ಸ್ಥೂಲಕಾಯತೆ ಅಥವಾ ಬೊಜ್ಜು ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಾಮಿಸಿದೆ. ಸ್ಥೂಲಕಾಯತೆ ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು. ಇದಕ್ಕೆ ಗಂಡು, ಹೆಣ್ಣು ಎಂಬ ಭೇದವೇನಿಲ್ಲ. ಆದರೆ, ಮೈನೆರೆದ ನಂತರ ಇದು (ಗಂಡಸರಿಗಿಂತಲೂ) ಹೆಂಗಸರಲ್ಲಿ ಬಹು ಸಾಮಾನ್ಯ. ಅಲ್ಲದೆ, ಹೆಂಗಸರಲ್ಲಿ ಇಪ್ಪತ್ತೈದು ವರ್ಷ ಸಮೀಪಿಸುವ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದಾಗ ಮತ್ತು ಮುಟ್ಟು ನಿಂತ ನಂತರ (೪೫ನೇ ವಯಸ್ಸಿನಲ್ಲಿ) ಶರೀರದ ತೂಕದಲ್ಲಿ ಹೆಚ್ಚಳ ಕಂಡು ಬರುತ್ತದೆ. ಗಂಡರಲ್ಲಿ ನಿಶ್ಚಿತವಾಗಿ ಯಾವಾಸ ಸ್ಥೂಲಕಾಯತ್ವ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗುವುದಿಲ್ಲ. ೩೦ ರಿಂದ ೫೦ ವರ್ಷಗಳೊಳಗೆ ಉಂಟಾಗಬಹುದು. ಅಲ್ಲದೆ, ೫೦ ವರ್ಷಗಳ ನಂತರ ಶರೀರದ ತೂಕದಲ್ಲಿ ಇಳಿಮುಖ ಕಂಡುಬರುತ್ತದೆ. ಭಾರತದಲ್ಲಿ ಬಡವರಿಗಿಂತಲೂ ಕೆಲವು ಸಿರಿವಂತರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದೆ. ಏಕೆಂದರೆ, ಕೆಲವು ಶ್ರೀಮಂತರು ತಿನ್ನುವುದು ಹೆಚ್ಚು. ಶ್ರಮಪಟ್ಟು ದುಡಿಯುವುದು ಕಡಿಮೆ.

ಸ್ಥೂಲಕಾಯತ್ವ ಎಂದರೇನು?

ಸ್ಥೂಲಕಾಯತ್ವ ಅಥವಾ ಬೊಜ್ಜು ಅಂದರೆ ಶರೀರದಲ್ಲಿ ಅತಿ ಹೆಚ್ಚಾದ ಕೊಬ್ಬಿನ ಸಂಗ್ರಹವಾಗಿರುತ್ತದೆ. ಈ ರೀತಿಯ ಕೊಬ್ಬಿನ ಸಂಗ್ರಹ ಚರ್ಮದಡಿಯ ಪದರಗಳಲ್ಲಿ ಹೆಚ್ಚಾಗಿರುತ್ತದೆ. ಇದರಿಂದ ಅಲ್ಪಮಟ್ಟದ ಸ್ಥೂಲಕಾಯತೆ ಉಂಟಾಗಬಹುದು ಅಥವಾ ಬೊಜ್ಜು ಉಂಟಾಗಬಹುದು ಅತಿ ಹೆಚ್ಚಿನ ತೂಕವೆಂದರೆ, ಯಾರ ತೂಕ ಲಿಂಗ, ವಯಸ್ಸು, ಎತ್ತರ ಮತ್ತು ಶರೀರದ ರಚನೆಯನ್ನು ಅವಲಂಬಿಸಿ ಶೇಕಡ ೧೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಾದ ತೂಕದ ಪ್ರಮಾಣದಲ್ಲಿರುತ್ತದೆ. ಬೊಜ್ಜು ಅಂದರೆ ಶೇಕಡ ೨೦ ಅಥವಾ ಅದಕ್ಕಿಂತಲೂ ಹೆಚ್ಚಾದ ಪ್ರಮಾಣದಲ್ಲಿರುತ್ತದೆ.

ಅರೋಗ್ಯಕ್ಕೆ ಹಾನಿ

ಬೊಜ್ಜು ಆಕರ್ಷಣೆರಹಿತವಷ್ಟೇ ಅಲ್ಲ ಶರೀರದ ಆರೋಗ್ಯದ ಮೇಲೂ ತೀವ್ರವಾದ ಹಾನಿಯುಂಟುಮಾಡುತ್ತದೆ. ಅಲ್ಲದೆ, ಅನೇಕ ರೋಗರುಜಿನಗಳಿಗೆ ದಾರಿಮಾಡಿ ಕೊಡುತ್ತದೆ. ಅವುಗಳೆಂದರೆ, (೧) ಪಿತ್ತ ಕೋಶದ ಕಾಯಿಲೆ, (೧) ಕಾಲ್ಬೇನೆ, (ಇ) ಸಿಹಿ ಮೂತ್ರ ರೋಗ, (ಈ) ರಕ್ತದ ಏರೊತ್ತಡ ಮೊದಲಾದ ಕಾಯಿಲೆ ಮತ್ತು ತೊಡಕುಗಳನ್ನುಂಟುಮಾಡಬಹುದು. ಅಲ್ಲದೆ, ಆಯಸ್ಸಿನ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ.

ಬೊಜ್ಜಿಗೆ ಕಾರಣವೇನು?

ಬೊಜ್ಜು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಅವುಗಳಲ್ಲಿ ಮುಖ್ಯವಾದುದು ಅತಿಯಾಗಿ ತಿನ್ನುವುದು. ಅತಿಯಾಗಿ ತಿನ್ನಲು ಕಾರಣವೇನು ಎಂಬುದನ್ನು ಡಬ್ಲ್ಯೂ. ಡಬ್ಲ್ಯೂ, ಹ್ಯಾಂಬರ್ಗ್‌ರು ಈ ರೀತಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಂಗತಿಗಳಿಂದಲೂ ಬೊಜ್ಜು ಉಂಟಾಗುತ್ತದೆ. ಕೆಲವರು ಮಾನಸಿಕ ಕೆರಳಿಕೆ, ಉದ್ವೇಗ, ಚಿಮತೆ, ನಿರಾಶೆಯನ್ನು ಮರೆಯಲು ಅತಿಯಾದ ಆಹಾರ ಸೇವನೆಯ ಚಟಕ್ಕೆ ತುತ್ತಾಗಿರುತ್ತಾರೆ.

ನಾಲ್ಕು ಕಾರಣಗಳು:

೧. ತೋರಿಕೆಗೆ ಬಾರದ ಮಾನಸಿಕ ಉದ್ವೇಗ.

೨. ಜೀವನದ ಕಷ್ಟಸುಖಗಳನ್ನು ಎದುರಿಸಲು, ಸಹಿಸಲು ಆಗದಿರುವುದು.

೩. ಮಾನಸಿಕ ಖಿನ್ನತೆ.

೪. ಆಹಾರದ ಅತಿಯಾದ ಸೇವನೆ.

ಕಾರಣವೇನು?

ತಿನ್ನುವುದರ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿರಿ. ಕೆಲವರು ಆಹಾರ ಸೇವಿಸುವಾಗ ಹರಟೆ ಹೊಡೆಯುತ್ತಾ, ಮಾತನಾಡುತ್ತಾ, ಟಿ.ವಿ. ನೋಡುತ್ತಾ, ತಿನ್ನುತ್ತಾರೆ. ಈ ರೀತಿ ಆಹಾರ ಸೇವಿಸುವಾಗ ಮಾಡುವುದು ಸೂಕ್ತವಲ್ಲ. ಅಲ್ಲದೆ, ಆಹಾರವನ್ನು ಚೆನ್ನಾಗಿ ಅಗಿದು ನುಂಗುವುದು ಅಗತ್ಯ.

ಕೆಳಕಂಡ ನಿಯಮಗಳನ್ನು ಅನುಸರಿಸಿರಿ

೧. ಬಾಯಿಯಲ್ಲಿ ಆಹಾರ ಇಟ್ಟುಕೊಂಡು ಇತರರೊಡನೆ ಮಾತಾಡುವ ಅಭ್ಯಾಸ ತಪ್ಪಿಸಿರಿ.

೨. ಆಹಾರದ ರುಚಿ ಹೇಗಿದೆ? ಹುಳಿಯೇ? ಖಾರವೇ? ಎಂಬುದನ್ನು ಗಮನಿಸಿ.

೩. ಎಲೆ ಅಥವಾ ತಟ್ಟೆಯಲ್ಲಿ ಊಟ ಮಾಡುವಾಗ ಸ್ವಲ್ಪ ಆಹಾರ ಉಳಿಸಿಕೊಳ್ಳಿರಿ. ಎರಡನೇ ಸಾರಿ ಬಡಿಸಲು ಬಂದಾಗ ಇನ್ನೂ ಸ್ವಲ್ಪ ಇದೆ, ಬೇಡ ಎಂದು ತಿಳಿಸಿರಿ.

೪. ಆಹಾರವನ್ನು ಸೇವಿಸುವ ಸ್ಥಳ ಪ್ರಶಾಂತವಾಗಿ ಶುಚಿತ್ವದಿಂದ ಕೂಡಿರಬೇಕು. ಆತುರಪಡದೆ ತಾಳ್ಮೆಯಿಂದ ಆಹಾರ ಸೇವಿಸಿರಿ. ಊಟದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯದಿರಿ.

೫. ಆಹಾರವನ್ನು ನಿಂತು ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಕುಳಿತುಕೊಂಡು ಆಹಾರ ಸೇವಿಸುವುದು ಸೂಕ್ತ.

೬. ಸಕ್ಕರೆಯಿಂದ ತಯಾರಿಸಲ್ಪಟ್ಟ ಸಿಹಿ ತಿಂಡಿಗಳನ್ನು, ಚಾಕೊಲೇಟ್‌, ಐಸ್‌ಕ್ರೀಮ್‌, ಬ್ರೆಡ್‌, ಕೇಕ್‌, ಬಿಸ್ಕತ್‌, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಅತಿಯಾಗಿ ಸೇವಿಸಬೇಡಿರಿ. ಬಿಯರ್ ಅಥವಾ ಇತರೆ ಆಲ್ಕೋಹಾಲ್‌ ಇರುವ ಪಾನೀಯಗಳನ್ನು ದಯವಿಟ್ಟು ಕುಡಿಯಬೇಡಿರಿ.

೭. ದಾಹ ಆದಾಗ ಸಿಹಿ ಪಾನೀಯಗಳನ್ನು ದಯವಿಟ್ಟು ಕುಡಿಯಬೇಡಿರಿ. ಅದಕ್ಕೆ ಬದಲಾಗಿ ಶುದ್ಧವಾದ ನೀರನ್ನು ಕುಡಿಯಿರಿ. ಉಪ್ಪನ್ನು ಮಿತಪ್ರಮಾಣದಲ್ಲಿ ಬಳಸಿರಿ.

೮. ಶರೀರದ ತೂಕ ಕಡಿಮೆ ಮಾಡಿಕೊಳ್ಳುವಾಗ, ಪೌಷ್ಠಿಕ ಆಹಾರ ಸೇವಿಸುವುದನ್ನು ಮರೆಯದಿರಿ.

೯. ಊಟಕ್ಕೆ ಮೊದಲು ತಿಂಡಿ, ತಿನಿಸುಗಳನ್ನು ತಿನ್ನುವುದು ಒಳ್ಳೆಯದಲ್ಲ.

೧೦. ಪ್ರತಿ ನಿತ್ಯ, ಒಂದು ಗಂಟೆಯಾದರೂ ಕಾಲ್ನಡಿಗೆಯಲ್ಲಿ ವಾಕಿಂಗ್‌ ಹೋಗುವ ಅಭ್ಯಾಸ ರೂಢಿಸಿಕೊಳ್ಳಿರಿ. ಅಲ್ಪಮಟ್ಟದ ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿರಿ.

ಮಾತನ್ನು ನೆನಪಿನಲ್ಲಿಡಿರಿ

ಒಂದೊತ್ತು ಉಂಡವ ಯೋಗಿ
ಎರಡೊತ್ತು ಉಂಡವ ಭೋಗಿ
ಮೂರೊತ್ತು ಉಂಡವ ರೋಗಿ
ನಾಲ್ಕು ಹೊತ್ತು ಉಂಡವನನ್ನು
ಹೊತ್ತುಕೊಂಡು ಹೋಗಿ

ಬೊಜ್ಜನ್ನು ನಿರ್ಣಯಿಸುವುದು ಹೇಗೆ?

ವೈಯಕ್ತಿಕವಾಗಿ ಬೊಜ್ಜು ಇದೆಯೇ? ಇಲ್ಲವೇ? ಎಂಬುದನ್ನು ಸ್ವಯಂ ಮೌಲ್ಯ ಮಾಪನ ಮಾಡಿಕೊಂಡು ನಿಯಂತ್ರಿಸಿಕೊಳ್ಳಬೇಕು.

ಪರೀಕ್ಷೆ: () ನಿಮ್ಮ ನಗ್ನ ಶರೀರವನ್ನು ನಿಲುವುಗನ್ನಡಿಯಲ್ಲಿ ನೋಡಿಕೊಂಡು ಕೊಬ್ಬಿದ ಭಾಗದ ಪ್ರಮಾಣವನ್ನು ಅರಿಯುವುದು. ಕೊಬ್ಬು ಕರಗಲು ಸೂಕ್ತ ರೀತಿಯ ವ್ಯಾಯಾಮ ಮಾಡುವುದು.

(೨) ಪ್ರಸ್ತುತ ಇರುವ ಶರೀರದ ತೂಕವನ್ನು ಹೋಲಿಕೆ ಮಾಡಿಕೊಳ್ಳುವುದು.