ಪರಿಕಲ್ಪಿತವಾಗಿರುವ, ಅರ್ಥಪೂರ್ಣವಾದ ಹೆಸರುಳ್ಳ, ಭಾರತದ ಕುಶಲಕರ್ಮಿಗಳ ಕುರಿತಾದ ಈ ಪುಸ್ತಕದ ಪ್ರಾಮುಖ್ಯತೆ ಇರುವುದು ಇದರ ಆಳ ಮತ್ತು ವಿಸ್ತಾರಗಳಲ್ಲಿ. ಇದನ್ನು ಜಯಾಜೈಟ್ಲಿಯವರು ವಿವರಣಾತ್ಮಕ-ವಿಶ್ಲೇಷಣಾತ್ಮಕ ವಿಧಾನದಿಂದ ಸಾಧ್ಯವಾಗಿಸಿದ್ದಾರೆ. ಇಲ್ಲಿರುವ ಹತ್ತು ಅಧ್ಯಾಯಗಳಲ್ಲಿ ನಾವು ಭಾರತದ ಬೇರೆ ಬೇರೆ ಕಡೆ ವಾಸಿಸುವ ಕುಶಲಕರ್ಮಿಗಳನ್ನು ವ್ಯಕ್ತಿಗಳಾಗಿಯೂ, ಹಾಗೆಯೇ ತಂತಮ್ಮ ಕಲೆಯ ಪ್ರಾತಿನಿದಿಕ ಪ್ರತಿಭೆಗಳಾಗಿಯೂ ಕಾಣುತ್ತೇವೆ. ಇವರ ಬಗ್ಗೆ ಜಯಾಜೈಟ್ಲಿ ತಾವಷ್ಟೇ ಮಾತಾಡದೆ, ಕುಶಲಕರ್ಮಿಗಳು ತಮ್ಮ ಬಗ್ಗೆ ತಾವೇ ಮಾತನಾಡುವ ಹಾಗೆ ಮಾಡಿದ್ದಾರೆ. ಅಲ್ಲದೆ ಈ ಅಧ್ಯಯನದ ಮೂಲಕ ಈಕೆ ತೆಗೆದುಕೊಳ್ಳುವ ತೀರ್ಮಾನಗಳು ಕೇವಲ ಹೇರಿಕೆಯ ತೀರ್ಮಾನಗಳಾಗಿರದೆ ಇಲ್ಲಿನ ಕಾಣ್ಕೆಯ ಆಳ ಮತ್ತು ವಿಸ್ತಾರಗಳಿಂದ ಆಯಾಚಿತವಾಗಿ ಹುಟ್ಟಿದವುಗಳಾಗಿವೆ.

ನಾನು ಉದ್ದಿಶ್ಯಪೂರ್ವಕವಾಗಿ ಬಾರತದ ಕುಶಲಕರ್ಮಿಗಳ ಬಗ್ಗೆ ಇಲ್ಲಿ ‘ವೈಯಕ್ತಿಕ’ವಾಗಿ ತಿಳಿಯಬಹುದೆಂದು ಹೇಳಿದ್ದೇನೆ. ಯಾಕೆಂದರೆ ಈ ದೇಶವಾಸಿಗಳು ರಕ್ತಮಾಂಸಗಳಿಲ್ಲದ, ಸಾಧಾರಣೀಕರಿಸಿದ, ಚಿಕಿತ್ಸಕವಾಗಿ ವಿಶ್ಲೇಷಿಸಿದ ಸಮಾಜಶಾಸ್ತ್ರೀಯ ಕೃತಿಯೊಂದರ ಪಾತ್ರಗಳಂತಲ್ಲ. ಇವರು ನೈಜಕಥನದೊಳಗಿನ ಸಜೀವ ಪಾತ್ರಗಳಂತೆ ಇಲ್ಲಿ ಓದುಗರಿಗೆ ಎದುರಾಗುತ್ತಾರೆ. ಉದಾಹರಣೆಗೆ ಕರ್ನಾಟಕದ ಶ್ರೀಗಂಧ ಕೆತ್ತನೆಯವರ ಬಗೆಗಿನ ಜಯಾರ ಬರವಣೆಗೆಯನ್ನು ನೋಡಬಹುದು. -ವಿಮಲಮ್ಮ (ಶ್ರೀಗಂಧ ಕೆತ್ತನೆಯವನ ತಾಯಿ) ಬಳಿಬಂದು ಹತ್ತಿರವೇ ಕುಳಿತಳು. ಸಂಜೆ ಆವರಿಸುತ್ತಿತ್ತು. ನಮ್ಮ ಚರ್ಚೆಯೂ ಕೊನೆಯಾಗಲಿತ್ತು. ತೆಳಗಿದ್ದ ಸಿಬ್ಬು ಕತ್ತಿಯನ್ನು ಮಸಕೊಂಡು, ತಲೆಗೆ ಸವರಿ ಎಣ್ಣೆ ಮಾಡಿಕೊಂಡಳು. ಅಲ್ಲೇ ಇದ್ದ ಗಂಧದ ತುಂಡಿನಿಂದ ಒಂದು ದೆಬ್ಬೆ ಎಬ್ಬಿಕೊಂಡಳು. ಅದರ ಒಂದಷ್ಟನ್ನು ಚಚ್ಚೌಕವಾದ ತುಂಡುಗಳನ್ನಾಗಿ ಮಾಡಿದಳು. ಕೆಲವನ್ನು ಒಂದರ ಮೇಲೊಂದು ಜೋಡಿಸಿಕೊಂಡು ಅಂಡಾಕಾರಕ್ಕೆ ಕತ್ತರಿಸಿದಳು. ಕೆಲವನ್ನು ಸುತ್ತಿ ಹೊಸೆದಂತೆ ಮಾಡಿ ದಾರದಿಂದ ಬಿಗಿದು ಚಿಕ್ಕ ಚಿಕ್ಕ ಕಾಂಡದಾಕಾರ ಮಾಡಿದಳು. ಅಂಡಾಕಾರಕ್ಕೆ ಕತ್ತರಿಸಿದ ತುಂಡುಗಳನ್ನು ಕಾಂಡಕ್ಕೆ ಜೋಡಿಸಿ ಯಥಾವತ್ ಮಲ್ಲಿಗೆ ಮೊಗ್ಗುಗಳ ಹಾಗೇ ಕಾಣುವಂತೆ ಮಾಡಿದಳು. ಮಿಕ್ಕ ಕೆಲವು ಅಂಡಾಕಾರದ ತುಂಡುಗಳನ್ನು ಗುಲಾಬಿ ಪಕಳೆಗಳಂತೆ ಮಾಡಿ ಕಾಂಡಕ್ಕೆ ಕಟ್ಟಿದಳು. ಇವುಗಳ ಅಂಚುಗಳು ತದ್ವತ್ ಗುಲಾಬಿ ಪಕಳೆಗಳಂತೆಯೇ ಕಾಣುತ್ತಿದ್ದವು. ಹೀಗೆ ಸಿದ್ಧವಾದ ಹೂವನ್ನು ಒಂದಿಷ್ಟು ನೀರಿನಲ್ಲಿ ನೆನೆಸಿ ಮೃದುವಾಗಿಸಿ ನನ್ನ ತಲೆಗೆ ಮುಡಿಸಿದಳು…

ಇವರೆಲ್ಲ ನೈಜ ವ್ಯಕ್ತಿಗಳಾಗಿ ತಮ್ಮದೇ ನಿರ್ದಿಷ್ಟ ಸಮಸ್ಯೆಗಳೊಂದಿಗೆ ಇದ್ದರಾದರೂ, ಜಯಾ ಜೈಟ್ಲಿಯವರ ಅಧ್ಯಯನ ಕ್ರಮವು ನಮ್ಮನ್ನು ಇವರ ವೈಯಕ್ತಿಕ ಜೀವನ ಚಿತ್ರಗಳ (ಅವು ತಮ್ಮಷ್ಟಕ್ಕೇ ಅಮೂಲ್ಯವಾದವು) ಆಚೆಗೂ ಸಾಕಷ್ಟು ತಿಳಿಯುವಂತೆ ಮಾಡುತ್ತದೆ. ಹಾಗೇ ಇವರು ತಮ್ಮಜೀವನೋಪಾಯಕ್ಕಾಗಿ ತಮ್ಮದೇ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕಟ್ಟುಪಾಡುಗಳ ಚೌಕಟ್ಟಿನಲ್ಲೇ ಹೇಗೆ ಗಂಭೀರವಾಗಿ ಸೆಣಸುತ್ತಿದ್ದಾರೆ ಎಂಬುದನ್ನು ಕೂಡ ಇವರ ಅಧ್ಯಯನ ಕ್ರಮವು ತಿಳಿಸಿಕೊಡುತ್ತದೆ.

ಜಯಾಜೈಟ್ಲಿ ಒಬ್ಬ ಸಂವೇದನಾಶೀಲ ಕೇಳುಗರು. ಹಾಗೇ ಇವರಿಗೆ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಗ್ರಹಿಸುವ ಕಣ್ಣೂ ಇದೆ. ಅದೇ ರೀತಿ ಕುಶಲಕರ್ಮಿಗಳದ್ದೇ ಆದ ಚಿಂತನಾ ನೆಲೆಗಳನ್ನು ಪರಿಭಾವಿಸುವ ಶಕ್ತಿಯೂ ಉಂಟು. ಆದ್ದರಿಂದಲೇ ಈಕೆಯ ಸಾಮಾನ್ಯೀಕೃತ ಅಭಿಪ್ರಾಯಗಳು ಪೂರ್ವಗ್ರಹೀತ ಮನಸ್ಸಿನಿಂದ ಹುಟ್ಟಿ ಬಂದವುಗಳಂತೆ ಕಾಣುವುದಿಲ್ಲ. ಹಾಗೆಯೇ ಈಕೆ ಕುಶಲಕರ್ಮಿಗಳು ತಮ್ಮ ಸ್ಥಿತಿಗಳನ್ನು ಕುರಿತು ತಾವೇ ಚರ್ಚಿಸುವ ವಿವರದ ಮೂಲಕ ಒಂದು ರೋಮಾಂಚನವನ್ನೂ ನಮಗೆ ತಂದುಕೊಡಬಲ್ಲರು. ಉದಾಹರಣೆಗೆ ‘ದಿ ಧೋಕ್ರಾ ಮೆಟಲ್‌ವರ್ಕರ್ ಆಪ್ ಜಿಗ್ದಿ’ ಎಂಬ ಅಧ್ಯಾಯನವನ್ನು ನೋಡಬಹುದು.

ಈ ಕೃತಿಯಲ್ಲಿ ಮುಖ್ಯವಾದ ಒಂದು ಗ್ರಹೀತವಿದೆ. ಅದೆಂದರೆ-ಈ ವಿಶ್ವಕರ್ಮನ ಮಕ್ಕಳು ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಕಸುಬುಗಳನ್ನು ಆಶ್ರಯಿಸಿದ್ದಾರೆ. ಕುಶಲಕಸುಬುಗಳ ಮತ್ತು ಕುಶಲಕರ್ಮಿಗಳ ಕ್ಷೀಣತೆಯ ಬಗೆಗಿನ ಜಯಾರವರ ವಿವರಣೆಗಳನ್ನು ಕೇಳುತ್ತಿದ್ದಂತೆಯೇ, ನಾವು ನಮ್ಮ ಸಾಂಸ್ಕೃತಿಕ ಅನನ್ಯತೆಯ ರಕ್ಷಣೆ ಮತ್ತು ಭಾರತದ ಆಧುನೀಕರಣ-ಈ ಎರಡೂ ವಿಚಾರಗಳ ಬಗೆಗೆ ಪ್ರಸನ್ನಚಿತ್ತರಾಗಿ ಇರಲಾಗುವುದಿಲ್ಲ. ಈ ವೈರುಧ್ಯಗಳನ್ನು ಬಗೆಹರಿಸುವುದು ತುಂಬಾ ಕಷ್ಟ. ಹಾಗೇ ರಾಷ್ಟ್ರೀಯವಾಗಿ ಇವನ್ನು ಬಗೆಹರಿಸಲು ರಾಜಕೀಯವಾಗಿ ಬದ್ಧವಾಗಿರಲೂಬೇಕಾಗುತ್ತದೆ. ಮಹಾತ್ಮ ಗಾಂಧೀಜಿ ನಾವೆಲ್ಲರೂ ಪಾಶ್ಚಾತ್ಯ ನಾಗರಿಕತೆಯನ್ನು ತಿರಸ್ಕರಿಸಲೇಬೇಕೆಂದು ಹೇಳಲು ಯಾವತ್ತೂ ಹಿಂಜರಿಯಲಿಲ್ಲ. ವಿಚಿತ್ರವೆಂದರೆ ಸ್ವಾತಂತ್ರ‍್ಯಾನಂತರ ಗಾಂಧಿಯವರ ಈ ವಿಚಾರಧಾರೆ ವೇಗಗತಿಯಿಂದ ಕಾಣೆಯಾಗುತ್ತಿದೆ. ನಮಗೆ ಗಾಂಧೀಜಿಯ ಈ ಮಹತ್ವಪೂರ್ಣ ಪರ್ಯಾಯವನ್ನು ಒಪ್ಪಿಕೊಳ್ಳುವ ಇಷ್ಟವೂ ಇಲ್ಲ. ಕಾಣ್ಕೆಯೂ ಇಲ್ಲ. ಈ ಪೈಪೋಟಿಯುಕ್ತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಕರಕುಶಲ ಕಲೆಗಳನ್ನು ಪೋಷಿಸಲು ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೊ ಅದನ್ನಾದರೂ ಪ್ರಾಮಾಣಿಕವಾಗಿ ಮಾಡುವ ಉದಾರ ಮಾನವೀಯ ಕಾಳಜಿಯೂ ನಮ್ಮಲ್ಲಿಲ್ಲ.

ಯುಗಯುಗಾಂತರಗಳಿಂದಲೂ ನೀಡಲ್ಪಟ್ಟಿರುವ ನಮ್ಮ ಕುಶಲಕರ್ಮಿಗಳ ಕೊಡುಗೆಯಿಲ್ಲದೆ, ಪುನರುಜ್ಜೀವನವಾದಿಗಳು ಹೇಳುವಂತಹ- ‘ಸಾರ್ವಕಾಲಿಕ’ವಾದ ಭಾರತೀಯ ಸಂಸ್ಕೃತಿ ಎಂಬ ಸಂಸ್ಕೃತಿಯೊಂದು ಇರಲು ಸಾಧ್ಯವಿಲ್ಲ ಎಂಬುದನ್ನಾದರೂ ನಾವು ಒಪ್ಪಿಕೊಳ್ಳಬೇಕು. ಅಲ್ಲದೆ ಇವರಾರೂ ತೀವ್ರಗತಿಯಲ್ಲಿ ಆಂಗ್ಲೀಕರಣ ಮತ್ತು ಪಾಶ್ಚಾತ್ಯೀಕರಣಗೊಳ್ಳುತ್ತಿರುವ ಭಾರತೀಯ ಉಚ್ಛವರ್ಗಕ್ಕೆ ಸೇರಿದವರಲ್ಲ. ಇವರೆಲ್ಲರೂ ಹಿಂದುಳಿದ, ಕೆಳಜಾತಿಯ ಮತ್ತು ಅಲ್ಪಸಂಖ್ಯಾತವರ್ಗಕ್ಕೆ ಸೇರಿದವರೆಂಬುದನ್ನಿಲ್ಲಿ ನೆನಪಿಟ್ಟುಕೊಳ್ಳಬೇಕು. ಆದರೆ ನಮ್ಮಲ್ಲಿನ ಉಚ್ಛವರ್ಗದ ಜನ ಮಾತ್ರ ಪಾಶ್ಚಾತ್ಯಕಲೆಯಂತಲ್ಲದ, ವ್ಯಕ್ತಿವಿಶಿಷ್ಟವಾದ, ಭಾರತೀಯ ಉನ್ನತ ರಾಜಶಾಹಿವರ್ಗದವರ ಫ್ಯಾಷನ್ನುಗಳನ್ನೇ ‘ಹರಳುಗೊಂಡ ಭಾರತೀಯ ಸಂಪ್ರದಾಯ’ವೆಂದು ತಿಳಿದುಬಿಟ್ಟಿದ್ದಾರೆ.

ಇನ್ನು ನಾನೀಗ ಈ ಪುಸ್ತಕದ ಹಿಂದಿನ ಒಂದು ಬಹುಮುಖ್ಯವಾದ ತಾತ್ವಿಕ ದೃಷ್ಟಿಕೋನದ ಕಡೆ ಗಮನಹರಿಸಲೇಬೇಕಾಗಿದೆ. ನನಗಿಲ್ಲ ಕವಿ ಡಬ್ಲ್ಯು.ಬಿ.ಯೇಟ್ಸ್ ಬರೆದಿರುವ ‘ಬೈಜಾಂಟಿಯಂಗೆ ಯಾನ’ ಎಂಬ ಅದ್ಭುತ ಪದ್ಯ ನೆನಪಾಗುತ್ತಿದೆ. ‘ನನಗನ್ನಿಸುತ್ತದೆ ಪ್ರಾಚೀನ ಬೈಜಾಂಟಿಯಂನಲ್ಲಿ….ಧಾರ್ಮಿಕಜೀವನ, ಕುಶಲಕಲಾ ಮತ್ತು ನಿಜಜೀವನಗಳು ಒಂದೇ ಆಗಿದ್ದವು. ಶಿಲ್ಪ ಮತ್ತು ಕುಶಲಕರ್ಮಿಗಳು… ಒಟ್ಟು ಸಮುದಾಯಕ್ಕಾಗಿ ಮತ್ತು ಕೆಲವೇ ತಮ್ಮಂತಹವರಿಗಾಗಿ ದುಡಿಯುತ್ತಿದ್ದರು. ಇಲ್ಲಿನ ಸುಣಗಾರ, ಆಯಗಾರ (ಗೌಂಡಿ), ಚಿನಿವಾರ, ಧರ್ಮಗ್ರಂಥ ಕೆಲಸಗಾರ ಎಲ್ಲರೂ ಸರಿಸುಮಾರು ವ್ಯಕ್ತಗಳಾಗಿ ವಿಶಿಷ್ಟರಲ್ಲ. ಪ್ರಜ್ಞಾಪೂರ್ವಕವಾಗಿ ವೈಯಕ್ತಿಕ ಕಲಾಮಾದರಿಗಳ ಸೃಷ್ಟಿ ಕುರಿತು ಯೋಚಿಸದವರು ಇವರು. ಆದರೆ ತಂತಮ್ಮ ಕಸುಬುಗಳಲ್ಲಿ ಲೀನವಾದವರು – ಇದೇ ಜನಸಮುದಾಯದ ಕಾಣ್ಕೆ.’

ಪುಲಿಕಾಟ್‌ನ ತಾಳೆ ಎಲೆ ಬುಟ್ಟಿ ಹೆಣೆಯುವವರು, ಜಿಗ್ದಿಯ ಧೋಕ್ರಾಲೋಹಗಾರರು, ವಿಷ್ಣುಪುರದ ಕುಂಬಾರರು, ಕರ್ನಾಟಕದ ಶ್ರೀಗಂಧ ಕೆತ್ತನೆಯವರು ಇಂಥ ಅನೇಕ ಕುಶಲಕರ್ಮಿಗಳು ಕೂಡ ಈ ಪ್ರಾಚೀನ ಬೈಜಾಂಟಿಯಮ್‌ನ ರೀತಿ ರಿವಾಜುಗಳನ್ನೇ ಆಧುನಿಕ ಭಾರತದಲ್ಲೂ ಹೊಂದಿದ್ದಾರೆ ಎಂಬುದನ್ನು ನಮಗೆ ಜಯಾಜೈಟ್ಲಿ ತಮ್ಮ ಪುಸ್ತಕದಲ್ಲಿ ತೋರ್ಪಡಿಸಿದ್ದಾರೆ. ಈಕೆ ಅವರನ್ನು ವರ್ಣಿಸುವುದು ಹೀಗೆ-

‘ಈ ಕುಶಲಕರ್ಮಿಗಳು ಹತ್ತು ಹಲವು ಪಾತ್ರಗಳಲ್ಲಿ ಭಾರತೀಯ ಕುಶಲಕಲಾ ಸಂಪ್ರದಾಯದ ದೀಪಧಾರಿಗಳಾಗಿ, ಪ್ರಾಚೀನ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪದ್ಧತಿಗಳ ಉತ್ತರಾಧಿಕಾರಿಗಳಾಗಿ, ನಿರ್ದಿಷ್ಟ ಸಾಮುದಾಯಿಕ ಕಟ್ಟುಪಾಡುಗಳೊಳಗೇ ಬದುಕುವ ಸೃಷ್ಟಿಶೀಲರೂ-ಕಲಾಕಾರರೂ ಆಗಿ, ಕೃಷಿಯಾಧಾರಿತ ಆರ್ಥಿಕತೆಯಲ್ಲಿರುವ ಉತ್ಪಾದಕರಾಗಿ, ಭೌತಿಕ ಮತ್ತು ಆಧ್ಯಾತ್ಮಿಕತೆಗಳ ನಡುವೆ ಸಂಬಂಧವುಂಟೆಂದು ಒಪ್ಪುವ ತತ್ವಜ್ಞಾನಿಗಳಾಗಿ ಬದುಕುತ್ತಿದ್ದಾರೆ.

ಇಲ್ಲಿಂದ ಜಯಾಜೈಟ್ಲಿ ಇನ್ನೊಂದು ಮುಖ್ಯ ವಿಚಾರದ ಕಡೆಗೆ ಹೊರಳುತ್ತಾರೆ. ಪುಣ್ಯವಂತರಾದ ಭಾರತದ ಉನ್ನತವರ್ಗೀಯರು ಈ ಕುಶಲಕಲೆಗಳ ಶೃಂಗಾರ ಮತ್ತು ಅಲಂಕಾರ ಗುಣಗಳನ್ನು ಮಾತ್ರ ಅರ್ಥಮಾಡಿಕೊಂಡಿದ್ದಾರೆ. ಯೇಟ್ಸನ ಬೈಜಾಂಟಿಯಮ್‌ನಲ್ಲಿದ್ದಂತೆ ಭಾರತದಲ್ಲೂ ಕೂಡ ಕಲಾತ್ಮಕ, ಸೌಂದರ್ಯಾತ್ಮಕ ಅಲಂಕಾರಿಕ ವಸ್ತುಗಳಿಗೂ ಮತ್ತು ಪ್ರತಿನಿತ್ಯದ ಬಳಕೆಯ ವಸ್ತುಗಳಿಗೂ ಏನು ವ್ಯತ್ಯಾಸವಿರಲಿಲ್ಲ ಎಂಬುದನ್ನು ಮರೆತು ಬಿಟ್ಟಿದ್ದಾರೆ. ಆದ್ದರಿಂದ ಕುಶಲಕರ್ಮಿಗಳನ್ನು ಇವತ್ತಿನ ದಟ್ಟದರಿದ್ರ ಸ್ಥಿತಿಯಿಂದ ಮೇಲೆತ್ತಬೇಕಾದರೆ, ನಾವು ಭಾರತದ ಕರಕುಶಲ ವಸ್ತುಗಳನ್ನು ಅಲಂಕಾರಿಕ ಅಥವಾ ಸಾಂಸ್ಕೃತಿಕ ವಸ್ತುಗಳನ್ನಾಗಿ ನೋಡದೆ ನಿತ್ಯಬಳಕೆಯ ವಸ್ತುಗಳನ್ನಾಗಿ ಸ್ವೀಕರಿಸಬೇಕು. ಜೊತೆಗೆ ಅಸ್ಥಿರವಾದ ರಫ್ತು ಮಾರುಕಟ್ಟೆಯ ಹುಚ್ಚಾಟಗಳಿಂದಲೂ ಇವರನ್ನು ಉಳಿಸಿದಂತಾಗುತ್ತದೆ. ಜಯಾಜೈಟ್ಲಿ ನಮ್ಮ ಸರ್ಕಾರಿ ನೀತಿನಿರೂಪಕರಿಗೂ ಒಂದು ಕಾರ್ಯಸಾಧ್ಯ ಸಲಹೆಯನ್ನು ಇಲ್ಲಿ ನೀಡುತ್ತಾರೆ.

….ಅಲಂಕಾರಿಕ ಮತ್ತು ಉನ್ನತಾದಾಯದ ಮಟ್ಟದ ಕೆಲವು ಕರಕುಶಲ ವಸ್ತುಗಳು ಅಭಿವೃದ್ಧಿ-ಉತ್ತೇಜನಗಳನ್ನು ಪಡೆದಿದ್ದರೆ, ಗುಡಿಕೈಗಾರಿಕೆಗಳು ಮಾತ್ರ ಪ್ರತ್ಯೇಕಿತಗೊಂಡಿವೆ. ಅಲಂಕಾರಿಕ ಮತ್ತು ಸುಸ್ಥಿತಿಯ ಕೈಗಾರಿಕೆಗಳ ಕುಶಲತೆಗೆ ತಾವು ಮೂಲಸಾಮಗ್ರಿಗಳನ್ನು ಒದಗಿಸುತ್ತಿದ್ದರೂ ಕೂಡ ಗುಡಿಕೈಗಾರಿಕೆಗಳು ಅವುಗಳ ಎದುರು ಬಳಲುತ್ತಿವೆ ಮತ್ತು ಕೆಲವೆಡೆ ನಿರ್ನಾಮವೂ ಆಗಿವೆ. ಕೆಲವೇ ಕೆಲವು ಸಾವಿರ ಕುಶಲಕರ್ಮಿಗಳು ಗುರ್ತಿಸಲ್ಪಟ್ಟು, ಗೌರವಿಸಲ್ಪಟ್ಟಿದ್ದರೆ, ಲಕ್ಷಾಂತರ ಕುಶಲಕರ್ಮಿಗಳು ತಮ್ಮ ಕೌಶಲ್ಯವನ್ನು ಮರೆತುಹೋಗುವಂತಾಗಿದೆ. ಯಾಕೆಂದರೆ ಇವರಿಗೆ ಕುಶಲವಸ್ತು ತಯಾರಿಕೆಗೆ ಬೇಕಾದ ಮೂಲಸಾಮಗ್ರಿ ಸರಿಯಾಗಿ ಸಿಗುತ್ತಿಲ್ಲ. ಸಾಲಸೌಲಭ್ಯವೂ ಸಿಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಯಾರಾದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆಯೂ ಇಲ್ಲ. ಹೀಗಾಗಿ ಅನೇಕ ರೀತಿಯ ಕೌಶಲ್ಯಗಳೇ ನಾಶಗೊಳ್ಳುತ್ತಿವೆ. ಖಾದಿ ಉತ್ಪನ್ನ ಮತ್ತು ಕರಕುಶಲ ವಸ್ತುಗಳೆರಡೂ ಗುಡಿ ಕೈಗಾರಿಕೆಗೆ ಸೇರಿದವುಗಳೇ ಆಗಿದ್ದಾಗ್ಯೂ ನಮ್ಮ ಸರ್ಕಾರವು ಕೈಗಾರಿಕೆ ಮತ್ತು ಕೈಮಗ್ಗ ಸಚಿವ ಖಾತೆಯಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಯನ್ನು ಇಟ್ಟು, ಜವಳಿಖಾತೆಯಲ್ಲಿ ಕರಕುಶಲಕಲೆಗಳನ್ನು ಸೇರಿಸಿರುವುದು ಅಸಂಬದ್ದವಾಗಿದೆ. ಇದನ್ನು ಮೊದಲು ಸರಿಪಡಿಸಬೇಕಿದೆ.

ಜಯಾಜೈಟ್ಲಿ ಬಲವಾಗಿ ಪ್ರತಿಪಾದಿಸುವಂತೆ ಎಂದೂ ಕುಶಲಕಲೆಯು ಶುದ್ಧ ಅಲಂಕಾರಿಕವಾಗಿ ಮಾತ್ರ ಇರಲಿಲ. ಕುಶಲಕರ್ಮಿಗಳು ನಮ್ಮ ನಿತ್ಯಜೀವನವನ್ನು ಯಾವತ್ತೂ ಸುಂದರಗೊಳಿಸಲು ಶಕ್ತರೇ ಹೌದು. ಯಾವುದು ನಮ್ಮ ಪರಂಪರೆಯ ಆರೋಗ್ಯ ಮತ್ತು ಸ್ವಾಸ್ಯದ ದ್ಯೋತಕವೋ ಅದನ್ನು ಜೀವಂತವಿರಿಸಲು ಈಗಲೂ ನಿರ್ಗತಿಕರಾದರೂ ಹೆಣಗುತ್ತಿದ್ದಾರೆ. ಸರ್ವನಾಶದಿಂದ ಅವರನ್ನು ರಕ್ಷಿಸಲು ನಮ್ಮಿಂದ ಸಾಧ್ಯವೇ? ದುಷ್ಟವೂ, ಭ್ರಮಾತ್ಮಕವೂ, ಪ್ರಲೋಭನೀಯವೂ ಆದ ಆಧುನಿಕ ಜಾಗತಿಕ ವ್ಯವಸ್ಥೆಯನ್ನು ನಾವು ತಡೆಯಲು (ಕನಿಷ್ಟ ಮನಃಪರಿವರ್ತಿಸಲು) ಆ ಮೂಲಕ ಇವರ ಉಳಿವಿಗೆ ಅನುವು ಮಾಡಿಕೊಡಲು ಸಾಧ್ಯವೇ? ಆದರೆ ಕುಶಲಕಲೆಗಳ ಉಳಿವು ಮತ್ತು ಬೆಳವಣಿಗೆ ಕೇವಲ ಅವರ ಉಳಿವಷ್ಟೇ ಅಲ್ಲ. ನಮ್ಮ ಉಳಿವೂ ಕೂಡ. ಜಯಾಜೈಟ್ಲಿ ನಮ್ಮ ಗಮನಕ್ಕೆ ತರುವಂತೆ, ಪಾಶ್ಚಾತ್ಯದ ಅನುಕರಣೆಯಲ್ಲದ ಪ್ರಜಾಪ್ರಭುತ್ವವಾಗಿ ಭಾರತೀಯ ನಾಗರಿಕತೆಗೆ ಇದು ಇಂದು ಅತ್ಯಂತ ಅಗತ್ಯವೂ ಆಗಿದೆ.

ಜಯಾ ಜೈಟ್ಲಿಯವರ ಪುಸ್ತಕಕ್ಕೆ ಬರೆದ ಮುನ್ನುಡಿ, ಅನುವಾದ: ರಾಮಲಿಂಗಪ್ಪ ಟಿ. ಬೆಂಗಳೂರು

* * *