ಹೊಳಪುಗಣ್ಣು, ಆಕರ್ಷಕ ನಗು, ಚಲನೆಯಲ್ಲಿ ಗೆಲುವು…. ಒಟ್ಟಾರೆಯಾಗಿ, ಎಂಥವರನ್ನೂ ಸಮ್ಮೋಹನಗೊಳಿಸಬಲ್ಲ ರೂಪು. ಹೌದು ಇವರು ಲೇಖಕ ಅನಂತಮೂರ್ತಿ. ಮನುಷ್ಯನ ಪರಿಪೂರ್ಣ ಸ್ಥಿತಿ ಎಂದರೆ ಇವರೇ ಎಂದು ಭ್ರಮೆಯನ್ನು ಹುಟ್ಟಿಸುವಷ್ಟು ಮೋಹಕತೆ. ಹುಡುಗರಿಗೂ ಅಂದು ಹಾಗನಿಸಿದ್ದು ವಿಶೇಷ ಸಂಗತಿ.

ನಾನು ಅನಂತಮೂರ್ತಿಯವರನ್ನು ಮೊದಲ ಬಾರಿಗೆ ಕಂಡದ್ದು ಸುಮಾರು ೯೩-೯೪ರಲ್ಲಿ, ನನ್ನ ಎಂ.ಎ ದಿನಗಳವು; ಅದೂ ತುಂಬಾ ದೂರದಿಂದಲೇ. ನನ್ನ ಹಾಸ್ಟೆಲ್ ರೂಂಮೇಟ್ ಇಂಗ್ಲೀಷ್‌ವಿಭಾಗದ ಹುಡುಗಿ, ಅನಂತಮೂರ್ತಿಯವರ ವಿವಿಧ ಭಂಗಿಯ ನ್ಯೂಸ್‌ಪೇಪರ್ ಕಟಿಂಗ್ಸ್‌ಗಳನ್ನು ರೂಮಿನ ತುಂಬಾ ಹಚ್ಚಿಬಿಟ್ಟಿದ್ದಳು. ಅವಳಿಗಂತೂ ಅನಂತಮೂರ್ತಿ ಎಂದರೆ, ನಡೆದಾಡುವ ಒಂದು ದಂತಕಥೆ.

ಅಂದು ಅನಂತಮೂರ್ತಿಯವರ ಮಾತುಗಳು ನಮ್ಮ ಮೇಲೆ ವಿಚಿತ್ರ ಪ್ರಭಾವ ಬೀರಿದ್ದವು. ಒಂದೆಡೆಗೆ ಆಧುನಿಕತೆಯನ್ನು ಮೆಚ್ಚಿ ಮಾತನಾಡಿದ ಅವರು, ಮತ್ತೊಂದೆಡೆ ಅಷ್ಟೇ ಮೆಚ್ಚುಗೆಯಿಂದ ಯಜ್ಞಯಾಗಾದಿಗಳ ಬಗ್ಗೆಯೂ ಮಾತನಾಡಿದರು. ಮಾತು ಮೋಡಿಯಾಗಿತ್ತು. ಇಡೀ ಸಭೆ ನಿಶ್ಯಬ್ದವಾಗಿತ್ತು. ನಗುತ್ತಲೇ ಮಾತನಾಡಿದ ಅವರನ್ನು ಕಣ್ಣುಗಳು ತುಂಬಿಕೊಂಡಿದ್ದವು. ಅವರ ಬಗೆ ಗೊತ್ತಿದ್ದ ನಾವು ವಿರೋಧಿಸಬೇಕೆಂದುಕೊಂಡೇ ಹೋಗಿದ್ದೆವು. ನಮ್ಮ ಮಾತುಗಳನ್ನು ಯಾರೋ ಕಸಿದಿದ್ದರು. ನಮ್ಮ ಬುದ್ಧಿಯನ್ನು ಯಾರೋ ಕದ್ದಿದ್ದರು. ಯಾವುದೋ ಜಗತ್ತಿಗೆ ಕ್ಷಣಕಾಲ ಸಂದಿದ್ದೆವು.

ಭಾಷಣ ಮುಗಿದ ಮೇಲೂ ವರ್ಚಸ್ವಿಯಾದ ಮುಖದಲ್ಲಿ ತುಂಬು ನಗೆಯನ್ನು ತುಳುಕಿಸುತ್ತಾ, ಸ್ನೇಹಪೂರ್ವಕ ನೋಟ ಬೀರುತ್ತಿದ್ದ ಅನಂತಮೂರ್ತಿಯವರನ್ನು ವಿರೋಧಿಸಲಾಗದೆ ಒದ್ದಾಡಿಬಿಟ್ಟೆವು.

*

೧೯೯೩ರ ನನ್ನ ಅನುಭವ, ಈ ಹೊತ್ತಿಗೆ ಬಹಳ ಪ್ರಸ್ತುತವೆನ್ನಿಸುತ್ತದೆ. ಏಕೆಂದರೆ ಅನಂತಮೂರ್ತಿಯವರ ಬಗ್ಗೆ ಮಾತನಾಡುವ ಯಾರೇ ಆಗಲಿ ಸಂದಿಗ್ಧತೆಗೆ ಸಿಲುಕಿ, ಒಂದು ಗೊಂದಲಕಾರಿ ವಾತಾವರಣವನ್ನು ಸೃಷ್ಟಿಸಿಕೊಂಡುಬಿಡುತ್ತಾರೆ. ಅನಂತ ಮೂರ್ತಿಯವರ ಬದುಕು, ಬರಹ, ಅನುಭವಗಳ ಹರಹು ಎಷ್ಟು ವ್ಯಾಪಕವಾದದ್ದೆಂದರೆ ಪೂರ್ವದಿಂದ ಪಶ್ಚಿಮಕೆ, ಪಶ್ಚಿಮದಿಂದ ಉಡುಪಿ ಅಗ್ರಹಾರಕ್ಕೆ ಸರಾಗವಾಗಿ ಚಲಿಸುವಂಥದ್ದು. ಆ ಚಲನೆಯ ವೇಗದಲ್ಲಿ ತಮಗೆ ದಕ್ಕಿದ್ದನ್ನೆಲ್ಲಾ ಹಲವು ವಿಭಿನ್ನ ನೆಲೆಗಳಿಂದ ವ್ಯಾಖ್ಯಾನಿಸುವಷ್ಟು ಶಕ್ತರು. ಇದನ್ನು ಗ್ರಹಿಸುವುದು ಹೇಗೆಂದು ತಿಳಿಯದಾದಾಗ ಅವರನ್ನು ಎರಡು ವಿರುದ್ಧ ಧ್ರವಗಳಲ್ಲಿಟ್ಟು ನೋಡಿಬಿಡುತ್ತೇವೆ ಅಥವಾ ಇಂತಹ ಗ್ರಹಿಕೆಗಳನ್ನು ಸರಳೀಕರಿಸಿ ಸುಮ್ಮನಾಗಿಬಿಡುತ್ತೇವೆ. ಅದ್ದಕಿಂತ ದೊಡ್ಡ ಅಪಾಯ ಬೇರೊಂದಿಲ್ಲ.

ಈ ಹೊತ್ತಿನ ಭಾರತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾರ್ಕ್ಸ್‌ವಾದ, ಸಮಾಜಶಾಸ್ತ್ರ, ಮನಃಶಾಸ್ತ್ರ ಅಥವಾ ನಮ್ಮ ಸಂಶೋಧನೆಗಳು ಕಟ್ಟಿಕೊಡುವ ಆನಂದ ಕುಮಾರಸ್ವಾಮಿ, ಲೋಹಿಯಾ, ಸೈದ್ ಮುಂತಾದವರ ಮಾದರಿಗಳಾಚೆಗೆ ಬೇರೊಂದು ಮನಃಸ್ಥಿತಿಯ ಅಗತ್ಯವಿದೆ. ಅದು ನಮ್ಮ ಸುತ್ತಲಿನ ಬದುಕನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುವ, ಆತ್ಮೀಯವಾಗಿ ಅನುಸಂಧಾನಿಸುವ ಒಂದು ಪ್ರಜ್ಞೆಯಾಗಿರಬಹುದು ಅಥವಾ ಗತಕಾಲದ ಮತ್ತು ಸಮಕಾಲೀನ ಸಾಮಾಜಿಕ ಆಯಾಮಗಳ ನಿಖರ ಮಾಹಿತಿಯುಳ್ಳ ಭಾರತೀಯ ಪರಂಪರೆಯ ಅರಿವಿರುವ ಒಂದು ಜಾಗರೂಕ ಮನಃಸ್ಥಿತಿ ಆಗಿರಬಹುದು. ಇಂಥ ಒಂದು ಪ್ರಜ್ಞೆಯನ್ನು, ಮನಃಸ್ಥಿತಿಯನ್ನು ನಾವು ಅನಂತಮೂರ್ತಿಯವರಲ್ಲಿ ಕಾಣುತ್ತೇವೆ.

ಪ್ರಜ್ಞೆ ಮತ್ತು ಪರಿಸರ, ಸಂಸ್ಕಾರಗಳಲ್ಲಿ ಅವರು ಆಧುನಿಕತೆಯನ್ನು ಒಪ್ಪಿದ, ಬ್ರಾಹ್ಮಣ್ಯವನ್ನು ತಿರಸ್ಕರಿಸಿದ ವ್ಯಕ್ತಿಯಾಗಿ ಕಾಣುತ್ತಾರೆ. ಬೆತ್ತಲೆ ಪೂಜೆ ಏಕೆ ಕೂಡದು, ಭವ ದಿವ್ಯಗಳಲ್ಲಿ ಇದಕ್ಕೆ ವಿರುದ್ಧವಾದ ಒಂದು ನಿಲುವನ್ನು ತಳೆಯುತ್ತಾರೆ ಎನಿಸುತ್ತದೆ. ಆದರೆ, ಅನಂತಮೂರ್ತಿಯವರಿಗೆ ಈ ಮೊದಲು ಆಧುನಿಕತೆಯನ್ನು ಒಪ್ಪಿದರ ಬಗ್ಗೆಯಾಗಲೀ ಬ್ರಾಹ್ಮಣ್ಯವನ್ನು ತಿರಸ್ಕರಿಸಿದ್ದರ ಬಗ್ಗೆಯಾಗಲೀ ವಿಷಾದವಿಲ್ಲ. ಇಂದು ಮತ್ತೆ ಭಾರತೀಯತೆಯ ಅನನ್ಯತೆಯನ್ನು ಕುರಿತು ಮಾತನಾಡುತ್ತಿರುವಾಗ ಕೂಡ ತಾನು ಹಿಂದೆ ಹೇಳಿದ್ದು ತಪ್ಪು ಅದನ್ನು ಈಗ ಸರಿಪಡಿಸಿಕೊಳ್ಳುತ್ತೇನೆ ಎಂಬ ಯಾವ ಸೂಚನೆಯೂ ಸಿಕ್ಕುವುದಿಲ್ಲ. ಅವು ಆ ಕಾಲಘಟ್ಟದ ಚಾರಿತ್ರಿಕ ತೀರ್ಮಾನಗಳೆಂದು ಭಾವಿಸುತ್ತಾರೆ.

ವಾಸ್ತವವಾಗಿ ಇದು ತೀರಾ ಸಹಜವಾದ ಬೆಳವಣಿಗೆ. ಸಂಪ್ರದಾಯ ಮತ್ತು ಆಧುನಿಕತೆ ಪರಸ್ಪರ ವಿರುದ್ಧ ದಿಕ್ಕಿನತ್ತ ಚಲಿಸುತ್ತಿರುವಂತೆ ಮೇಲುನೋಟಕ್ಕೆ ಭಾಸವಾದರೂ, ಅವೆರಡೂ ಬದುಕಿನ ಎರಡು ಮಗ್ಗುಲುಗಳು. ಇಂದು ಸನಾತನತೆಯ ಬಗ್ಗೆ ವಾದ ಮಾಡುವ ಯಾರೂ ಆಧುನಿಕತೆಯ ಸೌಲಭ್ಯಗಳನ್ನು ಬಿಟ್ಟು ಬದುಕಲಾರರು. ನಮ್ಮ ಬದುಕಿನ ಕ್ರಮದಲ್ಲೇ ಅವೆರಡೂ ಮೇಳೈಸಿಕೊಂಡಿರುವುದರಿಂದ ಅದು ಸಾಧ್ಯವಾಗದ ಸ್ಥಿತಿ ಕೂಡಾ. ಅದು ಅಗತ್ಯವನ್ನು ಮೀರಿ ನಮ್ಮ ಮೇಲೆ ಆಕ್ರಮಣ ಮಾಡುವ ಬಗ್ಗೆ, ನಮ್ಮ ದೇಹ ಮನಸ್ಸುಗಳನ್ನು ಸಂಪೂರ್ಣವಾಗಿ ಸೆರೆಹಿಡಿದಿರುವುದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಆಧುನಿಕತೆಯನ್ನು ವಿರೋಧಿಸುವುದಕ್ಕೆ ಭಾರತೀಯ ಪರಂಪರೆಯಲ್ಲಿ ಉತ್ತರಗಳನ್ನು ಕಂಡುಕೊಳ್ಳುವುದನ್ನು ನಾವು ವಿಶೇಷವಾಗಿ ಗಮನಿಸಬೇಕು.

ಭಾರತೀಯ ಸಂಸ್ಕೃತಿ ಇಂದು ಮುಕ್ತ ಮಾರುಕಟ್ಟೆಯಲ್ಲಿ ಕೇವಲ ಫ್ಯಾಸಿನೇಷನ್‌ಗೆ ಒಳಗಾಗಿರುವ ‘ಎತ್ನಿಕ್’ ಆಗಿ ಹೋಗಿರುವುದರ ಬಗ್ಗೆಯೂ ಅನಂತಮೂರ್ತಿಯವರ ಕಳಕಳಿ ವ್ಯಕ್ತವಾಗುತ್ತದೆ. ಏಕೆಂದರೆ, ಯಾವುದು ಫ್ಯಾಸಿನೇಟ್ ಆಗುತ್ತದೋ, ಎತ್ನಿಕ್ ಆಗುತ್ತದೋ, ಅದು ಮ್ಯೂಸಿಯಂನ ವಸ್ತುವಾಗಿ ಬಿಡುತ್ತದೆಯೆ ಹೊರತು ಬದುಕುವುದಿಲ್ಲ. ನಮ್ಮ ಬದುಕಿನ ವಿಚಾರಗಳು ಮಾರಾಟದ ವಸ್ತುವಾಗುವ ವಿಷಾದ ಅವರ ಬರವಣಿಗೆಗಳಲ್ಲಿ ಕಾಣುತ್ತದೆ. ಹಾಗೆಯೇ ನಮ್ಮ ಬದುಕಿನ ಕ್ರಮ ಕೇವಲ ಅಧ್ಯಯನದ ವಸ್ತುವಾಗುವುದನ್ನು, ಹೊರಗಿನವರನ್ನು ಆಕರ್ಷಿಸುವ ಸಾಧನವಾಗುವುದನ್ನು ಅಥವಾ ಆಧುನಿಕತೆಯ ವಿರುದ್ಧ ಸ್ಥಿತಿ ‘ಸಂಸ್ಕೃತಿ’ ಎನ್ನುವುದನ್ನು ಅನಂತಮೂರ್ತಿ ವಿರೋಧಿಸುತ್ತಾರೆ.

ಆಧುನಿಕತೆ ಅಥವಾ ಸನಾತನತೆ ಕೇವಲ ಬೌದ್ಧಿಕ ಮಟ್ಟದ ಕಸರತ್ತಲ್ಲ. ಬದುಕಿನ ನೈಜ ಸ್ಥಿತಿಗೆ ನಮ್ಮ ಸ್ಪಂದನೆ ಸಾಧ್ಯವಾಗಬೇಕಾದರೆ ಇವೆರಡನ್ನೂ ಒಳಗೊಂಡ ಒಂದು ಸ್ಥಿತಿಯನ್ನು ಆಧುನಿಕತೆಯ ಎದುರಿನಲ್ಲಿ ತರುವ ಭಾರತೀಯವಾದ ಪ್ರತೀಕಗಳನ್ನು ಅವರು ಹುಡುಕುತ್ತಾ ಹೋಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರು ಪರಿಪೂರ್ಣ ಎಂದುಕೊಂಡಿರುವ ಗತವನ್ನೂ, ಬಿರುಕು ಬಿಟ್ಟಿರುವ ವರ್ತಮಾನದ ಜೊತೆಯಲ್ಲಿ ನೋಡುತ್ತಾರೆ. ಆ ಮೂಲಕ ಗತವನ್ನೂ ಒಳಗೊಂಡ ಒಂದು ಹೊಸ ವರ್ತಮಾನ ಅವರಲ್ಲಿ ರೂಪುಗೊಳ್ಳುತ್ತದೆ.

ಅನಂತಮೂರ್ತಿಯವರ ಅರಿಯುವ ಈ ವಿಧಾನದಲ್ಲಿ ಪರಂಪರೆ ಪ್ರಧಾನವಾಗುತ್ತದೆ ಎಂಬುದು ನಿಜ. ಪರಂಪರೆಯನ್ನು ಒಳಗೊಂಡ ಆಧುನಿಕತೆಯ ಗೋಜಲುಗಳಿಗೆ ಪರ್ಯಾಯ ಚೈತನ್ಯವಾಗಿ ಗಾಂಧಿಯ ರೂಪಕಗಳನ್ನು ಅವರು ಬಳಸಿಕೊಳ್ಳುತ್ತಾರೆ. ಅವರ ಚಿಂತನೆಗಳಲ್ಲಿ ಗಾಂಧಿ ಧುತ್ತನೆ ಬರುವುದಿಲ್ಲ, ಅವರು ಮಾರ್ಕ್ಸ್‌ವಾದದ ಬಗ್ಗೆ ಬರೆಯುವಾಗಲೂ ಗಾಂಧಿ ಪ್ರಜ್ಞೆಯ ಭಾಗವಾಗಿರುವುದು ಕಂಡು ಬರುತ್ತದೆ. ಹೀಗಾಗಿ ಅವರಿಗೆ ಗಾಂಧಿ ಆಧುನಿಕತೆಯ ಅಬ್ಬರದ ವಿರುದ್ಧ ಏಕಾಂಗಿಯಾಗಿ ದನಿ ಎತ್ತುತ್ತಿದ್ದ ದೂರದೃಷ್ಟಿತ್ವದ ಪ್ರತೀಕವಾಗುತ್ತಾರೆ; ಬದುಕಿನ ಪರಿಪೂರ್ಣತೆಯ ಅನ್ವೇಷಣೆಯಲ್ಲಿರುವ ಅಲೆಮಾರಿಯಾಗುತ್ತಾರೆ ಹಾಗೂ ಎಂಥ ವಿರೋಧವನ್ನೂ ಎದುರಿಸಲಬಲ್ಲ ಸಾತ್ವಿಕ ಹಠಮಾರಿಯಾಗುತ್ತಾರೆ. ತನ್ನನೈತಿಕತೆಯ ಎತ್ತರಿಕೆಗಾಗಿ ಅನೇಕ ಪ್ರಯೋಗಗಳಿಗೆ ತನ್ನನ್ನು ತಾನೇ ತೆರೆದುಕೊಳ್ಳುತ್ತಾ ಹೋಗುವ ಗಾಂಧಿಯನ್ನು ಬೆರಗಿನಿಂದಲೇ ನೋಡುತ್ತಾರೆ. ಕೆಲವೊಮ್ಮೆ ಅತೀಂದ್ರಿಯ ಶಕ್ತಿಯಾಗಿ, ಎಷ್ಟೋ ವೇಳೆ ಅಪ್ರಸ್ತುತ ಚಿಂತನೆಗಳನ್ನೂ ಪ್ರಸ್ತುವೆನ್ನುವಂತೆ ಮಾಡುವ ರೀತಿಯನ್ನು ಗ್ರಹಿಸುವ ಕ್ರಮದಲ್ಲಿ ಭಾರತೀಯ ಬದುಕಿನ ಬಹುತ್ವಕ್ಕೆ ಅರ್ಥವನ್ನು ನೀಡುತ್ತಾರೆ. ಅನಂತಮೂರ್ತಿಯವರ ಬಹುಪಾಲು ಲೇಖನಗಳಲ್ಲಿ ಗಾಂಧಿ ವ್ಯಕ್ತಿತ್ವದ ವಿವಿಧ ಆಯಾಮಗಳು ಸಹಜವಾಗಿ ತೆರೆದುಕೊಳ್ಳುತ್ತಾವೆ.

ಅನಂತಮೂರ್ತಿಯವರು ಜಾತಿಯನ್ನು ಉಳಿಸಿಕೊಂಡು ಆ ಮೂಲಕ ಸಂಸ್ಕೃತಿಯನ್ನೂ ಉಳಿಸಿಕೊಳ್ಳಬೇಕು ಎನ್ನುತ್ತಾರೆ. ವಾಸ್ತವವಾಗಿ ಗಾಂಧೀಜಿಯ ನಿಲು ಕೂಡಾ ಇದೇ ಆಗಿತ್ತು. ಗಾಂಧಿ ಬಾರತದ ಸಾಮಾಜಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡೇ ರಾಜಕಾರಣದ ನೈತಿಕತೆಯ ಬಗ್ಗೆ ಮಾತನಾಡಿದರು. ರಾಜಕಾರಣ ನಮ್ಮ ಭಾವನಾತ್ಮಕತೆಯನ್ನು ಒಡೆಯುವಂತಿರಬಾರದು ಎಂದು ಬಲವಾಗಿ ಅವರು ನಂಬಿದ್ದರಿಂದ ಒಂದು ಕಡೆಗೆ ಬ್ರಿಟಿಷರ ವಿರುದ್ಧವೂ ಮತ್ತೊಂದು ಕಡೆ ಹರಿಜನರ ಪರವಾಗಿ ದನಿಯನ್ನೂ ಎತ್ತಿದರು. ದೇಶೀಯವಾದ ಹಕ್ಕು ಮತ್ತು ರಕ್ಷಣೆಗಳನ್ನು ಒಟ್ಟೊಟ್ಟಿಗೆ ಇಟ್ಟರು.

ಅನಂತಮೂರ್ತಿಯವರ ನಿಲುವುಗಳೇ ಒಮ್ಮೊಮ್ಮೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಅವರ ಚಿಂತನೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆಯೇನೋ ಎಂಬ ಗುಮಾನಿ ಎದುರಾಗುತ್ತದೆ. ಇದರಿಂದಾಗಿ ಇವರು ಪ್ರತಿಪಾದಿಸುವ ವೈಚಾರಿಕ ಅಂಶಗಳನ್ನು ಅನುಮಾನಿಸುವಂತೆಯೂ ಮಾಡುತ್ತವೆ. ಅಷ್ಟೇ ಅಲ್ಲದೆ ಅನಂತಮೂರ್ತಿಯವರು ನಮ್ಮನ್ನು ಗೋಜಲುಗೊಳಿಸುವುದರ ಮೂಲಕ ಪಾರಂಪರಿಕ ಮೌಲ್ಯಗಳನ್ನು ಪೋಷಿಸುತ್ತಿರುವಂತೆ ಕಾಣುತ್ತದೆ. ಆದರೆ, ನಮಗೆಲ್ಲಾ ಪ್ರಶ್ನೆಯಾಗಿರುವ ಈ ಬಗೆಯ ಚಿಂತನೆಗಳು ಈ ಹೊತ್ತಿನ ವ್ಯಕ್ತಿತ್ವದ ಅಗತ್ಯ ಕೂಡಾ ಹೌದು. ಇದನ್ನು ಸೃಷ್ಟೀಕರಿಸುವುದಕ್ಕಾಗಿ ಅವರನ್ನು ಭಾರತದ ಇನ್ನೊಬ್ಬ ಬುದ್ಧಿಜೀವಿ ಆಶೀಶ್ ನಂದಿ ಮತ್ತು ತಮಿಳುನಾಡಿನ ಡಿ. ಜಯಂಕಾಂತನ್‌ರ ಜೊತೆಯಲ್ಲಿಟ್ಟು ನೋಡಬೇಕು.

ಅನಂತಮೂರ್ತಿಯವರಂತೆ ಆಶೀಶ್ ನಂದಿಯವರು ಕೂಡಾ ಭಾರತದ ಸಮಾಜವನ್ನು ಅರ್ಥಮಾಡಿಕೊಳ್ಳುವುದಕ್ಕೆ ಗಾಂಧೀಜಿಯನ್ನು ಪ್ರಧಾನ ಪ್ರತೀಕವಾಗಿಸಿಕೊಳ್ಳುತ್ತಾರೆ. ಇವರಿಬ್ಬರಿಗೂ ಗಾಂಧೀ ಒಂದು ಸ್ಥಿತಿ. ಗಾಂಧಿಯನ್ನು ವಸ್ತುಸ್ಥಿತಿಯ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ನೆನಪಿಗೆ ಬರುವ, ಕಾಡಿಸುವ-ಬದುಕಿನ ಕ್ರಮಕ್ಕೆ ಪರ್ಯಾಯವಾದ ಒಂದು ರೂಪಕವಾಗಿ ಕಾಣಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಇಬ್ಬರಿಗೂ ಗಾಂಧಿ ಒಂದು ಹಳಹಳಿಕೆಯಾಗಿ ಕಾಣುವುದಿಲ್ಲ. ವ್ಯಾವಹಾರಿಕ ಜಗತ್ತಿನ ಆಧ್ಯಾತ್ಮಿಕ ಚೈತನ್ಯವಾಗಿ ಅವರನ್ನು ನೋಡುತ್ತಾರೆ.

ಇವರಿಬ್ಬರ ಬರಹಗಳೂ ಭೌತಿಕವಾದ ಜಗತ್ತಿನಲ್ಲಿ ಬದಲಾಗುತ್ತಿರುವ ಸಂಸ್ಕೃತಿಯ ಅರ್ಥ ವ್ಯಾಖ್ಯಾನಗಳನ್ನು ಚಿಂತನೆಗೆ ಒಳಗಾಗಿಸುತ್ತವೆ. ಅನಂತಮೂರ್ತಿ ಮತ್ತು ಆಶೀಶ್ ನಂದಿಯವರಿಗೆ ಸಂಸ್ಕೃತಿ ಎನ್ನುವುದು ಆಯಾ ಜನಾಂಗ ಕಂಡಿಕೊಂಡ ‘ದರ್ಶನ’, ಕಾಣಿಸಿದ ‘ಕಾಣ್ಕೆ’. ಅದನ್ನು ಉಳಿಸಿಕೊಳ್ಳುವುದರ ಬಗ್ಗೆ ತೀವ್ರವಾದ ಕಾಳಜಿ ಇದ್ದದ್ದು ಕೇವಲ ಗಾಂಧಿಗೆ ಮಾತ್ರ ಎಂದು ಇಬ್ಬರೂ ನಂಬುತ್ತಾರೆ.

ಇದಲ್ಲದೇ, ಭಾರತದ ಆಳುವ ವರ್ಗ ‘ರಾಷ್ಟ್ರ’, ‘ಅಭಿವೃದ್ಧಿ’ ಮತ್ತು ‘ತಂತ್ರಜ್ಞಾನ’ ಎನ್ನುವ ಪರಿಕಲ್ಪನೆಗಳನ್ನು ಈ ಹೊತ್ತಿನ ಭಾರತಕ್ಕೆ ಅತ್ಯಗತ್ಯ ಎಂದು ನಮ್ಮನ್ನು ಸಂಪೂರ್ಣವಾಗಿ ನಂಬಿಸಿದೆ. ಆಶೀಶ್ ನಂದಿ ಮತ್ತು ಅನಂತಮೂರ್ತಿ ಈ ಮೂರೂ ಪರಿಕಲ್ಪನೆಗಳನ್ನು ತೀವ್ರವಾಗಿ ವಿರೋಧಿಸುತ್ತಾರೆ. (ಆಶೀಶ್ ನಂದಿಯವರ Exiled at home ಕೃತಿಗೆ ಡಾ. ಡಿ.ಆರ್. ನಾಗರಾಜ್ ಬರೆದ ಮುನ್ನುಡಿಯಲ್ಲಿ ಈ ವಿಷಯವನ್ನು ಉಲ್ಲೇಖಿಸುತ್ತಾರೆ) ‘ಯುಗಪಲ್ಲಟ’ ಲೇಖನದಲ್ಲಿ ಅನಂತಮೂರ್ತಿಯವರೂ ಈ ಮೂರೂ ಪರಿಕಲ್ಪನೆಗಳನ್ನು ತಿರಸ್ಕರಿಸುತ್ತಾರೆ. ಇವರ ದೃಷ್ಟಿಯಲ್ಲಿ ಈ ಪರಿಕಲ್ಪನೆಗಳು ಪಾಶ್ಚಾತ್ಯ ಪ್ರಣೀತವಾದವು. ಇಲ್ಲಿನ ಬದುಕಿನೊಳಗಿನಿಂದ ರೂಪುಗೊಂಡವಲ್ಲ. ಇವುಗಳ ಸೃಷ್ಟಿಯ ಹಿಂದಿರುವ ರಾಜಕಾರಣವನ್ನೂ, ಅವುಗಳ ಅಳವಡಿಕೆಯ ನಂತರದ ಪರಿಣಾಮಗಳನ್ನೂ ಕೂಡ ವಿವೇಚಿಸುತ್ತಾರೆ. ಅದಕ್ಕೆ ಉತ್ತರಗಳನ್ನು ಭಾರತದ ಪರಂಪರೆಯಲ್ಲೇ ಹುಡುಕಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಹಾಗೆ ಇವರಿಬ್ಬರೂ ಕಂಡುಕೊಂಡ ಉತ್ತರ ಕೇವಲ ಆಕಸ್ಮಿಕವಾದುದಲ್ಲ ಎಂಬುದನ್ನು ನಾವು ಗಮನಿಸಬೇಕು.

ಇನ್ನು ಡಿ. ಜಯಕಾಂತನ್ ಅನಂತಮೂರ್ತಿಯವರ ಸಮಕಾಲೀನರು. ತಮ್ಮ ಬರವಣಿಗೆಯ ಆರಂಭಿಕ ಹಂತದಲ್ಲಿ ಅವರೂ ಕೂಡ ತೀವ್ರ ವೈಚಾರಿಕ ಪ್ರಜ್ಞೆಯುಳ್ಳ ಮಾರ್ಕ್ಸ್‌‌ವಾದಿಯಾಗಿದ್ದರು, ಲೋಹಿಯಾವಾದವನ್ನು ಮೆಚ್ಚುತ್ತಿದ್ದರು. ಜಯಕಾಂತನ್ ಕೂಡ ಅನಂತಮೂರ್ತಿಯವರಂತೆ ಮೋಡಿ ಮಾಡುವ ಮಾತುಗಾರ. ಅವರ ಸೃಜನಶೀಲ ಬರಹಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳು ಮಾನವೀಯ ಸ್ವರೂಪವನ್ನು ಪಡೆದುಕೊಂಡರೆ, ವೈಚಾರಿಕ ಲೇಖನಗಳಲ್ಲಿ ಅವು ಶುದ್ಧ ಸಿದ್ಧಾಂತದ ಸ್ವರೂಪವನ್ನು ತಾಳುತ್ತವೆ. ಮಾರ್ಕ್ಸ್‌ವಾದಿಯಾಗಿದ್ದಾಗಲೂ ಜಯಕಾಂತನ್ ಗಾಂಧಿ ವ್ಯಕ್ತಿತ್ವದ ಮಾನವೀಯ ಆಯಾಮಗಳ ಬಗ್ಗೆ ಆಕರ್ಷಿತರಾಗಿದ್ದರು. ಈಗ ಮಾರ್ಕ್ಸ್‌‌ವಾದದ ರಾಜಕೀಯ ಸಿದ್ಧಾಂತಗಳನ್ನು ಬಿಟ್ಟು ಅದರ ಮಾನವೀಯ ನೆಲೆಯನ್ನು ಮಾತ್ರ ಒಪ್ಪುತ್ತಾರೆ. ಹಾಗೆಯೇ ಈ ಹೊತ್ತಿನ ಭಾರತಕ್ಕೆ ಗಾಂಧಿಯ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ಅನಂತಮೂರ್ತಿ ಮತ್ತು ಜಯಕಾಂತನ್ ಇಬ್ಬರಿಗೂ ಗಾಂಧಿ ರಾಜಕೀಯ ವ್ಯಕ್ತಿವಾಗಿ ತಮ್ಮನ್ನು ಸಂಪೂರ್ಣವಾಗಿ ಈ ದೇಶಕ್ಕೆ ಸಮರ್ಪಿಸಿಕೊಂಡ ನಿಷ್ಠುರ ಸತ್ಯವಾದಿಯಾಗಿ, ಪ್ರಾಮಾಣಿಕ ಮತ್ತು ನಿಸ್ವಾರ್ಥ ನೇತಾರನಾಗಿಬಿಡುತ್ತಾರೆ. ನಮ್ಮೆದುರಿಗಿರುವ ಭ್ರಷ್ಠ ರಾಜಕಾರಣಿಗಳಿಗೆ ಈ ಮಹಾನ್ ಪ್ರತಿಭೆಗಳು ಇಡುವ ಪರ್ಯಾಯ ಗಾಂಧಿ.

ಅನಂತಮೂರ್ತಿಯವರನ್ನು ಅರಿಯುವ ಪ್ರಯತ್ನದಲ್ಲಿ ನಾವೆಲ್ಲ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಹೊರಡುವುದರಿಂದ ಅವರನ್ನು ಕೇವಲ ‘ಲೋಹಿಯಾವಾದಿಯೆಂದೊ’ ಪಕ್ಕಾ ‘ಆಧುನಿಕ’-ತೀರಾ ‘ಸನಾತನಿ’ ಎನ್ನುವ ಚೌಕಟ್ಟಿನಲ್ಲಿಟ್ಟು ಸರಳೀಕರಿಸುತ್ತಿರುತ್ತೇವೆ. ಹೀಗೆ ಸರಳೀಕರಿಸುವುದು ಅಥವಾ ಯಾವುದೋ ಒಂದು ಸಿದ್ದ ಚೌಕಟ್ಟಿನ ಒಳಗೆ ಇರಿಸುವುದು ಸಾಧ್ಯವಿಲ್ಲ. ಲೋಹಿಯಾವಾದದ ಆಚೆಗೆ ಆಧುನಿಕತೆ ಮತ್ತು ಸಮಾನತೆಯ ಗ್ರಹೀತಗಳಾಚೆಗೆ ನಿಂತು ನೋಡಿದಾಗ ಮಾತ್ರ ಅನಂತಮೂರ್ತಿಯಲ್ಲಿರುವ ‘ವ್ಯಕ್ತಿ’ ಕಾಣುತ್ತಾರೆ.

ಕನ್ನಡದ ಮೂಲಕ ವಿಶ್ವಕ್ಕೆ ಪ್ರತಿಕ್ರಿಯಿಸುವ ಒಂದು ಆಕರ್ಷಕ ಮಾದರಿಯನ್ನು ಅನಂತಮೂರ್ತಿ ನಮ್ಮ ಮುಂದಿಡುತ್ತಾರೆ. ಅಲ್ಲಿ ಭಾಷೆ ಒಂದು ಅಧ್ಬುತ ಮಾಧ್ಯಮ. ಪ್ರಾದೇಶಿಕತೆ ಎನ್ನುವುದು ವೈವಿಧ್ಯತೆಯ ಸೂಕ್ಷ್ಮ ಮನಃಸ್ಥಿತಿಗಳನ್ನು ಧಾರಣ ಮಾಡಿಕೊಂಡಿರುತ್ತದೆ. ಅನನ್ಯವಾದ ಸ್ಥಿತಿಯೊಂದನ್ನು ಸಿದ್ಧಿಸಿಕೊಂಡಿರುವ, ಪ್ರಾದೇಶಿಕತೆ ಜಾಗತೀಕರಣದ ವಿರುದ್ಧ ತಮ್ಮ ದನಿಯನ್ನು ಎತ್ತುತ್ತದೆ. ‘ಗಾಂಧಿ’ಯ ಪ್ರತೀಕದಂತೆಯೇ ‘ಕನ್ನಡ ಪರ ಚಿಂತನೆ’ಗಳ ಮೂಲಕ ಅನಂತಮೂರ್ತಿಯವರು ಇದನ್ನು ಕಂಡುಕೊಳ್ಳುತ್ತಾರೆ.

*

ಎರಡು ಪುಟ್ಟ ಘಟನೆಗಳನ್ನು ಹೇಳಿ ಈ ಬರಹವನ್ನು ನಿಲ್ಲಿಸಬಹುದು. ಎರಡೂ ಅವರೇ ಹೇಳಿದವು-

ಒಂದು:

ನಮ್ಮ ತೋಟದಲ್ಲಿ ರಾಮಣ್ಣ ಎಂವುವವನಿದ್ದ ಅವನು ಬಂಡೆಗಳ ಪದರಗಳನ್ನು ನೋಡಿ ಎಲ್ಲಿ ಹೊಡೆದರೆ ಆ ಕಲ್ಲು ಯಾವ ಆಕಾರದಲ್ಲಿ ಸೀಳು ಬಿಡುತ್ತದೆ ಎಂಬುದನ್ನು ಅಥೆಂಟಿಕ್ ಆಗಿ ಹೇಳುತ್ತಿದ್ದ. ಒಮ್ಮೆ ಹೀಗೇ ತೋಟದಲ್ಲಿ ಬಂಡೆಯನ್ನು ಸೀಳುವಾಗ ಆ ಬಂಡೆಯೊಳಗೊಂದು ಗಿಡ ಇರುವುದು ನಮಗೆ ಕಾಣಿಸಿತು. ನಾನು ಆ ರಾಮಣ್ಣನನ್ನು ಕುರಿತು ‘ಈ ಬಂಡೆಯ ಮಧ್ಯೆ ಆ ಗಿಡ ಹೇಗೆ ಬೆಳೆಯಿತು’ ಎಂದೆ. ಅದಕ್ಕಾತ ‘ನಿಮ್ಮ ಮಧ್ಯೆ ನಾವು ಬದುಕಿಲ್ವೆ ಬುದ್ಧಿ’ ಎಂದ. ನನಗೆ ಆಶ್ಚರ್ಯವಾಯಿತು. ಆ ಕ್ಷಣಕ್ಕೆ ಆತ ಹಾಗೆ ಹೇಳಲು ಇದ್ದ ಪ್ರೇರಣೆ ಏನು ಎಂದು ಯೋಚಿಸತೊಡಗಿದೆ.

ಮನೆಗೆ ಬಂದು ದೇವನೂರ ಮಹಾದೇವನಿಗೆ ಫೋನು ಮಾಡಿದೆ. ಅದಕ್ಕಾತ ‘ತನ್ನ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ಬೇರೆಯವರ ಬಗ್ಗೆ ಅಸೂಯೆಯಿಲ್ಲದೆ ಇದ್ದಾಗ ಅಂತಹ ಮಾತುಗಳು ಹೊರಬರುತ್ತವೆ’ ಎಂದರು.

ಎರಡು:

ಪೇಜಾವರ ಸ್ವಾಮಿಗಳವರಿಗೆ ಹೇಳಿದ್ದು-

’ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ, ಸಾಯುವ ಮುನ್ನ ಗಾಂಧೀಜಿಯ ಬಾಯಲ್ಲಿ.

ಪಿ. ಚಂದ್ರಿಕಾ, ಬಿ.ಯು. ಸುಮಾ