ತುಮಕೂರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಗಡಿಬಿಡಿಯಲ್ಲಿ ನಾನು ಮುಳುಗಿರುವಾಗ ಈ ಪುಸ್ತಕ ಪ್ರಕಟಣೆಗೆ ಸಿದ್ಧವಾಗುತ್ತಿದೆ. ಇದನ್ನು ಯಾಕೆ ಹೇಳಬೇಕಾಗಿ ಬಂದಿದೆಯೆಂದರೆ ಪುಸ್ತಕದ ಲೇಖನಗಳನ್ನು ಎಲ್ಲೆಲ್ಲಿಂದಲೋ ಹುಡುಕಿ ತಂದು ಒಟ್ಟು ಮಡುವುದರಲ್ಲಿ ಲೇಖನಗಳನ್ನು ತಿದ್ದುವುದರಲ್ಲಿ, ಆಯ್ಕೆ ಮಾಡುವುದರಲ್ಲಿ ನಾನು ಏನೂ ಮಾಡಲಾರದೆ ಹೋದೆ. ಎಲ್ಲವನ್ನೂ ಮಾಡಿದ್ದು ಈ ಪುಸ್ತಕದ ಪ್ರಕಾಶಕರೂ ಚಿಂತನಶೀಲರೂ ಆದ ನನ್ನ ತರುಣ ಸ್ನೇಹಿತ ನ. ರವಿಕುಮಾರ್.

ಇದೊಂದು ಪ್ರಕಾಶನ ಮಾತ್ರವಲ್ಲ; ಪ್ರೀತಿಯ ಕೆಲಸ ಎನ್ನಿಸಿದೆ ನನಗೆ. ಹೆಗ್ಗೋಡಿನಲ್ಲಿ ನಾನು ಆಡಿದ ಮಾತುಗಳೆಲ್ಲವನ್ನೂ ನನಗೇ ಆಶ್ಚರ್ಯ ವೆನ್ನುವಂತೆ ಸಂಪಾದಿಸುವ ಜಶವಂತ ಜಾಧವ್‌ರನ್ನು ನಾನಿಲ್ಲಿ ಮುಖ್ಯವಾಗಿ ನೆನೆಯಬೇಕು. ಮತ್ತೆ ರವಿಕುಮಾರ್‌ಗೆ ಜೊತೆ ನಿಂತು ಈ ಪುಸ್ತಕವನ್ನು ಮತ್ತೆ ಸೃಷ್ಟಿಸಿದವರು ಮಹೇಶ್ ಹರವೆ, ಎಂ.ಕೆ. ನರಸಿಂಹಮೂರ್ತಿ, ನಾಗೇಶ್, ಸುಮಾ ಬಿ.ಯು. ಮತ್ತು ಪಿ. ಚಂದ್ರಿಕಾ.

ಈ ಪುಸ್ತಕದಲ್ಲಿ ನಾನು ಆಡಿದ್ದು, ಬರೆದದ್ದು ಮಾತ್ರ ಕಾಣಬಾರದು. ಇವರೆಲ್ಲರೂ ಕಾಣಬೇಕೆಂದು ಆಸೆ. ಹಾಗೆಯೇ ನಾನು ಇಂಗ್ಲಿಷಿನಲ್ಲಿ ಬರೆದದ್ದನ್ನು ಕನ್ನಡಿಸಿದ ಶ್ರೀ ದೇಶಕುಲಕರ್ಣಿ, ಶ್ರೀ ಎಚ್. ಎಸ್. ವೆಂಕಟೇಶಮೂರ್ತಿ ಮತ್ತು ಶ್ರೀ ರಾಮಲಿಂಗಪ್ಪನವರಿಗೂ ನಾನು ಕೃತಜ್ಞ.

ಯು.ಆರ್. ಅನಂತಮೂರ್ತಿ
೧.೧.೨೦೦೨