ನಮ್ಮಲ್ಲಿ ‘ಜೀವನಶಕ್ತಿ’ ಇಲ್ಲದಿದ್ದರೆ, ನಮ್ಮ ಅರ್ಹತೆ ಅಥವಾ ಪ್ರತಿಭೆ ಲೆಕ್ಕಕ್ಕೆ ಬರುವುದಿಲ್ಲ. ಜೀವನಶಕ್ತಿಯ ಕೊರತೆ ಕೂಡ ನಮ್ಮ ಜೀವನದ ಗುಣ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವಾಗಲೂ ಆಯಾಸಗೊಳ್ಳುತ್ತಿದ್ದರೆ, ಕೆರಳಿಕೆ, ಉದ್ವೇಗ ಮಾಡಿಕೊಳ್ಳುತ್ತಿದ್ದರೆ, ವಕ್ರವಾಗಿ ವರ್ತಿಸುತ್ತಿದ್ದರೆ ನಮ್ಮ ಬದುಕಿನಲ್ಲಿ ಅಲ್ಪಮಟ್ಟದ ಸುಖವನ್ನಷ್ಟೇ ಅನುಭವಿಸುತ್ತೇವೆ. ಪ್ರತಿನಿತ್ಯ ನಾವು ವಿಚಾರವನ್ನು ಮಾಡದೆ ಮುನ್ನುಗ್ಗುವುದರಿಂದ ಎಲ್ಲ ಕೆಲಸಗಳಲ್ಲೂ, ಕುಟುಂಬದಲ್ಲೂ ಆಯಾಸವನ್ನುಂಟು ಮಾಡಿಕೊಳ್ಳುತ್ತೇವೆ.

ಹಾಗಾದರೆ, ನಮ್ಮ ದೇಹಶಕ್ತಿಯನ್ನು ಅಭಿವೃದ್ಧಿಪಡಿಸಿಕೊಂಡಲು ಆಯಾಸವಿಲ್ಲದೆ, ಹಾಯಾಗಿ ಬದುಕಲು ಸಾಧ್ಯವೇ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಕೆಲವರು, ಜನ್ಮತಃ ಬಲಶಾಲಿಗಳಾಗಿರುತ್ತಾರೆ. ಮತ್ತೆ ಕೆಲವರು ಹುಟ್ಟುವಾಗಲೇ ಸೋಮಾರಿಗಳಾಗಿರುತ್ತಾರೆ ಅಥವಾ ವ್ಯತಿರಿಕ್ತವಾಗಿ ವರ್ತಿಸುತ್ತಾರೆ. ಆದುದರಿಂದ, ನಾವು ಸೇವಿಸುವ ಆಹಾರವೇ ನಮ್ಮ ಶರೀರದ ಬಲವನ್ನು ನಿರ್ಧರಿಸುತ್ತದೆ. ಅಲ್ಲದೆ, ಆಯಾಸವನ್ನು ನಿವಾರಿಸಿ, ಸಂತೋಷ-ಸಮಾಧಾನವನ್ನು ನೀಡುತ್ತದೆ.

ಆಹಾರ, ನಮ್ಮ ಶರೀರಕ್ಕೆ ಅನೇಕ ವಿಧಗಳಲ್ಲಿ ಅಗತ್ಯವಾದದ್ದು. ಅದು ನಮ್ಮ ಶರೀರದ ಅಂಗಾಂಶಗಳನ್ನು (Tissue) ನಿರ್ಮಾಣ ಮಾಡುತ್ತದೆ. ಅನಾರೋಗ್ಯದಿಂದ ರಕ್ಷಿಸುತ್ತದೆ. ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ. ಮಿದುಳಿನ ಅಂಗಾಂಶಗಳು (ಟಿಷ್ಯೂಗಳು) ಆರೋಗ್ಯಕರವಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸಂತಾನೋತ್ಪತ್ತಿಗೂ ನೆರವಾಗುತ್ತದೆ. ಉತ್ತಮ ಆಹಾರ ಸೇವನೆಯಿಂದ ಶರೀರಕ್ಕೆ ಸಂತೋಷ ಲಭಿಸುತ್ತದೆ.

ಅನೇಕರು, ಸಿಹಿಯಾದ, ಹಲ್ಲುಗಳಿಗೆ ಅಂಟುವ ಕೇಕ್‌, ಮಿಠಾಯಿಗಳನ್ನು ತಿಂದು, ಕಾಫಿ, ಟೀಯನ್ನು ಕುಡಿದು ಬಹಳ ಅಲ್ಪ ಮಟ್ಟದ ಪೌಷ್ಠಿಕತೆಯನ್ನು ಪಡೆಯುತ್ತಾರೆ. ಅಲ್ಲದೆ, ಯತೇಚ್ಛವಾಗಿ ಕೊಬ್ಬಿನ ಪದಾರ್ಥಗಳನ್ನು ಹೊಂದುತ್ತಾರೆ. ಎಲ್ಲ ರೀತಿಯ ಆಹಾರವು ಒಂದಲ್ಲ ಒಂದು ವಿಧದಲ್ಲಿ ಅಲ್ಪಪ್ರಮಾಣದಲ್ಲಿ ಕ್ಯಾಲೊರಿಗಳನ್ನು ನೀಡುತ್ತದೆ.

ಯಾವ ರೀತಿಯ ಆಹಾರವನ್ನು ಸೇವಿಸಿದರೆ, ನಾವು ಆಯಾಸದಿಂದ ತಪ್ಪಿಸಿಕೊಳ್ಳಬಹುದು, ನಿವಾರಿಸಿಕೊಳ್ಳಬಹುದು?

ಕೆಳಕಂಡ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ, ನಿಮ್ಮ ಆಯಾಸ ನಿವಾರಣೆಗೆ ಸಹಾಯಕವಾಗಬಲ್ಲದು.

() ಕಾರ್ಬೋಹೈಡ್ರೇಟ್ಸ್ (ಹಿಟ್ಟು ಪಿಷ್ಠಸಕ್ಕರೆ) – ಅಧಿಕ ಶಕ್ತಿಯನ್ನು ನೀಡುವ ಮೂಲ.

() ವಿಟಮಿನ್ನುಗಳುತೀವ್ರವಾದ ಕಾಯಿಲೆಗಳನ್ನು ತಡೆಗಟ್ಟಿಕೊಳ್ಳಲು ಸಹಾಯ ಮಾಡುತ್ತದೆ.

() ಪ್ರೋಟೀನ್ಸ್ (ಸಸಾರಜನಕ)-ಶರೀರ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.

() ಖನಿಜಗಳುಉತ್ತಮ ರೀತಿಯ ಕೆಂಪು ಜೀವಕೋಶಗಳ ತಯಾರಿಕೆಗೆ ಸಹಾಯ ಮಾಡುತ್ತವೆ.

ಸ್ಪಷ್ಟವಾದ ಶಕ್ತಿಯ ಮೂಲಗಳೆಂದರೆ, ಸಕ್ಕರೆ ಮತ್ತು ಗಂಜಿ. ಇದು ಸಿಹಿ ರುಚಿಯನ್ನು ನೀಡುವುದಲ್ಲದೆ, ಶೀಘ್ರವಾಗಿ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಇವುಗಳು ಅಧಿಕವಾಗಿ ಕ್ಯಾಲೊರಿಗಳನ್ನು ಹೊಂದಿರುತ್ತವೆ.

ಅನೇಕರು ಸಕ್ಕರೆ ಮತ್ತು ಪಿಷ್ಠ ಪದಾರ್ಥಗಳನ್ನು ಸೇವಿಸುವುದರಿಂದ ಆಯಾಸದಿಂದ ತಪ್ಪಿಸಿಕೊಳ್ಳಬಹುದೆಂದು ಭಾವಿಸಿರುತ್ತಾರೆ. ಆದರೆ, ಇವುಗಳನ್ನು ಸೇವಿಸುವುದರಿಂದ ಮಾತ್ರವೇ ಆಯಾಸದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇವು ದೀರ್ಘಕಾಲ ಶಕ್ತಿ (ಎನರ್ಜಿ) ಯನ್ನು ಪೂರೈಸುವುದಿಲ್ಲ, ಅಲ್ಲದೆ, ಅಧಿಕವಾಗಿ, ಶರೀರದ ತೂಕವನ್ನು ಹೆಚ್ಚಿಸುತ್ತವೆ. ಸಕ್ಕರೆ, ಪಿಷ್ಢ ಪದಾರ್ಥಗಳನ್ನು ಹೆಚ್ಚಾಘಿ ಸೇವಿಸುವುದರಿಂದ ಬೊಜ್ಜು ಉಂಟಾಗುತ್ತದೆ.

ವಿಟಮಿನ್ನುಗಳು:

ಆಯಾಸವನ್ನು ನಿವಾರಿಸುವಲ್ಲಿ ವಿಟಮಿನ್ನುಗಳ ಪಾತ್ರ ಮಹತ್ವವಾದುದು. ‘ಬಿ’- ಗುಂಪಿನ ವಿಟಮಿನ್ನುಗಳು ಶರೀರದ ಕಾರ್ಯಗಳು ಸುಗಮವಾಗಿ ನೆರವೇರಲು ಸಹಾಯ ಮಾಡುತ್ತವೆ. ಅವುಗಳು: ಕಾಳು, ಧಾನ್ಯಗಳಲ್ಲಿರುತ್ತವೆ.

ವಿಟಮಿನ್‌ ಎ ಮತ್ತು ಡಿ, ಕೊಬ್ಬು ಅಧಿಕವಾಗಿರುವ ಆಹಾರ ಪದಾರ್ಥಗಳಲ್ಲಿ ಸಿಗುತ್ತದೆ. ಇವು ಕೂಡ ಶಕ್ತಿಯನ್ನು ಗಳಿಸಲು ಅಗತ್ಯವಾದವು. ಇವು ಡೈರಿ ಉತ್ಪನ್ನಗಳಲ್ಲಿ, ಮೊಟ್ಟೆಯಲ್ಲಿ, ತಾಜಾ ಹಸಿರು ತರಕಾರಿಗಳಲ್ಲಿ ಅಧಿಕವಾಗಿರುತ್ತವೆ.

ವಿಟಮಿನ್‌ ಸಿ, ತಾಜಾ ಹಣ್ಣು-ಹಂಪಲುಗಳಲ್ಲಿ ದೊರಕುತ್ತದೆ. ವಿಶೇಷವಾಗಿ ನಿಂಬೇ ಹಣ್ಣು, ದ್ರಾಕ್ಷಿಹಿಣ್ಣು, ಟೊಮೊಟೋ ಮೊದಲಾದವುಗಳಲ್ಲಿ ಸಿಗುತ್ತದೆ. ಇದರ ಕೊರತೆಯಿಂದ ನಿರಾಳವಾದ ಸುಸ್ತು ಉಂಟಾಗುತ್ತದೆ. ಇದನ್ನು ಶರೀರದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲಾಗುವುದಿಲ್ಲವಾದ್ದರಿಂದ, ಪ್ರತಿ ನಿತ್ಯ ವಿಟಮಿನ್‌ ‘ಸಿ’ ನಿಮ್ಮ ಶರೀರಕ್ಕೆ ಅಗತ್ಯ.

ಪ್ರೋಟೀನ್ಸ್ಸಸಾರಜನಕ:

ಪ್ರೋಟೀನ್ಸ್‌ ಅಥವಾ ಸಸಾರಜನಕ, ಮೂಲತಃ ಶರೀರದ ನಿರ್ಮಾಣಕ್ಕೆ ಮತ್ತು ಜೀವನ ಶಕ್ತಿಗೆ ಅಗತ್ಯವಾದುದು.

ಕಾರ್ಬೋಹೈಡ್ರೇಟ್‌ನಂತೆ (ಶರ್ಕರ-ಪಿಷ್ಠಾದಿಗಳು), ಪ್ರೋಟೀನ್‌ ಆಹಾರ ಶೀಘ್ರವಾಗಿ ಶಕ್ತಿಯನ್ನು ಉತ್ಪತ್ತಿಮಾಡದಿದ್ದರೂ, ದೀರ್ಘಕಾಲ ಶಕ್ತಿಯನ್ನು ಪೂರೈಸುತ್ತದೆ.

ಮುಖ್ಯವಾಗಿ ಪ್ರೋಟೀನ್‌ ಸಿಗುವ ಮೂಲಗಳಾವುವೆಂದರೆ: ಮಾಂಸ, ಮೀನು, ಹಾಲು, ಗಿಣ್ಣು, ಕೋಳಿಮಾಂಸ, ಬೀನ್ಸ್‌ ಮತ್ತು ದ್ವಿದಳಧಾನ್ಯಗಳು ಹಾಗೂ ಕಾಳುಗಳು.

ಬ್ರೆಡ್‌, ದ್ವಿದಳ ಧಾನ್ಯಗಳಲ್ಲಿ ತರಕಾರಿಗಳಲ್ಲಿ ಮತ್ತು ಹಣ್ಣುಗಳಲ್ಲಿ ಬಹಳ ಅಲ್ಪ ಪ್ರಮಾಣದಲ್ಲಿ ಪ್ರೋಟೀನ್‌ ಇರುತ್ತದೆ. ಆದರೆ, ಹೆಚ್ಚು ಬ್ರೆಡ್‌,  ದ್ವಿದಳಧಾನ್ಯಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಪ್ರೋಟೀನ್‌ ಪೂರೈಕೆ ಶರೀರಕ್ಕೆ ದೊರಕುತ್ತದೆ.

ಖನಿಜದ ಲವಣಗಳು (Mineral Salts)

ಕಬ್ಬಿಣಾಂಶದ ಕೊರತೆಯಿದ್ದರೆ, ಕೆಂಪು ರಕ್ತ ಕಣಗಳು ಸಮರ್ಪಕವಾಗಿ ನಿರ್ಮಾಣವಾಗುವುದಿಲ್ಲ. ಇದರ ಕೊರತೆಯಿಂದ ಅನಿಮಿಯಾ (ರಕ್ತಕೊರೆ) ಉಂಟಾಗಿ ಆಯಾಸ ಹಾಗೂ ಖಿನ್ನತೆ (Depression ) ಉಂಟಾಗುತ್ತದೆ.

ಕಬ್ಬಿಣಾಂಶ ಹಸಿರು ತರಕಾರಿಗಳಲ್ಲಿ ದೊರಕುತ್ತದೆ.

ಸುಣ್ಣದಂಶ ಅಥವಾ ಕ್ಯಾಲ್ಸಿಯಂ ಉತ್ತಮ ಹಲ್ಲುಗಳ ಮತ್ತು ಮೂಳೆಗಳ ನಿರ್ಮಾಣಕ್ಕೆ ಅಗತ್ಯವಾದುದು. ಅಲ್ಲದೆ, ಮಾಂಸಖಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಕ್ಯಾಲ್ಸಿಯಂ ಅಗತ್ಯ.

ತಾಜಾ ಹಣ್ಣಿನ ರಸ: ಕಿತ್ತಳೆ ಅಥವಾ ನಿಂಬೆ ಹಣ್ಣಿನ ರಸ ಅಥವಾ ಜ್ಯೂಸನ್ನು ಪ್ರತಿನಿತ್ಯ ಸೇವಿಸುವುದರಿಂದ ಆಯಾಸ ನಿವಾರಣೆಗೆ ಸಹಾಯಕವಾಗುತ್ತದೆ.

ತಾಜಾ ತರಕಾರಿಗಳು: ಸೌತೇಕಾಯಿಯನ್ನು ಹೆಚ್ಚಿ ಅದಕ್ಕೆ ಹಸಿ ಕೊಬ್ಬರಿ, ಹೆಸರುಬೇಳೆ, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನು ಸೇರಿಸಿ ಕೋಸಂಬರಿ ಮಾಡಿ ತಿನ್ನುತ್ತಿರುವುದರಿಂದ ಶರೀರಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳು ದೊರಕುತ್ತವೆ.

ತಾಜಾ ಹಣ್ಣುಗಳು: ಆಯಾ ಕಾಲದಲ್ಲಿ ಸಿಗುವ ತಾಜಾ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಅಗತ್ಯವಾದ ಕಾರ್ಬೋಹೈಡ್ರೆಟ್ಸ್‌, ವಿಟಮಿನ್‌ಗಳು, ಖನಿಜಾಂಶಗಳು ಸಿಗುತ್ತವೆ.

ಸರಿಯಾದ ಆಹಾರವನ್ನು ನಾವು ಪ್ರತಿ ನಿತ್ಯ ಸೇವಿಸುವುದರಿಂದ ಆಯಾಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ತೆಳ್ಳಗಿರುವವರಿಗಿಂತಲೂ, ಬೊಜ್ಜು ಇರುವವರು ಬೇಗ ಆಯಾಸಗೊಳ್ಳುತ್ತಾರೆ. ಆದುದರಿಂದ, ಬೊಜ್ಜು ಉಂಟಾಗದಂತೆ ಎಲ್ಲರೂ ಎಚ್ಚರಿಕೆಯನ್ನು ವಹಿಸಬೇಕು.