ಮಣಿಪಾಲಿನಲ್ಲಿ ಈಚೆಗೆ ನಡೆದ ಗಾಂಧಿ ಸೆಮಿನಾರಿಗೆ ನಮ್ಮ ದೇಶದ ಧೀಮಂತ ಚಿಂತಕರಲ್ಲಿ ಒಬ್ಬರಾದ ಓಬೆರಾಯ್ ಎಂಬುವರು ಬಂದಿದ್ದರು. ಅವರು ಆಡಿದ ಒಂದು ಮಾತು ನನ್ನ ಮನಸ್ಸಿನಲ್ಲಿ ನೆಟ್ಟಿದೆ. ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸುವ ಹೋರಾಟದ ಮಹಾನ್ ನಾಯಕರೆಂದರೆ ಗಾಂಧೀಜಿಯವರೇ ಎಂದು ನಾವೆಲ್ಲ ಸಾಮಾನ್ಯವಾಗಿ ತಿಳಿಯುತ್ತೇವೆ. ನಿಜವೇ. ಆದರೆ ಗಾಂಧಿಜಿಯವರೇ ತಮ್ಮ ಜೀವನದ ಪರಮ ಉದ್ದೇಶಗಳೆಂದು ಮೂರು ವಿಷಯಗಳನ್ನು ಮಾತ್ರ ಪ್ರಸ್ತಾಪಿಸುತ್ತಾರೆ. ಈ ಮೂರು ವಿಷಯಗಳಲ್ಲಿ ಬ್ರಿಟಿಷ್ ಪ್ರಭುತ್ವದ ವರ್ಗಾವಣೆಯ ಪ್ರಸ್ತಾಪವೇ ಇಲ್ಲ.

ಗಾಂಧೀಜಿಯ ಮೂರು ಧ್ಯೇಯಗಳು ಹೀಗಿವೆ:

ಮೊದಲನೆಯದು, ಹಿಂದೂ ಮುಸ್ಲಿಂ ಐಕ್ಯತೆ; ಎರಡನೆಯದು, ಅಸ್ಪೃಶ್ಯತೆಯ ನಿವಾರಣೆ: ಮೂರನೆಯದು, ಖಾದಿ. ಈ ಮೂರನ್ನು ಹೇಳಿದ ನಂತರ ಬ್ರಿಟಿಷರನ್ನು ಈ ದೇಶದಿಂದ ತೊಲಗಿಸಲು ಸತತವಾಗಿ ಕಾರ್ಯನಿರತರೆಂದು ಕಾಣುವ ಗಾಂಧೀಜಿ ಅದನ್ನು ಯಾಕೆ ಹೇಳುವುದಿಲ್ಲವೆಂಬುದೇ ಇಲ್ಲಿ ಗಮನಿಸಬೇಕಾದ್ದು. ಮೌನ ಕೆಲವು ಸಾರಿ ಮಾತಿಗಿಂತ ಹೆಚ್ಚು ಶಕ್ತವಾಗಿರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ತನ್ನ ಪರಮಧ್ಯೇಯವಾದ ಮೂರು ವಿಷಯಗಳು ಸಫಲವಾದರೆ ಆಡಳಿತದ ವರ್ಗಾವಣೆ ಅಪ್ರಸ್ತುತವೆನ್ನಿಸುವಷ್ಟು ಕಿಂಚಿತ್ ವಿಷಯವಾಗಿಬಿಡುತ್ತದೆ ಎಂಬುದು ಗಾಂಧೀಜಿಯವರ ಗ್ರಹಿಕೆ. ಬ್ರಿಟಿಷರು ಈ ದೇಶವನ್ನು ಆಳುವುದೇ ಅಸಾಧ್ಯವಾಗುವಂತಹ ಸಭ್ಯ ಸಮಾಜ ನಮ್ಮದಾಗುತ್ತದೆ; ಅಥವಾ ಅಂತಹ ಸಭ್ಯ ಸಮಾಜದಲ್ಲಿ ಯಾರು ನಮ್ಮನ್ನು ಸರಕಾರವಾಗಿ ಆಳುತ್ತಾರೆ ಎನ್ನುವುದೇ ಅಮುಖ್ಯವಾಗುತ್ತದೆ. ಹೀಗೆಲ್ಲ ನಾವು ಗಾಂಧೀಜಿಯವರ ಮೌನವನ್ನು ವ್ಯಾಖ್ಯಾನಿಸುವುದು ಸಾಧ್ಯವಿದೆ.

*

ಗಾಂಧೀಜಿಯವರ ಮೂರು ಧ್ಯೇಯಗಳನ್ನು ಈ ನಮ್ಮ ಪ್ರಸ್ತುತ ಸಂದರ್ಭದಲ್ಲಿ ಗಮನಿಸೋಣ. ಎಲ್ಲ ಸರಕಾರಗಳ ತಲೆನೋವಾಗಿ ಈ ಮೂರು ಪ್ರಶ್ನೆಗಳೂ ಇನ್ನೂ ಉಳಿದಿವೆ. ಹಿಂದೂ ಮುಸ್ಲಿಂ ಸಖ್ಯದ ಪ್ರಶ್ನೆ ಇನ್ನೂ ಬಗೆಹರಿದಿಲ್ಲವಾದ್ದರಿಂದಲೇ ಮತೀಯ ಕಲಹ ರಾಜಕೀಯಪಕ್ಷಗಳ ಬಂಡವಾಳವಾಗಿ ಉಳಿದುಬಿಟ್ಟಿದೆ. ಮುಸ್ಲಿಂ ಜನರನ್ನು ಓಲೈಸುವುದು ದೊಡ್ಡ ಅಪರಾಧವೆಂದು ಸಾರುತ್ತ, ಹಿಂದೂ ಜನರನ್ನು ಒಂದು ದೊಡ್ಡ ಓಟ್‌ಬ್ಯಾಂಕಾಗಿ ಪರಿವರ್ತಿಸಲು ಪ್ರಯತ್ನಿಸುವ ಬಿ.ಜೆ.ಪಿ ಒಂದು ಕಡೆಯಾದರೆ, ಮುಸ್ಲಿಂ ಜನರ ಭಯವನ್ನೇ ಬಂಡವಾಳ ಮಾಡಿಕೊಂಡು, ಈ ಭಯ ಹೇಗಾದರೂ ಉಳಿದಿರುವಂತೆ ನೋಡಿಕೊಂಡು ಮುಸ್ಲಿಂ ಜನರನ್ನು ಇನ್ನೊಂದು ಓಟ್ ಬ್ಯಾಂಕಾಗಿ ಮಾಡಿಕೊಳ್ಳುವ ಹುಸಿ ಸೆಕ್ಯುಲರ್ ರಾಜಕಾರಣ ಇನ್ನೊಂದು ಕಡೆ. ಹೀಗೆ ಮುಸ್ಲಿಂ ಓಟ್‌ಬ್ಯಾಂಕನ್ನು ಉಳಿಸುಕೊಳ್ಳುವುದರಲ್ಲಿ ಕಾಂಗ್ರೆಸ್‌ಸೋತಿತು ಎಂಬುದೇ ಇವತ್ತಿನ ಅದರ ಸೋಲಿಗೆ ಒಂದು ಮುಖ್ಯ ಕಾರಣ ಎನ್ನಬಹುದು.

ಹೀಗೆ ಕೇವಲ ರಾಜಕೀಯವಾಗಿಬಿಟ್ಟ ಹಿಂದೂ ಮುಸ್ಲಿಂ ಏಕತೆಯ ಸಮಸ್ಯೆ ನಮ್ಮ ದೇಶ ಒಂದು ಸಭ್ಯ ಸಮಾಜವಾಗಲು ಮುಖ್ಯ ತಡೆಯಾಗಿದೆ-ಅಂದರೆ ಗಾಂಧಿಜಿಯ ಮೊದಲನೆಯ ಧ್ಯೇಯ ಇನ್ನೂ ಸಫಲವಾಗಿಲ್ಲ ಎನ್ನಬಹುದು. ಹುಸಿ ಸೆಕ್ಯುಲರ್ ರಾಜಕಾರಣದಲ್ಲಾಗಲೀ, ಮತೀಯ ಉದ್ರೇಕದ ರಾಜಕಾರಣದಲ್ಲಾಗಲೀ ಹಿಂದೂ-ಮುಸ್ಲಿಂ ಸಹಬಾಳ್ವೆಯ ಸಮಸ್ಯೆಗೆ ಉತ್ತರವಿಲ್ಲ ಎಂದು ತಿಳಿಯದ ಹೊರತು ನಾವು ತ್ರಿಕರಣ ಶುದ್ಧಿಯಲ್ಲಿ ಈ ಸಮಸ್ಯೆಯನ್ನು ಎದುರಿಸಲಾರೆವು. ಗಾಂಧೀಜಿ ಈ ಸಮಸ್ಯೆಯನ್ನು ಧಾಮಿರ್ಕವಾಗಿ ಎದುರಿಸಲು ಪ್ರಯತ್ನಿಸಿ ತಮ್ಮ ಪ್ರಾಣವನ್ನೇ ಒಬ್ಬ ಹುಚ್ಚು ಹಿಂದೂವಿನ ಗುಂಡಿಗೆ ಬಲಿ ಕೊಟ್ಟರು ಎನ್ನುವುದನ್ನು ಹೇಳುವುದರಿಂದ ಈ ‘ಶುದ್ಧಿ’ ಯಾವ ಉತ್ಕಟತೆಯಿಂದ ಹುಟ್ಟಿರುತ್ತದೆ ಎಂಬುದನ್ನು ಸೂಚಿಸಬಹುದು.

ಗಾಂಧೀಜಿ ಈ ಸಮಸ್ಯೆಯನ್ನು ‘ಧಾರ್ಮಿಕ’ವಾಗಿ ಬಗೆಹರಿಸಲು ಪ್ರಯತ್ನಿಸಿದರು-ಹುಸಿ ಸೆಕ್ಯೂಲರ್ ರಾಜಕೀಯವಾಗಿ ಅಲ್ಲ ಎಂದು ಒತ್ತಿ ಹೇಳಲು ಕಾರಣವಿದೆ. ಹಿಂದೂಗಳ ವೈವಿಧ್ಯಮಯವಾದ ಮತಾಚರಣೆಯಲ್ಲೇ ಮುಸ್ಲಿಮರ ಬಗ್ಗೆ ಆಳವಾದ ಆತಂಕವಿದೆ ಎಂದು ಗಾಂಧೀಜಿ ಮನಗಂಡು, ಈ ಆತಂಕ ಮತ್ತು ಅದರಿಂದ ಹುಟ್ಟುವ ದ್ವೇಷವನ್ನು ಹಿಂದೂ ಮನಸ್ಸಿನಿಂದ ಕಿತ್ತುಹಾಕಲು ಪ್ರಯತ್ನಿಸಿದರು. ನಮ್ಮ ಸಂಸ್ಕೃತಿ ಮತ್ತು ಧರ್ಮದ ಮೂಲಾರ್ಥಗಳಲ್ಲಿ ಅಪಾರವಾದ ಶ್ರದ್ಧೆ ಮತ್ತು ಪ್ರೀತಿಯಿರುವವರು ಮಾತ್ರ ಇಂತಹ ಕೆಲಸ ಮಾಡಬಲ್ಲರು. ಅಂದರೆ, ಕಬೀರನಂಥವರು, ಗಾಂಧಿಯಂಥವರು.

ಇದರ ಅಗತ್ಯ ಇನ್ನೂ ಈ ದೇಶಕ್ಕೆ ಬಹು ಮುಖ್ಯವಾಗಿ, ಸದಾ ಆತಂಕಕಾರಿಯಾಗಿ ಉಳಿದಿದೆ ಎಂಬುದಕ್ಕೆ ಒಂದು ಸೂಚನೆಯೆಂದರೆ ಬಿ.ಜೆ.ಪಿ. ಪಕ್ಷ ಈಚಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಗಳಿಸದೇ ಹೋದುದು. ಉಳಿದ ಪಕ್ಷಗಳಿಗಿಂತ ಕಿಂಚಿತ್ ಮುಂದಿದ್ದು, ರಾಷ್ಟ್ರಪತಿಯಿಂದ ಸಹಜವಾಗಿಯೇ ಸರ್ಕಾರ ನಿರ್ಮಾಣ ಮಾಡಲು ಅವಕಾಶ ಪಡೆದು ರೀಜನಲ್ ಪಕ್ಷಗಳ ಬೆಂಬಲ ಗಳಿಸಲಾರದೆ ಶ್ರೀವಾಜಪೇಯಿಯವರು ರಾಜಿನಾಮೆ ಕೊಡಬೇಕಾಗಿ ಬಂದಿತು. ಬಿ.ಜೆ.ಪಿಗೆ ಇದರಲ್ಲೊಂದು ಕಲಿಯಬೇಕಾದ ಪಾಠವಿದೆ. ವಾಜಪೇಯಿಯವರು ಒಬ್ಬ ದೊಡ್ಡ ರಾಷ್ಟ್ರಾಜಕಾರಣಿಯಾಗಿ, ಮತ್ತು ಮುತ್ಸದ್ಧಿಯಾಗಿಯೂ ತನ್ನ ಕನಿಷ್ಠ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಆತಂಕ ಭಾವನೆ ತರುವಂತಹ ಯಾವ ಉದ್ದೇಶವನ್ನೂ ಘೋಷಿಸಲಿಲ್ಲವೆನ್ನುವುದು ಗಮನಿಸಬೇಕಾದ್ದು. ಅವರನ್ನು ಅಧಿಕಾರದಲ್ಲಿ ಮುಂದುವರಿಸಲು ರೀಜನಲ್ ಪಕ್ಷಗಳು ಅನುವು ಮಾಡಿದ್ದ ಪಕ್ಷದಲ್ಲಿ ಬಿ.ಜೆ.ಪಿ.ಯ ನಿಲುವು ಮತ್ತು ಸ್ವರೂಪವೇ ಬದಲಾಗಬೇಕಾಗಿ ಬರುತ್ತಿತ್ತೇನೋ? ಇಡೀ ದೇಶದ್ಲಲಿ ಹಿಂದೂ ಮತೀಯ ಭಾವನೆಯನ್ನು ಚುರುಕುಗೊಳಿಸಲು ಪ್ರಯತ್ನಿಸಿ ಸೋತ ಬಿ.ಜೆ.ಪಿಯ, ಉದಾರವಾದಿ ಎಂದು ಜನತೆ ನಿರೀಕ್ಷಿಸುವ ನಾಯಕರಾದ ಶ್ರೀವಾಜಪೇಯಿ ಒಂದು ಐತಿಹಾಸಿಕ ಅವಕಾಶವನ್ನು ಕಳೆದುಕೊಂಡರೆಂದು ನಮಗೆ ತೋರುತ್ತದೆ. ಹಿಂದೂ ಜನರನ್ನು ಮತೀಯವಾಗಿ ಒಟ್ಟುಮಾಡಿ ಗೆಲ್ಲುವ ದಾರಿಯಲ್ಲಿ ಅವರು ಹೋದ ದೂರಕ್ಕಿಂತ ಹೆಚ್ಚು ದೂರ ಹೋಗಲಾರರು ಎಂದು ತಿಳಿದ ಮೇಲೆ, ಪಾರ್ಲಿಮೆಂಟಿನಲ್ಲಿ ಘೋಷಿಸಿದ ಕನಿಷ್ಠ ಕಾರ್ಯಕ್ರಮವೇ ತಮ್ಮ ಪಕ್ಷದ ಮುಂದಿನ ನಿಲುವು ಎಂದು ಅವರು ಘೊಷಿಸಿದ್ದ ಪಕ್ಷದಲ್ಲಿ ಬಿ.ಜೆ.ಪಿಯಲ್ಲಿರುವ  ಉಗ್ರಗಾಮಿಗಳು ಹೊರಗಾಗಬೇಕಾಗಿ ಬಂದು (ಬದಲಾಗಬೇಕಾಗಿ ಬಂದು?) ನೈಜ ಅರ್ಥದಲ್ಲಿ ಅದೊಂದು ರಾಷ್ಟ್ರೀಯ ಪಕ್ಷವಾಗಬಹುದಿತ್ತು. ನಮ್ಮ ಸಂಸ್ಕೃತಿಯ ಅನೇಕತೆಯನ್ನು ಹುಸಿಯಾಗಿ ಹೊಗಳುವುದರ ಬದಲು ಅದನ್ನೇ ತಮ್ಮ ಉಸಿರಾಟದಷ್ಟು ನಿಜಮಾಡಿಕೊಂಡು ಇಡೀ ದೇಶದಲ್ಲಿ ಬೆಳೆಸಬೇಕಾದ ಅನಿವಾರ್ಯತೆ ಇರುತ್ತಿತ್ತು ಬಿ.ಜೆ.ಪಿಗೆ

ರಾಜಕೀಯ ಮಾಡುವುದರಲ್ಲಿ ಆಸಕ್ತಿಯಿಲ್ಲದ, ಆದರೆ ರಾಜಕಾರಣವನ್ನ ಗಂಭೀರವಾಗಿ ತೆಗೆದುಕೊಂಡ ನಾವೆಲ್ಲರೂ ಇಂತಹ ಒಂದು ಬಯಕೆಯನ್ನು ಇಟ್ಟುಕೊಂಡಿರುತ್ತೇವೆ ಎಂದು ನನಗೆ ಅನ್ನಿಸಿ ಮೇಲಿನ ಮಾತನ್ನು ಬರೆದಿದ್ದೇನೆ. ಹಿಂದೂ-ಮುಸ್ಲಿಂ ಜನರ ನಡುವಿನ ಸಮಸ್ಯೆ ರಾಜಕೀಯದ ಬಂಡವಾಳವಾಗುವುದು ದೇಶಕ್ಕೆ ಕಂಟಕವನ್ನೂ, ನಮ್ಮ ಸಂಸ್ಕೃತಿಗೆ ಕಳಂಕವನ್ನೂ ತರುತ್ತದೆ ಎಂದು ತಿಳಿದ ನಾವೆಲ್ಲರೂ ದೇಶದಲ್ಲಿ ಬೆಳೆಯುತ್ತಿರುವ ಬಿ.ಜೆ.ಪಿಯ ಸ್ವರೂಪ ಬದಲಾಗಬೇಕೆಂದು ಆಶಿಸುತ್ತೇವೆ. ಅದೊಂದು ನೈಜವಾದ ಅರ್ಥದಲ್ಲಿ ಕನ್‌ಸರ್‌ವೆಟಿವ್ ಪಕ್ಷವಾಗಿ ಬೆಳೆದು ಜನರ ಆಯ್ಕೆಗೆ ಒದಗಬೇಕು. ಆಳವಾದ ಕನ್ಸರ್ವೆಟಿವ್ ನಿಲುವಿನ ಒಂದು ಪಕ್ಷ ಇವತ್ತಿನ ಹುಚ್ಚಾಟದ ಜಾಗತೀಕರಣವನ್ನೂ, ಸರ್ವಭಕ್ಷಕವಾದ ಗ್ರಾಹಕ ದುರಾಸೆಯನ್ನೂ ಅನುಮಾನದಿಂದ ಕಂಡು ವಿರೋಧಿಸುತ್ತದೆ ಎಂದು ಭರವಸೆಯಿಟ್ಟುಕೊಂಡು ಆಡುವ ಮಾತಿದು. ಆದರೆ ಇದು ಹುಸಿ ಭರವಸೆಯಿರಬಹುದೇನೋ ಎಂಬ ಅನುಮಾನವೂ ನನಗಿದೆ. ಬಿ.ಜೆ.ಪಿ ಆ ದಾರಿಯಲ್ಲಿ ಸದ್ಯ ಇರುವಂತೆ ಕಾಣುವುದಿಲ್ಲ. ವಾಜಪೇಯಿಯವರು ಸ್ಮರಣೀಯವೆನ್ನುವಂತೆ  ಪರಿಸರ ಆಂದೋಳನದ ಬಹುಗುಣ ಅವರಿಗೆ ಸ್ಪಂದಿಸುವುದರೆ ಜೊತೆಗೇ, ಮುಂಬಯಿಯ ಎನ್ರಾನ್‌ಗೆ ವಿರೋಧವಾಗಿ ಮಾತಾಡುತ್ತಲೇ ಅದಕ್ಕೆ ಒಪ್ಪಿಗೆ ಕೊಟ್ಟಿರುವುದನ್ನು ನೋಡಿದರೆ ಭಾರತ ಒಂದು ಪರ್ಯಾಯ ಆರ್ಥಿಕ -ನೀಯರನ್ನು ಗಾಂಧಿಜಿ ತ್ರಿಕರಣ ಪೂರ್ವಕವಾಗಿ ಬಯಸಿದ್ದನ್ನು-ಭಾರತದ ಯಾವ ಪಕ್ಷವೂ ಅಪೇಕ್ಷಿಸುವುದಿಲ್ಲವೆನ್ನುವುದು ಮನದಟ್ಟಾಗುತ್ತದೆ. ಅಂದರೆ, ನಿಜವಾದ ಅರ್ಥದಲ್ಲಿ ಒಂದು ಕನ್ಸರ್ವೆಟಿವ್ ಪಕ್ಷವನ್ನು ಇವತ್ತಿನ ರಾಜಕಾರಣದ ಓಘಕ್ಕೆ ಎದುರಾಗಿ ಕಟ್ಟುವಲ್ಲಿ ಹಿಂದೆ ರಾಜಾಜಿಯವರು ಸೋತಂತೆಯೇ, ಇವತ್ತೂ ಯಾರೂ ಪ್ರಯತ್ನಿಸಿದರೂ ಸೋಲಬಹುದು ಎಂಬುದು ಗೋತ್ತಾಗುತ್ತದೆ. ನಾವೆಲ್ಲರೂ ಮಾತಿನಲ್ಲಿ ಬಹುವಾಗಿ ಮೆಚ್ಚುವ ಭಾರತದ ಸಂಸ್ಕೃತಿಯ ಅನೇಕತೆ, ಅದರ ವಿವಿಧ ರುಚಿಗಳ ಜೀವನ ಕ್ರಮ-ಎಲ್ಲವೂ ಕ್ರಮೇಣ ನಾಶವಾಗಲೇಬೇಕಾಗಿ ಬರುವಂತೆ ನಮ್ಮ ಆಸೆಗಳನ್ನು ಚುರುಕುಗೊಳಿಸುತ್ತ ಬೆಳೆಯುತ್ತಿರುವ ಆಧುನಿಕ ಜಾಗತೀಕರಣದ ಅರ್ಥ ವ್ಯವಸ್ಥೆಗೆ ನಿಜವಾದ ಯಾವ ವಿರೋಧಿಯೂ ನಮ್ಮ ದೇಶದಲ್ಲಿ ಕಾಣುತ್ತಿಲ್ಲ. ಹಿಂದೂ ಸಂಸ್ಕೃತಿಯ ಬುಡವನ್ನೇ ಕತ್ತರಿಸಿಹಾಕುತ್ತಿರುವುದು ಈ ದೇಶದ ಮುಸ್ಲಿಮರು ಎಂದು ತಿಳಿಯುವ ಮೂರ್ಖತನದಲ್ಲಿ ಬಿ.ಜೆ.ಪಿ ನಮ್ಮ ವೈರಿ ಯಾರೆಂದು ತಿಳಿಯಲಾರದೆ, ಕೇವಲ ಓಟಿನ ರಾಜಕೀಯದಲ್ಲಿ ಬೆಳೆಯಲು ಯತ್ನಿಸುತ್ತಿದೆ. ಹಾಗೂ ಸದ್ಯ ಸೋತಿದೆ.

*

ಗಾಂಧೀಜಿಯವರ ಇನ್ನೆರಡು ಧ್ಯೇಯಗಳೂ ಮೂಲತಃ ಧರ್ಮಕ್ಕೆ ಸಂಬಂಧಪಟ್ಟ ವಿಷಯಗಳೇ. ‘ಅಸ್ಪೃರ್ಶಯತೆ’ ಹಿಂದೂ ಸಮಾಜದ ಮತಾಚರಣೆಯಲ್ಲೇ ಅಂತರ್ಗತವಾದ, ಹಿಂದೂ ಮತೀಯತೆಯ ಸ್ವರೂಪಕ್ಕೇ ಸಂಬಂಧಪಟ್ಟ ಸಂಗತಿಯೆನ್ನಬಹುದು. ಈ ಬಗ್ಗೆ ಗತಿಸಿದ ಹಿರಿಯರಾದ ಎ.ಬಿ. ಶಾರವರು ನನಗೆ ಹೇಳಿದ ಕಥೆ ನೆನಪಾಗುತ್ತದೆ. ಗಾಂಧೀಜಿ ಕಾಶಿಯ ಮಹಾಪಂಡಿತರನ್ನೊಮ್ಮೆ ಕೇಳದರಂತೆ: ಅಸ್ಪೃಶ್ಯತೆಗೆ ಹಿಂದೂ ಧರ್ಮದಲ್ಲಿ ಸಮರ್ಥನೆಯಿದೆಯೆ ಎಂದು. ಅಮೂರ್ತವಾದ ತಾತ್ವಿಕತೆಯನ್ನು ಮಾತ್ರ ಧರ್ಮದ ನಿಜಸ್ವರೂಪ ಎಂದು ತಿಳಿದ ಈ ಪಂಡಿತರು ವೇದೋಪನಿಷತ್ತುಗಳ ಮಹಾವಾಕ್ಯಗಳನ್ನು ಉದ್ಧರಿಸಿ ಇಲ್ಲ ಎಂದರಂತೆ. ಆಮೇಲೆ ಗಾಂಧೀಜಿ ಮಹಾರಾಷ್ಟ್ರದ ಧೀಮಂತ ಸಂಸ್ಕೃತ ಪಂಡಿತ ಮತ್ತು ಎಂ.ಎನ್. ರಾಯ್ ಗೆಳೆಯರಾಗಿದ್ದ ತರ್ಕತೀರ್ಥ ಲಕ್ಷ್ಮಣ ಶಾಸ್ತ್ರಿ ಜೋಷಿಯವರಿಗೆ ಅದೇ ಪ್ರಶ್ನೆ ಹಾಕಿದರಂತೆ. ಜೋಷಿಯವರು ಹಿಂದೂ ಮತಾಚರಣೆಯಲ್ಲಿ ಅಸ್ಪೃಶ್ಯತೆಯ ಭಾವನೆ ಅಂತರ್ಗತವಾದದ್ದು ಎಂದರಂತೆ. ಗಾಂಧೀಜಿ ಎರಡು ಯೊಚಿಸದೆ, ಹಾಗಾದರೆ ತಾನು ಹಿಂದೂ ಮತಾಚರಣೆಗೇ ವಿರೋಧವಾಗಿ ಹೋರಾಡಬೇಕಾಗುತ್ತದೆ ಎಂದರಂತೆ.

ಶೀಲವಂತ ಸಮಾಜವೊಂದರ ನಿರ್ಮಾಣ ಮಾಡಲು ಪ್ರಯತ್ನಿಸುವಾತ ಸತ್ಯಾನ್ವೇಷಣೆಯಲ್ಲಿ ಎಷ್ಟು ದೂರ ಹೋದಾನು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಅಂಥವರು ವಿರೋಧ ಮಾಡುವುದರಲ್ಲೇ ರುಚಿ ಹತ್ತಿದ ಬಂಡಾಯಗಾರರಾಗಿರುವುದಿಲ್ಲ. ತಾನು ಸದಸ್ಯನಾದ ಸಮಾಜದ ಒಪ್ಪಿತ ಚೌಕಟ್ಟಿನಲ್ಲೇ ತಾನು ಬಯಸುವ ಸತ್ಯವನ್ನು, ಸಫಲನತೆಯನ್ನು ಪಡೆಯಲು ಆಶಿಸುತ್ತಾನೆ. ಅದು ಏನೇನೂ ಸಾಧ್ಯವಿಲ್ಲ ಎನ್ನಿಸಿದಾಗ ತನ್ನ ಸಮಾಜವನ್ನೇ ಸೀಳಲು ಆತ ಹಿಂಜರಿಯುವುದಿಲ್ಲ. ಗಾಂಧೀಜಿ ಹಾಗಾದ್ದುದರಿಂದಲೇ ಅವರ ಬಂಡಾಯ ಸುವ್ಯವಸ್ಥೆಯ ಅಸೆಯಿಂದ ಯಾವತ್ತೂ ನಿರ್ದೇಶಿತವೆಂಬುದು ಮುಖ್ಯವಾಗುತ್ತದೆ. ಲಾಲುಪ್ರಸಾದರಂತಹ ಬಾಯಿಬಡುಕರ ಕ್ರಾಂತಿಕಾರತೆಗೆ ಪರ್ಯಾಯವಾಗಿ ನಾನು ಮೇಲಿನ ಮಾತನ್ನು ಬರೆದಿದ್ದೇನೆ.

ನಾವು ಒಟ್ಟಾಗಿ ಒಂದು ರಾಷ್ಟ್ರವೆಂಬ ಭಾವನೆಯಲ್ಲಿದ್ದಾಗ, ಅಂದರೆ ಸ್ವಾತಂತ್ರ್ಯ ಬಂದ ತತ್‌ಕ್ಷಣದ ದಿನಗಳಲ್ಲಿ, ನಾವು ಅಸ್ಪೃಶ್ಯತೆಯೆನ್ನುವುದು ಅನೈತಿಕವೆಂದೂ, ಕಾನೂನುಬಾಹಿರವೆಂದೂ ಘೋಷಿಸುವುದು ಸಾಧ್ಯವಾಯಿತು. ಓಟಿನ ಹುಡುಕಾಟದಲ್ಲಿ ನಾವು ಒಡೆದುಕೊಂಡಿರುವ ಈ ದಿನಗಳಲ್ಲಿ ಅಂತಹ ಒಂದು ನಿರ್ಧಾರ ಸಾಧ್ಯವಾಗುತ್ತಿರಲಿಲ್ಲವೆಂದು ನನಗೆ ಅನುಮಾನ. ಒಂದು ಮತಾಚರಣೆಯಲ್ಲಿ ಅಂತರ್ಗತವಾದ್ದನ್ನು ನಾವು ಬದಲಾಯಿಸಬಹುದೆ ಎನ್ನುವ ಪ್ರಶ್ನೆ ಇಂದಾದರೆ ಸುಪ್ರೀಂಕೋರ್ಟಿಗೆ ಹೋಗಿರುತ್ತಿತ್ತು.

ಜಾತಿ ಪದ್ಧತಿಯಲ್ಲಿರುವ ಅವಮಾನದ ಪ್ರಶ್ನೆ ನಮ್ಮ ಮತಾಚರಣೆಗೇ ಸಂಬಂಧಪಟ್ಟ ಧಾರ್ಮಿಕ ಸ್ವರೂಪದ್ದಾಗಿರುವಂತೆ, ಕಸುಬುಗಾರರಾದ ಜಾತಿಗಳು ಬೃಹತ್ ಕೈಗಾರಿಕರಣದ ಈ ಕಾಲದ ಪ್ರಕ್ರಿಯೆಲ್ಲಿ ತಮ್ಮ ಕಸುಬುಗಳನ್ನೇ ಕಳೆದುಕೊಂಡು ಅತಂತ್ರರಾಗುತ್ತಿರುವುದು ಇನ್ನೊಂದು ದೊಡ್ಡ ಪ್ರಶ್ನೆ. ಈ ಪ್ರಶ್ನೆಯನ್ನು ಈಚೆಗೆ ಡಾ.ಡಿ.ಆರ್. ನಾಗರಾಜರು ಆಳವಾಗಿ ವಿಶ್ಲೇಷಿಸಿದ್ದಾರೆ. ಪ್ಲಾಸ್ಟಿಕ್ ಬಕೆಟ್ಟುಗಳು ಮಡಕೆ ಮಾಡುವ ಕುಂಬಾರನನ್ನು ಅತಂತ್ರ ಮಾಡಿದೆ. ಕೈ ಮಗ್ಗದ ಈ ಸೂಕ್ಷ್ಮ ಕಲೆಗಾರರು ಅತಂತ್ರರಾಗಿದ್ದಾರೆ. ಚರ್ಮದ ಕೆಲಸ ಆಧುನಿಕವಾದ ತಾಂತ್ರಿಕ ಜ್ಞಾನವಾಗುತ್ತಿದ್ದಂತೆಯೇ ಚಮ್ಮಾರ ಅತಂತ್ರನಾಗಿ, ಚರ್ಮದ ಉದ್ಯೋಗ ಮೇಲು ಜಾತಿಯ ಜನರ ಸ್ವತ್ತಾಗಿ, ಜಾಗತಿಕ ಉದ್ಯಮವಾಗಿದೆ.

ಗಾಂಧೀಜಿ ಖಾದಿಯ ವಿಷಯ ಎತ್ತಿದ್ದು ಈ ಕಾರಣದಿಂದಾಗಿಯೇ. ಗಾಂಧಿಯ ಮೂರು ಪರಮ ಧ್ಯೇಯಗಳು ಒಂದಕ್ಕೊಂದು ಸಂಬಂಧಪಟ್ಟವು ಎಂಬುದು ಸ್ಪಷ್ಟ. ಖಾದಿಯೆಂದರೆ ಸ್ವಾವಲಂಬನೆ; ಸ್ವದೇಶಿ ಎಂದರೆ ಅಸ್ವಾದದ ವ್ರತ. ಅಂದರೆ ನಮ್ಮನ್ನು ಒಂದು ಶೀಲವಂತ ಸಮಾಜ ಮಾಡಲು ಪ್ರತಿ ವ್ಯಕ್ತಿಗೂ ಹೇಗೆ ತನ್ನ ಆಸೆ ಆಕಾಂಕ್ಷೆಗಳಲ್ಲೂ, ಆಹಾರ ವಿಹಾರಗಳಲ್ಲಿಯೂ, ಕೊನೆಗೆ ತನ್ನ ಶೌಚದ ವಿಷಯದಲ್ಲಿಯೂ ನಡೆದುಕೊಳ್ಳಬೇಕೆಂಬ ದಾರ್ಶನಿಕತೆ ಗಾಂಧೀಜಿಯ ಹಂಬಲದಲ್ಲಿದೆ.

*

ಯಾರು ಪ್ರಭುವೆಂಬುದೇ ಅತಿ ಮುಖ್ಯವಾಗಿಬಿಡುವ ಸಮಾಜ ಶೀಲವಂತ ಸಮಾಜವಲ್ಲ. ಆದ್ದರಿಂದಲೇ ಗಾಂಧೀಜಿ ತನ್ನ ಮೂರು ಮುಖ್ಯ ಧ್ಯೇಯಗಳನ್ನು ಮಾತ್ರ ಹೇಳಿಕೊಂಡು ಅಧಿಕಾರದ ವರ್ಗಾವಣೆಯ ಬಗ್ಗೆ ಮೌನ ತಾಳಿದ್ದು.

ಈಚಿನ ಚುನಾವಣೆಯಲ್ಲಿ ಯಾವ ಪಕ್ಷವೂ ಪ್ರಭುಸ್ಥಾನದ ಹಕ್ಕುದಾರನಾಗಲಾರದೇ ಹೋಯಿತು. ಹೀಗಾದಾಗ ಅರಾಜಕತೆಯ ಭಯ ಕಾಡುವುದು ಸಹಜ. ಜನರನ್ನು ಭಯದಲ್ಲಿಟ್ಟು ಆಳುವ ಸರಕಾರ ಮುರಿದು ಬಿದ್ದಾಗ ಅರಾಜಕತೆ ಎದುರಾಗುತ್ತದೆ ಎಂಬುದಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ರಿಕಾದ ಹಲವು ದೇಶಗಳು ಉದಾಹರಣೆ; ನಮ್ಮಲ್ಲಿ ಹಾಗಾಗಲಿಲ್ಲ. ಅಂದಮಾತ್ರಕ್ಕೆ ನಮ್ಮದು ಶೀಲವಂತ ಸ್ವಯಂನಿಯಂತ್ರಿತ ಸಮಾಜವೆಂದು ಅರ್ಥವಲ್ಲ. ನಮ್ಮ ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರ ನೋಡಿ. ಪ್ರಭುತ್ವದಲ್ಲೇ ಭ್ರಷ್ಟಾಚಾರ ಅಂತರ್ಗತವಾಗಿ ಬಿಟ್ಟರೆ ಈ ಭ್ರಷ್ಟಾಚಾರ ಕೊನೆಯಾಗುವ ಭರವಸೆಯಿದೆಯೆ? ಪ್ರತಿ ಚುನಾವಣೆಯಲ್ಲೂ ಅಪಾರವಾದ ಹಣದ ಅಗತ್ಯವಿದೆಯೆಂಬುದು ರಾಜಕೀಯ ಭ್ರಷ್ಟಾಚಾರಕ್ಕೆ ಇರುವ ನೆವ. ಚುನಾವಣೆ ನಡೆಸಲೆಂದು ಪಕ್ಷಗಳ ನಾಯಕರು ಸಂಗ್ರಹಿಸುವ ನಿಧಿಯಲ್ಲಿ ಎಷ್ಟು ಪಕ್ಷಕ್ಕೆ, ಎಷ್ಟು ತಮಗೆ ಎಂಬುದು ಜನತೆಗೆ ತಿಳಿಯದು. ಚುನಾವಣೆಗೆಂದು ಈ ಬಡದೇಶದಲ್ಲಿ ಅಷ್ಟು ಹಣ ಖರ್ಚಾಗುವುದು ಸರಿಯೆ?; ಚುನಾವಣೆಗಳನ್ನು ನಡೆಸುವ ಕ್ರಮದಲ್ಲೇ ಆಮೂಲಾಗ್ರ ಬದಲಾವಣೆಗಳು ಆಗಬೇಡವೆ-ಈ ಪ್ರಶ್ನೆಗಳು ‘ಹವಾಲಾ’ ಹಗರಣಗಳ ನಂತರ ಮುಖ್ಯವಾಗಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಸಮಾಜ ಶೀಲವಂತವಾಗಲಾರದು.

ನಮ್ಮ ರಾಜಕಾರಣದಲ್ಲಿ ಏಳುತ್ತಿರುವ ವಾಗ್ವಾದಗಳಲ್ಲೂ ಸಭ್ಯಸಮಾಜದ ಕುರುಹುಗಳ ಕಾಣುತ್ತಿಲ್ಲ. ಈ ದೇಶ ಏನನ್ನಾದರೂ ತಡೆದುಕೊಳ್ಳಬಲ್ಲದು ನಿಜ. ಆನೆಯ ಸೊಂಡಿಲಲ್ಲಿ ಒಂದು ಮಾಲೆಯನ್ನು ಕೊಟ್ಟು ಅದು ಯಾರ ಕೊರಳಿಗೆ ಬೀಳುತ್ತದೆ ಅವನು ರಾಜನಾಗಬೇಕೆಂಬ ಜನಸಂಕಲ್ಪವನ್ನು ನನ್ನ ಗೆಳೆಯರೊಬ್ಬರು ಸ್ಮರಿಸಿದರು. ಅರಾಜಕತೆಯ ನಿವಾರಣೆಗೆ ಇಷ್ಟು ಸರಳವಾದ ಉಪಾಯವನ್ನು ಹೇಳುವ ಜಾನಪದ ನಂಬಿಕೆ ಗಾಂಧೀಜಿಯ ಶೀಲವಂತ ಸಮಾಜದ ಸ್ವಯಂ ನಿಯಂತ್ರಣದ ಶಕ್ತಿಯನ್ನೂ, ಯುಕ್ತಿಯನ್ನೂ ಪಡೆದದ್ದು. ಒಂದರ್ಥದಲ್ಲಿ ಶ್ರೀ ದೇವೇಗೌಡರು ಪ್ರಧಾನಿಯಾದದ್ದು ಹೀಗೆ. ಅವರು ಸಮರ್ಥ ಪ್ರಧಾನಿಯಾಗಿ ತಮ್ಮ ಕೆಲಸ ನಿರ್ವಹಿಸಿದಲ್ಲಿ ನಮ್ಮ ಸಮಾಜ ಪ್ರಜಾತಂತ್ರವಾಗಿ ಪಕ್ವವಾಗುತ್ತಿದೆಯೆಂದು ನಾವು ತಿಳಿಯಬಹುದು.

ಅರಾಜಕತೆಯ ಅತಂತ್ರ ಸ್ಥಿತಿಯಿಂದ ನಾವು ಚುನಾವಣೆಯ ನಂತರ ಪಾರಾದ ಕ್ರಮವನ್ನು ಮೆಚ್ಚುವಾಗಲೂ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವೆ. ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಪ್ರಬಲವಾಗಿ ವಿರೋಧಿಸಿ ಗೆದ್ದ ಪಕ್ಷಗಳು ಈಗ  ಕಾಂಗ್ರೆಸಿನ ಮೈತ್ರಿಯಿಂದ ಸರಕಾರ ನಡೆಸುವುದನ್ನು ಜನತೆ ಕ್ಷಮಿಸುತ್ತದೆಯೆ? ಈ ಸರಕಾರ ಗಾಂಧೀಜಿಯ ಮೂರು ಧ್ಯೇಯಗಳ ಸಫಲತೆಗಾಗಿ ದುಡಿಯಬಲ್ಲುದೆ? ದುಡಿಯುತ್ತದೆಯೆ? ಅಥವಾ ಅಪಾರವಾಗಿ ವಿದೇಶಿ ಹಣವನ್ನೂ, ತಂತ್ರಜ್ಞಾನವನ್ನೂ, ಆರ್ಥಿಕ ವ್ಯವಸ್ಥೆಯನ್ನೂ ನಮ್ಮ ದೇಶದೊಳಕ್ಕೆ ತರುವ ಸಮರ್ಥ ಮ್ಯಾನೇಜರಾಗಿ ಮಾತ್ರ ತನ್ನ ಕ