ಆಧುನಿಕ ಚರಿತ್ರೆಯ ಮತ್ತೊಂದು ಅತಿದೊಡ್ಡ ಅಪಾಯವೆಂದರೆ ನವವಸಾಹತುಶಾಹಿಯ ಬೆಳವಣಿಗೆ. ಇದನ್ನು ಗಾಂಧಿಯಂಥವರು ತುಂಬ ಮುಂಚಿತವಾಗಿಯೆ ಗ್ರಹಿಸಿದ್ದರು, ಅದರ ಬಗ್ಗೆ ತುಂಬ ವಿವರವಾಗಿ ಬರೆದಿದ್ದರು ಕೂಡ. ಆದರೆ ಗಾಂಧೀಜಿಯ ಶಿಷ್ಯನಂತಿದ್ದ, ಅವರನ್ನು ಬಹು ಗೌರವಿಸುತ್ತಿದ್ದ ನೆಹರೂಗೆ ಈ ವಿಷಯದಲ್ಲಿ ಮಾತ್ರ ಗಾಂಧಿಯ ನಿಲುವುಗಳು ಅಸಮರ್ಥನೀಯವಾಗಿ ಅವ್ಯವಹಾರಿಕವಾಗಿ ಕಾಣುತ್ತಿದ್ದವು. ಗಾಂಧೀಜಿಯ ನಿಲುವುಗಳು ಅಸಮರ್ಥನೀಯವಾಗಿ ಅವ್ಯವಹಾರಿಕವಾದಿ ಕಾಣುತ್ತಿದ್ದವು. ಗಾಂಧೀಜಿಯವರ ಖಾಸಗಿ ಜೀವನದ ಕೆಲವು ತೀರ್ಮಾನಗಳನ್ನೂ ಕೂಡ ನೆಹರೂ ಹೀಗೆಯೆ ಹಾಸ್ಯಾಸ್ಪದವೆಂದು ಪರಿಗಣಿಸಿದ್ದರು. (ಈ ಯುಗದ ಇನ್ನೊಬ್ಬ ಮಹಾವ್ಯಕ್ತಿ ಟಾಲ್‌ಸ್ಟಾಯ್‌ಸಹ ಅವನ ಹೆಂಡತಿಯ ಕಣ್ಣಲ್ಲಿ ಇದೆ ರೀತಿ ಹಾಸ್ಯಾಸ್ಪದ ಮನುಷ್ಯನಾಗಿದ್ದ. ಆತ ತನ್ನ ಜೀವನದ ಒಂದು ಘಟ್ಟದಲ್ಲಿ ತನ್ನ ಆಸ್ತಿಯನ್ನೆಲ್ಲ ಬಡರೈತಾಪಿಗಳಿಗೆ ಹಂಚಿಕೊಡಲೆಂದು ಹೊರಟ. ಗಾಂಧಿಯ ಹಾಗೆಯೆ ಆತ ಬ್ರಹ್ಮಚರ್ಯವನ್ನು ಪರಿಪಾಲಿಸಲು ಪ್ರಯತ್ನಿಸಿದ. ಇವೆಲ್ಲ ಇವನ ಹೆಂಡತಿಗೆ ಮತಿಭ್ರಮಣೆಯ ಸಂಗತಿಗಳಾಗಿ ತೋರಿಬಂದವು. ‘ನೀವು ಲೇಖಕ  ಮಾತ್ರ. ಈ ರೀತಿಯ ಅಪ್ರಾಪಂಚಿಕ ಹುಚ್ಚುಗಳನ್ನೆಲ್ಲ ಹಚ್ಚಿಕೊಳ್ಳಬಾರದು’ ಎಂದು ಆಕೆ ಅವನಿಗೆ ಹೇಳುತ್ತಿದ್ದಳು. ಆತ ಜಗತ್ತಿನೆದುರು ದೊಡ್ಡ ಸಂತನಂತೆ ಕಾಣಿಸಿಕೊಳ್ಳುತ್ತಿದ್ದಾಗ ಆಕೆ ಬೇಕೆಂದೆ, ಆತನನ್ನು ಸಾಮಾನ್ಯ ಸಣ್ಣ ಮನುಷ್ಯನನ್ನಾಗಿ ಮಾಡಿತೋರಬೇಕೆಂದೆ ಗರ್ಭಧರಿಸುತ್ತಿದ್ದಳು. ಕೊನೆಗೆ ಟಾಲ್‌ಸ್ಟಾಯ್, ರೈತನ ಪೋಷಾಕು ತೊಟ್ಟು, ಚೀಟಿಯೊಂದನ್ನು ಬರೆದಿಟ್ಟು, ಕೈಯಲ್ಲೊಂದು ಕೋಲು ಹಿಡಿದು ಮನೆಬಿಟ್ಟು ನಡೆದ. ಎಲ್ಲೊ ಒಂದೆಡೆ ರೈಲ್ವೆ ನಿಲ್ದಾಣದಲ್ಲಿ ಕಾಯಿಲೆ ಬಿದ್ದು  ಬಳಲಿ ಕೊನೆಯುಸಿರೆಳೆದ. ಆತನ ಹೆಂಡತಿಯನ್ನು ಟೀಕಿಸಲು ನಾನಿದನ್ನು ಹೇಳುತ್ತಿಲ್ಲ. ಹಾಗೆ ನೋಡಿದರೆ ಆಕೆಯೂ ದೊಡ್ಡ ಛಲಗಾರ್ತಿ ಹೆಣ್ಣು. ಟಾಲ್‌ಸ್ಟಾಯ್ ಅಂಥ ಶ್ರೇಷ್ಠ ಕೃತಿಗಳನ್ನು ರಚಿಸಿದ್ದರ ಹಿಂದೆ ಆಕೆಯ ಪಾತ್ರವೂ ಉಂಟು) ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ‘ನನ್ನ ಹಿಂದ್ ಸ್ವರಾಜ್ ಕೃತಿಯನ್ನು ಓದಿದ್ದೀಯಾ?’ ಎಂದು ಗಾಂಧಿ ಕೇಳಿದಾಗ ನೆಹರೂ ಓದಿದ್ದೇನೆ. ಆದರೆ ಅದನ್ನೆಲ್ಲ ಒಪ್ಪಿಕೊಳ್ಳಲಾಗುವುದಿಲ್ಲ. ರಾಷ್ಟ್ರವ್ಯವಸ್ಥೆಯೆನ್ನುವುದು ನೀವು ಹೇಳುವ ಹಾಗಿರಲು ಸಾಧ್ಯವಿಲ್ಲ ಎಂದುತ್ತರಿಸಿದರು. ಗಾಂಧಿಜಿಗೆ ತುಮಬ ಬೇಸರವಾಯಿತು.

ಆದರೆ ಗಾಂಧೀಜಿ ಹೇಳುವುದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶರೀರಕ್ರಮ, ಆಸ್ವಾದ, ಸರ್ವತ್ರಭಯವರ್ಜನ, ಸರ್ವಧರ್ಮಸಮಾನತ್ವ, ಸ್ವದೇಶಿ, ಸ್ಪರ್ಶಭಾವನಾ-ಈ ಹನ್ನೊಂದು ಅವರು ಯಾವತ್ತೂ ಪ್ರತಿಪಾದಿಸುತ್ತಿದ್ದ ಸೂತ್ರಗಳು. ಇವುಗಳ ವಿಷಯದಲ್ಲಿ ನಾನಂತೂ ಯಾವಾಗಲೂ ಕೆಲವು ತೊಡಕುಗಳನ್ನು, ಅನುಮಾನಗಳನ್ನು ಎದುರಿಸುತ್ತ ಬಂದಿದ್ದೇನೆ. ಇವುಗಳಲ್ಲಿ ಕೆಲವಂತೂ ಪಾಲಿಸಲು ಕಡುಕಷ್ಟವಾದ ನಿಯಮಗಳು. ಒಂದು ಉದಾಹರಣೆಯನ್ನು ಕೊಡುವುದಾದರೆ-ಗಾಂಧಿ ಸಂಸಾರಸ್ಥರಾಗಿದ್ದವರು, ಕಾಮದ ಆಕರ್ಷಣೆಯನ್ನು ಕಂಡಿದ್ದವರು, ಹಲವು ಮಕ್ಕಳನ್ನು ಪಡೆದಿದ್ದವರು. ಆದರೆ ಕೊನೆಗೆ ಅವರು ಮನುಷ್ಯನ ಕಾಮ ಒಂದು ತಪ್ಪು ಎನ್ನುವ ನಿಲುವು ತಾಳಿದರು. ಈ ನಿಲುವನ್ನು ಒಪ್ಪುವುದು ತುಂಬ ಕಷ್ಟವೇ ಸರಿ. ಯಾಕೆಂದರೆ ನಮ್ಮ ಪ್ರೇಮಜೀವನದಲ್ಲಿ ಒಂದು ಸಾರ್ಥಕತೆಯನ್ನು ಕಾಣಬೇಕು ಎನ್ನುವ ಆಸೆ ಇರುವ ಎಲ್ಲ ಮನಸ್ಸುಗಳು ಗಾಂಧಿಯ ಮನಸ್ಸಿಗಿಂತ ಭಿನ್ನ ರೀತಿಯವು. ಆದರೆ ಗಾಂಧೀಜಿ ಈ ವಿಷಯದಲ್ಲಿ ಅಗ್ನಿದಿವ್ಯದ  ಅನುಭವಕ್ಕೆ ಒಳಗಾಗಿದ್ದರು ಎನ್ನುವುದನ್ನು ನಾವು ಮರೆಯಬಾರದು. ಬೆಚ್ಚಿಬೀಳುವಂತಹ ಒಳಜೀವನದ ಪ್ರಯೋಗಗಳನ್ನೆಲ್ಲ ಮಾಡಿದ ನಂತರವಷ್ಟೆ ಅವರು ಅಂಥ ತೀರ್ಮಾನ ತಳೆದದ್ದು. ಇಂಥ ಒಂದು ಕಥೆಯಂತೂ ಎಲ್ಲರಿಗೂ ಗೊತ್ತಿರುವುದೆ. ಜೀವನದ ಕೊನೆಗಾಲದಲ್ಲಿ ನವಾಖಲಿಯ ಅಗ್ನಿಕುಂಡದಲ್ಲಿ ಓಡಾಡುತ್ತಿರುವಾಗ, ಹಿಂಸೆಗೂ, ಕಾಮಕ್ಕೂ ಅಂತರ್ಗತ ಸಂಬಂಧವಿರಬಹುದೇನೂ ಎನ್ನುವ ಅನುಮಾನ ಬಂದು ಅವರು ಎಳೆಯ ಹುಡುಗಿಯೊಬ್ಬಳ ಜೊತೆಗೆ ಬೆತ್ತಲೆ ಮಲಗಲು ಪ್ರಾರಂಭಿಸಿದರು.

ಕೃಪಲಾನಿ ಅದನ್ನು ವಿರೋಧಿಸಿದಾಗ ತಾನು ಕಾಮವನ್ನು ಗೆದ್ದಿದ್ದೇನೊ ಇಲ್ಲವೊ ಎಂದು ಪರೀಕ್ಷಿಸಿಕೊಳ್ಳಲು ಹಾಗೆ ಮಾಡುತ್ತಿರುವುದೆಂದು ಉತ್ತರಿಸಿದರು. ಆದರೆ ‘ನೀವು ನಿಮ್ಮ ಆತ್ಮಪರೀಕ್ಷೆಯನ್ನು ಮಾಡಿಕೊಳ್ಳುತ್ತೀರೇನೊ ಸರಿ. ಆದರೆ ಅದೇ ವೇಳೆ ಆ ಹುಡುಗಿಯ ಮನಃಸ್ಥಿತಿ ಹೇಗಿರಬಹುದು?’ ಎಂದು ಅವರ ಶಿಷ್ಯಂದಿರು ಕೇಳಿದಾಗ ಅವರು ಹೇಳಿದ್ದು ನಿಜವೆಂದೆನಿಸಿ ಗಾಂಧೀಜಿ ಆ ಪ್ರಯೋಗವನ್ನು ನಿಲ್ಲಸಿದರು. ಆದರೆ ಹಿಂಸೆಗೂ, ಕಾಮಕ್ಕೂ ಏನಾದರೂ ಆಳವಾದ ಸಂಬಂಧವಿರಬಹುದೆ ಎಂಬ ಅವರಲ್ಲಿ ಹುಟ್ಟಿದ ಪ್ರಶ್ನೆ ತುಂಬ ಮುಖ್ಯವಾದದ್ದಂದೆ ನನಗನಿಸುತ್ತದೆ. ಹಾಗೆಯೆ, ಅದಕ್ಕೆ ಉತ್ತರ ಕಂಡುಕೊಳ್ಳಲು ಅವರು ಅನುಸರಿಸಿದ ವಿಧಾನ ತುಂಬಾ ದಿಗಿಲು ಹುಟ್ಟಿಸುವಂಥದ್ದು ಎಂದೂ ಅನಿಸುತ್ತದೆ. ಅವರು ತಿಳಿದಂತೆ ಹಿಂಸೆ-ಕಾಮಗಳು ಒಂದಕ್ಕೊಂದು ಬೆಸೆದಿರುವಂಥವಿರಬಹುದು. ಆದರೆ ನನಗನಿಸುವಂತೆ ಮುನುಷ್ಯ ಅವುಗಳಿಂದ ಬಿಡುಗಡೆ ಪಡೆಯುವ ಮಾರ್ಗ ಮಾತ್ರ ಗಾಂಧೀಜಿ ತಿಳಿದಿದ್ದಷ್ಟು ಸುಲಭವಾದುದಲ್ಲ. ಅವರ ವಾದಗಳ ಸತ್ವನ್ನು, ಸತ್ಯವನ್ನು ಒಪ್ಪಿಕೊಂಡೂ ನನಗೆ ಅವುಗಳ ಬಗ್ಗೆ ಅನೇಕ ಸಂದೇಹಗಳು ಉಳಿದಿವೆ. ನಾನು ಒಟ್ಟಾರೆಯಾಗಿ ಗಾಂಧಿಜಿಯವರ ಅನುಸಂಧಾನ ಮಾಡಿದ್ದು ಹೀಗೆ-ಅವರು ಹೇಳಿದ್ದನ್ನು ಒಪ್ಪಿಯೂ ಅದರ ಬಗ್ಗೆ ಕೆಲವು ಸಹಜವಾದ ವಿರೋಧಾಭಿಪ್ರಾಯಗಳನ್ನು ತಾಳುವುದರ ಮೂಲಕ.

ಅವರ ಇನ್ನೊಂದು ಬಹುಮುಖ್ಯ ಕಲ್ಪನೆಯಾದ ‘ಆಸ್ಪಾದ’ದ ಬಗ್ಗೆಯೂ ನನಗೆ ಇಂಥದೆ ಅನುಮಾನಗಳಿವೆ. ಅವರ ‘ಅಸ್ವಾದ’ದವಾದ ಒಂದು ರೀತಿಯಲ್ಲಿ ಸರಿಯಾದುದೆ ಹೌದು. ಮನುಷ್ಯ ತನ್ನ ರುಚಿಯನ್ನು ಹೆಚ್ಚು ಹೆಚ್ಚು ಬೆಳೆಸಿಕೊಳ್ಳಬಾರದು; ಆಗ ಆತ ಹೆಚ್ಚು ಹೆಚ್ಚು ಭೋಗಿಯೂ, ಉಪಭೋಗಿಯೂ ಆಗುತ್ತ ಹೋಗುತ್ತಾನೆ; ಇಂದ್ರಿಯಗಳ ಹಸಿವನ್ನುಹೆಚ್ಚಿಸಿಕೊಳ್ಳುತ್ತ ಹೋದಂತೆ ಆದ ಪರಿಸವರನ್ನೆಲ್ಲ ಭಕ್ಷಿಸುತ್ತ ಹೋಗುತ್ತಾನೆ; ಆ ಮೂಲಕ ಪರಿಸರದ  ಸಮತೋಲನವನ್ನು ಹಾಳುಗೆಡವಿ ಅದರ ನಾಶಕ್ಕೂ, ತನ್ನ ನಾಶಕ್ಕೂ ತಾನೇ ಕಾರಣನಾಗುತ್ತಾನೆ; ಆದ್ದರಿಂದ ಆತ ‘ಸ್ವಾದ’ವನ್ನು ಆದಷ್ಟು ಮಿತಗೊಳಿಸಿಕೊಳ್ಳಬೇಕು ಎನ್ನುವುದು ಅವರ ನಿಲುವಾಗಿತ್ತು. ಆದರೆ ಇದಕ್ಕೆ ವಿರುದ್ಧವಾದ ಇನ್ನೊಂದು ಸತ್ಯವೂ ಉಂಟು. ನಮ್ಮ ಎಲ್ಲ ಸಂಗೀತ, ನೃತ್ಯ, ಶಿಲ್ಪ, ಸಾಹಿತ್ಯ ಕಲೆಗಳು, ಸಂಸ್ಕೃತಿ ನಾಗರಿಕತೆಗಳ ಬೆಳೆಯುವುದೆ ‘ಸ್ವಾದ’ದ ಬೆಳವಣಿಗೆಯಿಂದ. ಮನುಷ್ಯನಲ್ಲಿ ಯಾವತ್ತೂ ಒಂದು ಅತೃಪ್ತಿ ಇರುವುದರಿಂದ, ಹೆಚ್ಚು ಸೌಂದರ್ಯವನ್ನು ಕಾಣಬೇಕು ಹಾಗೂ ಸೃಷ್ಟಿಸಬೇಕು ಎನ್ನುವ ಅದಮ್ಯ ಬಯಕೆ ಅವನಲ್ಲಿರುವುದರಿಂದ ಈ ಎಲ್ಲ ಕಲೆಗಳು ಬೆಳೆಯುತ್ತ ಹೋಗುತ್ತವೆ. ನಾನೊಬ್ಬ ಕಲಾವಿದನಾಗಿ ಮನುಷ್ಯನ ರುಚಿಗಳನ್ನು ಹೆಚ್ಚು ಹೆಚ್ಚು ವಿಶಿಷ್ಟಗೊಳಿಸುವಲ್ಲಿ ಹಾಗು ಸೂಕ್ಷ್ಮಗೊಳಿಸುವಲ್ಲಿ ನಂಬಿರುವಂಥವನು; ಆ ಮೂಲಕ ಬದುಕಿನ ಸಂಭ್ರಮಾಚರಣೆಯಲ್ಲಿ ತೊಡಗಬೇಕು ಎಂದು ತಿಳಿದಿರುವವನು. ಹಾಗಾಗಿ ನಾವು ಬಾಯಿಮಾತಿನಲ್ಲಿ ಗಾಂಧಿಯ ನಿಲುವಿನ ಬಗ್ಗೆ ಸಹಮತವನ್ನು ಸೂಚಿಸಿದರೂ ಮನಸ್ಸಿನ ಒಳಗೆಲ್ಲೊ ಅದರ ಬಗ್ಗೆ ವಿರೋಧವಿದ್ದೆ ಇರುತ್ತದೆ. ಸ್ವಾದವನ್ನು ವಿರೋಧಿಸುತ್ತ ಹೋದರೆ ಕೊನೆಗೆ ಬ್ಯಾಂಕು, ಕೈಗಾರಿಗೆ, ವ್ಯಾಪಾರ-ವಹಿವಾಟು ಇತ್ಯಾದಿಗಳನ್ನೆಲ್ಲ ಮುಚ್ಚಿಬಿಡಬೇಕಾಗುತ್ತದೆ. ಅದು ಕಷ್ಟ. ಆದರೂ ಸ್ವಾದದ ಅಪಾಯದ ಬಗ್ಗೆ ಗಾಂಧಿ ಹೇಳುವುದನ್ನು ನಾವು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ.

ಆ ಅಪಾಯದ ಅರಿವಿದ್ದ ಇನ್ನೊಬ್ಬನೆಂದರೆ ಟಾಲ್‌ಸ್ಟಾಯ್. ಬಹಳ ಭಯ ಹುಟ್ಟಿಸುವಂತಹ ಆತನ ಕಥೆಯೊಂದಿದೆ. ಅದರಲ್ಲಿ ಹೆಂಡತಿಯನ್ನು ಕೊಲೆಮಾಡಿದವನೊಬ್ಬ ಅನಂತರ ತನ್ನ ಕಥೆಯನ್ನು ಹೇಳಿಕೊಳ್ಳುತ್ತಾನೆ. (’ಕ್ರೂಟ್ಲರ್ ಸೊನಾಟ’ಎಂಬ ಹೆಸರಿನ ನೀಳ್ಗತೆ ಇದು) ಸಂಗೀತ, ಕಲೆ ಇತ್ಯಾದಿಗಳೆಲ್ಲವೂ ನಮ್ಮ ಇಂದ್ರಿಯಗಳ ಹಸಿವನ್ನು ಬೆಳೆಸುತ್ತವೆ; ಹಾಗಾದಾಗ ನಮ್ಮಲ್ಲಿ ಕೋಪ-ಹಿಂಸೆಗಳಂತಹ ಭಾವನೆಗಳೂ ಬಲಿಯುತ್ತವೆ ಎಂದಾತ ಹೇಳುತ್ತಾನೆ. ಎಲ್ಲಿಯವರೆಗೆಂದರೆ, ನಾವು ಹೆಣ್ಣನ್ನು ನಮ್ಮ ಗುಲಾಮಳನ್ನಾಗಿ ಮಾಡಿಕೊಂಡಿದ್ದೇವೆ; ಆಕೆ ನಮ್ಮ ಮೇಲೆ ತಿರುಗಿ ಬೀಳಬಾರದು ಎಂದು ನಾವು ಆಕೆಗೆಂದು ಎಲ್ಲ ರೀತಿಯ ಭೋಗವಸ್ತುಗಳನ್ನು ಸುಂದರವಾದ ಮನೆ, ಕುರ್ಚಿ, ಕಾರ್ಪೆಟ್ಟು,  ವಸ್ತು, ಪ್ರಸಾಧನ, ಆಭರಣ ಇತ್ಯಾದಿಗಳನ್ನು ಸೃಷ್ಟಿ ಮಾಡುತ್ತ ಮಾಡುತ್ತ ಆಕೆ ಅವುಗಳಲ್ಲೆ ಮೋಹಗೊಳ್ಳುವಂತೆ ಮಾಡಿಬಿಟ್ಟಿದ್ದೇವೆ ಎನ್ನುತ್ತಾನೆ. ಅದಕ್ಕೂ ತಾನು ಹೆಂಡತಿಯನ್ನು ಕೊಲೆಗೈದುದಕ್ಕೂ ತಳುಕು ಹಾಕುತ್ತಾನೆ. ಈ ರೀತಿಯ ಭಯಾನಕವಾದ ಕಥೆಯನ್ನು ಟಾಲ್‌ಸ್ಟಾಯ್ ಬರೆದದ್ದು ತನ್ನ ಇಳಿಗಾಲದಲ್ಲಿ. ಗಾಂಧಿಜಿಯ ಬಹುಶಃ ಇದನ್ನು ತುಂಬ ಮೆಚ್ಚಿಕೊಳ್ಳುತ್ತಿದ್ದರು. ಯಾಕೆಂದರೆ ಟಾಲ್‌ಸ್ಟಾಯ್‌ಕಥೆ ಸೂಚಿಸುವಂತೆ ಸ್ವಾದದ ಬೆಳವಣಿಗೆಯ ಬುಡದಲ್ಲೆ ಹಿಂಸೆಯ ಬೆಳವಣಿಗೆಯೂ ಇದೆ. ಆ ಕಾರಣದಿಂದಲೆ ಒಂದು ದೇಶ ಇನ್ನೊಂದು ದೇಶವನ್ನು, ಒಬ್ಬ ಮನುಷ್ಯ ಇನ್ನೊಬ್ಬ ಮುನುಷ್ಯನನ್ನು ಮೆಟ್ಟಿತುಳಿಯುವುದಿದೆ. ಈ ಭೂಮಿ ಎಲ್ಲರ ಎಲ್ಲ ರೀತಿಯ ಸ್ವಾದಗಳನ್ನೂ ಸಂತೃಪ್ತಿಗೊಳಿಸುವಷ್ಟು ಫಲವತ್ತೇನಲ್ಲ. ಅದು ಅಷ್ಟು ಫಲವತ್ತಾಗಬೇಕೆಂದು ನಾವೇನಾದರೂ ಬಯಸಿದರೆ ಅದು ಕೆಲವೆ ದಿನಗಳಲ್ಲಿ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಹೆಣವಾಗಿಬಿಡಬಹುದು.ಯಾಕೆಂದರೆ ಪ್ರಕೃತಿಯ ಶಕ್ತಿಗೂ ಒಂದು ಮಿತಿ ಇದೆ. ಇಂದಿನ ಅಮೆರಿಕದವರ ರಕ್ಕಸ ಸ್ವಾದಗಳನ್ನು ನಾವೂ ಬೆಳೆಸಿಕೊಂಡೆವು ಎಂದಿಟ್ಟುಕೊಳ್ಳಿ. ಆಗ ಈ ಭೂಮಿ ಹದಿನೈದು ದಿನವೂ ಉಳಿಯಲಾರದು.

ವಿಶ್ವದ ಸಮತೋಲನ ಕಾಪಾಡಿಕೊಳ್ಳಲು ಆಸ್ವಾದ ಅತ್ಯಗತ್ಯ ಎಂದು ಗಾಂಧೀ ಹೇಳುವುದನ್ನು ನಾನು ಭೌತಿಕಸ್ತರದಲ್ಲಿ ಒಪ್ಪಿಕೊಳ್ಳುವವನೆ. ಆದರೆ ಸಂಸ್ಕೃತಿ ಕಲೆಗಳ ವಿಷಯದಲ್ಲಿ ಮಾತ್ರ ಅದು ನನಗೆ ಕಷ್ಟವಾಗಿ ಕಾಣುತ್ತದೆ. ಅದೇ ರೀತಿ ಅವರ ವಾದವನ್ನೂ ಯಾವ ಶಿವಳ್ಳಿ ಬ್ರಾಹ್ಮಣನೂ ಒಪ್ಪಿಕೊಳ್ಳಲಾರ. ಯಾಕೆಂದರೆ ಆತನ ಅಡುಗೆಯ ರುಚಿಯೆ ಅಷ್ಟು ವಿಶಿಷ್ಟವಾದುದು. ಹಾಗೆಯೇ ಗಾಂಧಿಯ ವಾದವನ್ನು ಒಪ್ಪಿಕೊಂಡಂತೆ ತೋರಿದರೂ ನಾವೆಲ್ಲ ಇನ್ನೊಂದು ಗಂಟೆಯಲ್ಲಿ ಅದನ್ನು ಪೂರ್ಣ ಮರೆತುಬಿಟ್ಟಿರುತ್ತೇವೆ. ಹಾಗಾಗಿ ಈ ವಿಷಯದಲ್ಲಿ ನಾನಂತೂ ಯಾವತ್ತೂ ಏಕಮುಖಿ ಪ್ರಾಮಾಣಿಕತೆಯಲ್ಲಿ ಮಾತನಾಡಲಾರೆ. ಒಬ್ಬ ಬರಹಗಾರನಾಗಿ ಈ ವಿಷಯದಲ್ಲಿ ನನಗೆ ನನ್ನದೆ ಆದ ದ್ವಂದ್ವಗಳುಂಟು, ಗೊಂದಗಲಗಳುಂಟು. ಗಾಂಧೀಜಿಯವರ ಬಗ್ಗೆ ನನಗೆ ಅಪಾರ ಗೌರವಿರುವುದು ಹೌದಾದರೂ ಅವರನ್ನು ಪ್ರಶ್ನಿಸದೆ ನಾನು ಮುಂದುವರಿಯಲಾರೆ. ಅವರ ಬಳಿಗೆ ಹೋಗುವಾಗ ನಾನು ನನ್ನೀ ಪ್ರಶ್ನೆಗಳನ್ನು ಹೊತ್ತುಕೊಂಡೆ ಹೋಗುವಂಥವನು, ಅವರೊಡನೆ ಕೂತು ಜಗಳವಾಡುವಂಥವನು, ಯಾಕೆಂದರೆ ನನ್ನ ಮಟ್ಟಿಗೆ ಗಾಂಧಿ ದೇವರಿಗೆ ಸಮಾನಾದ ವ್ಯಕ್ತಿ. ಅಂಥವರ ಎದುರು ಸುಳ್ಳು ಹೇಳಬಾರದು, ಸೋಗಿನ ಸಹಮತವನ್ನು ತೋರಬಾರದು.

ನುಡಿ-ನಡೆಗಳ ಸಾಂಗತ್ಯ ಗಾಂಧೀಜಿಯವರ ಇನ್ನೊಂದು ಮಹತ್ವದ ಸೂತ್ರವಾಗಿತ್ತು. ಈ ವಿಷಯದಲ್ಲಿ ಅವರಲ್ಲಿ ದ್ವಂದ್ವಗಳೊ, ವಿರೋಧಭಾಸಗಳೊ ಅಥವಾ ನಿಲುವಿನ ಬದಲಾವಣೆಗಳೊ ಇರಲಿಲ್ಲವೆಂದಲ್ಲ. ಆದರೆ ಗಾಂಧಿಯ ಈ ಆದರ್ಶವನ್ನೂ ಇನ್ನಿತರರ ಧೋರಣೆಗಳೊಮದಿಗೆ ಹೋಲಿಸಿ ನೋಡಿದಾಗ ನಮಗೆ ಅವರ ಮಹತ್ವ ಅರ್ಥವಾಗುತ್ತದೆ. ಮಾರ್ಕ್ಸ್‌‌ವಾದದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಒಬ್ಬ ಜೀವನದ ಎಲ್ಲ ಸುಖ-ಸಂಪತ್ತನ್ನು ಅನುಭವಿಸುತ್ತಲೆ ಮಾರ್ಕ್ಸ್‌ವಾದಿಯೂ ಆಗಿರಬಹುದು, ಕಮ್ಯುನಿಸ್ಟ್ ಪಕ್ಷದ ಸದಸ್ಯನಲ್ಲವಾದರೂ ಫೆಲೋ-ಟ್ರಾವಲರ್ ಆದರೂ ಆಗಿರಬಹುದು. ಆ ವಾದದ ಪ್ರಕಾರ ಇದೇನೂ ತಪ್ಪಿಲ್ಲ. ಯಾಕೆಂದರೆ ಮನಸ್ಸಿನ ಬದಲಾವಣೆಯಿಂದ ಜಗತ್ತಿನ ಬದಲಾವಣೆ ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ಬದಲಾವಣೆಯಿಂದ ಮಾತ್ರ ಇದು ಸಾಧ್ಯ; ಮೂಲತಃ ಉತ್ಪಾದನಾ ಸಂಬಂಧಗಳಲ್ಲಿ ಆಗುವ ಬದಲಾವಣೆಯಿಂದ ಮಾತ್ರ ಇದು ಸಾಧ್ಯ ಎಂದು ಮಾರ್ಕ್ಸ್‌ವಾದ ಹೇಳುತ್ತದೆ. ಹಾಗಾಗಿ ಒಬ್ಬ ದೊಡ್ಡ ಶ್ರೀಮಂತನಾಗಿದ್ದವನೂ ಮಾರ್ಕ್ಸ್‌ವಾದಿಯಾಗಬಲ್ಲ. ‘ಇಡೀ ವ್ಯವಸ್ತೆಯೇ ಬದಲಾವಣೆಯಾದ ನಂತರವೆ ನನ್ನ ವೈಯಕ್ತಿಕ ಸ್ಥಿತಿಗತಿಯಲ್ಲೂ ಬದಲಾವಣೆಯಾಗುತ್ತದೆ; ಅದು ಹೇಗೊ ಮುಂದೆಂದೊ ಒಂದು ದಿನ ಆಗುವುದಾದ್ದರಿಂದ ಸದ್ಯಕ್ಕೆ ನಾನಂತೂ ಶ್ರೀಮಂತಿಕೆಯ ಸುಖವನ್ನು ಅನುಭವಿಸುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಆತ ಸ್ವಸಮರ್ಥನೆ ಮಾಡಿಕೊಳ್ಳಬಲ್ಲ. ನಮ್ಮಲ್ಲಿಯ ಬಹಳಷ್ಟು ಮಂದಿ ಮಾರ್ಕ್ಸ್‌ವಾದಿಗಳೆಲ್ಲ ಇದೇ ರೀತಿಯವರು. ಈ ದೃಷ್ಟಿಯಿಂದ ನೋಡಿದರೆ ಕೇವಲ ಉತ್ಪಾದನಾ ಸಂಬಂಧಗಳ ಮಟ್ಟಿಗೆ ಮಾತ್ರ ಬದಲಾವಣೆಯನ್ನು ಕಂಡ ರಷಿಯಾದಲ್ಲಿ ಮೂಲಭೂತ ಬದಲಾವಣೆಯೇನೂ ಆಗಲೆ ಇಲ್ಲ. ಆದರೆ ಗಾಂಧೀಜಿ ಒಂದೆಡೆ ಹೃದಯ ಪರಿವರ್ತನೆಯನ್ನೂ ಪ್ರತಿಪಾದಿಸುತ್ತಿದ್ದರು, ಇನ್ನೊಂದೆಡೆ ಅದಕ್ಕೆ ಸಮಾನಾಂತರವಾಗಿ ಉತ್ಪಾದನಾ ಕ್ರಮಗಳ ಬದಲಾವಣೆಯನ್ನೂ ಪ್ರತಿಪಾದಿಸುತ್ತಿದ್ದರು. ಅದಕ್ಕಾಗಿಯೆ ಅವರು ಸಣ್ಣ ಸಣ್ಣ ಯಂತ್ರಗಳನ್ನು ಬಳಸುವುದು ಒಳ್ಳೆಯದೆಂದು ಹೇಳುತ್ತಿದ್ದರು. ಇಂಥ ಉತ್ಪಾದನಾ ಕ್ರಮಗಳ ಮೂಲಕ ಉತ್ಪಾದನಾ ಸಂಬಂಧಗಳ ಬದಲಾವಣೆಯೂ ಆಗಬಲ್ಲುದೆಂದು ಅವರು ನಂಬಿದ್ದರು. ಯಾಕೆಂದರೆ ಒಂದು ಬೃಹತ್ ಯಂತ್ರ ಸಂಕೀರ್ಣವನ್ನು ಅಥವಾ ನಂಬಿದ್ದರು. ಯಾಕೆಂದರೆ ಒಂದು ಬೃಹತ್ ಯಂತ್ರಸಂಕೀರ್ಣವನ್ನು ಅಥವಾ ಕೈಗಾರಿಕೆಯನ್ನು ಒಬ್ಬ ಬಂಡವಾಳಶಾಹಿ ಮಾಲೀಕ  ನಡೆಸಿದರೂ ಒಂದೆ, ಸರ್ಕಾರ ನಡೆಸಿದರೂ ಒಂದೆ; ಸಾಮಾನ್ಯ ಮನುಷ್ಯರಿಗೆ ಅದರ ಒಳಗೆ ಆಗುವ ಅನುಭವದಲ್ಲಿ ಇವುಗಳಿಂದ ಯಾವ ವ್ಯತ್ಯಾಸವೂ ಆಗಲಾರದು. ಮಾರ್ಕ್ಸ್‌‌ವಾದದ ಸುಳ್ಳಿರುವುದು, ಅದರ ಸೋಲಿರುವುದು ಇಲ್ಲಿಯೆ. ಅದು ಉತ್ಪಾದನಾ ಸಂಬಂಧಗಳಿಗೆ ಕೊಟ್ಟ ಪ್ರಾಮುಖ್ಯವನ್ನು ಉತ್ಪಾದನಾ ಕ್ರಮಗಳಿಗೆ ಕೊಡಲಿಲ್ಲ.

ಗಾಂಧಿ ಸಂಪೂರ್ಣವಾಗಿ ಯಂತ್ರವಿರೋಧಿಯೇನಾಗಿರಲಿಲ್ಲ. ಯಂತ್ರಗಳನ್ನು ಬಳಸೋಣ, ಆದರೆ ನಮ್ಮ ಮಾಲೀಕರಾಗದೆ ನಮ್ಮ ಗುಲಾಮರಾಗಿರುವಂಥಹ, ನಮ್ಮ ನಿಯಂತ್ರಣದಲ್ಲಿರುವಂತಹ ಯಂತ್ರಗಳನ್ನು ಮಾತ್ರ ಬಳಸೋಣ ಎಂಬುದು ಅವರ ನಿಲುವಾಗಿತ್ತು. ಅಷ್ಟು ಗಟ್ಟಿಯಾಗಿ ಚರಕಾವನ್ನು ನೆಚ್ಚಿಕೊಂಡಿದ್ದ ಗಾಂಧಿ ಒಮ್ಮೆ ಹೊಲಿಗೆ ಯಂತ್ರವೊಂದನ್ನು ನೋಡಿ ತುಂಬ ಮೆಚ್ಚಿಕೊಂಡು, ಎಲ್ಲರ ಮನೆಯಲ್ಲೂ ಇಂಥದೊಂದು ಯಂತ್ರವಿರಬೆಕು ಎಂದು ಹೇಳಿದರಂತೆ.

ಆದರೆ ಗಾಂಧೀಜಿಯವರ ಮನಃಪರಿವರ್ತನೆಯ ವಿಧಾನದಲ್ಲೂ ಒಂದು ಸಮಸ್ಯೆಯುಂಟು. ಅವರು ಸ್ವತಃ ತಮ್ಮ ಮಟ್ಟಿಗೆ ಅಂಥದೆಲ್ಲ ಬದಲಾವಣೆಗಳನ್ನು ಸಾಧಿಸಿಕೊಂಡರು, ಸರಿ. ಅವರು ತಮ್ಮ ಆಹಾರವನ್ನು, ಉಡುಪನ್ನು, ಆಸೆಯನ್ನು ಎಷ್ಟು ಮಿತಿಗೊಳಿಸಿಕೊಂಡರು, ತಮ್ಮ ಕಾಲವನ್ನು ಶಕ್ತಿಯನ್ನು ಹೇಗೆ ವಿನಿಯೋಗಿಸುತ್ತಿದ್ದರು ಇತ್ಯಾದಿಗಳನ್ನು ನೋಡಿದರೆ ಅವರಿಗೆ ಯಾವುದೇ ಸರ್ಕಾರದ ಅಥವಾ ಬಾಹ್ಯವ್ಯವಸ್ಥೆಯ ಅವಶ್ಯಕತೆ ಇದ್ದಂತೆಯೆ ತೋರುವುದಿಲ್ಲ. ತಾನು ಪರಿಕಲ್ಪಿಸಿಕೊಂಡ ಆದರ್ಶಗಳೆಲ್ಲದರ ಅನುಷ್ಠಾನ ಇಲ್ಲಿಯೆ, ಈಗಲೆ ಸಾಧ್ಯವೆಂದು ನಂಬಿ ಹಾಗೆಯೆ ಬಾಳಿದ ಅವರ ಕ್ರಮ ನಮಗೆಲ್ಲ ನಂಬಲೂ ಅಸಾಧ್ಯವಾಗಿ ಕಂಡುಬರುತ್ತದೆ. ನಮ್ಮಂಥವರಿಗೆ ಅವರಂತೆ ಬಾಳುವುದು ಅಸಾಧ್ಯ. ಮಾತ್ರವಲ್ಲ, ಅವರನ್ನು ಎಷ್ಟೇ ಗೌರವಿಸುತ್ತಿದ್ದರೂ, ಪ್ರೀತಿಸುತ್ತಿದ್ದರೂ ನಾವು ಗಾಂಧಿವಾದಿಗಳು ಎಂದು ಹೇಳಿಕೊಳ್ಳುವುದೂ ಅಸಾಧ್ಯ. ಯಾಕೆಂದರೆ ಒಂದು ಅರ್ಥದಲ್ಲಿ, ಗಾಂಧಿವಾದಿಯಾದಾಕ್ಷಣ ಕಾಫಿ ಕುಡಿಯುವಂತಿಲ್ಲ, ಮಧ್ಯ-ಮಾಂಸ ಸೇವಿಸುವಂತಿಲ್ಲ, ಅಮೂರ್ತಗಳಲ್ಲಿ ಮುಳುಗುವಂತಿಲ್ಲ, ಇಡೀ ಸಮಾಜ ಬದಲಾಗುವವರೆಗೆ ನಾನು ವೃತ್ತಿ ಜೀವದಲ್ಲಿ ಸದ್ಯ ಇರುವಂತೆಯೆ ಇರುತ್ತೇನೆ ಎನ್ನುವಂತಿಲ್ಲ. ಹೀಗೆಲ್ಲ ಜೀವಿಸುವುದು ನಮಗೆ ಸಾಧ್ಯವಿಲ್ಲದಿದ್ದಾಗ ನಾವು ಗಾಂಧಿಯನ್ನು ಮೆಚ್ಚುವುದೂ ಗಾಂಧಿವಾದಿಗಳೆಂದು ಹೇಳಿಕೊಳ್ಳುವುದೂ ಅಪ್ರಾಮಾಣಿಕವೆಂದೂ, ಕಪಟವೆಂದೂ ಕಾಣತೊಡಗುತ್ತದೆ. ಗಾಂಧಿ ತಮ್ಮ ನಂಬಿಕೆಗಳ ವಿಷಯದಲ್ಲಿ ಎಷ್ಟು ಆತ್ಯಂತಿಕ ನಿಷ್ಠೆಯಿಂದ ಬಾಳಿದರೆಂಬುದು ಅವರ ಮಕ್ಕಳ ಕಥೆಯನ್ನು ನೋಡಿದರೇ ತಿಳಿಯುತ್ತದೆ. ಅಪ್ಪನಿಂದ ಏನೂ ಸಹಾಯ ಪಡೆಯದ ಆ ಮಕ್ಕಳು ಮುಂದೆ  ಅನಾಮಧೇಯರಾಗಿಯೆ ಉಳಿದು ಅಳಿದರು. ಅದೇ ಗಾಂಧಿಯ ಶಿಷ್ಯನಾಗಿದ್ದ ನೆಹರೂ ತಮ್ಮಮಕ್ಕಳಿಗೆ ಏನೆಲ್ಲ ಆಧಾರ ನೀಡಿದರು ನೆನಪಿಸಿಕೊಳ್ಳಿ. ವ್ಯಾವಹಾರಿಕ ಪ್ರಜ್ಞೆಯ ನೆಹರೂಗೆ  ತನ್ನ ಕುಟುಂಬದವರನ್ನು ಹೇಗೆ ಬೆಳಸಬೇಕೆಂಬುದು ಚೆನ್ನಾಗಿ ತಿಳಿದಿತ್ತು. ಗಾಂಧೀಜಿಯ ಸಾವಿನ ನಂತರ, ನೆಹರೂ ಗಾಂಧಿಗಿಂತ  ದೊಡ್ಡವರು ಎಂಬ ಒಂದು ವಾದವೂ ಹುಟ್ಟಿಕೊಂಡಿತು. ಆದರೆ ನನ್ನ ಪ್ರಕಾರ, ಅದು ಒಪ್ಪಲಿಕ್ಕೇ ಸಾಧ್ಯವಿಲ್ಲದಂಥ ಒಂದು ವಾದ. ನಮ್ಮ ದೇಶದ ಅತ್ಯುತ್ತಮ ಚಿಂತಕ ಗಾಂಧಿಯೆ ಹೊರತು ಬೇರಾರೂ ಅಲ್ಲ. ಆದಾಗ್ಯೂ ನಾನು ಈ ಮೊದಲೆ ಹೇಳಿದಂತೆ, ನನಗೆ ಅವರ ಜೊತೆ ಅನೇಕ ಗಂಭೀರ ಭಿನ್ನಾಭಿಪ್ರಾಯಗಳೂ ಉಂಟು, ಜಗಳವಾಡಿಯೆ ಪರಿಹರಿಸಿಕೊಳ್ಲಬೇಕಾದ ವಿಷಯಗಳೂ ಉಂಟು. ಆದ್ದರಿಂದಲೆ ಕಟ್ಟಾ ಗಾಂಧಿವಾದಿಗಳನ್ನು ಕಂಡಾಗ ಅವರೆಲ್ಲ ಶಠರು ಹಾಗೂ ಸತ್ವಹೀನರು ಎಂದು ನನಗನಿಸತೊಡಗುತ್ತದೆ. ಗಾಂಧೀಯನ್ನೂ, ಗಾಂಧಿವಾದವನ್ನೂ ಪ್ರಶ್ನಾತೀತವಾಗಿ ಪವಿತ್ರೀಕರಿಸಿಬಿಡುತ್ತಾರೆ ಅಂಥ ಪೆದ್ದರು. ನಿಜದ ನೆಲೆ-ಬೆಲೆ ತಿಳಿದುಬರುವುದೇ ನಿರಂತರ ಅನ್ವೇಷಣೆಯ ಮೂಲಕ, ಅನುಮಾನ-ಪ್ರಶ್ನೆ-ಜಗಳಗಳ ಮೂಲಕ ಎಂಬುದನ್ನೆ ಮರೆತುಬಿಡುತ್ತಾರವರು. ಹಾಗಾಗಿ, ಜಗತ್ತಿನ ಸಮಸ್ಯೆಗಳಿಗೆಲ್ಲ ಬಹುಶಃ ಗಾಂಧೀಜಿ ಕಂಡು ಕಾಣಿಸಿದ ಉತ್ತರಗಳೆ ಅಂತಿಮವಾದವು ಎನ್ನುವ ಪ್ರಜ್ಞಾಸ್ತರದ ಅರಿವು ಒಂದೆಡೆ, ಹಾಗೂ ಅವರ ಮಾರ್ಗವನ್ನು ಅನುಸರಿಸುವುದು ಪ್ರಾಯೋಗೀಕವಾಗಿ ದುಸ್ಸಾಧ್ಯವಾದುದು ಎಂಬ ಕೊರಗು ಇನ್ನೊಂದೆಡೆ-ಇವೆರಡರ ಸಂಧಿಬಿಂದುವನ್ನು ನಮ್ಮ ನಮ್ಮಮಟ್ಟದಲ್ಲಿ ಪ್ರಾಮಾಣಿಕವಾಗಿ ಹುಡುಕಿಕೊಳ್ಳುವುದೆ ಇಂದು ನಮ್ಮೆದುರಿರುವ ಬಹುಮುಖ್ಯವಾದೊಂದು ಸವಾಲು ಎಂದು ನನ್ನ ಅನಿಸಿಕೆ.

ಸಮಕಾಲೀನ ಭಾರತ ಗಾಂಧಿವಾದವನ್ನು ಪ್ರಸ್ತುತವೆಂದು ಪರಿಗಣಿಸುತ್ತದೆಯೆ? ದೂರದ ಅಮೆರಿಕ ಆಫ್ರಿಕಾಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್‌ನ, ನೆಲ್ಸನ್ ಮಂಡೇಲಾನ ನೇತೃತ್ವದಲ್ಲಿ ನಡೆದ ಕಪ್ಪು ಜನರ ಹೋರಾಟಗಳಿಗೆ ಸ್ಪೂರ್ತಿಯನ್ನು ಒದಗಿಸಿದ ಗಾಂಧಿವಾದವನ್ನು ತನ್ನ ಶಕ್ತಿಯ ಮೂಲವನ್ನಾಗಿಸಿಕೊಳ್ಳುವ ಸೂಚನೆಯೇನನ್ನಾದರೂ ಇಂದಿನ ಭಾರತತೋರುತ್ತಿದೆಯೆ? ಒಂದು ಅರ್ಥದಲ್ಲಿ ಈ ಪ್ರಶ್ನೆಗಳಿಗೆ ನಕರಾತ್ಮಕ ಉತ್ತರ ನೀಡಬೇಕಾದ ಅನಿವಾರ್ಯತೆ ನಮ್ಮ ಅತಿದೊಡ್ಡ ದೌರ್ಭಾಗ್ಯಗಳಲ್ಲೊಂದು. ಒಂದೆಡೆ ನಾವು ಗಾಂಧಿಯನ್ನು ಪವಿತ್ರ ಪುತ್ಥಳಿಯನ್ನಾಗಿಸಿ ಅವರ ಪ್ರಾಣಹರಣ ಮಾಡಿದ್ದೇವೆ; ಇನ್ನೊಂದೆಡೆ ಅವರ ಜೀವನಪ್ರಯೋಗದ ನಿಜಪವಾಡಗಳಿಗೆ ಕುರುಡಾಗಿ ಮಾರುಕಟ್ಟೆಯ ಹಾವಾಡಿಗರಿಗೆ ನಮ್ಮನ್ನು ಮಾರಿಕೊಂಡಿದ್ದೇವೆ. ಗಾಂಧೀಜಿ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ನವಾಖಲಿಯಲ್ಲಿ ಜೀವಿಸಿದ ದಿನಗಳ ನಿದರ್ಶನವನ್ನು ನೆನಪಿಸಿಕೊಳ್ಳಿ. ಶ್ರೀರಾಮನ ಜೀವನದಲ್ಲಿ ಶ್ರೀ ಕೃಷ್ಣನ ಜೀವನದಲ್ಲಿ ನಡೆದ ಅಸಂಖ್ಯ ಅದ್ಭುತಗಳಂತೆಯೆ ಇನ್ನೊಂದು ಅದ್ಭುತ ದೇಶದಲ್ಲಿ ನಡೆದದ್ದು ನವಾಖಲಿಯಲ್ಲಿ, ಗಾಂಧಿಯ ಆ ಕಡೆಯ ದಿನಗಳಲ್ಲಿ. ಅಲ್ಲಿ ಹಿಂಸೆಯಲ್ಲಿ ತೊಡಗಿದ್ದ ಹಿಂದೂ-ಮುಸ್ಲಿಮರಿಗೆ ಶಾಂತಿಯ ಸಂದೇಶ ಹೊತ್ತೊಯ್ದ ಗಾಂಧಿ ಹೆಜ್ಜೆಹೆಜ್ಜೆಗೂ ತಿರಸ್ಕಾರವನ್ನೂ, ಕ್ರೋಧವನ್ನೂ ಎದುರಿಸಬೇಕಾಗಿ ಬಂದಿತು. ಅವರನ್ನೊಪ್ಪದ ಮುಸ್ಲಿಮ್ ಜನರು, ಮೌಲ್ವಿಗಳು ಅವರು ಬರುವ ದಾರಿಯಲ್ಲಿ ಹೇಸಿಗೆಯನ್ನೂ, ಗಾಜಿನ ಚೂರುಗಳನ್ನೂ ಚೆಲ್ಲುತ್ತಿದ್ದರು. ಗಾಂಧಿ ಮಾತ್ರ ಹಸನ್ಮುಖದಿಂದ ಅವೆಲ್ಲವನ್ನೂ ಗುಡಿಸಿಕೊಂಡು ಒಬ್ಬರೆ ನಡೆದುಕೊಂಡು ತಮ್ಮ ಪ್ರಾರ್ಥನೆಯನ್ನು ಪುನರುಚ್ಚರಿಸುತ್ತ ಸಾಗಿದರು. (ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸಬೇಕು. ಹಿಂದೂ-ಮುಸ್ಲಿಮ್ ಘರ್ಷಣೆ ಎಂದಾಕ್ಷಣ ಅದು ಮತೀಯ ಸ್ವರೂಪದ್ದು ಎಂದು ನಮಗನಿಸುವುದು ಸಹಜ. ಆದರೆ ಆಗಿನ ನವಾಖಲಿಯಲ್ಲಿ ಜಮೀನುದಾರರೆಲ್ಲ ಹಿಂದೂಗಳೂ; ಸಾಮಾನ್ಯರೆಲ್ಲ ಮುಸ್ಲಿಮರೂ ಆಗಿದ್ದರು ಎನ್ನುವುದನ್ನು ನೋಡಿದರೆ ಆ ಹಿಂಸೆ ಕೇವಲ ಕೋಮುವಾದದ್ದಾಗಿರದೆ ಆರ್ಥಿಕ ಅಸಮಾನತೆಯದೂ ಆಗಿತ್ತು ಎನ್ನುವ ಇನ್ನೊಂದು ವಾಸ್ತವ ನಮಗೆ ಗೋಚರಿಸುತ್ತದೆ. ಅಲ್ಲಿಯ ಮುಸ್ಲಿಮರು ಕೋಪಾವಿಷ್ಟರಾದ್ದು ಹಿಂದೂಗಳ ಮೇಲೊ ಅಥವಾ ಜಮೀನುದಾರರ ಮೇಲೊ ಎಂಬ ಸಂಕೀರ್ಣ ಪ್ರಶ್ನೆಯೇಳುತ್ತದೆ. ಹೊರನೋಟಕ್ಕೆ ಕೋಮುವಾದಿ ಎಂದು ತೋರುವ ವಿಷಯಗಳ ಹಿಂದೆ ಬಹಳ ಸಲ ಇಂಥ ಒಳಸತ್ಯಗಳೂ ಇರುವುದುಂಟು) ಕೊನೆಗೆ ಗಾಂಧಿ ಗೆದ್ದರು. ಹಿಂದೂ-ಮುಸ್ಲಿಮರಲ್ಲಿ ಶಾಂತಿಯನ್ನು ಸ್ಥಾಪಿಸಿ ಮರಳಿದರು. ಅಲ್ಲಿ ಯಾವ ಮುಸ್ಲಿಮನೂ ಯಾವ ಹಿಂದುವೂ ಅವರನ್ನು ಕೊಲ್ಲಲು ಪ್ರಯತ್ನಿಸಲಿಲ್ಲಿ. ಬದಲಿಗೆ ಅವರೆಲ್ಲ ತಮ್ಮ ಕಾಠಿಣ್ಯವನ್ನು ಕಳೆದುಕೊಂಡು ಮಾನವೀಯತೆಯನ್ನು ಮರಳಿ ಪಡೆದುಕೊಂಡರು. ಅಲ್ಲಿ ನಡೆದದ್ದು ಗಾಂಧಿಜಿ ಸಾಧಿಸಿದ್ದು ಒಂದು ದೊಡ್ಡ ಪವಾಡ. ಇಂಥ ಜೀವಂತ ಜ್ವಲಂತ ಪವಾಡಗಳನ್ನು ಮರೆತು ನಾವು ಸಾಯಿಬಾಬಾನಂಥವರು ಬೂದಿ, ಉಂಗುರಗಳನ್ನು ತೆಗೆದುಕೊಡುವ ಅಗ್ಗದ ಚಮತ್ಕಾರಗಳನ್ನೆ ಪವಾಡವೆನ್ನುವಷ್ಟು ಮೂಢರಾಗಿ ಹೋಗಿದ್ದೇವೆ. ಜಗತ್ತಿನ  ಹೋಗಿದ್ದೇವೆ. ಜಗತ್ತಿನ ಇನ್ನ್ಯಾರೆ ಮಹಾನಾಯಕನ ಇಡೀ ಜೀವನಸಾಧನೆಯನ್ನೂ ಮೀರಿಸುವಂಥದು ಗಾಂಧಿ ನವಾಖಲಿಯಲ್ಲಿ ಕೆಲವೆ ದಿನಗಳಲ್ಲಿ ಮಾಡಿದ ಸಾಧನೆ, ಗಾಂಧೀಜಿಯ ಇಂಥ ಅಸಾಮಾನ್ಯ ಆಧ್ಯಾತ್ಮಿಕ ಮಾರ್ಗವನ್ನು ಬಿಟ್ಟುಕೊಟ್ಟು ನಾವಿಂದು ಕ್ಷಾತ್ರದ ಬೆನ್ನುಹತ್ತಿದ್ದೇವೆ, ಕ್ಷತ್ರಿಯರೊ, ವೈಶ್ಯರೊ ಆಗ ಹೊರಟಿದ್ದೇವೆ.

ಆದರೆ ಇನ್ನೊಂದು ಅರ್ಥದಲ್ಲಿ, ಆಧುನಿಕ ಭಾರತದ ಮೇಲೆ ಗಾಂಧಿಜಿಯ ಪ್ರಭಾವ ಏನೂ ಆಗಿಲ್ಲ ಎಂದೂ ಹೇಳುವಂತಿಲ್ಲ. ನಮ್ಮ ಅಸ್ಪೃಶ್ಯತಾ ನಿವಾರಣೆ,  ಮೀಸಲಾತಿ ಇತ್ಯಾದಿಯೋಜನೆಗಳೆಲ್ಲ ಗಾಂಧೀಜಿಯ ಕನಸಿನ ಕೊನರುಗಳೆಂದೆ ನನ್ನ ನಂಬಿಕೆ. ಈ ವಿಷಯದಲ್ಲಿ ಅವರಿಗೂ, ಅಂಬೇಡ್ಕರರಿಗೂ ನಡೆದ ವಾಗ್ವಾದಗಳು ಅತ್ಯಂತ ಮಹತ್ವದವು. ನಾನಿದನ್ನು ಅಂಬೇಡ್ಕರರನ್ನು ಟೀಕಿಸಲೆಂದು ಹೇಳುತ್ತಿಲ್ಲ; ಅವರ ಬಗ್ಗೆ ಆಳ ಗೌರವವಿದ್ದೂ ಅವರ ಚಿಂತನೆಯ ಕೆಲವು ಇತಿಮಿತಿಗಳನ್ನು ಕಂಡು ಇದನ್ನು ಹೇಳುತ್ತಿದ್ದೇನೆ; ಒಂದು ಪಕ್ಷ, ಅಂಬೇಡ್ಕರ್ ಒತ್ತಾಯಿಸಿದಂತೆ ದಲಿತರಿಗೆಂದೇ ಪ್ರತ್ಯೇಕ ಚುನಾವಣೆಯ ಕ್ರಮವನ್ನು ಜಾರಿಗೆ ತಂದಿದ್ದೆವು ಎಂದಿಟ್ಟುಕೊಳ್ಳಿ. ಆಗ ಒಬ್ಬ ಹರಿಜನ ಅಭ್ಯರ್ಥಿ ತಾನು ಇನ್ನೊಬ್ಬ ಹರಿಜನ ಅಭ್ಯರ್ಥಿಗಿಂತ ಹೆಚ್ಚು ಕ್ರಾಂತಿಕಾರನೆಂದೂ, ಉಗ್ರನೆಂದೂ ತೋರಿಸಬೇಕಾಗಿಬರುತ್ತಿತ್ತು. ಇಬ್ಬರೂ ಪರಸ್ಪರವಾಗಿ ಸಮರೋತ್ಸಾಹದ ಸ್ಪರ್ಧೆಯಲ್ಲಿ ಮುಳುಗಬೇಕಾಗುತ್ತಿತ್ತು. ಆದರೆ ಗಾಂಧಿ ವಾದಿಸಿದಂತೆ ಇಂದು ದಲಿತರೂ ಇತರ ಸಾಮಾಜಿಕ ವರ್ಗಗಳ ನಡುವಿದ್ದುಕೊಂಡೆ ಚುನಾವಣೆಗೆ ನಿಲ್ಲಬೇಕಾದುದರಿಂದ ‘ತಾವು ಎಲ್ಲ ವರ್ಗದವರನ್ನೂ ಗೆಲ್ಲಬೇಕು’ ಎಂದೆ ಅವರು ತಿಳಿಯಬೇಕಾದ ಅನಿವಾರ್ಯತೆ ಇದೆ. ಇದರಿಂದ ಒಂದು ರೀತಿಯಲ್ಲಿ ಚಮಚಾಗಿರಿ ಬೆಳೆದಿದೆಯೇನೊ ನಿಜ. ಆದರೆ ಅದರ ಜೊತೆಗೇ ದೀನದಲಿತರ ಪ್ರಗತಿಯೂ ಒಟ್ಟೂ ಸಮಾಜದ ಪ್ರಗತಿಯೂ ಒಟ್ಟೊಟ್ಟಿಗೆ ಮಾತ್ರ ಸಾಧ್ಯವಾಗುವಂಥವು ಎಂಬ ದೊಡ್ಡ ಸತ್ಯದ ಅರಿವೂ ಮೂಡಿದೆ. ಇದಕ್ಕೆ ಗಾಂಧೀಜಿಯ ಸಮಗ್ರದೃಷ್ಟಿಯೆ ಕಾರಣ.

ಹೀಗೆ ಗಾಂಧಿಜಿ ತಮ್ಮ ಪ್ರತಿಯೊಂದು ಕ್ರಿಯಾಮಾರ್ಗದ ಆಯ್ಕೆಯಲ್ಲೂ ದೊಡ್ಡದೊಂದು ತತ್ವನ್ನೆ ನಮ್ಮ ಮುಂದಿಡುತ್ತಿದ್ದರು. ಅದರ ದೀರ್ಘಕಾಲೀನವೂ, ಇತ್ಯಾತ್ಮಕವೂ ಆದ ಪ್ರಭಾವ-ಪರಿಣಾಮಗಳನ್ನು ನಾವು ಇಂದಿಗೂ ಕಾಣಬಹುದು. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ನೋಡಿ. ಇಂದಿನ ಜಾಗತೀಕರಣದ ಜಾಡ್ಯಕ್ಕೆ ನಾವು ಸಂಪೂರ್ಣ ಬಲಿಯಾಗದೆ ಉಳಿದರುವುದರ ಒಂದು ಖಾರಣದ ಮೂಲರೂಪವನ್ನು ನಮ್ಮ ಸ್ವಾತಂತ್ರ್ಯ ಹೋರಾಟಕಾಲದಿಂದಲೆ ಗುರುತಿಸಬಹುದು. ಗಾಂಧೀಜಿ ಆಗ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಂದಿನ ಮೀಸಲಾತಿಯ ಕಾರ್ಯಕ್ರಮವಾಗಿ ಬೆಳೆದುಬಂದಿತು. ಅದನ್ನು ಸಂಪೂರ್ಣವಾಗಿ ಬಿಟ್ಟುಕೊಡುವ ಯಾವ ರಾಜಕೀಯ ಪಕ್ಷವೂ ಇಂದು ಅಧಿಕಾರಕ್ಕೆ ಬರುವ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ. ಅಷ್ಟರಮಟ್ಟಿಗೆ ಗಾಂಧೀಜಿ ಮಹತ್ವದ ಬಳುವಳಿಯೊಂದನ್ನು ನಮಗೆ ನೀಡಿಹೋಗಿದ್ದಾರೆ. ಅವರ  ಸ್ಥಾನದಲ್ಲಿ ತಿಲಕರಾಗಲಿ, ಸಾವರ್‌ಕರ್ ಆಗಲಿ, ಗೋಳವಾಲ್ಕರ್ ಆಗಲಿ ಇದ್ದಿದ್ದರೆ ಇಂದಿನ ಭಾರತದ ಸ್ಥಿತಿಗತಿಯೆ  ಬೇರೆಯಾಗಿರುತ್ತಿತ್ತು. ತಿಲಕರು ಬಹಳ ದೊಡ್ಡವರು ಹೌದು. ಆದರೆ ಅವರಿಗೂ ಸಾಮಾಜಿಕ ನ್ಯಾಯಕ್ಕಿಂತ ರಾಷ್ಟ್ರ ನಿರ್ಮಾಣವೇ ಮುಖ್ಯವಾಗಿತ್ತು. ಇನ್ನು ಸಾವರ್‌ಕರ್ ಹಾಗೂ ಗೋಳವಾಲ್ಕರ್‌ರಂಥವರಿಗಂತೂ ಬಲಿಷ್ಠ ಹಿಂದೂರಾಷ್ಟ್ರದ ಕಲ್ಪನೆಯೇ ಸರ್ವಸ್ವವಾಗಿತ್ತು. ಒಂದೆಡೆ ತಿಲಕರು ಮೊದಲು ಸ್ವಾತಂತ್ರ್ಯ ಸಾಧಿಸೋಣ, ಸಾಮಾಜಿಕ ಪ್ರಶ್ನೆಗಳನ್ನು ಆಮೇಲೆ ಪರಿಹರಿಸಿಕೊಳೋಣ, ಸದ್ಯಕ್ಕೆ ಎಲ್ಲರೂಸೇರಿ ಬ್ರಿಟಿಷರ ವಿರುದ್ಧ ಹೋರಾಡೋಣ ಎನ್ನುತ್ತಿದ್ದರು. ಇನ್ನೊಂದೆಡೆ ಅಂಬೇಡ್ಕರ್ ಮೊದಲು ಸಾಮಾಜಿಕ ಸಮಾನತೆ ಸ್ಥಾಪನೆಯಾಗಲಿ, ಸ್ವಾತಂತ್ರ್ಯ ಪ್ರಶ್ನೆಯನ್ನು ಆಮೇಲೆ ಎತ್ತಿಕೊಳ್ಳೋಣ, ಯಾಕೆಂದರೆ ಬ್ರಿಟಿಷರು ಹೊರಟುಹೋದರೂ ಹಿಂದೂ ಮೇಲು ಜಾತಿಯವರು ಅವರ ಜಾಗವನ್ನು ಆಕ್ರಮಿಸಿಕೊಂಡು ದಲಿತರ ಮೇಲೆ ತಮ್ಮ ದಬ್ಬಾಳಿಕೆಯನ್ನು ಮುಂದುವರೆಸುವುದು ನಿಶ್ಚಿತ, ಅದರ ಬದಲು ಬ್ರಿಟಿಷರು ಇಲ್ಲಿಯೆ ಉಳಿದಷ್ಟೂ ದಲಿತರ ಬಿಡುಗಡೆಯ ವಾಸ್ತವ ಸಾಧ್ಯತೆ ಹೆಚ್ಚು ಎಂದು ವಾದಿಸುತ್ತಿದ್ದರು. ಆದರೆ ಗಾಂಧಿ ಮಾತ್ರ ಭಾರತವನ್ನು ಏಕಕಾಲಕ್ಕೆ ಒಂದು ರಾಷ್ಟ್ರವಾಗಿಯೂ, ಹಾಗೆಯೇ ಒಂದು ಸಮಾಜವಾಗಿಯೂ ನೋಡಿದರು. ಹೊರ ವೈರಿಯ ವಿರುದ್ಧ ಅಂದೋಲನ ನಡೆಸುವುದರ ಜೊತೆಜೊತೆಗೆ ಒಳದೋಷಣಗಳ ವಿರುದ್ಧವೂ ಹೋರಾಟವನ್ನು ಸಂಘಟಿಸಿದರು. ಅವರ ಈ ದ್ವಿವಿಧಾನ ಹಲವೊಮ್ಮೆ ಸಮಾಜವಾದಿ ನೆಹರೂಗೆ ಕೂಡ ಗೊಂದಲವನ್ನುಂಟುಮಾಡುತ್ತಿತ್ತು. ಆಗೆಲ್ಲ ಅವರು ಗಾಂಧಿಜಿಯನ್ನು ಕೇಳುತ್ತಿದ್ದುದುಂಟು ‘ಬ್ರಿಟಿಷರನ್ನು ಹೊರ ಹಾಕಲು ಎಲ್ಲರೂ ಒಗ್ಗೂಡಿರುವಾಗ ನೀವು ನಮ್ಮನ್ನು ಒಡೆಯುತ್ತಿದ್ದೀರಲ್ಲ? ಹರಿಜನರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳಬೇಕೆಂದು ಹಠ ಹಿಡಿಯುತ್ತಿದ್ದೀರಲ್ಲ? ಏನಿದರ ಅರ್ಥ?’ ಅದರ ಅರ್ಥ ಗಾಂಧೀಜಿಗೆ ಅತ್ಯಂತ ಸ್ಪಷ್ಟವಾಗಿ ಗೊತ್ತಿತ್ತು. ಸಾಮಾಜಿಕ ನ್ಯಾಯವಿಲ್ಲದ ರಾಷ್ಟ್ರವ್ಯವಸ್ಥೆ ಬಹುಬೇಗನೆ ಫ್ಯಾಸಿಸ್ಟ್ ಆಗುವ ಅಪಾಯಕ್ಕೆ ಬಲಿಬೀಳುವುದೆಂಬ ಸತ್ಯ ಅವರಿಗೆ ತುಂಬ ಚೆನ್ನಾಗಿ ತಿಳಿದಿತ್ತು. ಹಿಟ್ಲರ್‌ನ ವಿಷಯದಲ್ಲಿ ಇದೇ ಆದದ್ದು. ರಾಷ್ಟ್ರೀಯ ವಾದಕ್ಕೆ ಫ್ಯಾಸಿಸ್ಟ್ ಆಗುವ ಗುಣ ಮೊದಲಿನಿಂದಲೂ ಇರುತ್ತದೆ. ಅದೇ ರೀತಿ ಸಾಮಾಜಿಕ ನ್ಯಾಯ ಮಾತ್ರವೆ ಮುಖ್ಯವಾಗಿಬಿಟ್ಟರೆ ನಮ್ಮಂತಹ ಬಡದೇಶ ಬಹುಶಃ ಒಡೆದು ಚೂರಾಗಿ ಬಿಡುವ ಅಪಾಯವೂ ಉಂಟು.  ಇವೆರಡೂ ಅತಿಗಳಿಂದ ನಮ್ಮನ್ನು ಪಾರುಮಾಡಿದ್ದೇ ಗಾಂಧೀಜಿಯ ಸಮ್ಯಕ್‌ದೃಷ್ಟಿ.

ಇನ್ನು, ಇಪ್ಪತ್ತೊಂದನೆಯ ಶತಮಾನಕ್ಕೆ ಹೆಜ್ಜೆಯಿಡುತ್ತಿರುವ ನಮ್ಮ ನಾಗರಿಕತೆಯ ಮುಂಬರುವ ಘಟ್ಟಗಳಲ್ಲಿ ಪರಿಸರ ಸಂರಕ್ಷಣೆ ಬಹುಮುಖ್ಯ ವಿಷಯಗಳಲ್ಲೊಂದಾಗಲಿದೆ. ಇಲ್ಲಿಯೂ ನಾವು ಗಾಂಧೀಜಿಯ ಪ್ರಸ್ತುತತೆಯನ್ನು ಕಾಣಬಹುದು. ಈವರೆಗೆ ನಾವು ಹಲವು ರೀತಿಯ ಪಕ್ಷಗಳನ್ನು ನೋಡುತ್ತ, ಕಟ್ಟುತ್ತ ಬಂದಿದ್ದೇವೆ; ಚಳುವಳಿಗಳನ್ನು ನಡೆಸುತ್ತ ಬಂದಿದ್ದೇವೆ. ಇಂದು ದಲಿತರು ತಮ್ಮದೊಂದು ಪಕ್ಷವನ್ನು ಕಟ್ಟಬಹುದು; ಹಾಗೆಯೆ ಮೇಲುಜಾತಿಯವರು, ಕಪ್ಪು ಜನರು, ಬಡವರು, ಶ್ರೀಮಂತರು, ತೃತೀಯ ಜಗತ್ತಿನ ಜನರು, ಕಾರ್ಮಿಕರು, ರೈತರು-ಎಲ್ಲರೂ ತಮ್ಮ ತಮ್ಮ ಪಕ್ಷಗಳನ್ನು ಕಟ್ಟಿಕೊಂಡು ತಮ್ಮ ಹಕ್ಕುಗಳಿಗಾಗಿ ಹೋರಾಡಬಹುದು. ಆದರೆ ನಮ್ಮ ಭೂಮಿ ತಾಯಿ ಅಂಥದೊಂದು ಪಕ್ಷಕಟ್ಟಿಕೊಳ್ಳಲು ಸಾಧ್ಯವಿದೆಯೆ? ನಮ್ಮ ಸುತ್ತಮುತ್ತಲ ಗಿಡಮರ ಬೆಟ್ಟಗಳೂ ಪ್ರಾಣಿಪಕ್ಷಿಕೀಟಗಳೂ ತಮ್ಮ ತಮ್ಮ ಪಕ್ಷ ಕಟ್ಟಿಕೊಳ್ಳಲು ಸಾಧ್ಯವಿದೆಯೆ? ಇಲ್ಲ. ಇನ್ನು ಅವರ ಪರವಾಗಿ ವಾದಿಸುವವರು ಯಾರು? ಅವರನ್ನು ಸಂಘಟಿಸುವವರು ಯಾರು? ನಾವು ಆಧುನಿಕ ಮನುಷ್ಯರಂತೂ ಬಿಡಿಸಿಕೊಳ್ಳಲಾರಂಥ ವಿಷವ್ಯೂಹವೊಂದರಲ್ಲಿ ನಮ್ಮನ್ನೆ ನಾವು ಸಿಲುಕಿಸಿಕೊಂಡಿದ್ದೇವೆ. ಆಸೆಗಳನ್ನು ಬೆಳೆಸಿಕೊಂಡು ಅವುಗಳ ಪೂರೈಕೆಗೆಂದು ವಿದ್ಯುಚ್ಛಕ್ತಿ ಬೇಕೆನ್ನುತ್ತೇವೆ, ಅದಕ್ಕೆಂದು ಅಣೆಕಟ್ಟುಗಳನ್ನು ಕಟ್ಟುತ್ತೇವೆ, ಆಗ ಕಾಡುಬೆಟ್ಟ ನಾಶವಾದುವೆಂದು ನಾವೇ ಕಂಗಾಲಾಗುತ್ತೇವೆ. ಇಂಥ ಸನ್ನಿವೇಶದಲ್ಲಿ, ಗಿಡಮರ ಪಶುಪಕ್ಷಿಗಳ ಪರವಾಗಿಯೂ ನಾವೇ ಮಾತನಾಡುವುದು ಅನಿವಾರ್ಯ ಎನ್ನುವ ವಾಸ್ತವವೂ, ಅವುಗಳ ಭವಿಷ್ಯದಲ್ಲಿಯೆ ನಮ್ಮ ಭವಿಷ್ಯವೂ ಅಡಗಿರುವುದು ಎನ್ನುವ ಸತ್ಯವೂ ನಮಗೀಗ ಅರಿವಾಗುತ್ತಲಿವೆ. ಗಾಂಧೀಜಿ ಇದನ್ನು ಬಹಳ ಹಿಂದೆಯೆ ತಿಳಿದಿದ್ದರು ಹಾಗೂ ಹೇಳಿದ್ದರು. ಪ್ರಕೃತಿಯನ್ನೆವುದು ಅಕ್ಷಯ ಭಂಡಾರವಲ್ಲ, ಅದರ ಶಕ್ತಿ-ಸಹನೆಗಳಿಗೆ ಕೊನೆಯಿಲ್ಲದಿಲ್ಲ ಎಂದು ಅವರು ಎಚ್ಚರಿಸಿದ್ದರು. ಇಂಥ ಅರಿವೆ ನಮ್ಮ ಮುಂದಿನ ಚರಿತ್ರೆಯ ಮುಖ್ಯ ನಿರ್ಧಾರಕ ಪ್ರೇರಣೆಗಳಲ್ಲೊಂದಾಗಬಹುದು.

ಆದರೆ ಮನುಷ್ಯನ ಸಾಮಾನ್ಯ ಸ್ವಭಾವದಲ್ಲಿಯೆ ದೊಡ್ಡದೊಂದು ತೊಡಕುಂಟು. ವಿಚಾರದ ಮಟ್ಟಿಗೆ ತನಗೆ ಸತ್ಯವೆಂದು ಗೋಚರವಾದುದನ್ನು ಆತ ತಕ್ಷಣವಾಗಿಯೊ, ಶೀಘ್ರವಾಗಿಯೊ ಆಚರಣೆಗೆ ತರಲಾರ. ಪೂರ್ವಸೂಚಿತ ವಿಪತ್ತೊಂದು ತೀರಾ ಕುತ್ತಿಗೆಗೆ ಬರುವವರೆಗೆ ಆತ ಯಾವ ಮುನ್ನೆಚ್ಚರದ ಕ್ರಮಗಳನ್ನೂ ಕೈಗೊಳ್ಳಲಾರ. ಜಿದ್ದು ಕೃಷ್ಣಮೂರ್ತಿ ಒಂದೆಡೆ ಹೇಳುತ್ತಾರೆ; ‘ಅತಿವೇಗವಾಗಿ ಕಾರನ್ನು ನಡೆಸಿಕೊಂಡು ಹೋಗುತ್ತಿರುವಾಗ ಅಕಸ್ಮಾತ್ತಾಗಿ ಪ್ರಪಾತವೊಂದು ಎದುರಾದರೆ ಏನು ಮಾಡುತ್ತೀರಿ? ಯಾವ ಯೋಚನೆಯ ಗೋಜಗೂ ಹೋಗದೆ ಬ್ರೇಕ್ ಹಾಕುತ್ತೀರಿ. ಅಲ್ಲವೆ?’ ಆಧುನಿಕ ಜಗತ್ತಿಗೂ ಈಗ ಇಂಥದೊಂದು ಪ್ರಪಾತದ ವಿಪತ್ತು ಪ್ರತ್ಯಕ್ಷವಾಗಿದೆ. ಅಭಿವೃದ್ಧಿ ಪ್ರಗತಿಗಳ ಏಕಮುಖಿ ಕಲ್ಪನೆಯನ್ನು ಬೆಂಬತ್ತಿ ಹೊರಟ ನಮಗೀಗ ಅದರ ಕಾರಾಳವಾದ ಮಗ್ಗುಲುಮುಖ ಕಂಡುಬರುತ್ತಿದೆ. ಇಂದ್ರಿಯ ಆಸೆಗಳ ದಾಸರಾಗಿ ಬೆಳೆದ ನಮಗಿಂದು ಅದೇ ಇಂದ್ರಿಯಗಳನ್ನೂ ಸಹಜವಾಗಿ ಬಳಸಲಾಗುತ್ತಿಲ್ಲ. ಆಧುನಿಕ ನಗರಗಳೆಂದರೆ ಮೂಗು-ಕಣ್ಣು-ಕಿವಿ ಎಲ್ಲವನ್ನೂ ಮುಚ್ಚಿ ಕೊರಬೇಕಾದಂತಹ ಸನ್ನಿವೇಶವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಇಂದು ಜಪಾನಿನ ಕೆಲವು ಹೋಟೆಲ್‌ಗಳಲ್ಲಿ ವಿಶೇಷ ಆಕ್ಸಿಜನ್ ಸಿಲಿಂಡರ್ ಹಾಗೂ ಮಾಸ್ಕ್‌ಗಳನ್ನು ಇಟ್ಟಿರುತ್ತಾರೆ. ಹೊರಗಿನ ಬಿಸಿಲು ತಾಳಲಾಗದೆ ಒಳಗೆ ಬಂದು ನೀರು ಕುಡಿಯುವಂತೆ ಅಲ್ಲಿ ಜನ ಹೊರಗಿನ ಕಲುಷಿತವಾಯುವನ್ನು ಕುಡಿದು ನಿಸ್ತೇಜರಾಗಿರುವವರು ಒಳಗೆ ಬಂದು ಆ ಮುಖವಾಡದ ಮೂಲಕ ಕೊಂಡ ತಾಜಾ ಗಾಳಿಯನ್ನು ಸೇವಿಸಿಹೋಗುತ್ತಾರೆ- ಆಸ್ಪತ್ರೆಯ ರೋಗಿಗಳಂತೆ. ಮುಂದೆ ಇಡಿ ಮಾನವ ಸಮುದಾಯಕ್ಕೇ ಇಂಥ ಗತಿ ಬಂದೊದಗಿದರೂ ಆಶ್ಚರ್ಯವಿಲ್ಲ. ಸುಖವನ್ನು ಬೆನ್ನಟ್ಟಿ ಹೊರಟ ನಮಗೆ ನಮ್ಮನ್ನು ಬೆನ್ನಟ್ಟಿರುವ ಸಂಕಷ್ಟ ಕಾಣುತ್ತಿಲ್ಲ.

ಇಂಥ ಸಂದರ್ಭದಲ್ಲಿ ಗಾಂಧೀಜಿಯವರ ಹಾಗೂ ಅವರಂಥವರ ಚಿಂತನೆ ಅತ್ಯಂತ ಮೌಲಿಕವಾದುದು ಎಂಬುದು ನನ್ನ ದೃಢ ನಂಬಿಕೆ. ಗಾಂಧೀಜಿಯವರನ್ನು ಪವಿತ್ರವಸ್ತುವೆಂಬಂತೆಯೊ, ಇಲ್ಲ ಗೊಡ್ಡು ಫಕೀರನಂತೆಯೊ ಕಾಣದೆ, ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಅವರೆದುರು ಮುಕ್ತವಾಗಿ ಹೇಳಿಕೊಂಡು, ಅವರೊಡನೆ ಸ್ನೇಹಸಂವಾದದಲ್ಲೊ ಇಲ್ಲ ಉಗ್ರವಾಗ್ವಾದದಲ್ಲೊ ತೊಡಗುವುದರ ಮೂಲಕ ಮಾತ್ರ ನಾವು ಅವರ ಮಹತ್ವವನ್ನು ಮನಗಾಣಬಹುದು, ಅವರ ಸಾರ್ವಕಾಲಿಕ ಪ್ರಸ್ತುತತೆಯನ್ನು ಅರಿತುಕೊಳ್ಳಬಹುದು. ಇದುವೆ, ನನ್ನ ದೃಷ್ಟಿಯಲ್ಲಿ, ಗಾಂಧಿಯನ್ನು ಸಂಧಿಸುವ, ಅವರಿಗೆ ಸ್ಪಂದಿಸುವ ಪ್ರಾಮಾಣಿಕವೂ, ಸೃಜನಶೀಲವೂ, ಅರ್ಥಪೂರ್ಣವೂ ಆದ ಮಾರ್ಗ.

ದಿನಾಂಕ ೨೧೧೦೯೫ರಂದು ಸಿಂಡಿಕೇಟ್ ಬ್ಯಾಂಕ್ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಹಾತ್ಮಾಗಾಂಧೀಜಿಯವರ ೧೨೫ನೆಯ ಜಯಂತಿ ಉಪನ್ಯಾಸ ಮಾಲೆಯ ಉದ್ಘಾಟನೆ ಮತ್ತು ಪ್ರಥಮ ಉಪನ್ಯಾಸದ ಪೂರ್ಣ ಪಾಠ: ಜಶವಂತ ಜಾದವ್

ಕೃಪೆ: ಸಿಂಡಿಕೇಟ್ ಬ್ಯಾಂಕ್, ಪ್ರಧಾನ ಕಾರ್ಯಾಲಯ, ಮಣಿಪಾಲ