ಆಸ್ತಮ ರೋಗಿಗಳು ಸಮಯಕ್ಕೆ ಸರಿಯಾಗಿ ತಮ್ಮ ಶರೀರಕ್ಕೆ ಒಗ್ಗುವ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಅಸ್ತಮ ಅಟ್ಯಾಕ್‌ನ್ನು ತಡೆಗಟ್ಟಿಕೊಳ್ಳಬಹುದಲ್ಲದೆ, ಅದರ ತೀವ್ರತೆಯು ಕಡಿಮೆಯಾಗುತ್ತದೆ. ಆಹಾರ ಪೌಷ್ಠಿಕಾಂಶಗಳಿಂದ ಕೂಡಿರಬೇಕಲ್ಲದೆ, ಸಮತೋಲನ ಆಹಾರವಾಗಿರಬೇಕು. ಕೆಲವರಲ್ಲಿ ತಣ್ಣನೆಯ ಪಾನೀಯಗಳನ್ನು (ಕೂಲ್‌ಡ್ರಿಂಕ್ಸ್‌) ಸೇವಿಸುವುದರಿಂದ ಹುಳಿಯಿಂದ ಕೂಡಿದ ಆಹಾರವನ್ನು ತಿನ್ನುವುದರಿಂದ, ಚಟ್ನಿ ಮತ್ತು ಉಪ್ಪಿನ ಕಾಯಿಯನ್ನು ತಿನ್ನುವುದರಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಆದುದರಿಂದ, ಕೆಮ್ಮು ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.

ಆಸ್ತಮ ರೋಗಿಗಳು ಹೊಟ್ಟ ಬಿರಿಯುವಂತೆ ಅಂದರೆ, ಹೊಟ್ಟೆ ತುಂಬಾ ವಿಶೇಷವಾಗಿ ರಾತ್ರಿಯ ಹೊತ್ತು ತಿನ್ನಬಾರದು; ಇದರಿಂದ ಉಸಿರಾಟಕ್ಕೆ ಅನಾನುಕೂಲತೆ ಉಂಟಾಗುತ್ತದೆ. ತಮ್ಮ ಮೈಗೆ ಒಗ್ಗುವ ತರಕಾರಿಗಳನ್ನು, ಹಣ್ಣು-ಹಂಪಲನ್ನು ಹೆಚ್ಚಾಗಿ ಸೇವಿಸಬಹುದು.

ಮನೆಯ ಹೊರಗಡೆ ಅಂದರೆ ಪಾರ್ಟಿಗಳಿಗೆ ಹೋಗಿ ಭೋಜನ ಮಾಡುವುದನ್ನು ತಪ್ಪಿಸಬೇಕು. ಪಾರ್ಟಿ, ಭೋಜನಗಳಲ್ಲಿ ಕೊಬ್ಬಿನ ಪದಾರ್ಥಗಳು ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹೆಚ್ಚಿರುವುದರಿಂದ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

ಆಹಾರ ನಿಯಮಗಳು

ಈ ಕೆಳಕಂಡ ಆಹಾರ ಪದಾರ್ಥಗಳಿಂದ ದೂರವಿರಿ:

 • ಮಸಾಲೆ ಅಥವಾ ಸಾಂಬಾರು ಪದಾರ್ಥಗಳು.
 • ಎಣ್ಣೆಯಲ್ಲಿ ಕರಿದ ತಿಂಡಿಗಳು, ಕೊಬ್ಬಿನ ಪದಾರ್ಥಗಳು.
 • ರಾತ್ರಿಯ ವೇಳೆ ಸಿಹಿ ತಿಂಡಿಗಳು.
 • ರಾತ್ರಿಯ ವೇಳೆ ಊಟ ಮಾಡಿದ ನಂತರ, ತಣ್ಣನೆಯ ಗಾಳಿ ಬೀಸುವ ಕಡೆ ಹೋಗಬೇಡಿರಿ.
 • ಅತಿ ಹೆಚ್ಚಾಗಿ ಊಟವನ್ನು ಮಾಡಬೇಡಿರಿ.
 • ರಾತ್ರಿ ಮಲಗುವ ಮೂರು ಘಂಟೆಯ ಮೊದಲೇ ಲಘುಭೋಜನವನ್ನು ಮಾಡಿರಿ. ಉಪವಾಸ ಮಲಗಬೇಡಿರಿ.
 • ಹಗಲು ಹೊತ್ತು ದೀರ್ಘಕಾಲ ಆಹಾರವನ್ನು ಸೇವಿಸದೆ ಉಪವಾಸವಿರಬೇಡಿರಿ.
 • ಪ್ರತಿ ದಿನ ಎರಡು ಅಥವಾ ಮೂರು ವೇಳೆ ದೊಡ್ಡ ಭೋಜನವನ್ನು ಮಾಡಿರಿ ಅಥವಾ ಆಗಿಂದಾಗ್ಗೆ ವಿರಾಮವನ್ನು ಕೊಟ್ಟು ಸಣ್ಣ ಪ್ರಮಾಣದಲ್ಲಿ ಲಘು ಉಪಾಹಾರವನ್ನು ಸೇವಿಸಿರಿ.
 • ತುಂಬಾ ಹುಳಿಯಾದ ಆಹಾರವನ್ನು ಸೇವಿಸಬೇಡಿರಿ.
 • ತುಂಬಾ ತಣ್ಣಗಿರುವ ಆಹಾರವನ್ನು ತಿನ್ನಬೇಡಿರಿ.
 • ಮೊಸರು ಅಥವಾ ಗಿಣ್ಣನ್ನು ತಿನ್ನಬೇಡಿರಿ.
 • ಬಿಯರ್ ಮತ್ತು ವೈನನ್ನು ಸೇವಿಸಬೇಡಿರಿ.
 • ಅತಿ ಹೆಚ್ಚಾಗಿ ಯೀಸ್ಟ್‌ ಇರುವ ಬ್ರೆಡ್ಡನ್ನು ತಿನ್ನಬೇಡಿರಿ.
 • ಹುಳಿಯಿರುವ ಮಜ್ಜಿಗೆಯನ್ನು ಕುಡಿಯಬೇಡಿರಿ.
 • ಆಸ್ತಮ ಅಟ್ಯಾಕ್‌ ಆದಾಗ ಕಾಯಿಸಿ ಆರಿಸಿದ ಶುದ್ಧವಾದ ನೀರನ್ನು ಹೆಚ್ಚಾಗಿ ಕುಡಿಯಿರಿ.

ಮಾನಸಿಕ ಸಂಗತಿಗಳು

ಆಸ್ತಮ, ಮನೋದೈಹಿಕ ಬೇನೆಯಲ್ಲ (Psychosomatic illness) ಆದರೆ, ಮನೋಭಾವ ಅಥವಾ ಭಾವೋದ್ವೇಗದಿಂದಾಗಿ ಆಸ್ತಮ ತ್ರಿಗುಣಗೊಳ್ಳುತ್ತದೆ ಅಥವಾ ಹದಗೆಡುತ್ತದೆ. ಅಲ್ಲದೆ, ರೋಗಿ ಭಾವೋದ್ವೇಗದ ಭಾವನೆಗಳಿಗೆ ಹೊಂದಿಕೊಂಡು, ವಿಶ್ರಾಂತಿಯನ್ನು ಪಡೆಯುವುದರಿಂದ, ಆಸ್ತಮ ತೊಂದರೆ ಉಪಶಮನಗೊಳ್ಳುತ್ತದೆ.

ಆಸ್ತಮದಿಂದ ತೊಂದರೆಪಡುತ್ತಿರುವವರು ಯಾವಾಗ, ಯಾವ ಸಂದರ್ಭದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ದಿನಚರಿಯನ್ನು ಬರೆದಿಟ್ಟು (ಅದನ್ನು ಅಗತ್ಯವಿದ್ದರೆ ವೈದ್ಯರಿಗೂ ತೋರಿಸಿರಿ) ಕೊಂಡು, ಅದನ್ನು ನಿಯಂತ್ರಿಸಿಕೊಳ್ಳುವ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ, ವಿಶ್ರಾಂತಿಯನ್ನು ಪಡೆದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಆಸ್ತಮ ರೋಗ ಲಕ್ಷಣಗಳು ಯಾವಾಗ ಹೆಚ್ಚುತ್ತವೆ; ಅಸಹಾಯಕತೆ ಉಂಟಾಗುತ್ತದೆ ಎಂಬುದನ್ನು ನಿಮ್ಮ ವೈದ್ಯರಿಗೆ ತಿಳಿಸಿದರೆ ಅವರು ಪರಿಹಾರವನ್ನು ಸೂಚಿಸಲು ಸಹಾಯಕವಾಗುತ್ತದೆ. ಅಲ್ಲದೆ, ನಿಮ್ಮ ವೈದ್ಯರು ಬರೆದುಕೊಟ್ಟಿರುವ ಔಷಧಿಗಳನ್ನು ಕ್ರಮವಾಗಿ ಸೇವಿಸಬೇಕು. ಅವುಗಳಿಂದ ರೋಗ ಲಕ್ಷಣಗಳು ಕಡಿಮೆಯಾಗದಿದ್ದರೆ ಅಥವಾ ತೊಂದರೆ ಹೆಚ್ಚಾದರೆ ವೈದ್ಯರಿಗೆ ತಿಳಿಸಬೇಕು. ಅಷ್ಟೇ ಅಲ್ಲದೆ, “ನಾನು ಆಸ್ತಮ ರೋಗಿ” ಎಂಬ ಮನೋಭಾವವನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಬಾರದು. ಮಾನಸಿಕ ಚಿಂತೆ, ಕೊರಗನ್ನು ನೀವು ನಿವಾರಿಸಿಕೊಳ್ಳದಿದ್ದರೆ, ವೈದ್ಯರು ನೀಡುವ ಚಿಕಿತ್ಸೆ ಪರಿಣಾಮ ಬೀರುವುದಿಲ್ಲ. ಕ್ರಮಬದ್ಧವಾದ ಜೀವನ, ಆಹಾರ ಸೇವನೆ, ಮನೋರಂಜನೆ ಹಾಗೂ ಶಾಂತಿಯುತವಾದ ಜೀವನ, ಧ್ಯಾನ, ಏಕಾಗ್ರತೆಯಿಂದ ಹಾಗೂ ಕ್ರಮವಾದ ಯೋಗ-ಪ್ರಾಣಾಯಾಮ (ಉಸಿರಾಟದ ವ್ಯಾಯಾಮ) ದಿಂದಾಗಿ ಮಾನಸಿಕ ಒತ್ತಡ ಕಡಿಮೆಯಾಗಲು ನಿಶ್ಚಿತವಾಗಿ ಸಹಾಯಕವಾಗುತ್ತದೆ.

ಆಹಾರ ಚಿಕಿತ್ಸೆ

ಆಸ್ತಮ ರೋಗಿಗಳು ಬೆಳಗಿನ ಉಪಾಹಾರ (ಟಿಫನ್‌)ದ ಜೊತೆ ಸಿಹಿ ಕಿತ್ತಳೆ ಹಣ್ಣು, ಸಿಹಿ ಮೂಸಂಬಿ, ಪರಂಗಿಹಣ್ಣು, ಮಾವಿನ ಹಣ್ಣು ಅಥವಾ ಸೇಬಿನ ಹಣ್ಣನ್ನು ಸೇವಿಸಬೇಕು.

ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಬೇಯಿಸಿದ ತರಕಾರಿಗಳನ್ನು ಉಪಯೋಗಿಸಬೇಕು.