ಕ್ರೋಧನ ನಾಮ ಸಂವತ್ಸರದ
ರಕ್ತ ಸಿಂಚಿತವಾದ ಹಣ್ಣೆಲೆಗಳುದುರಿ
ಮುಗ್ಧ ಮಗು ಮುಖದ ನಗೆಚಿಗುರು
ಮೂಡುವುದನ್ನು ನೋಡಲು ನಿಂತ
ನಾವು ಮತ್ತು ನೀವು
ಹೇಳಿ ಹೇಗೆ ಸ್ವಾಗತಿಸೋಣ
ಹೊಸ ವರ್ಷವನ್ನು ?

ದಿನಾ ಬೆಳಿಗ್ಗೆ
ರಪ್ಪನೆ ಬಂದು ಬೀಳುವುದು
ಪತ್ರಿಕೆ ಒಳಗೆ,
ಬಿಡಿಸಿ ಓದೋಣವೇ
ಭಯ ನಮಗೆ.
ಏನೇನಿದೆಯೋ : ಬಾಂಬು ಸಿಡಿಗುಂಡುಗಳ
ದಟ್ಟ ಹೊಗೆ
ಅಮಾಯಕರ ಕಗ್ಗೊಲೆ
ವಂಚನೆಯ ಬಲೆ
ರಾಜಕಾರಣದ ಹುತ್ತಗಳಲ್ಲಿ
ಎತ್ತಿದ ಹೆಡೆ.

ಆದರೂ ದೇಶಾದ್ಯಂತ
ಈ ಚೈತ್ರದಲ್ಲಿ ಮರ ಚಿಗುರುವುದು
ನಿಲ್ಲುವುದಿಲ್ಲ,
ಹಕ್ಕಿಯ ಕೊರಳ ಹಾಡಿನ ಚಿಲುಮೆ
ಬತ್ತುವುದಿಲ್ಲ,
ಕೊಂಬೆ-ರೆಂಬೆಯ ತುಂಬ
ಬಣ್ಣದ ಬೆರಗು ಗರಿಯೊಡೆದು
ತಣ್ಣಗೆ ರೆಕ್ಕೆ ಬಿಚ್ಚುವ ಬಗ್ಗೆ ಅನುಮಾನವಿಲ್ಲ ;
ಅನುಮಾನ ಕಾಡುವುದು
ಇದರ ನಡುವಿರುವ ಈ ಮನುಷ್ಯರ ಬಗ್ಗೆ
ಅವರೊಳಗಿರುವ ದಂಡಕಾರಣ್ಯಗಳ ಬಗ್ಗೆ.

ಕ್ರೋಧನ ನಾಮ ಸಂವತ್ಸರದ
ರಕ್ತ ಸಿಂಚಿತವಾದ ಹಣ್ಣೆಲೆಗಳುದುರಿ
ಮುಗ್ಧ ಮಗು ಮುಖದ ನಗೆ ಚಿಗುರು
ಮೂಡುವುದನ್ನು ನೋಡಲು ನಿಂತ
ನಮಗೆ ಮತ್ತು ನಿಮಗೆ
ಅನ್ನಿಸುವುದಿಲ್ಲವೆ-
ಯಾಕಿಷ್ಟು ವಿಕೃತನಾಗಿದ್ದಾನೆ ಮನುಷ್ಯ
ಇಂಥ ಚೆಲುವಿನ ನಡುವೆ ?