ವಚನಕಾರರು ಮಂಡಿಸಿದ ಕಾಯಕದ ಶುದ್ಧ ನೀತಿ ಮತ್ತು ದುಡಿಮೆಯ ಘನತೆಯು ಹೇಗೆ ಸಾಮಾಜಿಕ ಬೇಲಿ, ಜಾತ್ಯಂತಸ್ತುಗಳಿಂದ ಮುಕ್ತಗೊಳಿಸುವುದನ್ನೂ ಪ್ರಧಾನದ ಸಾರ್ಧಯತೆಯು ಕರ್ಮದ ಹಿಡಿತದಿಂದ ಪಾರಾಗಿಸುವುದನ್ನೂ ಸೂಚಿಸಿದ್ದೇನೆ. ಭಕ್ತಿಗೂ ಮನುಷ್ಯನ ಸಮಾನತೆಯ ಕಲ್ಪನೆಗೂ ಇರುವ ಸಂಬಂಧವನ್ನು ವಿದ್ವಾಂಸರು ಈಗಾಗಲೇ ಒತ್ತಿ ಹೇಳಿದ್ದಾರೆ. ಆದರೂ, ಈ ಕವಿಗಳ ಪಾಲಿಗೆ ಶಿವನೆಂಬ ದೈವವೇ ಪರಮ ಸತ್ಯವಾಗಿದೆ; ಈ ಐಹಿಕ ಜೀವನದ ಅರ್ಥವನ್ನು ಅನುಭವಾತೀತವಾದ ಒಂದು ವಾಸ್ತವತೆಯ ಮೂಲಕವಾಗಿಯೇ ನಿರ್ಣಯಿಸಿಕೊಳ್ಳುತ್ತಾರೆ.

ಕನ್ನಡ ಸಾಹಿತ್ಯದಲ್ಲಿ ಲೌಕಿಕವಾದ ಮಾನವ ಕಲ್ಪನೆಯು ಮೂಡಿದ್ದು ಆಧುನಿಕಯುಗದಲ್ಲೇ. ಪ್ರಾಪಂಚಿಕವಾದ ಎರಡು ದೃಷ್ಟಿಕೋನಗಳಿಗಿರುವ ಮಹಾ ಆಂತರದ ಸಾಹಿತ್ಯದ ಪರಿಣಾಮಗಳನ್ನು ಅದು ಇವತ್ತು ಹಠಾತ್ತಾಗಿ ಸಂಭವಿಸಿರುವುದರಿಂದ ನಾವು ಸಾಕಷ್ಟು ಅರಿತುಕೊಂಡಿಲ್ಲ. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಲೌಕಿಕ ದೃಷ್ಟಿಗೆ ಸಿದ್ಧವಾದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನಬಹುದಾದ್ದರಿಂದ ಸಾಹಿತ್ಯದ ಮಾದರಿಗಾಗಿ ಪಾಶ್ಚಿಮಾತ್ಯ ಸಾಹಿತ್ಯವನ್ನು ಆಧುನಿಕ ಲೇಖಕನು ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಆಧುನಿಕ ಲೇಖಕರ ಪರಾವಲಂಬನವನ್ನು ಟೀಕಿಸುವವರು ಈ ಸಂದಿಗ್ಧವನ್ನು ಸರಿಯಾಗಿ ಗ್ರಹಿಸುವುದಿಲ್ಲ. ಪದಾರ್ಥವಾದದ ಸ್ವಕೀಯ ಪರಂಪರೆಯು ಗತಿಸಿರುವುದರಿಂದಲೋ, ಮರೆಯಾಗಿರುವುದರಿಂದಲೋ, ಆಧುನಿಕ ಲೇಖಕನು, ಎಷ್ಟೇ ಅನಿಷ್ಟವಾದರೂ, ಪಾಶ್ಚಾತ್ಯ ಲೇಖಕರ ಮಾರ್ಗಕ್ಕೆ ಮೊರೆ ಹೋಗಬೇಕಾಗಿದೆ. ಯಾಕೆಂದರೆ ಈ ಮಾರ್ಗದಲ್ಲಿ, ಐಹಿಕ ಜೀವನದ ನೈತಿಕ ಸ್ತರಗಳನ್ನು ಅಂತಿಮ ಸತ್ಯದ ಸಂಬಂಧಕ್ಕೆ ಹೊರತುಪಡಿಸುತ್ತಾ ಗುರುತಿಸಿ, ಶೋಧಿಸಬಹುದು. ಇದೇ ಪ್ರಾಯೋಗಿಕ ಲೌಕಿಕತೆಯ ಸಾರವಾಗಿದೆ.

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಲೌಕಿಕವೆಂದು ವರ್ಣಿತವಾಗಿರುವುದು ಒಂದು ವಿಶಿಷ್ಟವಾದ ರೀತಿಯಲ್ಲಿ ಮಾತ್ರ; ಆದ್ದರಿಂದಲೇ ಪ್ರಾಪಂಚಿಕ ದೃಷ್ಟಿಕೋನದಲ್ಲಿ ಒಮ್ಮೆಲೇ ಸಂಭವಿಸಿದ ಬದಲಾವಣೆಯನ್ನು, ಆಧ್ಯಾತ್ಮಕೋ ಲೌಕಿಕಕ್ಕೋ ನಡುವಣ ಕಂದಕವೆಂದು ಕರೆದಿದ್ದೇನೆ. ಕನ್ನಡದ ವಿಕ್ರಮಾರ್ಜುನ ವಿಜಯ, ತಮಿಳಿನ ಶಿಲಪ್ಪದಿಗಾರಂ ಮುಂತಾದ ಕೆಲವು ಕೃತಿಗಳನ್ನು ನಿದರ್ಶನವಾಗಿ ತೆಗೆದುಕೊಂಡರೆ ಅವು ಮತ ಪ್ರತಿಪಾದನೆಯನ್ನೇನೂ ಮಾಡದಿದ್ದರೂ, ಅವುಗಳಲ್ಲಿಯ ಲೌಕಿಕ ಧೋರಣೆಯು ಭಾರತದ ಎಲ್ಲ ಮತಗಳ ಮೌಲಿಕ ಲಕ್ಷಣಗಳಾಗಿ ನಮ್ಮ ಸಂಸ್ಕೃತಿಗೆ ಸೇರಿ ಬಂದ ಕರ್ಮ ಮತ್ತು ಪುನರ್ಜನ್ಮಗಳಿಂದ ಲೇಪಿತವಾಗಿದೆ.

ಅಂದರೆ ಯುರೋಪಿನ ಹಾಗೆ ಹಂತ ಹಂತವಾಗಿ ಬರದೆ, ಆಧುನಿಕ ಯುಗಕ್ಕೆ ನಾವು ಒಮ್ಮಲೇ ಯಾವ ಸಿದ್ಧತೆಯೂ ಇಲ್ಲದೆ ಬಂದ ಹಾಗಾಯಿತು. ಇವತ್ತಿನ ಭಾರತೀಯ ಜೀವನದ ಸ್ಥಿತಿಯ ಪ್ರಭಾವಲಯವು ಭಿನ್ನವಾಗಿ, ಬದಲಾದ ದೃಷ್ಟಿಯನ್ನುಂಟುಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೂ ಇಲ್ಲಿಯ ಸಾಮಾನ್ಯ ಜನತೆಯು, ಅಪ್ರಜ್ಞಾಪೂರ್ವಕವಾಗಿ, ಪುರಾತನವಾದ ಕರ್ಮ ಹಾಗೂ ಪುನರ್ಜನ್ಮಗಳನ್ನು ನಂಬಿಕೊಂಡೇ ಇದೆ. ಇತ್ತ ಪಾಶ್ಚಾತ್ಯ ವಿಚಾರಧಾರೆಯನ್ನು ಹೀರಿಕೊಂಡು ಸಾಮಾನ್ಯ ಜನತೆಯಿಂದ ಪರಭಾರೆಯಾದ ಇಲ್ಲಿಯ ಶಿಕ್ಷಿತ ವರ್ಗದ ಸ್ಥಿತಿಯು ಇದಕ್ಕೆ ವಿರುದ್ಧವಾಗಿ ದ್ವಂದ್ವಮಯವಾಗಿದೆ. ಶಿಕ್ಷಣದ ಮೂಲಕ ಗ್ರಹಿಸಿದ ನವ್ಯ ವಿಚಾರಗಳನ್ನೆಲ್ಲ ದುಡಿಸಿಕೊಳ್ಳುವಷ್ಟು ಅವರ ಯಥಾರ್ಥ ಜೀವನ ಸ್ಥಿತಿಯು ಬದಲಾಗಿಲ್ಲ. ಆ ಕಾರಣದಿಂದಲೇ ಈ ವಿಚಾರಗಳು ಕೃತ್ರಿಮ ಎಂದೇನೂ ಇದರರ್ಥವಲ್ಲ. ಬುದ್ಧಿಜೀವಿಗಳ ಸಾಮಾಜಿಕ-ಆರ್ಥಿಕ ಜೀವನದ ಯಥಾರ್ಥ ಸ್ಥಿತಿಗೂ ಒಂದು ವಿಭಿನ್ನ ಸಾಮಾಜಿಕ ಪರಿಸರದಿಂದ ಸ್ವೀಕೃತವಾದ ನೂತನ ವಿಚಾರಧಾರೆಗೂ ಸಾಂಗತ್ಯವಿಲ್ಲ. ಹಾಗೆಯೇ ಸಾಮಾನ್ಯ ಜನತೆಯ ಬದುಕು ಬದಲಾಗುತ್ತಿರುವ ವಾಸ್ತವತೆಗೂ ಒಂದು ಹಳೆಯ ಕಾಲದ ಹುತಪ್ರಜ್ಞೆ–ಕುರುಡುನಂಬಿಕೆಗಳಿಗೆ ಅವರು ಅರಿವಿಲ್ಲದೆಯೇ ಅಂತಿಕೊಂಡಿರುವುದಕ್ಕೂ ಹೊಂದಾಣಿಕೆಯಿಲ್ಲ. ಈ ಎರಡು ವರ್ಗಗಳಲ್ಲೂ ಪರಸ್ಪರವಾಗಿ ಕ್ರಿಯಾಶೀಲ ಸಂಪರ್ಕವಿಲ್ಲದ್ದರಿಂದ, ಈ ವಿರೋಧಾಭಾಸಗಳು ಒಂದು ಇನ್ನೊಂದಕ್ಕೆ ಕಾರಣವೆಂಬಷ್ಟು ಸಂಬದ್ಧವಾಗಿವೆ. ಹೀಗೆ, ಗೃಹೀತವಾಗಿದ್ದಕ್ಕೂ, ಯಥಾರ್ಥತೆಗೂ ನಡುವೆ ಇರುವ ಸಾಂಗತ್ಯವನ್ನು ‘ಉತ್ಕಟವಾಗಿ’ ಹುಡುಕುವುದರ ಫಲವಾಗಿಯೇ ಈ ಕಾಲದ ಮಾನವನ ನವ ಕಲ್ಪನೆಯು ಹುಟ್ಟಿಕೊಳ್ಳಬೇಕು. ಇದಕ್ಕೆ ಸಾಚಾತನದ ಹುಟುಕಾಟವೆಂದರೂ ಸಲ್ಲುತ್ತದೆ. ಬೇರೆ ಬೇರೆ ಶತಮಾನಗಳ ವಿಚಾರ ಮತ್ತು ಜೀವನ ಸ್ಥಿತಿಯು ಒಟ್ಟೊಟ್ಟಿಗಿರುವ ಇಂದಿನ ಭಾರತದ ಮಾನವನು ಹೇಗಿರಬೇಕು? ನಮ್ಮ ಅಗತ್ಯಗಳನ್ನು ಪೂರೈಸಬಲ್ಲ ಈ ಮಾನವ ಕಲ್ಪನೆಯ ಅನ್ವೇಷಣೆಯು ಹೊಸ ರೂಪ ತಂತ್ರಗಳ ಹುಡುಕಾಟವೂ ಹೌದು. ಈ ಹೊಸ ರೂಪತಂತ್ರಗಳ ಪ್ರಜ್ಞಾವಂತ ಕರ್ತವ್ಯವನ್ನು ಕುರಿತೇ ಈ ಲೇಖನದಲ್ಲಿ ಒತ್ತಿ ಹೇಳಿದ್ದೇನೆ.

ಈ ತೆರನ ಸಮಸ್ಯೆಗಳು ನಮ್ಮ ಲೇಖಕರ ಗಮನವನ್ನು ಸೆಳೆಯುವಂತಹವು. ನೇರವಾದ ಕಥನ ಮತ್ತು ವಸ್ತು ನಮ್ಮ ಕಾದಂಬರಿಗಳಲ್ಲಿ, ಹೊರಗಿನ ಮತ್ತು ಒಳಗಿನ ನೈಜತೆಗಳ ನಡುವೆ ಒಂದು ವಿಧವಾದ ಸಂಬಂಧವನ್ನೇರ್ಪಡಿಸುತ್ತದೆ. ಬಹುತೇಕ ಇದು ಕಾರ್ಯಕಾರಣ ಸಂಬಂಧವೇ. ಎಚ್ಚರವಿಲ್ಲದೆ ಒಪ್ಪಿಕೊಂಡು ಬಂದ ಕರ್ಮಸಿದ್ಧಾಂತದ ನೆರಳಿನಲ್ಲಿರುವ ನಮ್ಮ ಸಂಸ್ಕೃತಿಯಲ್ಲಿ, ಈ ಥರದ ಕಥನ-ವಸ್ತುಗಳು, ನಮ್ಮ ಲೇಖಕರನ್ನು, ಅವರ ಇಷ್ಟಕ್ಕೆ ವಿರೋಧವಗಿ, ಬಳುವಳಿಯಾದ ಅಭ್ಯಾಸಬಲದ ಈ ಆಲೋಚನೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿವೆಯೆ? ಹಾಗಾದರೆ, ಅಭ್ಯಾಸಬಲದ ಪ್ರತಿಕ್ರಿಯೆಗಳಿಂದ ಲೇಖನವನ್ನು ಬಿಡುಗಡೆಮಾಡಿ ಸ್ವಂತ ಪ್ರಜ್ಞೆಯತ್ತ ಒಯ್ಯಬಲ್ಲ ಹೊಸ ತಂತ್ರ ವಿಶೇಷ ಯಾವುದು?

ಓದುಗನನ್ನು ಮಂತ್ರಮುಗ್ಧನನ್ನಾಗಿ ಹಿಡಿಯುವ ಸಾಧನವಾದ ಕಥನವು, ನಮ್ಮ ಬರವಣಿಗೆಯಲ್ಲಿ ಅನುಮಾನವನ್ನೆಬ್ಬಿಸಿದೆ. ‘ಬದುಕು ತಿಳುವಳಿಕೆಗೆ ಸಿಕ್ಕುತ್ತದೆ ಮತ್ತು ಇದನ್ನು ನಿರ್ವಹಿಸಬಹುದು ಎಂಬ ಅಂದಾಜೇ ಕಥನದ ಖೋಟಾತನದ ಮುಖ್ಯ ಅಂಶವಾಗಿದೆ. ಕಥನಕ್ಕೆ ವಿವರಿಸಿಸುವ ಸ್ವಭಾವವಿದೆ, ಬದುಕು ಹೇಗಿದೆ ಮತ್ತು ಯಾಕೆ ಹಾಗಿದೆ ಎಂಬುದನ್ನು ಕೂಡ ಅನಿವಾರ್ಯವಾಗಿ ಹೇಳುತ್ತದೆ’- ಎಂದು ಟ್ರಿಲಿಂಗ್ ಹೇಳುತ್ತಾನೆ. ನೇರವಾದ ಕಥನವನ್ನು ಬಿಟ್ಟು ಬರೆದಾದ ಮೂಡುವ ಮಾನವ ಕಲ್ಪನೆಯನ್ನು, ಈ ಕಾರಣಕ್ಕೇನೆ, ಗುಮಾನಿಯಿಂದ ನೋಡುತ್ತಾರೆ-ಕರ್ಮ ಸಿದ್ಧಾಂತಿಗಳಾದ ಸಂಪ್ರದಾಯವಾದಿಗಳು ಮತ್ತು ಮಾರ್ಕ್ಸಿಸ್ಟರು! ಉದ್ದೇಶ ಭಿನ್ನ ಅಷ್ಟೆ. ಇಷ್ಟಿದ್ದೂ ಇತಿಹಾಸದ ಕ್ರಮದ ಅರಿವಿನ ಮೂಲಕವೇ ನಮ್ಮ ಅಪಾಯಸ್ಥಿತಿಯನ್ನು ಮನಗಾಣಬೇಕಾದ ನಮ್ಮ ಭಾರತೀಯ ಲೇಖಕರು, ಕಥನಕ್ರಮವನ್ನು ಪೂರಾ ಬಿಟ್ಟುಬಿಡಲು ಸಾಧ್ಯವೇ? ಸಮಕಾಲೀನ ವಾಸ್ತವತೆಗಳ ಸಂದರ್ಭದಲ್ಲಿ ಮಾನವನನ್ನು ಪುನರ್ಸೂತ್ರೀಕರಿಸಲು ಭಾರತೀಯ ಸಾಹಿತ್ಯವು ಮಾಡುತ್ತಿರುವ ಪ್ರಯತ್ನದಲ್ಲಿ ಇವು ಅತಿ ಮುಖ್ಯ ಪ್ರಶ್ನೆಗಳಾಗಿವೆ.

ನಮ್ಮ ಕಾಲದ ಇಬ್ಬರು ಲೇಖಕರ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿ ನನ್ನ ಪ್ರಬಂಧವನ್ನು ಮುಗಿಸುತ್ತೇನೆ, ಶಿವರಾಮಕಾರಂತ ಮತ್ತು ಗೋಪಾಲಕೃಷ್ಣ ಅಡಿಗ ಆ ಲೇಖಕರು. ಈ ಇಬ್ಬರು ಲೇಖಕರನ್ನುಆರಿಸಿಕೊಳ್ಳಲು ಕಾರಣ, ಅವರಿಬ್ಬರೂ ಮನುಷ್ಯನ ಬಗ್ಗೆ ನಮ್ಮ ಕಲ್ಪನೆಯನ್ನು ಬದಲಿಸಲು ಗಂಭೀರವಾಗಿ ಪ್ರಯತ್ನಿಸಿದ್ದಾರೆ. ಆದುದರಿಂದ ನನ್ನ ಪ್ರಬಂಧದ ವಿಷಯಕ್ಕೆ ಅವರು ಚೆನ್ನಾಗಿ ಹೊಂದಿರುತ್ತಾರೆ.

ಒಂದು ಸಾವಿರ ವರ್ಷದ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಪ್ರಾಯಶಃ ಕಾರಂತ ಮೊದಲ ಗಮನೀಯ ಜಾತ್ಯತೀತ ಲೇಖಕರು. ಕಾದಂಬರಿಗಳಲ್ಲಿ ಅವರ ಶೋಧದ ರೀತಿ ಪರೀಕ್ಷಾರ್ಥಕ ಮತ್ತು ಸ್ವಾನಭವಬದ್ಧ. ಶೋಧದ ಉದ್ದೇಶ ಪರಮಸತ್ಯದ ಉಲ್ಲೇಖದ ಗೊಡವೆಯಿಲ್ಲದೆಯೇ ಮನುಷ್ಯತ್ವದ ಕಲ್ಪನೆಯನ್ನು ಕಾಣುವುದು. ಕಾರಂತರು ಮುಕ್ತ ಸಂವೇದಿಯಾಗಿದ್ದು ಬದುಕಿನ ಬಗ್ಗೆ ಯಾವುದೇ ಬದ್ಧ ಕಲ್ಪನೆಗಳಿಗೆ ಸಿಕ್ಕಿಕೊಂಡವರಲ್ಲ ಮತ್ತು ತಮ್ಮ ನಿರೀಕ್ಷಣೆಗಳನ್ನು, ಮಾನವನ ಸಾಮಾಜಿಕ ವರ್ತನೆಗಳನ್ನು, ಆಳವಾದ ಯಾವತ್ತೂ ನಿಲ್ಲುವ ಅರ್ಥಗಳಿಗಾಗಿ ಬಳಸಿಕೊಳ್ಳಬಲ್ಲ ಸಾಮರ್ಥ್ಯ ಉಳ್ಳವರು. ಅವರು ಮಾನವ-ಮಾನವ ಸಂಬಂಧಗಳಲ್ಲಿ ಮಾನವ-ಸಮಾಜದ ಆಸಕ್ತಿ ಉಳ್ಳ ನೈತಿಕವಾದಿ. ಪಾತ್ರಗಳ ವಾಸ್ತವ ಬದುಕಿನ ಆಧಾರದಲ್ಲಿ ತಿಕ್ಕಿ ಶೋಧಿಸುತ್ತಾರೆ ಮತ್ತು ಅವರು ತಮ್ಮ ಸುತ್ತಲ ಸಮಾಜಕ್ಕೆ ಏನು ನೀಡಬಲ್ಲರು ಎಂಬುದರ ಆಧಾರದ ಮೇಲೆ ಪರೀಕ್ಷಿಸುತ್ತಾರೆ. ‘ಅಳಿದ ಮೇಲೆ’ ಎಂಬ ಅವರ ಕಾದಂಬರಿ ನನ್ನ ಗಮನದಲ್ಲಿದೆ. ಕಾರಣ ಈ ಕಾದಂಬರಿಯಲ್ಲಿ ಕಾರಂತರ ಎಲ್ಲ ಮುಖ್ಯ ಪೂರ್ವಗ್ರಹಿಕೆಗಳೂ ಕೆಲಸ ಮಾಡಿವೆ. ಕಾದಂಬರಿಯ ಕೇಂದ್ರ ಪಾತ್ರವಾದ ಯಶವಂತ ಒಬ್ಬ ನಿರೀಶ್ವರವಾದಿ. ತನ್ನ ಹೆಂಡತಿ ಮಕ್ಕಳನ್ನು ದೂರಮಾಡಿದ ಮೇಲೆ ಮುಂಬಯಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾನೆ. ಮದುವೆಯಾಗಿ ಅವನು ಸುಖಪಡಲಿಲ್ಲ. ಆದರೆ ಅನೇಕ ಹೆಣ್ಣುಗಳು ಅವನ ಸಂಪರ್ಕಕ್ಕೆ ಬರುತ್ತಾರೆ. ಅವರಲ್ಲಿ ಒಬ್ಬಳು ಅವನಿಗೆ ಮಕ್ಕಳನ್ನೂ ಕೊಡುತ್ತಾಳೆ. ಇದು ಅವನು ಮುಮಬಯಿಗೆ ಹೋಗಿ ಒಂಟಿಯಾಗಿ ಜೀವಿಸುವುದಕ್ಕೆ ಮೊದಲು. ಅವನು ಸುತ್ತಿಪ್ರಿಯನಾದ ಕಾರಣ ಜನ ಅವನನ್ನು ಸುಲಭವಾಗಿ ಮೋಸಗೊಳಿಸುವುದು ಸಾಧ್ಯವಾಯಿತು. ಆದರೆ ಬದುಕಿನ ಕಹಿ ಅನುಭವ ಅವನನ್ನು ಸಿನಿಕನನ್ನಾಗಿಸುವುದಿಲ್ಲ. ಅವನ ಧಾರಾಳಿತನ ತಕ್ಕಮಟ್ಟಿಗೆ ಅವನ ದೌರ್ಬಲ್ಯದಿಂದ ಹುಟ್ಟಿದ್ದು ಕೂಡ. ಅವನು ಯಾವ ಅರ್ಥದಲ್ಲೂ ಅಸಾಮಾನ್ಯನಲ್ಲ. ಅವನು ವರ್ಣಚಿತ್ರಗಳನ್ನು ಮಾಡಬಲ್ಲ-ಆದರೆ ಸುಮಾರಾಗಿ – ಎಂಬುದೂ ನಮಗೆ ತಿಳಿದುಬರುತ್ತದೆ. ಕಾದಂಬರಿಯ ನಿರೂಪಕನೂ ನಿರೀಶ್ಚರವಾದಿಯೇ; ಮತ್ತು ಯಶವಂತನ ಗೆಳೆಯ. ಯಶವಂತನ ಸಾವಿನನಂತರ ಕಾದಂಬರಿಯ ಕ್ರಿಯೆ ಪ್ರಾರಂಭವಾಗುತ್ತದೆ. ಯಶವಂತ ಅಳಿದ ಮೇಲೆ ಉಳಿದಿದ್ದೇನೆ? ಅವನು ಸಮಾಜಕ್ಕೆ ಕೊಟ್ಟಿದ್ದೆಷ್ಟು? ಮತ್ತು ಅವನು ಸಮಾಜದಿಂದ ಪಡೆದಿದ್ದೆಷ್ಟು? ಈ ಪ್ರಶ್ನೆಗಳು ಲೇಖಕರ ಆಸಕ್ತಿಯನ್ನು ಕೆರಳಿಸುತ್ತವೆ. ಅವರು ಯಶವಂತನ ಬದುಕಿನ ಪ್ರಭಾವವನ್ನು ಯಶವಂತ ಬೇರೆಯವರ ಮೇಲೆ ಉಳಿಸಿದ ಗುರುತುಗಳ ಸಹಾಯದಿಂದ ಶೋಧಿಸಲು ತೊಡಗುತ್ತಾರೆ. ಅಂಥವರು ಯಶವಂತನ ಗೆಳೆಯರಾಗಿರುವಂತೆ ವೈರಿಗಳೂ ಆಗಿರಬಹುದು. ಅಷ್ಟೇ ಅಲ್ಲದೆ ಯಶವಂತ ತನ್ನ ಹಿಂದೆ ಬಿಟ್ಟುಹೋಗಿರುವ ದಿನಚರಿಯ ಹಾಳೆಗಳು ಮತ್ತು ವರ್ಣಚಿತ್ರಗಳನ್ನು ಲೇಖಕರು ಶೋಧನೆಗೆ ಬಳಸಿಕೊಳ್ಳುತ್ತಾರೆ.

ಕಾರಂತರ ಕಾದಂಬರಿಗಳಲ್ಲಿ ತಾಂತ್ರಿಕವಾಗಿ ಇದು ತುಂಬ ಕುತೂಹಲ ಕೆರಳಿಸುವ ಕಾದಂಬರಿ. ಲೇಖಕ ಅನುಭವವನ್ನು ಅದರ ಒತ್ತಡದೊಂದಿಗೆ ಇಡುವಾಗ ಆಯ್ಕೆ ಅರ್ಥಪೂರ್ಣವಿವರದ ಕಡೆಗೆ ಇರುವುದು ಇದಕ್ಕೆ ಕಾರಣ. ಆದ್ದರಿಂದ ಈ ಕಾದಂಬರಿ ಸಂಕೀರ್ಣವಾದ ಒಂದು ಅನುಭವದ ಸಂವೇದನೆಯನ್ನು ನಮಗೆ ಕೊಡುತ್ತದೆ. ಕ್ರಮಾಂತರವಾದ ವಸ್ತುಗಳ ಜೋಡಣೆಯಿಂದ ಪ್ರಾಯಶಃ ಇದು ಸಾಧ್ಯವಾಗುತ್ತಿರಲಿಲ್ಲ (ಘಟನೆಗಳನ್ನು ಮತ್ತು ವಿವರಗಳನ್ನು ವಾಸ್ತವತೆಯ ದೃಷ್ಟಿಯಿಂದ ಒಂದೇ ಸಮನೆ ಅಡಕುವುದರಿಂದ ಇವರ ಕೆಲವು ಕಾದಂಬರಿಗಳ ಒಟ್ಟು ಬಂಧವೇ ಕೆಟ್ಟು ಹೋಗಿರುವುದುಂಟು) ಈ ಕಾದಂಬರಿಯ ಹೆಚ್ಚಳ ಈ ಜೋಡಣೆಯ ಕಲ್ಪನೆಯಲ್ಲಿ, ಜೋಡಣೆಯ ಕ್ರಮದಲ್ಲಿ ಇಲ್ಲದಿರುವುದರಲ್ಲಿ ಇದೆ. ಕಾದಂಬರಿಯ ನಿರೂಪಣೆಯ ಧಾಟಿ ಕೂಡ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಪೂರ್ಣವಾಗಿದೆ. ಇದರ ಎಷ್ಟೋ ಭಾಗಗಳು ಭಾವಗೀತೆಯ ತೀವ್ರತೆಯಲ್ಲಿ ವ್ಯಂಗ್ಯದ ಧಾಟಿಯನ್ನು ಒಳಗೊಳ್ಳಬಲ್ಲವು. ಆಡುಮಾತಿನ ಧಾಟಿಯಲ್ಲಿ, ಹರಟೆಯ ಲಾಘವದಲ್ಲಿ ಕೂಡ, ಮನಸ್ಸನ್ನು ಸಡಿಲಬಿಟ್ಟ ನಿರೂಪಕನ ಧಾಟಿಯಾಗಿ ಮೂಡಬಲ್ಲವು. ಇದರಿಂದ ಕತೆ ಹೇಳುವ ಧಾಟಿಯಲ್ಲಿ ಅಧೀಕೃತತೆ ಬಂದಿದೆ. ಉದ್ದೇಶಪೂರ್ವಕವಾಗಿ ಓದುಗನ ಕುತೂಹಲ ಕೆರಳಿಸುವ ಅಥವಾ ಒತ್ತಾಯಪೂರ್ವಕವಾಗಿ ಓದುಗನನ್ನು ನಿಯೋಜಿತ ಘಟನೆಗಳಲ್ಲಿ ಎಳೆದುಕೊಂಡು ಹೋಗಿ ಆತನ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾಡುವುದಿಲ್ಲ. ಇದು ಕನ್ನಡಿಗಳ ಪ್ರತಿಫಲನಗಳ ಕಾದಂಬರಿ. ಕಾರಣ, ಇದರ ಉದ್ದೇಶ ಒಂದು ವ್ಯಕ್ತಿಚಿತ್ರವನ್ನು ಉಳಿದವರ ನೆನಪಿನ ಆಧಾರದ ಮೇಲೆ ಕಟ್ಟಿಕೊಡುವುದು. ಈ ಪ್ರಕ್ರಿಯೆಯಲ್ಲಿ ಯಶವಂತ ಮಾತ್ರವಲ್ಲ, ಅವನ ವ್ಯಕ್ತಿತ್ವವನ್ನು ಪ್ರತಿಫಲಿಸುವ ಉಳಿದ ಪಾತ್ರಗಳು ಕೂಡ ಸೃಷ್ಟಿಯಾಗುತ್ತಾ ಹೋಗಿವೆ. ‘ಕಂಡದ್ದು ಮಾತ್ರ ವಾಸ್ತವ’ ‘ಆಸಕ್ತಿ ಮತ್ತು ನಿರಾಸಕ್ತಿ’ – ಇಂಥಾ ವಸ್ತುಗಳು ಕಾದಂಬರಿಕಾರನ ಆಸಕ್ತಿಯನ್ನು ಉದ್ದಕ್ಕೂ ಬೆಳೆಸಿಕೊಂಡಿದೆ.

ಕಾದಂಬರಿಯಲ್ಲಿ ಒಂದು ದೇವಾಲಯದ ಜೀರ್ಣೋದ್ಧಾರದ ಪ್ರಸಂಗ ಬರುತ್ತದೆ. ಯಶವಂತ ಬಿಟ್ಟುಹೋದ ಹಣದಲ್ಲಿ ವಯಸ್ಸಾದ ಅವನ ಸಾಕು ತಾಯಿಯ ತೃಪ್ತಿಗಾಗಿ ಈ ದೇವಾಲಯದ ಜೀರ್ಣೋದ್ಧಾರ ನಡೆಯುತ್ತದೆ. ವಾಸ್ತವವಾಗಿ ನಿರೂಪಕನಿಗಾಗಲೀ ಯಶವಂತನಿಗಾಗಲೀ ಇಂತಹ ಕ್ರಿಯೆಯಲ್ಲಿ ನಂಬಿಕೆಯಿಲ್ಲದಿದ್ದರೂ ಕೂಡ ದೇವಾಲಯದ ಈ ಜೀರ್ಣೋದ್ಧಾರದ ಕ್ರಿಯೆ ಎರಡು ಮನೆತನಗಳ ನಡುವೆ ಪುನರ್ಮಿಲನನ್ನು ತರುತ್ತದೆ. ಯಾವುದೋ ಹಳೆಯ ಜಗಳದಿಂದ ಒಡೆದುಹೋದ, ಯಾವುದೇ ರೀತಿಯ ಸಂಬಂಧ ಸಾಧ್ಯವಿಲ್ಲ ಎಂಬ ಹಠವುಳ್ಳ ಎರಡು ಮನೆತನಗಳು ಅವು. ಯಶವಂತನ ಸಾಕು ತಾಯಿ ಓರ್ವ ಬಾಲವಿಧವೆ. ಇನ್ನೊಂದು ಮನೆತನದ ಬಾಲವಿಧವೆಯೊಬ್ಬಳನ್ನು ಪ್ರೀತಿಸುತ್ತಾಳೆ ಮತ್ತು ಪರಸ್ಪರ ಇಷ್ಟಪಡುವ ಈ ಇಬ್ಬರು ಮುದುಕಿಯರು ಹಳೆಯ ತಲೆಮಾರಿನ ಮೂರ್ಖರು ಹೇರಿದ ಹಠವನ್ನು ಮೀರಿ ಪರಸ್ಪರ ಒಂದಾಗುವುದು ಕಾದಂಬರಿಯಲ್ಲಿ ಎದೆ ಕಲುಕುವಂತಿದೆ. ದೇವಾಲಯದ ಜೀರ್ಣೋದ್ಧಾರದೊಂದಿಗೆ ಯಶವಂತನ ಪೂರ್ವಿಕರು ವಾಸಿಸುತ್ತಿದ್ದ ಮನೆ ಕೂಡ ಈಗ ಒಂದು ಸಣ್ಣ ಬೊಂಬಿನ ಗುಡಿಸಲಾಗಿ ಮೇಲೆದ್ದಿದೆ. ಯಶವಂತನ ಸಾಕು ತಾಯಿ ಈಗ ಈ ಗುಡಿಸಲಿಗೆ ಹಿಂದಿರುಗಿದ್ದಾಳೆ. ದೇವಾಲಯದಲ್ಲಿ ದೇವರನ್ನು ಸ್ಥಾಪಿಸಿ ಮುದುಕಿ ಸಾಯುತ್ತಾಳೆ. ದೇವಾಲಯದ ಜೀರ್ಣೋದ್ಧಾರ ಮತ್ತು ದೇವರ ಪ್ರತಿಷ್ಠಾಪನೆ ನಡೆಯುವಾಗ ಅನೇಕ ಶಕ್ತಿಗಳು ಚಾಲಿತವಾಗುತ್ತವೆ. ಸಾಯುವ ಮುದುಕಿಯ ಜೀವನವನ್ನು ಅವು ಮತ್ತಷ್ಟು ಜಟಿಲಗೊಳಿಸುತ್ತವೆ. ಈ ಘಟನೆಗಳು ಅನಾಯಾಸವಾಗಿ ಸಾಂಕೇತಿಕ ಅರ್ಥಗಳನ್ನು ಪಡೆಯುವ ರೀತಿ ಕಾರಂತರ ಕಲೆಯ ಸಿದ್ಧಿಯಾಗಿದೆ. ಅವರ ಮುಕ್ತ ಸಂವೇದನೆಯ ಮಾನವಕಲ್ಪನೆಯಿಂದಾಗ ಇದು ಅವರಿಗೆ ಸಾಧ್ಯವಾಗಿದೆ. (ಮತ್ತು ಯಶವಂತನ ಹಣದಿಂದ ಯಶವಂತನ ಗೆಳೆಯನೊಬ್ಬನ ಸಂಶೋಧನೆಯ ಕೆಲಸವು ನಡೆಯುತ್ತದೆ) ಕಾದಂಬರಿಯ ಈ ಜಾತ್ಯತೀತ ಚೌಕಟ್ಟಿನಲ್ಲಿ ಬದುಕಿನ ಅನೇಕ ದೃಷ್ಟಿಗಳು-ಕೆಲವು ವೇಳೆ ಅವು ಪರಸ್ಪರ ವಿರೋಧ ಅಂಶಗಳು ಕೂಡ-ಕಾದಂಬರಿಯಲ್ಲಿ ನಿರೂಪಿಸಲ್ಪಟ್ಟು ವಸ್ತುನಿಷ್ಠವಾಗಿ ಚಿತ್ರಿತವಾಗಿವೆ.

ಅಳಿದಮೇಲೆ ಕನ್ನಡದಲ್ಲಿ ನಿಜಕ್ಕೂ ಒಂದು ಗಮನೀಯ ತಾತ್ವಿಕ ಕೃತಿ. ಕಾರಣ ಅದು ಧಾರ್ಮಿಕ ನಂಬಿಕೆಗಳ ಬಗ್ಗೆ ಶೋಧಿಸುತ್ತದೆ. ಆದರೆ ಸ್ವತಃ ತಾನು ಯಾವುದೇ ಧಾರ್ಮಿಕ ತತ್ವಕ್ಕೂ ಬದ್ಧವಾಗುವುದಿಲ್ಲ. ನನ್ನ ಅವಸರದ ಅಪರಿಪೂರ್ಣ ವಿವರಣೆಯಿಂದ ಕಾದಂಬರಿಯನ್ನು ಯಾರೂ ಬೆಲೆಕಟ್ಟುವುದಿಲ್ಲವೆಂದು ಭಾವಿಸುತ್ತೇನೆ. ಯಾಕೆಂದರೆ ನಾನು ಹೇಳುತ್ತಿರುವುದು ನನ್ನ ಪ್ರಬಂಧದ ಸೀಮಿತ ಉದ್ಧೇಶಕ್ಕೆ ಅನುಗುಣವಾಗಿದೆ.

ಇದಕ್ಕೆ ವಿರುದ್ಧವಾಗಿ ಅಡಿಗರ ಕಾವ್ಯ ತೀರ ಧಾರ್ಮಿಕವಾದದ್ದು. ಇವರ ಕಾವ್ಯ ಮನುಷ್ಯನನ್ನು ಅವನ ಅಸುರೀ ಮತ್ತು ದೈವಿಕ ಪ್ರವೃತ್ತಿಗಳ ಸಂಘರ್ಷದ ಬೆಳಕಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಭೂಮಿಗೀತೆಯ ನಾಯಕ ಭೂತಾಯಿಯ ಬಗ್ಗೆ ಮಾತಾಡುತ್ತಾನೆ; ಅವಳು ಮಲತಾಯಿ ಮಾತ್ರ ಎಂಬುದು ಹಿಂದಿನಿಂದ ಅವನಿಗೆ ತಿಳಿಯುತ್ತದೆ;

ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು.
ಪ್ರೇಮ ಧೃತರಾಷ್ಟ್ರನಪ್ಪಿಗೆ ಭಗ್ನ ಬಲಭೀಮ; ಎಲ್ಲು ಕೃಷ್ಣನ ಕಾಪು ಕಾಣಲಿಲ್ಲ.
ಇವಳೆದೆಗೆ ಬೇರಿಳಿದ ಕಾಲು ನನ್ನದು; ಬರಿದೆ ನಕ್ಷತ್ರ ಲೋಕಕ್ಕೂ ರೈಲು ಬಿಟ್ಟೆ.
ಹೆಂಗುಳಿಯ ಹಾಗೆ ನರಸತ್ತು ಹುಡುಕಿದೆ ಮನದ ಬಚ್ಚಲಲಿ ಕೊನೆಯಿರದ ಕೊನೆಯ ಬಟ್ಟೆ.

ಅಡಿಗರ ಭೂಮಿಗೀತ ಸಂಕಲನ (ಮೇಲಿನ ಉದ್ಧರಣೆ ಅದೇ ಸಂಕಲನದಿಂದ) ರಮ್ಯ ಮತ್ತು ಆದರ್ಶ ಮಾನವ ಕಲ್ಪನೆಯನ್ನು – ಆ ಕಲ್ಪನೆ ಸ್ವಾತಂತ್ರ್ಯ ಪೂರ್ವ ಲೇಖಕರಿಂದ ಅಡಿಗರು ಬಳುವಳಿ ಪಡೆದದ್ದು-ವಿಮರ್ಶಿಸುತ್ತಾ ಸ್ವೀಕರಿಸುತ್ತದೆ.

ಮಾನವನ ಅಪೂರ್ಣತೆ ಅವರ ಆಸಕ್ತಿ ಕೆರಳಿಸುತ್ತದೆ. ಜೊತೆಗೆ ಮಾನವನ ಅಪೂರ್ಣತೆಯನ್ನು ಒಪ್ಪಿಕೊಳ್ಳಬೇಕೆಂಬ ಧೋರಣೆ ಕಂಡುಬರುತ್ತದೆ. ಮಾನವನ ಬಗೆಗಿನ ಅಧೀಕೃತ ಕಲ್ಪನೆ ಅಕ್ರಮ, ಹಿಂಸೆ, ಅಸಂಬದ್ಧತೆ, ಅಲ್ಪತೆಗಳಿಂದಲೇ ಹುಟ್ಟಬೇಕಾಗುತ್ತದೆ. ಬದುಕಿನಲ್ಲಿ ಯಾವುದು ಸಾಧಿತವಲ್ಲವೋ ಅದು ಕಾವ್ಯದಲ್ಲೂ ಹಾಗೇ ಅನಧೀಕೃತ. ಅವು ಪಿಶಾಚಿಯ ಹಾಗೆ. ಆದುದರಿಂದಲೇ ಜೈವಿಕ ಪ್ರತಿಕ್ರಿಯೆಯ ಪ್ರತಿಮೆಗಳು ಅವರ ಕಾವ್ಯದಲ್ಲಿ ಬರುತ್ತವೆ. ಅವರ ಪ್ರಾರ್ಥನೆ ಪದ್ಯದಲ್ಲಿ ಬರುವ ಗರುಡನ ಪ್ರತಿಮೆಯನ್ನು ನೋಡಿ. (ಹೇಳವ ಅರುಣನಿಗಿಂತ ಪೂರ್ಣ ಹೊರೆದ ಗರುಡ) ಗರಡುನ ಜನನದ ಪ್ರತಿಮೆ., ಅವನ ಆಗಾಧ ಶಕ್ತಿ, ವಿಷ್ಣುವಿಗೆ ತನ್ನನ್ನು ಒಪ್ಪಿಸಿಕೊಳ್ಳುವ ಪೂರ್ಣ ಶರಣಾಗತಿಯ ವಿನಯ (ಮುಂದೆ ಅವನೇ ವಿಷ್ಣುವಿನ ವಾಹನವಾಗುತ್ತಾನೆ.); ಗರಡು ಕವಿ ಬಯಸುವ ಪಕ್ವತೆಯ ಪ್ರತೀಕವಾಗುತ್ತಾನೆ.

ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ-
ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು.
ನಿನ್ನ ತೊಡೆಹೊರೆ ಕೆಳಗೆ ಮತ್ತೆ-ಸಡಿಲು.

ಎಲ್ಲ ಜೈವಿಕ ಬದುಕಿನ ಆಧಾರವಾದ ಮಣ್ಣಿಗೆ ಮರಳಿ ಬರುವುದು, ಆವಾಸ್ತವ ರಮ್ಯತೆಯಿಂದ ವಾಸ್ತವಕ್ಕೆ ಹಿಂದಿರುಗುವುದೂ ಹೌದು. ಒಣಗಿಹೋದ ಕಪ್ಟೆ ತನ್ನ ಚರ್ಮದ ಹೊಳಪನ್ನು ಮತ್ತೆ ಬಾವಿಯಲ್ಲಿ ಮುಳುಗುವುದರಿಂದ ಪಡೆಯಬಲ್ಲದು. ಇದು ಅಡಿಗರ ಕೂಪಮಂಡೂಕ ಪದ್ಯದಿಂದ;

ಏಳು ಹೊಂಡದ ನೀರು ಕುಡಿದ ಮಂಡೋಕಯ್ಯ
ನಾನು; ಕುಪ್ಪಳಿಸುವುದೆ ನನ್ನ ಧರ್ಮ;
ನೆಲದಿಂದ ಕೊಳಕೊಳಕ್ಕೆ, ಮತ್ತೆ ಮೇಲು ನೆಲಕ್ಕೆ;
ಎರಡಕ್ಕು ತೂಗುವುದು ನನ್ನ ಕೆಲಸ
ಊದೂದಿ ಏದೇದಿ ನೆಲದೊಳೊದ್ದಾಡಿದೆನು;
ಇನ್ನಾದರೂ ಕೂಪಕಿಳಿವುದೆ ಸರಿ.
ನುಣ್ಣನೆಯ ಕಸರ ಬಸಿರಲ್ಲಿ ಹೂತಡಗುವೆನು;
ಊದಿಳಿದು ಮೈತಳಿವುದೊಂದೆ ಗುರಿ,

ತಮ್ಮ ಇತ್ತೀಚಿನ ಕವಿತೆಗಳಲ್ಲಿ ಅಡಿಗರು ವ್ರತದ ಕಡೆ ಒತ್ತುಹಾಕತೊಡಗಿದ್ದಾರೆ. ಶಿಸ್ತಿನ ಅಗತ್ಯವನ್ನು ಒತ್ತಿ ಹೇಳುತ್ತಿದ್ದಾರೆ. ಸ್ವಾತಂತ್ರ್ಯಪೂರ್ವ ಲೇಖಕರ ಕೃತಿಗಳಲ್ಲಿ ಮಾನವನ ದೈವಿಕತೆಯ ಅಂಶಕ್ಕೆ ಹೆಚ್ಚು ಒತ್ತು ಬೀಳುತ್ತಿತ್ತು. ಆದರೆ ದ್ವಂದ್ವಗಳನ್ನು ನಿರಾಕರಿಸದ ಅಡಿಗರು ಮನುಷ್ಯನ ಅಸ್ತಿತ್ವವನ್ನು ರೂಪಿಸಿದ ಸ್ವಾತಂತ್ರ್ಯ ಮತ್ತು ಅವಶ್ಯಕತೆಯನ್ನು ಬಲ್ಲವರಾದ ಕಾರಣ ಆಧ್ಯಾತ್ಮ ಢೋಕತನಕ್ಕೆ ದಾರಿ ಮಾಡುವ ಎಲ್ಲ ಖಾಳಿತನವನ್ನೂ ಧಿಕ್ಕರಿಸುತ್ತಾರೆ. ಇತ್ತೀಚಿನ ಒಂದು ಪದ್ಯ ‘ರಾಮನವಮಿಯ ದಿವಸ’ದಲ್ಲಿ ರಾಮನ ಜನ್ಮದಿನ ಆಚರಿಸುವ ಕವಿ ರಾಮನನ್ನು ಸಾಚಾವ್ಯಕ್ತಿಯಾಗಿ ಚಿತ್ರಿಸುತ್ತಾರೆ. ಆತ ಹುಟ್ಟಿದ್ದು ಬೇರೆಯವರ ವ್ರತಗಳಿಂದ. ತಾಯಿ-ತಂದೆಯರ ವ್ರತದಿಂದ, ಕೆಳವರ್ಗದ ಶಬರಿಯ ವ್ರತದಿಂದ, ಕವಿ ವಾಲ್ಮೀಕಿಯ ವತ್ರದಿಂದ. (ಅವನ ಸುತ್ತ ಒಂದು ಹುತ್ತವೇ ಬೆಳೆಯಿತು) ಪುರುಷೋತ್ತಮನ ಸೃಷ್ಟಿಗೆ ವಾಲ್ಮೀಕಿಯ ಇಂಥ ಏಕಾಗ್ರತೆ ಮತ್ತೆ ಬೇಕಾಗಿದೆ.

ಒಬ್ಬ ವ್ಯಕ್ತಿಯಾಗಿ ಮತ್ತು ಸಾಮಾಜಿಕವಾಗಿ ರಾಮನ ಪುರುಷೋತ್ತಮಿಕೆ ವ್ಯಕ್ತವಾಗುತ್ತದೆ. ಏಕಾಗ್ರೆತೆಯಲ್ಲಿ ಧ್ಯಾನಿಯಾಗಿ ಮತ್ತು ಸಮಷ್ಟಿಯಲ್ಲಿ ಕ್ರಿಯಾಶೀಲನಾಗಿ ರಾಮನ ವ್ಯವಹರಣೆ ಇದೆ. ಮಾನವನ ಅಂತರ್ಮುಖತೆ ಮತ್ತು ಬಹಿರ್ಮುಖತೆಗಳು ರಾಮನ ವ್ಯಕ್ತಿತ್ವದಲ್ಲಿ ಜೋಡಣೆಗೊಂಡಿವೆ. ನೆಲದ ಮಗಳಾದ ಸೀತೆಗೆ ಸಂಬಂಧಿಸಿದ ಸಾಂಸಾರಿಕ ನೆಪದಲ್ಲಿ ರಾಮ ರಾವಣನ ವಧೆಯ ಸಾಮಾಜಿಕ ಕ್ರಿಯೆ ನಡೆಸುತ್ತಾನೆ. ಒಳ್ಳೆಯ ಪತಿಯಾಗುವುದಕ್ಕಾಗಿ ಅವನು ಆಸುರೀಶಕ್ತಿಯೊಂದಿಗೆ ಹೋರಾಡಬೇಕಾಗುತ್ತದೆ. ಆ ಆಸುರೀಶಕ್ತಿಗೂ ಕೊನೆಯೆಂಬುದಿಲ್ಲ ರಾವಣನ ಹತ್ತುತಲೆ ಕತ್ತರಿಸಿದಂತೆ ಮತ್ತೆ ಮತ್ತೆ ಹುಟ್ಟುತ್ತವೆ. ಆಧುನಿಕ ರಾಕೆಟ್ಟಿನ, ಯುದ್ಧ ವಿಷಯಕ ಪ್ರತಿಮೆಗಳೂ ಪದ್ಯದಲ್ಲಿ ಬರುತ್ತವೆ. ಚಂದ್ರಯಾನ, ಯೋಗದ ಮೂಲ ಕುಂಡಲಿಯನ್ನು ಕೆರಳಿಸಿ ಸಹಸ್ರಾರದಲ್ಲಿ ನಿಲ್ಲಿಸುವುದು, ವರ್ತಮಾನಕಾಲವನ್ನು ಅನಂತಕಾಲಕ್ಕೆ ಹಠಾತ್ತನೆ ತಾಗಿಸುವುದು-ದೈವಶಕ್ತಿಯನ್ನು ಮರ್ತ್ಯಕ್ಕೆ ರಾಮನ ರೂಪದಲ್ಲಿ ತರುವಲ್ಲಿ ಫಲಿಸುತ್ತವೆ.

ಈ ಪದ್ಯದಲ್ಲಿ ಒಂದು ನೈತಿಕ ಮಾನವ ಕಲ್ಪನೆ ಹೊರಹೊಮ್ಮುತ್ತದೆ. ರಾಮ ತನ್ನ ಸಮಾಜ ತನ್ನಿಂದ ಏನನ್ನು ಬಯಸುತ್ತದೋ ಆ ಬೆಳಕಿನಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾನೆ, ನಿಯಮಗಳಿಗೆ ತನ್ನನ್ನು ಕಟ್ಟಿಕೊಳ್ಳುತ್ತಾನೆ, ಹಾಗೆ ಬದ್ಧನಾಗುವ ಮೂಲಕವೇ ಸ್ವಾತಂತ್ರ್ಯವನ್ನು ಸಾಧಿಸುತ್ತಾನೆ.

ಕನ್ನಡದ ಈಚಿನ ಸಾಹಿತ್ಯ ಕಟ್ಟಿಕೊಡುವ ಮಾನವ ಕಲ್ಪನೆ ಎಂಥದ್ದು? ನಮ್ಮ ಅತ್ಯುತ್ತಮ ಯುವ ಬರಹಗಾರರನ್ನು ಕೆರಳಿಸಿರುವ ವಿಷಯ-ಮಾನವನ ಬಾಹ್ಯ ಮತ್ತು ಆಂತರಿಕ ಸತ್ಯಗಳನ್ನು ಹೇಗೆ ಹೊಂದಿಸುವುದು ಎಂಬುದು. ಹೊರಗೆ ಕಾಣುವ ವಾಸ್ತವತೆ ಮಾನವನ ಅಂತಃಪ್ರಜ್ಞೆಯನ್ನು ನಿರ್ಧರಿಸುವುದೆ? ಅಥವಾ ಹೊಂದಾಣಿಕೆ ಪರಸ್ಪರ ಸಂಬಂಧಿಸಿದ್ದೆ? ಯಾವ ಬಗೆಯ ನಿರೂಪಣಾಧಾಟಿ ಲೇಖಕರನ್ನು ತತ್ವಬದ್ಧತೆಯಿಂದ ಬಿಡುಗಡೆ ಮಾಡಬಲ್ಲದೆಂಬುದೇ ನಮ್ಮ ಇಂದಿನ ಸಮಸ್ಯೆ. ಇಂದು ಇವು ನಮಗೆ ಬಹು ಮುಖ್ಯ ವಿಚಾರಗಳು. ಇಂಥ ಸಮಸ್ಯೆಗೆ ಉತ್ತರಗಳನ್ನು ಕೇವಲ ಸಾಹಿತ್ಯದಲ್ಲೇ ಅರಸುವುದೂ ಸಾಧ್ಯವಿಲ್ಲ. ಹೊರಗೂ, ನಮ್ಮ ಸಾಮಾಜಿಕ-ಆರ್ಥಿಕ ನೆಲೆಯಲ್ಲೂ ಉತ್ತರಗಳನ್ನು ಹುಡುಕಬೇಕಾಗಿದೆ. ಬದಲಾವಣೆಯ ಮುಖ್ಯ ಶಿಲ್ಪಿಯಾದ ರಾಜಕೀಯ ನಮ್ಮ ಈಚಿನ ಕೃತಿಗಳಲ್ಲಿ ಮುಖ್ಯ ವಸ್ತುವಾದರೆ ಅದು ತೀರ ಸ್ವಾಭಾವಿಕ.

ಕನ್ನಡಕ್ಕೆ :
ದೇಶ ಕುಲಕರ್ಣಿ
ಎಚ್.ಎಸ್. ವೆಂಕಟೇಶಮೂರ್ತಿ

ಸಾಧನೆ: ಸಂ. ಸಂ. ಜನವರಿಮಾರ್ಚ್‌೧೯೮೦, ಬೆಂಗಳೂರು ವಿ.ವಿ.