ಈ ಐದಾರು ವರ್ಷಗಳಲ್ಲಿ ಡಿ.ಆರ್. ನಾಗರಾಜನ ಅಸಾಧಾರಣವಾದ ಬೆಳವಣಿಗೆಯನ್ನು ಕಂಡು ನಾನು ಬೆರಗಾಗಿದ್ದೇನೆ. ಅವನ ಗ್ರಹಿಕೆ ಸೂಕ್ಷ್ಮವಾಗಿತ್ತು. ಅದರ ವ್ಯಾಪ್ತಿ ವಿಶಾಲವಾಗಿತ್ತು. ಆಧುನಿಕರಿಗೆ ಪೂರ್ವಕಾಲದ ಜ್ಞಾನವಿರುವುದು ಕಡಿಮೆ ಪೂರ್ವಕಾಲವನ್ನು ತಿಳಿದ ಪಂಡಿತರಿಗೆ ಹಳೆಯ ಕಾಲದ ಪಠ್ಯಗಳು ಗೊತ್ತಿರುತ್ತವೆ; ಆದರೆ ಅವರ ಜ್ಞಾನಕ್ಕೆ ಇವತ್ತಿನ ಬೌದ್ಧಿಕ ಆತಂಕಗಳ ಸ್ಪರ್ಶವಿರುವುದಿಲ್ಲ. ಡಿ.ಆರ್. ನಾಗರಾಜ ನಾನು ಕಂಡಿರುವಂತೆ ಸಂಸ್ಕೃತದ ಮಹಾಪಂಡಿತರಾದ ವಿದ್ಯಾನಿವಾಸ್ ಮಿಶ್ರರಂಥವರ ಜೊತೆಯೂ, ಅತ್ಯಾಧುನಿಕ ತಾತ್ವಿಕರಾದ ಆಶೀಶ್ ನಂದಿ ಮತ್ತು ಶೆಲ್ಡನ್ ಪೊಲಕ್‌ರಂಥವರ ಜೊತೆಯೂ ಸಮಸಮನಾಗಿ ಸಂವಾದದಲ್ಲಿ ತೊಡಗಬಲ್ಲವನಾಗಿದ್ದ. ಡಿ.ಆರ್. ನಾಗರಾಜನ ಇನ್ನೊಂದು ವಿಶೇಷವೆಂದರೆ ಸಂಸ್ಕೃತ ಮತ್ತು ಇಂಗ್ಲಿಷ್ ಮಾತ್ರವಲ್ಲದೆ, ಸ್ಥಳೀಯ ಸಂಸ್ಕೃತಿಯಾದ ಕನ್ನಡದಲ್ಲಿ ಊರಿದವನಾಗಿದ್ದ.

ಹಿರಿಯರಾದ ಡಿ.ಎಲ್.ಎನ್. ಒಮ್ಮೆ ಹೇಳಿದ್ದು ನೆನಪಾಗುತ್ತದೆ; ಅವರ ಸಮಕಾಲೀನರಲ್ಲಿ ಕೆಲವರು ಸಂಸ್ಕೃತದಲ್ಲಿ ಪಂಡಿತರು, ಕೆಲವರು ಇಂಗ್ಲಿಷಿನಲ್ಲಿ ಇನ್ನು ಕೆಲವರು ಕನ್ನಡದಲ್ಲಿ, ಅಷಿಷ್ಟು ಬೇರೆಯದು ಗೊತ್ತಿದ್ದರೂ ತಮ್ಮ ಆಯ್ಕೆಯ ಭಾಷೆಯಲ್ಲಿ ಮಾತ್ರ ಗಾಢವಾದ ಜ್ಞಾನವುಳ್ಳವರು ಇವರು. ಆದರೆ ಬಿಎಂಶ್ರೀ ಮಾತ್ರ ಕನ್ನಡ ಸಂಸ್ಕೃತ ಇಂಗ್ಲೀಷ್ ಮಾತ್ರವಲ್ಲದೆ ತಮಿಳಿನಲ್ಲೂ ಎಷ್ಟು ತಿಳಿದವರೆಂದರೆ, ಈ ಯಾವ ಭಾಷೆಯಲ್ಲಾದರೂ ಅವರು ಪ್ರಾಧ್ಯಾಪಕರಾಗಬಹುದಿತ್ತು. ಹೀಗೆ ಡಿ.ಎಲ್.ಎನ್. ತಮ್ಮ ಗುರುಗಳಾಗಿದ್ದ ಬಿಎಂಶ್ರೀ ಬಗ್ಗೆ ಹೇಳಿದ್ದನ್ನು ನಾನು ಡಿ.ಆರ್. ನಾಗರಾಜನ ಬಗ್ಗೆಯೂ ಹೆಮ್ಮೆಯಿಂದ ನೆನೆಸುತ್ತಿದ್ದೇನೆ. ಇನ್ನೂ ೪೫. ವಯಸ್ಸು ದಾಟದ ಡಿ.ಆರ್. ನಾಗರಾಜ ಈಗಲೇ ಎಷ್ಟು ಆಗಾಧವಾದ ಜ್ಞಾನ ಸಂಪಾದಿಸಿದ್ದನೆಂದರೆ ಸಮಾಜಶಾಸ್ತ್ರ ತತ್ವಶಾಸ್ತ್ರ ಸಾಹಿತ್ಯ ಮೀಮಾಂಸೆ, ವೈದಿಕ-ಅವೈದಿಕ ದರ್ಶನಗಳು-ಈ ವಿಷಯದಲ್ಲಾದರೂ ಆಯಾ ಶಾಸ್ತ್ರಜ್ಞರ ಜೊತೆ ಸರಿಸಾಟಿಯಾಗಿ ವಿಚಾರ ಮಾಡಬಲ್ಲವನಾಗಿದ್ದ. ಹಾಗೆಂದು ಖ್ಯಾತನೂ ಆಗಿದ್ದ.

ಈ ನಮ್ಮ ಕಾಲದ ಆತಂಕಗಳು, ತಳಮಳಗಳು, ಉತ್ಸಾಹಗಳು, ಕನಸುಗಳು ಆನಂದವರ್ಧನನ ಧ್ವನ್ಯಾಲೋಕದ ಬಗ್ಗೆ ಮಾತಾಡಲಿ, ಅಥವಾ ಮೀಸಲಾತಿ ಬಗ್ಗೆ ಮಾತಾಡಲಿ, ಅಥವಾ ಅಲ್ಲಮನ ಬಗ್ಗೆ ಮಾತಾಡಲಿ, ಅವನ ವಿಚಾರಗಳೆಲ್ಲವೂ ಸದ್ಯ ಎನ್ನಿಸುತ್ತಿದ್ದುವು. ಅವನ ಬರವಣಿಗೆಯ ಕೆಲವು ಪುಟಗಳನ್ನು ಮನಸ್ಸಿಟ್ಟು ನೋಡಿದರೆ ಸಾವಿರಾರು ವರ್ಷಗಳ ಬದುಕಿನ ಫಲವಾದ ವಿಚಾರಗಳು ಅಲ್ಲಿ ಹರಿದಾಡುವುದನ್ನು ಕಾಣಬಹುದು. ಪ್ರಾಚೀನದ ಪಂಡಿತರು ಬರೆದದ್ದು ಆ ಕಾಲದ ಜ್ಞಾನವನ್ನು ಅದು ಸ್ವಯಂ ಸಿದ್ಧವಾದ್ದು ಎನ್ನಿಸುವಂತೆ ನಮ್ಮ ಅರಿವಿಗೆ ತರುತ್ತದೆ. ಈ ಕಾಲದ ಪ್ರಗತಿಶೀಲ ಚಿಂತಕರು ಬರೆದದ್ದು ಹೆಚ್ಚೆಂದರೆ ಚರಿತ್ರೆಯ ಇನ್ನೂರು ವರ್ಷಗಳ ವ್ಯಾಪ್ತಿಯಲ್ಲಿ ಅಲೆದಾಡುತ್ತದೆ. ಆದರೆ ನಾಗರಾಜ ತನ್ನ ಬಹುಶ್ರುತ್ವವನ್ನು ತನ್ನ ಸದ್ಯದ ಅಸ್ತಿತ್ವವನ್ನು ಪೋಷಿಸುವ, ಆತಂಕಗೊಳಿಸುವ, ಹಿಗ್ಗಿಸುವ ವಿಚಾರಗಳ ಸೃಷ್ಟಿಗೆ ಬಳಸಬಲ್ಲವನಾಗಿದ್ದ. ಅವನ ಕಲ್ಪನೆಯ ಮಗ್ಗದಲ್ಲಿ ಇಡೀ ಕಾಲ ಹೆಣೆದುಕೊಳ್ಳುತ್ತಿತ್ತು.

ಈ ನಾಗರಾಜ ನಮ್ಮ ನಡುವಿನ ಜೀನಿಯಸ್ ಎಂದು ರೋಮಾಂಚನವಾಗುವಂತೆ ನನ್ನ ಅನುಭವಕ್ಕೆ ಹಲವು ಸಾರಿ ಬಂದಿದ್ದಾನೆ. ಅವನ ಎಲ್ಲ ಉಪದ್ವ್ಯಾಪಗಳಲ್ಲೂ, ಅವನ ಅಪಕ್ವವೆನ್ನಿಸುವ ಖ್ಯಾತಿಯ ಹಸಿವಿನಲ್ಲೂ ನಾನು ಅವನ ಪ್ರತಿಭೆಯನ್ನು ಮರೆತಿದ್ದಿಲ್ಲ.

ಅವನ ಸ್ವಭಾವದಲ್ಲಿನ ಮುಗ್ಧವಾದ ಹುಮ್ಮಸ್ಸಿನಿಂದ ಅವನ ಚೈತನ್ಯದ ತಹತಹದಿಂದ ಈ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತಿದ್ದವು. ಹುಂಬ ಹುಡುಗರು ಮಾಡುವ ರಂಪದಂತೆ ಮಾತ್ರ ನಾಗರಾಜನ ಆಟಾಟೋಪಗಳು ಅವನ ಪ್ರೀತಿಯ ಸ್ನೇಹಿತರಿಗೆ ಕಾಣಿಸುತ್ತಿದ್ದವು. ಈ ಎಲ್ಲವನ್ನೂ ಒಂದು ಕ್ಷಣದಲ್ಲಿ ಮರೆತು ದೊಡ್ಡ ಔದಾರ್ಯದಲ್ಲಿ ನಿಲ್ಲಬಲ್ಲವನಾಗಿದ್ದ ನಾಗರಾಜನಲ್ಲಿ ಪ್ರಾಣಸ್ಥವಾದ ಅಮೃತ ಕಲಶವನ್ನು ಅವನ ಸ್ವಭಾವದ ಅಪಕ್ವತೆಗಳು ಕಿಲುಬು ಹೊಳಿಸಲಾರದಾಗಿದ್ದವು. ಅವನೇ ಬೆರಗಾಗುವಂತೆ ಅವನಲ್ಲಿ ಉದಿಸಿದ್ದ ಈ ಅಮೃತ ಕಳಶದಿಂದ ಇಡೀ ನಾಡನ್ನೇ ವೈಚಾರಿಕ ಅಲೆಗಳಿಂದ ಫಲವಂತವಾಗುವಂತೆ ಮಾಡಬಲ್ಲವನು ಆಗಿದ್ದ.

ಈ ಹತ್ತು ವರ್ಷಗಳಲ್ಲಿ ನನ್ನ ಜೀವದ ಗೆಳೆಯನಾಗಿದ್ದ ನಾಗರಾಜನ ಶಕ್ತಿಯೂ ದೋಷವೂ ಒಂದೇ ಮೂಲದಿಂದ ಹುಟ್ಟಿದವು ಎಂದು ನನಗೆ ತೋರುತ್ತಿತ್ತು. ಅವನು ಮೂಲತಃ ಚೈತನ್ಯದ ಆರಾಧಕ. ನೀಶೆ ಎಂಬ ತತ್ವಜ್ಞಾನಿಗೆ ಪ್ರಿಯವಾಗಿದ್ದ ಪುರುಷ ಸಂಕಲ್ಪ ಬಲವೇ ನಾಗರಾಜನಲ್ಲಿ ವೈಚಾರಿಕತೆಯ ಅಕ್ಷಯ ಬತ್ತಳಿಕೆಯಾಗಿಯೂ, ಸಾಧನೆಯ ಪರಮಾತುರವಾಗಿಯೂ, ಜಗತ್ತನ್ನೇ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯ ತಹತಹವಾಗಿಯೂ ನನಗೆ ಕಾಣಿಸುತ್ತಿತ್ತು. ಅವನನ್ನು ಮೀರಿದ ಒಂದು ಶಕ್ತಿಗೆ ಅವನು ತನ್ನನ್ನು ಅರ್ಪಿಸಿಕೊಂಡು ತನ್ನ ಸಾಧನೆಗೆ ತಾನೇ ಬೆರಗಾಗಿ, ತನ್ನ ಸ್ನೇಹಿತರಲ್ಲಿ ಅದನ್ನ ಹಂಚಿಕೊಳ್ಳುವ ಪ್ರೀತಿಯಲ್ಲಿ ತನ್ನ ಸಾಧನೆಯನ್ನು ತಾನೇ ಕೊಚ್ಚಿಕೊಂಡು  ಬೀಗುತ್ತಿದ್ದ. ನಾಗರಾಜನನ್ನು ಮೆಚ್ಚಿಕೊಂಡ ನನ್ನಂಥವರಿಗೆ ಇದು ಕೆಲವೊಮ್ಮೆ ತಮಾಷೆಯಾಗಿ ಕಾಣುತ್ತಿತ್ತು. ನಾನು ಇದನ್ನು ಅವನಿಗೆ ಹೇಳಿ ಛೇಡಿಸಿದ್ದಿದೆ. ಆಗ ನಾಗರಾಜ ಒಬ್ಬ ಮುಗ್ಧ ಬಾಲಕನಂತೆ ತನ್ನ ವರ್ತನೆಗೆ ನಾಚಿಕೊಳ್ಳುತ್ತಿದ್ದ.

ಅವನ ಎಲ್ಲ ಬೌದ್ಧಿಕ ಸಾಹಸಗಳಿಗೂ ಆಧಾರವಾಗಿದ್ದ ನೈತಿಕ ನೆಲೆಯೇನೆಂದು ನಾನು ಕೇಳಿಕೊಂಡಿದ್ದೇನೆ. ಕೆಲವು ವರ್ಷಗಳ ಹಿಂದೆ ನಾನೂ ಅವನೂ ನೇಪಾಳದಲ್ಲಿ ಇದ್ದೆವು. ಕಠ್ಮಂಡು ಹತ್ತಿರದ ಒಂದು ಹಳ್ಳಿಯಲ್ಲಿ ನೆಲೆಸಿದ್ದೆವು. ದಕ್ಷಿಣ ಏಷಿಯಾದ ರಾಜಕೀಯ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ನಾವು ಕೆಲವರು ಚರ್ಚಿಸಲೆಂದು ಸೇರಿದ್ದೆವು. ಅವನ ಆರೋಗ್ಯಕ್ಕೂ ಅಗತ್ಯವೆಂದು ನನಗೆ ಪ್ರಿಯವಾದ ವಾಕಿಂಗ್‌ನಲ್ಲಿ ಅವನನ್ನು ನಿತ್ಯ ಸಂಜೆ ಕರೆದೊಯ್ಯುತ್ತಿದ್ದೆ. ಒಂದು ಸಂಜೆ ಕತ್ತಲಾಗುತ್ತ ಹೋಯಿತು. ನಾನೂ ನಾಗರಾಜನೂ ಯಾವುದೋ ಚರ್ಚೆಯಲ್ಲಿ ಮಗ್ನರಾಗಿ ಹಳ್ಳಿಯ ಒಳದಾರಿಯಲ್ಲಿ ನಡೆಯುತ್ತಿದ್ದೆವು. ದೂರದಲ್ಲಿ ಕೆಲವು ಗುಡಿಸಲುಗಳು ಮಸಕುಮಸುಕಾಗಿ ಕಾಣುತ್ತಿದ್ದವು. ನಾಗರಾಜ ಥಟ್ಟನೇ ನಿಂತು ಆಲಿಸತೊಡಗಿದ. ಮಾತಿನ ಗುಂಗಿನಲ್ಲಿದ್ದ ನಾನು ನಿಂತು ನಾಗರಾಜನ ಏಕಾಗ್ರವಾದ ಅನ್ಯಮನಸ್ಕತೆಯನ್ನು ಗಮನಿಸಿ ‘ಏನು’ ಎಂದೆ. ‘ಆ ಗುಡಿಸಿನಲ್ಲಿ ಯಾರೋ ಮಗ್ಗದಲ್ಲಿ ನೇಯ್ತ ಇದಾರೆ ಸಾರ’ ಎಂದ. ಅವನು ಹೇಳಿದ ಮೇಲೆ ನನಗೂ ಮಗ್ಗದ ಸದ್ದು ಕೇಳಿಸಿತು.

‘ಬಾಲ್ಯದಲ್ಲಿ ನಾನೂ ಬಟ್ಟೆಯನ್ನು ಮಗ್ಗದಲ್ಲಿ ನೇಯ್ದವನು ಸಾರ್. ಗಾಂಧಿಯೂ ಒಮ್ಮೆ ಜೈಲಿಗೆ ಹೋಗುವ ಮುನ್ನ ತುಂಬಬೇಕಾದ ದಾಖಲೆಯಲ್ಲಿ ತನ್ನ ವೃತ್ತಿ ನೇಕಾರ ಎಂದು ಬರೆದುಕೊಂಡಿದ್ದರು. ನಾನು ಗಾಂಧಿಯ ಜಾತಿಯವನು’ ಎಂದು ಅವನಿಗೆ ಸಹಜವಾದ ಕುಶಾಲಿನಲ್ಲಿ ಹೇಳಿದ. ನನಗೂ ನಗು ಬಂತು. ಆದರೆ ನಾಗರಾಜ ತೃತೀಯ ಜಗತ್ತಿನ ವಚಾರದಲ್ಲಿ ನನ್ನ ಜೊತೆ ತೊಡಗಿದ್ದ ತನ್ನ ಅಂತರಾಳದಲ್ಲಿ ತನ್ನ ಬಾಲ್ಯವನ್ನೂ, ಯಾರೋ ನೇಪಾಳಿಯೊಬ್ಬನ ನೇಯ್ಗೆಯ ಕುಶಲತೆಯನ್ನೂ ಒಟ್ಟಾಗಿ ಪ್ರತ್ಯಕ್ಷಗೊಳಿಸಿಕೊಂಡ ಎಂದು ನನಗೆ ಅನ್ನಿಸಿತ್ತು.

ನಾನು ಆಗ ಅವನಿಗೆ ಲೇವಡಿ ಮಾಡುವಂತೆ ಹೇಳಿದ್ದೆ. ‘ನಿನ್ನ ವೈಚಾರಿಕತೆ ಅಕಾಡೆಮಿಕ್ ಸಾಹಸ ಮಾತ್ರವಾಗದೆ ಅದಕ್ಕೊಂದು ನೈತಿಕ ನೆಲೆಯಿರೋದು ನೀನು ಹುಟ್ಟಿದ ಜಾತಿಯ ಈ ನೆನಪಿನಿಂದ. ಇದನ್ನು ಉಳಿಸಿಕೊಂಡು ನೀನು ಬೆಳೆದರೆ ಮಾತ್ರ ಈ ನಮ್ಮ ತೃತೀಯ ಜಗತ್ತಿನ ದಾರ್ಶನಿಕ ಆಗ್ತೀಯ.’

ಆದರೆ ಅಂದು ಆಡಿದ ಮಾತು ಕೇವಲ ಲೇವಡಿಯಲ್ಲ. ಇಂಥ ಒಬ್ಬ ದಾರ್ಶನಿಕನಾಗುವ ತಯಾರಿಯಲ್ಲಿ ಸತತ ನಿರತನಾಗಿದ್ದ ನಾಗರಾಜ, ಚೈತನ್ಯದ ಬುಗ್ಗೆಯಾಗಿ ತನ್ನ ದೇಹವನ್ನು ಉಡಾಫೆಯಲ್ಲಿ ಮರೆತು, ಉತ್ಕಟವಾಗಿ ಜೀವಿಸುತ್ತಲೇ ಸತ್ತು, ನಮ್ಮೇಲ್ಲರನ್ನೂ ತಬ್ಬಿಬ್ಬಾಗಿಸಿದ್ದಾನೆ.

 

ಡಿ.ಆರ್. ನಾಗರಾಜ್ ನಿಧನರಾದಾಗ ಬರೆದ ಲೇಖನವಿದು. (೧೯೯೯) ಕೃಪೆ: ಪ್ರಜಾವಾಣಿ, ಬೆಂಗಳೂರು.

* * *