ಅರುವತ್ತು ಸಂವತ್ಸರದ ಈ ಚಕ್ರ
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೇವಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ ?

ಗಿರಗಿರನೆ ತಿರುಗುತ್ತಲೇ ಇದೆ ಈ ಭೂಮಿ
ಸೂರ‍್ಯನ ಸುತ್ತ. ಸೂರ‍್ಯನೂ ಸುಮ್ಮನೆ
ಸುತ್ತುತ್ತಲೇ ಇದ್ದಾನೆ ತನ್ನ ಕೇಂದ್ರದ ಮೇಲೆ.
ನಕ್ಷತ್ರಗಳು ಹಾಸುಗಂಬಿಯ ಮೇಲೆ
ಉರುಳುತ್ತಲೇ ಇವೆ. ಕಡಲು ಸದಾ
ರುಬ್ಬುತ್ತಲೇ ಇದೆ ದಡವ. ಹೊಳೆಗಳು
ಒಂದೇ ಸಮನೆ ಕಡಲಿಂದ ಬಾನಿಗೆ,
ಬಾನಿಂದ ಬೆಟ್ಟಕ್ಕೆ, ಬೆಟ್ಟದಿಂದ ಬಯಲಿಗೆ,
ಬಯಲಿಂದ ಕಡಲಿಗೆ ಹರಿಯುತ್ತಲೇ ಇವೆ.
ಈ ನಿರಂತರ ಪರಿಭ್ರಮಣ ಚಕ್ರಗತಿಯಲ್ಲಿ
ಯಾವುದು ಮೊದಲು, ಮತ್ತೆ ಯಾವುದು ತುದಿ ?

ನೆಲದೊಳಗೆ ಬಿದ್ದ ಬೀಜ ಒಂದೇ
ಸಮನೆ ಪುಟಿಯುತ್ತದೆ ಕೊಂಬೆಯಿಂದ
ಕೊಂಬೆಗೆ, ಚಿಗುರಿಗೆ, ಮೊಗ್ಗಿಗೆ ಹೂವಿಗೆ.
ಋತುಗಳ ಜತೆಗೆ ದಾಂಪತ್ಯ ಹೂಡುತ್ತ
ಚೆಲ್ಲುತ್ತದೆ ತನ್ನ ಬುಡಕ್ಕೆ ಹೂವುಗಳ
ರಂಗೋಲಿ. ಬಿದ್ದ ಬೀಜಗಳೆದ್ದು ಕಣ್ತೆರೆದು
ಕಿಲಕಿಲ ನಗುತ್ತ ನೂರು ಬಗೆ ದನಿಯಾಗಿ
ಬಣ್ಣಗಳಾಗಿ, ಹಾಡುತ್ತಲೇ ಇರುತ್ತವೆ
ಚೈತ್ರ ಚೈತ್ರಗಳಲ್ಲಿ. ಈ ಚಕ್ರದಲ್ಲಿ
ಯಾವುದು ಮೊದಲು, ಯಾವುದು ಕೊನೆ ?

ನಾನು, ನನ್ನಪ್ಪ, ಅವರಪ್ಪನಪ್ಪ.
ಮಗ, ಮೊಮ್ಮಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗುವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ, ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ ?