ಭಾರತೀಯ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ‘ಡಾಟರ್ಸ್‌ ಆಫ್ ಮಹಾರಾಷ್ಟ್ರ’, ಒಂದು ಅಪೂರ್ವ ಕೃತಿ. ಆದರೆ, ಈ ಸುಂದರ ಕೃತಿಯನ್ನು, ಇಂಥ ಉದಾತ್ತ ಸಂದರ್ಭದ ನೆನಪಿಗಾಗಿಯೇ ಬಿಡುಗಡೆ ಮಾಡಬೇಕೆಂಬ ಉದ್ದೇಶವೇನೂ ಇದರ ಸಂಪಾದಕರಿಗೆ ಇಲ್ಲದಿರಬಹುದು. ನಮ್ಮ ದೇಶದ ವಿವಿಧ ಭಾಗಗಳಿಂದ, ಇಂಥ ಕೃತಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಲಿ ಎಂಬುದು ನನ್ನ ಆಸೆ. ಆಗ, ನಮ್ಮ ರಾಷ್ಟ್ರದ ಇಂದಿನ ಸ್ಥಿತಿಯ ಬಗ್ಗೆ ಖಿನ್ನರಾಗಿರುವ ನಮ್ಮಂಥವರಿಗೆ ಸ್ವಲ್ಪ ಸಂತೋಷ ಉಂಟಾಗುತ್ತದೆ.

ನಾನು ಕಂಡಂತೆ, ತಾವು ಗಾಢವಾಗಿ ನಂಬಿದ್ದನ್ನು ಅಕ್ಷರಶಃ ಆಚರಿಸುತ್ತಿದ್ದ ಮತ್ತು ತಮ್ಮ ಮಾತುಗಳಲ್ಲಿ ನಿಜವಾದ ಅರ್ಥವಂತಿಕೆಯನ್ನು ಉಳಿಸಿಕೊಂಡಿದ್ದ ಕೊನೆಯ ರಾಷ್ಟ್ರನಾಯಕರೆಂದರೆ ಜಯಪ್ರಕಾಶ್ ನಾರಾಯಣರು. ಅಧಿಕಾರದ ಅತ್ಯುತ್ತನ್ನತ ಮಟ್ಟದಲ್ಲಿನ ಭ್ರಷ್ಟಾಚಾರಗಳ ವಿರುದ್ಧವೂ, ಯಾವುದೇ ಹಿಂಜರಿಕೆ ಇಲ್ಲದೆ ಹೋರಾಡುತ್ತಿದ್ದ ಅವರು, ಕೊನೆಯಪಕ್ಷ ತಾತ್ಕಾಲಿಕವಾಗಿಯಾದರೂ, ಪರಹಿತದ ಕಾರ್ಯಗಳಲ್ಲಿನ ನಮ್ಮ ವಿಶ್ವಾಸವನ್ನು ಪುನಃ ಸ್ಥಾಪಿಸುವುದಕ್ಕೆ ಪ್ರಯತ್ನಿಸಿದರು. ಅವರ ನಂತರ, ಅರ್ಥಪೂರ್ಣವಾದ ಯಾವುದೇ ಒಂದು ರಾಜಕೀಯ ಚಳುವಳಿ ಸಾಧ್ಯವಾಗಿಲ್ಲ. ಮೋಡಿಗೊಳಿಸುವ ಭಾಷಣಗಳಾಗಲಿ, ಹೋರಾಟ ಎಂದು ಭ್ರಮೆ ಹುಟ್ಟಿಸುವ-ಎಂದರೆ ಮಂದಿರ ಅಥವಾ ಅದರ ಉದ್ದೇಶಿತ ವಿರುದ್ಧವಾದ ಮಂಡಲ್ ಆಗಬಹುದು-ಇವೆಲ್ಲವೂ ಕೂಡ ಈಗಾಗಲೇ ಬಿರುಕು ಬಿಟ್ಟಿರುವ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಮತ್ತಷ್ಟೂ ಛಿದ್ರಗೊಳಿಸುತ್ತವೆ.

ಭಾರತದಲ್ಲಿ ಮಾತ್ರ ಹೀಗಾಗುತ್ತಿದೆ ಎಂದಲ್ಲ. ಆದರೆ, ಪ್ರಪಂಚದಾದ್ಯಂತ ವಿಶ್ವಕ್ಕೆ ಒಂದು ಹೊಸ ಕ್ರಮವನ್ನು ಸ್ಥಾಪಿಸುವ ಮತ್ತು ನ್ಯಾಯ ಬದ್ಧವಾದ ಸಮಾಜಕ್ಕಾಗಿ ನಡೆದ, ಆಧ್ಯಾತ್ಮಿಕ ಪ್ರೇರಣೆಯನ್ನು ಪಡೆದಿದ್ದ ಕಮ್ಯೂನಿಸ್ಟ್ ಚಳುವಳಿಗಳು ಕೂಡ, ಬಳಕೆದಾರರ ಸ್ವರ್ಗದ ಅನ್ವೇಷಣೆಯಲ್ಲಿ ಅಂತ್ಯಗೊಂಡಿವೆ. ಈ ರಾಷ್ಟ್ರಗಳ ಚರಿತ್ರೆಯ ಸಿಂಹಾವಲೋಕನದಿಂದ, ಇಂಥಕ್ರೂರ, ನಿರ್ದಯ ಕ್ರಾಂತಿಗಳ ಉದ್ದೇಶ ಬೇರೇನೊ ಇರಬಹುದೆಂಬ ಗುಮಾನಿ ಹುಟ್ಟಿಸುತ್ತಿದೆ. ಅಲ್ಲದೆ, ಈ ರಾಷ್ಟ್ರನಾಯಕರು, ತಮ್ಮ ಮೋಡಿ ಮಾಡುವ ಭಾಷಣದ ನೈಪುಣ್ಯತೆಯ ಮೂಲಕ ಇಂಥ ಸಾಂಪ್ರದಾಯಿಕ ಸಮಾಜಗಳ ಮೇಲೆ ಕೈಗಾರಿಕಾ ಕ್ರಾಂತಿಯನ್ನು ಹೇರುತ್ತಿದ್ದಾರೇನೊ ಎಂಬ ಅನುಮಾನವೂ ಉಂಟಾಗುತ್ತದೆ. ಇಂಥ ವಿಶ್ವಾಸಘಾತುಕತನದ ನಂತರ, ನಮ್ಮ ರಾಜಕೀಯ ರಂಗದಲ್ಲಿ, ಬಂಡವಾಳಶಾಹಿ ವ್ಯವಸ್ಥೆಯ ಅಮಾನವೀಯತೆಗೆ ಪರ್ಯಾಯವನ್ನು ಒದಗಿಸುವ, ಆದರ್ಶಗಳಿಂದ ಪ್ರೇರಣೆಯನ್ನು ಪಡೆದ ಕನಸುಗಳೇ ಉಳಿದಿಲ್ಲ. ಮಾವೋತ್ಸೆ ತುಂಗ್ ಹೊಸ ಚೀನಾದ ನಿರ್ಮಾನಕ್ಕೆಂದು ನಡೆಸಿದ, ಮಹಾಕಾವ್ಯಕ್ಕೆ ಸಮನಾದ ‘ಲಾಂಗ್ ಮಾರ್ಚ್‌’ ಕೂಡ, ಈ ವಿಶ್ವದ ‘ಕೋಕೊಕೋಲಾ’ದ ಬಳಿಕೆಗಾದ ‘ಮಾರ್ಚ್‌’ ಆಗಿ ಕೊನೆಗೊಂಡಿತು. ಹಾಗೂ ಗಾಂಧೀಜಿಯ ಸ್ವದೇಶಿ ಮತ್ತು ಸರ್ವೋದಯದ ಕನಸುಗಳನ್ನು ಕೂಡ ವಾತಾವರಣವನ್ನು ಕಲುಷಿತಗೊಳಿಸುವ ವಿದೇಶಿ ಬಹುರಾಷ್ಟ್ರೀಯ ಉದ್ದಿಮೆಗಳಿಗಾಗಿ ಕೈಬಿಡಲಾಗಿದೆ.

ಆದರೂ, ನಮ್ಮನ್ನು ಕಲುಕುವಂಥದ್ದು ಇನ್ನೇನಾದರೂ ಇದೆಯೇ? ಇನ್ಯಾವುದೇ ರೀತಿಯ ಧ್ವನಿಗಳಾಗಲಿ- ಕೊನೆ ಪಕ್ಷ ಕೆಲವು ಪಿಸುನುಡಿಗಳಾಗಿ ನಮ್ಮ ಸುತ್ತ ಇವೆಯೇ? ನಮ್ಮ ಹುಡುಕಾಟದಲ್ಲಿ ನಾವು ಸ್ವಲ್ಪ ತಾಳ್ಮೆ ವಹಿಸಿ, ವ್ಯಂಗ್ಯ ಮತ್ತು ಸಿನಿಕ ಧೋರಣೆಗಳು ನೀಡುವ ನೆಮ್ಮದಿಯನ್ನು ಬಿಟ್ಟು, ಮಾಧ್ಯಮಗಳ ಗಮನ ಸೆಳೆಯದೆ, ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಕೆಲಸ ಮಾಡುತ್ತಿರುವ ವ್ಯಕ್ತಿಗಳತ್ತ ತಿರುಗಬೇಕು. ಆಗ, ಇಂಥ ವ್ಯಕ್ತಿಗಳೇ ಬಹುಶಃ ನಮ್ಮ ರಾಷ್ಟ್ರದ ಭರವಸೆಯ ಹೊಸ ಪ್ರತೀಕಗಳಾಗಬಹುದು ಎಂದು ಹೇಳುವ ಸಾಹಸವನ್ನು ಮಾಡಬಹುದೇನೊ?

ಆದರೆ ಏನು ಮಾಡುವುದು? ಇಂಥ ನಂಬಿಕೆಗಳನ್ನು ಉಳಿಸಿಕೊಳ್ಳುವುದಕ್ಕೆ ನಮಗಿರುವ ಹಕ್ಕನ್ನು ಕೂಡ ನಾವು ಕಳೆದುಕೊಂಡಿದ್ದೇವೆ. ನಮಗೀಗ ಗೊತ್ತಿರುವುದೇನೆಂದರೆ, ಆದರ್ಶವಾದಿಗಳ ಪರಹಿತದ ಆಶಯಗಳ ಪರಿಣಾಮವನ್ನು ಸಂಶಯದಿಂದ ನೋಡುವುದು. ನಮ್ಮನ್ನು ಕಾಡುತ್ತಿರುವ ಕೆಲವು ಅನುಮಾನಗಳಿಗೆ; ಅವರ ಕೆಲಸಗಳು ಮುಂದುವರೆಯಲಾರವೇನೊ? ಅಂತಿಮವಾಗಿ ಅವರಲ್ಲಿ ಬಳಲಿಕೆ ಮತ್ತು ಖಿನ್ನತೆಗಳೇ ಹೆಚ್ಚಾಗಬಹುದೇನೊ? ಬಹುಶಃ ನಮ್ಮ ಚಾರಿತ್ರಿಕ ಶಕ್ತಿಗಳು ಕೂಡ ಅವರ ವಿರುದ್ಧವಾಗಿರಬಹುದೇನೊ? ಕೇವಲ ಉಪಯುಕ್ತತೆಯ ಬಗ್ಗೆಯೇ ಚಿಂತಿಸುವ ಇಂದಿನ ಸಮಾಜದಲ್ಲಿ, ಈ ಆದರ್ಶವಾದಿಗಳೆಲ್ಲಾ ಬೆಪ್ಪು ತಕ್ಕಡಿಗಳ ಹಾಗೆ ಕಾಣುವುದು ಸಹಜವೇ?

ಒಂದು ಪರ್ಯಾಯದ ಬಗ್ಗೆ ಕಲ್ಪಿಸಿಕೊಳ್ಳುವ ಮತ್ತು ಕನಸು ಕಾಣುವ ನಮ್ಮ ಹಕ್ಕುಗಳು ಕೂಡ ದುರ್ಬಲವಾಗಿಬಿಟ್ಟಿವೆ. ಅನುಕಂಪ ಮತ್ತು ಪ್ರೀತಿಯ ಮೂಲ ಚಿಲುಮೆಗಳು ಈ ರೀತಿ ದುರ್ಬಲವಾಗಿರುವುದಕ್ಕೆ ಕಾರಣ: ಬಹುಶಃ ನಮ್ಮಶೈಕ್ಷಣಿಕ ಸಂಸ್ಥೆಗಳಲ್ಲಿ ಅಭಿಪ್ರಾಯಗಳನ್ನು ರೂಪಿಸುವವರು ಮತ್ತು ಜಾಗತಿಕ ಮಾಧ್ಯಮಗಳಲ್ಲಿ ಅವಿತುಕೊಂಡು ಒಡಂಬಡಿಸುವವರು, ನಮ್ಮೆಲ್ಲರ ಮೇಲೆ ಎಲ್ಲಾ ಕಾಲದಲ್ಲಿ ನಮ್ಮ ಅರಿವಿಗೆ ಬಾರದಂತೆ ಸಂಚುಗಳನ್ನು ನಡೆಸುತ್ತಿರುವುದೇ ಇರಬಹುದು. ನಾವು ತೀವ್ರವಾಗಿ ಬಳಲಿ ಹೋಗುವ, ನಿರಾಶರಾಗುವ ಕ್ಷಣಗಳೂ ಇವೇ. ಅಂಥ ಸಮಯದಲ್ಲಿ ನಾವು, ನಾಟಕೀಯ ಬದಲಾವಣೆಗಳನ್ನು ತರುವ ಹಠಾತ್ತಾದ ಕ್ರಾಂತಿಯನ್ನು ಕಲ್ಪಿಸಿಕೊಂಡು ಜಾರಿಕೊಳ್ಳುತ್ತೇವೆ.

ಆದರೂ, ದೈನಂದಿನ ಹಂತದಲ್ಲಿ ಸ್ವಲ್ಪ ಸಂತೋಷ ಮತ್ತು ಸ್ವಲ್ಪ ಭರವಸೆಯೊಂದಿಗೆ ನಾವು ಬದುಕುತ್ತಲೇ ಇರುತ್ತೇವೆ. ಏಕೆಂದರೆ, ಸಾಮಾಜಿಕ ಹಂತದಲ್ಲಿ ಮಿಲಿಯಗಟ್ಟಲೆ ಜನರು ಅಸಹಾಯಕರಾದ ಮಕ್ಕಳನ್ನು, ವೃದ್ಧರನ್ನು ಮತ್ತು ರೋಗಿಗಳನ್ನು ಕಾಳಜಿಯಿಂದ ಪಾಲಿಸುತ್ತಿದ್ದಾರೆ. ಇಲ್ಲದಿದ್ದರೆ, ನಾವುಗಳೆಲ್ಲಾ ಹೀಗೆ ನೆಮ್ಮದಿಯಿಂದ ಬದುಕುವುದು ಹೇಗೆ ಸಾಧ್ಯವಾಗುತ್ತಿತ್ತು?

ಬೌದ್ಧಿಕ ವಲಯಕ್ಕೆ ಸೇರಿದ ನಾವೆಲ್ಲರೂ ಸಿನಿಕರು ಅಥವಾ ಉದಾಸೀನರಾಗಿದ್ದೇವೆ. ಏಕೆಂದರೆ, ಇದು ಬಹಳ ನೆಮ್ಮದಿಯನ್ನು ನೀಡುತ್ತದೆ. ಆದರೆ ಕೆಲವು ವ್ಯಕ್ತಿಗಳು ಸದ್ದಿಲ್ಲದೆ, ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದು, ಒಂದು ಅರ್ಥಪೂರ್ಣವಾದ ಜೀವನವನ್ನು ಸಾಗಿಸುತ್ತಾರೆ. ಗಾಂಧಿಯುಗದಲ್ಲಿ ಇಡೀ ಜನಸಮೂಹದ ಪ್ರಧಾನ ಚೈತನ್ಯವಾಗಿದ್ದ, ಪರಹಿತ ಚಿಂತನೆಯಲ್ಲಿ ನಮಗಿದ್ದ ನಂಬಿಕೆಯನ್ನು ಪುನಃ ಸ್ಥಾಪಿಸುವುದಕ್ಕೆ ಇಂಥವರು ಕಾರಣರಾಗುತ್ತಾರೆ. ಇವರು ಪ್ರಭಾವಿ ಮಾಧ್ಯಮಗಳ ಗಮನವನ್ನು ಸೆಳೆಯುವ ಜನರಲ್ಲ ಎನ್ನುವ ಸಂಗತಿ ನಮಗೆ ಮುಖ್ಯವಾಗಬಾರದು. ನಮ್ಮ ನಡುವಿನ ಸೃಜನಶೀಲರ ಮುಂದಿರುವ ಸವಾಲು ಏನೆಂದರೆ, ಈ ರೀತಿ ಸಮರ್ಪಣಾ ಭಾವದಿಂದ ಸಾಂಪ್ರದಾಯಿಕ ಕಲೆ, ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಯಾವ ಬಳಲಿಕೆಯೂ ಇಲ್ಲದೆ ಸಮಾಜ ಸೇವೆ ಮಾಡುತ್ತಿರುವ ಮತ್ತು ಹೀಗೆ ಜೀವಿಸುವುದರ ಮೂಲಕವೇ, ಈ ಯುಗದ ವಿನಾಶಕಾರಿ ಸ್ವಾರ್ಥದ ವಿರುದ್ಧ ಅಂದೋಲನ ಮಾಡುತ್ತಿರುವವರಿಂದ ಒಂದು ಹೊಸ ಪ್ರತೀಕಗಳನ್ನು ಸೃಷ್ಟಿಸಿಕೊಳ್ಳುವುದು. ಇದಕ್ಕಾಗಿ ನಮ್ಮನ್ನು ನಾವು ‘ಡಿ ಕಂಡೀಷನ್ಡ್’ ಆಗಿಸಿಕೊಳ್ಳಬೇಕು. ಪೂರ್ವಕಲ್ಪಿತ ಧೋರಣೆಗಳನ್ನು ತ್ಯಜಿಸಿ, ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ, ತಮ್ಮ ಸಮಾಜದ, ಸಾಮಾನ್ಯರ ಬದುಕಿನಲ್ಲಿ ಸದ್ದಿಲ್ಲದಂತೆ ಅನುಕಂಪದ ಪ್ರವೇಶ ಮಾಡುತ್ತಾ, ಯಾವ ಪ್ರಚಾರಕ್ಕೂ ಆಶಿಸದೆ ಸಮಾಜವನ್ನು ಕಟ್ಟುತ್ತಿರುವ ಇಂಥವರ ಮೌಲ್ಯಗಳನ್ನು ನಾವು ಗೌರವಿಸಬಹುದು ಎನಿಸುತ್ತದೆ.

ಇಂಥ ಕೃತಿಯೊಂದನ್ನು ರೂಪಿಸುವುದಕ್ಕೆ ಕಾರಣವಾದ ಇದರ ಸಂಪಾದಕರೆಲ್ಲರೂ ನಮ್ಮ ಮೆಚ್ಚುಗೆಗೆ ಅರ್ಹರು. ಏಕೆಂದರೆ, ಇದು ಅತ್ಯಂತ ನಾಜೂಕಿನ, ಕಠಿಣವಾದ ಕೆಲಸ. ಅಷ್ಟೆ ಅಲ್ಲದೆ, ಇಲ್ಲಿ ಚರ್ಚೆಗೊಳಗಾಗಿರುವ ಮಹಿಳೆಯರು ಮಾತ್ರವೇ ಮಹಾರಾಷ್ಟ್ರದ ಹೆಮ್ಮೆಯ ಹೆಣ್ಣುಮಕ್ಕಳು ಎಂಬ ಭಾವನೆಯನ್ನು ನಮ್ಮಲ್ಲಿ ಉಂಟುಮಾಡಬಾರದು. ಅಂಥ ನಿರ್ಣಾಯಕ ಆಯ್ಕೆ ಈ ಕೃತಿಯ ಮೂಲ ಉದ್ದೇಶಕ್ಕೆ ಧಕ್ಕೆ ತರುವಂಥದ್ದು. ಇಲ್ಲಿನ ಲೇಖನಗಳು, ಒಂದು ವಿಶಾಲವಾದ ತಾಂತ್ರಿಕತೆಯಿಂದ ಮಾರ್ಗದರ್ಶಿತವಾದ ಸಂಪಾದಕರ ವೈಯಕ್ತಿಕ ಆಯ್ಕೆಗಳು. ಅದಕ್ಕಿಂತ ಮುಖ್ಯವಾಗಿ, ಇದು ಗತಕಾಲದ ಒಂದು ಭಾವನಾತ್ಮಕ ಹಳಹಳಿಕೆಯ ವೈಭವೀಕರಣವಲ್ಲ. ಇವರ ಬದುಕು ವರ್ತಮಾನದಲ್ಲೂ ಅರ್ಥವನ್ನು ಪಡೆದುಕೊಳ್ಳುವಂಥದ್ದು.

ಇಲ್ಲಿನ ಮಹಿಳೆಯರು ಎಲ್ಲಾ ವರ್ಗ, ಸಮಾಜ ಮತ್ತು ಜನಾಂಗಕ್ಕೆ ಸೇರಿದವರು; ಮರಾಠಿಯೊಂದೇ ಇವರ ಮಾತೃಭಾಷೆ ಅಲ್ಲ. ನಾವು ಬದುಕುತ್ತಿರುವ, ಭಾರತದ ಪ್ರತಿಯೊಂದು ಪ್ರಾಂತ್ಯದಲ್ಲೂ ಭಾಷಿಕ ವೈವಿಧ್ಯತೆಗಳಿವೆ; ಧರ್ಮ ಮತ್ತು ಸಂಸ್ಕೃತಿಯ ಬಹುತ್ವಗಳಿವೆ. ಆ ದೃಷ್ಟಿಯಿಂದ, ಭಾರತ ನಿಜಕ್ಕೂ ಬಹುಕೇಂದ್ರಿತವಾದುದು. ಈ ಕಾರಣದಿಂದಲೇ ಮಹಾರಾಷ್ಟ್ರ ಒಂದು ಮಿನಿ ಭಾರತವಾಗಿ ಗೋಚರಿಸುತ್ತದೆ.

ಅದಕ್ಕಿಂತ ಹೆಚ್ಚು ಪ್ರಧಾನವಾಗಿ, ನಮ್ಮ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಮಬ್ಬ ಮುಸುಕಿದ ವರ್ಷದಲ್ಲಿ, ನಾವೂ ಕನಸು ಕಾಣಬಹುದು ಎಂಬ ಒಂದು ಆಸೆಯನ್ನು ಮತ್ತು ಅದು ಎಷ್ಟೇ ಸಣ್ಣ ಪ್ರಮಾಣದಲ್ಲಾದರೂ ಸರಿ, ನಮ್ಮ ಕನಸುಗಳನ್ನು ಕ್ರಿಯಾರೂಪಕ್ಕಿಳಿಸಬಹುದು ಎಂಬ ಭರವಸೆಯನ್ನು ಈ ಕೃತಿ ಕಟ್ಟಿಕೊಡುತ್ತದೆ. ಮಹಾನ್ ಕವಿ ವರ್ಡ್ಸ್‌‌ವರ್ತ್‌ತನ್ನ ಪ್ರಖ್ಯಾತ ಕವನವೊಂದರಲ್ಲಿ, ಬದುಕಿನ ಗುಣಮಟ್ಟವನ್ನೂ ನಾಟಕೀಯ ಸಾಧನೆಗಳ ಆಧಾರದಿಂದಲೇ ಅಳೆಯಬೇಕಾಗಿಲ್ಲ. ಬದಲಿಗೆ, ಒಂದು ಉತ್ತಮ ಬದುಕಿನ ಅತ್ಯಂತ ಸತ್ವಯುತ ಭಾಗವು, ಯೋಗ್ಯವಾಗಿ ಬಾಳಿದ, ಆಮೇಲೆ ಮರೆತುಬಿಟ್ಟ ಪ್ರೀತಿ ಮತ್ತು ಕರುಣೆಯ ಸಣ್ಣ ಸಣ್ಣ ಕ್ರಿಯೆಗಳನ್ನು ಒಳಗೊಂಡಿರುತ್ತದೆ. ಎಂದು ಹೇಳುತ್ತಾಣೆ. (‘those little unremembered acts of kindness and of love’)

ಆದರೆ, ಈ ಕೃತಿಯು ಕೇವಲ ಒಂದು ಸಂಭ್ರಮದ, ಆಚರಣೆಯ ಭಾವನೆಯನ್ನು ನಮ್ಮಲ್ಲಿ ಪ್ರೇರೆಪಿಸಬಾರದು. ನಮ್ಮ ಕಾಲದ ಹೆಣ್ಣುಮಕ್ಕಳ ಸಾಧನೆ ಮತ್ತು ಸಫಲತೆಯ ಕಥೆಯನ್ನು ಕೇಳಿಸಿಕೊಳ್ಳುತ್ತಲೇ, ನಮ್ಮ ಈ ಸದ್ಯದ ಸಂದರ್ಭವನ್ನು ಇನ್ನೂ ಸ್ಪಷ್ಟವಾಗಿ ಪ್ರತಿಬಿಂಬಿಸುವ ಅಗತ್ಯ ಇದೆ. ನಮ್ಮ ಭರವಸೆ ಮತ್ತು ಕನಸುಗಳು ವಾಸ್ತವಿಕತೆಯಲ್ಲಿ ಗಟ್ಟಿಯಾಗಿ ಬೇರೂರಬೇಕಾದರೆ, ಅವು ಕೇವಲ ಭಾವನೆಗಳ ಬುಗ್ಗೆಗಳಾಗದೆ ನಮ್ಮನ್ನು ನಿಜಕ್ಕೂ ಅಸ್ವಸ್ಥಗೊಳಿಸುತ್ತಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಅಸ್ವಸ್ಥತೆಯ ಒಂದು ಲಕ್ಷಣವೇನೆಂದರೆ-ನೈತಿಕ ಮತ್ತು ಆಧ್ಯಾತ್ಮಿಕತೆಯ ಮೌಲ್ಯಗಳನ್ನು ಅಭಿವ್ಯಕ್ತಿಸುವ ಮಾತುಗಳೆಲ್ಲಾ ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡಿರುವುದು. ನಮ್ಮ ಗಮನವನ್ನು ಸೆಳೆಯುವುದಕ್ಕಾಗಿ ‘ಪೋರ್ಸ್‌’ಗಳನ್ನು ಕೊಡುವ ಪ್ರತಿಯೊಬ್ಬ ರಾಜಕೀಯ ನೇತಾರನಲ್ಲಿರುವ ನಾಚಿಗೇಡಿತನ ಮತ್ತು ಕೊಳಕುತನ ನಮ್ಮಲ್ಲಿ ದಿಗ್ಭ್ರಮೆಯನ್ನು ಹುಟ್ಟಿಸುತ್ತದೆ. ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುವವರು ‘ಮೇವು’ ಹಗರಣದಲ್ಲಿ ಸಿಲುಕಿರುತ್ತಾರೆ. ಜಾಗತೀಕರಣದ ಸೊಗಸುಗಾರರು ಮತ್ತು ಆಧುನೀಕರಣದ ಬಗ್ಗೆ ಮಾತನಾಡುವವರು ಸಲ್ಲದ ಕಳಂಕವನ್ನು ಹೊತ್ತಿರುತ್ತಾರೆ. ಭಾರತೀಯ ಸಂಸ್ಕೃತಿಯ ಉಪಾಸಕರೆಲ್ಲಾ ಮತೀಯ ಗಲಭೆಯನ್ನು ಉತ್ತೇಜಿಸುತ್ತಾರೆ. ಯೋಗ್ಯರು ಎನಿಸಿಕೊಳ್ಳುವ ಸೆಕ್ಯುಲರಿಸ್ಟ್‌ಗಳು ಕೂಡ ಜಾತಿವಾದಿಗಳು ಮತ್ತು ಸಮಯ ಸಾಧಕರಾಗಿರುತ್ತಾರೆ. ದೈವೀಪುರುಷರು, ವೇದಾಂತಿಗಳು ಭ್ರಷ್ಟ ರಾಜಕಾರಣಿಗಳ ಮತ್ತು ವಾಣಿಜ್ಯೋದ್ಯಮಿಗಳ ಒಡನಾಟದಲ್ಲಿ ಏಳಿಗೆಯನ್ನು ಪಡೆಯುತ್ತಿರುತ್ತಾರೆ. ಇವರಾರಿಗೂ ನಾಚಿಕೆಯ ಕಿಂಚಿತ್ ಪ್ರಜ್ಞೆಯೂ ಇಲ್ಲ. ನೆನ್ನೆ ಮೊನ್ನೆಯ ದಿನಪ್ರತಿಕೆಗಳಲ್ಲಿ ದಷ್ಟಪುಷ್ಟಿವಾಗಿ, ಆರೋಗ್ಯಕರವಾಗಿ ಕಾಣುತ್ತಿದ್ದವರು, ಭ್ರಷ್ಟಾಚಾರದ ಆಪಾದನೆಯ ಮೇಲೆ ಬಂಧಿತರಾದ ತಕ್ಷಣ, ತೀವ್ರವಾದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಉದಾತ್ತತೆಯ ಬಗ್ಗೆ ಮಾತಾಡುವ ಪದಗಳನ್ನೂ ಆಮದುಮಾಡಿಕೊಳ್ಳುತ್ತಾರೆ, ಅಲ್ಲದೆ ಹೃದ್ರೋಗವನ್ನು ವರ್ಣಿಸುವ ಶಬ್ದಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಾರೆ.

ನಮ್ಮ ಸಮಕಾಲೀನ ಸಮಾಜ, ಇಡಿಯಾಗಿ ರೋಗಗ್ರಸ್ತವಾಗಿದೆ ಮತ್ತು ಅದರಿಂದ ಸಾಮಾನ್ಯ ಜನರೂ ಕಲುಷಿತರಾಗುತ್ತಿದ್ದಾರೆ. ನಾಗರಿಕತೆಯ ಬಹಳ ದೊಡ್ಡ ಸಂಧಿಗ್ದತೆಯಾಗಿ ತೋರುವ ಇದರಿಂದ ಬಿಡಿಸಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಸೃಜನಶೀಲ ಬರಹಗಾರರಾದ ನಮ್ಮಂಥವರಿಗೆ, ಸ್ವಾತಂತ್ರ್ಯಪೂರ್ವದ ಮಹಾನ್ ಬರಹಗಾರರ ಆ ಪ್ರಾಮಾಣಿಕ ದನಿ ಇಂದು ಅನಧಿಕೃತ ಎನಿಸುತ್ತದೆ, ಪೊಳ್ಳಾಗಿ ಕೇಳಿಸುತ್ತದೆ. ಏಕೆಂದರೆ, ನಮ್ಮ ಸಾರ್ವಜನಿಕ ಸಮಷ್ಟಿ ಬದುಕಿನಲ್ಲಿ, ಈ ರೀತಿಯ ಭಾವನೆಗಳ ಬಗ್ಗೆ ಲೇವಡಿ ಮಾಡುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಏಟ್ಸ್ ಕವಿ ಒಂದು ಕಾಲದಲ್ಲಿ ಹೇಳಿದಂತೆ, ‘The best lack all conviction, while the worst are full of passionate intensity’ (The Second Coming) ಆದ್ದರಿಂದ, ನಮ್ಮ ಕಾಲಘಟ್ಟದ ಇಂಥ ದುರವಸ್ಥೆಯ ಬಗ್ಗೆ ವ್ಯಂಗ್ಯವಾಗಿ ಗೇಲಿ ಮಾಡುತ್ತಾ ಮಾತಾಡಬೇಕು, ಇಲ್ಲದಿದ್ದರೆ, ನಮ್ಮ ಮಾತಿನಲ್ಲಿ ಪ್ರಾಮಾಣಿಕತೆ ಧ್ವನಿಸುವುದೇ ಇಲ್ಲ. ಹಾಗೂ, ಇಂಥ ಶೈಲಿ ಕೂಡ ಇತ್ತೀಚಿನ ದಿನಗಳಲ್ಲಿ ವ್ಯಾಪಾರಿ ದೃಷ್ಟಿಕೋನದಿಂದ ಹೆಚ್ಚು ಲಾಭಕರವಾಗಿದೆ. ಆದ್ದರಿಂದ, ಜಾಗತಿಕ ಮಾಧ್ಯಮಗಳ ಗಮನವನ್ನು ಸೆಳೆದಿರುವವರು, ಸ್ಥಳೀಯರಿಗಿಂತ ಹೆಚ್ಚು ಮೊನಚಾಗಿ ಲೇವಡಿ ಮಾಡುತ್ತಾ ಪರದೇಶಿಯರ ಮನಸ್ಸಿಗೆ ಸಂತಸವನ್ನುಂಟುಮಾಡುತ್ತಾರೆ; ಅದೂ ಪರಕೀಯರ ಭಾಷೆಯಲ್ಲಿ. ಗಾಂಧೀಜಿಯ ಪರಹಿತ ಮನೋಭಾವ, ನಮ್ಮ ರಾಜಕೀಯ ಬದುಕಿನಿಂದ ಸಂಪೂರ್ಣವಾಗಿ ಕಾಣೆಯಾಗಿದೆ. ಅಲ್ಲದೆ, ಅಂಥದನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ನಮ್ಮ ಆತಂಕ ಏನೆಂದರೆ, ಯಾವುದಾದರೂ ಗಂಭೀರ ಚರ್ಚೆಯಲ್ಲಿ ಗಾಂಧೀಜಿಯ ಪಕ್ಷ ವಹಿಸಿದರೆ, ಜಗತ್ತಿನ ಬುದ್ಧಿವಂತರು ಮತ್ತು ತಮ್ಮ ಕ್ಷೇತ್ರಗಳಲ್ಲಿ ಸಫಲತೆಯನ್ನು ಸಾಧಿಸಿದವರು, ನಮ್ಮನ್ನು ಭೋಳೆ ಸ್ವಭಾವದವರು ಅಥವಾ ತೀರಾ ಮುಗ್ಧರು ಎಂದು ಎಲ್ಲಿ ನಕ್ಕು ಬಿಡುತ್ತಾರೊ ಎನ್ನುವುದು.

ಯುರೋಪಿನಲ್ಲಿ ತಾನು ಬದುಕಿದ್ದ ಕಾಲಘಟ್ಟದ ಸಮಾಜವನ್ನು ನೋಡಿ ಏಟ್ಸ್ ಕೂಡ ಕ್ಷೋಭೆಗೊಳಗಾಗಿದ್ದ. (‘The ceremony of innocence is drowned’) ‘The Second Coming’ ಕವನದಲ್ಲಿ, ನಿರ್ದಯಿಯಾದ, ತೀವ್ರ ವೈಚಾರಿಕತೆಯ ಮುನಷ್ಯ ತಲೆಯ ಕ್ರಿಶ್ಚಿಯನೇತರ ಮೃಗವೊಂದರ ಹೊಸ ಅವತಾರದ ಬಗ್ಗೆ ಭವಿಷ್ಯ ನುಡಿಯುತ್ತಾನೆ. ತೀವ್ರವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ತಲ್ಲಣಕೊಳಗಾಗಿದ್ದರಿಂದಲೇ ಏಟ್ಸ್‌ಗೆ. ಇಂಥ ದರ್ಶನ ಸಾಧ್ಯವಾಗಿದ್ದು. ಆದರೆ, ಅವನ ಚಿಂತನೆಗಳನ್ನು ಒಪ್ಪಿ ಅವನನ್ನು ಉದ್ಧರಿಸಲು ಹೊರಟರೆ, ಚಪಲ ತೀರಿಸಿಕೊಂಡಂತೆ ಮಾತ್ರ ಆಗುತ್ತದೆ. ಮಹಾರಾಷ್ಟ್ರದ ಈ ಹೆಣ್ಣುಮಕ್ಕಳಿಂದ, ಏಟ್ಸ್‌ನ ಹತಾಶೆಗೆ ಸಾಧ್ಯವಾಗಬಹುದಾದ ಪ್ರತಿಕ್ರಿಎಯಗಳನ್ನು ನಾನು ಕಲ್ಪಿಸಿಕೊಳ್ಳಬಲ್ಲೆ. ತಮ್ಮ ದೈನಂದಿನ ಪ್ರೀತಿ ಅನುಕಂಪದ ಕಾಳಜಿಯ ಬದುಕಿನಲ್ಲಿ ಈ ಹೆಣ್ಣುಮಕ್ಕಳು ಅದೆಷ್ಟು ಆಳವಾಗಿ ತೊಡಗಿಕೊಂಡಿದ್ದಾರೆಂದರೆ, ಕ್ರಾಂತಿಯ ಕನಸನ್ನು ಕಾಣುವುದಕ್ಕೆ ಅವರಿಗೆ ಬಿಡವೂ ಇಲ್ಲ ಅಥವಾ ಅಂಥ ಭಾವನೆಗಳನ್ನು ಅವರು ಪೋಷಿಸುವುದೂ ಇಲ್ಲ. ಈ ಹೆಣ್ಣು ಮಕ್ಕಳು ಯಾರದೋ ತಾಯಂದಿರು, ಅಕ್ಕತಂಗಿಯರು, ಮಕ್ಕಳು ಅವರ ಯೋಚನೆ ಮತ್ತು ಭಾವನೆಗಳೆಲ್ಲಾ ತಮ್ಮ ಸುತ್ತಲಿನ ಜನರ ದೈನಂದಿನ ಬದುಕಿಗೆ ಉಸಿರು ತುಂಬುವುದರಿಂದ ರೂಪುಗೊಂಡಿವೆ. ಆಮೇಲೆ, ಇದೇನು ಸುಲಭವಾದ ಕೆಲಸವಲ್ಲ. ಗಾಂಧೀಜಿ ಒಮ್ಮೆ ಹೆಳಿದಂತೆ ತನಗೆ ಒಂದು ಹೆಜ್ಜೆಯನ್ನು ಮುಂದಿಡುವುದಷ್ಟೇ ಸಾಕು.

ಈ ಒಂದು ಹೆಜ್ಜೆಯನ್ನು ಮುಂದಿಡುವುದು ಕೂಡ ಬಹಳ ಕಷ್ಟ. ನಮ್ಮ ರಾಷ್ಟ್ರೀಯ ಬದುಕಿನಲ್ಲಿ ಸಾಮಾನ್ಯವಾಗಿ ಹೋಗಿರುವ ಉದಾಸೀನತೆ ಮತ್ತು ಸಂವೇದನರಾಹಿತ್ಯತೆ ಮಾತ್ರ ಇದಕ್ಕೆ ಕಾರಣವಲ್ಲ. ಮಹಿಳಾ ಚಳುವಳಿಗಾರರ ತೀರಾ ಖಾಸಗಿ ಎನಿಸುವ ಕೆಲವು ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗುತ್ತವೆ. ಕೆಲವು ವಿಷಯಗಳ ಬಗ್ಗೆ ಮಾತನಾಡುವುದು ಕೂಡ ಹೆಂಗಸರಿಗೆ ಕಷ್ಟವಾಗಬಹುದು. ಇದರಲ್ಲಿ ಸಂಕೋಚ, ನಾಚಿಕೆ ಅಡಗಿರಬಹುದು. ಗೋಪ್ಯವನ್ನು ಕಾಪಾಡಿಕೊಂಡು ಬದುಕುವ ಹಾಗೆ ಚಿಕ್ಕಂದಿನಿಂದಲೇ ಹೆಂಗಸರಿಗೆ ತೀವ್ರವಾದ ವೈಯಕ್ತಿಕ ಸಂಗತಿಗಳನ್ನು ಬಹಿರಂಗವಾಗಿ ಹೇಳುವುದಕ್ಕೆ ನಾವು ಕಳಿಸಿರುತ್ತೇವೆ. ಅವರಿಗೆ ತುಂಬಾ ನೋವಾಗಬಹುದು. ನಮ್ಮ ಸಂಸ್ಕೃತಿಯಿಂದ ನಾವು ಅಪ್ರಜ್ಞಾಪೂರ್ವಕವಾಗಿ ಪಡೆದುಕೊಳ್ಳುವ ಸಾಂಪ್ರದಾಯಿಕ ಮಹಿಳೆಯರ ಪ್ರತೀಕಗಳಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಬವಿಸುತ್ತವೆ. ಮಹಿಳೆ ದೇವಿ, ನಮ್ಮ ಹಾಗೆ ಈ ಲೋಕದ ಜೀವಿಯಲ್ಲ. ಆದ್ದರಿಂದಲೇ, ಭದ್ರವಾದ ಸಾಮಾಜಿಕ ವಲಯದಾಚೆಗೆ ಆಕೆ ಕಾಲಿಡಬಾರದು; ಸುಂದರವಾದ ಮತ್ತು ಪವಿತ್ರವಾದ ತನ್ನ ಕೈಗಳನ್ನು ಕಲುಷಿತಗೊಳಿಸಕೊಳ್ಳಬಾರದು.

ಇದಕ್ಕಿಂತ ಸಂಕೀರ್ಣವಾದ ಮತ್ತು ನಿವಾರಿಸಿಕೊಳ್ಳುವುದಕ್ಕೆ ಬಹಳ ಕಠಿಣವಾದ ಮತ್ತೊಂದು ಸಮಸ್ಯೆ ಇದೆ. ನಮ್ಮಲ್ಲಿ ಬಹಳಷ್ಟು ಜನರಿಗೆ, ತಾವು ಪ್ರೀತಿಸುವ ಹೆಣ್ಣುಗಳು ಸುಂದರವಾಗಿರಲೂ ಬೇಕು, ಮತ್ತು ಬುದ್ಧಿವಂತರಾಗಿರಲೂಬೇಕು ಎಂಬ ಆಸೆ. ಈ ಎರಡೂ ಆಗಿದ್ದು ಅವರು ಸಂಪೂರ್ಣವಾಗಿ, ತಮ್ಮ ವಶದಲ್ಲೇ ಇರಬೇಕೆಂದೂ ಗಂಡಸರು ಬಯಸುತ್ತಾರೆ. ಇದು ಅಸಾಧ್ಯವಾದ ಸ್ಥಿತಿ. ಏಕೆಂದರೆ ಯಾರು ಬುದ್ಧಿವಂತೆಯೂ, ಸುಂದರಿಯೂ ಆಗಿರುತ್ತಾಳೊ, ಆಕೆ ಎಂದಿಗೂ, ಸಂಪೂರ್ಣವಾಗಿ ನಮ್ಮ ವಶ ಮಾಡಿಕೊಳ್ಳವುದರಲ್ಲಿ ಸಫಲರಾದಾಗ, ಆಕೆ ಬುದ್ಧಿವಂತಳಾಗಿ ಉಳಿದಿರುವುದಿಲ್ಲ ಮತ್ತು ನಮ್ಮಲ್ಲಿ ಆಸಕ್ತಿಯನ್ನು ಉಂಟುಮಾಡುವುದೂ ಇಲ್ಲ. ಇದು ವಿಶ್ವದಾದ್ಯಂತ ಇರುವ ಗಂಡು ಮತ್ತು ಹೆಣ್ಣಿನ ಸಂಬಂಧದಲ್ಲಿನ ಅತ್ಯಂತ ಸ್ವಾಭಾವಿಕವಾದ ಸಮಸ್ಯೆ. ಇದೊಂದು ಹೋರಾಟ, ಎಷ್ಟೋ ಸಲ ಮೌನವಾದ, ನಿಶ್ಯಬ್ದವಾದ, ಎಲ್ಲಾ ಮನೆಯಲ್ಲೂ ಇರುವ ಪ್ರೀತಿಸುವ ಎರಡು ಜೀವಿಗಳ ಹೋರಾಟ.

ಇಂಥ ಹೋರಾಟಗಳು ಇನ್ನೊಂದು ಜೀವದ ನಿಗೂಢತೆಯನ್ನು ಅನುಕಂಪದಿಂದ ಗ್ರಹಿಸುವುದಕ್ಕೆ ದಾರಿ ಮಾಡಕೊಡದಿದ್ದರೆ, ಆಗ ಅದು ಗಂಡಾಗಲಿ, ಹೆಣ್ಣಾಗಲೀ, ಪರಸ್ಪರರ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ, ಅವರು ಒಬ್ಬರಿಗೊಬ್ಬರು ಹಿತಶತೃಗಳಾಗುತ್ತಾರೆ. ನಮ್ಮ ಸಂಕುಚಿತ ಸಾಮಾಜಿಕ ಬದುಕಿನಾಚೆಗೆ, ಒಂದು ಅರ್ಥಪೂರ್ಣವಾದ ಕೊಡುಗೆಯನ್ನು ನೀಡುವುದಕ್ಕೆ ಸಫಲರಾಗಿರುವ ಬಹಳಷ್ಟು ಹೆಣ್ಣು ಮಕ್ಕಳು, ಇಂಥ ಕಹಿಯಾದ, ಮೌನವಾದ ಹೋರಾಟವನ್ನು ನಡೆಸಿರುತ್ತಾರೆ.

ಇಂಥ ಆತ್ಮೀಯ ಸಂಘರ್ಷವು ಗಂಡು ಮತ್ತು ಹೆಣ್ಣಿನ ಸಂಬಂಧದಲ್ಲಿ ಕಹಿಯನ್ನು ತುಂಬದಿದ್ದರೆ ಮಾತ್ರ ಆಗ ಅದೊಂದು ಅತ್ಯಂತ ಗಮನಾರ್ಹವಾದ ಹೋರಾಟವಾಗುತ್ತದೆ. ತನ್ನ ಸುತ್ತ ಇರುವ ಬದುಕುಗಳ ಒಂದು ವಿಶ್ವದಲ್ಲಿ ತಲ್ಲೀನಳಾಗಿರುವ ಒಂದು ಹೆಣ್ಣು, ಇತರರ ಅವಶ್ಯಕತೆಗಳನ್ನು ಪೂರೈಸುವ ಒಂದು ಜೀವಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತಾಳೆ. ವಿರೋಧಾಬಾಸವೆಂದರೆ, ತಾನು ಹೀಗೆ ಜೀವಿಸುವುದು ಸಾಧ್ಯವಾಗುವುದಕ್ಕಾಗಿ ತಾನೂ ಓರ್ವ ವ್ಯಕ್ತಿ ಎನ್ನುವುದನ್ನು ಆಕೆ ಸ್ಥಾಪಿಸಿಕೊಂಡಿರಬೇಕು. ಕಥನೀಕರಿಸುವುದಾದರೆ, ಅದು ಅಪಾರವಾದ ಮಾಹಿತಿಯನ್ನು ಒದಗಿಸುವ ಕಥೆಯಾಗುತ್ತದೆ. ಆದರೆ, ಅದು ತೀವ್ರವಾದ ಮುಜುಗರವನ್ನು ಉಂಟುಮಾಡುವ ಇದನ್ನು ಪ್ರಾಮಾಣಿಕತೆಯಾಗುತ್ತದೆ. ಪ್ರಾಯಶಃ ಸಾರ್ವಜನಿಕ ಬದುಕಿನಲ್ಲಿ ಮನ್ನಣೆಯನ್ನು ಪಡೆದ ಇಂಥ ಹೆಣ್ಣು ಮಕ್ಕಳ ಗಂಡಂದಿರೆಲ್ಲಾ ಅವರ ಖಾಸಗಿ ಬದುಕಿನಲ್ಲಿ ತಪ್ಪಿಸ್ಥರಾಗುತ್ತಾರೆ.

’ಡಾಟರ್ಸ್ ಆಫ್ ಮಹಾರಾಷ್ಟ್ರ’ ಅದರಷ್ಟಕ್ಕೆ ಅದು ಒಂದು ದರ್ಶನಾತ್ಮಕ ಕೃತಿ ಮತ್ತು ಜ್ಞಾನದ ದಿಟ್ಟ ಕ್ರಿಯೆ. ಇಲ್ಲಿನ ಹೆಣ್ಣು ಮಕ್ಕಳು ತಮ್ಮ ಸುಖ ಮತ್ತು ದುಃಖದ ಬಗ್ಗೆ ಮಾತ್ರ ನಮ್ಮೊಂದಿಗೆ ಮಾತನಾಡುವುದಿಲ್ಲ. ಬದಲಿಗೆ, ನಿಜವಾದ ಅರ್ಥದಲ್ಲಿ, ಅವರು ನಮ್ಮನ್ನು ನೋಡುತ್ತಾರೆ. ನಾವು ಸ್ವಲ್ಪ ಸೂಕ್ಷ್ಮಜ್ಞರಾಗಿದ್ದರೆ, ಇಲ್ಲಿನ ಚಿತ್ರಗಳ ಚೌಕಟ್ಟಿನೊಳಗಿಂದ ಇಣಕುವ ಅವರ ನೋಟ, ನಮ್ಮಗೆ ದಿಗಿಲು ಹುಟ್ಟಿಸುವಂತಿರುತ್ತದೆ. ‘ ಈ ಸಮಾಜಕ್ಕೆ ನಿನ್ನ ಕೊಡಗೆ ಏನು?’ ಎಂದು ಅವು ನಮ್ಮನ್ನು ಪ್ರಶ್ನಿಸುವಂತೆ ಕಾಣುತ್ತದೆ.

ಅಭಿಜಿತ್ ವರ್ದೆ ಇಲ್ಲಿ ಅತ್ಯಂತ ಸೂಕ್ಷ್ಮವಾದ ಕೆಲಸ ಮಾಡಿದ್ದಾರೆ. ಆತ ಕಾರ್ಯನಿರ್ವಹಿಸಿರುವ ರೀತಿ, ಇಲ್ಲಿ ಛಾಯಚಿತ್ರಗಳ ಕಲಾತ್ಮಕ ಕೌಶಲ್ಯದತ್ತ ಮಾತ್ರ ನಮ್ಮ ಗಮನವನ್ನು ಸೆಳೆಯುವುದಿಲ್ಲ. ನಿಸ್ಸಂದೇಹವಾಗಿ ಆ ಕೌಶಲ್ಯ, ಪ್ರತಿಯೊಂದು ಪ್ರೇಮಿನಲ್ಲೂ ಆವಾಹಿತವಾಗಿದೆ ಮತ್ತು ಪ್ರತಿಯೊಂದು ಪ್ರತಿಬಿಂಬದಲ್ಲೂ ಫ್ರೇಮಿನಲ್ಲೂ ಆವಾಹಿತವಾಗಿದೆ ಮತ್ತು ಪ್ರತಿಯೊಂದು ಪ್ರತಿಬಿಂಬದಲ್ಲೂ ಸ್ಫುಟವಾಗಿದೆ. ಒಬ್ಬ ಕಲಾವಿದನ ನೈಪುಣ್ಯತೆಯನ್ನು ಪ್ರದರ್ಶನಕ್ಕಿಟ್ಟ ಕೌಶಲ್ಯ ಇದಲ್ಲ. ಆದರೆ ಇಲ್ಲಿನ ಚಿತ್ರಗಳು, ತಮ್ಮೊಳಗಿನ ವಿಷಯಕ್ಕೆ ಹೆಚ್ಚಿನ ಅರ್ಥವನ್ನು ಕಟ್ಟಿಕೊಡುವಂಥವು. ಛಾಯಾಚಿತ್ರಗಳು ನಮ್ಮಲ್ಲಿ ಮೆಚ್ಚುಗೆ ಮತ್ತು ಆನಂದವನ್ನುಂಟುಮಾಡುವಮಥ ಕಲಾತ್ಮಕ ಕೃತಿಗಳು ಮಾತ್ರ ಆಗಿದ್ದರೆ, ಈ ಕೃತಿಯ ಶೈಕ್ಷಣಿಕ ಉದ್ದೇಶವನ್ನು ಅವು ಪೂರೈಸುತ್ತಿರಲಿಲ್ಲ.

ಕುಮಾರಿ ವಿದ್ಯಾ ಬಲ್ ಅವರ ಕೊಡುಗೆ, ಈ ಕೃತಿಯಲ್ಲಿ ಪ್ರತಿಯೊಂದು ಕಡೆ, ಎಂದರೆ, ಅದರ ಪರಿಲ್ಪನೆಯಲ್ಲಿರುವ ಗಾಂಭೀರ್ಯದಲ್ಲಿ, ಇದರ ಚಾರಿತ್ರಿಕ ದರ್ಶನದಲ್ಲಿ ಮತ್ತು ಇಡೀ ಕೃತಿಯ ನೈತಿಕ ನಿಲುವಿನಲ್ಲಿ ಎದ್ದು ಕಾಣುತ್ತದೆ. ಈ ಕೃತಿ ಪ್ರತಿಯೊಂದು ಮನೆ ಮತ್ತು ಶಾಲೆಯಲ್ಲಿ ತನಗೊಂದು ಸ್ಥಾನವನ್ನು ಒದಗಿಸಿಕೊಳ್ಳಲಿ ಎಂದೂ, ಹಾಗೂ ಭಾರತದ ಬೇರೆ ಪ್ರಾಂತ್ಯಗಳಿಂದಲೂ ನಮ್ಮ ಸಮಕಾಲೀನ ಬದುಕಿಗೆ ಗಮನಾರ್ಹವಾದ ಕೊಡುಗೆಯನ್ನು ನೀಡಿದ ಹೆಣ್ಣು ಮಕ್ಕಳ ಬಗ್ಗೆ ನಿಖರವಾದ ವಿವರಗಳು ಪ್ರಕಟವಾಗಲಿ ಎಂದೂ ಆಶಿಸುತ್ತೇನೆ.

ಅಭಿಜಿತ್ ವರ್ದೆ ಅವರಡಾಟರ್ಸ್ ಆಫ್ ಮಹಾರಾಷ್ಟ್ರ’ (ಸಂ: ವಿದ್ಯಾಬಲ್) ಪುಸ್ತಕಕ್ಕೆ ಬರೆದ ಮುನ್ನುಡಿ. ಪ್ರ: ಮಹಾರಾಷ್ಟ್ರ ಫೌಂಡೇಷನ್. ಸೆಪ್ಟೆಂಬರ್ ೯೭ ಅನುವಾದ: ಬಿ.ಯು. ಸುಮಾ.

* * *