ಸಾಮಾನ್ಯ ರೋಗಗಳಲ್ಲಿ ಆಹಾರ

ನಮ್ಮ ಪ್ರತಿನಿತ್ಯದ ಜೀವನದಲ್ಲಿ ಪೌಷ್ಠಿಕ ಆಹಾರ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಮ್ಮ ಆರೋಗ್ಯ, ಶಕ್ತಿ, ಸಂತೋಷ ಮೊದಲಾದವು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ. ಪುಷ್ಠಿಕರ ಆಹಾರ ಸೇವಿಸದಿದ್ದರೆ ಅನೇಕ ರೋಗಗಳಿಗೆ ನಮ್ಮ ದೇಹ ಮತ್ತು ಮನಸ್ಸು ಮಿದುಳು ತುತ್ತಾಗುತ್ತದೆ.

ಎಲ್ಲ ರೋಗಗಳಲ್ಲೂ ವಿಶೇಷ ಸರಳ ಆಹಾರ ಅಗತ್ಯ. ಅಲ್ಲದೆ ಆಹಾರ ರೋಗ ಗುಣವಾಗಲೂ ನೆರವಾಗುತ್ತದೆ. ಕೆಲವೊಮ್ಮೆ ಆಹಾರದಿಂದ ಅಲರ್ಜಿ ಕೂಡ ಉಂಟಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಶರೀರಕ್ಕೆ ಒಗ್ಗದ ಆಹಾರವನ್ನು ಬಿಟ್ಟು ಬಿಡುವುದು ಸೂಕ್ತ. ಸ್ಥೂಲಕಾಯತ್ವ ಅಥವಾ ಪೌಷ್ಠಿಕ ಆಹಾರದ ಕೊರತೆಯಿದ್ದಾಗ ಆಹಾರ, ಮುಖ್ಯಪಾತ್ರವನ್ನು ವಹಿಸುತ್ತದೆ. ಸಕ್ಕರೆ ಕಾಯಿಲೆ. ಕಾಲ್ಭೇನೆ ಇತ್ಯಾದಿ ತೊಂದರೆಗಳಿದ್ದಾಗ ಔಷಧಿಗಿಂತಲೂ ಆಹಾರ ಬಹಳ ಮುಖ್ಯ.

ವಿವಿಧ ದೃಷ್ಟಿಗಳಿಂದ ನೋಡಿದಾಗ ಆಹಾರದ ಅಗತ್ಯ ರೀತಿ ಕಂಡುಬರುತ್ತದೆ.

೧. ಒಟ್ಟು ಕ್ಯಾಲೋರಿಗಳು (ಸಾಮಾನ್ಯವಾಗಿ ಬೇಕಾದ್ದು ೧೮೦೦ ರಿಂದ ೩೦೦೦ ಒಂದು ದಿನಕ್ಕೆ)

೨. ಕಾರ್ಬೋಹೈಡ್ರೇಟ್ಸ್‌

೩. ಕೊಬ್ಬು

೪. ಪ್ರೋಟೀನ್‌

೫. ವಿಟಮಿನ್‌ಗಳು

೬. ಖನಿಜಗಳು

೭. ನೀರು

೮. ನಾರುಳ್ಳ ಆಹಾರ ಪದಾರ್ಥಗಳು

೯. ತೃಪ್ತಿ ನೀಡವಂತಹ ಆಹಾರ

ಇವು ಮೂಲಭೂತ ಒಂಭತ್ತು ಆಹಾರ ಪದಾರ್ಥಗಳು ಪ್ರತಿಯೊಬ್ಬರಿಗೂ ಪ್ರತಿನಿತ್ಯ ಅಗತ್ಯವಾಗಿ ಬೇಕಾದುವು.

ಆಹಾರ ಸೇವನೆಯ ಅಭ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ವ್ಯಕ್ತಿ ಸೇವಿಸುವ ಪೌಷ್ಠಿಕ ಆಹಾರವನ್ನು ಅವಲಂಬಿಸಿ ಆತನ ಆರೋಗ್ಯ  ಅಭಿವೃದ್ಧಿಗೊಳ್ಳುತ್ತದೆ.

ಕೆಲವು ಸಾಮಾನ್ಯ ರೋಗಗಳಲ್ಲಿ ರೋಗಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಸೂಚಿಸಿದೆ.

ಅಲ್ಪಾವಧಿಯಲ್ಲಿ ಬರುವ ಜ್ವರ

ಉದಾ: ಪ್ಲೂ

ಶರೀರಕ್ಕೆ ಅಗತ್ಯವಾದ ನೀರು, ಪ್ರೋಟೀನ್ಸ್‌ ಮತ್ತು ಮೊತ್ತದ ಕ್ಯಾಲೋರಿಗಳು, ಖನಿಜಗಳು, ವಿಟಮಿನ್‌ಗಳು ಮತ್ತು ನಾರುಳ್ಳ ಆಹಾರ ಎಲ್ಲ ಅಧಿಕಗೊಂಡ ಜ್ವರದಲ್ಲಿ ಅಗತ್ಯ. ಜೊತೆಗೆ , ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಬೇಕು. ರೋಗಿ ಹೆಚ್ಚು ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು. ಅಲ್ಲದೆ ದ್ರವ ಆಹಾರಗಳಾದ ಟೀ, ಕಾಫಿ, ಬಾರ್ಲಿ ನೀರು, ಹಣ್ಣಿನ ರಸ ಮೊದಲಾದವನ್ನೂ ಸೇವಿಸಬಹುದು.

ಅಲ್ಪಪ್ರಮಾಣದಲ್ಲಿ ಆಹಾರವನ್ನು ಪ್ರತಿ ಮೂರು ಗಂಟೆಗಳಿಗೊಮ್ಮೆ ರೋಗಿ ಸೇವಿಸಬೇಕು. ಇದರಿಂದ ಆಹಾರ ಜೀರ್ಣವಾಗಲು ಅನುಕೂಲವಾಗುತ್ತದೆ. ಇತರೆ ದಿನಗಳಿಗಿಂತಲೂ ಜ್ವರವಿದ್ದಾಗ ರೋಗಿಗೆ ಹೆಚ್ಚು ಕ್ಯಾಲೊರಿಗಳ ಅಗತ್ಯವದಿದೆ. ಆದುದರಿಂದ, ಗ್ಲೂಕೋಸ್‌, ಸಾಮಾನ್ಯ ಸಕ್ಕರೆ ಮೊದಲಾದುವನ್ನು ಕೊಡಬಹುದು. ಬೇಳೆಕಾಳುಗಳು, ಅನ್ನ, ಚಪಾತಿ, ಬೇಯಿಸಿದ ತರಕಾರಿ ಮತ್ತು ಬ್ರೆಡ್ಡನ್ನು ಅಲ್ಪಮಟ್ಟದ ಜ್ವರವಿದ್ದಾಗ ಸೇವಿಸಬಹುದು.  ಅತಿಯಾದ ಖಾರ, ಎಣ್ಣೆಯಲ್ಲಿ ಬೇಯಿಸಿದ ಆಹಾರ, ಅತಿಯಾಗಿ ಬಿಸಿಯಾಗಿರುವ ಆಹಾರವನ್ನು ಕೊಡಬಾರದು.

ಜ್ವರದ ಜೊತೆಗೆ, ಭೇದಿಯಿದ್ದರೆ ಘನ ಆಹಾರಕ್ಕಿಂತಲೂ ದ್ರವ ಆಹಾರವನ್ನೇ ಕೊಡುವುದು ಸೂಕ್ತ.

ಟೈಪಾಯಿಡ್ ಜ್ವರವಿದ್ದಾಗ ಆಹಾರ

ಸೋಂಕಿನ ಜ್ವರಗಳಲ್ಲಿ ಸಾಮಾನ್ಯವಾದದ್ದು ಟೈಫಾಯಿಡ್‌ ಅಥವಾ ಎಂಟಿರಿಕ್‌ ಫಿವರ್. ಟೈಫಾಯಿಡ್‌ನಿಂದ ನರಳುತ್ತಿರುವ ರೋಗಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಆಹಾರವನ್ನು ಕೊಡಬೇಕು. ಕಾಫಿ, ಟೀ, ಹಣ್ಣಿನ ರಸ, ಐಸ್‌ಕ್ರೀಮ್‌, ಮಜ್ಜಿಗೆ, ಬಾರ್ಲಿ ನೀರು ಮೊದಲಾದವು.

ತರಕಾರಿ, ಹಣ್ಣುಗಳಾದ ಮಾವಿನ ಹಣ್ಣು, ಪರಂಗಿ ಹಣ್ಣು, ಸೀಬೆ ಹಣ್ಣು ಮೊದಲಾದುದನ್ನು ಟೈಫಾಯಿಡ್‌ ಜ್ವರವಿದ್ದಾಗ ಕೊಡಬಾರದು. ಮೂಸಂಬಿ ಮತ್ತು ಸೇಬು ಅಥವಾ ಚೆನ್ನಾಗಿ ಮಾಗಿದ ಬಾಳೇಹಣ್ಣನ್ನು ಕೊಡಬಹುದು. ತೊಡಕಿಲ್ಲದ ಟೈಫಾಯಿಡ್‌ ರೋಗಿಗಳಿಗೆ ಬೇಕಿದ್ದರೆ ಐಸ್‌ ಕ್ರೀಂ, ಹಣ್ಣಿನ ರಸ, ಚಾಕೋಲೇಟ್‌ ಕೊಡಬಹುದು.

ತೊಡಕಿದ್ದರೆ, ವೈದ್ಯರ ಸಲಹೆಯ ಮೇರೆಗೆ ಆಹಾರ ಕೊಡಬಹುದು.

ಕ್ಷಯರೋಗವಿದ್ದಾಗ ಆಹಾರ

ಇಂದು ಭಾರತದಲ್ಲಿ ಕ್ಷಯ ರೋಗ ಒಂದು ಸಾಮಾನ್ಯ ಕಾಯಿಲೆಯಾಗಿ ಪರಿಣಮಿಸಿದೆ. ಅಲ್ಲದೆ, ಈ ರೋಗ ಗುಣವಾಗಲು ದೀರ್ಘಕಾಲ ತೆಗೆದುಕೊಳ್ಳುತ್ತದೆ. ಕ್ಷಯವಿದ್ದಾಗ ಚಿಕಿತ್ಸೆಯ ಜೊತೆಗೆ,  ಔಷಧಿಗಳು, ವಿಶ್ರಾಂತಿ ಹೆಚ್ಚು ಅಗತ್ಯ. ರೋಗಿಗೆ, ಹೆಚ್ಚು ಕ್ಯಾಲೊರಿಗಳು, ಹೆಚ್ಚು ಪ್ರೋಟೀನು ಮತ್ತು ವಿಟಮಿನ್‌ಗಳು ಅಧಿಕವಾಗಿರುವ ಆಹಾರವನ್ನು ಕೊಡಬೇಕು. ಹಾಲು, ಮೊಸರು, ಮಜ್ಜಿಗೆ, ಬೇಳೆಕಾಳು, ಸೋಯಬೀನ್ಸ್‌ ಮೊದಲಾದುವನ್ನು ಕೊಡಬೇಕು. ಸಸ್ಯಾಹಾರಿಗಳು ಸಾಧ್ಯವಾದರೆ ಮಾಂಸ, ಮೊಟ್ಟೆ ಮೀನನ್ನು ಕ್ರಮವಾಗಿ ಸೇವಿಸಬಹುದು. ಒಂದು ಅಥವಾ ಎರಡು ತಾಜಾ ಹಣ್ಣು ಅಥವಾ ಹಣ್ಣಿನ ರಸವನ್ನು ಕ್ರಮವಾಗಿ ಪ್ರತಿನಿತ್ಯ ಕುಡಿಯಬೇಕು.

ಮಲಬದ್ಧತೆ ಇದ್ದಾಗ ಆಹಾರ

ಮಲಬದ್ಧತೆ ಒಂದು ಸಾಮಾನ್ಯವಾದ ತೊಂದರೆ . ಕಾಲಕ್ಕೆ ಸರಿಯಾಗಿ ಮಲ ವಿಸರ್ಜನೆಯಾಗದೆ ವ್ಯಕ್ತಿಯಲ್ಲಿ ತೊಡಕನ್ನುಂಟು ಮಾಡುತ್ತದೆ. ಅನೇಕ ರೋಗಗಳಲ್ಲೂ ಮಲಬದ್ಧತೆ ಉಂಟಾಗುತ್ತದೆ. ಮುಖ್ಯವಾಗಿ ನಾವು ಪ್ರತಿನಿತ್ಯ ನಾರುಳ್ಳ ಆಹಾರ ಸೇವಿಸದಿದ್ದರೆ ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆಯಿಂದ ನರಳುವ ರೋಗಿಗಳು, ಹಸಿರು ತರಕಾರಿಗಳನ್ನು ಸೇವಿಸಬೇಕು, ಹಣ್ಣಿನ ತರಕಾರಿಗಳನ್ನು ತಿನ್ನಬೇಕು. ಸೌತೆಕಾಯಿ, ಟೊಮೋಟೊ, ಈರುಳ್ಳಿ, ಕ್ಯಾರೆಟ್‌ ಮೊದಲಾದುವನ್ನು ಹೆಚ್ಚಾಗಿ ಸೇವಿಸಬೇಕು. ಟೀ, ಕಾಫೀ, ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಬಿಸಿ ನೀರನ್ನು ಕನಿಷ್ಠ ಮೂರು ಬಾರಿಯಾದರೂ ಕುಡಿಯಬೇಕು. ನಿಂಬೆ ಹಣ್ಣಿನ ರಸವನ್ನು ಸ್ವಲ್ಪ ಅಡಿಗೆ ಉಪ್ಪು ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. (ವಿಶೇಷವಾಗಿ ಬೆಳಗಿನ ಆಹಾರದಲ್ಲಿ). ಕ್ರಮವಾಗಿ ಮಲ ವಿಸರ್ಜಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಭೇದಿ ಅಥವಾ ಅತಿಸಾರವಿದ್ದಾಗ ಆಹಾರ

ಚಿಕ್ಕ ಮಕ್ಕಳಲ್ಲಿ ಭೇದಿ ಅತಿ ಸಾಮಾನ್ಯವಾದದ್ದು. ವಯಸ್ಕರಲ್ಲಿ ಸೋಂಕಿನಿಂದ ಭೇದಿ ಉಂಟಾಗುತ್ತದೆ. ಸಾಮಾನ್ಯವಾಗಿ ಪದೇ ಪದೇ ಭೇದಿ ಆಗುತ್ತಿದ್ದರೆ ಹಸಿರು ಕಾಯಿ ಪಲ್ಯೆಗಳು ರಸಾಯನ-ಇತ್ಯಾದಿಗಳನ್ನು ಸೇವಿಸಬಾರದು. (ಮಲಬದ್ಧತೆ ಇದ್ದಾಗ ತೆಗೆದುಕೊಳ್ಳಲು ತಿಳಿಸಿರುವ ಆಹಾರವನ್ನು ಭೇದಿ ಇದ್ದಾಗ ತೆಗೆದುಕೊಳ್ಳಬಾರದು). ಬೇಕಿದ್ದರೆ, ಕಾಫಿ, ಟೀ , (ಕಡಿಮೆ ಪ್ರಮಾಣದಲ್ಲಿ) ಹಣ್ಣಿನ ರಸ ಸೇವಿಸಬಹುದು. ಚೆನ್ನಾಗಿ ಮಾಗಿದ ಬಾಳೇ ಹಣ್ಣು, ಸೇಬು ತಿನ್ನಬಹುದು. ತಿಳಿಸಾರು, ಅನ್ನಸೇವಿಸಬಹುದು. ಖಾರ, ಎಣ್ಣೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಅತಿ ಬಿಸಿ ಇರುವ ಆಹಾರವನ್ನು ಸೇವಿಸಬಾರದು.

ಜಾಂಡೀಸ್ ಇದ್ದಾಗ ಆಹಾರ

ಸಾಮಾನ್ಯವಾಗಿ ಜಾಂಡೀಸ್‌ ಆಗಲು ಕಾರಣ, ಸೋಂಕೀನ ಈಲಿಯುರಿತ (ಹೆಪಟೈಟಿಸ್‌).  ಜಾಂಡೀಸ್‌ ಇದ್ದಾಗ ಹಸಿವು ಇರುವುದಿಲ್ಲ. ವಮನ ಪ್ರವೃತ್ತಿ ಇರುತ್ತದೆ. ವಾಂತಿಯು ಇರುತ್ತದೆ.

ಆಹಾರ ಹಸಿವನ್ನುಂಟು ಮಾಡುವಂತಹುದ್ದಾಗಿರಬೇಕು. ಜೀರ್ಣವಾಗುವ ಆಹಾರವನ್ನು ಅಲ್ಪಪ್ರಮಾಣದಲ್ಲಿ ಕೊಡಬೇಕು. ಅಂತಹುವುಗಳೆಂದರೆ ದ್ರವ ಪದಾರ್ಥಗಳು, ಹಣ್ಣಿನ ರಸ, ಕಬ್ಬಿನ ಹಾಲು, ಗ್ಲೂಕೋಸ್‌ ಮತ್ತು ಮಾಲ್ಟೋಸ್‌, ಹೆಚ್ಚು ಕ್ಯಾಲೋರಿಗಳಿಗಿರುವ ಆಹಾರಗಳಾದ ಅನ್ನ, ಬ್ರೆಡ್ಡು, ಬೆಣ್ಣೆ, ಚಾಕೋಲೇಟ್‌, ಐಸ್‌ಕ್ರೀಂ, ಮೊದಲಾದುವನ್ನು ಕೊಡಬಹುದು. ವಾಂತಿಯಿದ್ದರೆ, ಕಾಫಿ, ಟೀ, ಖಾರ, ಎಣ್ಣೆಯಲ್ಲಿ ಬೇಯಿಸಿದ ಆಹಾರವನ್ನು ಕೊಡಬಾರದು. ಹಾಲು, ಹಾಲಿನ ಕೆನೆ, ಬೆಣ್ಣೆ ಮತ್ತು ತುಪ್ಪ ಜಾಂಡೀಸ್‌ ರೋಗಿಗೆ ಅಪಾಯ ಎಂದು ಕೆಲವರ ನಂಬಿಕೆ. ಆದರೆ, ಇದು ನಿಜವಲ್ಲ, ರೋಗಿಗೆ ಸೂಕ್ತವಾದ ಇಷ್ಟವಾದ ಸರಳ ಆಹಾರ ಕೊಡಬಹುದು.

ಪೆಪಿಕ್ಟ್ ಅಲ್ಸರ್ ಇದ್ದಾಗ ಆಹಾರ

ಪಿಪಿಕ್ಟ್‌ ಅಲ್ಸರ್ನಲ್ಲೇ ಗ್ಯಾಸ್ಟ್ರಿಕ್‌ ಅಲ್ಸರ್ ಮತ್ತು ಡುಯೋಡಿನಲ್‌ ಅಲ್ಸರ್ ಸೇರಿಕೊಂಡಿವೆ. ಇದರಲ್ಲೂ ಆಹಾರ ಸೇವನೆ ಒಂದೇ ರೀತಿಯದ್ದಾಗಿರುತ್ತದೆ. ಮೆತು ಅಥವಾ ಸಪ್ಪೆ ಆಹಾರವನ್ನು ಆಗಿಂದಾಗ್ಗೆ ಹೈಪರ್ ಆಸಿಡಿಟಿಯನ್ನು ಕಡಿಮೆ ಮಾಡಲು ಸೇವಿಸಬೇಕು. ಯತೇಚ್ಛವಾಗಿ ಹಾಲನ್ನು ಸೇವಿಸಬೇಕು. ಬೇಯಿಸಿದ ಆಲೂಗಡ್ಡೆ, ಕಲ್ಲಂಗಡಿ ಹಣ್ಣು, ಚೆನ್ನಗಿ ಮಾಗಿದ ಬಾಳೇಹಣ್ಣು, ಸೇಬು ತಿನ್ನಬಹುದು. ಟೀ, ಕಾಫಿ, ಬಿಸಿಯಾದ ಆಹಾರ, ಖಾರದ ಪದಾರ್ಥಗಳು ಉಪ್ಪಿನ ಕಾಯನ್ನು ಸೇವಿಸಬಾರದು. ಉಪ್ಪನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು.

ಬೊಜ್ಜು ಅಥವಾ ಸ್ಥೂಲಕಾಲಕಾಯತ್ವ ಇದ್ದಾಗ ಆಹಾರ

ಬೊಜ್ಜು ಉಂಟಾಗಲು ಅನೇಕ ಕಾರಣಗಳಿವೆ. ಅವುಗಳೆಂದರೆ, ಜೆನಿಟಿಕ್‌, ಪರಿಸರ, ಉದ್ಯೋಗ, ಮಾನಸಿಕ, ಒಳಸುರಿತ ಗ್ರಂಥಿ ಮೊದಲಾದವು. ಆದರೆ ಮುಖ್ಯ ಕಾರಣ ಆಹಾರದಲ್ಲಿ ಅತಿಯಾದ ಕ್ಯಾಲೊರಿಗಳ ಸೇವನೆ. ಬೊಜ್ಜಿನಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಅಧಿಕವಾದ ಶರೀರ ತೂಕ, ಹೃದಯದ ರಕ್ತ ಸಂಚಾರದ ವ್ಯೂಹದ ಮೇಲೆ ಹೆಚ್ಚು ಒತ್ತದ ಉಂಟು ಮಾಡುತ್ತದೆ. ಅಲ್ಲದೆ ಬೊಜ್ಜಿನಿಂದ, ರಕ್ತದ ಒತ್ತಡ, ಹೃದಯಾಘಾತ, ಸಕ್ಕರೆ ಕಾಯಿಲೆ ಮೊದಲಾದ ತೊಂದರೆಗಳು ಉಂಟಾಗಬಹುದು.

ಪ್ರತಿ ಆಹಾರ ಪದಾರ್ಥದಲ್ಲೂ ಕ್ಯಾಲೊರಿಗಳಿವೆ. ಕೆಲವುಗಳಲ್ಲಿ ಹೆಚ್ಚು ಕೆಲವುಗಳಲ್ಲಿ ಕಡಿಮೆ ಇರುತ್ತದೆ. ಅಂತಹ ಹೆಚ್ಚು ಕ್ಯಾಲೊರಿಗಳಿಗಿರುವ ಆಹಾರಗಳೆಂದರೆ ಸಕ್ಕರೆ, ಅನ್ನ, ಆಲೂಗಡ್ಡೆ, ತುಪ್ಪ, ಬೆಣ್ಣೆ, ಕ್ರೀಂ, ಎಣ್ಣೆ, ಎಣ್ಣೆಯಲ್ಲಿ ಬೇಯಿಸಿದ ಆಹಾರಗಳು, ಆಲ್ಕೋ ಹಾಲ್‌, ಸಿಹಿ ತಿಂಡಿಗಳು-ಇತ್ಯಾದಿ. ಇವನ್ನು ಅತಿಯಾಗಿ ಸೇವಿಸಿದರೆ ಬೊಜ್ಜು ಉಂಟಾಗಬಹುದು. ಆದುದರಿಂದ, ಹೆಚ್ಚು ಕ್ಯಾಲೊರಿಗಳಿಗಿರುವ ಆಹಾರ ಪದಾರ್ಥಗಳ ಸೇವನೆಯನ್ನು ಮಿತವಾಗಿ ಸೇವಿಸಬೇಕು.

ತೂಕ ಕಡಿಮೆ ಮಾಡುವ ಔಷಧಿ, ಗುಳಿಗೆಗಳನ್ನು ತಜ್ಞ ವೈದ್ಯರ ಸಲಹೆಯಿಲ್ಲದೆ ಸೇವಿಸಬಾರದು.

ಸ್ಥೂಲಕಾಯಿಗಳು ಕಡಿಮೆ ಕ್ಯಾಲೊರಿಗಳಿಗಿರುವ ಹಸಿರು ಕಾಯಿಪಲ್ಲೆಗಳು, ಕುಂಬಳ ಕಾಯಿ, ಬದನೆಕಾಯಿ, ಟೊಮೆಟೋ, ಸೌತೆಕಾಯಿ, ಹಣ್ಣಿನ ತರಕಾರಿಗಳು, ಕ್ಯಾಬೇಜ್‌, ಕ್ಯಾರೆಟ್‌, ಕಲ್ಲಂಗಡಿ ಹಣ್ಣು, ಹಾಲನ್ನು ಸೇವಿಸಬಹುದು. ಮಾಂಸಾಹಾರದಲ್ಲಿ ಹೆಚ್ಚು ಕ್ಯಾಲೊರಿಗಳು ಮತ್ತು ಪ್ರೋಟೀನು ಹೆಚ್ಚಿರುವುದರಿಂದ ಅವನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು.

ಶರೀರದ ತೂಕವನ್ನು ಒಂದೇ ಬಾರಿಗೆ ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ‘ಆಹಾರಪಥ್ಯ’ ಮಾಡದೆ ಕಡಿಮೆ ಆಹಾರ ಸೇವಿಸುತ್ತಾ ತೂಕ ಕಡಿಮೆ ಮಾಡಿಕೊಳ್ಳಬೇಕು. ಅಲ್ಲದೆ, ಕ್ರಮವಾದ ಸರಳ ವ್ಯಾಯಾಮ-ಯೋಗಾಸನ, ವೇಗದ ನಡಿಗೆಯಿಂದಲೂ ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಕ್ಕಳಿಗೆ ಹೆಚ್ಚು ಕ್ಯಾಲೊರಿಗಳಿರುವ ಪದಾರ್ಥಗಳನ್ನು ಮಿತವಾಗಿ ಕೊಡಬೇಕು. ೩೫ ವರ್ಷಗಳ ನಂತರ ಕಡಿಮೆ ಕ್ಯಾಲೊರಿಗಳ ಆಹಾರ ಸೇವಿಸಬೇಕು.

ರಕ್ತ ದೊತ್ತಡ ಮತ್ತು ಹೃದಯರೋಗಗಳಲ್ಲಿ ಆಹಾರ

ಹೆಚ್ಚು ರಕ್ತದ ಒತ್ತಡವಿದ್ದಾಗ, ಹೃದಯ ರೋಗವಿದ್ದಾಗ ಮತ್ತು ಕಾಲು, ಪಾದದ ಊತವಿದ್ದಾಗ ಅಡಿಗೆ ಉಪ್ಪನ್ನು ಸೇವಿಸಬಾರದು. ಬೆಣ್ಣೆ, ತುಪ್ಪ, ಡಾಲ್ಡ ಮಿತವಾಗಿ ಸೇವಿಸಬೇಕು. ಇದನ್ನು ಅತಿಯಾಗಿ ಸೇವಿಸಿದರೆ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿ, ಹೃದಯ ರೋಗ, ಪೆರಲಿಸಿಸ್‌ (ಲಕ್ವ)  ಮೊದಲಾದ ತೊಂದರೆಗಳು ಉಂಟಾಗುತ್ತವೆ. ಆದುದರಿಂದ, ಕಡಿಮೆ ಕೊಬ್ಬು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಮೂತ್ರಕೋಶದಲ್ಲಿ ಕಲ್ಲಿದ್ದಾಗ ಆಹಾರ

ಮೂತ್ರಕೋಶದಲ್ಲಿ ಯಾವ ಪ್ರಮಾಣದ ಕಲ್ಲುಗಳು ರೂಪಿತವಾಗಿವೆ. ಅದರಿಂದ ಎಷ್ಟು ಹಾನಿ ಉಂಟಾಗಿದೆ ಎಂಬುದನ್ನು ಆಧರಿಸಿ ಆಹಾರ ಸೇವಿಸಬೇಕಾಗುತ್ತದೆ. ಇದನ್ನು ತಜ್ಞವೈದ್ಯರಿಂದ ತಿಳಿದು ಅವರ ಸಲಹೆಯಂತೆ ಸೂಕ್ತ ಆಹಾರ ಸೇವಿಸಬೇಕು.

ಜೊತೆಗೆ ಟೊಮೆಟೋ, ಮೆಣಸು, ಹುಣಸೇಹಣ್ಣು, ಈರುಳ್ಳಿ, ಬೆಂಡೆಕಾಯಿ, ಗೋ, ಆಲೂಗಡ್ಡೆಯನ್ನು ಸೇವಿಸಬಾರದು. ಅಲ್ಲದೆ ಮೂತ್ರಕೋಶದಲ್ಲಿ ಕಲ್ಲಿದ್ದರೆ ಖಂಡಿತವಾಗಿಯೂ ಕಾಫಿ, ಟೀ, ಕಾಳುಗಳು, ಮಾಂಸ, ಅಡಿಕೆ, ಕಡ್ಲೆಕಾಯಿ ಬೀಜ ಮೊದಲಾದುವನ್ನು ಸೇವಿಸಬಾರದು. ರೋಗಿ ಯತೇಚ್ಛವಾಗಿ ಶುದ್ಧವಾದ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.