ಭಾರತೀಯ ಸಾಹಿತ್ಯವನ್ನು ಕುರಿತು ಮಾತನಾಡಲು ನಾನೊಂದು ರೂಪಕವನ್ನು ಬಳಸಲಿದ್ದೇನೆ. ಅದು ನಾನು ಹುಟ್ಟಿ ಬೆಳೆದ ಮನೆ. ಹಳೆಯಕಾಲದ ಹಳ್ಳಿಮನೆ. ನನ್ನ ಅಪ್ಪ ಮತ್ತು ಅವರ ಸ್ನೇಹಿತರು ಮನೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದುದು ಎದುರಿನ ಜಗಲಿಯ ಮೇಲೆ. ನಾಡುಹೆಂಚಿನ ಸೂರಿನ ಕೆಳಗೆ ಸ್ವಲ್ಪ ಎತ್ತರದ ಮಣ್ಣಿನ ಜಗಲಿ ಅದು. ಈ ಜಗಲಿಯ ಮೇಲೆ ಸವರ್ಣೀಯರಲ್ಲಿ ಜಾತಿಭೇದ ಇರಲಿಲ್ಲ. ಬ್ರಾಹ್ಮಣರಾದ ನನ್ನ ತಂದೆಯನ್ನು ಕಿವಿಗೆ ಹರಳಿನ ಒಂಟಿ ಹಾಕಿ, ಪೇಟತೊಟ್ಟ ಅವರ ಬ್ರಾಹ್ಮಣೇತರ ಗೆಳೆಯರು ಮದುವೆ ಮುಹೂರ್ತ ನಿಶ್ಚಯಿಸಲೋ ಅಥವಾ ಬೇರಾವುದಾದರೂ ಪೂಜೆಗಾಗಿ ತಿಥಿ, ನಕ್ಷತ್ರಗಳನ್ನು ಕೇಳಲೋ ಬರುತ್ತಿದ್ದರು. ಹೀಗೆ ಧಾರ್ಮಿಕ ವಿಧಿಗಳಿಗಾಗಿ ಪಂಚಾಂಗ ನೋಡಿಸಲು ಕೆಲವೊಮ್ಮೆ ಕೆಲವು ಜನ ಬರುವುದಾದರೆ ಭೂಮಿಗೆ ಸಂಬಂಧಪಟ್ಟ ವ್ಯಾಜ್ಯಗಳಲ್ಲಿ ಕಾನೂನಿನ ದೃಷ್ಟಿಯೇನೆಂದು ತಿಳಿಯಲು ಬರುತ್ತಿದ್ದವರು ಜರೀಪೇಟದ ಶಿಸ್ತಿನ ಹಲವುಜನ. ಹಲವು ಬಾರಿ ಇಂಥವು ನನ್ನ ಕಿವಿಯ ಮೇಲೆ ಬೀಳುತ್ತಿದ್ದ ವಾರ್ತೆಗಳಂತಿದ್ದರೆ, ನಾನು ಕಿವಿಗೊಟ್ಟು ಕೇಳುತ್ತಿದ್ದುದು ಹಾಳೆ ಟೋಪಿಗಳನ್ನು ಹಾಕಿಕೊಂಡ ಒಕ್ಕಲು ಜನ ಬಣ್ಣ ಕಟ್ಟಿ ಹೇಳುತ್ತಿದ್ದ ವನ್ಯ ಪ್ರಾಣಿಯ ಕಥೆಗಳನ್ನು, ತರಳೆಯ  ಕುರ್ಕಗಳು, ಕಳ್ಳ ಚಿರತೆಗಳು ತಮ್ಮ ಪಾಡಿಗೆ ತಾವಿರುವ, ಆದರೆ ಮುಷ್ಯನ ದುಷ್ಟತನಕ್ಕೆ ಪ್ರತೀಕಾರವಾಗಿ ನರಭಕ್ಷಕವಾಗುವ ಹುಲಿಗಳು ಈ ಕಥೆಗಳ ವಸ್ತುಗಳು. ಬಾಲಕರಿಗೆ ವೈದಿಕ ಮಂತ್ರ ಶಕ್ತಿಗಿಂತ ಇಂಥ ಪ್ರಾಣಿಗಳಿಗೆ ಆಪತ್ಕಾರಿಯಾದ, ಅವೈದಿಕರ ನಳಿಗೆ ಕೋವಿಯೇ ಹೆಚ್ಚು ಸ್ವಾರಸ್ಯದ ಸಂಗತಿಯಾಗಿತ್ತು.

ಜಗಲಿಯ ಮೇಲೆ ಕೂತವರ ಜಾತಿಯಲ್ಲಿ ತುಂಬಾ ಬಡವರಾದವರು ಜಗಲಿಯ ಕೆಳಗೆ ಕೂತಿರುತ್ತಿದ್ದರು. ಜಗಲಿ ಮೇಲೆ ಬಣ್ಣದ ಚಾಪೆಯಾದರೆ  ಕೆಳಗೆ ಶುಭ್ರವಾಗಿ ಗುಡಿಸಿ, ಸಾರಿಸಿದ ಮಣ್ಣಿನ ನೆಲ. ನನ್ನ ತಂದೆ ಎಲ್ಲರಿಗೂ ಎಲೆ, ಅಡಿಕೆ ಮತ್ತು ಹೊಗೆಸೊಪ್ಪನ್ನು ಕೊಡುತ್ತಿದ್ದರು. ಮನೆಯ ಮುಂದಿನ ಈ ಜಗಲಿ ಚಿತ್ರಗಳನ್ನು ಕೆತ್ತಿದ  ದೊಡ್ಡ ದೊಡ್ಡ ಕಂಬಗಳನ್ನು ಪಡೆದುಕೊಂಡು ಅಂತಸ್ತು ಮತ್ತು ಅಧಿಕಾರದ ಜಾಗದಂತೆ ಕಾಣುತ್ತಿತ್ತು. ಆದರೂ ಖುಷಿಯಾದ ಜಾಗ ಇದು. ಹೊರಗಿನ ಐಹಿಕ ಲೋಕದ ವರ್ತಮಾನಗಳು, ಪರಲೋಕದ ಧಾರ್ಮಿಕ ಸಂಗತಿಗಳು ಈ ಪ್ರತಿಷ್ಠಿತ ಜಗಲಿಯ ಮೇಲೆ ಚರ್ಚಿತವಾಗುತ್ತಿದ್ದವು. ಶುಭದ, ಹಬ್ಬದ ದಿನಗಳಲ್ಲಿ ಪುರಾಣ ಓದುವವರು ಈ ಜಗಲಿಯ ಮೇಲೆ ಸುಶ್ರಾವ್ಯವಾಗಿ ಹಾಡಿ ಪುಣ್ಯ ಕಥೆಗಳನ್ನು ವಿವರಿಸುತ್ತಿದ್ದರು.

ನನಗೆ ಗಂಸರಿಂದ ತುಂಬಿದ ಈ ಜಗಲಿಯ ಮೇಲೆಯೇ ಪ್ರಪಂಚದ ಐಹಿಕ ಜ್ಞಾನ ದೊರೆತದ್ದು. ನನ್ನ ತಂದೆ ಯಾವ ಶಾಲೆಗೂ ಹೋಗದೆ ಸ್ವಂತ ಕಲಿತವರು. ಅಂದರೆ ಸಂಸ್ಕೃತ ಮತ್ತು ಇಂಗ್ಲಿಷನ್ನು ಬಲ್ಲವರು. ಎದುರು ಕ್ರಾಪನ್ನು, ಹಿಂದೆ ಜುಟ್ಟನ್ನೂ ಸಮನ್ವಯಿಸಿಕೊಂಡಿದ್ದವರು. ಹೀಗಾಗಿ ಮಲೆನಾಡಿನ ಹಳ್ಳಿಗಳಲ್ಲಿ ಬಹುಜನಪ್ರಿಯರಾದ ಲೌಕಿಕರು. ಹಳ್ಳಿಯ ಜನಕ್ಕೆ ಮಹಾತ್ಮಾ ಗಾಂಧೀಯವರ ನೇತೃತ್ವದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಬಗ್ಗೆಯೂ ಇವರು ಹೇಳಿದ ಕಥೆಗಳನ್ನು ನಾನು ಕೇಳಿಸಿಕೊಂಡಿದ್ದಿದೆ.

ಹಳ್ಳಿ ಜನರ ಹರಟೆಯ ಜಗತ್ತು ಅವರ ಬೆರಗಿನಿಂದಾಗಿಯೂ ಎಲ್ಲವನ್ನೂ ಉತ್ಪ್ರೇಕ್ಷಿಸುವ ಅವರ ಮಾತುಗಾರಿಕೆಯಿಂದಾಗಿಯೂ ಸಹಜ ಉಲ್ಲಾಸದ್ದು. ಅದರಲ್ಲಿ ಉದಾರಿಗಳಾದ ಬೆಕ್ಕಿನ ಕಣ್ಣಿನ ಬ್ರಿಟಿಷ್ ಅಧಿಕಾರಿಗಳಿರುತ್ತಿದ್ದರು. ಹಾಗೆಯೇ ದಕ್ಷರಾದರೂ ಕೋಪಿಷ್ಠರಾದ, ಬರಿ ಪೇಟವನ್ನೂ ಟೈಯನ್ನೂ ತೊಟ್ಟ ಬಾರತೀಯ ಸರಕಾರಿ ಜನರೂ ಇರುತ್ತಿದ್ದರು. ನನ್ನ ಎಳೆಯ ಕಿವಿಗಳಿಗೆ ಬಲು ಹಿತವಾದದ್ದನ್ನು ಇಲ್ಲಿ ನಾನು ಕೇಳಿಸಿಕೊಂಡಿದ್ದೇನೆ. ಎಂದೋ ಅಪರೂಪಕ್ಕೆ ಮೈಸೂರಿನ ದಸರಾ ಉತ್ಸವ ನೋಡಿ ಬಂದ ಪಕ್ಕದ ಹಳ್ಳಿಯ ಗೃಹಸ್ಥರೊಬ್ಬರು ನನಗೆ ಬಹುಪ್ರಿಯರಾದರು. ಜುಟ್ಟಿನಲ್ಲಿ ತುಳಸಿ ಮುಡಿದ ಇವರು ದಸರಾ ಉತ್ಸವವನ್ನು ಅಂಬಾರಿಯ ಮೇಲೆ ಸಾಲಂಕೃತವಾಗಿ ಕೂತ ಮಹಾರಾಜರನ್ನೂ ಹಾಡಿ ಹೊಗಳುತ್ತಿದ್ದ ರೀತಿ ಕಣ್ಕಟ್ಟಿನ ಮೋಡಿಯದು. ಹೇಳಿದ ಕಥೆಯನ್ನೇ ಅವರು ಹೇಳಿರುವುದು ಒಂದು ಸಲವಲ್ಲ, ಹಲವಾರು ಬಾರಿ. ಆದರೆ ಪ್ರತಿ ಸಾರಿಯೂ ನನಗೆ ಅದು ಅವರು ಕಥಿಸುವ ಕ್ರಮದಿಂದ ಹೊಸ ಅನುಭವವಾಗುತ್ತಿತ್ತು. ಅವರು ಜಗಲಿಯ ಮೇಲೆ ಬಂದು ಕೂತರೆಂದರೆ ಹೊಗೆಸೊಪ್ಪು ತಿಕ್ಕುತ್ತ ಕಣ್ಣುಮುಚ್ಚಿ ಕಥೆಗೆ ಸಜ್ಜಾಗುವುದನ್ನೇ ನಾನು ಕಾದಿರುತ್ತಿದ್ದೆ.

ಹೆಂಗಸರ ಪ್ರಪಂಚ

ಹೊರ ಜಗಲಿಯಲ್ಲಿ ಇರುತ್ತಿದ್ದವರು ಬರೀ ಗಂಡಸರುಎಂದೆ. ಹೆಂಗಸರು ಬಂದ ಕೂಡಲೇ ಅವರನ್ನು ಒಳಗೆ ಕರೆದುಕೊಂಡುಹೋಗಲಾಗುತ್ತಿತ್ತು. ಅದೊಂದು ತಂಪಾದ, ಮಂದವಾದ ಬೆಳಕಿನ ನಡುಮನೆ. ಹೆಂಗಸರು ಬ್ರಾಹ್ಮಣರಾದರೆ ಅವರು ಇನ್ನಷ್ಟು ಒಳಗೆ ಬರಬಹುದಾಗಿತ್ತು. ಅದು ನಮ್ಮ ಕುಟುಂಬದ ಊಟದ ಮನೆ. ನಡುಮನೆಯ ನೆಲ ಸಗಣಿಯಿಂದ ಸಾರಿಸಿದ ಮಣ್ಣಿನ ನೆಲ. ಅದರ ಮೇಲೆ ಬಣ್ಣದ ಬಿದಿರಿನ ಚಾಪೆ. ಊಟದ ಮನೆ ಇದಕ್ಕಿಂತ ಹೆಚ್ಚು ಖಾಸಗಿಯಾದ್ದು. ಅಲ್ಲೂ ಮಣ್ಣಿನ ನೆಲವೇ. ಆದರೆ ಕೂರಲು ಮಣೆ ಇರುತ್ತಿತ್ತು. ಈ ಊಟದ ಮನೆಯ ಒಂದು ಬದಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಖಾಸಗಿಯಾದ ಜಾಗ- ಅದು ಅಡಿಗೆ ಮನೆ. ಇಲ್ಲಿ ದೇವರಿಗೆ ಸದಾ ಉರಿಯುವ ದೀಪವಿದ್ದ ಗೂಡು. ನನ್ನ ತಾಯಿಗೆ ಮಾತ್ರ ಇಲ್ಲಿ ಪ್ರವೇಶ. ತನ್ನನಿತ್ಯದ ಅಂಗಿಯನ್ನು ಬಿಚ್ಚದೆ, ಸ್ನಾನ ಮಾಡದೆ ನನ್ನ ತಂದೆಗೂ ಇಲ್ಲಿ ಪ್ರವೇಶವಿಲ್ಲ. ಊಟದ ಮನೆಯ ನಂತರ ಹೊರಗೆಲಸದ ಒಂದು ಜಾಗ ಮತ್ತು ದೊಡ್ಡ ಸ್ನಾನದ ಮನೆ. ಮನೆಗೆಲಸದವರಿಗೆ ಇಲ್ಲಿ ಪ್ರವೇಶವಿತ್ತು. ಇದೆಲ್ಲ ಮುಗಿದ ನಂತರ ಮನೆಯ ಹಿಂಬದಿಯಲ್ಲಿ ಹಿತ್ತಿಲು.

ನನಗೆ ಅತ್ಯಂತ ಮಾಂತ್ರಿಕ ಜಾಗ ಇದು. ಈ ಹಿತ್ತಿನಲ್ಲಿ ನಾನು ನನ್ನ ಬಹಳ ಪ್ರಿಯವಾದ ಕಾಲವನ್ನು ಕಳೆಯದೇ ಇದ್ದಲ್ಲಿ ಮತ್ತು ಅಲ್ಲಿ ಸೇರುವ ಹೆಂಗಸರ ಗುಟ್ಟುಗಳನ್ನು ಕದ್ದು ಕೇಳಿಸಿಕೊಳ್ಳದೇ ಇದ್ದಲ್ಲಿ ನಾನು ಲೇಖಕನೇ ಆಗುತ್ತಿರಲಿಲ್ಲ. ಹಿತ್ತಿಲಿಗೆ ಬರುತ್ತಿದ್ದವರೆಲ್ಲಾ ರಂಜದ ಹೂವನ್ನೋ ಕೆಂಡ ಸಂಪಗೆಯನ್ನೋ, ವಿಶೇಷವಾಗಿ ಕೇದಗೆಯನ್ನೋ ಮುಡಿದಿರುತ್ತಿದ್ದ, ತುಂಡು ಸೀರೆಯುಟ್ಟ ಹೆಂಗಸರೇ. ಒಂದೊ ಬಾವಿಯಿಂದ ನೀರು ಸೇದಲು ಅಥವಾ ತಾಯಿಯಿಂದ ‘ಬಾಯಿಗೇನಾದರೂ’ ಅಂದರೆ ಜಗಿಯಲು ಎಲೆಯಡಿಕೆಯನ್ನು- ಪ್ರಾಸಂಗಿಕವಾಗಿ ಕೇಳಲು ಅಥವಾ ರುಚಿರುಚಿಯಾದ ತಂಗಳು ಪದಾರ್ಥಗಳನ್ನು ನನ್ನ ತಾಯಿಯಿಂದ ಕೇಳದೇ ಪಡೆಯಲು ಅವರ ಬಂದದ್ದಾದರೂ ಹೀಗೇ ಸುಮ್ಮನೇ ಬಂದವರೆಂಬಂತೆ ಅವರು ಕಾಣುತ್ತಿದ್ದರು. ಹೆಂಗಸರ ನಡುವೆ ಇಂಥ ಅವಸರವಿಲ್ಲದ ಸಂದರ್ಭಗಳು ಅನುಕಂಪ, ಪ್ರೀತಿ ಮತ್ತು ಸೌಹಾರ್ದವನ್ನು ಎಲ್ಲರೂ ಕೂಡಿ ಮೆರೆಯುವ ಕ್ಷಣಗಳಾಗಿರುತ್ತಿದ್ದವು. ಹೆಂಗಸರು ಬೇಡ ಬೇಡವೆನ್ನುತ್ತ ಹಿಂದಹಿಂದಕ್ಕೆ ಸರಿಯುವುದು, ಬಾಳೆಲೆಯಲ್ಲಿ ಕಟ್ಟಿತಂದ ಪದಾರ್ಥವನ್ನು ಒತ್ತಾಯ ಮಾಡಿ, ದಾಕ್ಷಿಣ್ಯದಲ್ಲಿ ಒಡ್ಡಿದ ಕೈಮೇಲೆ, ದೂರದಿಂದಲೇ ಹಾಕಲೆಂದು ಮಡಿಯುಟ್ಟ ಅಮ್ಮ ಮುಂದೆ ಮುಂದೆ ಹೋಗುವುದು, ‘ಇದು ನಿನಗಲ್ಲ ನಿನ್ನ ಮಕ್ಕಳಿಗೆ’ ಎಂದು ಹೆಂಗಸರ ಒಯ್ಯಾರವನ್ನು ಅಮ್ಮ ಮೀರುವುದು-ಈ ಬಗೆಯ ಸಡಗರ ಮತ್ತು ಸೌಜನ್ಯದ ರಿಚುಯಲ್ಲುಗಳು ನನ್ನ ಪ್ರತಿನಿತ್ಯದ ಅನುಭವಗಳು.

ಇಲ್ಲಿಯೇ ನಾನು ಹೇಳಿಬಿಡಬೇಕಾದ ಇನ್ನೊಂದು ಮಾತಿದೆ. ನನ್ನ ತಾಯಿ ನನ್ನ ತಂದೆಗಿಂತ ಹೆಚ್ಚು ಸಂಪ್ರದಾಯಸ್ಥ ಮಡಿವಂತಳು. ನನ್ನ ತಂದೆ ಪೇಟೆಯ ಹೋಟೆಲಿನಲ್ಲಿ ಕಾಫಿ ಕುಡಿಯುವ ಲೌಕಿಕರು. ಇಂಥ ಮಡಿವಂತ ತಾಯಿಯ ಜೊತೆ ಬೇರೆ ಜಾತಿಯ ಹೆಂಗಸರು ತಮ್ಮ ನಡುವಿನ ಅಂತರಗಳನ್ನು ಮರೆತು ತಮ್ಮ ಗುಟ್ಟುಗಳನ್ನೂ ಹೇಳುತ್ತಿದ್ದರು. ಈ ಗುಟ್ಟುಗಳು ಅವರ ಲೈಂಗಿಕ ಜೀವನದ ಬಗ್ಗೆ ಇರಬಹುದು ಅಥವಾ ರಹಸ್ಯವಾದ, ಹೆಂಗಸರಿಗೆ ಮಾತ್ರ ತಿಳಿಯುವ, ಯಾವ ಗಂಡಸರಿಗೂ ಹೇಳಿಕೊಳ್ಳಲಾಗದ ದೇಹಕ್ಕೆ ಸಂಬಂಧಿಸಿದ ನೋವುಗಳಾಗಿರಬಹುದು. ಮಡಿಮೈಲಿಗೆಗಳನ್ನು ಮೀರುವ ಈ ಹೆಣ್ಣು ಜೀವದ ಒಡನಾಟವನ್ನು ನಾನು ಜಗಲಿಯ ಗಂಡು ಪ್ರಪಂಚದಲ್ಲಿ ಕಂಡದ್ದು ಇಲ್ಲ.

ಹೊರಜಗಲಿಯ ಪ್ರಪಂಚವೂ, ಹಿತ್ತಿಲಿನ ಪ್ರಪಂಚವೂ ಬೇರೆ ಬೇರೆ ಲೋಕಗಳೇ ಆಗಿದ್ದವು. ಹಿತ್ತಿಲು ಹೆಂಗಸರ ಗುಪ್ತಲೋಕ ಮಾತ್ರವಲ್ಲ; ಯಾವ ಆರೈಕೆಯೂ ಇಲ್ಲದೆ ಬೆಳೆದ ಮರಮುಟ್ಟುಗಳ ಸಂದಿ ಮೂಲೆಗಳಿಂದ ಸುವಾಸನೆಯ ಬೇರುಗಳನ್ನೂ, ಎಲೆಗಳನ್ನೂತಂದು ಅಮ್ಮ ಅಡುಗೆ ಮಾಡಿಬಿಡುತ್ತಿದ್ದರು. ನನ್ನ ತಾಯಿಗೆ ಮಾತ್ರ ಅವುಗಳ ಹೆಸರು ಗೊತ್ತು. ಬುದ್ಧಿವಂತರ ನಿಘಂಟುಗಳಲ್ಲೂ ಆ ಹೆಸರುಗಳು ಇನ್ನೂ ಸೇರಿಲ್ಲ. ನನ್ನ ಅಜ್ಜನೂ ಈ ಹಿತ್ತಿಲಿನಲ್ಲಿ ಹೋಗಿ ಹುಡುಕುತ್ತಿದ್ದುದೂ ಉಂಟು. ಅದು ಹಳ್ಳಿಯ ರೋಗಿಗಳಿಗೆ ಮದ್ದನ್ನು ಅರದುಕೊಡಲು ಬೇಕಾದ ಗಿಡ-ಮೂಲಿಕೆಗಳಿಗಾಗಿ ಈ ಮೂಲಿಕೆಗಳು ಪರಿಣಾಮಕಾರಿಯಾಗಬೇಕಾದರೆ ಅವುಗಳ ಹೆಸರನ್ನು ಹೇಳಬಾರದು. ನನ್ನ ಅಜ್ಜನಿಗೆ ಮಾತ್ರ ಗೊತ್ತಿದ್ದ ರಹಸ್ಯ ಅದು. ‘ನೀನು ಬೆಳೆದ ಮೇಲೆ ಅವುಗಳನ್ನು ನಿನಗೆ ಗುರುತು ಮಾಡಿ ಕೊಡುತ್ತೇನೊ’ ಎಂದು ಅವರು ನನಗೆ ಆಶ್ವಾಸನೆ ಇತ್ತಿದ್ದರು.

ಆದರೆ ದುರ್ದೈವಶಾತ್ ನಾನು ನನ್ನ ಅಜ್ಜನ ಪ್ರಭಾವಕ್ಕೆ ಎಟುಕದ ಇನ್ನೊಂದು ಪ್ರಾಣಿಯಾಗಿ ಬೆಳೆದುಬಿಟ್ಟೆ. ನನ್ನತಂದೆಯ ಹೊರಜಗಲಿಯಿಂದ ನಾನು ಪಡೆಯುತ್ತಿದ್ದ ಪ್ರೇರಣೆ ಕ್ರಮೇಣ ನನ್ನನ್ನು ಈ ನಮ್ಮ ನವ ನಾಗರಿಕತೆಯ ಜಗಲಿಗಳಾದ ಇಂಗ್ಲೆಂಡ್ ಮತ್ತುಅಮೆರಿಕಕ್ಕೆ ಒಯ್ದುಬಿಟ್ಟವು.

*

ಭಾರತೀಯ ಸಾಹಿತ್ಯದಲ್ಲಿಯೂ ಹೀಗೆಯೇ ಒಂದುಹೊರಜಗಲಿಯೂ ಇದೆ. ಹಿತ್ತಲೂ ಇದೆ. ನಾನು ನಮ್ಮ ಸಾಹಿತ್ಯದ ಭಾಷೆಗಳನ್ನು Vernacular ಎಂದು ಕರೆಯುವುದನ್ನು ಸ್ವಲ್ಪವೂ ಇಷ್ಟಪಡುವುದಿಲ್ಲ. Ethnic ಎನ್ನುವ ಶಬ್ಧದಂತೆಯೇ ಇದೂ ಕೂಡ ಒಂದು ಕೆಟ್ಟ ಶಬ್ದ-ಸಾಮ್ರಾಜ್ಯಶಾಹಿಗಳು ಬಳಸುವ ಶಬ್ದ. ‘ಪ್ರಾದೇಶಿಕ ಭಾಷೆ’ (Regional Language) ಎಂದೂ ನಾನು ನಮ್ಮ ಭಾಷೆಗಳನ್ನು ಕರೆಯಲು ಇಷ್ಟಪಡುವುದಿಲ್ಲ. ಫ್ರೆಂಚ್, ಇಟಾಲಿಯನ್, ಡಚ್ ಭಾಷೆಗಳೂ ಕೂಡ ಪ್ರಾದೇಶಿಕ ಭಾಷೆಗಳಲ್ಲವೇ? ಭಾಷೆಗಳು ‘ಅಂತಾರಾಷ್ಟ್ರೀಯ’ವೆಂದು ವಿಜೃಂಭಿಸುವುದು ಕೇವಲ ಅವುಗಳ ಸಾಹಿತ್ಯಿಕ ಶಕ್ತಿಯಿಂದಲ್ಲ; ಅದು ಆ ಭಾಷೆಯನ್ನು ಮಾತಾಡುವ ಜನರ ವಸಾಹಾತುಶಾಹೀ ದುರಾಕ್ರಮಣದ ಪರಿಣಾಮವಾಗಿ ಹುಟ್ಟಿಕೊಳ್ಳುವ ಸೌಭಾಗ್ಯ. ಇಂಗ್ಲೀಷಿನಲ್ಲಿ Dialect ಎಂಬ ಪದವೂ ಹೀಗೆಯೇ ಅನುಮಾನಸ್ಪದವಾದ್ದು. ಒಂದು Dialectನ್ನು ಮಾತನಾಡುವ ಜನರಿಗೆ ಒಂದು ಸೈನ್ಯ ಮತ್ತು ತನ್ಮೂಲಕ ಒಬ್ಬ ‘ರಾಷ್ಟ್ರಕವಿ’ ದೊರತುಬಿಟ್ಟಲ್ಲಿ ಅದು ಕೂಡ ಒಂದು Language ಆಗಿಬಿಡುತ್ತದೆ.

ನಮ್ಮ ಭಾಷೆಗಳ ಹೊರಜಗಲಿ ಯಾವುದು ಹಾಗಾದರೆ? ಕನ್ನಡವನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ನನ್ನ ಭಾಷೆಯ ಮೊದಲ ದೊಡ್ಡ ಕವಿ ಪಂಪನಿಗೆ ಸಂಸ್ಕೃತ ಸಾಹಿತ್ಯ ಮಾದರಿಯಾಗಿತ್ತು. ಆದರೆ ಅವನು ತನ್ನ ಮಾದರಿಯನ್ನು ಅನುಕರಿಸಲಿಲ್ಲ-ಮೀರಿದ. ಅಖಿಲ ಭಾರತ ಖ್ಯಾತಿಯ ಸಂಸ್ಕೃತ ಸಾಹಿತ್ಯ ಪಂಪನ ಹೊರಜಗಲಿಯ ಮೇಲೆ ಇರುವಂಥದ್ದಾಗಿದ್ದರೆ ಅವನಿಗೆ ತನ್ನ ಗುಪ್ತ ಹಿತ್ತಿಲೂ ಗೊತ್ತಿತ್ತು. ಈ ಹಿತ್ತಲು ಗಂಧವತಿಯೂ, ಫಲವತ್ತಾದ್ದೂ ಮತ್ತು ಪ್ರತಿಷ್ಠಿತರ ಕಣ್ಣಿಗೆ ಬೀಳದ್ದೂ ಆಗಿತ್ತು. ಇವೇ ಜಾನಪದ ಮೌಖಿಕ ಪರಂಪರೆಗಳು. ಅಂದರೆ ‘ದೇಸೀ’ ಜಗಲಿಯ ಮೇಲಿನ ಸಂಸ್ಕೃತ ‘ಮಾರ್ಗ’ ಅಂದರೆ ವಿಶಾಲವಾದ ರಾಜ ಬೀದಿ.

ಪಂಪನ ಮಹತ್ವ ಇರುವುದು ಈ ‘ಮಾರ್ಗ’ ಮತ್ತು ‘ದೇಸೀ’ಗಳನ್ನು ಅವನು ಹೆಣೆಯುವ ಕೌಶಲದಲ್ಲಿ. ಈ ಹೆಣಿಗೆ ಶೈಲಿಯ ಸೌಂದರ್ಯಕ್ಕಾಗಿ ಮಾತ್ರವಲ್ಲ; ತನ್ನ ಕಾವ್ಯದ ವಿಷಯದೊಳಕ್ಕೆ ಅವನು ಪ್ರೇವೇಶಿಸಿ, ಯಾವ ಅರ್ಥವನ್ನು ಅಲ್ಲಿಂದ ಉಂಟುಮಾಡುತ್ತಾನೆ ಎಂಬುದನ್ನೂ ನಿರ್ಧರಿಸುತ್ತಿತ್ತು. ಸಂಸ್ಕೃತ ಸಾಹಿತ್ಯದ ಸಾರ್ವಕಾಲಿಕ ಸಾಧಾರಣ ಸತ್ಯಗಳಿಗೆ ಅವನು ಪ್ರಾದೇಶಿಕ ಸೊಗಡನ್ನು ಕೊಟ್ಟು ಬರೆದದ್ದು ಮಾತ್ರವಲ್ಲ, ಅವು ದೇಶೀ ಕಲ್ಪನೆಯಲ್ಲಿ ಒಡನಾಡಿ ಬೇರೊಂದು ಅರ್ಥ ಹೊಮ್ಮಿಸಬಲ್ಲಂತೆ ನಿಜವಾದವು. ಉದಾಹರಣೆಗೆ ಪಂಪ ಕರ್ಣನನ್ನು ಭಾವಿಸುವ ಕ್ರಮ. ಪಂಪನಿಂದ ಈವರೆಗೂ ಹೀಗೆಯೇ ನಮ್ಮ ಸಾಹಿತ್ಯದಲ್ಲಿ ಹೊರಜಗಲಿಯೂ, ಹಿತ್ತಿಲೂ ಹೆಣೆದುಕೊಳ್ಳುತ್ತಲೆ ಇವೆ. ಹಿತ್ತಿಲು ಅಕ್ಷಯವಾದದ್ದು. ಹಿಂದುಳಿದ ಜನ ಅಕ್ಷರಸ್ಥರಾಗುತ್ತಾ ಹೋದಂತೆ ನಮ್ಮ ನಾಗರಿಕತೆಯ ಹೊರ ಜಗಲಿಗೆ ಅವರು ತಮ್ಮ ಹಿತ್ತಿಲಿನ ಅನುಭವವನ್ನು ತರುತ್ತಲೇ ಇರುತ್ತಾರೆ. ಹೀಗೆ ಅವರ ಸ್ಮೃತಿ ಮತ್ತು ಬಯಕೆ ಜಗತ್ತಿನ ಸಾಹಿತ್ಯದ ಮುಖ್ಯ ಪ್ರವಾಹದೊಳಕ್ಕೆ ಬರುತ್ತಲೇ ಇರುತ್ತದೆ.

ಇವತ್ತಿಗೂ ಹೆಂಗಸರೂ, ಶೂದ್ರರು, ಔಷಧಿಗಳು, ನಾಲಿಗೆಗೆ ಹೊಸರುಚಿ ಕೊಡುವ ಬೇರುಗಳು ಮತ್ತು ಚಿಗುರುಗಳು ಇರುವ ಹಿತ್ತಿಲ್ಲೇ ನಮ್ಮ ಸಾಹಿತ್ಯದೊಳಕ್ಕೆ ಹೊಸ ಸಂಗತಿಗಳನ್ನೂ ಹೊಸ ರಚನಾ ಕೌಶಲ್ಯಗಳನ್ನೂ ತರುವಂಥದ್ದಾಗಿದೆ. ಸಂಸ್ಕೃತಕ್ಕೆ ಭಾಷೆಯಾಗಿ ತನ್ನದೇ ಆದ ತನ್ನ ಭಾಷೆಯ ಹಿತ್ತಿಲಿಲ್ಲ. ಅದಕ್ಕೆ ವಿಶಿಷ್ಟವಾದ ಸತ್ವ ಈಗ ಉಳಿದುಕೊಂಡಿರುವುದು ಮತ್ತು ಜೀವಂತವಾಗಿ ಬೆಳೆಯುತ್ತಿರುವುದು ನಮ್ಮ ಭಾಷೆಗಳಲ್ಲಿ. ಇಂಗ್ಲೆಂಡಿನ ಭಾಷೆಯಾದ ಇಂಗ್ಲಿಷಿಗೆ ಯಾವತ್ತು ಒಂದು ಹಿತ್ತಿಲಿದೆ. ಐರ್ಲೆಂಡಿನಲ್ಲೋ, ಆಫ್ರಿಕಾದಲ್ಲೋ, ವೆಸ್ಟ್ ಇಂಡೀಸ್‌ನಲ್ಲೋ, ಇಂಡಿಯಾದಲ್ಲೋ, ಹಿಂದೊಂದು ಕಾಲದಲ್ಲಿ ಅಮೆರಿಕದಲ್ಲೂ ಇಂಗ್ಲಿಷ್‌ತನ್ನ ಹಿತ್ತಿಲನ್ನು ಪಡೆದಿತ್ತು. ನಮ್ಮ ಭಾಷೆಗಳೂ ಈಗ ತಮ್ಮದೇ ಆದ ಕ್ಲಾಸಿಕಲ್ ಸಾಹತ್ಯವನ್ನೂ, ಜೊತೆಗೇ ರಾಮಾನುಜನ್ ಮಾತಿನಲ್ಲಿ ‘ಪಿತೃಭಾಷೆ’ಯಾದ ಸಂಸ್ಕೃತ ಸಾಹಿತ್ಯವನ್ನೂ ಜಗಲಿಯ ಮೇಲೆ ಕೂರಿಸಿಕೊಂಡಿದೆ. ನಮ್ಮ ಜೀವನವನ್ನುಜಗಲಿಯ ಮೇಲಿನಿಂದ ಆಳುತ್ತಿರುವುದು ಈ ಎರಡು ಮಾತ್ರವಲ್ಲ; ಮೇಲೆ ಉಪಸ್ಥಿತವಾಗಿದೆ. ಆದರೆ ಈ ಯಾವುದೂ ತಾವು ತಾವಾಗಿಯೇ ಇದ್ದು. ಯಾವ ಸೃಷ್ಟಿ. ಶಕ್ತಿಯನ್ನೂ ಪಡೆದವು ಅಲ್ಲ. ಹಿತ್ತಿಲಿನ ಜೊತೆ ಸಂಸರ್ಗವಿಲ್ಲದೆ ಹೋದಲ್ಲಿ ಇವು ನಿರ್ವೀರ್ಯವಾದವುಗಳು.

ನಮ್ಮ ಭಾಷೆಯಲ್ಲಿರುವ ಸಾಹಿತ್ಯಗಳು ತಮ್ಮಲ್ಲಿಯೇ ಒಂದು ಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ತಮ್ಮಲ್ಲಿ ತಾವೇ ಒಂದು ರಾಜಬೀದಿಯೆಂದು ಗರ್ವ ಪಡುವುದೂ ಉಂಟು. ಈ ರಾಜಬೀದಿಯಲ್ಲಿ ಸಂಸ್ಕೃತಕ್ಕೆ ಸರಿಸಾಟಿಯಾಗಬೇಕೆಂಬ ಬೃಹತ್ ಕಥನಗಳೂ ಹುಟ್ಟಿಕೊಂಡಿವೆ. ಈ ಬಗೆಯ ಓಜಸ್ಸಿನಲ್ಲಿ ಹಿತ್ತಿಲು ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗುವುದೆಂದು ನಮಗೆ ಗೊತ್ತು. ಅದೊಂದು ಬಗೆಯ ಸ್ವಾರಸ್ಯದ  ತಾರತಮ್ಯ ಹುಟ್ಟಿಕೊಂಡು, ಹಿತ್ತಿಲಿನ ಸಂಗತಿಗಳು ಸ್ವಲ್ಪ ಕೀಳಾಗಿ. ಶಿಷ್ಟ ಸಂಪ್ರದಾಯ ಸ್ವಲ್ಪ ಮೇಲಾಗಿ ವಿಜೃಂಭಿಸುವುದೂ ಇದೆ. ಆದರೆ ಕೆಳಗೆ ಅಮುಕಿಟ್ಟಿದ್ದು ಯಾವುದೂ ನಮ್ಮಲ್ಲಿ ನಾಶವಾಗಿದ್ದಿಲ್ಲ. ಯಾಕೆಂದರೆ ರಾಜಬೀದಿಯ ಮಾತು ಸೊಕ್ಕಿ ಕೃತಕವಾದದ್ದುಂಟ. ಹಾಗಾದರೆ ಕೇವಲ ಸಾರ್ವಜನಿಕವಾದ ಮಾತುಗಳನ್ನು ಮಾತ್ರ ಆ ಭಾಷೆಯಲ್ಲಿ ಆಡುವುದು. ಸಾಧ್ಯವಾಗಿ, ಖಾಸಗಿ ಮಾತಿನ ಆತ್ಮೀಯತೆ ಮಾಯವಾಗುತ್ತದೆ. ಅಂಥ ಸಾಂಸ್ಕೃತಿಕ ಕ್ರೈಸಿಸ್‌ಗಳಲ್ಲಿ ಹಿತ್ತಲಿನ ಕಿರು ಸಂಪ್ರದಾಯಗಳು ನಮ್ಮ ಭಾಷೆಯನ್ನು ಮತ್ತೆ ಪುನರ್ಜೀವನಗೊಳಿಸುತ್ತವೆ. ರ್ವಡ್ಸ್‌ವರ್ತ್‌. ಬ್ಲೇಕ್ ಮತ್ತು ಹಾಪ್‌ಕಿನ್ಸ್‌ರು ತಮ್ಮ ತಮ್ಮ ಹಿತ್ತಿಲುಗಳಿಗೆ ಹೋಗಿ ತಮ್ಮ ಸಾಹಿತ್ಯವನ್ನು ಜೀವಂತಗೊಳಿಸಿಕೊಂಡರು.

ನಮ್ಮ ಭಾಷೆಗಳಲ್ಲಿ ಸಂತ ಕವಿಗಳಾದ ತುಕಾರಾಂ, ನಾನಕ್, ಬಸವಣ್ಣ ಮತ್ತು ಕಬೀರರು ಮಾಡಿದ್ದೂ ಇದನ್ನೇ, ಐರೋಪ್ಯ ಭಾಷೆಗಳಲ್ಲಾದ ಕ್ರಾಂತಿಗಿಂತ ಹೆಚ್ಚು ಸಾಂಸ್ಕೃತಿ ಆಯಾಮಗಳನ್ನು ಪಡೆದ ಕ್ರಾಂತಿ ಇದು. ಈ ಸಾಹಿತ್ಯಿಕ ಅಂದೋಲನದಿಂದ ಶೂದ್ರರೂ ಮತ್ತು ಹೆಂಗಸರೂ ಬಲಪಡೆದರು. ಅಂದರೆ, ಯಾವ ಸಾಹಿತ್ಯ ಆಂದೋಲನವೂ, ನಮ್ಮಂಲ್ಲಂತೂ, ಕೇವಲ ಶೈಲಿ ಅಥವಾ ರೂಪಕ್ಕೆ ಮಾತ್ರ ಸಂಬಂಧಿಸಿದ ಆಂದೋಲನವಾಗಲಿಲ್ಲ.

ಈ ಬಗ್ಗೆ ಹೆಚ್ಚು ಬೆಳೆಸಲು ನಾನು ಅಪೇಕ್ಷಿಸುವುದಿಲ್ಲ. ಏಕೆಂದರೆ ಈ ಮಾರ್ಗ ಮತ್ತು ದೇಸೀಗಳ ನಡುವಿನ ಸೃಜನಶೀಲ ಕೊಡು-ಕೊಳ್ಳುವಿಕೆಯನ್ನು ಸಂಪೂರ್ಣ ನಾಶ ಮಾಡಬಲ್ಲ ಜಾಗತೀಕರಣದ ಆತಂಕದ ಬಗ್ಗೆ ಆಗ ಬರೆಯಬೇಕಾಗುತ್ತದೆ. ಇಷ್ಟನ್ನಾದರೂ ಇಲ್ಲಿ ಹೇಳಲೇಬೇಕು. ಬಹು ಭಾಷೆಗಳು, ಬಹು ಸಂಸ್ಕೃತಿಗಳು. ಬಹು ಮತ ಧರ್ಮಗಳು ಮತ್ತು ನಾಗರಿಕತೆಗಳು, ಅಲ್ಲದೆ ಆಹಾರದಲ್ಲೂ, ಉಡುಪಿನಲ್ಲೂ ಬಹುಬಗೆಯ ಅಭ್ಯಾಸ ಮತ್ತು ಆಚರಣೆಗಳು-ಇವು ಇಲ್ಲದೇ ಹೋದಲ್ಲಿ ಬಾರತ ಸೊರಗಿಬಿಡುತ್ತದೆ. ಏಕ ಕಾಲದಲ್ಲಿ ಅಧಿಕೃತವಾಗಿ ಸ್ಥಳೀಯವೂ, ಅರ್ಥಪೂರ್ಣವಾಗಿ ಸಾರ್ವಕಾಲಿಕವೂ ಎನ್ನಿಸುವಂತೆ ಕ್ರಿಯಾಶೀಲವಾಗಲು ಭಾರತ ತನ್ನ ಬಹುತ್ವವನ್ನು ಕಳೆದುಕೊಳ್ಳುದಂತೆ ಕಾಪಾಡಿಕೊಳ್ಳಬೇಕು. ಹೊರ ಜಗತ್ತಿಗೆ ತನ್ನ ಎಲ್ಲ ವಿಶಾಲವಾದ ಕೊಂಬೆಗಳನ್ನು ಚಾಚಿ ಪರಂಪರೆಯಲ್ಲಿ ಬೇರನ್ನು ಬಿಟ್‌ಇಟರುವ ನಮ್ಮ ಭಾಷೆಗಳು ಎಷ್ಟು ಅಂತಃಸತ್ವ ಪಡೆದಿದ್ದರೂ ಕೂಡ ಆಸೆ ಬುರುಕರಾದ ನಾವು ನಮ್ಮ ಮಕ್ಕಳಿಗೆ ಪ್ರಾಥಮಿಕ ವಿದ್ಯೆಯನ್ನು ಕಲಿಸುವ ಮಾಧ್ಯಮವಾಗಿಯಾದರೂ ಅವನ್ನು ಉಳಿಸಿಕೊಳ್ಳುವೆವೆ? ಎಂಬುದೇ ಈಗಿನ ಪ್ರಶ್ನೆ…

ಈ ಪ್ರಶ್ನೆಯನ್ನು ನಾವು ಅತ್ಯಂತ ಆತಂಕದಲ್ಲಿ ನಮಗೇ ಕೇಳಿಕೊಳ್ಳುವಂತಾಗಿದೆ. ಹುಟ್ಟಿನಿಂದ ಶ್ರೇಷ್ಠರಾದ ಬ್ರಾಹ್ಮಣರೂ ಮತ್ತು ವಿದ್ಯಾವಂತರಾದ ನವ ಬ್ರಾಹ್ಮಣರೂ, ಜಾಗತೀಕರಣದ ವ್ಯಾಪಾರೀ ಸಂಸ್ಥೆಗಳಿಂದ ಆಕರ್ಷಿತರಾಗುತ್ತಿದ್ದಾರೆ. ಶ್ರೀಕೃಷ್ಣನ ಕುಲದವರು ತಾವು ಎಂದು ಭಾವಿಸುವ ಜನ ಭ್ರಷ್ಟರಾಗಿ, ಒರಟಾಗಿ ನಮ್ಮನ್ನು ಆಳುತ್ತಿದ್ದಾರೆ. ನಮ್ಮ ಫಲವತ್ತಾದ ಹಿತ್ತಿಲನ್ನುದೋಚಿ ನಾಶ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳ ಜೊತೆ M.O.U. ಗಳನ್ನು ಸಹಿ ಹಾಕಲು ತಮ್ಮನ್ನು ಮಣ್ಣಿನ ಮಕ್ಕಳೆಂದು ಕರೆದುಕೊಳ್ಳುವವರು ಆತುರರಾಗಿದ್ದಾರೆ.

ಅಲ್ಲದೆ ನಾವು ವಾಸಮಾಡುವ ಈ ಕಾಂಕ್ರೀಟ್ ಕಾಡಿನಲ್ಲಿ ಶಿಷ್ಟ ಆಚಾರದ, ಅಂತಸ್ತಿನ ಜಗಲಿಯೂ ಇಲ್ಲ; ಗುಪ್ತ ಇಂಗಿತಗಳ ಫಲವತ್ತಾದ ಹಿತ್ತಿಲೂ ಇಲ್ಲ.

ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ: ೨೩..೯೭

* * *