ನೀ ಏಳುವೆ,
ನಾ ಬೀಳುವೆ,
ಯುಗಯುಗವೂ ಒಂದೇ ಕತೆ ಕಣ್ಣೆದುರು,
ಯಾವುದು ಈ ಚದುರು ?

ನಾ, ನೆಳಲಿನ ಬಲೆ ಬಲೆಯೊಳು ಸಿಲುಕುತ ನಮೆವೆ.
ನೀ, ಬೆಳಕಿನ ಬಿಡುಗಡೆಯೊಳು ಗೆಲುವೆ.
ನಾ, ತರಗೆಲೆಗಳ ಎಣಿಕೆಯಲೇ ನಿಲ್ಲುತ ನಿಡುಸುಯ್ವೆ,
ನೀ, ಚಿಗುರನು ಹೊಗರೇರಿಪ ರಸಸಿಂಚನಗೆಯ್ವೆ.
ನೀ, ಬೆಳುದಿಂಗಳ ಬಂಧಿಸುವೆ,
ನಾ, ಕತ್ತಲನೇ ವಂದಿಸುವೆ.
ನೀ, ಕೊಡುಗೈಯೊಳು ನಡೆವೆ,
ನಾ, ಕಡಗೈಯೊಳು ನಿಲುವೆ,
ನಿನ್ನಯ ವ್ಯಥೆ ಕಥೆಯಾಯಿತು ಜಗಕೆ,
ನನ್ನಯ ವ್ಯಥೆ ಚಿತೆಯಾಯಿತು ನನಗೇ !
ಇಂತಾಗಿರೆ, ನೀ ಎದ್ದೆ,
ನಾ ಬಿದ್ದೆ !