ಭಾಷಿಕ ಸಮುದಾಯಗಳು ರೂಪುಗೊಂಡ ಕ್ರಮವೇನೇ ಇರಲಿ, ಈಗ ಅವು ಇರುವ ರೂಪ ಮಾತ್ರ ಸಂಕೀರ್ಣವಾಗಿದೆ. ಕೆಲವೊಮ್ಮೆ ಒಂದು ಭಾಷೆಯನ್ನಾಡುವ ಜನರು ಒಂದೇ ಬುಡಕಟ್ಟಿಗೆ ಸೇರಿದವರಾಗಿರುತ್ತಾರೆ. ಅವರೆಲ್ಲರೂ ರಕ್ತ ಸಂಬಂಧಿಗಳು. ತಮ್ಮ ಜನಾಂಗದೊಡನೆ ತಮ್ಮನ್ನು ಗುರುತಿಸಿಕೊಳ್ಳುವಾಗ ತಾವಾಡುವ ಭಾಷೆಯನ್ನೂ ಮುಖ್ಯ ಜನಾಂಗಿಕ ಲಕ್ಷಣವನ್ನಾಗಿ ಅವರು ಗ್ರಹಿಸಿರುತ್ತಾರೆ. ಮತ್ತೆ ಕೆಲವು ಭಾಷಿಕ ಸಮುದಾಯ ಗಳಲ್ಲಿ ಬೇರೆ ಬೇರೆ ಬುಡಕಟ್ಟಿನವರಿರುತ್ತಾರೆ. ಆದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಆ ಭಾಷೆಯನ್ನಾಡುವವರು ನೆಲೆಸಿರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಒಂದು ಭಾಷೆಯನ್ನಾಡುವ ಜನರು ಹಲವಾರು ಭೌಗೋಳಿಕ ಪ್ರದೇಶಗಳಲ್ಲಿ ಹಂಚಿಹೋಗಿರುವುದೂ ಉಂಟು. ಜಗತ್ತಿನಾದ್ಯಂತ ರಾಜಕೀಯ ಕಾರಣಗಳಿಂದಾಗಿ ನಡೆಯುತ್ತಿರುವ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೂ ಮೇಲೆ ಹೇಳಿದ ಸಂಕೀರ್ಣ ಸಂದರ್ಭಗಳಿಗೂ ಸಂಬಂಧವಿದೆ.

ಭಾಷಾ ಸಮುದಾಯಗಳು ಸ್ವತಂತ್ರವಾಗಿ ಉಳಿಯಲಾರವು. ಅದರಲ್ಲೂ ಬುಡಕಟ್ಟು ಭಾಷಾ ಸಮುದಾಯಗಳು ದ್ವಿಭಾಷಿಕ ಸಮುದಾಯಗಳಾಗುತ್ತವೆ; ಇಲ್ಲವೇ ಆಯಾ ದೇಶದ ಪ್ರಗತಿಯ ಮಾದರಿಯನ್ನು ಅನುಸರಿಸಿ ಪರಿವರ್ತನೆಗೆ, ಕೆಲವೊಮ್ಮೆ ವಿನಾಶಕ್ಕೆ ಒಳಗಾಗುತ್ತವೆ. ರಾಷ್ಟ್ರಗಳು ಬಹುಮಟ್ಟಿಗೆ ಭೌಗೋಳಿಕ ಸರಹದ್ದನ್ನು ಹೊಂದಿರುವುದರಿಂದ ಪ್ರತಿ ರಾಷ್ಟ್ರದಲ್ಲೂ ಹಲವು ಭಾಷಾ ಸಮುದಾಯಗಳು ಜೀವಿಸುವ ಸಂದರ್ಭವೊದಗಿದೆ. ಅಂಥ ಕಡೆ ಒಂದು ಭಾಷಾಸಮುದಾಯ ರಾಜಕೀಯವಾಗಿ ಪ್ರಬಲವಾಗಿದ್ದು ಉಳಿದ ಭಾಷೆಗಳನ್ನು ಆಡುವ ಜನರು ಅಲ್ಪ ಸಂಖ್ಯಾತರಾಗಿರುತ್ತಾರೆ. ಈ ಅಲ್ಪಸಂಖ್ಯಾತ ಭಾಷಾ ಸಮುದಾಯಗಳಲ್ಲಿ ಕೆಲವು ತಮ್ಮದೇ ಆದ ಭೌಗೋಳಿಕ ಚಹರೆಯನ್ನೂ ಹೊಂದಿರುವುದಿಲ್ಲ. ದುಡಿಮೆಗಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸು ವವರು, ಅಲೆಮಾರಿಗಳು, ದೇಶಭ್ರಷ್ಟ ಸಮುದಾಯಗಳು, ದೇಶವಿಹೀನ ಸಮುದಾಯಗಳು ಹೀಗೆ ಹಲವು ಬಗೆಗಳಲ್ಲಿ ಈ ಅಲ್ಪಸಂಖ್ಯಾತರು ಕಾಣಸಿಗುತ್ತಾರೆ.

ಭಾಷೆ, ಒಂದು ಬುಡಕಟ್ಟಿನ, ಜನಾಂಗದ, ಸಮುದಾಯದ, ರಾಷ್ಟ್ರದ ಚಹರೆಯಾಗುವ ನೂರಾರು ಪ್ರಸಂಗಗಳು ಈಗ ಜಗತ್ತಿನಲ್ಲಿ ಕಾಣಸಿಗುತ್ತಿವೆ. ಇವೆಲ್ಲವೂ ಒಂದೇ ಮಾದರಿಯನ್ನು ಹೊಂದಿಲ್ಲ. ವಿವಿಧ ಕಾರಣಗಳಿಂದ ನಿರ್ಮಾಣಗೊಂಡ ಸಮುದಾಯಗಳು ಅಲ್ಪಸಂಖ್ಯಾತ ಸ್ಥಿತಿಯ ಅರಿವನ್ನು ಪಡೆದರೆ ಆಗ ತಮ್ಮ ವಿಶೇಷ ಲಕ್ಷಣಗಳ ಪಟ್ಟಿಯಲ್ಲಿ ಭಾಷೆಯನ್ನೂ ಸೇರಿಸುತ್ತಾರೆ. ಆ ಭಾಷೆಯನ್ನು ಸಂರಕ್ಷಿಸಿಕೊಳ್ಳುವ ಮೂಲಕವೇ ತಮ್ಮ ವಿಶಿಷ್ಟತೆಯನ್ನು ಕಾಯ್ದುಕೊಳ್ಳಲು ಸಾಧ್ಯವೆಂದು ತಿಳಿಯುತ್ತಾರೆ.

ಕೆಲವು ನಿದರ್ಶನಗಳು

1. ಕುರ್ದಿಶ್ ಭಾಷೆಯನ್ನಾಡುವ ಜನಾಂಗ ಮಧ್ಯಪ್ರಾಚ್ಯದಲ್ಲಿದ್ದು ಇರಾಕ್, ಇರಾನ್, ಟರ್ಕಿಗಳ ಸಂಧಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮೂರೂ ದೇಶಗಳಲ್ಲಿ ಹರಡಿಹೋಗಿರುವ ಈ ಭಾಷಿಕರಿಗೆ ರಾಷ್ಟ್ರವಿಲ್ಲ. ಜನಾಂಗಿಕ ಭಿನ್ನತೆಯಿಂದಾಗಿ ತಾವು ಪ್ರತ್ಯೇಕವಾಗಬೇಕೆಂದು ಹೋರಾಡುತ್ತಿದ್ದಾರೆ. ಇವರ ವಿಶಿಷ್ಟತೆಯ ಮುಖ್ಯ ಚಹರೆಗಳಲ್ಲಿ ಇವರ ಭಾಷೆಯೂ ಒಂದಾಗಿದೆ. ಈ ಜನಾಂಗವನ್ನು ಹತ್ತಿಕ್ಕುತ್ತಿರುವ ರಾಷ್ಟ್ರಗಳಲ್ಲಿ, ಮುಖ್ಯವಾಗಿ ಟರ್ಕಿಯಲ್ಲಿ, ಈ ಕುರ್ದಿಶ್ ಭಾಷೆಯನ್ನು ಬಳಸಲು ನಿರ್ಬಂಧಗಳಿವೆ.

2. ಉತ್ತರ ಅಮೆರಿಕಾದ ಕೆನಡಾ ಈಗ ಒಂದು ಕಾಮನ್‌ವೆಲ್ತ್ ರಾಷ್ಟ್ರವಾಗಿದೆ. ಆದರೆ ಫ್ರೆಂಚ್ ವಸಾಹತಾಗಿದ್ದ ಇಂದಿನ ಕೆನಡಾದ ಕ್ವಿಬೆಕ್ ಪ್ರಾಂತ್ಯದಲ್ಲಿ ಫ್ರೆಂಚ್ ಭಾಷಿಕ ಸಮುದಾಯವಿದೆ. ಬಹುದಿನಗಳಿಂದ ಕೆನಡಾದಲ್ಲಿ ಎರಡು ರಾಷ್ಟ್ರಗಳ ಬೇಡಿಕೆಯಿದೆ. ಫ್ರೆಂಚ್ ಮಾತಾಡುವ ಸಮುದಾಯವೇ ಈ ಬೇಡಿಕೆಯನ್ನು ಮಂಡಿಸಿದ್ದು, ತಮ್ಮ ಭಾಷೆಯನ್ನು ಪ್ರತ್ಯೇಕತೆಗೆ ಮುಖ್ಯ ಕಾರಣವನ್ನಾಗಿ ಇರಿಸಿಕೊಂಡಿದ್ದಾರೆ. ಇಂಥದೇ ಪರಿಸ್ಥಿತಿ ವಿಭಜನ ಪೂರ್ವ ಪಾಕಿಸ್ತಾನದಲ್ಲೂ ಇದ್ದೀತು. 1947 ರಿಂದ 1971 ರವರೆಗೆ ಎರಡು ಭೌಗೋಳಿಕ ವಿಭಾಗಗಳಲ್ಲಿದ್ದ ಈ ರಾಷ್ಟ್ರದಿಂದ ಬಾಂಗ್ಲಾದೇಶ ಪ್ರತ್ಯೇಕವಾಗಿ ರೂಪುಗೊಂಡಿತು. ಎರಡೂ ಭಾಗಗಳು ಧಾರ್ಮಿಕ ಏಕತೆಯನ್ನು ಹೊಂದಿದ್ದರೂ ಭಿನ್ನತೆಗೆ ಇದ್ದ ಕಾರಣಗಳಲ್ಲಿ ಭಾಷೆಯೂ ಮುಖ್ಯವಾಗಿದೆ.

3. ಭಾರತದಲ್ಲಿ ರಾಜ್ಯಗಳ ಮರುವಿಂಗಡಣೆಗೆ ಭಾಷೆಯನ್ನೇ ಮುಖ್ಯ ಆಧಾರವನ್ನಾಗಿ ಇರಿಸಿಕೊಳ್ಳಲಾಗಿದೆ. ಹೀಗಿದ್ದರೂ ಎರಡು ಪ್ರಮುಖ ಭಾಷಾಸಮುದಾಯಗಳಿಗೆ (ಉರ್ದು ಮತ್ತು ಸಿಂಧಿ) ಭೌಗೋಳಿಕ ಪ್ರತ್ಯೇಕತೆ ಇಲ್ಲ. ಎಷ್ಟೋ ರಾಜ್ಯಗಳಲ್ಲಿ ಈ ಭಾಷಾ ಸಮುದಾಯಗಳು ಹಂಚಿಹೋಗಿವೆ. ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ಭಾಷಾಸಮುದಾಯಗಳು ಹಂಚಿಹೋಗಿವೆ. ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ಭಾಷಾಸಮುದಾಯಗಳು ಅಲ್ಪಸಂಖ್ಯಾತವಾಗಿ ಅಡಕಗೊಂಡಿವೆ. ಭಾಷಾ ಅಲ್ಪಸಂಖ್ಯಾತರು ಎಂಬ ಗುಂಪನ್ನು ನಿರ್ದೇಶಿಸಿ ಕೆಲವು ಶಾಸನಬದ್ಧ ಸವಲತ್ತುಗಳನ್ನು ಕಲ್ಪಿಸುವ ಕಾನೂನುಗಳು ಜಾರಿಯಲ್ಲಿವೆ. ಈಗ ನಾಡಿನಾದ್ಯಂತ ನಡೆಯುತ್ತಿರುವ ಹಲವಾರು ಪ್ರತ್ಯೇಕತಾವಾದಿ ಹೋರಾಟ ಗಳಲ್ಲಿ ಕೆಲವು ತಮ್ಮ ಪ್ರತ್ಯೇಕತೆಗೆ ಭಾಷೆಯನ್ನೇ ಮುಖ್ಯ ಚಹರೆಯನ್ನಾಗಿ ಇರಿಸಿಕೊಂಡಿವೆ.

ಇಂಥವೇ ಹಲವಾರು ನಿದರ್ಶನಗಳನ್ನು ಬೇರೆ ಬೇರೆ ದೇಶಗಳಲ್ಲಿ ನೋಡಲು ಸಾಧ್ಯವಿದೆ. ಇಲ್ಲೆಲ್ಲಾ, ಈ ಮೊದಲೇ ಸೂಚಿಸಿದಂತೆ, ಭಾಷಾ ಅಲ್ಪಸಂಖ್ಯಾತ ಸಮುದಾಯವೊಂದು ಪ್ರತ್ಯೇಕ ಅಸ್ತಿತ್ವಕ್ಕೆ ಹೋರಾಡುತ್ತಿರುತ್ತದೆ. ಈ ಹೋರಾಟದಲ್ಲಿ ಭಾಷೆ ಮುಖ್ಯ ಚಹರೆಯಾಗಿರುತ್ತದೆ. ಭಾಷೆಯ ಪ್ರತ್ಯೇಕತೆ ಯನ್ನು ಸೂಚಕವನ್ನಾಗಿಸಿಕೊಂಡು ಪ್ರತ್ಯೇಕ ಸಾಂಸ್ಕೃತಿಕ ಅಸ್ತಿತ್ವಕ್ಕಾಗಿ ಹೋರಾಡು ವುದು ಒಂದು ಮಾದರಿಯಾದರೆ ಭಾಷೆಯ ಉಳಿವಿಗಾಗಿಯೇ, ಅದನ್ನೇ ಗುರಿಯಾಗಿಸಿಕೊಂಡ ಹೋರಾಟ ಇನ್ನೊಂದು ಮಾದರಿ.

ಭಾಷಾಶಾಸ್ತ್ರಜ್ಞರು ಈಗೀಗ ಲಿಂಗ್ವಿಸೈಡ್ ಎಂಬ ಪರಿಕಲ್ಪನೆಯನ್ನು ಬಳಸುತ್ತಿದ್ದಾರೆ. ಭಾಷಾಹತ್ಯೆ ಎಂದು ಅದನ್ನು ನಾವು ಕರೆಯಬಹುದು. ಅಲ್ಪ ಸಂಖ್ಯಾತ ಸಮುದಾಯಗಳು ತಮ್ಮ ಪ್ರತ್ಯೇಕತೆಗಾಗಿ ಭಾಷೆಯನ್ನು ಒಂದು ಮುಖ್ಯ ಚಹರೆಯನ್ನಾಗಿ ಬಳಸುವಂತೆ ಆಳುವ ಸಮುದಾಯಗಳು ತಮ್ಮನ್ನು ಎದುರಿಸುವ, ಪ್ರತ್ಯೇಕವಾಗಲು ಹೋರಾಡುವ ಸಮುದಾಯಗಳನ್ನು ಹತ್ತಿಕ್ಕಲು ಆ ಸಮುದಾಯಗಳ ಭಾಷೆಯನ್ನು ನಾಶಮಾಡುವ ಯೋಜನೆಗಳನ್ನು ರೂಪಿಸುತ್ತವೆ. ಭಾಷಾಹತ್ಯೆಯೆಂದರೆ ಪರೋಕ್ಷವಾಗಿ ಆ ಭಾಷೆಯನ್ನಾಡುವ ಸಮುದಾಯದ ಹತ್ಯೆಯೇ ಆಗಿಬಿಡುತ್ತದೆ. ಇಂತಹ ಸಂದರ್ಭಗಳೂ ಜಗತ್ತಿನಾದ್ಯಂತ ಕಾಣಸಿಗುತ್ತವೆ.

ಭಾಷಾಹತ್ಯೆ ಒಂದು ಸಂಕೀರ್ಣ ಪ್ರಕ್ರಿಯೆ. ಇದನ್ನು ಭಾಷಾನಾಶವೆಂಬ ಪ್ರಕ್ರಿಯೆಗಿಂತ ಬೇರೆಯೆಂದು ತಿಳಿಯಬೇಕು. ಉದ್ದೇಶಪೂರ್ವಕವಾಗಿ ಭಾಷೆಯನ್ನು ನಿರ್ನಾಮ ಮಾಡಲು ಯೋಜನೆಯನ್ನು ರೂಪಿಸುವುದು ಭಾಷಾ ಹತ್ಯೆ. ಭಾಷೆಯನ್ನು ತಮ್ಮ ಪ್ರತ್ಯೇಕತೆಯ ಚಹರೆಯನ್ನಾಗಿ ಗುರುತಿಸುವ ಸಮುದಾಯಗಳನ್ನು ಹತ್ತಿಕ್ಕಲು ಹೊರಗಿನವರು, ಅನ್ಯ ಭಾಷಿಕರು, ಪ್ರಬಲ ಭಾಷಾಸಮುದಾಯಗಳು ಅದೇ ಭಾಷಾಚಹರೆಯನ್ನು ನಾಶಗೊಳಿಸುವ ಅತಿರೇಕದ ಯೋಜನೆಗಳನ್ನು ರೂಪಿಸುತ್ತವೆ. ಇವು ಪ್ರಜ್ಞಾಪೂರ್ವಕ ಯೋಜನೆ ಗಳಾಗಿರುವಂತೆ ಕೆಲವೊಮ್ಮೆ ಬೇರೆಬೇರೆ ಕಾರ್ಯಯೋಜನೆಗಳ ಪರೋಕ್ಷ ಪರಿಣಾಮಗಳೂ ಆಗಿರುತ್ತವೆ. ವಲಸೆಗಾರರ ಮಕ್ಕಳು ಬಹುಸಂಖ್ಯಾತರ ಭಾಷಾ ಸಮುದಾಯದಲ್ಲಿ ಬೆರೆಯಲು ಅನುಕೂಲವಾಗುವಂತೆ ಏರ್ಪಡಿಸುವ ಭಾಷಾ ಕಲಿಕೆಯ ಕಾರ್ಯಕ್ರಮಗಳು ಪರೋಕ್ಷವಾಗಿ ಆ ಮಕ್ಕಳನ್ನು ಅವರ ಭಾಷೆಯನ್ನು ಕಳೆದುಕೊಳ್ಳಲು ಕಾರಣವಾಗುತ್ತವೆ. ಉತ್ತರ ಅಮೆರಿಕಾದಲ್ಲಿರುವ ಭಾರತೀಯ ಸಂಜಾತರು ಒಂದೇ ತಲೆಮಾರಿನಲ್ಲಿ ತಂತಮ್ಮ ಭಾಷೆಗಳನ್ನು ಕಳೆದುಕೊಂಡಿದ್ದನ್ನು ಗಮನಿಸಬಹುದು.

ಹೀಗೆ ಅಲ್ಪಸಂಖ್ಯಾತರನ್ನು ಗುರುತಿಸಲು ಭಾಷೆಯನ್ನು ಮುಖ್ಯ ಚಹರೆ ಯನ್ನಾಗಿ ಬಳಸುವುದು ಬಹುಹಿಂದಿನಿಂದಲೂ ನಡೆದುಬಂದಿದೆ. ಹಳೆಯ ಒಡಂಬಡಿಕೆಯಲ್ಲಿ ‘ಶಿಬ್ಬೊಲೆತ್’ ಎಂಬ ಪದವನ್ನು ಹೇಗೆ ಉಚ್ಚರಿಸಬೇಕೋ ಹಾಗೆ ಉಚ್ಚರಿಸದೇ ಇದ್ದವರನ್ನು ಬೇರೆ ಗುಂಪಿನವರೆಂದು ಪರಿಗಣಿಸಿ ಅಂಥ 40,000 ಜನರನ್ನು ಕೊಂದ ಪ್ರಸಂಗವಿದೆ. ಗ್ರೀಕರು ತಮ್ಮ ಭಾಷೆಯನ್ನಾಡದ ಇತರ ಭಾಷಿಕರನ್ನು ‘ಬಾರ್ಬರಿಯನ್’ರೆಂದರು. ಹಾಗೆಂದರೆ ‘ಅರ್ಥವಿಲ್ಲದ ಭಾಷೆಯನ್ನು ಆಡುವವರು’ ಎಂದೇ ಅರ್ಥ. ‘ವೆಲ್ಷ್’ ಪದಕ್ಕೂ ಇದೇ ಬಗೆಯ ಅರ್ಥವಿರುವುದನ್ನು ಆಕ್ಸ್‌ಫರ್ಡ್ ನಿಘಂಟು ದಾಖಲು ಮಾಡಿದೆ.

ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು ತಂತಮ್ಮ ಭಾಷೆಯನ್ನು ಕಾಯ್ದುಕೊಳ್ಳುವ ಹಕ್ಕನ್ನು ನೀಡಲು ಕೋರುವ ಚಳುವಳಿಗಳು ನಡೆದಿವೆ. ಇವುಗಳಲ್ಲಿ ಹಲವು ಅಂತರಾಷ್ಟ್ರೀಯ ವೇದಿಕೆಗಳ ಪಾತ್ರವಿದೆ. 1987ರಲ್ಲಿ ಯುನೆಸ್ಕೋದ ಆಶ್ರಯದಲ್ಲಿ ಬ್ರೆಜಿಲ್‌ನ ರೆಸಿಫೆಯಲ್ಲಿ ನಡೆದ ಸಮಾವೇಶವೊಂದು ಭಾಷೆಯನ್ನು ಒಂದು ಮಾನವ ಹಕ್ಕೆಂದು ಪರಿಗಣಿಸಲು ಒತ್ತಾಯಿಸಿತು. ಇಂಥದೇ ನಿರ್ಣಯಗಳನ್ನು 1989ರ ಪ್ಯಾರಿಸ್ ಸಮಾವೇಶದಲ್ಲಿ, 1991ರ ಹಂಗೆರಿಯ ಪೆಕ್ಸ್ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು. ಇದೆಲ್ಲವೂ ಒಟ್ಟಾಗಿ 1992ರಲ್ಲಿ ವಿಶ್ವಸಂಸ್ಥೆಯ ಸರ್ವಸದಸ್ಯ ಸಭೆಯು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿರ್ಣಯವನ್ನು ತೆಗೆದುಕೊಂಡಿದೆ. ಅದರ ಪ್ರಸ್ತಾವನೆಯಲ್ಲಿ ಭಾಷಾ ಅಲ್ಪ ಸಂಖ್ಯಾತರ ಹಕ್ಕುಗಳ ಸಂರಕ್ಷಣೆ ಮತ್ತು ಪೋಷಣೆಯಿಂದಾಗಿ ಆಯಾ ಸಮುದಾಯಗಳಿರುವ ಸಮಾಜಗಳು ಹೆಚ್ಚು ಸುಸ್ಥಿರಗೊಳ್ಳಲು ಸಾಧ್ಯವೆಂದು ಹೇಳಿದ್ದಾರೆ. ವಿಭಿನ್ನ ಭಾಷಾ ಸಮುದಾಯಗಳು ತಂತಮ್ಮ ಭಾಷೆಗಳನ್ನು ಉಳಿಸಿ ಕೊಳ್ಳಲು ಹೋರಾಡುವುದರಿಂದಲೇ ಸಮಾಜಗಳಲ್ಲಿ ಅಸ್ಥಿರತೆ ಯುಂಟಾಗುವುದೆಂಬ ಆವರೆಗಿನ ಜನಪ್ರಿಯ, ಆದರೆ ಬುಡವಿಲ್ಲದ ತಿಳುವಳಿಕೆ ಯನ್ನು ಈ ಮೇಲೆ ಹೇಳಿದ 1992ರ ನಿರ್ಣಯ ತಲೆಕೆಳಗು ಮಾಡಿದೆ.

ಇಷ್ಟಾದರೂ ಹಲವಾರು ದೇಶಗಳಲ್ಲಿ, ಉಪಖಂಡಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಂಭವವೇ ಹೆಚ್ಚಾಗಿರುವಂತೆ ತೋರುತ್ತದೆ. ಯುರೋಪಿನ ದೇಶಗಳ ಒಕ್ಕೂಟ ರಚನೆಯ ಅನಂತರದ ದಿನಗಳಲ್ಲಿ ಯುರೋಪಿನ ವಿವಿಧ ಅಲ್ಪಸಂಖ್ಯಾತ ಭಾಷಾ ಸಮುದಾಯಗಳು ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲೂ ವಲಸೆಬಂದ ದುಡಿಮೆಗಾರರು ತೀವ್ರತರದ ಭಾಷಾ ಸಂಕಷ್ಟಗಳಿಗೆ ತುತ್ತಾಗುವ ಸಂಭವವಿದೆ. ವಸಾಹತು ಆಡಳಿತದಿಂದ ಹೊರಬಂದ ನವೋದಿತ ರಾಷ್ಟ್ರಗಳಲ್ಲಿ ಭಾಷಾ ಸಮುದಾಯಗಳ ನಡುವಣ ತಿಕ್ಕಾಟ ತೀವ್ರಗೊಳ್ಳುತ್ತಿದೆ. ಭಾಷಾಶಾಸ್ತ್ರಜ್ಞರು ಈ ಎಲ್ಲ ಸಂದರ್ಭಗಳನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.

ಭಾಷಾ ಅಲ್ಪಸಂಖ್ಯಾತರನ್ನು ಅವರ ಭಾಷೆಯೊಡನೆ ಗುರುತಿಸುವ ಪ್ರವೃತ್ತಿಯ ಜತೆಗೆ, ಅವರ ಪರಿಸರದ ಪ್ರಬಲ ಭಾಷೆಯನ್ನು ಬಳಸುವ ವಿಶೇಷ ಬಗೆಯಿಂದಲೂ ಗುರುತಿಸುವುದುಂಟು. ಉದಾಹರಣೆಗೆ ಮುಸ್ಲಿಮರನ್ನು ಉರ್ದು ಮಾತಾಡುವ ಅಲ್ಪಸಂಖ್ಯಾತ ಭಾಷಾಸಮುದಾಯವೆಂದು ಗುರುತಿಸುವುದು ಒಂದು ಬಗೆ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಅವರು ಕನ್ನಡವನ್ನು ಬಳಸುವ ಬಗೆಯಿಂದಲೂ ಪ್ರತ್ಯೇಕಗೊಳ್ಳುತ್ತಾರೆ ಅಥವಾ ಅವರನ್ನು ಬಹುಸಂಖ್ಯಾತ ಭಾಷಿಕರು ಅವರ ಕನ್ನಡ ಬಳಕೆಯ ವೈಶಿಷ್ಟ್ಯಗಳಿಂದ ಗುರುತಿಸುತ್ತಾರೆ. ಈ ವೈಶಿಷ್ಟ್ಯಗಳು ಕೇವಲ ವರ್ಣನಾತ್ಮಕವಲ್ಲ; ಹೀನಾಯವಾಗಿ ನೋಡಲು, ಗೇಲಿ ಮಾಡಲು ನೆರವಾಗುವ ಅಂಶಗಳಾಗಿ ಬಹುಸಂಖ್ಯಾತ ಭಾಷಿಕರಲ್ಲಿ ಬಳಕೆ ಯಾಗುತ್ತವೆ.

ಉರ್ದು ಭಾಷಿಕರ (ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸೀಮಿತ) ಕನ್ನಡದ ಕೆಲವು ಚಹರೆಗಳು ಹೀಗಿವೆ.

1.  ಚತುರ್ಥಿ ಮತ್ತು ದ್ವಿತೀಯಾ ವಿಭಕ್ತಿ ಪ್ರತ್ಯಯಗಳನ್ನು ಬೇರೆಯಾಗಿ ಇಡದಿರುವುದು; ಎರಡೂ ವಿಭಕ್ತಿಗಳಿಗೂ ಚತುರ್ಥಿ ವಿಭಕ್ತಿಯ ಪ್ರತ್ಯಯವನ್ನು ಬಳಸುವುದು.

2.  ತೃತೀಯ ಪುರುಷ ನಪುಂಸಕ ಲಿಂಗದ ಏಕವಚನ ಆಖ್ಯಾತ ಪ್ರತ್ಯಯಗಳ ಬದಲು ಪುಂ-ಸ್ತ್ರೀ ಲಿಂಗದ ಬಹುವಚನ ಆಖ್ಯಾತ ರೂಪಗಳನ್ನು ಬಳಸುವುದು.

ಉದಾ: ನಾಯಿ ಬೊಗಳ್ತಾರೆ.

3.  ಬಹುಪಾಲು ವಾಕ್ಯಗಳ ಕೊನೆಗೆ ‘ಇಲ್ಲ’ ಎಂಬ ಕೊನೆ ಪ್ರಶ್ನೆ (ಟ್ಯಾಗ್) ಯನ್ನು ಸೇರಿಸುವುದು.

4.  ಧ್ವನಿ ಘಟಕಗಳ ಉಚ್ಚಾರಣೆ ಹಾಗೂ ಪದಗಳ ಉಚ್ಚಾರಣೆಯ ಲಯದಲ್ಲೂ ಇಂಥ ಕೆಲವು ಲಕ್ಷಣಗಳನ್ನು ಗಮನಿಸುವುದು ಸಾಧ್ಯ.

ಸಾಮಾನ್ಯ ಸಂವಾದಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ, ಪ್ರದರ್ಶಕ ಕಲೆಗಳಲ್ಲಿ ಉರ್ದು ಭಾಷಿಕರನ್ನು ಅನುಕರಿಸಲು ತೊಡಗುವವರು ಈ ಮೇಲೆ ಹೇಳಿದ ಭಾಷಾಲಕ್ಷಣಗಳನ್ನು ಅಳವಡಿಸಿಕೊಳ್ಳುವುದನ್ನು ನೋಡುತ್ತೇವೆ.

ಇಂಥದೇ ಸಂದರ್ಭಗಳು ಅನ್ಯ ಭಾಷಾಸಮುದಾಯಗಳಲ್ಲೂ ಇವೆ. ಅಮೆರಿಕದ ಕಪ್ಪು ಜನರಿಗೆ ಅವರು ಮಾತಾಡುವ ಇಂಗ್ಲಿಶಿನ ವಿಶೇಷ ಲಕ್ಷಣಗಳೇ ಮುಖ್ಯ ಚಹರೆಗಳಾಗುತ್ತವೆ. ಫ್ರೆಂಚ್ ಜನರ ಇಂಗ್ಲಿಶ್ ಕೂಡ ಹೀಗೆ ಒಂದು ಚಹರೆಯಾಗುತ್ತದೆ. ಜನಪ್ರಿಯ ಹಿಂದಿ ಚಲನಚಿತ್ರಗಳು ದಕ್ಷಿಣ ಭಾರತದ ಪಾತ್ರಗಳಿಗೆ ವಿಶಿಷ್ಟ ಬಗೆಯ ಹಿಂದಿಯನ್ನು ಚಹರೆಯನ್ನಾಗಿ ರೂಪಿಸಿಕೊಂಡಿವೆ.

ವೃತ್ತಿರಂಗಭೂಮಿಯ ಬಹುಖ್ಯಾತನಾದ ಟೀಪೂ ಸುಲ್ತಾನ’( ಹುಲಿಮನೆ ಸೀತಾರಾಮಶಾಸ್ತ್ರೀ) ನಾಟಕದಲ್ಲಿ ಟೀಪೂ ಪಾತ್ರಧಾರಿ ಶಿಷ್ಯ ಕನ್ನಡದಲ್ಲಿ ಮಾತನಾಡಿದರೆ ಮೀರ್‌ಸಾದಿಕ್ ಪಾತ್ರ ಮಾತ್ರ ಉರ್ದು ಭಾಷಿಕರ ಕನ್ನಡದಲ್ಲಿ ಮಾತನಾಡುವುದನ್ನು ಗಮನಿಸಬಹುದು. ಇದರಿಂದ ಪಾತ್ರಗಳ ಸ್ವಭಾವದ ಬಗೆಗೂ ವಿವರಣೆ ನೀಡಿದಂತಾಗಿದೆ. ಹಿರಣ್ಣಯ್ಯನವರ ಎಚ್ಚಮನಾಯಕ ನಾಟಕದಲ್ಲಿ ಜಾತಿ ಭ್ರಷ್ಟರಾದ ಇಬ್ಬರು ಬ್ರಾಹ್ಮಣರು (ಖಾನ್ ಸಿದ್ಧಾಂತಿ ಮತ್ತು ಬುಡನ್ ಶಾಸ್ತ್ರಿ) ಮಾತನಾಡುವ ಕನ್ನಡವನ್ನು ಇಂತಹುದೇ ಇನ್ನೊಂದು ನಿದರ್ಶನವಾಗಿ ನೋಡಬಹುದು.

ರಾಷ್ಟ್ರಗಳನ್ನು ಕಟ್ಟುವಾಗ ಭಾಷೆಯೂ ಮುಖ್ಯ ನೆಲೆಯಾಗುತ್ತದೆ. ಅದಕ್ಕೆ ನೀಡುವ ಪ್ರಾಮುಖ್ಯದಲ್ಲಿ ಏರಿಳಿತಗಳಾಗಲೂ ಸಾಧ್ಯ. ಆದರೆ ಭಾಷೆಯನ್ನು ಹೊರತುಪಡಿಸಿ ರಾಷ್ಟ್ರವನ್ನು ವ್ಯಾಖ್ಯಾನ ಮಾಡುವುದು ಅಸಾಧ್ಯ. ಒಂದು ರಾಷ್ಟ್ರ, ಒಂದು ಭಾಷೆ ಎಂಬ ಸಾಧ್ಯತೆ ಈಗ ಇಲ್ಲ. ಬಹುಭಾಷಿಕ ಸಮುದಾಯ ಗಳು ವಿವಿಧ ಬಗೆಯ ಸಾಮಾಜಿಕ ಸಂಬಂಧವನ್ನು ರೂಪಿಸಿಕೊಂಡು ರಾಷ್ಟ್ರಗಳೆಂದು ಹೆಸರಾಗುತ್ತಿವೆ. ಕೆಲವು ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಭಾಷೆಯೊಂದು ಪ್ರಬಲವಾಗಿದ್ದು ಉಳಿದ ಭಾಷಿಕ ಸಮುದಾಯಗಳು ಅಲ್ಪಸಂಖ್ಯಾತವಾಗಿರುತ್ತವೆ. ಮತ್ತೆ ಕೆಲವು ರಾಷ್ಟ್ರಗಳಲ್ಲಿ ರಾಜಕೀಯ ಕಾರಣ ಗಳಿಂದ ಪ್ರಬಲವಾಗಿರುವ ಭಾಷಾ ಸಮುದಾಯಕ್ಕಿಂತ ಉಳಿದೆಲ್ಲ ಭಾಷಾ ಸಮುದಾಯಗಳ ಜನರ ಸಂಖ್ಯೆ ಒಟ್ಟಾಗಿ ಹೆಚ್ಚಿರುತ್ತದೆ. ಏನೇ ಇರಲಿ. ರಾಷ್ಟ್ರಗಳು ಒಂದು ಭಾಷೆಯನ್ನು ರಾಷ್ಟ್ರ ಭಾಷೆಯೆಂದು ಘೋಷಿಸಿ ಕೊಂಡಿರುತ್ತವೆ. ಕೆಲವೊಮ್ಮೆ ಇತರ ಅಲ್ಪಸಂಖ್ಯಾತ ಭಾಷಾ ಸಮುದಾಯಗಳು ಈ ರಾಷ್ಟ್ರ ಭಾಷೆಯೊಡನೆ ಗುರುತಿಸಿಕೊಳ್ಳಲು ಅಶಕ್ಯರಾದರೆ ಒಂದು ಭಾವನಾತ್ಮಕ ನಂಟನ್ನು ಕಲ್ಪಿಸುವ ಬೇರೊಂದು ಅಭಿಜಾತ ಭಾಷೆಯೊಡನೆ ತಮ್ಮನ್ನು ಗುರುತಿಸಿ ಕೊಳ್ಳುವುದೂ ಉಂಟು. ಭಾರತದಲ್ಲಿ ಹಿಂದಿ ರಾಷ್ಟ್ರಭಾಷೆ. ಆದರೆ ಎಷ್ಟೋ ಪ್ರಾಂತೀಯ ಭಾಷೆಗಳನ್ನಾಡುವವರಿಗೆ ತಂತಮ್ಮ ಭಾಷೆಗಳೇ ಹಿಂದಿಗಿಂತ ಪ್ರಾಚೀನ ಪರಂಪರೆಯನ್ನುಳ್ಳ ಭಾಷೆಗಳೆಂದು ತಿಳಿದಿದೆ. ಹೀಗಾಗಿ ಹಿಂದಿಯನ್ನು ಮುಂಚೂಣಿಯಲ್ಲಿಡಲು ಒಪ್ಪುವುದಿಲ್ಲ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಂಸ್ಕೃತವನ್ನು ಮುಂಚೂಣಿಗೆ ತರಲಾಗುತ್ತದೆ. ಭಾವನಾತ್ಮಕ ವಾಗಿ ಸಂಸ್ಕೃತ ಪ್ರಾಚೀನತೆಯನ್ನು ಒಪ್ಪಿ ಅದರೊಡನೆ ಗುರುತಿಸಿಕೊಳ್ಳಲು ಎಲ್ಲರನ್ನೂ ಪ್ರೇರೇಪಿಸುವರು. ಇಂಥದೊಂದು ಚಿಂತನೆ ಭಾರತದ ರಾಷ್ಟ್ರೀಯ ಚಳುವಳಿಯ ಭಾಗವಾಗಿತ್ತು.