ಇಂಥ ಬಿಕ್ಕಟ್ಟುಗಳಿಗೆ ಕೊನೆಗೂ ಗಾಂಧಿಯ ಮಾರ್ಗವೋಂದೇ ಪರಿಹಾರವಾಗಬಲ್ಲವೆಂದು ಅನೇಕ ಬಾರಿ ಅನಿಸುತ್ತದೆ. ಗಾಂಧಿ ಇಂಥ ಸಮಸ್ಯೆಗಳಿಗೆ ಯಾವತ್ತೂ ಇಡಿಯಿಡಿಯಾಗಿ ಸ್ಪಂದಿಸುತ್ತಿದ್ದರು; ಅವುಗಳಿಗೆ ತತ್ಕಾಲೀನವೂ ಆಂಶಿಕವೂ ಆದ ಉತ್ತರಗಳ ಬದಲು ಪರ್ಯಾಯ ಜೀವನ ವಿಧಾನಗಳನ್ನೆ ಶೋಧಿಸಲು ಪ್ರಯತ್ನಿಸುತ್ತಿದ್ದರು. ನಮ್ಮ ಕಾಲದ ಒಂದು ದುರಂತವೆಂದರೆ, ಗಾಂಧಿಯಂತಹ ಅಖಂಡ ಪ್ರಜ್ಞೆಯುಳ್ಳ ನಾಯಕರ‍್ಯಾರೂ ಇಂದು ಇಲ್ಲ; ಹಾಗೆಯೆ, ಅಂಥವರಿದ್ದರೂ ಅವರನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮ ಸಮುದಾಯಗಳಿಗಿಲ್ಲ. ಇಂದು ನಮ್ಮ ನಡುವಿರುವ ಹೆಸರಾಂತ ಸಾಧುಸಂತರೆಲ್ಲರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಜಾಗತೀಕರಣವನ್ನು ಬೆಂಬಲಿಸುವವರೆ ಆಗಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಆಧ್ಯಾತ್ಮಿಕತೆಯ ಸರಕನ್ನು ಇನ್ನೂ ಹೆಚ್ಚು ಲಾಭಕ್ಕೆ ಮಾರಬಹುದೆಂಬ ಆಸೆ ಅವರದು; ಗಾಳಿಯಿಂದ ಚಿಲ್ಲರೆ ವಸ್ತುಗಳನ್ನು ಹೊರಗೆಳೆದು ಅಂಥ ಚಮತ್ಕಾರಗಳನ್ನೆ ಆತ್ಮಶಕ್ತಿಯೆಂಬಂತೆ ಮೆರೆಸುವ ಚಪಲ ಅವರದು. ನಾವೂ ಹಾಗೆಯೆ, ಬಹಳಷ್ಟು ಬಾರಿ ಆ ಬೂದಿಬಾಬಾಗಳ ನಿಜಸತ್ವಕ್ಕಿಂತ ಹೆಚ್ಚಾಗಿ ಅವರಿಗಿರುವ ವಿದೇಶಿ ಮನ್ನಣೆಯಿಂದಲೆ ಅವರನ್ನು ಅಳೆಯುವವರು ನಾವು.

ರಾಮಕೃಷ್ಣ ಪರಮಹಂಸರಂಥವರು ಇದಕ್ಕೆ ತದ್ವಿರುದ್ಧವಾಗಿದ್ದರು. ಯಾವ ಖ್ಯಾತಿಯನ್ನೂ ಬಯಸದೆ, ಯಾವ ಕ್ಷುಲ್ಲಕ ಚಳಕಗಳನ್ನೂ ಒಪ್ಪದೆ ಅವರು ಬಂಗಾಳದಲ್ಲಿ ತಮ್ಮಷ್ಟಕ್ಕೆ ತಾವು ಬದುಕಿಕೊಂಡಿದ್ದರು ಪ್ರಾಚೀನ ಭಾರತೀಯ ಪರಂಪರೆಗಳ ಅತ್ಯುತ್ತಮವಾದೊಂದು ಪ್ರತೀಕವಾಗಿದ್ದ ಅವರು ಅತಿಸೀಮಿತ ಭೌಗೋಳಿಕ ವಲಯದಲ್ಲಿದ್ದುಕೊಂಡೆ ಹೊಸದೊಂದು ರೀತಿಯ ಜಾಗತಿಕ ಕಲ್ಪನೆಯನ್ನು ಕಟ್ಟಿಕೊಂಡವರಾಗಿದ್ದರು. ಆ ಕಾಲದಲ್ಲಿ ಪಾಶ್ಚಿಮಾತ್ಯ ಪ್ರಭಾವದಿಂದ ರೂಪುಗೊಂಡು, ಅತ್ಯಂತ ಆಧುನಿಕರು ತಾವು ಎಂದುಕೊಂಡಿದ್ದ ಬ್ರಹ್ಮಸಮಾಜದವರಿಗೆ ದೊಡ್ಡ ಸವಾಲಾಗಿದ್ದ ಅವರು ನಮ್ಮಂಥವರೊಡನೆ ಜೀವಂತ ಗಂಭೀರ ಸಂವಾದ ನಡೆಸಬಲ್ಲವರಾಗಿದ್ದರು.

*

ಇದಿಷ್ಟೆ ನಮ್ಮ ವಾಸ್ತವವೊ? ಇಲ್ಲ, ಭಾರತ ಕಳೆದ ಶತಮಾನದಲ್ಲಿ ಕೆಲವು ದೊಡ್ಡ ಸಾಧನೆಗಳನ್ನೂ ಮಾಡಿದೆ. ಈ ಕ್ಷಣಕ್ಕೆ ನನಗೆ ಹೊಳೆಯುವ ಇಂಥ ಒಂದೆರಡು ಸಾಧನೆಗಳು ಇವು;

ಮೊದಲನೆಯದಾಗಿ, ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ಮರುಗಳಿಗೆಯಲ್ಲಿ, ಗಾಂಧಿ ಸ್ಫೂರ್ತಿಯ ನೆಹರೂ ಸರ್ಕಾರ ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯನ್ನು ಜಾರಿಗೊಳಿಸಿದ್ದು ಬಹು ಮೌಲಿಕವಾದೊಂದು ಕ್ರಮವೆ ಹೌದು. ಇದು ಮುಂದೆ ಬೇರೆ ಅನೇಕ ಮಹತ್ವದ ಕ್ರಮಗಳಿಗೆ ಪ್ರೇರೇಪಣೆ ನೀಡಿತು ಕೂಡ. ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವ ಮೊದಲು ಚರ್ಚೆ ನಡೆದಾಗ ನಮ್ಮ ಉಚ್ಛ ವರ್ಗದವರು, ವಿದ್ಯಾವಂತರು ಹೌಹಾರಿದ್ದುಂಟು; ಕೆಳವರ್ಗದವರು, ಅನಕ್ಷರಸ್ಥರು ರಾಜಕೀಯ ಹಕ್ಕನ್ನು ಪಡೆದುಕೊಂಡಲ್ಲಿ ದೇಶ ಸರ್ವನಾಶವಾಗುವುದು ನಿಶ್ಚಿತ ಎಂದು ಅವರು ವಾದಿಸಿದ್ದುಂಟು. ಆದರೆ ನಮ್ಮ ಹಿರಿಯರು ಅಂಥ ಆಕ್ಷೇಪಣೆಗಳಿಗೆ ಹೆಚ್ಚು ಕಿವಿಗೊಡದೆ, ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಬದ್ಧರಾಗಿ ನಡೆದುಕೊಂಡರು. ಇಂಥ ವ್ಯವಸ್ಥೆಯಲ್ಲಿ ತಪ್ಪುಗಳಾಗಲಿಲ್ಲ, ಆಗುತ್ತಿಲ್ಲ ಎಂದೇನಿಲ್ಲ. ಆದರೆ ಇಂಥವೆಲ್ಲ ಕ್ಷುಲ್ಲಕ ಕೊರತೆಗಳನ್ನು ಮೀರಿ ಈ ವ್ಯವಸ್ಥೆ ನಮ್ಮ ದೇಶಕ್ಕೆ ಸತ್ಯಯುತವಾದೊಂದು ರಾಜಕೀಯ-ಸಾಮಾಜಿಕ ಚಾಲನೆಯನ್ನು ನೀಡಿತು ಎಂಬುದನ್ನು ಇಂದು ಯಾರೂ ಅಲ್ಲಗಳೆಯಲಾರರು. ಇದು ಪ್ರತಿಯೊಬ್ಬ ಪ್ರಜೆಗೂ ‘ನಾನು ಈ ದೇಶದಲ್ಲಿ, ಅದರ ವರ್ತಮಾನ ಹಾಗೂ ಭವಿಷ್ಯದ ವಿದ್ಯಮಾನಗಳಲ್ಲಿ ನೇರವಾಗಿ ಭಾಗ’ ಎನ್ನುವ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿತು.

ಸ್ವತಂತ್ರ ಭಾರತದ ಎರಡನೆಯ ದೊಡ್ಡ ಸಾಧನೆಯೆಂದರೆ – ಇಂದು ನಮಗದರ ಅರ್ಥ ಪೂರ್ಣವಾಗಿ ತಿಳಿಯದೆ ಹೋಗಬಾಹುದು- ಹರಿಜನರಿಗೆ ದೇವಾಲಯ ಪ್ರವೇಶದ ನಿರಾಕರಣೆಯನ್ನು ಕಾನೂನು ರೀತ್ಯಾ ಅಪರಾಧವೆಂದು ೧೯೪೭ ರಷ್ಟು ಹಿಂದೆಯೇ ಘೋಷಿಸಿದ್ದು. ಅಂದು ಯಾವುದೊ ಮಾಂತ್ರಿಕತೆಯಿಂದೆಂಬಂತೆ ಜಾರಿಗೊಂಡ ಈ ಕಾನೂನೂ ಸಹ ನಮ್ಮ ಆಲೋಚನಾಕ್ರಮ ಹಾಗೂ ಜೀವನಶೈಲಿಗಳಲ್ಲಿ ಅನೇಕ ಮುಖ್ಯ ಬದಲಾವಣೆಗಳಿಗೆ ಕಾರಣವಾಯಿತು. ಊಹಿಸಿಕೊಳ್ಳಿ, ಅಂದು ಹಾಗಾಗದಿದ್ದಲ್ಲಿ ಇಂದು ಗುರುವಾಯೂರು ದೇವಸ್ಥಾನದವರು ಮಾಡುತ್ತಿರುವಂತೆ, ಪ್ರತಿಯೊಂದು ದೇವಸ್ಥಾನದ ಆಡಳಿತ ಮಂಡಳಿಯ ಜಾತಿಯವರೂ ಆ ದೇವಸ್ಥಾನ ನಮ್ಮ ಖಾಸಗಿ ಸ್ವತ್ತೆ ಹೊರತು ಸಾರ್ವಜನಿಕ ಸ್ಥಳವಲ್ಲವೆಂದೂ, ಅನ್ಯರನ್ನು ಅಲ್ಲಿ ಬಿಟ್ಟುಕೊಳ್ಳುವುದು ಅಥವಾ ಬಿಡದಿರುವುದು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಅವಲಂಬಿಸಿದ್ದೆಂದೂ ಹಠ ಹಿಡಿಯಲು ಸಾಧ್ಯವಿರುತ್ತಿತ್ತು; ನ್ಯಾಯಾಲಯಕ್ಕೆ ಹೋಗಿ ತಮ್ಮ ನಿಲುವನ್ನು ಗೆಲ್ಲಿಸಿಕೊಳ್ಳಲು ಅವಕಾಶವಿರುತ್ತಿತ್ತು.

ಇವೆರಡನ್ನು ಹೊರತುಪಡಿಸಿದಂತೆ, ನಮ್ಮ ಮೌಲ್ಯವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವಂತಹ ಬೇರೆ ಯಾವುದೆ ಸಾಧನೆ ನಮ್ಮ ರಾಜಕಾರಣದಲ್ಲಾಯಿತೆಂದು ನನಗನಿಸುತ್ತಿಲ್ಲ. ಈ ಎರಡು ಮಹತ್ ಸಾಧನೆಗಳ ಹಿಂದೆ ಗಾಂಧಿ, ಠಾಕೂರ್, ಪ್ರೇಮ್‌ಚಂದ್, ಅಂಬೇಡ್ಕರ್‌ರಂಥವರಿದ್ದರು; ನಮ್ಮ ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ಶ್ರೀರಂಗರಂಥವರಿದ್ದರು.

ಇದನ್ನು ಇನ್ನಷ್ಟು ವಿಶದವಾಗಿ ಹೇಳುವುದಾದರೆ – ನಮ್ಮ ಹಿರಿಯರನ್ನು ಎರಡು ರೀತಿಯ ಹಸಿವುಗಳು ಅತ್ಯಂತ ಗಾಢವಾಗಿ ಕಾಡಿದೆ; ಒಂದು, ಸಮಾನತೆಯ ಹಸಿವು; ಇನ್ನೊಂದು ಆಧ್ಯಾತ್ಮಿಕತೆಯ ಅಥವಾ ದೇವರ ಹಸಿವು. ಕೆಲವರನ್ನು ಒಂದೊಂದೆ ರೀತಿಯ ಹಸಿವು ಬಾಧಿಸಿದ್ದರೆ, ಬಸವಣ್ಣ, ಅಕ್ಕ, ಅಲ್ಲಮ, ಕಬೀರ, ತುಳಿಸಿಯವರಂತಹ ಇನ್ನು ಕೆಲವರನ್ನು ಎರಡೂ ಒಟ್ಟೊಟ್ಟಿಗೆ ಕಾಡಿವೆ. ನಮ್ಮ ಯುಗಕ್ಕೆ ಬಂದರೆ, ಅಂಬೇಡ್ಕರ್ ಕೊನೆಗೆ ಬೌದ್ಧ ಧರ್ಮದತ್ತ ವಾಲಿದ್ದುದರಲ್ಲಿ ಎರಡೂ ಹಂಬಲಗಳು ಸಮಾನವಾಗಿ ಕೆಲಸ ಮಾಡಿದ್ದನ್ನು ಕಾಣಬಹುದು. ಇನ್ನು ಗಾಂಧಿಯಲ್ಲಂತೂ ಇವೆರಡು ಹಾತೊರೆತಗಳು ಭಿನ್ನವೆ ಅಲ್ಲ ಎನ್ನುವ ಕಡು ಶ್ರದ್ಧೆಯಿತ್ತು.

ಕೇವಲ ದೇವರ ಹಸಿವಿದ್ದವರು ವಿರಾಗಿಗಳಾಗಬಹುದು, ಇಲ್ಲ ಹಾಗೆ ತೋರಿಸಿಕೊಳ್ಳುವ ಪೊಳ್ಳು ಧರ್ಮಗುರುಗಳಾಗಬಹುದು. ಸಮಾನತೆಯ ಹಸಿವಷ್ಟೆ ಇದ್ದವರು ಲೆನಿನ್, ಸ್ಟಾಲಿನ್, ಮಾವೋರಂತೆ ಯಾವ ನೈತಿಕ ಭಯವೂ ಮಾನವಸಹಜ ಲಜ್ಜೆಯೂ ಇಲ್ಲದಂತೆ ಅಮಾನುಷ ಕೃತ್ಯಗಳನ್ನೆಸಗುವ ರಾಕ್ಷಸರಾಗಿಬಿಡಬಹುದು. ಬದಲಾಗಿ, ಎರಡೂ ಹಸಿವೆಗಳು ಒಟ್ಟಿಗೆ ಕಾಡಿದಾಗ ಮಾತ್ರ ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್‌ಕಿಂಗ್‌ನಂತಹ ಧೀಮಂತರು ಮೂಡಿಬರುತ್ತಾರೆ. ಇವರು ಇಪ್ಪತ್ತನೆಯ ಶತಮಾನದ ಅತ್ಯುತ್ತಮ ಪ್ರತೀಕಗಳೂ, ಫಲಗಳು ಆಗಿರುವಂಥವರು.

ಇಂಥ ಪ್ರಕ್ರಿಯೆಗಳು ಹಾಗೂ ವ್ಯಕ್ತಿ ಪ್ರತಿಮೆಗಳಲ್ಲಿ ಯಾವುವು ಇಪ್ಪತ್ತೊಂದನೆಯ ಶತಮಾನದಲ್ಲೂ ಮುಂದುವರೆದು ಕಾಣಿಸಿಕೊಳ್ಳಬಹುದು? ಗೊತ್ತಿಲ್ಲ.

*

ಒಂದು ಭಯ ನಮ್ಮನ್ನು ಇತ್ತೀಚೆಗೆ ಬಾಧಿಸತೊಡಗಿದೆ. ಇದು ಆಧುನಿಕ ರಾಷ್ಟ್ರ ಹಾಗೂ ಆಧುನಿಕ ಜಗತ್ತುಗಳೆಂಬ ಪರಿಕಲ್ಪನೆಗಳು ಹುಟ್ಟಿಸುವ ಭೀತಿಯಾಗಿದೆ. ಇದನ್ನು ತುಸು ವಿವರವಾಗಿ ನೋಡುವುದಾದರೆ –

ಊರಿನ ಕಲ್ಪನೆಯನ್ನು ಆಧರಿಸಿ ಆಕಾರ ತಳೆಯುವ ರಾಷ್ಟ್ರದ ಹಾಗೂ ಜಗತ್ತಿನ ಕಲ್ಪನೆಗಳು ಸಹಜವಾಗಿರುತ್ತವೆ, ಸುಖದಾಯಕವಾಗಿರುತ್ತವೆ. ಇದಕ್ಕೆ ಭಿನ್ನವಾಗಿ, ಊರನ್ನು ಕಡೆಗಣಿಸಿ ಕಟ್ಟಿದ ರಾಷ್ಟ್ರ ಹಾಗೂ ಜಗತ್ತಿನ ಕಲ್ಪನೆಗಳು ಅಸಹಜವೂ ಅಪಾಯಕಾರಿಯೂ ಆಗಿರುತ್ತವೆ. ಮೊದಲು ಊರೆಂದು ಒಂದಿರಬೇಕು. ಅದರ ಬಗ್ಗೆ ನಮಗೆ ಪ್ರೀತಿ ಕಾಳಜಿಗಳಿರಬೇಕು; ಅದರಲ್ಲಿಯ ಭಾಷೆಗಳು ಸಮುದಾಯಗಳು ಸಂಸ್ಕೃತಿಗಳು ನಮಗೆ ತಿಳಿದಿರಬೇಕು. ಹೀಗೆ ಊರುಗಳನ್ನು ಕಂಡವರು ದೇಶವನ್ನು ಜಗತ್ತನ್ನು ಕಟ್ಟುವಾಗ ಅವುಗಳನ್ನು ತಮ್ಮ ಊರಿನ ಮಾದರಿಯಲ್ಲಿಯೆ ಕಟ್ಟಲೆತ್ನಿಸುತ್ತಾರೆ. ನಮ್ಮಲ್ಲಿ ಗಾಂಧಿ ಹಾಗೂ ರವೀಂದ್ರನಾಥ ಠಾಕೂರರಂಥವರ ರಾಷ್ಟ್ರಕಲ್ಪನೆ ಈ ಬಗೆಯದಾಗಿತ್ತು. ಅವರಿಗೆ ಅವರವರ ಊರು, ಪ್ರಾಂತ್ಯ, ಭಾಷೆ, ಸಂಸ್ಕೃತಿಗಳ ಆಳವಾದ ಪರಿಚಯವಿತ್ತು. ಅವುಗಳ ಬಗ್ಗೆ ಗಾಢ ಪ್ರೀತಿಯಿತ್ತು. ಅವರ ಕಲ್ಪನೆಯ ರಾಷ್ಟ್ರ ಇವೆಲ್ಲವನ್ನೂ ಪೋಷಿಸುವಂಥದಾಗಿತ್ತೆ ಹೊರತು ನಾಶಮಾಡುವಂಥದಾಗಿರಲಿಲ್ಲ. ಅವರ ಊರಿನಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತರು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರೆಲ್ಲ ಸೇರಿದ್ದರು; ಅಲ್ಲಿ ಎಲ್ಲ ರೀತಿಯ ಭಾಷೆ-ಕಸುಬು-ಕಲೆಗಳಿದ್ದವು. ಅವರ ಕಲ್ಪನೆಯ ರಾಷ್ಟ್ರ ಇದೆ ವೈವಿಧ್ಯವನ್ನು ಇನ್ನಷ್ಟು ವಿಸ್ತರಿಸುವಂತಿತ್ತು.

ರಾಷ್ಟ್ರೀಯತೆಯ ಬಗ್ಗೆ ಗಾಂಧಿ ಹಾಗೂ ಠಾಕೂರರ ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳೂ ಇದ್ದವು. ಆ ಕುರಿತು ಅವರು ನಡೆಸಿದ ಚರ್ಚೆ ಆಧುನಿಕ ಭಾರತದ ಅತ್ಯಂತ ಮಹತ್ವದ ವಾಗ್ವಾದಗಳಲ್ಲೊಂದಾಗಿದೆ. ಆದಾಗ್ಯೂ ಅವರಿಬ್ಬರ ರಾಷ್ಟ್ರಕಲ್ಪನೆಗಳಲ್ಲೂ ಊರೆ ಕೇಂದ್ರವಾಗಿತ್ತು. ಆ ಕಾರಣ ಅಂಥ ರಾಷ್ಟ್ರಕಲ್ಪನೆಯು ಭಾರತವಷ್ಟೆ ಅಲ್ಲ ಇಡೀ ಗತ್ತೆ ಅನುಸರಿಸಬೇಕಾದಂತಹ ಮಾದರಿಯಾಗಿದೆ. ಅದೆ ಇನ್ನೊಂದೆಡೆ, ಊರನ್ನು ಬಿಟ್ಟುಕೊಟ್ಟು ಬರಿಯ ರಾಷ್ಟ್ರವನ್ನು ಕಟ್ಟಹೊರಟ ಯೂರೋಪಿಯನ್ನರ ದುರಂತವನ್ನು ನೋಡಿ. ಆ ಪ್ರಯತ್ನ ಎರಡು ಮಹಾಯುದ್ಧಗಳಿಗೆ, ಹಿಟ್ಲರ್‌ನಂತಹ ದುರುಳನಿಗೆ ಮೂಲವಾಯಿತು. ಇತ್ತೀಚೆಗೆ, ತನ್ನನ್ನು ಕಮ್ಯುನಿಸ್ಟನೆಂದು ಕರೆದುಕೊಳ್ಳುವ ಮಿಲೊಸೆವಿಚಿ ಯುಗೊಸ್ಲಾವಿಯಾದಲ್ಲಿ ಸ್ಥಾಪಿಸಲೆತ್ನಿಸಿದ ರೀತಿಯ ರಾಷ್ಟ್ರ ವ್ಯವಸ್ಥೆ ಅಲ್ಲಿನ ಎಲ್ಲ ಜನರ ಸಂಕಷ್ಟಕ್ಕೆ ಕಾರಣವಾಯಿತು. ತಮ್ಮ ರಾಷ್ಟ್ರಕಲ್ಪನೆ ಎಷ್ಟು ವಿಚ್ಛಿದ್ರಕಾರಿಯಾದುದೆಂಬುದನ್ನು ಐರೋಪ್ಯರು ಇನ್ನೂ ಅರಿತುಕೊಂಡಿಲ್ಲ.

ಊರಿನ ಕಲ್ಪನೆ ಹಾಗೂ ರಾಷ್ಟ್ರದ ಕಲ್ಪನೆಗಳು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಸಂಘರ್ಷಿಸುವುದೂ, ಹಾಗೆಯೆ ಕೆಲವೊಮ್ಮೆ ಸ್ನೇಹ ಬೆಳೆಸುವುದೂ ಉಂಟು. ನಾನು ೧೯೬೦ ರ ದಶಕದಲ್ಲಿ ಬರ್ಮಿಂಗಮ್‌‌ನಲ್ಲಿ ಓದುತ್ತಿದ್ದಾಗ ಕೆಲವು ಪಾಕಿಸ್ತಾನಿಗಳು ಗೆಳೆಯರಾದರು. ಅವರೆಲ್ಲ ಹಿಂದೊಮ್ಮೆ ಕೆಲವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದರಂತೆ. ಆಗ ಆ ಊರಿನ ಬಗ್ಗೆ ಬೆಳೆದಿದ್ದ ಅತೀವ ಪ್ರೀತಿ ಅವರಲ್ಲಿ ಈಗಲೂ ಹಾಗೆಯೆ ಉಳಿದುಕೊಂಡಿತ್ತು. ಅವರು ಆಗಾಗ ನನ್ನಲ್ಲಿ ‘ಬೆಂಗಳೂರಿನ ಆ ಬೀದಿ ಏನಾದರೂ ಬದಲಾಗಿದೆಯೊ? ಆ ದೋಸೆ ಹೋಟೆಲ್ ಹಾಗೆಯೆ ಉಳಿದಿದೆಯೊ? ಆ ಪಾನ್‌ಬೀಡಾ ಅಂಗಡಿ ಇನ್ನೂ ಇದೆ ತಾನೆ?’ ಎಂದು ಕೇಳುವುದಿತ್ತು. ಅವರು ಪಾಕಿಸ್ತಾನಿಗಳಾದರೂ, ಭಾರತ-ಪಾಕಿಸ್ತಾನಗಳ ನಡುವೆ ಆ ಕಾಲಕ್ಕಾಗಲೆ ತೀವ್ರ ವೈಷಮ್ಯ ಬೆಳೆದಿದ್ದರೂ, ಅವರಿಗೆ ಬೆಂಗಳೂರಿನ ಬಗ್ಗೆಯಿದ್ದ ಪ್ರೀತಿ ಮಾತ್ರ ಕಿಂಚಿತ್ತೂ ಕುಗ್ಗಿರಲಿಲ್ಲ. ಅದೆ ರೀತಿ ಅನೇಕ ಭಾರತೀಯರಿಗೆ ತಾವು ಹುಟ್ಟಿ ಬೆಳೆದ, ಇಂದಿನ ಪಾಕಿಸ್ತಾನದಲ್ಲಿ ಇರುವ, ಲಾಹೋರ್‌ನ ಬಗ್ಗೆ ಅಂಥದ್ದೇ ಪ್ರೀತಿ; ಅನೇಕ ಬಂಗಾಳಿಗಳಿಗೆ ಇಂದಿನ ಬಾಂಗ್ಲಾದೇಶದಲ್ಲಿರುವ ಢಾಕಾದ ಬಗ್ಗೆ ಅಷ್ಟೆ ಪ್ರೀತಿ. ಇಂದಿಗೂ, ನಮ್ಮ ಊರು ಲಾಹೋರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಉತ್ತರ ಭಾರತೀಯರಿದ್ದಾರೆ; ತಮ್ಮ ಊರು ಢಾಕಾವೆಂದು ಹೇಳಿಕೊಳ್ಳುವ ಬಂಗಾಳಿಗಳಿದ್ದಾರೆ. ಇದು ಊರಿನ ಕಲ್ಪನೆ, ಊರಿನಿಂದ ಮೂಡಿಬರುವ ರಾಷ್ಟ್ರದ ಕಲ್ಪನೆ.

ಇದನ್ನು ನಾಶಗೊಳಿಸಿ ಬೇರೆಯೆ ರೀತಿಯ ರಾಷ್ಟ್ರಕಲ್ಪನೆಯನ್ನು ಮಾಡತೊಡಗಿದಾಕ್ಷಣ ನಾವು ಚರಿತ್ರೆಯ ಸತ್ಯಗಳನ್ನು ಮರೆಯಲಾರಂಭಿಸುತ್ತೇನೆ; ಇಲ್ಲ ಮರೆಮಾಚಲಾರಂಭಿಸುತ್ತೇವೆ. ಆಗ ಹಿಂದೂಗಳು ಮುಸ್ಲಿಮರನ್ನು, ಅಲಕ್ಷಿಸುವ ಅಥವಾ ಅವಹೇಳನ ಮಾಡುವ ರೀತಿಯ ಹೊಸದೊಂದು ಭಾರತ ರಾಷ್ಟ್ರ ಇತಿಹಾಸವನ್ನು ರಚಿಸತೊಡಗುತ್ತಾರೆ. ಅದೇ ರೀತಿ, ಮುಸ್ಲಿಮರು ಪಾಕಿಸ್ತಾನದ ರಾಷ್ಟ್ರಕಲ್ಪನೆಯನ್ನು ಗಟ್ಟಿಗೊಳಿಸುವ ಸಲುವಾಗಿ ಹೊಸದೆ ಒಂದು ರಾಷ್ಟ್ರ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಇಂದಿನ ಪಾಕಿಸ್ತಾನದ ಪಠ್ಯಗಳಲ್ಲಿ ಅವರ ಚರಿತ್ರೆ ಪ್ರಾರಂಭವಾಗುವುದೆ ಮುಘಲ್ ಸಾಮ್ರಾಜ್ಯದಿಂದ; ಅಲ್ಲಿ ಗಾಂಧಿ, ನೆಹರೂ ಅಂಬೇಡ್ಕರರು ಪಾಕಿಸ್ತಾನದ ಸ್ವಾತಂತ್ರ್ಯವನ್ನು ವಿರೋಧಿಸಿದ ದೇಶದ್ರೋಹಿಗಳು, ಬ್ರಿಟಿಷರ ಏಜಂಟರು. ಹೀಗೆ ಇಡೀ ಉಪಖಂಡದ ಚರಿತ್ರೆಯನ್ನು ಕುಗ್ಗಿಸದೆ ತಿರುಚದೆ ಆಧುನಿಕ ಭಾರತ ಹಾಗೂ ಪಾಕಿಸ್ತಾನಗಳಿಗೆ ತಂತಮ್ಮ ರಾಷ್ಟ್ರೀಯ ಚರಿತ್ರೆಗಳನ್ನು ಬರೆಯುವುದು ಸಾಧ್ಯವಾಗುವುದಿಲ್ಲ. ಹಿಂದೆ ಹಿಟ್ಲರ್ ಮಾಡಿದ್ದೂ ಇದನ್ನೆ. ಆತ ವಿಕೃತಗೊಳಿಸಿ ರಚಿಸಿದ ಜರ್ಮನಿಯ ಚರಿತ್ರೆಯಲ್ಲಿ ಜರ್ಮನರಷ್ಟೇ ಆರ್ಯರಾಗಿದ್ದರು, ಯೋಗ್ಯ ಮನುಷ್ಯರಾಗಿದ್ದರು. ಆತ ನಿಜ ಚರಿತ್ರೆಯಿಂದ ತನ್ನ ಸ್ವಾರ್ಥಕ್ಕೆ ಒಗ್ಗುವ ಕೆಲವು ಅಂಶಗಳನ್ನು ಆಯ್ದುಕೊಂಡ; ಒಗ್ಗದವುಗಳನ್ನು ತನ್ನ ಚರಿತ್ರೆಯಿಂದ ಉಚ್ಛಾಟಿಸಿದ; ಆ ಮೂಲಕ ತನ್ನ ಚರಿತ್ರೆಯನ್ನು ಬಲಗೊಳಿಸಿಕೊಂಡ. ಇದು ಆಧುನಿಕ ರಾಷ್ಟ್ರ ಚರಿತ್ರೆಗಳು ಕಲ್ಪಿತವಾಗುವ ಪರಿ. ಪ್ರಸ್ತುತ ಭಾರತದಲ್ಲಿ ಈ ರೀತಿಯಲ್ಲಿ ಇತಿಹಾಸವನ್ನು ಕಟ್ಟುವ ಕ್ರಮ ಹೆಚ್ಚು ಬಳಕೆಗೆ ಬರುತ್ತಿದೆ. ವಿಪರ್ಯಾಸವೆಂದರೆ, ಇಂಥ ಇತಿಹಾಸಗಳಲ್ಲಿ ಶಸ್ತ್ರಧಾರಿಗಳೂ ರಣಾಂಗಣಶೂರರೂ ಆದ ದೇವತೆಗಳು ಮತ್ತು ಮಾನವರು ಮಾತ್ರ ಇರುತ್ತಾರೆ; ಆಯುಧ ಹಿಡಿಯದವರಿಗೆ ಅಲ್ಲಿ ಸ್ಥಳವಿಲ, ಸಂತರಿಗೆ ಅಲ್ಲಿ ಅಸ್ತಿತ್ವವಿಲ್ಲ.

ಜಾಗತೀಕರಣದ ಪ್ರಕ್ರಿಯೆ ಇಂಥ ಪೊಳ್ಳಾದ ಕ್ರೂರವಾದ ಚರಿತ್ರೆಯ ಕಲ್ಪನೆಗಳನ್ನು ಬೆಳೆಸಿ ಬಲಪಡಿಸುತ್ತದೆ. ಅಲ್ಲಿ ಊರು-ಹಳ್ಳಿಗಳ ನಿಜನೆಲೆಯ ಸಂಬಂಧಗಳಿಗೆ ಬೆಲೆಯ ಇರುವುದಿಲ್ಲ. ಉದಾಹರಣೆಗೆ, ನಮ್ಮ ನಮ್ಮ ಊರುಗಳಲ್ಲಿ ನಿತ್ಯಜೀವನದಲ್ಲಿ ನಾವು ನೂರಾರು ಮುಸ್ಲಿಮರನ್ನೂ ಕ್ರೈಸ್ತರನ್ನೂ ಕಾಣುತ್ತಿರುತ್ತೇವೆ; ಅವರನ್ನು ಮುಸ್ಲಿಮ ಅಥವಾ ಕ್ರೈಸ್ತರೆಂದು ತಿಳಿಯುವ ಮೊದಲೆ ನಾವು ಅವರಲ್ಲಿ ಒಬ್ಬನನ್ನು ಚಾಚಾನೆಂದು, ಇನ್ನೊಬ್ಬನನ್ನು ಅಜ್ಜನೆಂದು, ಒಬ್ಬಾಕೆಯನ್ನು ಅತ್ತೆಯೆಂದು, ಇನ್ನೊಬ್ಬಾಕೆಯನ್ನು ಅಕ್ಕನೆಂದು ಭಾವಿಸಿಕೊಂಡು ಪ್ರೀತಿಸುತ್ತಿರುತ್ತೇವೆ; ಅವರೂ ನಮ್ಮನ್ನು ಹಾಗೆಯೆ ಹಚ್ಚಿಕೊಂಡಿರುತ್ತಾರೆ. ಒಂದು ಪಕ್ಷ ಅವರಲ್ಲಿಕೆಲವರನ್ನು ದ್ವೇಷಿಸುವುದಾದರೂ ನಿಜ ಕಾರಣದಿಂದಲೇ ದ್ವೇಷಿಸುತ್ತೇವೆ. ಹೀಗೆ ಸಣ್ಣ ಊರುಗಳ ಸಾಮುದಾಯಿಕ ಜೀವನದಲ್ಲಿ ನಮ್ಮ ಪ್ರೀತಿ ಹಾಗೂ ದ್ವೇಷಗಳೆರಡಕ್ಕೂ ವಾಸ್ತವಿಕ ಕಾರಣಗಳಿರುತ್ತವೆ. ಇಂಥ ಸಾಮುದಾಯಿಕ ಸಂರಚನೆಯನ್ನು ಆಧರಿಸಿ ಕಟ್ಟಿದ ರಾಷ್ಟ್ರ ನಿಜಕ್ಕೂ ಹೃದಯವಂತಿಕೆಯಿಂದ ಕೂಡಿದ್ದಾಗಿರುತ್ತದೆ. ಅದೇ ಊರಿಗಿಂತ ರಾಷ್ಟ್ರವನ್ನು ಪ್ರಧಾನವೆಂದು ಪರಗಣಿಸಿದಾಕ್ಷಣ ನಮ್ಮ ಪ್ರೀತಿ-ದ್ವೇಷಗಳಿಗೆ ಯಾವುದೇ ಸತ್ಯದ ಸ್ಪರ್ಶವಿಲ್ಲದೆ ಹೋಗಿ ಅವು ನಾವು ಕೃತಕವಾಗಿ ಕಲ್ಪಿಸಿಕೊಂಡ ಭಾವನೆಗಳಷ್ಟೆ ಆಗುತ್ತವೆ. ಆಗ ನಮ್ಮ ನಿತ್ಯದ ನಡವಳಿಕಯೂ ಅಷ್ಟೆ ಅಪ್ರಾಮಾಣಿಕವೂ ಅಸಹಜವೂ ಆಗಿ ಮಾರ್ಪಡುತ್ತದೆ. ಉದಾಹರಣೆಗೆ: ದೂರದ ಪಾಕಿಸ್ತಾನದ ನೆಪದಲ್ಲಿ ನಾವು ನಮ್ಮ ಸುತ್ತಮುತ್ತಲ ಎಲ್ಲ ಮುಸ್ಲಿಮರನ್ನೂ ಸಂಶಯಿಸತೊಡಗುತ್ತೇವೆ; ಅಮೆರಿಕವನ್ನು ಮೆಚ್ಚಿಸಲೆಂದು ಚೀನಾದೊಟ್ಟಿಗೆ ಹಗೆ ಕಟ್ಟಿಕೊಳ್ಳುತ್ತೇವೆ; ಅಥವಾ ಅರಬ್ ರಾಷ್ಟ್ರಗಳಿಂದ ಕೊಂಚ ಕಡಿಮೆ ಬೆಲೆಗೆ ಪೆಟ್ರೋಲ್ ದೊರಕಿಸಿಕೊಳ್ಳಬಹುದು ಎಂದು ಅನಿಸಿದ ತಕ್ಷನ ಪಾಕಿಸ್ತಾನ ವಿರುದ್ಧದ ವೈರವನ್ನು ಸ್ವಲ್ಪ ತಗ್ಗಿಸಿಕೊಂಡಂತೆ ತೋರಿಸಿಕೊಳ್ಳುತ್ತೇವೆ.

ಇಂಥ ರಾಷ್ಟ್ರಕಲ್ಪನೆ ದೇಶಗಳ ಒಳಗಡೆಯೂ ಅನಾಹುತಗಳನ್ನು ಸೃಷ್ಟಿಸಬಹುದು. ಉದಾಹರಣೆಗೆ, ರಾಷ್ಟ್ರಕ್ಕೆ ತಾರಕವೆಂದು ಕಾಣುವ ನರ್ಮದಾ ಅಣೆಕಟ್ಟಿನಂತಹ ಬೃಹತ್ ಯೋಜನೆಗಳು ಊರುಗಳಿಗೆ ಮಾರಕವಾಗಿರುತ್ತವೆ. ಅಂಥಲ್ಲಿ ರಾಷ್ಟ್ರದ ಅಭಿವೃದ್ಧಿಗೆಂದು ಊರನ್ನೂ ಬಲಿಕೊಡುವುದು ದೊಡ್ಡದೊಂದು ಆದರ್ಶವೊ ಅನಿವಾರ್ಯತೆಯೊ ಆಗಿ ಕಾಣಿಸತೊಡಗುತ್ತದೆ. ಮೂರ್ತ ಊರುಗಳನ್ನು ಕಬಳಿಸುವ ಇಂಥ ಅಮೂರ್ತ ರಾಷ್ಟ್ರಕಲ್ಪನೆ ನಮ್ಮ ನಾಯಕರನ್ನೂ ತನ್ನ ಭ್ರಮಾಜಾಲದಲ್ಲಿ ಸೆರೆಹಿಡಿದಿಡುತ್ತದೆ. ಅವರು ಹಳ್ಳಿಯಲ್ಲಿ ದಿಲ್ಲಿಯನ್ನು ಧಿಕ್ಕರಿಸಿ ಮಾತನಾಡಿದರೆ ದಿಲ್ಲಿಗೆ ಹೋದಾಕ್ಷಣ ಹಳ್ಳಿಯನ್ನು ಅಲಕ್ಷಿಸುವಂತಹ ಮಾತನಾಡುತ್ತಾರೆ; ಇಲ್ಲಿ ಹಳ್ಳಿಯ ಹಿತವೇ ಮುಖ್ಯ ಎಂದವರು ಅಲ್ಲಿ ರಾಷ್ಟ್ರದ ಹಿತ ಅದಕ್ಕಿಂತ ಮುಖ್ಯ ಎನ್ನುತ್ತಾರೆ. ಅವರು ಹಾಗೆ ಪ್ರತಿಪಾದಿಸುವ ‘ರಾಷ್ಟ್ರ’ ಹಾಗೂ ‘ಅಭಿವೃದ್ಧಿ’ಯ ಪರಿಕಲ್ಪನೆಗಳು ಆಳದಲ್ಲಿ ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಪ್ರೇರಿತಗೊಂಡವು; ಆಧುನಿಕ ಭಾರತದ ಪ್ರತಿಷ್ಠಿತ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವಂಥವು.

ಪಶ್ಚಿಮದ ಇಂಥ ಮಾಯೆಗೆ ನಾವು-ಜನಸಾಮಾನ್ಯರೂ ಮಾರುಹೋಗಿದ್ದೇವೆ. ನಮ್ಮ ಒಟ್ಟೂ ಸಮಾಜದ ಸಮಸ್ಯೆಯೆಂದರೆ, ನಾವು ಬಹಿರಂಗದಲ್ಲಿ ಪಶ್ಚಿಮವನ್ನು ಎಷ್ಟೇ ವಿರೋಧಿಸಿದರೂ ಕೂಡ ಅಂತರಂಗದಲ್ಲಿ ಮಾತ್ರ ಅವರ ಮಾದರಿಗಳನ್ನು ಮನ್ನಿಸುತ್ತಿರುತ್ತೇವೆ; ನಮಗೆ ಅರಿವಿಲ್ಲದೆ ಅವರ ರಾಷ್ಟ್ರಕಲ್ಪನೆ ಹಾಗೂ ಚರಿತ್ರೆಯ ಕಲ್ಪನೆಗಳನ್ನು ಅನುಸರಿಸುತ್ತಿರುತ್ತೇವೆ. ಊಟ-ತಿಂಡಿ, ಉಡುಗೆ-ತೊಡಿಗೆ, ಚಿಂತನೆ ಕ್ರಿಯೆಗಳಲ್ಲೆಲ್ಲ ಅವರನ್ನು ಹೋಲುವ ಭರದಲ್ಲಿ ನಮ್ಮ ಅನನ್ಯತೆ ನಷ್ಟವಾಗುತ್ತಿರುವುದರ ಬಗ್ಗೆ ನಮಗೆ ಅಷ್ಟು ಎಚ್ಚರವಿರುವುದಿಲ್ಲ. ಉದಾಹರಣೆಗೆ: ಜಾಗತೀಕರಣದ ಹೆಸರಿನಲ್ಲಿ ಇಂದು ನಮ್ಮಲ್ಲಿ ನಡೆಯುತ್ತಿರುವುದು ಬಹುಪಾಲು ದೇಶೀಯ ಪರಂಪರೆಗಳ ನಿರ್ಲಕ್ಷ್ಯವೊ ನಾಶವೊ ಆಗಿದೆ. ಇಂದಿನ ಸಂದರ್ಭದಲ್ಲಿ ಬರಿಯೆ ಕನ್ನಡ-ಸಂಸ್ಕೃತಗಳನ್ನು ಕಲಿತವನು ಆಧ್ಯಾಪಕನಾಗುವುದು ದುಸ್ಸಾಧ್ಯವಾದ ಮಾತು; ಅದೆ ಕೊಂಚ ಪಾಶ್ಚಿಮಾತ್ಯ ಸಾಹಿತ್ಯ-ಸಿದ್ಧಾಂತಗಳನ್ನು ತಿಳಿದಿದ್ದರೆ ಆತನಿಗೆ ಪ್ರಥಮ ಪ್ರಾಶಸ್ತ್ಯ ಲಭಿಸುತ್ತದೆ. ಈ ನಿಯಮ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಿಗೂ ಅನ್ವಯಿಸುವಂತಹುದು.

ಪಶ್ಚಿಮ ನಮ್ಮನ್ನು ಹೀಗೆ ಸಮ್ಮೋಹಗೊಳಿಸಿದ್ದರಲ್ಲಿ ಪಾಶ್ಚಿಮಾತ್ಯ ವೈದ್ಯಕೀಯ ಶಾಸ್ತ್ರದ್ದೂ ದೊಡ್ಡದೊಂದು ಪಾಲುಂಟು. ಇಂದು ಇಡಿ ಜಗತ್ತಿನಲ್ಲಿ ಅದೊಂದೆ ವೈಜ್ಞಾನಿಕವಾದ ವೈದ್ಯಕೀಯ ಪದ್ಧತಿ ಎಂದಾಗಿ ಹೋಗಿ, ಉಳಿದ ವಿಭಿನ್ನ ಕ್ರಮಗಳಿಗೆ ಅಂಥ ಶಕ್ತಿ ಹಾಗೂ ಆಕರ್ಷಣೆಗಳು ಇಲ್ಲದಂತಾಗಿದೆ. ಹುಟ್ಟಿದವರೆಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಪಾಶ್ಚಿಮಾತ್ಯ ವೈದ್ಯಕೀಯ ವಿಜ್ಞಾನ ನಮ್ಮ ಸಾವನ್ನು ಸ್ವಲ್ಪ ಮಟ್ಟಿಗಾದರೂ ಮುಂದೂಡುವ ಭರವಸೆ ನೀಡಿ, ಹಾಗೆ ಮಾಡುವುದೆ ಸರ್ವೋತ್ತಮ ಸಾಧನೆಯೆಂಬ ಭ್ರಮೆಯನ್ನು ಮೂಡಿಸಿದೆ. ಇಂಥಲ್ಲಿ ಆ ವಿಜ್ಞಾನದ ಮೂಲಭೂತ ಗುಣ-ದೋಷಗಳಿಗಿಂತ ಅದರ ತತ್‌ಕ್ಷಣದ ಉಪಯುಕ್ತತೆಯೆ ಹೆಚ್ಚು ಚರ್ಚೆಯಾಗುತ್ತದೆ; ಅದೆ ಹೆಚ್ಚು ಮೌಲಿಕವಾದುದೆಂದು ನಂಬಿಕೆ ಬೆಳೆಯುತ್ತದೆ. ಹೀಗೆನ್ನುವಾಗ ನಾನು ಆಧುನಿಕ ವೈದ್ಯ ವಿಜ್ಞಾನವನ್ನು ಸಂಪೂರ್ಣವಾಗೇನೂ ಅಲ್ಲಗಳೆಯುತ್ತಿಲ್ಲ. ಅದರ ಶಕ್ತಿಯ ಒಂದು ಮುಖವನ್ನು ನಾವೇ ಪ್ರತ್ಯಕ್ಷ ಕಂಡಿದ್ದೇನೆ; ಎರುಡ ವರ್ಷಗಳ ಹಿಂದೆ ಅದು ನನ್ನ ಸಹಾಯಕ್ಕೆ ಬರದಿದ್ದಲ್ಲಿ ಇಂದು ನಾನು ಇಲ್ಲಿ ನಿಮ್ಮ ನಡುವೆ ಇರುತ್ತಿರಲಿಲ್ಲ. ಹಾಗಿದ್ದೂ ಅದರ ಮತ್ತೊಂದು ಆಯಾಮಕ್ಕೆ ನಾವು ಕುರುಡಾಗುಳಿಯಬಾರದು. ಆಧುನಿಕ ವೈದ್ಯಕೀಯ ಶಾಸ್ತ್ರದ ಸಮಸ್ಯಾತ್ಮಕತೆ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಆರ್ಥಿಕ ಕ್ಷೇತ್ರಕ್ಕೂ ಪ್ರವೇಶಿಸಿದೆ. ನನ್ನ ಗೆಳೆಯನೊಬ್ಬ ಹೇಳುತ್ತಿದ್ದ; ಹಿಂದೆ ಮಧ್ಯಮ ವರ್ಗದವರು ತಮ್ಮ ಒಟ್ಟೂ ಆದಾಯದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಮಗನ ವಿದ್ಯಾಭ್ಯಾಸಕ್ಕೆಂದೂ ಇನ್ನೊಂದು ಲಕ್ಷವನ್ನು ಮಗಳ ಮದುವೆಗೆಂದೂ ತೆಗೆದಿಡುತ್ತಿದ್ದರು. ಈಗ ಅವುಗಳ ಜೊತೆ ಮತ್ತೊಂದು ಲಕ್ಷವನ್ನು ತಮ್ಮ ಹೃದಯ ಶಸ್ತ್ರಚಿಕಿತ್ಸೆಗೆಂದು ಮೀಸಲಾಗಿಡಬೇಕಾಗಿದೆ.

ಆಧುನಿಕ ಪಾಶ್ಚಿಮಾತ್ಯ ನಾಗರಿಕತೆ ಹೀಗೆ ನಮ್ಮ ದೇಹ ಬುದ್ಧಿ ಮನಸ್ಸುಗಳನ್ನು ಸಂಪೂರ್ಣವಾಗಿ ಸೆರೆಹಿಡಿದಿರುವಂತಿದೆ. ಈ ಪ್ರಕ್ರಿಯೆ ಹೀಗೆಯೆ ಅವ್ಯಾಹತವಾಗಿ ಮುಂದುವರೆದರೆ ನಮ್ಮ ಗತಿ ಏನಾಗಬಹುದು?

ಇಲ್ಲಿ ನನ್ನ ಇನ್ನೋರ್ವ ಗೆಳೆಯ ಹೇಳಿದ ಪ್ರಸಂಗ ನೆನಪಾಗುತ್ತದೆ. ಭಾರತದಲ್ಲಿ ಹುಟ್ಟಿ ಬೆಳೆದು ಸದ್ಯ ಅಮೆರಿಕದಲ್ಲಿ ವರ್ತಕನಾಗಿ ನೆಲೆಸಿರುವ ಆತ ಇತ್ತೀಚೆಗೆ ವ್ಯವಹಾರ ನಿಮಿತ್ತ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದನಂತೆ. ಮೊದಲಿನಿಂದಲೂ ಬೌದ್ಧ ಧರ್ಮದ ಬಗ್ಗೆ ಅಪಾರ ಆಸಕ್ತಿಯಿದ್ದ ಅವನಿಗೆ ಬೌದ್ಧ ಬಹುಸಂಖ್ಯಾತವಾದ ಆ ದೇಹದಲ್ಲಿ ಆ ಧರ್ಮದ ಖ್ಯಾತ ಪ್ರಾಚೀನ ಕೇಂದ್ರಗಳನ್ನು ಸಂದರ್ಶಿಸುವ ಹಂಬಲವಿತ್ತು. ವ್ಯಾಪಾರ ಚರ್ಚೆಯ ನಂತರ ಅವರು ಆ ಬಗ್ಗೆ ಅಲ್ಲಿಯ ಉದ್ಯಮಿಗಳಲ್ಲಿ ವಿಚಾರಿಸಿದನಂತೆ. ಆಗ ಆ ಉದ್ಯಮಿಗಳಿಂದ ಬಂದ ಉತ್ತರ ಆಘಾತಕಾರಿಯಾಗಿತ್ತು. ಮೊದಲನೆಯದಾಗಿ ಆ ಸ್ಥಳಗಳ ಹೆಸರುಗಳೇ ಅವರಿಗೆ ತಿಳಿದಿರಲಿಲ್ಲ. ನಂತರ ನಮ್ಮ ಸ್ನೇಹಿತರು ಆ ಹೆಸರುಗಳನ್ನು ಹೇಳಿ ಅವುಗಳ ಮಹತ್ವವನ್ನು ವಿವರಿಸಿದ ಮೇಲೂ ಅವರಿಗೆ ಅದರ ಅರ್ಥ ಮನದಟ್ಟಾಗಲಿಲ್ಲ. ಆ ಉದ್ಯಮಿಗಳು ಕೊನೆಗೆ ಹೇಳಿದರಂತೆ; ‘ಕ್ಷಮಿಸಿ, ನಿಮ್ಮ ಅಮೆರಿಕೆಯ ಜೊತೆ ಆಧುನಿಕ ಅಭಿವೃದ್ಧಿಯ ಸ್ಪರ್ಧೆಗೆ ಇಳಿದ ಕ್ಷಣದಿಂದ ನಾವು ನಮ್ಮ ಭೂತಕಾಲವನ್ನೆಲ್ಲ ಉಚ್ಛಾಟಿಸಿದೆವು.’ ನಿಜ ಅವರು ಆ ನಂತರ ಕಾರು-ಟಿವಿ-ಫ್ರಿಜ್‌ಗಳನ್ನು ಮಾಡಿ ಎಲ್ಲವನ್ನೂ ಅಮೆರಿಕೆಗೆ ಮಾರಿದರು, ಹೇರಳ ಲಾಭ ಗಳಿಸಿಕೊಂಡರು; ಆದರೆ ಜೊತೆಗೆ ತಮ್ಮ ಪರಂಪರೆಯನ್ನು ಸ್ವಂತಿಕೆಯನ್ನು ಕಳೆದುಕೊಂಡರು. ಹೀಗೆ ಸ್ಮೃತಿಯನ್ನು ಕಳೆದುಕೊಂಡವರಿಗೆ ತಾವು ಸುಖಿಗಳೊ ಇಲ್ಲ ದುಃಖಿಗಳೊ ಎನ್ನುವ ಪ್ರಜ್ಞೆಯೂ ಇರುವುದಿಲ್ಲ. ಒಂದು ಅರ್ಥದಲ್ಲಿ ಸುಖ-ದುಖಃಗಳ ನಡುವಿನ ವ್ಯತ್ಯಾಸವನ್ನು ಮರೆತವರಿಗೆ ಮಾತ್ರ ಹಾಗೆ ಒಂದೇ ಸಮನೆ ದುಡ್ಡು ಮಾಡಲು ಸಾಧ್ಯ.

ಸ್ವಾರಸ್ಯವೆಂದರೆ, ಹೀಗೆ ಬೇರೆಲ್ಲರ ಜೀವನ ಶೈಲಿಗಳನ್ನು ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೊ ನಿರ್ಧರಿಸುವ ಅಮೆರಿಕನ್ನರು ತಮ್ಮ ಜೀವನ ಕ್ರಮವನ್ನು ನಿರ್ಧರಿಸುವ ಶಕ್ತಿಯನ್ನು ಮಾತ್ರ ತಮ್ಮಲ್ಲೆ ಇಟ್ಟುಕೊಂಡಿರುತ್ತಾರೆ. ಬೇರೆ ಬೇರೆ ದೇಶಗಳ ಉತ್ಕೃಷ್ಟ ಅಂಶಗಳನ್ನೆಲ್ಲವನ್ನೂ ಅವರು ತಮ್ಮಲ್ಲಿಗೆ ತರಿಸಿಕೊಂಡು ರುಚಿ ನೋಡಿ ಆನಂದಿಸುತ್ತಾರೆ. ಅವೆಲ್ಲವೂ ಅವರಿಗೆ ‘ಎತ್ನಿಕ್ ಐಟಂ’ಗಳು – ಎತ್ನಿಕ್ ಭಾರತೀಯ ಸಂಗೀತ, ಎತ್ನಿಕ್ ಚೈನೀಸ್ ಆಹಾರ, ಎತ್ನಿಕ್ ಆಫ್ತಿಕನ್ ನೃತ್ಯ ಇತ್ಯಾದಿಯಾಗಿ. ಅಂದರೆ, ಅವರ ದೃಷ್ಟಿಯಲ್ಲಿ ತಾವು ಮಾತ್ರ ನಾಗರಿಕರು, ಶಿಷ್ಟರು, ಮಾನವಕುಲದ ಪ್ರಧಾನಧಾರೆಯವರು; ಉಳಿದವರೆಲ್ಲರೂ ತುಸು ಅಶಿಷ್ಟ, ತುಸು ವಿಲಕ್ಷಣವಾದವರು. ಇಂದಿನ ಬೌದ್ಧಿಕ ವಲಯಗಳಲ್ಲಿ ‘ಎತ್ನಿಕ್‌’ನಷ್ಟು ಹೊಲಸಾದ ಪದ ಮತ್ತೊಂದಿಲ್ಲವೆಂದೆ ನನ್ನ ನಂಬಿಕೆ. ಇಂದು ಬಳಕೆಯಾಗುತ್ತಿರುವ ರೀತಿಯಲ್ಲಿ ಆ ಪದ ತನ್ನ ಸೊಕ್ಕನ್ನೂ ಅನ್ಯರ ಬಗ್ಗೆ ಅಗೌರವನ್ನೂ ಪ್ರಕಟಿಸುವಂಥದ್ದು. ನಿಜವಾಗಿ ನೋಡಿದರೆ, ಅಮೆರಿಕನ್ನರಿಗೆ ನಾವು ಎತ್ನಿಕ್ ಆದಂತೆ ನಮಗೆ ಅವರು ಎತ್ನಿಕ್ ಹೌದು. ಬಿಲ್ ಕ್ಲಿಂಟನ್‌ನ ಲೈಂಗಿಕ ಹಗರಣವನ್ನೆ ತೆಗೆದುಕೊಳ್ಳಿ. ಅದು ಭಾರತೀಯರ ಕಣ್ಣಿಗೆ ಹೀಗೆ ಕಾಣಲು ಸಾಧ್ಯ: ಅಮೆರಿಕನ್ ಬುಡಕಟ್ಟು ಜನಾಂಗದಲ್ಲಿ ರಾಷ್ಟ್ರನಾಯಕನೋರ್ವ ಇಂಥ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ತಪ್ಪೇನಲ್ಲ; ಇದು ಆ ಬುಡಕಟ್ಟಿನ ಸಹಜ ನಡವಳಿಕೆ.

ಅನ್ಯವಾದ್ದೆಲ್ಲವನ್ನೂ ಅರೆಕರುಣೆ ಅರೆಆಲಕ್ಷ್ಯದಿಂದ ಕಾಣುವ ಪಶ್ಚಿಮ ಇನ್ನು ಕೆಲವೊಮ್ಮೆ ಅದನ್ನು ಅಹಂಕರದಿಂದ ಕಾಣುವುದೂ ಉಂಟು. ಇಂಥ ಸೊಕ್ಕು ಪಾಶ್ಚಿಮಾತ್ಯರಲ್ಲಷ್ಟೆ ಅಲ್ಲದೆ ಪಶ್ಚಿಮೀಕೃತ ಪೌರ್ವೌತ್ಯರಲ್ಲೂ ಕಾಣಸಿಗುತ್ತದೆ. ಭಾರತ-ಸಂಜಾತ ಸಲ್ಮಾನ್ ರಷ್ದಿ ಭಾರತೀಯ ಸಾಹಿತ್ಯದ ಬಗ್ಗೆ ಹೇಳಿದ್ದನ್ನೆ ನೋಡಿ. ಆತನ ಪ್ರಕಾರ ಭಾರತೀಯರು ಆಂಗ್ಲ ಭಾಷೆಯಲ್ಲಿ ಬರೆದದ್ದು ಮಾತ್ರ ಸಾಹಿತ್ಯ, ಭಾರತದ ಪ್ರಾಂತೀಯ ಭಾಷೆಗಳಲ್ಲಿ ಬಂದದ್ದು ಯಾವುದೂ ಸಾಹಿತ್ಯವಲ್ಲ. ಆ ವಿಷಯದಲ್ಲಿ ವಿನೋದದ ಪ್ರಸಂಗವೊಂದು ನಡೆಯಿತು. ರಷ್ದಿಯ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಲು ಅಮೆರಿಕೆಯ ಕಾರ್ನೆಲ್‌ ವಿಶ್ವವಿದ್ಯಾನಿಲಯದವರು ನನ್ನನ್ನು ಕರೆದಿದ್ದರು. ಸಭೆಯಲ್ಲಿ ನಾನು ಮಾತನಾಡಲೆಂದು ಎದ್ದು ನಿಂತೆ. ವಿಷಯದ ನೆನಪಿತ್ತು. ವ್ಯಕ್ತಿಯ ನೆನಪು ಮಾತ್ರ ಇರಲಿಲ್ಲ. ಕೆಲಕ್ಷಣ ಪರದಾಡಿದ ನಂತರ ಸಭಿಕರೆ ನನಗೆ ಆತನ ಹೆಸರನ್ನು ನೆನಪಿಸಿಕೊಟ್ಟರು. ಅದನ್ನೇ ಬಳಸಿಕೊಂಡು ನಾನು ಹೇಳಿದೆ ‘ನೋಡಿ ನಾನು ಅವನ ಹೆಸರನ್ನು ಹೀಗೆ ಮರೆತುಬಿಡುವಷ್ಟು ಕ್ಷುಲ್ಲಕನಾತ’. ನಮ್ಮ ದೇಶಭಾಷೆಗಳ ಠಾಕೂರ್, ಪ್ರೇಮ್‌ಚಂದ್, ಕಾರಂತ, ಬೇಂದ್ರೆ, ಮಾಸ್ತಿ, ಕುವೆಂಪುರಂಥವರನ್ನು ತಿಳಿಯದೆ ಇಂಥ ಠೇಂಕಾರದ ಮಾತುಗಳನ್ನಾಡುವ ಸಂಕುಚಿತ ಮನೋಭಾವದ ವ್ಯಕ್ತಿಯ ಬಗ್ಗೆ ನಮಗೆ ಕಿಂಚಿತ್ತು ಗೌರವವೂ ಮೂಡುವುದು ಅಸಾಧ್ಯ. ಅಷ್ಟಕ್ಕೂ ರಷ್ದಿಯ ಅಭಿಪ್ರಾಯವನ್ನು ಗಮನಿಸಿ ಗಣಿಸುವವರಾದರೂ ಯಾರು? ಇಂಗ್ಲಿಷ್ ಪತ್ರಿಕೆಗಳನ್ನಷ್ಟೆ ಓದುವವರು, ಇಂಗ್ಲಿಷ್ ಸರ್ವಸ್ವವೆಂದು ಬಗೆಯುವವರು.

ಇಂಥದೆ ಇನ್ನೊಂದು ಪ್ರಸಂಗವನ್ನು ನಾನು ದೆಹಲಿಯಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಯಾದ ನೆಹರೂ ಸೆಂಟರ್‌ನಲ್ಲಿ ಎದುರಿಸಬೇಕಾಗಿಬಂದಿತು. ಅಲ್ಲಿ ಸಭೆಯೊಂದರಲ್ಲಿ, ರವೀಂದ್ರನಾಥಠಾಕೂರರನ್ನು ಒಳಗೊಂಡು ಅನೇಕ ಬಂಗಾಳಿ ಲೇಖಕರನ್ನು ಇಂಗ್ಲಿಷಿಗೆ ಅನುವಾದಿಸಿರುವ ಪಾಶ್ಚಾತ್ಯನೋರ್ವ ರಷ್ದಿಯ ಅಭಿಪ್ರಯವನ್ನು ಅನುಮೊದಿಸಿ ಮಾತನಾಡಿದ; ತಾನೇ ಕಂಡಂತೆ ಭಾರತೀಯ ಭಾಷಾ ಸಾಹಿತ್ಯ ಕಳಪೆಯಾದ್ದರಿಂದ ರಷ್ದಿ ಹೇಳಿದ್ದರಲ್ಲಿ ದೋಷವೇನಿಲ್ಲವೆಂದು ವಾದಿಸಿದ. ನಾನು ತಡೆಯಲಾಗದೆ ಕೊಂಚ ತೀಕ್ಷ್ಣವಾಗಿಯೆ ಅವನಿಗೆ ಹೇಳಿದೆ; ‘ಠಾಕೂರರಂಥವರನ್ನು ಭಾಷಾಂತರಿಸಿರುವ ನೀವು ಹೀಗೆ ಹೇಳುವುದು ಸರಿಯಲ್ಲ. ನೀವು ಹೇಳುವಂತೆ ಭಾರತೀಯ ಭಾಷಾಸಾಹಿತ್ಯ ಕಳಪೆಯೆ ಎಂದಾದಲ್ಲಿ ಬಹುಪಾಲು ಅಮೆರಿಕನ್ ಮತ್ತು ಆಂಗ್ಲ ಕೃತಿಗಳ ಮಟ್ಟಿಗೂ ಆ ಮಾತು ಸತ್ಯವಲ್ಲವೆ? ನಮ್ಮ ಪ್ರತಿಷ್ಠಿತ ಪುಸ್ತಕದಂಗಡಿಗಳಲ್ಲಿ ರಾರಾಜಿಸುವ ನಿಮ್ಮವರ ಇಂಗ್ಲಿಷ್ ಕೃತಿಗಳನ್ನು ನೋಡಿ. ಐದನೂರು-ಆರುನೂರು ಪುಟಗಳುದ್ದದ ಆ ಕಾದಂಬರಿಗಳಲ್ಲಿ ಒಂದಾದರೂ ಸಾಹಿತ್ಯದ ಅಂಶವಿದೆಯೆ?’ ಕಕ್ಕಾಬಿಕ್ಕಿಯಾದ ಆತ ಸಭೆ ಮುಗಿದ ಮೇಲೆ ಬಳಿ ಬಂದು ಸಮಜಾಯಿಷಿಯ ಮಾತನ್ನಾಡಲು ಯತ್ನಿಸಿದ. ಆದರೆ ನಮ್ಮ ಬಹುಸಮೃದ್ಧ ಪರಂಪರೆಗೆ ಅವಮಾನ ಮಾಡಿದ್ದ ಆತನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಮನಸ್ಸು ನನಗಿರಲಿಲ್ಲ.

ಇಂಥವರು ಮಾಡುವ ಭಾಷಾಂತರಗಳ ಹಿಂದೆಯೂ ಸೂಕ್ಷ್ಮವಾದೊಂದು ರಾಜಕೀಯವಿರುತ್ತದೆ. ನಮ್ಮ ಶ್ರೇಷ್ಠ ಕೃತಿಗಳನ್ನು ಅವರು ಅನುವಾದಿಸುವುದು ಅವು ಶ್ರೇಷ್ಠವೆಂಬ ಕಾರಣಕ್ಕಾಗಿಯಲ್ಲ; ಬದಲಿಗೆ, ಅವು ಅನ್ಯ, ಎತ್ನಿಕ್, ಸಂಸ್ಕೃತಿಯೊಂದರ ಚಂದದ ನಿದರ್ಶನಗಳು ಎನ್ನುವ ಕಾರಣಕ್ಕಾಗಿ. ಅರ್ತಾತ್‌, ಅವರದ್ದು ತಮ್ಮ ಹಾಗೂ ಪರರ ಸಮಾಜಗಳ ಬಗ್ಗೆ ಸಮಾನ ಗೌರವ ತೋರುವ, ಪರಸ್ಪರ ಕೊಡು-ಕೊಳುವಿಕೆಯ ಮನೋಧರ್ಮವಾಗಿರದೆ, ತಮ್ಮದಷ್ಟೆ ನಿಜವಾದ ನಾಗರಿಕತೆ, ಉಳಿದವೆಲ್ಲ ತಮ್ಮ ಮನೆ-ಗ್ರಂಥಾಲಯ-ವಿಶ್ವವಿದ್ಯಾಲಯ-ಸಂಗ್ರಹಾಲಯಗಳಲ್ಲಿ ಸಾಕಿಕೊಂಡು ಮುದ್ದಿಸಬಹುದಾದ ಅಲಂಕರಣಗಳು ಎನ್ನುವ ನಿಲುವಾಗಿರುತ್ತದೆ.

ಇದು, ಚಾರಿತ್ರಿಕ ಕಾಲಮಾನದ ಇಪ್ಪತ್ತನೆ ಹಾಗೂ ಇಪ್ಪತ್ತೊಂದನೆಯ ಶತಮಾನಗಳು ಸೃಷ್ಟಿಸಿರುವ ಸಮಸ್ಯಾತ್ಮಕ ಜಾಗತಿಕ ಸನ್ನಿವೇಶದ ಒಂದು ಮುಖ.

ಇದರ ಸವಾಲನ್ನು ನಾವು ಸ್ವಾಭಿಮಾನದಿಂದಲೂ ಆತ್ಮ ವಿವೇಚನೆಯಿಂದಲೂ ಎದುರಿಸಬೇಕು. ಇಲ್ಲಿಯೂ ಕೆಲವು ಗೊಂದಲಗಳಿರುವುದು ನಿಜ. ಉದಾಹರಣೆಗೆ: ಇಂಥ ಆತ್ಮಗೌರವ ಕೆಲವೆಡೆ ಅಹಂಕಾರವಾಗಿ ಮಾರ್ಪಡಬಹುದು; ವಿನಯ ದೈನ್ಯವಾಗಿ ಪರಿಣಮಿಸಬಹುದು. ಕೆಲವೊಮ್ಮೆ ನಮ್ಮ ಭೂತವೇ ಸರ್ವಶ್ರೇಷ್ಠ ಎನ್ನುವ ಗರ್ವ ಬೆಳೆಯಬಹುದು; ಇನ್ನೂ ಕೆಲವೊಮ್ಮೆ ಭವಿಷ್ಯದ ಮೇಲಷ್ಟೆ ಕಣ್ಣು ನೆಟ್ಟು ಭೂತವನ್ನೆಲ್ಲ ದಹನ ಮಾಡಬೇಕೆನ್ನುವ ಧಾವಂತ ಮೂಡಬಹುದು.

ಇಂಥ ಅತಿರೇಕವಾದಗಳ ನಡುವೆ ತೊಳಲಾಡುವಾಗ ಹಲವೊಮ್ಮೆ ನಮ್ಮ ಹಿರಿಯರ ನೆನಪು ಕಾಡುವುದುಂಟು. ಅವರು ತಂತಮ್ಮ ಕಾಲದ ಇಂಥದೆ ಬಿಕ್ಕಟ್ಟುಗಳಿಗೆ ಹುಡುಕಿಕೊಂಡ ಪರಿಹಾರ ಮಾರ್ಗದ ಮಿಂಚು ಹೊಳೆಯುವುದುಂಟು.

ಬೇಂದ್ರೆ, ಮಾಸ್ತಿ, ಕುವೆಂಪು, ಕಾರಂತರರಂಥವರು ಕನ್ನಡ ನುಡಿಯಲ್ಲಿ ಕನ್ನಡ ನಾಡಿನ ಬಗ್ಗೆ ಬರೆಯುವಾಗ ಇಡಿಯ ವಿಶ್ವದ ಬಗ್ಗೆಯೂ ಬರೆಯುತ್ತಿರುವ ಆತ್ಮವಿಶ್ವಾಸದಿಂದ ತುಂಬಿಕೊಂಡವರಾಗಿದ್ದರು. ಕಾವೇರಿಯಿಂದ ಗೋದಾವರಿವರೆಗಿನ ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಬರೆಯುತ್ತಿರುವಾಗಲೂ ತಾನು ಕಾಳಿದಾಸ ಹಾಗೂ ವ್ಯಾಸರಿಗೆ ಸರಿಸಮಾನವಾಗಿ ಬರೆಯಬಲ್ಲೆ ಎನ್ನುವ ಕೆಚ್ಚು ಪಂಪನಿಗಿತ್ತು.

ಅದೇ ರೀತಿ, ‘ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ…’ ಎಂದು ಹಾಡುವ ಕವಿಯ ದೃಷ್ಟಿಯಲ್ಲಿ ಭೂಮಿಗೆ ಕರ್ನಾಟಕವೆ ಕೇಂದ್ರ. ಅಥವೂ ಸೂಚ್ಯಾರ್ಥದಲ್ಲಿ, ಭೂಮಿಯ ಮೇಲಿನ ಯಾವ ಸ್ಥಳವೂ ಅದರ ಕೇಂದ್ರವಾಗಬಹುದು, ಆಗಿಯೂ ಇರುವುದು. ಇಂಥ ಬಹುಕೇಂದ್ರ ಪ್ರಜ್ಞೆಯುಳ್ಳ ಭಾಷೆಗಳು ತಮ್ಮ ಸ್ವಂತ ನೆಲದಲ್ಲಿ ಭದ್ರ ಬೇರೂರಿನಿಂತಿರುವಂತೆಯೆ ಹೊರ ವಲಯಗಳಿಗೂ ತಮ್ಮ ಶಾಖೆಗಳನ್ನು ಚಾಚಿರುತ್ತವೆ. ಸ್ಥಳೀಯವಾದುದಕ್ಕೆ ಸೀಮಿತವಾಗಿರುವಂತೆಯೆ ವಿಶ್ವಾತ್ಮಕ ಪ್ರಜ್ಞೆಯೊಂದಿಗೆ ಕಂಗೊಳಿಸುತ್ತಿರುತ್ತವೆ. ಉದಾಹರಣೆಗೆ : ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕೃತಿಯಲ್ಲಿ ಕಳೆದುಹೋದ ಗೆಳೆಯ ಡಿ.ಆರ್. ನಾಗರಾಜ್ ಕಾಣಿಸುವಂತೆ ಅಲ್ಲಮ ತನ್ನ ಕನ್ನಡ ವಚನಗಳನ್ನು ಸುಮಾರು ಒಂದು ಸಾವಿರ ವರ್ಷಗಳ ಪರಂಪರೆಯ ಶೈವ ಸಂಪ್ರದಾಯದ ನೆನಪಿನ ನೆರಳಲ್ಲೆ ಬರೆಯುತ್ತಾನೆ. ಅದರ ಮಂಡನೆ – ಖಂಡನೆ – ಚರ್ಚೆಗಳೆಲ್ಲವನ್ನೂ ಆತ ಕನ್ನಡದಲ್ಲಿಯೆ ನಡೆಸುತ್ತಾನೆ. ಶೇಕ್‌ಸ್ಪಿಯರನ ಕಥೆಯೂ ಇಂಥಾದ್ದೆ. ಅವನ ಕಾಲದಲ್ಲಿ ಇಂಗ್ಲಿಷ್ ಬಡಜನರ ಭಾಷೆಯಾಗಿತ್ತು; ಆಳುವವರೆಲ್ಲ ಫ್ರೆಂಚ್‌ಭಾಷೆಯನ್ನು ನೆಚ್ಚಿಕೊಂಡಿದ್ದರು, ಇಲ್ಲ ಫ್ರೆಂಚರಾಗಿದ್ದರು. ಅಂಥ ಸಂದರ್ಭದಲ್ಲಿ ಬಂದ ಶೇಕ್‌ಸ್ಪಿಯರ್, ಜಗತ್ತಿನ ಅತಿಶ್ರೇಷ್ಠ ಸಾಹಿತ್ಯಕೃತಿಗಳಲ್ಲಿ ಕೆಲವೊಮ್ಮೆ ಇಂಗ್ಲಿಷಿನಲ್ಲಿ ಸೃಷ್ಟಿಸಿದ. ಹಾಗೆಯೇ ಡಾಂಟೆ ಜಗತ್ತಿನ ಅತ್ಯಂತ ಸಣ್ಣ ಭಾಷೆಯೊಂದರಲ್ಲಿ ಅತ್ಯಂತ ಘನವಾದುದನ್ನು ಬರೆದ.

ಮಾನವ ವಿಶ್ವದ ಅತ್ಯಂತ ಮೌಲಿಕ ಸಾಧನೆಗಳೆಲ್ಲವೂ ಹೀಗೆ ಸ್ಥಳೀಯತೆಯ ಸತ್ವದಿಂದಲೆ ಸಿದ್ಧಿಯಾಗಿರುವಂಥವು. ಇಂದು ಮಾತ್ರ ಹಿಂದೆಂದೂ ಕಾಣದಂಥ ರೀತಿಯ ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಭೌಗೋಳಿಕ – ರಾಜಕೀಯ – ಆರ್ಥಿಕ – ಸಾಂಸ್ಕೃತಿಕ ಸ್ತರಗಳಲ್ಲೆಲ್ಲ ಜಗತ್ತಿಗೆ ಒಂದೆ ಕೇಂದ್ರವಿರುವುದು ಅನಿವಾರ್ಯ ಹಾಗೂ ಅಪೇಕ್ಷಣೀಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಕನ್ನಡದಂತಹ ಸ್ಥಳೀಯ ಸಂಸ್ಕೃತಿಗಳು ಇಂತಹ ಮಿಥ್ಯೆಯನ್ನು ಮತ್ತೊಮ್ಮೆ ಒಡೆಯಬೇಕಾಗಿದೆ. ಆ ಪ್ರಯತ್ನದಲ್ಲಿ ಇಂತಹ ಚಟುವಟಿಕೆಗಳು ಸ್ವಲ್ಪ ಮಟ್ಟಿಗಾದರೂ ಸಹಾಯಕವಾಗಬಹುದು, ಆಗಬೇಕು.

 

ನೀನಾಸಮ್ ಸಂಸ್ಕೃತಿ ಶಿಬಿರ ೨೦೦೦ ದಲ್ಲಿ ೧೫೧೦೨೦೦೦ ರಂದು ನೀಡಿದ ಪ್ರಾಸ್ತಾವಿಕ ಉಪನ್ಯಾಸ; ಸಂಗ್ರಹಜಶವಂತ ಜಾಧವ

ಕೃಪೆ : ಮಾತುಕತೆ ಹೆಗ್ಗೂಡು          

* * *