‘ಮಹಾತ್ಮ’ ನಾಟಕವಾಗಿ ಮೂಡುವುದು ಕಷ್ಟ. ಯಾವುದು ನಾಟಕೀಯ ಎಂಬ ನವಾಖಲಿಯಲ್ಲಿ ಗಾಂಧಿಯವರ ಅಹಿಂಸಾಮಾರ್ಗ ಯಶಸ್ವಿಯಾಯಿತು ಎನ್ನುವಂತೆ ಕಥೆಯನ್ನು ಬೆಳೆಸಿಕೊಂಡರೆ, ಅದೊಂದು ಅಗ್ಗದ ಸರ್ಕಾರಿ ಪ್ರಚಾರದಂತೆಯೋ, ಅಥವಾ ಗಾಂಧಿ ಸುತ್ತಿಯಂತೆಯೋ ಭಾಸವಾದೀತು; ಬದಲಾಗಿ ಗಾಂಧಿ ಎಷ್ಟು ದೊಡ್ಡವರಿದ್ದೂ ಸೋತರು ಎಂದು ಕೊರಗಿದರೆ ಐತಿಹಾಸಿಕ ಸತ್ಯಕ್ಕೆ ಅಪಚಾರವಾದೀತು, ಅಥವಾ ಭಾವಾತಿರೇಕದ ದೃರ್ಶಯ ಸಂಯೋಜನೆಯಲ್ಲಿ ಪ್ರೇಕ್ಷಕನನ್ನು ಗೆದ್ದುಕೊಳ್ಳಲು ಹವಣಿಸುವ ದುರಂತ ಕಥೆಯಾದೀತು.

ಉದಾಹರಣೆಗೆ ‘ಗಾಂಧಿ ವರ್ಸಸ್ ಗಾಂಧಿ’ ಎಂಬ ಇನ್ನೊಂದು ನಾಟಕದಿಂದ ನಮಗಾಗುವ ಅನುಭವ ಪರಿಶೀಲಿಸೋಣ. ಕನಮ್ಮ ಮನಸ್ಸನನ್ನು ಕರಗಿಸಲು ಹವಣಿಸುವ ನಾಟಕವಿದು. ಮನಸ್ಸು ಆರ್ದ್ರವಾಗಿ ನಾವು ಕಂಡುಕೊಳ್ಳುವುದಾದರೂ ಏನನ್ನು? ಸರಿ, ಯಾರದು ತಪ್ಪೆಂದು ಹೇಗೆ ಹೇಳುವುದು. ತಂದೆ ಮಗ-ಇಬ್ಬರಿಗೂ ಸಮಾನವಾಗಿ ಸ್ಪಂದಿಸುವಂತಾಗುತ್ತದೆ ಎಂಬುದೇ ಈ ನಾಟಕದ ಅನುಭವದ ಹೆಚ್ಚುಗಾರಿಕೆಯಾಗಿಬಿಡುತ್ತದೆ.

ಮುಕುಂದರಾವ್ ಎತ್ತಿಕೊಳ್ಳುವ ವಸ್ತುವಿಗೆ ಈ ಬಗೆಯ ನಾಟಕೀಯ ಗುಣಗಳನ್ನು ತರಲು ಪ್ರಯತ್ನಿಸಿದರೆ ನಮ್ಮಪಾಲಿಗೆ ಒಳ್ಳೆಯದನ್ನು ಕಂಡು ಕೇಳಿ ಕಟ್ಟಿಕೊಳ್ಳುವ ಪುಣ್ಯಮಾತ್ರ ಲಭಿಸೀತು. ಅದರಿಂದ ಮನಸ್ಸಿಗೆ ಸಮಾಧಾನವೂ ಆದೀತು. ನಾಯಿಯ ಬಾಲಕ್ಕೆ ನಳಿಗೆ ಹಾಕಿದಂತೆ ಈ ಕ್ಷಣದ ಸಮಾಧಾನ. ಬಹುತೇಕ ಹೆಚ್ಚು ಸಾಹಿತ್ಯಕೃತಿಗಳೂ ನಾಟಕ ಸಿನಿಮಾಗಳೂ ಹೀಗೇ ನಮ್ಮನ್ನು ಪುಳಕಿತ ಮಾನವರಾಗಿ ಒಂದೆರಡು ಗಂಟೆ ಇಟ್ಟುಕೊಳ್ಳಬೇಕೆಂಬ ಸನ್ನಾಹದವು. ಇಂಥ ಅನುಭವ ನಮಗೆ ಬೇಡವೆಂದಲ್ಲ; ಆದರೆ ಅದು ಗಾಢವಲ್ಲ ಕಾಡುತ್ತ ಉಳಿಯುವ ಅನುಭವವಲ್ಲ.

ಮುಕುಂದರಾವ್‌ರ ‘ಮಹಾತ್ಮ’ ನಾಟಕ ನೋಡುತ್ತ ‘ಗಾಂಧಿ’ ಎಂಬ ಸಮಸ್ಯೆಯೇ ನಮ್ಮನ್ನು ಎದುರಾಗುತ್ತದೆ. ಭಾವವಶರಾಗಿ ಗಾಂಧಿಯನ್ನು ಕಾಣದೇ, ಅವರು ಸೋತರೋ ಗೆದ್ದರೋ ಎಂಬ ಕುತೂಹಲದಲ್ಲಿ ತಣಿಯದೇ, ಗಾಂಧಿಯನ್ನೇ ನಾವು ನೋಡುವಂತೆಯೂ, ಆ ಮೂಲಕ ನಮ್ಮನ್ನೇ ನೋಡಿಕೊಳ್ಳುವಂತೆಯೂ ಆಗುತ್ತದೆ. ನಾಟಕವನ್ನು ಈ ಬಗೆಯ ನೋಡುವಿಕೆಗೆ ನೆವವಾಗಿ ಮಾಡಿಕೊಂಡು ಕೆಲವು ವಿಚಾರಗಳನ್ನು ಇಲ್ಲಿ ಇಡಲಿದ್ದೇನೆ.

ಲೋಹಿಯಾ ತನ್ನ  ಕೊನೆಕೊನೆಯ ಒಂದು ಲೇಖನದಲ್ಲಿ ಮಹಾತ್ಮ ಗಾಂಧೀ ಏಸುಕ್ರಿಸ್ತನಷ್ಟು ದೊಡ್ಡವರಲ್ಲವೇನೊ ಎಂದು ಸಂದೇಹಿಸಿದ್ದರು. ಈ ಸಂದೇಹಕ್ಕೆ ಕಾರಣ, ತನ್ನ ಮೃತ ಶರೀರದ ಮೇಲೆ ಮಾತ್ರ ದೇಶದ ವಿಭಜನೆ ಸಾಧ್ಯವೆಂದು ಘೋಷಿಸಿದ್ದ ಗಾಂಧೀಜಿ ಯಾಕೆ ವಿಭಜನೆಯನ್ನು ಸಾಯದೇ ಸಹಿಸಿದರು? ಅವರ ಇಳಿವಯಸ್ಸಿನ ದೌರ್ಬಲ್ಯ ಅದಕ್ಕೆ ಕಾರಣವೆ? ನೆಹರೂ ಮೇಲಿನ ಅವರ ಮೋಹ ಕಾರಣವೆ? -ಹೀಗೆ ಲೋಹಿಯಾ ತನ್ನ ಪಾಲಿಗೆ ಆರಾಧ್ಯ ಪುರುಷನಾಗಿದ್ದ ಗಾಂಧಿಯನ್ನು ದುಗುಡದಲ್ಲಿ ಪ್ರಶ್ನಿಸುತ್ತಾರೆ.

ಗಾಂಧಿಯನ್ನು ಪ್ರಶ್ನಿಸುವುದಾದರೆ ಹೀಗೇ ಪ್ರಶ್ನಿಸಬೇಕು; ಮನಃಶಾಸ್ತ್ರೀಯವಾಗಿ ಅವರನ್ನು ವಿಶ್ಲೇಷಿಸಿ ಪ್ರಶ್ನಿಸುವುದಲ್ಲ. ಏಸುಕ್ರಿಸ್ತನನ್ನೂ ಕೂಡ ಹೀಗೆ ಪ್ರಶ್ನಿಸಬಹುದು. ಮೊಳೆಗಳಿಂದ ಶಿಲುಬೆಗೆ ಜಡಿಯಲ್ಪಟ್ಟ ಏಸು ಕೊನೆಯಲ್ಲಿ ಯಾಕೆ ‘ದೇವರೇ ದೇವರೇ ನೀನೂ ನನ್ನ ಕೈಬಿಟ್ಟಿಯಾ’ ಎಂದು ಆರ್ತನಾಗಿ ಕೂಗಿದ? ದೇವರು ನಮ್ಮೆಲ್ಲರ ಪ್ರೀತಿಯ ತಂದೆ ಎಂದು ನಂಬಿ ಬದುಕಿದ್ದ ಏಸುವಿಗೆ ತನ್ನ ದೇಹದ ಪರಮವೇದನೆಯಲ್ಲಿ ದೇವರ ಕರುಣೆಯ ಬಗ್ಗೆ ಅನುಮಾನ ಹುಟ್ಟಿತೆ? ಎರಡು ಸಾವಿರ ವರ್ಷಗಳ ದಾಖಲಾದ ಮಾನವ ಚರಿತ್ರೆಯಲ್ಲಿ ಈ ಇಬ್ಬರ ಬಗ್ಗೆ ಇಂಥ ತಲ್ಲಣಗೊಳಿಸುವ ಪ್ರಶ್ನೆಗಳನ್ನು ಕೇಳಬಹುದೇನೋ. ಮನುಷ್ಯನ ಅಸ್ತಿತ್ವದ ತಿರುಳಿಗೇ ಸಂಬಂಧಪಟ್ಟ ಪ್ರಶ್ನೆಗಳು ಇವು.

ಮನುಷ್ಯಮಾತ್ರರಾದ ನಮಗೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬಲ್ಲ ಅಧಿಕಾರವೂ ವಿನಯದಲ್ಲಿ ಮಾತ್ರ ಲಭಿಸುತ್ತದೆ. ಇವು ನಮಗೆ ಉತ್ತರ ಗೊತ್ತಿರುವ ಪ್ರಶ್ನೆಗಳಾಗಿರುವುದಿಲ್ಲ. ನಮ್ಮ ಆಂತರ್ಯದ ಕತ್ತಲಿನಲ್ಲಿ ನಾವು ಎದುರಾಗುವ ಪ್ರಶ್ನೆಗಳು ಇವು. ಹೊರಗೆ ನಡೆಯುತ್ತಿದ್ದ ಮತೀಯ ಹಿಂಸೆಯಿಂದ ವಿಹ್ವಲರಾದ ಗಾಂಧೀಜಿ, ಈ ಹಿಂಸೆ ತನ್ನ ಒಳಗಿನದೂ ಇರಬಹುದೆ ಎಂದು ಸಂಶಯಗ್ರಸ್ತರಾದರು. ಹಿಂಸೆಗೂ ಕಾಮಕ್ಕೂ ಸಂಬಂಧವಿರಬಹುದೆಂದು ಟಾಲ್‌ಸ್ಟಾಯ್‌ನಂತೆಯೇ ತಿಳಿದಿದ್ದ ಗಾಂಧೀಜಿ ತಾನು ನೈಜ ಬ್ರಹ್ಮಚಾರಿಯೇ ಎಂದು ಶೋಧಿಸಿಕೊಳ್ಳಲು ತನ್ನ ಮೊಮ್ಮಗಳಂತಿದ್ದ ಹುಡುಗಿಯ ಜೊತೆ ಬೆತ್ತಲೆ ಮಲಗಲು ಪ್ರಾರಂಭಿಸಿದರು. ಭಾರತದ ಚರಿತ್ರೆಯ ಕರಾಳ ದಿನಗಳಲ್ಲಿ ಹೊರಗಿನ ಹಿಂಸೆಗೆ ಮೂಲವನ್ನು ತನ್ನಲ್ಲೂ ಹುಡುಕಿಕೊಂಡ ಗಾಂಧೀಜಿಯನ್ನು ಪ್ರಪಂಚವನ್ನೇ ತನ್ನಲ್ಲಿ ಆವಾಹಿಸಿಕೊಂಡ ಕ್ರಿಸ್ತನಂತಹ ದೇವಪುರುಷನೆಂದೂ ನೋಡಬಹುದು; ಹಾಗೆಯೇ ವಿಶ್ವಾತ್ಮಕತೆಯ ಭ್ರಮೆಯಿಂದ ಉಲ್ಬಣಗೊಂಡ ಅಹಂಕಾರದ ವಿಕಾರದಂತೆಯೂ ಕಾಣಬಹುದು.

ಇಂಥ ಪ್ರಶ್ನೆಗಳಿಂದ ಗಾಂಧೀಜಿಯನ್ನು ಅರಿಯಲು ಪ್ರಯತ್ನಿಸುವಾಗ ಅವರ ಇದೇ ಬದುಕೇ ಧರ್ಮಸಂಕಟಗಳ ಕ್ಷೇತ್ರವೆಂದು ಭಾಸವಾಗುತ್ತದೆ. ಈ ಧರ್ಮಸಂಕಟಗಳಿಗೆ ಮನಃಶಾಸ್ತ್ರೀಯ ವ್ಯಾಖ್ಯೆ ಕೊಟ್ಟು, ಅಥವಾ ಐತಿಹಾಸಿಕ ಸತ್ಯಗಳ ಚೌಕಟ್ಟಿನಲ್ಲಿಟ್ಟು ಅರಿಯುವ ಪ್ರಯತ್ನದಲ್ಲಿ ನಮಗೆ ನಿಜವಾದ ಗಾಂಧಿ ಸಿಗದೇ ಹೋಗುತ್ತಾರೆಂದು ನನ್ನ ಅನುಮಾನ. ಸತತವಾಗಿ ‘ಆಗು’ತ್ತಲೇ ಬೆಳೆಯುತ್ತಿದ್ದ ಗಾಂಧೀಜಿಯ ಒಳಗಿನ ಶಕ್ತಿಯ ಸೆಲೆಯೇನು ಎಂದು ನಾವು ಕೇಳಿಕೊಂಡಾಗ ಅದು ಗಾಂಧೀಜಿಯ ರಾಜಕೀಯ ಪ್ರಜ್ಞೆಮಾತ್ರವಲ್ಲ, ಅವರ ನೈತಿಕ ಔನ್ನತ್ಯಮಾತ್ರವಲ್ಲ-ಈ ಎರಡನ್ನೂ ಅವರಿಗೆ ಸತತವಾಗಿ, ಅನಿರೀಕ್ಷಿತವೆಂಬಂತೆ ಲಭ್ಯವಾಗಿಸಿದ್ದ ಅವರ ‘ಪ್ರಾರ್ಥನೆ’ ಎಂದು ಅನ್ನಿಸುತ್ತದೆ. ಈ ಬಗ್ಗೆ ಇನ್ನಷ್ಟು ವಿವರಣೆ ಬೇಕು.

ತಪಸ್ಸು, ಯಜ್ಞ, ನಾಟ್ಯ-ಮನುಷ್ಯ ತನ್ನನ್ನು ತಾನು ಮೀರುವ ಈ ಮೂರು ಪ್ರಕ್ರಿಯೆಗಳ ಬಗ್ಗೆ ಗಿರೀಶ್ ಕಾರ್ನಾಡರು ಒಳ್ಳೆಯ ನಾಟಕ ಬರೆಂದಿದ್ದಾರೆ. ತಪಸ್ಸು ಮತ್ತು ಯಜ್ಞಗಳಲ್ಲಿ ಅಹಂಕಾರ ಬೆಳೆಯುತ್ತದೆಯೇ ವಿನಹ ಮನುಷ್ಯ ತನ್ನನ್ನು ತಾನು ಮೀರುವುದಿಲ್ಲ. ಕಾರ್ನಾಡರ ನಾಟಕದಲ್ಲಿ ಮೀರುವ ಕ್ರಿಯೆಯಾಗಿ ‘ನಾಟ್ಯ’ಕ್ಕೆ ಮಹತ್ವ ಒದಗುತ್ತದೆ. ಈ ಮೂರನ್ನೂ ಕಾರ್ನಾಡರ ನಾಟಕದ ಪ್ರಮೇಯವನ್ನು ಮೀರಿ ನೋಡಲು ಪ್ರಯತ್ನಿಸೋಣ.

ಪುರಾಣಗಳಲ್ಲಿ ಕಾಣುವಂತೆ ತಪಸ್ಸಿನ ಹಿಂದೆ ಅಹಂಕಾರ ಮತ್ತು ಹಠಗಳು ಇರುತ್ತವೆ; ಆದರೆ ಈ ತಪಸ್ಸು ಆತ್ಮಾನುಸಂಧಾನದ ಪ್ರಾರ್ಥನೆಯೂ ಆಗಬಹುದು. ಯಜ್ಞಕೂಡ ಇಬ್ಬಗೆಯದು. ಅಧಿಕಾರ ಮತ್ತು ಧನ ಬಲಗಳ ವೃದ್ಧಿಗಾಗಿಯೂ, ಪ್ರದರ್ಶನಕ್ಕಾಗಿಯೂ ಯಜ್ಞಮಾಡಬಹುದು; ಅಂತೆಯೇ ತನ್ನನ್ನು ತಾನು ಉಪಯುಕ್ತ ಕ್ರಿಯೆಯಲ್ಲಿ ವಿಸರ್ಜಿಸಿಕೊಳ್ಳುವ ವಿನಿಯೋಗಿಸಿಕೊಳ್ಳುವ ದಿವ್ಯವೂ ಯಜ್ಞ ಆಗಬಹುದು. ‘ನಾಟ್ಯ’ ತತ್‌ಪರತೆಯಲ್ಲಿ ತನ್ನ ಏಕಾಕಿತನದ ಭಿನ್ನತೆಯನ್ನು ಕಳೆದುಕೊಳ್ಳುವ, ಅವಾಹಿತವಾಗುವ ಕ್ರಿಯೆಯಾದ್ದರಿಂದ ಇದ್ದು ಮತ್ತೆ ಇಲ್ಲವಾಗುವ ಪುಳಕವೂ ‘ನಾಟ್ಯ’ವಾಗಬಹುದು; ತನಗೆ ಅನ್ಯವೆಂದುಕೊಂಡಿದ್ದು ತನಗೂ ಸೇರಿದ್ದೆಂಬ ಪರಕಾಯ ಪ್ರವೇಶದ ಸಾಕ್ಷಾತ್ಕಾರವೂ ಆಗಬಹುದು. ಈ ಮೂರೂ ಹಠ, ಮತ್ತು ಲಂಪಟತನಗಳಿಗೆ ಆಶ್ರಯವಾಗಬಲ್ಲ ಕ್ರಿಯೆಗಳಾಗಿದ್ದೂ ಮನುಷ್ಯ ತನ್ನ ದೈನಿಕದ ಕ್ಷುಲ್ಲಕತನದಿಂದಲೂ ಪುನರಾವರ್ತನದ ಬೇಸರದಿಂದಲು ಮುಕ್ತವಾಗುವ ಸಾಧನಗಳಾಗಬಹುದು. ಈ ಎರಡು ಸಾಧ್ಯತೆಗಳು ವಿರೋಧಿಗಳಾಗಿ, ಸದಾ ಸಾಧಾನಗಳಾಗಬಹುದು. ಈ ಎರಡು ಸಾಧ್ಯತೆಗಳು ವಿರೋಧಿಗಳಾಗಿ, ಸದಾ ಸಮ್ಮುಖವಾಗಿ ಇರುತ್ತವೆ ಎಂಬುದೇ ಮನುಷ್ಯನ ಪಾಡು. ಈ ಮೂರು ಕ್ರಿಯೆಗಳನ್ನೂ ಗಾಂಧೀಜಿ ಸಾತ್ವಿಕಗೊಳಿಸಿಕೊಂಡದ್ದು ಹೇಗೆಂದು ಚಿಂತಿಸೋಣ.

ತಪಸ್ಸು, ಯಜ್ಞ, ನಾಟ್ಯ – ಈ ಮೂರಕ್ಕೂ ಗಾಂಧೀಜಿಗೆ ಮೂಲವಾದ್ದು ಪ್ರಾರ್ಥನೆ. ತಪಸ್ಸೆಂದರೆ ಮೌನವ್ರತದಲ್ಲಿ ಆತ್ಮದೊಡಗಿನ ಪ್ರಾರ್ಥನಾರೂಪಾವಾದ ಸಂಧಾನ. ಯಜ್ಞವೆಂದರೆ ನೂಲುವುದು, ಮತ್ತು ಶೌಚ-ಹೆಣ್ಣಿನ ನಿತ್ಯದ ಕ್ರಿಯೆ-ದುಡಿಮೆಯಲ್ಲಿ ಶರೀರ ಶುದ್ಧವಾಗಿ ಆತ್ಮೋತ್ಕರ್ಷಕ್ಕೆ ಅಡ್ಡಿಯಾಗುವುದರ ಬದಲು ಸಾಧನವಾಗುವುದು.

‘ನಾಟ್ಯ’ ಶಬ್ದವನ್ನು ವಿಶೇಷವಾಗಿ ಅರ್ಥಮಾಡಿಕೊಳ್ಳುವುದರ ಮೂಲಕ ಗಾಂಧೀಜಿಗೆ ಅದನ್ನು ಬಳಸಬೇಕು. ಕಲಾಕೃತಿಯಾದ ‘ನಾಟ್ಯ’ದಲ್ಲಿ ಸಂಕೇತಗಳು ಸಹೃದಯನ ಒಪ್ಪಿಗೆಯಲ್ಲಿ ಜೀವಂತ ನಿಜಗಳಾಗುವುದಾದರೆ, ಇಡೀ ದೇಶದ ಶಿಕ್ಷಣದಲ್ಲಿ ತೊಡಗಿದ್ದ ಗಾಂಧೀಜಿ ‘ಉಪ್ಪು’ ಮತ್ತು ‘ಚರಕ’ವನ್ನು ಹೇಗೆ ಬಳಸಿದರು ನೋಡಬೇಕು. ಅವುಗಳನ್ನು ಕಲಾವಿದನಂತೆಯೇ ಬಳಸಿದರು ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ‘ಉಪ್ಪು’ ಮತ್ತು ‘ಚರಕ’ – ಅವುಗಳ ಬಳಕೆಯ ಯಾವ ಸ್ಥಿತಿಯಲ್ಲೂ ಕೇವಲ ಸಂಕೇತಗಳು ಅಲ್ಲವೇ ಅಲ್ಲ. ಉಪ್ಪು ಮಾಡಲು ಹೊರಟ ಗಾಂಧೀಜಿಯ ದಂಡೀಯಾತ್ರೆ ಬ್ರಿಟಿಷ್ ಸಾಮ್ರಾಜ್ಯದ ತಲ್ಲಣಕ್ಕೆ ಕಾರಣವಾಯಿತು; ಚರಕದ ನೂಲು ಮ್ಯಾಂಚೆಸ್ಟರಿನ ಮಿಲ್ಲುಗಳನ್ನು ಮುಚ್ಚಿಸಿತು; ಸಹಸ್ರಾರು ಬಡಕುಟುಂಬಗಳಿಗೆ ಉದ್ಯೋಗ ಒದಗಿತು.

ಅನ್ನಿಸಿದ್ದನ್ನು ಆಗುವಂತೆ ಮಾಡುವುದು ಉಪಾಸಕರಾದ ತಾಂತ್ರಿಕರ ಅಭಿಲಾಷೆ. ಗಾಂಧೀಜಿ ಒಂದರ್ಥದಲ್ಲಿ ಮಹಾತಾಂತ್ರಿಕರೇ. ಗಾಂಧೀಜಿಯ ‘ತಾಂತ್ರಿಕತೆ’ಯ ಹಿಂದೆ ಇದ್ದುದು ಮಾತ್ರ ವಾಮಾಚಾರದ ಶಕ್ತಿಯ ಉಪಾಸನೆಯಲ್ಲ; ಅಹಂಕಾರದ ನಿರಾಕರಣೆಯ ಇದ್ದುದು ಮಾತ್ರ  ವಾಮಾಚಾರದ ಶಕ್ತಿಯ ಉಪಾಸನೆಯಲ್ಲ; ಅಹಂಕಾರದ ನಿರಾಕರಣೆಯ ಪ್ರಾರ್ಥನೆ. ಅನ್ನಿಸಿದ್ದು ಆಗಬೇಕೆಂದು ಆರ್ತತೆಯಲ್ಲಿ ಕಾಯುವ, ನೋನುವ ಗಾಂಧಿಜಿಯ ಪ್ರಾರ್ಥನಾಶಕ್ತಿ ಇಡೀ ದೇಶದ ಜನತೆಯಲ್ಲಿ ಕಿಂಚಿತ್ತಾದರೂ ಒಳ್ಳೆಯತನವನ್ನೂ ಸಾತ್ವಿಕತೆಯನ್ನು ಹೊತ್ತಿಸಿ ಉರಿಸಬಲ್ಲುದಾಯಿತು. ನವಾಖಲಿಯಲ್ಲಿ ಆದದ್ದೂ ಇದೇ.

ಮಾನವ ಶಕ್ತಿಯ ಉತ್ಕರ್ಷವನ್ನು ಬಯಸುವ ಎರಡು ಬಗೆಯ ತತ್ವಗಳು ಇವೆಯೆಂದು ತೋರುತ್ತದೆ. ಈ ಎರಡೂ ನಮ್ಮ ಕಾಲವನ್ನು ಆಳಿವೆ-ಅದ್ಭುತವಾದ್ದನ್ನು ಸಾಧಿಸಲು ಯತ್ನಿಸಿ ಗೆದ್ದೂ ಇವೆ, ಸೋತೂ ಇವೆ. ಮಾನವಶಕ್ತಿಯ ಉತ್ಕರ್ಷವನ್ನು ಬಯಸುವ ಒಂದು ತತ್ವ, ಸರಳಗೊಳಿಸಿ ಹೇಳುವುದಾದರೆ, ಪ್ರಕೃತಿಯನ್ನು ಗೆಲ್ಲುವುದರಲ್ಲಿ ಇದೆ ಎಂದು ತಿಳಿಯುತ್ತದೆ. ಇದು ಕ್ಷಾತ್ರ ಮಾಗ್. ಆಧ್ಯಾತ್ಮ ಸಾಧನೆಯಲ್ಲಿ ಹಠಯೋಗ, ತಂತ್ರಗಳನ್ನು ಈ ತಾತ್ವಿಕತೆ ಹುಟ್ಟಿಹಾಕುತ್ತದೆ. ರಾಜಕೀಯದಲ್ಲಿ ವಾಮಪಂಥೀಯವಾದ ಕ್ರಾಂತಿಯನ್ನೂ ಈ ತತ್ವ ಹುಟ್ಟಿ ಹಾಕುತ್ತದೆ. ಆಧ್ಯಾತ್ಮದ ವಾಮಮಾರ್ಗಿಗಳಿಗೂ, ರಾಜಕೀಯದ ವಾಮಪಂಥೀಯರಿಗೂ ಗುರಿಯಷ್ಟೇ ಮಾರ್ಗವೂ ಒಳ್ಳೆಯದಾಗಿರಲೇಬೇಕೆಂಬ ನಿಯತ್ತು ಇಲ್ಲವೇನೋ, ಸಾವನ್ನು ಗೆಲ್ಲಬೇಕೆಂಬ ಛಲ, ಸುಖಾಪೇಕ್ಷೆಯಲ್ಲಿ ತನ್ನ ಸಾವನ್ನು ಆದಷ್ಟು ಮುಂದೂಡಬೇಕೆಂಬ ಆಸೆ, ಅಥವಾ ಯಾವ ಕೊರತೆಯೂ ಇಲ್ಲದ ಸಮೃದ್ಧವಾದ, ಸೃಷ್ಟಿಯ ಗೂಢಗಳನ್ನೆಲ್ಲ ಒಡೆದು ಅರ್ಥೈಸಿ ಕೈವಶ ಮಾಡಿಕೊಂಡು ಸಮಾಜದಲ್ಲಿ ಬಾಳುವ ವಾಂಛೆ-ಇವುಗಳಲ್ಲಿ ಮೊದಲೆರಡನ್ನು ಆಧ್ಯಾತ್ಮಕ ವಾಮಮಾರ್ಗಿಗಳಲ್ಲೂ, ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಕಾಣಬಹುದಾದರೆ, ಕೊನೆಯದನ್ನು ಲೆನಿನ್ ಮತ್ತು ಮಾವೊನಂಥವರಲ್ಲಿ ಕಾಣಬಹುದು. ಕ್ಷಾತ್ರಗುಣಗಳನ್ನು ಪಡೆದ ಈ ವಾಮಮಾರ್ಗದಲ್ಲಿ ಜೀವ ಸೊಕ್ಕುತ್ತದೆ; ಸೊಕ್ಕಿ ಅಪಾರ ಹರ್ಷವನ್ನೂ, ಬಲವನ್ನೂ ಆಯಾಸಕಾಣಗೊಡದಂತೆ ವರ್ಧಿಸುವ ಶಕ್ತಿಯನ್ನೂ ಪಡೆದುಕೊಳ್ಳಲು ಹವಣಿಸುತ್ತದೆ. ಈ ಹವಣಿಕೆಯಲ್ಲಿ ಉನ್ಮತ್ತವಾದವರು ನಿಷ್ಕರುಣಿಗಳಾಗಬೇಕಾಗಿ ಬಂದರೆ ಹಿಮ್ಮೆಟ್ಟುವುದಿಲ್ಲ. ದುರ್ಬಲವಾದ್ದನ್ನೂ ರಕ್ಷಿಸಬೇಕೆಂಬ ಮಮತೆಯ ತಾಯ್ತನಕ್ಕೆ ಈ ವಾಮಮಾರ್ಗದ ಆಧ್ಯಾತ್ಮದಲ್ಲಾಗಲೀ, ರಾಜಕೀಯದಲ್ಲಾಗಲೀ ಜಾಗವಿಲ್ಲ. ವೇದಗಳ ಕಾಲದಲ್ಲೂ, ನಮ್ಮ ಈ ಕಾಲದಲ್ಲೂ ಇಂಥ ಅಪೇಕ್ಷೆ ಹುಟ್ಟಿಸುವ ಸೃಜನತೆ ಆಕರ್ಷಕವಾಗಿರುವುದನ್ನು ನಾವು ಕಾಣುತ್ತೇವೆ. ಈ ಮಾರ್ಗ ತನ್ನದೇ ಆದ ರಾಜಸಿಕ ಗುಣದ ನೈತಿಕತೆಯನ್ನು ರೂಪಿಸಿಕೊಂಡಿರುತ್ತದೆ. ಬಲಿಕೊಟ್ಟುಕೊಳ್ಳಲೂ ಈ ಮಾರ್ಗದ ದೀಕ್ಷಿತರು ಅಂಜುವುದಿಲ್ಲ; ಅನಿವಾರ್ಯವಾಗಿ ಬಲಿಕೊಡಬೇಕಾಗಿ ಬಂದರೂ ಇವರು ಹಿಂದೆಗೆಯುವುದಿಲ್ಲ.

ಯಾವುದಕ್ಕೂ ಅಧೀನವಾಗದ, ತನ್ನ ಕರ್ತೃತ್ವ ಶಕ್ತಿಯಲ್ಲಿ ಅಪಾರ ನಂಬಿಕೆಯುಳ್ಳ ಅಚಲವಾದ ಸಂಕಲ್ಪದ ಈ ಮಾರ್ಗವಲ್ಲದೆ ಮತ್ತೊಂದು ಮಾರ್ಗವೂ ಇದೆ. ಈ ಮಾರ್ಗದಲ್ಲಿ ನಡೆದ ನಮ್ಮ ಶತಮಾನದ ಪುರುಷೋತ್ತಮನೆಂದರೆ, ಗಾಂಧಿ. ನಿಸರ್ಗಕ್ಕೆ ಹೊಂದಿಕೊಳ್ಳುವುದರಲ್ಲಿ ಸೃಷ್ಟಿಯಜೊತೆ ಸಮರಸವಾಗುವುದರಲ್ಲಿ ಮನುಷ್ಯ ತನ್ನ ಪಾರಮ್ಯದ ಸ್ಥಿತಿಯನ್ನು ಕಂಡುಕೊಳ್ಳುತ್ತಾನೆಂಬ ನಂಬಿಕೆ ಉಳ್ಳವರು ಇವರು. ಇವೆ ಶೌರ್ಯಯಾವ ಕ್ಷಣದಲ್ಲಾದರೂ ಸಾವನ್ನು ಒಪ್ಪಿಕೊಳ್ಳುವುದರಲ್ಲಿ ಇರುತ್ತದೆ. ಇವರು ಪುರುಷವರ್ಗದ ಇಂದ್ರರೂಅಲ್ಲ; ಸ್ತ್ರೀಶಕ್ತಿಯ ಉತ್ಕಟ ಆವೇಶವನ್ನು ಬಯಸುವ ಚಂಡಿಯ ಆರಾಧಕವೂ ಅಲ್ಲ.

ರಾಜಕೀಯದಲ್ಲಿ ಇವರಿಗೆ ತಮ್ಮ ಎದುರಾಳಿ ತಮ್ಮಂತೆಯೇ ಇನ್ನೊಬ್ಬ ಮನುಷ್ಯ. ಒಂದೋ ಇವನನ್ನು ಸದ್ಭಾವದ ಹೋರಾಟದಲ್ಲಿ ಗೆಲ್ಲಬೇಕು; ಅಥವಾ ಆತನಲ್ಲಿಯೇ ಸತ್ಯವಿರುವುದಾದರೆ ತಾನೇ ವಿನಯದಲ್ಲಿ ಸೋಲಬೇಕು. ಅಂದರೆ ಎದುರಾಳಿ ಎಷ್ಟೇ ದುಷ್ಟನಂತೆ ಕಂಡರೂ ಕೊಲ್ಲಲು ಅರ್ಹನಾದ ವ್ಯಕ್ತಿಯಲ್ಲ.

ಈ ಬಗೆಯ ಮನಸ್ಸಿಗೆ ತಪಸ್ಸು, ಯಜ್ಞ, ಮತ್ತು ಸಮುದಾಯವನ್ನು ಒಳಪಡಿಸುವ ‘ನಾಟ್ಯ’ ಪ್ರಾರ್ಥನಾ ಸ್ವರೂಪದ್ದಾಗಿರುತ್ತದೆ.

ನಾವು ಶಕ್ತಿ ಸಂಪನ್ನರಾಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇಂಥವರು ನಮಗೆ ಪ್ರಿಯರಾಗಲಾರರು. ಅಮೃತಕ್ಕೆ ಎರಗುವ ಗರುಡನ ಶಕ್ತಿ ಪಡೆದವರಾಗಿ ನಮಗಿವರು ಕಾಣುವುದಿಲ್ಲ. ಒಂದು ಕಾದಂಬರಿಯಲ್ಲಿ ಇಂಥವರೊಬ್ಬರು ಪಾತ್ರವೆಂದು ಊಹಿಸಿ, ಪಾತ್ರ ಡಲ್ ಎನ್ನಿಸುತ್ತದೆ. ಆದರೆ ನಾವು ದಣಿದಾಗ, ಏರುತ್ತ ಹೋಗುವುದರಲ್ಲಿನ ಅನುಭವ ಹುಸಿ ಎನ್ನಿಸಿದಾಗ, ಹಾಗೆ ಅನ್ನಿಸಿದ್ದನ್ನು ಕಾಣುವಷ್ಟು ಪ್ರಾಮಾಣಿಕತೆ ಜೀವಕ್ಕೆ ಇನ್ನೂ ಉಳಿದಿದ್ದಾಗ ಗಾಂಧಿಯಂಥವರಲ್ಲಿ ಕಾಣುವ ಸತತ ಪ್ರಾರ್ಥನೆಯಿಂದ ಹುಟ್ಟಿದ ಸಾಮತೇಜಸ್ಸಿನ ಕಳೆ ಎಲ್ಲವುದಕ್ಕಿಂತಲೂ ಹೆಚ್ಚು ಭವ್ಯ, ಹಾಗೂ ಸುಂದರ ಕೂಡ ಎನ್ನಿಸಬಹುದು.

ಪ್ರಾರ್ಥನೆಯನ್ನು ಕುರಿತಾಗಿಯೇ ಒಂದು ಅಡ್ಡ ಮಾತನ್ನು ಇಲ್ಲಿಹೇಳಿಬಿಡಬೇಕು. ನಮ್ಮ ಹಲವು ಸಂತರಲ್ಲಿ ಪ್ರಾರ್ಥನೆ ದೇವರ ಕೀರ್ತನೆಯಾಗಿರುತ್ತದೆ. ನಮಗೆ ತುಂಬ ಇಷ್ಟವಾಗುವ ರಾಮಕೃಷ್ಣ ಪರಮಹಂಸರಲ್ಲಿ ಒಂದು ಕ್ಷಣವಾದರೂ ನಮ್ಮ ಮನಸ್ಸನ್ನು ಉಬ್ಬಿಸಬಲ್ಲ, ತನ್ಮಯಗೊಳಿಸಬಲ್ಲ ಶಕ್ತಿ ಕೀರ್ತನಾರೂಪವಾದ ಈ ಪ್ರಾರ್ಥನೆಗೆ ಇರುತ್ತದೆ.

ಗಾಂಧಿಯಲ್ಲಾದರೋ ಪ್ರಾರ್ಥನೆ ರಾಮಕೃಷ್ಣ ಪರಮಹಂಸರಿಗೆ ಕೊಡುವ ಉತ್ಕಟ ಸುಖವನ್ನು ಕೊಡುವಂಥದು ಅಲ್ಲ. ಗಾಂಧಿಯ ಪ್ರಾರ್ಥನೆಯಲ್ಲಿ ದೇವಸಖ್ಯದ ಭಾವವಾಗಲೀ ಪ್ರಿಯಕರ ಪ್ರೇಯಸಿಯ ಆರ್ತತೆಯಾಗಲೀ ಇಲ್ಲ. ಹಾಗಾದರೆ ಅಲ್ಲಿರುವುದೇನು ಎಂದರೆ- ಯಾವ ಆಕರ್ಷಣೆಯೂ ಇಲ್ಲದ, ತನ್ನಲ್ಲಿಯೇ ಸಮಸ್ಯಾತ್ಮಕವಾದ ‘ವಿನಯ’.

ಭಕ್ತಿಯಿಂದ ಹುಟ್ಟುವ ಭಾವ ತನ್ನ ಅತಿಯಲ್ಲಿ ನಮ್ಮನ್ನು ಪರವಶಗೊಳಿಸುತ್ತದೆ. ವಿನಯವಾದರೋ, ಎಷ್ಟು ಅತಿಗೆ ಹೋದರೂ ಸಾಲದು ಸಾಲದು ಎನ್ನಿಸುತ್ತ ವಿನಯವಾಗಿಯೇ ಉಳಿದಿರುತ್ತದೆ. ಗಾಂಧಿಗೆ ರಾಮಕೃಷ್ಣರ ಬಗೆಯ ಮೈಮರೆವು ಎಂಬುದು ಸಾಧ್ಯವೇ ಇರಲಿಲ್ಲವೇನೊ.

ದೇವತ್ವದ ಸ್ಥಿತಿಯಲ್ಲೂ ಕಪಟಕ್ಕೆ ಅವಕಾಶವಿಲ್ಲ. ರಾಕ್ಷಸತ್ವದಲ್ಲೂ ಕಪಟಕ್ಕೆ ಅವಕಾಶವಿಲ್ಲ. ದೇವರಾಗಲೀ ರಾಕ್ಷಸರಾಗಲೀ ಭಾವಕ್ಕೂ ಭವಿಸಿದ್ದಕ್ಕೂ ನಡುವೆ ವ್ಯತ್ಯಾಸ ಇಲ್ಲದವರು. ಅಂದರೆ ಅವರಿಗೆ ಹಿಪೊಕ್ರಸಿಯಿಲ್ಲ. ಪ್ರಾರ್ಥನೆ ಮತ್ತು ವಿನಯದಲ್ಲಿ ತನ್ನ ಜೀವನವನ್ನು ಎಲ್ಲರ ಕಣ್ಣಿದಿರು ಬದುಕುತ್ತ ಹೋದ ಗಾಂಧಿ ಹಿಪೊಕ್ರಿಟ್ ಆದರೆ ಎಂದು ಯಾರಾದರೂ ಕೇಳುವುದು ಸಾಧ್ಯ.

ಕವಿಯಾದವನು ತನ್ನ ಸಹಜ ಲೌಕಿಕತೆಯನ್ನು ದೈನಿಕ ಅಲ್ಪತೆಯನ್ನು ಮೀರರಲೆಂದು ಮುಖವಾಡ ಹುಡುಕಿಕೊಳ್ಳುತ್ತಾನೆ ಎಂದು ಏಟ್ಸ್ ಹೇಳುತ್ತಾನೆ. ಕವಿ ತನ್ನ ಮುಖವನ್ನೆ ಮುಖವಾಡ ಮಾಡಿಕೊಳ್ಳುವುದು ಭಾಷೆಯಲ್ಲಿ ಅಂತರ್ಗತವಾದ ರೂಪಕ ಶಕ್ತಿಯ ಮುಖಾಂತರ. ನೀರಸವಾಗಬಹುದಾದ ದೈನಿಕ ದೈವಿಕ ಪ್ರಭೆಯನ್ನು ಪಡೆದುಕೊಳ್ಳುವ ‘ನಾಟ್ಯ’ದ ಪ್ರಕ್ರಿಯೆಯೂ ಮುಖವಾಡವೇ ಮುಖವಾಗುವ ಪ್ರಕ್ರಿಯೆ. ತನ್ನ ಐರಿಷ್ ಗೆಳೆಯರಾಗಿದ್ದ ಅನುಭಾವಿಗಳಿಗೂ, ಸುಧಾರಕರಿಗೂ ಈ ಮುಖವಾಡದ ಅಗತ್ಯವಿರಲಿಲ್ಲ ಎಂದು ಏಟ್ಸ್ ಹೇಳುತ್ತಾನೆ. ‘ಕೃತಕ’ವಾದ ನಾಟ್ಯವೇ ಸಹಜವೆನ್ನಿಸುವುದು ಮುಖವಾಡದಲ್ಲಿ ತನ್ನ ಪ್ರಾಕೃತಿಕ ನಿಜವನ್ನು ಕಳೆದುಕೊಳ್ಳಬಲ್ಲ ಕವಿಯಲ್ಲಿ. ಸಂತನಾದವನು ತನ್ನ ಸಹಜ ಮೈಗುಣವನ್ನೇ ತನ್ನ ಆದರ್ಶದ ದಿವ್ಯಕ್ಕೊಡ್ಡಿ ಬದಲುಗೊಳಿಸಿಕೊಳ್ಳಬಲ್ಲ ಸಮರ್ಥನಾಗಿರಬೇಕಾಗುತ್ತದ.ಎ ಕವಿಯಾದರೋ ಆವೇಶಿತ ಮುಹೂರ್ತದಲ್ಲಿ ಕವಿ, ಮುಹೂರ್ತ ಕಳೆದ ಮೇಲೆ ಮುಖವಾಡ ಕಳಚಿಟ್ಟ ಸಾಮಾನ್ಯ. ಆದರೆ ಸಂತ ಎಚ್ಚರದಲ್ಲೂ ನಿದ್ದೆಯಲ್ಲೂ ಮಣ್ಣಿನ ಗುಣದ ಮೈಯನ್ನೇ ಮೃತ್ತಿಕೆ ಮಾಡಿಕೊಳ್ಳಲು ಹೆಣಗುವವನು. ತಾನು ಕಲ್ಪಿಸಿಕೊಂಡ ಸತ್ಯಕ್ಕೂ ತನ್ನ ನಿಜಕ್ಕೂ ವ್ಯತ್ಯಾಸವೇ ಕಾಣದಾದಾಗ ಬೆತ್ತಲಾಗುವುದು ರೂಪಕವಲ್ಲ; ಬಟ್ಟೆ ಬಿಚ್ಚಿ ಬೀದಿಯಲ್ಲಿ ನಡೆದಾಡುವ ಅಕ್ಕಮಹಾದೇವಿ.

ಗಾಂಧಿಯನ್ನು ಈ ವಿಚಾರದ ಬೆಳಕಿನಲ್ಲಿ ನೋಡೋಣ. ಸಾಹಿತ್ಯದ ಗ್ರಹಿಕೆಯಲ್ಲಿ ಜೀವನವನ್ನು ಈಕ್ಷಿಸುವ ನಮಗೆ ಪ್ರಾಯಃ ಗಾಂಧೀಜಿ ಭಾಸವಾಗುವುದು ಹೀಗೆ: ಇವರು ಅವಾಹಿಸಿಕೊಂಡ ಮುಖವಾಡವನ್ನೇ ತನ್ನಸತ್ಯದ ಮುಖ ಮಾಡಿಕೊಳ್ಳಲು ಹರೆಯದಲ್ಲಿ ಪ್ರಯತ್ನಿಸಿದರು; ಅನಂತರ ಅದೇ ತನ್ನ ಮುಖವೆಂದುಕೊಂಡರು.

ಹೀಗೆ ಭಾವಿಸಿದಾಗ ಏಳುವ ಪ್ರಶ್ನೆಗಳು ಹಲವು. ಮುಖವಾಡ ನೈಜ ಮುಖವೇ ಆಯಿತೆ? ಆಯಿತು ಎಂದುಕೊಂಡರೂ, ಅದು ನಮ್ಮೆಲ್ಲರಿಗೆ ಸತ್ಯದ ದಿಕ್ಕಿನಲ್ಲಿ ನಡೆಸಬಲ್ಲ ಮುಖವೆ? ಸದ್ಯದ ‘ನಾಟ್ಯ’ ಪರಂಪರೆ-ಅಂದರೆ, ಸಾಹಿತ್ಯದ ಮಾರ್ಗಗಳು-ಗಾಂಧಿ ತಮಗೇ ಎಷ್ಟು ನಿಜವಾಗಲು ಸಾಧ್ಯವಾಯಿತು ಎಂದು ಆಧುನಿಕ ದೃಷ್ಟಿಯಲ್ಲಿ ‘ನಿಜ’ದ ಪ್ರಶ್ನೆಯನ್ನು ಎತ್ತಿ ಅರಿಯುವಂಥವು.

ಆಧುನಿಕ ಸಾಹಿತ್ಯದ ಪರಂಪರೆಗೆ ಗಾಂಧಿಯ ನಿಜ ದಕ್ಕದೇ ಹೋಗುತ್ತದೆ ಎಂದು ಈ ಪರಂಪರೆಗೇ ಸೇರಿದ ಬರಹಗಾರನಾಗಿ ನನ್ನ ಅನುಮಾನ. ಪ್ರಾರ್ಥನೆಯಲ್ಲಿ ತನ್ನ ಸಕಲವನ್ನೂ ಒಡ್ಡಿಕೊಂಡು ಆರ್ತನಾದ; ಸದ್ಯದ ಸಮುದಾಯದ ವಿಕಾರಗಳನ್ನು ವ್ಯಕ್ತಿಯಾಗಿ ತನ್ನ ಮಟ್ಟಿಗಾದರೂ ಮೀರಿ ಮುಕ್ತವಾಗಬೇಕೆಂದು ಬಯಕೆ ಕಿಂಚಿತ್ತೂ ಇಲ್ಲದ; ಮಾನವತ್ವದ ಪಾಡಿನಿಂದ ಮುಕ್ತವಾಗಬೇಕೆಂಬ ಅಪೇಕ್ಷೆಯೇ ಇರುವಂತೆ ಕಾಣದ; ತೋರದಂತೆ ಮಾಗುತ್ತಲೇ ಇರುವ ಗಾಂಧಿಯ ಸತ್ಯ ನಮ್ಮ ಆಧುನಿಕ ‘ನಾಟ್ಯ’ ಪರಂಪರೆಗೆ ಒಗ್ಗದ್ದು.

ಆಧುನಿಕ ಸಾಹಿತ್ಯ ನಾವು ಹಿಂದೆ ಬೇರೆ ಬೇರೆಯೆಂದು ತಿಳಿಯದೇ ಇದ್ದ ಎರಡು ಸ್ಥಿತಿಗಳನ್ನು ಬೇರೆ ಬೇರೆಯೆಂದೇ ಕಾಣುತ್ತದೆ. ಹರಿಶ್ಚಂದ್ರನ ಪುರಾಣ ಬರೆದವನಿಗೆ ಇಲ್ಲದ ಸಮಸ್ಯೆಯಿದು. ಪ್ರಾಮಾಣಿಕವಾಗಿರುವುದು, ಅಧಿಕೃತವಾಗಿರುವುದು-ಈ ಎರಡೂ ಬೇರೆ ಬೇರೆಯೆಂದೇ ಕಾಣುತ್ತದೆ. ಹರಿಶ್ಚಂದ್ರನ ಪುರಾಣ ಬರೆದವನಿಗೆ ಇಲ್ಲದ ಸಮಸ್ಯೆಯಿದು. ಪ್ರಾಮಾಣಿಕವಾಗಿರುವುದು, ಅಧಿಕೃತವಾಗಿರುವುದು-ಈ ಎಡರೂ ಬೇರೆಬೇರೆಯೆಂದು ಕಾಣುವುದರಲ್ಲೇ ಆಧುನಿಕ ಸಾಹಿತ್ಯದ ಅತಿ ಮುಖ್ಯ ಒಳನೋಟಗಳು ಇವೆ. ತುಂಬ ಸರಳವಾಗಿ ಹೇಳುವುದಾದರೆ, ಮಾನವ ತುಂಬ ಒಳ್ಳೆಯವನಂತೆ ಕಾಣಿಸಿಕೊಳ್ಳುವುದು ಕೃತಕವೆಂದೂ, ಅನಧಿಖೃತವೆಂದೂ ತಿಳಿಯುವುದು ಆಧುನಿಕ ಸಾಹಿತ್ಯದ ಒಂದು ಗೃಹೀತವೆನ್ನಬಹುದು.

ತಮ್ಮ ಅಸ್ತಿತ್ವದಲ್ಲೂ, ಅಸ್ತಿತ್ವದ್ದೇ ಮುಂದುವರಿಕೆಯಾದ ತಮ್ಮ ರಾಜಕೀಯ ಕ್ರಿಯೆಗಳಲ್ಲೂ ಗಾಂಧಿಜಿ ಎದುರಿಸಿದ ದೊಡ್ಡ ಧರ್ಮಸಂಕಟವೊಂದಿದೆ. ಈ ಧರ್ಮಸಂಕಟವನ್ನು ಮುಖವಾಡ ಮುಖವಾಗುವ ನಾಟ್ಯಕ್ರಿಯೆಯ ತತ್ವದಿಂದಾಗಲೀ, ತಪಸ್ಸು ಯಜ್ಞಗಳ ಫಲಶ್ರುತಿಗಳಿಂದಾಗಲೀ ಅರಿತುಕೊಳ್ಳುವುದು ಸಾಧ್ಯವಿಲ್ಲ. ಸತ್ಯ ಮತ್ತು ಅಹಿಂಸೆ-ಎರಡನ್ನೂ ಗಾಂಧೀಜಿ ಅಭಿನ್ನವೆಂದು ತಿಳಿದಿದ್ದರು. ಆದರೆ ‘ಹಿಂಸೆ’ ಜೀವನದ ಮೂಲ ಸತ್ಯಗಳಲ್ಲಿ ಒಂದು-ಐತಿಹಾಸಿಕ ಬೀಸಿನಲ್ಲಿ ಬದುಕನ್ನು ನೋಡಿದಾಗ-ಎಂದು ತಿಳಿಯುವುದು ಸಾಧ್ಯ. ಮಹರ್ಷಿ ಅರವಿಂದರು ಹಾಗೆ ತಿಳಿದಿರಬೇಕು ಎಂದು ನನ್ನ ಭಾವನೆ. ಪ್ರಕೃತಿಯಲ್ಲೇ ಹಿಂಸೆ ಅಡಕವಾಗಿದೆ ಎಂದು ತಿಳಿದಾಗ ಗಾಂಧೀಯ ‘ಸತ್ಯ’ ಮತ್ತು ‘ಅಹಿಂಸೆ’ ಅಭಿನ್ನವೆಂಬ ವಿಚಾರ, ಒಂದು ನೈಜ ವಿಚಾರವಾಗಿ ಭಾಷವಾಗುವುದಿಲ್ಲ; ಒಂದು ಹಾರೈಕೆಯಾಗಿ ಕಾಣುತ್ತದೆ. ಆದರೆ ಗಾಂಧಿಯಾದರೋ ತನ್ನದು ಹಾರೈಕೆ ಮಾತ್ರವೆಂದು ತಿಳಿದಿರಲಿಲ್ಲ. ಸತ್ಯ ಮತ್ತು ಅಹಿಂಸೆ ಬೇರೆ ಬೇರೆಯೆಂದು ತಾನು ಮನಗಂಡರೆ ಸತ್ಯವನ್ನೇ ತಾನು ಆಯುವುದು ಎಂಬ ಧೀರವಾದ ನಿಲುವು ಅವರದು. ಹಾಗೆಯೇ ದೇವರು ಸತ್ಯ ಎಂಬ ನಿಲುವನ್ನು ಬದಲಾಯಿಸಿಕೊಂಡು ಸತ್ಯವೇ ದೇವರು ಎಂದು ಅವರು ಹೇಳಿಕೊಂಡಿದ್ದರು.

ಇಂಥ  ನಿಲುವಿನ ಗಾಂಧೀಜಿ ತಮ್ಮ ನವಾಖಲಿ ದಿನಗಳಲ್ಲಿ ಅಹಿಂಸೆ ಮತ್ತು ಸತ್ಯಗಳ ಅವಿನಾಸಂಬಂಧದ ನಿರಂತರವಾದ ಆತಂಕಪೂರ್ಣವಾದ ಶೋಧದಲ್ಲಿ ಇದ್ದರು ಎನ್ನಿಸುತ್ತದೆ. ಯಾವುದು ನಿತ್ಯ ಎದುರಾಗುತ್ತಿದೆಯೋ ಅದೇ ಸತ್ಯವಾದರೆ ತಾನು ಬಯಸುವುದು ಮಾತ್ರ ಅಹಿಂಸೆಯಾದರೆ, ಈ ತನ್ನ ಬಯಕೆಯೂ ಕಾಮವನ್ನು ಪೂರ್ಣ ಗೆದ್ದಿರಲಾರದ ತನ್ನ ಶರೀರದ ನೈಜತೆಗೆ ಹೊರತಾದದ್ದಾದರೆ… ಹೀಗೆ ಜೀವ ತೊಳಲತೊಡಗಿದಾಗ ಇರುವ ನಿಜವೇ ದೇವರ ಇಚ್ಛೆಯೇ ಎಂಬ ಭಯಂಕರ ಪ್ರಶ್ನೆ ಎದುರಾಗುವುದು ಸಾಧ್ಯ. ನವಾಖಲಿಯ ದಿನಗಳಲ್ಲಿ ಈ ತೊಳಲಾಟಕ್ಕೆ ಉತ್ತರ ಗಾಂಧೀಜಿಗೆ ಅವರ ಮೌನದ ಅನುಸಂಧಾನದಲ್ಲಿ ದೇವರ ಇಚ್ಛೆಗೆ ತನ್ನನ್ನು ವಾಹಕ ಮಾಡಿಕೊಳ್ಳುವ ಪ್ರಾರ್ಥನೆಯ ವಿನಯದಲ್ಲಿ ಮಾತ್ರ ಕಾಣಬಹುದಿತ್ತು.

ಆತ್ಮದ ಶುದ್ಧಿಗಾಗಿ ಪ್ರಾರ್ಥನೆಯಾದ್ದರಿಂದ, ಈ ಶುದ್ಧೀಕರಣವಿಲ್ಲದೆ ನಿಜದ ಅರಿವು ಅಸಾಧ್ಯವಾದ್ದರಿಂದ ಗಾಂಧೀಜಿ ಪಾಲಿಗೆ ಪ್ರಾರ್ಥನೆ ದೇವರನ್ನು ಒಲಿಸಿಕೊಳ್ಳುವ ಉಪಾಯಕ್ಕಿಂತ ಹೆಚ್ಚಾಗಿ, ಸತ್ಯವನ್ನು ಅರಿಯುವುದಕ್ಕೆ ಅಗತ್ಯವಾದ ವಿನಯದ ಸ್ಥಿತಿಯನ್ನು ತಲುಪುವ ಪ್ರಕ್ರಿಯೆಯಾಗಿರುತ್ತಿತ್ತು. ಈ ವಿನಯದಲ್ಲಿ ಅವರು ಕಾದಿದ್ದೇ ಸತ್ತರು ಎಂಬುದು ಮಾನವನ ನಿಜವಾದ ಸಾಧ್ಯತೆ ಏನು ಎಂಬುದನ್ನು ತಿಳಿಯಲು ಈ ತನಕ ದಾಖಲಾದ ಚರಿತ್ರೆಯ ಕಾಲ ಸಾಲದು ಎಂಬ ವಿನಯವನ್ನು ಕಲಿಸಿಕೊಡುವಂತಿದೆ. ನವಾಖಲಿ ಮಾನವ ಇತಿಹಾಸದಲ್ಲಿ ವಿನಯದ ಅಂಥ ಒಂದು ಕಠಿಣವಾದ ಪಾಠ. ಈ ಭಾವನೆಯನ್ನು ನನ್ನಲ್ಲಿ ಹುಟ್ಟಿಸಿದ ಮುಕುಂದರಾವ್ ಬರೆದ ನಾಟಕಕ್ಕೆ ನಾನು ಕೃತಜ್ಞ.

ಮುಕುಂದರಾವ್ ಅವರ ಮಹಾತ್ಮ(೧೯೯೯)ನಾಟಕಕ್ಕೆ ಬರೆದ ಮುನ್ನುಡಿ. ಅಕ್ಷರ ಪ್ರಕಾಶನ ಹೆಗ್ಗೋಡು.

* * *