ಕಳೆದ ಶತಮಾನ-ಹೊಸ ಶತಮಾನ’ ಎಂಬ ವಿಷಯದ ಬಗ್ಗೆ ಈ ಕ್ಷಣಕ್ಕೆ ನನ್ನ ಮನದಲ್ಲಿ ಹರಿದು ಬರುತ್ತಿರುವ ಕೆಲವೊಂದು ಸ್ಥೂಲ ಯೋಜನೆಗಳನ್ನು ನಿಮ್ಮೊಂದಿಗೆ ಹಾಗೆಯೆ ಹಂಚಿಕೊಳ್ಳುತ್ತಿದ್ದೇನೆ.

ಒಂದು ರೀತಿಯಲ್ಲಿ, ‘ಇಪ್ಪತ್ತನೆಯ ಶತಮಾನ-ಇಪ್ಪತ್ತೊಂದನೆಯ ಶತಮಾನ’ಗಳೆಂದು ಹೀಗೆ ಕಾಲವನ್ನು ವಿಭಜಿಸುವ ಕ್ರಮವೆ ಕೃತಕವಾದ್ದು, ಶತಮಾನದ-ದಶಕ-ವರ್ಷಗಳು ಹೀಗೆ ಯಾವುದೊ ನಿರ್ದಿಷ್ಟ ದಿನ-ಕ್ಷಣಗಳಲ್ಲಿ ಪಲ್ಲಟವಾಗುವವೆಂಬ ತಿಳುವಳಿಕೆಯೆ ಅಪ್ರಾಕೃತಿಕ ಹಾಗೂ ಅರ್ಥಹೀನವಾದ್ದು. ಇವೆಲ್ಲ ನಮ್ಮ ಕಲ್ಪನೆಗಳಷ್ಟೆ. ನಾವು ಕಲ್ಪಿಸಿಕೊಂಡ ಕಾಲಮಾನದ ಆಧಾರದ ಮೇಲೆ ಮಾತ್ರ ನಿನ್ನೆ ಇಪ್ಪತ್ತೆಯ ಶತಮಾನವಾಗಿರುತ್ತದೆ, ಇಂದು ಇಪ್ಪತ್ತೊಂದನೆಯದಾಗಿರುತ್ತದೆ.

ಆದರೆ, ಹಿಂದೆ, ನಮ್ಮ ಕಥನಕಾರರು ಯುಗಪರಿವರ್ತನೆಯನ್ನು. ಮಾನವ ಕುಲದ ಒಟ್ಟೂ ಮನೋಧರ್ಮದ ಪರಿವರ್ತನೆಯ ಮೂಲಕ ಸೂಚಿಸುತ್ತಿದ್ದರು. ನಾವು ನಮ್ಮ ಬಾಲ್ಯದಲ್ಲಿ ಕೇಳಿದ ಕಥೆಯೊಂದು ಈ ರೀತಿಯದು; ಧರ್ಮರಾಯನ ಆಳ್ವಿಕೆಯಲ್ಲಿ, ಒಬ್ಬಾತ ತಾನು ಕೆಲಕಾಲದ ಹಿಂದೆ ಕೊಂಡುಕೊಂಡ ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದಾಗ ನಿಧಿಯೊಂದನ್ನು ಕಂಡನಂತೆ. ತಕ್ಷಣ ಆತ ಮನೆಯ ಹಳೆಯ ಮಾಲೀಕನ ಬಳಿಹೋಗಿ, ತಾನು ಆತನಿಂದ ಕೊಂಡದ್ದು ಮನೆಯನ್ನು ಮಾತ್ರವೆಂದೂ, ಹಾಗೂ ಆ ನಿಧಿ ತನಗಲ್ಲದೆ ಆತನಿಗೇ ಸೇರಿದುದೆಂದೂ ಹೇಳಿದನಂತೆ. ಮೊದಲಿನ ಮಾಲೀಕನೊ ತಾನು ಮನೆಯೊಟ್ಟಿಗೆ ಆ ಇಡೀ ನಿವೇಶನ ಹಾಗೂ ಅದರಲ್ಲಿ ಇದ್ದಿರಬಹುದಾದ ಎಲ್ಲ ರೀತಿಯ ವಸ್ತುಗಳನ್ನೂ ಸೇರಿಸಿ ಮಾರಿದ್ದೆಂದೂ ಯಾವುದಕ್ಕೂ ಒಮ್ಮೆ ಮನೆಯನ್ನು ಮಾರಿದ ನಂತರ ತನ್ನ ಹಕ್ಕುದಾರಿಕೆಯಲ್ಲ ಮುಗಿದುಹೋಯಿತೆಂದು- ಹಾಗಾಗಿ ಆ ನಿಧಿ ತನಗಲ್ಲದೆ ಅವನಿಗೆಯೇ ಸೇರಿದ್ದೆಂದೂ ಉತ್ತರಿಸಿದನಂತೆ. ಪರಸ್ಪರ ಎಷ್ಟು ಬೇಡಿಕೊಂಡರೂ ಸಮಸ್ಯೆ ಬಗೆಹರಿಯದೆ ಅವರು ಕೊನೆಗೆ ಧರ್ಮರಾಯನ ಬಳಿ ತೆರಳಿದರು; ಅವನೆದುರೂ ಅವರ ವಾದಗಳನ್ನು ಮಂಡಿಸಿದರು. ಧರ್ಮರಾಯನಿಗೂ ತಕ್ಷಣಕ್ಕೆ ಪರಿಹಾರ ತೋಚದೆ ಆತ ತುಸು ಯೋಚಿಸಿ ಮರುದಿನ ನಿರ್ಣಯ ಕೊಡುತ್ತೇನೆಂದ. ಒಪ್ಪಿಕೊಂಡು ಹೋದ ಅವರು ಮರುದಿನ ಮತ್ತೆ ಅವನೆದುರು ಹಾಜರಾದರು. ಆದರೆ ಅಂದು ಮಾತ್ರ ಅವರಿಬ್ಬರ ಧಾಟಿಯೆ ಬದಲಾಗಿತ್ತು. ಹಳೆಯ ಮಾಲೀಕ ತಾನು ಮಾರಿದ್ದು ಮನೆ ಮತ್ತು ನಿವೇಶನವನ್ನಷ್ಟೆ ಹೊರತು ಆ ಜಾಗದಲ್ಲಿ ಅಡಗಿದ್ದ ನಿಧಿಯನ್ನಲ್ಲವೆಂದೂ, ಆ ಕಾರಣ ನಿಧಿ ತನಗೆಯೆ ಸೇರಿದ್ದೆಂದೂ ವಾದಿಸಿದರೆ; ಹೊಸ ಮಾಲೀಕ ತಾನು ಮನೆಯನ್ನು ಕೊಂಡಾದ ನಂತರ ಅದರ ನಿವೇಶನದಲ್ಲಿ ಅಕಸ್ಮಾತ್ತಾಗಿ ಸಿಗಬಹುದಾದ ಎಲ್ಲ ಸಂಪತ್ತಿಗೂ ತಾನೇ ಹಕ್ಕುದಾರನೆಂದೂ ಹಠ ಹಿಡಿದ. ವ್ಯಾಜ್ಯದ ಸೂಕ್ಷ್ಮತೆಗಿಂತ ಹೆಚ್ಚಾಗಿ ವಾದಿಗಳಲ್ಲಿ ಬದಲಾದ ನಿಲುವುಗಳಿಂದ ದಂಗಾದ ಧರ್ಮರಾಯ ಆಗ ಕಾಲಜ್ಞಾನಿಗಳಾದ ತನ್ನ ತಮ್ಮಂದಿರು ನಕುಲ-ಸಹದೇವರನ್ನು ಕರೆಸಿದ; ವಾದಿಗಳಲ್ಲಿ ರಾತ್ರೋರಾತ್ರಿ ಆದಂತ ಇಂಥ ವಿಲಕ್ಷಣ ಬದಲಾವಣೆಗೆ ಕಾರಣವೇನಿರಬಹುದೆಂದು ಕೇಳಿದ. ಅವರುಉತ್ತರಿಸಿದರು : ‘ದ್ವಾಪರಯುಗ ಸರಿದು ಕಲಿಯುಗ ಕಾಲಿಟ್ಟಿದೆ ಅಷ್ಟೆ’

ಹೀಗೆ, ಯುಗಪಲ್ಲಟದ ಪ್ರಕ್ರಿಯೆಯೆನ್ನುವುದು ಇಷ್ಟು ನಾಟಕೀಯವಾಗಿ ಆಗಬಹುದೆನ್ನುವ ಕಲ್ಪನೆ ನಮ್ಮ ಪೂರ್ವಿಕರಿಗಿತ್ತು. ಅಂಥ ದೃಷ್ಟಿಯಿಂದ ನೋಡಿದರೆ ಇಪ್ಪತ್ತನೆಯ ಶತಮಾನವೂ ಕಲಿಗಾಲವೆ, ಇಪ್ಪತ್ತೊಂದನೆಯ ಶತಮಾನವೂ ಕಲಿಗಾಲವೆ, ಇಪ್ಪತ್ತೆರಡನೆಯದೂ ಅಷ್ಟೆ. ಪುರಾಣ ಕಾಲಕಲ್ಪನೆಯಲ್ಲಿ ಇವೆಲ್ಲ ಕಲಿಯುಗದ ಮುಂದುವರೆದ ಭಾಗಗಳಷ್ಟೆ ಹೊರತು ಬಹಳ ದೊಡ್ಡ ಬದಲಾವಣೆಗಳ ಘಟ್ಟಗಳೇನಲ್ಲ.

ಕಾಲದ ಹರಿವನ್ನು ಇನ್ನೊಂದು ದೃಷ್ಟಿಕೋನದಿಂದಲೂ ನೋಡುವುದುಂಟು. ಇದು ಚರಿತ್ರೆಯ ದೃಷ್ಟಿಕೋನ. ಇಂದು ನಮ್ಮನ್ನು ಹೆಚ್ಚಾಗಿ ಆಳುತ್ತಿರುವುದೆ ಇದು. ನನಗನಿಸುತ್ತಿದೆ – ಸುಮಾರು ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ ಭಾರತದ ಬಹುಪಾಲು ಜನರಿಗೆ ತಾವು ಇಪ್ಪತ್ತನೆಯ ಶತಮಾನದಲ್ಲಿ ಬದುಕುತ್ತಿದ್ದೇವೆಂಬ ಕಲ್ಪನೆಯೆ ಇರಲಿಲ್ಲ. ಆದರೆ ಆನಂತರದಲ್ಲಿ, ವಿಶೇಷವಾಗಿ ಕಳೆದ ಇಪ್ಪತ್ತು-ಮೂವತ್ತು ವರ್ಷಗಳಿಂದೀಚೆಗಿನ ಅವಧಿಯಲ್ಲಿ, ಇಂಥ ಚಾರಿತ್ರಿಕ ಕಾಲಕಲ್ಪನೆ ನಮ್ಮಲ್ಲಿ ಬಲವಾಗಿ ಬೆಳೆಯುತ್ತ ಬಂದಿದೆ. ಎಷ್ಟರಮಟ್ಟಿಗೆಂದರೆ, ಇಂದಿನ ಭಾರತದಲ್ಲಿ ತಾವು ಇಪ್ಪತ್ತೊಂದನೆಯ ಶತಮಾನದಲ್ಲಿ ಬಾಳುತ್ತಿದ್ದೇವೆಂಬ ಕಲ್ಪನೆಯಿಲ್ಲದವರಿಗೆ ಚರಿತ್ರೆಯಲ್ಲಿ ಯಾವ ಸ್ಥಾನವೂ ಇಲ್ಲ, ಜಗತ್ತಿನಲ್ಲಿ ಯಾವ ಜೀವನೋಪಾಯವೂ ಇಲ್ಲ ಎನ್ನುವಂತಾಗಿ ಹೋಗಿದೆ. ಈ ಪ್ರಜ್ಞೆಗೆ ಹೊರತಾದವರು ಇಂದು ಬಹುಪಾಲು ಬಡವರೊ ಭಿಕ್ಷುಕರೊ ಆಗಿರುತ್ತಾರೆ.

ಇದು ಬಹಳಷ್ಟು ದೇಶಗಳ ಮಟ್ಟಿಗೂ ಸತ್ಯ. ಹಲವು ವರ್ಷಗಳ ಹಿಂದೆ ರಷಿಯಾಕ್ಕೆ ಭೇಟಿ ನೀಡಿದ್ದಾಗ ನಾನು ಕಂಡ ಪ್ರಸಂಗವೊಂದು ಇದನ್ನು ಪ್ರತಿಬಿಂಬಿಸುವಂಥದಾಗಿತ್ತು. ಆಗ ರಷಿಯಾದಲ್ಲಿ ಹಳೆಯ ಸರ್ವಾಧಿಕಾರಿ ಸ್ಟಾಲಿನ್ ತೀರಿಕೊಂಡು ಎಷ್ಟೋ ವರ್ಷಗಳು ಸಂದು ಬ್ರೆಜ್ನೆವ್ ಆಳ್ವಿಕೆ ಬಲವಾಗಿದ್ದ ಕಾಲ. ನಮ್ಮ ಪ್ರವಾಸದಲ್ಲಿ ಅತಿಥೇಯರು ನಮ್ಮನ್ನು ಮಾಸ್ಕೊದಲ್ಲಿದ್ದ ತಮ್ಮ ರಾಷ್ಟ್ರನಾಯಕ ಲೆನಿನ್‌ನ ಸಮಾಧಿಗೆ ಕರೆದೊಯ್ಯುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ನನಗೋ, ರಾಜಕಾರಣಿ ಲೆನಿನ್‌ಗಿಂತ ಲೇಖಕ ಟಾಲ್‌ಸ್ಟಾಯ್‌ಗೆ ಬಗ್ಗೆ ಹೆಚ್ಚು ಪ್ರೀತಿ-ಗೌರವ; ಮೊದಲು ಅವನ ಹಳ್ಳಿ-ಮನೆಗಳನ್ನು ನೋಡುವ ಹಂಬಲ. ನನ್ನ ಹಠಕ್ಕೆ ವ್ಯವಸ್ಥಾಪಕರು ಕೊನೆಗೂ ಮಣಿದರು. ದೂರದ ಟಾಲ್‌ಸ್ಟಾಯ್ ಊರಿಗೆ ಸಾಗುವಾಗ ಹಾದಿಯ ನಡುವೆ ಬಾಯಾರಿಸಿಕೊಳ್ಳಲೆಂದು ನಾವೆಲ್ಲ ರಸ್ತೆ ಬದಿಯ ಹೊಟೆಲೊಂದನ್ನು ಹೊಕ್ಕೆವು. ಅಲ್ಲಿ ಹೊಟೆಲ್‌ನ ಎದುರಿಗೆ ತುಂಬು ವೃದ್ಧೆ ಜಿಪ್ಸಿಯೊಬ್ಬಳು ಕುಳಿತಿದ್ದಳು; ಅಗಾಧ ದೇಹದ, ಸುಕ್ಕು ತುಂಬಿದ ಮುಖದ ಆಕೆ ಕಲ್ಲಿನ ಮೂರ್ತಿಯೊಂದು ಪ್ರತಿಷ್ಠಾಪಿತವಾದಂತೆ ಅಲ್ಲಾಡದೆ ಕುಳಿತಿದ್ದಳು. ನಾವು ಹೊಟೆಲಿನ ಬಾಗಿಲ ಬಳಿ ಹೋಗುತ್ತಿದ್ದಂತೆಯೆ ಆಕೆ, ನಾವು ಊರಿಗೆ ಹೊಸಬರೆನ್ನುವುದನ್ನು ಪತ್ತೆಹಿಡಿದೋ ಏನೋ, ನಮ್ಮನ್ನು ಕೈಮಾಡಿ ಕರೆದಳು. ಜೊತೆಗಿದ್ದ ದುಭಾಷಿ ಆಕೆಯ ಹತ್ತಿರ ಹೋಗಬಾರದೆಂದೂ, ಅಂಥವರು ಸಾಮಾನ್ಯವಾಗಿ ಅತಿಥಿಗಳ ಹಣ, ಕ್ಯಾಮೆರಾ ಇತ್ಯಾದಿಗಳನ್ನು ಕದಿಯುತ್ತಾರೆಂದೂ ನಮ್ಮನ್ನು ಎಚ್ಚರಿಸಿದ. ನಾನು ಅವಳಿಗೆ ಗಮನ ಕೊಡದೆಯೆ ಕುತೂಹಲದಿಂದ ಹತ್ತಿರ ಹೋಗುತ್ತಿದ್ದಂತೆಯೆ ಆಕೆ ತನ್ನ ರವಿಕೆಯೊಳಗಿಂದ ಪದವೊಂದನ್ನು ಹೊರತೆಗೆದು ‘ಸ್ಟಾಲಿನ್, ಸ್ಟಾಲಿನ್’ ಎಂದು ಹೆಮ್ಮೆಯಿಂದ ಹೇಳಿದಳು. ರಷಿಯನ್ ಮಿತ್ರರಲ್ಲಿ ವಿಚಾರಿಸಿದಾಗ ನನಗೆ ತಿಳಿದುಬಂದಿತು: ಹಿಂದೆ, ದೇಶದ ಜನಸಂಖ್ಯೆ ಕಡಿಮೆಯಿದ್ದಾಗ, ಹೆಚ್ಚು ಮಕ್ಕಳನ್ನು ಪಡೆದವರಿಗೆ ಸ್ಟಾಲಿನ್ ಇಂಥ ಪದಕ ಸಮೇತ ಪುರಸ್ಕಾರವನ್ನು ನೀಡುತ್ತಿದ್ದನಂತೆ. ಈಕೆ ಹನ್ನೆರಡು ಮಕ್ಕಳನ್ನು ಹೆತ್ತಿದ್ದರಿಂದ ಈಕೆಗೆ ಬಹುದೊಡ್ಡ ಪದಕವೆ ಸಿಕ್ಕಿತಂತೆ. ಜಿಪ್ಸಿ ವೃದ್ಧೆ. ಅದನ್ನೆ ಈಗ ಎಲ್ಲರಿಗೂ ತೋರಿಸಿ ಬೀಗುತ್ತಿದ್ದಳು. ತನ್ನ ಕಥೆ ಅತಿಥಿಗಳಿಗೂ ತಿಳಿಯಿತೆಂದು ಕಂಡ ಬಳಿಕ ಆಕೆ ನನ್ನ ಬಳಿ ಗುಟ್ಟಾಗಿ ಭಿಕ್ಷೆ ಬೇಡಿದಳು. ನನಗೆ ಅರ್ಧ ಗಾಬರಿಯೂ ಅರ್ಧ ಸಂತೋಷವೂ ಆದುವು. ಗಾಬರಿಯೇಕೆಂದರೆ, ಕಮ್ಯುನಿಸ್ಟ್ ರಷಿಯಾದಲ್ಲಿ ಭಿಕ್ಷೆ ಬೇಡುವುದೂ ಕೊಡುವುದೂ ಶಿಕ್ಷಾರ್ಹ ಅಪರಾಧಗಳಾಗಿದ್ದವು. ಅದೇ ಹೊತ್ತಿಗೆ, ಕಮ್ಯುನಿಸ್ಟರ ಮಾರ್ಗದ ಬಗ್ಗೆ ಕೆಲವೊಂದು ಮೂಲಭೂತ ಅನುಮಾನಗಳಿದ್ದ ನನಗೆ, ಸರ್ವಸಮಾನತೆಯನ್ನು ಸಾಧಿಸಿ, ಬಡತನವನ್ನು ಸಂಪೂರ್ಣ ಬಡಿದೋಡಿಸಿದ್ದೇನೆಂಬ ಅವರ ಮಾತು ಬರಿ ಬಡಾಯಿಯೆಂದು ತಿಳಿದು ಸಮಾಧಾನವಾಯಿತು. ನಾನೂ ಗುಟ್ಟಾಗಿ ಆ ಜಿಪ್ಸಿಗೆ ಒಂದಿಷ್ಟು ಹಣವನ್ನು ಕೊಟ್ಟೆ; ಆಕೆಯೂ ಅಷ್ಟೆ ಚುರುಕಾಗಿ ಯಾರ ಕಣ್ಣಿಗೂ ಕಾಣದಂತೆ ಅದನ್ನು ಜೇಬಿಗಿಳಿಸಿಕೊಂಡಳು. ಬ್ರೆಜ್ನೆವ್ ತನ್ನೆಲ್ಲ ಬಲವನ್ನು ಬಳಸಿ ಸ್ಟಾಲಿನ್‌ನ ನೆನಪೇ ಅಳಿಸಿಹೋಗುವಂತೆ ಆಳುತ್ತಿದ್ದ ಕಾಲವದು. ಆಗ ಎಲ್ಲೋ ಅಲ್ಲಿ ಇಲ್ಲಿ ಪರಮಾಪ್ತರ ನಡುವೆ ಪಿಸುಮಾತಿನಲ್ಲಿ ಸ್ಟಾಲಿನ್‌ನ ಪ್ರಸ್ತಾಪವಾಗುತ್ತಿತ್ತೆ ಹೊರತು ಸಾರ್ವಜನಿಕವಾಗಿ ಅವನ ಹೆಸರನ್ನೂ ಹೇಳುವಂತಿರಲಿಲ್ಲ. ಆಗ ಜನಸಾಮಾನ್ಯರಿರಲಿ ಕಮ್ಯುನಿಸ್ಟ್ ಪಕ್ಷದವರೂ ಸಹ ಆತ ಕೊಟ್ಟ ಪ್ರಶಸ್ತಿ-ಪದಕಗಳನ್ನು ತೋರಿಸಿ ಬೀಗುವುದು ಊಹೆಗೂ ಮೀರಿದುದಾಗಿತ್ತು. ಅಂಥ ಸಂದರ್ಭದಲ್ಲಿ ಆ ಜಿಪ್ಸಿ ಹೆಣ್ಣು ಇತಿಹಾಸದ ಬದಲಾವಣೆಗಳ ಪರಿವೆಯೆ ಇಲ್ಲದೆ ಬದುಕುತ್ತಿದ್ದಳು; ಬ್ರೆಜ್ನೆವ್ ಯುಗದಲ್ಲಿ ಸ್ಟಾಲಿನ್ ಯುಗವನ್ನು ನೆಚ್ಚಿಕೊಂಡಿದ್ದಳು. ಚರಿತ್ರೆಗೆ ಆಕೆಯನ್ನು ಸ್ಪರ್ಶಿಸಲು ಸಾಧ್ಯವಾಗಿರಲಿಲ್ಲ. ಚಾರಿತ್ರಿಕ ಅರ್ಥದಲ್ಲಿ ಆಕೆ ಕಾಲಾತೀತಳಾಗಿ ಜೀವಿಸಿಕೊಂಡಿದ್ದಳು.

ಹೀಗೆ ಚರಿತ್ರೆಯಿಂದ ಅಬಾಧಿತರಾಗಿರಬೇಕೆಂದರೆ ಒಂದೋ ಸದಾ ಸಂಚಾರಿಯಾಗಿರಬೇಕು; ಇಲ್ಲ ಇದ್ದಲ್ಲೆ ಇದ್ದುಬಿಡಬೇಕು. ಉದಾಹರಣೆಗೆ, ಕಲ್ಲು ಬಂಡೆ ಬೆಟ್ಟಗಳಿಗೆ, ಮರಗಿಡಗಳಿಗೆ ನಮ್ಮ ರೀತಿಯ ಚಾರಿತ್ರಿಕ ಕಾಲದ ಕಲ್ಪನೆಯಿರುವುದಿಲ್ಲ. ಹಾಗೆಯೆ ನೆಲೆಯೂರದೆ ನಿತ್ಯ ಅಲೆದಾಡುವ ಗೋಸಾಯಿ ಜಂಗಮರಿಗೂ ಸಹ. ಅಂಥವರಿಗೆ ಇಪತ್ತನೆಯ -ಇಪ್ಪತ್ತೊಂದನೆಯ ಶತಮಾನಗಳ ಲೆಕ್ಕವೆ ಇರದಿರುವುದು ಸಾಧ್ಯ. ಆದರೆ ನಮ್ಮಂಥ ಸಂಸಾರಿಗಳು, ಮಾರುಕಟ್ಟೆಯಲ್ಲಿ ಕೊಳ್ಳುವವರು – ಮಾರುವವರು, ಶಾಲಾ ಕಾಲೇಜು ಕಚೇರಿಗಳಿಗೆ ಹೋಗುವರಿಗೆ, ಅರ್ಥಾತ್ ಈ ನಾಗರಿಕತೆಯಿಂದ ಏನನ್ನಾದರೂ ಲಾಭ ಪಡೆಯುವರಿಗೆ ಮತ್ತು ಏನಾದರೂ ಕೊಡುಗೆ ನೀಡುವವರಿಗೆ ನಮ್ಮ ಚಾರಿತ್ರಿಕ ಕಾಲದ ಪರಿವೆಯಿಲ್ಲದೆಯೆ ಆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಸಾಧ್ಯ.

ಚರಿತ್ರೆಯ ಕಾಲಕಲ್ಪನೆಯನ್ನು ಅನುಸರಿಸದ ಜನ ಭಾರತದಲ್ಲಿ ಹಿಂದೆ ದೊಡ್ಡ ಸಂಖ್ಯೆಯಲ್ಲಿದ್ದರು, ಮಾತ್ರವಲ್ಲ ಇಂದಿಗೂ ಇದ್ದಾರೆ. ಓದು ಬರಹ ಬರದಿದ್ದರೂ ತಮ್ಮದು ಯಾವ ದಶಕ, ಯಾವ ಶತಮಾನವೆಂಬುದು ತಿಳಿಯದಿದ್ದರೂ ಇಂಥ ಜನರಿಗೆ ಇಂದು ಯಾವ ತಿಥಿ-ನಕ್ಷತ್ರ – ವಾರವೆಂಬುದರ ಅರಿವಿರುತ್ತದೆ. ಅಂದರೆ ಕಾಲದ ಹರಿವನ್ನು ಅಳೆಯಲು ಅವರು ಬಳಸುವ ಮಾನಗಳೆ ಬೇರೆ. ನಮ್ಮ ಕ್ಯಾಲೆಂಡರ್ ಅವರಿಗೆ ಗೊತ್ತಿಲ್ಲದಿದ್ದರೆ ಅವರ ಪಂಚಾಂಗ ನಮಗೆ ಗೊತ್ತಿರುವುದಿಲ್ಲ. ಹಾಗೆ ಪಂಚಾಂಗದ ಕಾಲದಲ್ಲಿ ಬದುಕುತ್ತಿದ್ದವರಿಗೆ, ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ತನಕವೂ, ತಾವು ಚಾರಿತ್ರಿಕ ಕಾಲಮಾನದ ಪ್ರಕಾರ ಇಪ್ಪತ್ತೊಂದನೆಯ ಶತಮಾನದಲ್ಲಿ ಬದುಕುತ್ತಿದ್ದೇವೆಂದು ತಿಳಿದುಕೊಳ್ಳುವ ಅಗತ್ಯವೂ ಇರಲಿಲ್ಲ. ಅಷ್ಟರಮಟ್ಟಿಗೆ ಅವನು ತಮ್ಮ ತಮ್ಮ ಪಾಡಿಗೆ ಬಾಳಿಕೊಂಡಿದ್ದರು. ಬ್ರಿಟಿಷರು ಬಂದು, ತಮ್ಮೊಡನೆ ಚಾರಿತ್ರಿಕ ಕಾಲಕಲ್ಪನೆಯನ್ನು ತಂದು, ಇಲ್ಲಿ ವರ್ಷಗಟ್ಟಲೆ ಅಧಿಕಾರ ಚಲಾಯಿಸಿದರೂ ಸಹ ಅವರಿಗೆ ಎಲ್ಲ ಭಾಋತೀಯರನ್ನೂ ಸ್ಪರ್ಶಿಸಲಾಗಲಿ ಆಳಲಾಗಲಿ ಆಗಲಿಲ್ಲ. ಅಸಂಖ್ಯ ಜನ ಅವರ ಪ್ರಭುತ್ವಕ್ಕೆ ಯಾವ ರೀತಿಯಲ್ಲೂ ಒಳಪಡದಂತಿದ್ದರು. ಹಾಗಾಗಿಯೆ ಗಾಂಧಿಗೆ ಅವರನ್ನೆಲ್ಲ ಸಂಘಟಿಸಿ ಅಂಥದೊಂದು ಚಳವಳಿಯನ್ನು ಹೂಡಲು ಸಾಧ್ಯವಾಯಿತು.

ಚಾರಿತ್ರಿಕ ಕಾಲಕಲ್ಪನೆ ಆಧುನಿಕ ಪ್ರಭುತ್ವ ಹಾಗೂ ಆಧುನಿಕ ನಾಗರಿಕತೆಯ ರೂಪದಲ್ಲಿಯೂ ಪ್ರಕಟಗೊಳ್ಳುತ್ತದೆ. ಆಧುನಿಕ ಸರ್ಕಾರಿ ವ್ಯವಸ್ಥೆಗಳು ನಾಗರಿಕತೆಯ ಚಾರಿತ್ರಿಕ ಅಭಿವೃದ್ಧಿಯ ಕಲ್ಪನೆಯೊಂದನ್ನು ಕಟ್ಟಿಕೊಂಡು, ತಮ್ಮ ಪ್ರಜೆಗಳನ್ನೆಲ್ಲ ಅದಕ್ಕೆ ಬಗ್ಗಿಸಲು ಪ್ರಯತ್ನಿಸುತ್ತವೆ. ಇಂಥ ವ್ಯವಸ್ಥೆ ಜನ-ಸಮುದಾಯ-ದೇಶಗಳನ್ನು ಮುಂದುವರೆದವರು ಮತ್ತು ಹಿಂದುಳಿದವರು ಎಂದು ತನ್ನ ಮೂಗಿನ ನೇರಕ್ಕೆ ವಿಂಗಡಿಸಿ, ಹಿಂದುಳಿದವರನ್ನು ಮುಂದೆ ತರುವ ನೆಪದಲ್ಲಿ ಅವರನ್ನೂ ತನ್ನ ಅಡಿಯಾಳುಗಳಾಗಿಸಿಕೊಳ್ಳಲು ಹವಣಿಸುತ್ತಿರುತ್ತದೆ. ವ್ಯವಸ್ಥೆಯನ್ನು ಯಾವ ರೀತಿಯಲ್ಲೂ ಗಣಿಸದೆ, ಯಾವ ರೀತಿಯಲ್ಲೂ ಅದನ್ನು ಆಧರಿಸದೆ ಸಂಪೂರ್ಣ ಸ್ವಾವಲಂಬಿಗಳಾಗಿ ಬಾಳುತ್ತಿರುವ ಜನ-ಜನಾಂಗಗಳು ನಮ್ಮಲ್ಲಿ ಇಂದಿಗೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಂಥವರನ್ನು ಒಲಿಸಿಕೊಳ್ಳಲೆಂದೆ ಸರ್ಕಾರಗಳು ಉಚಿತ ಧಾನ್ಯ-ದವಸ, ಅಗ್ಗ ದರದ ಸಕ್ಕರೆ – ಸೀಮೆಎಣ್ಣೆಯಂತಹ ಕಾರ್ಯಕ್ರಮಗಳನ್ನು ರೂಪಿಸುವುದು; ಆ ಮೂಲಕವಾದರೂ ಅವರಿಗೆ ತಮ್ಮ ಅಸ್ತಿತ್ವವನ್ನು ಮಹತ್ವವನ್ನು ಮನದಟ್ಟು, ಮಾಡಿಕೊಡಲು ಹೆಣಗುವುದು. ನಗರವಾಸಿಗಳು, ನೌಕರಸ್ಥರು, ಆಧುನಿಕ ನಾಗರಿಕತೆಯ ಭಾಗವಾಗಿರುವ ನಮಗಾದರೂ ನಮ್ಮ ದಿನನಿತ್ಯದ ವ್ಯವಹಾರ-ವಿಹಾರಗಳಲ್ಲಿ, ಸಂಬಳ-ಸಾರಿಗೆಗಳಲ್ಲಿ, ಬೆಲೆ-ತೆರಿಗೆಗಳಲ್ಲಿ ಸರ್ಕಾರದ ಅಸ್ತಿತ್ವ ಕ್ಷಣಕ್ಷಣಕ್ಕೂ ಕಾಣುತ್ತಿರುತ್ತದೆ; ಸರ್ಕಾರದ ಮೇಲಿನ ನಮ್ಮ ಅವಲಂಬನೆ ಪ್ರತಿಕ್ಷಣಕ್ಕೂ ಹೆಚ್ಚಾಗುತ್ತಿರುತ್ತದೆ. ಮೇಲೆ ವಿವರಿಸಿದಂಥವರಿಗೆ ಮಾತ್ರ ಎಷ್ಟೋ ಬಾರಿ ಸರ್ಕಾರದ ಅರ್ಥವೇ ತಿಳಿದಿರುವುದಿಲ್ಲ. ಆದರೆ, ಸರ್ಕಾರ ಅವರನ್ನು ಹೆಚ್ಚು ಹೆಚ್ಚು ಮುಟ್ಟುತ್ತಿದ್ದಂತೆ ಅವರಿಗೆ ತಾವು ಯಾವ ಶತಮಾನ ದಿನಮಾನದಲ್ಲಿ ಬದುಕುತ್ತಿದ್ದೇವೆಂಬ ಚಾರಿತ್ರಿಕ ಕಾಲಕಲ್ಪನೆಯೂ ಹೆಚ್ಚಾಗುತ್ತದೆ.

ಇಂಥ ಕಾಲಕಲ್ಪನೆಗಳಿಗೆ ರಾಜಕೀಯ ಆಯಾಮವೂ ಒಂದುಂಟು. ಉದಾಹರಣೆಗೆ : ನಾವಿಂದು ಹೆಚ್ಚು ಬದುಕುತ್ತಿರುವುದು ನಮ್ಮ ಪೂರ್ವಜರ ಕಲ್ಪನೆಯ ಕಾಲದಲ್ಲಲ್ಲ, ಬದಲಾಗಿ ಪಶ್ಚಿಮ ಸೃಷ್ಟಿಸಿದ ಕಾಲಕಲ್ಪನೆಯಲ್ಲಿ, ನಮ್ಮ ಪ್ರಸ್ತುತ ಅಭಿವೃದ್ಧಿಯ ಪರಿಕಲ್ಪನೆಗಳು ಬಹುಪಾಲು ಪಶ್ಚಿಮವನ್ನು ಅನುಸರಿಸುವಂಥವೆ ಆಗಿವೆ. ನಾವು ಚರಿತ್ರೆಯಲ್ಲಿ ಮುಂದುವರಿದಿದ್ದೇವೆಯೊ ಇಲ್ಲ ಹಿಂದುಳಿದಿದ್ದೇವೆಯೊ ಎನ್ನುವುದನ್ನು ಪಶ್ಚಿಮದ ಮಾನದಂಡಗಳ ಮೂಲಕ ಅಳೆದುಕೊಳ್ಳುತ್ತಿರುತ್ತೇವೆ. ಇದರ ಅರ್ಥ ಇಷ್ಟೆ; ನಮ್ಮ ಪ್ರಗತಿ-ವಿಗತಿಗಳನ್ನು ನಾಗರಿಕತೆ-ಅನಾಗರಿಕತೆಗಳನ್ನು ಅಂದರೆ ನಮ್ಮ ಇಡೀ ಯುಗಧರ್ಮವನ್ನು, ಆ ಮೂಲಕ ನಮ್ಮ ಮನೋಧರ್ಮವನ್ನು, ಪಶ್ಚಿಮವೇ ನಿಯಂತ್ರಿಸುತ್ತಿರುತ್ತದೆ. ಇದು, ಅಮೆರಿಕದಲ್ಲಿ ತಜ್ಞನೆಂದು ಹೆಸರು ಮಾಡಿದ ವೈದ್ಯನೊಬ್ಬ ಬಂದು ನಮ್ಮ ಪ್ರಧಾನಿಯವರ ಮಂಡಿಚಿಪ್ಪನ್ನು ಚಿಕಿತ್ಸೆ ಮಾಡುವುದರಿಂದ ಹಿಡಿದು, ನಮ್ಮದೊಂದು ಸರ್ಕಾರ ಯೋಗ್ಯವೊ ಅಯೋಗ್ಯವೊ ಎಂಬುದು ಅಮೆರಿಕದ ಅಧ್ಯಕ್ಷನ ಮೂಲಕ ನಿರ್ಣಯವಾಗುವುದರ ತನಕ ವ್ಯಾಪಿಸಿರುತ್ತದೆ. ಎಷ್ಟೋ ಬಾರಿ ನಮ್ಮ ದೇಶಗಳ ಒಳಗಿನ ಏಳು-ಬೀಳುಗಳಿಗು ಅಮೆರಿಕವೆ ಕಾರಣವಾಗಿರುತ್ತದೆ. ಇಪ್ಪತ್ತನೆಯ ಶತಮಾನದ ಬಹುಮುಖ್ಯ ವಿದ್ಯಮಾನಗಳಲ್ಲೊಂದಾದ ಕಮ್ಯುನಿಸ್ಟ್ ರಷಿಯಾ ಛಿದ್ರಗೊಂಡ ಹಿನ್ನಲೆಯನ್ನೆ ನೋಡಿ. ಅಮೆರಿಕೆಯ ಆಗಿನ ಅಧ್ಯಕ್ಷ ರೊನಾಲ್ಡ್ ರೇಗನ್, ಮುಂದೆಂದೊ ಒಂದು ದಿನ ರಷಿಯಾದೊಡನೆ ಬಾಹ್ಯಾಕಾಶದಲ್ಲಿ ಕಾದಾಡುವ ಸಂಭವ ಬರಬಹುದು. ಎನ್ನುವ ಹುಚ್ಚು ಕಲ್ಪನೆಯನ್ನು ನೆನಪಾಗಿಟ್ಟುಕೊಂಡು, ಅಪಾರ ವೆಚ್ಚ ‘ಸ್ಟಾರ್‌ವಾರ್ಸ್’ ಯೋಜನೆಯನ್ನು ರೂಪಿಸಿದ. ಅದರಡಿ ಅಮೆರಿಕ ಇನ್ನಿಲ್ಲದಂಥ ಬಾಹ್ಯಾಕಾಶ ಕ್ಷಿಪಣ-ಅಸ್ತ್ರ-ಉಪಗ್ರಹ- ತಂತ್ರೋಪಕರಣಗಳನ್ನು ಉತ್ಪಾದಿಸಿತು. ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಅದು ಅಷ್ಟು ಮೇಲುಗೈಯಾದುದನ್ನು ಕಂಡು ಕರುಬಿದ, ಕಳವಳಗೊಂಡ ರಷಿಯಾ ಅದನ್ನು ಮೀರಿಸಲೆಂದು ತಾನೂ ಅಗಾಧ ಪ್ರಮಾಣದ ಹಣವನ್ನು ಅಂಥದೆ ಚಟುವಟಿಕೆಗಳಿಗೆಂದು ವ್ಯಯಿಸಿತು. ಕೊನೆಗೂ ಇಬ್ಬರೂ ಅನುಮಾನಿಸಿದಂತಹ ಘೋರ ಯುದ್ಧವೇನೂ ನಡೆಯಲಿಲ್ಲ. ಆದರೆ, ಇಡಿ ಪ್ರಕರಣದ ವ್ಯಂಗ್ಯವೆಂದರೆ, ಹೊರಗಿನ ಬಲವನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಿಸಿಕೊಂಡ ರಷಿಯಾ ಒಳಗಿನ ಬಲವನ್ನು ಸಂಪೂರ್ಣ ಕಳೆದುಕೊಂಡು ಕುಸಿದುಹೋಯಿತು. ಅಸ್ತ್ರಗಳಿಗೆ ಅಪಾರ ಹಣ ಸುರಿದ ಸರ್ಕಾರ ಪ್ರಜೆಗಳಿಗೆ ಆಹಾರ ಕೊಡಲಾಗದೆ, ಆಂತಿಕ ಅಶಾಂತಿಗೆ ಹಾಗೂ ದೇಶ ವಿಭಜನೆಗೆ ತಾನೆ ಕಾರಣವಾಯಿತು; ಅನ್ಯ ರೀತಿಯಲ್ಲಿ ಬದುಕಹೊರಟು ಆತ್ಮನಾಶ ಕಂಡಿತು.

ಆಧುನಿಕ ಚೀನಾ ದೇಶದ್ದು ಮತ್ತೊಂದು ಬಗೆಯ ಕಥೆ. ಕ್ರಾಂತಿಯ ಉನ್ಮಾದದಲ್ಲಿ ಮಾವೋತ್ಸೆ ತುಂಗ್ ಹೊಸ ಚೀನಾವೊಂದನ್ನು ಕಟ್ಟಲೆಂದು ಒಂದು ‘ಲಾಂಗ್ ಮಾರ್ಚ್’ ನಡೆಸಿದ. ಆದರೆ ಅವನ ಕನಸಿನ ಕೊನೆಯೂ ಅಮೆರಿಕವೆ ಆಗಿದ್ದರಿಂದ ಅದು ಅಂತಿಮವಾಗಿ ‘ಲಾಂಗ್ ಮಾರ್ಚ್ ಟು ಕೊಕೋಕೋಲಾ’ ವಾಗಿ ಮಾರ್ಪಟ್ಟಿತು.

ಹೀಗೆ, ಇಪ್ಪತ್ತನೆಯ ಶತಮಾನದಲ್ಲಿ ಎಷ್ಟೊಂದು ದೇಶಗಳು, ಎಷ್ಟೊಂದು ಜನ ಸಮುದಾಯಗಳು ಸ್ವಾತಂತ್ರ್ಯವನ್ನು ಗಳಿಸಿಕೊಂಡವು, ಹಾಗಾಗಿ ಅದು ಸ್ವಾತಂತ್ರ್ಯ ಸಮೃದ್ಧಿಯ ಶತಮಾನವಲ್ಲವೆ ಎಂದು ನಾವು ಸಂಭ್ರಮಿಸುತ್ತಿರುವುಂತೆಯೆ, ಇದು ನಮ್ಮ ಭ್ರಮೆಯಷ್ಟೆ ಆಗಿರಬಹುದೆ ಎನ್ನುವ ಸಂದೇಹವೂ ಕಾಡತೊಡಗುತ್ತದೆ; ಶತಮಾನದ ಸತ್ಯದ ಮತ್ತೊಂದು ಮುಖ ಕಾಣತೊಡಗುತ್ತದೆ. ಇಪ್ಪತ್ತನೆಯ ಶತಮಾನದ ಕೊನೆಯ ಕೆಲವು ವರ್ಷಗಳಲ್ಲಂತೂ ಆ ಶತಮಾನದ ಚರಿತ್ರೆ ಹಾಗೂ ಸ್ವರೂಪವನ್ನು ಒಂದೆ ರಾಷ್ಟ್ರ ನಿರ್ಧರಿಸುತ್ತಿದೆ ಎನ್ನುವುದು ಸ್ಪಷ್ಟವಾಗಲಾರಂಭಿಸಿತು. ಹೀಗೆ, ಇಪ್ಪತ್ತನೆಯ ಶತಮಾನ, ನಾವು ನಮ್ಮ ನಮ್ಮ ಜೀವನಕ್ರಮಗಳನ್ನು ಅನುಸರಿಸುವ ಅವಕಾಶಗಳನ್ನು ಹಾಗೂ ನಮ್ಮ ನಮ್ಮ ಬಹುರೂಪಿ ಸಂಸ್ಕೃತಿಗಳನ್ನು ಕಾಪಾಡಿಕೊಳ್ಳುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ ಕಾಲಘಟ್ಟವೂ ಆಗಿದೆ; ಇದೀಗ ಪ್ರಾರಂಭವಾಗಿರುವ ಇಪ್ಪತ್ತೊಂದನೆಯ ಶತಮಾನ ಈ ಪ್ರಕ್ರಿಯೆಯನ್ನು ಮುಂದುವರೆಸಿ ಪೂರ್ಣಗೊಳಿಸುವಂತೆ ಕಾಣುತ್ತಿದೆ.

ಇಲ್ಲಿಯೂ ಒಂದು ದ್ವಂದ್ವವಿದೆ. ಈ ಎರಡು ಶತಮಾನಗಳ ಇಂಥ ಪ್ರಕ್ರಿಯೆಯಿಂದ ಬರಿಯೆ ಕೆಟ್ಟದ್ದೆ ಹೊರತು ಒಳ್ಳೆಯದೇನೂ ಸಾಧ್ಯವಿಲ್ಲ ಎಂದೇನಿಲ್ಲ. ಅದರಲ್ಲಿ ಒಳ್ಳೆಯದರ ಸಾಧ್ಯತೆಯೆ ಇಲ್ಲದಿದ್ದಲ್ಲಿ ಬಹುಜನರು ಅದನ್ನು ಹೀಗೆ ಆಶ್ರಯಿಸುತ್ತಿರಲಿಲ್ಲ. ಪ್ರತಿಷ್ಠಿತ ಹಾಗೂ ಅಧಿಕಾರಾರೂಢ ಸಂಗತಿ-ಶಕ್ತಿಗಳಿಗೆ ಯಾವಾಗಲೂ ಒಂದು ಆಕರ್ಷಣೆಯ ಗುಣವಿರುತ್ತದೆ. ಹಾಗೆಯೆ, ನಾವು ಕನಸಿನಲ್ಲಿ ಕಲ್ಪಿಸಿಕೊಂಡು ಹೇಳುವ ವಿಷಯಗಳಿಗೆ ಇನ್ನೊಂದೆ ರೀತಿಯ ಆಕರ್ಷಕ ಶಕ್ತಿಯಿರುತ್ತದೆ. ವಾಸ್ತವ ಹಾಗೂ ಕಲ್ಪನೆಗಳ ನಡುವೆ ಈ ವೈರುಧ್ಯ ಎಂದಿಗೂ ಸಮಸ್ಯಾತ್ಮಕವಾದುದು. ಬದುಕಿನ ಆದರ್ಶ ಕ್ರಮವೆಂದು ನಾವು ಕಲ್ಪಿಸಿಕೊಂಡದ್ದು ಒಂದಾಗಿರುತ್ತದೆ; ವಾಸ್ತವದಲ್ಲಿ ನಾವು ಬದುಕು ನಡೆಸುವ ಕ್ರಮ ಬೇರೆಯಾಗಿರುತ್ತದೆ. ಉದಾಹರಣೆಗೆ; ಟೆಲಿವಿಷನನ್ನು ಅದರಲ್ಲಿಯ ಕಾರ್ಯಕ್ರಮಗಳನ್ನು ಎಷ್ಟೇ ಖಂಡಿಸಿದರೂ ಸಹ ನಾವು ಸಂಜೆ ಮನೆಗೆ ಮರಳುತ್ತಿದ್ದಂತೆಯೆ ಅದೇ ಕಾರ್ಯಕ್ರಮಗಳನ್ನು ನೋಡುತ್ತಾ ಗಂಟೆಗಟ್ಟಲೆ ಕಾಲ ಕಳೆಯುತ್ತೇವೆ. ಪಾಶ್ಚಿಮಾತ್ಯ ವಿಜ್ಞಾನವನ್ನು ಎಷ್ಟು ಟೀಕಿಸಿದರೂ ಕೂಡ ನಮ್ಮ ನಿತ್ಯಕ್ರಿಯೆಗಳಲ್ಲಿ ಅದಕ್ಕೆ ಜೋತುಬೀಳುತ್ತೇವೆ. ಅವರ ನಾಗರಿಕತೆಯನ್ನು ಚಿಂತನೆಯ ಸ್ತರದಲ್ಲಿ ತಿರಸ್ಕರಿಸುತ್ತಿರುವ ವೇಳೆಯಲ್ಲಿಯೆ ಅದರ ಒಂದೊಂದೆ ಅಂಶವನ್ನು ಅಳವಡಿಸಿಕೊಳ್ಳುತ್ತಿರುತ್ತೇವೆ. ಎಷ್ಟೋ ಬಾರಿ ನಮಗೆ ವೈಯಕ್ತಿಕವಾಗಿ ಇಷ್ಟವಿಲ್ಲದ್ದನ್ನು ಮನೆಯವರಿಗಾಗಿ ಮಕ್ಕಳಿಗಾಗಿ ಸಹಿಸಿಕೊಂಡು ನಿಧಾನವಾಗಿ ಅದಕ್ಕೆ ಹೊಂದಿಕೊಳ್ಳಲಾರಂಭಿಸುತ್ತೇವೆ. ಹೀಗೆ ನಾವು ಬಹುಜನರು ಬದುಕು ಸಾಗಿಸುವ ಕ್ರಮದಲ್ಲಿಯೇ ಅನೇಕ ಅನ್ಯ ಸಂಸ್ಕೃತಿಗಳ ಸಂಗತಿಗಳಿಗೆ ವಾದಾತೀತವಾದ ಶಕ್ತಿಯೊಂದು ಲಭಿಸಿರುತ್ತದೆ.

ಹಿಂಗೆ, ಅನ್ಯವನ್ನು ಹೀಗೆ ಒಳಬಿಟ್ಟುಕೊಳ್ಳುವುದನ್ನು ತಡೆಯುವ ಅನೇಕ ಕ್ರಮಗಳು ನಮ್ಮಲ್ಲಿದ್ದವು. ನಮ್ಮ ಪೂರ್ವಜರ ಮಡಿವಂತಿಕೆ, ಸಂಪ್ರದಾಯ ಶರಣತೆಗಳು ಅಂಥ ತಡೆಗೋಡೆಗಳಾಗಿದ್ದವು. ಇವನ್ನು ಭಾರತದ ಎಲ್ಲ ಜಾತಿಮತಗಳವರೂ ಪರಿಪಾಲಿಸುತ್ತಿದ್ದರು; ತಿನ್ನುವುದು-ಕುಡಿಯುವುದು, ಉಡುವುದು-ಕೂಡುವುದು ಇತ್ಯಾದಿಯಾಗಿ ಜೀವನದ ಎಲ್ಲ ಚಟುವಟಿಕೆಗಳಲ್ಲಿಯೂ ಇದನ್ನು ಅನುಸರಿಸುತ್ತಿದ್ದರು. ಆ ಮೂಲಕ, ಇಡಿಯ ವಿಶ್ವವೆ ಒಂದು ದಾಳಿಯಿಟ್ಟರೂ ಅದನ್ನು ಪ್ರತಿರೋಧಿಸುವಂತಹ ಶಕ್ತಿ ನಮ್ಮ ಸಮುದಾಯಗಳಿಗಿತ್ತು.

ಹಿಂದಿನ ಭಾರತ, ತಾನು ಯಾವ ಶತಮಾನದಲ್ಲಿ ಬದುಕಿದ್ದೇನೆ ಎನ್ನುವುದನ್ನು ಅರಿಯದ ಭಾರತ ಅನ್ಯದ ಅತಿಪ್ರಭಾವವನ್ನು ಹೀಗೆ ಶಿಷ್ಟತೆ-ಅಶಿಷ್ಟತೆ, ಸಭ್ಯತೆ-ಅಸಭ್ಯತೆ, ರುಚಿ-ಅರುಚಿಗಳ ಪರಿಕಲ್ಪನೆಗಳ ಮೂಲಕ ತಡೆಯಲೆತ್ನಿಸಿತ್ತು; ‘ನಪ್ರಮದಿತವ್ಯಂ’ ‘ಇದನ್ನು ದಾಟತಕ್ಕದಲ್ಲ’ ಎನ್ನುವಂತಹ ಬುದ್ಧಿ-ಭಾವ ಜನ್ಯವಾದ ನಿರ್ದೇಶನಗಳಿಂದ ತನ್ನನ್ನು ಕಾಪಾಡಿಕೊಳ್ಳಲೆತ್ನಿಸಿತ್ತು. ಆದರೆ ಆಧುನಿಕ ವೈಚಾರಿಕವಾದ ನಾವು ಅದನ್ನು ಸಂಕುಚಿತ ಮನೋಭಾವ ಎಂದು ಖಂಡಿಸಿದೆವು; ಅದನ್ನು ನಾಶಗೊಳಿಸಿ ಹೊಸದೊಂದು ಸಮಾಜವನ್ನು ಕಟ್ಟಲೆಳಸಿದೆವು. ಅಂದು ಹಾಗೆ ನಡೆದುಕೊಂಡದ್ದರ ಬಗ್ಗೆ ನನಗೆ ವಿಷಾದವೇನಿಲ್ಲ; ಅದು ಆ ಚಾರಿತ್ರಿಕ ಸಂದರ್ಭದ ಅನಿವಾರ್ಯತೆಯಾಗಿತ್ತೆಂದೇ ಭಾವಿಸುವವನು ನಾನು. ಆದಾಗ್ಯೂ, ಇಂದು ಬೇರೊಂದೆ ಗೊಂದಲ ನಮ್ಮನ್ನು ಕಾಡತೊಡಗಿದೆ; ಆಧುನಿಕ ಪಶ್ಚಿಮದ ಆಕ್ರಮಣದೆದುರು ನಮ್ಮ ನಮ್ಮ ಸ್ವಂತಿಕೆಯನ್ನು ಸಂರಕ್ಷಿಸಿಕೊಳ್ಳುವ ಕ್ರಮ ಯಾವುದಿರಬಹುದೆಂಬುದು ತೋಚದಾಗಿದೆ. ಮಾರ್ಕ್ಸ್‌ವಾದಕ್ಕೆ ಅಂಥ ಶಕ್ತಿಯಿದೆಯೆಂದು ನಾವುಕೆಲವರು ಹಿಂದೊಮ್ಮೆ ನಂಬಿಕೊಂಡಿದ್ದುಂಟು. ಆ ಭ್ರಮ ಬಹುಬೇಗನೆ ಕಳೆದುಹೋಯಿತು; ಎಷ್ಟರಮಟ್ಟಿಗೆ ಎಂದರೆ ಸ್ವತಃ ಮಾರ್ಕ್ಸ್‌ವಾದವೇ ತನ್ನನ್ನು ಉಳಿಸಿಕೊಳ್ಳುವಲ್ಲಿ ಸೋತುಹೋಯಿತು. ಹೀಗೆ, ಹಿಂದೆ ನಿಜ ಕಾರಣಗಳಿಗಾಗಿಯೆ ಪರಂಪರೆಯನ್ನು ಧಿಕ್ಕರಿಸಿದ್ದ ನಮಗೆ ಇಂದು ಅದರ ಮತ್ತೊಂದು ಮಗ್ಗಲು ಅರಿವಿಗೆ ಬರತೊಡಗಿದೆ; ಸಂಸ್ಕೃತಿಗಳಿಗೆ ರಾಜಕೀಯ ಶಕ್ತಿಯೂ ಇರುತ್ತದೆಯೆಂಬುದು ಅಸ್ಪಷ್ಟವಾಗಿಯಾದರೂ ಗೋಚರಿಸತೊಡಗಿದೆ.

*

ಕಳೆದ ಶತಮಾನದ ವಿದ್ಯಮಾನಗಳು ತಂದಿಟ್ಟ, ಈ ಶತಮಾನ ಇನ್ನಷ್ಟು ತೀವ್ರಗೊಳಿಸುತ್ತಿರುವ, ಇಂಥ ಸವಾಲುಗಳನ್ನು ಎದುರಿಸುವುದು ಹೇಗೆ? ನಮ್ಮ ಮನಸ್ಸು ಭಾಷೆ ಸಂಸ್ಕೃತಿ ಸ್ವಂತಿಕೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಇಂಥ ಬಿಕ್ಕಟ್ಟನ್ನು ಬಗೆಹರಿಸುವುದು ಕಡುಕಷ್ಟದ ಮಾತೆ ಹೌದು. ಈ ರೀತಿಯ ಸನ್ನಿವೇಶಗಳಲ್ಲಿ ಹಲವರು ಹಲವು ಬಗೆಗಳಲ್ಲಿ ಪ್ರತಿಸ್ಪಂದಿಸುವುದುಂಟು.

ಉದಾಹರಣೆಗೆ – ಕೆಲವು ತಿಂಗಳುಗಳ ಹಿಂದೆ ಅಮೆರಿಕದ ಹೂಸ್ಟನ್ ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನವೊಂದು ನಡೆಯಿತು. ಬಹುಪಾಲು ಬಲು ಶ್ರೀಮಂತರಾದ ಅಮೆರಿಕ ಕನ್ನಡಿಗರು ಸಹಜವಾಗಿಯೆ ಆ ಸಮಾರಂಭವನ್ನು ಆಯೋಜಿಸುವಲ್ಲಿ ಹೇರಳ ಹಣ ವ್ಯಯಿಸಿದ್ದರು. ಅಲ್ಲಿ ಸ್ವಲ್ಪ ಕಾಲ ಕಳೆಯುತ್ತಿದ್ದಂತೆಯೆ ನನಗೆ ವಿಚಿತ್ರ ಅನುಮಾನವೊಂದು ಕಾಡತೊಡಗಿತು. ಅತ್ಯುತ್ಸಾಹದಿಂದ ಕಾರ್ಯಕ್ರಮವನ್ನು ಸಂಘಟಿಸಿದ್ದ ಹಿರಿಯರಿಗಲ್ಲ ತಮ್ಮ ಮೂಲ ನಾಡು-ಭಾಷೆಗಳ ಬಗ್ಗೆ ಅತೀವ ಪ್ರೀತಿಯಿದ್ದುದೇನೊ ನಿ. ಆದರೆ ಅವರು ೧೯೫೦-೬೦-೭೦ ರ ದಶಕಗಳಲ್ಲಿ ಇಲ್ಲಿ ಓದಿದ್ದ ಕನ್ನಡವನ್ನೆ ಪರಮ ಕನ್ನಡವೆಂದು ಭಾವಿಸಿಕೊಂಡಿದ್ದರು. ಆ ನಂತರದ ಕನ್ನಡದ ಬಗ್ಗೆ ಅವರಿಗೆ ಅರಿವಾಗಲಿ ಆಸಕ್ತಿಯಾಗಲಿ ಇದ್ದಂತೆ ತೋರಲಿಲ್ಲ. ಕನ್ನಡದ ಚಾರಿತ್ರಿಕ ಕಾಲಮಾನವನ್ನು ಅನುಸರಿಸಿ ಹೇಳುವುದಾದರೆ, ಅವರು ಗತಕನ್ನಡ ಕಾಲದಲ್ಲಿ ವಿಹರಿಸುತ್ತಿದ್ದರು, ಹರ್ಷಿಸುತ್ತಿದ್ದರು. ಇನ್ನು, ಅವರ ಮಕ್ಕಳು ಮೊಮ್ಮಕ್ಕಳು ಬಹುಪಾಲು ಹೊಂದಿದ್ದುದು ಕನ್ನಡದ ಪ್ರಾಥಮಿಕ ಪರಿಚಯವನ್ನು ಮಾತ್ರ. ಅದೂ ಕ್ರಮೇಣ ಸಂಪೂರ್ಣ ಅಳಿಸಿಹೋಗುವಂಥದ್ದೆ. ಇದೇ ರೀತಿ ಅಲ್ಲಿಯ ಭಾರತೀಯ ತಮ್ಮ ಮೂಲ ಸಂಸ್ಕೃತಿ ಹಾಗೂ ದೇಶದ ನೆನಪನ್ನು ಉಳಿಸಿಕೊಳ್ಳಲೆಂದು ದಸರಾ ದೇಪಾವಳಿ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ. ಒಂದು ಅರ್ಥದಲ್ಲಿ, ತಮ್ಮ ಗುರುತನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರಿಗೆ ಭಾಷೆಗಿಂತ ಧಾರ್ಮಿಕ ಆಚರಣೆಗಳು ಹಾಗೂ ದೇವಸ್ಥಾನಗಳು ಹೆಚ್ಚು ಮುಖ್ಯವಾಗಿವೆ. ಆ ದೇವಸ್ಥಾನಗಳೊ ಇಲ್ಲಿಯವರ ಕಣ್ಣಿಗೆ ಷಾಪಿಂಗ್ ಕಾಂಪ್ಲೆಕ್ಸುಗಳಂತೆ ಕಾಣುವುದುಂಟು. ಅಲ್ಲಿ ಶಿವನನ್ನು ಒಂದಿಷ್ಟು ವಿಷ್ಣುವನ್ನು ಒಂದಿಷ್ಟು, ಗ್ರಹಗಳನ್ನು ಒಮದಿಷ್ಟು, ಕೊಳ್ಳಬಹುದೆಂಬಂತೆ ತೋರುತ್ತದೆ. ಅಲ್ಲಿ ತೀರ್ಥ ಪ್ರಸಾದಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ಕೊಡುತ್ತಾರೆ; ಆ ದೇಗುಲಗಳು ಒಂದೆಡೆ ಸಾಂಪ್ರದಾಯಿಕ ಮಡಿಮೈಲಿಗೆಯ ಕಲ್ಪನೆಯನ್ನು ಬಿಟ್ಟುಕೊಟ್ಟಂತೆಯೂ, ಇನ್ನೊಂದೆಡೆ ಆಧುನಿಕ ಶುಚಿ-ಅಶುಚಿಗಳ ಮಡಿವಂತಿಕೆ ಅಂಟಿಕೊಂಡಂತೆಯೂ ತೋರುತ್ತವೆ. ಆಸ್ಪತ್ರೆಗಳಂತೆ ಅತಿಸ್ವಚ್ಛವಾಗಿರುವ ಆ ದೇವಸ್ಥಾನಗಳಿಗೆ ನಮ್ಮ ಇಲ್ಲಿಯ ದೇವಸ್ಥಾನಗಳಿಗಿರುವ ‘ಕಾರಣಿಕ’ ಇರಲು ಸಾಧ್ಯವಿಲ್ಲ. ಅಂಥ ದೇವಸ್ಥಾನವಲ್ಲದ ದೇವಸ್ಥಾನಗಳ ಮೂಲಕವಾಗಿಯಾದರೂ ಅವರು ತಾವು ನಗಣ್ಯರಾಗುವುದನ್ನು; ಅಮೆರಿಕೆಯಲ್ಲಿ ಅನಾಮಿಕರಾಗುವುದನ್ನು ತಡೆಯಲು ಯತ್ನಿಸುತ್ತಿರುತ್ತಾರೆ.

ಇದಕ್ಕೆ ತೀರಾ ಭಿನ್ನವಾದ ಇನ್ನೊಂದು ಮಾದರಿಯೂ ಉಂಟು. ವಿದೇಶಿ ಭಾರತೀಯರಲ್ಲಿ ಮೂಲ ಗುಜರಾತಿಗಳ ಬಹುದೊಡ್ಡ ಸಮುದಾಯವೊಂದಿದೆ. ಈ ಗುಜರಾತಿಗಳು ಬಹುಮಟ್ಟಿಗೆ ಬಡ ಹಾಗೂ ಮಧ್ಯಮ ಮಾರ್ಗಗಳಿಗೆ ಸೇರಿದವರು. ಚಾಕರಿ ಹುಡುಕಿ ಅನ್ಯ ದೇಶಗಳಿಗೆ ತೆರಳುವ ಇವರು ಅಲ್ಲಿ ನೆಲೆಯೂರಿ ನಿಂತ ಮೇಲೆ ತಮ್ಮ ಅಪ್ಪ – ಅಮ್ಮ-ತಮ್ಮ-ತಂಗಿ-ಭಾವ-ಮೈದುನರೆಲ್ಲರನ್ನೂ ತಮ್ಮಲ್ಲಿಗೆ ಕರೆಸಿಕೊಳ್ಳುತ್ತಾರೆ; ಎಲ್ಲ ಸೇರಿ ಅಂಗಡಿಗಳನ್ನು ಹೊಟೆಲ್‌ಗಳನ್ನು ಮೊಟೆಲ್‌ಗಳನ್ನು ನಡೆಸುತ್ತ-ಅಂದರೆ ಸರ್ವಸಾಮಾನ್ಯವಾಗಿ ದೈಹಿಕ ಶ್ರಮದ ಕೆಲಸ ಮಾಡುತ್ತ-ಯಥೇಚ್ಛ ಹಣಗಳಿಸುತ್ತಾರೆ. ಇಷ್ಟಾದರೂ ಅವರು ತಮ್ಮ ಮೂಲ ಗುಜರಾತಿ ಸಂಸ್ಕೃತಿಯನ್ನು ಕಳೆದುಕೊಳ್ಳುವುದಿಲ್ಲ. ಹಬ್ಬ ಹರಿದಿನಗಳು, ಮದುವೆ-ಮುಂಜಿಗಳು ಹಾಡು ಕುಣಿತಗಳೆಲ್ಲದರಲ್ಲಿ ಅವರು ತಮ್ಮತನವನ್ನು ಬಹುಪಾಲು ಉಳಿಸಿಕೊಂಡಿರುತ್ತಾರೆ.

ಇವೆರಡು ಮಾದರಿಗಳನ್ನು ನೋಡುತ್ತ ನನಗೊಂದು ವಿಷಯ ಹೊಳೆಯಿತು. ನನ್ನ ಈ ಸೂತ್ರೀಕರಣದಲ್ಲಿ ಕೊಂಚ ಉತ್ಪ್ರೇಕ್ಷೆಯಿರುವುದು ನಿಜ; ಆದರೆ ಅದು ಸದ್ಯದ ವಾಸ್ತವವನ್ನು ಬಹು ಸೂಕ್ತವಾಗಿ ಪ್ರತಿಬಿಂಬಿಸುತ್ತದೆಯೆಂದು ನಾನು ತಿಳಿದಿದ್ದೇನೆ. ಆ ಸೂತ್ರ ಇದು; ನಮ್ಮಲ್ಲಿಯ ಬುದ್ಧಿವಂತರೆಲ್ಲ ಇಂದು ಹೆಚ್ಚಾಗಿ ಮೆಡಿಸಿನ್, ಇಂಜಿನಿಯರಿಂಗ್, ಕಂಪ್ಯೂಟರ್‌ಸೈನ್ಸ್‌ಗಳಂತಹ ಆಧುನಿಕ ವೃತ್ತಿಕ್ಷೇತ್ರಗಳತ್ತ ವಾಲುತ್ತಿದ್ದಾರೆ. ಇಂಥ ವರ್ಗಕ್ಕೆ ತನ್ನ ಮೂಲ ಭಾಷೆಯನ್ನು ಉಳಿಸಿಕೊಳ್ಳುವ ಯಾವ ಅನಿವಾರ್ಯತೆಯೂ ಇಲ್ಲ. ಹಾಗೆ ನೋಡೊದರೆ, ತಮ್ಮ ತಮ್ಮ ಭಾಷೆಗಳನ್ನು ಬಿಟ್ಟು ಇಂಗ್ಲಿಷನ್ನು ಕಲಿಯುವುದರಲ್ಲಿಯೇ ಅವರಿಗೆ ಹೆಚ್ಚು ಲಾಭವಿರುವುದು. ಕನ್ನಡದಂತಹ ಭಾಷೆಗಳು ಇವರಿಗೆ ಯಾವ ರೀತಿಯಲ್ಲೂ ಜೀವನೋಪಾಯದ ಹಾಗೂ ಧನಸಂಪಾದನೆಯ ಮಾರ್ಗಗಳಾಗಲಾರವು. ಅದೇ ಮೇಲೆ ಪ್ರಸ್ತಾಪಿಸಿದ ಗುಜರಾತಿಗಳಂತೆ ಪಾರಂಪರಿಕ ವೃತ್ತಿಗಳಲ್ಲಿ ತೊಡಗಿಕೊಂಡವರಿಗೆ ತಮ್ಮ ಮೂಲ ಭಾಷೆಯನ್ನು ಬಿಟ್ಟುಕೊಡಬೇಕಾದಂತಹ ಲೌಕಿಕ ಒತ್ತಡವೇನಿಲ್ಲ.

ಹೀಗೆ, ವೃತ್ತಿ ಸಂಬಂಧಿ ಒತ್ತಡದಿಂದ ಪರಭಾಷೆಯನ್ನು ಆಧರಿಸಬೇಕಾದವರು ಸಾಮಾನ್ಯವಾಗಿ ಭಾವನಾತ್ಮಕ ಇಲ್ಲವೇ ಆಧ್ಯಾತ್ಮಿಕ ಪ್ರೇರೇಪಣೆಯಿಂದ ತಮ್ಮ ಸ್ವಂತ ಭಾಷೆಯನ್ನು ಹೇಗಾದರು ಉಳಿಸಿಕೊಳ್ಳಲು ಹೆಣಗುತ್ತಾರೆ. ಹೀಗೊಂದು ಭಾಷೆಯನ್ನು ಉಳಿಸಿಕೊಂಡಲ್ಲಿ ಅದು ನಿಜವಾಗಿ ಉಳಿದಂತಾಗುವುದಿಲ್ಲ. ಅದು ದೈನಂದಿನ ವ್ಯವಹಾರ-ವೃತ್ತಿಗಳಲ್ಲಿ ಬಳಕೆಯಾದಾಗಲಷ್ಟೆ ನಿಜವಾಗಿ ಉಳಿದಂತಾಗುವುದು.

ಈ ಪ್ರಕ್ರಿಯೆಗೆ ಇನ್ನೂ ಒಂದು ಆಯಾಮವಿದೆ. ಇಪ್ಪತ್ತನೆಯ ಶತಮಾನದ ಬಹುಮುಖ್ಯವಾದೊಂದು ಧ್ಯೇಯ ಕಾರ್ಲ್‌ಮಾರ್ಕ್ಸ್‌ನ ‘ಜಗತ್ತಿನ ಶ್ರಮಜೀವಿಗಳೆ, ಎಲ್ಲ ಒಂದಾಗಿ’ ಎನ್ನುವ ಕರೆಯನ್ನು ಪ್ರತಿಧ್ವನಿಸುವಂಥದ್ದಾಗಿತ್ತು. ಈಗ, ಅದೆ ಶತಮಾನದ ಅಂತ್ಯಭಾಗದಲ್ಲಿ, ಆ ಧ್ಯೇಯ ‘ಜಗತ್ತಿನ ಪ್ರತಿಷ್ಠಿತರೆ, ಪ್ರಬಲರೆ, ಎಲ್ಲ ಒಂದಾಗಿ’ ಎಂದು ತಿರುಚಿಹೋಗಿರುವಂತೆ ತೋರುತ್ತಿದೆ. ಜಾಗತೀಕರಣದ ಒಂದು ಅಕಲ್ಪಿತ ಫಲವೆಂಬಂತೆ ಜಗತ್ತಿನ ಅಧಿಕಾರಸ್ಥರೆಲ್ಲ ಹೀಗೆ ಸಂಘಟಿತರಾಗಿರುವಂತಿದೆ. ಇದು ಯಾವ ನಿರ್ಣಾಯಕ ಹಂತವನ್ನು ಮುಟ್ಟಿದೆಯೆಂದರೆ-ಹಿಂದೆ ಇಡೀ ಜಗತ್ತನ್ನಾಳಿದ ಯುರೋಪಿನ ಒಳಗಡೆಯೆ ಇಂದು ಸಣ್ಣ ಸಣ್ಣ ಭಾಷೆಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಸೆಣಸಾಡುತ್ತಿವೆ. ಇವು ಸಣ್ಣ ಸಮುದಾಯಗಳಿಗೆ ಸೇರಿದವಾದರೂ ಶ್ರೀಮಂತ ಭಾಷೆಗಳು. ಉದಾಹರಣೆಗೆ, ಕಿರ್ಕ್‌‌ಗಾರ್ಡ್ ನಂತಹ ಧೀಮಂತ ಚಿಂತಕನನ್ನು ರೂಪಿಸಿದ ಡ್ಯಾನಿಷ್ ಭಾಷೆಯಾಡುವ ಡೆನ್ಮಾರ್ಕ್ ದೇಶ ಇಂದು ಹೊಸ ಏಕರೂಪತೆಯ ಸಂಕೇತವಾದ ಯುರೊ ಡಾಲರ್ ವ್ಯವಸ್ಥೆಯನ್ನು ಪ್ರತಿಭಟಿಸುತ್ತಿದೆ. ಆರ್ಥಿಕ ಒಡಂಬಡಿಕೆಯ ಸಂಗತಿಯೊಂದು ತಮ್ಮ ಸಾಂಸ್ಕೃತಿಕ ಅಸ್ತಿತ್ವವನ್ನೆ ಅಲುಗಾಡಿಸಬಹುದೆಂದು ಅಲ್ಲಿಯ ಜನ ಆತಂಕಗೊಂಡಿದ್ದಾರೆ. ಇವರ ಹೋರಾಟ ಎಷ್ಟು ದಿನ ನಡೆಯುತ್ತದೊ ಗೊತ್ತಿಲ್ಲ; ತೀವ್ರ ಪ್ರಯತ್ನದ ಹೊರತಾಗಿಯೂ ಅವರ ಭಾಷೆ ಉಳಿಯದೆ ಹೋಗಬಹುದು. ಅಂಥದೆ ಹೋರಾಟ ಪಕ್ಕದ ಬ್ರಿಟನ್‌ನಲ್ಲಿಯೂ ನಡೆಯುತ್ತಿದ್ದು, ಅಲ್ಲಿ ತಮ್ಮ ಸ್ವಂತಿಕೆಯನ್ನು ಸಂರಕ್ಷಿಸಿಕೊಳ್ಳಬೇಕೆನ್ನುವವರು ಬಹುಪಾಲು ಸಂಪ್ರದಾಯವಾದಿಗಳಾಗಿ ಬದಲಾಗಿದ್ದಾರೆ.

ಇದು ದುಃಖದ ವಿಷಯ; ಸ್ವಂತಿಕೆಯನ್ನು ಉಳಿಸಿಕೊಳ್ಳುವ ಸಮುದಾಯಗಳ ಹೋರಾಟದಲ್ಲಿ ಸಂಪ್ರದಾಯವಾದಿಗಳು ಪ್ರವೇಶಿದರೆಂದಲ್ಲಿ ಆ ಹೋರಾಟದ ಸತ್ವ ಹೆಚ್ಚು ಕಾಲ ಉಳಿಯಲಾರದು. ಬದಲಾಗಿ, ಇಂಥ ಬಯಕೆ ಇಂದು ಚೈತನ್ಯವನ್ನು ಪಡೆದುಕೊಂಡಿರುವ ಹೊಸ ವರ್ಗಗಳ ಮೂಲಕ ವ್ಯಕ್ತವಾದಾಗಲಷ್ಟೇ ಪರಂಪರೆಗಳನ್ನು ಕಾಪಾಡಿಕೊಳ್ಳಬಹುದು. ‘ವಿಪರ್ಯಾಸವೆಂದರೆ, ಇಂದು, ಕನ್ನಡದ ಮಟ್ಟಿಗಂತೂ ಆರ್ಥಿಕ, ಬೌದ್ಧಿಕ, ಸಾಮಾಜಿಕ ಶಕ್ತಿಯಿರುವ ವರ್ಗಗಳು ಹೆಚ್ಚು ಸಾಫ್ಟ್‌ವೇರ್ ಕ್ಷೇತ್ರದೆಡೆಗೆ ಧಾವಿಸುತ್ತಿವೆ; ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್ ಅನಿವಾರ್ಯವಾಗಿರುವ ರಂಗಕ್ಕೆ ಸಾಗುತ್ತಿವೆ. ಈ ವರ್ಗಗಳು ಅಂತಿಮವಾಗಿ ನಮ್ಮ ನಗರ ಕೇಂದ್ರಗಳಿಂದ ಅಮೆರಿಕಕ್ಕೆ ವಲಸೆ ಹೋಗುತ್ತದೆ. ಇನ್ನು ಇಲ್ಲಿ ಹಿಂದೆ ಉಳಿದುಕೊಂಡ ಶ್ರಮಿಕವರ್ಗಗಳಲ್ಲಿ ಇಂಥ ಚೈತನ್ಯವನ್ನು ಸದ್ಯಕ್ಕಂತೂ ಕಾಣಲು ಸಾಧ್ಯವಿಲ್ಲ. ನಮ್ಮ ಪ್ರಸ್ತುತ ರಾಜಕಾರಣ ಅಂಥದೊಂದು ಪರಿಸ್ಥಿತಿಯನ್ನು ನಿರ್ಮಿಸಿ, ಅದನ್ನು ಪೋಷಿಸಿಕೊಂಡು ಬರುತ್ತಿದೆ. ವರ್ತಮಾನದ ಭಾರತದಲ್ಲಿ ಎಲ್ಲ ರೀತಿಯ ರಾಜಕೀಯ ಪಕ್ಷಗಳಲ್ಲೂ ಒಂದೊಂದು ರೈತ-ಕಾರ್ಮಿಕ ಸಂಘಟನೆಗಳಿರುವುದು ಹೌದಾದರೂ ಮೂಲಭೂತ ಪ್ರಶ್ನೆಗಳ ವಿಷಯದಲ್ಲಿ ಮಾತ್ರ ಅವು ಪಕ್ಷಭೇದವನ್ನು ಬಿಟ್ಟು ಒಂದೆ ರೀತಿಯ ಮಾತನ್ನಾಡತೊಡಗುತ್ತವೆ.

ಇಪ್ಪತ್ತನೆಯ ಶತಮಾನದ ತಂದೊಡ್ಡಿರುವ ಈ ಬಹುದೊಡ್ಡ ಸವಾಲನ್ನು ಎದುರಿಸುವುದು ಹೇಗೆಂಬುದು ತೋಚದು. ಆ ದಿಕ್ಕಿನಲ್ಲಿ ಹಲವೆಡೆ ಹಲವು ರೀತಿಯ ಚಳುವಳಿಗಳು ನಡೆಯುತ್ತಿರುವವಾದರೂ ಆಧುನೀಕರಣದ ದೈತ್ಯ ಬಲದೆದುರು ಅವು ಬಹುಕಾಲ ನಿಲ್ಲುವಂತೆ ಕಾಣುತ್ತಿಲ್ಲ. ಕಾರಣ ಇಷ್ಟೆ; ಈ ಚಳುವಳಿಗಳೆಲ್ಲ ಬೇರೆ ಬೇರೆಡೆಯ ದುರ್ಬಲ ವರ್ಗಗಳು ಹೂಡಿದ ಹೋರಾಟಗಳಷ್ಟೆ ಹೊರತು ಅವು ಇಂದಿನ ಬಲಿಷ್ಠ ವರ್ಗಗಳೂ ಬೆಂಬಲಿಸುವಂತಹ ಹೋರಾಟಗಳಲ್ಲ. ಇವೆರಡು ವರ್ಗಗಳ ನಡುವಿರುವ ಸರ್ವಭೌತಿಕಸ್ತರಗಳ ಅಸಮಾನತೆಯೆ ಇಂಥ ಚಳವಳಿಗಳನ್ನು ಇಂದಲ್ಲ ನಾಳೆ ಖಂಡಿತ ಹಿಮ್ಮೆಟ್ಟಿಸುವಂತೆ ತೋರುತ್ತದೆ.