ಈ ಶತಮಾನ ಕೊನೆಯಾಗುತ್ತಿದೆ. ಇನ್ನಿತರರು ತಾವು ಯಾವ ಕಾಲಘಟ್ಟದಲ್ಲಿ ಇದ್ದೇವೆ ಎಂದು ತಿಳಿದಿದ್ದಾರೋ, ನಾವೂ ಅದೇ ಕಾಲಘಟ್ಟದಲ್ಲಿದ್ದೇವೆ ಎಂದು ನಾವೂ (ಭಾರತೀಯರು) ತಿಳಿದಿರುವುದು ಬಹುಶಃ ಈ ೨೦ನೆಯ ಶತಮಾನದಲ್ಲಿ ಮಾತ್ರ ಐರೋಪ್ಯರು ಹೇಗೆ ತಾವೊಂದು ಕಾಲಘಟ್ಟದಲ್ಲಿದ್ದೇವೆ ಎಂದು ತಿಳಿದಿದ್ದಾರೋ, ಆ ಕಾಲಘಟ್ಟದಲ್ಲಿ ನಾವೂ ಇದ್ದೀವಿ ಎನ್ನುವುದನ್ನ ಕೆಲವರು ಒಂದು ಸಂತೋಷದ ವಿಷಯವಾಗಿ, ಇನ್ನು ಕೆಲವರು ಒಂದು ದುಃಖದ ವಿಷಯವಾಗಿ ಗ್ರಹಿಸುತ್ತಾರೆ.

ಹಾಗೆ ನೋಡಿದರೆ, ಐರೋಪ್ಯರ ಕಲ್ಪನೆಯಲ್ಲಿ ನಾವೂ ಇದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೊದಲು ಬಂದದ್ದು, ೧೯ನೆಯ ಶತಮಾನದಲ್ಲಿ. ಬ್ರಿಟಿಷ್ ಆಡಳಿತವು  ಆಡಳಿತವಾಗಿ ಮಾತ್ರವಲ್ಲದೆ ಜೀವನಕ್ರಮವಾಗಿ, ಆಲೋಚನಾಕ್ರಮವಾಗಿ ನಮ್ಮಲ್ಲಿ ಇಳಿದಾಗ. ನಮ್ಮ ಜೀವನಕ್ರಮಗಳು ಅಷ್ಟೇನೂ ಮುಖ್ಯವಲ್ಲ. ಬ್ರಿಟಿಷರಿಂದ  ನಾವೇನೋ ಕಲಿಯುವುದಿದೆ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. ಈಗ ೨೦ನೆಯ ಶತಮಾನದಲ್ಲಿ ನಮ್ಮ ಮಾಧ್ಯಮಗಳಿಂದಾಗಿ ನಾವೂ ಇತರರಂತೆ ಇದ್ದೀವಿ ಎನ್ನುವುದು  ಗೊತ್ತಾಗುತ್ತಿದೆ. ಆದರೆ ಈ ಅರಿವಿನ ಕಾರಣವೆಂದರೆ ಯಾರ ಯಾರ ಮನೆಯಲ್ಲಿ ಟಿವಿ ಇದೆಯೋ, ಅವರು ತಾವು ನೋಡುವ ಬಿಬಿಸಿ, ಸಿಎನ್‌ಎನ್ ಚ್ಯಾನಲ್‌ಗಳು ತೋರಿಸುವ ಸುದ್ಧಿಗಳನ್ನೇ ಪ್ರಪಂಚದ ಸುದ್ದಿ ಎಂದುಕೊಳ್ಳುತ್ತಾರೆ. ಅಮೆರಿಕದಲ್ಲಿ ಪ್ರಪಂಚದ ಸುದ್ದಿ ಎಂದರೆ ಅಮೆರಿಕದ ಸುದ್ದಿಯೇ. ಆಫ್ರಿಕಾದಲ್ಲಿ ಕ್ಷಾಮ ಬಂದರೂ ಅದು ಅವರಿಗೆ ಬಹಳ ವರ್ಷ ತಿಳಿಯುವುದಿಲ್ಲ. ನಾವೂ ಅಷ್ಟೇ. ನಾವೇನು ನೋಡುತ್ತೇವೆ ಅದು ಮುರ್ಡೋಕ್‌ನ ನಿರ್ಧಾರಕ್ಕೆ ಬಿಟ್ಟ ವಿಷಯವಾಗಿಬಿಟ್ಟಿದೆ. ಹೀಗಾಗಿ ನಾವು ಇಪ್ಪತ್ತನೆಯ ಶತಮಾನದಲ್ಲಿದ್ದೇವೆ ಎನ್ನುವುದು ನಮಗೆ ಮನದಟ್ಟಾಗುವ ಹಾಗೆ ಒಂದು ಸಂಚು ವ್ಯವಸ್ಥಿತವಾಗಿ ನಡೆದಿದೆ ಎನ್ನಬಹುದು.

ಸರಿ, ನಾವು ಇಷ್ಟಪಟ್ಟೋ, ಪಡದೆಯೋ, ೨೦ನೆಯ ಶತಮಾನದಲ್ಲಿದ್ದೇವೆ.ಈ ಸಂದರ್ಭವನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದಕ್ಕೆ ನಾವೆಲ್ಲ ನೋಡೋಣ? ದೊಡ್ಡವರನ್ನು ನೋಡಿ ಕಲಿಯೋಣವೆಂದರೆ ಇಡೀ ಜಗತ್ತಿನಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷನೊಬ್ಬನನ್ನು ಬಿಟ್ಟರೆ ಈ ಎಲ್ಲಾ ರಾಜಕೀಯ ನಾಯಕರು ಮೂರು ಅಥವಾ ನಾಲ್ಕನೆಯ ದರ್ಜೆಯ ಮನುಷ್ಯರು. ಚೈನಾದಂಥ ದೇಶದಲ್ಲೂ ಹಿಂದಿನ ಆದರ್ಶಗಳೆಲ್ಲಾ ಹೋಗಿ, ರಾಜಕಾರಣ ಎಂದರೆ ಒಂದು ‘ಮ್ಯಾನೇಜ್‌ಮೆಂಟ್’ ಎನ್ನುವ ಸ್ಥಿತಿಗೆ ಬರುತ್ತಿದೆ. ಅಂದರೆ ರಾಜಕಾರಣದಲ್ಲಿರುವವರು ಈಗ ‘ಮ್ಯಾನೇಜರ್ಸ್‌’, ಜನ ನಾಯಕರಲ್ಲ. ರಾಜಕಾರಣದ ಮುಖಾಂತರ ಬದುಕನ್ನು ಬದಲಾವಣೆ ಮಾಡುವ ಒಂದು ಆಸೆ ದೊಡ್ಡದಾಗಿ ಕಂಡಿದ್ದು ಇಪ್ಪತ್ತನೆಯ ಶತಮಾನದಲ್ಲಿ ಹಾಗೂ ಈ ಶತಮಾನದ ದೊಡ್ಡ ಬದಲಾವಣೆಯೆಂದರೆ ವಸಹತುಶಾಹಿಯನ್ನು ಕೊನೆಗಾಣಿಸುವ ಒಂದು ಪ್ರಯತ್ನ. ಈ ದೃಷ್ಟಿಯಿಂದ ಬಹಳ ದೊಡ್ಡ ಮನುಷ್ಯನಾಗಿ ಕಾಣುತ್ತಿರುವುದು ಮಂಡೇಲಾ ಮಾತ್ರ.

ಗಾಂಧೀಯವರು ಶುರು ಮಾಡಿದ್ದ ನಿರ್ವಸಾಹತೀಕರಣದ (ಡಿಕಾಲೋನೈಸೇಷನ್) ಕಾರ್ಯಕ್ರಮ ರಾಜಕೀಯ ಅಥದಲ್ಲಿ ಯಶಸ್ವಿಯಾಯಿತು. ಆದರೆ ನಮ್ಮ ಸಮಾಜವನ್ನು ಸಂಪೂರ್ಣವಾಗಿ ಸ್ವತಂತ್ರ ಆರ್ಥಿಕ ವ್ಯವಸ್ಥೆಯಾಗಿ ಬೆಳೆಸುವ ಪ್ರಯತ್ನದಲ್ಲಿ ಸೋತಿತು. ಈ ದೃಷ್ಟಿಯಿಂದ ನಮ್ಮ ಸಮಾಜವಾದಿ ದೃಷ್ಟಿಕೋನ ಪ್ರಯತ್ನವೂ ಸೋತಿದೆ ಎಂದು ಹತ್ತು ವರ್ಷದಿಂದ ನಾನು ಹೇಳುತ್ತಲೇ ಇದ್ದೇನೆ. (ನಾನೊಬ್ಬ ಸಮಾಜವಾದಿ ಎಂದುಕೊಂಡೇ ಇದನ್ನು ಹೇಳುತ್ತಲೇ ಇದ್ದೇನೆ. (ನಾನೊಬ್ಬ ಸಮಾಜವಾದಿ ಎಂದುಕೊಂಡೇ ಇದನ್ನು ಹೇಳುತ್ತಿದ್ದೇನೆ.) ರಷ್ಯಾದಲ್ಲೇ ಇವತ್ತು ಸಮಾಜವಾದದ ಬಗ್ಗೆ ನಂಬಿಕೆ ಹೊರಟುಹೋಗಿದೆ. ಅಲ್ಲಿ ಲೆನಿನ್‌ನ ಹೆಸರಿನಲ್ಲಿದ್ದ ಕಟ್ಟಡಗಳ ಹೆಸರುಗಳನ್ನೆಲ್ಲಾ ಬದಲಾಯಿಸುತ್ತಿದ್ದಾರೆ. ಈ ಬದಲಾವಣೆ ಎಷ್ಟರ ಮಟ್ಟಿಗೆ ಆಗುತ್ತಿದೆಯೆಂದರೆ ಇಲ್ಲಿಯವರೆಗೆ ಸುಡದೆ ಇಟ್ಟುಕೊಂಡಿದ್ದ ಲೆನಿನ್‌ನ ದೇಹವನ್ನು ಯಾರೂ ಕ್ಯೂ ನಿಂತು ನೋಡಲು ಹೋಗುತ್ತಿಲ್ಲ. ಬಹುಶಃ ಆ ದೇಹಕ್ಕೆ ಈಗಲಾದರೂ ಸಂಸ್ಕಾರ ಮಾಡಬೇಕೇನೋ. ಆತ್ಮಕ್ಕಿಂತ ದೇಹವೇ ಮುಖ್ಯವೆಂದು ತಿಳಿದಿದ್ದ ಜನ ಅವರು. ಅವರ ಸಮಾಜವಾದಿ ಪ್ರಯತ್ನ ಯಾಕೆ ಸೋತಿತು ಎನ್ನುವುದಕ್ಕೆ ನನಗಿದೊಂದು ರೂಪಕವಾಗಿ ಕಾಣುತ್ತದೆ.

ನಾವಿಟ್ಟುಕೊಂಡಿದ್ದ ಭ್ರಮೆಗಳೆಲ್ಲ ಇಪ್ಪತ್ತನೆಯ ಶತಮಾನದಲ್ಲಿ ಹೇಗೆ ಸುಳ್ಳಾದವು ಎಂಬುದನ್ನು ತೋರಿಸುವುದಕ್ಕೆ ಹೀಗೆ ಹೇಳುತ್ತಿದ್ದೇನೆ. ಅನೇಕ ಸಾರಿ ನಾವು ಒಂದು ಹೊಸ ವಿಚಾರವನ್ನು ಆಲೋಚಿಸುವಾಗ, ಹಳೆಯ ವಿಚಾರ ಸೋತಿದ್ದರೆ ಅದು ‘ಸೋತಿತು’ ಎಂದು ಒಪ್ಪಿಕೊಳ್ಳಬೇಕು. ಇಪ್ಪತ್ತನೆಯ ಶತಮಾನದ ದೊಡ್ಡ ಪ್ರಯೋಗವೊಂದು ಸೋತಿತು. ಆದರೆ ಆ ಸೋಲಿನ ಹಿಂದಿನ ಸಮಾನತೆಯ ಬಯಕೆ ಇನ್ನೂ ಉಳಿದಿದೆ. ಹೆಣ್ಣುಮಕ್ಕಳಿಗೆ, ದೀನ-ದಲಿತರಿಗೆ, ಕಿರಿಯರಿಗೆ ಸಮಾನತೆಯ ಹಸಿವು ಇದೆ. ಆದರೆ ಯಾವುದನ್ನು ಬಹಳ ದೊಡ್ಡದು ಎಂದುಕೊಂಡಿದ್ದೆವೋ ಅದು ಸೋತಿದೆ. ಹೊಸದರ ಬಗ್ಗೆ ನಿಷ್ಠುರವಾಗಿ ಯೊಚಿಸುವ ಕಾಲ ಈಗ ಬಂದಿದೆ.

*

ಈಗ ನಮ್ಮ ಪ್ರಧಾನಿಯವರು, ಮಾಧ್ಯಮಗಳು ಹೇಳುವ ಪ್ರಕಾರ ಎರಡು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಮ್ಮ ದೇಶದ ಅತ್ಯಂತ ಮಹತ್ವದ ಬದಲಾವಣೆಗೆ (.ಲಿಬರಲೈಸೇಷನ್‌ಗೆ) ಅಗ್ಯತವಾಗಿದ್ದ  ಬಹುಮತವನ್ನು ಗಳಿಸಿಕೊಂಡರು. ಜೆ.ಎಂ.ಎಂ. ಪಾರ್ಲಿಮೆಂಟಿನ ಮೆಂಬರ್‌ಗಳಿಗೆ ಕೊಟ್ಟಿರುವ ಎರಡು ಕೋಟಿ ಅಷ್ಟು ದೊಡ್ಡ ಮೊತ್ತ ಕೂಡ ಅಲ್ಲ. ಗಾಂಧಿ ಹುಟ್ಟಿದ ಈ ದೇಶದಲ್ಲಿ ಜನರ ಆಶೋತ್ತರಗಳನ್ನು ತನಗೆ ಬೇಕಾದ ರೀತಿಯಲ್ಲಿ ತಿರುಚುವುದನ್ನು ಸಾಧ್ಯ ಮಾಡಿಕೊಂಡ ರಾಜಕೀಯದ ಒಂದು ನಾಯಕವರ್ಗ ಇದು! ಸ್ವಾತಂತ್ರ್ಯ ಬಂದು ೫೦ ವರ್ಷಗಳ ಒಳಗೆ ಇದು ಹೇಗೆ ಸಾಧ್ಯವಾಯಿತು ಎಂಬ ಸಮಸ್ಯೆ ಭಯಂಕರವಾಗಿ ನಮ್ಮನ್ನು ಕಾಡುತ್ತದೆ.

ಈ ಸಮಸ್ಯೆಗೆ ಕಾರಣಗಳನ್ನು ಹುಡುಕುವದಕ್ಕೆ ಮುಂಚೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ಒಂದು ಆಳವಾದ ದುಃಖ ಆಗಬೇಕು. ಯಾಕೆ ಮನುಷ್ಯ ಈ ರೀತಿಯಾದ ಎನ್ನುವ ಅನಿರ್ವಚನೀಯವಾದ ನೋವು ಯಾರಿಗೆ ಆಗುತ್ತದೆಯೋ, ಅವರಿಗೇ ಏನಾದರೂ ಹೊಸದಾಗಿರುವುದೊಂದು ಹೊಳೆಯುತ್ತದೆ. ಗಾಂಧಿಗೆ ಬ್ರಿಟಿಷ್ ಸಾಮ್ರಾಜ್ಯದ ವಿಷಯದಲ್ಲಿ ಇಂಥ ದುಃಖ ಆಗಿತ್ತು. (ಅದಕ್ಕೇ ಅವರಿಗೆ ಹೊಸದು ಹೊಳೆಯಿತು) ಈ ಶತಮಾನದ ಕೊನೆಯಾಗುತ್ತಿದ್ದಂತೆ ನಾವು ನಮ್ಮ ರಾಜಕಾರಣದ ಬಗೆಗೂ ಹೀಗೇ ಯೋಚಿಸಬೇಕಾಗಿದೆ. ಅದು ಬಿಟ್ಟು ನಮ್ಮೆಲ್ಲ ನೈತಿಕ ಸಮಸ್ಯೆಗಳನ್ನೂ ನಾವು ಕೆಲವು ನ್ಯಾಯಾಧೀಶರ ಕೈಯಲ್ಲಿ ಕೊಟ್ಟು  ಕುಳಿತುಕೊಳ್ಳುವುದು ಸರಿಯಲ್ಲ. ಕೋರ್ಟುಗಳಿಗೆ ಶಕ್ತಿ ಬರುವುದು ಒಂದು ‘ದುರ್ಬಲ ಕೇಂದ್ರ’ ಇದ್ದಾಗ ಮಾತ್ರ. ಇಂದಿರಾಗಾಂಧೀಯವರು ಆಳುತ್ತಿದ್ದಾಗ ಯಾವ ನ್ಯಾಯಾಧೀಶರು ಮಾತಾಡಲು ಸಾಧ್ಯವಿತ್ತು?

ಇವತ್ತು ನಾವು ಬದುಕುತ್ತಿರುವ ರೀತಿ ಹೇಗಿದೆಯೆಂದರೆ ನಮಗೆ ಒಮ್ಮೊಮ್ಮೆ ಬರಬೇಕಾದ ಸಿಟ್ಟಾಗಲೀ, ಅಥವಾ ಒಳಗಿನಿಂದ ಬದಲಾವಣೆಗೆ ಬೇಕಾದ ಪ್ರೇರಣೆಯಾಗಲಿ ಉಂಟಾಗುವುದಿಲ್ಲ. ಏಕೆಂದರೆ ನಮ್ಮ ಸಂಸಾರದ ಲಾಭವನ್ನು ಬಿಟ್ಟು ಯೋಚನೆ ಮಾಡುವುದು ಕಷ್ಟವಾಗಿಬಿಡುತ್ತದೆ. ಎಲ್ಲ ಸಂಸಾರಿಗಳ ಪಾಡೂ ಇದೇ. ಹೀಗಾಗಿ ಒಳಗೇ ಸುಳ್ಳುಗಳನ್ನು ಹೇಳಿಕೊಳ್ಳುತ್ತೇವೆ. ನಮ್ಮ ಮಕ್ಕಳಿಗೆ ಕೆಲಸ ಆಗಬೇಕಾದಾಗ ಯಾರನ್ನೋ ‘ಅಪ್ರೋಚ್’ ಮಾಡುತ್ತೇವೆ. ಒಟ್ಟಿನಲ್ಲಿ ನಾವು ಏನು ಹೇಳಬೇಕೋ ಅದನ್ನು ಹೇಳುವ ಧೈರ್ಯವನ್ನೇ ಮಾಡುವುದಿಲ್ಲ. ಪ್ರಪಂಚ ಇಂದು ಈ ಸ್ಥಿತಿಯಲ್ಲಿದೆ.

ಒಂದು ಚೀನೀ ಕಥೆಯೊಂದರ ರಾಜ ನೆನಪಾಗುತ್ತಾನೆ. ಬೆಳಿಗ್ಗೆ ಸ್ನಾನ ಮಾಡಿ, ಪೋಷಾಕು ಧರಿಸಿ, ಕೈಯಲ್ಲಿ ದಂಡ ಹಿಡಿದು ತಾನು ನೋಡಬೇಕಾದ ದಿಕ್ಕಿನಲ್ಲಿ ಒಂದು ಬಾರಿ ಸರಿಯಾಗಿ ನೋಡಿ ಹಿಂದಕ್ಕೆ ರಾಜ ಹೋಗುತ್ತಾನೆ. ಅಷ್ಟು ಮಾಡಿದರೆ ಸಾಕು ಉತ್ತಮ ವ್ಯವಸ್ಥೆಯಲ್ಲಿ ಎಂದು ಕನ್‌ಫ್ಯೂಶಿಯಸ್ ತಿಳಿದಿದ್ದನಂತೆ. ಬಹುಶಃ ಇದೇ ಒಳ್ಳೆಯದೇನೋ. ನಾವು ಹೋಗಬೇಕಾದ ದಿಕ್ಕು ಯಾವುದೆಂದರೆ-ಈ ಸರ್ಕಾರಗಳು, ರಾಜಕಾರಣ ಇವೆಲ್ಲ ಮುಖ್ಯವಾಗದೇ ಇರುವ ದಿಕ್ಕು.

ಗಾಂಧೀಜಿಗೆ ಹಿಂದೂ ಮುಸ್ಲಿಂ ಐಕ್ಯತೆ, ಅಸ್ಪೃಶ್ಯತೆಯ ನಿವಾರಣೆ ಮತ್ತು ಖಾದಿಯಿಂದ ಅಧಿಕಾರದ ಸ್ಥಳಾಂತರವಾಗುತ್ತದೆಂಬ ನಂಬಿಕೆ ಇತ್ತು. ಅಧಿಕಾರದ ಸ್ಥಳಾಂತರವಾದಾಗ ಯಾರು ರಾಜ್ಯಭಾರ ಮಾಡುತ್ತಾರೆಂಬುದು ಅಮುಖ್ಯವಾಗುತ್ತದೆ. ಇದು ಗಾಂಧೀಜಿಗೆ ಗೊತ್ತಿತ್ತು. ಸಾಹಿತ್ಯದ ತುಡಿತವೂ ರಾಜ್ಯಭಾರ ಮಾಡುವುದು ಅಮುಖ್ಯವಾಗುವ ರೀತಿಯಲ್ಲಿ. ಯಾವ ಬಗೆಯ ಸಮಾಜ ರಚನೆಯಾಗಬೇಕೆಂಬುದರ ಕಡೆಗಿರಬೇಕು.

ಎಲ್ಲ ದೊಡ್ಡ ಸಾಂಸ್ಕೃತಿಕ ಕೆಲಸಗಳಲ್ಲಿ ಮೃತ್ಯುಪ್ರಜ್ಞೆಯೊಂದು ಕೆಲಸ ಮಾಡುತ್ತದೆ. ಇದು ಬಹಳ ಮುಖ್ಯ. ಯಾವುದು ಜೀವಿಸಿರುತ್ತದೋ ಅದರಲ್ಲಿ ಮೃತ್ಯು ಅಡಗಿರುತ್ತದೆ. ಅದರಿಂದಾಗಿಯೇ ನಾವು ಎಲ್ಲಾ ಕಾಲಕ್ಕೂ ಉಳಿಯುವಂತದ್ದನ್ನು ಮಾಡುವ ಭ್ರಾಂತಿಯಲ್ಲಿ ಬದುಕುತ್ತೇವೆ. ಬೃಹತ್ ಅಣೆಕಟ್ಟುಗಳನ್ನು ಕಟ್ಟುತ್ತೇವೆ. ಈ ಜಗತ್ತಿನ ಸಮಸ್ಯೆಗಳನ್ನು ಎಲ್ಲಾ ಕಾಲಕ್ಕೂ ಪರಿಹರಿಸುವಂಥ ಆಲೋಚನೆ ಮಾಡುತ್ತೇವೆ. ಆದರೆ ನಾವು ಯಾವ ಕ್ಷಣದಲ್ಲಾದರೂ ಸಾಯಬಹುದು ಎನ್ನುವ ಕಲ್ಪನೆ ಬಹುಶಃ ಅತ್ಯಂತ ಕ್ರಾಂತಿಕಾರಕವಾದ ವಿಷಯವಾಗಿದೆ. ಪ್ರಾಯಶಃ ಈ ಅಮರತ್ವದ ಆಸೆ ವಿಜ್ಞಾನಕ್ಕೂ ಇದೆ. ಆದರೆ ಮಹಾಭಾರತದ, ರಾಮಾಯಣ, ದೊಡ್ಡ ಗ್ರೀಕ್ ನಾಟಕ, ಶೇಕ್ಸ್‌ಪಿಯರ್ ಸಾಹಿತ್ಯ-ಯಾವುದೇ ಆಗಲಿ ಈ ಮೃತ್ಯುಪ್ರಜ್ಞೆ ಎನ್ನುವುದು ಅತ್ಯಂತ ಮೂಲಭೂತ ಅಂಶವಾಗಿ ಕೆಲಸ ಮಾಡುತ್ತದೆ. ಒಂದು ನೆಲೆಯಲ್ಲಿ ಸಾಹಿತ್ಯ ಮತ್ತು ಕಲೆ ಬೇರೆ ರೀತಿಯ ಅಮರತ್ವವನ್ನು ಹುಡುಕುತ್ತಲೆ ಮತ್ತೊಂದು ರೀತಿಯ ಅಮರತ್ವ ಬರುವುದು ಈ ಪ್ರಜ್ಞೆ ಗಾಢವಾಗುವುದರಿಂದ ಇಲ್ಲದೆ ಇದ್ದರೆ ಹೆಣವನ್ನು ಕೊಳೆಸದೇ ಇಡುವ ಉಪಾಯಗಳನ್ನು ಹುಡುಕಬೇಕಾಗುತ್ತದೆ.

ಸಾವಿನ ಪ್ರಜ್ಞೆ ಎಷ್ಟೇ ದುಃಖಕರವಾಗಿರಲಿ, ಆದರಿಂದಲೇ ಈ ಪ್ರಪಂಚ ಮತ್ತೆ ಹೊಸದಾಗುವುದು. ಇದು ಎಷ್ಟು ಸತ್ಯವೆಂದರೆ ನಾನು ನಾಳೆ ಮತ್ತೆ ಹೊಸದಾಗಿ ಬರೆಯಬೇಕೆಂದರೆ ಇವತ್ತು ನಾನು ಸಾಯಬೇಕು. ‘Dying into life’ ಎಂದು ಕೀಟ್ಸ್ ಒಂದು ಕಡೆ ಹೇಳಿದ್ದಾನೆ. ಇದು ಬಹಳ ಮುಖ್ಯವಾದ ಪರಿಕಲ್ಪನೆ.

*

ಸ್ಥಾವರವಾದ ಪ್ರಭುತ್ವದ ಕಲ್ಪನೆ ಅಮುಖ್ಯವಾಗಬೇಕಾದರೆ ಬಹಳ ಮಾರ್ಗಗಳಿದ್ದಾವೆ. ವಿನೋಬಾ ಅಂಥದೊಂದು ಮಾರ್ಗ ಹೇಳಿದ್ದಾರೆ. ಡೀಸೆಂಟ್ರಲೈಸೇಷನ್ (ವಿಕೇಂದ್ರೀಕರಣ) ವಿಜ್ಞಾನಕ್ಕೂ ಎಲ್ಲವನ್ನು ವಿಕೇಂದ್ರೀಕರಿಸುವ ಮನಸ್ಸು ಬರುವ ಸಾಧ್ಯತೆ ಇದೆ. ಹಾಗಂತ ವಿಜ್ಞಾನ ಈ ರೀತಿಯೇ ಇರಬೇಕೆಂದು ಅಥವಲ್ಲ. ಆದರೆ ೨೧ನೆಯ ಶತಮಾನದಲ್ಲಿ ವಿಜ್ಞಾನಕ್ಕೆ ಬೇರೆ ರೀತಿಯ ಒತ್ತಡಗಳು ಬರುವ ಸಾಧ್ಯತೆ ಇದೆ. ಪ್ರಪಂಚ ನಾಶವಾಗುವ ಸಾಧ್ಯತೆಯೂ ಇದೆ.

ಒಬ್ಬ ಭಾರತೀಯನಾಗಿ ನಾನು ಇದಕ್ಕಿಂತ ದೊಡ್ಡದನ್ನು ಮಾತನಾಡುತ್ತ ಹೋಗಬಾರದು. ನಿಲ್ಲಿಸಿ ಬಿಡುತ್ತೇನೆ. ನಾವು ಸಂಸ್ಕೃತಿ ಎಂಬ ಶಬ್ದವನ್ನು ತುಂಬ ಬಳಸುತ್ತೇವಲ್ಲ-ಅದರ ಬಗ್ಗೆ ನನಗೆ ಅನುಮಾನ ಬಂದಿದೆ. ಒಂದು ಸಂಸ್ಕೃತಿ ಇನ್ನೊಂದನ್ನು ಅಳೆಯುವ ಅಳತೆಗೋಲಲ್ಲ. ಭಾರತದಲ್ಲಿ ನಾವು ಒಳ್ಳೆಯ ಸಂಸ್ಕೃತಿಗಳಾಗಿದ್ದೇವೆ. ಆದರೆ ಈಗ ನಾವೊಂದು ನಾಗರಿಕತೆ ಅಲ್ಲ. (ಹಿಂದೆ ಆಗಿದ್ದೆವು ಕಾಳಿದಾಸನ ಕಾಲದಲ್ಲಿ) ಆದುದರಿಂದಲೇ ಈ ರಾಜಕೀಯ ಸಂಘರ್ಷಗಳು, ಈ ಹಿಂದುತ್ವದ ಕಲ್ಪನೆಯನ್ನು ಹೆಚ್ಚು ಮಾಡುವುದು ಅಥವಾ ಇಸ್ಲಾಂನ ಕಲ್ಪನೆಯನ್ನು ಹೆಚ್ಚು ಮಾಡುವುದು, ಯಾರು ಯಾರಿಗಿಂತ ಹೆಚ್ಚು ಎನ್ನುವುದಕ್ಕಾಗಿ ಬಡಿದಾಟ ನಡೆಯುವುದು ಯಾಕೆ ಸಾಧ್ಯವಾಗಿದೆ ನೋಡಿ. ಒಂದು ನಾಗರಿಕತೆಯ ಕಲ್ಪನೆ ಇದ್ದರೆ ಅದು ಸಂಸ್ಕೃತಿಯ ಕಲ್ಪನೆಯಂತೆ ನಮ್ಮ ಒಳಬದುಕಿಗೆ ಮಾತ್ರ ಸಂಬಂಧಪಟ್ಟದಲ್ಲ. ಒಂದು ಬಸ್ ಬಂದು ನಿಂತರೆ ಎಲ್ಲರೂ ನುಗ್ಗುತ್ತಾರೆ. ಅವರಿಗೆಲ್ಲ ಸಂಸ್ಕೃತಿ ಇರಬಹುದು. ಆದರೆ ನಾಗರಿಕತೆ ಇಲ್ಲ. ಏರೋಪ್ಲೈನ್‌ನಲ್ಲಿ ಜಾಗ ಇರುತ್ತದೆ. ಆದರೂ ಅಲ್ಲೂ ಜನ ನುಗ್ಗುವುದನ್ನು ನಾನು ನೋಡಿದ್ದೇನೆ. (ಇದು ಪ್ರಾಯಶಃ ನಾವು ಇಂಡಿಯಾದಲ್ಲಿ ನಡೆದುಕೊಳ್ಳುವ ಕ್ರಮ.) ನಮ್ಮ ಕಾಲೇಜಿನ ಹುಡುಗರು ನಡೆದುಕೊಳ್ಳುವ ಕ್ರಮ ಗಮನಿಸಿ: ಯಾರಿಊ ಜಾಗ ಕೊಡದೇನೇ ನಡೀತಾರೆ. ಗಟ್ಟಿಯಾಗಿ ಮಾತಾಡಿಕೊಳ್ಳುತ್ತ ಹೋಗುತ್ತಿರುತ್ತಾರೆ. ಆದರೆ ಅವರ ಹಳ್ಳಿಯಲ್ಲಿ ಅವರಿಗೆ ಸಂಸ್ಕೃತಿ ಇರುತ್ತದೆ ನಾಗರಿಕತೆಯಲ್ಲ.

ಭಾರತ ಒಂದು ನಾಗರಿಕ ರಾಷ್ಟ್ರ ಆಗಬೇಕಿತ್ತು. ಆದರೆ ಅದು ಆಗದಂತೆ ಮಾಡಿದವರು ಕೂಡ ನಮ್ಮ ರಾಜಕಾರಣಿಗಳೇ ಎಂದು ನನಗೆ ಬಹಳ ಮಟ್ಟಿಗೆ ಅನಿಸುತ್ತದೆ. ನಾವು ನಿಜವಾಗಿಯೂ ಒಬ್ಬರು ಇನ್ನೊಬ್ಬರೊಡನೆ ಒಟ್ಟಿಗೆ ಇರುವುದನ್ನು ಕಲಿಯಬೇಕು. ನಾವು ಅಧಿಕಾರದಲ್ಲಿದ್ದಾಗ ಏನು ಮಾಡಬಹುದು? ಏನು ಮಾಡಬಾರದು. ನ್ಯಾಯಾಧೀಶರಾಗಿದ್ದರೆ ಏನು ಮಾಡಬಹುದು ಮಾಡಬಾರದು…. ಇಂಥ ಪ್ರಶ್ನೆಗಳಿಗೆ ಒಂದು ನಾಗರಿಕತೆಯ ಕಲ್ಪನೆ ಉತ್ತರವನ್ನು ಬೇಡುತ್ತದೆ. ಈ ಹಿನ್ನೆಲೆಯಲ್ಲಿ ನಾಗರಿಕತೆಯ ಹುಡುಕಾಟ ೨೧ನೆಯ ಶತಮಾನದಲ್ಲಿ ಬಹಳ ಮುಖ್ಯವಾಗುತ್ತೆ.

ನಾಗರಿಕ ಸಮಾಜದಲ್ಲಿ ಬದುಕುವುದಕ್ಕೆ ಬೇಕಾದದ್ದೇನೆಂದರೆ ನಮ್ಮ ಜಗಳಗಳನ್ನು ಕೂಡ ವೈಚಾರಿಕ ನೆಲೆಯಲ್ಲಿ ನೋಡಬಲ್ಲ ಮನಸ್ಸನ್ನು ಪಡೆದುಕೊಳ್ಳುವುದು; ನನಗೆ ಅಹಂಕಾರದ ಆಯಾಮವಲ್ಲದೆ ವಿಚಾರದ ಆಯಾಮವೂ ಇದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಈಗ ಕನ್ನಡ ಸಾಹಿತ್ಯ ಎಂದಾಗ ಅದು ಒಟ್ಟು ವಿಶಾಲ ನಾಗರಿಕತೆಯಲ್ಲಿ ಹೇಗಿದೆ ಎಂದು ನೋಡಬೇಕು. ಅದರಲ್ಲಿ ನನಗೆ ಕೆಲವು ಇಷ್ಟವಾಗಬಹುದು, ಕೆಲವು ಇಷ್ಟವಾಗದೇ ಇರಬಹುದು. ನನಗಿಷ್ಟವಾಗದೇ ಇರುವುದರಲ್ಲೂ ನಾನು ತಿಳಿದುಕೊಳ್ಳುವುದು ಇದೆ ಎಂಬಂಥ ಒಂದು ಮನಸ್ಥಿತಿ ಬರುವುದಿದೆಯಲ್ಲ-ಅದು ನಾಗರಿಕತೆ.

ಈ ಶಿಸ್ತನ್ನು ನಾವು ಕಲಿಯುವುದು ತುಂಬಾ ಮುಖ್ಯ. ಒಬ್ಬರು ಹೇಳಿದುದನ್ನು ಇನ್ನೊಬ್ಬರು ಒಪ್ಪದಿದ್ದಾಗಲೂ, ಅನ್ನಿಸಿದ್ದನ್ನು ಹೇಳಿ, ಚರ್ಚೆ ಮಾಡಿ ಆದರೂ ಸ್ನೇಹದಿಂದ ಇದ್ದು, ಅಪ್ರಮಾಣಿಕವಾಗದಂತೆ ಇರುವುದನ್ನು ಕಲಿಯಬೇಕು. ಇದರೆ ಮುಖಾಂತರ ಮಾತ್ರ ೨೧ನೆಯ ಶತಮಾನಕ್ಕೆ ಭಾರತ ಒಂದು ರಾಜಕೀಯ ವ್ಯವಸ್ಥೆಯಾಗಿ ಕಾಲಿಡುವುದು ಸಾಧ್ಯ.

ನಿನಾಸಂ ಸಂಸ್ಕೃತಿ ಶಿಬಿರ ೧೯೯೬ರಲ್ಲಿ ಮಾಡಿದ ಭಾಷಣದ ಆಯ್ದ ಭಾಗಗಳು.
ಸಂಗ್ರಹ: ಮಹೇಶ್ ಹರವೆ ಮತ್ತು ಎಲ್.ಜಿ. ಮೀರಾ

* * *