ನಟ್ಟಿರುಳ ನಭದಂತೆ ಕಾಳಿಮಾ ತನುವಾಗಿ
ಧಾವಿಸುವ ನಾರಿ ಯಾರು ?
ರಕ್ತ ಸಾಗರದಲ್ಲಿ ನೀಲ ಕಮಲದ ತೆರದಿ
ರಣರಂಗದಲಿ ಕುಣಿವ ಇವಳು ಯಾರು ?

ಯಾರೀ ದಿಗಂಬರೆಯು, ತನ್ನ ಮೂರ್ ಕಣ್ಣನೂ
ದಿಕ್ಕು ದಿಕ್ಕಿಗೆ ಇಂತು ಹೊರಳಿಸುವಳು !
ಆ ಶೂಲಪಾಣಿಯನೆ ಶವದಂತೆ ಮೆಟ್ಟುತ್ತ
ತಿರೆ ನಡುಗೆ ನರ್ತನವ ಗೈಯ್ಯುವವಳು !