ಮಬ್ಬು ಕವಿದರೇನು ನಿನ್ನ
ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ಧೈರ್ಯದಿಂದ
ಅರುಣೋದಯ ತೀರಕೆ.

ಹಳೆ ನೆನಪುಗಳುದುರಲಿ ಬಿಡು,
ಬೀಸುವ ಛಳಿಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ.

ಹೊಸ ಭರವಸೆ ಚಿಗುರುತಲಿದೆ
ಎಲೆಯುದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ
ಪುಟಿಯುತಲಿದೆ ನಂಬಿಕೆ.

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ
ಋತು ಚಕ್ರಗಳುರುಳಿವೆ.