ಯುಗಾದಿಗಳ ಹಾದಿಯಲ್ಲಿ
ಭಯಂಕರ ಕಾಡು
ಬಿಲ್ಲು ಬಾಣಗಳ ಕಿರಾತ ಕೇಕೆ
ಗವಿಯ ಬಾಯಿಗಳಲ್ಲಿ ಬೆಂಕಿನೆತ್ತರ ಕೆಂಪು
ಆದರೂ ವರುಷಕ್ಕೊಮ್ಮೆ ಮರ ಮರದ ಮೈಯಲ್ಲಿ
ಚಿಗುರು-ಹೂವಿನ ತಂಪು.

ಯುಗಾದಿಗಳ ಹಾದಿಯಲ್ಲಿ
ನೇಗಿಲು ಬರೆದ ತೆನೆಗಳ ಹಾಡು
ಮನೆ ಮನೆಯಲ್ಲಿ ದೀಪ ತಣ್ಣಗೆ ಉರಿದು
ತೊಟ್ಟಿಲು ತೂಗಿ, ಮಗು ತೆರೆದ ಕಣ್ಣಿನ ತುಂಬ
ಬೆಳಿಗ್ಗೆ, ಹೊಸ್ತಿಲ ಹೊರಗೆ ರಂಗೋಲಿಗಳ ಚಿತ್ರ
ಹಕ್ಕಿ ಚಿಲಿಪಿಲಿಯೊಡನೆ ಮನೆಸುತ್ತ
ಛತ್ರಿ ಬಿಚ್ಚಿದ ಚೈತ್ರ.

ಯುಗಾದಿಗಳ ಹಾದಿಯಲ್ಲಿ
ಕಳಿಂಗ ಯುದ್ಧರಂಗದ ಮೇಲೆ
ಬುದ್ಧಸ್ಮಿತದ ಬೆಳುದಿಂಗಳು.
ಗದ್ದುಗೆಯೆದ್ದು ಗದ್ದುಗೆ ಬಿದ್ದ
ಕೋಟೆ ಕೊತ್ತಲದ ಮಧ್ಯೆ ನರಿಗಳ ಕೂಗು,
ಆದರೂ ವರುಷಕ್ಕೊಮ್ಮೆ ಮರ ಚಿಗುರಿ
ಚೈತ್ರ ಚೈತ್ರಗಳಲ್ಲಿ ಚೆಲುವಿನ ಬುಗುರಿ.

ಯುಗಾದಿಗಳ ಹಾದಿಯಲ್ಲಿ
ಚಕ್ರಗಳುರುಳಿ, ಗಿರಣಿ ಹೊಗೆ
ಮಸಿ ಬಳಿದು ನೀಲಿಯಾಕಾಶಕ್ಕೆ.
ಗಂಟಲು ಕಟ್ಟಿದಂತಾಗಿ ಹಾಡುವ ಹಕ್ಕಿಗೆ
ನದೀಜಲವೆಲ್ಲ ಕಲುಷಿತವಾಗಿ ಕಪ್ಪಗೆ
ದಿನ ದಿನವು ಬಾಯಾರಿ ನರಳುವ ಹೃದಯ
ಕೇಳುತಿದೆ ಎಲ್ಲಿ ಆ ಸಮೃದ್ಧ ಚೈತ್ರೋದಯ ?

ಯುಗಾದಿಗಳ ಹಾದಿಯಲ್ಲಿ
ಇದ್ದ ಮರವ್ನೆಲ್ಲ ಯಾರೊ ಕಡಿದಿದ್ದಾರೆ ;
ನೆರಳಿಲ್ಲ, ಹಕ್ಕಿಗಳ ದನಿಯಿಲ್ಲ
ಬೆಟ್ಟ-ಘಟ್ಟಗಳ ಮೈಯಲ್ಲಿ ಹಸುರೇ ಇಲ್ಲ
ಬಿಸಿಲು, ಬಿಸಿಲೋ ಬಿಸಿಲು, ಸುಡುವ ಬಿಸಿಲು.
ಸರ್ಕಾರ ಅಲ್ಲಲ್ಲಿ ನೆಟ್ಟಿರುವ ಈ ಸಸಿಗಳೆಲ್ಲಾ ಬೆಳೆದು
ಹಸಿರು ಮೂಡುವುದಕ್ಕೆ
ಪ್ರಭವ-ವಿಭವ-ಶುಕ್ಲ-ಪ್ರಮೋದೂತಗಳ
ಎಣಿಸುತ್ತ ಕಾಯೋಣವೇ ಇನ್ನು ಮುಂದಕ್ಕೆ ?