ಸ್ನೇಹಿತರೆ,

ಇದು ನಿಮ್ಮ ಸಿಂಡಿಕೇಟ್ ಬ್ಯಾಂಕಿನ ಅಮೃತಮಹೋತ್ಸವದ ವರ್ಷ. ನಿಮಗೆ ವಿಶೇಷ ಸಂತೋಷ ಕೊಡುವ ಸಂದರ್ಭದಲ್ಲಿ ಗಾಂಧೀಜಿ ಬಗ್ಗೆ ಒಂದು ಉಪನ್ಯಾಸ ಮಾಲೆಯನ್ನು ನಡೆಸಬೇಕೆಂದು ನೀವು ಯೋಚಿಸಿರುವುದೇ ನಿಮ್ಮ ಬ್ಯಾಂಕಿನ ಅಪರೂಪದ ಗುಣಕ್ಕೆ ಸಾಕ್ಷಿ. ಮಾನ್ಯ ಶೆಣೈಯವರು ಸ್ವಾಗತ ಭಾಷಣ ಮಾಡುತ್ತ ಹೇಳಿದ್ದನ್ನು ತುಂಬು ಗಮನದಿಂದ ಕೇಳಿಸಿಕೊಂಡೆ. ಬ್ಯಾಂಕಿನ ಬಗ್ಗೆ ಅವರು ಹೇಳಿದ ಪ್ರತಿಯೊಂದು ಅಂಶವೂ ಕೂಡ ಒಂದು ದೃಷ್ಟಿಯಿಂದ ಗಾಂಧಿಜಿಯ ಆದರ್ಶಗಳಿಗೆ ಹತ್ತಿರವಾದ ಮೌಲ್ಯವೆ ಆಗಿದೆ. ಅವರು ಪ್ರಸ್ತಾಪಿಸಿದ ಅಂಶಗಳಲ್ಲೊಂದಾದ ಪಿಗ್ಮಿ ಡಿಪಾಸಿಟ್‌ನಂತಹ ಸಣ್ಣದೊಂದು ನಿದರ್ಶನವನ್ನು ನೋಡಿದರೂ ತಿಳಿಯುತ್ತದೆ: ಅಂತಹ ಪುಟ್ಟ, ಆದರೆ ಅದ್ಬುತ ಯೋಜನೆಗಳ ಮುಖಾಂತರ ಜನಸಾಮಾನ್ಯರನ್ನು ತಲುಪಬೇಕೆಂಬ–  ಅವರನ್ನು ಒಳಗೊಳ್ಳಬೇಕೆಂಬ ಹಂಬಲ ಬ್ಯಾಂಕಿನ ಇತಿಹಾಸದುದ್ದಕ್ಕೂ ಇದೆ. ಹಾಗೆಯೇ, ಇಲ್ಲಿಗೆ ಬರುವ ಮುನ್ನ ಮಾನ್ಯ ತಿಂಗಳಾಯರವರ ಹತ್ತಿರ ಮಾತನಾಡುತ್ತಿದ್ದಾಗ ಮತ್ತೊಂದು ಅಪರೂಪದ ಅಂಶ ತಿಳಿದುಬಂದಿತು. ಬೇರೆ ಅನೇಕ ಬ್ಯಾಂಕುಗಳು ಕೇವಲ ಜಾತಿಮತಗಳ ಆಧಾರದ ಮೇಲೆ, ಸಣ್ಣಸಣ್ಣ ಗುಂಪುಗಳ ಆಧಾರದ ಮೇಲೆ ಬೆಳೆಯುತ್ತ ಬಂದಂತಹ ಕಾಲದಲ್ಲಿ ಸಿಂಡಿಕೇಟ್ ಬ್ಯಾಂಕು ಮಾತ್ರ ಎಲ್ಲ ರೀತಿಯ ಜಾತಿಜನತೆಗಳನ್ನು ಒಪ್ಪಿಕೊಳ್ಳುತ್ತ, ಸಮಾಜದ ಎಲ್ಲ ಸ್ತರಗಳನ್ನೂ ಸ್ವೀಕರಿಸುತ್ತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರಿಗೆ ಸಮೀಪವಾಗುತ್ತ ಬೆಳೆಯುತ್ತ ಬಂದಿತು. ಹಾಗಾಗಿ ಅದು ತನ್ನ ಸಮೂದಾಯಕ್ಕೆ ಯಾವತ್ತೂ ಪ್ರಸ್ತುತವಾಗಿ ಉಳಿದುಕೊಂಡು ಬಂದಿತು. ನನ್ನ ದೃಷ್ಟಿಯಲ್ಲಿ ಇದು ಮಹತ್ವದ ಸಂಗತಿ. ಇನ್ನು ಮುಂದೆ ಬ್ಯಾಂಕುಗಳಿಗೆ ರೀತಿಯ ಆಸೆಆದರ್ಶಗಳು ಹೊರಟುಹೋಗಿಬಿಡಬಹುದೆಂಬ ಭಯ, ಜಾಗತೀಕರಣದ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಳಚಿ ಬಿಸುಡಬಹುದೆಂಬ ಭಯ ನಮ್ಮನ್ನೆಲ್ಲ ಕಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಸಿಂಡಿಕೇಟ್ ಬ್ಯಾಂಕು ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿರುವುದರಲ್ಲಿಯೆ ಹಾಗೂ ತನ್ನ ಅಮೃತಮಹೋತ್ಸವದ ಸಂದರ್ಭದಲ್ಲಿ ಗಾಂಧೀಜಿಯನ್ನು ನೆನೆಯಬೇಕೆಂದು ನಿರ್ಧರಿಸಿದ್ದರಲ್ಲಿಯೇ ಒಂದು ದೊಡ್ಡ ಭರವಸೆಯಿದೆ; ಬ್ಯಾಂಕು ಬೇರೆ ಬ್ಯಾಂಕುಗಳ ಹಾಗೆ ಆಗದೆ ಉಳಿಯಬಹುದು, ತನ್ನ ವಿಶಿಷ್ಟತೆಯನ್ನು ಉಳಿಸಿಕೊಳ್ಳಬಹುದು ಎಂಬ ಸೂಚನೆಯಿದೆ.

ಗಾಂಧೀಜಿ ಬಗ್ಗೆ ಮಾತನಾಡುವುದು ಬಹಳ ಕಷ್ಟ. ಒಂದು ಕಾರಣ-ಹೀಗೆಯೆ ಹೇಳುವುದಾದರೆ-ಇಲ್ಲಿರುವ ಎಲ್ಲರಿಗೂ ಗಾಂಧೀಜಿಯ ವಿಷಯ ಸ್ವಲ್ಪವಾದರೂ ಗೊತ್ತೇ ಇರುವಂಥದು. ಫೋಟೋ ಒಂದನ್ನು ತೋರಿಸಿ ‘ಇದು ಯಾರು?’ ಎಂದು ಕೇಳಿದರೆ ಪ್ರಾಯಶಃ ಜಗತ್ತಿನ ಜನರೆಲ್ಲ ಗುರುತಿಸಬಹುದಾದ ಒಂದು ಮುಖ ಗಾಂಧೀಜಿಯ ಮುಖ ಮಾತ್ರ. ಹಾಗೆ ಅದು ಮನದಲ್ಲಿ ಅಚ್ಚೋತ್ತಿ ನಿಂತುಬಿಟ್ಟಿರುತ್ತದೆ. ಅದಕ್ಕೆ ಕಾರಣ, ಬಹುಶಃ, ಅವರ ಆ ಕಿವಿ, ಎದ್ದುತೋರುವ ಆ ದೊಡ್ಡ ಕಿವಿಯಿರಬೇಕು! ಗಾಂಧೀಜಿಯದು ಅಂಥ ಸುಂದರ ಮುಖವೇನಲ್ಲ ನಿಜ. ಆದರೆ ಎಂಥ ಸುಂದರ ಮುಖವೂ ಹುಟ್ಟಿಸಲಾರದಂತಹ ಪ್ರೀತಿಯನ್ನು ನಮ್ಮಲ್ಲಿ ಹುಟ್ಟಿಸುವಂತಹ ಅನನ್ಯ ಮುಖವದು. ವಿಯೆಟ್ನಾಮ್‌ನ ಬಹುದೊಡ್ಡ ನಾಯಕ ಹೋ ಚಿ ಮಿನ್ ಬಗ್ಗೆ ನೀವೆಲ್ಲ ಕೇಳೇ ಇರುತ್ತೀರಿ. ಬಹಳ ಒಳ್ಳೆಯ ಮನುಷ್ಯ. ಚೀನಾದ ಮಾವೊತ್ಸೆ ತುಂಗನಿಗಿಂತಲೂ ಬಹಳ ದೊಡ್ಡ ಮನುಷ್ಯ. ಕೆಲವರು ಮಾವೊನನ್ನು ಗಾಂಧಿಯ ಜೊತೆಗೆ ಹೋಲಿಸುವುದುಂಟು. ನನ್ನ ಪ್ರಕಾರ ಅಂಥ ಹೋಲಿಕೆ ಮೂರ್ಖತನದ್ದು. ಮಾವೊ ಮತ್ತು ಅವನ ಥರದ ವ್ಯಕ್ತಿಗಳೆಲ್ಲ ಒಂದು ರೀತಿಯಲ್ಲಿ ಕ್ರೂರಿಗಳು. ಅದೇ ಕಮ್ಯೂನಿಸ್ಟರಲ್ಲೆಲ್ಲ ದಯಾವಂತನೆಂದರೆ ಹೋ ಚಿ ಮಿನ್. ಗಾಂಧಿಯ ಹಾಗೆಯೆ ಆತನ ಮುಖವೂ ನಿಮಗೆ ಪರಿಚಿತವಿರಬೇಕು. ಯಾರೊ ಒಮ್ಮೆ ಆತನನ್ನು ತುಂಬ ಹೊಗಳುತ್ತ ಹೇಳಿದರಂತೆ- ‘ಹೋ ಚಿ ಮಿನ್, ನೀವು ಗಾಂಧೀಜಿಯಂತಹ ಮನುಷ್ಯ’ ಎಂದು. ಹೋ ಚಿ ಮಿನ್ ತುಂಬ ವಿನೋದದ ಸ್ವಭಾವದವನು. ಆತ ನಕ್ಕು ಉತ್ತರಿಸಿದನಂತೆ. ‘ಹೌದಾ? ಇರಬಹುದು. ಆದರೆ ನಾನು ಒಂದು ಅಂಶದಲ್ಲಿ- ರೂಪದಲ್ಲಿ-ಗಾಂಧಿಗಿಂತ ಹೆಚ್ಚು ಚೆಲುವ ಎಂದುಕೊಂಡಿದ್ದೇನೆ’ ಎಂದು.

ಗಾಂಧೀಜಿಯದು ಮರೆಯಲಾಗದ ಮುಖ ಎಂದು ಹೇಳಿದೆನಲ್ಲ; ಅವರ ಒಟ್ಟೂ ದೈಹಿಕ ರೂಪವೆ ಕೆಲವು ವಿಚಿತ್ರ ಹಾಗೂ ಅಸಾಮಾನ್ಯ ಲಕ್ಷಣಗಳನ್ನು ಹೊಂದಿರುವಂಥದು. ಈ ಒಂದು ವಿಷಯವನ್ನಂತೂ ನಾನು ಯಾವಾಗಲೂ ಹೇಳುತ್ತಿರುತ್ತೇನೆ; ಗಾಂಧೀಜಿಯನ್ನು ಹಾಗೂ ಚರ್ಚಿಲ್, ಸ್ಟಾಲಿನ್, ರೂಸ್‌ವೆಲ್ಟ್ ಇತ್ಯಾದಿಗಳಂಥ ಅವರ ಸಮಕಾಲೀನ ಖ್ಯಾತ ನಾಯಕರನ್ನು ಒಟ್ಟಿಗೆ ಸೇರಿಸಿ, ಅವರೆಲ್ಲರ ದೇಹದ ಮೇಲರ್ಧ ಬೆತ್ತಲೆಯಾಗಿರುವಂತೆ ನಿಲ್ಲಿಸಿ, ಒಂದು ಫೋಟೋ ತೆಗೆಯಿತಿ. ಆ ಫೋಟೊ ನೋಡಿದರೆ ತಿಳಿಯುತ್ತದೆ; ಅವರೆಲ್ಲರಲ್ಲಿ ಅತ್ಯಂತ ಸುಂದರ ಯಾರೆಂದರೆ ಗಾಂಧಿಯೇ. ಉಳಿದವರೆಲ್ಲ ತಮ್ಮ ತಮ್ಮ ಶರ್ಟು, ಕೋಟು, ಟೈ, ಹ್ಯಾಟುಗಳ ಸಹಾಯವಿಲ್ಲದೆ ಸುರೂಪಿಗಳಾಗಿ ಕಾಣುವುದು ಸಾಧ್ಯವಿಲ್ಲವೆಂದೆನಿಸುತ್ತದೆ. ಆದರೆ ಗಾಂಧಿ ಮಾತ್ರ, ತಮ್ಮ ಇಳಿವಯಸ್ಸಿನಲ್ಲಿಯೂ, ಯಾವ ಬಾಹ್ಯ ಬೆಂಬಲಗಳಿಲ್ಲದೆಯೂ, ಬೆತ್ತಲೆ ಸ್ಥಿತಿಯಲ್ಲಿಯೂ ಸುಂದರವಾಗಿ ಕಾಣುತ್ತಿದ್ದರು. ಹಾಗೆ ಕಾಣಿಸುವಂತಹ ದೇಹ ಪ್ರಾಯಶಃ ಗಾಂಧೀಜಿಯವರೊಬ್ಬರದೆ ಎಂದೆನಿಸುತ್ತದೆ. ಇದು ನಿಜಕ್ಕೂ ವಿಸ್ಮಯದ ಸಂಗತಿ; ದೇಹವನ್ನು ಹೆಚ್ಚು ಸುಖಕ್ಕೆ ಒಳಪಡಿಸಬಾರದು ಎನ್ನುತ್ತಿದ್ದ ಗಾಂಧಿಯ ದೇಹ, ಹಾಗೆ ಹೆಚ್ಚು ಸುಖಿಯೂ, ಆರೋಗ್ಯಯುತವೂ, ಶಕ್ತಿಯುತವೂ ಆಗಿತ್ತು. ಗಾಂಧೀಜಿಯವರಲ್ಲಿ ಈ ರೀತಿಯ ಅನೇಕ ವಿಪರ್ಯಾಸಗಳಿದ್ದವು. ಅವರು ನೈತಿಕವಾಗಿ ಬಹು ನಿಷ್ಠುರರಾಗಿದ್ದರೂ ಸನ್ನಿವೇಶಾನುಸಾರ ಆ ನಿಷ್ಠುರತೆಯನ್ನು ಬಿಟ್ಟುಕೊಡುತ್ತಿದ್ದರು ಕೂಡು; ಕಠೋರ ಮನಸ್ಕರಾಗಿದ್ದರೂ ಅಷ್ಟೇ ಸಹಾನುಭೂತಿ ಉಳ್ಳವರಾಗಿದ್ದರು. ಯಾವಾಗಲೂ ಸಂತೋಷದ ಬುಗ್ಗೆಯಾಗಿರುತ್ತಿದ್ದರು.

ಗಾಂಧಿಯ ಈ ಅಪರೂಪದ ಗುಣವನ್ನು ತೋರುವಂಥ ಅಸಂಖ್ಯ ನಿದರ್ಶನಗಳಲ್ಲಿ ಕೆಲವು ಹೀಗೆಯೆ ನನಗೆ ಸದ್ಯಕ್ಕೆ ನೆನಪಾಗುತ್ತಿದೆ. ವಿನೋಬಾ ಭಾವೆ ಗಾಂಧೀಜಿಗೆ ಬಹಳ ಹತ್ತಿರವಾಗಿದ್ದರು; ಅವರನ್ನೆ ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಅವರ ಒಂದು ಸಮಸ್ಯೆಯೆಂದರೆ ಗಾಂಧಿ ಹೇಳಿದ್ದನ್ನೆಲ್ಲ ಅವರು ಅಕ್ಷರಶಃ ಅರ್ಥೈಸಿಕೊಳ್ಳುತ್ತಿದ್ದರು. ಮನುಷ್ಯ ಬರಿಗಾಲಲ್ಲಿ ಅದಷ್ಟು ನಡೆದಾಡಬೇಕು ಎಂದು ಗಾಂಧಿ ಹೇಳಿದರೆ ವಿನೋಬಾ ಇಡೀ ಜೀವಮಾನ ಬರೀ ನಡೆದಾಡಿಕೊಂಡೆ ಇದ್ದುಬಿಟ್ಟರು. ಉಪವಾಸ ಮಾಡಬೇಕೆಂದು ಗಾಂಧಿ ಹೇಳಿದರೆ ವಿನೋಬಾ ತಿಂಗಳುಗಟ್ಟಲೆ ಉಪವಾಸ ಮಾಡಲು ಪ್ರಾರಂಭಿಸಿದರು. ಮೌನವ್ರತ ಮಾಡುವುದು ಒಳ್ಳೆಯದು ಎಂದು ಗಾಂಧಿ ಹೇಳಿದರೆ ಇವರು ವರ್ಷಗಟ್ಟಲೆ ಮಾತನಾಡದೆಯೇ ಉಳಿದರು. ಗಾಂಧಿ ಹೇಳಿದ್ದು, ಮಾಡಿದ್ದು ಎಲ್ಲವನ್ನೂ ವಿನೋಬಾ ಸ್ವಲ್ಪ ಅತಿಯಾಗಿಯೇ ಮಾಡುತ್ತಿದ್ದರು. ಗಾಂಧಿ ಎಷ್ಟಾದರೂ ಗೃಹಸ್ಥರಾದ್ದರಿಂದ ಯಾವುದೇ ತತ್ವ- ಆದರ್ಶಗಳನ್ನು ಅತಿರೇಕಕ್ಕೆ ಒಯ್ಯದಂತಹ ಸಮತೋಲನವನ್ನು ಸಾಧಿಸಿಕೊಂಡಿದ್ದರು. ಅದು ವಿನೋಬಾಗೆ ಮಾತ್ರ ಸಾಧ್ಯವಾಗಲಿಲ್ಲ. ಒಮ್ಮೆ ಗಾಂಧಿಯ ನಿಕಟವರ್ತಿಗಳಾಗಿದ್ದ ಕೃಪಲಾನಿ ಮತ್ತು ಸುಚೇತಾ ಮದುವೆಯಾಗಲು ನಿರ್ಧರಿಸಿದಾಗ ವಿನೋಬಾ ಅದನ್ನು ವಿರೋಧಿಸಿದರು. ಅವರಿಬ್ಬರ ನಡುವಿನ ವಯಸ್ಸಿನ ಅಂತರ ಅತಿ ಜಾಸ್ತಿಯೆಂಬುದು ಅವರ ಆಕ್ಷೇಪಣೆಯ ಕಾರಣವಾಗಿತ್ತು. ತಾನು ಸುಚೇತಾ ಅವರನ್ನೆ ಮದುವೆಯಾಗುವುದೆಂದು ಕೃಪಲಾನಿ ಹಠ ಹಿಡಿದಾಗ ವಿನೋಬಾಗೆ ‘ಇದು ಮೋಹ, ಇದು ತಪ್ಪು’ ಎಂದೆನಿಸಿತು. ವಿಷಯವೆಲ್ಲ ತಿಳಿದ ಗಾಂಧೀಜಿ ಮಾತ್ರ ಸ್ವಲ್ಪ ದಿನ ಕಳೆದು ‘ನಿನಗೆ ಅವಳ ಬಗ್ಗೆ ಅಷ್ಟು ಇಷ್ಟವೇನು? ಅವಳನ್ನೆ ಮದುವೆಯಾಗಬೇಕೆಂದಿದೆಯೇನು?’ ಎಂದು ಕೃಪಲಾನಿಯನ್ನು ಕೇಳಿದರು. ಕೃಪಲಾನಿ ‘ಹೌದು’ ಎಂದು ದೃಢವಾಗಿ ನುಡಿದಾಗ ಗಾಂಧಿಜಿ ‘ಒಳ್ಳೆಯದು, ಆಗು’ ಎಂದರು.

ಇಂಥದೆ ಇನ್ನೊಂದು ಘಟನೆ: ಗಾಂಧೀಜಿಯ ಆಶ್ರಮದಲ್ಲಿದ್ದ ದಕ್ಷಿಣ ಭಾರತೀಯ ಹುಡುಗನೊಬ್ಬ ಒಮ್ಮೆ ಹೊಟ್ಟೆನೋವಿನಿಂದ ನರಳುತ್ತ ಅಲ್ಲಿಯೆ ಇದ್ದ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅನಾರೋಗ್ಯದ ಜೊತೆಗೆಯೆ ಬಹಳ ಕಾಲ ಮನೆಯಿಂದ ದೂರವಿದ್ದುದರಿಂದಲೊ ಏನೊ ಒಂದು ರೀತಿಯ ತಳಮಳವೂ ಅವನನ್ನು ಕಾಡುತ್ತಿತ್ತು. ಆಸ್ಪತ್ರೆಯ ರೋಗಿಗಳನ್ನೆಲ್ಲ ವಿಚಾರಿಸಿಕೊಳ್ಳುತ್ತ ಗಾಂಧೀಜಿ ಅವನ ಬಳಿಯೂ ಬಂದರು. ಸಾಂತ್ವನದ ಮಾತುಗಳನ್ನಾಡಿದ ನಂತರ ‘ನಿನಗೇನಾದರೂ ಬೇಕಾ?’ ಎಂದು ಅವರು ಕೇಳಿದರೆ ಅವನು ‘ನನಗೊಂದಿಷ್ಟು ಟೋಸ್ಟ್ ಹಾಗೂ ಕಾಫಿ ಬೇಕು’ ಎಂದ. ಗಾಂಧಿ ಕಾಫಿಯ ವಿರೊಧಿಗಳಾಗಿದ್ದವರು. ಆದರೆ ಆ ಹುಡುಗನ ಮಾತನ್ನು ಕೇಳಿದಾಕ್ಷಣ ಅವರು ಸೀದಾ ಕಸ್ತೂರಿಬಾರವರ ಕೋಣೆಗೆ ಹೋದರು. ಅಲ್ಲಿ ಬಾ ನಿದ್ದೆ ಮಾಡುತ್ತಿದ್ದುದನ್ನು ಕಂಡು ಅವರಿಗೆ ತೊಮದರೆ ಮಾಡಲಿಚ್ಛಿಸದೆ ತಾನೇ ಕೈಯಾರೆ ಕಾಫಿ ಮಾಡಿಕೊಂಡು ಬಂದು ಅವನಿಗೆ ಕುಡಿಸಿದರು. ಇದು ಗಾಂಧೀ ಅವರು ತಮ್ಮ ವೈಯಕ್ತಿಕ ಜೀವನಕ್ರಮದಲ್ಲಿ ಎಷ್ಟು ನಿಷ್ಠುರರಾಗಿದ್ದರೂ ಪರರ ಬಗ್ಗೆ ತೋರುತ್ತಿದ್ದ ಇಂಥ ರೀತಿಯ ಸಹಾನುಭೂತಿ ಹಾಗೂ ಮುಕ್ತ ಮನೋಭಾವ ಅವರಿಗೆ ಬಂದದ್ದು ಗೃಹಸ್ಥಧರ್ಮದಿಂದಲೇ ಎಂದು ತೋರುತ್ತದೆ.

ಹಾಗಾಗಿಯೆ ಅನೇಕ ವಿಭಿನ್ನ ವ್ಯಕ್ತಿತ್ವಗಳ ಜನರಿಗೆಲ್ಲ ಗಾಂಧೀಜಿಯ ಜೊತೆಗಿರಲು ಸಾಧ್ಯವಾಯಿತು; ನೆಹರೂ, ಪಟೇಲ್, ಮೌಲಾನಾ, ರಾಜಾಜಿ ಇಂಥವರೆಲ್ಲ ಪರಸ್ಪರ ಗುಣಭೇದಗಳ ಹೊರತಾಗಿಯೂ ಗಾಂಧೀಜಿಯ ಸಹವರ್ತಿಗಳಾಗಿಯೆ ಬದುಕಿದರು. ರಾಜಾಜಿಯಂಥ ನಿಷ್ಠುರ ತಾರ್ಕಿಕರೂ ಗಾಂಧೀಜಿಗೆ ಪ್ರಿಯರಾಗಿದ್ದರು ಎಂಬುದನ್ನು ಕಂಡಾಗ ಗಾಂಧೀಜಿಯವರ ಈ ಅದ್ಭುತ ಶಕ್ತಿಯ ಅರಿವಾಗುತ್ತದೆ. ರಾಜಾಜಿಯವರ ನಿಷ್ಠರತೆ ಹಾಗೂ ತಾರ್ಕಿಕತೆ ಗಾಂಧಿಯವರದನ್ನೂ ಮೀರಿಸಿದ್ದು. ಅವರು ಬೀಗರೇನೊ ಆದರು. ಹೌದು, ಆದರೆ ಅವರಿಬ್ಬರ ವ್ಯಕ್ತಿತ್ವಗಳಲ್ಲಿ ಧ್ರುವದೂರದ ವ್ಯತ್ಯಾಸಗಳಿದ್ದವು. ಅವರಿಬ್ಬರ ನಡುವಿನ ಸ್ವಾರಸ್ಯದ ಪ್ರಸಂಗವೊಂದು ನೆನಪಾಗುತ್ತಿದೆ. ಒಮ್ಮೆ ಗಾಂಧೀಜಿ-ಅಂಬೇಡ್ಕರ್ ವಿಷಯಕ್ಕೆಂದು ಕಾಣುತ್ತದೆ-ಅಮರಣಾಂತ ಉಪವಾಸ ನಡೆಸಿದ್ದರು. ಆಗ ರಾಜಾಜಿ ಬಂದು ‘ಇಂತಹ ಉಪವಾಸ ನೀವು ಮಾಡಬಾರದು. ನಿಮ್ಮದೇನಾದರೂ ತಪ್ಪಿದ್ದಲ್ಲಿ, ಅದರ ಪ್ರಾಯಶ್ಚಿತ್ತಕ್ಕೆಂದು ಇಂತಹ ಕ್ರಿಯೆಯಲ್ಲಿ ತೊಡಗಿದ್ದಲ್ಲಿ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ನಿಮ್ಮದೇನೂ ತಪ್ಪಿಲ್ಲದೆ ಕೂಡ ನೀವುಉಪವಾಸ ಮಾಡುತ್ತಿರುವುದು ಸರಿಯಲ್ಲ’ ಎಂದರು. ಗಾಂಧೀಜಿ ಆಗ ಉಪವಾಸದ ಜೊತೆಗೆ ಮೌನವ್ರತವನ್ನೂ ಆಚರಿಸುತ್ತಿದ್ದವರು- ರಾಜಾಜಿಯ ಮಾತನ್ನು ಒಪ್ಪದೆ ತಲೆಯಲ್ಲಾಡಿಸಿದರು. ಆಗ ರಾಜಾಜಿ ‘ನೀವು ಉಪವಾಸವ್ರತ ಮಾಡುವಾಗ ಏನೇನೆಲ್ಲ ಸೇವಿಸುತ್ತೀರಿ, ಅದರ ಪಟ್ಟಿ ಕೊಡಿ’ ಎಂದು ಕೇಳಿದರು. (ಗಾಂಧೀಜಿ ಉಪವಾಸದ ಅವಧಿಯಲ್ಲಿ ಏನೊಂದನ್ನೂ ಸೇವಿಸದೆಯೇನೂ ಇರುತ್ತಿರಲಿಲ್ಲ. ನಿಂಬೆಹಣ್ಣಿನ ರಸ ಇತ್ಯಾದಿಗಳನ್ನು ಸೇವಿಸುತ್ತಿದ್ದರು; ಅದೂ ಎಷ್ಟೂ ಬಾರಿ, ಎಷ್ಟು ಪ್ರಮಾಣದಲ್ಲಿ ಎಂಬುದನ್ನೆಲ್ಲ ಮುಂಚಿತವಾಗಿಯೆ ನಿರ್ಧರಿಸಿಬಿಡುತ್ತಿದ್ದರು. ಯಾಕೆಂದರೆ, ಗಾಂಧೀಜಿ ಉಪವಾಸ ವ್ರತ ಮಾಡುತ್ತಿದ್ದುದು ಸಾಯಬೇಕು ಅಂತ ಅಲ್ಲ, ಬದಲಾಗಿ ಹೃದಯವನ್ನು ಗೆಲ್ಲಬೇಕು ಎಂದು. ತಾನು ಸಾಯುವುದಿಲ್ಲವೆಂದೂ, ತನ್ನ ಪ್ರಯತ್ನದಲ್ಲಿ ಗೆದ್ದೇಗೆಲ್ಲುತ್ತೇನೆಂದೂ ನಂಬಿಕೊಂಡೇ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.) ಸರಿ, ಗಾಂಧಿ ಆ ಪಟ್ಟಿಯನ್ನು ತೋರಿಸಿದರು. ರಾಜಾಜಿ ‘ನೀವು ಉಪವಾಸ ಮಾಡಲೇಬಾರದು ಎಂದು ಆಗಲೇ ಹೇಳಿದೆ. ಆದರೆ ಮಾಡುವುದೆ ಆದಲ್ಲಿ ನಿಮ್ಮ ಈ ಪಟ್ಟಿ ತುಸು ದೊಡ್ಡದಾಯಿತು. ಅನಿಸುತ್ತದೆ. ಇಲ್ಲಿರುವ ಐಟಮ್‌ಗಳಲ್ಲಿ ಒಂದಿಷ್ಟನ್ನು ಹೊಡೆದುಹಾಕಲೆ?’ ಎಂದರು. ಗಾಂಧಿ ಒಪ್ಪಿದಾಗ ರಾಜಾಜಿ ಒಂದಾದ ಮೇಲೊಂದರಂತೆ ಐಟಮ್‌ಗಳನ್ನು ಹೊಡೆಯಲಾರಂಭಿಸಿದರು. ತಕ್ಷಣ ಗಾಂಧಿ ಅವರ ಕೈಯಿಂದ ಕಾಗದ ಪೆನ್ಸಿಲನ್ನು ಕಿತ್ತುಕೊಮಡು. ಗೀಚಿದರು- ‘ಗೇಟ್ ಔಟ್ ಆಫ್ ಹಿಯರ್! ನಿನ್ನ ಬಗ್ಗೆ ನನಗೆ ಸ್ವಲ್ಪವಾದರೂ ಪ್ರೀತಿ ಉಳಿಯಬೇಕೆಂದಿದ್ದರೆ ಮೊದಲು ಇಲ್ಲಿಂದ ತೊಲಗು!’ ಅದು ಅವರು ಪ್ರೀತಿ- ತಮಾಷೆಯಿಂದಲೆ ಬರೆದದ್ದು. ಹೀಗೆ ಗಾಂಧೀಜಿಗೆ ನಗುವ ಶಕ್ತಿ ಇತ್ತು. ವಿರೋಧಿಯ ಅಭಿಪ್ರಾಯವನ್ನೂ, ಅದರ ಹಿಂದಿನ ಸತ್ಯವನ್ನೂ ತಿಳಿಯುವ ಶಕ್ತಿಯಿತ್ತು. ಗಾಂಧಿಯ ಬಗ್ಗೆ ಇಂತಹ ಕತೆಗಳನ್ನು ಹೇಳುತ್ತ-ಕೇಳುತ್ತಾ ಕೂತರೆ ಅದಕ್ಕೆ ಕೊನೆಯೆ ಇಲ್ಲ.

*

ಇಂದಿನ ವಿಶೇಷ ಸಂದರ್ಭದಲ್ಲಿ ಗಾಂಧಿಯ ಬಗ್ಗೆ ಏನು ಮಾತಾಡುವುದೆಂದು ಬೆಳಿಗ್ಗೆ ಯೋಚಿಸುತ್ತಿದ್ದಾಗ ಹೀಗೆಯೆ ಒಂದು ಪ್ರವೇಶ ಕ್ರಮ ಹೊಳೆಯಿತು;

ಜಗತ್ತಿನ ಜನರನ್ನೆಲ್ಲ ಸ್ಥೂಲವಾಗಿ ಮೂರು ರೀತಿಯಲ್ಲಿ ವಿಂಗಡಿಸಬಹುದು. ಒಂದು ವರ್ಗದವರು, ಪ್ರಭುತ್ವದಲ್ಲಿ ನಂಬಿಕೆಯುಳ್ಳವರು. ಇವರು ಸಾಮಾನ್ಯವಾಗಿ ಸ್ಥಿತಿವಂತರು, ಜಗತ್ತು-ಜೀವನ ಸರಿಯಾಗಿ ನಡೆಯಬೇಕೆಂದರೆ ಭಯ-ಶಿಕ್ಷೆಗಳು ಅನಿವಾರ್ಯ ಹಾಗೂ ಅಪೇಕ್ಷಣೀಯ ಎಂದು ತಿಳಿದವರು. ಇಂಥ ಮನಃಸ್ಥಿತಿ ವ್ಯಕ್ತವಾಗುವುದು ಗಲ್ಫ್‌ವಾರ್‌ನಂತಹ ಸಂದರ್ಭಗಳಲ್ಲಿ; ಅಮೆರಿಕ ನಡೆದುಕೊಂಡಂತಹ ಕ್ರಮಗಳಲ್ಲಿ. ನಾವೆಲ್ಲ ನಮ್ಮ ನಮ್ಮನ್ನು ಸೂಕ್ಷ್ಮವಾಗಿ ಪರೀಕ್ಷಿಸಿಕೊಂಡರೆ ಇಂಥದೊಂದು ಧೋರಣೆ ನಮ್ಮೆಲ್ಲರ ಮನಸ್ಸಿನಲ್ಲೂ ಎಲ್ಲೋ ಒಂದು ಮೂಲೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಇರುವುದು ತಿಳಿಯುತ್ತದೆ. ಕೆಲವರಲ್ಲಿ ಇದು ತುಂಬ ಹೆಚ್ಚಾಗಿ ಇರುತ್ತದೆ. ಅಂಥವರ ಪ್ರಕಾರ ಜಗತ್ತನ್ನು ಸರಿಯಾಗಿ ನಡೆಸುವ ಸಾಧನಗಳು ಭಯ-ದಂಡನೆಗಳೇ ಹೊರತು ಪ್ರೇಮ, ದಯೆ, ಅನುಕಂಪ ಯಾವುವೂ ಅಲ್ಲ. ಇಂಥವರು ತಮಗೆ ಸರಿಯೆಂದು ಕಂಡದ್ದನ್ನು ಜಾರಿಗೊಳಿಸಲು ನಿರ್ದಯವಾಗಿ ನಡೆದುಕೊಳ್ಳಬಲ್ಲರು. ಇದು ಒಂದು ರೀತಿಯಲ್ಲಿ ಪ್ರಭುತ್ವದ ಗುಣ. ಹಿಂದಿನ ಕ್ಷತ್ರಿಯರಲ್ಲಿ ಅಪೇಕ್ಷಣೀಯ ಎಂದು ಎಲ್ಲರೂ ತಿಳಿದುಕೊಂಡಿದ್ದಂತಹ ಗುಣ. ಇಂಥ ಗುಣ ಇದ್ದವರು ಬಹಳ ದೊಡ್ಡವರು, ಆಳಲು ಯೋಗ್ಯರು ಎಂದು ನಾವು ಸಾಮಾನ್ಯವಾಗಿ ನಂಬಿರುತ್ತೇವೆ. (ಒಮ್ಮೊಮ್ಮೆ ಬ್ಯಾಂಕಿನ ಛೇರ‍್ಮನ್ನರೂ ಹೀಗೆಯೆ ಇರಬೇಕೆಂದು ನಾವು ಬಯಸುವುದಂಟು.) ಆದರೆ ಅಂಥವರ ಬಗ್ಗೆ ಬಹಳ ಸಲ ನಮಗೆ ಅತೀವವಾದ ಭಯವೂ ಇರುತ್ತದೆ. ವಿಚಿತ್ರವೆಂದರೆ ಅಂಥವರಲ್ಲಿ ಇರುವ ಅಥವಾ ಇರಬಹುದಾದ ಸಣ್ಣದೊಂದೊಂದು ಗುಣವನ್ನೂ ಹುಡುಕಿ ನೋಡಲು ನಾವು ಪ್ರಯತ್ನಿಸುತ್ತೇವೆ. ಅತಿನಿಷ್ಠುರಿಯೊಬ್ಬ ಒಂದು ದಿನ ಕೊಂಚ ಮುಗುಳುನಕ್ಕಿದ್ದೆ ದೊಡ್ಡ ಸುದ್ಧಿಯಾಗಿಬಿಡುತ್ತದೆ. ‘ಮಾವೊತ್ಸೆ ತುಂಗ್ ಇಂದು ನಕ್ಕ’ ಎಂಬುದೆ ನ್ಯಾಷನಲ್ ನ್ಯೂಸ್ ಆಗಿಬಿಡುತ್ತದೆ. ಯಾಕೆಂದರೆ ಇಂಥ ನಿಷ್ಠುರ ಪ್ರಭುತ್ವದ ಮಾರ್ಗವನ್ನು ಎಷ್ಟೋ ಸಲ ನಾವು ಒಂದು ತಾತ್ವಿಕ ಮಾರ್ಗ- ಫಿಲಸಾಫಿಕಲ್ ಸಿಸ್ಟಮ್-ವಾಗಿಯೂ ಒಪ್ಪಿಕೊಂಡಿರುವುದು. ಅಂಥದೊಂದು ತತ್ವವ್ಯವಸ್ಥೆ ಈ ಲೋಕವ್ಯಾಪಾರದ ಅನಿವಾರ್ಯತೆಯೆಂದು ಪರಿಗಣಿಸಿಕೊಂಡಿರುವುದು. ಆದ್ದರಿಂದ ಈಬಗೆಯ ವ್ಯವಸ್ಥೆಯ ಅಧಿಪತಿಗಳಾದ ವೀರರಲ್ಲಿ ಅಕಸ್ಮಾತ್ತಾಗಿ ಸ್ವಲ್ಪ ಅನುಕಂಪ ಕಂಡರೂ ಅದನ್ನು ನಾವು ಮೆಚ್ಚತೊಡಗುತ್ತೇವೆ, ಅದರ ಬಗ್ಗೆ ಪುಳಕಿತರಾಗತೊಡಗುತ್ತೇವೆ.

ಪ್ರಭುತ್ವ ತತ್ವದಲ್ಲಿ ಒಂದು ಸಮಸ್ಯೆಯೂ ಉಂಟು. ತಾನು ನಂಬಿದ್ದ ಚಕ್ರಾಧಿಪತ್ಯದ ಎದುರಾಳಿ ಗಾಂಧಿಯನ್ನು ‘ಅರೆಬೆತ್ತಲೆ ಫಕೀರ’ ಎಂದು ಲೇವಡಿ ಮಾಡಿದ ಚರ್ಚಿಲ್‌ನ ಉದಾಹರಣೆಯನ್ನೇ ನೋಡಿ. ಪ್ರಭುತ್ವ ತತ್ವದ ಸಮರ್ಥಕನಾಗಿದ್ದ ಚರ್ಚಿಲ್ ಗಾಂಧಿಯನ್ನು ಅಪಹಾಸ್ಯ ಮಾಡಿದ, ಸರಿ, ಆದರೆ ಆತನ ಇನ್ನೊಂದಡೆಯ ಎದುರಾಳಿ ಸ್ಟಾಲಿನ ಎದುರಾದಾಗ ಮಾತ್ರ ಆತ ದಿಗಿಲಿಗೆ ಒಳಗಾದ. ಯಾಕೆಂದರೆ ಸ್ಟಾಲಿನ್ ಚರ್ಚಿಲ್‌ಗಿಂತ ಬಲವಾಗಿ ಪ್ರಭುತ್ವತತ್ವನ್ನು ನೆಚ್ಚಿಕೊಂಡಂಥವನು. ಆಗ ಚರ್ಚಿಲ್‌ಗೆ ಸ್ಟಾಲಿನ್‌ಗೂ ಕೊಂಚ ಮಾನವೀಯತೆಯ ಸ್ಪರ್ಶಬೇಕು, ಅವನ ಕಾಠಿಣ್ಯ ಕೊಂಚ ಕರಗಬೇಕು ಎಂದೆನಿಸಿತು. ಚರ್ಚಿಲ್‌ನ ಈ ಧೋರಣೆಯನ್ನು ಕಂಡು ನಗೆಯಾಡಿದ ಸ್ಟಾಲಿನ್‌ಗಾದರೂ ತನ್ನ ಅತಿರೇಕವನ್ನೂ ಮೀರಿಸುವಂಥ ಹಿಟ್ಲರ್‌ನನ್ನು ಕಂಡುಹೆದರಿಕೆ ಕಾಡಿತು. ಯಾಕೆಂದರೆ ಹಿಟ್ಲರ್‌ನಂಥವನು, ಚರ್ಚಿಲ್, ಸ್ಟಾಲಿನ್‌ರಂಥ ಎಲ್ಲರಿಗಿಂತಲೂ ಮುಂದೆ ಸಾಗಿ, ಪ್ರಭುತ್ವವೆನ್ನುವುದನ್ನು ಜೀವನದ ಏಕೈಕ ದರ್ಶನ ಮಾಡಿದವನು. ಹೀಗೆ ಶಿಕ್ಷೆ-ಹಿಂಸೆ-ಪ್ರಭುತ್ವಗಳನ್ನು ತಮ್ಮ ತಮ್ಮ ಸ್ತರದಮಟ್ಟಿಗೆ ಆರಾಧಿಸುವಂಥವರು ತಮ್ಮದೆ ವಾದದ ಅತಿರೇಕದ ರೂಪಗಳನ್ನು ಕಂಡಾಗ ಭಯಭೀತರಾಗುವುದುಂಟು; ಅವುಗಳನ್ನು ಖಂಡಿಸುವುದುಂಟು. ಆದರೆ ಅದೇ ಹೊತ್ತಿಗೆ ತಾವೇ ಇನ್ನೊಬ್ಬರಿಗೆ ಅಂಥದೇ ಅತಿರೇಕಗಳಾಗಿ ಕಾಣುತ್ತಿರುತ್ತೇವೆ ಎಂಬ ವಾಸ್ತವದ ಅರಿವು ಮಾತ್ರ ಅವರಿಗಿರುವುದಿಲ್ಲ.

ಎರಡನೆಯ ವರ್ಗದ ಜನರನ್ನು ಶಾಸ್ತ್ರವಾದಿಗಳು ಎಂದು ಕರೆಯಬಹುದು. ನಮ್ಮಲ್ಲಿ ಬಹಳ ಜನ ಈ ವರ್ಗಕ್ಕೆ ಸೇರಿದವರು. ಜೀವನ ಜಗತ್ತು ಒಂದು ದೃಷ್ಟಿಯಿಂದ ತುಂಬ ಘನವಾದ್ದು, ಗಹನವಾದ್ದು ಹಾಗೂ ಸಂಕೀರ್ಣವಾದ್ದು; ಅದಕ್ಕೆ ಅದರದೆ ಆದ ತರ್ಕ ಸೂತ್ರಗಳುಂಟು, ಕಾರ್ಯವಿಧಾನಗಳುಂಟು; ಇಂಥ ಸೂತ್ರಗಳನ್ನೂ, ವಿಧಾನಗಳನ್ನೂ ಅಭ್ಯಾಸ ಮಾಡುತ್ತ ಮಾಡುತ್ತ ಅವುಗಳ ಒಂದು ಶಾಸ್ತ್ರವನ್ನು ನಾವು ನಿರ್ಮಿಸಿಕೊಳ್ಳಬೇಕು; ಅನಂತರ ಅಂಥ ಜ್ಞಾನದ ನಿಯಮಗಳಿಗನುಸಾರವಾಗಿ ಬದುಕುವುದನ್ನುಕಲಿಯಬೇಕು, ಆ ಮೂಲಕ ಸುಖ-ಶಾಂತಿಗಳನ್ನು ವರ್ಧಿಸಿಕೊಳ್ಳಬೇಕು; ಕೈಚೆಲ್ಲಿ ಎಲ್ಲವನ್ನೂ ವಿಧಿಗೆ ಬಿಟ್ಟಕೊಡುವ ಬದಲಾಗಿ, ಮಾನವ ಮತ್ತು ಮಾನವೇತರ ವ್ಯವಸ್ಥೆಗಳ ಸೂಕ್ಷ್ಮಗಳನ್ನು ಅರಿತುಕೊಳ್ಳುವಂತಹ ವೈಚಾರಿಕತೆಯೊಂದನ್ನು ನಾವು ಬೆಳೆಸಿಕೊಳ್ಳಬೇಕು; ಆಗ ಮಾತ್ರ ವಿಶ್ವಪರಿಸರದ ನಿಯಮಗಳನ್ನು ಗುರುತಿಸುವಂತಹ ಹಾಗೂ ಅವುಗಳಿಗೆ ತಕ್ಕಂತೆ ಬದುಕುವುದನ್ನು ಕಲಿಸುವಂತಹ, ಅವಶ್ಯವಿದ್ದಲ್ಲಿ ಇನ್ನೂ ಮುಂದೆ ಹೋಗಿ ಶಾಸ್ತ್ರಜ್ಞಾನವನ್ನು ಶಸ್ತ್ರವಾಗಿ ಬಳಸಿಕೊಂಡು ಜನರನ್ನು ಶಾಸ್ತ್ರದ ನಿಯಮಕ್ಕನುಸಾರವಾಗಿ ತಿದ್ದಬಲ್ಲಂತಹ ವ್ಯವಸ್ಥೆಯನ್ನು ನಾವು ರೂಪಿಸಿಕೊಳ್ಳಬಹುದು. ಇದು ಈ ವರ್ಗದ ಜನರ ನಿಲುವು. ಈ ರೀತಿ ಇವರು ಸಿಸ್ಟಮ್ ಅಂದರೆ ತರ್ಕಸಮ್ಮತ ವ್ಯವಸ್ಥೆಯನ್ನು ಒಪ್ಪುವವರು; ಕಟ್ಟಬೇಕೆಂದು ಬಯಸುವವರು. ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ರಾಜಕೀಯ ಶಾಸ್ತ್ರಜ್ಞರು, ತತ್ವಶಾಸ್ತ್ರಜ್ಞರು, ನ್ಯಾಯಶಾಸ್ತ್ರಜ್ಞರು ಇತ್ಯಾದಿಯಾಗಿ ಎಲ್ಲ ರೀತಿಯ ಶಾಸ್ತ್ರಜ್ಞರೂ ಈ ವರ್ಗಕ್ಕೆ ಸೇರಿದವರು. ಜೈವಿಕ, ಸಾಮಾಜಿಕ, ಆರ್ಥಿಕ, ಭೌತಿಕ ಇತ್ಯಾದಿ ರೀತಿಯ ಸಂರಚನೆಗಳನ್ನು ಅಧ್ಯಯನ ಹಾಗೂ ವ್ಯಾಖ್ಯಾನ ಮಾಡುವುದರ ಮುಖಾಂತರ ಜೀವನದ ವ್ಯವಸ್ಥೆ-ಉಪವ್ಯವಸ್ಥೆಗಳ ಹಿಂದಿರುವ ತರ್ಕ ವ್ಯಾಪಾರವನ್ನು ತಮ್ಮ ತೆಕ್ಕೆಗೆ ತಂದುಕೊಳ್ಳಲು ತವಕಿಸುವವರು ಅವರು. ನಮ್ಮಲ್ಲಿಯ ಅತ್ಯುತ್ತಮ ಮನಸ್ಸುಗಳಲ್ಲಿ ಹಲವು ಈ ರೀತಿಯಲ್ಲಿ ಶಾಸ್ತ್ರವನ್ನು ಸಂಬಂಧತೆಯನ್ನು ವ್ಯವಸ್ಥಾರೂಪಗಳನ್ನು ಕಟ್ಟುವಂತಹ ಮನಸ್ಸುಗಳು.

ಶಾಸ್ತ್ರವ್ಯವಸ್ಥಾವಾದಿ ಮನಸ್ಸು ಸಾಮಾನ್ಯವಾಗಿ ಪ್ರಭುತ್ವವಾದಿ ಮನಸ್ಸಿಗೆ ವಿರುದ್ಧವಾದುದು. ಕೇವಲ ಪ್ರಭುತ್ವದಲ್ಲಿ ನಂಬುವ ಮನಸ್ಸು ಬಹಳ ಸಲ ತರ್ಕಹೀನವೂ, ತರ್ಕವಿರೋಧಿಯೂ ಆಗಿರುತ್ತದೆ. ಅದು ಬಲಿಯನ್ನು ಬೇಡುತ್ತದೆ, ರಕ್ತಪಾತದಲ್ಲಿ ಸುಖಿಸುತ್ತದೆ. ಸ್ವಲ್ಪವಾದರೂ ಬಲಿ ಕೊಡದಿದ್ದರೆ ತನ್ನ ಸ್ವರೂಪ-ಶಕ್ತಿ ಜಗತ್ತಿಗೆ ಅರ್ಥವಾಗದು ಎಂದು ತಿಳಿದಿರುತ್ತದೆ. ಇದು ಪ್ರಾಚೀನ ವೇದ ಕಾಲದ ಕೆಲವು ಪದ್ಧತಿಗಳ ಮಟ್ಟಿಗೆ ಎಷ್ಟೊ ಇಂದಿನ ಅಮೆರಿಕದಂತಹ ಆಧುನಿಕ ಪ್ರಭುತ್ವಗಳ ಮಟ್ಟಿಗೂ ಅಷ್ಟೇ ನಿಜ. ತುಂಬ ಸುಖವಾಗಿ ಕಾಣುವ ಅಮೆರಿಕದ ಸದ್ಯದ ಅಧ್ಯಕ್ಷನ ಒಳಗಡೆಯೆ ಈ ರೀತಿಯಾಗಿ ಬಲಿಯನ್ನು ಬೇಡುವ ಹಾಗೂ ಸಮರ್ಥಿಸುವ ಧೋರಣೆ ಇರುತ್ತದೆ. ‘ಏನು ಮಾಡುವುದು? ನಾಲ್ಕೈದು ಹೆಣ ಬೀಳಲಿ. ಆಗಲೆ ಜನರಿಗೆ ಬುದ್ದಿ ಬರುವುದು, ಜಗತ್ತು ಸರಿದಾರಿ ಹಿಡಿಯುವುದು’ ಎನ್ನುವ ನಿಲುವು’ ‘ಬಲಿ ಬಿದ್ದ ಮೇಲೆ ಯಾರಾದರೂ ಖಂಡಿಸಿದರೆ ಆಮೇಲೆ ನೋಡಿಕೊಳ್ಳೋಣ; ನಮ್ಮದು ಸದುದ್ದೇಶವೆ ಆಗಿತ್ತು; ಆದರೆ ತಿಳಿಯದೆ ತಾಂತ್ರಿಕ ತಪ್ಪೊಂದನ್ನು ಮಾಡಿಬಿಟ್ಟೆವು; ಆ ಕಾರಣ ಹೀಗಾಯಿತು-ವೆರಿ ಸಾರಿ ಎಂದರಾಯಿತು’ ಎನ್ನುವ ನಿಲುವು ಇವರದು. ಇವರಿಗೆ ತೀರಾ ವಿರುದ್ಧವಾದ ನಿಲುವು ಶಾಸ್ತ್ರ ವ್ಯವಸ್ಥೆಯನ್ನು ನಂಬುವವರದು. ಅವರ ಪ್ರಕಾರ ಜಗತ್ತನ್ನು ಸರಿಯಾಗಿ ನಡೆಸುವಲ್ಲಿ ಹೀಗೆ ವೈಯಕ್ತಿಕ ಬಲಿಗಳನ್ನು ಕೇಳುವ ಅಗತ್ಯವೆ ಇಲ್ಲ; ಎಲ್ಲವೂ ಶಾಸ್ತ್ರಬದ್ಧವಾಗಿ, ಸುವ್ಯವಸ್ಥಿತವಾಗಿ ನಡೆದಲ್ಲಿ ಜಗತ್ತು ತಾನೇತಾನಾಗಿ ದುರಸ್ತಿಯಾಗುತ್ತದೆ.

ಇಂಥ ಜನರ ಅತಿದೊಡ್ಡ ಆಸೆಯೆಂದರೆ ಪರಿಪೂರ್ಣವಾದ ವ್ಯವಸ್ಥೆಯೊಂದನ್ನು ಪರಿಕಲ್ಪಿಸಿಕೊಳ್ಳುವುದು ಹಾಗೂ ಸೃಷ್ಟಿಸುವುದು. ಇಡೀ ವಿಶ್ವವನ್ನು ವ್ಯಾಖ್ಯಾನಿಸಬಲ್ಲಂತಹ, ನಿಯಂತ್ರಿಸಬಲ್ಲಂತಹ ಹಾಗೂ ಉತ್ತಮಪಡಿಸಬಲ್ಲಂತಹ ಆದರ್ಶಾತ್ಮಕ ವ್ಯವಸ್ಥೆಯೊಂದನ್ನು ನಿರ್ಮಿಸುವ ಇಂಥ ಹಂಬಲ ಹವಣಿಕೆಗಳು ಎಲ್ಲ ಶಾಸ್ತ್ರಜ್ಞರಲ್ಲೂ ಇರುವಂಥವೆ. ಆದರೆ ಇಲ್ಲಿಯೂ ಅತಿರೇಕದ ಅಪಾಯವಿಲ್ಲದಿಲ್ಲ. ಪರಿಪೂರ್ಣ ವ್ಯವಸ್ಥಾಪರಿಕಲ್ಪನೆಗಳ ವಿಷಯದಲ್ಲಿ ಇಂಥವರಲ್ಲಿ ಅಭಿಪ್ರಾಯ ಭೇದಗಳು ಉಂಟಾಗುವುದೂ ಹೌದು, ಅವರಲ್ಲಿ ಕೆಲವರು ತಮ್ಮ ತಮ್ಮ ಪರಿಕಲ್ಪನೆಗಳೇ ಶ್ರೇಷ್ಠವೆಂಬ ಶಠತ್ವವನ್ನು ತೋರುವುದೂ ಉಂಟು. ಇಂಥವರಿಗೆ ಪ್ರತಿರೋಧಿಗಳಾಗಿ ಅಥವಾ ಚಿಕಿತ್ಸಕರಾಗಿ ಬರುವವರು ಪೋಸ್ಟ್‌-ಮಾಡರ್ನಿಸ್ಟರು ಅಥವಾ ನವ್ಯೋತ್ತರವಾದಿಗಳು. ಯಾವುದೇ ವ್ಯವಸ್ಥಾಪರಿಕಲ್ಪನೆ ಎಷ್ಟೆ ವಿಶಾಲವ್ಯಾಪ್ತಿಯದಾದರೂ ವಿಶ್ವಸರ್ವಸ್ವವನ್ನೂ ಅದು ಹಿಡಿಯಲಾರದು; ನಮ್ಮ ಪ್ರಜ್ಞೆಯನ್ನು ಮೀರಿದ್ದೂ ಇರುತ್ತದೆ,ನಮ್ಮ ವ್ಯವಸ್ಥೆಗೆ ವಿರೋಧವಾದ್ದೂ ಸತ್ಯವಿರುತ್ತದೆ ಇತ್ಯಾದಿಯಾಗಿ ವಾದಿಸುವ ಚಿಂತಕರು ಈ ನವ್ಯೋತ್ತರರು.

ಇನ್ನು, ಮೂರನೆಯ ವರ್ಗದ ಜನರು ಉತ್ಸಾಹಿಗಳೂ, ಮುಗ್ಧರೂ ಆಗಿರುವವರು. ಅದೇ ಕಾರಣದಿಂದ ಇವರು ಬಹಳ ಸುಲಭವಾಗಿ ಹಾಸ್ಯಾಸ್ಪದ ವ್ಯಕ್ತಿಗಳಂತೆಯೂ ತೋರುತ್ತಾರೆ. ಆದರೆ ಸ್ವಾರಸ್ಯವೆಂದರೆ ಜಗತ್ತು-ಜೀವನಗಳನ್ನು ಬದಲು ಮಾಡಿದವರೆಲ್ಲ ಇಂಥವರೆ. ಅವರ ಶಿಶುಸಮಾನ ಮುಗ್ಧತೆ ನಮಗೆ ಪೆದ್ದುತನವಾಗಿಯೂ ಕಾಣಬಹುದು; ಏನಾದರೂ ಒಳ್ಳೆಯದು ಆಗಿಯೇ ತೀರುತ್ತದೆ ಎಂಬ ಅವರ ಪರಮೋತ್ಸಾಹದ ಭರವಸೆ ನಮಗೆ ಹಡೆತನವಾಗಿಯೂ ಕಾಣಬಹುದು. ಆದರೆ ಅಂಥವರಲ್ಲಿ ವಿಚಿತ್ರವಾದ ಅದಮ್ಯವಾದ ಶಕ್ತಿಯೂ ಇರುವುದುಂಟು. ತನಗೆ ಪರಿಚಿತನಾಗಿದ್ದ ಇಂಥ ಒಬ್ಬ ‘ಹಾಸ್ಯಸ್ಪದ’ ವ್ಯಕ್ತಿಯ ಬಗ್ಗೆ ಗಾಂಧೀಜಿಯೆ ಒಂದು ಕಡೆ ಬರೆದಿದ್ದಾರೆ. ‘ಆತ ಬಟ್ಟೆಯನ್ನು ವಿಚಿತ್ರ ರೀತಿಯಲ್ಲಿ ಹಾಕಿಕೊಂಡಿರುತ್ತಿದ್ದ. ಉದ್ದ ಗಡ್ಡ ಬಿಟ್ಟು ಕೊಂಡಿದ್ದ, ವಿಲಕ್ಷಣವಾಗಿದ್ದ. ಆಗ ಗಾಂಧೀಜಿ ಇನ್ನೂ ಗಾಂಧೀಜಿಯಾಗಿರಲಿಲ್ಲ. ಅವರು ಆ ವ್ಯಕ್ತಿಗೆ ‘ನೀನು ಹೀಗೆಲ್ಲ ಇದ್ದರೆ ತುಂಬ ಕಷ್ಟ’ ಎಂದು ಹೇಳಿದರೆ ಆತ – ‘ಇಲ್ಲ, ನಾನು ಹೀಗೆಯೆ ಇರುವವನು. ಯಾರು ಏನೇ ಅನ್ನಲಿ, ನಾನು ಹೀಗೆಯೆ ಜೀವಿಸುವವನು’ ಎಂದನಂತೆ. ಸರಳರಲ್ಲಿ ಅತಿಸರಳ ಗಾಂಧೀಗೆ ಆತನ ಸರಳತೆ, ಮುಗ್ಧತೆಗಳು ಕೊಂಚ ಅತಿಯಾಗಿ; ಹಾಸ್ಯಾಸ್ಪದವಾಗಿ ಕಂಡುಬಂದವು. ಆದರೆ ಗಾಂಧಿ ಉಳಿದವರಂತೆ ಆತನನ್ನು ಸಿನಿಕದೃಷ್ಟಿಯಿಂದಲೊ, ಅಪಹಾಸ್ಯದಿಂದಲೊ ನೋಡಲಿಲ್ಲ. ಅವನಲ್ಲೂ ಇದ್ದ ಒಂದು ಸತ್ಯಾಂಶವನ್ನು ಗ್ರಹಿಸಿದರು; ಅವನನ್ನು ಕುತೂಹಲದಿಂದ, ಪ್ರೀತಿಯಿಂದ ಕಂಡರು. ಗಾಂಧಿ ತನ್ನದೆ ಒಂದು ಅತಿರೂಪವಾದ ವಿನೋಬಾರನ್ನು ಕಂಡ ರೀತಿಯನ್ನಂತೂ ಈಗಷ್ಟೆ ನೆನಪಿಸಿಕೊಂಡಿದ್ದೇವೆ. ಹೀಗೆ ಅತಿಯನ್ನೂ ಕುತೂಹಲದಿಂದ ಮಾನವೀಯ ದೃಷ್ಟಿಯಿಂದ ನೋಡುವ ಶಕ್ತಿಯಿದ್ದುದರಿಂದಲೊ ಏನೋ ಮುಂದೆ ಗಾಂಧೀಜಿ ದರಿದ್ರನಾರಾಯಣನಿಗೆ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಳ್ಳಲು ಸಮರ್ಥರಾದರು.

ಜಗತ್ತಿನ ಮುಖ್ಯಪ್ರವಾಹದಿಂದ ಆಚೆಗೆ ಇರುವಂಥ ಈ ವರ್ಗದ ಜನ ಎಲ್ಲ ಕಾಲ-ದೇಶಗಳಲ್ಲಿಯೂ ಕಾಣಸಿಗುತ್ತಾರೆ. ಹತ್ತೊಂಬತ್ತನೆಯ ಶತಮಾನದ ಇಂಗ್ಲೆಂಡಿನಲ್ಲಿ ಇಂಥವರನ್ನು ‘ಕ್ಯ್ರಾಂಕ್ಸ್’ ಎಂದು ಕರೆಯುತ್ತಿದ್ದರು. ಬರ್ನಾರ್ಡ್‌ಷಾ ಸ್ವಲ್ಪಮಟ್ಟಿಗೆ ಅಂಥ ಒಬ್ಬ ಕ್ರ್ಯಾಂಕ್. ಆಗ ಅಲ್ಲಿ ಥಿಯೊಸಾಫಿಕಲ್ ಚಳವಳಿ, ಸಸ್ಯಾಹಾರಿ ಚಳವಳಿಗಳು ನಡೆಯುತ್ತಿದ್ದವು. ಬರ್ನಾರ್ಡ್‌ಷಾನಂಥವರು ಸಸ್ಯಾಹಾರವನ್ನು ಪ್ರತಿಪಾದಿಸಿ ಮಾತನಾಡುತ್ತಿದ್ದರು. ಜನರಿಗೆ ಅದು ಹಾಸ್ಯಾಸ್ಪದ ವಿಷಯವಾಗಿತ್ತು. ‘ಇವನು ಯಾರೊ ಒಬ್ಬ ಹುಚ್ಚ, ಬರಿ ಸಸ್ಯಾಹಾರವನ್ನು ಸೇವಿಸಬೇಕೆಂದು ವಾದಿಸುತ್ತಾನೆ. ನಾವು ಇಂಗ್ಲಿಷರು, ಜಗತ್ತನ್ನು ಆಳಲೆಂದೆ ಹುಟ್ಟಿದವರು. ನಮ್ಮ ರೋಸ್ಟ್ ಬೀಫನ್ನು ವರ್ಜಿಸಿ ಬರಿ ಸೊಪ್ಪುಸದೆ ತಿಂದರೆ ಹಾಗೆ ಆಳುವ ಶಕ್ತಿ-ಯೋಗ್ಯತೆಯಾದರೂ ಎಲ್ಲಿ ಉಳಿದೀತು?’ ಎಂದು ಅವರು ನಗುತ್ತಿದ್ದರು. (ಅಂಥ ಇಂಗ್ಲಿಷರ ಹಾಗೇ ಆಗಬೇಕೆಂದೆ ತಾನೆ ಗಾಂಧಿ ಕೂಡಾ ಮಾಂಸವನ್ನು ತಿನ್ನಲು, ಸೂಟುಬೂಟು ಹಾಕಲು ಪ್ರಯತ್ನಿಸಿದ್ದು?)

ಈ ‘ಕ್ರ್ಯಾಂಕ್’ಗಳನ್ನು ‘ನ್ಯೂ ಏಜರ್ಸ್‌’ – ನವಯುಗದವರು – ಎಂದೂ ಕರೆಯುವುದುಂಟು. ಹೊಸಕಾಲವೊಂದು ಬಂದೇಬರುತ್ತದೆ, ಎಂದು ನಂಬುವವರು ಇವರು. ನಮ್ಮ ಕಾಲದ ಹಿಪ್ಪಿಗಳೂ ಇಂಥವರೆ. ತಾರ್ಕಿಕತೆಯನ್ನು ವಿರೋಧಿಸಿ, ಪ್ರಭುತ್ವವಾದವನ್ನು, ವ್ಯವಸ್ಥಾವಾದವನ್ನೂ ಧಿಕ್ಕರಿಸಿ ಬದುಕಲು ಹವಣಿಸುವ ಈ ಜನ ಸಾಧ್ಯವಾದಷ್ಟು ಮಟ್ಟಿಗೆ ಸಮಾಜದಲ್ಲಿ ಅನ್ಯರಾಗಿಯೆ ಕಾಣಲು ಪ್ರಯತ್ನಿಸುತ್ತಾರೆ. ಉದ್ದ ಕೂದಲು ಬಿಡುತ್ತಾರೆ,ವಿಚಿತ್ರ ವೇಷಭೂಷಣ ತೊಡುತ್ತಾರೆ. ಮಾದಕದ್ರವ್ಯ ಸೇವಿಸುತ್ತಾರೆ; ಆ ಮೂಲಕ ಪ್ರಸ್ತುತ ಸಮಾಜದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ಪ್ರಯತ್ನಿಸುತ್ತಾರೆ. ಬಹುಮಟ್ಟಿಗೆ, ಮೊದಲನೆಯ ಎರಡು ವರ್ಗಗಳ ಜನ ಅತಿಪ್ರಬಲರಾದಾಗಲೇ ಮೂರನೆಯ ವರ್ಗದವರು ಹೀಗೆ ದಾರಿ ತಪ್ಪುವುದು; ಅಥವಾ ಕಣ್ಣಿಗೆ ಹೊಡೆಯುವಷ್ಟು ಅತಿಯಾದ ಅನ್ಯಮಾರ್ಗಿಗಳಾಗುವುದು. ಆದರೆ ಇಂಥವರ ಮಧ್ಯದಿಂದಲೆ ಕಾಣ್ಕೆ ಉಳ್ಳವರು ಉದ್ಭವಿಸುವುದು ಕೂಡ ಎಂಬುದು ಸೋಜಿಗದ ಸತ್ಯ. ಹತ್ತೊಂಬತ್ತನೆಯ ಶತಮಾನದ ಪ್ರಾರಂಬದಲ್ಲಿದ್ದ ಇಂಗ್ಲಿಷ್ ಕವಿ ವಿಲಿಯಮ್ ಬ್ಲೇಕ್ ಇಂಥ ಒಬ್ಬ ದಾರ್ಶನಿಕ. ಒಂದು ದೃಷ್ಟಿಯಲ್ಲಿ ಬ್ಲೇಕ್ ಎಷ್ಟು ವಿಚಿತ್ರ ವ್ಯಕ್ತಿಯೆಂದರೆ,  ಮನುಷ್ಯ ಬಟ್ಟೆ ಧರಿಸುವುದೇ ತಪ್ಪು, ಮುಗ್ಧನಗ್ನತೆಯಲ್ಲಿರಬೇಕು ಎಂದು ಭಾವಿಸಿದ ಆತ ಮನೆಯಲ್ಲಿ ತಾನೂ ಬೆತ್ತಲೆಯಾಗಿರುತ್ತಿದ್ದ, ತನ್ನ ಹೆಂಡತಿಗೂ ಹಾಗೆಯೇ ಇರಬೇಕು ಎಂದುಹೇಳಿದ್ದ. ಆ ಶತಮಾನದಲ್ಲೆ ಅತ್ಯಂತ ಮಹತ್ವದ ಸತ್ಯಗಳನ್ನು ಕಂಡ ಹಾಗೂ ಕಾಣಿಸಿದ ಏಕೈಕ ವ್ಯಕ್ತಿ ಬ್ಲೇಕ್. ಆತ ಕವಿಯಾದರೂ ಯಾವುದೆ ದೊಡ್ಡ ಸಮಾಜಶಾಸ್ತ್ರಜ್ಞನೂ, ಅರ್ಥಶಾಸ್ತ್ರಜ್ಞನೂ ಅಥವಾ ತತ್ವಜ್ಞಾನಿಯೂ ಪಡೆಯಲಾಗದಂಥ ದರ್ಶನಗಳನ್ನು ಪಡೆದ. ನಮ್ಮ ರಾಮಕೃಷ್ಣ ಪರಮಹಂಸರು ಇದೆ ಬಗೆಯವರು. ನನಗನಿಸುತ್ತದೆ- ಪರಮಹಂಸರೇನಾದರೂ ಇಂದು ಇಲ್ಲಿ-ಮಣಿಪಾಲದಲ್ಲಿ ಇದ್ದಿದ್ದರೆ ನಮ್ಮಲ್ಲಿ ಬಹಳಷ್ಟು ಮಂದಿ ತಕ್ಷಣ ಅವರನ್ನು ಹಿಡಿದುಕೊಂಡು ಹುಚ್ಚಾಸ್ಪತ್ರೆಗೆ ಸೇರಿಸಲು ಹೊರಡುತ್ತಿದ್ದೆವು. ಅವರು ಕಾಣುತ್ತಿದ್ದುದೂ ಹುಚ್ಚರಂತೆಯೆ. ಅವರು ಭಾವಸಮಾಧಿ, ಭಕ್ತಿಪರವಶೆಗಳನ್ನೆಲ್ಲ ಅವರ ಸಮಕಾಲೀನ ವೈಚಾರಿಕರು ಅನುಮಾನದಿಂದಲೆ ನೋಡುತ್ತಿದ್ದರು. ಅವರಲ್ಲಿ ಸಂದೇಹದಿಂದಲೇ ಬಂದು ಮುಂದೆ ಅವರಿಗೆ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಮಡ ವಿವೇಕಾನಂದರಿಂದ ಹಿಡಿದು ಬ್ರಹ್ಮ ಸಮಾಜದ ಕೇಶವಚಂದ್ರ ಸೇನ್‌ವರೆಗೂ ಇದು ನಿಜ. ನನಗೆ ಬಹಳ ಪ್ರಿಯವಾದ ಪರಮಹಂಸರ ಫೋಟೊ ಒಂದಿದೆ. ಅದರಲ್ಲಿ ಅವರುಇನ್ನೇನು ಸಮಾಧಿಸ್ಥಿತಿಗೆ ಹೋಗುವುದರಲ್ಲಿದ್ದಾರೆ, ಅವರು ಬೀಳದಂತೆ ಹಿಡಿದುಕೊಳ್ಳಲು ಅವರ ಸಂಬಂಧಿಯೊಬ್ಬ ಹಿಂದೆ ನಿಂತಿದ್ದಾನೆ, ಪಕ್ಕದಲ್ಲಿ ಕೇಶವಚಂದ್ರ ಸೇನ್ ಮತ್ತಿತರರು ಕೂತು ಅನುಮಾನದಿಂದ ವೀಕ್ಷಿಸುತ್ತಿದ್ದಾರೆ. ಈ ಚಿತ್ರ ಎರಡು ಯುಗಗಳು, ಮನೋಧರ್ಮಗಳು ಪರಸ್ಪರ ಸಂಧಿಸಿದ, ಎದುರಿಸಿದ ಒಂದು ಪ್ರತೀಕ ನನಗೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿದ್ದ ಬ್ಲೇಕ್, ಷಾ, ಪರಮಹಂಹ, ಗಾಂಧಿ, ಟಾಲ್‌ಸ್ಟಾಯ್‌ನಂತಹ ನವಯುಗದವರು ಒಂದು ಪಕ್ಷ ಇಲ್ಲದೆ ಹೋಗಿದ್ದಲ್ಲಿ ಇಂದಿನ ಈ ಜಗತ್ತು ಹೇಗಿರುತ್ತಿತ್ತು? ತುಂಬ ಕುತೂಹಲದ ಪ್ರಶ್ನೆಯಿದು. ನನಗನಿಸುವಂತೆ, ಆ ಪಕ್ಷದಲ್ಲಿ, ನಾವು ಇಂದು ಸಾಧಿಸಿರುವಂತಹ ಸ್ವಲ್ಪವಾದರೂ ಮಾನವೀಯ ಎನ್ನುವಂತಹ ವಿಷಯಗಳು ಬಹುಶಃ ಸಾಧ್ಯವೆ ಆಗುತ್ತಿರಲಿಲ್ಲ. ಇದರ ಬಗ್ಗೆ ಬೇರೆ ಬೇರೆ ವರ್ಗದ ಜನರಿಗೆ ಬೇರೆ ಬೇರೆ ಅಭಿಪ್ರಾಯಗಳಿರುವುದು ಸಹಜ. ಆದರೆ ಒಂದು ನಿದರ್ಶನವನ್ನು ನೋಡಿ; ವಸಾಹತುಶಾಹಿ ಇಂಗ್ಲೆಂಡಿನಲ್ಲಿ ಮಿಲ್, ಬೆಂಥಾಮ್ ಮುಂತಾದ ದೊಡ್ಡ ಚಿಂತಕರಿದ್ದರು. ಮಿಲ್ ‘ಲಿಬರ್ಟಿ’ ಎಂಬ ಪುಸ್ತಕವನ್ನು ಬರೆದವನು, ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವನು. ಇದೇ ಮಿಲ್ ಮಹಾಶಯ ಭಾರತದ ಬಗ್ಗೆ ಮಾತನಾಡುವಾಗ ‘ಈ ಭಾರತೀಯರನ್ನು ನಾವು ಆಳುವುದೆ ಸರಿ. ಅವರು ಬಡವರು, ದಡ್ಡರು, ಹೊಸ ಸಂವೇದನೆ ಇಲ್ಲದವರು. ನಮ್ಮ ಸ್ಪರ್ಶದಿಂದ ಮಾತ್ರ ಅವರು ಉದ್ಧಾರವಾಗಬಲ್ಲರು’ ಎಂದು ಹೇಳಿದ. ಈ ಮಿಲ್, ಬೆಂಥಾಮ್, ಮಾರ್ಕ್ಸ್‌ನಂಥವರಿಗೆ ನಮ್ಮ ಭಾರತದಲ್ಲೂ ಒಂದು ದೊಡ್ಡ ಜ್ಞಾನ-ವಿಜ್ಞಾನ ಪರಂಪರೆಯಿತ್ತು ಎನ್ನುವ ಸರಳ ಸಂಗತಿಯೆ ತಿಳಿದಿರಲಿಲ್ಲ. ವ್ಯವಸ್ಥಾವಾದಿಗಳಾದ ಇವರೆಲ್ಲ ತಾವು ಭಾರತವನ್ನು ಇನ್ನೊಂದಿಷ್ಟು ವರ್ಷ ಆಶುವುದು ಭಾರತಕ್ಕೆ ಒಳ್ಳೆಯದು ಎಂದೇ ಭಾವಿಸಿದ್ದರು. ನಮ್ಮಲ್ಲೂಹಲವು ಜನ-ರಾಜಾರಾಮಮೋಹನ ರಾಯ್ ಅಂಥವರು-ಹಾಗೆಯೆ ಭಾವಿಸಿದ್ದರು. ಶಾಸ್ತ್ರಸಮ್ಮತ ವ್ಯವಸ್ಥಾವಾದಿಗಳಲ್ಲೂ ಹಾಗೆ ಪ್ರಭುತ್ವವಾದಿಗಳಲ್ಲೂ ಇರುವ ಒಂದುದೊಡ್ಡ ದೋಷ ಇದು. ಪರರು ಪ್ರಗತಿ ಸಾಧಿಸುವುದು ತಮ್ಮ ಪ್ರಭಾವ ಅಥವಾ ನಿಯಂತ್ರಣದ ಮೂಲಕವೆ ಎನ್ನುವವರು ಇವರು. ಬ್ಲೇಕ್, ಪರಮಹಂಸ, ಗಾಂಧಿ, ಟಾಲ್‌ಸ್ಟಾಯ್‌ರನ್ನೆಲ್ಲ ಹುಚ್ಚರೆಂದೂ ಹಾಸ್ಯಾಸ್ಪದರೆಂದೂ ಪರಿಗಣಿಸುವವರು ಇವರು.

ಆದರೆ ಇಂದು ನಮಗೆ ನಮ್ಮ ಇಡೀ ಆಧುನಿಕ ಚರಿತ್ರೆಯ ಇನ್ನೊಂದು ಮುಖ ಸ್ಪಷ್ಟವಾಗಿ ಕಾಣಿಸುತ್ತದೆ. ಅಂದು ಹಾಸ್ಯಾಸ್ಪದವೆಂದು ಕಂಡ ಆಲೋಚನೆಗಳು ಮೊಳೆಯದಿದ್ದಲ್ಲಿ, ಬೆಳೆಯದಿದ್ದಲ್ಲಿ ಇಂದು ನಿರ್ವಸಾಹತೀಕರಣ (ಡಿಕಲೊನೈಸೇಷನ್) ದಂಥ ಮಹತ್ವದ ಪ್ರಕ್ರಿಯೆ ಸಂಭವಿಸುವುದು ಸಾಧ್ಯವೆ ಇರುತ್ತಿರಲಿಲ್ಲ. ಇದನ್ನು ಇನ್ನು ಕೆಲವು ಉದಾಹರಣೆಗಳೊಂದಿಗೆ ಸ್ಪಷ್ಟ ಮಾಡಿಕೊಡಲು ಪ್ರಯತ್ನಿಸುತ್ತೇನೆ. ನಮ್ಮಕಾಲದ ಅತಿ ದೊಡ್ಡ ಕ್ರಾಂತಿ ಯಾವುದೆಂದು ಕೇಳದಿರೆ ಕೆಲವರು ಅದು ರಷಿಯನ್ ಕ್ರಾಂತಿಯೆಂದು, ಇನ್ನು ಕೆಲವರು ಚೀನಿ ಕ್ರಾಂತಿ ಎಂದು ಹೇಳುವುದುಂಟು. ಆದರೆ ಈ ಎರಡೂ ಪ್ರಸಿದ್ಧ ಕ್ರಾಂತಿಗಳ ವಿರೋಧಾಭಾಸಗಳನ್ನು ದುರಂತವ್ಯಂಗ್ಯವನ್ನೂ ಗಮನಿಸಿ. ರಷಿಯನ್ ಕ್ರಾಂತಿ ಒಂದೆಡೆ ಝೂರ್‌ನಂತಹ ಮಹಾಕ್ರೂರಿಯನ್ನು ಪದಚ್ಯುತಗೊಳಿಸಿತೇನೋ ಸರಿ. ಆದರೆ ಅನತಿ ಕಾಲದಲ್ಲೆ ಅದು ಅಷ್ಟೇ ಕ್ರೂರಿಯಾಗ ಸ್ಟಾಲಿನ್‌ನನ್ನು ಪ್ರತಿಷ್ಠಾಪಿಸಿತು. ಒಂದೆಡೆ ರಾಜತ್ವವನ್ನು ನಾಶಮಾಡಿದ ಆ ಕ್ರಾಂತಿ ಇನ್ನೊಂದಡೆ ಸರ್ವಾಧಿಕಾರವನ್ನು ಸ್ಥಾಪಿಸಿತು. ಅಂದರೆ ಈ ಕ್ರಾಂಥಿಯಿಂದ ಜೀವನಕ್ರಮದಲ್ಲಿ ಆದ ಬದಲಾವಣೆ ಅತ್ಯಲ್ಪವಾದುದು, ಬರಿ  ಹೊರತೋರಿಕೆಯದು. ಹಾಗಾಗಿ ಲೆನಿನ್ ಮಾಡಿದ ಈ ಕ್ರಾಂತಿ ಅಂತಿಮವಾಗಿ ಅರ್ಥಹೀನವಾದುದೇ ಹಭದು. ತೀರಾ ಇತ್ತೀಚೆಗೆ ಅಲ್ಲಿ ನಡೆದ ವಿದ್ಯಮಾನಗಳಿಂದ ಅಲ್ಲಿದ್ದ ಸಮಾನತೆ-ಸಮಾಜವಾದಗಳ ವ್ಯವಸ್ಥೆ ಎಷ್ಟರಮಟ್ಟಿಗೆ ಹೇರಲ್ಪಟ್ಟಿದ್ದು, ಅದರ ಹಿಂದಿದ್ದ ಕರಾಳ ವಾಸ್ತವ ಎಂಥದು ಎಂಬುದು ಅತ್ಯಂತ ಸಂದೇಹಾತೀತವಾಗಿ ತಿಳಿದುಬಂದಿತು; ಅಲ್ಲಿ ಲೆನಿನ್‌ನಿಜವಾಗಿಯೂ ಯಾವ ಕ್ರಾಂತಿಯನ್ನು ಸಾಧಿಸಲಿಲ್ಲ ಎಂಬುದು ಸ್ಪಷ್ಟವಾಯಿತು. ಇನ್ನು ಚೀನಿ ಕ್ರಾಂತಿ, ಒಂದು ದೃಷ್ಟಿಯಿಂದ ಒಂದು ರೀತಿಯ ಕ್ರಾಂತಿಯೇನೋ ಹೌದು. ಸ್ವತಂತ್ರ ರಾಷ್ಟ್ರವಾಗಿದ್ದ ಹಾಗೂ ಲೀಗ್ ಆಫ್ ನೇಷನ್ಸ್‌ನ ಸದಸ್ಯನಾಗಿದ್ದ ಚೀನಾದಲ್ಲಿ ಅಧಿಕಾರ ಬದಲಾವಣೆಗೆಂದು ಒಂದು ಹೋರಾಟವಾಯಿತು. ಅಲ್ಲಿ ಮಾವೋತ್ಸೆ ತುಂಗ್‌ನ ನಾಯಕತ್ವದಲ್ಲಿ ಜನಸಮುದಾಯದ ಒಂದು ‘ಲಾಂಗ್‌ಮಾರ್ಚ್‌’ನಡೆಯಿತು ಸರಿ. ಆದರೆ ಆ ‘ಲಾಂಗ್ ಮಾರ್ಚ್‌’ತನ್ನ ಅಂತ್ಯವನ್ನು ಕಂಡದ್ದು ಕೊನೆಗೂ ಕೋಕೊ ಕೋಲಾ ಬಾಟಲಿಯಲ್ಲಿ.

ನನ್ನ ಮಟ್ಟಿಗೆ, ನಿಜವಾದ ಕ್ರಾಂತಿ, ವಸಾಹತುಗಳನ್ನೂ, ವಸಾಹತುಶಾಹಿಯನ್ನೂ ಒಟ್ಟಿಗೆಯ ಬಿಡುಗಡೆ ಮಾಡುವಂಥ ಕ್ರಾಂತಿ ಆದದ್ದು ಇಲ್ಲಿ, ಇಂಡಿಯಾದಲ್ಲಿ. ರಷಿಯಾ, ಚೀನಾಗಳೊಂದಿಗೆ ಹೋಲಿಸಿ ನೋಡಿದರೆ ಇಂಡಿಯಾದ ಕ್ರಾಂತಿಯ ವೈಶಿಷ್ಟ್ಯ ತಿಳಿಯುತ್ತದೆ. ಕ್ರಾಂತಿಪೂರ್ವ ರಷಿಯಾ ಪ್ರಬಲ ಸಾಮ್ರಾಜ್ಯವಾಗಿತ್ತು. ಯುರೋಪಿನ ಜೊತೆ ದೀರ್ಘಕಾಲದ ಸಂಬಂಧ ಹೊಂದಿತ್ತು. ಚೀನಾ ಸ್ವತಂತ್ರ ರಾಷ್ಟ್ರವಾಗಿತ್ತು. ಅಂತಾರಾಷ್ಟ್ರೀಯ ಶಕ್ತಿಯಾಗಿತ್ತು. ಇಂಡಿಯಾ ಇದಾವುದೂ ಆಗಿರಲಿಲ್ಲ. ರಷಿಯಾ ಮತ್ತು ಚೀನಾಗಳಲ್ಲಾದ ಬದಲಾವಣೆ ಒಂದು ಸಾಮಾಜಿಕ ಬದಲಾವಣೆ ಅಷ್ಟೆ. ಅದೇ ಇಂಡಿಯಾದಲ್ಲಾದ್ದು ಮಾತ್ರ ಆಮೂಲಾಗ್ರವಾದ ಸರ್ವಾಂಗೀಯವಾದ ಬದಲಾವಣೆ.

ಇಂಡಿಯಾದ ಈ ಅನ್ಯಾದೃಶ ಸಾಧನೆಯ ಹಿಂದೆ ಗಾಂಧೀಜಿಯಂಥವರ ಚಿಂತನೆ – ಪ್ರೇರಣೆಗಳಿವೆ; ಸತ್ಯಾಗ್ರಹದ ಕಲ್ಪನೆಯಿದೆ; ಸಾಮಾನ್ಯರನ್ನು, ದಲಿತರನ್ನು ದುರ್ಬಲರನ್ನು, ಆತ್ಮಗೌರವರ ಸೂತ್ರದಿಂದ ಸಂಘಟಿಸಿ, ಪ್ರಭುತ್ವದ ಹಾಗೂ ವ್ವಯಸ್ಥೆಯ ದೈತ್ಯಶಕ್ತಿಗಳನ್ನು ಮಣಿಸಬಲ್ಲ ಧೀಮಂತಿಕೆಯಿದೆ. ಇದನ್ನು ಸ್ವಲ್ಪವಾದರೂ ಹೋಲುವಂತಹ ಬೇರೆ ಕ್ರಾಂತಿಗಳೆಂದರೆ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾನ ನಾಯಕತ್ವದಲ್ಲಿ ಕರಿಯ ಜನ ಬಿಳಿಯರ ದಬ್ಬಾಳಿಕೆಯಿಂದ ವಿಮೋಚನೆ ಪಡೆದದ್ದು, ಬರ್ಲಿನ್ ಗೋಡೆ ಒಡೆದುಬಿದ್ದು ಜರ್ಮನಿ ಒಂದಾದುದು, ಹಾಗೂ ಗೊರ್ಬಚೆವ್‌ನ ನೇತೃತ್ವದಲ್ಲಿ ಆಧುನಿಕ ರಷಿಯಾ ಕಮ್ಯುನಿಸ್ಟರ ಬಿಗಿಮುಷ್ಠಿಯಿಂದ ಬಿಡುಗಡೆ ಪಡೆದುಕೊಂಡಿದ್ದು. ಇವೆಲ್ಲದರ ಹಿಂದೆ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ, ಇರುವ ಪ್ರೇರಣೆ ಪ್ರಭಾವಗಳು ಬ್ಲೇಕ್, ಗಾಂಧಿ, ಟಾಲ್‌ಸ್ಟಾಯ್‌ರಂಥವರದೆ ಹೊರತು ಬೆಂಥಾಮ್, ಮಿಲ್, ಲೆನಿನ್, ಮಾವೊರಂಥ ವ್ಯವಸ್ಥಾವಾದಿಗಳು ಅಥವಾ ಪ್ರಭುತ್ವವಾದಿಗಳದಲ್ಲ.

ಅಂದಿನ ನವಯುಗದವರು ಇಂದೂ ಇದ್ದಾರೆಯೆ ಎಂದರೆ ಇದ್ದಾರೆ. ಆದರೆ ಅಂದಿಗಿಂತಲೂ ಇಂದು ಹೆಚ್ಚು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಯಾಕೆಂದರೆ ಜಾಗತಿಕ ಸನ್ನಿವೇಶ ಅಷ್ಟು ಬದಲಾಗಿಹೋಗಿದೆ, ಸಂಕೀರ್ಣವಾಗಿ ಬೆಳೆದುನಿಂತಿದೆ, ಅರ್ಥೈಸಿಕೊಳ್ಳಲು ಸಾಧ್ಯವೆ ಇಲ್ಲವೆನ್ನುವಷ್ಟು ಗೋಜಲುಗೋಜಲವಾಗಿದೆ. ಇಂಥ ಹಿನ್ನೆಲೆಯಲ್ಲಿ ಈ ಮೂರನೆ ವರ್ಗದವರು ಹೀಗೆ ಹಾಸ್ಯಾಸ್ಪದರಾಗಿ ಕಂಡರೂ ಅದೆ ಕಾರಣಕ್ಕೆ ಅವರು ಹೆಚ್ಚು ಪ್ರಸ್ತುತರೂ ಹೌದು ಎನಿಸುತ್ತದೆ. ಆಧುನಿಕ ಜಗತ್ತಿನ ಕೆಲವು ಬಿಡಿಬಿಡಿ ಸಂಗತಿಗಳನ್ನೆ ನೋಡಿ. ಈ ಜಗತ್ತು ಒಂದು ಕಡೆ ಅದೆ ಹಳೆಯ ಮೂರ್ತ ಪ್ರಭುತ್ವವಾದದ ಹಾಗೂ ಶಾಸ್ತ್ರೀಯ ವ್ಯವಸ್ಥಾವಾದದ ಅನೇಕ ರೂಪಾಂತರಿತ ರಚನೆಗಳನ್ನು ಪೋಷಿಸುತ್ತಿರುವಂಥದು; ಹಾಗೆಯೆ ಇನ್ನೊಂದು ಕಡೆ, ಅವುಗಳದೆ ಆಧುನಿಕ ಹಾಗೂ ಅಮೂರ್ತ ಅವತಾರಗಳನ್ನೂ ಹುಟ್ಟುಹಾಕುತ್ತಿರುವಂಥದು. ಮೂರ್ತುರೂಪಗಳನ್ನು ನೇರವಾಗಿ ಎದುರಿಸಲು ಸಾಧ್ಯ; ಆದರೆ ಅಮೂರ್ತರೂಪಗಳ ಮಟ್ಟಿಗೆ ಅದು ಅಷ್ಟು ಸುಲಭವಲ್ಲ. ಒಂದು ಕಡೆಗೆ, ಕಮ್ಯೂನಿಸ್ಟ್ ಸೋವಿಯತ್ ಒಕ್ಕೂಟ ಕುಸಿದುಬಿದ್ದು ಇಂದು ಜಗತ್ತಿಗೆಲ್ಲ ಅಮೆರಿಕವೊಂದೆ ಸಾರ್ವಭೌಮ ರಾಷ್ಟ್ರವಾಗಿದೆ. ಇನ್ನೊಂದು ಕಡೆಗೆ, ಇದೆ ಅಮೆರಿಕದಿಂದ ಪ್ರೇರಿತವಾದ ಪ್ರಕ್ರಿಯೆ ನಮ್ಮ ಮೇಲೆ ಸಂಮೋಹದ ಬಲೆಯನ್ನು ಬೀಸುತ್ತಿದೆ. ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದೆ ತನ್ನ ಕರ್ತವ್ಯವೆಂದು ಘೋಷಿಸಿಕೊಂಡು ಅಮೆರಿಕ ವಿನಾಕಾರಣ ಯುದ್ಧಗಳನ್ನು ಹೂಡುತ್ತದೆ, ಪ್ರೇರೇಪಿಸುತ್ತದೆ. ಮೊದಲ ಮಕ್ಕಳನ್ನು ಚಿವುಟಿ, ಅಳಿಸಿ, ಕೂಗಿಸಿ ಅನಂತರ ತಾನೇ ಅವರನ್ನು ತೂಗಿ ಮಲಗಿಸುವ ಗಾದೆಯ ಜೀವಂತ ನಿದರ್ಶನವೆಂಬಂತೆ ಪಾಕಿಸ್ತಾನಕ್ಕೂ, ಇಂಡಿಯಾಕ್ಕೂ ಒಟ್ಟೊಟ್ಟಿಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತದೆ, ಅವುಗಳ ನಡುವೆ ವೈಷಮ್ಯವನ್ನು ಹೆಚ್ಚಿಸುತ್ತದೆ, ಅದರ ಜೊತೆಗೇ ಶಾಂತಿಯ ಮಂತ್ರವನ್ನೂ ಮಣಮಣಿಸುತ್ತದೆ. ಇಂದು ಜಗತ್ತಿನ ಮೂಲೆ ಮೂಲೆಯಲ್ಲಿ ಬಳಕೆಯಾಗುತ್ತಿರುವ ಶಸ್ತ್ರಾಸ್ತ್ರಗಳೆಲ್ಲ ಬಹುಮಟ್ಟಿಗೆ ಅಮೆರಿಕದಿಂದಲೆ ಬಂದವು. ಇಂದು ಕಾಶ್ಮೀರದಲ್ಲಿ ಅರಾಜಕತೆಯನ್ನು ಹಬ್ಬಿಸಿರುವ, ನಾಲ್ಕು ಮಂದಿ ವಿದೇಶಿಯರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿರುವ ಭಯೋತ್ಪಾದಕರು ಉಪಯೋಗಿಸುತ್ತಿರುವ ಶಸ್ತ್ರಾಸ್ತ್ರಗಳೂ ಮೂಲತಃ ಅಮೆರಿಕದವರೆ; ರಷಿಯನ್‌ರ ವಿರುದ್ಧ ಹೋರಾಡಲೆಂದು ಅಫ್ಘನ್ನರಿಗೆ ಅವರು ಕೊಟ್ಟಂಥವು. ಈ ರೀತಿ ಮೂಲ ಕಾರಣಕರ್ತರನ್ನು ಮೀರಿ ಅಲ್ಲಲ್ಲಿ ಅವರನ್ನೂ ಆವರಿಸಿಕೊಂಡು ಹರಡುತ್ತಾ ಹೋಗುವ ಈ ಆಧುನಿಕ ವಿನಾಶವ್ಯೂಹದ ಸ್ವರೂಪವೆ ದಿಗಿಲುಹುಟ್ಟಿಸುವಂಥದು. ಇಂಥ ಸನ್ನಿವೇಶದಲ್ಲಿ ದೇವರನ್ನು ಪ್ರಾರ್ಥಿಸುವುದೊಂದೆ, ಅಮೆರಿಕದ ಅಧ್ಯಕ್ಷನಿಗೂ, ಸಂಸತ್‌ಸದಸ್ಯರಿಗೂ ಅಂಥ ಇತರರಿಗೂ ಒಳ್ಳೆಯ ಬುದ್ಧಿ ಕೊಡು ಎಂದು ಅವನನ್ನು ಬೇಡುವುದೊಂದೆ ಇಂದು ಉಳಿದಿರುವ ದಾರಿಯೆಂದು ನಮಗನಿಸಿಬಿಡುತ್ತದೆ.