ಜೇನುತುಪ್ಪ ಅಜೀರ್ಣವನ್ನು ದೂರ ಮಾಡುತ್ತದೆ.  ಲಿಪೋಪ್ರೋಟೀನ್ ಅಂದರೆ ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ.  ಕೆಮ್ಮು, ಗಂಟಲು ಕಿಚ್ ಕಿಚ್, ಬಾಯಿಯೊಳಗಿನ ಬ್ಯಾಕ್ಟೀರಿಯಾ ಉಪಟಳ, ಕೆಟ್ಟ ವಾಸನೆ, ಅಲ್ಸರ್ ಇವುಗಳಿಗೆಲ್ಲಾ ಏಕೌಷಧ.  ಸುಟ್ಟ ಗಾಯಗಳಿಗೆ, ಗಾಯಗಳು ಕೀವಾಗದಂತಿರಲು ಉಪಯೋಗಿಸಲಾಗುತ್ತದೆ.  ಹೀಗೆ ಏನೆಲ್ಲಾ ಔಷಧೀಯ ಗುಣ ಹೊಂದಿರುವ ಜೇನುತುಪ್ಪ ಜೇನುಹುಳುಗಳ ಕಷ್ಟದ ಫಲ.  ನಿಸರ್ಗದ ಹೂವುಗಳೊಡನೆ ಸಂಬಂಧ ಬೆಸೆಯುತ್ತಾ ಸಂಗ್ರಹಿಸುವ ಮಕರಂದವನ್ನು ತನ್ನ ವಿಶಿಷ್ಟ ರಚನೆಯ ಗೂಡಿನಲ್ಲಿ ಹಾಳಾಗದಂತೆ ಶೇಖರಿಸುವ ರೀತಿಯೇ ಅನನ್ಯ.  ಇದು ಜೇನುಹುಳುಗಳ ಆಹಾರವೂ ಆಗಿದೆ.  ಅದನ್ನೆಲ್ಲಾ ಕಬಳಿಸುವ ಮೊದಲ ಶತ್ರುವೇ ಮನುಷ್ಯ.

ಆಹಾರ ಹಾಗೂ ಔಷಧಿಗಳ ಪಟ್ಟಿಯಲ್ಲಿ ಜೇನುತುಪ್ಪಕ್ಕೆ ರಾಜಮುಕುಟ.  ಆಯುರ್ವೇದದಲ್ಲಿ ಅನೇಕ ಔಷಧಿಗಳಿಗೆ ಜೇನುತುಪ್ಪವೇ ಮೂಲವಸ್ತು.  ಆದರೆ ಜೇನುತುಪ್ಪದ ಸಾಚಾತನವೇ ಇಂದಿನ ಮುಖ್ಯ ಸಮಸ್ಯೆ.  ಪಾಪದ ಜೇನುಹುಳುಗಳ ಮೇಲೆ ಅಪವಾದ.

ಜೇನುತುಪ್ಪದ ಉಪಯುಕ್ತತೆಯನ್ನು ಹೆಚ್ಚಿಸಲು ಅದರ ರಾಸಾಯನಿಕ ಸಂಯುಕ್ತಗಳನ್ನು ವಿಂಗಡಿಸಿದರು.  ಅತ್ಯಂತ ಸುಲಭ ಸಂಯುಕ್ತಗಳಾಗಿದ್ದಕ್ಕೆ ಮನುಷ್ಯರೇ ಉತ್ಪಾದನೆ ಪ್ರಾರಂಭಿಸಿದರು.  ಜನರ ಹಕ್ಕೊತ್ತಾಯ ಕಲಬೆರಕೆಗೆ ಕಾರಣವಾಯಿತು.  ಕೃತಕ ಜೇನುತುಪ್ಪ ನೈಸರ್ಗಿಕ ಜೇನುತುಪ್ಪದ ಪ್ರಾಮಾಣಿಕತೆಯನ್ನೇ ಮಸುಕು ಮಾಡಿತು.  ಹಳ್ಳಿಯವರು ಕಾಡಿನಿಂದ ಹೆಜ್ಜೇನಿನ ಜೇನುತುಪ್ಪ ಸಂಗ್ರಹಿಸಿ ತಂದರೆ ಅದರ ವಾಸನೆ, ರುಚಿ ನೋಡಿ ದೂರ ಸರಿಯುವವರು ಹೆಚ್ಚಾಗಿದ್ದಾರೆ.  ಹಾಗೇ ಹಳ್ಳಿಯವರ ವೇಷದಲ್ಲಿ ಕೃತಕ ಜೇನುತುಪ್ಪ (ಸಕ್ಕರೆಪಾಕ) ತಯಾರಿಸಿ ಮಾರುವವರೂ ಇದ್ದಾರೆ.

ಭಾರತದಲ್ಲಿ ಜೇನುತುಪ್ಪ ಎರಡು ವಿಧಗಳಲ್ಲಿ ದೊರಕುತ್ತದೆ ಎಂದು ಕೇಂದ್ರ ಜೇನು ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ಹೇಳುತ್ತದೆ.

೧.(ಏಪಿಯೇರಿ) ಸಾಕಿದ ಜೇನುಹುಳುಗಳಿಂದ ತಯಾರಿಸಿದ ಜೇನುತುಪ್ಪ.

೨.(ಫಾರೆಸ್ಟ್) ಕಾಡಿನ ಜೇನುಹುಳುಗಳು ತಯಾರಿಸಿದ ಜೇನುತುಪ್ಪ.

ಸಾಕಿದ ಜೇನುಹುಳುಗಳು ತಯಾರಿಸಿದ ಜೇನುತುಪ್ಪವನ್ನು ಅತ್ಯಾಧುನಿಕ ಪದ್ಧತಿಯಿಂದ ಜೇನುತತ್ತಿ ಹಾಳಾಗದಂತೆ ತೆಗೆಯುತ್ತಾರೆ.  ಇದು ಶುದ್ಧ ಹಾಗೂ ಪಾರದರ್ಶಕವಾಗಿದ್ದು, ವಾಸನೆ, ಬಣ್ಣ ಹಾಗೂ ರುಚಿಯಲ್ಲಿ ಒಂದೇ ಗುಣಮಟ್ಟವನ್ನು ಕಾಪಾಡಲಾಗುತ್ತದೆ.

ಕಾಡಿನಿಂದ ಸಂಗ್ರಹಿಸಿದ ಅಥವಾ ಅತ್ಯಾಧುನಿಕ ಪದ್ಧತಿ ಬಳಸದೇ ಸಂಗ್ರಹಿಸಿದ ಜೇನುತುಪ್ಪಕ್ಕೆ ನಿರ್ದಿಷ್ಟ ಬಣ್ಣ, ವಾಸನೆ, ರುಚಿ ಇಲ್ಲ.  ಪಾರದರ್ಶಕವಾಗಿರದೆ ಹೂಗಳ ಪರಾಗರೇಣು, ಮೇಣದ ಅಂಶ, ಜೇನುಹುಳುಗಳ ಸಶೇಷ, ಮೊಟ್ಟೆಗಳ ಸಶೇಷ ಏನೆಲ್ಲಾ ಸಸ್ಯವಸ್ತುಗಳು ಇತ್ಯಾದಿ ಇರುತ್ತವೆ.  ಈ ವಸ್ತುಗಳ ಆಧಾರದಿಂದ ಬಣ್ಣ, ವಾಸನೆ, ರುಚಿ ಎಲ್ಲವೂ ಏರುಪೇರಾಗುತ್ತದೆ.

ಎರಡು ರೀತಿಯ ಜೇನುತುಪ್ಪಗಳು ಜೇನುಹುಳುಗಳಿಂದಲೇ ಉತ್ಪಾದನೆಯಾದ ಪ್ರಯುಕ್ತ ಉಪಯೋಗಿಸಲು ಯೋಗ್ಯವಾಗಿವೆ.

ಕರ್ನಾಟಕದಲಿ ಜೇನುತುಪ್ಪ ಉತ್ಪಾದಿಸುವ ಅಸಂಖ್ಯಾತ ಕಾರ್ಖಾನೆಗಳಿವೆ.  ಜೇನುತುಪ್ಪ ಸಂಗ್ರಹಿಸುವ ೩೦ ಟ್ರಸ್ಟ್(ಸಂಸ್ಥೆ)ಗಳಿವೆ.  ಇವುಗಳಲ್ಲಿ ಕೆಲವು ಸರ್ಕಾರಿ ಕೃಪಾಪೋಷಿತ.  ಆದರೆ ಯಾವುದೇ ಜೇನುತುಪ್ಪ ಸಂಗ್ರಾಹಕರು, ಮಾರಾಟಗಾರರು ಆಹಾರ ಕಲಬೆರಕೆ ನಿಯಂತ್ರಣ ಮಂಡಳಿಯ

[Pಈಂ ಂಛಿಣ] ಪ್ರಮಾಣಪತ್ರ ಹೊಂದಿಲ್ಲ!!!

ಅಷ್ಟೇ ಅಲ್ಲ, ಭಾರತದ ಯಾವುದೇ ಕಂಪೆನಿಯ ಜೇನುತುಪ್ಪವೂ ವಿಶ್ವದರ್ಜೆಗೆ ಅಂದರೆ ಓಡೆಕ್ಸ್ ಅಲಿಮೆಂಟರೀಯಾಸ್ ಪ್ರಮಾಣಕ್ಕೆ ಏರುವ ಕನಿಷ್ಠ ಅರ್ಹತೆಯನ್ನೂ ಹೊಂದಿಲ್ಲದಿರುವುದು ವಿಷಾದನೀಯ.

ಈಗೆರಡು ವರ್ಷಗಳ ಹಿಂದೆ ಅಹಮದಾಬಾದಿನ ಪ್ರಯೋಗಾಲಯದಲ್ಲಿ ೧೭ ಬ್ರಾಂಡಿನ ಜೇನುತುಪ್ಪಗಳನ್ನು ಪರೀಕ್ಷೆ ಮಾಡಲಾಯಿತು.  ವಿವರಗಳನ್ನು ಇನ್‌ಸೈಟ್ ಪತ್ರಿಕೆ ವರದಿ ಮಾಡಿದೆ.

೧೭ ಕಂಪೆನಿಗಳ ಹೆಸರುಗಳು ಹೀಗಿವೆ: ಅಮೃತ್, ಬೈದ್ಯನಾಥ್, ಬ್ರಿಜ್, ಡಾಬರ್, ಧನ್ವಂತರಿ, ಹಿಮಾಲಯನ್, ಹೈನೆಸ್, ಇಂಡಿಯನ್, ಕೆವಿಐಸಿ ಕೊಚ್ಚಿನ್, ಕೆವಿಐಸಿ ಮುಂಬೈ, ಮಧುಸಾಗರ್, ಮಧುರ, ಮೆಹಸನ್, ಪುಷ್ಪ, ಸಂಸ್ಕರಿತ ಮಧು, ಶ್ರೀಜೀ [Wಃಃಏಂ] ಪಶ್ಚಿಮಬಂಗಾಳ.  ಈ ಕಂಪೆನಿಗಳ ಜೇನುತುಪ್ಪಗಳನ್ನು ಸುಮಾರು ಮೂವತ್ತು ರೀತಿಯ ಪ್ರಯೋಗಗಳಿಗೆ ಒಡ್ಡಲಾಯಿತು.

ಸುಕ್ರೋಸ್ ಪ್ರಮಾಣ, ಇತರೆ ಸಕ್ಕರೆ ಅಂಶಗಳ ಪ್ರಮಾಣ, ಆಮ್ಲೀಯತೆ, ಹೈಡ್ರಾಕ್ಸಿ ಮೀಥೈಲ್ ಫರ್‌ಫುರಲ್ [ಊಒಈ], ಹರಳುಗಟ್ಟುವಿಕೆ, ಶಕ್ತಿ, ಬಣ್ಣ, ವಾಸನೆ, ರುಚಿ, ಪಾರದರ್ಶಕತೆ, ಗುಣಮಟ್ಟ, ಸಾಂದ್ರತೆ, ತೇವಾಂಶ, ನೀರಿನ ಪ್ರಮಾಣ, ಸಕ್ಕರೆಪಾಕದ ಅಂಶ, ಪರಾಗರೇಣು, ಸಸ್ಯಭಾಗಗಳು, ಧೂಳು, ಮರಳು, ಬೂದಿ, ತೂಕದ ವ್ಯತ್ಯಾಸ, ಸೂಕ್ತಬೆಲೆ ಹಾಗೂ ಮೌಲ್ಯ, ಜಾಹೀರಾತು ಹಾಗೂ ಲೇಬಲ್ ಮೇಲಿರುವ ವಿಷಯಗಳ ಪ್ರಾಮಾಣಿಕತೆ, ಉಪಯೋಗಿಸುವ ಸಮಯ, ಪ್ರಮಾಣಪತ್ರ ಹೀಗೆ ಅನೇಕ ರೀತಿಯಲ್ಲಿ ಪರೀಕ್ಷೆ ನಡೆಸಲಾಯಿತು.

ಸಕ್ಕರೆ ಅಂಶ

ಜೇನುತುಪ್ಪದಲ್ಲಿ ಸುಕ್ರೋಸ್, ಸಕ್ಕರೆ ಪ್ರಮುಖ ಮೂಲವಸ್ತು.  ಗ್ಲೂಕೋಸ್, ಫ್ರುಕ್ಟೋಸ್ ಸಹಾ ಇದೆ.  ಸುಕ್ರೋಸ್ ಪ್ರಮಾಣ ಒಂದು ಕಿಲೋಗ್ರಾಂ ಜೇನುತುಪ್ಪದಲ್ಲಿ ಶೇಕಡಾ ಐದಕ್ಕೂ ಹೆಚ್ಚಿರಬಾರದು.  ಹೆಚ್ಚಿದ್ದರೆ ಜೇನುಹುಳುಗಳ ಎದುರು ಸಕ್ಕರೆ ಪಾಕ ಇಟ್ಟಿದ್ದಾರೆ ಅಥವಾ ಸಕ್ಕರೆಪಾಕವನ್ನು ಜೇನುತುಪ್ಪಕ್ಕೆ ಬೆರೆಸಿದ್ದಾರೆ ಎನ್ನಬಹುದು.

ಶ್ರೀಜೀಯವರ ಬ್ರಾಂಡಿನ ಜೇನುತುಪ್ಪದಲ್ಲಿ ಸುಕ್ರೋಸ್ ಪ್ರಮಾಣ ಶೇಕಡಾ ೯.೧ರಷ್ಟು, ಇಂಡಿಯನ್ ಶೇಕಡಾ ೧೧.೪ರಷ್ಟು, ಮಧುರದಲ್ಲಿ ಶೇಕಡಾ ೧೩.೧ ದಾಖಲಾಗಿದೆ.  ಆದರೆ ಡಾಬರ್ ಕಂಪೆನಿಯ ಜೇನುತುಪ್ಪದಲ್ಲಿ ಸುಕ್ರೋಸ್ ಪ್ರಮಾಣ ಕೇವಲ ಶೇಕಡಾ ೧.೧ ಮಾತ್ರ.

ಹರಳುಗಟ್ಟುವಿಕೆ

ಫ್ರುಕ್ಟೋಸ್ ಹಾಗೂ ಗ್ಲುಕೋಸ್ ಅನುಪಾತದಲ್ಲಿ ಏರುಪೇರಾದರೆ ಜೇನುತುಪ್ಪ ಹರಳುಗಟ್ಟುತ್ತದೆ.  ಈ ಎರಡರ ಅನುಪಾತ ಒಂದಕ್ಕೂ ಹೆಚ್ಚಿರಬೇಕು.  ಮೆಹಸನ್ಸ್‌ನಲ್ಲಿ ೧.೮, ಪಶ್ಚಿಮ ಬಂಗಾಳ ೧.೬ ಹಾಗು ಡಾಬರ್ ೧.೫ ಅನುಪಾತ ಹೊಂದಿದ್ದು ತೇರ್ಗಡೆಯಾಗಿದೆ.

ಹಳ್ಳಿಗಳಲ್ಲಿ ಜೇನುತುಪ್ಪವನ್ನು ವರ್ಷಗಟ್ಟಳೆ ಇಡುವ ರೂಢಿ ಇದೆ.  ಹರಳುಗಟ್ಟಿದ್ದರೆ ಅತ್ಯುತ್ಕೃಷ್ಟವೆಂದು ಭಾವಿಸುತ್ತಾರೆ.  ಆದರೆ ೩೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಜೇನುತುಪ್ಪ ಹರಳಾಗಲು ತೊಡಗುತ್ತದೆ.  ಒಂದೊಮ್ಮೆ ಆಮ್ಲೀಯತೆ ಹೆಚ್ಚಿದ್ದರೆ ಹರಳುಗಟ್ಟುವಿಕೆ ನಿಧಾನವಾಗುತ್ತದೆ.  ಹರಳುಗಟ್ಟಿದ ಜೇನುತುಪ್ಪವನ್ನು ಔಷಧಿಗಳಿಗೆ ಉಪಯೋಗಿಸುವುದಿದ್ದರೆ ಅದನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸುವುದು ಒಳ್ಳೆಯದು.  ಹರಳಾದ ಜೇನುತುಪ್ಪವನ್ನು ಬಿಸಿಬಿಸಿ ನೀರಿನಲ್ಲಿ ಬಾಟಲಿಸಹಿತ ಇಟ್ಟರೆ ಕರಗುತ್ತದೆ.

ಜೇನುತುಪ್ಪವನ್ನು ಫ್ರಿಜ್‌ನಲ್ಲಿ ಇಡಬಾರದು.  ೧೮ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕಿಂತಲೂ ಕಡಿಮೆ ಉಷ್ಣಾಂಶದಲ್ಲಿ (ಥಂಡಿಯಲ್ಲಿ) ಜೇನುತುಪ್ಪವು ಗಟ್ಟಿಯಾಗುತ್ತಾ ಕಲ್ಲಾಗುತ್ತದೆ.  ಹೀಗೆ ಕಲ್ಲುಗಟ್ಟುವುದರಿಂದ ಜೇನುತುಪ್ಪ ಹಾಳಾಗುತ್ತದೆ.  ಬಾಟಲಿ ಒಡೆಯಬಹುದು.  ಹರಳುಗಟ್ಟುವಿಕೆ ಹಾಗೂ ಕಲ್ಲುಗಟ್ಟುವಿಕೆ ಎರಡೂ ವಿರುದ್ಧ ರಾಸಾಯನಿಕ ಕ್ರಿಯೆಗಳು.

ಗುಣಮಟ್ಟ

ಹೆಡ್ರಾಕ್ಸಿ ಮಿಥೈಲ್ ಫರ್‌ಫುರಲ್ [ಊಒಈ] ಪ್ರಮಾಣ ಹೆಚ್ಚಿದ್ದರೆ ಅಂತಹ ಜೇನುತುಪ್ಪದ ಗುಣಮಟ್ಟ ಕಡಿಮೆ ಎಂದು ನಿರ್ಧರಿಸಲಾಗುತ್ತದೆ.

ಇಂಡಿಯನ್ ಸ್ಟ್ಯಾಂಡರ್ಡ್, ಆಹಾರ ಕಲಬೆರಕೆ ನಿಯಂತ್ರಣ ನಿಯಮ [Pಈಂ ಂಛಿಣ] ಹಾಗೂ ವಿಶ್ವದರ್ಜೆಯ ಪ್ರಮಾಣದ ಪ್ರಕಾರ ಒಂದು ಕಿಲೋಗ್ರಾಂ ಜೇನುತುಪ್ಪದಲ್ಲಿ ಹೆಡ್ರಾಕ್ಸಿ ಮಿಥೈಲ್ ಫರ್‌ಫುರಲ್ [ಊಒಈ] ಪ್ರಮಾಣ ೮೦ ಮಿಲಿಗ್ರಾಂ ಮಾತ್ರ ಇರಬೇಕು.  ಈ ವಿಷಯದಲ್ಲಿ ಅಗ್ರಿಕಲ್ಚರಲ್ ಪ್ರೊಡ್ಯೂಸ್, ಗ್ರೇಡಿಂಗ್ ಎಂಡ್ ಮೇಕಿಂಗ್ ಆಕ್ಟ್-ಆಗ್‌ಮಾರ್ಕ್‌ರವರ ಪ್ರಕಾರ ಉಷ್ಣವಲಯದ ದೇಶಗಳಲ್ಲಿ ಒಂದು ಕಿಲೋಗ್ರಾಂ ಜೇನುತುಪ್ಪದಲ್ಲಿ ೧೦೦೦ ಮಿಲಿಗ್ರಾಂಗೂ ಹೆಚ್ಚು ಇರುವ ಸಾಧ್ಯತೆಯಿದೆ ಎನ್ನುತ್ತಾರೆ.  ಅತಿ ಉಷ್ಣಾಂಶ ಮತ್ತು ಹೆಚ್ಚು ಕಾಲ ಸಂಗ್ರಹಿಸಿ ಇಟ್ಟಿದ್ದರಿಂದ ಹೀಗಾಗುವ ಸಾಧ್ಯತೆಗಳನ್ನು ನಿಖರಪಡಿಸಿದೆ.

ಅಮೃತ್ ೮೨ ಮಿಲಿಗ್ರಾಂ, ಬೈದ್ಯನಾಥ್ ೯೧ ಮಿಲಿಗ್ರಾಂ, ಬ್ರಿಜ್ ೧೪೫ ಮಿಲಿಗ್ರಾಂ, ಕೆವಿಐಸಿ ಕೊಚ್ಚಿನ್ ೨೪೦ ಮಿಲಿಗ್ರಾಂ, ಮಧುಸಾಗರ್ ೧೩೮ ಮಿಲಿಗ್ರಾಂ, ಪುಷ್ಪ ೧೪೮ ಮಿಲಿಗ್ರಾಂ, ಶ್ರೀಜೀ ೯೩ ಮಿಲಿಗ್ರಾಂ,ಹಿಮಾಲಯನ್ ೩೯೬ ಮಿಲಿಗ್ರಾಂ, ಕೆವಿಐಸಿ ಮುಂಬೈ ೩೧೬ಮಿಲಿಗ್ರಾಂ, ಮಧುರ ೩೧೬ ಮಿಲಿಗ್ರಾಂ ಊಒಈ ಹೊಂದಿದೆ.

ಡಾಬರ್ ೪೮ ಮಿಲಿಗ್ರಾಂ, ಮೆಹಸನ್ಸ್ ೪೦ ಮಿಲಿಗ್ರಾಂ ಹಾಗೂ ಹೈನೆಸ್ ೨೯ ಮಿಲಿಗ್ರಾಂ ಊಒಈ ಹೊಂದಿದ್ದು ಉತ್ತಮ ಗುಣಮಟ್ಟದ್ದಾಗಿದೆ.

ಆಮ್ಲೀಯತೆ

ಹುಳಿ ಜೇನುತುಪ್ಪವನ್ನು ಯಾರೂ ಸಹಿಸುವುದಿಲ್ಲ.   ಹೆಚ್ಚು ದಿನಗಳ ಕಾಲ ಇಟ್ಟಾಗ ಕಲಬೆರಕೆಯಾಗಿದ್ದರೆ ಹುಳಿ ಬರಬಹುದು.  ಭಾರತದಲ್ಲಿ ಆಮ್ಲೀಯ ಪ್ರಮಾಣ ಶೇಕಡಾ ೦.೨ ಮೀರಬಾರದು ಎಂದಿದೆ.  ಕಾರಣ ಉಷ್ಣತೆ ಹೆಚ್ಚಿದರೆ ಹುಳಿ ಅಂಶ ತಾನೇ ಹೆಚ್ಚುತ್ತದೆ.  ಆದರೆ ವಿಶ್ವದರ್ಜೆಯಲ್ಲಿ ಶೇಕಡಾ ೦.೫ರವರೆಗೆ ಆಮ್ಲೀಯತೆಗೆ ಮಾನ್ಯತೆಯಿದೆ.  ಜೇನುತುಪ್ಪ ಹುಳಿ ಬಂದರೆ ಅದರಲ್ಲಿ ಫಾರ್‍ಮಿಕ್ ಆಸಿಡ್ ಉತ್ಪನ್ನವಾಗಿದೆ ಎನ್ನಬಹುದು.  ಹೀಗಾಗಿ ಹುಳಿ ಬಂದ ಜೇನುತುಪ್ಪವನ್ನು ತಿಂದರೂ ಯಾವುದೇ ತೊಂದರೆಯಿಲ್ಲ.  ಭಾರತದ ಜೇನುತುಪ್ಪದಲ್ಲಿ ಆಮ್ಲೀಯ ಪ್ರಮಾಣ ನಗಣ್ಯ.

ಶಕ್ತಿ

ಜೇನುತುಪ್ಪದಲ್ಲಿ ಉತ್ಕೃಷ್ಟ ಕಾಬೋಹೈಡ್ರೇಟ್ ಇರುವ ಕಾರಣ ಅತಿ ಶಕ್ತಿದಾಯಕವೆನಿಸಿದೆ.  ೧೦೦ ಗ್ರಾಂ ಜೇನುತುಪ್ಪದಲ್ಲಿ ೩೧೫ ಕಿಲೋ ಕ್ಯಾಲೊರಿ ಶಕ್ತಿಯಿದೆ.  ಅಂದರೆ ಇಷ್ಟು ಶಕ್ತಿ ಹೊಂದಲು ನೀವು ಒಟ್ಟಿಗೆ ಐದು ಮಾವಿನಹಣ್ಣು ತಿನ್ನಬೇಕು ಅಥವಾ ಅರ್ಧ ಲೀಟರ್ ಶುದ್ಧ ಹಾಲನ್ನು ಕುಡಿಯಬೇಕು.  ಯಾವುದೇ ಸಿಹಿ ಪದಾರ್ಥಗಳು ಕೊಬ್ಬನ್ನು ಹೊಂದಿ ದೇಹದ ಕೊಲೆಸ್ಟರಾಲ್ ಹೆಚ್ಚಿಸುವ ಕಾರಣ ಸಿಹಿಯಲ್ಲಿ ಕಾರ್ಬೋಹೈಡ್ರೆಟ್ ಇದ್ದರೂ ಅಪಾಯ ತಪ್ಪಿದ್ದಲ್ಲ.  ಜೇನುತುಪ್ಪದಲ್ಲಿ ಕೊಬ್ಬಿಲ್ಲದ ಕಾರಣ ಅಪಾಯವಿಲ್ಲ.  ಜೇನುತುಪ್ಪದಿಂದ ಆಕ್ಸಿಡೇಶನ್ ಎನ್ನುವ ಕ್ರಿಯೆಯೂ ದೇಹದೊಳಗೆ ನಡೆಯುತ್ತದೆ.  ಇದು ರಕ್ತನಾಳದ ಕಲ್ಮಶ ಹೊರಹಾಕುವಲ್ಲಿ ಸಹಕಾರಿ.

ಬ್ರಾಂಡೆಡ್ ಜೇನುತುಪ್ಪ ಕೊಳ್ಳುವವರಾದರೆ ಅದು ಆಗ್‌ಮಾರ್ಕ್ ಪ್ರಮಾಣಪತ್ರ, ಆಕ್ಟ್ ಪ್ರಮಾಣ ಪತ್ರ ಹೊಂದಿದೆಯೇ ತಿಳಿದುಕೊಳ್ಳಿ.  ವಿಶೇಷ ದರ್ಜೆಯದೋ, ಎ ದರ್ಜೆಯದೋ, ಸಾಧಾರಣ ದರ್ಜೆಯದೋ ಗಮನಿಸಿ. ಜೇನುತುಪ್ಪ ತಯಾರಿಸಿದ ಅಥವಾ ಸಂಗ್ರಹಿಸಿದ ದಿನಾಂಕ, ಬಾಟಲಿಗೆ ತುಂಬಿದ ದಿನಾಂಕ ಹಾಗೂ ಎಷ್ಟು ಸಮಯದೊಳಗೆ ಉಪಯೋಗಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಗಾಳಿಯಾಡದಂತೆ ಗಟ್ಟಿಯಾಗಿ ಮುಚ್ಚಿರುವ ಜೇನುತುಪ್ಪದ ಬಾಟಲಿಯನ್ನು ಕೊಳ್ಳಿರಿ.  ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಡಬ್ಬಿ, ಕ್ಯಾನ್‌ಗಳಲ್ಲಿರುವ ಜೇನುತುಪ್ಪ ಕೊಳ್ಳಬೇಡಿ.  ಜೇನುತುಪ್ಪವನ್ನು ತಾಮ್ರ, ಅಲ್ಯೂಮಿನಿಯಂ, ಜಿಂಕ್ ಪಾತ್ರೆಗಳಲ್ಲೂ ಇಡಬಾರದು.

೧೮-೨೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜೇನಿಗೆ ಒಳ್ಳೆಯದು.  ಅತಿ ಉಷ್ಣಾಂಶ, ಅತಿ ಶೀತ, ಗಾಳಿ, ತೇವಾಂಶ, ಕತ್ತಲು ಇವೆಲ್ಲಾ ಜೇನುತುಪ್ಪದ ಶತ್ರುಗಳು.  ಒಟ್ಟಾರೆ ಪರೀಕ್ಷೆಗೊಳಗಾದ ೧೭ ಬ್ರಾಂಡಿನಲ್ಲಿ ಡಾಬರ್ ಜೇನುತುಪ್ಪ ಪ್ರಥಮ ಸ್ಥಾನ ಪಡೆದಿದೆ.  ಮೆಹಸನ್ಸ್, ಹೈನೆಸ್, ಸಂಸ್ಕರಿತ ಮಧು, [Wಃಃಏಂ] ಪಶ್ಚಿಮಬಂಗಾಳ, ಧನ್ವಂತರಿ ಜೇನುತುಪ್ಪಗಳು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿವೆ.  ಉಳಿದವು ಸ್ಥಳೀಯ ಜನಪ್ರಿಯತೆ ಪಡೆದಿವೆಯೇ ಹೊರತು ಇಂಡಿಯನ್ ಸ್ಟ್ಯಾಂಡರ್ಡ್ ಹೊಂದಿಲ್ಲ.  ಕಲಬೆರಕೆಯ ಪ್ರಮಾಣ ಸಹ ಮಿತಿ ಮೀರಿಲ್ಲ.

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಧುರ ಬ್ರಾಂಡಿನ ಜೇನುತುಪ್ಪ ಕೊನೆಯ ಸ್ಥಾನವನ್ನು ಹೊಂದಿದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ ಆಗುಂಬೆಯ ಕಾಡಿನಲ್ಲಿ ಸಿಗುವ ಜೇನುತುಪ್ಪ ರುಚಿ, ಸುವಾಸನೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ.  ಅದಕ್ಕಾಗಿ ಡಾಬರ್ ಕಂಪೆನಿಯವರು ತಮ್ಮ ಸಾಕಿದ ಜೇನುಹುಳುಗಳ ಪೆಟ್ಟಿಗೆಗಳನ್ನು ಆಗುಂಬೆಯ ಕಾಡಿನ ಪಕ್ಕ ಇಡುವ ಯೋಜನೆ ರೂಪಿಸಿದ್ದಾರೆ.

ಜೇನುಕೃಷಿ ಎಂಬ ಉಪಕಸುಬು

ಜೇನುನೊಣ ಅಥವಾ ಜೇನುಹುಳುಗಳನ್ನು ತೋಟ, ಹಿತ್ತಿಲು, ಟೆರಾಸ್ ಮುಂತಾದ ಹೊರಾಂಗಣ ಪ್ರದೇಶದಲ್ಲಿ ಸಾಕುವಿಕೆಯೇ ಜೇನುಕೃಷಿ.  ನಮ್ಮಲ್ಲಿ ಹೆಜ್ಜೇನು, ಕೋಲುಜೇನು, ತುಡುವೆ ಜೇನು, ಯುರೋಪಿಯನ್ ಜೇನು, ನಸರಿ ಜೇನು ಎಂಬ ಐದು ಜಾತಿಗಳಿವೆ.

ದೊಡ್ಡ ದೋಡ್ಡ ಜೇನುಮರಗಳಲ್ಲಿ ಅನೇಕ ದೊಡ್ಡ ಜೇನುಗೂಡುಗಳು ಕಾಣಿಸುವುದನ್ನೂ ಅಲ್ಲಲ್ಲಿ ನೋಡಿರುತ್ತೀರಿ. ಅವೇ ಹೆಜ್ಜೇನಿನ ಗೂಡುಗಳು.  ಇವುಗಳು ಆಕ್ರಮಣಕಾರಿ ಗುಣ ಹೊಂದಿವೆ.  ವಲಸೆ ಹೋಗುವುದು ಅಭ್ಯಾಸ.  ಹೀಗಾಗಿ ಸಾಕಾಣಿಕೆ ಕಷ್ಟ.

ಕೋಲುಜೇನುಗಳು ಚಿಕ್ಕದಾಗಿವೆ.  ಜೇನುತುಪ್ಪ ಸಿಗುವ ಪ್ರಮಾಣ ತುಂಬಾ ಕಡಿಮೆ.  ಅಲೆಮಾರಿ ಸ್ವಭಾವವಾದ ಕಾರಣ ಸಾಕಲು ಯೋಗ್ಯವಲ್ಲ.  ಅದೇ ರೀತಿ ನಸರಿ ಜೇನು ಸಹ ಹೀಗೆ.

ತುಡುವೆ ಜೇನು ಸಾಕುವುದು ಸುಲಭ.  ಕತ್ತಲಿನಲ್ಲಿ ವಾಸ ಮಾಡಲು ಬಯಸುವ ಇವುಗಳು ಹುತ್ತ, ಮರದ ಪೊಟರೆಗಳಲ್ಲಿರುತ್ತವೆ.  ಅನೇಕ ಸಣ್ಣ ಸಣ್ಣ ಹುಟ್ಟು ಅಥವಾ ಎರಿಗಳನ್ನು ನಿರ್ಮಿಸುತ್ತವೆ.  ರಾಣಿಯನ್ನು ಹಿಡಿದು ತಂದರೆ ಸಾಕು ಇಡೀ ಸಂಸಾರವೇ ಬರುತ್ತದೆ.  ಮರದ ಪೆಟ್ಟಿಗೆಗಳಲ್ಲಿ ಇಟ್ಟು ಸಾಕಬಹುದು.  ಯುರೋಪಿಯನ್ ಜೇನುಗಳು ತುಡುವೆ ಜೇನಿನಂತೆ ಇವೆ.  ಆದರೆ ಕೆಂಪುಬಣ್ಣ. ಭಾರತಕ್ಕೆ ಬಂದು ೫೦ ವರ್ಷಗಳಾದವು. ಈ ಜೇನನ್ನು ಮಕ್ಕಳಿಂದ ವೃದ್ಧರವರೆಗೆ ಯಾರು ಬೇಕಾದರೂ ಸಾಕಬಹುದು.  ಕಚ್ಚುವ ಪ್ರಮಾಣ ಅತೀ ಕಡಿಮೆ.

ಜೇನು ಕೃಷಿಯನ್ನು ಮಾಡಲು ಅಕ್ಷರಸ್ಥರಾಗಬೇಕಿಲ್ಲ.  ಜಮೀನು, ಮನೆ, ಆಸ್ತಿಪಾಸ್ತಿ ಹೊಂದಿರಬೇಕಿಲ್ಲ.  ನೀರು ಬೇಡ, ಕರೆಂಟ್ ಬೇಡ, ಈಗಂತೂ ಬಂಡವಾಳವೂ ಬೇಡ.  ಜೇನಿಗೆ ಬೇಕಾಗಿರುವುದು ಹೂವಿನೊಳಗಿನ ಮಕರಂದ.  ಯಥೇಚ್ಛ ಹೂಳು ಸಿಗುವಲ್ಲಿ ಸಾಕಾಣಿಕೆ ಮಾಡಿದರೆ ಸಾಕಷ್ಟು ಜೇನುತುಪ್ಪ ತಯಾರಿಸುತ್ತವೆ.  ಎರಿಯಿಂದ ತುಪ್ಪ ತೆಗೆದಂತೆ ಮತ್ತೆ ಮತ್ತೆ ತಯಾರಿಸುತ್ತಲೇ ಇರುತ್ತವೆ.  ಉದಾಹರಣೆಗೆ ಸೂರ್ಯಕಾಂತಿ ಹೊಲ.  ನುಗ್ಗೆ ತೋಟಗಳಲ್ಲಿ ಜೇನು ಸಾಕಿದರೆ ಹೂ ಬಿಡುವ ಸಮಯದಲ್ಲಿ ವಿಪರೀತ ಜೇನುತುಪ್ಪ ಸಿಗುತ್ತದೆ.  ಋತುಮಾನಕ್ಕೆ ಅನುಗುಣವಾಗಿ ಹೂ ಬಿಡುವ ಪ್ರದೇಶಗಳಲ್ಲಿ ಜೇನು ಸಾಕಾಣಿಕೆ ಮಾಡಿ ಇಳುವರಿ ಅಧಿಕ ಪ್ರಮಾಣದಲ್ಲಿ ಪಡೆಯಬಹುದು.

ಜೇನಿನಿಂದ ಕೇವಲ ಜೇನುತುಪ್ಪ ಮಾತ್ರವಲ್ಲ.  ಜೇನುಮೇಣ, ಜೇನು ಅಂಟು, ಜೇನುವಿಷ, ಜೇನುರಸ ಏನೆಲ್ಲಾ ಪಡೆಯಲು ಸಾಧ್ಯ.  ಕೃಷಿಯಲ್ಲಿ ಉತ್ಪಾದನೆ ಹೆಚ್ಚುತ್ತದೆ.  ಎಣ್ಣೆಕಾಳು, ಬೇಳೆಗಳಲ್ಲಿ ಎಣ್ಣೆಯ ಅಂಶ ಹೆಚ್ಚುತ್ತದೆ.  ಹಣ್ಣಿನ ಬೆಳೆಗಳಲ್ಲಿ ಆಕಾರ ಮತ್ತು ರುಚಿ ಹೆಚ್ಚುತ್ತದೆ.

ಜೇನಿಗೆ ಇರುವೆಗಳು, ಕಡಿಜೀರಹುಳು, ಮೇಣದ ಹುಳುಗಳು, ಕರಡಿ, ಕೋತಿಯಂತಹ ಪ್ರಾಣಿಗಳು, ವೀವರ್, ಜೇನುಬಾಕದಂತಹ ಹಕ್ಕಿಗಳು ನೈಸರ್ಗಿಕ ಶತ್ರುಗಳು, ಥೈಯ್‌ಸಾಕ್‌ಬ್ರೂಡ್ ಎಂಬ ವೈರಸ್ ಭೀಕರ ಶತ್ರುವಾಗಿದೆ.

ಜೇನುಕೃಷಿ ಕೈಗೊಳ್ಳುವ ಮೊದಲು ತರಬೇತಿ ಪಡೆದುಕೊಳ್ಳುವುದು ಒಳ್ಳೆಯದು.  ತರಬೇತಿಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ವಿಭಾಗದಲ್ಲಿ ಸದಾ ನೀಡುತ್ತಲೇ ಇರುತ್ತಾರೆ.  ಕೊಡಗಿನ ಭಾಗಮಂಡಲದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಜೇನುಕೃಷಿ ತರಬೇತಿ ನೀಡುತ್ತದೆ.  ತಾಲ್ಲೂಕು ಮಟ್ಟದಲ್ಲಿಯೂ ಈ ಇಲಾಖೆ ಆಗಾಗ ತರಬೇತಿಯನ್ನೂ ನೀಡುತ್ತದೆ.  ಉಜಿರೆ, ಧಾರವಾಡ, ಉಡುಪಿ, ಚಿತ್ರದುರ್ಗ, ಬಿಜಾಪುರ, ಮೈಸೂರು, ಅರಸಿನಕುಂಟೆ, ಚಿಕ್ಕಮಗಳೂರು, ಬ್ರಹ್ಮಾವರ, ಶಿವಮೊಗ್ಗ ಮುಂತಾದ ಕಡೆ ಇರುವ ರೂಡ್‌ಸೆಟ್ ಸಂಸ್ಥೆಗಳು ಉಚಿತ ತರಬೇತಿಯನ್ನು ನೀಡುತ್ತವೆ.

ಮಾಹಿತಿ ಕೃಪೆ; ಕನ್ಸೂಮರ್ ವಾಯ್ಸ್