ಈ ಆಧುನಿಕ ಯುಗದಲ್ಲಿ ಕೆಲವರಲ್ಲಿ ಅವರ ಕಣ್ಣಿನ ಸುತ್ತ ಕಪ್ಪು ಕಲೆ ಉಂಟಾಗುವುದು ಸಾಮಾನ್ಯವಾದ ಸಮಸ್ಯೆಯಾಗಿರುತ್ತದೆ. ಕಣ್ಣಿನ ಸುತ್ತ ಕಪ್ಪು ವೃತ್ತ ಎಲ್ಲ ವಯಸ್ಸಿನವರಲ್ಲೂ ಉಂಟಾಗಬಹುದು. ಹದಿಹರೆಯದವರಲ್ಲಿ ಕಪ್ಪು ಕಲೆ ಅಷ್ಟಾಗಿ ಕಾಣದಿದ್ದರೂ, ಹದಿನೈದು ಅಥವಾ ಹದಿನಾರನೆ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಇಪ್ಪತ್ತು ಮತ್ತು ಮೂವತ್ತರ ವಯಸ್ಸಿನಲ್ಲಿ ಕೆಲವರಲ್ಲಿ ಕಣ್ಣಿನ ಸುತ್ತ ಕಪ್ಪು ವೃತ್ತಗಳು ಉಂಟಾಗುವುದು ಬಹಳ ಸಾಮಾನ್ಯವಾಗಿದೆ. ಇಂತಹ ಕಪ್ಪು ವೃತ್ತಗಳು ವಯಸ್ಸಾಗುತ್ತಿರುವಂತೆ ಅದರ ಕಪ್ಪು ಬಣ್ಣ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಕಣ್ಣಿನ ಸುತ್ತ ಕಪ್ಪು ವೃತ್ತಗಳು ಉಂಟಾಗಲು ಕಾರಣ ಹೈಪರ್ ಪಿಗ್‌ ಮೆಂಟೇಷನ್‌. ಈ ಕಪ್ಪು ಕಲೆ ರೋಗವೇನಲ್ಲ ಮತ್ತು ಇದರಿಂದ ಕಣ್ಣುಗಳಿಗೆ ಹಾನಿಯಾಗಲಿ, ಅಪಾಯವಾಗಲಿ ಉಂಟಾಗುವುದಿಲ್ಲ. ಆದರೆ, ಕಪ್ಪು ವೃತ್ತಗಳು ಎದ್ದು ಕಾಣುವುದರಿಂದ ತಮ್ಮ ಮುಖದ ಸೌಂದರ್ಯದ ಬಗ್ಗೆ ಚಿಂತಿಸುವುದುಂಟು ! 

 ಕಣ್ಣಿನ ಸುತ್ತಲೂ ಕಪ್ಪು ವೃತ್ತಗಳು ಉಂಟಾಗಲು ಕಾರಣಗಳು:

೧. ಪೌಷ್ಠಿಕ ಆಹಾರದ ಕೊರತೆ (ಕಬ್ಬಿಣಾಂಶದ ಕೊರತೆ, ಸುಣ್ಣದಂಶ, ವಿಟಮಿನ್‌ ಎ, ವಿಟಮಿನ್‌ ಬಿ ಮತ್ತು ವಿಟಮಿನ್‌ ಇ ಕೊರತೆ)

೨. ಕ್ಷಯರೋಗ ಅಥವಾ ನ್ಯೂಮೋನಿಯಾ ಮೊದಲಾದ ಕಾಯಿಲೆಗಳ ತೊಂದರೆಗಳು.

೩. ವಿಶ್ರಾಂತಿ ಇಲ್ಲದ ಉದ್ಯೋಗ, ಅತಿಯಾದ ಆಯಾಸ, ಕಣ್ಣುಗಳಿಗೆ ಆಯಾಸ, ನಿದ್ರೆ ಇಲ್ಲದಿರುವಿಕೆ ಮೊದಲಾದ ಶಾರೀರಿಕ ತೊಂದರೆಗಳು.

ಕಣ್ಣಿನ ಸುತ್ತ ಇರುವ ಚರ್ಮ ಬಹಳ ಸಂವೇದನಾ ಶಾಲಿಯಾದುದು ಮತ್ತು ಪದೇ ಪದೇ ಮುಖ ಅತಿಯಾದ ಸೂರ್ಯನ ಶಾಖಕ್ಕೆ ತುತ್ತಾಗುವುದರಿಂದಲೂ ಕಪ್ಪು ವೃತ್ತಗಳು ಕಾಣಿಸಿಕೊಳ್ಳಬಹುದು.

ಒಮ್ಮೆ ನೇತ್ರಗಳ ಸುತ್ತ ಕಪ್ಪಾದ ವೃತ್ತಗಳು ಉಂಟಾದರೆ ಹೋಗಲಾಡಿಸಿಕೊಳ್ಳುವುದು ಬಹಳ ಕಷ್ಟ.

ಕಪ್ಪು ವೃತ್ತಗಳನ್ನು ತಡೆಗಟ್ಟುಕೊಳ್ಳುವುದು ಹೇಗೆ?

೧. ಪ್ರತಿಯೊಬ್ಬರು, ಪ್ರತಿನಿತ್ಯ ಸರಿಯಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು.

೨. ಪ್ರತಿನಿತ್ಯದ ಆಹಾರದಲ್ಲಿ ಹಸಿರು ತರಕಾರಿ, ಕಾಯಿಪಲ್ಲೆಗಳು-ಸೇರ್ಪಡೆಯಾಗಿರಬೇಕು.