ಎರಡನೆಯ ಮಹಾಯುದ್ಧವಾದ ನಂತರ ಅಮೆರಿಕದ ಅಧ್ಯಕ್ಷರಾದ ಟ್ರೂಮನ್‌ರು, ಮೂರನೆಯ ಜಗತ್ತನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ನಾವು ಸಹಾಯ ಮಾಡಬೇಕು ಎನ್ನುವ ಮಾತನ್ನು ಆಡುತ್ತಾರೆ. ಅವರು ಹಾಗೆಂದಾಗ ಅದು ಬಹಳ ಮುಗ್ಧವಾದ ಮಾತು ಎಂದು ಇಡೀ ಜಗತ್ತಿಗೆ ಕಂಡಿತ್ತು. ಅಮೆರಿಕ ಮುಂದುವರಿದ ರಾಷ್ಟ್ರವಾಗಿ ಉಳಿದ ಜಗತ್ತಿಗೆ ಒಂದು ಮಾರ್ಗವನ್ನು ಸೂಚಿಸುವ ರೀತಿ ಇದು ಎಂದೂ ಬಹಳ ಜನರಿಗೆ ಕಂಡಿತ್ತು. ಆದರೆ ಕ್ರಮೇಣ ಆ ಮಾತಿನ ಅರ್ಥವೇನೆಂದು ಪ್ರಾಯಶಃ ಟ್ರೂಮನ್‌ರನ್ನು ಅನುಸರಿಸುವ ಜನರಿಗೂ ಗೊತ್ತಾಗಲು ಶುರುವಾಯಿತು.

ಅದೇನೆಂದ್ರೆ ತಮ್ಮ ದೇಶದಲ್ಲಿ ಶುರು ಮಾಡಲಿಕ್ಕೆ ಸಾಧ್ಯವಿಲ್ಲದ-ತಮ್ಮ ಜನರಿಗೆ ತೊಂದರೆಯಾಗಬಲ್ಲ-ಪರಿಸರ ಮಾಲಿನ್ಯಕಾರೀ ಉದ್ಯಮಗಳನ್ನು ಬೇರೆ ದೇಶದಲ್ಲಿ ಶುರು ಮಾಡಬಹುದೆಂಬ ಹೊಸ ರಾಜನೀತಿ ಶುರುವಾಯಿತು. ಇಂದು ಯಾವ ಮುಂದುವರಿದ ರಾಷ್ಟ್ರದಲ್ಲೂ ಗಣಿಗಾರಿಕೆ ಪ್ರಾರಂಭಿಸಲು ಸಾಧ್ಯವಿಲ್ಲ. ಯಾಕೇಂದ್ರ ಜನ ಅದನ್ನು ವಿರೋಧಿಸುತ್ತಾರೆ. ಅವರಿಗೆ ತಮ್ಮ ಬದುಕಿನ ‘ಕ್ವಾಲಿಟಿ’ ಮುಖ್ಯವಾಗಿದೆ. ಒಳ್ಳೆಯ ಗಾಳಿ, ಒಳ್ಳೆಯ ನೀರು ಬೇಕು, ಜೊತೆಗೆ ಐಶಾರಾಮದ ಬದುಕೂ ಮುಂದುವರಿಯಬೇಕು. ಅದಕ್ಕಾಗಿ ಮೂರನೆಯ ಜಗತ್ತು ತಮಗೆ ಬೇಕಾದ್ದನ್ನೆಲ್ಲ ಮಾಡಿಕೊಡುವಂತೆ ನೋಡಿಕೊಳ್ತಾರೆ. ಪೆಟ್ರೋಲ್, ಕಬ್ಬಿಣ, ನಾನಾ ತರದ ಅದಿರುಗಳನ್ನು ಮೂರನೇ ಜಗತ್ತು ಅವರಿಗೆ ಸಪ್ಲೈ ಮಾಡಬೇಕು. ಅಷ್ಟು ಮಾತ್ರವಲ್ಲ ಆ ದೇಶದ ಅಭಿವೃದ್ಧಿಗೆ ಬೇಕಾದಂತಹ ಜನರನ್ನೂ ಸಪ್ಲೈ ಮಾಡಬೇಕು. ತೃತೀಯ ಜಗತ್ತಿನ ರಾಷ್ಟ್ರಗಳುಒಂದು ಕಾಲದಲ್ಲಿ ಕಾಫಿ, ಟೀ ಬೆಳೆಯಲು ಜನರನ್ನು ಅಲ್ಲಿಗೆ (ಅಮೆರಿಕದ ಮನೋಧರ್ಮದ ದೇಶಗಳಿಗೆ) ಕಳಿಸಿಕೊಡುತ್ತಿದ್ದವು. ಅಲ್ಲಿ ಹೋಗಿ ಕೂಲಿ ಮಾಡಿ ದುಡಿಮೆ ಮಾಡಿ, ಅಲ್ಲೇ ನೆಲೆಸಿದ ಎಷ್ಟೋ ಜನ ಭಾರತೀಯರು ಇಂದು ಜಗತ್ತಿನಾದ್ಯಂತ ಇದ್ದಾರೆ. (ಈಗ ಐ.ಟಿ.ಗೆ ಜನ ಹಾಗೇ ಹೋಗ್ತಾ ಇದ್ದಾರೆ.) ನಾವು ಅವರಿಂದ ಪಡೆದ ಈ ಅಭಿವೃದ್ಧಿ ಕಲ್ಪನೆಯನ್ನು ಪ್ರಶ್ನೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಹಾಗೆ ಪ್ರಶ್ನೆ ಮಾಡುವಾಗ ಅಭಿವೃದ್ಧಿ ಬೇಡವೆಂದು ನಾವು ಹೇಳ್ತಿದ್ದೇವೆಂದು ಯಾರೂ ಖಂಡಿತ ತಿಳಿಯಬಾರದು. ಆದರೆ ಯಾವ ರೀತಿಯ ಅಭಿವೃದ್ಧಿ ನಮ್ಮ ಜನರ ಸೌಖ್ಯಕ್ಕೆ ಅಗತ್ಯ ಎಂದು ನಾವೇ ನಿರ್ಧರಿಸುವಂತಾಗಬೇಕು. ನಮ್ಮ ಕೃಷಿಕರಿಗೆ, ನಮ್ಮ ಕಾರ್ಮಿಕರಿಗೆ, ಕೈಕೆಲಸಗಾರರಿಗೆ ಅವರ ನಿತ್ಯ ಜೀವನದ ಗುಣಮಟ್ಟವನ್ನು ವಿಸ್ತರಿಸುವಂತಹ ಕೆಲಸಗಳನ್ನು ನಾವು ಮಾಡಬೇಕು.

ಗಣಿಗಾರಿಕೆಯ ಬಗ್ಗೆ ಹೇಳುವುದಾದರೆ, ಗಣಿಗಾರಿಕೆಯೇ ಅಪಾಯ. ಅದರಲ್ಲೂ ಎಲ್ಲಿ ಹೆಚ್ಚು ಮಳೆ ಬೀಳುತ್ತದೋ, ಎಲ್ಲಿ ಸಾಮಾನ್ಯ ಜನಜೀವನ ಸಂಪೂರ್ಣ ಸ್ಥಳೀಯ ಪ್ರಾಕೃತಿಕ ಸಂಪನ್ಮೂಲವನ್ನು ಅವಲಂಬಿಸಿದೆಯೋ, ಎಲ್ಲಿ ಹಲವು ರೀತಿಯ ಪ್ರಯೋಜನಗಳು ಪ್ರಕೃತಿಯಿಂದ ಆಗುತ್ತದೆಯೋ, ಯಾವುದು ಜೀವ ವೈವಿಧ್ಯದ ನೆಲೆಯೋ-ಅಲ್ಲಿ ಗಣಿಗಾರಿಕೆ ಮಾಡಿ ಎಲ್ಲ ಲಾಭಗಳಿಂದಲೂ ವಂಚಿತರಾಗಿ ಆತ್ಮಹತ್ಯೆ ಮಾಡಿಕೊಂಡ ಹಾಗೆ ಅಂತ ಎಲ್ಲರಿಗೂ ಅನಿಸುತ್ತದೆ. ಇದರಿಂದ ಏನು ಅಪಾಯ ಅನ್ನೋದು ಕೂಡಲೇ ಗೊತ್ತಾಗುವಂತದಲ್ಲ.

ಕುದುರೆಮುಖದ ಪರಿಸರದವರು, ಚಿಂತಕರು ಕುದುರೆಮುಖದಲ್ಲಿ ಗಣಿಗಾರಿಕೆ ಬೇಡ ಎನ್ನುತ್ತಿದ್ದಾಗ ಮಲೆನಾಡಿನ ಪರಿಸರದಲ್ಲೇ ಹುಟ್ಟಿ ಬೆಳೆದ ನಾನೂ ಗಣಿಗಾರಿಕೆ ಬೇಡ ಎಂದೆ. ಆದರೆ, ನನಗೇನೇ ಅದು ಎಷ್ಟು ದೊಡ್ಡ ಅಪರಾಧ ಎಂದು ಗೊತ್ತಾಗಲು ಸ್ವಲ್ಪ ಕಾಲ ಬೇಕಾಯಿತು. ಆದ್ದರಿಂದ ಇದು ಕಾಲಾನುಕ್ರಮದಲ್ಲಿ ಗೊತ್ತಾಗುವ ವಿಚಾರ. ಅರ್ಥ ಮಾಡಿಕೊಳ್ಳಲು ತಡವಾದಷ್ಟೂ ಅಪಾಯ ಜಾಸ್ತಿ. ನಾವು ಇನ್ನು ನಾಲ್ಕೈದು ವರ್ಷ ಅಲ್ಲಿ ಗಣಿಗಾರಿಕೆಗೆ ಬಿಟ್ಟರೂ ಕೂಡ, ಮತ್ತೆ ಪ್ರಯತ್ನಪಟ್ಟು ಸರಿಮಾಡಲಿಕ್ಕೆ ಸಾರ್ಧಯವಿಲ್ಲದಂತಹ ಅಪಾಯವನ್ನು ಅಲ್ಲಿ ಉಂಟು ಮಾಡಿದಂತಾಗುತ್ತದೆ. ಇನ್ನು ಇಪ್ಪತ್ತು ವರ್ಷಕ್ಕೆ ಲೈಸನ್ಸ್ ಕೊಡಬೇಕು ಎನ್ನುವ ಮಾತು ಕೇಳಿಬರುತ್ತಾ ಇದೆ. ಇದರಿಂದ ಮಲೆನಾಡಿನ ಸರ್ವನಾಶವಾಗುತ್ತದೆ. ಈ ನದಿಗಳು ಎಲ್ಲೆಲ್ಲಿ ಜನರ ಬದುಕಿನ ಜೀವನಾಡಿಯಾಗಿ ಹರಿಯುತ್ತಿವೆಯೋ ಆ ಎಲ್ಲ ಪ್ರದೇಶದ ಜನಜೀವನ ಅಸ್ತವ್ಯಸ್ತವಾಗಿ ನಾಶವಾಗುತ್ತದೆ. ಇಷ್ಟಕ್ಕೂ ಅದರಿಂದ ಸಿಗುವ ಅದುರಿನ ಬೆಲೆಯೂ ಅಷ್ಟರಲ್ಲಿಯೇ ಇದೆ. ಮತ್ತು ಈ ಅದುರಿಗೆ ಎಷ್ಟು ದಿನ ಈ ಬೇಡಿಕೆಯಿದೆ, ಎಷ್ಟು ದಿನ ಈ ಬೆಲೆ ಸಿಗುತ್ತೆ ಅಂತಲೂ ನಮಗೆ ಗೊತ್ತಿಲ್ಲ. ಆದ್ದರಿಂದ ನಿಜವಾಗಿಯೂ ಜನಜೀವನದ ಮೇಲಿನ ವಿಶ್ವಾಸದಲ್ಲಿ ಯಾರಾದರೂ ತೀರ್ಮಾನ ತೆಗೆದುಕೊಳ್ಳುವುದಾದರೆ ಅವರು ಈ ಕ್ಷಣದ ವ್ಯವಹಾರ ಲಾಭಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆಯನ್ನು ಇನ್ನೂ ಮುಂದುವರಿಸಿ ನಿರಂತರ ಲಾಭದ ಭಂಡಾರವನ್ನು ಕಳೆದುಕೊಳ್ಳುವ ಮೂರ್ಖತನ ಮಾಡುವುದಿಲ್ಲ. ಆದ್ದರಿಂದ ಕುದುರೆಮುಖದಲ್ಲಿ ಗಣಿಗಾರಿಕೆ ಬೇಡ ಅನ್ನುವದು ಇವತ್ತು ಆಳುವವರು ಕಂಡುಕೊಳ್ಳಬೇಕಾಗಿದೆ.

ಹೀಗೆ ಮಾತಾಡುವವರನ್ನು ಪರಿಸರವಾದಿಗಳೆಂದು ಕರೆದು ನಿರ್ಲಕ್ಷ್ಯಕ್ಕೆ ಗುರಿಪಡಿಸುವುದು ಅಥವಾ ಅವರನ್ನು ಹಾಸ್ಯಾಸ್ಪದವಾಗಿ ಕಾಣುವುದು ಅಥವಾ ಹೀಗೆ ಆಡುವುದೇ ಅವರ ಧರ್ಮ ಮತ್ತು ಅವರು ಆಡುವುದು ಆಡ್ತಾ ಇರ್ತಾರೆ-ಎಂದುಉಪೇಕ್ಷೆಗೆ ಒಳಪಡಿಸುವುದರಿಂದ ಯಾರಿಗೂ ಒಳ್ಳೇದಾಗುವುದಿಲ್ಲ. ನಾವು ಯಾರೂ ಪರಿಸರವಾದಿಗಳಲ್ಲ ಮತ್ತು ನಾನೂ ಹಾಗೆಂದೇ ತಿಳಿದಿದ್ದೇನೆ. ನಾವೆಲ್ಲರೂ ನಮ್ಮ ನಮ್ಮ ವೃತ್ತಿಯಲ್ಲಿರುವವರು. ಕೆಲವರು ಅಧ್ಯಾಪಕರು, ಕೆಲವು ಕೃಷಿಕರು, ಇನ್ನು ಕೆಲವರು ನಾನಾ ತರದ ಕಾರ್ಮಿಕರು. ನಾವೆಲ್ಲರೂ ನಮ್ಮ ನಮ್ಮ ಮನೆವಾರ್ತೆಯನ್ನು ನಡೆಸುವವರು. ನಾವೂ ಎಲ್ಲರಂತೆ ಗಾಳಿಯನ್ನೇ ಉಸಿರಾಡುವವರು, ನೀರನ್ನು ಕುಡಿಯುವವರು, ನಿತ್ಯಜೀವನಕ್ಕೆ ಅಗತ್ಯವಾದ ಪ್ರಕೃತಿಯ ಸಂಪತ್ತನ್ನು ಬಯಸುವವರು. ಒಳ್ಳೆ ಗಾಳಿ ಬೇಕು. ನೀರು ಬೇಕು ಎಂದು ಹೇಳುವ ಸ್ವಾತಂತ್ರ್ಯ ಹೇಗೆ ಎಲ್ಲರಿಗೂ ಇದೆಯೋ ಅದೇ ಅರ್ಥದಲ್ಲಿ ನಾವೂ ಮಾತಾಡುವವರು. ಇದನ್ನು ಸರಕಾರ ತಿಳಿದುಕೊಳ್ಳಬೇಕು. ಬಹಳ ಮುಖ್ಯವಾಗಿ ಸರಕಾರವೂ ಸಂವಹನ ಮಾಧ್ಯಮಗಳೂ ನಮಗೆಲ್ಲ ಪರಿಸರವಾದಿಗಳೆಂಬ ಹಣೆಪಟ್ಟಿ ಕೊಟ್ಟು ನಿರ್ಲಕ್ಷ್ಯಕ್ಕೆ ಗುರಿಮಾಡಕೂಡದು. ಯಾರೂ ಆ ದೃಷ್ಟಿಯಿಂದ ಪರಿಸರವಾದಿಗಳಲ್ಲ. ಅಂಥ ಹಗುರ ಮಾತಿನಿಂದ ಜೀವನಪ್ರೀತಿಯ ಒಂದು ಕೆಲಸವನ್ನು ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಮಾಡುವುದು ಮಹಾಪಾಪ.

ನಮ್ಮ ನಿಮ್ಮೆಲ್ಲರ ಬದುಕನ್ನೂ ಅವಜ್ಞೆ ಮಾಡುವ, ಆ ಬಗ್ಗೆ ಗೊಣಗುವ, ಹಾಸ್ಯ ಮಾಡುವ  ಸಂದರ್ಭದಲ್ಲಿ ಬಂದ ಈ ಪುಸ್ತಕ ಬಹಳ ಮುಖ್ಯವಾದುದು. ಇಂಥ ಪುಸ್ತಕಗಳು ಕನ್ನಡದಲ್ಲಿ ಬಹಳ ಕಡಿಮೆಯಿವೆ. ಹಲವು ರೀತಿಯ ಜನ, ಬೇರೆ ಬೇರೆ ಆಸಕ್ತಿಯುಳ್ಳವರು. ಕುದುರೆಮುಖದ ವಿಷಯದಲ್ಲಿ ಬರೆದದ್ದನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಇದು ಬರೀ ಚಿಂತನೆಯಲ್ಲ. ಈ ಚಿಂತನೆಯ ಜೊತೆ ಒಂದು ದೊಡ್ಡ ಜಾಗತಿಕ ಹಾಗೂ ಪ್ರಾದೇಶಿಕ ಆಂದೋಲನ ಇದೆ. ಈ ಪುಸ್ತಕ ಒಂದು ಕಡೆ ಕ್ರಿಯೆ, ಇನ್ನೊಂದು ಕಡೆಯಲ್ಲಿ ವಿಚಾರ-ಎರಡನ್ನೂ ಮೈಗೂಡಿಸಿಕೊಂಡು ಬರುತ್ತಿರುವುದರಿಂದ ಸದ್ಯದ ಜಾಗತಿಕ ತೃತೀಯ ಜಗತ್ತಿನ ಅನಿವಾರ್ಯ ಆಂದೋಲನಕ್ಕೆ ಸಹಸ್ಪಂದಿಯಾಗಿ ಮೂಡಿಬಂದಿದೆ ಎನ್ನಿಸುತ್ತದೆ. ಸಾಮಾನ್ಯವಾಗಿ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಬಾರದೆಂಬ ಜನಾಭಿಪ್ರಾಯವಿದ್ದರೂ ಗಣಿಗಾರಿಕೆ ಮುಂದುವರಿಸುವ ಉಪಾಯಗಳನ್ನು ಹುಡುಕುತ್ತಲೇ ಇದ್ದಾರೆ. ಸದ್ಯದ ಇಂಥ ಪರಿಸ್ಥಿತಿಯಲ್ಲಿ ಈ ಪುಸ್ತಕಕ್ಕೆ ದೊಡ್ಡ ಅಗತ್ಯ ಇದೆ. ಗಣಿಗಾರಿಕೆಯನ್ನು ಸಮರ್ಥಿಸಲಿಕ್ಕಾಗಿಯೇ ಈವರೆಗೆ ಹುಲ್ಲುಗಾವಲು ಬೆಳೆಯುತ್ತಿದ್ದ ಬೋಳುಗುಡ್ಡದಲ್ಲಿ ಏನೇನೋ ಮರಗಳನ್ನು ನೆಟ್ಟು ಹಸಿರು ತೋರಿಸುತ್ತಿದ್ದಾರೆ. ಆದರೆ ಆ ಮರಗಳು ಅಪಾಯಕಾರಿಯಾದ ಮರಗಳು. ಆ ಬೋಳುಗುಡ್ಡಗಳಲ್ಲಿ ಇರಬೇಕಾದ್ದು ಒಂದು ಜಾತಿಯ ಹುಲ್ಲುಗಾವಲು. ಶೋಲಾ ಕಾಡೂಂತ ತಜ್ಞರು ಇದನ್ನು ಕರೆಯುತ್ತಾರೆ. ಹುಲ್ಲು ಇರಬೇಕಾದಲ್ಲಿ ಮರ ಇರಬೇಕಾಗಿಲ್ಲ. ಎಲ್ಲಿ ಏನು ಇರಬೇಕೋ ಅದು ಅಲ್ಲಿ ಇಲ್ಲದ ಹಾಗೆ ಮಾಡಿ ಆ ಜಾಗದಲ್ಲಿ ಮರ ಬೆಳೆಸುತ್ತೇವೆ ಎಂದು ತೋರಿಸುವುದರ ಮೂಲಕ ಮೋಸ ಮಾಡುತ್ತಿದ್ದಾರೆ. ಈ ಪುಸ್ತಕವನ್ನು ಓದುವ ಮುಖಾಂತರ ನಾವು ಯಾಕೆ ಚಳವಳಿ ಮಾಡುತ್ತಿದ್ದೇವೆ ಎನ್ನುವ ಈ ಸೂಕ್ಷ್ಮಗಳೆಲ್ಲ ಸ್ಪಷ್ಟವಾಗಬಹುದೆಂದು ನಂಬಿದ್ದೇನೆ.

ಬಹಳ ಮುಖ್ಯವಾಗಿ ಇಲ್ಲಿ ನಾವು ಕಬ್ಬಿಣದ ಅದುರನ್ನು ಮಾರಿ ಎಷ್ಟು ಸಂಪಾದನೆ ಮಾಡಬಹುದೋ ಅದಕ್ಕಿಂತ ಹೆಚ್ಚು ಕುದುರೆಮುಖದಿಂದ ಹರಿದುಬರುವ ತುಂಗೆಯ ಭದ್ರೆಯ ನದೀಜಲದಿಂದ ಈಗಾಗಲೇ ಜನರು ಬತ್ತ, ತರಕಾರಿಗಳನ್ನು ಬೆಳೆಯುತ್ತಾ, ಮೀನುಗಾರಿಕೆ ಮಾಡುತ್ತಾ ಇನ್ನೂ ಹಲವಾರು ವಿಧದಿಂದ ಸಂಪಾದನೆ ಮಾಡಿ ಬದುಕುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಈ ಹಲವು ರೀತಿಯ ಬಳಕೆಯನ್ನು ನಿಲ್ಲಿಸಿ ಆ ಗುಡ್ಡದಿಂದ ಸಿಗಬಹುದಾದ ಅದುರನ್ನು ಮಾತ್ರ ತೆಗೆದು ಈ ನೀರನ್ನು ಚರಂಡಿಯ ನೀರನ್ನಾಗಿ ಮಾಡೋದು ತಪ್ಪು ಎಂದು ನಮಗೆ ಗೊತ್ತಾಗದೇ ಇದ್ದರೆ ನಾವು ಒಂದು ನಾಗರಿಕತೆಯೇ ಅಲ್ಲಾಂತ ಎನಿಸುತ್ತದೆ. ನಾವು ಒಂದು ನಾಗರಿಕತೆ ಈ ಪುಸ್ತಕದಲ್ಲಿ ಬಂದ ವಿಚಾರಗಳು ನಿಜ ಎನ್ನುವುದು ನಮ್ಮ ಆಳುವವರ ಗಮನಕ್ಕೆ, ನಮ್ಮ ಕೈಗಾರಿಕೋದ್ಯಮಿಗಳ ಗಮನಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ನಾವು ಒಂದು ನಾಗರಿಕತೆಯಾಗಿ ಉಳಿಯುವುದಿಲ್ಲ.

ನಮ್ಮ ಪೂರ್ವಿಕರಿಗೆ ಇದರ ಜ್ಞಾನ ಇತ್ತು. ಅವರಿಗೆ ಪ್ರಕೃತಿ, ಮನುಷ್ಯ, ಪ್ರಾಣಿವರ್ಗ, ಸಸ್ಯ ಜಗತ್ತು ಮತ್ತು ನಾವು ಕಾಣದ ಯಾವನೋ ಒಬ್ಬ ಕರ್ತೃವಿಗೂ ನಡುವಿನ ಸಂಬಂಧಗಳು ಗೊತ್ತಿತ್ತು. ತಾರ್ಕಿಕವಾಗಿ ವೈಜ್ಞಾನಿಕವಾಗಿ ಗೊತ್ತಿಲ್ಲದಿದ್ದಿರಬಹುದಾದರೂ ಆಂತರ್ಯದಲ್ಲಿ ಅವರಿಗೆ ಈ ಒಳಸೂಕ್ಷ್ಮಗಳೆಲ್ಲ ಅರ್ಥವಾಗುತ್ತಿತ್ತು. ಆದ್ದರಿಂದಲೇ ಅವರು ಅಂಥ ಸುಂದರವಾದ ತಾಣಗಳಲ್ಲಿ ಆಶ್ರಮಗಳನ್ನು ಕಟ್ಟುತ್ತಾ ಇದ್ದರು, ಧರ್ಮದ ತಾಣಗಳನ್ನು ರಚಿಸುತ್ತಿದ್ದರು. ಹರಿಯುವ ನದಿಯನ್ನು ದೇವತೆ ಎಂದು ಭಾವಿಸುತ್ತಾ ಇದ್ದರು. ಈ ಎಲ್ಲ ಭಾವನೆಗಳ ಹಿಂದೆ ನಮ್ಮ ಬದುಕನ್ನು ಸತತವಾಗಿ ನಡೆಸಿಕೊಂಡು ಹೋಗುವ ಸೂರ್ಯನ ಶಕ್ತಿ, ನದಿಯ ಶಕ್ತಿ ಮುಂತಾದ ಪ್ರಕೃತಿಕ ಶಕ್ತಿಗಳ ಬಗ್ಗೆ ಜನರಲ್ಲಿ ಜಾಗೃತಿ ಇತ್ತು. ಈ ಎಲ್ಲ ಭಾವನೆಗಳ ಹಿಂದೆ ಅಡಗಿದ ಸತ್ಯವನ್ನು ವೈಜ್ಞಾನಿಕವಾಗಿ ಯೋಚನೆ ಮಾಡುವವರು ಬೆಳೆಸಬೇಕಾಗಿತ್ತು. ಯಾಕೆಂದರೆ ಇದನ್ನು ಬೆಳೆಸಲಿಕ್ಕೆ ವಿಜ್ಞಾನದಲ್ಲಿ ಸಾಕಷ್ಟು ಆಧಾರಗಳು ಸಿಗುತ್ತವೆ. ಆದರೆ ಅನೇಕ ವಿಜ್ಞಾನಿಗಳು ತಂತ್ರಜ್ಞಾನವೇ ವಿಜ್ಞಾನವೆಂದು ತಿಳಿದಿದ್ದರಿಂದ ಇವತ್ತು ಮನುಷ್ಯನ ಮನಸ್ಸು ವಿಕಾರವಾಗುತ್ತಿದೆ. ಪ್ರಕೃತಿಯ ಸತ್ಯಗಳು ವಿಜ್ಞಾನಿಗೆ ಅರ್ಥವಾಗುತ್ತೆ, ತಂತ್ರಜ್ಞಾನಿಗೆ ಅರ್ಥವಾಗುವುದಿಲ್ಲ. ಇಂದು ವಿಜ್ಞಾನ ಮತ್ತು  ತಂತ್ರಜ್ಞಾನ ಒಟ್ಟೊಟ್ಟಾಗಿ ಹೋಗಬೇಕಾದ ಕಾಲ ಬಂದಿದೆ. ಅದಕ್ಕಾಗಿ ವಿಜ್ಞಾನಿಗಳು ಕೂಡಾ ಪರಿಸರದ ಈ ಚಳವಳಿಯಲ್ಲಿ ಭಾಗಿಯಾಗಬೇಕಾಗಿದೆ. ಈ ಪುಸ್ತಕದ ನಮ್ಮ ಬರಹಗಾರರಲ್ಲಿ ಅಂತಹ ಚಿಂತನಶೀಲ ವಿಜ್ಞಾನಿಗಳೂ ಇದ್ದಾರೆ ಎನ್ನುವುದರಿಂದಲೂ ಈ ಪುಸ್ತಕ ಮುಖ್ಯವಾಗಿದೆ. ಲೇಖಕರು ಈ ಪುಸ್ತಕದ ವಾದವನ್ನು ವೈಜ್ಞಾನಿಕ ದೃಷ್ಟಿಯಿಂದಲೇ ಸಮರ್ಥಿಸುತ್ತಾರೆ.

ಈ ಚಳವಳಿ ಆರಂಭವಾದೊಡನೆಯೇ ಈ ಚಳುವಳಿ ಎಲ್ಲಾ ರೀತಿಯ ಪ್ರಗತಿಗೆ ಅಡ್ಡಗಾಲು ಹಾಕುವ ಪರಿಸರವಾದಿಗಳದ್ದು ಎಂಬ ಅಪವಾದ ಹೊರಿಸಲಾಗಿದೆ. ಯಾವುದೋ ಒಂದು ಸೌಂದರ್ಯಾತ್ಮಕ ಕಲ್ಪನೆಯಿಂದ ಪ್ರಗತಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದೂ ಇವರ ಮೇಲೆ ಆರೋಪ ಹೊರಿಸಿದ್ದಾರೆ. ಆದರೆ ಇಂಥ ಭಾವನೆಗಳ ಹಿಂದೆಯೂ ವಿಜ್ಞಾನಿಗಳ, ಚಿಂತಕರ, ಸಮಾಜಶಾಸ್ತ್ರಜ್ಞರ ಬಹಳ ಗಾಢವಾದ ಜೀವನಪ್ರೀತಿಯಿರುತ್ತದೆ ಮತ್ತು ಪರಿಸರದ ಪ್ರೀತಿಯೆನ್ನುವುದು ಜೀವನದ ಪ್ರೀತಿಯೆ ಆಗಿದೆ ಎನ್ನುವುದು ನಮಗೆ ಗೊತ್ತಿರಬೇಕು.

ಯಾವ ಪ್ರದೇಶದಲ್ಲಿ ಮಕ್ಕಳು ಮತ್ತು ಮುದುಕರು ಸಂತೋಷದಲ್ಲಿ ಇರಲಿಕ್ಕೆ ಸಾಧ್ಯವಿಲ್ಲವೋ, ಅದು ಜೀವನಯೋಗ್ಯ ಪ್ರದೇಶವಲ್ಲ. ನಾವು ಇಂದು ಕೇವಲ ಯುವಕರ ದೃಷ್ಟಿಯಿಂದ ಯೋಚನೆ ಮಾಡುತ್ತಿದ್ದೇವೆ. ಯುವಕರು ಇಂದು ಸದಾ ಊರಿಂದ ಊರಿಗೆ ಚಲಿಸುತ್ತಾ ಇರುವವರು, ಓಡಾಡುತ್ತಾ ಇರುವವರು. ಒಂದೇ ಊರಿನಲ್ಲಿದ್ದು ಆ ಊರಿನ ಸುಖ, ದುಃಖವನ್ನು, ಸೌಂದರ್ಯವನ್ನು ಸವಿಯುವಂಥವರ ಸಂಖ್ಯೆ ಕಡಿಮೆ ಆಗುತ್ತಾ ಇರುವುದರಿಂದ ಆಯಾಮ ಊರಿನ ಬಗ್ಗೆ ಹಿಂದೆ ಇದ್ದ ಆಸ್ಥೆ ಕಡಿಮೆಯಾಗ್ತಾ ಇದೆ.

ಮತ್ತೆ ಊರುಗಳು ಬೆಳೆಯುವ ಮಕ್ಕಳ ಭವಿಷ್ಯ, ವಯಸ್ಸಾದವರ ನೆಮ್ಮದಿಯ ತಾಣಗಳಾಗಬೇಕು ಎಂಬ ದೃಷ್ಟಿಯಿಂದ ಯೋಚನೆ ಮಾಡಿದಾಗ ನಮ್ಮಲ್ಲಿ ಪರಿಸರ ಪ್ರೀತಿ ಹುಟ್ಟಲಿಕ್ಕೆ ಸಾಧ್ಯ. ಈ ಚಳುವಳಿಯಲ್ಲಿ ಇಡಿಯ ಜೀವನ ಕ್ರಮವನ್ನೇ ಬದಲಾಯಿಸಬಹುದಾದಂಥ ಗುಣಗಳಿದ್ದಾವೆ. ಹಾಗಾಗಿ ಈ ಪುಸ್ತಕಕ್ಕೆ ಈ ದೃಷ್ಟಿಯಿಂದಲೂ ಪ್ರಾಮುಖ್ಯತೆ ಬರಬಹುದೆಂದು ನಾನು ತಿಳೀತೇನೆ.

ಯಾರದೊ ಮುಖಯಾರದೋ ದೇಹ: ಕುದುರೆ ಮುಖ ಪುಸ್ತಕಕ್ಕೆ ವರದೇಶ್ ಹಿರೇಗಂಗೆ ಅವರಿಗೆ ಪ್ರಸ್ತಾವನೆಯ ರೂಪದಲ್ಲಿ ಮೌಕಿಕವಾಗಿ ಹೇಳಿದ್ದರ ಪೂರ್ಣಪಾಠ.

ಸಂಪಾದಕ: ನಿ. ಮುರಾರಿ ಬಲ್ಲಾಳ್

ಪ್ರ: ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ. .. (೨೦೦೨