‘ಉಡುಪಿ’ ನನ್ನ ಹೆಸರಿನಲ್ಲೇ ಇದೆ; ಆದರೆ ಇಂಗ್ಲಿಷ್ ಭಾಷೆಯ U ಎಂಬ ಒಂದು ಅಕ್ಷರ ಮಾತ್ರವಾಗಿ ಇದೆ. ನನ್ನ ತಂದೆಯ ಹೆಸರಿನಲ್ಲೂ ಉಡುಪಿ ಹೀಗೆ ಒಂದು ಆಂಗ್ಲ ಲಿಪಿಯಾಗಿ ಆಶ್ರಯ ಪಡೆದಿತ್ತು. ಹೀಗೆ ಆಂಗ್ಲಗೊಂಡದ್ದು ಪೂರ್ವಜರು ಹುಟ್ಟಿದ ಊರು ಮಾತ್ರವಲ್ಲ; ಅವರ ಹೆಸರಿನ ಕೊನೆಯ ‘ಆಚಾರ್ಯ’ ‘ಆಚಾರ್‌’ ಆಗಿತ್ತು. ಆಂಗ್ಲ ಪ್ರೇರಿತವಾದ ಈ ಆಧುನೀಕರಣ ಮುಂದುವರಿದು ನನ್ನ ಹೆಸರಿನಿಂದ ಈ ಆಚಾರ್ ಕೂಡ ಮಾಯವಾಯಿತು.

ಎಲ್ಲವೂ ಶುರುವಾದದ್ದು ನನ್ನ ಅಜ್ಜನಿಂದಲೇ ಎಂದು ನನ್ನ ಭಾವನೆ. ಅಂಗಿಯನ್ನು ಎಂದೂ ತೊಡದೆ, ಧೋತ್ರ ಮಾತ್ರ ಹೊದ್ದು. ಜುಟ್ಟಿನಲ್ಲಿ ತುಳಸಿ ಮುಡಿದು, ಏಕಾದಶಿ ಇಡೀ ದಿನ ಫಲಾಹಾರ ಮಾತ್ರವೆಂಬುದನ್ನು ತಮ್ಮ ಬೋಳುಹಣೆಯಿಂದ ಸೂಚಿಸುತ್ತಿದ್ದ ನನ್ನ ಅಜ್ಜಯ್ಯ ಎಷ್ಟು ವೈದಿಕರೋ, ಅದಕ್ಕೂ ಹೆಚ್ಚು ದೇಶ ಸಂಚಾರದ ವ್ಯಸನಿಯಾಗಿದ್ದರು. ತನಗೆ ಇಷ್ಟವಾದದ್ದು ದೈವಪ್ರೇರಣೆಯೇ ಇರಬೇಕೆಂಬ ಹಠದ ಅಜ್ಜಯ್ಯ ಸಾಹಸಪ್ರಿಯರೂ, ಮಂತ್ರ ತಂತ್ರಗಳಲ್ಲಿ ನಿಷ್ಠೆಯುಳ್ಳವರೂ, ಅಪದ್ಧರ್ಮದ ಕಾರಣಕ್ಕಾಗಿ ಏನನ್ನಾದರೂ ಮೀರಬಲ್ಲವರೂ, ಎಲ್ಲ ಜಾತಿಗಳಲ್ಲೂ ಆಪ್ತರನ್ನು ಪಡೆದವರೂ, ಮಡಿವಂತರ ನಡುವೆ ಕೊಂಚ ಚಂಚಲರಂತೆ ಕಾಣುವವರೂ ಆಗಿದ್ದರು.

ಇಂಥ ನನ್ನ ಪ್ರೀತಿಯ ಅಜ್ಜ ಯಾಕೆ ಉಡುಪಿಯನ್ನು ಬಿಟ್ಟು ಹೋದರೆಂಬುದೂ, ಸೌದೆ ತರಲೆಂದು ಕಾಡಿನಲ್ಲಿ ಓಡಾಡುವಾಗ, ಅವರ ಬಾಯಿಯಿಂದಲೇ ನಾನು ಕೇಳಿಸಿಕೊಂಡ ಕಥೆ. ಅಜ್ಜಯ್ಯನ ಅಣ್ಣಂದಿರಲ್ಲಿ ಒಬ್ಬರು ಒರಟಾದ ನಡೆನುಡಿದವರು, ವಿಧವೆಯಾದ ತಾಯಿಯನ್ನು ಒಮ್ಮೆ ಯಾವುದೋ ಕಾರಣಕ್ಕಾಗಿ ಅಣ್ಣ ಹಳಿದರೆಂದು ನನ್ನ ಅಜ್ಜಯ್ಯನಿಗೆ ಎಷ್ಟು ಬೇಸರವಾಯಿತೆಂದರೆ ಮನೆಯ ಮುಂದಿನ ಹುಣಿಸೆ ಮರದಿಂದ ಹುಣಿಸೆ ಹಣ್ಣನ್ನು ಕೊಯ್ದರು; ಅದನ್ನು ಒಂದು ಚೀಲದಲ್ಲಿ ತುಂಬಿದರು; ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಅದನ್ನು ತನ್ನ ಹೆಗಲಮೇಲೆ ಹೊತ್ತುಕೊಂಡು ಮನೆಬಿಟ್ಟು ನಡೆದೇ ಬಿಟ್ಟರು. (ಅವರ ದೇಶಪರ್ಯಟನದ ವ್ಯಸನಕ್ಕೆ ಈ ಘಟನೆ ಒಂದು ನೆವವಾಗಿರಬಹುದೆಂದು ಯಾವತ್ತೂ ನನಗೆ ಗುಮಾನಿ).

ಬೆಳಗಿನ ಝಾವ ಮಂಗಳೂರಿನಲ್ಲಿ ಅದನ್ನು ಮಾರಿ ಸಿಕ್ಕ ರೊಕ್ಕವನ್ನು. ಸೊಂಟದಲ್ಲಿ ಸಿಕ್ಕಿಸಿಕೊಂಡು ನಡೆದೂ ಈಗಿನ ಕೇರಳ ತಲುಪಿದರು. ಒಂದು ದೊಡ್ಡ ಮನೆಯನ್ನು ಕಂಡು ಅದರ ಬಾಗಿಲು ತಟ್ಟಿದರು.

ಅದು ರಾಜಾ ರವಿವರ್ಮನ ಮನೆಯಾಗಿತ್ತಂತೆ. ಅದರ ವರ್ಣನೆಯನ್ನು ಅಜ್ಜಯ್ಯನ ಬಾಯಿಯಿಂದಲೇ ಕೇಳಬೇಕು. ಅದೇನು ವೈಭವ, ಅದೇನು ಸತ್ಕಾರ – ರಾಜವಂಶದವನಲ್ಲವೆ? ವೈದಿಕರೆಂದರೆ ಅವನಿಗೆ ಅಪಾರ ಗೌರವ. ಅಜ್ಜಯ್ಯ ಅವನಿಗೆ ಕೆಲವು ದಿನ ದೀಪಧಾರಿಯಾಗಿ ಕೆಲಸ ಮಾಡಿ ಅವನ ವಿಶ್ವಾಸ ಗಳಿಸಿದರು. ಅನಂತರ ಕೇರಳದವರಿಗೆ ನನ್ನ ಅಜ್ಜ ಉಡುಪಿ ಕಡೆಯ ನಂಬೂದರಿಯಾದ್ರಿಂದ ಪೂಜೆಯ ಕೆಲಸ ಸಿಕ್ಕಿತು. ಆಯುರ್ವೇದದ ಚಿಕಿತ್ಸೆ ಕಲಿತದ್ದೂ ಆಯಿತು. ಶಿವಳ್ಳಿಯಲ್ಲಿ ಕುಡಿಯೊಡೆದಿದ್ದ ಉಪಾಸನೆಯ ಹುಚ್ಚು ತನ್ನ ದೇಹದ ಮರ್ಮ ಸ್ಥಾನಗಳ ಹುಡುಕಾಟವಾಗಿ, ಜಲಸ್ಥಂಬನದಲ್ಲಿ ಪ್ರವೀಣನಾಗಬೇಕೆಂಬ ಆಮಿಷವಾಗಿ, ಯೋಗಾಸನ ಪ್ರಾಣಾಯಾಮಗಳ ಸಾಧನೆಯಾಗಿ, ಊರೂರು ಸುತ್ತಿಸಿ ಅವರನ್ನು ಕೊನೆಯಲ್ಲಿ ಹೊಟ್ಟೆಪಾಡಿಗಾಗಿ ಕೊಚ್ಚಿಯಲ್ಲಿ ನೆಲೆಸುವಂತೆ ಮಾಡಿರಬೇಕು.

ಕ್ರಮೇಣ ಕೇರಳದ ವಾಡಿಕೆಯಂತೆ ಅಜ್ಜಯ್ಯನಿಗೊಂದು ನಾಯರ್ ಮಹಿಳೆಯರ ಜೊತೆ ಸಂಬಂಧವೂ ಲಭಿಸಿತು. ಕೇರಳ ಬಿಟ್ಟು ಮಲೆನಾಡಿನಲ್ಲಿ ನೆಲಸಿ ಬಹಳ ವರ್ಷಗಳಾದ ನಂತರ ಅಜ್ಜಯ್ಯನ ಹಳಹಳಿಕೆಯಲ್ಲಿ ಬಹುಗುಣ ಸಂಪನ್ನೆಯಯಾದ ಈ ಜಾನಕಿ – ನನ್ನ ‘ಇನ್ನೊಬ್ಬ ಅಜ್ಜಿ’ – ಸಾಮಾನ್ಯಳಲ್ಲ; ಒಬ್ಬ ಮ್ಯಾಜಿಸ್ಟ್ರೇಟಿನ ಮಗಳು. ಬಯಸಿ ಕೂಡಿದ ಅಜ್ಜಯ್ಯನಿಂದ ಸಂತಾನ ಪ್ರಾಪ್ತಿಯಾದ ನಂತರ ಅಜ್ಜಯ್ಯನಿಗೆ ಇನ್ನೊಂದು – ‘ಬ್ರಾಹ್ಮಣ ಜಾತಿಯಲ್ಲೇ’ – ಮದುವೆ, ನನ್ನ ಜಗಳಗಂಟಿ ಅಜ್ಜಿಯ ಜೊತೆ, ಮಾಡಿಸಿದವಳೂ ಈ ಮಹರಾಯಿತಿಏ. “ಆದರೆ ಸ್ವಜಾತಿಯಲ್ಲೇ ಆದ ಆ ಮದುವೆಯಿಂದ ನನಗೆ ಯಾವ ಸುಖವೂ ಸಿಗಲಿಲ್ಲವೋ. ಪಿಂಡ ಹಾಕಲು ಒಬ್ಬ ಮಗನನ್ನು ಹುಟ್ಟಿಸಿಕೊಟ್ಟಳು, ಆದರೆ ಅವನಿಗೆ ತುಡುವನ್ನೂ ಅವಳು ಕೊಡದೇ ಹೋದಳು, ಕೊಟ್ಟವಳು ಕೇರಳದ ಜಾನಕಿಯೇ” ಎಂದು ನನ್ನ ಎಳೆ ವಯಸ್ಸನ್ನು ಲೆಕ್ಕಿಸದೆ ಅಜ್ಜಯ್ಯ ಮರದ ಕೆಳಗೆ ಕೂತು ಭೈರಾಸದಿಂದ ಬೆವರು ಒರೆಸಿಕೊಳ್ಳುತ್ತ ನೆನಸುತ್ತಿದ್ದರು.

ನನಗೆ ಇದು ಅಜ್ಜಯ್ಯ ಉಡುಪಿಯಿಂದ ಪಾರಾದ ಕಥೆಯೂ ಆಗಿತ್ತು. ಭೋಜನ ಶಾಲೆಯ ಬಿಟ್ಟಿ ಊಟ, ಮಕ್ಕಳಿಗೆ ಗಿಂಡಿ ಮಾಣಿಯ ಕೆಲಸ – ಇವೆಲ್ಲ ಅಜ್ಜಯ್ಯನಿಗೆ ತಾತ್ಸಾರ. ಆದರೂ ಕೊನೆಕೊನೆಯಲ್ಲಿ ಅವರು ಪಡೆದದ್ದು ಮಠವೊಂದರ ಆಶ್ರಯವನ್ನೇ.  ನನ್ನ ತಂದೆಯವರೂ ಏನೇನೆಲ್ಲಾ ಕಲಿತು, ಏನೇನೆಲ್ಲಾ ಆಗಿ ಕೊನೆಯಲ್ಲಿ ದುಡಿದದ್ದು ಒಂದು ಮಠದ ಏಜೆಂಟರಾಗಿ. ಅಜ್ಜಯ್ಯ ಪೂಜೆಯ ಬದಲು ಹಲವು ಉಡುಪಿ ಬ್ರಾಹ್ಮಣರಂತೆ ಹೋಟೆಲಿಡಬಹುದಿತ್ತು. ಆದರ ಅನ್ನ ವಿಕ್ರಯವೆಂದರೆ ಬ್ರಾಹ್ಮಣನಾದವನಿಗೆ ಕಳಪೆ ಕೆಲಸವೆಂದು ಅವರು ತಿಳಿದಂತಿತ್ತು. ಭವತಿ ಭಿಕ್ಷಾಂದೇಹಿ ಎನ್ನುವ ಮಂತ್ರದಲ್ಲಿ ನಂಬಿಕೆ ಕಳೆದ ದಿನ ಬ್ರಾಹ್ಮಣ ಧರ್ಮದ ಅವಸಾನವೋ ಎನ್ನುತ್ತಿದ್ದ ಅವರು, ಕೈಯಲ್ಲಿ ಖರ್ಚಿಗೆ ಕಾಸು ಬೇಕೆನ್ನಿಸಿದಾಗ ನನ್ನ ಲೌಕಿಕ ಅಪ್ಪನಿಗೆ ಮುಜುಗರವಾಗುವುದನ್ನೂ ಲೆಕ್ಕಿಸದೆ ಜೋಳಿಗೆಯೊಂದನ್ನು ಹೆಗಲಿಗೆ ತೂಗುಹಾಕಿಕೊಂಡು ಸಂಭಾವನೆಗೆಂದು ಕಾಲ್ನಡಿಗೆಯಲ್ಲಿ ಘಟ್ಟ ಹತ್ತಿ ಇಳಿದು ತಮ್ಮ ಹಿತೈಷಿಗಳಾದವರ ಮನೆಗಳನ್ನೆಲ್ಲಾ ಸುತ್ತಾಡಿ ಬರುತ್ತಿದ್ದರು.

ಕೇರಳದಲ್ಲಿ ಸಂಬಂಧ ಮಾಡಿದರೂ ಅಜ್ಜಯ್ಯ ಲೌಕಿಕರಾಗಲಯ ಬಯಸದೇ ಉಳಿದರು; ನನ್ನ ತಂದೆ ಲೌಕಿಕರಾಗಿ ಅದರಲ್ಲಿ ಯಶಸ್ಸನ್ನು ಪಡೆಯಲಾರದೇ ಹೋದರು. ನಮ್ಮ ಕುಲದೇವರಾದ ಉಡುಪಿಯ ಅಲೆವೂರಿನ ವಿಷ್ಣುವನ್ನು ವರ್ಷಕ್ಕೊಮ್ಮೆಯೂ ನೋಡಲಾರದಷ್ಟು ದೂರವಾದ ಘಟ್ಟದ ಮೇಲಿನವರಾಗಿ, ಕೋರ್ಟು ಕಚೇರಿಗಳಿಗೆ ಹತ್ತಿರವಾಗಿ, ಉಡುಪಿಯ ಮಠಗಳ ಹಂಗಿನಿಂದ ಬಿಡುಗಡೆಯಾಗಿ, ಆದರೂ ಮಧ್ವಮತದ ದಾರ್ಶನಿಕತೆಯನ್ನು ನಂಬಿದವರಾಗಿ, ಗಾಂಧಿಯ ಜೊತೆ ಮಧ್ವಾಚಾರ್ಯರನ್ನು ಹೊಂದಿಸಿಕೊಳ್ಳುತ್ತ ಅಪ್ಪ ಬದುಕಿದರು. ಅಜ್ಜನೂ ಅಪ್ಪನೂ ನಡೆದ ದಾರಿಯನ್ನು ಇನ್ನಷ್ಟು ದೂರ ಹೋಗಿ, ಮತಧರ್ಮದ ಕಟ್ಟುಪಾಡುಗಳನ್ನು ಉಲ್ಲಂಘಿಸಿ, ಈ ಉಲ್ಲಂಘನದಿಂದ ತಲ್ಲಣಿಸುತ್ತಲೇ ವಿಸ್ತಾರಗೊಂಡ ಬದುಕಿನ ಲಾಭಗಳನ್ನು ಪಡೆದು ನನ್ನ ದೈನಿಕದ ಶೈಲಿಯಲ್ಲೇ ಆಧುನಿಕನಾಗಿರುವ ನಾನು ಈ ಉಡುಪಿಯ ಬಗ್ಗೆ ಗೊಂದಲವಿಲ್ಲದೆ ಬರೆಯಲಾರೆ.

ಯಾಕೆಂದರೆ, ಉಡುಪಿಯನ್ನು ಬಿಟ್ಟು, ಪರಂಪರಾನುಗತವಾದ ಜೀವನಕ್ರಮವನ್ನು ತೊರೆದು, ನಮ್ಮ ಬದುಕು ವಿಸ್ತಾರವಾಯಿತು; ಆಧುನೀಕರಣದಿಂದ ಜಾತಿಯ ಎಲ್ಲೆಗಳನ್ನು ಮೀರುವಂತಾಯಿತು. ಇದು ಉಡುಪಿಯಿಂದ ಪಾರಾದ ಹಲವು ಮಡಿವಂತ ಕುಟುಂಬಗಳು, ಉಡುಪಿಯಲ್ಲಿ ಇದ್ದೂ ತಮ್ಮ ಶಿಷ್ಟಾಚಾರದಲ್ಲಿ ಆಧುನಿಕರಾದವರು ಕೂಡ, ಹೇಳಿಕೊಳ್ಳಬಹುದಾದ ಕಥೆಯೆಂದು ನಾನು ತಿಳಿದಿದ್ದೇನೆ.

ಈಗ ಉಡುಪಿಯಲ್ಲಿ ಇದ್ದೇ ಉಡುಪಿಯ ಮಠಗಳೂ ಆಧುನಿಕವಾಗಿವೆ; ಮಠದ ಯತಿಗಳು ಪ್ರಚಾರ ಮಾಧ್ಯಮಗಳಿಗೆ ಸಲ್ಲುವಂತೆ ವರ್ತಿಸುತ್ತಾರೆ. ಪ್ರಸ್ತುತ ರಾಜಕಾರಣಕ್ಕೆ ಸಲ್ಲುವ ಹಾಗೆ ಹರಿಜನ ಕೇರಿಗಳಿಗೆ ಹೋಗಿ ಪತ್ರಿಕೆಗಳಿಂದ ಅಸ್ತು ಎನ್ನಿಸಿಕೊಳ್ಳುತ್ತಾರೆ; ಕುಹಕಿಗಳಾದ ಎಡಪಂಥೀಯರಿಂದ ಜರಿಸಿಕೊಳ್ಳುತ್ತಾರೆ; ನಮ್ಮಂಥ ಉದಾರವಾದಿಗಳಿಂದ ಆಚೀಚೆ ನೋಡಿ ಆಡುವ ತೇಲುಮಾತಿನ ಹೊಗಳಿಕೆ ಪ್ರಾಪ್ತರಾಗುತ್ತಾರೆ. ಜನಿವಾರದ ಅಧಿಕಾರವಿಲ್ಲದವರು ಭಾವೋನ್ಮತ್ತರಾಗಿ ಅಯೋಧ್ಯೆಯಲ್ಲಿ ಮಸೀದಿ ಕೆಡವಿದ್ದನ್ನು ದೂರದಿಂದ ಕಣ್ಣಾರೆ ಕಂಡು ಸನ್ಯಾಸಿಗೆ ಸಲ್ಲದ ರೀತಿಯಲ್ಲಿ ಸಾಧು ಸ್ವಭಾವದ ಯತಿಗಳೂ ಪುಳಕಿತರಾಗುತ್ತಾರೆ. ಕೃಷ್ಣಾರ್ಚನೆಯ ಅಧಿಕಾರ ಕಳೆದುಕೊಳ್ಳಲೂ ಸಿದ್ಧರಾಗಿ, ಯುವಯತಿಗಳು ಅಮೆರಿಕಕ್ಕೆ ಹೋಗಿಬರುತ್ತಾರೆ. ದಿಟ್ಟರೊಬ್ಬರು ಸಿನಿಮಾ ಮಂದಿರಗಳನ್ನು ನಡೆಸುತ್ತಾರೆ.

ಈ ಬಗ್ಗೆ ನಾನು ಹೀಗೆ ಬರೆಯುತ್ತಿರುವಂತೆಯೇ ಅದರಲ್ಲಿ ಒಂದು ವಿಪರ್ಯಾಸವಿರುವುದನ್ನು ಗಮನಿಸದೇ ಇರಲಾರೆ.

ಹಿಂದೆ ಅವರನ್ನು ಗೊಡ್ಡು ಆಚಾರದವರೆಂದು ನಿಂದಿಸುತ್ತಿದ್ದ ನನ್ನಂಥವರೇ ಈಗ ಯಾಕೆ ಅವರ ಆಧುನಿಕತೆಯನ್ನು ಟೀಕಿಸುತ್ತೇವೆ? ಈ ಕಾಲದವರಾಗಿ ನಾವು ಉಡುಪಿಯಿಂದ ಬಯಸುವುದಾದರೂ ಏನು? ಇದಕ್ಕೆ ಉತ್ತರ ಪಡೆಯಬಹುದಾದ ಪ್ರಾಮಾಣಿಕತೆ ಬಹಳ ಕಷ್ಟದ್ದು.

*

ಉಡುಪಿಯ ಸಾಂಪ್ರದಾಯಿಕತೆಯಿಂದ ಪಾರಾದ ನಾವು, ತತ್ಫಲವಾಗಿಯೇ, ಈಗ ಹಬ್ಬುತ್ತಿರುವ ಆಧುನಿಕತೆಯಿಂದ ಚಡಪಡಿಸತೊಡಗಿದ್ದೇವೆ. ಲೌಕಿಕವಾಗಿ ಯಶಸ್ಸನ್ನು ತಂದ ಆಧುನಿಕ ಯಂತ್ರ ನಾಗರಿಕತೆ ನಮ್ಮನ್ನು ಅಸ್ವಸ್ಥರನ್ನಾಗಿಯೂ ಮಾಡಿದೆ. ನಾವು ಒಳ ಬಾಳಿನಲ್ಲಿ ಹಂಬಲಿಸುವುದಕ್ಕೆ ನಿಜ ಬಾಳಿನಲ್ಲಿ ಬೆಂಬಲಿಸುವುದಕ್ಕೂ ನಡುವೆ ಇರುವ ಅಂತರ ನಮಗೇ ತಿಳಿಯದು. ಇದಕ್ಕೊಂದು ನಿದರ್ಶನ ಕೊಡುವೆ.

ಈ ಕಾಲದ ರಾಜಕೀಯದ ಯಾವ ಗೊಡವೆಯೂ ಇಲ್ಲದವರಂತೆ ಮಧ್ವಮತದ ತಾತ್ವಿಕ ಒಳಸುಳಿಗಳಲ್ಲಿ ತಲ್ಲೀನರಾದ ಒಬ್ಬ ವೃದ್ಧ ಯತಿಯನ್ನು ನಾನೂ ಮುರಾರಿ ಬಲ್ಲಾಳರೂ ಒಮ್ಮೆ ಉಡುಪಿಯ ಮಠದ ಆವರಣದಲ್ಲಿ ನೋಡಿ ಬಹಳ ಸಂತೋಪಷಟ್ಟಿದ್ದೆವು. ಮಧ್ವತತ್ವದ ಮಹಾಪಂಡಿತರೂ, ಹಸುಗೂಸಿನ ಮುಗ್ಧ ಸ್ವಭಾವದವರೂ ಆದ ಈ ಯತಿವರ್ಯರು ಸಂಸ್ಕಾರದಂಥ ಕೃತಿಯನ್ನು ಬರೆದು ಕ್ರೈಸ್ತ ಹೆಣ್ಣನ್ನು ಮದುವೆಯಾದ ನನ್ನನ್ನು ಪಾಷಂಡಿಯೆಂದು ತಿಳಿದವರಿರಬಹುದು. ಪರ್ಯಾಯದ ಒಂದು ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸಬೇಕೆಂದು ಆಧುನಿಕವಾದ ಮಠದ ವ್ಯವಸ್ಥೆ ನಿರ್ಧರಿಸಿದ್ದಾಗ ಈ ಯತಿಗಳು ವಿರೋಧಿಸಿದ್ದರಂತೆ. ಆದರೆ ಪರಮ ಸಾಧು ಸ್ವಭಾವದ ಈ ಯತಿಗಳು ಕೊನೆಯಲ್ಲಿ ನನ್ನ ಸನ್ಮಾನವನ್ನು ಸಹಿಸಿಕೊಂಡಿದ್ದರು ಎಂದು ನನಗೆ ಗೊತ್ತಿತ್ತು. ನನ್ನನ್ನು ಸನ್ಮಾನಿಸುವುದರಲ್ಲಿ ಆಯಾ ಕಾಲಕ್ಕೆ ಹೊಂದಿಕೊಳ್ಳಬೇಕೆಂಬ ಶ್ಲಾಘನೀಯವಾದ ಮಠಗಳು ರಾಜಕೀಯವಿದ್ದಿರಬಹುದಾದರೂ ಈ ಯತಿಯ ವಿರೋಧ ಮಾತ್ರ ಮುಗ್ಧವಾದ ನಂಬಿಕೆಯಿಂದ ಹುಟ್ಟಿದ್ದು ಎಂದು ಯಾವತ್ತೂ ನಾನು ತಿಳಿದಿದ್ದೆ. ಸಂಪ್ರದಾಯದ ಇಂಥ ಪೂಜ್ಯ ಪ್ರತಿನಿಧಿಗಳನ್ನು ವಿರೋಧಿಸುವುದು ಆಧ್ಯಾತ್ಮಿಕವಾಗಿಯೇ ಅಗತ್ಯ ಎಂಬ ಒಳದನಿಯಿಂದ ಹುಟ್ಟುವ ಶ್ರದ್ಧೆ ಯಾವತ್ತೂ ನನ್ನ ಕೃತಿಗಳ ಅಂತರ್ದನಿಯಾಗಿದೆ ಎಂದು ನಾನು ನಂಬಿದ್ದೇನೆ.

ಮುಖ್ಯವಾದ ಮಾತು ಇದು; ಇಂಥ ಯತಿಗಳು ಅಪ್ರಸ್ತುತವಾಗುವಂತೆ ಯಾವ ಯಾವ ವಿಚಾರಗಳನ್ನು ಎತ್ತಿಹಿಡಿಯಬೇಕೊ, ಅವೆಲ್ಲವನ್ನೂ ಎತ್ತಿಹಿಡಿದು ಈಗ ನಾವು ನಮ್ಮ ನೈಜ ನೆಲೆಗೆ ವಿರೋಧವಾದದ್ದನ್ನು ಹಳಹಳಿಕೆಯಲ್ಲಿ ಇಷ್ಟಪಡುತ್ತಿರಬಹುದೆಂಬ ಸಂಶಯ ನನಗೆ ಇದೆ. ಅಂದರೆ ನಾವು ಉಡುಪಿಯಿಂದ ಏನನ್ನು ಬಯಸುತ್ತೇವೆ ಎಂಬುದರಲ್ಲಿ ನಮ್ಮಲ್ಲೇ ಗೊಂದಲವಿದೆ.

ಕರ್ನಾಟಕದಲ್ಲಿ ನನಗೆ ತುಂಬ ಪ್ರಿಯರಾದವರು, ಈ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಒಳತೋಟಿಯಲ್ಲಿರುವವರು, ಈಗಿನ ಉಡುಪಿಯಲ್ಲಿದ್ದಾರೆ. ‘ರಥಬೀದಿ ಗೆಳೆಯರು’ ಗುಂಪಿನಲ್ಲಿರುವ ಹಲವು ಯುವಕರು ಆಧುನಿಕತೆಯ ಆಕರ್ಷಣೆ ಮತ್ತು ಪರಂಪರೆಯ ಮೋಹದ ತಿಕ್ಕಾಟದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿರುವವರು. ಪರಂಪರೆಯ ಮೋಹ, ಕೇವಲ ಮೋಹವಾಗಿಬಿಟ್ಟಲ್ಲಿ, ಅದು ಅನಧಿಕೃತ ಲಂಪಟ ಭಾವುಕತೆಯಾಗಿಬಿಡುತ್ತದೆ. ಆಧುನಿಕ ಜೀವನಕ್ರಮದಿಂದ ನಾವು ಎಷ್ಟು ಲಾಭ ಪಡೆಯುತ್ತಿದ್ದೇವೆಯೆಂದರೆ ಪರಂಪರೆಯಲ್ಲಿ ನಾವು ತೋರುವ ಪ್ರೀತಿ ಕೇವಲ ಭಾವುಕವಾದದ್ದು; ಆಚಾರದಲ್ಲಿ ಆಕೃತಿಯನ್ನು ಬೇಡುವ ವಿಚಾರದಿಂದ ಹುಟ್ಟಿದ್ದಲ್ಲ. ನೈಮಿತ್ತಿಕ ಆಚರಣೆಯಲ್ಲಿ ಆಗೀಗ ಅನುಸರಿಸಲೇಬೇಕಾಗಿಬರುವ ನಮ್ಮ ಪರಂಪರೆಯ ಶ್ರದ್ಧೆಯನ್ನು ನಾವು ಹೊರಗೆ ತೋರಿಸಿಕೊಳ್ಳಲು ನಾಚುತ್ತೇವೆ. ನಮ್ಮ ಮನೆಯಲ್ಲೊಬ್ಬಳು ತಲೆಬೋಳಿಸಿಕೊಂಡ ವಿಧವೆಯಿದ್ದರೆ ನಾವು ನಮ್ಮ ಗೆಳೆಯರನ್ನು ಮನೆಗೆ ಕರೆಯದೇ ಇರಬಹುದು. ಸದಾ ಇಂಗ್ಲಿಷ್ ಮಾತಾಡುತ್ತಿದ್ದ ಆಂಗ್ಲವಾಗಿಬಿಟ್ಟಿದ್ದ ನನ್ನ ಗೆಳೆಯನೊಬ್ಬ ತನ್ನ ಪ್ರೀತಿಯ ತಾಯಿಯನ್ನು ಎಲ್ಲರಿಂದಲೂ ಹೀಗೆ ಬಚ್ಚಿಟ್ಟಿದ್ದ. ತಾಯಿಯನ್ನೆ ಬಚ್ಚಿಡುವ ಈ ಆಧುನಿಕತೆಯ ಆಕರ್ಷಣೆಯ ಜೊತೆಜೊತೆಯಲ್ಲೇ ಪರಂಪರೆಯ ಮೋಹ ಅಡಗಿಕೊಂಡು ಇರಬೇಕಾಗಿ ಬಂದಲ್ಲಿ ನಾವು ವಿಚಿತ್ರವಾಗಿ ವರ್ತಿಸತೊಡಗುತ್ತೇವೆ; ನಮ್ಮ ಧೋರಣೆಗಳಲ್ಲೂ, ವರ್ತನೆಗಳಲ್ಲೂ politically correct  ಆಗಿರಲು ಹಂಬಲಿಸುತ್ತ, ಬೇರವರ ಕಣ್ಗಾವಲಿನಲ್ಲೇ ಬದುಕುತ್ತ ಐರೋಪ್ಯರ ಖುದ್ದು ಗುಲಾಮರೂ, ಮೂಢ ಸಂಪ್ರದಾಯದ ಗುಪ್ತಗುಲಾಮರೂ ಆಗಿ ಬಿಡುತ್ತೇವೆ. ಹೀಗಾಗದಂತೆ ಬದುಕಲು ಉಡುಪಿಯ ನನ್ನ ಗೆಳೆಯರು ಮಾಡುತ್ತಿರುವ ಪ್ರಯತ್ನ ನನಗೆ ಮುಖ್ಯವೆನ್ನಿಸುತ್ತದೆ.

ಉಡುಪಿಯಲ್ಲಿ ಈ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಘರ್ಷಣೆ ತೀವ್ರವಾದ ನೊವಿನದಾಗಿ ಕಾಣಿಸಿಕೊಳ್ಳದೆ, ಆಕರ್ಷಕವೂ ಆಗಿರುವುದಕ್ಕೆ ಕಾರಣಗಳಿವೆ.

ಮೊದಲನೆಯದಾಗಿ ತನ್ನ ಕಾಲದಲ್ಲೇ ಆಧುನಿಕವಾಗಿ ಮಡಿವಂತರಿಗೆ ವಿರೋಧಿಯಾಗಿದ್ದ ಉಡುಪಿಯ ಕೃಷ್ಣ. ಇವನು ಉಡುಪಿಯಲ್ಲಿ ಭಾರತ ಯುದ್ಧದ ಚಕ್ರಧಾರಿಯಲ್ಲ; ಕೊಳಲು ನುಡಿಸುತ್ತಿರುವ ಮೋಹಕನೂ ಅಲ್ಲ – ಮೊಸರು ಕಡೆಯುವ ಕಡಗೋಲು ಹಿಡಿದು ಗೊಲ್ಲ. ಬ್ರಾಹ್ಮಣರಿಗೆ ಬೆನ್ನು ಮಾಡಿ ಕುರುಬ ಕನಕನಿಗೆ ಮುಖ ತೋರಿದವನು. ಇಡೀ ವರ್ಷ ಪ್ರತಿದಿನಕ್ಕೊಂದು ಸೊಗಸಿನ ಅಲಂಕಾರ ಮಾಡಿಸಿಕೊಂಡು, ದಾಸರ ಕನ್ನಡ ಪದಗಳನ್ನು ಕೇಳಿಸಿಕೊಂಡು, ತಾಳ ತಟ್ಟುತ್ತ ಕುಣಿದಾಡುವ ಬ್ರಾಹ್ಮಣ ವಟುಗಳಿಂದ ಅರ್ಚಿಸಿಕೊಳ್ಳುವ ಕೃಷ್ಣ ಇವನು. ಪರಮಾನ್ನ ಮಾತ್ರ ಸಾಲದು; ಕನಕ ಕುಡಿಯುತ್ತಿದ್ದ ಅನ್ನ ಬಸಿದ ಗಂಜಿಯ ನಯವೇದ್ಯ ಬೇಕು ಕುಚೇಲನ ಈ ಗೆಳೆಯನಿಗೆ.

ಕಾಮಿನಿ ಕಾಂಚನಗಳ ಮೋಹದಿಂದ ಬಿಡುಗಡೆಯಾಗಲಾರದ ಯತಿಗಳಿಂದಲೂ ಪರ್ಯಾಯದ ಸರದಿಯಲ್ಲಿ ಇಂಥ ಕೃಷ್ಣ ಪೂಜಿಸಿಕೊಳ್ಳುತ್ತಾನೆ ಎಂಬುದರಿಂದ ಯಾರೂ shock ಆಗಬೇಕಿಲ್ಲ. ಈ ಹಿಂದೆ ಒಬ್ಬ ಯತಿ ಸಂಸಾರಿಯಾಗಿ ಅವನ ಪೂಜೆಯಿಂದ ಪಾರಾಗಿ ನೆಲೆಸಿದ್ದೂ ಆಗಿದೆ. ಏಕಕಾಲದಲ್ಲಿ ಪರಮ ಅನುರಾಗಿಯಾಗಿಯೂ, ಪರಮ ವಿರಾಗಿಯಾಗಿಯೂ ನಮ್ಮನ್ನು ಆಕರ್ಷಿಸುವ ಉಡುಪಿಯ ಕೃಷ್ಣ ನಿಯಮಾತೀತ, ಇವನ ಸನ್ನಿಧಿಯಲ್ಲಿರುವ ಯತಿಗಳಿಗೆ ಈ ಮಾಯಾ ಪ್ರಪಂಚ ನಶ್ವರ ಎಂಬ ಕಾರಣದಿಂದಾಗಿ ಯಾವ ಸಂಭ್ರಮಕ್ಕೂ ಅವಕಾಶವಿಲ್ಲದಂತೆ ಬದುಕಬೇಕಾಗಿ  ಬರುವ ಕಾರ್ಪಣ್ಯವಿಲ್ಲ. ಅಷ್ಟೊಂದು ಬೆಡಗಿನಲ್ಲಿ ನಿತ್ಯ ಪೂಜೆಗೊಳ್ಳುವ ಈ ರಾಧಾರಮಣ, ಯತಿಗಳನ್ನು ಒಣಗಿಸಲಾರ. ಹೀಗೆ ಒಣಗಬೇಕಾಗಿ ಬರುವುದು ಅದ್ವೈತ ಯತಿಗಳ ಪ್ರಾಮಾಣಿಕ ಪಾಡು. ಈ ಎಲ್ಲರಿಗೂ ಮಿಗಿಲಾಗಿ ಜೈನಯತಿಗಳ ಸಂಕಲ್ಪವೇ ಒಣಗಿಹೋಗಿಬಿಡುವುದು. ಉಡುಪಿಯಲ್ಲಿ ಮುಖ್ಯವಾಗಿದ್ದ ಜೈನಧರ್ಮ ಎಂದೋ ಅಮುಖ್ಯವಾಗುತ್ತ ಹೋಗಿ, ಸ್ಯಾದ್ವಾದದ ಅನಿಶ್ಚಿತತೆಯಿಂದಲೂ, ಸಂಕಟಗಳಿಂದಲೂ ಪಾರಾಗಿ ಈ ಜಗತ್ತು ಸತ್ಯ, ಭೇದಗಳು ನಿತ್ಯ ಎಂದು ಸಾರಿದ ಮಧ್ವಮತದ ತವರಾಯಿತು ನಮ್ಮ ಇಂದಿನ ಉಡುಪಿ.

ವಾಯುಪುತ್ರರಾದ ಆಚಾರ್ಯ ಮಧ್ವರು ದೃಢಕಾಯರು; ಸಮುದ್ರ ತೀರದಿಂದ ಗೋಪಿ ಮಣ್ಣಿನ ಮುದ್ದೆಯಲ್ಲಿ ಅಡಗಿದ್ದ ಕೃಷ್ಣನನ್ನು ಕೈಯಲ್ಲಿ ಎತ್ತಿಕೊಂಡು ದ್ವಾದಶಸ್ತೊತ್ರ ಹಾಡುತ್ತ ಆನಂದಪರವಶರಾಗಿ ಕುಣಿದಾಡಿದವರು. ಆದಿ ಶಂಕರರೋ ಕೃಷ್ಣಕಾಯರಾದ, ಯೌವ್ವನಕ್ಕೆ ಕಾಲಿಡುತ್ತಿದ್ದಂತೆಯೇ ಅದೃಶ್ಯರಾಗಿ ಬಿಟ್ಟ ತೇಜಸ್ವಿಗಳು. ಜಗತ್ತು ಸತ್ಯವೆಂದು ತಿಳಿದ ಮಾರ್ಧವರಿಗೆ ಆಧುನಿಕತೆಯ ಚಲನಶೀಲತೆ ದೈವಸಂಕಲ್ಪದಿಂದ ನಿಯಮಿತವೋ, ಅಥವಾ ತಮೋಗುಣಿಗಳ ಆಧಿಪತ್ಯದ ಒಂದು ಘಟ್ಟ ಮಾತ್ರವೋ ಎಂಬ ಸಮಸ್ಯೆ; ಈ ಜಗತ್ತಿನ ವಿದ್ಯಮಾನಗಳು ಮಾಯಾಜನ್ಯವೆಂದು ತಿಳಿದ ಅದ್ವೈತಿಗಳಿಗೆ ಆಧುನಿಕತೆಯ ಪ್ರಲೋಭನೆ ಆತ್ಮಜ್ಞಾನದಿಂದ ನಿವಾರಣೀಯವಾದದ್ದು.

ಇದು ನನ್ನ ಅಧಿಕಪ್ರಸಂಗವೆಂದು ಉಡುಪಿಯ ವಿದ್ವಾಂಸರು ತಿಳಿದಾರು. ಆದರೆ ನಮ್ಮ ಕಾಲದ ಆತಂಕಗಳಿಗೆ ಪ್ರಾಚೀನ ತತ್ವಗಳನ್ನು ಒರೆ ಹಚ್ಚಿ ಅವುಗಳನ್ನು ಪ್ರಸ್ತುತಗೊಳಿಸಿಕೊಳ್ಳಬೇಕೆಂಬ ಆಸೆಯೇ ಹಿರಿಯರಲ್ಲಿ ಕಾಣದೇ ಹೋಗಿರುವುದು ವಿಷಾದನೀಯ. ಅಸ್ವಸ್ಥನಾದ ನನ್ನ ಮನೋಧರ್ಮದ ಆಧುನಿಕನಿಗೆ ಹಿಂದಿನದು ಆಳವಾಗಿ ತಿಳಿಯದು; ತಿಳಿದವರು ಕೇವಲ ಪಂಡಿತರಾಗಿ ಸ್ವಸ್ಥರು. ಪ್ರಾಚೀನ ಕಾಲ ಅಪ್ರಸ್ತುತವಾಗಲು ಇದೂ ಒಂದು ಮುಖ್ಯ ಕಾರಣ. ನನ್ನ ಆ ಮಾತುಗಳಿಂದ ಬನ್ನಂಜೆಯವರಂತಹವರು ಸಿಟ್ಟಿಗೆದ್ದು ತಮ್ಮ ವಿಚಾರಗಳನ್ನು ಮುಂದಿಟ್ಟರೆ, ಅರ್ಥಹೀನವಾಗಿ ಅದು ಸೈ ಇದೂ ಸೈ ಎಂದು ಉರುಳುವ ಕಾಲಕ್ಕೆ ಹೊಂದಿಕೊಂಡು ಹೋಗುವ ನಮ್ಮ ಸಮಕಾಲೀನ ಜೀವನಕ್ಕೆ ಏನಾದರೂ ಅರ್ಥ ಬಂದೀತು.

ಆಧುನಿಕತೆಯನ್ನು ಸಹ್ಯ ಮಾಡುವವನು ಕೃಷ್ಣ ಮಾತ್ರನಲ್ಲ. ಉಡುಪಿಯ ಸುತ್ತಮುತ್ತಲಿನ ಭೂತಗಳನ್ನು ನೋಡಿ. ಆಧುನಿಕ ವಿದ್ಯು