“ನಿಜವಾದ ವೈದ್ಯರು ಮೊದಲು ಕಾಯಿಲೆಗೆ ಕಾರಣವೇನೆಂದು ಕಂಡುಹಿಡಿಯುತ್ತಾರೆ. ಕಾಯಿಲೆ ಇದೆಯೆಂದು ಗೊತ್ತಾದರೆ ಅವರು ಮೊದಲು, ಆಹಾರದಿಂದ ಗುಣಪಡಿಸಲು ಪ್ರಯತ್ನಿಸುತ್ತಾರೆ. ಆಹಾರ ಸೇವನೆಯಿಂದ ಸೋಲು ಉಂಟಾದರೆ ಅವರು ಔಷಧಿಯನ್ನು ಕೊಡುತ್ತಾರೆ” ಎಂದು ಚೀನಾ ದೇಶದ ಆರನೇ ಶತಮಾನದ ವೈದ್ಯಕೀಯ ಲೇಖಕ ಸನ್‌ಸೆಮಿಯೊ ತಿಳಿಸಿದ್ದಾರೆ. ಮೇಲ್ಕಂಡ ಮಾತು ಈವೊತ್ತಿಗೂ ನಿಜವಾಗಿದೆ. ಮಧುಮೇಹದ ನಿಯಂತ್ರಣದಲ್ಲಿ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸುವುದು ಮೂಲ ಭೂತವಾಗಿ ಆಹಾರವೇ, ಆಹಾರವನ್ನು ಶರೀರದ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕೇ ಹೊರತು, ಹಸಿವು ಎಂದು ಸಿಕ್ಕಾಪಟ್ಟೆ ತಿನ್ನಬಾರದು.  

ಆಹಾರವನ್ನು ಮೂಲಭೂತವಾಗಿ ಕೆಳಕಂಡಂತೆ ವಿಂಗಡಿಸಬಹುದು

೧. ಕಾರ್ಬೋಹೈಡ್ರೇಟ್‌ – ಸಕ್ಕರೆ ಪಿಷ್ಠಪದಾರ್ಥಗಳು ಇತ್ಯಾದಿ.

೨. ಕೊಬ್ಬಿನ ಪದಾರ್ಥಗಳು-ಎಣ್ಣೆ, ತುಪ್ಪ, ಬೆಣ್ಣೆ, ವನಸ್ಪತಿ ಇತ್ಯಾದಿ.

ಇವೆರೆಡು ಶರೀರಕ್ಕೆ ಇಂಧನವಿದ್ದಂತೆ ಅಂದರೆ, ಶರೀರದಲ್ಲಿ ಉಷ್ಣತೆ ಮತ್ತು ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.

೩. ಪ್ರೋಟೀನ್ಸ್‌ (ಸಸಾರಜನಕ) ಮೀನು, ಮಾಂಸ, ಮೊಟ್ಟೆ ಹಾಲು, ಮತ್ತು ಅದರ ಉತ್ಪನ್ನಗಳು, ಬೇಳೆ ಕಾಳುಗಳು-ಮೊದಲಾದುವು. ಇವು ಶರೀರದ (ಟಿಶ್ಯೂ-ಊತಕಗಳು) ನಿರ್ಮಾಣಕ್ಕೆ ಅಗತ್ಯ.

೪. ಖನಿಜಗಳು-ಕಬ್ಬಿಣ, ಸುಣ್ಣ, ಅಯೋಡಿನ್‌ ಮುಂತಾದವು.

೫. ವಿಟಮಿನ್‌ಗಳು-ನೀರು ಮತ್ತು ನೀರಿನಲ್ಲಿ ಕರಗುವಂತಹವು.

೬. ಸೆಲ್ಯೂಲೋಸ್‌ (ಗಿಡನಾರು).

೭. ನೀರು.

ಆಹಾರ: ಮಾಡಬೇಕಾದ್ದು; ಮಾಡಬಾರದ್ದು

ಮಧುಮೇಹ ಕಾಯಿಲೆಯ ಚಿಕಿತ್ಸೆಯಲ್ಲಿ ಆಹಾರ ಪ್ರಧಾನ ಪಾತ್ರವನ್ನು ವಹಿಸುತ್ತದೆ, ಔಷಧಿಗಳು ಮತ್ತು ವ್ಯಾಯಾಮ ಪೂರಕವಾಗಿರುತ್ತವೆ.

ಮಧುಮೇಹದವರು ಆಹಾರದ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳು:

೧. ವೈದ್ಯರು ತಿಳಿಸಿರುವ ಆಹಾರವನ್ನೇ ಪ್ರತಿ ನಿತ್ಯ ಸೇವಿಸಬೇಕು. ಆಹಾರ ಸೇವನೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಉದ್ದೇಶವಿದ್ದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

೨.  ಊಟದ ವಿಷಯದಲ್ಲಿ ತೊಂದರೆಯಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿರಿ.

೩.  ನಿಮ್ಮ ವೈದ್ಯರು ಪಟ್ಟಿ ಮಾಡಿಕೊಟ್ಟಿರುವ ಆಹಾರವನ್ನೇ ಪ್ರತಿ ನಿತ್ಯ ಸೇವಿಸುವುದು ಸೂಕ್ತ.

೪. ಊಟವನ್ನು ಬಿಡಬಾರದು. ಅಲ್ಲದೆ, ನಿಶ್ಚಿತವಾದ ಊಟದ ನಡುವೆ ತಿಂಡಿ ತಿನಿಸನ್ನು ಸೇವಿಸದಿರುವುದು ಉತ್ತಮ. ಊಟದ ನಡುವೆ ಸಿಹಿ-ತಿಂಡಿಗಳನ್ನು, ಬೇಕರಿ ತಿಂಡಿಗಳನ್ನು ಆಲ್ಕೋಹಾಲನ್ನು ಕುಡಿದು ಊಟದಿಂದ ವಂಚಿತರಾಗಬೇಡಿ.

೫. ನೀವು, ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರೆ, ಆಹಾರವನ್ನು ನಿಗದಿಪಡಿಸಿದ ಸಮಯದಲ್ಲೇ ಸೇವಿಸಿರಿ. ಇನ್ಸುಲಿನ್‌ ತೆಗೆದುಕೊಳ್ಳುತ್ತಿರುವವರು ನಿಗದಿಪಡಿಸಿದ ವೇಳೆಯಲ್ಲಿ ಊಟವನ್ನು ಮಾಡುವುದರಿಂದ, ರಕ್ತದಲ್ಲಿ ಸಕ್ಕರೆಯ ಅಂಶದ ಕೊರತೆಯನ್ನು ತಡೆಗಟ್ಟಿಕೊಳ್ಳಬಹುದು.  (ಹೈಪೋಗ್ಲೈ ಸಿಮಿಯಾ).

೬. ಅತಿಯಾಗಿ ಒಂದೇ ಸಾರಿ ಊಟ ಮಾಡುವ ಬದಲು, ಆಗಿಂದಾಗ್ಗೆ, ನಿಗದಿತ ವೇಳೆಯಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು.

೭. ಪ್ರತಿ ನಿತ್ಯ ಊಟವನ್ನು ನಿಗದಿತ ಸಮಯದಲ್ಲೇ ಮಾಡುವುದು ಸೂಕ್ತ.

೮. ವೈದ್ಯರ ಸಲಹೆಯನ್ನು ಪಡೆಯದೆ, ಕೂಡಲೇ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿರಿ.

೯. ಪ್ರಮಾಣಬದ್ಧವಾದ ಆಹಾರವನ್ನು ಸೇವಿಸಿರಿ.

೧೦. ದ್ವಿದಳ ಧಾನ್ಯಗಳು, ಕಾಳುಗಳು, ತುಪ್ಪ ಅಥವಾ ಎಣ್ಣೆಯನ್ನು ಅಳತೆ ಪ್ರಮಾಣದಲ್ಲಿ ಸೇವಿಸಿರಿ. ಬೇಯಿಸಿದ ನಂತರ ಅಳತೆ ಪ್ರಮಾಣದಲ್ಲಿ ಸೇವಿಸಿರಿ.

೧೧. ಅನ್ನ, ಆಲೂಗಡ್ಡೆ, ಹಣ್ಣುಗಳನ್ನು ತಿನ್ನಬಾರದೆಂದು ನಿಷೇಧವೇನಿಲ್ಲ. ಆದರೆ ಅವುಗಳನ್ನು ಸೇವಿಸುವ ಮೊದಲು ಅವುಗಳಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿ ಮೌಲ್ಯವನ್ನು ಅರಿತಿರಬೇಕು.

ನೆನೆಪಿಡಿ:

ಮಧುಮೇಹದವರಿಗೆ, ವಿಶೇಷವಾದ ಆಹಾರದ ಅಗತ್ಯವೇನಿಲ್ಲ. ತನ್ನ ಕುಟುಂಬದ ಸದಸ್ಯರು ಸೇವಿಸುವ ಆಹಾರವನ್ನೇ ಅಳತೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದಷ್ಟೆ.

ಕೆಳಕಂಡ ಆಹಾರ ಪದಾರ್ಥಗಳನ್ನು ಮಧುಮೇಹದವರು ಸೇವಿಸಬಹುದು.

೧. ನೀರು, ಸಕ್ಕರೆ ಇಲ್ಲದೆ ಕಾಫಿ, ಟೀ, ಕೊಬ್ಬು ಇಲ್ಲದ ಸೂಪನ್ನು ಸೇವಿಸಬಹುದು.

೨. ನಿಂಬೆಹಣ್ಣಿನ ರಸ, ಉಪ್ಪಿನ ಕಾಯನ್ನು ಸೇವಿಸಬಹುದು.

೩. ಕಡಿಮೆ ಪ್ರಮಾಣದಲ್ಲಿ Saffola ದಂತಹ ಎಣ್ಣೆಯನ್ನು ಉಪಯೋಗಿಸಬಹುದು.

೪. ಶೇಕಡ ಮೂರರಿಂದ, ನಾಲ್ಕರಷ್ಟು ಕಾರ್ಬೋಹೈಡ್ರೇಟ್ಸ್‌ (ಶರ್ಕರಪಿಷ್ಠಿ ಇರುವ) ತಾಜಾ ತರಕಾರಿಗಳನ್ನು, ಹಾಗೆಯೇ ಅಥವಾ ಅರ್ಧ ಬೇಯಿಸಿ (ಉದಾ: Beetroot, Potato, Carrot) ಕಡಿಮೆ ಪ್ರಮಾಣದಲ್ಲಿ ಉಳಿದವನ್ನು ಬೇಕಾದಷ್ಟು) ತಿನ್ನಬಹುದು.

೫. ಏಕದಳ ಧಾನ್ಯಗಳಲ್ಲಿ ರಾಗಿ, ಗೋಧಿ, ಅಕ್ಕಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.

ಕೆಳಕಂಡ ಪದಾರ್ಥಗಳನ್ನು ಮಧುಮೇಹದವರು ಸೇವಿಸಬಾರದು:

೧. ಐಸ್‌ಕ್ಯಾಂಡಿ, ಐಸ್‌ಕ್ರೀಮ್‌, ಗ್ಲೂಕೋಸ್‌, ಜೇನುತುಪ್ಪ, ಬೆಲ್ಲ, ಜಾಮ್‌, ಸಕ್ಕರೆ, ಪಾನಕ.

೨. ಕೇಕ್‌ಗಳು, ಪೇಡ, ಬಿಸ್ಕತ್‌ಗಳು ಹಾಲಿನ ಉತ್ಪನ್ನಗಳು.

೩. ಬಿಯರ್, ವೈನ್‌ ಮತ್ತು ಇತರೆ ಆಲ್ಕೋಹಾಲ್‌ ಪದಾರ್ಥಗಳನ್ನು ಖಂಡಿತವಾಗಿಯೂ ಸೇವಿಸಬಾರದು.