೇಡರ್ ಬೇಸ್ಡ್ ಆದವು. ಆದರೆ ಅದರ ಕೇಡರ್ ರೂಪುಗೊಂಡಿರುವುದು ಮತ್ತು ಬೆಳೆದು ನಿಂತಿರುವುದು ಪಕ್ಷದೊಳಗಿನಿಂದ ಮತ್ತದರ ವೇದಿಕೆಯಿಂದ ಪಕ್ಷಕ್ಕೆ ತೋರುವ ಸಾಧನೆಯಿಂದ ಇವುಗಳ ಚಲನವಲನವು ನಿಯಂತ್ರಿಸಲ್ಪಡುತ್ತದೆ.

ಆದರೆ ಬಿಜೆಪಿಯ ಕೇಡರ್ ಸ್ಪಲ್ಪ ಭಿನ್ನ, ಮೊದಲನೆಯದಾಗಿ ಅದು ಪಕ್ಷದಿಂದ ಅಸ್ತಿತ್ವ ಹೊಂದಿಲ್ಲ. ಇದು ಆರ್ ಎಸ್ ಎಸ್ ನಿಂದ ಸಿದ್ಧಗೊಂಡು ನಂತರ ಪಕ್ಷಕ್ಕೆ ರವಾನೆಗೊಂಡಿದೆ. ಹಾಗಾಗಿ ಈ ಕೇಡರನ್ನು ಅದರ ಮೂಲಸ್ಥಾನಕ್ಕೆ ಹಿಂದೊಗೆಯುವುದು ಅಸಹಜವೇನಲ್ಲ. ಆರ್ ಎಸ್ ಎಸ್ ಮತ್ತು ಬಿಜೆಪಿಯೊಳಗೆ ಇಂತಹ ವಿನಿಮಯ ಸಹಜವೆನಿಸಿದೆ. ಇನ್ನೊಂದೆಡೆ ಬಿಜೆಪಿಗೆ ಈ ಕೇಡರನ್ನು ಉಪಯೋಗಿಸಬಹುದು. ಆದರೆ ಅದರ ಮೇಲೆ ನಿಯಂತ್ರಣವಿರುವುದಿಲ್ಲ. ಎರಡನೆಯದಾಗಿ ಕೇಡರ್ (ಬೇರೆ ಪಕ್ಷಗಳಲ್ಲಿರುವಂತೆ ಕೆಳಹಂತದಲ್ಲಿ ರೂಪುಗೊಂಡು ಮೇಲ್ದರ್ಜೆಗೇರುವಂತೆ) ಕೆಳಹಂತದಿಂದ ಅಗತ್ಯವಾಗಿ ರೂಪುಗೊಂಡು ಪಕ್ಷಕ್ಕೆ ಮಾಡಿರುವ ಸಾಧನೆ ಹಿನ್ನೆಲೆಯಲ್ಲಿ ಮೇಲಿನ ಹಂತಕ್ಕೆ ತಲುಪುವುದಿಲ್ಲ. ಇದು ಅಡ್ಡದಾರಿಗಳ ಮೂಲಗಳಿಂದ ಪಕ್ಷದೊಳಗೆ ಸೇರುತ್ತವೆ. ಮತ್ತು ಪ್ರತಿಹಂತದಲ್ಲೂ ಆರ್ ಎಸ್ ಎಸ್ ನಿಂದ ನಿರ್ಧರಿಸಲ್ಪಡುತ್ತವೆ. ಆರ್ ಎಸ್ ಎಸ್ ನಲ್ಲಿ ಹೊಂದಿರುವ ಅನುಭವ ಮತ್ತು ಸಾಮರ್ಥ್ಯದ ನೆಲೆಯಲ್ಲಿ ಕೇಡರ್ ಗೆ ನುಸುಳಲಾಗುತ್ತವೆ.

ಸಂಘ ಪರಿವಾರದ ಎಲ್ಲ ಸಂಘಟನೆಗಳಾದ, ಪ್ರಮುಖವಾಗಿ ವಿ ಎಚ್ ಪಿ, ಮತ್ತಿತರ ಎ ಬಿ ವಿ ಪಿ, ಭಜರಂಗದಳ ಮತ್ತು ಆರ್ ಎಸ್ ಎಸ್ ನಿಂದ ಸ್ವತಂತ್ರವಲ್ಲ. ಇವರು ಕೂಡ ಬಿಜೆಪಿಯಂತೆ ತಮ್ಮ ಕೇಡರ್ ಮೂಲ ಮತ್ತು ಕೇಡರ್ ನಿಂದ ರೂಪುಗೊಳ್ಳುವ ತೋರಿಕೆಯೊಂದಿಗೆ ಪರಸ್ಪರ ಹೊಂದಿಕೊಂಡಿರುತ್ತಾರೆ. ಬಿಜೆಪಿಯ ಕೇಡರ್ ಬೇಸ್ಡ್ ಪಕ್ಷವೆಂಬ ಪ್ರತಿಪಾದನೆ ಒಪ್ಪಿತವಾದರೆ ಅದು ಆರ್ ಎಸ್ ಎಸ್ ನೊಂದಿಗೆ ನೇರ ಕೊಂಡಿಯ ಅಸ್ತಿತ್ವವನ್ನು ಉಂಟುಮಾಡುತ್ತದೆ. ಒಂದು ಸಮಾನ ಮೂಲದ ಕೇಡರ್ ಆಧಾರದಲ್ಲಿ ಸಂಘ ಪರಿವಾರದ ಎಲ್ಲ ಸಂಲಗ್ನತೆ ಗುಂಪುಗಳು ಪರಸ್ಪರ ಅವಲಂಬಿಸಿರುವುದಾದರೂ ಇವೆಲ್ಲವನ್ನು ಒಂದೇ ಎಂದು ಹೇಳುವ ಹಾಗಿಲ್ಲ. ಇವುಗಳ ಕಾರ್ಯಕ್ಷೇತ್ರದಲ್ಲಿ ಭಿನ್ನತೆ ಇದೆ. ಈ ಗುಂಪುಗಳನ್ನು ರೂಪಿಸಿರುವುದು ಬಿಜೆಪಿಯಲ್ಲ, ಆರ್ ಎಸ್ ಎಸ್. ಹಾಗಾಗಿ ಇದು ಅದರ ಕಾರ್ಯಕ್ಷಮತೆ ಮತ್ತು ಪರಸ್ಪರ ಸಂಬಂಧಗಳನ್ನು ನಿರ್ಧರಿಸುತ್ತದೆ. ಈ ವಿವಿಧ ಕಾರ್ಯಗಳು ಮತ್ತು ಸಾಧನೆಯ ಹೇರಿಕೆಯಿಂದಾಗಿ ತಕ್ಷಣದ ಪರಿಹಾರದ ವಿಭಿನ್ನ ಪರಿಕಲ್ಪನೆಗೆ ದಾರಿ ಮಾಡುವುದರಿಂದ ಆರ್ ಎಸ್ ಎಸ್ ಗುಂಪುಗಳು ಮತ್ತು ಬಿಜೆಪಿ ಮಧ್ಯೆ ಸಂಘರ್ಷ ಸಂಭವಿಸುತ್ತದೆ. ಈ ರೀತಿಯ ಸಂಘಟನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ಒಂದು ರೀತಿಯ ಸ್ವಾಯತ್ತತೆಗೆ ಅನುವು ಮಾಡಬಹುದು. ಸಮಾಜದ ವಿವಿಧ ರಂಗಗಳಲ್ಲಿ ನಮ್ಯತೆಗೆ ಅನುವಾಗುವ ಒಂದು ಅವಕಾಶವನ್ನು ಇದು ಒದಗಿಸುವುದು ಬಹಳ ಮುಖ್ಯವಾಗುತ್ತದೆ ಮತ್ತು ಈ ಅವಕಾಶ ಇತರ ರಾಜಕೀಯ ಪಕ್ಷಗಳಿಗೆ ಲಭ್ಯವಾಗದು. ಇದೊಂದು ಅಲೀಬ್ ರಾಜಕಾರಣ ಅಂದರೆ (ತಮ್ಮ ಅನುಪಸ್ಥಿತಿಯಲ್ಲಿ ಈ ಕುಕೃತ್ಯ ನಡೆಯಿತೆಂಬ ಅಪವಾದವನ್ನು ಮುಂದಿಡುವುದಾಗಿದೆ).

ಈ ನಮ್ಯತೆಯು ಸಂಘ ಪರಿವಾರಕ್ಕೆ ಮೋಸ ಮತ್ತು ಕುತಂತ್ರಕ್ಕೆ ಅವಕಾಶ ಒದಗಿಸುವ ಮೂಲಕ ಉತ್ತರದಾಯಿತ್ವದಿಂದ ತಪ್ಪಿಸಲು ಅನುವಾಗುವುದು. ಬಿಜೆಪಿ ಚರ್ಚೆಗೆ ಎತ್ತುವ ಮಕ್ಕಳಾಟಿಕೆಯ ವಿಷಯಗಳ ಕಾರ್ಯಸೂಚಿ ಅಥವಾ ಮತಾಂತರ ವಿಷಯದ ಕುರಿತು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಮೇಲಿನ ಹಿಂಸೆ ಕುರಿತ ಚರ್ಚೆಗೆ ಜಾರಿಗೊಳ್ಳುವ ಇತ್ಯಾದಿ ನೆಪ. ಎನ್ ಡಿ ಎ ಸಮ್ಮಿಶ್ರ ಸರಕಾರದ ರಾಜಕೀಯ ಹಣೇಬರಹಕ್ಕೆ ಬಿಜೆಪಿಯ ಸ್ವರೂಪ ವಸ್ತುಶಃ ಮಹತ್ವದ್ದಾಗಿದೆ. ಈ ಪರಿಸ್ಥಿತಿಯಿಂದ ಬಿಜೆಪಿಗೆ ಹಲವಾರು ಕಾರ್ಯಸೂಚಿ ಇರುವಂತೆ ನೋಡಿಕೊಳ್ಳಲು ಆಸ್ಪದವೀಯುತ್ತದೆ. ಒಂದು ಎನ್ ಡಿ ಎ, ಎರಡು ಬಿಜೆಪಿ ತನ್ನದೇ ನೆಲೆಯಲ್ಲಿ ಬಹುಮತ ಹೊಂದಿದಾಗ ಮುಂದೂಡಲ್ಪಡುತ್ತದೆ. ಮೂರು ಕೇಸರೀಕರಣದ ಗುಪ್ತ ಕಾರ್ಯಸೂಚಿಯನ್ನು ಹುರುಪುಗೊಳಿಸುವ ಮೂಲಕ ಮೈತ್ರಿಗಳಿಗೆ ಇದರ ಲಾಭದ ನಿರಾಕರಣೆ ಅಲ್ಲದೆ ಸರಕಾರದಲ್ಲಿ ಸಂಘ ಪರಿವಾರದ ಕಾರ್ಯವನ್ನು ಮಾನ್ಯ ಮಾಡಿದಿದ್ದಾಗ ಮೈತ್ರಿಗಳಿಗೆ ಅಲೀಬಿ ಉಂಟು ಮಾಡುತ್ತದೆ. ಕೇಸರೀಕರಣದ ಗುಪ್ತ ಕಾರ್ಯಸೂಚಿಯನ್ನು ಜಾತಿಗೊಳಿಸಲು ಕಪಟತನದಿಂದ ಸರಕಾರವನ್ನು ಉಪಯೋಗಿಸುವಲ್ಲಿ ಆರ್ ಎಸ್ ಎಸ್ ಸಫಲವಾಗಿದೆ. ಬಿಜೆಪಿ ಮೈತ್ರಿಯೊಂದಿಗಿರುವ ಅವಕಾಶಭರಿತ ರಾಜಕೀಯ ಶಕ್ತಿಗಳು ವ್ಯಕ್ತಿಗತವಾಗಿ ತಮ್ಮ ಜಾತ್ಯತೀತ ನಿಲುವನ್ನು ಬಿಟ್ಟುಕೊಡದೆಯೂ ಆಗಾಗ್ಗೆ ನಿರಾಕರಿಸಿದರೂ ವಸ್ತುನಿಷ್ಠವಾಗಿ ಪ್ರತಿಕ್ರಿಯಿಸುವ ನಿಯೋಗಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನು ಐ ಸಿ ಎಚ್ ಆರ್ ಮತ್ತು ಐ ಸಿ ಎಸ್ ಎಸ್ ಆರ್ ನಂತಹ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಆರ್ ಎಸ್ ಎಸ್ ಪ್ರಣಾಳಿಕೆಯ ಜನರನ್ನು ನೇಮಿಸುವ ಸಂದರ್ಭದಲ್ಲಿ ನೋಡಬಹುದು. ಎನ್ ಡಿ ಎ ಮಿತ್ರ ಪಕ್ಷಗಳು ಇದನ್ನು ಪ್ರಬಲವಾಗಿ ವಿರೋಧಿಸಬಹುದಿತ್ತು. ಆದರೆ ಅವು ಮಂತ್ರಿ ಪದವಿ ಪಡೆಯುವುದರಲ್ಲೇ ಸಂತುಷ್ಟರಾಗಿ ಇದನ್ನು ಯಾವುದೇ ಪ್ರಬಲ ರೀತಿಯಲ್ಲಿ ಪ್ರತಿಭಟಿಸಲು ಹೋಗಿಲ್ಲ. ಅಲ್ಲದೇ ಕ್ರಿಶ್ಚಿಯನ್ನರ ಮೇಲೆ ನಡೆಯುವ ಹಲ್ಲೆ ಅಥವಾ ಮುಸ್ಲಿಮರ ರಾಷ್ಟ್ರೀಯತೆ ಬಗೆಗಿನ ಅನುಮಾನದಂಥ ಕ್ರಮದ ಬಗೆಗೂ ಗಂಭೀರವಾಗಿ ಪ್ರತಿಕ್ರಿಯಿಸಿಲ್ಲ. ಸಾಂದರ್ಭಿಕವಾಗಿ ಪ್ರತಿರೋಧ ವ್ಯಕ್ತಪಡಿಸುವಂತದ್ದು ಜಾತ್ಯತೀತ ನಿಲುವಿಗೆ ಸಾಕಾಗುವುದಿಲ್ಲ. ಇನ್ನೂ ಕೆಟ್ಟದ್ದು ಎಂದರೆ ಸಂಘ ಪರಿವಾರ ಗುಂಪುಗಳ ಯಾವುದೇ ಚಟುವಟಿಕೆಗಳನ್ನು ಸರಕಾರ ಮಾನ್ಯ ಮಾಡುವುದಿಲ್ಲವೆಂದು ಪ್ರಧಾನ ಮಂತ್ರಿಗಳಿಂದ ಹೇಳಿಕೆ ಹೊರಡಿಸುವುದರಲ್ಲಿ ಸಂತೃಪ್ತರಾಗುವುದು. ಬಜರಂಗದಳ ಅಥವಾ ವಿ ಎಚ್ ಪಿ ಬಿಟ್ಟು ಬಿಜೆಪಿಗೆ ಮಾತ್ರ ಉತ್ತರದಾಯಿಯಾಗಿರುವಂತಹ ಈ ಸಂಘಟನೆಗಳ ಸಾಮಾನ್ಯ ಕೇಡರ್ ನಲ್ಲೂ ಯಾವುದೇ ಬದಲಾವಣೆ ತರದು. ಹಾಗಾಗಿ ಬಿಜೆಪಿಯ ಎಲ್ಲ ಮಿತ್ರ ಪಕ್ಷಗಳು ಈ ಪ್ರಮುಖ ಸಂಗತಿಯ ಬಗೆಗೆ ಮುಗ್ಧರು ಅಥವಾ ಹಿಂದುತ್ವ ಶಕ್ತಿಗಳಿಗೆ ಆರ್ ಎಸ್ ಎಸ್ ನ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಮುಂದುವರಿಸಲು ಸರಕಾರದೊಂದಿಗೆ ಒಳಸಂಚು ರೂಪಿಸಿಲ್ಲವೆಂದು ನಂಬಲು ಕಷ್ಟ.

ಈಗ ರಾಜ್ಯದ ಸಂಸ್ಥೆಗಳು ತುಳಿತಕ್ಕೊಳಗಾದವರ ಅಸಮಾನಧಾನದ ಹೆಚ್ಚಳಕ್ಕೆ ಹೇಗೆ ಸಹಾಯಕವಾಗುತ್ತದೆ ಎಂದು ನೋಡೋಣ. ಆಡಳಿತಶಾಹಿ, ನ್ಯಾಯಾಂಗ ಮತ್ತು ಬಲಪ್ರಯೋಗ ಸಂಸ್ಥೆಯೆನಿಸಿದ ಪೊಲೀಸ್ ಮುಂತಾದ ಅಧಿಕಾರಿ ವರ್ಗದ ಸಂರಚನೆಯನ್ನು ಬಿಜೆಪಿ ಚೆನ್ನಾಗಿ ಉಪಯೋಗಿಸುತ್ತದೆ. ದಿನಪತ್ರಿಕೆ, ನಿಯತಕಾಲಿಕೆ, ಟಿ.ವಿ. ಮುಂತಾದ ನಾಗರಿಕ ಪ್ರಮುಖ ಜಾತೀಕರಣ ಘಟಕಗಳು ತಮ್ಮ ತೋರಿಕೆ ಮತ್ತು ಒಲವುಗಳಲ್ಲೂ ರಾಜ್ಯ ಸಂಸ್ಥೆಗಳೊಂದಿಗೆ ಹೊಂದಾಣಿಕೆಯಲ್ಲಿವೆ. ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಎರಡರಲ್ಲೂ ನಿಮ್ಮ ವರ್ಗದ ವ್ಯಕ್ತಿಗಳಿಗೆ ಅವಕಾಶಗಳೇ ಇಲ್ಲದಂತಾಗಿದೆ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಎಲ್ಲ ಕಾರ್ಯ ನಿರ್ವಾಹಕ ಹುದ್ದೆಗಳೆಲ್ಲವೂ ಮೇಲ್ಜಾತಿಗಳ ಉನ್ನತ ಶಿಕ್ಷಿತ ಪಾಲಾಗಿದೆ. ಇವರೆಲ್ಲ ಬೂರ್ಶ್ವಾ ಮೌಲ್ಯಗಳ ಉನ್ನತ ಸಮಾಜದ ವ್ಯಕ್ತಿಗಳು. ಇವರೆಲ್ಲ ಸಭ್ಯತೆ, ನಿಯಮಗಳನ್ನು ಪಾಲನೆಯಿಂದ ಒದಗುವ ಅವಕಾಶ, ಸಾರ್ವಜನಿಕ ವೇದಿಕೆ ಮತ್ತು ಭಾಷಣಗಳಲ್ಲಿ ಮರ್ಯಾದೆ ಮುಂತದ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವವರೆಂಬ ಕಲ್ಪನೆಯನ್ನು ಮುಂದಿಡುತ್ತಾರೆ. ಇವು ನಿಮ್ಮ ವರ್ಗಗಳಿಗೆ ಅಪರಿಚಿತ ಮತ್ತು ತಿಳಿದಿಲ್ಲವೆಂದು ಬೀಗುತ್ತಾರೆ. ಅವರ ಸಾಮಾಜಿಕ ಮತ್ತು ಭೌತಿಕ ಆಚರಣೆಗಳಿಂದ ಇಂತ ಉನ್ನತ ಸಮಾಜದ ಮೌಲ್ಯಕ್ಕೆ ಅನುಗುಣವಾಗಿರಲು ಸಾಧ್ಯವಾಗಿಲ್ಲ. ದಲಿತರ, ಒಬಿಸಿಗಳು ಮತ್ತು ಬಡ ಮುಸ್ಲಿಮರ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯಿಂದಾಗಿ ಅವರು ಉನ್ನತ ಮೂಲಗಳ ಈ ಹಂತಕ್ಕೆ ತಲುಪಲು ಸಾಧ್ಯವಾಗಿಲ್ಲ. ಇದು ಅವರ ದಿನನಿತ್ಯದ ಸಂಸ್ಕೃತಿಯ ರಾಜಕಾರಣವೆಂದು ಅವಹೇಳನ ಮಾಡುವವರು ಇದ್ದಾರೆ. ಜನಾಂದೋಲನದ ಪರಿಣಾಮವಾಗಿ ಈ ವರ್ಗಗಳು ಸಮಾನತೆಯ ಹಿನ್ನೆಲೆಯಲ್ಲಿ ದೈನಂದಿನ ಮೌಲ್ಯಗಳು ಕಣ್ಮರೆಯಾದವು ಎಂದು ದುಃಖಿಸಬೇಕಿಲ್ಲ. ಇದು ನಶಿಸಿದರೆ ಒಳ್ಳೆಯದು ಇಲ್ಲವೇ ಇವರು ಕೆಲವು ಅವಕಾಶವಾದಿ ಗುಂಪುಗಳ ಜೊತೆ ಸೇರಿದರೂ ತೊಂದರೆಯಿಲ್ಲ.

ಹೀಗಾಗಿ ಪ್ರಜಾಸತ್ತಾತ್ಮಕ ಪ್ರತಿಪಾದನೆಗಳ ಪ್ರಕ್ರಿಯೆ ಮತ್ತು ಚುನಾವಣಾ ಹೋರಾಟಗಳು ಅಷ್ಟು ಸುಲಭವಲ್ಲವೆಂಬುದನ್ನು ಯಾರಾದರೂ ಗಮನಿಸಬೇಕು. ಆದರೂ ಇದರಿಂದಾಗಿ ಸಮಾನತೆ, ಇತರರ ಬಗೆಗೆ ಕಾಳಜಿ, ತನ್ನ ಜೀವನದ ನಿರ್ಧಾರಕ ವಿಚಾರಗಳ ಬಗ್ಗೆ ಸೂಕ್ಷ್ಮದಿಂದಿರುವುದು ಮುಂತಾದ ಸಂಗತಿಗಳು ಇಂಥ ಸಡಿಲಿಕೆಯ ಸಂದರ್ಭದಲ್ಲೂ ನಮ್ಮ ರಾಜಕೀಯ ಆಚರಣೆಗಳ ಸಂಸ್ಕೃತಿಯಲ್ಲಿ ಆಗಾಗ ಕಂಡುಬರುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಇಂಥದ್ದೇ ರೂಪು ಹೊಂದಬಹುದು ಎಂದು ನಿಶ್ಚಿತವಾಗಿ ಹೇಳುವುದು ಕಷ್ಟ. ಆದರೆ ಎಲೀಟು ವೆಸ್ ಮಿನಿಸ್ಟರ್ ಮಾದರಿ ಉಳಿವಿಗೆ ಒತ್ತಾಯಿಸುತ್ತದೆ ಮತ್ತು ಆ ಮೂಲಕ ಅದರ ಚರಿತ್ರೆ ಅಂದರೆ ಜನರಿಗೆ ಬಡ್ತಿ ರೂಪದಲ್ಲಿ ಅಧಿಕಾರದಲ್ಲಿ ಪಾಲು ನೀಡುವುದನ್ನು ಆಶಿಸುತ್ತದೆ. ಹಾಗಾಗಿ ಜನಸಾಮಾನ್ಯರು ಪ್ರಜಾಸತ್ತಾತ್ಮಕ ಬೇಡಿಕೆಗೆ ಹಾತೊರೆದರೆ ಎಲೀಟು ಪ್ರತಿ ತಂತ್ರ ರೂಪಿಸುವುದರಲ್ಲಿ ನಿರತವಾಗುತ್ತದೆ. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಇಂದು ಮತ್ತು ನಾಳಿನ ನಿಜಸಂಗತಿ ಎನಿಸಿದೆ.

ಈ ಹಂತದಲ್ಲಿ ಹಿಂದುತ್ವ ವಿಚಾರ ಪ್ರಣಾಳಿಕೆಯೊಂದಿಗೆ ಬಿಜೆಪಿ ಮತ್ತು ಸಂಘ ಪರಿವಾರ ಸೌಲಭ್ಯವಂತರಿಗೆ ಆಶಾಕಿರಣವಾಗಿದೆ. ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಗುಪ್ತವಾಗಿ ರವಾನೆಯಾಗಿದ್ದು ಎಲೀಟುಗಳು ಹಿಂದುತ್ವ ಗುಂಪಿಗೆ ಮುನ್ನುಗ್ಗುತ್ತಿದ್ದಾರೆ. ಈ ಮೂಲಕ ಕಟ್ಟಾ ತೀವ್ರಗಾಮಿ ವಿಚಾರಧಾರೆಯನ್ನು ಅಪ್ಪಿಕೊಳ್ಳುವಂತ ಪ್ರಾಮುಖ್ಯವಾದ ವ್ಯಕ್ತಿತ್ವದ ವಿರೋಧಾಭಾಸವನ್ನು ಹುಟ್ಟುಹಾಕುತ್ತಿದ್ದಾರೆ. ರಾಜ್ಯದ ಕೆಲವು ಅಂಗ ಸಂಸ್ಥೆಗಳು ಈ ಎಲೀಟು ಪ್ರತಿರೋಧದ ವಿರೋಧದಿಂದ ಹೇಗೆ ಬಿಡಿಸಿಕೊಳ್ಳಬಹುದೆಂಬುದರತ್ತ ಪ್ರಯತ್ನಿಸೋಣ.

ಭಾರತವು ಆಡಳಿತಶಾಹಿ ಮತ್ತು ಬಲಪ್ರಯೋಗ ಸಂಸ್ಥೆಗಳಾದ ಪೊಲೀಸ್ ಮತ್ತು ಅರೆಸೈನಿಕ ಘಟಕಗಳು ಅವಲಂಬಿಸಿರುಂತೆ ರಾಚನಿಕವಾಗಿ ನಿರ್ವಚನಗೊಂಡಿದೆ. ಮತ್ತು ಇದು ಚುನಾವಣೇತರ ಅಂದರೆ ಅಧಿಕಾರದ ಕಡೆಗೆ ಗೌರವ ಹೊಂದಿತ್ತು. ದೇಶದ ಈ ಸ್ವರೂಪವು ಸ್ವಾತಂತ್ರ‍್ಯ ಸಂದರ್ಭದಲ್ಲಿ ಗಟ್ಟಿಗೊಳಿಸಲ್ಪಟ್ಟಿತ್ತು ಮತ್ತು ಮೊದಲು ಕೆಲವು ವರ್ಷಗಳು ಬಹಳ ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ ಭಾರತ ಮುಂದೆ ಊಹಿಸಲಾರದಂಥ ಬಿರುಸಿನ ಜನಾಂದೋಲನಗಳು ಮತ್ತು ಚಳುವಳಿಯನ್ನು ಎದುರಿಸುವ ಮೂಲಕ ಗಟ್ಟಿಗೊಳ್ಳಬೇಕಾಯಿತು. ಈ ನಿಟ್ಟಿನಲ್ಲಿ ಇದಕ್ಕೆ ಎರಡೇ ಆಯ್ಕೆಗಳಿದ್ದವು. ವಸಾಹತು ಅವಶ್ಯಕತೆಗೆ ರೂಪುಗೊಂಡ ಆಡಳಿತಶಾಹಿಯನ್ನು ವರ್ಗ ಮತ್ತು ಸಾಮಾಜಿಕ ಶಕ್ತಿಗಳೊಂದಿಗೆ ಅನುರೂಪಗೊಳಿಸುವಂತಹ ಕಾರ್ಯಗಳಿಗೆ ಈ ಜನಾಂದೋಲನಗಳನ್ನು ಉಪಯೋಗಿಸಿ ಸಾಂಸ್ಥಿಕವಾದ ಪುನಾರಚನೆಗೊಳಿಸುವುದು. ಈ ಮೂಲಕ ಅದು ಎರಡನೆಯದಾಗಿ ಇವೇ ಪೊಲೀಸ್ ಮತ್ತು ಆಡಳಿತಶಾಹಿ ಸಂಸ್ಥೆಗಳಲ್ಲಿ ಮುಂದುವರಿಸಿಕೊಂಡು ಜನತಾ ಚಳುವಳಿಯನ್ನು ಕಾನೂನು ಕಟ್ಟಳೆಗಳ ಮೂಲಕ ಹತ್ತಿಕ್ಕುವುದು.

ಹೀಗೆ ರಾಜಕೀಯ ಸಂಘಟನೆ ವ್ಯವಸ್ಥೆಯು ಮೊದಲನೆಯದನ್ನು ಆಯ್ಕೆ ಮಾಡಿದ್ದಲ್ಲಿ ಕ್ಷಣಿಕದ ಅಸ್ಥಿರತೆಯಂತಹ ಪರಿಣಾಮಗಳನ್ನು ಎದುರಿಸಬೇಕಿತ್ತು. ಆದರೆ ಜನರ ಭಾವನೆಗಳಿಗೆ ಸ್ಪಂದಿಸುವಂತಹ ದೂರಗಾಮಿ ಪರಿಣಾಮಗಳಿರುತ್ತಿತ್ತು. ಉದಾಹರಣೆಗೆ ಊಳಿಗಮಾನ್ಯ ವಿರುದ್ಧ ಕೆಲವು ರಚನಾತ್ಮಕ ಕ್ರಮಗಳು, ಆಡಳಿತಶಾಹಿ ನಿಯಂತ್ರಣವಿಲ್ಲದೆ ತಳಮಟ್ಟದ ಸಹಭಾಗಿ ಸಂಸ್ಥೆಗಳು, ಬಡತನ, ಆರೋಗ್ಯ ಮತ್ತು ಶಿಕ್ಷಣ ಮುಂತಾದವುಗಳ ಯೋಜನೆಯಲ್ಲಿ ಜನರನ್ನು ನೇರವಾಗಿ ತೊಡಗಿಸುವಂತ ಕಾರ‍್ಯಕ್ರಮಗಳನ್ನು ರೂಪಿಸಬಹುದು. ಈ ಮೂಲಕ ಜನರನ್ನು ಸಬಲೀಕರಿಸಿ ಇದು ಉಳುವವನಿಗೆ ಭೂಮಿ ಒದಗಿಸುವಂತಹ ಶಾಸನಕ್ಕೂ ನೆರವಾಗಬಹುದಿತ್ತು. ಇಂಥ ಕ್ರಮಗಳಿಂದ ನಿಜವಾಗಿಯೂ ಸಂಕುಚಿತ ಮನೋಭಾವದ ಎಲೀಟುಗಳ ಅಧಿಕಾರವನ್ನು ತೊಡೆದು ಹಾಕಬಹುದಿತ್ತು.

ಜನಾಂದೋಲನ ಭಯ, ಪರಿಷ್ಕೃತಗೊಳ್ಳದ ವಸಾಹತು ಹಿನ್ನೆಲೆಯ ಕಾನೂನು ಮತ್ತು ಸುವ್ಯವಸ್ಥೆಯಿಂದ ಆಳುವ ವರ್ಗವು ಐತಿಹಾಸಿಕವಾದ ಸಮೀಪ ದೃಷ್ಟಿಯಿಂದ ಎರಡನೆಯದನ್ನು ಆರಿಸಿಕೊಂಡಿತ್ತು. ಇದಕ್ಕೆ ದೂರಗಾಮಿ ಪರಿಣಾಮಗಳುಂಟಾದವು. ಪ್ರಜೆಗಳ ಒತ್ತಡ ಮತ್ತು ಉತ್ತರದಾಯಿತ್ವದಿಂದ ಸಂಸ್ಥೆಗಳು ದೂರವಾಗುವಂತಾಗಿ ಇವು ಅಧಿಕಾರ ಚಲಾವಣೆಗೆ ಶಾಶ್ವತವಾದ ಅಗತ್ಯದ ಮಧ್ಯವರ್ತಿಗಳೆಂಬಂತಾಯಿತು. ಮೊದಲ ಅವಧಿಯಲ್ಲಿನ ಗತಿಶೀಲ ಸನ್ನಿವೇಶವನ್ನು ರಾಜ್ಯದ ಅಂಗ ಸಂಸ್ಥೆಗಳು ನಿಜವಾಗಿಯೂ ಜನಪರಗೊಳಿಸಬಹುದಿತ್ತು. ಆದರೆ ಈಗಿನ ಸ್ಥಿತಿಯನ್ನು ಬದಲಾಯಿಸಲಾಗದು. ಅಧಿಕಾರದ ಸಾಮಾಜಿಕ ನೆಲೆಯ ಅದರ ವರ್ಗಸ್ವರೂಪಕ್ಕೆ ಭಿನ್ನವಾಗಿ ಜನಪರ ಸವಾಲುಗಳು ಮಧ್ಯೆಯೂ ಅಧಿಕಾರವನ್ನು ಮುಂದುವರಿಸುವಂತೇ ತೋರುತ್ತಿದೆ. ಬ್ರಾಹ್ಮಣೀಕೃತ ನಿಲುವಿನ ವಸಾಹತು ಊಳಿಗದ ಲಕ್ಷಣಗಳನ್ನುಳ್ಳ ಮೇಲ್ವರ್ಗದಲ್ಲಿ ಇಂಥವುಗಳ ಇರುವಿಕೆಯನ್ನು ಅತಿಯಾಗಿ ಗುರುತಿಸಬಹುದು.

ಹೀಗಾಗಿ ವಸಾಹತು ವಿರೋಧಿ ರಾಷ್ಟ್ರೀಯ ಹೋರಾಟದ ಮೌಲ್ಯ, ಆಶಯ ಮತ್ತು ಪ್ರೇರಣೆಗಳ ಮಟ್ಟಕ್ಕೆ ಭಾರತ ಮುನ್ನಡೆಯಲು ವಿಫಲಗೊಂಡಿದೆ. ನ್ಯಾಯ, ಸಮಾನತೆ ಮುಂತಾದ ಆಶಯಗಳುಳ್ಳ ಜನ ಸಹಭಾಗಿ ನಿಲುವಿಗೆ ಸಾಂಸ್ಥಿಕವಾಗಿ ಚಾಲನೆ ನೀಡುವ ಮೂಲಕ ಸಾಮಾಜಿಕ ಸಂಬಂಧಗಳಲ್ಲಿ ಬದಲಾವಣೆ ತರತಕ್ಕ ರಾಚನಿಕ ಪ್ರಯತ್ನದಲ್ಲಿ ಇದು ವಿಫಲವಾಗಿದೆ. ಇದರ ಬದಲು ಜನತಾ ವಿಮೋಚನೆಗೆ ಸಹಯಕವಾಗಬಲ್ಲ ನಿಲುವುಗಳಿಂದ ದೂರವಿರುವ ಆಡಳಿತಶಾಹಿ ಅಧೀನದಲ್ಲಿನ ಪಾಶ್ಚಾತ್ಯ ಬಂಡವಾಳಪ್ರೇರಿತ ಸಂಕುಚಿತವಾದ ಒಂದು ಆಧುನಿಕತೆಯನ್ನು ಅದು ಮುಂದಿಟ್ಟಿತು. ವಸಾಹತುಶಾಹಿ ಬಿಟ್ಟು ಹೋದ ಸಾಂಸ್ಥಿಕ ಮೌಲ್ಯಗಳ ರೂಪುಗೊಂಡ ಅಧಿಕಾರಿ ವರ್ಗವನ್ನು ಭಾರತದಲ್ಲಿಂದು ಕಾಣಬಹುದು.

ಭೂಮಾಲೀಕತ್ವವು ನಿಲುವು ಮತ್ತು ಮುಂದುವರಿಕೆಯಿಂದ ಭಾರತದ ರಾಜಕಾರಣವು ಸಂಪ್ರದಾಯಬದ್ಧವಾಗಿ ಮುನ್ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ರಾಜಕಾರಣವು ಅಜ್ಞಾನುಪಾಲನೆ ತಂತ್ರ ಮತ್ತು ಪ್ರತೀಕಾರದ ಸಾಧನವು ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ರಾಜ್ಯದ ನಿಯಂತ್ರಣದಲ್ಲಿರಲಿಲ್ಲ. ಮೇಲಾಗಿ ಅದು ಪ್ರಬಲ ಸಾಮಾಜಿಕ ಶಕ್ತಿಗಳಿಂದ ಮೇಲ್ವರ್ಗದ ಭೂಮಾಲೀಕರಲ್ಲಿತ್ತು. ಬದಲಾಗದ ಸ್ಥಿತಿಯಲ್ಲಿ ಈ ತಂತ್ರಗಳೂ ಈಗಲೂ ಉಳಿದಿವೆ. ಉದಾಹರಣೆಗೆ ರಣವೀರ ಸೇನೆ. ಪ್ರಜಾವಿರೋಧಿ ಭಯಾನಕ ಬಂಟರು ಈ ಕಾರ್ಯತಂತ್ರದ ಮೂಲಕ ಜನಾಂದೋಲನಗಳನ್ನು ಹತ್ತಿಕ್ಕುತ್ತಾರೆ. ಪ್ರಜಾಸತ್ತಾತ್ಮಕ ಆಂದೋಲನಗಳ ಮೂಲಕ ಸಾಮಾಜಿಕ ವಾಸ್ತವವನ್ನು ವಿರೋಧಿಸುವವರಿಗೆ ಇವರು ಖಾಸಗಿ ಪ್ರತಿ ಅಧಿಕಾರಸ್ಥರೆಂಬಂತೆ ವರ್ತಿಸುತ್ತಾರೆ.

ಉಗ್ರ ಹಿಂದು ಬಲಪಂಥೀಯ ಬಿಜೆಪಿ ಮೇಲ್ಜಾತಿ ಮತ್ತು ವರ್ಗಗಳ ಮಧ್ಯೆ ಒಂದು ಗುಪ್ತ ಒಪ್ಪಂದವೇರ್ಪಟ್ಟಿದೆ, ಇವರ ಸಂಬಂಧ ಗಟ್ಟಿಯಾದದ್ದು, ಜಾತಿ ಪ್ರಾಬಲ್ಯದ ಹಳೆಯ ವಿಧಾನವನ್ನು ಹಿಂದುತ್ವವು ಸರಳವಾಗಿ ಪುನಶ್ಚೇತನಗೊಳಿಸಲಾಗದು. ಅಧಿಕಾರದ ಸಾಮಾಜಿಕ ಹಂಚಿಕೆಯನ್ನು ಆಮೂಲಾಗ್ರವಾಗಿ ಗೊಂದಲಪಡಿಸುವ ಒಂದು ರಾಜಕೀಯ ವ್ಯವಸ್ಥೆಯಲ್ಲಿ ಕೆಳಜಾತಿಗಳನ್ನು ಒಳಗೊಳಿಸುವ ಸಂಕೀರ್ಣ ಪ್ರಕ್ರಿಯೆಯ ಮೂಲಕ ಅದು ಜಾತಿಯನ್ನು ಜೀವಂತವಾಗಿಸುತ್ತದೆ. ಈ ಒಳಗೊಳ್ಳುವಿಕೆ ಪ್ರಕ್ರಿಯೆ ಕಾಂಗ್ರೆಸ್ ನ ಬೆಂಬಲದ ಪೋಷಕತೆಯ ನೇರಸಂಬಂಧದ ಸಹಕರಣ ಮಾದರಿಗಿಂತ ಸಂಕೀರ್ಣವೆನಿಸಿದೆ. ಆದರೆ ಇಲ್ಲಿ ಯಾವುದೇ ವಿಚಾರಪ್ರಣೀತ ಅಥವಾ ಸಾಂಸ್ಕೃತಿಕ ಅಂಶಗಳಿರುವುದಿಲ್ಲ. ಅಲ್ಪಸಂಖ್ಯಾತರು ಒಂದು ಆಳವಾದ ಹಿಂದುಪ್ರಣೀತ ರಾಷ್ಟ್ರೀಯತೆಗೆ ಸೇರುವಂತೆ ಬಿಜೆಪಿ ಒತ್ತಾಯ ಹೇರುತ್ತದೆ. ಆರ್ ಎಸ್ ಎಸ್ ಮಾತ್ರ ಈ ರಾಷ್ಟ್ರೀಯತೆಯ ಸಂಸ್ಕೃತಿಯನ್ನು ನಿರ್ವಚಿಸುತ್ತದೆ. ಭಾರತೀಯತೆಯೇ ಈ ರಾಷ್ಟ್ರೀಯತೆಯ ಗುರುತಿಸುವಿಕೆ. ಈ ಮೂಲಕ ಪರೋಕ್ಷದಾರಿಯಿಂದ ನವಬ್ರಾಹ್ಮಣ್ಯ ವಿಚಾರಪ್ರಣೀತ ಯಾಜಮಾನ್ಯವನ್ನು ಸ್ಥಾಪಿಸುತ್ತದೆ.

ಈ ಪ್ರಬಲ ಸಂಸ್ಥೆಗಳು ಸೌಲಭ್ಯಗಳ ಉಳಿವಿಗಾಗಿ ಅವಕಾಶ ಒದಗಿಸುವುದೆಂದು ಮೇಲ್ವರ್ಗವು ಅಂತಃಸ್ಫೋರ್ತಿಯಿಂದ ಭಾವಿಸುತ್ತದೆ. ತುಳಿತಕ್ಕೊಳಗಾದವರು ತಮ್ಮ ಪಾಲಿನ ಅಧಿಕಾರದ ಬೇಡಿಕೆಯನ್ನು ವ್ಯಾಪಾಕವಾದ ವಿಚಾರಪ್ರಣಾಳಿಕೆಯ ಮೂಲಕ ಮುಂದಿಡಬೇಕೆ ವಿನಾ ಹಿಂದಿನ ಬ್ರಾಹ್ಮಣೀಕೃತ ಮೌಲ್ಯದ ಪ್ರತಿಪಾದನೆಯಂಥ ವಿಧಾನಗಳ ಪುನರಾವರ್ತನೆ, ಇಲ್ಲವೇ ಎಲೀಟುಗಳ ಆಡಳಿತ ವಿಧಾನಗಳಾದ ದಕ್ಷತೆ, ಪ್ರತಿಭೆ ಅಥವಾ ರೂಲ್ಸ್ ಆಫ್ ಗೇಮ್ ನಿಂದಲ್ಲ. ಮೌಲ್ಯಾಧಾರಿತ ರಾಜಕಾರಣವೆಂದು ಅನಿಶ್ಚಿತವಾಗಿ ವ್ಯಾಖ್ಯಾನಿಸಲ್ಪಟ್ಟ ಪರಿಕಲ್ಪನೆಯಡಿ ಇವು ಒಳಗೊಳ್ಳುವುದು. ಈ ರೀತಿಯ ಪರೋಕ್ಷವಾದ ಪ್ರಾಬಲ್ಯ ಉಂಟಾಗಲು ಒಂದು ಅಧಿಕಾರ ವಿಭಾಗವನ್ನು ರಚಿಸಬೇಕಿದೆ ಮತ್ತು ಇಂಥ ವಿಭಾಗಗಳ ಸುತ್ತ ಸಂಸದೀಯ ಆಳ್ವಿಕೆಯ ಪುನರ್ ರೂಪೀಕರಣವು ಸ್ಪಷ್ಟವಾಗಿ ನಡೆಯುತ್ತಿರುವುದು. ದೇಶದ ಆಳುವ ವರ್ಗದ ಅಧಿಕಾರವು ಬೂರ್ಶ್ವಾ ಮತ್ತು ಭೂಮಾಲೀಕರನ್ನೊಳಗೊಂಡ ವಿಭಾಗದ ಮೂಲಕ ಚಲಾಯಿಸಲ್ಪಡುವುದು. ಜಾಗತೀಕರಣದ ನವಉದಾರವಾದಿ ಪರ್ವದೊಂದಿಗೆ ಆಡಳಿತಶಾಹಿ ಮತ್ತಿತರ ಸಂಬಂಧಿ ಸಂಸ್ಥೆಗಳು ತಟಸ್ಥವಾಗಿದ್ದು. ತುಳಿತಕ್ಕೊಳಗಾದವರ ಜನಾಂದೋಲನ ಮತ್ತು ಪ್ರಜಾತಾಂತ್ರಿಕ ವಿಸ್ತರಣ ಸ್ವಾಯತ್ತತೆಯನ್ನು ಕಟ್ಟಿಹಾಕಲು ಇವೇ ಸಂಸ್ಥೆಗಳು ಬಳಕೆಯಾಗುತ್ತಿವೆ. ಜಾಗತೀಕರಣದ ಪರಿಣಾಮ ವ್ಯಾಪಕಗೊಂಡ ಆದಾಯದಲ್ಲಿನ ಅಸಮಾನತೆ, ಉದ್ಯೋಗಾವಕಾಶಗಳ ಗುತ್ತಿಗೆ, ಪ್ರಾದೇಶಿಕ ಮತ್ತು ಅಂತರ ಸಮುದಾಯದೊಳಗಿನ ಅಸಮಾನತೆ ಮುಂತಾದ ಭ್ರಮನಿರಸನದ ಸಂದಿಗ್ಧತೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯಗಳು ನಿರ್ಣಾಯಕವೆನಿಸುತ್ತವೆ. ಭಾರತದ ಇಂಥ ಸ್ಥಿತಿಯಲ್ಲಿ ಆಡಳಿತಶಾಹಿ ರಾಜ್ಯವು ಜಾಗತಿಕ ಬಂಡವಾಳದ ವಿಸ್ತರಣೆಗೆ ಕೆಲವು ಸಂದರ್ಭದಲ್ಲಿ ಅಡ್ಡಗಾಲು ಹಾಕಿದರೂ ಬೂರ್ಶ್ವಾವು ಇವಿಲ್ಲದೆ ಏನೂ ಮಾಡಲಾಗದು, ರಾಜಕೀಯ ನಾಯಕತ್ವದ ಜಾತಿ ಅಥವಾ ಸಾಂಸ್ಕೃತಿಕ ಹಿನ್ನೆಲೆ ಹೇಗಿದ್ದರೂ ಸೂಕ್ತವಾದ ಆರ್ಥಿಕ ನೀತಿ ಮತ್ತದರ ಜಾರಿಗೆ ಪರಿಣಾಮಕಾರಿ ಕ್ರಮಗಳನ್ನು ಅದು ತೆಗೆದುಕೊಳ್ಳುವವರೆಗೆ ಏನೇ ಆದರೂ ನಾಯಕತ್ವ ಒದಗಿಸುವ ಬೂರ್ಶ್ವಾಗೆ ಏನು ತೊಂದರೆಯಾಗದು. ಕಾರ್ಪೋರೇಟ್ ಮತ್ತು ಬೂರ್ಶ್ವಾ ಆಡಳಿತದ ಅಂಗ ಸಂಸ್ಥೆಗಳ ಅಧಿಕಾರಿ ವರ್ಗಗಳೆಲ್ಲವೂ ಮೇಲ್ವರ್ಗದವರಾಗಿದ್ದು ಏಕರೂಪಿಯಾಗುತ್ತಿದೆ. ಮಂಡಲ್ ವರದಿ ನಂತರದ ಭ್ರಮನಿರಸನದಲ್ಲೂ ವರ್ಗ ಆಡಳಿತವೂ ಅಬಾಧಿತವಾಗಿ ಮುಂದುವರೆಯುತ್ತಿದೆ. ಸದ್ಯದ ಸ್ಥಿತಿಯಲ್ಲಿ ಇದು ಬೂರ್ಶ್ವಾ, ಎಲೀಟು ಮತ್ತು ಹಿಂದುತ್ವದ ಸಮಾಗಮಕ್ಕೆ ತಳಹದಿ ಒದಗಿಸುತ್ತದೆ. ಆದರೆ ಈ ಸಮಾಗಮವು ಸ್ವಭಾವತಃ ದುರ್ಬಲವಾಗಿದ್ದು ಅನಿಶ್ಚಿತತೆಯ ಕಗ್ಗಂಟಾಗಿದೆ. ಪ್ರಜಾಸತ್ತಾತ್ಮಕ ಅಲೆಗಳು ಇವುಗಳಿಗೆ ಸವಾಲೊಡ್ಡುವುವು. ಆಳುವ ವರ್ಗವು ಪ್ರಜಾಸತ್ತೆಯನ್ನು ದುರ್ಬಲಗೊಳಿಸುವಲ್ಲಿ ಶಕ್ತವಾಗುತ್ತವೆಯೇ ಎಂದು ನಿಶ್ಚಿತವಾಗಿ ಹೇಳಲಾಗದು. ಆದರೆ ಕೆಳಜಾತಿಗಳ ಪ್ರಜಾಸತ್ತಾತ್ಮಕ ಆಂದೋಲನಗಳ ಪರಿಣಾಮಗಳನ್ನು ಅವರು ನಿಶ್ಚವಾಗಿಯೂ ಎದುರಿಸಬೇಕಿದೆ. ಇದು ಎಲೀಟು ರಾಜಕಾರಣದ ಪ್ರಜಾತಾಂತ್ರಿಕ ವಿರುದ್ಧವಾದದ ನಿಲುವನ್ನು ಸೂಚಿಸುತ್ತದೆ. ದಮನಿತರೊಂದಿಗೆ ಗುರುತಿಸಿಕೊಂಡು ಸ್ಥಿರ ಮತ್ತು ಜಾತ್ಯತೀತ ಪ್ರಜಾಸತ್ತೆ ಪುನರ್ ರೂಪೀಕರಣದ ಆಶಯವನ್ನು ಬಯಸುವ ವರ್ಗ ರಾಜಕಾರಣದ ಪುನರ್ ಪ್ರತಿಪಾದನೆ ಇದಾಗಿದೆ.