ನನ್ನ ಮತ್ತು ಪಟೇಲರ ಸ್ನೇಹ ಸುಮಾರು ಮೂರು ದಶಕಗಳದ್ದು. ಎಳೆ ಹರಯದಲ್ಲಿ ನನ್ನ ಜೀವನದೊಳಕ್ಕೆ ಬಂದ ಆತ್ಮೀಯರಲ್ಲಿ ಇವರೂ ಒಬ್ಬರು. ಶಿವಮೊಗ್ಗಾದಿಂದ ನಾನು ನನ್ನ ಬೆಳವಣಿಗೆಗೆ ಏನೇನು ಪಡೆದೆ ಎಂದು ಯೋಚಿಸುವಾಗ ಪಟೇಲ್ ಜೊತೆ ಕಳೆದ ಹಲವು ರಾತ್ರೆಗಳು ಹಗಲುಗಳು ನೆನಪಾಗುತ್ತವೆ. ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ಇಂದಿನ  ಹಲವು ವಿಚಾರಗಳಲ್ಲಿ ಅವರ ಒಳನೋಟಗಳೂ ಸೇರಿಕೊಂಡಿವೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ – ಎಲ್ಲವೂ ಅನ್ಯೋನ್ಯವೆನ್ನುವಂತೆ ನಾನು ಯೋಚಿಸುವುದನ್ನು ಕಲಿತಿದ್ದು ಪಟೇಲರಂಥವರ ಜೊತೆಯ ಹರಟೆಯ ಮೂಲಕ.

ಹರಟೆ ಒಂದು ಅಸಾಮಾನ್ಯವಾದ ಸೃಷ್ಟಿ-ಶೀಲವಾದ ಸನ್ನವೇಶವನ್ನು ಮನಸ್ಸಿಗೆ ದೊರಕಿಸಿಕೊಡಬಲ್ಲದು. ಸಹಾನುಭೂತಿಯುಳ್ಳ ಸಮಾನ ಮನಸ್ಕರು ಒಪ್ಪುತ್ತಲೂ, ಮತ್ತೆ ಒಪ್ಪದೆಯೂ, ಪೂರ್ವ ನಿಶ್ಚಿತವಲ್ಲದ ಎತ್ತೆತ್ತಲೋ ಒಯ್ಯುವ ಹಾದಿಗಳಲ್ಲಿ ಸಂಚರಿಸುತ್ತಲೂ, ಮನಸ್ಸಿಗೆ ದಣಿವಾಗದಂತೆ ಒಬ್ಬರ ಮುಖೇನ ಇನ್ನೊಬ್ಬರು ಏರುತ್ತಲೂ ಗಳಿಸಿಕೊಳ್ಳುವ ಈ ವಿಚಾರ-ಸುಖವನ್ನು ಹರಟೆಯಲ್ಲದೆ ಮತ್ತೆ ಯಾವ ಮಾಧ್ಯಮವೂ ತರಲಾರದು. ಜಾನ್‌ಸನ್‌ನ ಇಂಗ್ಲೆಂಡಿನಲ್ಲಿಯಂತೆ ಈಗ ಇದು ಜೀವಂತವಾಗಿರುವುದು-ಕ್ರಮೇಣ ನಾಶವಾಗುತ್ತಿದ್ದರೂ-ಭಾರತದಲ್ಲೇ. ಸೆಮಿನಾರು, ವರ್ಕ್‌ಶಾಪುಗಳು ಅವರಸರ ಯುಗದ ಫಲಗಳು; ಇವುಗಳಿಗೆ ಹರಟೆಯಂತೆ ಹೊಸದನ್ನು ಹುಟ್ಟಿಸುವ ಗುಣವಿಲ್ಲ. ಯಶಸ್ಸನ್ನೇ ಗುರಿ ಮಾಡಿಕೊಂಡ ಸೆಮಿನಾರಿನ ಮಹತ್ವಾಕಾಂಕ್ಷಿಗಳು ಸಮಯ ಲೋಭಿಗಳು; ಹರಟೆಯಲ್ಲಿ ಹಿಗ್ಗಲಾರದ ಸೆಮಿನಾರಿನ ಜಿಪುಣರು. ಹರಟೆ ಕಟ್ಟುವುದು ಅನುಭವದ ಮಂಟಪ. ಪಟೇಲ್, ಗೋಪಾಲಗೌಡ, ಶಂಕರ ನಾರಾಯಣ ಭಟ್ಟ, ೪(ಕೆಲವು ದಿನಗಳ ಹಿಂದೆ ತೀರಿಕೊಂಡರು) ವೈ.ಆರ್. ಪರಮೇಶ್ವರಪ್ಪ-ಹೀಗೆ ನಾವು ಕೆಲವು ಗೆಳೆಯರು ಕೂಡಿದಾಗ ಏರಿದ ಮನಸ್ಸಿನ ಎತ್ತರಗಳು ನನ್ನ ಜೀವನದ ಗಳಿಕೆಯೆಂದುಕೊಂಡಿದ್ದೇನೆ. ಗೋಪಾಲಗೌಡರು ಈಗಿಲ್ಲವಾದರೂ ಅವರ ಹಲವು ಮಾತುಗಳು ನನ್ನ ನೆನಪಲ್ಲಿವೆ. ಹಾಗೆಯೇ ಪಟೇಲರ ಮಾತುಗಳೂ ಕೂಡ.

* * *

ನಮ್ಮ ಸಣ್ಣತನಗಳಿಂದ, ಲೋಭದಿಂದ, ಮೋಹಗಳಿಂದ ನಮ್ಮನ್ನು ಆಗೀಗಲಾದರೂ ಪಾರುಮಾಡಿ ಹಗುರವಾಗುವಂತೆ ಮಾಡಬಲ್ಲ, ಈ ಗುಣವನ್ನು ನಾವು ಮೈಗೂಡಿಸಿಕೊಂಡದ್ದು ಶಿವಮೊಗ್ಗೆಯಲ್ಲಿ-ಸುಮಾರು ನಾಲ್ಕು ದಶಕಗಳ ಹಿಂದೆ. ಆಗತಾನೆ ನಾನು ಅಧ್ಯಾಪಕನಾಗಿ ಶಿವಮೊಗ್ಗದ ಕಾಲೇಜು ಸೇರಿದ್ದೆ. ಪಟೇಲ್ ಲಾಯರಾಗುವ ತಯಾರಿಯಲ್ಲಿದ್ದರು. ಮದುವೆಯಾಗಿ ಅವರು ದೇವತೆಯಂತಹ ಹೆಂಡತಿ ಜೊತೆ ಬಿಡಾರ ಹೂಡಿದ್ದರು. ನಾನು ಮತ್ತು ಶಂಕರನಾರಾಯಣಭಟ್ಟ ಬೆಳಿಗ್ಗೆ ೫ ಗಂಟೆಗೆ ಎದ್ದು ವಾಕ್ ಹೊರಡುತ್ತಿದ್ದೆವು. ಪಟೇಲ್ ಮನೆಯಲ್ಲಿ ಕಾಫಿ ಕುಡಿದು ಮೂವರೂ ಕೂಡಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಸುತ್ತಾಡುತ್ತಿದ್ದೆವು. ದಾರಿಯಲ್ಲಿ ನಮ್ಮ ಮಾತು ಎಲಿಯಟ್, ಲಾರೆಸ್ನ, ಏಟ್ಸ, ಕನ್ನಡ ನವ್ಯಕಾವ್ಯ, ವಚನಕಾರರು, ಲೋಹಿಯಾ, ಎಂ.ಎನ್.ರಾಯ್-ಹೀಗೆ ಸುತ್ತಾಡುತ್ತಿತ್ತು. ನಮ್ಮ ಮಾತೆಲ್ಲ ಗಂಭೀರವೆಂದಲ್ಲ. ಶಂಕರ ಯಾವತ್ತೂ ನಮ್ಮ ವಿಚಾರದ ನಡುವೆ ಒಂದು ಅಸಂಗತವನ್ನು ತೂರಿಸಿ ವಿಚಾರಕ್ಕೆ ಹೊಸ ಆಯಾಮ ತರುತ್ತಿದ್ದ. ಎಲ್ಲ ವಿಚಾರಗಳೂ ಪುಸ್ತಕದ ವಾಸನೆ ಕಳಕೊಂಡು ಜೀವಂತವಾಗಿ ಬಿಡುತ್ತಿದ್ದುದು ಈ ಬಗೆಯ ಸಖ್ಯದಲ್ಲಿ.

ಈಗ ಯೋಚಿಸಿದಾಗ ನಮ್ಮ ಮನಸ್ಸನ್ನು ಆಗ ಕಟ್ಟಿದ ವಿಚಾರಗಳು ಯಾವ ಬಗೆಯವು ಎಂಬುದು ಗೋಚರಿಸತೊಡಗುತ್ತದೆ. ಒಂದು ಕಡೆಯಿಂದ ಸಾಹಿತ್ಯದ ಮೂರ್ತ ಸಂವೇದನೆ ತರುವೆ ದಾರ್ಶನಿಕ ಒಳನೋಟಗಳಿದ್ದರೆ, ಇನ್ನೊಂದು ಕಡೆಯಿಂದ ಲೋಹಿಯಾರ ಸ್ವದೇಶೀ ಚಿಂತನೆಯ ಸಾಂಸ್ಕೃತಿ-ರಾಜಕೀಯ ಬಂಡಾಯದ ವಿಚಾರಗಳೂ ಇದ್ದವು. ಇವೆರಡೂ ಅಲ್ಲದೆ ಪಟೇಲರ ಮೇಷ್ಟ್ರಾಗಿದ್ದ ದಿ. ಶ್ರೀ ರಂಗನಾಥರಾಯರ ಮುಖೇನ ಎಂ.ಎನ್. ರಾಯ್‌ರ ರ‍್ಯಾಡಿಕಲ್ ಮಾನವತಾವಾದ ನಮ್ಮ ತೀವ್ರತೆಗಳಿಗೆ ತನ್ನ ಅನುಮಾನಗಳನ್ನು ಇಣುಕಿಸುತ್ತಿತ್ತು. ಈ ಬಗೆಯ ಸಾಂಸ್ಕೃತಿಕ ರಾಜಕೀಯ ಚೌಕಟ್ಟಿನಲ್ಲಿ ಒಂದು ಕಡೆಯಿಂದ ದಾರ್ಶನಿಕ ರಾಜಕಾರಣಿಯಾಗಿ ಗೋಪಾಲ ಗೌಡರು ಕಟ್ಟುತ್ತಿದ್ದ ಸಮಾಜವಾದಿ ಆಂದೋಳನವೂ, ನಾವೆಲ್ಲ ಅಣ್ಣಯ್ಯನೆಂದು ತಿಳಿದಿದ್ದ ಸಂಘಟನಾಚತುರ ದಿ. ವೈ.ಆರ್. ಪರಮೇಶ್ವರಪ್ಪನವರ ನಮ್ಮನ್ನು ಒಂದು ಕುಟುಂಬದಂತೆ ಕಾಣುವ ಪ್ರೀತಿಯೂ ನಮಗೆ ಕ್ರಿಯೆ ಮತ್ತು ವಿಚಾರವನ್ನು ಹೆಣೆಯುವ ಪರಿಸರವನ್ನು ಸೃಷ್ಟಿಸಿತ್ತು. ಹೀಗಾಗಿ ರಾಜಕೀಯವೆಂದರೆ ಮನಸ್ಸುಗಳನ್ನು ಬದಲಾಯಿಸುವ ಆಂದೋಳನವಾಗಿ ಕಾಣುತ್ತಿತ್ತೇ ಹೊರತಾಗಿ, ಅಧಿಕಾರದ ಜಾಗಗಳನ್ನು ಹಿಡಿಯುವ ಸಂಚಾಗಿ ಕಾಣಿಸಲೇ ಇಲ್ಲ. ವ್ಯವಹಾರಜ್ಞರಾಗಿ ರಾಜಕೀಯವನ್ನು ನೋಡುವವರಿಗೆ ಇದೊಂದು ದೊಡ್ಡ ಕೌತುಕವೆನ್ನಿಸೀತು. ಯಾಕೆ ಪಟೇಲ್ ಕಾಂಗ್ರೆಸ್ ಸೇರಲಿಲ್ಲ? ಸೇರಿದ್ದರೆ ವೀರೇಂದ್ರ ಪಾಟೀಲರಿಗಿಂತ ಮುನ್ನವೇ ಮಂತ್ರಿಯಾಗಬಹುದಿತ್ತಲ್ಲವೆ?

ನನಗಿದು ಕೌತುಕವಲ್ಲ – ಶಿವಮೊಗ್ಗದ ಅಂದಿನ ದಾರ್ಶನಿಕ ಹುರುಪಿನ ಪರಿಸರದಲ್ಲಿ ಇದು ಸಹಜವಾದ ಸ್ಥಿತಿಯಾಗಿತ್ತು. ಪಟೇಲರಿಗೆ ಅವರ ಕುಟುಂಬ, ಮುಖ್ಯವಾಗಿ ಅವರ ತಂದೆ ಈ ಬಗೆಯ ಆದರ್ಶವಾದೀ ರಾಜಕೀಯಕ್ಕೆ ಬೆಂಬಲವಾದರೆಂಬುದು ಮುಖ್ಯ. ಫ್ಯೂಡಲ್ ಮನೆತನದ ಶ್ರೀಮಂತಿಕೆಯಲ್ಲಿ ಬೆಳೆದ ಪಟೇಲ್ ಹೀಗೆ ಸಾಮೂಹಿಕ ಪರಿವರ್ತನೆಯ ಕನಸುಗಾರನಾಗಿ ನಲವತ್ತು ವರ್ಷಗಳ ಹಿಂದೆ ಪರಿವರ್ತಿತನಾದ್ದು, ಮಂತ್ರಿಯಾಗುವ ತನಕ ತನ್ನ ಶ್ರೀಮಂತಿಕೆಯನ್ನು ಕರಗಿಸಿಕೊಳ್ಳುತ್ತ ಬಹುಜನಮಾನ್ಯವಲ್ಲದ ರಾಜಕೀಯ ಮಾಡಿಕೊಂಡು ಇದ್ದದ್ದು- ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಹೀಗೆ ಮಾಡುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಆದ್ದರಿಂದಲೇ ರಾಜಕೀಯವೂ-ಪ್ರೇಮದಂತೆಯೇ, ಅನುಭಾವದಂತೆಯೇ ಒಂದು ಹುಚ್ಚಿನ ವಿಷಯ.

*

ರಾಜಕಾರಣಿಗಳಿಗೆ ಸಹಜವಾದ ಕೆಲವು ರೋಗಗಳಿವೆ. ಕೂತು ಕೆಲಸ ಮಾಡುವವರಿಗೆ ಮೂಲವ್ಯಾಧಿ ಬರಬಹುದಾದಂತೆ ಸದಾ ಜನರ ಜೊತೆ ಇರಬೇಕಾಗಿ ಬರುವ, ಅವರ ಅಗತ್ಯಗಳಿಗೇ ಸದಾ ತನ್ನ ಬಾಯಿ ತೆರೆದುಕೊಂಡಿರುವ ರಾಜಕಾರಣಿ ಸೂಕ್ಷ್ಮತೆಗಳನ್ನು ಕಳಕೊಳ್ಳುವುದು ಮೊದಲು ತನ್ನ ಭಾಷೆಯಲ್ಲಿ. ಯಾವಾಗಲೂ ಆತ ಎತ್ತರದ ದನಿಯಲ್ಲಿ ಮಾತಾಡುವುದನ್ನೂ, ರೆಟಾರಿಕಲ್ ವಾಕ್‌ಝರಿಯಲ್ಲಿ ಮೈ ಮರೆಯುವುದನ್ನೂ ಕಲಿತುಬಿಡುತ್ತಾನೆ. ರಾಣಿ ವಿಕ್ಟೋರಿಯಾ ಒಮ್ಮೆ ತನ್ನ ಪ್ರಧಾನಿಗೆ ಹೇಳಿದಳಂತೆ: ‘ಇರುವುದು ನಾನೊಬ್ಬಳೇ, ಮಾತಾಡುವಾಗ ನನ್ನನ್ನು ಒಂದು ಸಭೆಯೆಂದು ದಯಮಾಡಿ ತಿಳಿಯಬೇಡ’. ಮಂತ್ರಿಯ ಸರಸ ಸಲ್ಲಾಪವೂ ಭಾಷಣವಾಗಿಬಿಡಬಹುದು – ಇದೊಂದು ರಾಜಕಾರಣದ ರೋಗ, ಆಪ್ತತೆ, ಖಾಸಗಿತನಗಳು ಕ್ರಮೇಣ ಕಳೆದುಹೋಗುವ ರಾಜಕೀಯ ಜೀವನವನ್ನು ಎಷ್ಟು ವರ್ಷ ನಡೆಸಿಯೂ ಇವನೊಬ್ಬ ನನಗೆ ಸಿಗಬಲ್ಲ, ಕಣ್ಣಲ್ಲಿ ಕಣ್ಣಿಟ್ಟು ನೋಡಬಲ್ಲ ವ್ಯಕ್ತಿಯೆಂದು ನಮಗನ್ನಿಸುವಂತೆ ಬದುಕಿರುವ ಕೆಲವೇ ಕೆಲವರಲ್ಲಿ ಪಟೇಲರೂ ಒಬ್ಬರು. ಶ್ರೀ ರಾಮಕೃಷ್ಣ ಹೆಗಡೆಯವರ ಭಾಷೆಯಲ್ಲೂ ಈ ಆತ್ಮೀಯತೆ ಉಳಿದುಕೊಂಡಿದೆ – ಮುಖ್ಯಮಂತ್ರಿತ್ವ ತರಬಹುದಾದ ಅಟ್ಟಹಾಸದಲ್ಲೂ ಕಳೆಯದಂತೆ ಉಳಿದುಕೊಂಡಿದೆ ಎಂಬ ಸೋಜಿಗ ನನಗೆ ಮತ್ತೆ ಮತ್ತೆ ಮನವರಿಕೆಯಾಗಿ ಸಂತೋಷವಾಗಿದೆ. ಹೀಗೆ ಹಳಸದಂತೆ ಕೆಲವರು ಉಳಿದಿರುವುದು ಇಂದಿನ ರಾಜಕೀಯದಲ್ಲಿ ಕೌತುಕದ ವಿಷಯವೇ.

ಪಟೇಲರ ಭಾಷೆಯಲ್ಲಿ ‘ದೇಸಿ’ಯ ಕಸುವು ಬೇರೆ ಸೇರಿಕೊಳ್ಳುತ್ತದೆ. ಎಂಥ ವಿಚಾರವನ್ನೂ ಅವರು ಆಕರ್ಷಕ ಪ್ರಸಂಗವನ್ನಾಗಿ ಮಾಡಿಬಿಡಬಲ್ಲರು. ತನ್ನಿಂದಲೇ ತಾನು ದೂರವಾಗದವನು, ಅಧಿಕಾರದಿಂದ ಮತ್ತನಾಗದವನು, ಸ್ವರತನಾಗದವನು ಉಪಯೋಗಿಸುವ ಭಾಷೆ ಇದು. ದೂರದಿಂದ ಹೇಳುವ ಭಾಷೆಯಲ್ಲ; ಹತ್ತಿರದಿಂದ ಹೇಳಿಕೊಳ್ಳುವ ಭಾಷೆ ಇದು.

*

ಪಟೇಲರ ವ್ಯಕ್ತಿತ್ವಕ್ಕೆ ಒಂದು ಖಚಿತ ರೂಪಕೊಟ್ಟಿದ್ದು ಲೋಹಿಯಾ ನೇತೃತ್ವದಲ್ಲಿ ಅವರ ಪಾರ್ಲಿಮೆಂಟ್ ಮೆಂಬರ್ ಆಗಿ ಕಳೆದ ಕಾಲ. ಪಟೇಲ್‌ಗೆ ಕನ್ನಡದಲ್ಲೆ ಮಾತಾಡುವಂತೆ ಲೋಹಿಯಾ ಲೋಕಸಭೆಯಲ್ಲಿ ಸನ್ನಿವೇಶ ಸೃಷ್ಟಿಸಿದ್ದು ಜನಭಾಷೆಗಳ ಅಸ್ತಿತ್ವದ ಹೋರಾಟದಲ್ಲಿ ಒಂದು ಮಹತ್ವದ ಐತಿಹಾಸಿಕ ಘಟನೆಯೆನ್ನಬಹುದು. ಇಂಗ್ಲಿಷಲ್ಲಿ ಮಾತಾಡಬಲ್ಲ ಪಟೇಲರು ಬಾಯಿ ಮುಚ್ಚಿಕೊಂಡು ಕೂತಿರಬೇಕಾಯಿತು. ಆಮೇಲೆ ಮಾತು ಬರಿಯ ಮಾತಾಗದೆ ಒಂದು ಕ್ರಿಯೆಯಾಯಿತು.

ಪಟೇಲ್ ಕೆಲಮಟ್ಟಿಗೆ ಸೊಕ್ಕಿನ ಮನುಷ್ಯ ಎಂದೂ ಅನ್ನಿಸುವುದುಂಟು. ಎಷ್ಟಾದರೂ ಈತ ಫ್ಯೂಡಲ್ ಮನೆತನದಿಂದ ಬಂದವನಲ್ಲವೆ? ಆದರೆ ಅಧಿಕಾರ ತರುವ ಪದವಿಗಳ ಮೋಹದಿಂದ ಸದಾ ದೂರ ಇರಲೇ ಬೇಕಾಗುವಂತೆ ಪಕ್ಷವನ್ನು ಕಟ್ಟುತ್ತಾ ಒಡೆಯುತ್ತ ಹೋದವರಾದ ಸ್ವಾತಂತ್ರ‍್ಯೋತ್ತರ ರಾಜಕಾರಣದ ಪರಮ ಅವಧೂತ ಲೋಹಿಯಾ ಎದುರಲ್ಲಿ ಮಾತ್ರ ಪಟೇಲ್ ವಿನಯವಂತ ಶಿಷ್ಯರಾಗಿದ್ದರು.

ಪಟೇಲ್ ನನ್ನ ಗೆಳೆಯನೆಂಬ ಸ್ವಾತಂತ್ರ್ಯದಲ್ಲಿ ಒಂದು ಮಾತನ್ನು ನಾನಿಲ್ಲಿ ಹೇಳದಿದ್ದರೆ ತಪ್ಪಾಗುತ್ತದೆ. ತನ್ನ ಎಲ್ಲ ಸಾಧ್ಯತೆಗಳನ್ನೂ ಬಾಳಿಬಿಡಬೇಕೆಂಬ ಚಪಲದ ರಸಿಕ ವ್ಯಕ್ತಿತ್ವ ಪಟೇಲರದಾದ್ದರಿಂದ, – ಅಂದರೆ ಈತ ಕೇವಲ ರಾಜಕಾರಣಿಯಲ್ಲದ್ದರಿಂದ – ಪಟೇಲರಿಗೆ ಗುರಿ ತಪ್ಪುವುದುಂಟು, ಕತ್ತಲು ಕವಿಯುದುಂಟು. ರಸಿಕತೆ ಹೇಗೆ ಪಟೇಲ್ ವ್ಯಕಿತ್ವದ ಒಂದು ಆಕರ್ಷಕ ಹೆಚ್ಚಳವೋ, ಅಂತೆಯೇ ಅದು ಅವರನ್ನು ಟೆನ್ನಿಸನ್ನನ ‘ಲೋಟಸ್ ಈಟರ್ಸ್‌’ (’ಒಡಿಸ್ಸಿ’ ಹೆಸರಿನ ಗ್ರೀಕ್ ದಂತಕತೆಯಲ್ಲಿ ಈ ಲೋಟಸ್ ಈಟರ್ಸ್‌’ ಪ್ರಸ್ತಾಪ ಬರುತ್ತದೆ. ಒಂದು ದ್ವೀಪದಲ್ಲಿ ಲೋಟಸ್ ಸಸ್ಯದ ಹಣ್ಣುಗಳನ್ನು ತಿಂದವರು ಸೋಮಾರಿಯಾಗಿ, ಮರೆಗುಳಿಗಳಾಗಿ, ಕನಸಿನ ಲೋಕದಲ್ಲಿ ವಿಹರಿಸುವಂತೆ ಸುಖಲೋಲುಪರಾಗಿ ಜೀವಿಸುವವರ ಕತೆ ಅದು.) ಲೋಕದ ಲೋಲುಪತೆಗೆ ಸೆಳೆಯುವುದುಂಟು. ತನ್ನ ಎಲ್ಲ ಕ್ರಿಯೆಯಲ್ಲೂ ಪರವಶತೆಯನ್ನೂ ಮತ್ತತೆಯನ್ನೂ ಹಂಬಲಿಸುವ ರಸಿಕ ವ್ಯಕ್ತಿತ್ವದ ಆಕರ್ಷಕ ಗುಣದೊಳಗೇ ಇರುವ ಅಪಾಯ ಇದು. ಇದಕ್ಕೆ ವಿರೋಧವಾದ ನೈತಿಕ ವ್ಯಕ್ತಿತ್ವ ಕೆಲವೊಮ್ಮೆ ರೂಕ್ಷವೆನ್ನಿಸುತ್ತದೆ; ಯಾಕೆಂದರೆ ಮಿತಿಯಲ್ಲಿರುವುದಕ್ಕಾಗಿ ಅದು ಸಂಯಮಶೀಲವಾಗಿರುತ್ತದೆ. ಗುರಿಬದ್ಧವಾದ ಏಕನಿಷ್ಠೆಯ ನೈತಿಕರಾದ ಜನ ಖಂಡಿತ ‘ಅಪ್ಯಾಯಮಾನ’ವೆನ್ನಿಸುವುದಿಲ್ಲ. ಆದರೆ ಸಮಾಜವಾದಿ ಗೆಳೆಯರು ಪಟೇಲರಂತೆಯೇ, ಕೊಂಚ ಸೊಗಸುಗಾರರೇನೋ ರಾಜಕಾರಣಿಗಳು. ಇಂತಹ ಪಟೇಲರೂ ಕೂಡ ಮೈ ಕೊಡವಿಕೊಂಡು ಇದ್ದಕ್ಕಿದ್ದಂತೆ ಹಾಗಾದಾಗಲೆಲ್ಲ ಲೋಹಿಯಾ ಅವರನ್ನು ಎಚ್ಚರಿಸಿರುತ್ತಾರೆ. ಯಾಕೆಂದರೆ ‘ರಾಜಕೀಯದ ಮಧ್ಯೆ ಬಿಡುವು’ನಲ್ಲಿ ಎಲ್ಲ ಸಾಧ್ಯತೆಗಳಿಗೂ ಮೈಕೊಡಬಲ್ಲವರಾಗಿದ್ದ ಲೋಹಿಯಾ ಅವರ ಪ್ರೀತಿಯ ಶಿಷ್ಯರ ಎಳೆತ ಸೆಳೆತಗಳನ್ನು ಸಹಾನುಭೂತಿಯಿಂದ ಕಾಣಲ್ಲವರಾಗಿದ್ದರು; ಜೊತೆಗೇ ಶಿಕ್ಷಿಸಬಲ್ಲ ನಿಷ್ಠುರರೂ ಆಗಿದ್ದರು.

*

ಪಟೇಲ್ ಎಂಟು ವರ್ಷಗಳ ಹಿಂದೆ ಮಂತ್ರಿಗಳು, ಈಗ ಮುಖ್ಯಮಂತ್ರಿಗಳು, ಆದರೆ ನನ್ನ ಪಾಲಿಗೆ ಇದೊಂದು ಅಡ್ಡಿಯೇ; ಹಿಂದಿನಂತೆ ಅವರು ನನ್ನಂಥವರಿಗೆ ಸಿಗುವುದು ಕಷ್ಟ. ವಿಚಾರ ಮತ್ತು ಕ್ರಿಯೆಗಳನ್ನು ಅನ್ಯೋನ್ಯ ಮಾಡಿಕೊಳ್ಳುವುದು ಎಷ್ಟು ಕಷ್ಟವೆನ್ನುವುದು ಪಟೇಲ್‌ಗೆ ಇನ್ನಷ್ಟು ಚೆನ್ನಾಗಿ ಈಗ ಗೊತ್ತಾಗಿರಬೇಕು. ಹಿಂದೆ ಅಧಿಕಾರವಿಲ್ಲದಿದ್ದಾಗ ತನ್ನ ವಿಚಾರಗಳನ್ನು ನಿಜಜೀವದಲ್ಲಿ ಜಾರಿಗೊಳಿಸುವುದು ಹೇಗೆಂಬ ಚಡಪಡವಾದರೆ, ಈಗ ಸವಲತ್ತುಗಳಿಗಾಗಿ ಎಲ್ಲರೂ ಕೈಯೊಡ್ಡಿ ನಿಂತು ತನ್ನ ಕಾಲವನ್ನೆಲ್ಲ ಆಕ್ರಮಿಸಿಬಿಡುವ ಅಧಿಕಾರ ವಲಯದಲ್ಲಿ ಬಾಳುತ್ತ ವಿಚಾರದ ಒಳನೋಟಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಆತಂಕ ಇದ್ದೇ ಇರುತ್ತದೆ. ಅಂತೂ ಹೇಗೂ ಸಮಾಧಾನವಿಲ್ಲ. ನನ್ನ ಕಾದಂಬರಿ ‘ಅವಸ್ಥೆ’ಯನ್ನು ನನ್ನಿಬ್ಬರು ಗೆಳೆಯರಾದ ದಿ. ಎಸ್. ವೆಂಕಟರಾಂ ಮತ್ತು ಪಟೇಲರಿಗೆ ಅರ್ಪಿಸಿದ್ದೇನೆ. ಮತ್ತೆ ಅದು ಮುದ್ರಣವಾದ ಮೇಲೆ ಪಟೇಲರಿಗೆ ಕೊಡುವಾಗ ಹೇಳಿದೆ; ‘ಅವಸ್ಥೆ’ ಚಿತ್ರಿಸುವ ನೈತಿಕ ಆತಂಕಗಳು ನಿನಗೆ ಈಗ ನಿಜವೆನ್ನಿಸಿದರೆ ನಾನು ಸಾರ್ಥಕನಾದಂತೆ’ ಎಂದು. ಹಲವು ಕ್ರಿಯೆಗಳ ಕೇಂದ್ರದಲ್ಲಿ ಬದುಕುವ ಮಂತ್ರಿ ಪಟೇಲ್‌ಗೆ ತಾನೆಷ್ಟು ತನ್ನ ಹಿಂದಿನ ಕನಸಿನ ಬದ್ಧನಾಗಿ ಉಳಿದಿದ್ದೇನೆ ಎಂಬ ಆತಂಕ ಕಾಡಿಯೇ ಕಾಡುತ್ತದೆಂಬ ಭರವಸೆ ನನಗಿದೆ. ನಿರಾತಂಕನಾದ ಪಟೇಲ್ ನನ್ನ ಪಟೇಲ್ ಅಲ್ಲ.

೧೯೮೮ರಲ್ಲಿ ಕೋಣಂದೂರು ಲಿಂಗಪ್ಪ ಸಂಪಾದಿಸಿಪಾರ್ಲಿಮೆಂಟಿನಲ್ಲಿ ಪಟೇಲರುಪುಸ್ತಕಕ್ಕೆ ಬರೆದ ಪ್ರವೇಶಿಕ್ಕೆ. ಒಂದೆರಡು ಪುಟ್ಟ ತಿದ್ದುಪಡಿಗಳೊಂದಿಗೆ. ಕೃಪೆ: ಸುಧಾ, ೨೩ ಜೂನ್ ೧೯೯೬.

* * *